ಕ್ರಿಸ್ಮಸ್—ಜಪಾನಿನಲ್ಲಿ ಅಷ್ಟು ಜನಪ್ರಿಯವೇಕೆ?
ಬೌದ್ಧ-ಶಿಂಟೊ ದೇಶವಾದ ಜಾಪಾನಿನ ಮಕ್ಕಳ ನಡುವೆ ಫಾದರ್ ಕ್ರಿಸ್ಮಸ್ (ಕ್ರಿಸ್ಮಸ್ ತಾತ)ನ ನಂಬಿಕೆಯು ಬಹು ಆಳವಾಗಿ ಹರಿಯುತ್ತದೆ. 1989ರಲ್ಲಿ ಜಾಪಾನಿನ ಮಕ್ಕಳು ಸ್ವೀಡನ್ನ ಸಾಂತಾ ಜಗತ್ತಿಗೆ, 1,60,000 ಪತ್ರಗಳನ್ನು ಕಳುಹಿಸಿದರು. ಬೇರೆ ಯಾವುದೇ ದೇಶವು ಇದಕ್ಕಿಂತ ಹೆಚ್ಚು ಕಳುಹಿಸಿರುವದಿಲ್ಲ. ತಮ್ಮ ಹೃದಯಾಪೇಕ್ಷೆಯನ್ನು ಪೂರೈಸುವ ನಿರೀಕ್ಷೆಯಲ್ಲಿ—ಅದು 18,000-ಯೆನ್ (ಸುಮಾರು ರೂ.3400) ಬೆಲೆಯ “ಗ್ರಾಫಿಕ್ ಕಂಪ್ಯೂಟರ್” ಆಟಿಕೆಯಾಗಿರಲಿ ಅಥವಾ 12,500-ಯೆನ್ (ಸುಮಾರು ರೂ.2375) ಕ್ರಯದ ಪೋರ್ಟೆಬಲ್ ವೀಡಿಯೊ ಆಟವಾಗಲಿ—ಪಡೆಯುವುದಕ್ಕಾಗಿ ಅವರು ಬರೆದರು.
ತರುಣಿಯರಾದ ಜಪಾನಿನ ಹುಡುಗಿಯರಿಗೆ ಕ್ರಿಸ್ಮಸ್ಗೆ ಮುಂಚಿನ ರಾತ್ರಿಯ ಡೇಟಿಂಗ್ (ವಿರುದ್ಧಲಿಂಗದವರೊಡನೆ ಮಾಡುವ ವಿಹಾರಕಾಲ ನಿಶ್ಚಯಿಸುವಿಕೆ) ಒಂದು ವಿಶೇಷಾರ್ಥವನ್ನು ಒಯ್ಯುತ್ತದೆ. “ತರುಣಿಯರ ಒಂದು ಸಮೀಕ್ಷೆಗೆ ಅನುಸಾರವಾಗಿ,” ಹೇಳುತ್ತದೆ ಮೈನಿಕಿ ಡೈಲಿ ನ್ಯೂಸ್, “ಕ್ರಿಸ್ಮಸ್ ಸಂಜೆಗಾಗಿ ತಾವು ಯೋಜನೆಗಳನ್ನು ಒಂದು ತಿಂಗಳ ಹಿಂದೆಯೆ ಮಾಡಿದ್ದೆವೆಂದು 38 ಪ್ರತಿಶತ ಮಂದಿ ಹೇಳಿದ್ದರು.” ಯುವಕರಿಗೆ ಕ್ರಿಸ್ಮಸ್ ಸಂಜೆಯಲ್ಲಿ ತಮ್ಮ ಪ್ರೇಯಸಿಗಳೊಂದಿಗೆ ಇರಬಯಸುವುದಕ್ಕೆ ಗುಪ್ತ ಹೇತುಗಳು ಇರುತ್ತವೆ. “ನಿಮ್ಮ ಪ್ರೇಯಸಿಯೊಂದಿಗೆ ನೆಮ್ಮದಿಯಾಗಿ ಒಟ್ಟುಗೂಡಿ ಪ್ರಾರ್ಥನೆ ಮಾಡುವುದು ಒಳ್ಳೆ ವಿಚಾರ,” ಎಂದು ಸಲಹೆ ನೀಡಿತ್ತು ತರುಣರ ಒಂದು ಮಾಸಪತ್ರಿಕೆ. “ಅದನ್ನು ಎಲ್ಲಿಯಾದರೂ ಸೊಗಸಾದ ಶೈಲಿಯುಳ್ಳ ಸ್ಥಳದಲ್ಲಿ ಮಾಡಿರಿ. ನಿಮ್ಮ ಸಂಬಂಧವು ಬೇಗನೆ ಹೆಚ್ಚು ಆಪತ್ತೆಗೆ ತಿರುಗುವುದು.”
