ಜ್ಞಾಪಕವನ್ನು ಗೌರವಾರ್ಹವಾಗಿ ಆಚರಿಸಿರಿ
ಸಾ.ಶ. 33ರ ನೈಸಾನ್ 14ರ ಸಾಯಂಕಾಲದಂದು, ಯೇಸು ಜ್ಞಾಪಕವನ್ನು ಸ್ಥಾಪಿಸಿದನು.a ಆತನು ತನ್ನ 12 ಮಂದಿ ಅಪೊಸ್ತಲರೊಂದಿಗೆ ಪಸ್ಕದ ಆಚರಣೆಯನ್ನು ಆಚರಿಸುವುದನ್ನು ಆಗತಾನೇ ಮುಗಿಸಿದ್ದನು, ಆದುದರಿಂದ ನಾವು ಆ ತಾರೀಖಿನ ಕುರಿತಾಗಿ ನಿಶ್ಚಿತರಾಗಿರಸಾಧ್ಯವಿದೆ. ವಿಶ್ವಾಸಘಾತುಕನಾದ ಯೂದನನ್ನು ಕಳುಹಿಸಿಕೊಟ್ಟ ನಂತರ, ಯೇಸು “ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದು ಅವರಿಗೆ ಕೊಟ್ಟು—ತಕ್ಕೊಳ್ಳಿರಿ; ಇದು ನನ್ನ ದೇಹ ಅಂದನು. ಆ ಮೇಲೆ ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಅವರಿಗೆ ಕೊಟ್ಟನು; ಅವರೆಲ್ಲರೂ ಅದರಲ್ಲಿ ಕುಡಿದರು. ಮತ್ತು ಆತನು ಅವರಿಗೆ—ಇದು ನನ್ನ ರಕ್ತ, ಇದು ಒಡಂಬಡಿಕೆಯ ರಕ್ತ; ಇದು ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ” ಅಂದನು.—ಮಾರ್ಕ 14:22-24.
ಯೇಸು ತನ್ನ ಮರಣದ ಪ್ರಮುಖತೆಯ ಕಾರಣದಿಂದಾಗಿ ಅದನ್ನು ಸ್ಮರಿಸುವಂತೆ ತನ್ನ ಶಿಷ್ಯರಿಗೆ ಆಜ್ಞಾಪಿಸಿದನು. (ಲೂಕ 22:19; 1 ಕೊರಿಂಥ 11:23-26) ಬಾಧ್ಯತೆಯಾಗಿ ಬಂದ ಪಾಪ ಮತ್ತು ಮರಣಗಳ ಶಾಪದಿಂದ ಮಾನವಕುಲವನ್ನು ವಿಮೋಚಿಸಸಾಧ್ಯವಿದ್ದದ್ದು, ಆತನ ಯಜ್ಞಾರ್ಪಣೆಯೊಂದೇ ಆಗಿತ್ತು. (ರೋಮಾಪುರ 5:12; 6:23) ಆತನು ಉಪಯೋಗಿಸಿದ ರೊಟ್ಟಿ ಮತ್ತು ದ್ರಾಕ್ಷಾಮದ್ಯಗಳು, ಆತನ ಪರಿಪೂರ್ಣ ದೇಹ ಮತ್ತು ಆತನ ರಕ್ತದ ಸಂಕೇತಗಳಾಗಿದ್ದವು. ಮೂಲ ತಾರೀಖನ್ನು ತಿಳಿದುಕೊಂಡವರಾಗಿದ್ದು, ಯೆಹೂದಿ ಪಸ್ಕದಲ್ಲಿ ಅದು ಆಚರಿಸಲ್ಪಡುತ್ತಿದ್ದಂತೆಯೇ, ಪ್ರತಿ ವರ್ಷ ಅನುರೂಪವಾದ ದಿನದಂದು ಆ ಸಂದರ್ಭವನ್ನು ನಾವು ಆಚರಿಸಸಾಧ್ಯವಿದೆ. ಆದರೆ ನಾವು ಅದನ್ನು ಗೌರವಾರ್ಹವಾಗಿ ಆಚರಿಸಬೇಕು. ಏಕೆ?
