ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w96 3/15 ಪು. 10-14
  • ನಿಷ್ಠಾವಂತರನ್ನು ನೋಡಿರಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಷ್ಠಾವಂತರನ್ನು ನೋಡಿರಿ!
  • ಕಾವಲಿನಬುರುಜು—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಿಷ್ಠೆಯು ವಿಶೇಷವಾದ ಯಾವುದೊ ಸಂಗತಿಯಾಗಿದೆ
  • ಯೆಹೋವನು, ಸರ್ವೋತ್ಕೃಷ್ಟನಾದ ನಿಷ್ಠಾವಂತನು
  • ನಿಷ್ಠಾವಂತ ಮಗನಾದ ಯೇಸು ಕ್ರಿಸ್ತನು
  • ನಿಷ್ಠಾವಂತರಾಗಿದ್ದ ಅಪರಿಪೂರ್ಣ ಮಾನವರು
  • ಆಧುನಿಕ ಸಮಯಗಳಲ್ಲಿ ನಿಷ್ಠಾವಂತರು
  • “ನೀನೊಬ್ಬನೇ ನಿಷ್ಠಾವಂತನು”
    ಯೆಹೋವನ ಸಮೀಪಕ್ಕೆ ಬನ್ನಿರಿ
  • ನಿಷ್ಠೆಯ ಪಂಥಾಹ್ವಾನವನ್ನು ಎದುರಿಸುವುದು
    ಕಾವಲಿನಬುರುಜು—1996
  • ನಿಷ್ಠೆ—ಯಾವ ಬೆಲೆಗೆ?
    ಕಾವಲಿನಬುರುಜು—1991
  • ನೀವು ಯಾರಿಗೆ ನಿಷ್ಠರಾಗಿರಬೇಕು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
ಇನ್ನಷ್ಟು
ಕಾವಲಿನಬುರುಜು—1996
w96 3/15 ಪು. 10-14

ನಿಷ್ಠಾವಂತರನ್ನು ನೋಡಿರಿ!

“ಯೆಹೋವನೇ, ನೀನೊಬ್ಬನೇ ನಿಷ್ಠಾವಂತನಾಗಿರುವುದರಿಂದ ನಿನಗೆ ನಿಜವಾಗಿ ಭಯಪಡದಿರುವವರೂ ನಿನ್ನ ನಾಮವನ್ನು ಮಹಿಮೆಪಡಿಸದಿರುವವರೂ ಯಾರು?”—ಪ್ರಕಟನೆ 15:4, NW.

1. ತಮ್ಮ ಪೂರ್ವಾಧಿಕಾರಿಯಾಗಿದ್ದ ಸಿ. ಟಿ. ರಸಲ್‌ರ ನಿಷ್ಠೆಯ ಕುರಿತು, ಯಾವ ಸಾಕ್ಷ್ಯವನ್ನು ಜೆ. ಎಫ್‌. ರದರ್‌ಫರ್ಡ್‌ ಕೊಟ್ಟರು?

ಸಿ.ಟಿ. ರಸಲ್‌ರ ನಂತರ 1917ರಲ್ಲಿ ವಾಚ್‌ ಟವರ್‌ ಸೊಸೈಟಿಯ ಅಧ್ಯಕ್ಷರಾಗಿ ಬಂದ ಜೋಸೆಫ್‌ ಎಫ್‌. ರದರ್‌ಫರ್ಡ್‌, ರಸಲ್‌ರ ಶವಸಂಸ್ಕಾರದ ಸಮಯದಲ್ಲಿ ಹೀಗೆ ಹೇಳುತ್ತಾ, ತಮ್ಮ ಹೇಳಿಕೆಗಳನ್ನು ಆರಂಭಿಸಿದರು: “ಚಾರ್ಲ್ಸ್‌ ಟೇಸ್‌ ರಸಲ್‌ ದೇವರಿಗೆ ನಿಷ್ಠಾವಂತರಾಗಿದ್ದರು, ಕ್ರಿಸ್ತ ಯೇಸುವಿಗೆ ನಿಷ್ಠಾವಂತರಾಗಿದ್ದರು, ಮೆಸ್ಸೀಯನ ರಾಜ್ಯದ ಉದ್ದೇಶಕ್ಕೆ ನಿಷ್ಠಾವಂತರಾಗಿದ್ದರು. ಅವರು ಅಂತರಂಗದ ವರೆಗೂ ನಿಷ್ಠಾವಂತರಾಗಿದ್ದರು—ಹೌದು, ಮರಣದ ವರೆಗೂ ನಿಷ್ಠಾವಂತರಾಗಿದ್ದರು.” ನಿಜವಾಗಿಯೂ, ಅದು ಯೆಹೋವ ದೇವರ ಒಬ್ಬ ನಂಬಿಗಸ್ತ ಸೇವಕನಿಗೆ ಮಾಡಲಾದ ಒಂದು ಉತ್ತಮ ಶ್ಲಾಘನೆಯಾಗಿತ್ತು. ಒಬ್ಬನು ನಿಷ್ಠೆಯ ಪಂಥಾಹ್ವಾನವನ್ನು ಎದುರಿಸಿದನೆಂದು—ಅವನು ಅಂತರಂಗದಲ್ಲೂ ನಿಷ್ಠಾವಂತನಾಗಿದ್ದನೆಂದು—ಹೇಳುವುದಕ್ಕಿಂತ, ಇನ್ನಾವ ಹೆಚ್ಚಿನ ಶ್ಲಾಘನೆಯನ್ನೂ ನಾವು ಯಾವುದೇ ವ್ಯಕ್ತಿಗೆ ಕೊಡಸಾಧ್ಯವಿಲ್ಲ.

2, 3. (ಎ) ನಿಷ್ಠೆಯು ಒಂದು ಪಂಥಾಹ್ವಾನವನ್ನು ಒಡ್ಡುತ್ತದೆ ಏಕೆ? (ಬಿ) ನಿಷ್ಠಾವಂತರಾಗಿರುವ ತಮ್ಮ ಪ್ರಯತ್ನಗಳಲ್ಲಿ, ಸತ್ಯ ಕ್ರೈಸ್ತರ ವಿರುದ್ಧ ಯಾರು ಸಹ ವ್ಯೂಹ ರಚಿಸಿದ್ದಾರೆ?

