ಆಧುನಿಕ ಕ್ರಿಸ್ಮಸ್ ಹಬ್ಬದ ಮೂಲಗಳು
ಲೋಕವ್ಯಾಪಕವಾಗಿ ಕೋಟಿಗಟ್ಟಲೆ ಜನರಿಗೆ, ಕ್ರಿಸ್ಮಸ್ ಕಾಲವು ವರ್ಷದ ಅತ್ಯಂತ ಆನಂದಮಯ ಸಮಯವಾಗಿದೆ. ಅದು ಯಥೇಚ್ಛವಾದ ಭೋಜನಗಳು, ಬಹು ಕಾಲದ್ದೆಂದು ಗೌರವ ಪಡೆದಿರುವ ಸಂಪ್ರದಾಯಗಳು ಮತ್ತು ಕುಟುಂಬ ಒಟ್ಟುಗೂಡುವಿಕೆಯ ಸಮಯವಾಗಿದೆ. ಕ್ರಿಸ್ಮಸ್ ರಜಾದಿನವು, ಮಿತ್ರರು ಮತ್ತು ಸಂಬಂಧಿಕರು ಕಾರ್ಡ್ಗಳನ್ನು ಮತ್ತು ಕೊಡುಗೆಗಳನ್ನು ವಿನಿಮಯಮಾಡಿಕೊಳ್ಳುವುದರಲ್ಲಿ ಆನಂದಿಸುವ ಸಮಯವೂ ಆಗಿದೆ.
ಆದರೆ, ಕೇವಲ 150 ವರ್ಷಗಳ ಹಿಂದೆ, ಕ್ರಿಸ್ಮಸ್ ಬಹಳ ಭಿನ್ನವಾದೊಂದು ರಜಾದಿನವಾಗಿತ್ತು. ಕ್ರಿಸ್ಮಸ್ಗಾಗಿ ಹೋರಾಟ (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ, ಇತಿಹಾಸದ ಪ್ರೊಫೆಸರ್ ಸ್ಟೀಫನ್ ನಿಸೆನ್ಬಾಮ್ ಬರೆಯುವುದು: “ಕ್ರಿಸ್ಮಸ್ . . . ಮಿತಿಮೀರಿದ ಕುಡಿತದ ಸಮಯವಾಗಿತ್ತು. ಆ ಸಮಯದಲ್ಲಿ, ಜನರ ಸಾರ್ವಜನಿಕ ವರ್ತನೆಯನ್ನು ನಿಯಂತ್ರಿಸಿದ ನಿಯಮಗಳು, ಒಂದು ಅನಿರ್ಬಂಧಿತ ‘ಬೀದಿಕೇಳಿ,’ ಒಂದು ರೀತಿಯ ಡಿಸೆಂಬರ್ ತಿಂಗಳಿನ ಉತ್ಸವದ ಪರವಾಗಿ ಕ್ಷಣಿಕವಾಗಿ ತೊರೆದುಬಿಡಲ್ಪಡುತ್ತಿದ್ದವು.”
ಕ್ರಿಸ್ಮಸನ್ನು ಪೂಜ್ಯಭಾವನೆಯ ಭಕ್ತಿಯಿಂದ ವೀಕ್ಷಿಸುವವರಿಗೆ, ಈ ವರ್ಣನೆಯು ನೆಮ್ಮದಿಗೆಡಿಸುವಂತಹದ್ದು ಆಗಿರಬಹುದು. ದೇವರ ಪುತ್ರನ ಜನನವನ್ನು ಜ್ಞಾಪಿಸಿಕೊಳ್ಳಲು ಉದ್ದೇಶಿಸುವ ಒಂದು ರಜಾದಿನವನ್ನು ಯಾರಾದರೊಬ್ಬರು ಏಕೆ ಅಪವಿತ್ರಗೊಳಿಸುವರು? ಉತ್ತರವು ನಿಮ್ಮನ್ನು ಆಶ್ಚರ್ಯಗೊಳಿಸಬಹುದು.
ದೋಷಯುಕ್ತ ಬುನಾದಿ
ನಾಲ್ಕನೆಯ ಶತಮಾನದಲ್ಲಿನ ಅದರ ಆರಂಭದಿಂದ, ಕ್ರಿಸ್ಮಸ್ ವಾದವಿವಾದದಿಂದ ಸುತ್ತುವರಿಯಲ್ಪಟ್ಟಿದೆ. ಉದಾಹರಣೆಗೆ, ಯೇಸುವಿನ ಜನ್ಮದಿನದ ಬಗ್ಗೆ ಪ್ರಶ್ನೆಯಿತ್ತು. ಬೈಬಲು ಕ್ರಿಸ್ತನ ಜನನದ ದಿನ ಇಲ್ಲವೆ ತಿಂಗಳನ್ನು ನಿರ್ದಿಷ್ಟವಾಗಿ ತಿಳಿಸದಿರುವ ಕಾರಣ, ವಿಭಿನ್ನ ತಾರೀಖುಗಳು ಸೂಚಿಸಲ್ಪಟ್ಟಿವೆ. ಮೂರನೆಯ ಶತಮಾನದಲ್ಲಿ, ಐಗುಪ್ತದ ದೇವತಾಶಾಸ್ತ್ರಜ್ಞರ ಒಂದು ಗುಂಪು ಅದನ್ನು ಮೇ 20ರಂದು ಇರಿಸಿದಾಗ, ಇತರರು ಮಾರ್ಚ್ 28, ಎಪ್ರಿಲ್ 2, ಇಲ್ಲವೆ ಎಪ್ರಿಲ್ 19ರಂತಹ ಮುಂಚಿನ ತಾರೀಖುಗಳನ್ನು ಇಷ್ಟಪಟ್ಟರು. 18ನೆಯ ಶತಮಾನದೊಳಗಾಗಿ, ಯೇಸುವಿನ ಜನನವು ವರ್ಷದ ಪ್ರತಿಯೊಂದು ತಿಂಗಳಿನೊಂದಿಗೆ ಸಂಬಂಧಿಸಲ್ಪಟ್ಟಿತ್ತು! ಹಾಗಾದರೆ ಡಿಸೆಂಬರ್ 25ನ್ನು ಅಂತಿಮವಾಗಿ ಹೇಗೆ ಆರಿಸಿಕೊಳ್ಳಲಾಯಿತು?
