ಯೆಹೋವನ ಸಂಸ್ಥೆಯೊಂದಿಗೆ ನಿಷ್ಠೆಯಿಂದ ಸೇವೆಸಲ್ಲಿಸುವುದು
“ನಿಷ್ಠಾವಂತನೊಂದಿಗೆ ನೀನು ನಿಷ್ಠೆಯಿಂದ ಕಾರ್ಯಗೈಯುವಿ.”—2 ಸಮುವೇಲ 22:26, NW.
1, 2. ಸಭೆಯಲ್ಲಿ ನಾವೆಲ್ಲರೂ ನೋಡಬಹುದಾದ ನಿಷ್ಠೆಯ ಕೆಲವು ಉದಾಹರಣೆಗಳಾವುವು?
ಒಂದು ಸಂಜೆ ಹೊತ್ತುಮೀರಿ, ಹಿರಿಯನೊಬ್ಬನು ಕ್ರೈಸ್ತ ಕೂಟಕ್ಕಾಗಿ ಒಂದು ಭಾಷಣವನ್ನು ತಯಾರಿಸುತ್ತಾನೆ. ತಯಾರಿಸುವುದನ್ನು ನಿಲ್ಲಿಸಿ, ವಿಶ್ರಾಂತಿ ಪಡೆದುಕೊಳ್ಳಲು ಅವನು ಇಷ್ಟಪಡುತ್ತಾನಾದರೂ, ಜನರನ್ನು ಪ್ರಚೋದಿಸಿ, ಮಂದೆಯನ್ನು ಉತ್ತೇಜಿಸುವ ಶಾಸ್ತ್ರೀಯ ಉದಾಹರಣೆಗಳನ್ನು ಮತ್ತು ದೃಷ್ಟಾಂತಗಳನ್ನು ಹುಡುಕುತ್ತಾ, ಅವನು ಕೆಲಸಮಾಡುವುದನ್ನು ಮುಂದುವರಿಸುತ್ತಾನೆ. ಕೂಟದ ರಾತ್ರಿಯಂದು, ಅದೇ ಸಭೆಯಲ್ಲಿರುವ ಒಂದು ಜೋಡಿ ಬಳಲಿಹೋದ ಹೆತ್ತವರು, ಆ ಸಂಜೆಯನ್ನು ಮನೆಯಲ್ಲಿ ಕಳೆಯಲು ಇಷ್ಟಪಡುತ್ತಾರಾದರೂ, ತಾಳ್ಮೆಯಿಂದ ತಮ್ಮ ಮಕ್ಕಳನ್ನು ತಯಾರುಮಾಡಿ, ಕೂಟಕ್ಕೆ ಹೋಗುತ್ತಾರೆ. ಕೂಟದ ತರುವಾಯ, ಕ್ರೈಸ್ತರ ಗುಂಪೊಂದು ಆ ಹಿರಿಯನ ಭಾಷಣದ ಕುರಿತು ಚರ್ಚಿಸುತ್ತದೆ. ಅದೇ ಸಹೋದರನು ಒಮ್ಮೆ ತನ್ನ ಅನಿಸಿಕೆಗಳಿಗೆ ನೋವನ್ನುಂಟುಮಾಡಿದನೆಂದು ಒಬ್ಬ ಸಹೋದರಿಯು ಹೇಳುವಂತೆ ಪ್ರಲೋಭಿಸಲ್ಪಟ್ಟಳಾದರೂ, ಅವನು ಭಾಷಣದಲ್ಲಿ ಹೇಳಿದಂತಹ ವಿಷಯಗಳಲ್ಲಿ ಒಂದರ ಬಗ್ಗೆ ಅವಳು ಉತ್ಸಾಹಭರಿತಳಾಗಿ ಮಾತಾಡುತ್ತಾಳೆ. ಈ ದೃಶ್ಯವಿವರಗಳ ಮಧ್ಯೆ ಹರಿಯುವ ಸಾಮಾನ್ಯ ಎಳೆಯನ್ನು ನೀವು ನೋಡುತ್ತೀರೊ?