2 ನಿಷ್ಠೆಯು ಒಂದು ಪಂಥಾಹ್ವಾನವನ್ನು ಒಡ್ಡುತ್ತದೆ. ಏಕೆ? ಏಕೆಂದರೆ ನಿಷ್ಠೆಯು ಆತ್ಮಾಭಿರುಚಿಯೊಂದಿಗೆ ಘರ್ಷಿಸುತ್ತದೆ. ದೇವರಿಗೆ ನಿಷ್ಠೆಯಿಲ್ಲದವರಲ್ಲಿ ಪ್ರಧಾನರು, ಕ್ರೈಸ್ತಪ್ರಪಂಚದ ವೈದಿಕರು. ಇದಲ್ಲದೆ, ಇಂದು ವೈವಾಹಿಕ ಸಂಬಂಧದಲ್ಲಿರುವಷ್ಟು ವ್ಯಾಪಕವಾದ ನಿಷ್ಠಾದ್ರೋಹವು ಹಿಂದೆಂದೂ ಇದ್ದಿರಲಿಲ್ಲ. ವ್ಯಭಿಚಾರವು ಸರ್ವಸಾಧಾರಣವಾಗಿದೆ. ವ್ಯಾಪಾರದ ಲೋಕದಲ್ಲೂ ನಿಷ್ಠಾದ್ರೋಹವು ಹಬ್ಬಿದೆ. ಇದರ ಸಂಬಂಧದಲ್ಲಿ ನಮಗೆ ಹೇಳಲಾಗುತ್ತಿರುವುದು: “ಅನೇಕ ನಿರ್ವಾಹಕರು ಮತ್ತು ವೃತ್ತಿಗಾರರು . . . ನಂಬುವುದೇನೆಂದರೆ, ಮೂರ್ಖರು ಮತ್ತು ಸುಲಭವಾಗಿ ಮೋಸಕ್ಕೊಳಗಾಗುವವರು ಮಾತ್ರ ಇಂದು ತಮ್ಮ ಕಂಪನಿಗಳಿಗೆ ನಿಷ್ಠಾವಂತರಾಗಿದ್ದಾರೆ.” “ತೀರ ನಿಷ್ಠಾವಂತ”ರಾಗಿರುವ ಜನರು ಕಡೆಗಣಿಸಲ್ಪಡುತ್ತಾರೆ. “ನಿಮ್ಮ ಆದ್ಯ ಹಾಗೂ ಏಕೈಕ ನಿಷ್ಠೆಯು ನಿಮಗೇ ಆಗಿರಬೇಕು” ಎಂಬುದು ಆಡಳಿತ ಸಲಹಾ ಮತ್ತು ನಿರ್ವಾಹಕ ಅನ್ವೇಷಣಾ ಸಂಸ್ಥೆಯ ಅಧ್ಯಕ್ಷನೊಬ್ಬನು ಅದನ್ನು ವ್ಯಕ್ತಪಡಿಸಿದ ರೀತಿಯಾಗಿತ್ತು. ಸ್ವತಃ ತನಗೆ ನಿಷ್ಠಾವಂತನಾಗಿರುವುದರ ಕುರಿತು ಮಾತಾಡುವುದು, ಆ ಪದದ ಅರ್ಥವನ್ನು ಭ್ರಷ್ಟಗೊಳಿಸುವಂತಿರುತ್ತದೆ. ಮೀಕ 7:2ರಲ್ಲಿ ಹೇಳಲಾದ ವಿಷಯದ ಕುರಿತು ಅದು ನಮಗೆ ಜ್ಞಾಪಕ ಹುಟ್ಟಿಸುತ್ತದೆ: “ಸದ್ಭಕ್ತರು [“ನಿಷ್ಠಾವಂತನು,” NW] ದೇಶದೊಳಗಿಂದ ನಾಶವಾಗಿದ್ದಾರೆ.”

3 ಇನ್ನೂ ಹೆಚ್ಚು ಮಹತ್ತರವಾದ ಪ್ರಮಾಣದಲ್ಲಿ, ದೇವರ ಕಡೆಗೆ ನಮ್ಮನ್ನು ನಿಷ್ಠಾದ್ರೋಹಿಗಳಾಗಿ ಮಾಡಲು ನಿಶ್ಚಿತರಾಗಿದ್ದು, ಸೈತಾನನೂ ಅವನ ದೆವ್ವಗಳೂ ನಮ್ಮ ವಿರುದ್ಧ ವ್ಯೂಹ ರಚಿಸಿದ್ದಾರೆ. ಅದಕ್ಕಾಗಿಯೇ ಕ್ರೈಸ್ತರಿಗೆ ಎಫೆಸ 6:12ರಲ್ಲಿ ಹೇಳಲಾಗಿರುವುದು: “ನಾವು ಹೋರಾಡುವದು ಮನುಷ್ಯಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಗಳ ಮೇಲೆಯೂ ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶ ಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ.” ಹೌದು, ಈ ಎಚ್ಚರಿಕೆಗೆ ಕಿವಿಗೊಡುವ ಅಗತ್ಯ ನಮಗಿದೆ: “ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.”—1 ಪೇತ್ರ 5:8.

4. ಯಾವ ಪ್ರವೃತ್ತಿಗಳು ನಿಷ್ಠಾವಂತರಾಗಿರುವುದನ್ನು ಅಷ್ಟು ಕಷ್ಟಕರವಾಗಿ ಮಾಡುತ್ತವೆ?

4 ನಮ್ಮ ಹೆತ್ತವರಿಂದ ನಾವು ಪಡೆದಿರುವ ಸ್ವಾರ್ಥಪರ ಪ್ರವೃತ್ತಿಗಳು ಸಹ ನಿಷ್ಠೆಯನ್ನು ಕಷ್ಟಕರವಾಗಿ ಮಾಡುತ್ತಿವೆ. ಅದು ಆದಿಕಾಂಡ 8:21ರಲ್ಲಿ ಉಲ್ಲೇಖಿಸಿದ ವಿಷಯದಂತಿದೆ: “ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದ್ದು” ಮತ್ತು ಸ್ವಾರ್ಥಪರವು. ತನಗಿತ್ತೆಂದು ಅಪೊಸ್ತಲ ಪೌಲನು ಒಪ್ಪಿಕೊಂಡ ಸಮಸ್ಯೆಯು ನಮಗೆಲ್ಲರಿಗಿದೆ: “ನಾನು ಮೆಚ್ಚುವ ಒಳ್ಳೇ ಕಾರ್ಯವನ್ನು ಮಾಡದೆ ಮೆಚ್ಚದಿರುವ ಕೆಟ್ಟ ಕಾರ್ಯವನ್ನೇ ಮಾಡುವವನಾಗಿದ್ದೇನೆ.”—ರೋಮಾಪುರ 7:19.

ನಿಷ್ಠೆಯು ವಿಶೇಷವಾದ ಯಾವುದೊ ಸಂಗತಿಯಾಗಿದೆ

5, 6. ನಿಷ್ಠೆಯು ಏನಾಗಿದೆ ಎಂಬುದರ ಕುರಿತು ಏನನ್ನು ಹೇಳಸಾಧ್ಯವಿದೆ, ಮತ್ತು ಅದನ್ನು ಹೇಗೆ ಅರ್ಥವಿವರಿಸಲಾಗಿದೆ?

5 “ನಿಷ್ಠೆಯು” ಬಹಳ ವಿಶೇಷವಾದ ಪದವಾಗಿದೆ. ಆದುದರಿಂದ ಶಾಸ್ತ್ರಗಳ ಒಳನೋಟ (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವುದು: “ಹೀಬ್ರೂ ಮತ್ತು ಗ್ರೀಕ್‌ ಪದಗಳ ಸಂಪೂರ್ಣ ಅರ್ಥವನ್ನು ನಿಖರವಾಗಿ ವ್ಯಕ್ತಪಡಿಸುವ ಯಾವುದೇ ಇಂಗ್ಲಿಷ್‌ ಪದಗಳು ಇರುವಂತೆ ತೋರುವುದಿಲ್ಲ, ಆದರೆ ದೇವರು ಮತ್ತು ಆತನ ಸೇವೆಯ ಸಂಬಂಧದಲ್ಲಿ ಉಪಯೋಗಿಸಲ್ಪಡುವಾಗ, ಭಕ್ತಿ ಮತ್ತು ನಂಬಿಗಸ್ತಿಕೆಯನ್ನು ಒಳಗೊಳ್ಳುವ ‘ನಿಷ್ಠೆಯು,’ ಒಂದು ಅರ್ಥವನ್ನು ಕೊಡಲು ಕಾರ್ಯಮಾಡುತ್ತದೆ.”a “ನಿಷ್ಠೆ”ಯ ಕುರಿತು, ದ ವಾಚ್‌ಟವರ್‌ ಪತ್ರಿಕೆಯು ಒಮ್ಮೆ ಹೇಳಿದ್ದು: “ನಂಬಿಗಸ್ತಿಕೆ, ಕರ್ತವ್ಯ, ಪ್ರೀತಿ, ಹಂಗು, ಸ್ವಾಮಿನಿಷ್ಠೆ. ಈ ಪದಗಳಲ್ಲಿರುವ ಸಾಮಾನ್ಯ ವಿಷಯವೇನು? ಅವು ನಿಷ್ಠೆಯ ವಿಭಿನ್ನ ಮುಖಗಳಾಗಿವೆ.” ಹೌದು, ಹಲವಾರು ಸದ್ಗುಣಗಳು ನಿಜವಾಗಿಯೂ ನಿಷ್ಠೆಯ ವಿಭಿನ್ನ ಮುಖಗಳಾಗಿವೆ. ಶಾಸ್ತ್ರಗಳಲ್ಲಿ ನಿಷ್ಠೆ ಮತ್ತು ನೀತಿಯು ಎಷ್ಟು ಬಾರಿ ಸಂಬಂಧಿಸಲ್ಪಟ್ಟಿವೆ ಎಂಬುದನ್ನು ನೋಡುವುದು ಖಂಡಿತವಾಗಿಯೂ ಗಮನಾರ್ಹವಾಗಿದೆ.