ರೊಟ್ಟಿ ಮತ್ತು ದ್ರಾಕ್ಷಾಮದ್ಯದ ಕುರುಹುಗಳಲ್ಲಿ ಪಾಲುತೆಗೆದುಕೊಳ್ಳುವವರು “ಕರ್ತನ ಮರಣವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸು”ತ್ತಿರುವರು ಎಂದು ಅಪೊಸ್ತಲ ಪೌಲನು ಹೇಳಿದನು. (1 ಕೊರಿಂಥ 11:26, ಓರೆಅಕ್ಷರಗಳು ನಮ್ಮವು.) ಹೀಗೆ ಆಚರಣೆಯ ಕೇಂದ್ರವು, ಯೇಸುವಿನ ಮರಣದ ಮೇಲೆ ಮತ್ತು ಮಾನವಕುಲಕ್ಕಾಗಿರುವ ಅದರ ಅರ್ಥದ ಮೇಲೆ ಇರಸಾಧ್ಯವಿತ್ತು. ಆ ಸಂದರ್ಭವು ಗಂಭೀರವಾಗಿದ್ದು, ದೇವರ ಒಳ್ಳೆಯತನದ ಕುರಿತಾಗಿ ಮತ್ತು ಯೆಹೋವನಿಗಾಗಿ ಮತ್ತು ಆತನ ಪುತ್ರನಿಗಾಗಿ ನಮ್ಮಲ್ಲಿರಬೇಕಾದ ಗಣ್ಯತೆಯ ಕುರಿತಾಗಿ ಆಲೋಚಿಸಲಿಕ್ಕಾಗಿರುವ ಒಂದು ಸಮಯವಾಗಿರುವುದು. (ರೋಮಾಪುರ 5:8; ತೀತ 2:14; 1 ಯೋಹಾನ 4:9, 10) ಆದುದರಿಂದ, ಪೌಲನು ಎಚ್ಚರಿಸಿದ್ದು: “ಹೀಗಿರುವದರಿಂದ ಯಾವನಾದರೂ ಅಯೋಗ್ಯವಾಗಿ ಕರ್ತನ ರೊಟ್ಟಿಯನ್ನು ತಿಂದರೆ ಇಲ್ಲವೆ ಆತನ ಪಾತ್ರೆಯಲ್ಲಿ ಪಾನಮಾಡಿದರೆ ಅವನು ಕರ್ತನ ದೇಹಕ್ಕೂ ರಕ್ತಕ್ಕೂ ದ್ರೋಹಮಾಡಿದವನಾಗಿರುವನು.”—1 ಕೊರಿಂಥ 11:27.
ಗೌರವಾರ್ಹವಾಗಿ—ಹೇಗೆ?
