ಕ್ರಿಸ್ತನ ನಿಯಮಕ್ಕನುಸಾರ ಜೀವಿಸುವುದು
“ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಳ್ಳಲಿ; ಹೀಗೆ ಕ್ರಿಸ್ತನ ನಿಯಮವನ್ನು ನೆರವೇರಿಸಿರಿ.”—ಗಲಾತ್ಯ 6:2.
1. ಕ್ರಿಸ್ತನ ನಿಯಮವು ಇಂದು ಒಳಿತಿಗಾಗಿರುವ ಒಂದು ಪ್ರಬಲ ಪ್ರಭಾವವಾಗಿದೆಯೆಂದು ಏಕೆ ಹೇಳಬಹುದಾಗಿದೆ?
ರು ಆಂಡದಲ್ಲಿ, ಹೂಟು ಮತ್ತು ಟೂಟ್ಸಿ ಯೆಹೋವನ ಸಾಕ್ಷಿಗಳು, ಆ ದೇಶವನ್ನು ಇತ್ತೀಚೆಗೆ ಪರಿಷ್ಕರಿಸಿದಂತಹ ಕುಲಸಂಬಂಧವಾದ ಸಂಹಾರದಿಂದ ಒಬ್ಬರು ಇನ್ನೊಬ್ಬರನ್ನು ಸಂರಕ್ಷಿಸಲಿಕ್ಕಾಗಿ ತಮ್ಮ ಜೀವಿತಗಳನ್ನು ಅಪಾಯಕ್ಕೊಡ್ಡಿದರು. ವಿನಾಶಕರವಾದ ಭೂಕಂಪದಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಂತಹ, ಜಪಾನಿನ ಕೋಬಿಯಲ್ಲಿದ್ದ ಯೆಹೋವನ ಸಾಕ್ಷಿಗಳು, ತಮಗಾದ ನಷ್ಟದಿಂದ ಜರ್ಜರಿತರಾಗಿದ್ದರು. ಆದರೂ, ಬೇರೆ ಬಲಿಪಶುಗಳನ್ನು ಕಾಪಾಡಲಿಕ್ಕಾಗಿ ಅವರು ಒಡನೆಯೇ ಪ್ರಚೋದಿತರಾದರು. ಹೌದು, ಲೋಕದಾದ್ಯಂತವಾಗಿ ಬರುವ ಹೃದಯೋಲ್ಲಾಸಗೊಳಿಸುವ ಉದಾಹರಣೆಗಳು, ಕ್ರಿಸ್ತನ ನಿಯಮವು ಇಂದು ಕಾರ್ಯಸಾಧಕವಾಗಿದೆ ಎಂಬುದನ್ನು ಪ್ರದರ್ಶಿಸುತ್ತದೆ. ಇದು ಒಳ್ಳೆಯದಕ್ಕಾಗಿರುವ ಒಂದು ಪ್ರಬಲ ಪ್ರಭಾವವಾಗಿದೆ.
2. ಕ್ರೈಸ್ತಪ್ರಪಂಚವು ಕ್ರಿಸ್ತನ ನಿಯಮದ ಮುಖ್ಯಾಂಶವನ್ನು ನೆರವೇರಿಸಲು ಹೇಗೆ ತಪ್ಪಿಹೋಗಿದೆ, ಮತ್ತು ಆ ನಿಯಮವನ್ನು ಪೂರೈಸಲಿಕ್ಕಾಗಿ ನಾವೇನು ಮಾಡಬಲ್ಲೆವು?
2 ಅದೇ ಸಮಯದಲ್ಲಿ, ಈ ಕಷ್ಟಕರವಾದ “ಕಡೇ ದಿವಸಗಳ” ಕುರಿತಾದ ಒಂದು ಬೈಬಲ್ ಪ್ರವಾದನೆಯು ನೆರವೇರುತ್ತಿದೆ. ಅನೇಕರು “ದೈವಿಕ ಭಕ್ತಿಯ ಒಂದು ರೂಪವನ್ನು” ಹೊಂದಿದವರಾಗಿರುವುದಾದರೂ, ‘ಅದರ ಬಲಕ್ಕೆ ದ್ರೋಹಮಾಡುವವರಾಗಿ ಕಂಡುಬರುವವರೂ’ ಆಗಿದ್ದಾರೆ. (2 ತಿಮೊಥೆಯ 3:1, 5, NW) ವಿಶೇಷವಾಗಿ ಕ್ರೈಸ್ತಪ್ರಪಂಚದಲ್ಲಿ, ಧರ್ಮವು ಅನೇಕವೇಳೆ ನಿಯಮಾನುಸರಣೆಯ ಒಂದು ವಿಷಯವಾಗಿದೆ, ಹೃದಯಪ್ರೇರಕ ವಿಷಯವಾಗಿರುವುದಿಲ್ಲ. ಇದು ಕ್ರಿಸ್ತನ ನಿಯಮಕ್ಕನುಸಾರ ಜೀವಿಸುವುದು ತೀರ ಕಷ್ಟಭರಿತವಾಗಿರುವ ಕಾರಣದಿಂದಾಗಿದೆಯೊ? ಇಲ್ಲ. ಅನುಸರಿಸಲು ಸಾಧ್ಯವಿಲ್ಲದಿರುವಂತಹ ಒಂದು ನಿಯಮವನ್ನು ಯೇಸು ನಮಗೆ ಕೊಡುತ್ತಿರಲಿಲ್ಲ. ಕ್ರೈಸ್ತಪ್ರಪಂಚವು ಕ್ರಿಸ್ತನ ನಿಯಮವನ್ನು ಅರ್ಥಮಾಡಿಕೊಳ್ಳುವುದರಲ್ಲಿ ವಿಫಲಗೊಂಡಿದೆ. ಅವಳು ಈ ಪ್ರೇರಿತ ಮಾತುಗಳಿಗೆ ಲಕ್ಷ್ಯಕೊಡಲು ವಿಫಲಳಾಗಿದ್ದಾಳೆ: “ಒಬ್ಬರು ಮತ್ತೊಬ್ಬರ ಭಾರವನ್ನು ಹೊತ್ತುಕೊಳ್ಳಲಿ; ಹೀಗೆ ಕ್ರಿಸ್ತನ ನಿಯಮವನ್ನು ನೆರವೇರಿಸಿರಿ.” (ಗಲಾತ್ಯ 6:2) ಫರಿಸಾಯರನ್ನು ಅನುಕರಿಸಿ, ನಮ್ಮ ಸಹೋದರರ ಹೊರೆಗಳಿಗೆ ಅನುಚಿತವಾಗಿ ಹೆಚ್ಚನ್ನು ಕೂಡಿಸುವ ಮೂಲಕವಾಗಿ ಅಲ್ಲ, ಬದಲಾಗಿ ನಾವು ಒಬ್ಬರು ಇನ್ನೊಬ್ಬರ ಹೊರೆಗಳನ್ನು ಹೊತ್ತುಕೊಳ್ಳುವ ಮೂಲಕ, “ಕ್ರಿಸ್ತನ ನಿಯಮವನ್ನು ನೆರವೇರಿಸು”ತ್ತೇವೆ.
3. (ಎ) ಕ್ರಿಸ್ತನ ನಿಯಮದಲ್ಲಿ ಒಳಗೂಡಿರುವ ಕೆಲವು ಆಜ್ಞೆಗಳು ಯಾವುವು? (ಬಿ) ಕ್ರಿಸ್ತನ ನೇರವಾದ ಆಜ್ಞೆಗಳ ಹೊರತಾಗಿ ಕ್ರೈಸ್ತ ಸಭೆಗೆ ಬೇರೆ ಯಾವ ನಿಬಂಧನೆಗಳೂ ಇರಬಾರದೆಂಬ ತೀರ್ಮಾನಕ್ಕೆ ಬರುವುದು ಏಕೆ ತಪ್ಪಾಗಿರುವುದು?