6 ಈ ಕೆಳಗಿನ ಅರ್ಥವಿವರಣೆಗಳೂ ಸಹಾಯಕಾರಿಯಾಗಿವೆ: ‘ನಿಷ್ಠೆಯು ಸ್ಥೈರ್ಯಗೆಡುವಿಕೆಯ ಅಥವಾ ಶೋಧನೆಯ ವಿರುದ್ಧ ಭದ್ರವಾಗಿರುವ, ಮುಂದುವರಿಯುವ, ನೆಚ್ಚಬಹುದಾದ ನಂಬಿಗಸ್ತಿಕೆ ಮತ್ತು ಸ್ವಾಮಿನಿಷ್ಠೆಯನ್ನು ಸೂಚಿಸಬಹುದು.’ ‘ನಿಷ್ಠೆಯು ಒಬ್ಬನ ವಾಗ್ದಾನಕ್ಕೆ ನಂಬಿಗಸ್ತಿಕೆಯನ್ನು ಅಥವಾ ತಾನು ನೈತಿಕವಾಗಿ ನಿರ್ಬಂಧಿತನೆಂದು ಅವನಿಗೆ ಅನಿಸುವ ಸಂಸ್ಥೆ ಅಥವಾ ತತ್ವಗಳಿಗೆ ಮುಂದುವರಿದ ಸ್ವಾಮಿನಿಷ್ಠೆಯನ್ನು ಸೂಚಿಸುತ್ತದೆ; ಆ ಪದವು ಅಂಟಿಕೊಳ್ಳುವಿಕೆಯನ್ನು ಮಾತ್ರವಲ್ಲ ಆ ಅಂಟಿಕೊಳ್ಳುವಿಕೆಯಿಂದ ಮರುಳುಗೊಂಡು ಒಲಿಸಲ್ಪಡುವುದರಿಂದ ನಿರೋಧಿಸುವುದನ್ನೂ ಸೂಚಿಸುತ್ತದೆ.’ ಹೀಗೆ, ಪರೀಕ್ಷೆಗಳು, ವಿರೋಧ, ಮತ್ತು ಹಿಂಸೆಯ ಹೊರತೂ ನಂಬಿಗಸ್ತರಾಗಿ ಮುಂದುವರಿಯುವ ಜನರು “ನಿಷ್ಠಾವಂತ”ರೆಂದು ಕರೆಯಲ್ಪಡಲು ಅರ್ಹರು.

7. ನಿಷ್ಠೆ ಮತ್ತು ನಂಬಿಗಸ್ತಿಕೆಯ ನಡುವೆ ಯಾವ ವ್ಯತ್ಯಾಸವನ್ನು ಮಾಡಸಾಧ್ಯವಿದೆ?

7 ಹಾಗಿದ್ದರೂ, ನಿಷ್ಠೆಯ ಸಂಬಂಧದಲ್ಲಿ, ನಿಷ್ಠೆ ಮತ್ತು ನಂಬಿಗಸ್ತಿಕೆಯ ನಡುವೆ ಮಾಡಸಾಧ್ಯವಿರುವ ಒಂದು ವ್ಯತ್ಯಾಸವನ್ನು ದೃಷ್ಟಾಂತಿಸುವುದು ಒಳ್ಳೆಯದಾಗಿರಬಹುದು. ಪಶ್ಚಿಮ ಅಮೆರಿಕದಲ್ಲಿ, ಸರಿಸುಮಾರಾಗಿ ಪ್ರತಿ ಗಂಟೆ ನೀರನ್ನು ಹೊರಸೂಸುವ ಒಂದು ಬುಗ್ಗೆಯಿದೆ. ಅದು ಎಷ್ಟೊಂದು ಕ್ರಮಬದ್ಧವಾಗಿದೆ ಎಂದರೆ ಅದನ್ನು ಪುರಾತನ ನಂಬಿಗಸ್ತನೆಂದು ಕರೆಯಲಾಗಿದೆ. ಬೈಬಲು ಚಂದ್ರನಂತಹ ನಿರ್ಜೀವ ವಸ್ತುಗಳ ವಿಷಯವಾಗಿ ನಂಬಿಗಸ್ತ ಎಂಬುದಾಗಿ ಮಾತಾಡುತ್ತದೆ, ಏಕೆಂದರೆ ಅದು ವಿಶ್ವಸನೀಯವಾಗಿದೆ. ಕೀರ್ತನೆ 89:37 (NW) ಚಂದ್ರನ ಕುರಿತು, “ಪರಲೋಕದಲ್ಲಿ ಒಂದು ನಂಬಿಗಸ್ತ ಸಾಕ್ಷಿ” ಎಂಬುದಾಗಿ ಹೇಳುತ್ತದೆ. ದೇವರ ಮಾತುಗಳು ನಂಬತಕ್ಕವುಗಳು ಎಂಬುದಾಗಿ ಹೇಳಲ್ಪಟ್ಟಿವೆ. ಪ್ರಕಟನೆ 21:5 ಹೇಳುವುದು: “ಆಗ ಸಿಂಹಾಸನದ ಮೇಲೆ ಕೂತಿದ್ದವನು—ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ ಅಂದನು. ಮತ್ತು ಒಬ್ಬನು ನನಗೆ—ಇದನ್ನು ಬರೆ; ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ ಎಂದು ಹೇಳಿದನು.” ಇವೆಲ್ಲವು ನಂಬತಕ್ಕವುಗಳೂ ವಿಶ್ವಾಸಪಾತ್ರವೂ ಆಗಿವೆ, ಆದರೆ ಅವಕ್ಕೆ ನಿಷ್ಠೆಯಂತಹ ಯಾವುದೇ ಅಂಟಿಕೆಯ ಅಥವಾ ನೈತಿಕ ಗುಣಗಳ ಸಾಮರ್ಥ್ಯವಿರುವುದಿಲ್ಲ.

ಯೆಹೋವನು, ಸರ್ವೋತ್ಕೃಷ್ಟನಾದ ನಿಷ್ಠಾವಂತನು

8. ನಿಷ್ಠೆಯ ಅತ್ಯುತ್ತಮ ಮಾದರಿಯನ್ನು ಯಾವ ಶಾಸ್ತ್ರೀಯ ಸಾಕ್ಷ್ಯವು ಗುರುತಿಸುತ್ತದೆ?