ಡಿಸೆಂಬರ್ 25, ಯೇಸುವಿನ ಜನ್ಮದಿನವಾಗಿ ಕ್ಯಾತೊಲಿಕ್ ಚರ್ಚಿನಿಂದ ನಿರ್ಧರಿಸಲಾಯಿತೆಂದು ಹೆಚ್ಚಿನ ಪಂಡಿತರು ಒಪ್ಪಿಕೊಳ್ಳುತ್ತಾರೆ. ಏಕೆ? ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದೇನೆಂದರೆ, “‘ಅಜೇಯ ಸೂರ್ಯನ ಜನ್ಮದಿನವನ್ನು’ ಗುರುತಿಸುವ, ವಿಧರ್ಮಿ ರೋಮನ್ ಉತ್ಸವದೊಂದಿಗೆ ಈ ತಾರೀಖು ಏಕಕಾಲಿಕವಾಗಿರಬೇಕೆಂದು ಆದಿಕ್ರೈಸ್ತರು ಬಯಸಿದರೆಂಬುದೇ ಅತ್ಯಂತ ಸಂಭವನೀಯ ಕಾರಣವಾಗಿದೆ.” ಆದರೆ ಎರಡೂವರೆ ಶತಮಾನಗಳಿಗಿಂತಲೂ ಹೆಚ್ಚಿನ ಸಮಯದ ವರೆಗೆ, ವಿಧರ್ಮಿಗಳಿಂದ ಕ್ರೂರವಾಗಿ ಹಿಂಸಿಸಲ್ಪಟ್ಟ ಕ್ರೈಸ್ತರು ಇದ್ದಕ್ಕಿದ್ದಹಾಗೆ ತಮ್ಮ ಹಿಂಸಕರಿಗೆ ಏಕೆ ಶರಣಾಗತರಾಗುವರು?
ಭ್ರಷ್ಟತೆ ಪರಿಚಯಿಸಲ್ಪಟ್ಟದ್ದು
ಒಂದನೆಯ ಶತಮಾನದಲ್ಲಿ, ಕ್ರೈಸ್ತ ಸಭೆಯೊಳಗೆ “ದುಷ್ಟರೂ ವಂಚಕರೂ” ನುಸುಳಿ ಅನೇಕರನ್ನು ತಪ್ಪು ದಾರಿಗೆ ನಡೆಸುವರೆಂದು ಅಪೊಸ್ತಲ ಪೌಲನು ತಿಮೊಥೆಯನಿಗೆ ಎಚ್ಚರಿಕೆ ನೀಡಿದನು. (2 ತಿಮೊಥೆಯ 3:13) ಈ ಮಹಾ ಧರ್ಮಭ್ರಷ್ಟತೆಯು ಅಪೊಸ್ತಲರ ಮರಣದ ಅನಂತರ ಆರಂಭಿಸಿತು. (ಅ. ಕೃತ್ಯಗಳು 20:29, 30) ನಾಲ್ಕನೆಯ ಶತಮಾನದಲ್ಲಿ ಕಾನ್ಸ್ಟಂಟೀನ್ನ ನಾಮಮಾತ್ರದ ಮತಪರಿವರ್ತನೆಯ ಬಳಿಕ, ಆಗ ಚಾಲ್ತಿಯಲ್ಲಿದ್ದ ಕ್ರೈಸ್ತತ್ವದ ಆಚಾರಕ್ಕೆ ವಿಧರ್ಮಿಗಳು ಬಹು ಸಂಖ್ಯೆಗಳಲ್ಲಿ ಬಂದರು. ಯಾವ ಪರಿಣಾಮದೊಂದಿಗೆ? ಆದಿ ಕ್ರೈಸ್ತತ್ವ ಮತ್ತು ವಿಧರ್ಮ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ನಿಜವಾಗಿಯೂ ಶ್ರದ್ಧಾವಂತರಾಗಿದ್ದ ವಿಶ್ವಾಸಿಗಳ ಒಂದು ಚಿಕ್ಕ ಗುಂಪು, ಹೊರತೋರಿಕೆಯ ಕ್ರೈಸ್ತರ ಮಹಾ ಸಮೂಹದಲ್ಲಿ ಕಣ್ಮರೆಯಾಯಿತು.”
ಪೌಲನ ಮಾತುಗಳು ಎಷ್ಟೊಂದು ಸತ್ಯವಾಗಿ ಪರಿಣಮಿಸಿದವು! ಅದು, ಯಥಾರ್ಥವಾದ ಕ್ರೈಸ್ತತ್ವವು ವಿಧರ್ಮಿ ಭ್ರಷ್ಟತೆಯಿಂದ ನುಂಗಲ್ಪಡುತ್ತಿದೆಯೊ ಎಂಬಂತಿತ್ತು. ಮತ್ತು ಈ ಮಾಲಿನ್ಯವು ರಜಾದಿನಗಳ ಆಚರಣೆಯಲ್ಲಿರುವಷ್ಟು ಸ್ಪಷ್ಟವಾಗಿ ಬೇರೆಲ್ಲಿಯೂ ಇರಲಿಲ್ಲ.
ವಾಸ್ತವವಾಗಿ, ಕ್ರೈಸ್ತರು ಆಚರಿಸುವಂತೆ ಆಜ್ಞಾಪಿಸಲ್ಪಟ್ಟಿರುವ ಏಕೈಕ ಆಚರಣೆಯು ಕರ್ತನ ಸಂಧ್ಯಾ ಭೋಜನವಾಗಿದೆ. (1 ಕೊರಿಂಥ 11:23-26) ರೋಮನ್ ಉತ್ಸವಗಳೊಂದಿಗೆ ಸಂಬಂಧಿಸಿದ ಮೂರ್ತಿಪೂಜಕ ಆಚರಣೆಗಳ ಕಾರಣ, ಆದಿಕ್ರೈಸ್ತರು ಅವುಗಳಲ್ಲಿ ಭಾಗವಹಿಸಲಿಲ್ಲ. ಈ ಕಾರಣಕ್ಕಾಗಿಯೇ ಮೂರನೆಯ ಶತಮಾನದ ವಿಧರ್ಮಿಗಳು, ಹೀಗೆ ಹೇಳುತ್ತಾ ಕ್ರೈಸ್ತರನ್ನು ನಿಂದಿಸಿದರು: “ನೀವು ವಸ್ತುಪ್ರದರ್ಶನಗಳಿಗೆ ಭೇಟಿನೀಡುವುದಿಲ್ಲ; ನಿಮಗೆ ಸಾರ್ವಜನಿಕ ಪ್ರದರ್ಶನಗಳಲ್ಲಿ ಯಾವುದೇ ಆಸಕ್ತಿಯಿಲ್ಲ; ನೀವು ಸಾರ್ವಜನಿಕ ಔತಣಗಳನ್ನು ನಿರಾಕರಿಸುತ್ತೀರಿ, ಮತ್ತು ಪವಿತ್ರ ಸ್ಪರ್ಧೆಗಳನ್ನು ಹೇಸುತ್ತೀರಿ.” ಮತ್ತೊಂದು ಕಡೆಯಲ್ಲಿ ವಿಧರ್ಮಿಗಳು ಜಂಬಕೊಚ್ಚಿಕೊಂಡದ್ದು: “ನಾವು ದೇವರುಗಳನ್ನು ಉತ್ಸಾಹಪೂರ್ಣವಾಗಿ, ಹಬ್ಬದೂಟ, ಗೀತೆ ಹಾಗೂ ಕ್ರೀಡೆಗಳೊಂದಿಗೆ ಆರಾಧಿಸುತ್ತೇವೆ.”
