ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಅಧ್ಯಯನ 34 ಪು. 202-ಪು. 205 ಪ್ಯಾ. 4
  • ಆತ್ಮೋನ್ನತಿ ಮಾಡುವುದು ಮತ್ತು ಸಕಾರಾತ್ಮಕವಾಗಿ ಮಾತಾಡುವುದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆತ್ಮೋನ್ನತಿ ಮಾಡುವುದು ಮತ್ತು ಸಕಾರಾತ್ಮಕವಾಗಿ ಮಾತಾಡುವುದು
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಅನುರೂಪ ಮಾಹಿತಿ
  • ಸಂಭಾಷಣಾ ಕೌಶಲಗಳನ್ನು ಉತ್ತಮಗೊಳಿಸುವ ವಿಧ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಭಕ್ತಿವೃದ್ಧಿ ಮಾಡುವವರಾಗಿರ್ರಿ
    1995 ನಮ್ಮ ರಾಜ್ಯದ ಸೇವೆ
  • ಭರವಸೆ ಮತ್ತು ಪ್ರೋತ್ಸಾಹ
    ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಕ್ರೈಸ್ತ ಕೂಟಗಳ ಭಕ್ತಿವೃದ್ಧಿಯಲ್ಲಿ ನೀವು ಪಾಲಿಗರೊ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಅಧ್ಯಯನ 34 ಪು. 202-ಪು. 205 ಪ್ಯಾ. 4

ಅಧ್ಯಾಯ 34

ಆತ್ಮೋನ್ನತಿ ಮಾಡುವುದು ಮತ್ತು ಸಕಾರಾತ್ಮಕವಾಗಿ ಮಾತಾಡುವುದು

ನೀವೇನು ಮಾಡುವ ಅಗತ್ಯವಿದೆ?

ನಿರುತ್ತೇಜಕವಾದ ವಿಷಯಗಳ ಕುರಿತು ಬಹಳ ಹೊತ್ತು ಮಾತಾಡುವ ಬದಲಿಗೆ, ಸನ್ನಿವೇಶವನ್ನು ಉತ್ತಮಗೊಳಿಸುವ ಅಥವಾ ಭರವಸೆಯನ್ನು ಮೂಡಿಸುವ ವಿಷಯಗಳ ಬಗ್ಗೆ ಮಾತಾಡಿರಿ.

ಇದು ಪ್ರಾಮುಖ್ಯವೇಕೆ?

ಈ ಪ್ರೀತಿರಹಿತವಾದ ಲೋಕವು ಜನರನ್ನು ತುಂಬ ದಣಿಸಿಬಿಟ್ಟಿದೆ. ಅನೇಕರಿಗೆ ಗಂಭೀರವಾದ ವೈಯಕ್ತಿಕ ಸಮಸ್ಯೆಗಳಿವೆ. ಆದರೆ ಬೈಬಲಿನ ಸಂದೇಶವು ಸರಿಯಾಗಿ ನೀಡಲ್ಪಟ್ಟಾಗ, ಅದು ಪ್ರಾಮಾಣಿಕ ಹೃದಯಿಗಳನ್ನು ಹೆಚ್ಚು ಆಶಾವಾದಿ ಹೊರನೋಟವುಳ್ಳವರನ್ನಾಗಿ ಮಾಡುತ್ತದೆ.

ನಮಗೆ ಸಾರುವಂತೆ ನೇಮಿಸಲ್ಪಟ್ಟಿರುವ ಸಂದೇಶವು ಸುವಾರ್ತೆಯಾಗಿದೆ. “ಮೊದಲು ಎಲ್ಲಾ ಜನಾಂಗಗಳಿಗೆ ಸುವಾರ್ತೆಯು ಸಾರಲ್ಪಡಬೇಕು” ಎಂದು ಯೇಸು ಹೇಳಿದನು. (ಮಾರ್ಕ 13:10) “ದೇವರ ರಾಜ್ಯದ ಸುವಾರ್ತೆಯನ್ನು” ಸಾರುವ ಮೂಲಕ ಸ್ವತಃ ಯೇಸುವೇ ಈ ವಿಷಯದಲ್ಲಿ ಮಾದರಿಯನ್ನಿಟ್ಟನು. (ಲೂಕ 4:43) ಅಪೊಸ್ತಲರು ಸಾರಿದ ಸಂಗತಿಗಳನ್ನೂ “ದೇವರ ಸುವಾರ್ತೆ” ಮತ್ತು “ಕ್ರಿಸ್ತನ ಸುವಾರ್ತೆ” ಎಂದು ವರ್ಣಿಸಲಾಗಿದೆ. (1 ಥೆಸ. 2:2; 2 ಕೊರಿಂ. 2:12) ಅಂತಹ ಸಂದೇಶವು ಆತ್ಮೋನ್ನತಿ ಮಾಡುವಂತಹದ್ದೂ ಸಕಾರಾತ್ಮಕವೂ ಆಗಿದೆ.