ಜಪಾನಿನ ಗಂಡಂದಿರು ಸಹಾ ಕೆಲಸದಿಂದ ಮನೆಗೆ ಮರಳುವಾಗ “ಒಂದು ಅಲಂಕೃತ ಕೇಕನ್ನು” ಖರೀದಿಸುವ ತಮ್ಮ ಕ್ರಿಸ್ಮಸ್ ಸಂಪ್ರದಾಯದ ಮೂಲಕ ಯಾವುದೊ ಮಂತ್ರಶಕ್ತಿಗೆ ಆಹ್ವಾನಮಾಡುವ ನಿರೀಕ್ಷೆಯಲ್ಲಿರುತ್ತಾರೆ. ತಾವು ಈ ರೀತಿ ಸಾಂತಾಕ್ಲಾಸ್ನ ಪಾತ್ರವನ್ನು ವಹಿಸುವ ಮೂಲಕ ವರ್ಷವಿಡಿ ಕುಟುಂಬವನ್ನು ದುರ್ಲಕ್ಷಿಸಿದಕ್ಕಾಗಿ ನಷ್ಟಭರ್ತಿ ಮಾಡುವವರಾಗಿ ಕಾಣಿಸುತ್ತಾರೆ.
ಕ್ರೈಸ್ತೇತರ ಜಾಪಾನಿಯರಲ್ಲಿ ಕ್ರಿಸ್ಮಸ್ ತಳವೂರಿದೆಂಬದು ನಿಶ್ಚಯ. ವಾಸ್ತವದಲ್ಲಿ, ಸೂಪರ್ ಮಾರ್ಕೆಟಿನಿಂದ ಸಮೀಕ್ಷೆ ಮಾಡಲ್ಪಟ್ಟವರಲ್ಲಿ 78 ಪ್ರತಿಶತ ಜನರು ಕ್ರಿಸ್ಮಸ್ನಲ್ಲಿ ಏನಾದರೂ ವಿಶೇಷವನ್ನು ಮಾಡುವದಾಗಿ ಹೇಳಿದರು. ಎಲ್ಲಿ ಕೇವಲ 1 ಪ್ರತಿಶತ ಜನಸಂಖ್ಯೆಯು ಮಾತ್ರ ಕ್ರೈಸ್ತತ್ವವನ್ನು ನಂಬುತ್ತಾರೆಂದು ಹೇಳಲಾಗುತ್ತದೊ ಅಂಥ ಒಂದು ದೇಶದಲ್ಲಿ ಈ ಸಂಖ್ಯಾ ಪ್ರಮಾಣವು ನಿಜವಾಗಿ ನೆನಸಲಸಾಧ್ಯ. ತಾವು ಬೌದ್ಧರು ಮತ್ತು ಶಿಂಟೋಗಳು ಎಂದು ಅವರು ಹೇಳಿಕೊಂಡರೂ ಒಂದು “ಕ್ರೈಸ್ತ” ಹಬ್ಬದ ದಿನವನ್ನು ಆನಂದಿಸುವುದರಲ್ಲಿ ಅವರು ನಿಶ್ಚಿಂತೆಯಿಂದಿದ್ದಾರೆ. ಅವರ ಪಂಚಾಂಗದಲ್ಲಿ, ಜಪಾನಿ ಹಬ್ಬದಿನಗಳ ಜೊತೆಯಲ್ಲಿ, ಪ್ರಖ್ಯಾತ ಶಿಂಟೊ ಈಸ್ ದೇವಾಲಯವು ದಶಂಬರ 25ನ್ನು “ಕ್ರಿಸ್ತನ ಜನ್ಮದಿನ” ವಾಗಿ ನಮೂದಿಸಿದೆ. ಕ್ರೈಸ್ತೇತರರು ಕ್ರಿಸ್ಮಸ್ ಸಮಯದಲ್ಲಿ ಮೋಜುಮಜಾಗಳಲ್ಲಿ ಮುಳುಗಿರುವ ದೃಶ್ಯಗಳಾದರೊ ಒಂದು ಪ್ರಶ್ನೆಯನ್ನು ಎಬ್ಬಿಸುತ್ತದೆ:
ಕ್ರಿಸ್ಮಸ್ ಯಾರ ಆಚರಣೆ?