2 ಆ ಎಳೆಯು ನಿಷ್ಠೆಯಾಗಿದೆ. ಆ ಹಿರಿಯನು ದೇವರ ಮಂದೆಗೆ ಸೇವೆಸಲ್ಲಿಸಲು ನಿಷ್ಠೆಯಿಂದ ಕೆಲಸಮಾಡುತ್ತಾನೆ, ಹೆತ್ತವರು ನಿಷ್ಠೆಯಿಂದ ಸಭಾ ಕೂಟಗಳಿಗೆ ಹಾಜರಾಗುತ್ತಾರೆ, ಆ ಸಹೋದರಿಯು ನಿಷ್ಠೆಯಿಂದ ಹಿರಿಯರನ್ನು ಬೆಂಬಲಿಸುತ್ತಾಳೆ. (ಇಬ್ರಿಯ 10:24, 25; 13:17; 1 ಪೇತ್ರ 5:2) ಹೌದು, ಜೀವನದ ಎಲ್ಲ ಪರಿಸ್ಥಿತಿಗಳಲ್ಲಿ, ದೇವರ ಜನರು ಯೆಹೋವನ ಸಂಸ್ಥೆಯೊಂದಿಗೆ ನಿಷ್ಠೆಯಿಂದ ಸೇವೆಸಲ್ಲಿಸಲು ದೃಢನಿರ್ಧಾರ ಮಾಡಿರುವುದನ್ನು ನಾವು ನೋಡುತ್ತೇವೆ.
3. ಯೆಹೋವನ ಭೂಸಂಸ್ಥೆಗೆ ನಾವು ನಿಷ್ಠಾವಂತರಾಗಿ ಉಳಿಯುವುದು ಏಕೆ ಅಷ್ಟೊಂದು ಪ್ರಾಮುಖ್ಯವಾಗಿದೆ?
3 ಯೆಹೋವನು ಈ ಭ್ರಷ್ಟ ಲೋಕದ ಕಡೆಗೆ ದೃಷ್ಟಿ ಹರಿಸುವಾಗ, ಆತನು ಬಹಳಷ್ಟು ಕಡಿಮೆ ನಿಷ್ಠೆಯನ್ನು ಕಾಣುತ್ತಾನೆ. (ಮೀಕ 7:2) ತನ್ನ ಜನರ ನಿಷ್ಠೆಯನ್ನು ಆತನು ಗಮನಿಸುವಾಗ, ಆತನ ಹೃದಯವು ಆನಂದದಿಂದ ಹೇಗೆ ಪ್ರತಿಕ್ರಿಯಿಸುತ್ತಿರಬೇಕು! ಹೌದು, ನಿಮ್ಮ ಸ್ವಂತ ನಿಷ್ಠೆಯು ಆತನನ್ನು ಹರ್ಷಗೊಳಿಸುತ್ತದೆ. ಆದರೆ, ಅದು ಪುರಾತನ ದಂಗೆಕೋರನಾದ ಸೈತಾನನನ್ನು ರೇಗಿಸುತ್ತದೆ ಮತ್ತು ಅವನನ್ನು ಒಬ್ಬ ಸುಳ್ಳುಗಾರನನ್ನಾಗಿ ರುಜುಪಡಿಸುತ್ತದೆ. (ಜ್ಞಾನೋಕ್ತಿ 27:11; ಯೋಹಾನ 8:44) ಯೆಹೋವನ ಮತ್ತು ಆತನ ಭೂಸಂಸ್ಥೆಯ ಪ್ರತಿ ನಿಮಗಿರುವ ನಿಷ್ಠೆಯನ್ನು ಕುಗ್ಗಿಸಲು ಸೈತಾನನು ಪ್ರಯತ್ನಿಸುವನೆಂಬುದನ್ನು ನಿರೀಕ್ಷಿಸಿರಿ. ಸೈತಾನನು ಇದನ್ನು ಮಾಡುವ ಕೆಲವು ವಿಧಗಳನ್ನು ನಾವು ಪರಿಗಣಿಸೋಣ. ಹೀಗೆ, ಅಂತ್ಯದ ವರೆಗೆ ನಾವು ಹೇಗೆ ನಿಷ್ಠಾವಂತರಾಗಿ ಉಳಿಯಸಾಧ್ಯವಿದೆ ಎಂಬುದನ್ನು ನಾವು ಉತ್ತಮವಾಗಿ ಅವಲೋಕಿಸಬಹುದು.—2 ಕೊರಿಂಥ 2:11.