‘ಆಕಾಶಮಧ್ಯದಲ್ಲಿ ಹಾರಿಹೋಗುತ್ತಿದ್ದ ದೇವದೂತನ ನಿತ್ಯವಾದ ಶುಭವರ್ತಮಾನದ’ ಘೋಷಣೆಗೆ ಹೊಂದಿಕೆಯಲ್ಲಿ ನಾವು ಜನರನ್ನು, “ದೇವರಿಗೆ ಭಯಪಟ್ಟು ಆತನನ್ನು ಘನಪಡಿಸಿರಿ” ಎಂದು ಪ್ರೋತ್ಸಾಹಿಸುತ್ತೇವೆ. (ಪ್ರಕ. 14:6, 7) ನಾವು ಎಲ್ಲಾ ಕಡೆಗಳಲ್ಲಿರುವ ಜನರಿಗೆ ಸತ್ಯದೇವರು, ಆತನ ನಾಮ, ಆತನ ಅದ್ಭುತಕರವಾದ ಗುಣಗಳು, ಆತನ ಆಶ್ಚರ್ಯಕರವಾದ ಕೈಕೆಲಸಗಳು, ಆತನ ಪ್ರೀತಿಪೂರ್ಣವಾದ ಉದ್ದೇಶ, ನಾವು ಆತನಿಗೆ ಒಪ್ಪಿಸಬೇಕಾದ ಲೆಕ್ಕ ಮತ್ತು ಆತನು ನಮ್ಮಿಂದ ಅಪೇಕ್ಷಿಸುವ ವಿಷಯಗಳ ಕುರಿತು ತಿಳಿಸುತ್ತೇವೆ. ಆ ಸುವಾರ್ತೆಯಲ್ಲಿ, ತನ್ನನ್ನು ಅಗೌರವಿಸುವ ಮತ್ತು ಬೇರೆ ಮಾನವರ ಜೀವವನ್ನು ಹಾಳುಮಾಡುವ ದುಷ್ಟರನ್ನು ಯೆಹೋವ ದೇವರು ನಾಶಮಾಡುವನೆಂಬ ನಿಜತ್ವವು ಸೇರಿಕೊಂಡಿದೆ. ಆದರೆ ನಾವು ಯಾರಿಗೆ ಸಾರುತ್ತೇವೊ ಅವರಿಗೆ ತೀರ್ಪು ಮಾಡುವುದು ನಮ್ಮ ಜವಾಬ್ದಾರಿಯಲ್ಲ. ನಮ್ಮ ಯಥಾರ್ಥವಾದ ಅಪೇಕ್ಷೆಯು, ಸಾಧ್ಯವಿರುವಷ್ಟು ಹೆಚ್ಚು ಜನರು ಬೈಬಲಿನ ಸಂದೇಶಕ್ಕೆ ಪ್ರತಿವರ್ತಿಸಲಿ ಮತ್ತು ಅದು ಅವರಿಗೆ ನಿಜವಾಗಿಯೂ ಸುವಾರ್ತೆಯಾಗಿ ಪರಿಣಮಿಸಲಿ ಎಂಬುದೇ.—ಜ್ಞಾನೋ. 2:20-22; ಯೋಹಾ. 5:22.

ನಕಾರಾತ್ಮಕ ವಿಷಯಗಳನ್ನು ಸೀಮಿತಗೊಳಿಸಿರಿ. ಜೀವನದಲ್ಲಿ ನಕಾರಾತ್ಮಕ ವಿಷಯಗಳೂ ಇವೆ ಎಂಬುದು ನಿಶ್ಚಯ. ನಾವು ಈ ನಕಾರಾತ್ಮಕ ವಿಷಯಗಳನ್ನು ಅಲಕ್ಷಿಸುವುದಿಲ್ಲ. ಒಂದು ಸಂಭಾಷಣೆಯನ್ನು ಆರಂಭಿಸಲು, ನೀವು ನಿಮ್ಮ ಟೆರಿಟೊರಿಯಲ್ಲಿರುವವರ ಮನಸ್ಸಿನಲ್ಲಿರುವ ಒಂದು ಸಮಸ್ಯೆಯನ್ನು ಎತ್ತಿಹೇಳಿ, ಅದನ್ನು ಸಂಕ್ಷಿಪ್ತವಾಗಿ ಚರ್ಚಿಸಬಹುದು. ಆದರೆ ಅದರ ಕುರಿತು ಸವಿಸ್ತಾರವಾಗಿ ಮಾತಾಡುವುದರಲ್ಲಿ ಅಷ್ಟೊಂದು ಪ್ರಯೋಜನವಿರುವುದಿಲ್ಲ. ಜನರು ಇಂತಹ ಸಂಕಟಕರವಾದ ವಾರ್ತೆಗಳನ್ನು ಸದಾ ಕೇಳಿಸಿಕೊಳ್ಳುತ್ತಿರುತ್ತಾರೆ. ಆದುದರಿಂದ, ಅಹಿತಕರವಾದ ವಿಷಯಗಳ ಕುರಿತು ಮಾತಾಡುವುದು ಒಂದೇ ಅವರ ಬಾಗಿಲನ್ನು ಇಲ್ಲವೆ ಅವರ ಕಿವಿಗಳನ್ನು ಮುಚ್ಚಿಸಿಬಿಟ್ಟೀತು. ನಿಮ್ಮ ಸಂಭಾಷಣೆಯ ಆರಂಭದ ಹಂತದಲ್ಲೇ, ದೇವರ ವಾಕ್ಯದ ಚೈತನ್ಯದಾಯಕ ಸತ್ಯಗಳ ಕಡೆಗೆ ಅವರ ಗಮನವನ್ನು ಬೇಗನೆ ಸೆಳೆಯಲು ಪ್ರಯತ್ನಿಸಿರಿ. (ಪ್ರಕ. 22:17) ಆಗ, ಆ ವ್ಯಕ್ತಿಗೆ ಸಂಭಾಷಣೆಯನ್ನು ಮುಂದುವರಿಸಲು ಇಷ್ಟವಿಲ್ಲದಿದ್ದರೂ, ಆತ್ಮೋನ್ನತಿ ಮಾಡುವ ಸ್ವಲ್ಪ ವಿಷಯವನ್ನಾದರೂ ನೀವು ಅವನ ಬಳಿ ಬಿಟ್ಟುಹೋಗಿರುವಿರಿ. ಇದು ಇನ್ನೊಂದು ಸಂದರ್ಭದಲ್ಲಿ ಆಲಿಸಲು ಅವನನ್ನು ಹೆಚ್ಚು ಇಷ್ಟವುಳ್ಳವನನ್ನಾಗಿ ಮಾಡೀತು.

