ದೇವಪ್ರಭುತ್ವ ಪುಸ್ತಕಭಂಡಾರವನ್ನು ಸಂಘಟಿಸುವ ವಿಧ
ಶೆರೆಸಾಡೆ ಎಂಬ ಚುರುಕುಬುದ್ಧಿಯ ಚಿಕ್ಕ ಸ್ಪ್ಯಾನಿಷ್ ಹುಡುಗಿ ನಾಲ್ಕು ವಯಸ್ಸಿನವಳಾಗಿದ್ದಾಗ, ಅವಳ ಅಧ್ಯಾಪಿಕೆಯು ತರಗತಿಗೆ “ಕ್ರಿಸ್ಮಸ್ ತಾತ”ನ ಚಿತ್ರಗಳಿಗೆ ಬಣ್ಣವನ್ನು ಹಚ್ಚಲು ಹೇಳಿದಳು. ಕೂಡಲೆ, ಅದರಲ್ಲಿ ಭಾಗವಹಿಸುವುದರಿಂದ ವಿನಾಯಿತಿ ಕೊಡುವಂತೆ ಶೆರೆಸಾಡೆ ಕೇಳಿದಳು. ಅದನ್ನು ಮಾಡಲು ಅವಳ ಮನಸ್ಸಾಕ್ಷಿಯು ಅನುಮತಿಸದು ಎಂದವಳು ವಿವರಿಸಿದಳು.
ಈ ಆಕ್ಷೇಪಣೆಯಿಂದ ವಿಸ್ಮಿತಳಾಗಿ, ಅಧ್ಯಾಪಿಕೆಯು ಒಂದು ಬೊಂಬೆಗೆ ಬಣ್ಣಕೊಡುವುದಕ್ಕೆ ಅದು ಸಮಾನವಾಗಿದೆ ಮತ್ತು ಅದರಲ್ಲೇನೂ ತಪ್ಪಿಲ್ಲವೆಂದು ಅವಳಿಗೆ ಹೇಳಿದಳು. ಶೆರೆಸಾಡೆ ಉತ್ತರಿಸಿದ್ದು: “ಅದು ಕೇವಲ ಒಂದು ಬೊಂಬೆಯಾಗಿರುವುದಾದರೆ, ನೀವು ಆಕ್ಷೇಪಿಸದಿದ್ದಲ್ಲಿ ನಾನೇ ಒಂದು ಬೊಂಬೆಯನ್ನು ಬಿಡಿಸಲು ಇಚ್ಛಿಸುತ್ತೇನೆ.”
ಇನ್ನೊಂದು ಸಂದರ್ಭದಲ್ಲಿ ತರಗತಿಯಲ್ಲಿ ರಾಷ್ಟ್ರಧ್ವಜಕ್ಕೆ ಬಣ್ಣಕೊಡಲು ಹೇಳಲಾಯಿತು. ಪುನಃ ಒಮ್ಮೆ ಶೆರೆಸಾಡೆ ತಾನು ಬೇರೇನಾದರೂ ಮಾಡಬಹುದೇ ಎಂದು ವಿಚಾರಿಸಿದಳು. ವಿವರಣೆಯ ಮೂಲಕ ಅವಳು ಶದ್ರಕ್, ಮೇಶಕ್ ಅಬೇದ್ನೆಗೋರವರ ಕಥೆಯನ್ನು ಅಧ್ಯಾಪಿಕೆಗೆ ಹೇಳಿದಳು.—ದಾನಿಯೇಲ 3:1-28.
ಇದಾದ ಕೊಂಚವೇ ಸಮಯದೊಳಗೆ ಅಧ್ಯಾಪಿಕೆಯು ಶೆರೆಸಾಡೆಯ ತಾಯಿಗೆ ತನ್ನ ಆಶ್ಚರ್ಯವನ್ನು ವ್ಯಕ್ತಪಡಿಸಲು ಟೆಲಿಫೊನ್ ಮಾಡಿದಳು. “ಅನೇಕ ಸಂದರ್ಭಗಳಲ್ಲಿ ನಿಮ್ಮ ಮಗಳು ಅವಳ ಮನಸ್ಸಾಕ್ಷಿಯ ಕುರಿತು ಮಾತಾಡಿದ್ದಾಳೆ,” ಅವಳಂದಳು. “ನೀವದನ್ನು ಊಹಿಸಬಲ್ಲಿರೋ? ಅವಳ ಪ್ರಾಯದ ಹುಡುಗಿಯೊಬ್ಬಳು ಅವಳ ಮನಸ್ಸಾಕ್ಷಿಯು ಏಕೆ ಕ್ಷೋಭೆಗೊಳಗಾಗುತ್ತದೆ ಎಂದು ನನಗೆ ವಿವರಿಸುವುದು! ನೋಡಿ, ನೀವು ಅವಳಿಗೆ ಏನು ಕಲಿಸುತ್ತೀರೋ ಅದರೊಂದಿಗೆ ನಾನು ಸಹಮತಿಸುವುದಿಲ್ಲ, ಆದರೂ ನೀವು ಯಶಸ್ವಿಯಾಗುತ್ತಿದ್ದೀರಿ ಎಂದು ನಾನು ಭರವಸೆ ನೀಡುತ್ತೇನೆ. ನಾನು ನಿಮ್ಮ ಮಗಳನ್ನು ಮೆಚ್ಚುತ್ತೇನೆ ಮತ್ತು ಗೌರವಿಸುತ್ತೇನೆ.”