ನಾಲ್ಕನೆಯ ಶತಮಾನದ ಮಧ್ಯಭಾಗದೊಳಗಾಗಿ, ವಿಧರ್ಮಿಗಳ ಗೊಣಗಾಟವು ನಿಂತುಹೋಯಿತು. ಅದು ಹೇಗೆ? ಹೆಚ್ಚೆಚ್ಚು ನಕಲಿ ಕ್ರೈಸ್ತರು ಗುಂಪಿನೊಳಗೆ ನುಸುಳಿಕೊಂಡಂತೆ, ಧರ್ಮಭ್ರಷ್ಟ ವಿಚಾರಗಳು ವೃದ್ಧಿಗೊಂಡವು. ಇದು ರೋಮನ್ ಲೋಕದೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳುವುದಕ್ಕೆ ನಡೆಸಿತು. ಇದರ ಬಗ್ಗೆ ಹೇಳಿಕೆ ನೀಡುತ್ತಾ, ನಮ್ಮ ಕ್ರೈಸ್ತತ್ವದಲ್ಲಿ ವಿಧರ್ಮೀಯತೆ (ಇಂಗ್ಲಿಷ್) ಎಂಬ ಪುಸ್ತಕವು ಹೇಳುವುದು: “ಜನರ ಪ್ರೀತಿಗೆ ಪಾತ್ರವಾಗಿದ್ದ ವಿಧರ್ಮಿ ಉತ್ಸವಗಳನ್ನು ಸಂಪ್ರದಾಯದ ಮೂಲಕ ವಶಕ್ಕೆ ತೆಗೆದುಕೊಳ್ಳುವುದು ಮತ್ತು ಅವುಗಳಿಗೆ ಒಂದು ಕ್ರೈಸ್ತೋಚಿತ ಅರ್ಥವನ್ನು ಕೊಡುವುದು ನಿಶ್ಚಿತವಾದ ಕ್ರೈಸ್ತ ಕಾರ್ಯನೀತಿಯಾಗಿತ್ತು.” ಹೌದು, ಮಹಾ ಧರ್ಮಭ್ರಷ್ಟತೆಯು ತನ್ನ ಹಾನಿಕಾರಕ ಪರಿಣಾಮಗಳನ್ನು ಅನುಭವಿಸುತ್ತಿತ್ತು. ವಿಧರ್ಮಿ ಆಚರಣೆಗಳನ್ನು ಅಂಗೀಕರಿಸಿಕೊಳ್ಳಲು ಈ ನಾಮಮಾತ್ರದ ಕ್ರೈಸ್ತರು ತೋರಿಸಿದ ಸ್ವಇಚ್ಛೆಯು, ಈಗ ಸಮುದಾಯದೊಳಗೆ ಒಂದಿಷ್ಟು ಪ್ರಮಾಣದ ಅನುಮೋದನೆಯನ್ನು ತಂದಿತು. ಸ್ವಲ್ಪ ಸಮಯದೊಳಗೆ, ವಿಧರ್ಮಿಗಳಿಗಿದ್ದಷ್ಟೆ ಸಂಖ್ಯೆಯ ವಾರ್ಷಿಕ ಉತ್ಸವಗಳು ಕ್ರೈಸ್ತರಿಗೂ ಇರುವಂತಾದವು. ಅವುಗಳಲ್ಲಿ ಕ್ರಿಸ್ಮಸ್ ಅಗ್ರಗಣ್ಯವಾಗಿತ್ತೆಂಬುದರಲ್ಲಿ ಆಶ್ಚರ್ಯವೇನೂ ಇಲ್ಲ.
ಒಂದು ಅಂತಾರಾಷ್ಟ್ರೀಯ ರಜಾದಿನ
ಕ್ರೈಸ್ತತ್ವದ ಅತ್ಯಂತ ಪ್ರಬಲವಾದ ರೂಪವು ಯೂರೋಪಿನಾದ್ಯಂತ ಹರಡಿದಂತೆ, ಹೆಚ್ಚೆಚ್ಚು ಜನರು ಕ್ರಿಸ್ಮಸನ್ನು ಆಚರಿಸಲು ತೊಡಗಿದರು. ಯೇಸುವಿನ ಜನ್ಮದಿನದ ಗೌರವಾರ್ಥವಾಗಿ ಒಂದು ಆನಂದಕರ ಉತ್ಸವವನ್ನು ಶಾಶ್ವತಪಡಿಸುವುದು ಯೋಗ್ಯವಾಗಿತ್ತೆಂಬ ದೃಷ್ಟಿಕೋನವನ್ನು ಕ್ಯಾತೊಲಿಕ್ ಚರ್ಚು ಅಂಗೀಕರಿಸಿಕೊಂಡಿತು. ಹಾಗೆಯೇ, ಸಾ.ಶ. 567ರಲ್ಲಿ, ಟೂರ್ಸ್ ಕೌನ್ಸಿಲ್ (ಸಭೆ) “ಕ್ರಿಸ್ಮಸ್ನಿಂದ ಹಿಡಿದು ಸಾಕ್ಷಾತ್ಕಾರದ ದಿನದ ವರೆಗಿನ 12 ದಿನಗಳನ್ನು ಪವಿತ್ರ ಹಾಗೂ ಉತ್ಸವದ ಕಾಲವಾಗಿ ಘೋಷಿಸಿತು.”—ಶಾಲೆ ಮತ್ತು ಮನೆಗಾಗಿ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ (ಇಂಗ್ಲಿಷ್).
