ಪಾಠ 2
ದೇವರು ಮೊದಲ ಗಂಡು-ಹೆಣ್ಣನ್ನು ಸೃಷ್ಟಿಸಿದನು
ಯೆಹೋವ ದೇವರು ಭೂಮಿಯ ಮೇಲೆ ಒಂದು ಸುಂದರ ತೋಟವನ್ನು ಮಾಡಿದನು. ಅದಕ್ಕೆ ಏದೆನ್ ಎಂದು ಹೆಸರಿಟ್ಟನು. ಅದರ ತುಂಬ ಬಣ್ಣಬಣ್ಣದ ಹೂಗಳು, ಮರಗಳು ಮತ್ತು ಬೇರೆ ಬೇರೆ ರೀತಿಯ ಪ್ರಾಣಿ-ಪಕ್ಷಿಗಳು ಇದ್ದವು. ಆಮೇಲೆ ದೇವರು ಮಣ್ಣಿನಿಂದ ಮೊದಲ ಮನುಷ್ಯ ಆದಾಮನನ್ನು ಮಾಡಿ ಅವನ ಮೂಗೊಳಗೆ ಜೀವಶ್ವಾಸ ಊದಿದನು. ಆಗ ಏನಾಯಿತು ಗೊತ್ತಾ? ಅವನಿಗೆ ಜೀವ ಬಂತು! ದೇವರು ಆದಾಮನಿಗೆ ಏದೆನ್ ತೋಟವನ್ನು ನೋಡಿಕೊಳ್ಳಲು ಮತ್ತು ಎಲ್ಲಾ ಪ್ರಾಣಿಗಳಿಗೆ ಹೆಸರನ್ನು ಇಡಲು ಹೇಳಿದನು.
ಯೆಹೋವ ದೇವರು ಆದಾಮನಿಗೆ ಒಂದು ಪ್ರಾಮುಖ್ಯವಾದ ನಿಯಮ ಕೊಟ್ಟನು. ‘ನೀನು ಎಲ್ಲಾ ಮರದ ಹಣ್ಣನ್ನ ತಿನ್ನಬಹುದು ಆದ್ರೆ ಒಂದು ವಿಶೇಷವಾದ ಮರದ ಹಣ್ಣನ್ನ ಮಾತ್ರ ತಿನ್ನಬಾರದು. ತಿಂದ್ರೆ ಸತ್ತು ಹೋಗ್ತಿಯ’ ಅಂತ ಹೇಳಿದನು.
ಆಮೇಲೆ ದೇವರು, ‘ಆದಾಮನಿಗೆ ಒಬ್ಬ ಸಹಾಯಕಿಯನ್ನ ಮಾಡ್ತೀನಿ’ ಎಂದು ಹೇಳಿದನು. ಅವನಿಗೆ ಗಾಢ ನಿದ್ದೆ ಬರುವಂತೆ ಮಾಡಿ ಅವನ ಪಕ್ಕೆಲುಬಿನಿಂದ ಸ್ತ್ರೀಯನ್ನು ಮಾಡಿದನು. ಅವಳೇ ಹವ್ವ. ಆಕೆ ಆದಾಮನ ಹೆಂಡತಿಯಾದಳು. ಹೀಗೆ ಮೊದಲ ಮಾನವ ಕುಟುಂಬ ಆರಂಭವಾಯಿತು. ಹವ್ವಳನ್ನು ನೋಡಿದಾಗ ಆದಾಮನಿಗೆ ಹೇಗನಿಸಿತು ಗೊತ್ತಾ? ಅವನಿಗೆ ತುಂಬ ಖುಷಿ ಆಯಿತು. ಅವನು ಹೇಳಿದ್ದು: ‘ಯೆಹೋವನು ನನ್ನ ಪಕ್ಕೆಲುಬಿನಿಂದ ನನ್ನಾಕೆಯನ್ನು ಸೃಷ್ಟಿ ಮಾಡಿದ್ದಾನೆ. ಇವಳೇ ನನ್ನ ಬಾಳಸಂಗಾತಿ.’
ಯೆಹೋವ ದೇವರು ಆದಾಮ ಹವ್ವರಿಗೆ ಮಕ್ಕಳನ್ನು ಪಡೆದು ಭೂಮಿಯನ್ನು ತುಂಬಿಕೊಳ್ಳಲು ಹೇಳಿದನು. ಅವರು ಇಡೀ ಭೂಮಿಯನ್ನು ಏದೆನಿನಂತೆ ಸುಂದರ ತೋಟವನ್ನಾಗಿ ಮಾಡುತ್ತಾ, ಸಂತೋಷವಾಗಿ ಜೊತೆಯಾಗಿ ಕೆಲಸ ಮಾಡಬೇಕು ಎನ್ನುವುದು ದೇವರ ಇಷ್ಟವಾಗಿತ್ತು. ಆದರೆ ಅಂದುಕೊಂಡಂತೆ ನಡೆಯಲಿಲ್ಲ. ಏಕೆ? ಮುಂದಿನ ಅಧ್ಯಾಯದಲ್ಲಿ ತಿಳಿಯೋಣ.
‘ದೇವರು ಆರಂಭದಲ್ಲಿ ಗಂಡು ಮತ್ತು ಹೆಣ್ಣನ್ನ ಸೃಷ್ಟಿ ಮಾಡಿದನು.’—ಮತ್ತಾಯ 19:4