ಅದೇ ರೀತಿ, ಒಂದು ಭಾಷಣವನ್ನು ಕೊಡುವಂತೆ ನೀವು ಆಮಂತ್ರಿಸಲ್ಪಟ್ಟಿರುವುದಾದರೆ, ನಕಾರಾತ್ಮಕ ಮಾಹಿತಿಯು ಸಮೃದ್ಧವಾಗಿ ಲಭ್ಯವಿದೆ ಎಂದ ಮಾತ್ರಕ್ಕೆ ಸಭಿಕರನ್ನು ಅದರ ಪ್ರವಾಹದಿಂದ ಮುಳುಗಿಸಿಬಿಡಬೇಡಿ. ಒಂದುವೇಳೆ ಭಾಷಣಕಾರನು, ಮಾನವ ಪ್ರಭುಗಳ ವೈಫಲ್ಯ, ಪಾತಕ ಹಾಗೂ ಹಿಂಸಾಚಾರಗಳ ಕುರಿತಾದ ವರದಿಗಳು, ಮತ್ತು ಮನಸ್ಸನ್ನು ಆಘಾತಗೊಳಿಸುವಷ್ಟು ಪ್ರಮಾಣದಲ್ಲಿ ವ್ಯಾಪಕವಾಗಿರುವ ಅನೈತಿಕತೆಯ ಕುರಿತಾದ ವಿಷಯಗಳಲ್ಲೇ ದೀರ್ಘಕಾಲದ ವರೆಗೆ ತಲ್ಲೀನನಾಗುವುದಾದರೆ, ಇದರ ಪರಿಣಾಮವು ನಿರುತ್ತೇಜನಕರವಾಗಿರಬಲ್ಲದು. ಉಪಯುಕ್ತವಾಗಿರುವಲ್ಲಿ ಮಾತ್ರ ಒಂದು ವಿಷಯದ ನಕಾರಾತ್ಮಕ ಅಂಶವನ್ನು ತಿಳಿಯಪಡಿಸಿರಿ. ಅಂತಹ ಸ್ವಲ್ಪ ಅಂಶಗಳು ನಿಮ್ಮ ಭಾಷಣದ ಸಮಯೋಚಿತತೆಯನ್ನು ಒತ್ತಿಹೇಳಬಹುದು. ಅದು ಒಂದು ಸನ್ನಿವೇಶಕ್ಕೆ ಎಡೆಮಾಡಿಕೊಡುವ ಪ್ರಮುಖ ಅಂಶಗಳನ್ನು ಸಹ ಗುರುತಿಸಬಹುದು, ಮತ್ತು ಹೀಗೆ ಬೈಬಲಿನಲ್ಲಿ ಕೊಡಲ್ಪಟ್ಟಿರುವ ಪರಿಹಾರವು ಏಕೆ ಪ್ರಾಯೋಗಿಕವಾಗಿದೆ ಎಂಬುದನ್ನು ತೋರಿಸಲು ಉಪಯೋಗಿಸಲ್ಪಡಬಹುದು. ಎಲ್ಲಿ ಸಾಧ್ಯವೊ ಅಲ್ಲಿ, ಸಮಸ್ಯೆಗಳ ಮೇಲೆ ತುಂಬ ಹೊತ್ತು ಗಮನವನ್ನು ಕೇಂದ್ರೀಕರಿಸುವ ಬದಲು, ಅವುಗಳ ಕುರಿತು ಬೇಕಾಗಿರುವ ವಿವರಗಳನ್ನು ಮಾತ್ರ ಚುಟುಕಾಗಿ ಹೇಳಿರಿ.

