ಅಕ್ವಿಲ ಮತ್ತು ಪ್ರಿಸ್ಕಿಲ್ಲ ಆದರ್ಶಪ್ರಾಯ ದಂಪತಿಗಳು
“ಕ್ರಿಸ್ತ ಯೇಸುವಿನ ಸೇವೆಯಲ್ಲಿ ನನ್ನ ಜೊತೆಕೆಲಸದವರಾದ ಪ್ರಿಸ್ಕಳಿಗೂ ಅಕ್ವಿಲನಿಗೂ ನನ್ನ ವಂದನೆಗಳನ್ನು ಹೇಳಿರಿ. ಅವರು ನನ್ನ ಪ್ರಾಣದ ಸಂರಕ್ಷಣೆಗಾಗಿ ತಮ್ಮ ಪ್ರಾಣಗಳನ್ನು ಅಪಾಯಕ್ಕೆ ಗುರಿಮಾಡಿದರು. ನಾನು ಮಾತ್ರವೇ ಅಲ್ಲ, ಅನ್ಯಜನರ ಸಭೆಗಳವರೆಲ್ಲರೂ ಅವರ ಉಪಕಾರವನ್ನು ಸ್ಮರಿಸುತ್ತಾರೆ.”—ರೋಮಾಪುರ 16:3, 4.
ರೋಮ್ನಲ್ಲಿದ್ದ ಕ್ರೈಸ್ತ ಸಭೆಗೆ ಅಪೊಸ್ತಲ ಪೌಲನ ಈ ಮಾತುಗಳು, ಈ ವಿವಾಹಿತ ದಂಪತಿಗಳಿಗಾಗಿ ಅವನಲ್ಲಿದ್ದ ಉಚ್ಚ ಮಾನ್ಯತೆ ಮತ್ತು ಹೃದಯೋಲ್ಲಾಸದ ಅಭಿಮಾನವನ್ನು ಸೂಚಿಸುತ್ತವೆ. ಅವನು ಅವರ ಸಭೆಗೆ ಬರೆಯುವಾಗ, ಅವರನ್ನು ಅಲಕ್ಷಿಸದಂತೆ ಖಚಿತಪಡಿಸಿಕೊಂಡನು. ಆದರೆ ಪೌಲನ ಈ ಇಬ್ಬರು ‘ಜೊತೆಕೆಲಸದವರು’ ಯಾರಾಗಿದ್ದರು, ಮತ್ತು ಅವರು ಅವನಿಗೆ ಮತ್ತು ಸಭೆಗಳಿಗೆ ಅಷ್ಟು ಪ್ರಿಯರಾಗಿದ್ದದ್ದು ಏಕೆ?—2 ತಿಮೊಥೆಯ 4:19.
ಅಕ್ವಿಲನು ಡೈಆಸ್ಪರ (ಚೆದರಿಹೋದ ಯೆಹೂದ್ಯರ)ದ ಒಬ್ಬ ಯೆಹೂದಿಯಾಗಿದ್ದು, ಉತ್ತರದ ಏಷಿಯಾ ಮೈನರ್ನ ಒಂದು ಪ್ರದೇಶವಾದ ಪಾಂಟಸ್ನ ಒಬ್ಬ ನಿವಾಸಿಯಾಗಿದ್ದನು. ಅವನು ಮತ್ತು ಅವನ ಹೆಂಡತಿಯಾದ ಪ್ರಿಸ್ಕಿಲ್ಲ (ಪ್ರಿಸ್ಕ)ಳು ರೋಮಿನಲ್ಲಿ ನೆಲೆಸಿದ್ದರು. ಕಡಿಮೆಪಕ್ಷ ಸಾ.ಶ.ಪೂ. 63ರಲ್ಲಿ, ಪಾಂಪೀ ಯೆರೂಸಲೇಮನ್ನು ವಶಪಡಿಸಿಕೊಂಡು ದೊಡ್ಡ ಸಂಖ್ಯೆಯಲ್ಲಿ ಸೆರೆವಾಸಿಗಳು ರೋಮಿಗೆ ದಾಸರಾಗಿ ಕೊಂಡೊಯ್ಯಲ್ಪಟ್ಟಾಗಿನಂದಿನಿಂದ ಆ ನಗರದಲ್ಲಿ ದೊಡ್ಡ ಗಾತ್ರದ ಯೆಹೂದಿ ಸಮುದಾಯವೊಂದಿತ್ತು. ವಾಸ್ತವದಲ್ಲಿ ರೋಮನ್ ಸ್ಮಾರಕಲೇಖಗಳು, ಆ ಪುರಾತನ ನಗರದಲ್ಲಿ ಒಂದು ಡಸನ್ ಅಥವಾ ಅದಕ್ಕಿಂತಲೂ ಹೆಚ್ಚು ಸಭಾಮಂದಿರಗಳ ಅಸ್ತಿತ್ವವನ್ನು ಪ್ರಕಟಪಡಿಸುತ್ತವೆ. ಅವರು ಸುವಾರ್ತೆಯನ್ನು ಕೇಳಿದ ಸಮಯ, ಸಾ.ಶ. 33ರ ಪಂಚಾಶತ್ತಮದಲ್ಲಿ ರೋಮಿನಿಂದ ಬಂದ ಹಲವಾರು ಯೆಹೂದ್ಯರು ಯೆರೂಸಲೇಮಿನಲ್ಲಿ ಉಪಸ್ಥಿತರಿದ್ದರು. ಪ್ರಾಯಶಃ ಅವರ ಮೂಲಕ ಕ್ರೈಸ್ತ ಸಂದೇಶವು, ಪ್ರಥಮವಾಗಿ ರೋಮನ್ ಸಾಮ್ರಾಜ್ಯದ ರಾಜಧಾನಿಯನ್ನು ತಲಪಿತು.—ಅ. ಕೃತ್ಯಗಳು 2:10.