3 ಕ್ರಿಸ್ತನ ನಿಯಮವು, ಕ್ರಿಸ್ತ ಯೇಸುವಿನ ಎಲ್ಲಾ ಆಜ್ಞೆಗಳನ್ನು—ಸಾರುವಿಕೆಯಾಗಲಿ ಕಲಿಸುವಿಕೆಯಾಗಲಿ, ನಮ್ಮ ಕಣ್ಣನ್ನು ಶುದ್ಧವಾಗಿಯೂ ಸರಳವಾಗಿಯೂ ಇಡುವುದಾಗಲಿ, ನಮ್ಮ ನೆರೆಯವರೊಂದಿಗೆ ಶಾಂತಿಯನ್ನು ಕಾಪಾಡಿಕೊಳ್ಳುವುದರಲ್ಲಿ ಕಾರ್ಯನಡಿಸುವುದಾಗಲಿ, ಅಥವಾ ಸಭೆಯಿಂದ ಅಶುದ್ಧತೆಯನ್ನು ತೆಗೆದುಹಾಕುವುದಾಗಲಿ—ಒಳಗೊಳ್ಳುತ್ತದೆ. (ಮತ್ತಾಯ 5:27-30; 18:15-17; 28:19, 20; ಪ್ರಕಟನೆ 2:14-16) ವಾಸ್ತವವಾಗಿ, ಕ್ರೈಸ್ತರು ಕ್ರಿಸ್ತನ ಹಿಂಬಾಲಕರಿಗೆ ನಿರ್ದೇಶಿಸಲ್ಪಟ್ಟಿರುವ, ಬೈಬಲಿನಲ್ಲಿರುವ ಎಲ್ಲಾ ಆಜ್ಞೆಗಳನ್ನು ಕೈಕೊಳ್ಳುವ ಹಂಗಿಗೊಳಪಟ್ಟಿದ್ದಾರೆ. ಮತ್ತು ಇನ್ನೂ ಹೆಚ್ಚಿನ ಅಂಶಗಳಿವೆ. ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲಿಕ್ಕಾಗಿ, ಯೆಹೋವನ ಸಂಸ್ಥೆ, ಹಾಗೂ ವೈಯಕ್ತಿಕ ಸಭೆಗಳು ಅಗತ್ಯವಾದ ನಿಬಂಧನೆಗಳನ್ನೂ ಕಾರ್ಯವಿಧಾನಗಳನ್ನೂ ಸ್ಥಾಪಿಸಿಕೊಳ್ಳಬೇಕು. (1 ಕೊರಿಂಥ 14:33, 40) ಅಷ್ಟೇಕೆ, ಕ್ರೈಸ್ತರಿಗೆ ಯಾವಾಗ, ಎಲ್ಲಿ, ಮತ್ತು ಹೇಗೆ ಅಂತಹ ಕೂಟಗಳನ್ನು ನಡೆಸಬೇಕೆಂಬುದರ ಕುರಿತಾದ ನಿಬಂಧನೆಗಳಿಲ್ಲದಿರುತ್ತಿದ್ದಲ್ಲಿ, ಅವರು ಒಟ್ಟುಗೂಡಿಬರಲು ಸಹ ಸಾಧ್ಯವಿರುತ್ತಿರಲಿಲ್ಲ! (ಇಬ್ರಿಯ 10:24, 25) ಸಂಸ್ಥೆಯಲ್ಲಿ ಅಧಿಕಾರವು ಕೊಡಲ್ಪಟ್ಟಿರುವವರಿಂದ ಸ್ಥಾಪಿಸಲ್ಪಡುವ ನ್ಯಾಯಸಮ್ಮತವಾದ ಮಾರ್ಗದರ್ಶನಗಳೊಂದಿಗೆ ಸಹಕರಿಸುವುದು ಸಹ, ಕ್ರಿಸ್ತನ ನಿಯಮದ ಪೂರೈಸುವಿಕೆಯ ಒಂದು ಭಾಗವಾಗಿದೆ.—ಇಬ್ರಿಯ 13:17.
4. ಶುದ್ಧಾರಾಧನೆಯ ಹಿಂದಿರುವ ಚಾಲಕ ಶಕ್ತಿಯು ಯಾವುದಾಗಿದೆ?
4 ಆದರೂ, ಸತ್ಯ ಕ್ರೈಸ್ತರು ತಮ್ಮ ಆರಾಧನೆಯು ನಿಯಮಗಳ ಅರ್ಥಹೀನ ರಚನೆಯಾಗಿ ಪರಿಣಮಿಸುವಂತೆ ಅನುಮತಿಸುವುದಿಲ್ಲ. ಯಾವನೇ ಒಬ್ಬ ವ್ಯಕ್ತಿಯು ಅಥವಾ ಸಂಸ್ಥೆಯು ಅವರಿಗೆ ಯೆಹೋವನನ್ನು ಸೇವಿಸುವಂತೆ ಹೇಳುವ ಕಾರಣಮಾತ್ರದಿಂದ ಅವರು ಹಾಗೆ ಮಾಡುವುದಿಲ್ಲ. ಬದಲಾಗಿ, ಅವರ ಆರಾಧನೆಯ ಹಿಂದಿರುವ ಪ್ರಚೋದನಾತ್ಮಕ ಶಕ್ತಿಯು ಪ್ರೀತಿಯಾಗಿದೆ. ಪೌಲನು ಬರೆದುದು: “ಕ್ರಿಸ್ತನ ಪ್ರೀತಿಯು ನಮಗೆ ಒತ್ತಾಯಮಾಡುತ್ತದೆ.” (ಓರೆಅಕ್ಷರಗಳು ನಮ್ಮವು.) (2 ಕೊರಿಂಥ 5:14) ಒಬ್ಬರು ಇನ್ನೊಬ್ಬರನ್ನು ಪ್ರೀತಿಸುವಂತೆ ಯೇಸು ತನ್ನ ಹಿಂಬಾಲಕರಿಗೆ ಆಜ್ಞೆಯನ್ನಿತ್ತನು. (ಯೋಹಾನ 15:12, 13) ಕ್ರಿಸ್ತನ ನಿಯಮಕ್ಕೆ ಸ್ವತ್ಯಾಗದ ಪ್ರೀತಿಯು ಆಧಾರವಾಗಿದೆ, ಮತ್ತು ಇದು ಎಲ್ಲೆಡೆಯಲ್ಲಿರುವ ಸತ್ಯ ಕ್ರೈಸ್ತರನ್ನು ಒತ್ತಾಯಪಡಿಸುತ್ತದೆ ಅಥವಾ ಪ್ರಚೋದಿಸುತ್ತದೆ—ಕುಟುಂಬದಲ್ಲಿ ಹಾಗೂ ಸಭೆಯಲ್ಲಿ, ಎರಡೂ ಕಡೆಗಳಲ್ಲಿ. ಹೇಗೆ ಎಂಬುದನ್ನು ನಾವು ನೋಡೋಣ.
ಕುಟುಂಬದಲ್ಲಿ
5. (ಎ) ಮನೆಯಲ್ಲಿ ಹೆತ್ತವರು ಕ್ರಿಸ್ತನ ನಿಯಮವನ್ನು ಹೇಗೆ ಪೂರೈಸಬಲ್ಲರು? (ಬಿ) ಮಕ್ಕಳಿಗೆ ತಮ್ಮ ಹೆತ್ತವರಿಂದ ಯಾವುದರ ಆವಶ್ಯಕತೆಯಿದೆ, ಮತ್ತು ಅದನ್ನು ಪೂರೈಸಲಿಕ್ಕಾಗಿ ಕೆಲವು ಹೆತ್ತವರು ಯಾವ ವಿಘ್ನಗಳನ್ನು ಜಯಿಸಬೇಕು?
5 ಅಪೊಸ್ತಲ ಪೌಲನು ಬರೆದುದು: “ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮ ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಆತನು ಅದನ್ನು ಪ್ರತಿಷ್ಠೆಪಡಿಸುವದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು.” (ಎಫೆಸ 5:25, 26) ಗಂಡನೊಬ್ಬನು ಕ್ರಿಸ್ತನನ್ನು ಅನುಕರಿಸಿ, ತನ್ನ ಹೆಂಡತಿಯನ್ನು ಪ್ರೀತಿಯಿಂದ ಹಾಗೂ ಸಾಮರಸ್ಯದಿಂದ ಉಪಚರಿಸುವಾಗ, ಅವನು ಕ್ರಿಸ್ತನ ನಿಯಮದ ಅತ್ಯಾವಶ್ಯಕ ಅಂಶವನ್ನು ಪೂರೈಸುತ್ತಾನೆ. ಇದಲ್ಲದೆ, ಯೇಸು ಎಳೆಯ ಮಕ್ಕಳನ್ನು ಅಪ್ಪಿಕೊಂಡು, ತನ್ನ ಕೈಗಳನ್ನು ಅವರ ಮೇಲಿಟ್ಟು, ಅವರನ್ನು ಆಶೀರ್ವದಿಸುವ ಮೂಲಕ, ಅವರಿಗಾಗಿರುವ ಮಮತೆಯನ್ನು ಬಹಿರಂಗವಾಗಿ ತೋರಿಸಿದನು. (ಮಾರ್ಕ 10:16) ಕ್ರಿಸ್ತನ ನಿಯಮವನ್ನು ಪೂರೈಸುವ ಹೆತ್ತವರು ಸಹ ತಮ್ಮ ಮಕ್ಕಳಿಗಾಗಿ ಮಮತೆಯನ್ನು ತೋರಿಸುತ್ತಾರೆ. ಈ ವಿಷಯದಲ್ಲಿ ಯೇಸುವಿನ ಮಾದರಿಯನ್ನು ಅನುಕರಿಸುವುದನ್ನು ಒಂದು ಪಂಥಾಹ್ವಾನವಾಗಿ ಕಂಡುಕೊಳ್ಳುವ ಹೆತ್ತವರಿದ್ದಾರೆ ಎಂಬುದು ನಿಜ. ಕೆಲವರು ಸ್ವಭಾವತಃ ತಮ್ಮ ಭಾವನೆಗಳನ್ನು ಬಹಿರಂಗವಾಗಿ ಪ್ರದರ್ಶಿಸುವ ಪ್ರವೃತ್ತಿಯುಳ್ಳವರಾಗಿರುವುದಿಲ್ಲ. ಹೆತ್ತವರೇ, ಅಂತಹ ಪರಿಗಣನೆಗಳು, ನಿಮ್ಮ ಮಕ್ಕಳಿಗಾಗಿ ನಿಮ್ಮಲ್ಲಿ ಉಂಟಾಗುವ ಪ್ರೀತಿಯ ಭಾವನೆಯನ್ನು ಅವರಿಗೆ ತೋರಿಸುವುದರಿಂದ ನಿಮ್ಮನ್ನು ತಡೆಯುವಂತೆ ಬಿಡಬೇಡಿರಿ! ನೀವು ನಿಮ್ಮ ಮಕ್ಕಳನ್ನು ಪ್ರೀತಿಸುತ್ತೀರೆಂಬುದು ನಿಮಗೆ ಮಾತ್ರವೇ ತಿಳಿದಿರುವುದು ಸಾಕಾಗಿರುವುದಿಲ್ಲ. ಅವರು ಸಹ ಅದನ್ನು ತಿಳಿದುಕೊಳ್ಳಬೇಕು. ಮತ್ತು ನೀವು ನಿಮ್ಮ ಪ್ರೀತಿಯನ್ನು ತೋರಿಸುವ ಮಾರ್ಗಗಳನ್ನು ಕಂಡುಕೊಳ್ಳುವ ಹೊರತಾಗಿ, ಅವರು ಅದನ್ನು ತಿಳಿದುಕೊಳ್ಳುವುದಿಲ್ಲ.—ಹೋಲಿಸಿರಿ ಮಾರ್ಕ 1:11.