ಕ್ರಿಸ್ಮಸ್, ಉತ್ತರ ಯೂರೋಪಿನ ಐಹಿಕ ಕೊಯ್ಲಿನ ಉತ್ಸವಗಳಿಂದ ಅನೇಕ ವೈಶಿಷ್ಟ್ಯಗಳನ್ನು ಬೇಗನೆ ಹೀರಿಕೊಂಡಿತು. ವಿಲಾಸಿಗಳು ಮಿತಿಮೀರಿದ ತಿನ್ನುವಿಕೆ ಹಾಗೂ ಕುಡಿಯುವಿಕೆಯಲ್ಲಿ ಪಾಲ್ಗೊಂಡಂತೆ, ಧರ್ಮಶ್ರದ್ಧೆಗಿಂತಲೂ ಉತ್ಸವದಲ್ಲಿ ಮಗ್ನರಾಗಿರುವುದು ಹೆಚ್ಚು ಸಾಮಾನ್ಯವಾದ ವಿಷಯವಾಗಿ ಉಳಿಯಿತು. ಈ ಸಡಿಲು ನಡತೆಯ ವಿರುದ್ಧ ಮಾತಾಡುವ ಬದಲಿಗೆ, ಚರ್ಚು ಅದನ್ನು ಸಮ್ಮತಿಸಿತು. (ಹೋಲಿಸಿ ರೋಮಾಪುರ 13:13; 1 ಪೇತ್ರ 4:3.) ಸಾ.ಶ. 601ರಲ್ಲಿ, ಇಂಗ್ಲೆಂಡ್ನಲ್ಲಿ ತನ್ನ ಮಿಷನೆರಿಯಾಗಿದ್ದ ಮೆಲಿಟಸ್ಗೆ Iನೆಯ ಪೋಪ್ ಗ್ರೆಗರಿ ಪತ್ರಬರೆದು, “ಇಂತಹ ವಿಧರ್ಮಿ ಉತ್ಸವಗಳನ್ನು ನಿಲ್ಲಿಸಬಾರದು, ಆದರೆ ಕೇವಲ ಅವುಗಳ ಕಾರಣವನ್ನು ವಿಧರ್ಮಿ ಪ್ರಚೋದನೆಯಿಂದ ಕ್ರೈಸ್ತ ಪ್ರಚೋದನೆಗೆ ಬದಲಾಯಿಸುತ್ತಾ, ಅವುಗಳನ್ನು ಚರ್ಚಿನ ಸಂಸ್ಕಾರಗಳಿಗೆ ಹೊಂದಿಸಿಕೊಳ್ಳಬೇಕೆಂದು” ಅವನಿಗೆ ಹೇಳಿದನು. ಹೀಗೆಂದು, ಐಗುಪ್ತದ ಸರಕಾರಕ್ಕಾಗಿ ಒಂದು ಸಮಯದಲ್ಲಿ ಪುರಾತನ ಅವಶೇಷಗಳ ತನಿಖಾ ಅಧಿಕಾರಿಯಾಗಿದ್ದ ಆರ್ಥರ್ ವೈಗಾಲ್ ವರದಿಸುತ್ತಾರೆ.
ಮಧ್ಯ ಯುಗಗಳ ಸಮಯದಲ್ಲಿ, ಸುಧಾರಣಾ ಮನಸ್ಸಿನ ವ್ಯಕ್ತಿಗಳು, ಇಂತಹ ಅತಿರೇಕಗಳ ವಿರುದ್ಧ ಮಾತಾಡುವ ಅಗತ್ಯವನ್ನು ಕಂಡುಕೊಂಡರು. “ಕ್ರಿಸ್ಮಸ್ ಉಲ್ಲಾಸಾನುಭವದ ಅಪಪ್ರಯೋಗಗಳ” ವಿರುದ್ಧ ಅವರು ಹಲವಾರು ಶಾಸನಗಳನ್ನು ಕಳುಹಿಸಿದರು. ಡಾ. ಪೆನ್ನೀ ರೆಸ್ಟಡ್ ತಮ್ಮ ಪುಸ್ತಕವಾದ ಅಮೆರಿಕದಲ್ಲಿ ಕ್ರಿಸ್ಮಸ್—ಒಂದು ಇತಿಹಾಸ (ಇಂಗ್ಲಿಷ್)ದಲ್ಲಿ ಹೇಳುವುದು: “ಅಪರಿಪೂರ್ಣ ಮಾನವಕುಲಕ್ಕೆ ಸ್ವೇಚ್ಛಾವರ್ತನೆ ಮತ್ತು ಅತಿಭೋಗದ ಒಂದು ಸಮಯದ ಅಗತ್ಯವಿತ್ತು, ಆದರೆ ಅತಿಭೋಗದ ಈ ಸಮಯವು ಕ್ರೈಸ್ತ ಮೇಲ್ವಿಚಾರಣೆಯ ಕೆಳಗೆ ನಡೆಸಲ್ಪಡಬೇಕಾಗಿತ್ತೆಂದು ಕೆಲವು ವೈದಿಕರು ಒತ್ತಿಹೇಳಿದರು.” ಈ ವಿಚಾರವು ಈಗಾಗಲೇ ಅಲ್ಲಿದ್ದ ಗಲಿಬಿಲಿಗೆ ಹೆಚ್ಚನ್ನು ಕೂಡಿಸಿತು. ಆದರೆ ಅದು ಹೆಚ್ಚು ವ್ಯತ್ಯಾಸವನ್ನು ಮಾಡಲಿಲ್ಲ ಏಕೆಂದರೆ, ಈಗಾಗಲೇ ಕ್ರಿಸ್ಮಸ್ ಹಬ್ಬದೊಂದಿಗೆ ವಿಧರ್ಮಿ ಪದ್ಧತಿಗಳು ಎಷ್ಟೊಂದು ನಿಕಟವಾಗಿ ಬೆರೆತುಕೊಂಡಿದ್ದವೆಂದರೆ, ಹೆಚ್ಚಿನ ಜನರು ಅವುಗಳನ್ನು ಬಿಟ್ಟುಕೊಡಲು ಸಿದ್ಧರಾಗಿರಲಿಲ್ಲ. ಬರಹಗಾರ ಟ್ರಿಸ್ಟ್ರಾಮ್ ಕಾಫಿನ್ ಅದನ್ನು ಈ ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ: “ಒಟ್ಟಿನಲ್ಲಿ ಜನರು, ತಾವು ಯಾವಾಗಲೂ ಮಾಡುತ್ತಿದ್ದುದ್ದನ್ನೇ ಮಾಡುತ್ತಿದ್ದರು ಮತ್ತು ನೀತಿಬೋಧಕರ ವಾದವಿವಾದಗಳಿಗೆ ಯಾವ ಗಮನವನ್ನೂ ಕೊಡುತ್ತಿರಲಿಲ್ಲ.”