ಆದಾಗಲೂ, ಇಸವಿ 49ರಲ್ಲಿ ಅಥವಾ ಸಾ.ಶ. 50ರ ಆದಿ ಭಾಗದಲ್ಲಿ, ಸಮ್ರಾಟ ಕ್ಲೌದಿಯನ ಅಪ್ಪಣೆಯಿಂದಾಗಿ ಯೆಹೂದ್ಯರು ರೋಮ್ನಿಂದ ಹೊರಹಾಕಲ್ಪಟ್ಟಿದ್ದರು. ಆದುದರಿಂದ, ಅಪೊಸ್ತಲ ಪೌಲನು ಅಕ್ವಿಲ ಮತ್ತು ಪ್ರಿಸ್ಕಿಲ್ಲರನ್ನು ಸಂಧಿಸಿದ್ದು ಗ್ರೀಕ್ ನಗರವಾದ ಕೊರಿಂಥದಲ್ಲಿ. ಪೌಲನು ಕೊರಿಂಥದಲ್ಲಿ ಆಗಮಿಸಿದಾಗ, ಅಕ್ವಿಲ ಮತ್ತು ಪ್ರಿಸ್ಕಿಲ್ಲರು ಅವನಿಗೆ ದಯೆಯಿಂದ ಅತಿಥಿಸತ್ಕಾರ ಮತ್ತು ಕೆಲಸ, ಎರಡನ್ನೂ ನೀಡಿದರು, ಯಾಕಂದರೆ ಅವರು ಒಂದು ಸಾಮಾನ್ಯವಾದ ಕಸಬಿನಲ್ಲಿ, ಗುಡಾರಮಾಡುವಿಕೆಯಲ್ಲಿ ಪಾಲಿಗರಾಗಿದ್ದರು.—ಅ. ಕೃತ್ಯಗಳು 18:2, 3.
ಗುಡಾರಮಾಡುವವರು
ಇದು ಸುಲಭದ ಕೆಲಸವಾಗಿರಲಿಲ್ಲ. ಗುಡಾರಗಳನ್ನು ಮಾಡುವುದು, ಸೆಡೆತಿರುವ, ಒರಟಾದ ಸಾಮಾಗ್ರಿ ಅಥವಾ ಚರ್ಮವನ್ನು ಕತ್ತರಿಸಿ, ಒಟ್ಟಿಗೆ ಹೊಲಿಯುವುದನ್ನು ಒಳಗೊಂಡಿತ್ತು. ಇತಿಹಾಸಕಾರನಾದ ಫೆರ್ನಾಂಡೊ ಬೇಆಗನುಸಾರ, ಇದು, “ಪ್ರಯಾಣಿಸುವಾಗ ಡೇರೆಹಾಕಲು, ಸೂರ್ಯನಿಂದ ಅಥವಾ ಮಳೆಯಿಂದ ಆಶ್ರಯವನ್ನು ಒದಗಿಸಲು ಅಥವಾ ಹಡಗುಗಳ ಒಳಗಿನ ಅಟ್ಟದಲ್ಲಿ ಸಾಮಾನುಗಳನ್ನು ಪ್ಯಾಕ್ ಮಾಡಲು ಉಪಯೋಗಿಸಲ್ಪಟ್ಟ, ಒರಟಾದ, ಮೆತುವಲ್ಲದ ಬಟ್ಟೆ”ಗಳೊಂದಿಗೆ ಕೆಲಸಮಾಡುತ್ತಿದ್ದ ಆ ಗುಡಾರಮಾಡುವವರ ವತಿಯಿಂದ “ಕುಶಲತೆ ಮತ್ತು ಜಾಗ್ರತೆಯನ್ನು ಅವಶ್ಯಪಡಿಸಿದಂತಹ ಒಂದು ಕೆಲಸ”ವಾಗಿತ್ತು.