ಒಂದು ಭಾಷಣದಿಂದ ಎಲ್ಲ ನಕಾರಾತ್ಮಕ ವಿಷಯಗಳನ್ನು ತೆಗೆದುಬಿಡಲು ಸಾಮಾನ್ಯವಾಗಿ ಸಾಧ್ಯವಾಗುವುದೂ ಇಲ್ಲ, ಅದು ಅಪೇಕ್ಷಣೀಯವೂ ಅಲ್ಲ. ಆದರೆ ಇಲ್ಲಿರುವ ಪಂಥಾಹ್ವಾನವೇನೆಂದರೆ, ಕೆಟ್ಟದ್ದರ ಮತ್ತು ಒಳ್ಳೆಯದರ ಮಿಶ್ರಣವನ್ನು, ಅದರ ಒಟ್ಟು ಪರಿಣಾಮವು ಸಕಾರಾತ್ಮಕವಾಗಿರುವ ರೀತಿಯಲ್ಲಿ ನೀಡುವುದೇ ಆಗಿದೆ. ಇದನ್ನು ಸಾಧಿಸಲಿಕ್ಕಾಗಿ, ಯಾವುದನ್ನು ಸೇರಿಸಬೇಕು, ಯಾವುದನ್ನು ಬಿಟ್ಟುಬಿಡಬೇಕು ಮತ್ತು ಯಾವುದಕ್ಕೆ ಒತ್ತನ್ನು ನೀಡಬೇಕು ಎಂಬುದನ್ನು ನೀವು ನಿರ್ಣಯಿಸಬೇಕು. ಯೇಸು ತನ್ನ ಪರ್ವತ ಪ್ರಸಂಗದಲ್ಲಿ, ಶಾಸ್ತ್ರಿಗಳ ಮತ್ತು ಫರಿಸಾಯರ ಸ್ವಾರ್ಥಾನ್ವೇಷಕ ಮಾರ್ಗಗಳನ್ನು ತನ್ನ ಕೇಳುಗರು ತೊರೆಯಬೇಕೆಂದು ಹೇಳಿ, ಆ ಅಂಶವನ್ನು ಚಿತ್ರಿಸಲು ಕೆಲವು ದೃಷ್ಟಾಂತಗಳನ್ನು ಕೊಟ್ಟನು. (ಮತ್ತಾ. 6:1, 2, 5, 16) ಆದರೂ, ಆ ಧಾರ್ಮಿಕ ಮುಖಂಡರ ನಕಾರಾತ್ಮಕ ಮಾದರಿಗಳ ಮೇಲೆಯೇ ಗಮನವನ್ನು ಕೇಂದ್ರೀಕರಿಸುವುದಕ್ಕೆ ಬದಲಾಗಿ, ದೇವರ ಸತ್ಯ ಮಾರ್ಗಗಳನ್ನು ತಿಳಿದುಕೊಂಡು ಅವುಗಳಿಗನುಸಾರವಾಗಿ ಬದುಕುವುದನ್ನು ಯೇಸು ಒತ್ತಿಹೇಳಿದನು. (ಮತ್ತಾ. 6:3, 4, 6-15, 17-34) ಇದರ ಪರಿಣಾಮವು ತೀರ ಪ್ರಯೋಜನಕರವಾಗಿತ್ತು.

ನಿಮ್ಮ ವಾಕ್‌ಶೈಲಿಯನ್ನು ಸಕಾರಾತ್ಮಕವಾಗಿಡಿರಿ. ನಿಮಗೆ ನಿಮ್ಮ ಸಭೆಯಲ್ಲಿ ಕ್ರೈಸ್ತ ಚಟುವಟಿಕೆಯ ಯಾವುದೋ ಒಂದು ಅಂಶದ ಕುರಿತು ಭಾಷಣ ನೀಡುವ ನೇಮಕವು ಸಿಕ್ಕಿರುವುದಾದರೆ, ಟೀಕಾತ್ಮಕ ಮನೋಭಾವದವರಾಗಿರುವ ಬದಲು ರಚನಾತ್ಮಕ ಮನೋಭಾವದವರಾಗಿರಿ. ನೀವು ಇತರರು ಏನನ್ನು ಮಾಡುವಂತೆ ಪ್ರೋತ್ಸಾಹಿಸುತ್ತೀರೊ ಅದನ್ನು ನೀವೇ ಮಾಡುತ್ತಿದ್ದೀರೆಂಬುದನ್ನು ಖಚಿತಪಡಿಸಿಕೊಳ್ಳಿರಿ. (ರೋಮಾ. 2:21, 22; ಇಬ್ರಿ. 13:7) ಸಿಟ್ಟಲ್ಲ ಬದಲಾಗಿ ಪ್ರೀತಿಯು ನೀವು ಏನು ಹೇಳುತ್ತೀರೊ ಅದನ್ನು ಪ್ರಚೋದಿಸಲಿ. (2 ಕೊರಿಂ. 2:4) ನಿಮ್ಮ ಜೊತೆವಿಶ್ವಾಸಿಗಳು ಯೆಹೋವನನ್ನು ಮೆಚ್ಚಿಸಲು ಬಯಸುತ್ತಾರೆಂಬ ದೃಢಭರವಸೆ ನಿಮಗಿರುವಲ್ಲಿ, ನೀವು ಹೇಳುವ ಮಾತುಗಳು ಆ ದೃಢಭರವಸೆಯನ್ನು ಹೊರಸೂಸುವವು ಮತ್ತು ಇದು ಪ್ರಯೋಜನದಾಯಕ ಪರಿಣಾಮವನ್ನು ಬೀರುವುದು. 1 ಥೆಸಲೊನೀಕ 4:1-12; 2 ಥೆಸಲೊನೀಕ 3:4, 5; ಮತ್ತು ಫಿಲೆಮೋನ 4, 8-14, 21 ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಅಂತಹ ದೃಢಭರವಸೆಯನ್ನು ಅಪೊಸ್ತಲ ಪೌಲನು ಹೇಗೆ ವ್ಯಕ್ತಪಡಿಸಿದನೆಂಬುದನ್ನು ಗಮನಿಸಿರಿ.

