ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w96 9/1 ಪು. 14-19
  • ಕ್ರಿಸ್ತನ ಧರ್ಮಶಾಸ್ತ್ರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕ್ರಿಸ್ತನ ಧರ್ಮಶಾಸ್ತ್ರ
  • ಕಾವಲಿನಬುರುಜು—1996
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹೊಸ ಒಡಂಬಡಿಕೆ
  • ಬಿಡುಗಡೆಗೆ ಸಂಬಂಧಿಸಿದ ಧರ್ಮಶಾಸ್ತ್ರ
  • ಯೇಸು ಮತ್ತು ಫರಿಸಾಯರು
  • ಕ್ರಿಸ್ತನ ನಿಯಮವು ಸ್ವಚ್ಛಂದವಾಗಿದೆಯೊ?
  • ಕ್ರಿಸ್ತನ ನಿಯಮವನ್ನು ಕ್ರೈಸ್ತಪ್ರಪಂಚವು ಮಲಿನಗೊಳಿಸುತ್ತದೆ
  • ಕ್ರೈಸ್ತಪ್ರಪಂಚದ ದೋಷಗಳಿಂದ ಕಲಿಯುವುದು
  • ಕ್ರಿಸ್ತನಿಗೆ ಪೂರ್ವದ ಧರ್ಮಶಾಸ್ತ್ರ
    ಕಾವಲಿನಬುರುಜು—1996
  • “ಯೆಹೋವನ ಧರ್ಮಶಾಸ್ತ್ರವು ಲೋಪವಿಲ್ಲದ್ದು”
    ಯೆಹೋವನ ಸಮೀಪಕ್ಕೆ ಬನ್ನಿರಿ
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಕ್ರಿಸ್ತನ ನಿಯಮಕ್ಕನುಸಾರ ಜೀವಿಸುವುದು
    ಕಾವಲಿನಬುರುಜು—1996
ಇನ್ನಷ್ಟು
ಕಾವಲಿನಬುರುಜು—1996
w96 9/1 ಪು. 14-19

ಕ್ರಿಸ್ತನ ಧರ್ಮಶಾಸ್ತ್ರ

“ನಾನು . . . ಕ್ರಿಸ್ತನ ನಿಯಮಕ್ಕೊಳಗಾದವನೇ.”—1 ಕೊರಿಂಥ 9:21.

1, 2. (ಎ) ಮಾನವಕುಲದ ತಪ್ಪುಗಳಲ್ಲಿ ಅನೇಕ ತಪ್ಪುಗಳನ್ನು ಹೇಗೆ ತಡೆಗಟ್ಟಸಾಧ್ಯವಿದೆ? (ಬಿ) ಕ್ರೈಸ್ತಪ್ರಪಂಚವು ಯೆಹೂದ್ಯಮತದಿಂದ ಏನನ್ನು ಕಲಿಯುವುದರಲ್ಲಿ ವಿಫಲಗೊಂಡಿದೆ?

“ಜನರು ಮತ್ತು ಸರಕಾರಗಳು ಎಂದೂ ಇತಿಹಾಸದಿಂದ ಯಾವುದೇ ವಿಷಯವನ್ನೂ ಕಲಿತುಕೊಂಡಿಲ್ಲ, ಅಥವಾ ಅದರಿಂದ ನಿರೂಪಿಸಲ್ಪಟ್ಟ ಮೂಲತತ್ವಗಳಿಗನುಸಾರವಾಗಿ ಕಾರ್ಯನಿರ್ವಹಿಸಿಲ್ಲ.” ಹೀಗೆ 19ನೆಯ ಶತಮಾನದ ಜರ್ಮನ್‌ ತತ್ವಜ್ಞಾನಿಯೊಬ್ಬನು ಹೇಳಿದನು. ವಾಸ್ತವವಾಗಿ, ಮಾನವ ಇತಿಹಾಸದ ಪಥವು, ಒಂದು “ಮೂರ್ಖತನದ ಮುನ್ನಡೆ”ಯಾಗಿ, ಕರಾಳ ಪ್ರಮಾದಗಳು ಮತ್ತು ಬಿಕ್ಕಟ್ಟುಗಳ ಒಂದು ಸರಣಿಯಾಗಿ ವರ್ಣಿಸಲ್ಪಟ್ಟಿದೆ; ಮಾನವಕುಲವು ಗತಕಾಲದ ತಪ್ಪುಗಳಿಂದ ಕಲಿಯಲು ಸಿದ್ಧವಾಗಿರುತ್ತಿದ್ದಲ್ಲಿ ಮಾತ್ರವೇ ಅವುಗಳಲ್ಲಿ ಹೆಚ್ಚಿನವುಗಳನ್ನು ತಡೆಗಟ್ಟಸಾಧ್ಯವಿತ್ತು.

2 ಗತಕಾಲದ ತಪ್ಪುಗಳಿಂದ ಕಲಿಯಲು ತೋರಿಸಿದ್ದಂತಹದ್ದೇ ನಿರಾಕರಣೆಯು, ದೈವಿಕ ನಿಯಮದ ಈ ಚರ್ಚೆಯಲ್ಲಿ ಚಿತ್ರಿಸಲ್ಪಟ್ಟಿದೆ. ಯೆಹೋವ ದೇವರು ಮೋಶೆಯ ಧರ್ಮಶಾಸ್ತ್ರವನ್ನು ಇನ್ನೂ ಹೆಚ್ಚು ಉತ್ತಮವಾದ ಒಂದು ಧರ್ಮಶಾಸ್ತ್ರದಿಂದ, ಕ್ರಿಸ್ತನ ನಿಯಮದಿಂದ ಪುನರ್‌ಭರ್ತಿಮಾಡಿದನು. ಆದರೂ, ಈ ನಿಯಮವನ್ನು ಕಲಿಸುತ್ತೇವೆ ಹಾಗೂ ಈ ನಿಯಮಕ್ಕನುಸಾರವಾಗಿ ಜೀವಿಸುತ್ತೇವೆ ಎಂದು ಪ್ರತಿಪಾದಿಸುವ ಕ್ರೈಸ್ತಪ್ರಪಂಚದ ಮುಖಂಡರು, ಫರಿಸಾಯರ ವಿಪರೀತ ಮೂರ್ಖತನದಿಂದ ಕಲಿಯುವುದರಲ್ಲಿ ವಿಫಲರಾಗಿದ್ದಾರೆ. ಆದುದರಿಂದ ಯೆಹೂದ್ಯಮತವು ಮೋಶೆಯ ಧರ್ಮಶಾಸ್ತ್ರವನ್ನು ತಿರುಚಿ, ಅಪಪ್ರಯೋಗಿಸಿದಂತೆಯೇ, ಕ್ರೈಸ್ತಪ್ರಪಂಚವು ಕ್ರಿಸ್ತನ ನಿಯಮವನ್ನು ತಿರುಚಿ, ಅದನ್ನು ಅಪಪ್ರಯೋಗಿಸಿದೆ. ಅದು ಹೇಗೆ ಸಾಧ್ಯ? ಮೊದಲಾಗಿ, ನಾವು ಕ್ರಿಸ್ತನ ನಿಯಮದ ಕುರಿತಾಗಿ, ಅದು ಏನಾಗಿದೆ, ಅದು ಯಾರನ್ನು ನಿಯಂತ್ರಿಸುತ್ತದೆ ಮತ್ತು ಹೇಗೆ ನಿಯಂತ್ರಿಸುತ್ತದೆ, ಹಾಗೂ ಮೋಶೆಯ ಧರ್ಮಶಾಸ್ತ್ರದಿಂದ ಇದನ್ನು ಯಾವುದು ಭಿನ್ನವಾಗಿರಿಸುತ್ತದೆ ಎಂಬುದನ್ನು ಚರ್ಚಿಸೋಣ. ತದನಂತರ ಕ್ರೈಸ್ತಪ್ರಪಂಚವು ಇದನ್ನು ಹೇಗೆ ಅಪಪ್ರಯೋಗಿಸಿದೆ ಎಂಬುದನ್ನು ನಾವು ಪರೀಕ್ಷಿಸುವೆವು. ಹೀಗೆ ನಾವು ಇತಿಹಾಸದಿಂದ ಕಲಿತುಕೊಂಡು, ಅದರಿಂದ ಪ್ರಯೋಜನವನ್ನು ಪಡೆದುಕೊಳ್ಳೋಣ!

ಹೊಸ ಒಡಂಬಡಿಕೆ

3. ಯೆಹೋವನು ಹೊಸ ಒಡಂಬಡಿಕೆಯೊಂದರ ಕುರಿತಾಗಿ ಯಾವ ವಾಗ್ದಾನವನ್ನು ಮಾಡಿದನು?

3 ಯೆಹೋವ ದೇವರಲ್ಲದೆ ಇನ್ನಾರು ಒಂದು ಪರಿಪೂರ್ಣ ಧರ್ಮಶಾಸ್ತ್ರವನ್ನು ಉತ್ತಮಗೊಳಿಸಸಾಧ್ಯವಿದೆ? ಮೋಶೆಯ ಧರ್ಮಶಾಸ್ತ್ರದೊಡಂಬಡಿಕೆಯು ಪರಿಪೂರ್ಣವಾಗಿತ್ತು. (ಕೀರ್ತನೆ 19:7) ಇದರ ಹೊರತಾಗಿಯೂ, ಯೆಹೋವನು ವಾಗ್ದಾನಿಸಿದ್ದು: “ಇಗೋ, ನಾನು ಇಸ್ರಾಯೇಲ್‌ ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು; ಈ ಒಡಂಬಡಿಕೆಯು ನಾನು ಇವರ ಪಿತೃಗಳನ್ನು . . . ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯಂಥದಲ್ಲ.” ಮೋಶೆಯ ಧರ್ಮಶಾಸ್ತ್ರದ ಕೇಂದ್ರವಾಗಿದ್ದಂತಹ ದಶಾಜ್ಞೆಗಳು, ಕಲ್ಲಿನ ಫಲಕಗಳ ಮೇಲೆ ಬರೆಯಲ್ಪಟ್ಟಿದ್ದವು. ಹೊಸ ಒಡಂಬಡಿಕೆಯ ಕುರಿತಾಗಿಯಾದರೋ ಯೆಹೋವನು ಹೇಳಿದ್ದು: “ನನ್ನ ಧರ್ಮೋಪದೇಶ [“ನಿಯಮ,” NW]ವನ್ನು ಅವರ ಅಂತರಂಗದಲ್ಲಿ ಇಡುವೆನು, ಅವರ ಹೃದಯದೊಳಗೆ ಅದನ್ನು ಬರೆಯುವೆನು.”—ಯೆರೆಮೀಯ 31:31-34.