ಅಪರಿಪೂರ್ಣತೆಗಳ ಮೇಲೆ ಕೇಂದ್ರೀಕರಿಸುವುದು ನಿಷ್ಠೆಯನ್ನು ಸವೆಸಬಲ್ಲದು
4. (ಎ) ಅಧಿಕಾರದಲ್ಲಿರುವವರ ಬಗ್ಗೆ ವಿಮರ್ಶಾತ್ಮಕ ನೋಟವನ್ನು ತೆಗೆದುಕೊಳ್ಳುವುದು ಏಕೆ ಸುಲಭವಾಗಿದೆ? (ಬಿ) ಕೋರಹನು ಹೇಗೆ ಯೆಹೋವನ ಸಂಸ್ಥೆಗೆ ನಿಷ್ಠಾದ್ರೋಹಿಯಾಗಿ ರುಜುವಾದನು?
4 ಸಹೋದರನೊಬ್ಬನು ಜವಾಬ್ದಾರಿಯ ಸ್ಥಾನದಲ್ಲಿರುವಾಗ, ಅವನ ದೋಷಗಳು ಹೆಚ್ಚು ವ್ಯಕ್ತವಾಗಬಹುದು. ‘ನಾವು ನಮ್ಮ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಮ್ಮ ಸಹೋದರನ ಕಣ್ಣಿನಲ್ಲಿರುವ ರವೆಯನ್ನು’ ತೆಗೆಯುವುದು ಎಷ್ಟು ಸುಲಭ! (ಮತ್ತಾಯ 7:1-5) ಆದರೆ ದೋಷಗಳ ಮೇಲೆ ಗಮನವಿಡುವುದು, ನಿಷ್ಠಾದ್ರೋಹವನ್ನು ಬೆಳೆಸಬಲ್ಲದು. ದೃಷ್ಟಾಂತಕ್ಕಾಗಿ, ಕೋರಹ ಮತ್ತು ದಾವೀದನ ನಡುವಿನ ವೈದೃಶ್ಯವನ್ನು ಪರಿಗಣಿಸಿರಿ. ಕೋರಹನು ಬಹಳಷ್ಟು ಜವಾಬ್ದಾರಿಯನ್ನು ವಹಿಸಿಕೊಂಡು, ಬಹುಶಃ ಅನೇಕ ವರ್ಷಗಳಿಂದ ನಿಷ್ಠಾವಂತನಾಗಿದ್ದನು, ಆದರೆ ಅವನು ಮಹತ್ವಾಕಾಂಕ್ಷೆಯುಳ್ಳವನಾದನು. ತನ್ನ ಸೋದರಸಂಬಂಧಿಗಳಾದ ಮೋಶೆ ಆರೋನರ ಅಧಿಕಾರದ ಬಗ್ಗೆ ಅವನು ತೀವ್ರ ಅಸಮಾಧಾನವನ್ನು ತೋರಿಸಿದನು. ಮೋಶೆ ಎಲ್ಲ ಮನುಷ್ಯರಲ್ಲಿ ಅತಿ ನಮ್ರನಾಗಿದ್ದರೂ, ಕೋರಹನು ಅವನನ್ನು ವಿಮರ್ಶಾತ್ಮಕ ಕಣ್ಣುಗಳಿಂದ ನೋಡಲಾರಂಭಿಸಿದನೆಂಬುದು ವ್ಯಕ್ತ. ಅವನು ಮೋಶೆಯಲ್ಲಿ ದೋಷಗಳನ್ನು ಕಂಡಿರಬಹುದು. ಆದರೆ ಆ ದೋಷಗಳು, ಯೆಹೋವನ ಸಂಸ್ಥೆಯ ಪ್ರತಿ ಕೋರಹನ ನಿಷ್ಠಾದ್ರೋಹವನ್ನು ಸಮರ್ಥಿಸಲಿಲ್ಲ. ಅವನನ್ನು ಸಭೆಯ ಮಧ್ಯದಿಂದ ಅಳಿಸಿಬಿಡಲಾಯಿತು.—ಅರಣ್ಯಕಾಂಡ 12:3; 16:11, 31-33.
