ದೇವರು ನನ್ನ ಆಶ್ರಯ ಮತ್ತು ಬಲ
ಷಾರ್ಲಟ್ ಮ್ಯೂಲರ್ ಹೇಳಿರುವಂತೆ
“ನೀನು ಹಿಟ್ಲರನಡಿ ಕಳೆದ ಒಂಬತ್ತು ವರ್ಷಗಳು, ನಿನಗೆ ಪ್ರಶಸ್ತಿಯನ್ನು ತರುತ್ತವೆ. ಆಗ ನಿಜವಾಗಿ ನೀನು ಯುದ್ಧವನ್ನು ವಿರೋಧಿಸುತ್ತಿದ್ದಿ, ಆದರೆ ಈಗ ನೀನು ನಮ್ಮ ಶಾಂತಿಯನ್ನು ವಿರೋಧಿಸುತ್ತೀ!” ಎಂದನು ಆ ಕಮ್ಯೂನಿಸ್ಟ್ ನ್ಯಾಯಾಧೀಶನು.
ಅವನು, ನಾಸಿಗಳು ನನ್ನನ್ನು ಮೊದಲಾಗಿ ಸೆರೆಮನೆಗೆ ಹಾಕಿದುದಕ್ಕೂ, ಜರ್ಮನ್ ಡೆಮೊಕ್ರ್ಯಾಟಿಕ್ ರಿಪಬ್ಲಿಕ್‌ನ ಸಮಾಜವಾದಕ್ಕೂ ಸೂಚಿಸುತ್ತಿದ್ದನು. ನಾನು ಮೊದಲಲ್ಲಿ ನಿರುತ್ತರಳಾದರೂ ಬಳಿಕ ಉತ್ತರಿಸಿದ್ದು: “ಕ್ರೈಸ್ತನೊಬ್ಬನು ನಿಜ ಶಾಂತಿಗಾಗಿ ಇತರ ಜನರು ಹೋರಾಡುವ ವಿಧದಲ್ಲಿ ಹೋರಾಡುವುದಿಲ್ಲ. ನಾನು ಕೇವಲ, ದೇವರನ್ನು ಮತ್ತು ನೆರೆಯವನನ್ನು ಪ್ರೀತಿಸುವ ಬೈಬಲಿನ ಆಜ್ಞೆಯನ್ನು ಪಾಲಿಸಪ್ರಯತ್ನಿಸುತ್ತೇನೆ, ಅಷ್ಟೆ. ನಾನು ನಡೆನುಡಿಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವಂತೆ ದೇವರ ವಾಕ್ಯವು ನನಗೆ ಸಹಾಯಮಾಡುತ್ತದೆ.”
ಸೆಪ್ಟೆಂಬರ್ 4, 1951ರ ಆ ದಿನ, ಕಮ್ಯೂನಿಸ್ಟರು ನನಗೆ ಎಂಟು ವರ್ಷಗಳ ಸೆರೆಮನೆಯ ಶಿಕ್ಷೆಯನ್ನು—ನಾಸಿ ಸರಕಾರ ಕೊಟ್ಟದ್ದಕ್ಕಿಂತ ಒಂದು ವರ್ಷ ಕಡಮೆ—ವಿಧಿಸಿದರು.
ಯೆಹೋವನ ಸಾಕ್ಷಿಗಳಾದ ನಾವು, ನಾಸಿಗಳಿಂದ ಮತ್ತು ಕಮ್ಯೂನಿಸ್ಟರಿಂದ ಹಿಂಸಿಸಲ್ಪಡುತ್ತಿದ್ದಾಗ, ನನಗೆ ಕೀರ್ತನೆ 46:1ರಲ್ಲಿ ಸಾಂತ್ವನವು ಸಿಕ್ಕಿತು: “ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷಸಹಾಯಕನು.” ಸಹಿಸಿಕೊಳ್ಳಲು ಯೆಹೋವನು ಮಾತ್ರ ನನಗೆ ಬಲವನ್ನು ಕೊಟ್ಟನು ಮತ್ತು ಆತನ ವಾಕ್ಯವನ್ನು ನಾನು ಎಷ್ಟು ಹೆಚ್ಚಾಗಿ ನನ್ನದಾಗಿ ಮಾಡಿಕೊಂಡೆನೊ ಅಷ್ಟು ಹೆಚ್ಚು ಬಲವುಳ್ಳವಳು ನಾನಾದೆ.
ಭವಿಷ್ಯತ್ತಿಗಾಗಿ ಬಲಪಡಿಸಲ್ಪಟ್ಟದ್ದು
ನಾನು ಜರ್ಮನಿಯ ತುರಿಂಜಿಯದ ಗೋಟಾಸೀಬ್ಲೇಬೆನ್‌ಲ್ಲಿ 1912ರಲ್ಲಿ ಹುಟ್ಟಿದೆ. ನನ್ನ ಹೆತ್ತವರು ಪ್ರಾಟೆಸ್ಟೆಂಟರಾಗಿದ್ದರೂ, ನನ್ನ ತಂದೆ ಬೈಬಲ್ ಸತ್ಯಕ್ಕಾಗಿ ಮತ್ತು ನೀತಿಯ ಸರಕಾರವೊಂದಕ್ಕಾಗಿ ಹುಡುಕುತ್ತಿದ್ದರು. ನನ್ನ ಹೆತ್ತವರು “ಫೋಟೋಡ್ರಾಮ ಆಫ್ ಕ್ರಿಯೇಷನ್” ಚಿತ್ರವನ್ನು ನೋಡಿದಾಗ, ಅವರು ರೋಮಾಂಚಗೊಂಡರು.a ತಂದೆ ತಾವು ಹುಡುಕುತ್ತಿದ್ದುದನ್ನು—ದೇವರ ರಾಜ್ಯವನ್ನು—ಕಂಡುಕೊಂಡಿದ್ದರು.
ತಂದೆ ಮತ್ತು ತಾಯಿ, ನಾವು ಆರು ಮಂದಿ ಮಕ್ಕಳೊಂದಿಗೆ ಮಾರ್ಚ್ 2, 1923ರಂದು ಚರ್ಚ್‌ಗೆ ರಾಜೀನಾಮೆ ಕೊಟ್ಟೆವು. ನಾವು ಸ್ಯಾಕ್ಸನಿಯ ಕೆಮ್ನಿಟ್ಸ್‌ನಲ್ಲಿ ಜೀವಿಸುತ್ತಿದ್ದೆವು ಮತ್ತು ಅಲ್ಲಿ ನಾವು ಬೈಬಲ್ ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡೆವು. (ನನ್ನ ಸೋದರ ಸೋದರಿಯರಲ್ಲಿ ಮೂವರು ಯೆಹೋವನ ಸಾಕ್ಷಿಗಳಾದರು.)
ಬೈಬಲ್ ವಿದ್ಯಾರ್ಥಿಗಳ ಕೂಟಗಳಲ್ಲಿ, ಶಾಸ್ತ್ರ ವಚನಗಳು ಮತ್ತು ಅಮೂಲ್ಯ ಸತ್ಯಗಳು ನನ್ನಲ್ಲಿ ಅಚ್ಚೊತ್ತಲಾದುದರಿಂದ, ಇವು ನನ್ನ ಯುವ ಹೃದಯವನ್ನು ಸಂತೋಷದಿಂದ ತುಂಬಿಸಿದವು. ಪ್ರಥಮವಾಗಿ ಮತ್ತು ಪ್ರಧಾನವಾಗಿ, 50ಕ್ಕೂ ಮಿಕ್ಕಿದ ಸಂಖ್ಯೆಯಲ್ಲಿದ್ದ ಕ್ರೈಸ್ತ ಯುವ ಜನರಾದ ನಮಗೆ, ಭಾನುವಾರ ಕೊಡಲ್ಪಟ್ಟ ಮತ್ತು ನನ್ನ ಸೋದರಿ ಕ್ಯಾಟಳೂ ನಾನೂ ಸ್ವಲ್ಪ ಸಮಯ ಪಡೆದ ಉಪದೇಶವಾಗಿತ್ತು. ನಮ್ಮ ಗುಂಪಿನಲ್ಲಿ ಚಾರಣಗಳನ್ನು ಏರ್ಪಡಿಸಿ, ನಮ್ಮೊಂದಿಗೆ ಹಾಡುವುದನ್ನು ಅಭ್ಯಸಿಸಿದ ಯುವಕ ಕಾನ್ರಾಟ್ ಫ್ರಾಂಕ ಇದ್ದರು. ತರುವಾಯ, 1955ರಿಂದ 1969ರ ವರೆಗೆ ಸಹೋದರ ಫ್ರಾಂಕರು, ಜರ್ಮನಿಯ ವಾಚ್ ಟವರ್ ಬ್ರಾಂಚ್‌ನ ಮೇಲ್ವಿಚಾರಕರಾಗಿ ಸೇವೆಮಾಡಿದರು.