4. (ಎ) ಹೊಸ ಒಡಂಬಡಿಕೆಯಲ್ಲಿ ಯಾವ ಇಸ್ರಾಯೇಲ್‌ ಒಳಗೊಂಡಿದೆ? (ಬಿ) ಆತ್ಮಿಕ ಇಸ್ರಾಯೇಲ್ಯರಲ್ಲದೆ ಮತ್ತಾರು ಕ್ರಿಸ್ತನ ನಿಯಮದ ಕೆಳಗಿದ್ದಾರೆ?

4 ಈ ಹೊಸ ಒಡಂಬಡಿಕೆಯೊಳಗೆ ಯಾರು ತೆಗೆದುಕೊಳ್ಳಲ್ಪಡುವರು? ನಿಶ್ಚಯವಾಗಿಯೂ ಈ ಒಡಂಬಡಿಕೆಯ ಮಧ್ಯಸ್ಥಗಾರನನ್ನು ತಿರಸ್ಕರಿಸಿದಂತಹ, ಅಕ್ಷರಶಃ “ಇಸ್ರಾಯೇಲ್‌ ಮನೆತನ”ವಲ್ಲ. (ಇಬ್ರಿಯ 9:15, NW) ಇಲ್ಲ, ಈ ಹೊಸ “ಇಸ್ರಾಯೇಲ್‌” (NW), ಆತ್ಮಿಕ ಇಸ್ರಾಯೇಲ್ಯರ ಒಂದು ಜನಾಂಗವಾದ ‘ದೇವರ ಇಸ್ರಾಯೇಲ್‌’ ಆಗಿರಲಿತ್ತು. (ಗಲಾತ್ಯ 6:16; ರೋಮಾಪುರ 2:28, 29) ಕ್ರೈಸ್ತರ ಈ ಚಿಕ್ಕ, ಆತ್ಮಾಭಿಷಿಕ್ತ ಗುಂಪು, ತದನಂತರ ಯೆಹೋವನನ್ನು ಆರಾಧಿಸಲು ಪ್ರಯತ್ನಿಸುವ, ಎಲ್ಲಾ ಜನಾಂಗಗಳಿಂದ ಬಂದ “ಮಹಾ ಸಮೂಹ”ದೊಂದಿಗೆ ಜತೆಗೂಡಲಿತ್ತು. (ಪ್ರಕಟನೆ 7:9, 10; ಜೆಕರ್ಯ 8:23) ಹೊಸ ಒಡಂಬಡಿಕೆಯಲ್ಲಿ ಭಾಗವಹಿಸದಿದ್ದರೂ, ಈ ಮಹಾ ಸಮೂಹದವರೂ ನಿಯಮದ ಹಂಗಿಗೆ ಒಳಗಾಗಲಿದ್ದರು. (ಹೋಲಿಸಿರಿ ಯಾಜಕಕಾಂಡ 24:22; ಅರಣ್ಯಕಾಂಡ 15:15.) ಅಪೊಸ್ತಲ ಪೌಲನು ಬರೆದಂತೆ, ಅವರೆಲ್ಲರೂ “ಒಬ್ಬನೇ ಕುರುಬ”ನ ಕೆಳಗಿರುವ ‘ಒಂದೇ ಹಿಂಡಿ’ನೋಪಾದಿ, “ಕ್ರಿಸ್ತನ ನಿಯಮಕ್ಕೊಳ”ಗಾಗಲಿದ್ದರು. (ಯೋಹಾನ 10:16; 1 ಕೊರಿಂಥ 9:21) ಪೌಲನು ಈ ಹೊಸ ಒಡಂಬಡಿಕೆಯನ್ನು ಒಂದು “ಉತ್ತಮವಾದ ಒಡಂಬಡಿಕೆ” ಎಂದು ಕರೆದನು. ಏಕೆ? ಒಂದು ಕಾರಣವೇನಂದರೆ, ಬರಲಿಕ್ಕಿರುವ ವಿಷಯಗಳ ಮುನ್‌ಛಾಯೆಗಳಿಗೆ ಬದಲಾಗಿ, ಇದು ನೆರವೇರಿಸಲ್ಪಟ್ಟ ವಾಗ್ದಾನಗಳ ಮೇಲೆ ಆಧಾರಿತವಾಗಿದೆ.—ಇಬ್ರಿಯ 8:6; 9:11-14.

5. ಹೊಸ ಒಡಂಬಡಿಕೆಯ ಉದ್ದೇಶವೇನಾಗಿದೆ, ಮತ್ತು ಅದು ಏಕೆ ಯಶಸ್ವಿಯಾಗುವುದು?

5 ಈ ಒಡಂಬಡಿಕೆಯ ಉದ್ದೇಶವೇನಾಗಿದೆ? ಸರ್ವ ಮಾನವಕುಲವನ್ನು ಆಶೀರ್ವದಿಸಲಿಕ್ಕಾಗಿ ರಾಜರನ್ನೂ ಯಾಜಕರನ್ನೂ ಒಳಗೊಂಡ ಒಂದು ಜನಾಂಗವನ್ನು ಉತ್ಪಾದಿಸುವುದೇ ಆಗಿದೆ. (ವಿಮೋಚನಕಾಂಡ 19:6; 1 ಪೇತ್ರ 2:9; ಪ್ರಕಟನೆ 5:10) ಮೋಶೆಯ ಧರ್ಮಶಾಸ್ತ್ರದೊಡಂಬಡಿಕೆಯು ಈ ಜನಾಂಗವನ್ನು, ಯೆಹೋವನು ಪ್ರವಾದಿಸಿದಂತಹ ಅರ್ಥದಲ್ಲಿ ಎಂದಿಗೂ ಉತ್ಪಾದಿಸಲಿಲ್ಲ, ಏಕೆಂದರೆ ಇಸ್ರಾಯೇಲ್‌ ಒಂದು ಜನಾಂಗದೋಪಾದಿ ದಂಗೆಯೆದ್ದಿತು, ಮತ್ತು ಅವರು ತಮ್ಮ ಸದವಕಾಶವನ್ನು ಕಳೆದುಕೊಂಡರು. (ಹೋಲಿಸಿರಿ ರೋಮಾಪುರ 11:17-21.) ಹಾಗಿದ್ದರೂ, ಹೊಸ ಒಡಂಬಡಿಕೆಯು ಯಶಸ್ವಿಗೊಳ್ಳುವುದು ಖಂಡಿತವಾಗಿದೆ, ಏಕೆಂದರೆ ಇದು ತೀರ ವಿಭಿನ್ನವಾದ ಒಂದು ನಿಯಮದೊಂದಿಗೆ ಜೊತೆಗೂಡಿಸಲ್ಪಟ್ಟಿದೆ. ಯಾವ ವಿಧಗಳಲ್ಲಿ ವಿಭಿನ್ನವಾಗಿದೆ?

ಬಿಡುಗಡೆಗೆ ಸಂಬಂಧಿಸಿದ ಧರ್ಮಶಾಸ್ತ್ರ

6, 7. ಮೋಶೆಯ ಧರ್ಮಶಾಸ್ತ್ರವು ಒದಗಿಸಿದ್ದಕ್ಕಿಂತಲೂ, ಯೇಸುವಿನ ನಿಯಮವು ಹೇಗೆ ಹೆಚ್ಚು ಮಹತ್ತಾದ ಬಿಡುಗಡೆಯನ್ನು ಒದಗಿಸುತ್ತದೆ?

6 ಕ್ರಿಸ್ತನ ನಿಯಮವು ಪದೇ ಪದೇ ಬಿಡುಗಡೆಯೊಂದಿಗೆ ಸಂಬಂಧವನ್ನು ಹೊಂದಿದೆ. (ಯೋಹಾನ 8:31, 32) ಅದು “ಸ್ವತಂತ್ರ ಜನರ ನಿಯಮ”ದೋಪಾದಿ ಮತ್ತು “ಬಿಡುಗಡೆಗೆ ಸಂಬಂಧಿಸಿದ ಪರಿಪೂರ್ಣ ನಿಯಮ”ದೋಪಾದಿ ನಿರ್ದೇಶಿಸಲ್ಪಟ್ಟಿದೆ. (ಯಾಕೋಬ 1:25, NW; 2:12, NW) ನಿಶ್ಚಯವಾಗಿ, ಮಾನವರ ನಡುವಿನ ಎಲ್ಲಾ ಬಿಡುಗಡೆಯು ಸಂಬಂಧಿತವಾಗಿದೆ. ಆದರೂ, ಈ ನಿಯಮವು ತನ್ನ ಪೂರ್ವಭಾವಿಯಾದ ಮೋಶೆಯ ಧರ್ಮಶಾಸ್ತ್ರಕ್ಕಿಂತಲೂ ಬಹಳ ಮಹತ್ವದ ಬಿಡುಗಡೆಯನ್ನು ಒದಗಿಸುತ್ತದೆ. ಅದು ಹೇಗೆ?