ಕೆಲವೊಮ್ಮೆ ಅವಿವೇಕಭರಿತ ನಡತೆಯ ವಿಷಯದಲ್ಲಿ ಹಿರಿಯರು ಎಚ್ಚರಿಕೆಯನ್ನು ಕೊಡಬೇಕಾದ ಸಂದರ್ಭ ಬರುತ್ತದೆ. ಆದರೆ ದೈನ್ಯಭಾವವು ಅವರು ತಮ್ಮ ಸಹೋದರರೊಂದಿಗೆ ಸೌಮ್ಯಭಾವದಿಂದ ವ್ಯವಹರಿಸುವಂತೆ ಸಹಾಯಮಾಡುವುದು. (ಗಲಾ. 6:1) ವಿಷಯಗಳು ಹೇಳಲ್ಪಡುವ ರೀತಿಯು, ಸಭೆಯವರನ್ನು ಗೌರವದಿಂದ ಕಾಣಲಾಗುತ್ತದೆಂಬುದನ್ನು ವ್ಯಕ್ತಪಡಿಸುವಂತಿರಬೇಕು. (1 ಪೇತ್ರ 5:2, 3) ಯುವ ಜನರು ಇದನ್ನು ವಿಶೇಷವಾಗಿ ಮನಸ್ಸಿಗೆ ತೆಗೆದುಕೊಳ್ಳುವಂತೆ ಬೈಬಲು ಸಲಹೆ ನೀಡುತ್ತದೆ. (1 ತಿಮೊ. 4:12; 5:1, 2; 1 ಪೇತ್ರ 5:5) ಖಂಡಿಸುವ, ನೀತಿಶಿಕ್ಷೆ ವಿಧಿಸುವ, ತಿದ್ದುಪಾಟು ನೀಡುವ ಅಗತ್ಯವು ಬರುವಾಗ, ಅದನ್ನು ಬೈಬಲು ಏನು ಹೇಳುತ್ತದೊ ಅದರ ಆಧಾರದ ಮೇರೆಗೆ ಮಾಡಬೇಕು. (2 ತಿಮೊ. 3:16) ವಚನವನ್ನು ಅನ್ವಯಿಸಬೇಕಾಗಿರುವಾಗ, ಭಾಷಣಕಾರನಿಗೆ ಯಾವುದರ ಬಗ್ಗೆ ಬಲವಾದ ಅನಿಸಿಕೆಗಳಿವೆಯೊ ಅದನ್ನು ಸಮರ್ಥಿಸಲು ಅಂಥ ವಚನವನ್ನು ಅತಿಶಯಿಸಬಾರದು ಇಲ್ಲವೆ ತಿರುಚಿ ವಿವರಿಸಬಾರದು. ತಪ್ಪನ್ನು ತಿದ್ದುವ ಸಲಹೆಯು ಅಗತ್ಯವಾಗಿರುವಾಗಲೂ, ತಪ್ಪು ನಡತೆಯಲ್ಲಿ ಒಳಗೂಡುವುದನ್ನು ಹೇಗೆ ತಪ್ಪಿಸುವುದು, ಸಮಸ್ಯೆಯನ್ನು ಹೇಗೆ ಪರಿಹರಿಸುವುದು, ತಾಪತ್ರಯಗಳನ್ನು ಹೇಗೆ ಜಯಿಸುವುದು, ಒಂದು ತಪ್ಪು ಮಾರ್ಗವನ್ನು ಹೇಗೆ ತಿದ್ದುವುದು ಮತ್ತು ಯೆಹೋವನು ನಮ್ಮಿಂದ ಕೇಳಿಕೊಳ್ಳುವ ಆವಶ್ಯಕತೆಗಳು ನಮ್ಮನ್ನು ಹೇಗೆ ಕಾಪಾಡುತ್ತವೆ ಎಂಬ ವಿಷಯಗಳ ಮೇಲೆ ಮುಖ್ಯವಾಗಿ ಒತ್ತನ್ನು ಹಾಕುವಲ್ಲಿ, ಆ ವಾಕ್‌ಶೈಲಿಯನ್ನು ಸಕಾರಾತ್ಮಕವಾಗಿ ಇಡಸಾಧ್ಯವಿದೆ.—ಕೀರ್ತ. 119:1, 9-16.

ನಿಮ್ಮ ಭಾಷಣವನ್ನು ತಯಾರಿಸುವಾಗ, ನೀವು ಪ್ರತಿಯೊಂದು ಮುಖ್ಯಾಂಶವನ್ನು ಮತ್ತು ಇಡೀ ಭಾಷಣವನ್ನು ಹೇಗೆ ಮುಕ್ತಾಯಗೊಳಿಸುವಿರಿ ಎಂಬುದಕ್ಕೆ ವಿಶೇಷ ಗಮನವನ್ನು ಕೊಡಿರಿ. ನೀವು ಕೊನೆಯದಾಗಿ ಏನು ಹೇಳುತ್ತೀರೊ ಅದು ಅನೇಕವೇಳೆ ದೀರ್ಘ ಸಮಯದ ತನಕ ನೆನಪಿನಲ್ಲಿರುತ್ತದೆ. ಅದು ಸಕಾರಾತ್ಮಕವಾಗಿರುವುದೊ?