ಸುವ್ಯಕ್ತವಾಗಿಯೆ, ಪ್ರಶ್ನಾರ್ಥಕವಾದ ರೂಢಿಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅಥವಾ ವಿಧರ್ಮಿ ಪದ್ಧತಿಗಳನ್ನು ದತ್ತುಸ್ವೀಕಾರಮಾಡುವ ಮೂಲಕ, ಈ ಸಂದರ್ಭವನ್ನು ನಾವು ಅಪವಿತ್ರಗೊಳಿಸುವುದಾದರೆ, ದೇವರು ಅದನ್ನು ಇಷ್ಟಪಡುವುದಿಲ್ಲ. (ಯಾಕೋಬ 1:27; 4:3, 4) ಇದು ಈಸ್ಟರ್ ಹಬ್ಬದ ಸಮಯದಲ್ಲಿನ ಜನಪ್ರಿಯ ಘಟನೆಗಳನ್ನೂ ಪ್ರತಿಬಂಧಿಸುವುದು. “[ತನ್ನನ್ನು] ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ” ಎಂಬ ಯೇಸುವಿನ ಬೋಧನೆಯನ್ನು ಅನುಸರಿಸುತ್ತಾ, ಆತನು ಅದನ್ನು ನಡೆಸಿದಂತೆಯೇ ಜ್ಞಾಪಕವನ್ನು ಆಚರಿಸಲು ನಾವು ಬಯಸುವೆವು. (ಲೂಕ 22:19; 1 ಕೊರಿಂಥ 11:24, 25) ಇದು, ಈ ಆಚರಣೆಗೆ ಕ್ರೈಸ್ತಪ್ರಪಂಚದ ಚರ್ಚುಗಳಿಂದ ಕೂಡಿಸಲ್ಪಟ್ಟಿರುವ ಅಲಂಕಾರದ ಸಜ್ಜುಗಳನ್ನು ಪ್ರತಿಬಂಧಿಸುತ್ತದೆ. “ಕ್ರಿಸ್ತನಿಂದ ಮತ್ತು ಆತನ ಅಪೊಸ್ತಲರಿಂದ ಅನುಸರಿಸಲ್ಪಟ್ಟ ತೀರ ಸರಳವಾದ ವ್ರತಾಚರಣೆಗಳಿಗಿಂತ ಇಂದಿನ ಮಾಸ್ ಬಹಳವಾಗಿ ಭಿನ್ನವಾಗಿದೆ” ಎಂದು ನ್ಯೂ ಕ್ಯಾಥೊಲಿಕ್ ಎನ್ಸೈಕ್ಲೊಪೀಡಿಯ ಒಪ್ಪಿಕೊಳ್ಳುತ್ತದೆ. ಮತ್ತು ಮಾಸ್ ಅನ್ನು ಅನೇಕಾವರ್ತಿ, ಪ್ರತಿ ದಿನವೂ ಆಚರಿಸುವ ಮೂಲಕ ಕ್ರೈಸ್ತಪ್ರಪಂಚವು ಯೇಸು ಉದ್ದೇಶಿಸಿದ್ದ ವಿಷಯದಿಂದ ವಿಪಥವಾಗಿದೆ ಮತ್ತು ಅದನ್ನು ಒಂದು ಸಾಮಾನ್ಯ ಘಟನೆಯನ್ನಾಗಿ ಮಾಡಿದೆ.
ಅಗೌರವಾರ್ಹವಾಗಿ ಪಾಲುತೆಗೆದುಕೊಳ್ಳುವುದರ ಕುರಿತಾಗಿ ಪೌಲನು ಕೊರಿಂಥದ ಕ್ರೈಸ್ತರಿಗೆ ಬರೆದನು, ಏಕೆಂದರೆ ಸಭೆಯಲ್ಲಿ ಕರ್ತನ ಸಂಧ್ಯಾ ಭೋಜನದ ವಿಷಯದಲ್ಲಿ ಒಂದು ಸಮಸ್ಯೆಯು ಉದ್ಭವಿಸಿತ್ತು. ಕೆಲವರು ಅದರ ಪಾವಿತ್ರ್ಯವನ್ನು ಗೌರವಿಸಲಿಲ್ಲ. ಅವರು ತಮ್ಮೊಂದಿಗೆ ರಾತ್ರಿಯೂಟವನ್ನು ತಂದು, ಕೂಟಕ್ಕೆ ಮೊದಲು ಅಥವಾ ಕೂಟದ ಸಮಯದಲ್ಲಿ ತಿಂದರು. ಅನೇಕವೇಳೆ ಅವರು