ನಾಲ್ಕು ವರ್ಷ ಪ್ರಾಯದ ಹುಡುಗಿಯೊಬ್ಬಳು ಬೈಬಲ್-ಶಿಕ್ಷಿತ ಮನಸ್ಸಾಕ್ಷಿಯೊಂದನ್ನು ಹೇಗೆ ಪಡೆಯಶಕ್ತಳು? ಅವಳ ತಾಯಿ, ಮಾರೀನಾಳು ವಿವರಿಸುವುದೇನಂದರೆ ಶೆರೆಸಾಡೆಗೆ ಅವಳ ಮಲಗುವ ಕೋಣೆಯಲ್ಲಿ ತನ್ನ ಸ್ವಂತ ಪುಸ್ತಕ ಭಂಡಾರವಿದೆ. ಅವಳ ಪುಸ್ತಕ ಭಂಡಾರದಲ್ಲಿ ಅವಳು ಅಡಿಗೆರೆ ಹಾಕಿದ ಕಾವಲಿನಬುರುಜು ವಿನ ಅವಳ ವೈಯಕ್ತಿಕ ಪ್ರತಿಗಳು, ಸಾರುವಿಕೆಗಾಗಿ ಅವಳ ಸಾಹಿತ್ಯ, ಮತ್ತು ಅವಳ ಜನನದ ಅನಂತರ ಬಿಡುಗಡೆಮಾಡಲ್ಪಟ್ಟ ವಾಚ್ಟವರ್ ಸೊಸೈಟಿಯ ಎಲ್ಲಾ ಪ್ರಕಾಶನಗಳು ಒಳಗೂಡಿವೆ. ಅವಳ ಪುಸ್ತಕಭಂಡಾರದಲ್ಲಿ ಅವಳ ಮೆಚ್ಚಿನ ವಸ್ತು ಮೈ ಬುಕ್ ಆಫ್ ಬೈಬಲ್ ಸ್ಟೋರೀಸ್ನ ಧ್ವನಿಮುದ್ರಿತ ಟೇಪ್, ಅವಳದನ್ನು ಅವಳ ಮುದ್ರಿಸಲ್ಪಟ್ಟ ಪುಸ್ತಕದಲ್ಲಿ ಓದುವಾಗ ಪ್ರತಿ ರಾತ್ರಿ ಅದನ್ನು ಕೇಳುತ್ತಾಳೆ. ಮೇಲೆ ತಿಳಿಸಲ್ಪಟ್ಟ ನಿರ್ಣಯಗಳನ್ನು ಮಾಡಲು ಬೈಬಲಿನ ಈ ದಾಖಲೆಗಳು ಅವಳನ್ನು ಸಮರ್ಥಳನ್ನಾಗಿ ಮಾಡಿವೆ.
ಒಂದು ಸುಸಂಘಟಿತ ದೇವಪ್ರಭುತ್ವ ಪುಸ್ತಕ ಭಂಡಾರವು ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ಸಹಾಯಿಸಬಲ್ಲದೋ? ಗೃಹ ಪುಸ್ತಕ ಭಂಡಾರವು ಯಾಕೆ ಆವಶ್ಯಕವಾಗಿದೆ?
“ಒಂದು ಪುಸ್ತಕ ಭಂಡಾರವು ಭೋಗವಸ್ತುವಲ್ಲ”
“ಒಂದು ಪುಸ್ತಕ ಭಂಡಾರವು ಭೋಗವಸ್ತುವಲ್ಲ, ಬದಲಾಗಿ ಜೀವಿತದ ಆವಶ್ಯಕತೆಗಳಲ್ಲಿ ಒಂದಾಗಿದೆ,” ಎಂದು ಘೋಷಿಸಿದ್ದಾರೆ ಹೆನ್ರಿ ವಾರ್ಡ್ ಬೀಚರ್. ತಿಳಿಯದಿರುವುದಾದರೂ, “ಜೀವಿತದ ಆವಶ್ಯಕತೆಗಳಲ್ಲಿ” ಬಹುಮಟ್ಟಿಗೆ ನಮ್ಮೆಲ್ಲರಲ್ಲಿ ಇದೊಂದು ನಿಸ್ಸಂದೇಹವಾಗಿ ಇದೆ. ಇದು ಹೇಗೆ? ನಮ್ಮ ಹತ್ತಿರ ಬೈಬಲ್ ಅಲ್ಲದೆ ಬೇರೇನೂ ಇಲ್ಲದಿದ್ದರೂ ಸಹ, ಒಂದು ವಿಧದ ಪುಸ್ತಕ ಭಂಡಾರವನ್ನು ನಾವು ಹೊಂದಿರುತ್ತೇವೆ.
ಬೈಬಲ್ ನಿಜವಾಗಿಯೂ ಒಂದು ಅತ್ಯುತ್ಕೃಷ್ಟ ದೇವಪ್ರಭುತ್ವ ಪುಸ್ತಕ ಭಂಡಾರವಾಗಿದೆ. ನಾಲ್ಕನೆಯ ಶತಮಾನದಲ್ಲಿ, ನಾವಿಂದು ಬೈಬಲ್ ಎಂದು ಕರೆಯುವ ಪ್ರೇರಿತ ಪುಸ್ತಕಗಳ ಪೂರ್ಣ ಸಂಗ್ರಹವನ್ನು ವರ್ಣಿಸಲು ಬೀಬ್ಲಿಯಾಟೇಕಾ ಡೀವೀನಾ (ದಿವ್ಯ ಪುಸ್ತಕ ಭಂಡಾರ) ಎಂಬ ಲ್ಯಾಟಿನ್ ವಾಕ್ಸರಣಿಯನ್ನು ಜೆರೋಮ್ ರಚಿಸಿದನು. ಪ್ರಾಯೋಗಿಕ ಸಹಾಯ, ಉಪದೇಶ, ಮತ್ತು ಮಾರ್ಗದರ್ಶನವನ್ನು ನಮಗೆ ಕೊಡಲು ಯೆಹೋವನು ಈ ಪವಿತ್ರ ಪುಸ್ತಕ ಭಂಡಾರವನ್ನು ನಮಗೆ ಒದಗಿಸಿದನು. ಕ್ಷುಲ್ಲಕವಾದದ್ದು ಎಂದು ಇದನ್ನು ನಾವೆಂದಿಗೂ ಎಣಿಸಕೂಡದು. ಪೂರ್ಣ ಬೈಬಲನ್ನು ಕೇವಲ ಹೊಂದಿರುವುದು ತಾನೇ, ಗತಿಸಿದ ಸಮಯಗಳಲ್ಲಿ ದೇವರ ಹೆಚ್ಚಿನ ಸೇವಕರಿಗೆ ಇಲ್ಲದಿದ್ದಂತಹ ವಿಸ್ತಾರವಾದ ಒಂದು ಪುಸ್ತಕ ಭಂಡಾರವು ನಮ್ಮ ಹತ್ತಿರ ಇದೆ ಎಂದರ್ಥ.