1920ಗಳು ಗೊಂದಲದ ವರುಷಗಳಾಗಿದ್ದವು, ಆಗಾಗ್ಗೆ ದೇವಜನರ ಮಧ್ಯೆಯೂ. ಕಾವಲಿನಬುರುಜು “ಹೊತ್ತುಹೊತ್ತಿಗೆ ಆಹಾರ” ಕೊಡುತ್ತದೆಂಬುದನ್ನು ಅಂಗೀಕರಿಸದ ಕೆಲವರು, ಮನೆಯಿಂದ ಮನೆಗೆ ಸಾರುವ ಚಟುವಟಿಕೆಯ ವಿರುದ್ಧವಾಗಿದ್ದರು. (ಮತ್ತಾಯ 24:45) ಇದು ಧರ್ಮಭ್ರಷ್ಟತೆಗೆ ನಡೆಸಿತು. ಆದರೆ ಆ ಸಮಯದಲ್ಲಿ ನಮಗೆ ಆವಶ್ಯಕವಾಗಿ ಬೇಕಾಗಿದ್ದ ಬಲವನ್ನು ನಮಗೆ ಕೊಟ್ಟದ್ದು ಪ್ರತ್ಯೇಕವಾಗಿ ಈ “ಆಹಾರ”ವೇ ಆಗಿತ್ತು. ಉದಾಹರಣೆಗೆ, “ನಿರ್ಭೀತರು ಧನ್ಯರು” (1919) ಮತ್ತು “ಯೆಹೋವನನ್ನು ಯಾರು ಘನಪಡಿಸುವರು?” (1926) ಎಂಬ ಕಾವಲಿನಬುರುಜು ಲೇಖನಗಳು ಬಂದವು. ನಾನು ಯೆಹೋವನನ್ನು ನಿರ್ಭಯದ ಚಟುವಟಿಕೆಯ ಮೂಲಕ ಘನಪಡಿಸಲು ಬಯಸಿದುದರಿಂದ, ಸಹೋದರ ರದರ್‌ಫರ್ಡರ ಅನೇಕ ಪುಸ್ತಕ, ಪುಸ್ತಿಕೆಗಳನ್ನು ವಿತರಿಸಿದೆ.
ನಾನು 1933ರ ಮಾರ್ಚ್‌ನಲ್ಲಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿ ದೀಕ್ಷಾಸ್ನಾನ ಹೊಂದಿದೆ. ಅದೇ ವರುಷ, ನಮ್ಮ ಸುವಾರ್ತೆ ಸಾರುವ ಕೆಲಸವು ಜರ್ಮನಿಯಲ್ಲಿ ನಿಷೇಧಾಜ್ಞೆಗೊಳಗಾಯಿತು. ದೀಕ್ಷಾಸ್ನಾನದ ಸಮಯದಲ್ಲಿ, ಭವಿಷ್ಯತ್ತಿಗಾಗಿ ಪ್ರಕಟನೆ 2:10 ಬುದ್ಧಿವಾದವಾಗಿ ಕೊಡಲ್ಪಟ್ಟಿತು: “ನಿನಗೆ ಸಂಭವಿಸಲಿರುವ ಬಾಧೆಗಳಿಗೆ ಹೆದರಬೇಡ. ಇಗೋ ನೀವು ದುಷ್ಪ್ರೇರಣೆಗೆ ಒಳಗಾಗುವಂತೆ ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವದಕ್ಕಿದ್ದಾನೆ; ಮತ್ತು ಹತ್ತು ದಿವಸಗಳ ತನಕ ನಿಮಗೆ ಸಂಕಟವಿರುವದು. ನೀನು ಸಾಯಬೇಕಾದರೂ ನಂಬಿಗಸ್ತನಾಗಿರು; ನಾನು ನಿನಗೆ ಜೀವವೆಂಬ ಜಯಮಾಲೆಯನ್ನು ಕೊಡುವೆನು.” ಕಷ್ಟಕರವಾದ ಪರೀಕ್ಷೆಗಳು ನನಗಾಗಿ ಕಾಯುತ್ತಿವೆ ಎಂಬುದರ ಕುರಿತು ಸಂದೇಹವಿಲ್ಲದವಳಾಗಿ ನಾನು ಈ ವಚನವನ್ನು ನನ್ನ ಹೃದಯದಲ್ಲಿಟ್ಟುಕೊಂಡೆ. ಇದು ನಿಜವಾಗಿ ಪರಿಣಮಿಸಿತು.
ನಾವು ರಾಜಕೀಯವಾಗಿ ತಟಸ್ಥರಾಗಿದ್ದುದರಿಂದ, ನಮ್ಮ ನೆರೆಯವರಲ್ಲಿ ಅನೇಕರು ನಮ್ಮ ಮೇಲೆ ಅನುಮಾನಪಟ್ಟರು. ಒಂದು ರಾಜಕೀಯ ಚುನಾವಣೆಯ ಬಳಿಕ, ಸಮವಸ್ತ್ರಧಾರಿಗಳಾದ ನಾಸಿ ಸೈನಿಕ ಆಯೋಗವೊಂದು ನಮ್ಮ ಮನೆಯ ಮುಂಭಾಗದಲ್ಲಿ, “ದ್ರೋಹಿಗಳು ಇಲ್ಲಿ ಜೀವಿಸುತ್ತಾರೆ!” ಎಂದು ಕರೆದು ಹೇಳಿತು. 1933ರ ಡಿಸೆಂಬರ್ ತಿಂಗಳಿನ ದ ವಾಚ್‌ಟವರ್ ಪತ್ರಿಕೆಯ ಜರ್ಮನ್ ಸಂಚಿಕೆಯಲ್ಲಿ ಬಂದ “ಅವರಿಗೆ ಭಯಪಡಬೇಡಿರಿ” ಎಂಬ ಲೇಖನವು ನನಗೆ ವಿಶೇಷವಾಗಿ ಪ್ರೋತ್ಸಾಹಕರವಾಗಿತ್ತು. ಅತಿ ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ನಾನು ಯೆಹೋವನ ನಂಬಿಗಸ್ತ ಸಾಕ್ಷಿಯಾಗಿ ಉಳಿಯಬೇಕೆಂದು ಬಯಸಿದೆ.
ವೈರಿಯ ಉತ್ತರ—ಸೆರೆಮನೆ
ಕೆಮ್ನಿಟ್ಸ್‌ನಲ್ಲಿ 1935ರ ಶರತ್ಕಾಲದ ತನಕ ಕಾವಲಿನಬುರುಜು ಪತ್ರಿಕೆಯನ್ನು ಗುಪ್ತವಾಗಿ ತಯಾರಿಸಲು ಸಾಧ್ಯವಾಯಿತು. ಆ ಬಳಿಕ ಉಪಯೋಗಿಸಲ್ಪಡುತ್ತಿದ್ದ ನಕಲು ಯಂತ್ರವನ್ನು ಓರ್ ಪರ್ವತಗಳ ಬೈಅರ್‌ಫೆಲ್ಟ್‌ಗೆ ಕಳುಹಿಸಬೇಕಾಗಿತ್ತು. ಅಲ್ಲಿ ಆಗಸ್ಟ್ 1936ರ ತನಕ ಸಾಹಿತ್ಯವನ್ನು ಪುನರುತ್ಪಾದಿಸಲು ಅದನ್ನು ಉಪಯೋಗಿಸಲಾಯಿತು. ತಂದೆಯವರು ನಮಗೆ ಕೊಟ್ಟಿದ್ದ ವಿಳಾಸಗಳ ಸಹೋದರರಿಗೆ, ಕ್ಯಾಟ ಮತ್ತು ನಾನು ಪ್ರತಿಗಳನ್ನು ವಿತರಣೆಮಾಡಿದೆವು. ಸ್ವಲ್ಪ ಸಮಯದ ವರೆಗೆ ಎಲ್ಲವೂ ಒಳ್ಳೆಯದಾಗಿ ಸಾಗಿತು. ಆದರೆ ಬಳಿಕ ಗೆಸ್ಟಾಪೊ ದಳವು ನನ್ನನ್ನು ನಿಗಾವಣೆಯಲ್ಲಿಟ್ಟು, ಆಗಸ್ಟ್ 1936ರಲ್ಲಿ ನನ್ನ ಮನೆಯಿಂದ ನನ್ನನ್ನು ತೆಗೆದುಕೊಂಡು ಹೋಗಿ ಸೆರೆಯಲ್ಲಿಟ್ಟಿತು, ಅಲ್ಲಿ ನಾನು ನ್ಯಾಯವಿಚಾರಣೆಗಾಗಿ ಮುನ್ನೋಡಿದೆ.