ಜೊತೆವಿಶ್ವಾಸಿಗಳೊಂದಿಗೆ ಸಂಭಾಷಿಸುವಾಗ. ಯೆಹೋವನ ಸೇವಕರು ತಮಗೆ ಕ್ರೈಸ್ತ ಕೂಟಗಳಲ್ಲಿ ಸಿಗುವ ಸಹವಾಸದ ಸಂದರ್ಭಗಳಿಗಾಗಿ ಕೃತಜ್ಞರಾಗಿದ್ದಾರೆ. ಏಕೆಂದರೆ ಇವು ಆತ್ಮಿಕ ಚೈತನ್ಯದ ಸಮಯಗಳಾಗಿವೆ. ನಾವು ನಮ್ಮ ಆರಾಧನಾ ಸ್ಥಳಗಳಲ್ಲಿ ಕೂಡಿಬರುವಾಗ, “ಒಬ್ಬರನ್ನೊಬ್ಬರು ಪ್ರೋತ್ಸಾಹಿಸು”ವುದನ್ನು ಮನಸ್ಸಿನಲ್ಲಿಟ್ಟುಕೊಂಡಿರುವಂತೆ ಬೈಬಲು ನಮಗೆ ತಿಳಿಯಪಡಿಸುತ್ತದೆ. (ಇಬ್ರಿ. 10:25, NW) ಇದನ್ನು ಕೂಟಗಳ ಸಮಯದಲ್ಲಿ ಭಾಷಣಗಳು ಮತ್ತು ಹೇಳಿಕೆಗಳ ಮೂಲಕವಷ್ಟೇ ಮಾಡುವುದಲ್ಲ, ಬದಲಾಗಿ ಕೂಟಗಳಿಗೆ ಮುಂಚೆಯೂ ಅನಂತರವೂ ಸಂಭಾಷಿಸುವುದರ ಮೂಲಕವೂ ಮಾಡಲಾಗುತ್ತದೆ.

ನಮ್ಮ ದೈನಂದಿನ ಜೀವನದ ಚಿಂತೆಗಳ ವಿಷಯದಲ್ಲಿ ಸಂಭಾಷಣೆಯನ್ನು ನಡೆಸುವುದು ಸ್ವಾಭಾವಿಕವಾದರೂ, ಅತ್ಯುತ್ತಮವಾದ ಪ್ರೋತ್ಸಾಹವು ಬರುವುದು ಆತ್ಮಿಕ ವಿಷಯಗಳ ಚರ್ಚೆಯ ಮೂಲಕವೇ. ನಾವು ಪವಿತ್ರ ಸೇವೆಯಲ್ಲಿ ಅನುಭವಿಸುವ ಅನುಭವಗಳು ಇದರಲ್ಲಿ ಸೇರಿರುತ್ತವೆ. ನಾವು ಪರಸ್ಪರವಾಗಿ ಹಿತಕರವಾದ ಆಸಕ್ತಿಯನ್ನು ತೋರಿಸುವುದು, ಆತ್ಮೋನ್ನತಿ ಮಾಡುವ ವಿಷಯವಾಗಿದೆ.

ನಮ್ಮ ಸುತ್ತಲೂ ಇರುವ ಲೋಕದ ಪ್ರಭಾವದ ಕಾರಣ, ನಾವು ತುಂಬ ಜಾಗರೂಕತೆ ವಹಿಸುವ ಅಗತ್ಯವಿದೆ. ಎಫೆಸದಲ್ಲಿದ್ದ ಕ್ರೈಸ್ತರಿಗೆ ಬರೆಯುವಾಗ, “ಸುಳ್ಳಾಡುವದನ್ನು ಬಿಟ್ಟುಬಿಟ್ಟು ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಆಡಲಿ” ಎಂದು ಪೌಲನು ಹೇಳಿದನು. (ಎಫೆ. 4:25) ಸುಳ್ಳಿಗೆ ಬದಲಾಗಿ ಸತ್ಯವನ್ನಾಡುವುದರಲ್ಲಿ, ಲೋಕವು ಮೂರ್ತೀಕರಿಸುವ ವಿಷಯಗಳನ್ನೂ ಜನರನ್ನೂ ನಾವು ಮಹಿಮೆಗೇರಿಸದಿರುವ ಸಂಗತಿಯೂ ಒಳಗೂಡಿದೆ. ಅದೇ ರೀತಿಯಲ್ಲಿ ಯೇಸು, “ಐಶ್ವರ್ಯದಿಂದುಂಟಾಗುವ ಮೋಸ”ದ ವಿಷಯದಲ್ಲಿ ಎಚ್ಚರಿಸಿದನು. (ಮತ್ತಾ. 13:22) ಆದಕಾರಣ ನಾವು ಒಬ್ಬರು ಇನ್ನೊಬ್ಬರೊಂದಿಗೆ ಮಾತಾಡುವಾಗ, ಪ್ರಾಪಂಚಿಕ ಸ್ವತ್ತುಗಳ ಗಳಿಕೆಯನ್ನು ಚಿತ್ತಾಕರ್ಷಕವಾಗಿ ಮಾಡುವ ಮೂಲಕ ಆ ಮೋಸವನ್ನು ವರ್ಧಿಸದಂತೆ ಜಾಗರೂಕರಾಗಿರಬೇಕು.—1 ತಿಮೊ. 6:9, 10.