ಯೂರೋಪಿನವರು ಅಮೆರಿಕದಲ್ಲಿ ನೆಲೆನಿಲ್ಲಲು ಆರಂಭಿಸಿದ ಸಮಯದೊಳಗಾಗಿ, ಕ್ರಿಸ್ಮಸ್ ಒಂದು ಸುವಿದಿತ ರಜಾದಿನವಾಗಿತ್ತು. ಆದರೂ, ಕ್ರಿಸ್ಮಸ್ ಹಬ್ಬವನ್ನು ವಸಾಹತುಗಳಲ್ಲಿ ಸ್ವೀಕರಿಸಲಾಗಲಿಲ್ಲ. ಪ್ಯೂರಿಟನ್ ಪಂಗಡದ ಸುಧಾರಕರು, ಆ ಆಚರಣೆಯನ್ನು ವಿಧರ್ಮಿ ಆಚರಣೆಯಾಗಿ ವೀಕ್ಷಿಸಿ, 1659 ಮತ್ತು 1681ರ ನಡುವೆ ಅದನ್ನು ಮ್ಯಾಸಚೂಸೆಟ್ಸ್ನಲ್ಲಿ ನಿಷೇಧಿಸಿದರು.
ನಿಷೇಧವನ್ನು ಕೊನೆಗೊಳಿಸಿದ ತರುವಾಯ, ಕ್ರಿಸ್ಮಸ್ ಆಚರಣೆಯು ವಸಾಹತುಗಳ ಆದ್ಯಂತ, ವಿಶೇಷವಾಗಿ ನ್ಯೂ ಇಂಗ್ಲೆಂಡ್ನ ದಕ್ಷಿಣ ಭಾಗದಲ್ಲಿ ಹೆಚ್ಚಾಯಿತು. ಆದರೆ ಈ ರಜಾದಿನದ ಇತಿಹಾಸದ ದೃಷ್ಟಿಯಲ್ಲಿ, ದೇವರ ಪುತ್ರನನ್ನು ಗೌರವಿಸುವುದಕ್ಕಿಂತಲೂ, ಒಂದು ಸುಸಮಯವನ್ನು ಅನುಭವಿಸುವುದರ ವಿಷಯದಲ್ಲಿ ಕೆಲವರು ಹೆಚ್ಚು ಚಿಂತಿತರಾಗಿದ್ದರೆಂಬುದು ಆಶ್ಚರ್ಯಕರವಾಗಿರುವುದಿಲ್ಲ. ವಿಶೇಷವಾಗಿ ವಿಚ್ಛಿದ್ರಕಾರಕವಾಗಿದ್ದ ಒಂದು ಕ್ರಿಸ್ಮಸ್ ಪದ್ಧತಿಯು, ಪಾನೋತ್ಸವ ನಡೆಸುವ ಪದ್ಧತಿಯಾಗಿತ್ತು. ಯುವ ಪುರುಷರ ರೌಡಿ ತಂಡಗಳು ಧನಿಕ ನೆರೆಯವರ ಮನೆಗಳೊಳಗೆ ನುಗ್ಗಿ, ಸತ್ಕರಿಸಿ ಇಲ್ಲವೆ ಕೀಟಲೆಯನ್ನು ಅನುಭವಿಸಿ ಎಂಬಂತಹ ಶೈಲಿಯಲ್ಲಿ ಉಚಿತ ಆಹಾರ ಮತ್ತು ಪಾನೀಯವನ್ನು ಹಕ್ಕೊತ್ತಾಯದಿಂದ ಕೇಳುತ್ತಿದ್ದರು. ಮನೆಯವನು ನಿರಾಕರಿಸಿದರೆ, ಅವನು ಸಾಮಾನ್ಯವಾಗಿ ನಿಂದಿಸಲ್ಪಡುತ್ತಿದ್ದನು ಮತ್ತು ಕೆಲವೊಮ್ಮೆ ಅವನ ಮನೆಯನ್ನು ನಾಶಪಡಿಸಲಾಗುತ್ತಿತ್ತು.
1820ಗಳಲ್ಲಿ ಪರಿಸ್ಥಿತಿಗಳು ಎಷ್ಟರ ಮಟ್ಟಿಗೆ ಕೆಟ್ಟವೆಂದರೆ, “ಕ್ರಿಸ್ಮಸ್ ಅವ್ಯವಸ್ಥೆಯು, ಗಂಭೀರವಾದೊಂದು ಸಾಮಾಜಿಕ ಬೆದರಿಕೆ” ಆಗಿ ಪರಿಣಮಿಸಿತೆಂದು ಪ್ರೊಫೆಸರ್ ನಿಸೆನ್ಬಾಮ್ ಹೇಳುತ್ತಾರೆ. ನ್ಯೂ ಯಾರ್ಕ್ ಮತ್ತು ಫಿಲೆಡೆಲ್ಫಿಯಗಳಂತಹ ನಗರಗಳಲ್ಲಿ, ಧನಿಕ ಜಮೀನುದಾರರು ತಮ್ಮ ಆಸ್ತಿಗಳನ್ನು ನೋಡಿಕೊಳ್ಳಲಿಕ್ಕಾಗಿ ಕಾವಲುಗಾರರನ್ನು ಬಾಡಿಗೆಗೆ ತೆಗೆದುಕೊಳ್ಳಲು ಆರಂಭಿಸಿದರು. 1827/28ರ ಕ್ರಿಸ್ಮಸ್ ಕಾಲದಲ್ಲಿ ಸಂಭವಿಸಿದ ಒಂದು ಹಿಂಸಾತ್ಮಕ ದೊಂಬಿಗೆ ಪ್ರತ್ಯುತ್ತರವಾಗಿ, ನ್ಯೂ ಯಾರ್ಕ್ ನಗರವು ತನ್ನ ಪ್ರಥಮ ವೃತ್ತಿಪರ ಪೋಲಿಸ್ ಪಡೆಯನ್ನು ಸಂಘಟಿಸಿತೆಂದೂ ಹೇಳಲಾಗಿದೆ!
ಕ್ರಿಸ್ಮಸ್ ಹಬ್ಬದ ಪುನರ್ರಚನೆ
19ನೆಯ ಶತಮಾನವು ಮಾನವಕುಲಕ್ಕೆ ಅಭೂತಪೂರ್ವ ಬದಲಾವಣೆಗಳನ್ನು ತಂದಿತು. ರಸ್ತೆಗಳ ಹಾಗೂ ರೈಲುಮಾರ್ಗಗಳ ಒಂದು ಜಾಲವು ತಲೆದೋರಿದಂತೆ, ಜನರು, ಸರಕುಗಳು, ಮತ್ತು ವಾರ್ತೆಗಳು ಹೆಚ್ಚು ವೇಗವಾಗಿ ಸಂಚರಿಸತೊಡಗಿದವು. ಔದ್ಯೋಗಿಕ ಕ್ರಾಂತಿಯು ಕೋಟಿಗಟ್ಟಲೆ ಕೆಲಸಗಳನ್ನು ಸೃಷ್ಟಿಸಿತು, ಮತ್ತು ಕಾರ್ಖಾನೆಗಳು ಸರಕುಗಳ ಸ್ಥಿರವಾದ ಸರಬರಾಯಿಯನ್ನು ರಭಸವಾಗಿ ಉತ್ಪಾದಿಸಿದವು. ಔದ್ಯೋಗೀಕರಣವು ಹೊಸ ಹಾಗೂ ಜಟಿಲವಾದ ಸಾಮಾಜಿಕ ಸಮಸ್ಯೆಗಳನ್ನೂ ಪರಿಚಯಿಸಿತು, ಇದು, ಕ್ರಿಸ್ಮಸ್ ಹಬ್ಬವು ಆಚರಿಸಲ್ಪಡುತ್ತಿದ್ದ ವಿಧವನ್ನು ಕಟ್ಟಕಡೆಗೆ ಬಾಧಿಸಿತು.