7 ಒಂದು ಉದಾಹರಣೆಯೋಪಾದಿ, ಯಾರೊಬ್ಬರೂ ಕ್ರಿಸ್ತನ ನಿಯಮದ ಕೆಳಗೆ ಜನಿಸಿರುವುದಿಲ್ಲ. ಕುಲ ಮತ್ತು ಜನ್ಮ ಸ್ಥಳಗಳಂತಹ ಅಂಶಗಳು, ಅಸಂಬದ್ಧವಾಗಿವೆ. ಸತ್ಯ ಕ್ರೈಸ್ತರು, ಈ ನಿಯಮಕ್ಕೆ ತೋರಿಸಬೇಕಾದ ವಿಧೇಯತೆಯ ನೊಗವನ್ನು ತಮ್ಮ ಹೃದಯಗಳಲ್ಲಿ ಅಂಗೀಕರಿಸಲು ಇಷ್ಟಪೂರ್ವಕವಾಗಿ ಆಯ್ಕೆಮಾಡಿಕೊಳ್ಳುತ್ತಾರೆ. ಹಾಗೆ ಮಾಡುವುದರಿಂದಾಗಿ, ಅದು ಒಂದು ದಯಾಪೂರ್ಣವಾದ ನೊಗ, ಒಂದು ಹಗುರವಾದ ಹೊರೆಯಾಗಿದೆ ಎಂಬುದನ್ನು ಅವರು ಕಂಡುಕೊಳ್ಳುತ್ತಾರೆ. (ಮತ್ತಾಯ 11:28-30) ಎಷ್ಟೆಂದರೂ, ಮೋಶೆಯ ಧರ್ಮಶಾಸ್ತ್ರವು, ಮನುಷ್ಯನು ಪಾಪಪೂರ್ಣನಾಗಿದ್ದಾನೆ ಮತ್ತು ಅವನನ್ನು ವಿಮೋಚಿಸಲಿಕ್ಕಾಗಿ ಒಂದು ವಿಮೋಚನಾ ಯಜ್ಞದ ಅತ್ಯಗತ್ಯವಾದ ಆವಶ್ಯಕತೆ ಇದೆ ಎಂಬುದನ್ನು ಕಲಿಸಲಿಕ್ಕಾಗಿಯೂ ವಿನ್ಯಾಸಿಸಲ್ಪಟ್ಟಿತ್ತು. (ಗಲಾತ್ಯ 3:19) ಕ್ರಿಸ್ತನ ನಿಯಮವಾದರೋ, ಮೆಸ್ಸೀಯನು ಬಂದಿದ್ದಾನೆ, ತನ್ನ ಜೀವವನ್ನು ಕೊಡುವುದರೊಂದಿಗೆ ವಿಮೋಚನೆಯ ಬೆಲೆಯನ್ನು ತೆತ್ತಿದ್ದಾನೆ, ಮತ್ತು ಪಾಪ ಹಾಗೂ ಮರಣಗಳ ಭೀಕರ ದಬ್ಬಾಳಿಕೆಯಿಂದ ಸ್ವತಂತ್ರರಾಗಿರುವಂತೆ ನಮಗಾಗಿ ಮಾರ್ಗವನ್ನು ತೆರೆದಿದ್ದಾನೆ ಎಂಬುದನ್ನು ಕಲಿಸಿತು! (ರೋಮಾಪುರ 5:20, 21) ಪ್ರಯೋಜನವನ್ನು ಪಡೆದುಕೊಳ್ಳಲಿಕ್ಕಾಗಿ, ನಾವು ಆ ಯಜ್ಞದಲ್ಲಿ ‘ನಂಬಿಕೆಯನ್ನು ಅಭ್ಯಾಸಿಸುವ’ ಅಗತ್ಯವಿದೆ.—ಯೋಹಾನ 3:16, NW.

8. ಕ್ರಿಸ್ತನ ನಿಯಮದಲ್ಲಿ ಏನು ಒಳಗೂಡಿರುತ್ತದೆ, ಆದರೆ ಅದಕ್ಕನುಸಾರ ಜೀವಿಸುವುದು, ಶಾಸನಬದ್ಧವಾದ ನೂರಾರು ಲಿಖಿತ ಕಟ್ಟುಪಾಡುಗಳನ್ನು ಬಾಯಿಪಾಠಮಾಡುವುದನ್ನು ಅಗತ್ಯಪಡಿಸುವುದಿಲ್ಲವೇಕೆ?

8 “ನಂಬಿಕೆಯನ್ನು ಅಭ್ಯಾಸಿಸುವುದು,” ಕ್ರಿಸ್ತನ ನಿಯಮಕ್ಕನುಸಾರ ಜೀವಿಸುವುದನ್ನು ಒಳಗೊಂಡಿದೆ. ಅದು ಕ್ರಿಸ್ತನ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗುವುದನ್ನು ಒಳಗೊಳ್ಳುತ್ತದೆ. ನೂರಾರು ನಿಯಮಗಳನ್ನೂ ಲಿಖಿತ ಕಟ್ಟಳೆಗಳನ್ನೂ ಬಾಯಿಪಾಠಮಾಡುವುದನ್ನು ಇದು ಅರ್ಥೈಸುತ್ತದೊ? ಇಲ್ಲ. ಮೋಶೆಯ ಧರ್ಮಶಾಸ್ತ್ರವನ್ನು ಹಳೆಯ ಒಡಂಬಡಿಕೆಯ ಮಧ್ಯಸ್ಥಗಾರನಾದ ಮೋಶೆಯು ಬರೆದನಾದರೂ, ಹೊಸ ಒಡಂಬಡಿಕೆಯ ಮಧ್ಯಸ್ಥಗಾರನಾದ ಯೇಸು, ಒಂದೇ ಒಂದು ನಿಯಮವನ್ನು ಎಂದೂ ಬರೆಯಲಿಲ್ಲ. ಅದಕ್ಕೆ ಬದಲಾಗಿ, ಅವನು ಈ ನಿಯಮಕ್ಕನುಗುಣವಾಗಿ ಜೀವಿಸಿದನು. ತನ್ನ ಪರಿಪೂರ್ಣ ಜೀವನರೀತಿಯ ಮೂಲಕವಾಗಿ, ನಾವೆಲ್ಲರೂ ಅವನನ್ನು ಹಿಂಬಾಲಿಸುವಂತೆ ನಮಗಾಗಿ ಒಂದು ಮಾದರಿಯನ್ನು ಸ್ಥಾಪಿಸಿದನು. (1 ಪೇತ್ರ 2:21) ಬಹುಶಃ ಆದುದರಿಂದಲೇ ಆರಂಭದ ಕ್ರೈಸ್ತ ಆರಾಧನೆಯು “ಮಾರ್ಗ”ವಾಗಿ ಸೂಚಿಸಲ್ಪಟ್ಟಿತು. (ಅ. ಕೃತ್ಯಗಳು 9:2; 19:9, 23; 22:4; 24:22) ಅವರಿಗೆ ಕ್ರಿಸ್ತನ ನಿಯಮವು, ಕ್ರಿಸ್ತನ ಜೀವಿತದಲ್ಲಿ ದೃಷ್ಟಾಂತಿಸಲ್ಪಟ್ಟಿತು. ಯೇಸುವನ್ನು ಅನುಕರಿಸುವುದು, ಈ ನಿಯಮಕ್ಕೆ ವಿಧೇಯರಾಗುವುದನ್ನು ಅರ್ಥೈಸಿತು. ಪ್ರವಾದಿಸಲ್ಪಟ್ಟಂತೆ, ಆತನ ಕಡೆಗಿನ ಅವರ ಗಾಢವಾದ ಪ್ರೀತಿಯು, ಈ ನಿಯಮವು ನಿಜವಾಗಿಯೂ ತಮ್ಮ ಹೃದಯಗಳ ಮೇಲೆ ಬರೆಯಲ್ಪಟ್ಟಿತೆಂಬುದನ್ನು ಅರ್ಥೈಸಿತು. (ಯೆರೆಮೀಯ 31:33; 1 ಪೇತ್ರ 4:8) ಮತ್ತು ಪ್ರೀತಿಯ ಕಾರಣದಿಂದ, ವಿಧೇಯನಾಗಿರುವ ಒಬ್ಬನು, ದಬ್ಬಾಳಿಕೆಗೊಳಗಾಗಿದ್ದೇನೆಂದು ಎಂದಿಗೂ ಭಾವಿಸುವುದಿಲ್ಲ. ಕ್ರಿಸ್ತನ ನಿಯಮವನ್ನು “ಸ್ವತಂತ್ರ ಜನರ ನಿಯಮ”ವೆಂದು ಕರೆಯಲ್ಪಡಬಹುದಾಗಿರುವುದಕ್ಕೆ ಇದು ಇನ್ನೊಂದು ಕಾರಣವಾಗಿದೆ.

9. ಕ್ರಿಸ್ತನ ನಿಯಮದ ಸಾರವೇನಾಗಿದೆ, ಮತ್ತು ಯಾವ ವಿಧದಲ್ಲಿ ಈ ನಿಯಮವು ಒಂದು ಹೊಸ ಆಜ್ಞೆಯನ್ನು ಒಳಗೊಂಡಿದೆ?