ಆತ್ಮೋನ್ನತಿಯ ಆವಶ್ಯಕತೆಯ ಕುರಿತು ಬುದ್ಧಿಹೇಳುವಾಗ, ಒಬ್ಬ ಸಹೋದರನು “ನಂಬಿಕೆಯಲ್ಲಿ ದೃಢವಿಲ್ಲದವನು” ಆಗಿರುವ ಕಾರಣ, ಅಂದರೆ ಕ್ರೈಸ್ತ ಸ್ವಾತಂತ್ರ್ಯದ ಪೂರ್ಣ ವ್ಯಾಪ್ತಿಯನ್ನು ಅವನು ಗ್ರಹಿಸದ ಕಾರಣ, ಕೆಲವು ವಿಷಯಗಳನ್ನು ಮಾಡುವುದರಿಂದ ಅವನು ದೂರವಿರುವಲ್ಲಿ, ನಾವು ಅವನಿಗೆ ತೀರ್ಪು ಮಾಡಬಾರದೆಂದೂ ಅವನನ್ನು ಹೀನೈಸಬಾರದೆಂದೂ ಅಪೊಸ್ತಲ ಪೌಲನು ತಿಳಿಸುತ್ತಾನೆ. ಹೌದು, ನಮ್ಮ ಸಂಭಾಷಣೆಯು ಇತರರಿಗೆ ಆತ್ಮೋನ್ನತಿ ಮಾಡಬೇಕಾದರೆ, ನಾವು ಅವರ ಹಿನ್ನೆಲೆ ಮತ್ತು ಅವರ ಆತ್ಮಿಕ ಬೆಳವಣಿಗೆಯ ಮಟ್ಟವನ್ನು ಗಣನೆಗೆ ತೆಗೆದುಕೊಳ್ಳಬೇಕು. “ಸಹೋದರನ [ಅಥವಾ ಸಹೋದರಿಯ] ಎದುರಿಗೆ ಅಡ್ಡಿಯನ್ನಾಗಲಿ ಎಡತಡೆಯನ್ನಾಗಲಿ” ಹಾಕುವುದು ಅದೆಷ್ಟು ದುಃಖಕರವಾದ ವಿಷಯವಾಗಿರುವುದು!—ರೋಮಾ. 14:1-4, 13, 19.

ಉದಾಹರಣೆಗೆ, ಅಸ್ಥಿಗತ ಕಾಯಿಲೆಯಂತಹ ಗಂಭೀರವಾದ ವೈಯಕ್ತಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರು ಆತ್ಮೋನ್ನತಿ ಮಾಡುವ ಸಂಭಾಷಣೆಯನ್ನು ತುಂಬ ಗಣ್ಯಮಾಡುತ್ತಾರೆ. ಇಂಥ ಒಬ್ಬ ವ್ಯಕ್ತಿಯು ತುಂಬ ಪ್ರಯಾಸಪಡುತ್ತಾ ಕೂಟಗಳಿಗೆ ಹಾಜರಾಗುತ್ತಿರಬಹುದು. ಅವನ ಸನ್ನಿವೇಶವನ್ನು ಬಲ್ಲವರು, “ನೀವು ಹೇಗಿದ್ದೀರಿ?” ಎಂದು ಕೇಳಬಹುದು. ಅವನು ಅವರ ಚಿಂತೆಗೆ ಕೃತಜ್ಞತೆ ತೋರಿಸುವನು ಎಂಬುದಂತೂ ಖಂಡಿತ. ಆದರೂ, ಅವನ ಆರೋಗ್ಯ ಸ್ಥಿತಿಯ ಕುರಿತಾಗಿ ಮಾತಾಡುವುದನ್ನು ಅವನು ಹೆಚ್ಚು ಉತ್ತೇಜನ ನೀಡುವಂತಹ ವಿಷಯವನ್ನಾಗಿ ಕಂಡುಕೊಳ್ಳಲಿಕ್ಕಿಲ್ಲ. ಅವನ ಹೃದಯವನ್ನು ಹುರಿದುಂಬಿಸಲಿಕ್ಕಾಗಿ ಗಣ್ಯತೆಯ ಹಾಗೂ ಪ್ರಶಂಸೆಯ ಮಾತುಗಳು ಹೆಚ್ಚನ್ನು ಮಾಡಬಲ್ಲವು. ಒಂದು ಕಷ್ಟಕರವಾದ ಪರಿಸ್ಥಿತಿಯ ಕೆಳಗೆ ಅವನು ಯೆಹೋವನಿಗಾಗಿ ತೋರಿಸುವ ಸತತವಾದ ಪ್ರೀತಿಯ ಮತ್ತು ತಾಳ್ಮೆಯ ರುಜುವಾತನ್ನು ನೀವು ನೋಡುತ್ತೀರೊ? ಅವನು ಸಭೆಯಲ್ಲಿ ಉತ್ತರಗಳನ್ನು ಕೊಡುವಾಗ ನೀವು ಪ್ರೋತ್ಸಾಹಿಸಲ್ಪಡುತ್ತೀರೊ? ಅವನ ಇತಿಮಿತಿಗಳ ಬದಲು, ಅವನು ತೋರಿಸುವ ಸಾಮರ್ಥ್ಯಗಳ ಕಡೆಗೆ ಮತ್ತು ಅವನು ಸಭೆಗೆ ಮಾಡುವ ಸಹಾಯದ ಕಡೆಗೆ ಗಮನವನ್ನು ಸೆಳೆಯುವುದು ಹೆಚ್ಚು ಆತ್ಮೋನ್ನತಿ ಮಾಡುವ ವಿಷಯವಾಗಿರಬಹುದಲ್ಲವೊ?—1 ಥೆಸ. 5:11.