ಫೆಬ್ರವರಿ 1937ರಲ್ಲಿ, 25 ಮಂದಿ ಸಹೋದರರು ಮತ್ತು ಇಬ್ಬರು ಸಹೋದರಿಯರು—ನಾನೂ ಸೇರಿ—ಸ್ಯಾಕ್ಸನಿಯಲ್ಲಿ ವಿಶೇಷ ನ್ಯಾಯಾಲಯದ ಮುಂದೆ ಹಾಜರಾದೆವು. ಯೆಹೋವನ ಸಾಕ್ಷಿಗಳ ಸಂಸ್ಥೆಯು ಪತನಕಾರಕವೆಂದು ವಾದಿಸಲಾಯಿತು. ಕಾವಲಿನಬುರುಜು ಪತ್ರಿಕೆಯನ್ನು ಪುನರುತ್ಪಾದಿಸಿದ ಸಹೋದರರಿಗೆ ಐದು ವರ್ಷಗಳ ಸೆರೆಮನೆ ಶಿಕ್ಷೆ ದೊರೆಯಿತು. ನನಗೆ ಎರಡು ವರ್ಷಗಳ ಸಜೆ ನೀಡಲಾಯಿತು.
ನನ್ನ ಸಜೆಯನ್ನು ಮುಗಿಸಿದ ಬಳಿಕ ಬಿಡುಗಡೆಮಾಡುವ ಬದಲು, ಗೆಸ್ಟಾಪೊ ನನ್ನನ್ನು ದಸ್ತಗಿರಿ ಮಾಡಿದರು. ಇನ್ನು ಮುಂದೆ ನಾನು ಕ್ರಿಯಾಶೀಲ ಯೆಹೋವನ ಸಾಕ್ಷಿಯಾಗಿರುವುದಿಲ್ಲವೆಂಬ ಘೋಷಣೆಗೆ ನಾನು ಸಹಿಹಾಕಬೇಕಾಗಿತ್ತಂತೆ. ನಾನು ದೃಢಮನಸ್ಸಿನಿಂದ ನಿರಾಕರಿಸಲಾಗಿ, ಆ ಅಧಿಕಾರಿಯು ಸಿಟ್ಟಿಗೆದ್ದು, ಹಾರಿ ನಿಂತು ನನ್ನನ್ನು ಬಂಧಿಸುವಂತೆ ವಾರಂಟನ್ನು ಹೊರಡಿಸಿದನು. ಆ ವಾರಂಟನ್ನು ಚಿತ್ರದಲ್ಲಿ ತೋರಿಸಲಾಗಿದೆ. ನನ್ನ ಹೆತ್ತವರನ್ನು ನೋಡಲು ಅನುಮತಿಸದೆ, ನನ್ನನ್ನು ಕೂಡಲೆ ಎಲ್ಬ ನದೀತೀರದಲ್ಲಿರುವ ಲಿಕ್ಟನ್‌ಬುರ್ಗ್‌ನ ಒಂದು ಚಿಕ್ಕ ಕೂಟಶಿಬಿರಕ್ಕೆ ಒಯ್ಯಲಾಯಿತು. ಆ ಬಳಿಕ ಸ್ವಲ್ಪದರಲ್ಲಿ ನಾನು ಕ್ಯಾಟಳನ್ನು ಭೇಟಿಯಾದೆ. ಅವಳು ಡಿಸೆಂಬರ್ 1936ರಿಂದ ಮೋರಿಂಗನ್ ಕೂಟಶಿಬಿರದಲ್ಲಿದ್ದಳು, ಆದರೆ ಆ ಕೂಟಶಿಬಿರವು ಮುಚ್ಚಲ್ಪಟ್ಟಾಗ, ಅವಳು ಇತರ ಅನೇಕ ಸೋದರಿಯರೊಂದಿಗೆ ಲಿಕ್ಟನ್‌ಬುರ್ಗ್‌ಗೆ ಬಂದಳು. ನನ್ನ ತಂದೆಯೂ ಸೆರೆಮನೆಯಲ್ಲಿದ್ದರು ಮತ್ತು 1945ರ ತನಕ ನಾನು ಪುನಃ ಅವರನ್ನು ಭೇಟಿಯಾಗಲಿಲ್ಲ.
ಲಿಕ್ಟನ್‌ಬುರ್ಗ್‌ನಲ್ಲಿ
ನನಗೆ ಒಡನೆ ಇತರ ಹೆಣ್ಣುಸಾಕ್ಷಿಗಳ ಜೊತೆಸೇರಲು ಅನುಮತಿ ಸಿಗಲಿಲ್ಲ, ಏಕೆಂದರೆ ಅವರಿಗೆ ಒಂದಲ್ಲ ಒಂದು ವಿಷಯಕ್ಕಾಗಿ ಶಿಕ್ಷೆ ಕೊಡಲಾಗುತ್ತಿತ್ತು. ಹಾಲ್‌ಗಳಲ್ಲಿ ಒಂದರಲ್ಲಿ ಕೈದಿಗಳ ಎರಡು ಗುಂಪುಗಳನ್ನು ನಾನು ನೋಡಿದೆ—ಸಾಮಾನ್ಯವಾಗಿ ಕುರ್ಚಿ ಮೇಜುಗಳಿರುವವರು ಮತ್ತು ಇಡೀ ದಿನ ಮುಕ್ಕಾಲುಮಣೆಯ ಮೇಲೆ ಕುಳಿತು ಊಟಕ್ಕೆ ಏನೂ ಕೊಡಲ್ಪಡದೆ ಇದ್ದ ಸಾಕ್ಷಿಗಳು.b
ಹೇಗೂ ಕ್ಯಾಟಳನ್ನು ಭೇಟಿಯಾಗುವ ನಿರೀಕ್ಷೆಯಿಂದ ನಾನು ಯಾವ ಕೆಲಸವನ್ನೂ ಸಿದ್ಧಮನಸ್ಸಿನಿಂದ ಸ್ವೀಕರಿಸಿದೆ. ಮತ್ತು ಹಾಗೆಯೇ ಆಯಿತು. ಆಕೆ ಇತರ ಇಬ್ಬರು ಕೈದಿಗಳೊಂದಿಗೆ ಕೆಲಸಕ್ಕೆ ಹೋಗುತ್ತಿದ್ದಾಗ ನಾವು ಭೇಟಿಯಾದೆವು. ಅತ್ಯಾನಂದಪಟ್ಟು, ನಾನು ಅವಳನ್ನು ಬಿಗಿಯಾಗಿ ಅಪ್ಪಿಕೊಂಡೆ. ಆದರೆ ಪಹರೆಯವಳು ಒಡನೆ ಇದನ್ನು ವರದಿಮಾಡಿದಳು. ನಮ್ಮನ್ನು ಪ್ರಶ್ನಿಸಲಾಯಿತು ಮತ್ತು ಆ ಸಮಯದಿಂದ ನಮ್ಮನ್ನು ಬೇಕೆಂದು ಪ್ರತ್ಯೇಕವಾಗಿ ಇಡಲಾಯಿತು. ಅದು ವಿಪರೀತ ಕಷ್ಟಕರವಾಗಿತ್ತು.