6. (ಎ) ಮಕ್ಕಳಿಗೆ ಹೆತ್ತವರ ನಿಬಂಧನೆಗಳ ಅಗತ್ಯವಿದೆಯೊ, ಮತ್ತು ನೀವು ಹಾಗೇಕೆ ಉತ್ತರಿಸುವಿರಿ? (ಬಿ) ಮನೆವಾರ್ತೆಗಾಗಿ ಮೂಲಭೂತವಾಗಿರುವ ಯಾವ ಕಾರಣವನ್ನು ಮಕ್ಕಳು ಅರ್ಥಮಾಡಿಕೊಳ್ಳಬೇಕಾಗಿದೆ? (ಸಿ) ಕ್ರಿಸ್ತನ ನಿಯಮವು ಮನೆವಾರ್ತೆಯಲ್ಲಿ ಅಸ್ತಿತ್ವದಲ್ಲಿರುವಾಗ ಯಾವ ಅಪಾಯಗಳು ತಡೆಗಟ್ಟಲ್ಪಡುವವು?
6 ಅದೇ ಸಮಯದಲ್ಲಿ, ಮಕ್ಕಳಿಗೆ ಮಾರ್ಗದರ್ಶನಗಳ ಅಗತ್ಯವಿದೆ, ಅವರ ಹೆತ್ತವರು ನಿಬಂಧನೆಗಳನ್ನು ಸ್ಥಾಪಿಸುವ ಮತ್ತು ಕೆಲವೊಮ್ಮೆ ಈ ನಿಬಂಧನೆಗಳನ್ನು ಶಿಸ್ತಿನ ಮೂಲಕ ಕಾರ್ಯರೂಪಕ್ಕೆ ತರುವ ಅಗತ್ಯವಿದೆ ಎಂಬುದು ಇದರ ಅರ್ಥವಾಗಿದೆ. (ಇಬ್ರಿಯ 12:7, 9, 11) ಅಷ್ಟಾದರೂ, ಈ ನಿಬಂಧನೆಗಳಿಗಾಗಿರುವ ಮೂಲಭೂತ ಕಾರಣವನ್ನು, ತಮ್ಮ ಹೆತ್ತವರು ತಮ್ಮನ್ನು ಪ್ರೀತಿಸುತ್ತಾರೆ ಎಂಬುದನ್ನು ಅವಲೋಕಿಸುವಂತೆ ಮಕ್ಕಳು ಪ್ರಗತಿಪರವಾಗಿ ಸಹಾಯ ಮಾಡಲ್ಪಡಬೇಕು. ಮತ್ತು ತಮ್ಮ ಹೆತ್ತವರಿಗೆ ವಿಧೇಯರಾಗಲು ಪ್ರೀತಿಯು ಅತ್ಯುತ್ತಮವಾದ ಕಾರಣವಾಗಿದೆ ಎಂಬುದನ್ನು ಅವರು ಕಲಿಯಬೇಕು. (ಎಫೆಸ 6:1; ಕೊಲೊಸ್ಸೆ 3:20; 1 ಯೋಹಾನ 5:3) ವಿವೇಚನಾಶಕ್ತಿಯುಳ್ಳ ಒಬ್ಬ ಹೆತ್ತವರ ಗುರಿಯು, ಎಳೆಯರು ತಮ್ಮ “ಪರ್ಯಾಲೋಚನೆಯ ಶಕ್ತಿ” (NW)ಯನ್ನು ಉಪಯೋಗಿಸುವಂತೆ ಕಲಿಸುವುದಾಗಿದೆ; ಇದರಿಂದಾಗಿ ಅವರು ಕ್ರಮೇಣವಾಗಿ ತಮ್ಮಷ್ಟಕ್ಕೆ ಸರಿಯಾದ ನಿರ್ಣಯಗಳನ್ನು ಮಾಡುವರು. (ರೋಮಾಪುರ 12:1; ಹೋಲಿಸಿರಿ 1 ಕೊರಿಂಥ 13:11.) ಇನ್ನೊಂದು ಕಡೆಯಲ್ಲಿ, ನಿಬಂಧನೆಗಳು ತೀರ ಬಹುಸಂಖ್ಯಾಕವಾಗಿರಬಾರದು ಅಥವಾ ಶಿಸ್ತು ತೀರ ಕಠಿನವಾಗಿರಬಾರದು. ಪೌಲನು ಹೇಳುವುದು: “ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರಿಗೆ ಮನಗುಂದಿಸಬೇಡಿರಿ.” (ಕೊಲೊಸ್ಸೆ 3:21; ಎಫೆಸ 6:4) ಕ್ರಿಸ್ತನ ನಿಯಮವು ಮನೆವಾರ್ತೆಯಲ್ಲಿ ಬಳಕೆಯಲ್ಲಿರುವಾಗ, ಅನಿಯಂತ್ರಿತವಾದ ಕೋಪದಿಂದ ಕೂಡಿದ ಶಿಸ್ತಿಗೊಳಪಡಿಸುವಿಕೆಗಾಗಲಿ ವೇದನಾಭರಿತವಾದ ಕೆಣಕುಮಾತುಗಳಿಗಾಗಲಿ ಆಸ್ಪದವಿರುವುದಿಲ್ಲ. ಅಂತಹ ಒಂದು ಮನೆಯಲ್ಲಿ, ಮಕ್ಕಳು ಹೊರೆಹೊರಿಸಲ್ಪಟ್ಟವರೂ ನಿಂದಿಸಲ್ಪಟ್ಟವರೂ ಆದ ಅನಿಸಿಕೆಯುಳ್ಳವರಾಗಿರುವುದಿಲ್ಲ, ಬದಲಾಗಿ ಸುರಕ್ಷಿತರೂ ಆತ್ಮೋನ್ನತಿಮಾಡಲ್ಪಟ್ಟವರೂ ಆದ ಅನಿಸಿಕೆಯುಳ್ಳವರಾಗಿರುತ್ತಾರೆ.—ಹೋಲಿಸಿರಿ ಕೀರ್ತನೆ 36:7.
7. ಮನೆಯಲ್ಲಿ ನಿಬಂಧನೆಗಳನ್ನು ಸ್ಥಾಪಿಸುವ ವಿಷಯದಲ್ಲಿ, ಬೆತೆಲ್ ಗೃಹಗಳು ಯಾವ ವಿಧಗಳಲ್ಲಿ ಒಂದು ಮಾದರಿಯನ್ನು ಒದಗಿಸಬಹುದು?
7 ಲೋಕದಾದ್ಯಂತವಿರುವ ಬೆತೆಲ್ ಗೃಹಗಳನ್ನು ಸಂದರ್ಶಿಸಿರುವ ಕೆಲವರು, ಅಂತಹ ಗೃಹಗಳು ಒಂದು ಕುಟುಂಬಕ್ಕಾಗಿರುವ ನಿಬಂಧನೆಗಳ ವಿಷಯದಲ್ಲಿ ಸಮತೂಕವಿರುವ ಒಳ್ಳೆಯ ಮಾದರಿಗಳಾಗಿವೆಯೆಂದು ಹೇಳುತ್ತಾರೆ. ಬೆತೆಲ್ ಗೃಹಗಳು ವಯಸ್ಕರಿಂದ ರಚಿತವಾಗಿರುವುದಾದರೂ, ಅಂತಹ ಸಂಸ್ಥೆಗಳು ಹೆಚ್ಚಾಗಿ ಕುಟುಂಬಗಳಂತೆ ಕಾರ್ಯನಡಿಸುತ್ತವೆ.a ಬೆತೆಲ್ ಕಾರ್ಯನಿರ್ವಹಣೆಗಳು ಜಟಿಲವಾಗಿವೆ ಮತ್ತು ನಿಶ್ಚಯವಾಗಿ ಸರಾಸರಿ ಕುಟುಂಬವು ಅಗತ್ಯಪಡಿಸುವುದಕ್ಕಿಂತಲೂ ಗಮನಾರ್ಹ ಸಂಖ್ಯೆಯ ನಿಬಂಧನೆಗಳನ್ನು ಅವು ಅಗತ್ಯಪಡಿಸುತ್ತವೆ. ಆದರೂ, ಬೆತೆಲ್ ಗೃಹಗಳು, ಆಫೀಸುಗಳು, ಮತ್ತು ಫ್ಯಾಕ್ಟರಿ ಕಾರ್ಯನಿರ್ವಹಣೆಗಳ ಮುಂದಾಳುತ್ವವನ್ನು ವಹಿಸುತ್ತಿರುವ ಹಿರಿಯರು, ಕ್ರಿಸ್ತನ ನಿಯಮವನ್ನು ಅನ್ವಯಿಸಲು ಪ್ರಯತ್ನಿಸುತ್ತಾರೆ. ಅಲ್ಲಿ ಕೆಲಸವನ್ನು ವ್ಯವಸ್ಥಾಪಿಸುವುದು ಮಾತ್ರವಲ್ಲ, ತಮ್ಮ ಜೊತೆ ಕೆಲಸಗಾರರ ನಡುವೆ ಆತ್ಮಿಕ ಪ್ರಗತಿಯನ್ನು ಹಾಗೂ “ಯೆಹೋವನ ಆನಂದ”ವನ್ನು ಪ್ರವರ್ಧಿಸುವುದನ್ನು ಸಹ ಅವರು ತಮ್ಮ ನೇಮಕದೋಪಾದಿ ವೀಕ್ಷಿಸುತ್ತಾರೆ. (ನೆಹೆಮೀಯ 8:10) ಆದುದರಿಂದ, ಅವರು ವಿಷಯಗಳನ್ನು ಒಂದು ಸಕಾರಾತ್ಮಕವಾದ, ಪ್ರೋತ್ಸಾಹದಾಯಕವಾದ ವಿಧದಲ್ಲಿ ಮಾಡಲು ಪ್ರಯತ್ನಿಸುತ್ತಾರೆ ಮತ್ತು ವಿವೇಚನೆಯುಳ್ಳವರಾಗಿರಲು ಶ್ರಮಿಸುತ್ತಾರೆ. (ಎಫೆಸ 4:31, 32) ಬೆತೆಲ್ ಕುಟುಂಬಗಳು ತಮ್ಮ ಹರ್ಷಭರಿತ ಮನೋಭಾವಕ್ಕಾಗಿ ಪ್ರಸಿದ್ಧವಾಗಿರುವುದರಲ್ಲಿ ಆಶ್ಚರ್ಯವಿಲ್ಲ!