ಕೇವಲ ದುಬಾರಿ ಬೆಲೆಯ ಹಸ್ತಲಿಖಿತ ಪ್ರತಿಗಳು ದೊರಕುತ್ತಿದ್ದಾಗ, ಒಂದುವೇಳೆ ಕೆಲವೇ ಖಾಸಗಿ ಮನೆಗಳು ತಾವು ಒಂದು ಪೂರ್ಣ ಬೈಬಲನ್ನು ಪಡೆದಿದ್ದೇವೆಂದು ಹೆಮ್ಮೆ ಪಡಸಾಧ್ಯವಿತ್ತು. ರೋಮಿನಲ್ಲಿ ಪೌಲನು ಅವನ ಕೊನೆಯ ಸೆರೆವಾಸದಲ್ಲಿದ್ದಾಗ ಶಾಸ್ತ್ರಗ್ರಂಥಗಳನ್ನು ಅಧ್ಯಯನಿಸಲು ಅವನು ಬಯಸಿದಾಗ, ಏಷ್ಯಾ ಮೈನರಿನಿಂದ ಕೆಲವು ಸುರುಳಿಗಳನ್ನು—ಪ್ರಾಯಶಃ ಹೀಬ್ರು ಶಾಸ್ತ್ರಗ್ರಂಥದ ಭಾಗಗಳನ್ನು—ಅವನಿಗಾಗಿ ತರುವಂತೆ ತಿಮೊಥೆಯನನ್ನು ಅವನು ಕೇಳಿಕೊಳ್ಳಬೇಕಾಯಿತು. (2 ತಿಮೊಥೆಯ 4:13) ಆದರೆ, ಸಭಾಮಂದಿರಗಳಲ್ಲಿ ಸುರುಳಿಗಳ ಸಂಗ್ರಹವನ್ನು ಇಡುತ್ತಿದ್ದರು, ಮತ್ತು ಯೇಸು ಕ್ರಿಸ್ತನೂ, ಅಪೊಸ್ತಲ ಪೌಲನೂ ಅವರ ಸಾರುವಿಕೆಯ ಕಾರ್ಯದಲ್ಲಿ ಈ ಪುಸ್ತಕ ಭಂಡಾರಗಳ ಸದುಪಯೋಗವನ್ನು ಮಾಡಿದರು. (ಲೂಕ 4:15-17; ಅ. ಕೃತ್ಯಗಳು 17:1-3) ಸಂತಸಕರವಾಗಿ, ಮೊದಲನೆಯ ಶತಕಕ್ಕಿಂತಲೂ ಈಗ ಶಾಸ್ತ್ರಗ್ರಂಥಗಳು ಹೆಚ್ಚು ಸುಲಭವಾಗಿ ದೊರೆಯಬಲ್ಲವು.
ಮುದ್ರಣ ಯಂತ್ರದ ಕಂಡುಹಿಡಿತದ ಪರಿಣಾಮವಾಗಿ ದೇವರ ಸೇವಕರಲ್ಲಿ ಬಹುತೇಕ ಹೆಚ್ಚಿನವರು ಇಂದು—ಅವರ ಭಾಷೆಯು ಯಾವುದೇ ಆಗಿರಲಿ—ನ್ಯಾಯವಾದ ಬೆಲೆಯಲ್ಲಿ ಪೂರ್ಣ ಬೈಬಲನ್ನು ಪಡೆಯಬಲ್ಲರು. ಈ ಪವಿತ್ರ “ಪುಸ್ತಕ ಭಂಡಾರ”ಕ್ಕೆ ಪೂರಕವಾಗುವ ಅಸದೃಶ ಅವಕಾಶವೊಂದು ನಮಗಿದೆ. ಒಂದು ಶತಕಕ್ಕಿಂತಲೂ ಹೆಚ್ಚು ಸಮಯದಿಂದ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಉಚಿತ ಸಮಯದಲ್ಲಿ ಆತ್ಮಿಕ ಆಹಾರವನ್ನು ಒದಗಿಸುವುದರಲ್ಲಿ ಕಾರ್ಯಮಗ್ನನಾಗಿದ್ದಾನೆ.—ಮತ್ತಾಯ 24:45-47.
ಆದರೆ ನಮ್ಮ ವೈಯಕ್ತಿಕ ದೇವಪ್ರಭುತ್ವ ಪುಸ್ತಕ ಭಂಡಾರವನ್ನು ನಾವು ಸಂಘಟಿಸದಿದ್ದರೆ, ಈ ಅಮೂಲ್ಯ ವಿಷಯದ ಪೂರ್ಣ ಪ್ರಯೋಜನ ಪಡೆಯುವುದು ಅಸಂಭವನೀಯವಾಗಿದೆ. ಇದನ್ನು ಹೇಗೆ ಮಾಡಬಹುದು? ನಿಶ್ಚಯವಾಗಿ, ಅಂತಹ ಪುಸ್ತಕ ಭಂಡಾರಕ್ಕೆ ಬೇಕಾದ ಪುಸ್ತಕಗಳನ್ನು ಸಂಪಾದಿಸುವುದು ಮೊದಲ ಹೆಜ್ಜೆಯಾಗಿದೆ. ಇದು ಸಾರ್ಥಕವಾದ ಪ್ರಯತ್ನ, ಯಾಕಂದರೆ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ಬೈಬಲ್ ಪ್ರಶ್ನೆಗಳನ್ನು ಉತ್ತರಿಸಲು ನಮಗೆ ಬೇಕಾದ ನಿಷ್ಕೃಷ್ಟವಾದ ಸಮಾಚಾರವು ಬಲುಬೇಗನೆ ದೊರಕುವಂತೆ ಇದು ನಮಗೆ ಸಾಧ್ಯಮಾಡುವುದು.
ನನಗೆ ಯಾವ ಪುಸ್ತಕಗಳು ಬೇಕಾಗಿವೆ?