ದೀರ್ಘ ಸಮಯದಿಂದ ಜನರು ರಜಾದಿನಗಳನ್ನು, ಕುಟುಂಬ ಸಂಬಂಧಗಳನ್ನು ಬಲಪಡಿಸುವ ಒಂದು ಮಾಧ್ಯಮವಾಗಿ ಬಳಸಿದ್ದಾರೆ, ಮತ್ತು ಕ್ರಿಸ್ಮಸ್ನ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಹಳೆಯ ಕ್ರಿಸ್ಮಸ್ ಸಂಪ್ರದಾಯಗಳಲ್ಲಿ ಕೆಲವನ್ನು ನಿರ್ದಿಷ್ಟವಾಗಿ ಪರಿಷ್ಕರಿಸುವ ಮೂಲಕ, ಅದರ ಪ್ರಾಯೋಜಕರು, ಕ್ರಿಸ್ಮಸನ್ನು ಒಂದು ಕಟ್ಟುನಿಟ್ಟಿಲ್ಲದ, ಬೀದಿಕೇಳಿಯಂತಹ ಉತ್ಸವದಿಂದ ಕುಟುಂಬ ಆಧಾರಿತ ರಜಾದಿನವಾಗಿ ಪರಿಣಾಮಕಾರಿಯಾಗಿ ಪರಿವರ್ತಿಸಿದರು.
ನಿಶ್ಚಯವಾಗಿಯೂ, 19ನೆಯ ಶತಮಾನದ ಕೊನೆಯ ಭಾಗದೊಳಗಾಗಿ, ಆಧುನಿಕ ಅಮೆರಿಕನ್ ಜೀವಿತದ ಅನಿಷ್ಟಗಳಿಗೆ ಕ್ರಿಸ್ಮಸ್ ಒಂದು ಬಗೆಯ ಪರಿಹಾರವಾಗಿ ವೀಕ್ಷಿಸಲ್ಪಟ್ಟಿತು. “ಎಲ್ಲ ರಜಾದಿನಗಳಲ್ಲಿ ಕ್ರಿಸ್ಮಸ್ ರಜಾದಿನವು, ಮನೆಯೊಳಗೆ ಧರ್ಮ ಮತ್ತು ಧಾರ್ಮಿಕ ಭಾವನೆಯನ್ನು ರವಾನಿಸಲು ಮತ್ತು ಸಾರ್ವಜನಿಕ ಲೋಕದ ಅತಿರೇಕಗಳನ್ನು ಹಾಗೂ ವೈಫಲ್ಯಗಳನ್ನು ಸರಿಪಡಿಸಲು ಯೋಗ್ಯವಾದ ಸಾಧನವಾಗಿತ್ತು” ಎಂಬುದಾಗಿ ಡಾ. ರೆಸ್ಟಡ್ ಹೇಳುತ್ತಾರೆ. ಅವರು ಕೂಡಿಸುವುದು: “ಕೊಡುಗೆ ಕೊಡುವಿಕೆ, ದಾನನೀಡುವ ಕೃತ್ಯಗಳು, ಒಂದು ರಜಾದಿನದ ಅಭಿವಂದನೆಯ ಸ್ನೇಹಪರ ವಿನಿಮಯ ಮತ್ತು ಕುಳಿತುಕೊಳ್ಳುವ ಕೋಣೆಯಲ್ಲಿ ಇಡಲ್ಪಟ್ಟ ಒಂದು ನಿತ್ಯ ಹಸುರೆಲೆ ಗಿಡದ ಅಲಂಕಾರ ಹಾಗೂ ಸುಖಾನುಭವವೂ, ಇಲ್ಲವೆ, ತದನಂತರ, ಭಾನುವಾರ ಶಾಲೆಯ ಸಭಾಂಗಣವು, ಪ್ರತಿಯೊಂದು ಚಿಕ್ಕ ಕುಟುಂಬದ ಸದಸ್ಯರನ್ನು ಪರಸ್ಪರವಾಗಿ, ಚರ್ಚಿಗೆ, ಹಾಗೂ ಸಮಾಜಕ್ಕೆ ಸಂಬಂಧಿಸಿತು.”
ತದ್ರೀತಿಯಲ್ಲಿ ಇಂದು ಅನೇಕರು ಕ್ರಿಸ್ಮಸನ್ನು, ಒಬ್ಬರು ಇನ್ನೊಬ್ಬರಿಗಾಗಿರುವ ತಮ್ಮ ಪ್ರೀತಿಯನ್ನು ಸಮರ್ಥಿಸಲಿಕ್ಕಾಗಿ ಮತ್ತು ಕುಟುಂಬ ಐಕ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲಿಕ್ಕಾಗಿ ಇರುವ ಒಂದು ಮಾಧ್ಯಮವಾಗಿ ಆಚರಿಸುತ್ತಾರೆ. ಆದರೆ, ನಿಶ್ಚಯವಾಗಿಯೂ ಆತ್ಮಿಕ ವಿಷಯಗಳನ್ನು ಕಡೆಗಣಿಸಬಾರದಾಗಿದೆ. ಕೋಟಿಗಟ್ಟಲೆ ಜನರು ಕ್ರಿಸ್ಮಸನ್ನು ಯೇಸುವಿನ ಜನನದ ಗೌರವಾರ್ಥವಾಗಿ ಆಚರಿಸುತ್ತಾರೆ. ಅವರು ಚರ್ಚಿನ ವಿಶೇಷ ಮತಸಂಸ್ಕಾರಗಳಿಗೆ ಹಾಜರಾಗಬಹುದು, ಮನೆಯಲ್ಲಿ ಯೇಸುವಿನ ಜನನದ ದೃಶ್ಯಗಳನ್ನು ಪ್ರದರ್ಶಿಸಬಹುದು, ಇಲ್ಲವೆ ಸ್ವತಃ ಯೇಸುವಿಗೇ ಉಪಕಾರ ಸ್ತುತಿಗಳನ್ನು ಸಲ್ಲಿಸಬಹುದು. ಆದರೆ ದೇವರು ಈ ವಿಷಯವನ್ನು ಹೇಗೆ ವೀಕ್ಷಿಸುತ್ತಾನೆ? ಈ ಸಂಗತಿಗಳನ್ನು ಆತನು ಸಮ್ಮತಿಸುತ್ತಾನೊ? ಬೈಬಲಿಗೆ ಏನನ್ನು ಹೇಳಲಿಕ್ಕಿದೆಯೆಂಬುದನ್ನು ಪರಿಗಣಿಸಿರಿ.