ಸಭೆಯಲ್ಲಿ
8. (ಎ) ಸಭೆಯಲ್ಲಿ ನಮ್ಮ ಗುರಿಯು ಯಾವಾಗಲೂ ಏನಾಗಿರಬೇಕು? (ಬಿ) ಯಾವ ಪರಿಸ್ಥಿತಿಗಳ ಕೆಳಗೆ ಕೆಲವರು ನಿಬಂಧನೆಗಳಿಗಾಗಿ ಕೇಳಿಕೊಂಡಿದ್ದಾರೆ ಅಥವಾ ನಿಬಂಧನೆಗಳನ್ನು ಮಾಡಲು ಪ್ರಯತ್ನಿಸಿದ್ದಾರೆ?
8 ತದ್ರೀತಿಯಲ್ಲಿ ಸಭೆಯಲ್ಲಿ ಪ್ರೀತಿಯ ಮನೋಭಾವದಲ್ಲಿ ಒಬ್ಬರು ಇನ್ನೊಬ್ಬರ ಆತ್ಮೋನ್ನತಿಮಾಡುವುದು ನಮ್ಮ ಗುರಿಯಾಗಿದೆ. (1 ಥೆಸಲೊನೀಕ 5:11) ಆದುದರಿಂದ ವೈಯಕ್ತಿಕ ಆಯ್ಕೆಗಳ ವಿಷಯದಲ್ಲಿ ತಮ್ಮ ಸ್ವಂತ ಕಲ್ಪನೆಗಳನ್ನು ಹೊರಿಸುವ ಹೊಣೆಯನ್ನು ತಾವೇ ವಹಿಸಿಕೊಳ್ಳುತ್ತಾ, ಇತರರ ಹೊರೆಗಳಿಗೆ ಹೆಚ್ಚನ್ನು ಕೂಡಿಸದಂತೆ ಕ್ರೈಸ್ತರು ಜಾಗ್ರತೆಯಿಂದಿರತಕ್ಕದ್ದು. ಆಗಿಂದಾಗ್ಗೆ, ಕೆಲವರು ನಿರ್ದಿಷ್ಟವಾದ ಚಲನ ಚಿತ್ರಗಳು, ಪುಸ್ತಕಗಳು, ಮತ್ತು ಆಟಿಕೆಗಳ ಕುರಿತಾಗಿಯೂ ತಾವು ಯಾವ ನೋಟವನ್ನು ಹೊಂದಿರಬೇಕೆಂಬಂತಹ ವಿಷಯಗಳ ಮೇಲಿನ ನಿಬಂಧನೆಗಳಿಗಾಗಿ ಕೇಳಿಕೊಳ್ಳುತ್ತಾ, ವಾಚ್ ಟವರ್ ಸೊಸೈಟಿಗೆ ಪತ್ರಬರೆಯುತ್ತಾರೆ. ಆದರೂ, ಅಂತಹ ವಿಷಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲು ಹಾಗೂ ಅವುಗಳ ಮೇಲೆ ನ್ಯಾಯನಿರ್ಣಯಿಸಲು ಸೊಸೈಟಿಗೆ ಅಧಿಕಾರವಿಲ್ಲ. ಅಧಿಕಾಂಶ ವಿದ್ಯಮಾನಗಳಲ್ಲಿ, ಇವುಗಳು ಪ್ರತಿಯೊಬ್ಬ ವ್ಯಕ್ತಿಯು ಅಥವಾ ಕುಟುಂಬದ ಶಿರಸ್ಸು, ಬೈಬಲ್ ಮೂಲತತ್ವಗಳ ಮೇಲಿನ ತನ್ನ ಪ್ರೀತಿಯ ಮೇಲಾಧಾರಿಸಿ ನಿರ್ಣಯಮಾಡತಕ್ಕ ವಿಷಯಗಳಾಗಿವೆ. ಇತರರು ಸೊಸೈಟಿಯ ಸಲಹೆಗಳನ್ನೂ ಮಾರ್ಗದರ್ಶನಗಳನ್ನೂ ನಿಬಂಧನೆಗಳಾಗಿ ಪರಿವರ್ತಿಸುವ ಪ್ರವೃತ್ತಿಯುಳ್ಳವರಾಗಿರುತ್ತಾರೆ. ಉದಾಹರಣೆಗಾಗಿ, ಮಾರ್ಚ್ 15, 1996ರ, ಕಾವಲಿನಬುರುಜು ಸಂಚಿಕೆಯಲ್ಲಿ, ಸಭಾ ಸದಸ್ಯರಿಗೆ ಕ್ರಮವಾದ ಕುರಿಪಾಲನಾ ಭೇಟಿಗಳನ್ನು ನೀಡುವಂತೆ ಹಿರಿಯರಿಗೆ ಪ್ರೋತ್ಸಾಹನೀಡಿದ ಒಂದು ಅತ್ಯುತ್ತಮ ಲೇಖನವು ಇತ್ತು. ನಿಬಂಧನೆಗಳನ್ನು ಸ್ಥಾಪಿಸುವುದು ಇದರ ಉದ್ದೇಶವಾಗಿತ್ತೊ? ಇಲ್ಲ. ಆ ಸಲಹೆಗಳನ್ನು ಅನುಸರಿಸಲು ಸಮರ್ಥರಾಗಿರುವವರು ಅನೇಕ ಪ್ರಯೋಜನಗಳನ್ನು ಕಂಡುಕೊಳ್ಳುತ್ತಾರಾದರೂ, ಕೆಲವು ಹಿರಿಯರು ಹಾಗೆ ಮಾಡಲು ಸಮರ್ಥರಾಗಿಲ್ಲ. ತದ್ರೀತಿಯಲ್ಲಿ, ಎಪ್ರಿಲ್ 1, 1995ರ, ಕಾವಲಿನಬುರುಜು ಸಂಚಿಕೆಯಲ್ಲಿನ “ವಾಚಕರಿಂದ ಪ್ರಶ್ನೆಗಳು” ಲೇಖನವು, ದೀಕ್ಷಾಸ್ನಾನದ ಸಂದರ್ಭದ ಘನತೆಯನ್ನು, ಅನಿಯಂತ್ರಿತ ಪಾರ್ಟಿನಡೆಸುವಿಕೆಯನ್ನು ಅಥವಾ ಆಚರಣೆಗಳನ್ನು ಏರ್ಪಡಿಸುವಂತಹ ವೈಪರೀತ್ಯಗಳಿಗೆ ಹೋಗುವುದರ ಮೂಲಕ ಅಪಕರ್ಷಿತವನ್ನಾಗಿ ಮಾಡುವುದರ ವಿರುದ್ಧ ಎಚ್ಚರಿಕೆ ನೀಡಿತು. ಕೆಲವರು ಈ ಪ್ರೌಢ ಸಲಹೆಯನ್ನು ಒಂದು ನಿಬಂಧನೆಯನ್ನಾಗಿ ಮಾಡುವ ಮೂಲಕವೂ ಅದನ್ನು ಕಟ್ಟುನಿಟ್ಟಾಗಿ ಪ್ರಯೋಗಿಸಿದ್ದಾರೆ—ಈ ಸಂದರ್ಭದಲ್ಲಿ ಉತ್ತೇಜನದಾಯಕವಾದ ಕಾರ್ಡೊಂದನ್ನು ಕಳುಹಿಸುವುದು ತಪ್ಪಾಗಿರುವುದೆಂಬ ನಿಬಂಧನೆ!
9. ನಾವು ಒಬ್ಬರು ಇನ್ನೊಬ್ಬರ ಕುರಿತಾಗಿ ಬಹಳವಾಗಿ ಟೀಕಿಸುವವರೂ ನಿರ್ಣಯಾತ್ಮಕರೂ ಆಗಿರುವುದನ್ನು ತೊರೆಯುವುದು ಏಕೆ ಪ್ರಾಮುಖ್ಯವಾದ ವಿಷಯವಾಗಿದೆ?