9 ಮೋಶೆಯ ಧರ್ಮಶಾಸ್ತ್ರದಲ್ಲಿ ಪ್ರೀತಿಯು ಪ್ರಮುಖವಾದ ವಿಷಯವಾಗಿರುವುದಾದರೆ, ಕ್ರೈಸ್ತ ನಿಯಮದ ಸಾರವೇ ಪ್ರೀತಿಯಾಗಿದೆ. ಹೀಗೆ ಕ್ರಿಸ್ತನ ನಿಯಮವು ಒಂದು ಹೊಸ ಆಜ್ಞೆಯನ್ನು—ಕ್ರೈಸ್ತರಲ್ಲಿ ಒಬ್ಬರಿಗೊಬ್ಬರ ಮೇಲೆ ಸ್ವತ್ಯಾಗದ ಪ್ರೀತಿಯು ಇರಬೇಕೆಂಬುದನ್ನು—ಒಳಗೂಡುತ್ತದೆ. ಯೇಸು ಪ್ರೀತಿಸಿದಂತೆಯೇ ಅವರೂ ಪ್ರೀತಿಸಬೇಕು; ಅವನು ತನ್ನ ಸ್ನೇಹಿತರ ಪರವಾಗಿ ಮನಃಪೂರ್ವಕವಾಗಿ ತನ್ನ ಜೀವವನ್ನು ಕೊಟ್ಟುಬಿಟ್ಟನು. (ಯೋಹಾನ 13:34, 35; 15:13) ಆದುದರಿಂದ ಮೋಶೆಯ ಧರ್ಮಶಾಸ್ತ್ರಕ್ಕಿಂತಲೂ, ಕ್ರಿಸ್ತನ ನಿಯಮವು ದೇವಪ್ರಭುತ್ವದ ಇನ್ನೂ ಹೆಚ್ಚಿನ ಉದಾತ್ತ ಅಭಿವ್ಯಕ್ತಿಯಾಗಿದೆಯೆಂದು ಹೇಳಬಹುದಾಗಿದೆ. ಈ ಪತ್ರಿಕೆಯು ಈ ಮುಂಚೆಯೇ ಸೂಚಿಸಿರುವಂತೆ, “ದೇವಪ್ರಭುತ್ವವು ದೇವರಿಂದ ನಡೆಸಲ್ಪಡುವ ಆಳ್ವಿಕೆಯಾಗಿದೆ; ದೇವರು ಪ್ರೀತಿಸ್ವರೂಪಿಯಾಗಿದ್ದಾನೆ; ಆದುದರಿಂದಲೇ ದೇವಪ್ರಭುತ್ವವು ಪ್ರೀತಿಯಿಂದ ನಡೆಸಲ್ಪಡುವ ಆಳ್ವಿಕೆಯಾಗಿದೆ.”

ಯೇಸು ಮತ್ತು ಫರಿಸಾಯರು

10. ಫರಿಸಾಯರ ಕಲಿಸುವಿಕೆಗಿಂತಲೂ ಯೇಸುವಿನ ಕಲಿಸುವಿಕೆಯು ಹೇಗೆ ವ್ಯತಿರಿಕ್ತವಾಗಿತ್ತು?

10 ಆದುದರಿಂದ, ಯೇಸು ತನ್ನ ದಿನದ ಯೆಹೂದಿ ಧಾರ್ಮಿಕ ಮುಖಂಡರೊಂದಿಗೆ ಸಂಘರ್ಷಕ್ಕೊಳಗಾದದ್ದು, ಆಶ್ಚರ್ಯಕರವಾದ ವಿಷಯವಾಗಿರುವುದಿಲ್ಲ. “ಬಿಡುಗಡೆಗೆ ಸಂಬಂಧಿಸಿದ ಪರಿಪೂರ್ಣ ನಿಯಮ”ವು, ಶಾಸ್ತ್ರಿಗಳು ಹಾಗೂ ಫರಿಸಾಯರ ಮನಸ್ಸುಗಳಲ್ಲಿ ಎಂದೂ ಪ್ರವೇಶಿಸಲಿಲ್ಲ. ಅವರು ಮಾನವ ನಿರ್ಮಿತ ಕಟ್ಟಳೆಗಳ ಮೂಲಕ ಜನರನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಅವರ ಕಲಿಸುವಿಕೆಯು ದಬ್ಬಾಳಿಕೆಭರಿತವಾದದ್ದೂ, ನಿಂದಾತ್ಮಕವಾದದ್ದೂ, ನಕಾರಾತ್ಮಕವಾದದ್ದೂ ಆಗಿ ಪರಿಣಮಿಸಿತು. ವ್ಯತಿರಿಕ್ತವಾಗಿ, ಯೇಸುವಿನ ಕಲಿಸುವಿಕೆಯು ಅತ್ಯಧಿಕವಾಗಿ ಭಕ್ತಿವೃದ್ಧಿಯನ್ನುಂಟುಮಾಡುವಂತಹದ್ದೂ ಸಕಾರಾತ್ಮಕವಾದದ್ದೂ ಆಗಿತ್ತು! ಅವನು ಪ್ರಾಯೋಗಿಕನಾಗಿದ್ದನು ಮತ್ತು ಜನರ ನೈಜ ಆವಶ್ಯಕತೆಗಳು ಹಾಗೂ ಚಿಂತೆಗಳನ್ನು ಸಂಬೋಧಿಸಿದನು. ಅವನು ಸರಳವಾಗಿ, ಮತ್ತು ಯಥಾರ್ಥವಾದ ಭಾವನೆಯಿಂದ, ದೈನಂದಿನ ಜೀವಿತದ ಸಾಮ್ಯಗಳಿಂದ, ಮತ್ತು ದೇವರ ವಾಕ್ಯದ ಆಧಾರದಿಂದ ಕಲಿಸಿದನು. ಹೀಗೆ, “ಆ ಜನರ ಗುಂಪುಗಳು ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟವು.” (ಮತ್ತಾಯ 7:28) ಹೌದು, ಯೇಸುವಿನ ಕಲಿಸುವಿಕೆಯು ಅವರ ಹೃದಯಗಳನ್ನು ತಲಪಿತು!

11. ಮೋಶೆಯ ಧರ್ಮಶಾಸ್ತ್ರವು ನ್ಯಾಯಸಮ್ಮತತೆ ಮತ್ತು ಕರುಣೆಯೊಂದಿಗೆ ಅನ್ವಯಿಸುತ್ತಿದ್ದಿರಬೇಕಾಗಿತ್ತೆಂಬುದನ್ನು ಯೇಸು ಹೇಗೆ ಪ್ರದರ್ಶಿಸಿದನು?

11 ಮೋಶೆಯ ಧರ್ಮಶಾಸ್ತ್ರಕ್ಕೆ ಇನ್ನೂ ಹೆಚ್ಚಿನ ಕಟ್ಟುಪಾಡುಗಳನ್ನು ಕೂಡಿಸುವುದಕ್ಕೆ ಬದಲಾಗಿ, ಆ ಧರ್ಮಶಾಸ್ತ್ರವನ್ನು ನ್ಯಾಯಸಮ್ಮತತೆ ಮತ್ತು ಕರುಣೆಯೊಂದಿಗೆ ಸಮನ್ವಯವಾಗಿ ಹೇಗೆ ಅನ್ವಯಿಸುತ್ತಿದ್ದಿರಬೇಕಾಗಿತ್ತೆಂಬುದನ್ನು ಯೇಸು ತೋರಿಸಿದನು. ಉದಾಹರಣೆಗಾಗಿ, ಅವನು ರಕ್ತಕುಸುಮ ರೋಗದಿಂದ ಬಾಧಿತಳಾಗಿದ್ದ ಒಬ್ಬ ಸ್ತ್ರೀಯಿಂದ ಸಮೀಪಿಸಲ್ಪಟ್ಟಿದ್ದ ಸಂದರ್ಭವನ್ನು ಜ್ಞಾಪಿಸಿಕೊಳ್ಳಿರಿ. ಮೋಶೆಯ ಧರ್ಮಶಾಸ್ತ್ರಕ್ಕನುಸಾರ, ಅವಳಿಂದ ಸ್ಪರ್ಶಿಸಲ್ಪಟ್ಟ ಯಾರಾದರೂ ಅಶುದ್ಧರಾಗುತ್ತಿದ್ದರು, ಆದುದರಿಂದ ಅವಳು ಜನರ ಒಂದು ಗುಂಪಿನೊಂದಿಗೆ ಜೊತೆಗೂಡಬಾರದಾಗಿತ್ತೆಂಬುದು ನಿಶ್ಚಯ! (ಯಾಜಕಕಾಂಡ 15:25-27) ಆದರೆ ಗುಣಹೊಂದುವ ವಿಷಯದಲ್ಲಿ ಅವಳು ಎಷ್ಟು ಹತಾಶಳಾಗಿದ್ದಳೆಂದರೆ, ಅವಳು ಜನರ ಗುಂಪಿನ ಮೂಲಕ ಹಾದಿಮಾಡಿಕೊಂಡು ಬಂದು, ಯೇಸುವಿನ ಹೊರ ಉಡುಪನ್ನು ಸ್ಪರ್ಶಿಸಿದಳು. ತತ್‌ಕ್ಷಣವೇ ರಕ್ತಸ್ರಾವವು ನಿಂತುಹೋಯಿತು. ಧರ್ಮಶಾಸ್ತ್ರವನ್ನು ಉಲ್ಲಂಘಿಸಿದ್ದಕ್ಕಾಗಿ ಅವನು ಅವಳನ್ನು ಖಂಡಿಸಿದನೊ? ಇಲ್ಲ; ಬದಲಾಗಿ, ಅವನು ಅವಳ ಹತಾಶ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಧರ್ಮಶಾಸ್ತ್ರದ ಅತ್ಯಂತ ದೊಡ್ಡ ನೀತಿಬೋಧೆಯಾದ ಪ್ರೀತಿಯನ್ನು ಪ್ರದರ್ಶಿಸಿದನು. ಅವನು ಸಹಾನುಭೂತಿಯಿಂದ ಅವಳಿಗೆ ಹೇಳಿದ್ದು: “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು; ನಿನ್ನನ್ನು ಕಾಡಿದ ರೋಗವು ಹೋಗಿ ನಿನಗೆ ಗುಣವಾಗಲಿ.”—ಮತ್ತಾಯ 5:25-34.

ಕ್ರಿಸ್ತನ ನಿಯಮವು ಸ್ವಚ್ಛಂದವಾಗಿದೆಯೊ?

12. (ಎ) ಕ್ರಿಸ್ತನು ಸ್ವಚ್ಛಂದನಾಗಿದ್ದಾನೆಂದು ನಾವು ಏಕೆ ಊಹಿಸಿಕೊಳ್ಳಬಾರದು? (ಬಿ) ಅನೇಕ ನಿಯಮಗಳ ರಚನೆಯು, ಅನೇಕ ನೆವಗಳ ರಚನೆಗೆ ನಡಿಸುತ್ತದೆಂಬುದನ್ನು ಯಾವುದು ತೋರಿಸುತ್ತದೆ?