ಲಿಕ್ಟನ್‌ಬುರ್ಗ್‌ನಲ್ಲಿ ನಡೆದ ಇನ್ನೆರಡು ಸಂಭವಗಳು ನನ್ನ ಮನಸ್ಸಿನಲ್ಲಿ ಬೇರೂರಿವೆ. ಒಂದು ಸಂದರ್ಭದಲ್ಲಿ ಎಲ್ಲ ಕೈದಿಗಳು ಹಿಟ್ಲರನ ರಾಜಕೀಯ ಭಾಷಣಗಳಲ್ಲಿ ಒಂದನ್ನು ರೇಡಿಯೊದಲ್ಲಿ ಕೇಳಲು ಅಂಗಳದಲ್ಲಿ ಕೂಡಿಬರಬೇಕಾಗಿತ್ತು. ದೇಶಭಕ್ತಿಯ ಸಂಸ್ಕಾರಗಳಿದ್ದುದರಿಂದ ಯೆಹೋವನ ಸಾಕ್ಷಿಗಳಾಗಿರುವ ನಾವು ನಿರಾಕರಿಸಿದೆವು. ಆಗ ಪಹರೆಯವರು ನಲ್ಲಿಗೆ ಅಗ್ನಿಶಾಮಕ ನೀರ್ಕೊಳವೆಗಳನ್ನು ಸಿಕ್ಕಿಸಿ, ನಮ್ಮ ಮೇಲೆ ಪ್ರಬಲವಾದ ನೀರಿನ ಧಾರೆಯನ್ನು ಹಾರಿಸಿ, ಅರಕ್ಷಿತ ಸ್ತ್ರೀಯರಾದ ನಮ್ಮನ್ನು ನಾಲ್ಕನೆಯ ಮಾಳಿಗೆಯಿಂದ ಕೆಳ ಅಂಗಳಕ್ಕೆ ಓಡಿಸಿದರು. ಅಲ್ಲಿ ನೆನೆದವರಾಗಿ ನಾವು ನಿಲ್ಲಬೇಕಾಯಿತು.
ಇನ್ನೊಂದು ಸಂದರ್ಭದಲ್ಲಿ ನನಗೆ, ಹಿಟ್ಲರನ ಜನ್ಮ ದಿನವು ಸಮೀಪಿಸುತ್ತಿದ್ದುದರಿಂದ, ಗರ್ಟ್‌ರೂಟ್ ಓಮೆ ಮತ್ತು ಗರ್ಟಲ್ ಬುಅರ್ಲನ್—ಇವರೊಂದಿಗೆ, ಶಿಬಿರಾಧಿಕಾರಿಯ ಮುಖ್ಯ ಕಾರ್ಯಾಲಯವನ್ನು ದೀಪಗಳಿಂದ ಅಲಂಕರಿಸುವಂತೆ ಆಜ್ಞಾಪಿಸಲಾಯಿತು. ಚಿಕ್ಕ ವಿಷಯಗಳಲ್ಲಿ ಒಪ್ಪಂದ ಮಾಡಿಕೊಳ್ಳುವ ಮೂಲಕ ನಮ್ಮ ಸಮಗ್ರತೆಯನ್ನು ಮುರಿಯಪ್ರಯತ್ನಿಸುವ ಸೈತಾನನ ತಂತ್ರಗಳನ್ನು ಗುರುತಿಸಿ, ನಾವು ಹಾಗೆ ಮಾಡಲು ನಿರಾಕರಿಸಿದೆವು. ಇದಕ್ಕೆ ಶಿಕ್ಷೆಯಾಗಿ, ಯುವ ಸಹೋದರಿಯರಾದ ನಮ್ಮಲ್ಲಿ ಪ್ರತಿಯೊಬ್ಬರೂ, ಮುಂದಿನ ಮೂರು ವಾರಗಳನ್ನು ಒಬ್ಬೊಂಟಿಗರಾಗಿ ಚಿಕ್ಕದಾದ ಕತ್ತಲೆಯ ಕೋಣೆಯಲ್ಲಿ ಕಳೆಯಬೇಕಾಯಿತು. ಆದರೆ ಯೆಹೋವನು ನಮ್ಮ ಅತಿ ಸಮೀಪದಲ್ಲಿರುತ್ತ, ಅಂತಹ ಭಯಂಕರ ಸ್ಥಳದಲ್ಲಿಯೂ ನಮಗೆ ಆಶ್ರಯಸ್ಥಾನವಾಗಿ ಪರಿಣಮಿಸಿದನು.
ರಾವನ್ಸ್‌ಬ್ರೂಕ್‌ನಲ್ಲಿ
ಮೇ 1939ರಲ್ಲಿ, ಲಿಕ್ಟನ್‌ಬುರ್ಗ್‌ನ ಕೈದಿಗಳನ್ನು ರಾವನ್ಸ್‌ಬ್ರೂಕ್ ಕೂಟಶಿಬಿರಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ನನ್ನನ್ನು ಇತರ ಅನೇಕ ಸಾಕ್ಷಿ ಸಹೋದರಿಯರೊಂದಿಗೆ ದೋಬಿಖಾನೆಗೆ ನೇಮಿಸಲಾಯಿತು. ಯುದ್ಧ ಆರಂಭಗೊಂಡ ಸ್ವಲ್ಪದರಲ್ಲಿ, ಸ್ವಸ್ತಿಕ ಧ್ವಜಗಳನ್ನು ನಾವು ಒಟ್ಟಗೂಡಿಸಬೇಕಾಗಿತ್ತು. ನಾವು ಹಾಗೆ ಮಾಡಲು ನಿರಾಕರಿಸಿದೆವು. ಇದರ ಫಲವಾಗಿ ಮೀಲ್ಕನ್ ಅರ್ನ್‌ಸ್ಟ್ ಎಂಬುವಳನ್ನು ಮತ್ತು ನನ್ನನ್ನು ದಂಡನೆಯ ಕಟ್ಟಡದಲ್ಲಿ ಹಾಕಲಾಯಿತು. ಅದು ಅತಿ ಕಠಿನ ಶಿಕ್ಷೆಗಳಲ್ಲಿ ಒಂದಾಗಿದ್ದು, ಪ್ರತಿದಿನ, ಭಾನುವಾರವೂ, ಹವಾಮಾನ ಎಷ್ಟೇ ವಿಪರೀತವಿದ್ದರೂ ನಮ್ಮಿಂದ ಕಠಿನ ಕೆಲಸವನ್ನು ಕೇಳಿಕೊಂಡಿತು. ಸಾಧಾರಣವಾಗಿ, ಶಿಕ್ಷೆಯು ಹೆಚ್ಚೆಂದರೆ ಮೂರು ತಿಂಗಳುಗಳು, ಆದರೆ ನಾವು ಅಲ್ಲಿ ಒಂದು ವರ್ಷ ಕಳೆದೆವು. ಯೆಹೋವನ ಸಹಾಯವಿಲ್ಲದಿದ್ದರೆ, ನಾನು ಎಂದಿಗೂ ಬದುಕಿ ಉಳಿಯುತ್ತಿರಲಿಲ್ಲ.