9 “ಬಿಡುಗಡೆಗೆ ಸೇರಿದ ಪರಿಪೂರ್ಣ ನಿಯಮ”ವು ನಮ್ಮ ಮಧ್ಯೆ ಅಸ್ತಿತ್ವದಲ್ಲಿರಬೇಕಾದರೆ, ಎಲ್ಲ ಕ್ರೈಸ್ತ ಮನಸ್ಸಾಕ್ಷಿಗಳು ಒಂದೇ ರೀತಿಯವುಗಳಾಗಿರುವುದಿಲ್ಲ ಎಂಬುದನ್ನು ನಾವು ಅಂಗೀಕರಿಸಲೇಬೇಕೆಂಬುದನ್ನೂ ಪರಿಗಣಿಸಿರಿ. (ಯಾಕೋಬ 1:25, NW) ಶಾಸ್ತ್ರೀಯ ಮೂಲತತ್ವಗಳನ್ನು ಉಲ್ಲಂಘಿಸದಿರುವ ವೈಯಕ್ತಿಕ ಆಯ್ಕೆಗಳು ಜನರಿಗಿರುವುದಾದರೆ, ನಾವು ಅದರಿಂದ ಅಸಮಾಧಾನಗೊಳ್ಳಬೇಕೊ? ಇಲ್ಲ. ನಾವು ಹಾಗೆ ಮಾಡುವುದು ಅನೈಕ್ಯವನ್ನು ಉಂಟುಮಾಡುವಂತಹದ್ದಾಗಿರುವುದು. (1 ಕೊರಿಂಥ 1:10) ಜೊತೆ ಕ್ರೈಸ್ತನೊಬ್ಬನ ಕುರಿತಾಗಿ ತೀರ್ಪಿನ ಹೇಳಿಕೆಯನ್ನು ನೀಡುವುದರ ವಿರುದ್ಧ ನಮ್ಮನ್ನು ಎಚ್ಚರಿಸುತ್ತಾ ಪೌಲನು ಹೇಳಿದ್ದು: “ಅವನು ನಿರ್ದೋಷಿಯಾಗಿ ನಿಂತರೂ ದೋಷಿಯಾಗಿ ಬಿದ್ದರೂ ಅದು ಅವನ ಯಜಮಾನನಿಗೇ ಸೇರಿದ್ದು. ವಾಸ್ತವವಾಗಿ, ಅವನನ್ನು ನಿಲ್ಲುವಂತೆ ಮಾಡಲಾಗುವುದು, ಏಕೆಂದರೆ ಯೆಹೋವನು ಅವನನ್ನು ನಿಂತುಕೊಳ್ಳುವಂತೆ ಮಾಡಬಲ್ಲನು.” (ರೋಮಾಪುರ 14:4, NW) ವೈಯಕ್ತಿಕ ಮನಸ್ಸಾಕ್ಷಿಯು ನಿರ್ಣಯಿಸುವಂತೆ ಬಿಡತಕ್ಕಂತಹ ವಿಷಯಗಳ ಕುರಿತಾಗಿ ನಾವು ಒಬ್ಬರು ಇನ್ನೊಬ್ಬರ ವಿರುದ್ಧ ಮಾತಾಡುವುದಾದರೆ, ನಾವು ದೇವರನ್ನು ಅಪ್ರಸನ್ನಗೊಳಿಸುವ ಅಪಾಯದಲ್ಲಿದ್ದೇವೆ.—ಯಾಕೋಬ 4:10-12.
10. ಸಭೆಯನ್ನು ನೋಡಿಕೊಳ್ಳಲಿಕ್ಕಾಗಿ ಯಾರು ನೇಮಿಸಲ್ಪಟ್ಟಿದ್ದಾರೆ, ಮತ್ತು ನಾವು ಅವರಿಗೆ ಹೇಗೆ ಬೆಂಬಲ ನೀಡಬೇಕು?
10 ದೇವರ ಮಂದೆಯ ಮೇಲೆ ಎಚ್ಚರಿಕೆಯನ್ನಿಡಲಿಕ್ಕಾಗಿ ಹಿರಿಯರು ನೇಮಿಸಲ್ಪಟ್ಟಿದ್ದಾರೆಂಬುದನ್ನೂ ನಾವು ನೆನಪಿನಲ್ಲಿಡೋಣ. (ಅ. ಕೃತ್ಯಗಳು 20:28) ಸಹಾಯ ಮಾಡಲಿಕ್ಕಾಗಿ ಅವರಿದ್ದಾರೆ. ಬುದ್ಧಿವಾದಕ್ಕಾಗಿ ಅವರನ್ನು ಸಮೀಪಿಸಲು ನಾವು ಸಂಕೋಚಪಡಬಾರದು, ಏಕೆಂದರೆ ಅವರು ಬೈಬಲಿನ ವಿದ್ಯಾರ್ಥಿಗಳಾಗಿದ್ದು, ವಾಚ್ ಟವರ್ ಸೊಸೈಟಿಯ ಸಾಹಿತ್ಯದಲ್ಲಿ ಚರ್ಚಿಸಲ್ಪಟ್ಟಿರುವ ವಿಷಯಗಳೊಂದಿಗೆ ಚಿರಪರಿಚಿತರಾಗಿದ್ದಾರೆ. ಶಾಸ್ತ್ರೀಯ ಮೂಲತತ್ವಗಳ ಉಲ್ಲಂಘನೆಗೆ ನಡಿಸುವ ಸಂಭವನೀಯತೆಯಿರುವ ನಡತೆಯನ್ನು ಹಿರಿಯರು ನೋಡುವಾಗ, ಅಗತ್ಯವಿರುವ ಸಲಹೆಯನ್ನು ಅವರು ನಿರ್ಭಯವಾಗಿ ಕೊಡುತ್ತಾರೆ. (ಗಲಾತ್ಯ 6:1) ತಮ್ಮ ಮಧ್ಯೆ ಮುಂದಾಳುತ್ವವನ್ನು ವಹಿಸುವ, ಈ ಆತ್ಮೀಯ ಕುರುಬರೊಂದಿಗೆ ಸಹಕರಿಸುವ ಮೂಲಕ, ಸಭೆಯ ಸದಸ್ಯರು ಕ್ರಿಸ್ತನ ನಿಯಮವನ್ನು ಅನುಸರಿಸುವರು.—ಇಬ್ರಿಯ 13:7.
ಹಿರಿಯರು ಕ್ರಿಸ್ತನ ನಿಯಮವನ್ನು ಅನ್ವಯಿಸುತ್ತಾರೆ
11. ಹಿರಿಯರು ಸಭೆಯಲ್ಲಿ ಕ್ರಿಸ್ತನ ನಿಯಮವನ್ನು ಹೇಗೆ ಅನ್ವಯಿಸುತ್ತಾರೆ?
11 ಸಭೆಯಲ್ಲಿ ಕ್ರಿಸ್ತನ ನಿಯಮವನ್ನು ಪೂರೈಸಲು ಹಿರಿಯರು ಹುರುಪುಳ್ಳವರಾಗಿದ್ದಾರೆ. ಅವರು ಸುವಾರ್ತೆಯನ್ನು ಸಾರುವುದರಲ್ಲಿ ಮುಂದಾಳುತ್ವವನ್ನು ವಹಿಸುತ್ತಾರೆ, ಹೃದಯಗಳನ್ನು ತಲಪುವಂತೆ ಬೈಬಲಿನಿಂದ ವಿಷಯಗಳನ್ನು ಕಲಿಸುತ್ತಾರೆ, ಮತ್ತು ಪ್ರೀತಿಪೂರ್ಣ, ವಿನೀತ ಕುರುಬರೋಪಾದಿ ಅವರು “ಮನಗುಂದಿದವ”ರೊಂದಿಗೆ ಮಾತಾಡುತ್ತಾರೆ. (1 ಥೆಸಲೊನೀಕ 5:14) ಅವರು ಕ್ರೈಸ್ತಪ್ರಪಂಚದ ಅನೇಕ ಧರ್ಮಗಳಲ್ಲಿ ಅಸ್ತಿತ್ವದಲ್ಲಿರುವ ಅಕ್ರೈಸ್ತ ಮನೋಭಾವಗಳನ್ನು ತ್ಯಜಿಸುತ್ತಾರೆ. ಈ ಲೋಕವು ತೀವ್ರಗತಿಯಲ್ಲಿ ಅವನತಿಹೊಂದುತ್ತಿರುವುದು ನಿಜ, ಮತ್ತು ಪೌಲನಂತೆ, ಹಿರಿಯರಿಗೆ ಮಂದೆಗಾಗಿ ಚಿಂತೆಯ ಭಾವನೆಯಿರಬಹುದು; ಆದರೆ ಅಂತಹ ಹಿತಾಸಕ್ತಿಗಳ ಕುರಿತಾಗಿ ಅವರು ಕ್ರಿಯೆಗೈಯುವಾಗ ಸಮತೂಕವನ್ನು ಕಾಪಾಡಿಕೊಳ್ಳುತ್ತಾರೆ.—2 ಕೊರಿಂಥ 11:28.
12. ಒಬ್ಬ ಕ್ರೈಸ್ತನು ಸಹಾಯಕ್ಕಾಗಿ ಹಿರಿಯನನ್ನು ಸಮೀಪಿಸುವಾಗ, ಹಿರಿಯನು ಹೇಗೆ ಪ್ರತಿಕ್ರಿಯಿಸಬಹುದು?