12 ಹಾಗಾದರೆ, ಕ್ರಿಸ್ತನ ನಿಯಮವು “ಬಿಡುಗಡೆಗೆ ಸಂಬಂಧಿಸಿ”ದ್ದಾಗಿದೆ ಎಂಬ ಕಾರಣದಿಂದ ಅದು ಸ್ವಚ್ಛಂದವಾದದ್ದಾಗಿದೆ, ಆದರೆ ಫರಿಸಾಯರು ತಮ್ಮೆಲ್ಲಾ ಮೌಖಿಕ ಸಂಪ್ರದಾಯಗಳಿಂದ, ಕಡಿಮೆಪಕ್ಷ ಜನರ ನಡತೆಯನ್ನು ಕಟ್ಟುನಿಟ್ಟಿನ ಹದ್ದುಬಸ್ತುಗಳೊಳಗೆ ಇಟ್ಟಿದ್ದರು ಎಂಬ ತೀರ್ಮಾನಕ್ಕೆ ನಾವು ಬರಬೇಕೊ? ಇಲ್ಲ. ಅನೇಕವೇಳೆ ಎಷ್ಟು ಹೆಚ್ಚು ನಿಯಮಗಳು ಇರುತ್ತವೋ, ಜನರು ಅವುಗಳನ್ನು ತಪ್ಪಿಸಿಕೊಳ್ಳಲು ಅಷ್ಟು ಹೆಚ್ಚು ನೆವಗಳನ್ನು ಕಂಡುಕೊಳ್ಳುತ್ತಾರೆ ಎಂದು, ಇಂದಿನ ಶಾಸನಬದ್ಧ ವ್ಯವಸ್ಥೆಗಳು ದೃಷ್ಟಾಂತಿಸುತ್ತವೆ.a ಯೇಸುವಿನ ದಿನದಲ್ಲಿ, ಫರಿಸಾಯಸಂಬಂಧಿತ ನಿಬಂಧನೆಗಳ ಬಾಹುಲ್ಯವು, ನೆವಗಳ ಹುಡುಕುವಿಕೆಯನ್ನು, ಪ್ರೀತಿರಹಿತವಾದ ಕೆಲಸಗಳ ಮೇಲುಮೇಲಿನ ನಿರ್ವಹಣೆಯನ್ನು ಮತ್ತು ಆಂತರಿಕ ಭ್ರಷ್ಟಾಚಾರವನ್ನು ಅಡಗಿಸಲಿಕ್ಕಾಗಿ ಒಂದು ಸ್ವನೀತಿಯ ಬಾಹ್ಯ ತೋರಿಕೆಯನ್ನು ಬೆಳೆಸಿಕೊಳ್ಳುವುದನ್ನು ಉತ್ತೇಜಿಸಿತು.—ಮತ್ತಾಯ 23:23, 24.

13. ನಿಯಮಗಳ ಇತರ ಯಾವುದೇ ಲಿಖಿತ ನಿಯಮಾವಳಿಗಿಂತಲೂ, ಕ್ರಿಸ್ತನ ನಿಯಮವು ನಡತೆಯ ಒಂದು ಅತ್ಯುತ್ತಮ ಮಟ್ಟದಲ್ಲಿ ಏಕೆ ಫಲಿಸುತ್ತದೆ?

13 ವ್ಯತಿರಿಕ್ತತೆಯಲ್ಲಿ, ಕ್ರಿಸ್ತನ ನಿಯಮವು ಅಂತಹ ಮನೋಭಾವಗಳನ್ನು ಪುಷ್ಟೀಕರಿಸುವುದಿಲ್ಲ. ವಾಸ್ತವವಾಗಿ, ಯೆಹೋವನ ಪ್ರೀತಿಯ ಮೇಲೆ ಆಧಾರಿಸಿರುವ ನಿಯಮಕ್ಕೆ ವಿಧೇಯರಾಗುವುದು ಮತ್ತು ಇತರರಿಗಾಗಿರುವ ಕ್ರಿಸ್ತನ ಸ್ವತ್ಯಾಗದ ಪ್ರೀತಿಯನ್ನು ಅನುಕರಿಸುವ ಮೂಲಕ ಅದನ್ನು ನೆರವೇರಿಸುವುದು, ಔಪಚಾರಿಕ ಶಾಸನಬದ್ಧ ನಿಯಮಾವಳಿಯನ್ನು ಅನುಸರಿಸುವುದಕ್ಕಿಂತಲೂ ಎಷ್ಟೋ ಹೆಚ್ಚು ಶ್ರೇಷ್ಠವಾದ ನಡವಳಿಕೆಯ ಮಟ್ಟಗಳಲ್ಲಿ ಫಲಿಸುತ್ತದೆ. ಪ್ರೀತಿಯು ನೆವಗಳನ್ನು ಹುಡುಕುವುದಿಲ್ಲ; ಅದು ನಿಯಮದ ನಿಯಮಾವಳಿಯು ಸ್ಪಷ್ಟವಾಗಿ ನಿಷೇಧಿಸದಿರಬಹುದಾದಂತಹ ಹಾನಿಕರ ವಿಷಯಗಳನ್ನು ಮಾಡುವುದರಿಂದ ನಮ್ಮನ್ನು ದೂರವಿರಿಸುತ್ತದೆ. (ಮತ್ತಾಯ 5:27, 28ನ್ನು ನೋಡಿರಿ.) ಹೀಗೆ, ಕ್ರಿಸ್ತನ ನಿಯಮವು ಬೇರೆಯವರಿಗಾಗಿ, ಔದಾರ್ಯ, ಅತಿಥಿಸತ್ಕಾರ, ಮತ್ತು ಪ್ರೀತಿಯನ್ನು ತೋರಿಸುವಂತೆ—ಯಾವುದೇ ಔಪಚಾರಿಕ ನಿಯಮವು ನಾವು ಮಾಡುವಂತೆ ಅಗತ್ಯಪಡಿಸದ ವಿಧಗಳಲ್ಲಿ—ವಿಷಯಗಳನ್ನು ನಡಿಸುವಂತೆ ನಮ್ಮನ್ನು ಪ್ರಚೋದಿಸುವುದು.—ಅ. ಕೃತ್ಯಗಳು 20:35; 2 ಕೊರಿಂಥ 9:7; ಇಬ್ರಿಯ 13:16.

14. ಕ್ರಿಸ್ತನ ನಿಯಮಕ್ಕನುಸಾರ ಜೀವಿಸುವುದು, ಪ್ರಥಮ ಶತಮಾನದ ಕ್ರೈಸ್ತ ಸಭೆಯ ಮೇಲೆ ಯಾವ ಪರಿಣಾಮವನ್ನು ಬೀರಿತು?

14 ಆರಂಭದ ಕ್ರೈಸ್ತ ಸಭೆಯ ಸದಸ್ಯರು ಕ್ರಿಸ್ತನ ನಿಯಮಕ್ಕನುಸಾರ ಜೀವಿಸಿದ ತನಕ, ಅವರ ದಿನದ ಸಭಾಮಂದಿರಗಳಲ್ಲಿ ಪ್ರಚಲಿತವಾಗಿದ್ದ ಕಟ್ಟುನಿಟ್ಟಾದ, ನಿರ್ಣಾಯಕ, ಹಾಗೂ ಕಪಟತೆಯ ಮನೋಭಾವಗಳಿಂದ ಸಂಬಂಧಸೂಚಕವಾಗಿ ಸ್ವತಂತ್ರರಾಗಿದ್ದು, ಅವರು ಆದರಣೀಯ, ಪ್ರೀತಿಪೂರ್ಣ ವಾತಾವರಣದಲ್ಲಿ ಆನಂದಿಸಿದರು. ಈ ಹೊಸ ಸಭೆಗಳ ಸದಸ್ಯರು, ತಾವು “ಸ್ವತಂತ್ರ ಜನರ ನಿಯಮ”ಕ್ಕನುಸಾರ ಜೀವಿಸುತ್ತಿದ್ದೆವೆಂಬುದನ್ನು ನಿಜವಾಗಿಯೂ ಗ್ರಹಿಸಿದ್ದಿರಬೇಕು!

15. ಕ್ರೈಸ್ತ ಸಭೆಯನ್ನು ಭ್ರಷ್ಟಗೊಳಿಸಲಿಕ್ಕಾಗಿದ್ದ ಸೈತಾನನ ಆರಂಭದ ಪ್ರಯತ್ನಗಳಲ್ಲಿ ಕೆಲವು ಯಾವುವಾಗಿದ್ದವು?