ಇದು ಒಂದು ಪ್ರಶ್ನೆಯನ್ನು ಎಬ್ಬಿಸುತ್ತದೆ. ಬರಲಿದ್ದ ವರ್ಷಗಳಲ್ಲಿ ಒಂದು ಪ್ರತಿಷ್ಠೆಯ ಜೀವನೋದ್ಯೋಗವನ್ನು ಬೆನ್ನಟ್ಟಲು ಅವನನ್ನು ತಯಾರಿಸುತ್ತಾ, ತಾನು ‘ಗಮಲಿಯೇಲನ ಪಾದಸನ್ನಿಧಿಯಲ್ಲಿ ಶಿಕ್ಷಿತನಾದವ’ನೆಂದು ಪೌಲನು ಹೇಳಲಿಲ್ಲವೊ? (ಅ. ಕೃತ್ಯಗಳು 22:3) ಇದು ಸತ್ಯವಾಗಿದೆಯಾದರೂ, ಒಬ್ಬ ಹುಡುಗನು ಉಚ್ಚ ಶಿಕ್ಷಣವನ್ನು ಪಡೆಯುತ್ತಿದ್ದರೂ ಒಂದು ಕಸಬನ್ನು ಅವನಿಗೆ ಕಲಿಸುವುದು ಪ್ರಥಮ ಶತಮಾನದ ಯೆಹೂದ್ಯರಲ್ಲಿ ಗೌರವಾನಿತ್ವವಾಗಿ ಪರಿಗಣಿಸಲ್ಪಡುತ್ತಿತ್ತು. ಆದುದರಿಂದ, ಅಕ್ವಿಲ ಮತ್ತು ಪೌಲರಿಬ್ಬರೂ, ಎಳೆಯವರಿದ್ದಾಗಲೇ ಗುಡಾರ ತಯಾರಿಯಲ್ಲಿನ ಅವರ ಕೌಶಲವನ್ನು ಗಳಿಸಿದ್ದರೆಂಬುದು ಸಂಭಾವ್ಯ. ಆ ಅನುಭವವು ಅನಂತರ ತುಂಬ ಪ್ರಯೋಜನಕಾರಿಯಾಗಿ ಪರಿಣಮಿಸಿತು. ಆದರೆ ಕ್ರೈಸ್ತರೋಪಾದಿ, ಅವರು ಅಂತಹ ಐಹಿಕ ಕೆಲಸವನ್ನು ತಮ್ಮ ಮುಖ್ಯ ಉದ್ದೇಶದೋಪಾದಿ ಪರಿಗಣಿಸಲಿಲ್ಲ. ಕೊರಿಂಥದಲ್ಲಿ ಅಕ್ವಿಲ ಮತ್ತು ಪ್ರಿಸ್ಕಿಲ್ಲರೊಂದಿಗೆ ತಾನು ಮಾಡುತ್ತಿದ್ದ ಕೆಲಸವು ತನ್ನ ಪ್ರಮುಖ ಚಟುವಟಿಕೆಯಾದ ಸುವಾರ್ತೆಯ ಸಾರುವಿಕೆಯನ್ನು, ‘ಒಬ್ಬರಿಗೂ ಭಾರವಾಗದೆ’ ಬೆಂಬಲಿಸಲು ಕೇವಲ ಒಂದು ಸಾಧನವಾಗಿತ್ತೆಂದು ಪೌಲನು ವಿವರಿಸಿದನು.—2 ಥೆಸಲೊನೀಕ 3:8; 1 ಕೊರಿಂಥ 9:18; 2 ಕೊರಿಂಥ 11:7.
ಪೌಲನ ಮಿಷನೆರಿ ಸೇವೆಯನ್ನು ಅನುಕೂಲ ಮಾಡಲು ತಮಗೆ ಸಾಧ್ಯವಿರುವುದೆಲ್ಲವನ್ನು ಮಾಡಲು ಅಕ್ವಿಲ ಮತ್ತು ಪ್ರಿಸ್ಕಿಲ್ಲರು ಸಂತೋಷಿತರಾಗಿದ್ದರೆಂಬುದು ವ್ಯಕ್ತ. ಗಿರಾಕಿಗಳಿಗೆ ಅಥವಾ ದಾರಿಹೋಕರಿಗೆ ಒಂದು ಅನೌಪಚಾರಿಕ ಸಾಕ್ಷಿಯನ್ನು ಕೊಡಲಿಕ್ಕಾಗಿ ಆ ಮೂವರು ಸ್ನೇಹಿತರು ಮಧ್ಯದಲ್ಲಿ ತಮ್ಮ ಕೆಲಸವನ್ನು ಎಷ್ಟೋ ಸಲ ನಿಲ್ಲಿಸಿದ್ದಿರಬೇಕು! ಮತ್ತು ಗುಡಾರಮಾಡುವಿಕೆಯ ಅವರ ಕೆಲಸವು ಕೀಳು ಮತ್ತು ಬಳಲಿಸುವಂತಹದ್ದಾಗಿದ್ದರೂ, ದೇವರ ಅಭಿರುಚಿಗಳನ್ನು ಪ್ರವರ್ಧಿಸಲಿಕ್ಕಾಗಿ “ಹಗಲಿರುಳು” ಕೂಡ ಕೆಲಸಮಾಡುತ್ತಾ, ಅದನ್ನು ಮಾಡಲು ಅವರು ಸಂತೋಷಿತರಾಗಿದ್ದರು. ಅಂತೆಯೇ, ಆಧುನಿಕ ದಿನದ ಅನೇಕ ಕ್ರೈಸ್ತರು, ಜನರು ಸುವಾರ್ತೆಯನ್ನು ಕೇಳುವಂತೆ ಸಹಾಯ ಮಾಡಲು ಉಳಿದಿರುವ ಸಮಯದಲ್ಲಿ ಹೆಚ್ಚಿನದ್ದನ್ನು ಸಮರ್ಪಿಸುವ ಕಾರಣಕ್ಕಾಗಿ ತಮ್ಮನ್ನು ಅಂಶಕಾಲಿಕ ಅಥವಾ ಆಯಾಕಾಲದ ಕೆಲಸದೊಂದಿಗೆ ನಡೆಸಿಕೊಂಡು ಹೋಗುತ್ತಾರೆ.—1 ಥೆಸಲೊನೀಕ 2:9; ಮತ್ತಾಯ 24:14; 1 ತಿಮೊಥೆಯ 6:6.