8 ಲೇಶ ಮಾತ್ರವೂ ಸಂದೇಹವಿಲ್ಲದೆ, ಯೆಹೋವ ದೇವರು ನಿಷ್ಠೆಯ ಅತ್ಯುತ್ತಮ ಮಾದರಿಯಾಗಿದ್ದಾನೆ. ಮಾನವರು ನಿತ್ಯಜೀವವನ್ನು ಪಡೆಯಲಾಗುವಂತೆ ತನ್ನ ಮಗನನ್ನೂ ಒದಗಿಸುತ್ತಾ, ಯೆಹೋವನು ಮಾನವ ಕುಲಕ್ಕೆ ನಿಷ್ಠಾವಂತನಾಗಿದ್ದಾನೆ. (ಯೋಹಾನ 3:16) ಯೆರೆಮೀಯ 3:12ರಲ್ಲಿ ನಾವು ಓದುವುದು: “ಯೆಹೋವನು ಹೀಗನ್ನುತ್ತಾನೆ, ಭ್ರಷ್ಟಳಾದ ಇಸ್ರಾಯೇಲೇ, ಹಿಂದಿರುಗು; ನಾನು ಕೋಪಮುಖದಿಂದ ನಿನ್ನನ್ನು ನೋಡೆನು, ನಾನು ಕರುಣಾಶಾಲಿ [“ನಿಷ್ಠಾವಂತನು,” NW].” ಯೆಹೋವನ ನಿಷ್ಠೆಗೆ ಹೆಚ್ಚಿನ ಸಾಕ್ಷ್ಯವನ್ನು ಕೊಡುವಂತಹದ್ದು, ಪ್ರಕಟನೆ 16:5ರಲ್ಲಿ ದಾಖಲಿಸಲಾದ ಮಾತುಗಳು: “ಸದಾ ಇರುವಾತನೇ, ಪರಿಶುದ್ಧನೇ [“ನಿಷ್ಠಾವಂತನೇ,” NW] ನೀನು . . . ನೀತಿಸ್ವರೂಪನಾಗಿದ್ದೀ.” ಮತ್ತು ಪುನಃ, ಕೀರ್ತನೆ 145:17ರಲ್ಲಿ ನಮಗೆ ಹೀಗೆ ಹೇಳಲಾಗುತ್ತದೆ: “ಯೆಹೋವನ ಮಾರ್ಗಗಳೆಲ್ಲಾ ನೀತಿಯುಳ್ಳವುಗಳು; ಆತನು ಎಲ್ಲಾ ಕಾರ್ಯಗಳಲ್ಲಿ ಕೃಪೆತೋರಿಸುವವನು [“ನಿಷ್ಠಾವಂತನು,” NW].” ವಾಸ್ತವವಾಗಿ, ಯೆಹೋವನು ತನ್ನ ನಿಷ್ಠೆಯಲ್ಲಿ ಎಷ್ಟೊಂದು ಎದ್ದುಕಾಣುವಂತಹವನಾಗಿದ್ದಾನೆಂದರೆ, ಪ್ರಕಟನೆ 15:4 (NW) ಹೇಳುವುದು: “ಯೆಹೋವನೇ, ನೀನೊಬ್ಬನೇ ನಿಷ್ಠಾವಂತನಾಗಿರುವುದರಿಂದ ನಿನಗೆ ನಿಜವಾಗಿ ಭಯಪಡದಿರುವವರೂ ನಿನ್ನ ನಾಮವನ್ನು ಮಹಿಮೆಪಡಿಸದಿರುವವರೂ ಯಾರು?” ಯೆಹೋವ ದೇವರು ಪರಮ ಮಟ್ಟದ ವರೆಗೆ ನಿಷ್ಠಾವಂತನಾಗಿದ್ದಾನೆ.

9, 10. ಇಸ್ರಾಯೇಲ್‌ ರಾಷ್ಟ್ರದೊಂದಿಗಿನ ತನ್ನ ವ್ಯವಹಾರಗಳಲ್ಲಿ ನಿಷ್ಠೆಯ ಯಾವ ದಾಖಲೆಯನ್ನು ಯೆಹೋವನು ಮಾಡಿದನು?

9 ವಿಶೇಷವಾಗಿ ಇಸ್ರಾಯೇಲ್‌ ರಾಷ್ಟ್ರದ ಇತಿಹಾಸವು, ತನ್ನ ಜನರ ಕಡೆಗೆ ಯೆಹೋವನ ನಿಷ್ಠೆಯ ಹೇರಳವಾದ ಸಾಕ್ಷ್ಯವನ್ನು ಹೊಂದಿದೆ. ನ್ಯಾಯಸ್ಥಾಪಕರ ದಿನಗಳಲ್ಲಿ, ಇಸ್ರಾಯೇಲ್‌ ಸತತವಾಗಿ ಸತ್ಯಾರಾಧನೆಯನ್ನು ತ್ಯಜಿಸಿತು, ಆದರೆ ಸತತವಾಗಿ ಯೆಹೋವನು ವಿಷಾದಪಟ್ಟು ಅವರನ್ನು ರಕ್ಷಿಸಿದನು. (ನ್ಯಾಯಸ್ಥಾಪಕರು 2:15-22) ಇಸ್ರಾಯೇಲ್‌ನಲ್ಲಿ ರಾಜರುಗಳಿದ್ದ ಐದು ಶತಮಾನಗಳ ಉದ್ದಕ್ಕೂ, ಯೆಹೋವನು ಆ ರಾಷ್ಟ್ರಕ್ಕೆ ತನ್ನ ನಿಷ್ಠೆಯನ್ನು ತೋರಿಸಿದನು.

10 ಯೆಹೋವನ ನಿಷ್ಠೆಯು ತನ್ನ ಜನರೊಂದಿಗೆ ಆತನು ತಾಳ್ಮೆಯಿಂದಿರುವಂತೆ ಮಾಡಿತು, ಇದು 2 ಪೂರ್ವಕಾಲವೃತ್ತಾಂತ 36:15, 16ರಲ್ಲಿ ಗಮನಿಸಲ್ಪಟ್ಟಿರುವಂತಿದೆ: “ಅವರ ಪಿತೃಗಳ ದೇವರಾದ ಯೆಹೋವನು ತನ್ನ ಪ್ರಜೆಯನ್ನೂ ನಿವಾಸಸ್ಥಾನವನ್ನೂ ಕನಿಕರಿಸಿ ಸಾವಕಾಶಮಾಡದೆ ತನ್ನ ದೂತರ ಮುಖಾಂತರವಾಗಿ ಅವರನ್ನು ಎಚ್ಚರಿಸುತ್ತಾ ಇದ್ದರೂ ಅವರು ದೇವಪ್ರೇಷಿತರನ್ನು ಗೇಲಿಮಾಡಿ ಆತನ ಮಾತುಗಳನ್ನು ತುಚ್ಛೀಕರಿಸಿ ಆತನ ಪ್ರವಾದಿಗಳನ್ನು ಹೀಯಾಳಿಸಿದ್ದರಿಂದ ಆತನ ಕೋಪಾಗ್ನಿಯು ಆತನ ಪ್ರಜೆಯ ಮೇಲೆ ಉರಿಯಹತ್ತಿತು, ಅವರ ತಾಪವು ಆರಿಹೋಗಲೇ ಇಲ್ಲ.”

11. ಯೆಹೋವನ ನಿಷ್ಠೆಯು ಯಾವ ಆಶ್ವಾಸನೆ ಅಥವಾ ಸಾಂತ್ವನವನ್ನು ನಮಗೆ ಕೊಡುತ್ತದೆ?