ವೆಬ್ಸಟರ್ಸ್ ನ್ಯೂ ನೈಂತ್ ಕಾಲೆಜಿಯೆಟ್ ಡಿಕ್ಷೆನೆರಿ ಕ್ರಿಸ್ಮಸ್ನ್ನು, “ಡಿಸೆಂಬರ್ 25ರ ಒಂದು ಕ್ರೈಸ್ತ ಹಬ್ಬ . . . ಕ್ರಿಸ್ತನ ಜನನದ ಸ್ಮಾರಕಾಚರಣೆಯು,” ಎಂದು ಅರ್ಥ ವಿವರಿಸುತ್ತದೆ. “ಕ್ರೈಸ್ತರು” “ಕ್ರಿಸ್ತನ ಹುಟ್ಟುಹಬ್ಬದ ಸಂತೋಷದ ಭಾವನೆಗಳಲ್ಲಿ ಒಂದುಗೂಡುವ” ಸಮಯವಾಗಿ ಅದು ವೀಕ್ಷಿಸಲ್ಪಡುತ್ತಿದೆ.
ಜನರು ಕ್ರಿಸ್ಮಸ್ನ ಆ ದಿನವನ್ನು ಮೋಜುಮಜಾಗಳಿಂದ ಮತ್ತು ಇನಾಮು-ಕೊಡುಗೆಗಳಿಂದ ಐಹಿಕವನ್ನಾಗಿ ಮಾಡುವುದು, ಅದನ್ನು ಒಂದು ಪೂರಾ ಧಾರ್ಮಿಕ ಹಬ್ಬವಾಗಿ ಆಚರಿಸುವವರಿಗೆ ಜುಗುಪ್ಸೆಯಾಗಿ, ದೇವದೂಷಣೆಯಾಗಿಯೂ ಕಾಣುತ್ತದೆ. “ಜಾಪಾನಿನಲ್ಲಿ ಅದರ ಮೂಲತತ್ವ ಕಡು ವ್ಯಾಪಾರ; ಕ್ರಿಸ್ತನಲ್ಲ,” ಎಂದು ಬರೆದನು ಜಾಪಾನಿನ ನಿವಾಸಿಯಾಗಿರುವ ಒಬ್ಬ ಅಮೆರಿಕನ್ ವ್ಯಕ್ತಿ. “ಪಾಶ್ಚಿಮಾತ್ಯ ದೃಷ್ಟಿಗೆ,” ಜಾಪಾನಿನ ಕ್ರಿಸ್ಮಸ್ನ ಕುರಿತು ಇನ್ನೊಬ್ಬನು ಬರೆದದ್ದು, “ಕಾಣೆಯಾಗಿರುವುದು ಟರ್ಕಿ ಕೋಳಿ [ಇದು ಜಾಪಾನಿನ ಮಾರ್ಕೆಟುಗಳಲ್ಲಿ ಸಾಮಾನ್ಯವಾಗಿ ಕಂಡುಬರುವುದಿಲ್ಲ] ಯಲ್ಲ, ಬದಲಾಗಿ ಅತ್ಯಂತ ಆವಶ್ಯಕ ಘಟಕಾಂಶವಾದ ಕ್ರಿಸ್ಮಸ್ ಆತ್ಮವೆ.”
ಕ್ರಿಸ್ಮಸ್ ಆತ್ಮವಾದರೂ ಅದೇನು? ಯಾವುದಕ್ಕಾಗಿ ಅನೇಕರು ಚರ್ಚಿಗೆ ತಮ್ಮ ಏಕ ವಾರ್ಷಿಕ ಯಾತ್ರೆ ಮಾಡುತ್ತಾರೊ ಆ ಕ್ರಿಸ್ಮಸ್ ಹಾಡುಗಳು, ಸದಾ ಹಸುರು ಪೊದೆ ಮತ್ತು ಮೇಣಬತ್ತಿಗಳುಳ್ಳ ಚರ್ಚಿನ ಒಂದು ಪರಿಸರವು ಅದೊ? ಅಥವಾ ಅನೇಕರನ್ನು ಔದಾರ್ಯಕ್ಕೆ ಪ್ರೇರೇಪಿಸುವ ಪ್ರೀತಿ, ಸದ್ಭಾವನೆ ಮತ್ತು ಇನಾಮು ಕೊಡುವಿಕೆಯೆ? ಇಲ್ಲವೆ ಸೈನಿಕರು “ಭೂಮಿಯ ಮೇಲೆ ಸಮಾಧಾನ”ದ ಕೆಲವು ದಿನಗಳನ್ನು ಆಚರಿಸುವಾಗ, ರಣರಂಗದಲ್ಲಿ ನೆಲೆಸುವ ಶಾಂತತೆಯು ಅದಾಗಿದೆಯೆ?