ನಿಮ್ಮ ವಿವಾಹದಲ್ಲಿ ಸಂಸರ್ಗದ ಸಮಸ್ಯೆಯನ್ನು ನೀವು ಹೇಗೆ ಪರಿಹರಿಸಬಹುದು ಯಾ ಮಾದಕೌಷಧಗಳಿಗೆ ನಿಮ್ಮ ಮಕ್ಕಳು ಬೇಡ ಎಂದು ಹೇಳಲು ನೀವು ಹೇಗೆ ಸಹಾಯಮಾಡಬಲ್ಲಿರಿ ಎಂಬ ವಿಷಯದಲ್ಲಿ ನೀವೆಂದಾದರೂ ಕುತೂಹಲಿಗಳಾದದ್ದುಂಟೊ? ಖಿನ್ನತೆಯಿಂದ ಬಳಲುತ್ತಿರುವ ನಿಮ್ಮ ಮಿತ್ರನಿಗೆ ನೀವು ಹೇಗೆ ಸಹಾಯ ಮಾಡಬಲ್ಲಿರಿ? ದೇವರು ಅಸ್ತಿತ್ವದಲ್ಲಿದ್ದಾನೆ ಮತ್ತು ಅವನು ದುಷ್ಟತ್ವವನ್ನು ಯಾಕೆ ಅನುಮತಿಸುತ್ತಾನೆ ಎಂಬುದರ ಸಾಕ್ಷ್ಯವನ್ನು ನೀವು ಸ್ಪಷ್ಟವಾಗಿಗಿ ವಿವರಿಸಬಲ್ಲಿರೋ? ಪ್ರಕಟನೆ 17 ನೆಯ ಅಧ್ಯಾಯದ ಕಡುಗೆಂಪು ಬಣ್ಣದ ಮೃಗವು ಏನನ್ನು ಪ್ರತಿನಿಧಿಸುತ್ತದೆ?
ನಿಮ್ಮಲ್ಲಿ ಒಂದು ಸಮರ್ಪಕವಾದ ದೇವಪ್ರಭುತ್ವ ಪುಸ್ತಕ ಭಂಡಾರವಿರುವಲ್ಲಿ, ಇಂತಹ ಮತ್ತು ಇತರ ಅಗಣಿತ ಪ್ರಶ್ನೆಗಳನ್ನು ಉತ್ತರಿಸಬಲ್ಲಿರಿ. ವಾಚ್ಟವರ್ ಸೊಸೈಟಿಯು ಶಾಸ್ತ್ರೀಯ ವಿಷಯಗಳ ಒಂದು ಸಮಗ್ರ ಶ್ರೇಣಿಯನ್ನು ಆವರಿಸುವ ಪುಸ್ತಕಗಳನ್ನು, ಬ್ರೋಷರ್ಗಳನ್ನು, ಮತ್ತು ಪತ್ರಿಕಾ ಲೇಖನಗಳನ್ನು ಪ್ರಕಾಶಿಸಿದೆ. ಇನ್ನೂ ಹೆಚ್ಚಾಗಿ, ಈ ಸಾಹಿತ್ಯವು ಕೌಟುಂಬಿಕ ವಿಷಯಗಳ ಕುರಿತು ಚರ್ಚಿಸುತ್ತದೆ, ದೇವರಲ್ಲಿ ಮತ್ತು ಬೈಬಲಿನಲ್ಲಿ ನಮ್ಮ ವಿಶ್ವಾಸವನ್ನು ಕಟ್ಟುತ್ತದೆ, ನಮ್ಮ ಸಾರುವಿಕೆಯ ಕೌಶಲವನ್ನು ಪ್ರಗತಿಮಾಡುತ್ತದೆ, ಮತ್ತು ಬೈಬಲ್ ಪ್ರವಾದನೆಗಳನ್ನು ತಿಳಿದುಕೊಳ್ಳಲು ನಮಗೆ ಸಹಾಯ ಮಾಡುತ್ತದೆ.
ಕಳೆದ 20 ವರ್ಷಗಳಿಂದ ಸೊಸೈಟಿಯು ಮುದ್ರಿಸಿದ ಪ್ರಕಾಶನಗಳಲ್ಲಿ ಹೆಚ್ಚಿನವುಗಳು ಇನ್ನೂ ದೊರಕುತ್ತವೆ. ನೀವು ಇತ್ತೀಚೆಗೆ ಸತ್ಯದಲ್ಲಿ ಬಂದಿರುವುದಾದರೆ ದೊರೆಯುವ ಅಂತಹ ಎಲ್ಲಾ ಕೃತಿಗಳನ್ನು ಪಡೆಯುವುದು ನಿಮಗೆ ಉಪಯುಕ್ತವಾಗಿದೆ. ನಿಮ್ಮ ಭಾಷೆಯಲ್ಲಿನ ಗತ ವರ್ಷಗಳ ಬೈಂಡು ಮಾಡಿದ ಕಾವಲಿನಬುರುಜು ದೊರಕಬಹುದು. ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್ ಮತ್ತು ಕಾಂಪ್ರಿಹೆನ್ಸಿವ್ ಕನ್ಕಾರ್ಡನ್ಸ್ ನಂತಹ ಪ್ರಮುಖ ಪರಾಮರ್ಶೆಯ ಕೃತಿಗಳು ಸಹ ವಿವಿಧ ಭಾಷೆಗಳಲ್ಲಿ ಪ್ರಕಾಶಿಸಲ್ಪಟ್ಟಿವೆ. ಆದಾಗ್ಯೂ, ಈ ಪುಸ್ತಕಗಳನ್ನು ಸಂಪಾದಿಸುವುದು ಕೇವಲ ಮೊದಲ ಹೆಜ್ಜೆಯಾಗಿದೆ.
ನಿಮ್ಮ ಪುಸ್ತಕ ಭಂಡಾರವನ್ನು ಸಂಘಟಿಸಿರಿ!