“ಸತ್ಯವನ್ನು ಮತ್ತು ಶಾಂತಿಯನ್ನು ಪ್ರೀತಿಸಿರಿ”
ಯೇಸು ಭೂಮಿಯಲ್ಲಿದ್ದಾಗ ತನ್ನ ಹಿಂಬಾಲಕರಿಗೆ ಅವನು ಹೇಳಿದ್ದು: “ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು.” (ಯೋಹಾನ 4:24) ಯೇಸು ಆ ಮಾತುಗಳಿಗನುಸಾರ ಜೀವಿಸಿದನು. ಅವನು ಯಾವಾಗಲೂ ಸತ್ಯವನ್ನೇ ಆಡಿದನು. ಅವನು ಪರಿಪೂರ್ಣವಾಗಿ ತನ್ನ ತಂದೆಯನ್ನು, ‘ಸತ್ಯದ ದೇವರಾದ ಯೆಹೋವನನ್ನು’ ಅನುಕರಿಸಿದನು.—ಕೀರ್ತನೆ 31:5; ಯೋಹಾನ 14:9.
ಬೈಬಲಿನ ಪುಟಗಳ ಮುಖಾಂತರ, ತಾನು ಎಲ್ಲ ಬಗೆಯ ವಂಚನೆಯನ್ನು ದ್ವೇಷಿಸುತ್ತೇನೆಂಬುದನ್ನು ಯೆಹೋವನು ಸ್ಪಷ್ಟಪಡಿಸಿದ್ದಾನೆ. (ಕೀರ್ತನೆ 5:6) ಇದರ ನೋಟದಲ್ಲಿ, ಕ್ರಿಸ್ಮಸ್ ಹಬ್ಬದೊಂದಿಗೆ ಸಂಬಂಧಿಸಲ್ಪಟ್ಟಿರುವ ಇಷ್ಟೊಂದು ವೈಶಿಷ್ಟ್ಯಗಳಲ್ಲಿ ಅಸತ್ಯದ ಛಾಯೆಯಿರುವುದು ಹಾಸ್ಯಾಸ್ಪದ ವಿಷಯವಲ್ಲವೊ? ದೃಷ್ಟಾಂತಕ್ಕಾಗಿ, ಸ್ಯಾಂಟಾ ಕ್ಲಾಸನ ಕುರಿತಾದ ಕಟ್ಟುಕಥೆಯ ಬಗ್ಗೆ ಯೋಚಿಸಿರಿ. ಅನೇಕ ದೇಶಗಳಲ್ಲಿ ವ್ಯಾಪಕವಾಗಿ ನಂಬಲ್ಪಟ್ಟಿರುವಂತೆ, ಸ್ಯಾಂಟಾ ಬಾಗಿಲಿನ ಮುಖಾಂತರ ಪ್ರವೇಶಿಸುವ ಬದಲಿಗೆ ಒಂದು ಹೊಗೆ ಕೊಳವೆಯ ಮುಖಾಂತರ ಪ್ರವೇಶಿಸಲು ಇಷ್ಟಪಡುವುದೇಕೆಂದು ಒಂದು ಮಗುವಿಗೆ ವಿವರಿಸಲು ನೀವು ಎಂದಾದರೂ ಪ್ರಯತ್ನಿಸಿದ್ದೀರೊ? ಮತ್ತು ಸ್ಯಾಂಟಾ ಕೇವಲ ಒಂದೇ ಒಂದು ಸಂಜೆಯಲ್ಲಿ ಅನೇಕ ಕೋಟಿಗಟ್ಟಲೆ ಮನೆಗಳನ್ನು ಸಂದರ್ಶಿಸುವುದಾದರೂ ಹೇಗೆ? ಹಾರುವ ಹಿಮಸಾರಂಗದ ಕುರಿತೇನು? ಸ್ಯಾಂಟಾ ಒಬ್ಬ ನಿಜವಾದ ವ್ಯಕ್ತಿಯೆಂದು ತಾನು ನಂಬುವಂತೆ ವಂಚಿಸಲ್ಪಟ್ಟಿದ್ದೇನೆಂದು ಮಗುವಿಗೆ ಗೊತ್ತಾದಾಗ, ತನ್ನ ಹೆತ್ತವರಲ್ಲಿನ ಅವನ ಭರವಸೆಯನ್ನು ಅದು ಶಿಥಿಲಗೊಳಿಸುವುದಿಲ್ಲವೊ?
ದ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ ಸರಳವಾಗಿ ಹೇಳುವುದು: “ವಿಧರ್ಮಿ ಪದ್ಧತಿಗಳು . . . ಕ್ರಿಸ್ಮಸ್ ಹಬ್ಬದ ಕಡೆಗೆ ಆಕರ್ಷಿತವಾದವು.” ಹಾಗಾದರೆ, ಯಾವ ರಜಾದಿನದ ಪದ್ಧತಿಗಳು ಕ್ರೈಸ್ತ ಮೂಲದವುಗಳಾಗಿರುವುದಿಲ್ಲವೊ ಅಂತಹ ಒಂದು ರಜಾದಿನವನ್ನು, ಕ್ಯಾತೊಲಿಕ್ ಚರ್ಚು ಮತ್ತು ಕ್ರೈಸ್ತಪ್ರಪಂಚದ ಇತರ ಚರ್ಚುಗಳು ಚಿರಸ್ಮರಣೀಯವಾಗಿ ಮಾಡುತ್ತಾ ಮುಂದುವರಿಯುವುದೇಕೆ? ಅದು ವಿಧರ್ಮಿ ಬೋಧನೆಗಳ ಮನ್ನಿಸುವಿಕೆಯನ್ನು ಸೂಚಿಸುವುದಿಲ್ಲವೊ?