ಕ್ರಿಸ್ಮಸ್ ಆತ್ಮವು ಹೆಚ್ಚಾಗಿ ಗೃಹರಂಗದಲ್ಲಿ ಸಹಾ ಶಾಂತಿಯನ್ನು ತರಲು ತಪ್ಪುವುದು ಅಚ್ಚರಿಯ ಸಂಗತಿ. ಇಂಗ್ಲೆಂಡಿನಲ್ಲಿ ನಡಿಸಿದ 1987ರ ಒಂದು ಸಮೀಕ್ಷೆಗೆ ಅನುಸಾರವಾಗಿ, ಆ ವರ್ಷದ ಕ್ರಿಸ್ಮಸ್ನಲ್ಲಿ ಸುಮಾರು 70 ಪ್ರತಿಶತ ಬ್ರಿಟಿಷ್ ಮನೆಗಳಲ್ಲಿ ‘ಗೃಹ ಕಲಹ’ಗಳು ಏಳುವವು ಎಂಬದಾಗಿ ಅಂದಾಜು ಮಾಡಲಾಗಿತ್ತು. ಮುಖ್ಯ ಕಾರಣವು ಹಣಕಾಸುಗಳ ಮೇಲಣ ಜಗಳಗಳು. ಮಿತಿಮೀರಿದ ಸುರಾಪಾನ ಮತ್ತು ಕುಟುಂಬದಲ್ಲಿ ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸದಿರುವುದು ಕೂಡಾ ಜಗಳಕ್ಕೆ ನಡಿಸುತ್ತದೆ.
“ಕ್ರಿಸ್ಮಸ್ನ ನಿಜಾರ್ಥದ ಕುರಿತಾದ ಏನೊ ಒಂದು ಸಂಗತಿಯನ್ನು ನಾವು ಕಳಕೊಂಡಿಲವ್ಲೆ ಎಂದು ನನ್ನ ಯೋಚನೆ,” ಎಂದು ಬರೆದನು ಜಾಪಾನಿನಲ್ಲಿ ನೆಲೆಸಿದ್ದ ಮತ್ತು ಇತ್ತೀಚೆಗೆ ಕ್ರಿಸ್ಮಸ್ಗಾಗಿ ತನ್ನ ಸ್ವದೇಶವನ್ನು ಸಂದರ್ಶಿಸಿದ ಒಬ್ಬ ಪಾಶ್ಚಿಮಾತ್ಯನು. “ಪ್ರತಿ ಡಿಸೆಂಬರ್ 25ಕ್ಕೆ, ಪುರಾತನ ಕಾಲದ ಆ ಹಳೆ ಶೈಲಿಯ ಕ್ರಿಸ್ಮಸ್ಗೆ—ವೃಕ್ಷಗಳನ್ನು ಪೂಜಿಸುವ ಮತ್ತು ವಿಷಯಲೋಲುಪ್ತಿಗಳನ್ನು ನಡಿಸುವ ಮೂಲಕ ಮಕರ ಸಂಕ್ರಾತಿಯನ್ನು ಆಚರಿಸಿದ್ದ ವಿಧರ್ಮಿ ಸಂಸ್ಕಾರಕ್ಕೆ ಹಿಂತಿರುಗುವ ಅದೇ ಹಂಬಲಿಕೆ ನನಗಾಗುತ್ತದೆ. ನಮಗಿನ್ನೂ ಎಲ್ಲಾ ತರದ ವಿಧರ್ಮಿಗಳ ಅಲಂಕಾರಸಜ್ಜು—ಬದನಿಕೆ, ನಿತ್ಯ ಹಸುರು ಪೊದೆ, ಮುಂತಾದವುಗಳು—ಇವೆ, ಆದರೆ ಹೇಗೊ ಕ್ರಿಸ್ಮಸ್ ಕ್ರೈಸ್ತರಿಂದ ಅಪಹರಿಸಲ್ಪಟ್ಟಂದಿನಿಂದ ಮತ್ತು ಧಾರ್ಮಿಕ ಹಬ್ಬವಾಗಿ ಮಾರ್ಪಾಟ ಮಾಡಲ್ಪಟ್ಟಂದಿನಿಂದ ಎಂದೂ ಎಂದಿನಂತಿಲ್ಲ.”