12 ಉದಾಹರಣೆಗಾಗಿ, ನೇರವಾದ ಶಾಸ್ತ್ರೀಯ ನಿರ್ದೇಶನದಿಂದ ಆವರಿಸಲ್ಪಟ್ಟಿರದ ಯಾವುದೋ ಪ್ರಮುಖ ವಿಷಯದ ಕುರಿತಾಗಿ ಅಥವಾ ವಿವಿಧ ಕ್ರೈಸ್ತ ಮೂಲತತ್ವಗಳನ್ನು ಸಮತೂಕಗೊಳಿಸುವಂತೆ ಅಗತ್ಯಪಡಿಸುವ ವಿಷಯದ ಕುರಿತಾಗಿ ಮಾತಾಡಲಿಕ್ಕಾಗಿ ಕ್ರೈಸ್ತನೊಬ್ಬನು ಒಬ್ಬ ಹಿರಿಯನನ್ನು ಸಂಪರ್ಕಿಸಲು ಬಯಸಬಹುದು. ಅವನಿಗೆ ಕೆಲಸದಲ್ಲಿ ಅಧಿಕ ವೇತನವನ್ನು, ಆದರೆ ಭಾರಿ ಜವಾಬ್ದಾರಿಯನ್ನು ಹೊರಿಸುವಂತಹ ಒಂದು ಹುದ್ದೆಗೆ ಬಡತಿ ದೊರೆತಿರಬಹುದು. ಅಥವಾ ಯುವ ಕ್ರೈಸ್ತನೊಬ್ಬನ ಅವಿಶ್ವಾಸಿ ತಂದೆಯು ತನ್ನ ಮಗನ ಮೇಲೆ, ಅವನ ಶುಶ್ರೂಷೆಯ ಮೇಲೆ ಪರಿಣಾಮವನ್ನು ಬೀರಸಾಧ್ಯವಿರುವಂತಹ ತಗಾದೆಗಳನ್ನು ಮಾಡುತ್ತಿರಬಹುದು. ಅಂತಹ ಸನ್ನಿವೇಶಗಳಲ್ಲಿ ಹಿರಿಯನು ಒಂದು ವೈಯಕ್ತಿಕ ಅಭಿಪ್ರಾಯವನ್ನು ಕೊಡುವುದರಿಂದ ದೂರವಿರುತ್ತಾನೆ. ಬದಲಾಗಿ, ಅವನು ಬೈಬಲನ್ನು ತೆರೆದು, ಆ ವಿಷಯಕ್ಕೆ ಸಂಬಂಧಪಟ್ಟ ಮೂಲತತ್ವಗಳ ಕುರಿತಾಗಿ ವಿವೇಚಿಸುವಂತೆ ಆ ವ್ಯಕ್ತಿಗೆ ಸಹಾಯ ಮಾಡುವುದು ಸಂಭವನೀಯ. ಲಭ್ಯವಿರುವಲ್ಲಿ, ಕಾವಲಿನಬುರುಜು ಪತ್ರಿಕೆಗಳು ಹಾಗೂ ಇನ್ನಿತರ ಪ್ರಕಾಶನಗಳಲ್ಲಿ, ಈ ವಿಷಯದ ಕುರಿತಾಗಿ “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಏನನ್ನು ಹೇಳಿದ್ದಾನೆ ಎಂಬುದನ್ನು ಕಂಡುಕೊಳ್ಳಲಿಕ್ಕಾಗಿ ಅವನು ವಾಚ್ಟವರ್ ಪಬ್ಲಿಕೇಷನ್ ಇಂಡೆಕ್ಸ್ ಅನ್ನು ಉಪಯೋಗಿಸಬಹುದು. (ಮತ್ತಾಯ 24:45) ತದನಂತರ ಆ ಕ್ರೈಸ್ತನು ಹಿರಿಯನಿಗೆ ವಿವೇಕವುಳ್ಳದ್ದಾಗಿ ತೋರಿಬರದಿರುವಂತಹ ಒಂದು ನಿರ್ಣಯವನ್ನು ಮಾಡುವುದಾದರೆ ಆಗೇನು? ಈ ನಿರ್ಣಯವು ಬೈಬಲ್ ಮೂಲತತ್ವಗಳನ್ನು ಅಥವಾ ನಿಯಮಗಳನ್ನು ನೇರವಾಗಿ ಅತಿಕ್ರಮಿಸದಿರುವುದಾದರೆ, ‘ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳುವನು’ ಎಂದು ತಿಳಿದುಕೊಂಡವನಾಗಿದ್ದು, ಅಂತಹ ನಿರ್ಣಯವೊಂದನ್ನು ಮಾಡಲಿಕ್ಕಾಗಿರುವ ವ್ಯಕ್ತಿಯೊಬ್ಬನ ಹಕ್ಕನ್ನು ಹಿರಿಯನು ಗ್ರಹಿಸಿಕೊಳ್ಳುತ್ತಾನೆಂಬುದನ್ನು ಆ ಕ್ರೈಸ್ತನು ಕಂಡುಕೊಳ್ಳುವನು. ಹಾಗಿದ್ದರೂ, “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು” ಎಂಬುದನ್ನು ಕ್ರೈಸ್ತನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು.—ಗಲಾತ್ಯ 6:5, 7.
13. ಪ್ರಶ್ನೆಗಳಿಗೆ ನೇರವಾದ ಉತ್ತರಗಳನ್ನು ಕೊಡುವುದು ಅಥವಾ ತಮ್ಮ ಸ್ವಂತ ಅಭಿಪ್ರಾಯಗಳನ್ನು ಸೂಚಿಸುವುದಕ್ಕೆ ಬದಲಾಗಿ, ಇತರರು ಈ ವಿಷಯಗಳ ಕುರಿತಾಗಿ ವಿವೇಚಿಸುವಂತೆ ಹಿರಿಯರು ಏಕೆ ಸಹಾಯ ಮಾಡುತ್ತಾರೆ?
13 ಅನುಭವಸ್ಥ ಹಿರಿಯನು ಏಕೆ ಈ ರೀತಿ ಕಾರ್ಯನಡಿಸುತ್ತಾನೆ? ಕಡಿಮೆಪಕ್ಷ ಎರಡು ಕಾರಣಗಳಿಗಾಗಿ. ಮೊದಲಾಗಿ, ತಾನು ‘ಅವರ ನಂಬಿಕೆಯ ಮೇಲೆ ಯಜಮಾನನಲ್ಲ’ ಎಂದು ಪೌಲನು ಒಂದು ಸಭೆಗೆ ಹೇಳಿದನು. (2 ಕೊರಿಂಥ 1:24, NW) ಶಾಸ್ತ್ರಗಳ ಕುರಿತಾಗಿ ವಿವೇಚಿಸುವಂತೆ ತನ್ನ ಸಹೋದರನಿಗೆ ಸಹಾಯ ಮಾಡುವುದರಲ್ಲಿ ಹಾಗೂ ತನ್ನ ನಿರ್ಣಯವು ಜ್ಞಾನದ ಮೇಲಾಧಾರಿತವಾಗಿರುವಂತೆ ಮಾಡುವುದರಲ್ಲಿ ಹಿರಿಯನು, ಪೌಲನ ಮನೋಭಾವವನ್ನು ಅನುಕರಿಸುತ್ತಾನೆ. ಯೇಸು ತನ್ನ ಅಧಿಕಾರಕ್ಕೆ ಮಿತಿಗಳಿದ್ದವು ಎಂಬುದನ್ನು ಗ್ರಹಿಸಿಕೊಂಡಿದ್ದಂತೆಯೇ, ತನ್ನ ಅಧಿಕಾರಕ್ಕೂ ಮಿತಿಗಳಿವೆ ಎಂಬುದನ್ನು ಅವನು ಗ್ರಹಿಸಿಕೊಳ್ಳುತ್ತಾನೆ. (ಲೂಕ 12:13, 14; ಯೂದ 9) ಅದೇ ಸಮಯದಲ್ಲಿ, ಅಗತ್ಯವಿರುವಲ್ಲಿ ಹಿರಿಯರು ಸಹಾಯಭರಿತವಾದ, ನೇರವಾದ, ಶಾಸ್ತ್ರೀಯ ಸಲಹೆಯನ್ನೂ ಸಿದ್ಧಮನಸ್ಸಿನಿಂದ ಒದಗಿಸುತ್ತಾರೆ. ಎರಡನೆಯದಾಗಿ, ಹಿರಿಯನು ತನ್ನ ಜೊತೆ ಕ್ರೈಸ್ತನಿಗೆ ತರಬೇತಿ ನೀಡುತ್ತಿದ್ದಾನೆ. ಅಪೊಸ್ತಲ ಪೌಲನು ಹೇಳಿದ್ದು: “ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೋಸ್ಕರ ಅಂದರೆ ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಿಗೋಸ್ಕರವಾಗಿದೆ.” (ಇಬ್ರಿಯ 5:14) ಆದುದರಿಂದ, ಪ್ರೌಢತೆಗೆ ಬೆಳೆಯಲಿಕ್ಕಾಗಿ, ನಾವು ನಮ್ಮ ಸ್ವಂತ ಗ್ರಹಣ ಶಕ್ತಿಗಳನ್ನು ಉಪಯೋಗಿಸಬೇಕಾಗಿದೆ—ನಮಗಾಗಿ ನಿರ್ಣಯಗಳನ್ನು ಮಾಡುವಂತೆ ಯಾವಾಗಲೂ ಬೇರೊಬ್ಬರ ಮೇಲೆ ಆತುಕೊಳ್ಳುವುದಲ್ಲ. ಶಾಸ್ತ್ರಗಳ ಕುರಿತಾಗಿ ವಿವೇಚಿಸುವ ವಿಧವನ್ನು ತನ್ನ ಜೊತೆ ಕ್ರೈಸ್ತನಿಗೆ ತೋರಿಸುವ ಮೂಲಕ ಹಿರಿಯನು, ಈ ರೀತಿಯಲ್ಲಿ ಅವನಿಗೆ ಪ್ರಗತಿಮಾಡುವಂತೆ ಸಹಾಯ ಮಾಡುತ್ತಾನೆ.
14. ತಾವು ಯೆಹೋವನಲ್ಲಿ ವಿಶ್ವಾಸವಿಡುತ್ತೇವೆ ಎಂಬುದನ್ನು ಪ್ರೌಢ ವ್ಯಕ್ತಿಗಳು ಹೇಗೆ ತೋರಿಸಬಲ್ಲರು?