5. ಸೌಲನ ವಿರುದ್ಧ ದಂಗೆಯೇಳಲು ದಾವೀದನು ಏಕೆ ಪ್ರಲೋಭಿಸಲ್ಪಟ್ಟಿರಬಹುದು?
5 ಇನ್ನೊಂದು ಕಡೆಯಲ್ಲಿ ದಾವೀದನು, ರಾಜ ಸೌಲನ ಕೈ ಕೆಳಗೆ ಸೇವೆಸಲ್ಲಿಸಿದನು. ಒಂದು ಸಮಯದಲ್ಲಿ ಒಳ್ಳೆಯ ರಾಜನಾಗಿದ್ದ ಸೌಲನು, ವಾಸ್ತವವಾಗಿ ದುಷ್ಟನಾಗಿ ಪರಿಣಮಿಸಿದ್ದನು. ಈರ್ಷ್ಯೆಯುಳ್ಳ ಸೌಲನ ಆಕ್ರಮಣಗಳಿಂದ ಬದುಕಿ ಉಳಿಯಲು, ದಾವೀದನಿಗೆ ನಂಬಿಕೆ, ತಾಳ್ಮೆ, ಮತ್ತು ಒಂದಿಷ್ಟು ಜಾಣತನವೂ ಅಗತ್ಯವಾಗಿತ್ತು. ಆದರೂ, ಸೇಡುತೀರಿಸಿಕೊಳ್ಳುವ ಅವಕಾಶವು ದಾವೀದನಿಗೆ ಒದಗಿಬಂದಾಗ, ಯೆಹೋವನು ಅಭಿಷೇಕಿಸಿದ್ದ ಒಬ್ಬನ ವಿರುದ್ಧ ನಿಷ್ಠಾದ್ರೋಹದ ಒಂದು ಕ್ರಿಯೆಯನ್ನು ತಾನು ಗೈಯವುದು, ‘ಯೆಹೋವನ ದೃಷ್ಟಿಕೋನದಿಂದ ಯೋಚಿಸಲಸಾಧ್ಯವಾದ’ (NW) ವಿಚಾರವಾಗಿತ್ತೆಂದು ಅವನು ಹೇಳಿದನು.—1 ಸಮುವೇಲ 26:11.
6. ಹಿರಿಯರಲ್ಲಿ ನಾವು ಬಲಹೀನತೆಗಳನ್ನು ಮತ್ತು ದೋಷಗಳನ್ನು ಗ್ರಹಿಸುವುದಾದರೂ, ಯಾವ ವಿಷಯವನ್ನು ನಾವು ಎಂದಿಗೂ ಮಾಡಬಾರದು?