11 ಯೆಹೋವನು ಪರಮ ನಿಷ್ಠಾವಂತನಾಗಿರುವುದರಿಂದ, ಅಪೊಸ್ತಲ ಪೌಲನು ರೋಮಾಪುರ 8:38, 39ರಲ್ಲಿ ದಾಖಲಿಸಲ್ಪಟ್ಟಿರುವಂತೆ ಬರೆಯಸಾಧ್ಯವಿತ್ತು: “ಹೇಗಂದರೆ ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ ಈಗಿನ ಸಂಗತಿಗಳಾಗಲಿ ಮುಂದಣ ಸಂಗತಿಗಳಾಗಲಿ ಮಹತ್ವಗಳಾಗಲಿ ಮೇಲಣ ಲೋಕವಾಗಲಿ ಕೆಳಗಣ ಲೋಕವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಯೇಸು ಕ್ರಿಸ್ತನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು.” ಹೌದು, ಯೆಹೋವನು ನಮಗೆ ಆಶ್ವಾಸನೆ ನೀಡುವುದು: “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ.” (ಇಬ್ರಿಯ 13:5) ಯೆಹೋವ ದೇವರು ಸದಾ ನಿಷ್ಠಾವಂತನೆಂದು ತಿಳಿಯುವುದು ನಿಜವಾಗಿಯೂ ಸಾಂತ್ವನದ ವಿಷಯವಾಗಿದೆ!

ನಿಷ್ಠಾವಂತ ಮಗನಾದ ಯೇಸು ಕ್ರಿಸ್ತನು

12, 13. ದೇವರ ಮಗನ ನಿಷ್ಠೆಯ ವಿಷಯವಾಗಿ ನಮಗೆ ಯಾವ ಸಾಕ್ಷ್ಯವಿದೆ?

12 ನಿಷ್ಠೆಯ ಪಂಥಾಹ್ವಾನವನ್ನು ಎದುರಿಸುವುದರಲ್ಲಿ, ಯೆಹೋವನನ್ನು ಪರಿಪೂರ್ಣವಾಗಿ ಅನುಕರಿಸುತ್ತಿದ್ದವನು ಮತ್ತು ಅನುಕರಿಸುತ್ತಿರುವವನು ಯೇಸು ಕ್ರಿಸ್ತನು. ಯೋಗ್ಯವಾಗಿಯೇ ಅಪೊಸ್ತಲ ಪೇತ್ರನು ಕೀರ್ತನೆ 16:10ನ್ನು ಉದ್ಧರಿಸಿ, ಅದನ್ನು ಅ. ಕೃತ್ಯಗಳು 2:27ರಲ್ಲಿ ಯೇಸು ಕ್ರಿಸ್ತನಿಗೆ ಅನ್ವಯಿಸಸಾಧ್ಯವಿತ್ತು: “ಯಾಕಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವದಿಲ್ಲ, ನಿನ್ನ ಪ್ರಿಯನಿಗೆ [“ನಿಷ್ಠಾವಂತನಿಗೆ,” NW] ಕೊಳೆಯುವ ಅವಸ್ಥೆಯನ್ನು ನೋಡಗೊಡಿಸುವದಿಲ್ಲ.” ಯೇಸು ಕ್ರಿಸ್ತನು ಅರ್ಹವಾಗಿಯೇ “ನಿಷ್ಠಾವಂತ”ನೆಂದು ಹೆಸರಿಸಲ್ಪಟ್ಟಿದ್ದಾನೆ. ಸಂಪೂರ್ಣವಾಗಿ, ಅವನು ತನ್ನ ತಂದೆಗೆ ಮತ್ತು ದೇವರ ವಾಗ್ದಾನಿತ ರಾಜ್ಯಕ್ಕೆ ನಿಷ್ಠಾವಂತನಾಗಿದ್ದಾನೆ. ಸೈತಾನನು ಪ್ರಥಮವಾಗಿ ಶೋಧನೆಗಳನ್ನು, ಆತ್ಮಾಭಿರುಚಿಗೆ ಇಷ್ಟವಾಗುವ ವಿಷಯಗಳನ್ನು ಉಪಯೋಗಿಸುತ್ತಾ, ಯೇಸುವಿನ ಸಮಗ್ರತೆಯನ್ನು ಮುರಿಯಲು ಪ್ರಯತ್ನಿಸಿದನು. ಅದರಲ್ಲಿ ವಿಫಲಗೊಂಡ ಕಾರಣ, ಪಿಶಾಚನು ಅಂತಿಮವಾಗಿ ಹಿಂಸೆಯನ್ನು ಆಶ್ರಯಿಸುತ್ತಾ, ವಧ ಸ್ತಂಭದ ಮೇಲೆ ಯೇಸುವಿನ ಮರಣವನ್ನುಂಟುಮಾಡಿದನು. ತನ್ನ ಸ್ವರ್ಗೀಯ ತಂದೆಯಾದ ಯೆಹೋವ ದೇವರಿಗೆ ತನ್ನ ನಿಷ್ಠೆಯ ವಿಷಯವಾಗಿ ಯೇಸು ಎಂದಿಗೂ ವಿಚಲಿತನಾಗಲಿಲ್ಲ.—ಮತ್ತಾಯ 4:1-11.

13 ಮತ್ತಾಯ 28:20ರಲ್ಲಿ ದಾಖಲಿಸಲ್ಪಟ್ಟಿರುವ ವಾಗ್ದಾನವನ್ನು ನೆರವೇರಿಸುವುದರಲ್ಲಿ ಯೇಸು ಕ್ರಿಸ್ತನು ತನ್ನ ಹಿಂಬಾಲಕರ ಕಡೆಗೆ ನಿಷ್ಠಾವಂತನಾಗಿದ್ದಾನೆ: “ನೋಡಿರಿ, ನಾನು ಯುಗದ ಸಮಾಪ್ತಿಯ ವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.” ಆ ವಾಗ್ದಾನದ ನೆರವೇರಿಕೆಯಲ್ಲಿ, ಸಾ.ಶ. 33ರ ಪಂಚಾಶತ್ತಮದಿಂದ ಪ್ರಸ್ತುತ ಸಮಯದ ವರೆಗೆ ಅವನು ತನ್ನ ಸಭೆಯ ಮೇಲೆ ನಿಷ್ಠೆಯಿಂದ ನಾಯಕತ್ವವನ್ನು ವಹಿಸುತ್ತಿದ್ದಾನೆ.

ನಿಷ್ಠಾವಂತರಾಗಿದ್ದ ಅಪರಿಪೂರ್ಣ ಮಾನವರು

14. ನಿಷ್ಠೆಯ ಯಾವ ಮಾದರಿಯನ್ನು ಯೋಬನು ಇಟ್ಟನು?