ಅತಿಥಿಸತ್ಕಾರದ ಮಾದರಿಗಳು
ಪೌಲನು ಕೊರಿಂಥದಲ್ಲಿ ಉಳಿದಂತಹ 18 ತಿಂಗಳುಗಳ ಸಮಯದಲ್ಲಿ, ತನ್ನ ಮಿಷನೆರಿ ಚಟುವಟಿಕೆಗಳಿಗಾಗಿ ಅವನು ಅಕ್ವಿಲನ ಮನೆಯನ್ನು ಪ್ರಾಯಶಃ ಒಂದು ಮೂಲಠಾಣ್ಯವಾಗಿ ಉಪಯೋಗಿಸಿದನು. (ಅ. ಕೃತ್ಯಗಳು 18:3, 11) ಹಾಗಿರುವುದಾದರೆ, ಮಕೆದೋನ್ಯದಿಂದ ಸೀಲನು (ಸಿಲ್ವಾನಸನು) ಮತ್ತು ತಿಮೊಥೆಯನ ಆಗಮನದ ಸಮಯದಲ್ಲಿ, ಅವರನ್ನೂ ಅತಿಥಿಗಳನ್ನಾಗಿ ಹೊಂದಿರುವ ಆನಂದವನ್ನು ಅಕ್ವಿಲ ಮತ್ತು ಪ್ರಿಸ್ಕಿಲ್ಲರು ಪಡೆದಿರುವುದು ಸಂಭಾವ್ಯ. (ಅ. ಕೃತ್ಯಗಳು 18:5) ಅನಂತರ ಅಧಿಕೃತ ಬೈಬಲಿನ ಭಾಗವಾದ, ಥೆಸಲೊನೀಕದವರಿಗೆ ಬರೆದ ಪೌಲನ ಎರಡು ಪತ್ರಗಳು, ಅಪೊಸ್ತಲನು ಅಕ್ವಿಲ ಮತ್ತು ಪ್ರಿಸ್ಕಿಲ್ಲರೊಂದಿಗೆ ತಂಗಿದ್ದಾಗ ಬರೆಯಲ್ಪಟ್ಟಿದ್ದಿರಬಹುದು.
ಈ ಸಮಯದಲ್ಲಿ ಪ್ರಿಸ್ಕಿಲ್ಲ ಮತ್ತು ಅಕ್ವಿಲರ ಮನೆಯು ದೇವಪ್ರಭುತ್ವ ಚಟುವಟಿಕೆಯ ಒಂದು ನಿಜವಾದ ಕೇಂದ್ರವಾಗಿತ್ತೆಂಬುದನ್ನು ಊಹಿಸುವುದು ಸುಲಭ. ಸಂಭವನೀಯವಾಗಿ ಅನೇಕ ಪ್ರಿಯ ಮಿತ್ರರು—ಸ್ವತಃ ಪೌಲನಿಂದ ದೀಕ್ಷಾಸ್ನಾನಗೊಳಿಸಲ್ಪಟ್ಟಿದ್ದ, ಅಖಾಯ ಪ್ರಾಂತದಲ್ಲಿನ ಪ್ರಥಮ ಕ್ರೈಸ್ತರಾದ ಸ್ತೆಫನ ಮತ್ತು ಅವನ ಕುಟುಂಬ; ಭಾಷಣಗಳನ್ನು ಕೊಡಲು ತನ್ನ ಮನೆಯನ್ನು ಬಳಸುವಂತೆ ಪೌಲನನ್ನು ಅನುಮತಿಸಿದ ತೀತ ಯುಸ್ತ; ಮತ್ತು ತನ್ನ ಇಡೀ ಮನೆವಾರ್ತೆಯವರೊಂದಿಗೆ ಸತ್ಯವನ್ನು ಸ್ವೀಕರಿಸಿದ ಸಭಾಮಂದಿರದ ಮೇಲಧಿಕಾರಿಯಾದ ಕ್ರಿಸ್ಪ—ಅವರ ಮನೆಯನ್ನು