6 ನಮ್ಮಲ್ಲಿ ನಾಯಕತ್ವ ವಹಿಸುತ್ತಿರುವ ಕೆಲವರು, ತೀರ್ಪುನೀಡುವುದರಲ್ಲಿ ತಪ್ಪುವಂತೆ ತೋರುವಾಗ, ನಿಷ್ಠುರ ಶಬ್ದಗಳನ್ನುಪಯೋಗಿಸಿ ಮಾತಾಡುವಾಗ, ಇಲ್ಲವೆ ಪಕ್ಷಪಾತ ತೋರಿಸುವಂತೆ ಕಂಡುಬರುವಾಗ, ಸಭೆಯಲ್ಲಿ ಬಹುಶಃ ಒಂದು ವಿಮರ್ಶಾತ್ಮಕ ಮನೋವೃತ್ತಿಗೆ ನೆರವುನೀಡುತ್ತಾ, ನಾವು ಅವರ ಬಗ್ಗೆ ದೂರುವೆವೊ? ಪ್ರತಿಭಟನೆಯ ಒಂದು ವಿಧಾನವಾಗಿ ನಾವು ಕ್ರೈಸ್ತ ಕೂಟಗಳಿಗೆ ಬರುವುದನ್ನು ನಿಲ್ಲಿಸಿಬಿಡುವೆವೊ? ನಿಶ್ಚಯವಾಗಿಯೂ ಇಲ್ಲ! ದಾವೀದನಂತೆ, ಯೆಹೋವನ ಮತ್ತು ಆತನ ಸಂಸ್ಥೆಯ ಪ್ರತಿ ನಾವು ನಿಷ್ಠಾದ್ರೋಹಿಗಳಾಗಿರಲು ಮತ್ತೊಬ್ಬರ ದೋಷಗಳು ನಮ್ಮನ್ನು ಪ್ರೇರಿಸುವಂತೆ ನಾವು ಎಂದಿಗೂ ಬಿಡಲಾರೆವು!—ಕೀರ್ತನೆ 119:165.
7. ಯೆರೂಸಲೇಮಿನಲ್ಲಿದ್ದ ದೇವಾಲಯದ ಸಂಬಂಧದಲ್ಲಿ ವಿಕಾಸಗೊಂಡ ಭ್ರಷ್ಟ ಆಚರಣೆಗಳಲ್ಲಿ ಕೆಲವು ಯಾವುವು, ಮತ್ತು ಇದರ ಬಗ್ಗೆ ಯೇಸುವಿಗೆ ಹೇಗನಿಸಿತು?
7 ನಿಷ್ಠೆಯ ಅತ್ಯಂತ ಮಹಾನ್ ಮಾನುಷ ಉದಾಹರಣೆಯು ಯೇಸು ಕ್ರಿಸ್ತನಾಗಿದ್ದನು. ಅವನು ಪ್ರವಾದನಾತ್ಮಕವಾಗಿ ಯೆಹೋವನ “ನಿಷ್ಠಾವಂತ”ನೆಂದು (NW) ವರ್ಣಿಸಲ್ಪಟ್ಟಿದ್ದಾನೆ. (ಕೀರ್ತನೆ 16:10) ಯೆರೂಸಲೇಮಿನಲ್ಲಿದ್ದ ದೇವಾಲಯದ ಭ್ರಷ್ಟ ದುರುಪಯೋಗವು, ನಿಷ್ಠೆಯನ್ನು ಒಂದು ಪಂಥಾಹ್ವಾನವಾಗಿ ಮಾಡಿದ್ದಿರಬೇಕು. ಮಹಾಯಾಜಕನ ಕೆಲಸ ಮತ್ತು ಯಜ್ಞಗಳು ತನ್ನ ಸ್ವಂತ ಶುಶ್ರೂಷೆ ಮತ್ತು ಯಜ್ಞಾರ್ಪಿತ ಮರಣವನ್ನು ಮುನ್ಸೂಚಿಸಿದವೆಂಬುದು ಯೇಸುವಿಗೆ ಗೊತ್ತಿತ್ತು, ಮತ್ತು ಇವುಗಳಿಂದ ಕಲಿತುಕೊಳ್ಳುವುದು ಜನರಿಗೆ ಎಷ್ಟು ಆವಶ್ಯಕವಾಗಿತ್ತೆಂಬುದು ಅವನಿಗೆ ಗೊತ್ತಿತ್ತು. ಆದುದರಿಂದ, ದೇವಾಲಯವು “ಕಳ್ಳರ ಗವಿ” ಆಗಿದ್ದುದನ್ನು ಅವನು ನೋಡಿದಾಗ, ನೀತಿ ಕ್ರೋಧದಿಂದ ಭರಿತನಾಗಿದ್ದನು. ದೈವದತ್ತ ಅಧಿಕಾರದೊಂದಿಗೆ, ಅದನ್ನು ಶುಚಿಗೊಳಿಸುವ ಹೆಜ್ಜೆಗಳನ್ನು ಅವನು ಎರಡು ಬಾರಿ ತೆಗೆದುಕೊಂಡನು.a—ಮತ್ತಾಯ 21:12, 13; ಯೋಹಾನ 2:15-17.