15 ಹಾಗಿದ್ದರೂ, ಸೈತಾನನು ಇಸ್ರಾಯೇಲ್‌ ಜನಾಂಗವನ್ನು ಭ್ರಷ್ಟಗೊಳಿಸಿದ್ದಂತೆಯೇ, ಕ್ರೈಸ್ತ ಸಭೆಯನ್ನು ಒಳಗಿನಿಂದ ಭ್ರಷ್ಟಗೊಳಿಸಲು ಅವನು ತವಕದಿಂದಿದ್ದನು. ‘ವ್ಯತ್ಯಾಸ ಬೋಧನೆಗಳನ್ನು ಮಾಡುವ’ ಮತ್ತು ದೇವರ ಹಿಂಡಿನ ಮೇಲೆ ದಬ್ಬಾಳಿಕೆ ನಡಿಸುವ ತೋಳಗಳಂತಹ ಜನರ ಕುರಿತಾಗಿ ಅಪೊಸ್ತಲ ಪೌಲನು ಎಚ್ಚರಿಸಿದನು. (ಅ. ಕೃತ್ಯಗಳು 20:29, 30) ಕ್ರಿಸ್ತನಲ್ಲಿ ನೆರವೇರಿಸಲ್ಪಟ್ಟಿದ್ದ ಮೋಶೆಯ ಧರ್ಮಶಾಸ್ತ್ರದ ದಾಸತ್ವಕ್ಕಾಗಿ, ಕ್ರಿಸ್ತನ ನಿಯಮದ ಸಂಬಂಧಸೂಚಕ ಬಿಡುಗಡೆಯನ್ನು ವಿನಿಮಯಿಸಲು ಪ್ರಯತ್ನಿಸಿದ, ಯೆಹೂದ್ಯೀಕರಿಸುವವರೊಂದಿಗೆ ಅವನು ಹೆಣಗಾಡಬೇಕಿತ್ತು. (ಮತ್ತಾಯ 5:17; ಅ. ಕೃತ್ಯಗಳು 15:1; ರೋಮಾಪುರ 10:4) ಅಪೊಸ್ತಲರಲ್ಲಿ ಕೊನೆಯವನು ಮರಣಪಟ್ಟ ಬಳಿಕ, ಅಂತಹ ಧರ್ಮಭ್ರಷ್ಟತೆಯ ವಿರುದ್ಧವಾಗಿ ಇನ್ನೆಂದಿಗೂ ನಿರ್ಬಂಧವಿರಲಿಲ್ಲ. ಆದುದರಿಂದ ಭ್ರಷ್ಟತೆಯು ವ್ಯಾಪಕವಾಗಿ ಹಬ್ಬಿತು.—2 ಥೆಸಲೊನೀಕ 2:6, 7.

ಕ್ರಿಸ್ತನ ನಿಯಮವನ್ನು ಕ್ರೈಸ್ತಪ್ರಪಂಚವು ಮಲಿನಗೊಳಿಸುತ್ತದೆ

16, 17. (ಎ) ಕ್ರೈಸ್ತಪ್ರಪಂಚದಲ್ಲಿ ಭ್ರಷ್ಟತೆಯು ಯಾವ ರೂಪಗಳನ್ನು ತಾಳಿತು? (ಬಿ) ಕ್ಯಾಥೊಲಿಕ್‌ ಚರ್ಚಿನ ನಿಯಮಗಳು, ಕಾಮದ ಕುರಿತಾಗಿ ಒಂದು ತಿರುಚಿದ ವೀಕ್ಷಣವನ್ನು ಹೇಗೆ ಪ್ರವರ್ಧಿಸಿದವು?

16 ಯೆಹೂದ್ಯಮತದಲ್ಲಿದ್ದಂತೆಯೇ, ಭ್ರಷ್ಟತೆಯು ಕ್ರೈಸ್ತಪ್ರಪಂಚದಲ್ಲಿ ಒಂದಕ್ಕಿಂತಲೂ ಹೆಚ್ಚು ರೂಪವನ್ನು ಪಡೆದುಕೊಂಡಿತು. ಅವಳು ಸಹ ಸುಳ್ಳು ಸಿದ್ಧಾಂತಗಳಿಗೆ ಹಾಗೂ ಸಡಿಲು ನೈತಿಕತೆಗಳಿಗೆ ತುತ್ತಾದಳು. ಮತ್ತು ಹೊರಗಿನ ಪ್ರಭಾವಗಳ ವಿರುದ್ಧವಾಗಿ ತನ್ನ ಹಿಂಡನ್ನು ರಕ್ಷಿಸುವ ಅವಳ ಪ್ರಯತ್ನಗಳು, ಅನೇಕವೇಳೆ ಶುದ್ಧಾರಾಧನೆಯ ಉಳಿದಿದ್ದ ಯಾವುದೇ ತುಣುಕಿಗೆ ನಾಶಕರವಾಗಿ ಪರಿಣಮಿಸಿದವು. ಕಟ್ಟುನಿಟ್ಟಾದ ಮತ್ತು ಅಶಾಸ್ತ್ರೀಯವಾದ ನಿಯಮಗಳು ಸಂಖ್ಯಾಭಿವೃದ್ಧಿಹೊಂದಿದವು.

17 ಚರ್ಚ್‌ ನಿಯಮದ ಸವಿಸ್ತಾರವಾದ ಸಮೂಹಗಳನ್ನು ರಚಿಸುವುದರಲ್ಲಿ ಕ್ಯಾಥೊಲಿಕ್‌ ಚರ್ಚು ಪ್ರಧಾನವಾದದ್ದಾಗಿದೆ. ಈ ನಿಯಮಗಳು ವಿಶೇಷವಾಗಿ ಕಾಮಕ್ಕೆ ಸೇರಿದ ವಿಷಯಗಳಿಗೆ ಅಪಾರ್ಥವನ್ನು ಕಲ್ಪಿಸಿವೆ. ಸೆಕ್ಸ್ಯುಆ್ಯಲಿಟಿ ಆ್ಯಂಡ್‌ ಕಥಾಲಿಸಿಸ್‌ಮ್‌ ಎಂಬ ಪುಸ್ತಕಕ್ಕನುಸಾರ, ಚರ್ಚು ಎಲ್ಲಾ ರೀತಿಯ ಸುಖಭೋಗದ ಕುರಿತಾಗಿ ಸಂದೇಹಾಸ್ಪದವಾಗಿದ್ದ ಸ್ಟಾಯಿಕ್‌ವಾದದ ಗ್ರೀಕ್‌ ತತ್ವಜ್ಞಾನವನ್ನು ಹೀರಿಕೊಂಡಿತು. ಸಾಮಾನ್ಯವಾದ ವೈವಾಹಿಕ ಸಂಬಂಧಗಳನ್ನು ಒಳಗೊಂಡು, ಎಲ್ಲಾ ಲೈಂಗಿಕ ಸುಖಭೋಗವು, ಪಾಪಪೂರ್ಣವಾದದ್ದಾಗಿತ್ತು ಎಂಬುದಾಗಿ ಚರ್ಚು ಕಲಿಸಲಾರಂಭಿಸಿತು. (ವ್ಯತ್ಯಾಸ ನೋಡಿರಿ ಜ್ಞಾನೋಕ್ತಿ 5:18, 19.) ಕಾಮವು ಲೈಂಗಿಕ ಸುಖಭೋಗಕ್ಕಾಗಿ ಅಲ್ಲ, ಬದಲಾಗಿ ಪುನರುತ್ಪಾದನೆಗಾಗಿದೆ ಎಂಬುದಾಗಿ ಪ್ರತಿಪಾದಿಸಲ್ಪಟ್ಟಿತು. ಹೀಗೆ ಚರ್ಚ್‌ ನಿಯಮವು ಗರ್ಭನಿರೋಧಕದ ಯಾವುದೇ ರೂಪವನ್ನು ಬಹಳ ಗಂಭೀರವಾದ ಒಂದು ಪಾಪದೋಪಾದಿ ಖಂಡಿಸಿತು; ಇದಕ್ಕಾಗಿ ಕೆಲವೊಮ್ಮೆ ಅನೇಕ ವರ್ಷಗಳ ದೇಹದಂಡನೆಯನ್ನು ಅಗತ್ಯಪಡಿಸಿತು. ಇದಲ್ಲದೆ, ಯಾಜಕತ್ವಕ್ಕೆ ವಿವಾಹವು ನಿಷೇಧಿಸಲ್ಪಟ್ಟಿತು; ಇದು ಮಕ್ಕಳ ಅಪಪ್ರಯೋಗವನ್ನು ಸೇರಿಸಿ, ಅತ್ಯಧಿಕ ನಿಷಿದ್ಧ ಕಾಮವನ್ನು ಹೆಚ್ಚಿಸಿದೆ.—1 ತಿಮೊಥೆಯ 4:1-3.

18. ಚರ್ಚ್‌ ನಿಯಮಗಳು ಹೆಚ್ಚಾಗುವುದರಿಂದ ಏನು ಫಲಿಸಿತು?

18 ಚರ್ಚ್‌ ನಿಯಮಗಳು ಹೆಚ್ಚಾದಂತೆ, ಆ ನಿಯಮಗಳು ಪುಸ್ತಕಗಳಾಗಿ ಸಂಕಲನಗೊಳಿಸಲ್ಪಟ್ಟವು. ಈ ಪುಸ್ತಕಗಳು ಬೈಬಲನ್ನು ಅಸ್ಪಷ್ಟಗೊಳಿಸಿ, ಅದರ ಸ್ಥಳವನ್ನಾಕ್ರಮಿಸಿದವು. (ಹೋಲಿಸಿರಿ ಮತ್ತಾಯ 15:3, 9.) ಯೆಹೂದ್ಯಮತದಂತೆ, ಕ್ಯಾಥೊಲಿಕ್‌ ಮತವು, ಐಹಿಕ ಬರಹವನ್ನು ಸಂಶಯಿಸಿ, ಅದರ ಅಧಿಕಾಂಶ ಭಾಗವನ್ನು ಒಂದು ಬೆದರಿಕೆಯೋಪಾದಿ ಎಣಿಸಿತು. ಈ ವೀಕ್ಷಣವು ಅತಿ ಬೇಗನೆ ಈ ವಿಷಯದ ಕುರಿತಾದ ಬೈಬಲಿನ ಗಮನಾರ್ಹ ಎಚ್ಚರಿಕೆಯನ್ನೂ ಅತಿಶಯಿಸಿತು. (ಪ್ರಸಂಗಿ 12:12; ಕೊಲೊಸ್ಸೆ 2:8) ಸಾ.ಶ. ನಾಲ್ಕನೆಯ ಶತಮಾನದ ಒಬ್ಬ ಚರ್ಚ್‌ ಬರಹಗಾರನಾದ ಜೆರೋಮ್‌ ಉದ್ಗರಿಸಿದ್ದು: “ಓ, ಕರ್ತನೇ ನಾನು ಎಂದಾದರೂ ಪುನಃ ಲೌಕಿಕ ಪುಸ್ತಕಗಳನ್ನು ಹೊಂದುವುದಾದರೆ ಅಥವಾ ಓದುವುದಾದರೆ, ನಾನು ನಿನ್ನನ್ನು ಅಲ್ಲಗಳೆದವನಾಗಿದ್ದೇನೆ.” ಸಕಾಲದಲ್ಲಿ ಚರ್ಚು, ಪುಸ್ತಕಗಳನ್ನು ಪೂರ್ವಪರೀಕ್ಷೆಮಾಡುವ ಕಾರ್ಯವನ್ನು ಕೈಕೊಂಡಿತು—ಐಹಿಕ ವಿಷಯಗಳ ಕುರಿತಾದ ಪುಸ್ತಕಗಳನ್ನು ಸಹ. ಹೀಗೆ ಭೂಮಿಯು ಸೂರ್ಯನ ಸುತ್ತಲೂ ಸುತ್ತುತ್ತದೆ ಎಂದು ಬರೆದುದಕ್ಕಾಗಿ, 17ನೆಯ ಶತಮಾನದ ಖಗೋಳಶಾಸ್ತ್ರಜ್ಞನಾದ ಗೆಲಿಲಿಯೊ ದೂಷಣೆಗೊಳಗಾದನು. ಎಲ್ಲಾ ವಿಷಯಗಳಲ್ಲಿ—ಖಗೋಳಶಾಸ್ತ್ರದ ಕುರಿತಾದ ಪ್ರಶ್ನೆಗಳಿಗೆ ಸಹ—ಅಂತಿಮ ಅಧಿಕಾರವಾಗಿರುವುದರ ಕುರಿತಾದ ಚರ್ಚಿನ ಪಟ್ಟುಹಿಡಿಯುವಿಕೆಯು, ಮುಂದೆ ಬೈಬಲಿನಲ್ಲಿನ ನಂಬಿಕೆಯನ್ನು ಶಿಥಿಲಗೊಳಿಸಲು ಕಾರ್ಯನಡಿಸಲಿತ್ತು.