ಕೈದಿಗಳಾದ ನಮಗೆ 1942ರಲ್ಲಿ ಪರಿಸ್ಥಿತಿಗಳು ತುಸು ಸುಧಾರಿಸಿದವು ಮತ್ತು ಶಿಬಿರದ ಹತ್ತಿರದಲ್ಲಿದ್ದ ಒಂದು ಎಸೆಸ್ ಕುಟುಂಬದ ಗೃಹಕಾರ್ಯಗಳಿಗಾಗಿ ನನ್ನನ್ನು ನೇಮಿಸಲಾಯಿತು. ಆ ಕುಟುಂಬ ನನಗೆ ಸ್ವಲ್ಪ ಮಟ್ಟಿಗಿನ ಸ್ವಾತಂತ್ರ್ಯವನ್ನು ಕೊಟ್ಟಿತು. ಉದಾಹರಣೆಗೆ, ಒಮ್ಮೆ ನಾನು ಮಕ್ಕಳನ್ನು ನಡೆದಾಡಿಸುತ್ತಿದ್ದಾಗ, ನನಗೆ ಕೆನ್ನೀಲಿ ತ್ರಿಕೋನಗಳಿದ್ದ ಯೋಸೆಫ್ ರೇವಾಲ್ಡ್ ಮತ್ತು ಗಾಟ್‌ಫ್ರೀಡ್ ಮೇಲ್‌ಹಾರ್ನ್ ಎಂಬವರ ಭೇಟಿಯಾಯಿತು. ಅವರೊಂದಿಗೆ ಕೆಲವು ಪ್ರೋತ್ಸಾಹಕರವಾದ ಮಾತುಗಳನ್ನು ವಿನಿಮಯಮಾಡಿಕೊಳ್ಳಲು ನನಗೆ ಸಾಧ್ಯವಾಯಿತು.c
ಯುದ್ಧಾನಂತರದ ಕಷ್ಟಕರ ವರುಷಗಳು
ಮಿತ್ರ ರಾಷ್ಟ್ರಗಳ ಸೈನ್ಯಗಳು 1945ರಲ್ಲಿ ಹತ್ತಿರ ಹತ್ತಿರ ಬಂದಾಗ, ನಾನು ಕೆಲಸಮಾಡುತ್ತಿದ್ದ ಕುಟುಂಬವು ಪಲಾಯನ ಮಾಡಲಾಗಿ ನಾನೂ ಅವರ ಜೊತೆಯಲ್ಲಿ ಹೋಗಬೇಕಾಯಿತು. ಇತರ ಎಸೆಸ್ ಕುಟುಂಬಗಳೊಂದಿಗೆ, ಅವರು ಪಶ್ಚಿಮಾಭಿಮುಖವಾಗಿ ಪ್ರಯಾಣಿಸುತ್ತಿದ್ದ ಒಂದು ದೊಡ್ಡ ತಂಡವಾದರು.
ಯುದ್ಧದ ಕೊನೆಯ ಕೆಲವು ದಿನಗಳು ಅವ್ಯವಸ್ಥೆ ಮತ್ತು ಅಪಾಯದಿಂದ ತುಂಬಿದ್ದವು. ಕೊನೆಗೆ, ನಾವು ಕೆಲವು ಅಮೆರಿಕನ್ ಸೈನಿಕರನ್ನು ಭೇಟಿಯಾದಾಗ, ಅವರು ನನ್ನನ್ನು ಮುಂದಿನ ಶಹರದಲ್ಲಿ ಸ್ವತಂತ್ರ ವ್ಯಕ್ತಿಯಾಗಿ ನೋಂದಾಣಿಸಿಕೊಳ್ಳುವಂತೆ ಅನುಮತಿಸಿದರು. ನಾನು ಅಲ್ಲಿ ಯಾರನ್ನು ಭೇಟಿಯಾದೆ, ಗೊತ್ತೊ? ಯೋಸೆಫ್ ರೇವಾಲ್ಡ್ ಮತ್ತು ಗಾಟ್‌ಫ್ರೀಟ್ ಮೇಲ್‌ಹಾರ್ನ್ ಅವರನ್ನು. ಸಾಕ್ಸನ್‌ಹಾವ್ಸನ್ ಕೂಟ ಶಿಬಿರದ ಎಲ್ಲ ಸಾಕ್ಷಿಗಳು, ಅಪಾಯಕರವಾದ ಮೃತ್ಯು ಮೆರವಣಿಗೆ (ಡೆತ್ ಮಾರ್ಚ್)ಯ ಬಳಿಕ, ಶ್ಫೇರೀನ್ ಪಟ್ಟಣವನ್ನು ಮುಟ್ಟಿದ್ದರೆಂದು ಅವರಿಗೆ ತಿಳಿದುಬಂದಿತ್ತು. ಆದಕಾರಣ ನಾವು ಮೂವರು, 75 ಕಿಲೊಮೀಟರ್ ದೂರದಲ್ಲಿದ್ದ ಆ ಪಟ್ಟಣಕ್ಕೆ ಹೊರಟೆವು. ಶ್ಫೇರೀನ್‌ನಲ್ಲಿ ಕೂಟಶಿಬಿರಗಳನ್ನು ಪಾರಾದ ಆ ಎಲ್ಲ ಸಹೋದರರನ್ನು—ಕಾನ್ರಾಡ್ ಫ್ರಾಂಕ ಸೇರಿಸಿ—ಭೇಟಿಯಾಗುವುದು ಎಷ್ಟೊಂದು ಹರ್ಷಕರವಾಗಿತ್ತು.
ಡಿಸೆಂಬರ್ 1945ರೊಳಗೆ, ದೇಶದ ಸ್ಥಿತಿಯು ಎಷ್ಟು ಸುಧಾರಿಸಿತ್ತೆಂದರೆ, ನಾನು ಟ್ರೇನ್ ಮೂಲಕ ಪ್ರಯಾಣಿಸಲು ಶಕ್ತಳಾದೆ. ಹೀಗೆ ನಾನು ಗೃಹಾಭಿಮುಖವಾಗಿ ಹೋಗುತ್ತಿದ್ದೆ! ಆದರೂ ಪ್ರಯಾಣದಲ್ಲಿ ರೇಲುಗಾಡಿಯ ಚಾವಣಿಯಲ್ಲಿ ಮಲಗಿದ ಮತ್ತು ಮೆಟ್ಟುಹಲಗೆಯ ಮೇಲೆ ನಿಂತು ವ್ಯಯಿಸಿದ ಸಮಯಗಳು ಸೇರಿದ್ದವು. ಕೆಮ್ನಿಟ್ಸ್‌ನಲ್ಲಿ ನಾನು ರೇಲ್ವೆ ಸ್ಟೇಷನ್ನಿನಿಂದ ನಾವು ಕುಟುಂಬವಾಗಿ ಜೀವಿಸಿದ್ದ ಮನೆಗೆ ಹೋದೆ. ಆದರೆ ಆ ಮೊದಲು ನಾಸಿ ಸೈನಿಕರು, “ದ್ರೋಹಿಗಳು ಇಲ್ಲಿ ಜೀವಿಸುತ್ತಿದ್ದಾರೆ!” ಎಂದು ಎಲ್ಲಿ ಕರೆದಿದ್ದರೊ ಆ ರಸ್ತೆಯಲ್ಲಿ ಒಂದೇ ಒಂದು ಮನೆಯೂ ಉಳಿದಿರಲಿಲ್ಲ. ನಿವಾಸ ಕ್ಷೇತ್ರವೆಲ್ಲ ಬಾಂಬುಗಳಿಂದ ನಾಶವಾಗಿತ್ತು. ಆದರೆ ನೆಮ್ಮದಿಯ ವಿಷಯವೇನಂದರೆ, ತಾಯಿ, ತಂದೆ, ಕ್ಯಾಟ ಮತ್ತು ನನ್ನ ಸಹೋದರ ಸಹೋದರಿಯರು ಇನ್ನೂ ಜೀವಿಸುತ್ತಿದ್ದಾರೆಂಬುದನ್ನು ನಾನು ಕಂಡುಕೊಂಡೆ.
ಯುದ್ಧಾನಂತರದ ಜರ್ಮನಿಯಲ್ಲಿ ಆರ್ಥಿಕ ಸ್ಥಿತಿಯು ಎದೆಗುಂದಿಸುವಂತಹದ್ದಾಗಿತ್ತು. ಆದರೂ ದೇವಜನರ ಸಭೆಗಳು ಜರ್ಮನಿಯಲ್ಲೆಲ್ಲೂ ಅಭಿವೃದ್ಧಿಹೊಂದತೊಡಗಿದವು. ನಾವು ಸಾರುವ ಚಟುವಟಿಕೆಯಲ್ಲಿ ಸಜ್ಜಾಗಿರುವಂತೆ ಪ್ರಯತ್ನಿಸಲು, ವಾಚ್ ಟವರ್ ಸೊಸೈಟಿಯು ಸಾಧ್ಯವಿರುವುದನ್ನೆಲ್ಲ ಮಾಡಿತು. ನಾಸಿಗಳು ಮುಚ್ಚಿದ್ದ ಮಾಗ್ಡಬುರ್ಗ್ ಬೆತೆಲಿನಲ್ಲಿ ಕೆಲಸವು ಪುನಃ ಆರಂಭಗೊಂಡಿತು. 1946ರ ವಸಂತಕಾಲದಲ್ಲಿ, ನನ್ನನ್ನು ಅಲ್ಲಿ ಕೆಲಸಮಾಡಲು ಕರೆಯಲಾಗಿ, ಅಡುಗೆಮನೆಗೆ ನೇಮಿಸಲಾಯಿತು.