ಅಡಿಗಡಿಗೆ ಸಂದರ್ಶಿಸುತ್ತಿದ್ದರು. (ಅ. ಕೃತ್ಯಗಳು 18:7, 8; 1 ಕೊರಿಂಥ 1:16) ಮತ್ತು, ಫೊರ್ತುನಾತನೂ ಅಖಾಯಿಕನೂ; ಯಾರ ಮನೆಯಲ್ಲಿ ಸಭಾ ಕೂಟಗಳು ನಡೆಸಲ್ಪಡುತ್ತಿದ್ದಿರಬಹುದೊ ಆ ಗಾಯನು; ನಗರದ ಮೇಲ್ವಿಚಾರಕನಾದ ಎರಸ್ತನು; ರೋಮನರಿಗಾಗಿದ್ದ ತನ್ನ ಪತ್ರವನ್ನು ಯಾರ ಮೂಲಕ ಪೌಲನು ಹೇಳಿ ಬರೆಯಿಸಿದನೊ ಆ ಕಾರ್ಯದರ್ಶಿಯಾದ ತೆರ್ತ್ಯನು; ಮತ್ತು ಕೊರಿಂಥದಿಂದ ರೋಮ್ಗೆ ಆ ಪತ್ರವನ್ನು ಕೊಂಡೊಯ್ದಿದ್ದಿರಬಹುದಾದ, ಹತ್ತಿರದ ಕೆಂಕ್ರೆಯ ಪಟ್ಟಣದ ಸಭೆಯ ಒಬ್ಬ ನಂಬಿಗಸ್ತ ಸಹೋದರಿ ಫೊಯಿಬೆ ಅಲ್ಲಿದ್ದರು.—ರೋಮಾಪುರ 16:1, 22, 23; 1 ಕೊರಿಂಥ 16:17.
ಒಬ್ಬ ಸಂಚರಣ ಶುಶ್ರೂಷಕನಿಗೆ ಅತಿಥಿಸತ್ಕಾರವನ್ನು ತೋರಿಸುವ ಅವಕಾಶವನ್ನು ಪಡೆದಿದ್ದ ಯೆಹೋವನ ಆಧುನಿಕ ದಿನದ ಸೇವಕರಿಗೆ, ಅದು ಎಷ್ಟು ಉತ್ತೇಜನದಾಯಕ ಮತ್ತು ಸ್ಮರಣೀಯವಾಗಿರಬಲ್ಲದೆಂಬುದು ತಿಳಿದಿದೆ. ಅಂತಹ ಸಂದರ್ಭಗಳಲ್ಲಿ ತಿಳಿಸಲ್ಪಡುವ ಭಕ್ತಿವೃದ್ಧಿಮಾಡುವಂತಹ ಅನುಭವಗಳು, ಎಲ್ಲರಿಗೂ ಆತ್ಮಿಕ ಚೈತನ್ಯದ ಒಂದು ನಿಜವಾದ ಮೂಲವಾಗಿರಸಾಧ್ಯವಿದೆ. (ರೋಮಾಪುರ 1:11, 12) ಮತ್ತು ಅಕ್ವಿಲ ಹಾಗೂ ಪ್ರಿಸ್ಕಿಲ್ಲರು ಮಾಡಿದಂತೆ, ಕೂಟಗಳಿಗಾಗಿ, ಪ್ರಾಯಶಃ ಸಭಾ ಪುಸ್ತಕ ಅಭ್ಯಾಸಕ್ಕಾಗಿ, ತಮ್ಮ ಮನೆಗಳನ್ನು ದೊರಕಿಸಿಕೊಡುವವರಿಗೆ, ಸತ್ಯಾರಾಧನೆಯ ಅಭಿವೃದ್ಧಿಗೆ ಈ ರೀತಿಯಲ್ಲಿ ನೆರವು ನೀಡಲು ಶಕ್ತರಾಗಿರುವ ಆನಂದ ಮತ್ತು ತೃಪ್ತಿಯಿದೆ.