19. ಸಂನ್ಯಾಸಿ ಮಠಗಳು ಕಟ್ಟುನಿಟ್ಟಾದ ಸರ್ವಾಧಿಕಾರಿವಾದವನ್ನು ಹೇಗೆ ಪ್ರವರ್ಧಿಸಿದವು?

19 ಚರ್ಚಿನ ನಿಬಂಧನೆ ಮಾಡುವಿಕೆಯು, ಸಂನ್ಯಾಸಿಗಳು ತಮ್ಮನ್ನು ಈ ಲೋಕದಿಂದ ಪ್ರತ್ಯೇಕಿತರನ್ನಾಗಿಸಿಕೊಂಡು, ಸ್ವಾರ್ಥತ್ಯಾಗದಲ್ಲಿ ಜೀವಿಸುತ್ತಿದ್ದ ಸಂನ್ಯಾಸಿ ಮಠಗಳಲ್ಲಿ ಸಮೃದ್ಧವಾಗಿ ಹಬ್ಬಿತು. ಹೆಚ್ಚಿನ ಕ್ಯಾಥೊಲಿಕ್‌ ಸಂನ್ಯಾಸಿ ಮಠಗಳು “ಸೆಯಿಂಟ್‌ ಬೆನಡಿಕ್ಟ್‌ನ ನಿಬಂಧನೆ”ಗೆ ಅಂಟಿಕೊಂಡವು. ಕ್ರೈಸ್ತ ಮಠಾಧಿಪತಿ (“ಫಾದರ್‌” ಎಂಬ ಶಬ್ದಕ್ಕಾಗಿ ಆ್ಯರಮೇಯಿಕ್‌ ಶಬ್ದದಿಂದ ತೆಗೆದುಕೊಳ್ಳಲ್ಪಟ್ಟಿರುವ ಒಂದು ಪದ)ಯು ಸಂಪೂರ್ಣ ಅಧಿಕಾರದಿಂದ ಆಳ್ವಿಕೆ ನಡಿಸಿದನು. (ಹೋಲಿಸಿರಿ ಮತ್ತಾಯ 23:9.) ಸಂನ್ಯಾಸಿಯೊಬ್ಬನು ತನ್ನ ಹೆತ್ತವರಿಂದ ಒಂದು ಉಡುಗೊರೆಯನ್ನು ಪಡೆದುಕೊಂಡರೆ, ಅದನ್ನು ಆ ಸಂನ್ಯಾಸಿಯು ಸ್ವೀಕರಿಸಬೇಕೊ ಅಥವಾ ಬೇರೆ ಯಾರಾದರೂ ಸ್ವೀಕರಿಸಬೇಕೊ ಎಂಬುದನ್ನು ಕ್ರೈಸ್ತ ಮಠಾಧಿಪತಿಯು ನಿರ್ಧರಿಸುತ್ತಿದ್ದನು. ಅಸಭ್ಯತೆಗಳನ್ನು ಖಂಡಿಸುವುದಲ್ಲದೆ, ಒಂದು ನಿಬಂಧನೆಯು ಹೀಗೆ ಹೇಳುವ ಮೂಲಕ, ಎಲ್ಲಾ ರೀತಿಯ ಹರಟೆಮಾತನ್ನೂ ಹಾಸ್ಯದ ಮಾತುಗಳನ್ನೂ ನಿಷೇಧಿಸಿತು: “ಯಾವ ಶಿಷ್ಯನೂ ಅಂತಹ ವಿಚಾರಗಳನ್ನು ಮಾತಾಡಸಾಧ್ಯವಿಲ್ಲ.”

20. ಪ್ರೊಟೆಸ್ಟಾಂಟ್‌ ಮತವು ಸಹ ಅಶಾಸ್ತ್ರೀಯವಾದ ಸರ್ವಾಧಿಕಾರಿವಾದವನ್ನು ಆದರಿಸಿತೆಂಬುದನ್ನು ಯಾವುದು ತೋರಿಸುತ್ತದೆ?

20 ಕ್ಯಾಥೊಲಿಕ್‌ಮತದ ಅಶಾಸ್ತ್ರೀಯ ವಿಶಿಷ್ಟತೆಗಳನ್ನು ಸುಧಾರಿಸಲು ಪ್ರಯತ್ನಿಸಿದ ಪ್ರೊಟೆಸ್ಟಾಂಟ್‌ಮತವು, ಬೇಗನೆ ಕ್ರಿಸ್ತನ ನಿಯಮದಲ್ಲಿನ ಆಧಾರವಿಲ್ಲದೆ ಸರ್ವಾಧಿಕಾರಿ ನಿಬಂಧನೆಗಳನ್ನು ಮಾಡುವುದರಲ್ಲಿ ತತ್ಸಮಾನವಾಗಿ ಪ್ರವೀಣತೆಯನ್ನು ಪಡೆಯಿತು. ದೃಷ್ಟಾಂತಕ್ಕಾಗಿ, ಪ್ರಮುಖ ಸುಧಾರಕನಾದ ಜಾನ್‌ ಕ್ಯಾಲ್ವಿನ್‌, “ನವೀಕೃತ ಚರ್ಚಿನ ಶಾಸನಕಾರ”ನೆಂದು ಹೆಸರಿಸಲ್ಪಟ್ಟನು. ಅವನು ಜಿನೀವದ ಚರ್ಚನ್ನು ಅನೇಕ ಕಠಿನ ನಿಬಂಧನೆಗಳಿಂದ ಆಳಿದನು. ಇದನ್ನು ಯಾರ “ಹುದ್ದೆಯು” “ಪ್ರತಿಯೊಬ್ಬನ ಜೀವದ ಮೇಲ್ವಿಚಾರಣೆ ಮಾಡುವುದು” ಆಗಿದೆಯೆಂದು ಕ್ಯಾಲ್ವಿನ್‌ ಗಮನಿಸಿದನೋ, ಆ “ಹಿರಿಯರು” ಜಾರಿಗೆ ತಂದರು. (ವ್ಯತ್ಯಾಸ ನೋಡಿರಿ 2 ಕೊರಿಂಥ 1:24.) ಚರ್ಚು ತಂಗುದಾಣಗಳನ್ನು ನಿಯಂತ್ರಿಸಿ, ಎಂತಹ ರೀತಿಯ ಚರ್ಚಾವಿಷಯಗಳು ಅಂಗೀಕಾರಾರ್ಹವಾಗಿದ್ದವು ಎಂಬುದನ್ನು ವಿಧಿಬದ್ಧಮಾಡಿತು. ಗೇಲಿಮಾಡುವ ಹಾಡುಗಳನ್ನು ಹಾಡುವ ಅಥವಾ ನರ್ತಿಸುವಂತಹ ಅಪರಾಧಗಳಿಗಾಗಿ ಘೋರವಾದ ಜುಲ್ಮಾನೆಗಳು ವಿಧಿಸಲ್ಪಟ್ಟವು.b

ಕ್ರೈಸ್ತಪ್ರಪಂಚದ ದೋಷಗಳಿಂದ ಕಲಿಯುವುದು

21. ‘ಶಾಸ್ತ್ರದಲ್ಲಿ ಬರೆದಿರುವುದನ್ನು ಮೀರಿಹೋಗು’ವ ಕ್ರೈಸ್ತಪ್ರಪಂಚದ ಪ್ರವೃತ್ತಿಯ ಪೂರ್ತಿ ಪರಿಣಾಮಗಳು ಏನಾಗಿದ್ದವು?