14 ಈಗ, ಅಪರಿಪೂರ್ಣ ಮಾನವರ ಕುರಿತೇನು? ಅವರು ದೇವರಿಗೆ ನಿಷ್ಠಾವಂತರಾಗಿರಬಲ್ಲರೊ? ನಮಗೆ ಯೋಬನ ಎದ್ದುಕಾಣುವ ವಿದ್ಯಮಾನವಿದೆ. ಸೈತಾನನು ಅವನ ವಿಷಯದಲ್ಲಿ ವಿವಾದಾಂಶವನ್ನು ಸುಸ್ಪಷ್ಟಗೊಳಿಸಿದನು. ಯೋಬನು ಯೆಹೋವ ದೇವರಿಗೆ ನಿಷ್ಠಾವಂತನಾಗಿದ್ದನೊ ಅಥವಾ ಆತ್ಮಾಭಿರುಚಿಯ ಕಾರಣದಿಂದ ಮಾತ್ರ ಅವನು ಆತನನ್ನು ಸೇವಿಸುತ್ತಿದ್ದನೊ? ಯೋಬನಿಗೆ ತೊಂದರೆಯನ್ನುಂಟುಮಾಡುವ ಮೂಲಕ ಯೋಬನನ್ನು ಯೆಹೋವನಿಂದ ತಿರುಗಿಸಸಾಧ್ಯವಿದೆಯೆಂದು ಸೈತಾನನು ಬಡಾಯಿ ಕೊಚ್ಚಿದನು. ಯೋಬನು ತನ್ನ ಎಲ್ಲ ಸ್ವತ್ತುಗಳನ್ನು, ತನ್ನ ಎಲ್ಲ ಮಕ್ಕಳನ್ನು, ತನ್ನ ಆರೋಗ್ಯವನ್ನೂ ಕಳೆದುಕೊಂಡಾಗ, ಅವನ ಹೆಂಡತಿ ಅವನನ್ನು ಪ್ರೋತ್ಸಾಹಿಸಿದ್ದು: “ದೇವರನ್ನು ದೂಷಿಸಿ ಸಾಯಿ.” ಆದರೆ ಯೋಬನು ನಿಷ್ಠಾವಂತನಾಗಿದ್ದನು, ಏಕೆಂದರೆ ಅವನು ಆಕೆಗೆ ಹೇಳಿದ್ದು: “ಮೂರ್ಖಳು ಮಾತಾಡಿದಂತೆ ನೀನು ಮಾತಾಡುತ್ತೀ; ದೇವರ ಹಸ್ತದಿಂದ ನಾವು ಒಳ್ಳೆಯದನ್ನು ಹೊಂದುತ್ತೇವಷ್ಟೆ; ಕೆಟ್ಟದ್ದನ್ನು ಹೊಂದಬಾರದೋ . . . ಈ ಸಂದರ್ಭದಲ್ಲಿಯೂ ಪಾಪದ ಮಾತೊಂದೂ ಅವನ ತುಟಿಗಳಿಂದ ಹೊರಡಲಿಲ್ಲ.” (ಯೋಬ 2:9, 10) ವಾಸ್ತವವಾಗಿ, ಅವನ ಸಮಾಧಾನಕಾರರಾಗ ಉದ್ದೇಶಿಸಿದವರಿಗೆ ಯೋಬನು ಹೇಳಿದ್ದು: “ಆತನು [ದೇವರು] ನನ್ನನ್ನು ಕೊಂದರೂ, ನಾನು ಆತನಲ್ಲಿ ನಿರೀಕ್ಷಿಸುವೆನು.” (ಯೋಬ 13:15, ನ್ಯೂ ಇಂಟರ್‌ನ್ಯಾಷನಲ್‌ ವರ್ಷನ್‌) ಯೋಬನು, ಯೆಹೋವನ ಸಮ್ಮತಿಯನ್ನು ಪಡೆದನೆಂಬುದರಲ್ಲಿ ಯಾವ ಆಶ್ಚರ್ಯವೂ ಇಲ್ಲ! ಆದಕಾರಣ, ಯೆಹೋವನು ತೇಮಾನ್ಯನಾದ ಎಲೀಫಜನಿಗೆ ಹೇಳಿದ್ದು: “ನಿನ್ನ ಮೇಲೆಯೂ ನಿನ್ನ ಇಬ್ಬರು ಸ್ನೇಹಿತರ ಮೇಲೆಯೂ ಕೋಪಗೊಂಡಿದ್ದೇನೆ; ನನ್ನ ದಾಸನಾದ ಯೋಬನು ನನ್ನ ವಿಷಯವಾಗಿ ಯಥಾರ್ಥವನ್ನಾಡಿದಂತೆ ನೀವು ಆಡಲಿಲ್ಲ.”—ಯೋಬ 42:7, 10-16; ಯಾಕೋಬ 5:11.

15. ಯೆಹೋವ ದೇವರ ಅನೇಕ ಸೇವಕರ ನಿಷ್ಠೆಯ ವಿಷಯವಾಗಿ ಯಾವ ಶಾಸ್ತ್ರೀಯ ಸಾಕ್ಷ್ಯವು ನಮಗಿದೆ?

15 ಇಬ್ರಿಯ 11ನೆಯ ಅಧ್ಯಾಯದಲ್ಲಿ ವರ್ಣಿಸಲ್ಪಟ್ಟ ನಂಬಿಕೆಯ ಎಲ್ಲ ಪುರುಷರು ಮತ್ತು ಸ್ತ್ರೀಯರು ನಿಷ್ಠಾವಂತರೋಪಾದಿ ಸಂಬೋಧಿಸಲ್ಪಡಬಲ್ಲರು. ಅವರು ನಂಬಿಗಸ್ತರಾಗಿದ್ದರು ಮಾತ್ರವಲ್ಲ, ಒತ್ತಡಗಳ ಎದುರಿನಲ್ಲಿ ನಿಷ್ಠಾವಂತರೂ ಆಗಿದ್ದರು. ಹೀಗೆ ಅವರ ಕುರಿತು ನಾವು ಓದುವುದು, “ನಂಬಿಕೆಯ ಮೂಲಕ . . . ಸಿಂಹಗಳ ಬಾಯಿ ಕಟ್ಟಿದರು; ಬೆಂಕಿಯ ಬಲವನ್ನು ಆರಿಸಿದರು; ಕತ್ತಿಯ ಬಾಯಿಗೆ ತಪ್ಪಿಸಿಕೊಂಡರು; . . . ಬೇರೆ ಕೆಲವರು ಅಪಹಾಸ್ಯ ಕೊರಡೆಯ ಪೆಟ್ಟು ಬೇಡಿ ಸೆರೆಮನೆ ಇವುಗಳನ್ನು ಅನುಭವಿಸಿದರು. ಕೆಲವರನ್ನು ಜನರು ಕಲ್ಲೆಸೆದು ಕೊಂದರು; ಕೆಲವರನ್ನು ಗರಗಸದಿಂದ ಕೊಯ್ದು ಕೊಂದರು; . . . ಕೆಲವರನ್ನು ಕತ್ತಿಯಿಂದ ಕೊಂದರು. ಕೆಲವರು ಕೊರತೆ ಹಿಂಸೆ ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು ಕುರಿ ಮೇಕೆಗಳ ಚರ್ಮಗಳನ್ನು ಉಟ್ಟುಕೊಂಡವರಾಗಿ ತಿರುಗಾಡಿದರು.”—ಇಬ್ರಿಯ 11:33-37.

16. ನಿಷ್ಠೆಯ ಯಾವ ಮಾದರಿಯನ್ನು ಅಪೊಸ್ತಲ ಪೌಲನು ಒದಗಿಸಿದನು?

16 ಕ್ರೈಸ್ತ ಗ್ರೀಕ್‌ ಶಾಸ್ತ್ರಗಳೂ ಅಪೊಸ್ತಲ ಪೌಲನ ಗಮನಾರ್ಹ ಮಾದರಿಯನ್ನು ಒದಗಿಸುತ್ತವೆ. ತನ್ನ ಶುಶ್ರೂಷೆಯ ಕುರಿತು ಥೆಸಲೊನೀಕದ ಕ್ರೈಸ್ತರಿಗೆ ಅವನು ಯೋಗ್ಯವಾಗಿ ಹೇಳಸಾಧ್ಯವಿತ್ತು: “ನಂಬುವವರಾದ ನಿಮ್ಮ ವಿಷಯದಲ್ಲಿ ನಾವು ಎಷ್ಟೋ ಶುದ್ಧ [“ನಿಷ್ಠಾವಂತ,” NW]ರಾಗಿಯೂ ನೀತಿವಂತರಾಗಿಯೂ ನಿರ್ದೋಷಿಗಳಾಗಿಯೂ ನಡೆದುಕೊಂಡೆವೆಂಬದಕ್ಕೆ ನೀವು ಸಾಕ್ಷಿಗಳು, ದೇವರೂ ಸಾಕ್ಷಿ.” (1 ಥೆಸಲೊನೀಕ 2:10) 2 ಕೊರಿಂಥ 6:3-5ರಲ್ಲಿ ದಾಖಲಿಸಲಾದ ಅವನ ಮಾತುಗಳಲ್ಲಿ ಪೌಲನ ನಿಷ್ಠೆಯ ಹೆಚ್ಚಿನ ಪ್ರಮಾಣವು ನಮಗಿದೆ. ಅಲ್ಲಿ ನಾವು ಹೀಗೆ ಓದುತ್ತೇವೆ: “ಎಲ್ಲಾ ಸಂಗತಿಗಳಲ್ಲಿ ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗ ಮಾಡಿಕೊಳ್ಳುತ್ತೇವೆ. ನಾವು ಸಂಕಟಗಳಲ್ಲಿಯೂ ಕೊರತೆಗಳಲ್ಲಿಯೂ ಇಕ್ಕಟ್ಟುಗಳಲ್ಲಿಯೂ ಪೆಟ್ಟುಗಳಲ್ಲಿಯೂ ಸೆರೆಮನೆಗಳಲ್ಲಿಯೂ ಕಲಹಗಳಲ್ಲಿಯೂ ಕಷ್ಟವಾದ ಕೆಲಸಗಳಲ್ಲಿಯೂ ನಿದ್ದೆಗೇಡುಗಳಲ್ಲಿಯೂ ಉಪವಾಸಗಳಲ್ಲಿಯೂ ಬಹು ತಾಳ್ಮೆಯನ್ನು ತೋರಿಸುತ್ತೇವೆ.” ಅಪೋಸ್ತಲ ಪೌಲನು ನಿಷ್ಠಾವಂತನಾಗಿದ್ದ ಕಾರಣ ಅವನಿಗೆ ಆತ್ಮ ಗೌರವವಿತ್ತೆಂಬುದಕ್ಕೆ ಇವೆಲ್ಲವು ಸಾಕ್ಷ್ಯನೀಡುತ್ತವೆ.