ಪೌಲನೊಂದಿಗೆ ಅವರ ಸ್ನೇಹವು ಎಷ್ಟು ನಿಕಟವಾಗಿತ್ತೆಂದರೆ, ಸಾ.ಶ. 52ರ ವಸಂತಕಾಲದಲ್ಲಿ ಅವನು ಕೊರಿಂಥದಿಂದ ಹೊರಟುಹೋದಾಗ ಅಕ್ವಿಲ ಮತ್ತು ಪ್ರಿಸ್ಕಿಲ್ಲರು ಅವನೊಂದಿಗೆ ಹೊರಟು, ಎಫೆಸದ ವರೆಗೆ ಅವನೊಂದಿಗೆ ಹೋದರು. (ಅ. ಕೃತ್ಯಗಳು 18:18-21) ಅವರು ಆ ನಗರದಲ್ಲಿ ತಂಗಿ, ಅಪೊಸ್ತಲನ ಮುಂದಿನ ಭೇಟಿಗಾಗಿ ತಳಪಾಯವನ್ನು ಹಾಕಿದರು. ಸುವಾರ್ತೆಯ ಈ ಪ್ರತಿಭಾವಂತ ಬೋಧಕರು, ವಾಗ್ಮಿತೆಯ ಅಪೊಲ್ಲೋಸನನ್ನು “ತಮ್ಮ ಮನೆಗೆ ಕರೆದುಕೊಂಡು ಹೋಗಿ ದೇವರ ಮಾರ್ಗವನ್ನು ಅವನಿಗೆ ಇನ್ನೂ ಸೂಕ್ಷ್ಮವಾಗಿ” ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಸಂತೋಷವನ್ನು ಪಡೆದದ್ದು ಇಲ್ಲಿಯೇ. (ಅ. ಕೃತ್ಯಗಳು 18:24-26) ಸಾ.ಶ. 52/53ನೆಯ ಚಳಿಗಾಲದ ಸುಮಾರಿಗೆ, ತನ್ನ ಮೂರನೆಯ ಮಿಷನೆರಿ ಪ್ರವಾಸದಲ್ಲಿ ಪೌಲನು ಎಫೆಸಕ್ಕೆ ಪುನರ್ಭೇಟಿಯನ್ನಿತ್ತಾಗ, ಈ ಚಟುವಟಿಕೆಭರಿತ ದಂಪತಿಗಳಿಂದ ಬೆಳೆಸಲ್ಪಟ್ಟಂತಹ ಆ ಕ್ಷೇತ್ರವು ಈಗಾಗಲೇ ಕೊಯ್ಲಿಗಾಗಿ ಸಿದ್ಧವಾಗಿತ್ತು. ಎಫೆಸದ ಸಭೆಯು ಅಕ್ವಿಲನ ಮನೆಯಲ್ಲಿ ಕೂಟಗಳನ್ನು ನಡೆಸುತ್ತಿದ್ದಾಗ, ಸುಮಾರು ಮೂರು ವರ್ಷಗಳ ವರೆಗೆ, ಪೌಲನು ಅಲ್ಲಿ “ಈ ಮಾರ್ಗ”ದ ಕುರಿತಾಗಿ ಸಾರಿ, ಕಲಿಸಿದನು.—ಅ. ಕೃತ್ಯಗಳು 19:1-20, 26; 20:31; 1 ಕೊರಿಂಥ 16:8, 19.
ಅನಂತರ, ಅವರು ರೋಮಿಗೆ ಹಿಂದಿರುಗಿದಾಗ, ಪೌಲನ ಈ ಇಬ್ಬರು ಸ್ನೇಹಿತರು, ಕ್ರೈಸ್ತ ಕೂಟಗಳಿಗಾಗಿ ತಮ್ಮ ಮನೆಯನ್ನು ದೊರಕಿಸಿಕೊಡುತ್ತಾ, “ಅತಿಥಿಸತ್ಕಾರವನ್ನು ಅಭ್ಯಾಸಿ”ಸುವುದನ್ನು ಮುಂದುವರಿಸಿದರು.—ರೋಮಾಪುರ 12:13; 16:3-5.
ಅವರು ಪೌಲನಿಗಾಗಿ ‘ತಮ್ಮ ಜೀವಗಳನ್ನು ಅಪಾಯಕ್ಕೆ ಗುರಿಮಾಡಿದರು’
ಪೌಲನು ಎಫೆಸದಲ್ಲಿದ್ದಾಗ ಅವನು ಅಕ್ವಿಲ ಮತ್ತು ಪ್ರಿಸ್ಕಿಲ್ಲರೊಂದಿಗೆ ಪ್ರಾಯಶಃ ವಾಸಮಾಡಿದನು ಕೂಡ. ಬೆಳ್ಳಿ ಅಕ್ಕಸಾಲಿಗರ ಗಲಭೆಯ ಸಮಯದಲ್ಲಿ ಅವನು ಅವರೊಂದಿಗೆ ತಂಗಿದ್ದನೊ? ಅ. ಕೃತ್ಯಗಳು 19:23-31ರ ವೃತ್ತಾಂತಕ್ಕನುಸಾರ, ಗುಡಿಗಳನ್ನು ಮಾಡುತ್ತಿದ್ದ ಕರಕುಶಲಿಗಳು ಸುವಾರ್ತೆಯ ಸಾರುವಿಕೆಯ ವಿರುದ್ಧ ಪ್ರತಿಭಟಿಸಿದಾಗ, ಆ ದೊಂಬಿಯ ಮುಂದೆ ಹೋಗುವ ಮೂಲಕ ಪೌಲನು ತನ್ನನ್ನು ಅಪಾಯಕ್ಕೊಡ್ಡಿಕೊಳ್ಳುವುದರಿಂದ ಸಹೋದರರು ಅವನನ್ನು ನಿಗ್ರಹಿಸಬೇಕಾಯಿತು. ಅಂತಹದ್ದೇ ಒಂದು ರೀತಿಯ ಅಪಾಯಕಾರಿ ಪರಿಸ್ಥಿತಿಯಲ್ಲಿ ಪೌಲನು ತನ್ನ ಸ್ವಂತ ‘ಜೀವವುಳಿಯುವ ಮಾರ್ಗವನ್ನು ಕಾಣದವನಾದನೆಂದು’ ಮತ್ತು ಅಕ್ವಿಲ ಹಾಗೂ ಪ್ರಿಸ್ಕಿಲ್ಲರು, ಅವನಿಗಾಗಿ ‘ತಮ್ಮ ಸ್ವಂತ ಜೀವಗಳನ್ನು ಅಪಾಯಕ್ಕೆ ಗುರಿ’ಮಾಡುತ್ತಾ, ಯಾವುದೊ ರೀತಿಯಲ್ಲಿ ಅಡ್ಡಬಂದರೆಂದು ಕೆಲವು ಬೈಬಲ್ ವ್ಯಾಖ್ಯಾನಕಾರರು ಊಹೆ ಕಟ್ಟಿದ್ದಾರೆ.—2 ಕೊರಿಂಥ 1:8; ರೋಮಾಪುರ 16:3, 4.