ವಿಪರೀತವಾಗಿ ತಿಂದರು ಮತ್ತು ವಿಪರೀತವಾಗಿ ಕುಡಿದರು. ಇದು ಅವರನ್ನು ನಿದ್ರಾವಸ್ಥೆಯಲ್ಲಿರುವಂತೆ ಮಾಡಿತು ಮತ್ತು ಜ್ಞಾನೇಂದ್ರಿಯಗಳನ್ನು ಮಂಕುಗೊಳಿಸಿತು. ಮಾನಸಿಕವಾಗಿಯೂ ಆತ್ಮಿಕವಾಗಿಯೂ ಎಚ್ಚರವುಳ್ಳವರಾಗಿರದೆ ಇರುವ ಮೂಲಕ, ಅವರು “ದೇಹವೆಂದು ವಿವೇಚಿಸ”ಲು ಅಸಮರ್ಥರಾದರು ಮತ್ತು ಹೀಗೆ “ಕರ್ತನ ದೇಹಕ್ಕೂ ರಕ್ತಕ್ಕೂ ದ್ರೋಹಮಾಡಿದವ”ರಾಗಿ ಪರಿಣಮಿಸಿದರು. ಈ ಮಧ್ಯೆ, ರಾತ್ರಿಯೂಟ ಮಾಡದಿದ್ದವರು ಹಸಿವೆಯಿಂದಿದ್ದರು ಮತ್ತು ಅವರೂ ಅಪಕರ್ಷಿತರಾಗಿ ಪರಿಣಮಿಸಿದರು. ಅವರಲ್ಲಿ ಯಾರೊಬ್ಬರೂ ಕಾರ್ಯತಃ ಆ ಸಂದರ್ಭದ ಗಂಭೀರತೆಯ—ಆ ಆಚರಣೆಯು ಕರ್ತನ ಮರಣದ ಜ್ಞಾಪಕಾರ್ಥವಾಗಿದೆ ಎಂಬ—ಸಂಪೂರ್ಣ ಗ್ರಹಿಕೆಯಿಂದ ಮತ್ತು ಗಣ್ಯತೆಯೊಂದಿಗೆ, ಕುರುಹುಗಳಲ್ಲಿ ಪಾಲುತೆಗೆದುಕೊಳ್ಳುವಂತಹ ಸ್ಥಿತಿಯಲ್ಲಿ ಇರಲಿಲ್ಲ. ಇದು ಅವರ ವಿರುದ್ಧವಾದ ನ್ಯಾಯತೀರ್ಪಿನಲ್ಲಿ ಫಲಿಸಿತು, ಏಕೆಂದರೆ ಅವರು ಅದಕ್ಕಾಗಿ ಅಗೌರವವನ್ನು, ತಿರಸ್ಕಾರವನ್ನೂ ತೋರಿಸುತ್ತಿದ್ದರು.—1 ಕೊರಿಂಥ 11:27-34.
ವಿವೇಚನಾಶಕ್ತಿಯ ಅಗತ್ಯವಿದೆ
ಕೆಲವರು ಜ್ಞಾಪಕ ಕುರುಹುಗಳಲ್ಲಿ ಪಾಲುತೆಗೆದುಕೊಂಡಿರುವುದಾದರೂ, ತಾವು ಹಾಗೆ ಪಾಲುತೆಗೆದುಕೊಳ್ಳಬಾರದಿತ್ತೆಂಬುದನ್ನು ಅವರು ತದನಂತರ ಗ್ರಹಿಸಿದ್ದಾರೆ. ನ್ಯಾಯವಾಗಿ ಜ್ಞಾಪಕ ಕುರುಹುಗಳಲ್ಲಿ ಪಾಲುತೆಗೆದುಕೊಳ್ಳುವವರು ದೇವರಿಂದ ಆರಿಸಿಕೊಳ್ಳಲ್ಪಟ್ಟಿದ್ದಾರೆ ಮತ್ತು ಹಾಗಿರುವುದಕ್ಕೆ ಅವರಿಗೆ ದೇವರ ಆತ್ಮದ ಸಾಕ್ಷ್ಯವಿದೆ. (ರೋಮಾಪುರ 8:15-17; 2 ಕೊರಿಂಥ 1:21, 22) ಅವರನ್ನು ಅರ್ಹರನ್ನಾಗಿ ಮಾಡುವುದು, ಅವರ ವೈಯಕ್ತಿಕ ನಿರ್ಧಾರವಾಗಲಿ ದೃಢನಿರ್ಣಯವಾಗಲಿ ಆಗಿರುವುದಿಲ್ಲ. ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ ಆಳುವವರ ಸಂಖ್ಯೆಯನ್ನು ದೇವರು 1,44,000ಕ್ಕೆ ಪರಿಮಿತಗೊಳಿಸಿದ್ದಾನೆ; ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಿಂದ ಪ್ರಯೋಜನ ಪಡೆಯುತ್ತಿರುವವರೆಲ್ಲರೊಂದಿಗೆ ಹೋಲಿಸುವಾಗ ಇದು ಸಂಬಂಧಸೂಚಕವಾಗಿ ಒಂದು ಚಿಕ್ಕ ಸಂಖ್ಯೆಯಾಗಿದೆ. (ಪ್ರಕಟನೆ 14:1, 3) ಆ ಆಯ್ಕೆಯು ಯೇಸುವಿನ ದಿನದಲ್ಲಿ ಆರಂಭವಾಯಿತು, ಆದುದರಿಂದ ಪರಿಣಾಮವಾಗಿ ಇಂದು ಕೇವಲ ಕೆಲವೇ ಮಂದಿ ಪಾಲುದಾರರಿದ್ದಾರೆ. ಮತ್ತು ಅವರಲ್ಲಿ ಕೆಲವರ ಮೇಲೆ ಮರಣವು ಬರುವಾಗ, ಆ ಸಂಖ್ಯೆಯು ಕಡಿಮೆಯಾಗಬೇಕು.
ಒಬ್ಬನು ಕುರುಹುಗಳಲ್ಲಿ ತಪ್ಪಾಗಿ ಪಾಲುತೆಗೆದುಕೊಳ್ಳಬಹುದೇಕೆ? ಇದು ನಂಬಿಗಸ್ತ ವ್ಯಕ್ತಿಗಳೆಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆಂಬ ಹಿಂದಣ ಧಾರ್ಮಿಕ ನೋಟಗಳ ಕಾರಣದಿಂದಾಗಿರಬಹುದು. ಅಥವಾ ಅದು ಮಹತ್ವಾಕಾಂಕ್ಷೆ ಅಥವಾ ಸ್ವಾರ್ಥತೆಯ—ಒಬ್ಬನು ಇತರರಿಗಿಂತಲೂ ಹೆಚ್ಚು ಅರ್ಹತೆಯುಳ್ಳವನಾಗಿದ್ದಾನೆ ಎಂಬ ಭಾವನೆಯಿಂದ—ಮತ್ತು ಪ್ರಾಧಾನ್ಯದ ಅಪೇಕ್ಷೆಯ ಕಾರಣದಿಂದಾಗಿರಬಹುದು. ಗಂಭೀರವಾದ ಸಮಸ್ಯೆಗಳಿಂದ ಉದ್ಭವಿಸುತ್ತಿರುವ ಬಲವಾದ ಭಾವೋದ್ರೇಕಗಳಿಂದ ಅಥವಾ ಒಬ್ಬನು ಭೂಮಿಯ ಮೇಲಿನ ಜೀವಿತದಲ್ಲಿನ ಆಸಕ್ತಿಯನ್ನು ಕಳೆದುಕೊಳ್ಳುವಂತೆ ಮಾಡುವ ಒಂದು ದುರಂತದ ಫಲಿತಾಂಶದಿಂದಾಗಿರಬಹುದು. ಸ್ವರ್ಗದ ಕರೆಯೋಣವಿರುವ ಯಾರೊಂದಿಗಾದರೂ ನಿಕಟ ಗೆಳೆತನವಿರುವ ಕಾರಣದಿಂದಲೂ ಆಗಿರಬಹುದು. ನಿರ್ಣಯವು ನಮ್ಮದಲ್ಲ, ಸಂಪೂರ್ಣವಾಗಿ ದೇವರ ನಿರ್ಣಯವಾಗಿದೆ ಎಂಬುದನ್ನು ನಾವೆಲ್ಲರೂ ಜ್ಞಾಪಕದಲ್ಲಿಡಬೇಕಾದ ಅಗತ್ಯವಿದೆ. (ರೋಮಾಪುರ 9:16) ಆದುದರಿಂದ ವ್ಯಕ್ತಿಯೊಬ್ಬನು ತನ್ನನ್ನು ‘ಪರೀಕ್ಷಿಸಿಕೊಂಡ ಬಳಿಕ,’ ತಾನು ನಿಜವಾಗಿಯೂ ಕುರುಹುಗಳಲ್ಲಿ ಪಾಲುತೆಗೆದುಕೊಳ್ಳುತ್ತಿರಬಾರದಿತ್ತು ಎಂದು ಕಂಡುಕೊಳ್ಳುವುದಾದರೆ, ಅವನು ಈಗ ಅದನ್ನು ಬಿಟ್ಟುಬಿಡಬೇಕು.—1 ಕೊರಿಂಥ 11:28.