14 ಯೆಹೋವ ದೇವರು ತನ್ನ ಪವಿತ್ರಾತ್ಮದ ಮೂಲಕವಾಗಿ ಸತ್ಯಾರಾಧಕರ ಹೃದಯಗಳನ್ನು ಪ್ರಚೋದಿಸುವನು ಎಂಬ ನಂಬಿಕೆಯನ್ನು ನಾವು ಹೊಂದಿರಸಾಧ್ಯವಿದೆ. ಹೀಗೆ, ಪ್ರೌಢ ಕ್ರೈಸ್ತರು, ಅಪೊಸ್ತಲ ಪೌಲನು ಮಾಡಿದಂತೆ ತಮ್ಮ ಸಹೋದರರನ್ನು ಉಪಚರಿಸುವ ಮೂಲಕ, ಅವರ ಹೃದಯಗಳನ್ನು ರಂಜಿಸಬಲ್ಲರು. (2 ಕೊರಿಂಥ 8:8; 10:1; ಫಿಲೆಮೋನ 8, 9) ತಾವು ಸರಿಯಾಗಿ ವರ್ತಿಸುವುದಕ್ಕಾಗಿ ವಿವರವಾದ ನಿಯಮಗಳ ಅಗತ್ಯವಿರುವವರು ನೀತಿವಂತರಲ್ಲ, ಹೆಚ್ಚಾಗಿ ಅನೀತಿವಂತರಾಗಿದ್ದಾರೆಂಬುದು ಪೌಲನಿಗೆ ತಿಳಿದಿತ್ತು. (1 ತಿಮೊಥೆಯ 1:9) ಅವನು ತನ್ನ ಸಹೋದರರಲ್ಲಿ ಸಂದೇಹ ಅಥವಾ ಅಪನಂಬಿಕೆಯನ್ನಲ್ಲ, ಬದಲಿಗೆ ನಂಬಿಕೆಯನ್ನು ವ್ಯಕ್ತಪಡಿಸಿದನು. ಒಂದು ಸಭೆಗೆ ಅವನು ಬರೆದುದು: “ನಿಮ್ಮ ವಿಷಯದಲ್ಲಿ ಕರ್ತನ ಮೂಲಕವಾಗಿ ನಮಗೆ ಭರವಸವುಂಟು.” (2 ಥೆಸಲೊನೀಕ 3:4) ಪೌಲನ ನಂಬಿಕೆ, ವಿಶ್ವಾಸ, ಮತ್ತು ಭರವಸೆಯು ಆ ಕ್ರೈಸ್ತರನ್ನು ಪ್ರಚೋದಿಸಲಿಕ್ಕಾಗಿ ಹೆಚ್ಚನ್ನು ಮಾಡಿತೆಂಬುದು ನಿಶ್ಚಯ. ಇಂದು ಹಿರಿಯರು ಹಾಗೂ ಸಂಚರಣ ಮೇಲ್ವಿಚಾರಕರಿಗೆ ತದ್ರೀತಿಯ ಗುರಿಗಳಿವೆ. ಅವರು ದೇವರ ಮಂದೆಯನ್ನು ಪ್ರೀತಿಪೂರ್ವಕವಾಗಿ ಪರಿಪಾಲಿಸಿದಂತೆ, ಈ ನಂಬಿಗಸ್ತ ಪುರುಷರು ಎಷ್ಟು ಚೈತನ್ಯದಾಯಕರಾಗಿದ್ದಾರೆ!—ಯೆಶಾಯ 32:1, 2; 1 ಪೇತ್ರ 5:1-3.
ಕ್ರಿಸ್ತನ ನಿಯಮಕ್ಕನುಸಾರ ಜೀವಿಸುವುದು
15. ನಮ್ಮ ಸಹೋದರರೊಂದಿಗಿನ ನಮ್ಮ ಸಂಬಂಧದಲ್ಲಿ ನಾವು ಕ್ರಿಸ್ತನ ನಿಯಮವನ್ನು ಅನ್ವಯಿಸುತ್ತಿದ್ದೇವೋ ಇಲ್ಲವೋ ಎಂಬುದನ್ನು ಅವಲೋಕಿಸಲಿಕ್ಕಾಗಿ, ನಾವು ಸ್ವತಃ ಕೇಳಿಕೊಳ್ಳಸಾಧ್ಯವಿರುವ ಕೆಲವು ಪ್ರಶ್ನೆಗಳು ಯಾವುವು?
15 ನಾವು ಕ್ರಿಸ್ತನ ನಿಯಮಕ್ಕನುಸಾರ ಜೀವಿಸುತ್ತಿದ್ದೇವೊ, ಮತ್ತು ಕ್ರಿಸ್ತನ ನಿಯಮವನ್ನು ಪ್ರವರ್ಧಿಸುತ್ತಿದ್ದೇವೊ ಎಂಬುದನ್ನು ಅವಲೋಕಿಸಲಿಕ್ಕಾಗಿ, ನಾವೆಲ್ಲರೂ ನಮ್ಮನ್ನು ಕ್ರಮವಾಗಿ ಪರೀಕ್ಷಿಸಿಕೊಳ್ಳುವ ಅಗತ್ಯವಿದೆ. (2 ಕೊರಿಂಥ 13:5) ನಿಜವಾಗಿಯೂ, ಹೀಗೆ ಕೇಳಿಕೊಳ್ಳುವ ಮೂಲಕ ನಾವೆಲ್ಲರೂ ಪ್ರಯೋಜನವನ್ನು ಪಡೆದುಕೊಳ್ಳಬಲ್ಲೆವು: ‘ನಾನು ಆತ್ಮೋನ್ನತಿಮಾಡುವವನಾಗಿದ್ದೇನೊ ಅಥವಾ ಟೀಕಾತ್ಮಕನಾಗಿದ್ದೇನೊ? ನಾನು ಸಮತೂಕವುಳ್ಳವನಾಗಿದ್ದೇನೊ ಅಥವಾ ವೈಪರೀತ್ಯವುಳ್ಳವನಾಗಿದ್ದೇನೊ? ನಾನು ಇತರರಿಗಾಗಿ ಪರಿಗಣನೆಯನ್ನು ತೋರಿಸುತ್ತೇನೊ ಅಥವಾ ನನ್ನ ಸ್ವಂತ ಹಕ್ಕುಗಳ ಕುರಿತಾಗಿ ಪಟ್ಟುಹಿಡಿಯುತ್ತೇನೊ?’ ಒಬ್ಬ ಕ್ರೈಸ್ತನು, ಬೈಬಲಿನಲ್ಲಿ ನಿರ್ದಿಷ್ಟವಾಗಿ ಆವರಿಸಲ್ಪಟ್ಟಿರದ ವಿಷಯಗಳಲ್ಲಿ ತನ್ನ ಸಹೋದರನು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು ಅಥವಾ ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬಾರದು ಎಂಬುದನ್ನು ಆದೇಶಿಸಲು ಪ್ರಯತ್ನಿಸುವುದಿಲ್ಲ.—ರೋಮಾಪುರ 12:1; 1 ಕೊರಿಂಥ 4:6.
16. ಕ್ರಿಸ್ತನ ನಿಯಮದ ಅತ್ಯಾವಶ್ಯಕ ಅಂಶವನ್ನು ಪೂರೈಸುತ್ತಾ, ಸ್ವತಃ ತಮ್ಮ ಕುರಿತಾಗಿ ನಕಾರಾತ್ಮಕ ನೋಟಗಳನ್ನು ಹೊಂದಿರುವವರಿಗೆ ನಾವು ಹೇಗೆ ಸಹಾಯ ಮಾಡಸಾಧ್ಯವಿದೆ?
16 ಈ ಕಷ್ಟಕರವಾದ ಸಮಯಗಳಲ್ಲಿ, ಒಬ್ಬರು ಇನ್ನೊಬ್ಬರನ್ನು ಪ್ರೋತ್ಸಾಹಿಸುವ ಮಾರ್ಗಗಳಿಗಾಗಿ ಹುಡುಕುವುದು ನಮಗೆ ಪ್ರಾಮುಖ್ಯವಾದ ವಿಷಯವಾಗಿದೆ. (ಇಬ್ರಿಯ 10:24, 25; ಹೋಲಿಸಿರಿ ಮತ್ತಾಯ 7:1-5.) ನಾವು ನಮ್ಮ ಸಹೋದರ ಸಹೋದರಿಯರೆಡೆಗೆ ನೋಡುವಾಗ, ಅವರ ಬಲಹೀನತೆಗಳಿಗಿಂತಲೂ ಹೆಚ್ಚಾಗಿ ಅವರ ಸುಗುಣಗಳು ನಮಗೆ ಹೆಚ್ಚನ್ನು ಅರ್ಥೈಸುವುದಿಲ್ಲವೊ? ಯೆಹೋವನಿಗೆ ಪ್ರತಿಯೊಬ್ಬರೂ ಅಮೂಲ್ಯರಾಗಿದ್ದಾರೆ. ಅಸಂತೋಷಕರವಾಗಿ, ಎಲ್ಲರಿಗೂ ಆ ರೀತಿಯ ಅನಿಸಿಕೆಯಾಗುವುದಿಲ್ಲ—ಅನೇಕರಿಗೆ ಸ್ವತಃ ತಮ್ಮ ಕುರಿತಾಗಿ ಒಂದು ನಕಾರಾತ್ಮಕವಾದ ನೋಟವಿದೆ. ಕೆಲವರು ತಮ್ಮ ಸ್ವಂತ ವೈಯಕ್ತಿಕ ಲೋಪದೋಷಗಳನ್ನು ಹಾಗೂ ಅಪರಿಪೂರ್ಣತೆಗಳನ್ನು ಮಾತ್ರವೇ ನೋಡಿಕೊಳ್ಳುವ ಪ್ರವೃತ್ತಿಯವರಾಗಿರುತ್ತಾರೆ. ಅಂತಹವರನ್ನು ಹಾಗೂ ಇತರರನ್ನು ಉತ್ತೇಜಿಸಲಿಕ್ಕಾಗಿ, ನಾವು ಅವರ ಉಪಸ್ಥಿತಿಯನ್ನೂ ಸಭೆಯಲ್ಲಿ ಅವರು ನೀಡುವ ಪ್ರಮುಖ ನೆರವನ್ನೂ ಏಕೆ ಅಮೂಲ್ಯವೆಂದೆಣಿಸುತ್ತೇವೆ ಎಂಬುದನ್ನು ಅವರಿಗೆ ತಿಳಿಯುವಂತೆಮಾಡುತ್ತಾ, ಪ್ರತಿಯೊಂದು ಕೂಟದಲ್ಲಿ ಒಬ್ಬಿಬ್ಬರು ವ್ಯಕ್ತಿಗಳೊಂದಿಗೆ ಮಾತಾಡಲು ನಾವು ಪ್ರಯತ್ನಿಸಸಾಧ್ಯವಿದೆಯೊ? ಈ ರೀತಿಯಲ್ಲಿ ಅವರ ಹೊರೆಯನ್ನು ಕಡಿಮೆಮಾಡುವುದು, ಹಾಗೂ ಇದರ ಮೂಲಕವಾಗಿ ಕ್ರಿಸ್ತನ ನಿಯಮವನ್ನು ಪೂರೈಸುವುದು ಎಂತಹ ಒಂದು ಆನಂದವಾಗಿದೆ!—ಗಲಾತ್ಯ 6:2.