“ಗದ್ದಲವು ನಿಂತ ತರುವಾಯ” ಪೌಲನು ವಿವೇಕಯುತವಾಗಿ ನಗರವನ್ನು ಬಿಟ್ಟುಹೋದನು. (ಅ. ಕೃತ್ಯಗಳು 20:1) ಅಕ್ವಿಲ ಮತ್ತು ಪ್ರಿಸ್ಕಿಲ್ಲರೂ ವಿರೋಧ ಮತ್ತು ಅಪಹಾಸ್ಯವನ್ನು ಎದುರಿಸಿರಬೇಕೆಂಬುದು ನಿಸ್ಸಂದೇಹ. ಅದು ಅವರನ್ನು ಎದೆಗುಂದುವಂತೆ ಮಾಡಿತೊ? ವ್ಯತಿರಿಕ್ತವಾಗಿ, ಅಕ್ವಿಲ ಮತ್ತು ಪ್ರಿಸ್ಕಿಲ್ಲರು ತಮ್ಮ ಕ್ರೈಸ್ತ ಪ್ರಯತ್ನಗಳಲ್ಲಿ ಧೈರ್ಯದಿಂದ ಮುಂದುವರಿದರು.
ಆಪ್ತ ದಂಪತಿಗಳು
ಕ್ಲೌದಿಯನ ಆಳ್ವಿಕೆಯು ಅಂತ್ಯಗೊಂಡ ಬಳಿಕ, ಅಕ್ವಿಲ ಮತ್ತು ಪ್ರಿಸ್ಕಿಲ್ಲರು ರೋಮ್ಗೆ ಹಿಂದಿರುಗಿದರು. (ರೋಮಾಪುರ 16:3-15) ಆದಾಗಲೂ, ಅವರು ಬೈಬಲಿನಲ್ಲಿ ಕೊನೆಯ ಸಲ ಪ್ರಸ್ತಾಪಿಸಲ್ಪಟ್ಟಿರುವಾಗ, ಅವರು ಪುನಃ ಎಫೆಸದಲ್ಲಿ ಇರುವುದನ್ನು ನಾವು ಕಂಡುಕೊಳ್ಳುತ್ತೇವೆ. (2 ತಿಮೊಥೆಯ 4:19) ಪುನಃ, ಶಾಸ್ತ್ರಗಳಲ್ಲಿನ ಇತರ ಎಲ್ಲಾ ನಿರ್ದೇಶಗಳಲ್ಲಿರುವಂತೆ, ಈ ಗಂಡಹೆಂಡತಿಯರು ಒಟ್ಟಿಗೆ ಪ್ರಸ್ತಾಪಿಸಲ್ಪಟ್ಟಿದ್ದಾರೆ. ಎಷ್ಟು ಆಪ್ತ ಮತ್ತು ಐಕ್ಯರಾದ ದಂಪತಿಗಳು! ಅಕ್ವಿಲನ ಹೆಂಡತಿಯ ನಂಬಿಗಸ್ತಿಕೆಯ ಸಹಕಾರವನ್ನು ಜ್ಞಾಪಿಸಿಕೊಳ್ಳದೆ, ಪೌಲನು ಆ ಪ್ರಿಯ ಸಹೋದರನ ಕುರಿತಾಗಿ ಯೋಚಿಸಲು ಸಾಧ್ಯವಿರಲಿಲ್ಲ. ಮತ್ತು, ಇಂದು ಕ್ರೈಸ್ತ ದಂಪತಿಗಳಿಗಾಗಿ ಎಂತಹ ಒಂದು ಉತ್ತಮ ಮಾದರಿ. ಯಾಕಂದರೆ, ಒಬ್ಬ ಅಚಲ ನಿಷ್ಠೆಯ ಪತಿ/ಪತ್ನಿಯ ನಿಷ್ಠಾವಂತ ನೆರವು, ಒಬ್ಬ ವ್ಯಕ್ತಿಯು “ಕರ್ತನ ಸೇವೆಯಲ್ಲಿ” ಹೆಚ್ಚನ್ನು, ಮತ್ತು ಕೆಲವೊಮ್ಮೆ, ಒಬ್ಬ ಅವಿವಾಹಿತ ವ್ಯಕ್ತಿಯಾಗಿ ಮಾಡಸಾಧ್ಯವಿದ್ದುದಕ್ಕಿಂತಲೂ ಹೆಚ್ಚನ್ನು ಮಾಡುವಂತೆ ಅನುಮತಿಸುತ್ತದೆ.—1 ಕೊರಿಂಥ 15:58.