21 ಈ ಎಲ್ಲಾ ನಿಬಂಧನೆಗಳು ಮತ್ತು ನಿಯಮಗಳು, ಕ್ರೈಸ್ತಪ್ರಪಂಚವನ್ನು ಭ್ರಷ್ಟಾಚಾರದಿಂದ ರಕ್ಷಿಸಲು ಕಾರ್ಯನಡಿಸಿವೆಯೊ? ಅವು ಇದಕ್ಕೆ ವಿರುದ್ಧವಾದುದನ್ನು ಮಾಡಿವೆ! ಇಂದು ಕ್ರೈಸ್ತಪ್ರಪಂಚವು, ಅತ್ಯಂತ ಕಠಿನವಾದ ಕುಪಂಥದಿಂದ ಹಿಡಿದು ಸಂಪೂರ್ಣವಾಗಿ ಸ್ವಚ್ಛಂದವಾದ ಕುಪಂಥದ ಶ್ರೇಣಿಯ ವರೆಗೆ, ನೂರಾರು ಕುಪಂಥಗಳಾಗಿ ವಿಭಾಗಗೊಂಡಿದೆ. ಮಾನವ ಆಲೋಚನೆಯು ತಮ್ಮ ಹಿಂಡನ್ನು ನಿಯಂತ್ರಿಸುವಂತೆ ಮತ್ತು ದೈವಿಕ ನಿಯಮವನ್ನು ಅಡ್ಡೈಸುವಂತೆ ಅನುಮತಿಸುತ್ತಾ, ಆ ಎಲ್ಲಾ ಕುಪಂಥಗಳು, ಒಂದಲ್ಲ ಒಂದು ವಿಧದಲ್ಲಿ, ‘ಶಾಸ್ತ್ರದಲ್ಲಿ ಬರೆದಿರುವುದನ್ನು ಮೀರಿಹೋಗಿ’ವೆ.—1 ಕೊರಿಂಥ 4:6.

22. ಕ್ರೈಸ್ತಪ್ರಪಂಚದ ಪರಿತ್ಯಾಗವು, ಕ್ರಿಸ್ತನ ನಿಯಮದ ಅಂತ್ಯವನ್ನು ಅರ್ಥೈಸಿರುವುದಿಲ್ಲವೇಕೆ?

22 ಆದರೂ, ಕ್ರಿಸ್ತನ ನಿಯಮದ ಕುರಿತಾದ ಇತಿಹಾಸವು ಒಂದು ದುರಂತವಲ್ಲ. ಮನುಷ್ಯಮಾತ್ರರು ದೈವಿಕ ನಿಯಮವನ್ನು ಅಳಿಸಿಹಾಕುವುದನ್ನು ಯೆಹೋವ ದೇವರು ಎಂದಿಗೂ ಅನುಮತಿಸನು. ಇಂದು ಸತ್ಯ ಕ್ರೈಸ್ತರ ನಡುವೆ ಕ್ರೈಸ್ತ ನಿಯಮವು ಅತ್ಯಂತ ಪ್ರಬಲವಾಗಿದೆ, ಮತ್ತು ಇವರಿಗೆ ಅದಕ್ಕನುಸಾರ ಜೀವಿಸುವ ಮಹಾ ಸುಯೋಗವು ಇದೆ. ಆದರೆ ದೈವಿಕ ನಿಯಮದೊಂದಿಗೆ ಯೆಹೂದ್ಯಮತ ಹಾಗೂ ಕ್ರೈಸ್ತಪ್ರಪಂಚವು ಮಾಡಿರುವ ವಿಷಯವನ್ನು ಪರೀಕ್ಷಿಸಿಯಾದ ಬಳಿಕ, ನಾವು ಸೂಕ್ತವಾಗಿಯೇ ಹೀಗೆ ಕೇಳುತ್ತೇವೆ, ‘ದೇವರ ವಾಕ್ಯವನ್ನು ಮಾನವ ತರ್ಕದಿಂದ ಹಾಗೂ ದೈವಿಕ ನಿಯಮದ ನಿಜಾರ್ಥವನ್ನೇ ಶಿಥಿಲಗೊಳಿಸುವಂತಹ ನಿಬಂಧನೆಗಳಿಂದ ಮಲಿನಗೊಳಿಸುವ ಪಾಶವನ್ನು ತ್ಯಜಿಸುವಾಗ, ನಾವು ಕ್ರಿಸ್ತನ ನಿಯಮಕ್ಕನುಸಾರ ಹೇಗೆ ಜೀವಿಸುತ್ತೇವೆ? ಇಂದು ಕ್ರಿಸ್ತನ ನಿಯಮವು ಯಾವ ಸಮತೂಕದ ವೀಕ್ಷಣವನ್ನು ನಮ್ಮಲ್ಲಿ ತುಂಬಿಸಬೇಕು?’ ಮುಂದಿನ ಲೇಖನವು ಈ ಪ್ರಶ್ನೆಗಳನ್ನು ಸಂಬೋಧಿಸುವುದು.

[ಅಧ್ಯಯನ ಪ್ರಶ್ನೆಗಳು]

a  ಇಂದು ಅಸ್ತಿತ್ವದಲ್ಲಿರುವ ಯೆಹೂದ್ಯಮತದ ರೂಪಕ್ಕಾಗಿ ಫರಿಸಾಯರು ಬಹುಮಟ್ಟಿಗೆ ಜವಾಬ್ದಾರರಾಗಿದ್ದರು, ಆದುದರಿಂದ ಯೆಹೂದ್ಯಮತವು ತನ್ನ ಕೂಡಿಸಲ್ಪಟ್ಟ ಸಬ್ಬತ್‌ ನಿರ್ಬಂಧಗಳಲ್ಲಿ ಇನ್ನೂ ನೆವಗಳಿಗಾಗಿ ಹುಡುಕುವುದು ಆಶ್ಚರ್ಯಕರವಾದ ವಿಷಯವಾಗಿರುವುದಿಲ್ಲ. ಉದಾಹರಣೆಗಾಗಿ, ಸಬ್ಬತ್ತಿನಂದು ಆರ್ತೊಡಾಕ್ಸ್‌ ಯೆಹೂದಿ ಆಸ್ಪತ್ರೆಯೊಂದಕ್ಕೆ ಹೋಗುವ ಸಂದರ್ಶಕನೊಬ್ಬನು, ಒಂದು ಎಲಿವೇಟರ್‌ ಅನ್ನು ಚಲಿಸುವಂತೆ ಮಾಡಲಿಕ್ಕಾಗಿ ಒತ್ತಲ್ಪಡುವ, ಒಂದು ಚಿಕ್ಕ ಬಟನ್‌ನಂತಹ ಉಪಕರಣವನ್ನು ಒತ್ತುವ ಪಾಪಪೂರ್ಣ “ಕೆಲಸ”ವನ್ನು ಮಾಡುವುದನ್ನು ಪ್ರಯಾಣಿಕರು ತಡೆಯಸಾಧ್ಯವಾಗುವಂತೆ, ಎಲಿವೇಟರ್‌ ಸ್ವಯಂಚಾಲಿತವಾಗಿ ಪ್ರತಿಯೊಂದು ಮಾಳಿಗೆಯ ಬಳಿ ನಿಲ್ಲುವುದನ್ನು ಕಂಡುಕೊಳ್ಳಬಹುದು. ಕೆಲವು ಆರ್ತೊಡಾಕ್ಸ್‌ ವೈದ್ಯರು, ಕೆಲವೇ ದಿವಸಗಳಲ್ಲಿ ಅಳಿಸಿಹೋಗುವ ಇಂಕ್‌ನಿಂದ ಔಷಧಸೂಚಿ ಚೀಟಿಗಳನ್ನು ಬರೆಯುತ್ತಾರೆ. ಏಕೆ? ಮಿಷ್ನವು ಬರವಣಿಗೆಯನ್ನು “ಕೆಲಸ”ದೋಪಾದಿ ವರ್ಗೀಕರಿಸುತ್ತದೆ, ಆದರೆ ಅದು “ಬರವಣಿಗೆ”ಯನ್ನು ಒಂದು ಶಾಶ್ವತವಾದ ಗುರುತನ್ನು ಬಿಟ್ಟುಹೋಗುವಂತಹದ್ದಾಗಿ ಅರ್ಥನಿರೂಪಿಸುತ್ತದೆ.

b  ಕ್ಯಾಲ್ವಿನ್‌ನ ದೇವತಾಶಾಸ್ತ್ರೀಯ ವೀಕ್ಷಣಗಳಲ್ಲಿ ಕೆಲವನ್ನು ಪ್ರತಿಭಟಿಸಿದ ಸರ್ವೀಟಸ್‌, ಒಬ್ಬ ಪಾಷಂಡಿಯೋಪಾದಿ ಸುಡುಗಂಬದಲ್ಲಿ ಸುಡಲ್ಪಟ್ಟನು.

ನೀವು ಹೇಗೆ ಉತ್ತರಿಸುವಿರಿ?

◻ ಕ್ರಿಸ್ತನ ನಿಯಮದ ಸಾರವೇನಾಗಿದೆ?

◻ ಯೇಸುವಿನ ಕಲಿಸುವಿಕೆಯ ಶೈಲಿಯು, ಫರಿಸಾಯರ ಶೈಲಿಗಿಂತ ಹೇಗೆ ಭಿನ್ನವಾಗಿತ್ತು?

◻ ಕ್ರೈಸ್ತಪ್ರಪಂಚವನ್ನು ಭ್ರಷ್ಟಗೊಳಿಸಲಿಕ್ಕಾಗಿ ಸೈತಾನನು ಒಂದು ಕಟ್ಟುನಿಟ್ಟಾದ, ನಿಬಂಧನೆ ಮಾಡುವಿಕೆಯ ಮನೋಭಾವವನ್ನು ಹೇಗೆ ಉಪಯೋಗಿಸುತ್ತಾನೆ?

◻ ಕ್ರಿಸ್ತನ ನಿಯಮಕ್ಕನುಸಾರ ಜೀವಿಸುವುದರಿಂದ ಬರುವ ಕೆಲವು ಸಕಾರಾತ್ಮಕವಾದ ಪರಿಣಾಮಗಳು ಯಾವುವು?

[ಪುಟ 16 ರಲ್ಲಿರುವ ಚಿತ್ರ]

ಮೋಶೆಯ ಧರ್ಮಶಾಸ್ತ್ರವನ್ನು ಯೇಸು ನ್ಯಾಯಸಮ್ಮತವಾಗಿಯೂ ಕರುಣಾಭರಿತವಾಗಿಯೂ ಅನ್ವಯಿಸಿದನು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