ಯೇಸು ಭೂಮಿಯಲ್ಲಿದ್ದಾಗ, ಮನುಷ್ಯರು ತನ್ನನ್ನು ಆರಾಧಿಸುವಂತೆ ಅವನು ಉತ್ತೇಜಿಸಲಿಲ್ಲ. ಸ್ವತಃ ಯೇಸುವೇ ಹೇಳಿದ್ದು: “ನಿನ್ನ ದೇವರಾಗಿರುವ ಕರ್ತ [“ಯೆಹೋವ,” NW]ನಿಗೆ ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು.” (ಮತ್ತಾಯ 4:10) ತದ್ರೀತಿಯಲ್ಲಿ, ಯೇಸುವಿನ ಸ್ವರ್ಗೀಯ ಮಹಿಮೆಗೊಳಿಸುವಿಕೆಯ ಬಳಿಕ, “ದೇವರಿಗೇ ನಮಸ್ಕಾರಮಾಡ”ಬೇಕೆಂದು ದೂತನೊಬ್ಬನು ಅಪೊಸ್ತಲ ಯೋಹಾನನಿಗೆ ಹೇಳಿದನು. ಆರಾಧನೆಯ ವಿಷಯದಲ್ಲಿ ಯಾವ ಬದಲಾವಣೆಯೂ ಆಗಿರಲಿಲ್ಲವೆಂಬುದನ್ನು ಇದು ಸೂಚಿಸಿತು. (ಪ್ರಕಟನೆ 19:10) ಇದು, ಕ್ರಿಸ್ಮಸ್ ಸಮಯದಲ್ಲಿ ತನ್ನ ತಂದೆಯ ಕಡೆಗಲ್ಲ ತನ್ನ ಕಡೆಗೇ ನಿದೇರ್ಶಿಸಲ್ಪಡುವ ಈ ಎಲ್ಲ ಪೂಜ್ಯಭಾವನೆಯ ಭಕ್ತಿಯನ್ನು ಯೇಸು ಅನುಮೋದಿಸುವನೊ? ಎಂಬ ಪ್ರಶ್ನೆಗೆ ನಡೆಸುತ್ತದೆ.
ಸ್ಪಷ್ಟವಾಗಿಯೇ, ಆಧುನಿಕ ಕ್ರಿಸ್ಮಸ್ನ ಕುರಿತಾದ ನಿಜತ್ವಗಳು ಬಹಳಷ್ಟು ಆಶಾದಾಯಕವಾಗಿರುವುದಿಲ್ಲ. ಕೆಳಮಟ್ಟದ ಗತಕಾಲಕ್ಕೆ ಸೂಚಿಸುವ ಹೆಚ್ಚಿನ ಪುರಾವೆಯೊಂದಿಗೆ, ಅದು ಬಹುಮಟ್ಟಿಗೆ ಒಂದು ಕಲ್ಪಿತ ರಜಾದಿನವಾಗಿದೆ. ಹಾಗಾದರೆ, ಒಂದು ಶುದ್ಧವಾದ ಮನಸ್ಸಾಕ್ಷಿಯ ಆಧಾರದ ಮೇಲೆ, ಲಕ್ಷಾಂತರ ಕ್ರೈಸ್ತರು ಕ್ರಿಸ್ಮಸನ್ನು ಆಚರಿಸದಿರಲು ನಿರ್ಧರಿಸಿದ್ದಾರೆ. ಉದಾಹರಣೆಗೆ, ರೈಅನ್ ಎಂಬ ಹೆಸರಿನ ಒಬ್ಬ ಯುವಕನು ಕ್ರಿಸ್ಮಸ್ ಬಗ್ಗೆ ಹೇಳುವುದು: “ಕುಟುಂಬವು ಒಟ್ಟುಗೂಡಿ, ಎಲ್ಲರೂ ಸಂತೋಷವಾಗಿರುವ ವರ್ಷದ ಕೆಲವೊಂದು ದಿನಗಳ ವಿಷಯವಾಗಿ ಜನರು ಬಹಳಷ್ಟು ಸಂಭ್ರಮಪಡುತ್ತಾರೆ. ಆದರೆ ಅದರ ಬಗ್ಗೆ ಅಷ್ಟೊಂದು ವಿಶೇಷವಾದದ್ದೇನಿದೆ? ನನ್ನ ಹೆತ್ತವರೊ ನನಗೆ ವರ್ಷವಿಡೀ ಕೊಡುಗೆಗಳನ್ನು ಕೊಡುತ್ತಾರೆ!” 12 ವರ್ಷ ಪ್ರಾಯದ ಮತ್ತೊಬ್ಬ ಯುವತಿಯು ಹೇಳುವುದು: “ವಂಚಿತಳಾದ ಅನಿಸಿಕೆ ನನಗಾಗುವುದಿಲ್ಲ. ನನಗೆ ಕೊಡುಗೆಗಳು—ಅವುಗಳನ್ನು ಖರೀದಿಸಲೇಬೇಕೆಂಬ ಹಂಗಿನ ಅನಿಸಿಕೆ ಜನರಿಗಾಗುವ ವಿಶೇಷವಾದ ಒಂದು ದಿನದಂದು ಮಾತ್ರವಲ್ಲ—ವರ್ಷದಾದ್ಯಂತ ಸಿಗುತ್ತವೆ.”
ಪ್ರವಾದಿಯಾದ ಜೆಕರ್ಯನು ಜೊತೆ ಇಸ್ರಾಯೇಲ್ಯರನ್ನು, “ಸತ್ಯವನ್ನು ಮತ್ತು ಶಾಂತಿಯನ್ನು ಪ್ರೀತಿ”ಸುವಂತೆ ಉತ್ತೇಜಿಸಿದನು. (ಜೆಕರ್ಯ 8:19, NW) ನಾವು, ಜೆಕರ್ಯನಂತೆ ಮತ್ತು ಗತಕಾಲದ ಇತರ ನಂಬಿಗಸ್ತ ಪುರುಷರಂತೆ “ಸತ್ಯವನ್ನು ಪ್ರೀತಿ”ಸುವುದಾದರೆ, “ಜೀವವುಳ್ಳ ಸತ್ಯದೇವ”ರಾದ ಯೆಹೋವನನ್ನು ಅಗೌರವಿಸುವ ಯಾವುದೇ ಸುಳ್ಳು ಧಾರ್ಮಿಕ ಆಚರಣೆಯನ್ನು ನಾವು ತ್ಯಜಿಸಬಾರದೊ?—1 ಥೆಸಲೊನೀಕ 1:9.
[ಪುಟ 7 ರಲ್ಲಿರುವ ಚಿತ್ರ]
“ವಂಚಿತಳಾದ ಅನಿಸಿಕೆ ನನಗಾಗುವುದಿಲ್ಲ. ನನಗೆ ಕೊಡುಗೆಗಳು ವರ್ಷದಾದ್ಯಂತ ಸಿಗುತ್ತವೆ”