ನಿಮ್ಮ ಹತ್ತಿರ ಎಲ್ಲಿಯೋ ಒಂದು ಪುಸ್ತಕ ಇದೆ ಎಂದು ತಿಳಿಯುವುದು ಒಂದು ಸಂಗತಿ, ಆದರೆ ನಿಮಗೆ ಬೇಕಾದದ್ದನ್ನು ಕಂಡುಕೊಳ್ಳುವುದು ಇನ್ನೊಂದು ಸಂಗತಿಯಾಗಿದೆ. ನಮಗೆ ಆವಶ್ಯಕವಾದ ಒಂದು ಪರಾಮರ್ಶೆಯ ಕೃತಿಯನ್ನು ಹುಡುಕುವುದರಲ್ಲಿ ತುಂಬಾ ಸಮಯವನ್ನು ವ್ಯರ್ಥವಾಗಿ ವ್ಯಯಿಸುವುದಾದರೆ, ವಿಷಯದ ಮೇಲೆ ನಮ್ಮ ಆಸಕ್ತಿಯನ್ನು ಕಳೆದುಕೊಳ್ಳುವ ಸಂಭವಗಳಿವೆ. ಇನ್ನೊಂದು ಪಕ್ಕದಲ್ಲಿ, ಒಂದು ಅನುಕೂಲಕರ ಸ್ಥಳದಲ್ಲಿ ನಮ್ಮ ಪುಸ್ತಕಗಳು ಸುವ್ಯವಸ್ಥಿತವಾಗಿ ಇರುವಲ್ಲಿ, ನಾವು ವೈಯಕ್ತಿಕ ಸಂಶೋಧನೆಯನ್ನು ಮಾಡುವ ಹೆಚ್ಚಿನ ಒಲವುಳ್ಳವರಾಗಿರುವೆವು.
ಸಾಧ್ಯವಿದ್ದಲ್ಲಿ, ದೇವಪ್ರಭುತ್ವ ಪುಸ್ತಕಗಳ ಹೆಚ್ಚಿನ ಭಾಗವು ಒಂದೇ ಸ್ಥಳದಲ್ಲಿ ಇರುವುದು ಸಹಾಯಕಾರಿಯಾಗಿದೆ. ಸಿದ್ಧವಾಗಿರುವವುಗಳನ್ನು ಖರೀದಿಸಲು ನಾವು ಸಮರ್ಥರಲ್ಲದಿದ್ದರೆ, ಪುಸ್ತಕಗಳ ಅಂತಸ್ತುಹಲಗೆಗಳನ್ನು ಅನೇಕ ವೇಳೆ ಅತಿ ಕಡಿಮೆ ಬೆಲೆಯಲ್ಲಿ ಮಾಡಸಾಧ್ಯವಿದೆ, ಮತ್ತು ಅವು ತುಂಬಾ ಸ್ಥಳವನ್ನು ತೆಗೆದುಕೊಳ್ಳಬೇಕಾಗಿಲ್ಲ. ಪುಸ್ತಕ ಭಂಡಾರಕ್ಕೆ ಸುಲಭ ಪ್ರವೇಶವು ಸಹ ಪ್ರಾಮುಖ್ಯವಾಗಿದೆ. ಮೇಲಟ್ಟದಲ್ಲಿ ದಾಸ್ತಾನಿಟ್ಟಿರುವ ಪುಸ್ತಕಗಳು ಸಾಮಾನ್ಯವಾಗಿ ಹೆಚ್ಚು ಪ್ರಯೋಜನಕಾರಿಯಾಗಿರದೆ, ಧೂಳು ಹಿಡಿಯುತ್ತವೆ.
ಮುಂದಿನ ಹೆಜ್ಜೆಯು ಪುಸ್ತಕಗಳನ್ನು ವ್ಯವಸ್ಥಿತವಾಗಿಡುವುದಾಗಿದೆ. ಒಂದು ಕ್ರಮಬದ್ಧ ರೀತಿಯಲ್ಲಿ ಪುಸ್ತಕಗಳನ್ನು ಓರಣವಾಗಿ ಇಡುವುದರಲ್ಲಿ ವ್ಯಯಿಸಿದ ಸಮಯವು ಪ್ರತಿಫಲಗಳನ್ನು ತರುತ್ತದೆ.
ನಿಮ್ಮ ಕುಟುಂಬದ ಹೆಚ್ಚಿನವರು ಯೆಹೋವನ ಸಾಕ್ಷಿಗಳಾಗಿಲ್ಲದೆ ಇರುವುದಾದರೆ ಏನು? ನೀವು ಬಯಸುವಂತಹ ರೀತಿಯಲ್ಲಿ ಪುಸ್ತಕ ಭಂಡಾರವನ್ನು ನೀವು ವ್ಯವಸ್ಥಿತವಾಗಿಡಲು ನಿಮಗೆ ಸಾಧ್ಯವಾಗದೆ ಇರಬಹುದಾದರೂ, ಕಡಿಮೆಪಕ್ಷ ಕೆಲವು ಶಾಸ್ತ್ರೀಯ ಪ್ರಕಾಶನಗಳು ಇರುವ ಒಂದು ಪುಸ್ತಕದ ಬೀರು ನಿಮ್ಮ ಸ್ವಂತ ಕೋಣೆಯಲ್ಲಿ ಇರಸಾಧ್ಯವಿದೆ.