ಅಧಿಕಾಂಶ ಮಾನವಕುಲದ ಮುಂದೆ ದೇವರು ಇಟ್ಟಿರುವ ನಿರೀಕ್ಷೆಯು, ಒಂದು ಪ್ರಮೋದವನ ಭೂಮಿಯ ಮೇಲೆ ನಿತ್ಯ ಜೀವವಾಗಿದೆ. ನಿರೀಕ್ಷಿಸಲಿಕ್ಕಾಗಿ ಅದು ಒಂದು ಮಹಾ ಆಶೀರ್ವಾದವಾಗಿದೆ, ಮತ್ತು ನಾವು ಸುಲಭವಾಗಿ ಆಕರ್ಷಿತರಾಗಸಾಧ್ಯವಿರುವ ಒಂದು ನಿರೀಕ್ಷೆಯಾಗಿದೆ. (ಆದಿಕಾಂಡ 1:28; ಕೀರ್ತನೆ 37:9, 11) ಈ ಭೂಮಿಯ ಮೇಲೆ ನಂಬಿಗಸ್ತ ಜನರು, ಪುನರುತ್ಥಾನಹೊಂದುವ ತಮ್ಮ ಪ್ರಿಯ ಜನರೊಂದಿಗೆ ಪುನಃ ಐಕ್ಯಗೊಳಿಸಲ್ಪಡುವರು, ಮತ್ತು ಅಬ್ರಹಾಮ, ಸಾರ, ಮೋಶೆ, ರಾಹಾಬ, ದಾವೀದ, ಮತ್ತು ಸ್ನಾನಿಕನಾದ ಯೋಹಾನರಂತಹ ಪುರಾತನ ಕಾಲದ ನೀತಿವಂತರನ್ನು—ಯೇಸುವು ಸ್ವರ್ಗೀಯ ಜೀವಿತಕ್ಕೆ ಮಾರ್ಗವನ್ನು ತೆರೆಯುವುದಕ್ಕೆ ಮೊದಲು ಸತ್ತಿರುವವರೆಲ್ಲರನ್ನು—ಸಂಧಿಸಲಿರುವೆವು.—ಮತ್ತಾಯ 11:11; ಹೋಲಿಸಿರಿ 1 ಕೊರಿಂಥ 15:20-23.