ಪುನಃ ನಿಷೇಧಾಜ್ಞೆ ಮತ್ತು ಸೆರೆಯಲ್ಲಿ
ಕಮ್ಯೂನಿಸ್ಟರ ನಿಯಂತ್ರಣದೊಳಗೆ ಬಂದ ಜರ್ಮನಿಯ ಭಾಗದಲ್ಲಿ ಮಾಗ್ಡಬುರ್ಗ್ ಇದೆ. ಆಗಸ್ಟ್ 31, 1950ರಂದು ಅವರು ನಮ್ಮ ಕಾರ್ಯಕ್ಕೆ ನಿಷೇಧಾಜ್ಞೆ ತಂದು, ಮಾಗ್ಡಬುರ್ಗ್ ಬೆತೆಲನ್ನು ಮುಚ್ಚಿದರು. ಹೀಗೆ, ಬೆಲೆಬಾಳುವ ತರಬೇತಿನ ಸಮಯವಾಗಿದ್ದ ನನ್ನ ಬೆತೆಲ್ ಸೇವೆ ಅಂತ್ಯಗೊಂಡಿತು. ಕಮ್ಯೂನಿಸ್ಟರ ಕೆಳಗೂ ಸತ್ಯವನ್ನು ಬಿಗಿಯಾಗಿ ಹಿಡಿದುಕೊಂಡು, ಸಂಕಟಪಡುತ್ತಿರುವ ಮಾನವಕುಲಕ್ಕೆ ಏಕೈಕ ನಿರೀಕ್ಷೆಯಾಗಿ ದೇವರ ರಾಜ್ಯವನ್ನು ಸಾರಲು, ದೃಢನಿಶ್ಚಯದಿಂದ ನಾನು ಕೆಮ್ನಿಟ್ಸ್‌ಗೆ ಹಿಂದಿರುಗಿದೆ.
ಎಪ್ರಿಲ್ 1951ರಲ್ಲಿ, ಕಾವಲಿನಬುರುಜುವಿನ ಪ್ರತಿಗಳನ್ನು ಪಡೆಯಲು ನಾನು ಒಬ್ಬ ಸಹೋದರನೊಂದಿಗೆ ಬರ್ಲಿನ್‌ಗೆ ಹೋದೆ. ನಾವು ಹಿಂದಿರುಗಿದಾಗ, ಕೆಮ್ನಿಟ್ಸ್ ರೇಲ್ವೆ ಸ್ಟೇಷನ್ ಸಿವಿಲಿಯನ್ ಪೊಲೀಸರಿಂದ ಸುತ್ತುವರಿಯಲ್ಪಟ್ಟದ್ದನ್ನು ನೋಡಿ ತತ್ತರಗೊಂಡೆವು. ಅವರು ನಮಗಾಗಿ ಕಾಯುತ್ತಿದ್ದರೆಂಬುದು ಸ್ಪಷ್ಟ ಮತ್ತು ನಮ್ಮನ್ನು ಆಕೂಡಲೆ ದಸ್ತಗಿರಿಮಾಡಲಾಯಿತು.
ವಿಚಾರಣೆಯ ಮುನ್ನ ಬಂಧನದಲ್ಲಿ, ನಾನು ನಾಸಿಗಳಿಂದ ಅನೇಕ ವರ್ಷಗಳ ವರೆಗೆ ಸೆರೆಯಲ್ಲಿದ್ದೆ ಎಂಬುದನ್ನು ರುಜುಪಡಿಸಿದ ದಾಖಲೆಪತ್ರಗಳು ನನ್ನಲ್ಲಿದ್ದವು. ಆದಕಾರಣ ಪಹರೆಯವರು ನನ್ನನ್ನು ಗೌರವದಿಂದ ಕಂಡರು. ಸ್ತ್ರೀ ಪಹರೆಯವರ ಮುಖ್ಯಸ್ಥರಲ್ಲೊಬ್ಬಳು ಹೇಳಿದ್ದು: “ಯೆಹೋವನ ಸಾಕ್ಷಿಗಳಾದ ನೀವು ಪಾತಕಿಗಳಲ್ಲ; ನೀವು ಬಂದೀಖಾನೆಯಲ್ಲಿ ಸೇರಲರ್ಹರಲ್ಲ.”
ಒಮ್ಮೆ, ಇನ್ನಿಬ್ಬರು ಸಹೋದರಿಯರೊಂದಿಗಿದ್ದಾಗ, ಅವಳು ನನ್ನ ಕೋಣೆಗೆ ಬಂದು, ಮಂಚವೊಂದರ ಅಡಿಯಲ್ಲಿ ಏನನ್ನೋ ಇಟ್ಟಳು. ಅದೇನು? ತನ್ನ ಸ್ವಂತ ಬೈಬಲನ್ನು ನಮಗಾಗಿ ಬಿಟ್ಟುಹೋದಳು. ಇನ್ನೊಂದು ಸಂದರ್ಭದಲ್ಲಿ, ನನ್ನ ಹೆತ್ತವರು ಸೆರೆಮನೆಯಿಂದ ಹೆಚ್ಚು ದೂರ ಜೀವಿಸುತ್ತಿದ್ದಿಲ್ಲವಾದುದರಿಂದ, ಅವಳು ಅವರ ಮನೆಯಲ್ಲಿ ಅವರನ್ನು ಭೇಟಿಯಾದಳು. ಕಾವಲಿನಬುರುಜು ಪತ್ರಿಕೆಗಳನ್ನು ಮತ್ತು ಸ್ವಲ್ಪ ಆಹಾರವನ್ನು ಅವಳು ತನ್ನ ಮೈಯಲ್ಲಿ ಅಡಗಿಸಿಟ್ಟುಕೊಂಡು, ಅವೆಲ್ಲವನ್ನು ಗುಟ್ಟಾಗಿ ನನ್ನ ಕೋಣೆಯೊಳಗೆ ತಂದಳು.
ನಾನು ಜ್ಞಾಪಿಸಿಕೊಳ್ಳಲು ಇಷ್ಟಪಡುವ ಇನ್ನೊಂದು ವಿಷಯವಿದೆ. ಕೆಲವು ಬಾರಿ, ಭಾನುವಾರ ಬೆಳಿಗ್ಗೆ ನಾವು ದೇವಪ್ರಭುತ್ವಾತ್ಮಕ ಗೀತಗಳನ್ನು ಎಷ್ಟು ಗಟ್ಟಿಯಾಗಿ ಹಾಡುತ್ತಿದ್ದೆವೆಂದರೆ, ಬೇರೆ ಕೈದಿಗಳು ಪ್ರತಿ ಗೀತಾನಂತರ ಸಂತೋಷದಿಂದ ಚಪ್ಪಾಳೆ ಹೊಡೆದರು.
ಯೆಹೋವನಿಂದ ಬಲ ಮತ್ತು ಸಹಾಯ
ಸೆಪ್ಟೆಂಬರ್ 4, 1951ರಂದು, ನ್ಯಾಯಾಧೀಶರು ಈ ಲೇಖನಾರಂಭದಲ್ಲಿ ಹೇಳಿರುವ ಹೇಳಿಕೆಯನ್ನು ನುಡಿದರು. ನಾನು ಬಂಧನ ಶಿಕ್ಷಾವಧಿಯನ್ನು ಮೊದಲು ವಾಲ್ಟ್‌ಹೈಮ್‌ನಲ್ಲಿ, ಬಳಿಕ ಹಾಲದಲ್ಲಿ ಮತ್ತು ಕೊನೆಯದಾಗಿ ಹೋಅನೆಕ್‌ನಲ್ಲಿ ಕಳೆದೆ. ದೇವರು ಯೆಹೋವನ ಸಾಕ್ಷಿಗಳಾದ ನಮಗೆ ಹೇಗೆ ಒಂದು ಆಶ್ರಯಸ್ಥಾನವೂ ಬಲವೂ ಆಗಿದ್ದನು ಮತ್ತು ಆತನ ವಾಕ್ಯವು ನಮ್ಮನ್ನು ಹೇಗೆ ಹುರಿದುಂಬಿಸಿತೆಂಬುದನ್ನು ಒಂದೊ ಎರಡೊ ಸಂಕ್ಷಿಪ್ತ ಘಟನೆಗಳು ತೋರಿಸುವುವು.