ಅಕ್ವಿಲ ಮತ್ತು ಪ್ರಿಸ್ಕಿಲ್ಲರು ಹಲವಾರು ವಿಭಿನ್ನ ಸಭೆಗಳಲ್ಲಿ ಸೇವೆಸಲ್ಲಿಸಿದರು. ಅವರಂತೆ, ಆಧುನಿಕ ದಿನದ ಅನೇಕ ಹುರುಪುಳ್ಳ ಕ್ರೈಸ್ತರು, ಎಲ್ಲಿ ಅಗತ್ಯವು ಹೆಚ್ಚಾಗಿದೆಯೊ ಆ ಸ್ಥಳಗಳಿಗೆ ಸ್ಥಳಾಂತರಿಸಲು ತಮ್ಮನ್ನು ದೊರಕಿಸಿಕೊಂಡಿದ್ದಾರೆ. ರಾಜ್ಯ ಅಭಿರುಚಿಗಳು ಬೆಳೆಯುವುದನ್ನು ನೋಡುವುದರಿಂದ ಮತ್ತು ಹೃದಯೋಲ್ಲಾಸದ ಮತ್ತು ಅಮೂಲ್ಯವಾದ ಕ್ರೈಸ್ತ ಗೆಳೆತನಗಳನ್ನು ವಿಕಸಿಸಲು ಶಕ್ತರಾಗಿರುವುದರಿಂದ ಬರುವಂತಹ ಆನಂದ ಮತ್ತು ತೃಪ್ತಿಯನ್ನೂ ಅವರು ಅನುಭವಿಸುತ್ತಾರೆ.
ಕ್ರೈಸ್ತ ಪ್ರೀತಿಯ ಅವರ ಅತ್ಯುತ್ಕೃಷ್ಟ ಮಾದರಿಯ ಮೂಲಕ, ಅಕ್ವಿಲ ಮತ್ತು ಪ್ರಿಸ್ಕಿಲ್ಲರು, ಪೌಲನ ಮತ್ತು ಇತರರ ಗಣ್ಯತೆಯನ್ನು ಗಳಿಸಿದರು. ಆದರೆ ಇನ್ನೂ ಹೆಚ್ಚು ಪ್ರಾಮುಖ್ಯವಾಗಿ, ಅವರು ಸ್ವತಃ ಯೆಹೋವನೊಂದಿಗೆ ಒಂದು ಉತ್ತಮ ಹೆಸರನ್ನು ಸ್ಥಾಪಿಸಿದರು. ಶಾಸ್ತ್ರಗಳು ನಮಗೆ ಆಶ್ವಾಸನೆಯನ್ನೀಯುವುದು: “ನೀವು ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.”—ಇಬ್ರಿಯ 6:10.
ಅಕ್ವಿಲ ಮತ್ತು ಪ್ರಿಸ್ಕಿಲ್ಲರಿಗೆ ಹೋಲುವಂತಹ ವಿಧಗಳಲ್ಲಿ ನಮ್ಮನ್ನು ಉಪಯೋಗಿಸಿಕೊಳ್ಳುವ ಅವಕಾಶವು ನಮಗೆ ಇಲ್ಲದಿರಬಹುದಾದರೂ ನಮ್ಮಲ್ಲಿ ಪ್ರತಿಯೊಬ್ಬರು ಅವರ ಉತ್ಕೃಷ್ಟವಾದ ಮಾದರಿಯನ್ನು ಅನುಕರಿಸಬಲ್ಲೆವು. ‘ಪರೋಪಕಾರ ಮತ್ತು ಧರ್ಮಮಾಡುವದು ಇವೇ ದೇವರಿಗೆ ಸಮರ್ಪಕವಾದ ಯಜ್ಞಗಳು’ ಎಂಬುದನ್ನು ಎಂದೂ ಮರೆಯದೆ, ಪವಿತ್ರ ಸೇವೆಯಲ್ಲಿ ನಮ್ಮ ಶಕ್ತಿ ಮತ್ತು ಜೀವವನ್ನು ನಾವು ಅರ್ಪಿಸಿದಂತೆ, ಗಾಢವಾದ ತೃಪ್ತಿಯು ನಮ್ಮದಾಗಿರುವುದು.—ಇಬ್ರಿಯ 13:15, 16.