ಐಹಿಕ ನಿರೀಕ್ಷೆಗಳಿರುವವರು, ರೊಟ್ಟಿ ಮತ್ತು ದ್ರಾಕ್ಷಾಮದ್ಯಗಳಲ್ಲಿ ಪಾಲುತೆಗೆದುಕೊಳ್ಳುವುದಿಲ್ಲವಾದರೂ, ತಮ್ಮ ಹಾಜರಿ ಮತ್ತು ಗೌರವಪೂರ್ಣವಾದ ಗಮನಕೊಡುವಿಕೆಯ ಮೂಲಕವಾಗಿ ಕರ್ತನ ಸಂಧ್ಯಾ ಭೋಜನವನ್ನು ಗೌರವಾರ್ಹವಾಗಿ ಆಚರಿಸುತ್ತಾರೆ. ಅವರೂ ಕ್ರಿಸ್ತನ ಯಜ್ಞದಿಂದ ಪ್ರಯೋಜನವನ್ನು ಪಡೆಯುತ್ತಾರೆ; ಇದು ಅವರನ್ನು ದೇವರ ಮುಂದೆ ಅನುಗ್ರಹಪಾತ್ರ ನಿಲುವನ್ನು ಪಡೆದುಕೊಳ್ಳಲು ಶಕ್ತರನ್ನಾಗಿ ಮಾಡುತ್ತದೆ. (ಪ್ರಕಟನೆ 7:14, 15) ಕೊಡಲ್ಪಡುವ ಭಾಷಣಕ್ಕೆ ಅವರು ಕಿವಿಗೊಟ್ಟಂತೆ, ಪವಿತ್ರ ವಿಷಯಗಳಿಗಾಗಿರುವ ಅವರ ಗಣ್ಯತೆಯು ಬಲಗೊಳಿಸಲ್ಪಡುತ್ತದೆ, ಮತ್ತು ಎಲ್ಲೆಲ್ಲಿಯೂ ಇರುವ ದೇವರ ಜನರೊಂದಿಗೆ ಐಕ್ಯದಿಂದ ಉಳಿಯಲಿಕ್ಕಾಗಿರುವ ಅವರ ಅಪೇಕ್ಷೆಯು ಬೆಳೆಯುತ್ತದೆ.
ಈ ವರ್ಷ, ಎಪ್ರಿಲ್ 2ರ ಮಂಗಳವಾರದಂದು, ಸೂರ್ಯಾಸ್ತಮಾನದ ನಂತರ, ಭೂಮಿಯಾದ್ಯಂತ ಇರುವ ಯೆಹೋವನ ಸಾಕ್ಷಿಗಳ 78,000ಕ್ಕಿಂತಲೂ ಹೆಚ್ಚಿನ ಎಲ್ಲಾ ಸಭೆಗಳಲ್ಲಿ ಜ್ಞಾಪಕವು ಆಚರಿಸಲ್ಪಡಲಿರುವುದು. ನೀವೂ ಹಾಜರಿಯಲ್ಲಿರುವಿರೊ?
[ಪಾದಟಿಪ್ಪಣಿ]
a ಯೆಹೂದಿ ದಿನವು ಸಾಯಂಕಾಲದಲ್ಲಿ ಆರಂಭವಾಯಿತು. ನಮ್ಮ ಕ್ಯಾಲೆಂಡರಿಗನುಸಾರ, ಆ ನೈಸಾನ್ 14 ಮಾರ್ಚ್ 31ರ ಮಂಗಳವಾರದ ಸಾಯಂಕಾಲದ ಆರಂಭದಿಂದ, ಎಪ್ರಿಲ್ 1ರ ಶುಕ್ರವಾರದ ಸೂರ್ಯಾಸ್ತಮಾನದ ವರೆಗೂ ಮುಂದುವರಿಯಿತು. ಜ್ಞಾಪಕವು ಗುರುವಾರ ಸಾಯಂಕಾಲದಂದು ನಡೆಸಲ್ಪಟ್ಟಿತು, ಮತ್ತು ಅದೇ ಯೆಹೂದಿ ದಿನದ ಶುಕ್ರವಾರ ಮಧ್ಯಾಹ್ನದಂದು ಯೇಸುವಿನ ಮರಣವು ಸಂಭವಿಸಿತು. ಆತನು ಮೂರನೆಯ ದಿನದಲ್ಲಿ—ಆದಿತ್ಯವಾರ ಮುಂಜಾವಿನಲ್ಲಿ—ಪುನರುತ್ಥಾನಗೊಳಿಸಲ್ಪಟ್ಟನು.
[ಪುಟ 8 ರಲ್ಲಿರುವ ಚಿತ್ರ]
ಯೆಹೋವನ ಸಾಕ್ಷಿಗಳು ಪ್ರತಿ ವರ್ಷಕ್ಕೆ ಒಮ್ಮೆ ಜ್ಞಾಪಕವನ್ನು ಆಚರಿಸುತ್ತಾರೆ