ವಾಲ್ಟ್‌ಹೈಮ್ ಸೆರೆಮನೆಯಲ್ಲಿ, ನಾವು ಕ್ರೈಸ್ತ ಕೂಟಗಳನ್ನು ನಡೆಸಶಕ್ತರಾಗುವಂತೆ, ಎಲ್ಲ ಸಾಕ್ಷಿ ಸಹೋದರಿಯರು ಒಂದು ಹಾಲ್‌ನಲ್ಲಿ ಕ್ರಮವಾಗಿ ಕೂಡಿಬಂದರು. ಪೆನ್ಸಿಲ್ ಮತ್ತು ಕಾಗದಕ್ಕೆ ಅನುಮತಿಯಿರಲಿಲ್ಲವಾದರೂ, ಹಲವು ಸಹೋದರಿಯರು ಬಟ್ಟೆಯ ತುಂಡುಗಳಿಂದ, 1953ರ ವರ್ಷ ವಚನವಾದ, “ಪರಿಶುದ್ಧತ್ವವೆಂಬ ಭೂಷಣದೊಡನೆ ಯೆಹೋವನಿಗೆ ಅಡ್ಡಬೀಳಿರಿ,” ಎಂಬ ಮಾತುಗಳಿದ್ದ ಒಂದು ಚಿಕ್ಕ ಬ್ಯಾನರನ್ನು ಮಾಡಶಕ್ತರಾದರು.—ಕೀರ್ತನೆ 29:2.
ಹೆಣ್ಣು ಪಹರೆಯವರಲ್ಲಿ ಒಬ್ಬಳು ಅನಿರೀಕ್ಷಿತವಾಗಿ ನಮ್ಮನ್ನು ಕಂಡುಹಿಡಿದು, ತಡಮಾಡದೆ ವರದಿಮಾಡಿದಳು. ಸೆರೆಮನೆಯ ಮುಖ್ಯಸ್ಥನು ಬಂದು ನಮ್ಮಲ್ಲಿ ಇಬ್ಬರು ಸಹೋದರಿಯರನ್ನು ಆ ಬ್ಯಾನರನ್ನು ಮೇಲೆತ್ತಿ ಹಿಡಿಯುವಂತೆ ಹೇಳಿದನು. “ಇದನ್ನು ಮಾಡಿದ್ದು ಯಾರು? ಇದರ ಅರ್ಥವೇನು?” ಎಂದು ಅವನು ಕೇಳಿದನು.
ಸಹೋದರಿಯರಲ್ಲಿ ಒಬ್ಬಳು ನಮ್ಮೆಲ್ಲರ ಪರವಾಗಿ ತಪ್ಪನ್ನು ತಾನೇ ಒಪ್ಪಿಕೊಳ್ಳಲು ಬಯಸಿದರೂ, ನಾವು ಬೇಗನೇ ನಮ್ಮೊಳಗೆ ಪಿಸುಗುಟ್ಟುತ್ತ ಮಾತಾಡಿ, ಹೊಣೆಗಾರಿಕೆಯಲ್ಲಿ ನಾವೆಲ್ಲರೂ ಭಾಗಿಗಳಾಗಬೇಕೆಂದು ಸಮ್ಮತಿಸಿದೆವು. ಆದಕಾರಣ ನಾವು, “ನಮ್ಮ ನಂಬಿಕೆಯನ್ನು ಬಲಪಡಿಸುವರೆ ನಾವದನ್ನು ಮಾಡಿದೆವು,” ಎಂದು ಉತ್ತರಕೊಟ್ಟೆವು. ಆ ಬ್ಯಾನರನ್ನು ವಶಪಡಿಸಿಕೊಳ್ಳಲಾಯಿತು ಮತ್ತು ಅದಕ್ಕೆ ಶಿಕ್ಷೆಯಾಗಿ ನಮಗೆ ಊಟಗಳು ಇಲ್ಲವಾದವು. ಆದರೆ ಪೂರ್ತಿ ಚರ್ಚೆಯ ಕಾಲದಲ್ಲಿ, ಆ ಪ್ರೋತ್ಸಾಹಕರ ಶಾಸ್ತ್ರವಚನವನ್ನು ನಾವು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತುವಂತೆ ಸಹೋದರಿಯರು ಅದನ್ನು ಮೇಲೆತ್ತಿ ಹಿಡಿದರು.
ವಾಲ್ಟ್‌ಹೈಮ್‌ನ ಸೆರೆಮನೆಯು ಮುಚ್ಚಲ್ಪಟ್ಟ ಬಳಿಕ, ಸಹೋದರಿಯರಾದ ನಮ್ಮನ್ನು ಹಾಲಕ್ಕೆ ಸ್ಥಳಾಂತರಿಸಲಾಯಿತು. ಇಲ್ಲಿ ನಮಗೆ ಪಾರ್ಸೆಲುಗಳನ್ನು ಪಡೆಯುವಂತೆ ಅನುಮತಿಸಲಾಯಿತು. ಮತ್ತು ನನ್ನ ತಂದೆಯವರು ನನಗೆ ಕಳುಹಿಸಿದ ಜೋಡಿನೊಳಗೆ ಏನನ್ನು ಹೊಲಿಯಲಾಗಿತ್ತು? ಕಾವಲಿನಬುರುಜು ಲೇಖನಗಳನ್ನು! “ನಿಜ ಪ್ರೀತಿಯು ಪ್ರಾಯೋಗಿಕ,” ಮತ್ತು “ಸುಳ್ಳುಗಳು ಜೀವನಷ್ಟಕ್ಕೆ ನಡೆಸುತ್ತವೆ,” ಎಂಬ ಆ ಲೇಖನಗಳನ್ನು ನಾನಿನ್ನೂ ನೆನಪಿಸಿಕೊಳ್ಳಬಲ್ಲೆ. ಈ ಲೇಖನಗಳು ಮತ್ತು ಇತರ ಲೇಖನಗಳು, ನಿಜವಾಗಿಯೂ ರಸಭಕ್ಷ್ಯಗಳಾಗಿದ್ದವು ಮತ್ತು ನಾವು ಇವನ್ನು ಗುಪ್ತವಾಗಿ ಒಬ್ಬರಿಂದೊಬ್ಬರಿಗೆ ದಾಟಿಸಿದಾಗ, ಪ್ರತಿಯೊಬ್ಬರೂ ತಮಗಾಗಿ ಟಿಪ್ಪಣಿಗಳನ್ನು ಮಾಡಿಕೊಂಡರು.