ನಮ್ಮ ಸಂಭಾಷಣೆಯು ಆತ್ಮೋನ್ನತಿಯನ್ನು ಮಾಡುವಂಥದ್ದಾಗಿರಬೇಕಾದರೆ, ಏನು ಚರ್ಚಿಸಲ್ಪಡುತ್ತಿದೆಯೋ ಆ ವಿಷಯದ ಕುರಿತಾದ ಯೆಹೋವನ ದೃಷ್ಟಿಕೋನವನ್ನು ನಾವು ಲೆಕ್ಕಕ್ಕೆ ತೆಗದುಕೊಳ್ಳುವುದು ವಿಶೇಷವಾಗಿ ಪ್ರಾಮುಖ್ಯವಾಗಿದೆ. ಪುರಾತನಕಾಲದ ಇಸ್ರಾಯೇಲಿನಲ್ಲಿ, ಯೆಹೋವನ ಪ್ರತಿನಿಧಿಗಳ ವಿರುದ್ಧವಾಗಿ ಮಾತಾಡಿ, ಮನ್ನದ ವಿಷಯದಲ್ಲಿ ದೂರಿದವರು ದೇವರ ಕಠಿನ ಕೋಪಕ್ಕೊಳಗಾದರು. (ಅರಣ್ಯ. 12:1-16; 21:5, 6) ನಾವು ಹಿರಿಯರಿಗೆ ಗೌರವವನ್ನು ತೋರಿಸುತ್ತಾ, ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದಿಂದ ಒದಗಿಸಲ್ಪಡುವ ಆತ್ಮಿಕ ಆಹಾರಕ್ಕೆ ಗಣ್ಯತೆಯನ್ನು ತೋರಿಸುವಲ್ಲಿ, ಆ ಮಾದರಿಗಳಿಂದ ನಾವು ಪ್ರಯೋಜನವನ್ನು ಪಡೆದಿದ್ದೇವೆಂಬುದಕ್ಕೆ ರುಜುವಾತನ್ನು ಕೊಡುತ್ತೇವೆ.—1 ತಿಮೊ. 5:17.

ನಮ್ಮ ಕ್ರೈಸ್ತ ಸಹೋದರರ ಜೊತೆಯಲ್ಲಿರುವಾಗ ಮಾತಾಡಲಿಕ್ಕಾಗಿ ಪ್ರಯೋಜನಕರವಾದ ಸಂಗತಿಗಳನ್ನು ಕಂಡುಕೊಳ್ಳುವುದು ಹೆಚ್ಚಾಗಿ ಒಂದು ಸಮಸ್ಯೆಯಾಗಿರುವುದಿಲ್ಲ. ಆದರೂ, ಸಂಭಾಷಣೆ ಮಾಡುತ್ತಿರುವಾಗ ಒಬ್ಬನ ಹೇಳಿಕೆಗಳು ವಿಪರೀತ ಟೀಕಾತ್ಮಕವಾಗಿರುವಲ್ಲಿ, ಆ ಸಂಭಾಷಣೆಯನ್ನು ಆತ್ಮೋನ್ನತಿಯ ದಿಕ್ಕಿಗೆ ತಿರುಗಿಸಲು ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳಿರಿ.

ನಾವು ಇತರರಿಗೆ ಸಾಕ್ಷಿ ನೀಡುತ್ತಿರಲಿ, ವೇದಿಕೆಯಿಂದ ಮಾತಾಡುತ್ತಿರಲಿ ಅಥವಾ ಜೊತೆವಿಶ್ವಾಸಿಗಳೊಂದಿಗೆ ಮಾತಾಡುತ್ತಿರಲಿ, ನಮ್ಮ ಹೃದಯದ ಭಂಡಾರದಿಂದ “ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು” ಆಡುವಂತೆ ನಾವು ವಿವೇಚನೆಯನ್ನು ಉಪಯೋಗಿಸುವಂತಾಗಲಿ.—ಎಫೆ. 4:29.

ಅದನ್ನು ಮಾಡುವ ವಿಧ

  • ನಮಗಿರುವ ನೇಮಕವು ಸುವಾರ್ತೆಯನ್ನು ಸಾರುವುದಾಗಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ.

  • ಟೀಕಾತ್ಮಕರಲ್ಲ, ರಚನಾತ್ಮಕರಾಗಿರಿ.

  • ನೀವು ಯಾರೊಂದಿಗೆ ಮಾತಾಡುತ್ತೀರೊ ಅವರ ಕುರಿತು ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಿಕೊಳ್ಳಿರಿ.

  • ಸಂಭಾಷಣೆಯಲ್ಲಿ, ನಿಮ್ಮ ಹೇಳಿಕೆಗಳು ಇನ್ನೊಬ್ಬ ವ್ಯಕ್ತಿಯ ಮೇಲೆ ಯಾವ ಪರಿಣಾಮವನ್ನು ಬೀರಬಹುದು ಎಂಬುದನ್ನು ಪರಿಗಣಿಸಿರಿ.

ಅಭ್ಯಾಸಪಾಠ: ಅಂಗವಿಕಲನಾಗಿರುವ ಅಥವಾ ಮನೆಯಿಂದ ಹೊರಗೆ ಹೋಗಲಿಕ್ಕಾಗದ ಒಬ್ಬನನ್ನು ಭೇಟಿಮಾಡುವ ಮೊದಲು, ಆತ್ಮೋನ್ನತಿ ಮಾಡುವಂಥ ಒಂದು ಸಂಭಾಷಣೆಯನ್ನು ಹೇಗೆ ಆರಂಭಿಸಸಾಧ್ಯವಿದೆ ಎಂಬುದರ ಕುರಿತು ಆಲೋಚಿಸಿರಿ. ಅನುಭೂತಿಯನ್ನು ತೋರಿಸಿರಿ, ಆದರೆ ಅದೇ ಸಮಯದಲ್ಲಿ ನಿಮ್ಮ ಹೇಳಿಕೆಗಳನ್ನು ಸಕಾರಾತ್ಮಕವಾಗಿಡಿರಿ. ಇದನ್ನು ಮಾಡಲು ಮುಂಚಿತವಾಗಿಯೇ ಏನು ಹೇಳುವಿರೆಂಬ ಯೋಜನೆಯನ್ನು ಮಾಡಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