ಕ್ರಿಸ್ಮಸ್ ಒಂದು ವಿಧರ್ಮಿ ಹಬ್ಬದ ರಜಾದಿನ ಎಂಬದು ನಿರ್ವಿವಾದ. ಆರಂಭದ ಕ್ರೈಸ್ತರು ಅದನ್ನು ಆಚರಿಸಲಿಲ್ಲ, “ಯಾಕಂದರೆ ಯಾರದ್ದೇ ಜನನ ದಿನವನ್ನು ಆಚರಿಸುವುದೂ ಒಂದು ವಿಧರ್ಮಿ ಪದ್ಧತಿ ಎಂದವರು ಪರಿಗಣಿಸಿದ್ದರು,” ಎಂದು ಹೇಳುತ್ತದೆ ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ. ವಿಧರ್ಮಿಗಳ ಶನೀಶ್ವರನ ಮತ್ತು ಹೊಸ ವರ್ಷದ ಹಬ್ಬಗಳು ಮೋಜುಮಜಾಗಳ ಮತ್ತು ಕೊಡುಗೆ ವಿನಿಮಯಗಳ ಮೂಲ ಉಗಮ.
ಕ್ರಿಸ್ಮಸ್ ಮೂಲತಃ ವಿಧರ್ಮಿ ಪದ್ಧತಿಯಾಗಿದ್ದಲ್ಲಿ, ನಿಜ ಕ್ರೈಸ್ತರು ಈ ಪ್ರಶ್ನೆಯನ್ನು ಕೇಳಬೇಕು, ಕ್ರಿಸ್ಮಸ್ ಕ್ರೈಸ್ತರಿಗಾಗಿಯೊ? ಕ್ರಿಸ್ತನ ಜನನ ದಿನದ ಆಚರಣೆಯ ಕುರಿತು ಬೈಬಲ್ ಏನನ್ನುತ್ತದೆಂದು ನಾವೀಗ ನೋಡೋಣ. (w91 12/15)
[ಪುಟ 4 ರಲ್ಲಿರುವ ಚೌಕ]
ಕ್ರಿಸ್ಮಸ್ ಆಚರಣೆಯ ಮೂಲ
ಸುಸ್ಪಷ್ಟ ವಿವರಣೆಗಳು ಪುರಾತನತ್ವದ ಮಸುಕಿನಲ್ಲಿ ಕಳೆದು ಹೋಗಿವೆಯಾದರೂ, ಸಾ.ಶ. 336ರೊಳಗೆ, ಕ್ರಿಸ್ಮಸ್ನ ಒಂದು ಪದ್ಧತಿಯು ರೋಮನ್ ಚರ್ಚಿನಿಂದ ಆಚರಿಸಲ್ಪಡುತ್ತಿತ್ತು. “ಕ್ರಿಸ್ಮಸ್ನ ತಾರೀಕನ್ನು ದಶಂಬರ 25ಕ್ಕೆ ಉದ್ದೇಶಪೂರ್ವಕವಾಗಿ ಇಟ್ಟದ್ದು,” ವಿವರಿಸುತ್ತದೆ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟಾನಿಕ, “ಸೂರ್ಯ ದೇವರ ಮಹಾ ಉತ್ಸವವನ್ನು ಹಿನ್ನೆಲೆಗೆ ದೂಡಲಿಕ್ಕಾಗಿಯೆ.” ರೋಮನ್ ಶನೀಶ್ವರ ಹಬ್ಬ ಮತ್ತು ಕೆಲ್ಟರ ಮತ್ತು ಜರ್ಮನರ ಮಕರ ಸಂಕ್ರಾಂತಿ ಹಬ್ಬ ಎರಡರಲ್ಲೂ ವಿಧರ್ಮಿಗಳು ವಿಷಯ ಲೋಲುಪತ್ತೆಯಲ್ಲಿ ಇಚ್ಛಾಪೂರ್ತಿ ಮಾಡುತ್ತಿದ್ದ ಸಮಯವದು. “ಚರ್ಚು ಈ ಹಬ್ಬಗಳನ್ನು ಕ್ರಿಸ್ತೀಯವನ್ನಾಗಿ ಮಾಡುವ ಸಂದರ್ಭವನ್ನು ಬಿಗಿದು ಹಿಡಿಯಿತು,” ಎನ್ನುತ್ತದೆ ದ ನ್ಯೂ ಕ್ಯಾಕ್ಸ್ಟನ್ ಎನ್ಸೈಕ್ಲೊಪೀಡಿಯ.