ಒಂದು ಜಪ್ತಿಯ ಸಮಯದಲ್ಲಿ, ಪಹರೆಯವರಲ್ಲಿ ಒಬ್ಬಳು ನನ್ನ ಹುಲ್ಲಿನ ಹಾಸಿಗೆಯೊಳಗೆ ಅಡಗಿಸಿಟ್ಟಿದ್ದ ನನ್ನ ವೈಯಕ್ತಿಕ ಟಿಪ್ಪಣಿಗಳನ್ನು ಕಂಡುಹಿಡಿದಳು. ತರುವಾಯ ಆಕೆ ನನ್ನನ್ನು ವಿಚಾರಣೆಗಾಗಿ ಕರೆದು, “ಯೆಹೋವನಿಗೆ ಭಯಪಡುವವರಿಗೆ 1955ಕ್ಕಾಗಿರುವ ಪ್ರತೀಕ್ಷೆಗಳು” ಎಂಬ ಲೇಖನದ ಅರ್ಥವನ್ನು ನಿಶ್ಚಯವಾಗಿಯೂ ತಿಳಿಯಲಪೇಕ್ಷಿಸುತ್ತೇನೆಂದಳು. ಕಮ್ಯೂನಿಸ್ಟಳಾಗಿದ್ದ ಆಕೆ, 1953ರಲ್ಲಿ ತನ್ನ ನಾಯಕ ಸ್ಟ್ಯಾಲಿನನ ಮರಣದ ವಿಷಯದಲ್ಲಿ ಗಾಢವಾಗಿ ಚಿಂತಿತಳಾಗಿದ್ದಳು ಮತ್ತು ಭವಿಷ್ಯತ್ತು ಮೊಬ್ಬಾಗಿ ಕಂಡುಬಂತು. ನಮ್ಮ ಸಂಬಂಧದಲ್ಲಿಯಾದರೊ, ಭವಿಷ್ಯತ್ತಿನಲ್ಲಿ ನಮ್ಮ ಪರಿಸ್ಥಿತಿಗಳಲ್ಲಿ ತುಸು ಸುಧಾರಣೆಯಾಗಲಿದ್ದರೂ, ನನಗೆ ಅದು ಇನ್ನೂ ತಿಳಿದಿರಲಿಲ್ಲ. ಯೆಹೋವನ ಸಾಕ್ಷಿಗಳಿಗಿರುವ ಪ್ರತೀಕ್ಷೆಯು ಅತ್ಯಂತ ಉತ್ತಮವೆಂದು ನಾನು ಭರವಸೆಯಿಂದ ವಿವರಿಸಿದೆ. ಏಕೆ? ನಾನು ಆ ಲೇಖನದ ಮುಖ್ಯ ಶಾಸ್ತ್ರವಚನವಾಗಿದ್ದ ಕೀರ್ತನೆ 112:7ನ್ನು ಉಲ್ಲೇಖಿಸಿದೆ: “ಅವನಿಗೆ ಕೆಟ್ಟ ಸುದ್ದಿಯ ಭಯವಿರುವದಿಲ್ಲ; ಯೆಹೋವನಲ್ಲಿ ಭರವಸವಿಟ್ಟಿರುವದರಿಂದ ಅವನ ಮನಸ್ಸು ಸ್ಥಿರವಾಗಿರುವದು.”
ಯೆಹೋವನು ಇನ್ನೂ ನನ್ನ ಆಶ್ರಯವೂ ಬಲವೂ ಆಗಿದ್ದಾನೆ
ಒಂದು ಗುರುತರವಾದ ಕಾಯಿಲೆಯ ಬಳಿಕ, ನಾನು ಮಾರ್ಚ್ 1957ರಲ್ಲಿ, ಎರಡು ವರ್ಷಗಳ ಮೊದಲೇ ಬಿಡುಗಡೆಹೊಂದಿದೆ. ಯೆಹೋವನ ಸೇವೆಯಲ್ಲಿ ನನ್ನ ಚಟುವಟಿಕೆಗಳ ಕಾರಣ, ಪೂರ್ವ ಜರ್ಮನಿಯ ಅಧಿಕಾರಿಗಳು ನನ್ನ ಮೇಲೆ ಪುನಃ ಒತ್ತಡ ಹಾಕಿದರು. ಆದಕಾರಣ, ಮೇ 6, 1957ರಂದು ನಾನು ವೆಸ್ಟ್ ಬರ್ಲಿನಿಗೆ ಪಲಾಯನಮಾಡುವ ಸಂದರ್ಭವನ್ನು ತೆಗೆದುಕೊಂಡು, ಅಲ್ಲಿಂದ ಪಶ್ಚಿಮ ಜರ್ಮನಿಗೆ ಹೋದೆ.
ನನ್ನ ಶಾರೀರಿಕ ಆರೋಗ್ಯವನ್ನು ಪುನಃ ಪಡೆಯಲು ನನಗೆ ಹಲವಾರು ವರುಷಗಳು ಹಿಡಿದವು. ಆದರೆ ನನಗೆ ಹಿತಕರವಾದ ಆತ್ಮಿಕ ಹಸಿವೆ ಈಗಲೂ ಇದ್ದು, ಕಾವಲಿನಬುರುಜು ಪತ್ರಿಕೆಯ ಪ್ರತಿಯೊಂದು ಹೊಸ ಪ್ರತಿಗಾಗಿ ನಾನು ಮುನ್ನೋಡುತ್ತೇನೆ. ಆಗಿಂದಾಗ್ಗೆ, ನಾನು ನನ್ನನ್ನು ಪರೀಕ್ಷಿಸಿಕೊಳ್ಳುತ್ತೇನೆ. ನಾನಿನ್ನೂ ಆತ್ಮಿಕಮನಸ್ಕಳಾಗಿದ್ದೇನೊ? ನಾನು ಉತ್ತಮ ಗುಣಗಳನ್ನು ಬೆಳೆಸಿಕೊಂಡಿದ್ದೇನೊ? ನನ್ನ ಪರೀಕ್ಷಿತ ಗುಣವಾದ ನಂಬಿಕೆಯು, ಯೆಹೋವನ ಸ್ತುತಿ ಮತ್ತು ಗೌರವಕ್ಕೆ ಕಾರಣವಾಗಿದೆಯೊ? ದೇವರು ಸದಾಕಾಲ ನನ್ನ ಆಶ್ರಯಸ್ಥಾನವೂ ಬಲವೂ ಆಗಿರುವಂತೆ ಸಕಲ ವಿಷಯಗಳಲ್ಲಿ ಆತನನ್ನು ಮೆಚ್ಚಿಸುವುದು ನನ್ನ ಗುರಿಯಾಗಿದೆ.
[ಅಧ್ಯಯನ ಪ್ರಶ್ನೆಗಳು]
a “ಫೋಟೋಡ್ರಾಮದಲ್ಲಿ ಜಾರುಚಿತ್ರಗಳೂ ಚಲಿಸುವ ಚಿತ್ರಗಳೂ ಇದ್ದವು ಮತ್ತು 1914ರಿಂದ ಹಿಡಿದು, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಪ್ರತಿನಿಧಿಗಳು ಇದನ್ನು ವ್ಯಾಪಕವಾಗಿ ತೋರಿಸಿದರು.
b ಸ್ವಿಟ್ಸರ್ಲೆಂಡ್‌ನ ಬರ್ನ್‌ನಲ್ಲಿ ವಾಚ್ ಟವರ್ ಸೊಸೈಟಿ ಪ್ರಕಾಶಿಸಿದ ಟ್ರೋಸ್ಟ್ (ಕಾನ್ಸೊಲೇಶನ್), ಮೇ 1, 1940ರ ಸಂಚಿಕೆಯ 10ನೆಯ ಪುಟದಲ್ಲಿ ವರದಿಸಿದ್ದೇನಂದರೆ, ಒಂದು ಸಂದರ್ಭದಲ್ಲಿ ಲಿಕ್ಟನ್‌ಬುರ್ಗ್‌ನ ಹೆಣ್ಣು ಯೆಹೋವನ ಸಾಕ್ಷಿಗಳು, ನಾಸಿ ಗೀತಗಳು ನುಡಿಸಲ್ಪಟ್ಟಾಗ ಗೌರವದ ಭಾವಾಭಿನಯವನ್ನು ತೋರಿಸದಿದ್ದುದಕ್ಕಾಗಿ, 14 ದಿನಗಳ ವರೆಗೆ ಮಧ್ಯಾಹ್ನ ಊಟಗಳನ್ನು ಅವರು ಪಡೆಯಲಿಲ್ಲ. ಅಲ್ಲಿ 300 ಮಂದಿ ಯೆಹೋವನ ಸಾಕ್ಷಿಗಳಿದ್ದರು.
c ಯೋಸೆಫ್ ರೇವಾಲ್ಡ್ ಕುರಿತ ಒಂದು ವರದಿಯು, ಫೆಬ್ರವರಿ 8, 1993ರ ಅವೇಕ್! ಪುಟಗಳು 20-3ರಲ್ಲಿ ಬಂದಿತು.
[ಪುಟ 26 ರಲ್ಲಿರುವ ಚಿತ್ರ]
ರಾವನ್ಸ್‌ಬ್ರೂಕ್‌ನಲ್ಲಿ ಎಸೆಸ್ ಆಫೀಸ್
[ಕೃಪೆ]
ಮೇಲೆ: Stiftung Brandenburgische Gedenkstätten
[ಪುಟ 26 ರಲ್ಲಿರುವ ಚಿತ್ರ]
ಶಿಬಿರದ ಹೊರಗೆ ಕೆಲಸಮಾಡಲು ನನ್ನಲ್ಲಿದ್ದ ಪಾಸ್