ಕ್ರಿಸ್ತನ ನಿಯಮವು ಕಾರ್ಯನಡಿಸುತ್ತಿದೆ!
17. ನಿಮ್ಮ ಸಭೆಯಲ್ಲಿ ಕ್ರಿಸ್ತನ ನಿಯಮವು ಕಾರ್ಯನಡಿಸುತ್ತಿದೆ ಎಂಬುದನ್ನು ಯಾವ ವಿಭಿನ್ನ ವಿಧಗಳಲ್ಲಿ ನೀವು ಅವಲೋಕಿಸುತ್ತೀರಿ?
17 ಕ್ರಿಸ್ತನ ನಿಯಮವು ಕ್ರೈಸ್ತ ಸಭೆಯಲ್ಲಿ ಕಾರ್ಯನಡಿಸುತ್ತಿದೆ. ನಾವು ಅದನ್ನು ದಿನಾಲೂ—ಜೊತೆ ಸಾಕ್ಷಿಗಳು ಅತ್ಯುತ್ಸಾಹದಿಂದ ಸುವಾರ್ತೆಯನ್ನು ಹಂಚುವಾಗ, ಅವರು ಒಬ್ಬರು ಇನ್ನೊಬ್ಬರನ್ನು ಸಾಂತ್ವನಗೊಳಿಸಿ, ಉತ್ತೇಜಿಸುವಾಗ, ಅತ್ಯಂತ ಕಷ್ಟಕರವಾದ ಸಮಸ್ಯೆಗಳ ಹೊರತಾಗಿಯೂ ಅವರು ಯೆಹೋವನನ್ನು ಸೇವಿಸಲು ಹೋರಾಡುವಾಗ, ಹೆತ್ತವರು ತಮ್ಮ ಮಕ್ಕಳನ್ನು, ಯೆಹೋವನನ್ನು ಹರ್ಷಭರಿತ ಹೃದಯಗಳಿಂದ ಪ್ರೀತಿಸುವಂತೆ ಬೆಳೆಸಲು ಶ್ರಮಿಸುವಾಗ, ಯೆಹೋವನನ್ನು ಸದಾಕಾಲ ಸೇವಿಸುವ ತೀಕ್ಷ್ಣವಾದ ಹುರುಪನ್ನು ಹೊಂದಿರುವಂತೆ ಮಂದೆಯನ್ನು ಪ್ರಚೋದಿಸುವ ಮೂಲಕ, ಮೇಲ್ವಿಚಾರಕರು ದೇವರ ವಾಕ್ಯವನ್ನು ಪ್ರೀತಿ ಮತ್ತು ಆದರಣೆಯಿಂದ ಕಲಿಸುವಾಗ—ನೋಡುತ್ತೇವೆ. (ಮತ್ತಾಯ 28:19, 20; 1 ಥೆಸಲೊನೀಕ 5:11, 14) ನಾವು ವ್ಯಕ್ತಿಗತವಾಗಿ ಕ್ರಿಸ್ತನ ನಿಯಮವನ್ನು ನಮ್ಮ ಜೀವಿತಗಳಲ್ಲಿ ಕಾರ್ಯನಡಿಸುವಂತೆ ಅನುಮತಿಸುವಾಗ, ಯೆಹೋವನ ಹೃದಯವು ಎಷ್ಟು ಆನಂದಪಡುತ್ತದೆ! (ಜ್ಞಾನೋಕ್ತಿ 23:15) ತನ್ನ ಪರಿಪೂರ್ಣ ನಿಯಮವನ್ನು ಪ್ರೀತಿಸುವವರೆಲ್ಲರೂ ಸದಾಕಾಲ ಜೀವಿಸುವಂತೆ ಆತನು ಬಯಸುತ್ತಾನೆ. ಬರಲಿರುವ ಪ್ರಮೋದವನದಲ್ಲಿ, ಮಾನವಕುಲವು ಪರಿಪೂರ್ಣವಾಗಿರುವ ಒಂದು ಸಮಯವನ್ನು, ನಿಯಮೋಲ್ಲಂಘನೆಮಾಡುವವರು ಇಲ್ಲದಿರುವ ಒಂದು ಸಮಯವನ್ನು, ಮತ್ತು ನಮ್ಮ ಹೃದಯಗಳ ಪ್ರತಿಯೊಂದು ಪ್ರವೃತ್ತಿಯು ನಿಯಂತ್ರಣದ ಕೆಳಗಿರುವಂತಹ ಒಂದು ಸಮಯವನ್ನು ನಾವು ಕಾಣುವೆವು. ಕ್ರಿಸ್ತನ ನಿಯಮಕ್ಕನುಸಾರ ಜೀವಿಸುವುದಕ್ಕಾಗಿ ಎಂತಹ ಒಂದು ಮಹಿಮಾಯುತ ಪ್ರತಿಫಲ!
[ಪಾದಟಿಪ್ಪಣಿ]
a ಅಂತಹ ಮನೆಗಳು ಕ್ರೈಸ್ತಪ್ರಪಂಚದ ಸಂನ್ಯಾಸಿ ಮಠಗಳಂತಿಲ್ಲ. “ಕ್ರೈಸ್ತಮಠಾಧಿಪತಿಗಳು” ಅಥವಾ “ಫಾದರ್ಗಳು” ಎಂಬ ಆ ಅರ್ಥದಲ್ಲಿ ಅಲ್ಲಿ ಯಾರೂ ಇಲ್ಲ. (ಮತ್ತಾಯ 23:9) ಜವಾಬ್ದಾರಿಯುತ ಸಹೋದರರಿಗೆ ಗೌರವವು ಕೊಡಲ್ಪಡುತ್ತದಾದರೂ, ಎಲ್ಲಾ ಹಿರಿಯರನ್ನು ನಿಯಂತ್ರಿಸುವಂತಹ ಮೂಲತತ್ವಗಳಿಂದಲೇ ಅವರ ಸೇವೆಯು ಮಾರ್ಗದರ್ಶಿಸಲ್ಪಡುತ್ತದೆ.
ನೀವೇನು ನೆನಸುತ್ತೀರಿ?
◻ ಕ್ರೈಸ್ತಪ್ರಪಂಚವು ಕ್ರಿಸ್ತನ ನಿಯಮದ ಮುಖ್ಯಾಂಶವನ್ನು ನೆರವೇರಿಸಲು ಏಕೆ ತಪ್ಪಿಹೋಗಿದೆ?
◻ ನಾವು ಕ್ರಿಸ್ತನ ನಿಯಮವನ್ನು ಕುಟುಂಬದಲ್ಲಿ ಹೇಗೆ ಅನ್ವಯಿಸಬಹುದು?
◻ ಸಭೆಯಲ್ಲಿ ಕ್ರಿಸ್ತನ ನಿಯಮವನ್ನು ಅನ್ವಯಿಸಲಿಕ್ಕಾಗಿ, ನಾವು ಏನನ್ನು ತೊರೆಯಬೇಕು, ಮತ್ತು ನಾವು ಏನು ಮಾಡತಕ್ಕದ್ದು?
◻ ಸಭೆಯೊಂದಿಗಿನ ತಮ್ಮ ವ್ಯವಹಾರಗಳಲ್ಲಿ, ಹಿರಿಯರು ಕ್ರಿಸ್ತನ ನಿಯಮಕ್ಕೆ ಹೇಗೆ ವಿಧೇಯರಾಗಬಹುದು?
[ಪುಟ 23 ರಲ್ಲಿರುವ ಚಿತ್ರ]
ನಿಮ್ಮ ಮಗುವಿಗೆ ಪ್ರೀತಿಯ ಮಹಾ ಆವಶ್ಯಕತೆಯಿದೆ
[ಪುಟ 24 ರಲ್ಲಿರುವ ಚಿತ್ರ]
ನಮ್ಮ ಆತ್ಮೀಯ ಕುರುಬರು ಎಷ್ಟು ಚೈತನ್ಯದಾಯಕರಾಗಿದ್ದಾರೆ!