ಆಧುನಿಕ ಸಮಯಗಳಲ್ಲಿ ನಿಷ್ಠಾವಂತರು

17. ನಿಷ್ಠಾವಂತರಾಗಿರುವ ತಮ್ಮ ದೃಢಸಂಕಲ್ಪವನ್ನು ಜೆ. ಎಫ್‌. ರದರ್‌ಫರ್ಡ್‌ರ ಯಾವ ಮಾತುಗಳು ತೋರಿಸಿದವು?

17 ಆಧುನಿಕ ಸಮಯಗಳ ಸಂಬಂಧದಲ್ಲಿಯಾದರೋ, ನಮ್ಮ ಪೀಠಿಕೆಯಲ್ಲಿ ಈಗಾಗಲೇ ಪರಿಗಣಿಸಲ್ಪಟ್ಟ ಉತ್ತಮ ಮಾದರಿ ನಮಗಿದೆ. “ಶಾಂತಿಯ ಪ್ರಭು”ವಿನ ಕೈಕೆಳಗೆ ಲೋಕವ್ಯಾಪಕ ಭದ್ರತೆ (ಇಂಗ್ಲಿಷ್‌) ಎಂಬ ಪುಸ್ತಕದ ಪುಟ 146ರಲ್ಲಿ, “ಸೆರೆಮನೆವಾಸದ ಸಮಯದಲ್ಲಿ ನಿಷ್ಠೆ” ಎಂಬ ಉಪಶೀರ್ಷಿಕೆಯ ಅಡಿಯಲ್ಲಿ ಏನು ತಿಳಿಸಲ್ಪಟ್ಟಿದೆಯೆಂಬುದನ್ನು ಗಮನಿಸಿರಿ. ಅಲ್ಲಿ ಹೀಗೆ ಹೇಳಲಾಗಿದೆ: “ತಮ್ಮ ಸೆರೆಮನೆವಾಸದ ಸಮಯದಲ್ಲಿ ಯೆಹೋವನ ಸಂಸ್ಥೆಗೆ ನಿಷ್ಠೆಯನ್ನು ಪ್ರದರ್ಶಿಸುತ್ತಾ, ವಾಚ್‌ ಟವರ್‌ ಸೊಸೈಟಿಯ ಅಧ್ಯಕ್ಷರಾದ ಜೋಸೆಫ್‌ ಎಫ್‌. ರದರ್‌ಫರ್ಡ್‌, ಡಿಸೆಂಬರ್‌ 25, 1918ರಂದು ಈ ಕೆಳಗಿನ ವಿಷಯವನ್ನು ಬರೆದರು: ‘ನಾನು ಬಾಬೆಲಿನೊಂದಿಗೆ ಸಂಧಾನ ಮಾಡಿಕೊಳ್ಳಲು ನಿರಾಕರಿಸಿ, ನನ್ನ ಕರ್ತನನ್ನು ನಂಬಿಗಸ್ತನಾಗಿ ಸೇವಿಸಲು ಪ್ರಯತ್ನಿಸಿದ ಕಾರಣ, ನಾನು ಸೆರೆಮನೆಯಲ್ಲಿದ್ದೇನೆ, ಇದಕ್ಕಾಗಿ ನಾನು ಕೃತಜ್ಞನು. . . . ಸಾಂಕೇತಿಕ ಮೃಗದೊಂದಿಗೆ ಒಪ್ಪಂದ ಮಾಡಿ ಅಥವಾ ಅದಕ್ಕೆ ಶರಣಾಗತನಾಗಿ ಮುಕ್ತನಾಗಿರಲು ಮತ್ತು ಇಡೀ ಲೋಕದ ಪ್ರಶಂಸೆಯನ್ನು ಪಡೆಯುವುದಕ್ಕಿಂತ ಆತನ ಮೆಚ್ಚುಗೆಯ ಮುಗುಳುನಗೆಯನ್ನು ಪಡೆದು ಸೆರೆಮನೆಯಲ್ಲಿರುವುದನ್ನು ಹೆಚ್ಚು ಇಷ್ಟಪಡುವೆನು.’”b

18, 19. ಆಧುನಿಕ ಸಮಯಗಳಲ್ಲಿ ನಿಷ್ಠೆಯ ಯಾವ ಪ್ರಾಮಾಣಿಕವಾದ ಮಾದರಿಗಳು ನಮಗಿವೆ?

18 ಹಿಂಸೆಯನ್ನು ತಾಳಿಕೊಂಡಿರುವ ಇತರ ಅನೇಕ ಕ್ರೈಸ್ತರಲ್ಲಿ ನಮಗೆ ನಿಷ್ಠೆಯ ಅತ್ಯುತ್ತಮ ಮಾದರಿಗಳಿವೆ. ಅಂತಹ ನಿಷ್ಠಾವಂತ ವ್ಯಕ್ತಿಗಳಲ್ಲಿ, ಇಂಗ್ಲಿಷ್‌ ಭಾಷೆಯಲ್ಲಿ ವ್ಯಾಪಕವಾಗಿ ಹಂಚಲ್ಪಟ್ಟಿರುವ ಪರ್ಪಲ್‌ ಟ್ರೈಆ್ಯಂಗಲ್ಸ್‌ ಎಂಬ ವಿಡಿಯೊವಿನಲ್ಲಿ ಚಿತ್ರಿಸಲಾದಂತೆ, ನಾಸಿ ಆಳಿಕೆಯ ಸಮಯದಲ್ಲಿದ್ದ ಯೆಹೋವನ ಜರ್ಮನ್‌ ಸಾಕ್ಷಿಗಳು ಸೇರಿದ್ದಾರೆ. ಯೆಹೋವನ ಅನೇಕ ನಿಷ್ಠಾವಂತ ಆಫ್ರಿಕನ್‌ ಸಾಕ್ಷಿಗಳು—ಮಲಾವಿಯಲ್ಲಿರುವ ಸಾಕ್ಷಿಗಳಂತಹವರು—ಸಹ ಗಮನಾರ್ಹರಾಗಿದ್ದಾರೆ. ಅಲ್ಲಿ ಸೆರೆಮನೆಯ ಒಬ್ಬ ಕಾವಲುಗಾರನು ಹೀಗೆ ಹೇಳುತ್ತಾ ಸಾಕ್ಷಿಗಳ ನಿಷ್ಠೆಗೆ ಸಾಕ್ಷ್ಯವನ್ನು ನೀಡಿದನು: “ಅವರು ಎಂದಿಗೂ ಒಪ್ಪಂದ ಮಾಡಿಕೊಳ್ಳಲಾರರು. ಅವರು ಕೇವಲ ಅಭಿವೃದ್ಧಿ ಹೊಂದುತ್ತಾರೆ.”