ದೇವಪ್ರಭುತ್ವ ಪುಸ್ತಕ ಭಂಡಾರವು ಆತ್ಮಿಕತೆಯನ್ನು ಕಟ್ಟಲು ಸಹಾಯಮಾಡಬಲ್ಲದು
ಒಮ್ಮೆ ನಮ್ಮ ಪುಸ್ತಕಗಳನ್ನು ವ್ಯವಸ್ಥಿತವಾಗಿಟ್ಟನಂತರ, ಸಮಾಚಾರವನ್ನು ಸ್ಥಾನನಿರ್ದೇಶ ಮಾಡಲು ನಮಗೆ ಸಹಾಯವಾಗುವಂತೆ ಒಂದು ಏರ್ಪಾಡಿನ ಜರೂರಿಯಿದೆ. ನಮ್ಮ ನೆನಪುಗಳು ತಪ್ಪಾಗಿರಬಲ್ಲವು, ಮತ್ತು ನಮ್ಮ ದೇವಪ್ರಭುತ್ವ ಪುಸ್ತಕ ಭಂಡಾರದಲ್ಲಿರುವ ಪ್ರತಿಯೊಂದು ಪುಸ್ತಕದ ವಿಷಯಾನುಕ್ರಮಣಿಕೆಗಳೊಂದಿಗೆ ನಾವು ವೈಯಕ್ತಿಕವಾಗಿ ಪರಿಚಯವುಳ್ಳವರಾಗಿರಲಿಕ್ಕಿಲ್ಲ. ಆದಾಗ್ಯೂ, ನಮ್ಮ ಭಾಷೆಯಲ್ಲಿ ದೊರಕುವಲ್ಲಿ, ವಾಚ್ಟವರ್ ಪಬ್ಲಿಕೇಶನ್ಸ್ ಇಂಡೆಕ್ಸ್ ಸ್ವಲ್ಪ ಸಮಯದಲ್ಲಿ ಬಹುತೇಕ ಯಾವುದೇ ವಿಷಯದ ಮೇಲೆ ನಿರ್ದಿಷ್ಟ ಸಮಾಚಾರವನ್ನು ಕಂಡುಹಿಡಿಯಲು ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ.
ಅನೇಕ ವರ್ಷಗಳ ತನಕ ವಿಶೇಷ ಪಯನೀಯರನೂ, ಹಿರಿಯನೂ ಆಗಿ ಸೇವೆ ಸಲ್ಲಿಸಿದ ಕೂಲ್ಯಾನ್, ವೈಯಕ್ತಿಕ ಅಧ್ಯಯನ ಮಾಡಲು ತನ್ನ ಕಿರಿಯ ಮಗನಿಗೆ ಕಲಿಸುವುದರಲ್ಲಿ ಇಂಡೆಕ್ಸ್ ಅಮೂಲ್ಯವಾಗಿದೆ ಎಂದು ವಿವರಿಸುತ್ತಾನೆ. “ಏಳು ವರ್ಷ ಪ್ರಾಯದ ಕೈರೊ ಅದೊಂದು ದಿನ ಶಾಲೆಯಿಂದ ಮನೆಗೆ ಬಂದು ನನಗೆ ಕೇಳಿದ್ದು, ‘ಡ್ಯಾಡಿ, ದೈತ್ಯ ಸರೀಸೃಪ (ಡೈನಸಾರ್) ಗಳ ಕುರಿತು ಸೊಸೈಟಿ ಏನಂದಿದೆ?’ ನಾವು ನೇರವಾಗಿ ಇಂಡೆಕ್ಸ್ ಬಳಿ ಹೋದೆವು ಮತ್ತು ‘ಡೈನಸಾರ್ಸ್’ ಶಬ್ದವನ್ನು ನೋಡಿದೆವು. ಬಹುತೇಕ ಅದೇ ಕ್ಷಣದಲ್ಲಿ ಈ ವಿಷಯದ ಮೇಲೆ ಒಂದು ಅವೇಕ್! ಆವರಣ ಸರಣಿಯನ್ನು ನಾವು ಕಂಡುಕೊಂಡೆವು. [ಫೆಬ್ರವರಿ 8, 1990] ಅದೇ ದಿನ ಕೈರೊ ಅದನ್ನು ಓದಲಾರಂಭಿಸಿದನು. ಕಾರ್ಯತಃ ಪ್ರತಿಯೊಂದು ವಿಷಯದ ಮೇಲೆ ಉಪಯುಕಕ್ತರ ಸಮಾಚಾರವು ನಮ್ಮ ದೇವಪ್ರಭುತ್ವ ಪುಸ್ತಕ ಭಂಡಾರದಲ್ಲಿದೆ ಎಂದು ಅವನು ಆಗಲೇ ತಿಳಿದಿದ್ದಾನೆ. ದೇವಪ್ರಭುತ್ವ ಪುಸ್ತಕ ಭಂಡಾರದ ಒಳ್ಳೆಯ ಉಪಯೋಗವನ್ನು ನಮ್ಮ ಮಕ್ಕಳು ಮಾಡಲು ಕಲಿತಾಗ, ಆತ್ಮಿಕವಾಗಿ ಬೆಳೆಯಲು ಅದು ಅವರಿಗೆ ಸಹಾಯ ಮಾಡುತ್ತದೆ ಎಂದು ನಾನು ವೈಯಕ್ತಿಕವಾಗಿ ನಿಶ್ಚಯವುಳ್ಳವನಾಗಿದ್ದೇನೆ. ಅವರು ವಿವೇಚಿಸಲು ಕಲಿಯುತ್ತಾರೆ, ಮತ್ತು ಇನ್ನು ಹೆಚ್ಚೇನಂದರೆ, ಅವರು ವೈಯಕ್ತಿಕ ಅಧ್ಯಯನವು ಉಲ್ಲಾಸಕರವಾಗಿರುವುದನ್ನು ಕಂಡುಕೊಳ್ಳುತ್ತಾರೆ.”
ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ನೀವು ದೇವಪ್ರಭುತ್ವ ಪುಸ್ತಕ ಭಂಡಾರವನ್ನು ಉಪಯೋಗಿಸುವಂತೆ ಮಕ್ಕಳನ್ನು ತರಬೇತಿಸಲು ಆರಂಭಿಸತಕ್ಕದ್ದು ಎಂದು ಆರಂಭದಲ್ಲಿ ತಿಳಿಸಲ್ಪಟ್ಟ ಶೆರೆಸಾಡೆಯ ತಂದೆ, ಫಾವುಸ್ಟೊ ನಂಬುತ್ತಾನೆ. “ಈಗ ಆರು ವರ್ಷ ಪ್ರಾಯದ ಶೆರೆಸಾಡೆಗೆ ನಾವು ಇಂಡೆಕ್ಸ್ನ್ನು ಬಳಸುವುದು ಹೇಗೆ ಎಂದು ಆಗಲೇ ತೋರಿಸಿದ್ದೇವೆ,” ಎಂದವನು ವಿವರಿಸುತ್ತಾನೆ. “ಐಹಿಕ ಪ್ರಮೋದವನದ ಪ್ರತೀಕ್ಷೆಯ ಕುರಿತು ಅವಳು ಆಕರ್ಷಿಸಲ್ಪಟ್ಟಿರುವುದರಿಂದ, ಇಂಡೆಕ್ಸ್ ನಲ್ಲಿ ‘ಪ್ಯಾರಡೈಸ್’ ಶಬ್ದವನ್ನು ಅವಳಿಗೆ ತೋರಿಸುತ್ತಾ, ಅನಂತರ ಅಲ್ಲಿ ತಿಳಿಸಲ್ಪಟ್ಟ ವಾಚ್ಟವರ್ ಲೇಖನಗಳನ್ನು ನೋಡುವುದರಿಂದ ಆರಂಭಿಸಿದೆವು. ಸಾಮಾನ್ಯವಾಗಿ ನಾವು ಅವಳಿಗೆ ಚಿತ್ರಗಳನ್ನು ತೋರಿಸಿದೆವು. ಅದರೂ, ಈ ವಿಧಾನದಿಂದ ನಮ್ಮ ಗೃಹ ಪುಸ್ತಕ ಭಂಡಾರದಲ್ಲಿ ಸಮಾಚಾರವನ್ನು ಕಂಡುಕೊಳ್ಳುವ ಕೀಲಿ ಕೈಯು ಇಂಡೆಕ್ಸ್ ಎಂದು ಅವಳು ಕಲಿತಳು. ಈಸ್ಟರ್ ಆಚರಣೆಗಳ ಕುರಿತಾದ ಪ್ರಶ್ನೆಯೊಂದಿಗೆ ಒಂದು ದಿನ ಅವಳು ಶಾಲೆಯಿಂದ ಹಿಂದೆರಳಿದಾಗ, ಅವಳು ವಿಷಯವನ್ನು ತಿಳಿದುಕೊಂಡಿದ್ದಾಳೆ ಎಂದು ನಮಗೆ ತಿಳಿದುಬಂತು. ‘ಇಂಡೆಕ್ಸ್ ನಲ್ಲಿ ನಾವು ಯಾಕೆ ವಿಷಯವನ್ನು ನೋಡಬಾರದು?’ ಎಂದವಳು ತಾಯಿಗೆ ಕೇಳಿದಳು.”
ನಮ್ಮ ವಯಸ್ಸು ಎಷ್ಟೇ ಆಗಿರಲಿ, ಬೈಬಲ್ “ಎಲ್ಲವನ್ನೂ ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದು” ಕೊಳ್ಳಲು ನಮ್ಮನ್ನು ಪ್ರೋತ್ಸಾಹಿಸುತ್ತದೆ. (1 ಥೆಸಲೊನೀಕ 5:21) ಶಾಸ್ತ್ರವಚನಗಳು ಏನು ಹೇಳುತ್ತವೆ ಎಂದು ನಾವು ಪರೀಕ್ಷಿಸುವುದನ್ನು ಇದು ಕೇಳಿಕೊಳ್ಳುತ್ತದೆ. (ಅ. ಕೃತ್ಯಗಳು 17:11) ನಮ್ಮಲ್ಲಿ ಒಂದು ಸುವ್ಯವಸ್ಥಿತ ಪುಸ್ತಕ ಭಂಡಾರವಿರುವುದಾದರೆ, ಅಂತಹ ಸಂಶೋಧನೆಯು ಆಹ್ಲಾದಕರವಾಗಿರಬಲ್ಲದು. ಭಾಷಣವೊಂದನ್ನು ತಯಾರಿಸಲು, ಸಮಸ್ಯೆಯೊಂದನ್ನು ನಿರ್ವಹಿಸಲು ಬೇಕಾಗುವ ಪ್ರಾಯೋಗಿಕ ಬುದ್ಧಿವಾದವನ್ನು ಕಂಡುಕೊಳ್ಳಲು, ಯಾ ಆಸಕ್ತಿಕರ ಸಮಾಚಾರವನ್ನು ಕಂಡುಹಿಡಿಯಲು ನಮ್ಮ ಪುಸ್ತಕ ಭಂಡಾರವನ್ನು ನಾವು ಫಲಪ್ರದವಾಗಿ ಪ್ರತಿ ಸಲ ಉಪಯೋಗಿಸಿದಾಗ, ನಮ್ಮ ಪುಸ್ತಕ ಭಂಡಾರದ ಪ್ರಾಯೋಗಿಕ ಮೌಲ್ಯವು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತುತ್ತದೆ.
ಶೆರೆಸಾಡೆಯ ಹೆತ್ತವರು ಸ್ಪಷ್ಟವಾಗಿಗಿ ಹೇಳುವುದು: “ಕ್ರೈಸ್ತ ಮನೆವಾರ್ತೆಯಲ್ಲಿ ಒಂದು ದೇವಪ್ರಭುತ್ವ ಪುಸ್ತಕ ಭಂಡಾರವು ಖಂಡಿತವಾಗಿಯೂ ಭೋಗವಸ್ತುದ್ದಲ್ಲ!”
[ಪುಟ 30 ರಲ್ಲಿರುವ ಚೌಕ]
ನಿಮ್ಮ ಪುಸ್ತಕಗಳನ್ನು ನೀವು ಹೇಗೆ ಓರಣವಾಗಿರಿಸಸಾಧ್ಯವಿದೆ?
ನಿಮ್ಮ ಪುಸ್ತಕಗಳನ್ನು ಹೇಗೆ ವ್ಯವಸ್ಥಿತವಾಗಿಡಬೇಕು ಎಂಬುದರ ಮೇಲೆ ಕಟ್ಟುನಿಟ್ಟಾದ ನಿಯಮಗಳೇನೂ ಇಲ್ಲ. ಆದರೂ, ನಿಮ್ಮ ಪುಸ್ತಕಗಳನ್ನು ಅವುಗಳ ವಿಷಯಾನುಕ್ರಮಣಿಕೆಗನುಸಾರ ನೀವು ಓರಣವಾಗಿರಿಸುವ ಒಂದು ವಿಧವನ್ನು ಈ ಕೆಳಗಿನ ಕ್ರಮಬದ್ಧವಾದ ವಿಭಾಗಗಳು ಉದಾಹರಿಸುತ್ತವೆ.