19 ಇತ್ತೀಚಿನ ಯೆಹೋವನ ಸಾಕ್ಷಿಗಳ ವರ್ಷಪುಸ್ತಕಗಳನ್ನು (ಇಂಗ್ಲಿಷ್‌) ಓದಿ, ಗ್ರೀಸ್‌, ಮೋಸಾಂಬಿಕ್‌ ಮತ್ತು ಪೋಲೆಂಡ್‌ನಲ್ಲಿರುವಂತಹ ಸತ್ಯ ಕ್ರೈಸ್ತರಿಂದ ಪ್ರದರ್ಶಿಸಲ್ಪಟ್ಟ ನಿಷ್ಠೆಯಿಂದ ಪ್ರಭಾವಿತರಾಗದೆ ಇರಲು ಸಾಧ್ಯವಿಲ್ಲ. ಅವರಲ್ಲಿ ಅನೇಕರು ಅತಿಯಾದ ಯಾತನೆಯನ್ನು ಅನುಭವಿಸಿದರು; ಇತರರು ಕೊಲ್ಲಲ್ಪಟ್ಟರು. 1992 ವರ್ಷಪುಸ್ತಕದ ಪುಟ 177, ಕೊಲೆಮಾಡಲ್ಪಡುವಷ್ಟರ ಮಟ್ಟಿಗೆ ನಿಷ್ಠೆಯ ಪಂಥಾಹ್ವಾನವನ್ನು ಎದುರಿಸಿದ ಇಥಿಯೋಪ್ಯದಲ್ಲಿನ ಒಂಬತ್ತು ಕ್ರೈಸ್ತ ಪುರುಷರ ಚಿತ್ರಗಳನ್ನು ಪ್ರದರ್ಶಿಸುತ್ತದೆ. ಯೆಹೋವನ ಸಾಕ್ಷಿಗಳೋಪಾದಿ, ನಿಷ್ಠೆಯ ಪಂಥಾಹ್ವಾನವನ್ನು ಎದುರಿಸುವಂತೆ ನಮ್ಮನ್ನು ಉತ್ತೇಜಿಸುವ ಇಷ್ಟೊಂದು ಉತ್ತಮ ಮಾದರಿಗಳನ್ನು ಪಡೆದಿರುವುದರಲ್ಲಿ ನಾವು ಸಂತೋಷಿಸುವುದಿಲ್ಲವೊ?

20. ನಾವು ನಿಷ್ಠಾವಂತರಾಗಿ ಉಳಿಯುವುದಾದರೆ ಪರಿಣಾಮವು ಏನಾಗಿರುವುದು?

20 ನಿಷ್ಠೆಯಿಂದ ಶೋಧನೆಗಳನ್ನು ಮತ್ತು ಒತ್ತಡಗಳನ್ನು ಪ್ರತಿರೋಧಿಸುವ ಮೂಲಕ, ನಮ್ಮ ಆತ್ಮ ಗೌರವವನ್ನು ನಾವು ಕಟ್ಟುತ್ತೇವೆ. ಹಾಗಾದರೆ, ನಿಷ್ಠೆಯ ವಿವಾದಾಂಶದ ಯಾರ ಪಕ್ಷದಲ್ಲಿ ಕಂಡುಕೊಳ್ಳಲ್ಪಡಲು ನಾವು ಬಯಸುತ್ತೇವೆ? ನಿಷ್ಠೆಯ ಪಂಥಾಹ್ವಾನವನ್ನು ಎದುರಿಸುವ ಮೂಲಕ, ವಿವಾದಾಂಶದ ಯೆಹೋವ ದೇವರ ಪಕ್ಷವನ್ನು ನಾವು ತೆಗೆದುಕೊಳ್ಳುತ್ತೇವೆ ಮತ್ತು ಪಿಶಾಚನಾದ ಸೈತಾನನನ್ನು, ಅವನಾಗಿರುವಂತೆಯೇ, ನೀಚ, ಅಸಹ್ಯಕರ ಸುಳ್ಳುಗಾರನೆಂದು ರುಜುಪಡಿಸುತ್ತೇವೆ! ಹೀಗೆ ನಾವು, ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರ ಸಮ್ಮತಿಯನ್ನು ಮತ್ತು ಸಂತೋಷದಲ್ಲಿ ನಿತ್ಯಜೀವದ ಬಹುಮಾನವನ್ನು ಪಡೆಯುತ್ತೇವೆ. (ಕೀರ್ತನೆ 37:29; 144:15ಬಿ) ನಿಷ್ಠೆಯ ಪಂಥಾಹ್ವಾನವನ್ನು ಎದುರಿಸಲು ಯಾವುದು ಅವಶ್ಯವೊ ಅದನ್ನು ಮುಂದೆ ಪರಿಗಣಿಸಲಾಗುವುದು.

[ಅಧ್ಯಯನ ಪ್ರಶ್ನೆಗಳು]

a  ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಎರಡು ಸಂಪುಟದ ಒಂದು ಬೈಬಲ್‌ ಎನ್‌ಸೈಕ್ಲೊಪೀಡಿಯ.

b  ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿತ.

ನೀವು ಹೇಗೆ ಉತ್ತರಿಸುವಿರಿ?

◻ ನಿಷ್ಠಾವಂತರಾಗಿರುವುದು ಒಂದು ಪಂಥಾಹ್ವಾನವನ್ನು ಒಡ್ಡುತ್ತದೆ ಏಕೆ?

◻ “ನಿಷ್ಠೆಯು” ಬಹಳ ವಿಶೇಷವಾದ ಪದವಾಗಿದೆಯೆಂದು ಏಕೆ ಹೇಳಸಾಧ್ಯವಿದೆ?

◻ ನಿಷ್ಠಾವಂತರಾಗಿದ್ದ ಅಪರಿಪೂರ್ಣ ಮಾನವರ ಯಾವ ಶಾಸ್ತ್ರೀಯ ಮಾದರಿಗಳು ನಮಗಿವೆ?

◻ ನಿಷ್ಠೆಯ ಯಾವ ಉತ್ತಮ ಆಧುನಿಕ ದಿನದ ಮಾದರಿಗಳು ನಮಗಿವೆ?

[ಪುಟ 11 ರಲ್ಲಿರುವ ಚಿತ್ರ]

ಚಾರ್ಲ್ಸ್‌ ಟೇಸ್‌ ರಸಲ್‌

[ಪುಟ 12 ರಲ್ಲಿರುವ ಚಿತ್ರ]

ಯೇಸು ನಿಜವಾಗಿಯೂ ಯೆಹೋವನ “ನಿಷ್ಠಾವಂತ”ನಾಗಿದ್ದನು

[ಪುಟ 13 ರಲ್ಲಿರುವ ಚಿತ್ರ]

ಯೋಬನು ಅಪರಿಪೂರ್ಣನಾಗಿದ್ದರೂ, ದೇವರಿಗೆ ನಿಷ್ಠಾವಂತನಾಗಿ ಪರಿಣಮಿಸಿದನು

[ಪುಟ 14 ರಲ್ಲಿರುವ ಚಿತ್ರ]

ಪೌಲನು, ಯೆಹೋವನಿಗೆ ನಿಷ್ಠೆಯ ಉತ್ತಮ ಮಾದರಿಯನ್ನಿಟ್ಟನು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