1. ಬೈಬಲಿನ ನಿರ್ದಿಷ್ಟ ಭಾಗಗಳ ವಚನವಚನದ ವಿಶೇಷ್ಲಣವಿರುವ ಪುಸ್ತಕಗಳು
(ಉದಾಹರಣೆಗಳು: ಜೀವಿಸುವವರಲ್ಲಿ ಅತ್ಯಂತ ಮಹಾನ್ ಪುರುಷ, ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ!, “ದ ನೇಷನ್ಸ್ ಷಲ್ ನೋ ದಟ್ ಐ ಆ್ಯಮ್ ಜೆಹೋವ”—ಹೌ?, “ಯುವರ್ ವಿಲ್ ಬಿ ಡನ್ ಆನ್ ಅರ್ತ್”)
2. ಕುಟುಂಬ ಜೀವನಕ್ಕೆ ಸಂಬಂಧಿಸಿದ ಪುಸ್ತಕಗಳು
(ಉದಾಹರಣೆಗಳು: ನಿಮ್ಮ ಕುಟುಂಬ ಜೀವನವನ್ನು ಸಂತೋಷಗೊಳಿಸುವುದು, ಕ್ವೆಸ್ಟ್ಯನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದಟ್ ವರ್ಕ್, ಮೈ ಬುಕ್ ಆಫ್ ಬೈಬಲ್ ಸ್ಟೋರೀಸ್)
3. ಬೈಬಲುಗಳು ಮತ್ತು ಪರಾಮರ್ಶೆ ಕೃತಿಗಳು
(ಉದಾಹರಣೆಗಳು: ನ್ಯೂ ವರ್ಲ್ಡ್ ಟ್ರಾನ್ಸ್ಲೇಷನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್—ವಿದ್ ರೆಫರೆನ್ಸಸ್, ಇತರ ಬೈಬಲುಗಳು, ವಾಚ್ ಟವರ್ ಪಬ್ಲಿಕೇಷನ್ಸ್ ಇಂಡೆಕ್ಸೆಸ್, ಕಾಂಪ್ರಿಹೆನ್ಸಿವ್ ಕನ್ಕಾರ್ಡನ್ಸ್, ಇನ್ಸೈಟ್ ಆನ್ ದ ಸ್ಕ್ರಿಪ್ಚರ್ಸ್, ದ ಕಿಂಗ್ಡಂ ಇಂಟರ್ಲಿನಿಯರ್ ಟ್ರಾನ್ಸ್ಲೇಷನ್ ಆಫ್ ದ ಗ್ರೀಕ್ ಸ್ಕ್ರಿಪ್ಚರ್ಸ್, ಒಂದು ಒಳ್ಳೆಯ ನಿಘಂಟು)
4. ಸಭಾ ಪುಸ್ತಕ ಅಧ್ಯಯನಕ್ಕಾಗಿ ಮತ್ತು ದೇವಪ್ರಭುತ್ವ ಶಾಲೆಗಾಗಿ ಪ್ರಚಲಿತದಲ್ಲಿ ಉಪಯೋಗಿಸಲ್ಪಡುವ ಪುಸ್ತಕಗಳು
5. ಶ್ರವಣ ಕಾಂತಟೇಪುಗಳು (ಆಡಿಓಕ್ಯಾಸೆಟ್ಸ್) ಮತ್ತು ವಿಡಿಯೋಗಳು
6. ಕಾವಲಿನಬುರುಜು ಮತ್ತು ಅವೇಕ್!ನ ಬೈಂಡುಮಾಡಿದ ಸಂಪುಟಗಳು
7. ಯೆಹೋವನ ಸಾಕ್ಷಿಗಳ ಇತಿಹಾಸ
(ಉದಾಹರಣೆಗಳು: ಯಿಯರ್ಬುಕ್ಸ್ ಆಫ್ ಜೆಹೋವಾಸ್ ವಿಟ್ನೆಸೆಸ್, ಜೆಹೋವಾಸ್ ವಿಟ್ನೆಸೆಸ್—ಪ್ರೊಕೇಮ್ಲರ್ಸ್ ಆಫ್ ಗಾಡ್ಸ್ ಕಿಂಗ್ಡಮ್)
8. ನಮ್ಮ ಶುಶ್ರೂಷೆಯಲ್ಲಿ ಕ್ರಮವಾಗಿ ಉಪಯೋಗಿಸಲ್ಪಡುವ ಪುಸ್ತಕಗಳು ಮತ್ತು ಬ್ರೋಷರ್ಸ್
(ಉದಾಹರಣೆಗಳು: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ, ರೀಸನಿಂಗ್ ಫ್ರಮ್ ದ ಸ್ಕ್ರಿಪ್ಚರ್ಸ್, ಲೈಫ್—ಹೌ ಡಿಡ್ ಇಟ್ ಗೆಟ್ ಹಿಯರ್? ಬೈ ಎವೊಲ್ಯೂಷನ್ ಆರ್ ಬೈ ಕ್ರಿಏಷನ್?, ಮ್ಯಾನ್ಕೈಂಡ್ಸ್ ಸರ್ಚ್ ಫಾರ್ ಗಾಡ್, ಯುನೈಟೆಡ್ ಇನ್ ವರ್ಷಿಪ್ ಆಫ್ ದಿ ಓನ್ಲಿ ಟ್ರೂ ಗಾಡ್)
[ಪುಟ 31 ರಲ್ಲಿರುವ ಚಿತ್ರ]
ಶೆರೆಸಾಡೆ ಆಗಲೇ ಒಬ್ಬ ಒಳ್ಳೆಯ ಬೈಬಲ್ ವಿದ್ಯಾರ್ಥಿಯಾಗಿದ್ದಾಳೆ
[ಪುಟ 31 ರಲ್ಲಿರುವ ಚಿತ್ರ]
ಎಳೆಯನಾದರೂ, ಈ ಬಾಲಕನು ಒಂದು ದೇವಪ್ರಭುತ್ವ ಪುಸ್ತಕ ಭಂಡಾರವನ್ನು ಬಳಸುತ್ತಿದ್ದಾನೆ