8. (ಎ) ಯೇಸು ದೇವಾಲಯದ ಏರ್ಪಾಡಿಗೆ ಹೇಗೆ ನಿಷ್ಠೆಯನ್ನು ತೋರಿಸಿದನು? (ಬಿ) ಯೆಹೋವನನ್ನು ಆತನ ಶುದ್ಧ ಸಂಸ್ಥೆಯೊಂದಿಗೆ ಆರಾಧಿಸುವುದನ್ನು ನಾವು ಗಣ್ಯಮಾಡುತ್ತೇವೆಂಬುದನ್ನು ನಾವು ಹೇಗೆ ತೋರಿಸಬಲ್ಲೆವು?
8 ಆದರೂ, ಯೇಸು ನಿಷ್ಠೆಯಿಂದ ದೇವಾಲಯದ ಏರ್ಪಾಡನ್ನು ಸಮರ್ಥಿಸಿದನು. ಬಾಲ್ಯಾವಸ್ಥೆಯಿಂದ ಅವನು ದೇವಾಲಯದಲ್ಲಿ ಜರುಗಿದ ಉತ್ಸವಗಳಿಗೆ ಹಾಜರಾದನು ಮತ್ತು ಅನೇಕ ವೇಳೆ ಅಲ್ಲಿ ಕಲಿಸಿದನು. ಅವನು ದೇವಾಲಯದ ತೆರಿಗೆಯನ್ನೂ—ನಿಜವಾಗಿಯೂ ಹಾಗೆ ಮಾಡುವ ಹಂಗಿಗೆ ಅವನು ಒಳಗಾಗಿರದಿದ್ದರೂ—ಸಲ್ಲಿಸಿದನು. (ಮತ್ತಾಯ 17:24-27) ದೇವಾಲಯದ ಬೊಕ್ಕಸದಲ್ಲಿ “ತನ್ನ ಜೀವನವನ್ನೇ” ಹಾಕಿಬಿಟ್ಟದ್ದಕ್ಕಾಗಿ ಯೇಸು ಆ ಬಡ ವಿಧವೆಯನ್ನು ಪ್ರಶಂಸಿಸಿದನು. ಇದಾದ ಸ್ವಲ್ಪದರಲ್ಲೇ, ಯೆಹೋವನು ಆ ದೇವಾಲಯವನ್ನು ಶಾಶ್ವತವಾಗಿ ನಿರಾಕರಿಸಿಬಿಟ್ಟನು. ಆದರೆ ಅಲ್ಲಿಯ ತನಕ, ಯೇಸು ಅದಕ್ಕೆ ನಿಷ್ಠಾವಂತನಾಗಿದ್ದನು. (ಮಾರ್ಕ 12:41-44; ಮತ್ತಾಯ 23:38) ಇಂದಿನ ದೇವರ ಭೂಸಂಸ್ಥೆಯು, ಅದರ ದೇವಾಲಯವನ್ನೊಳಗೊಂಡಿದ್ದ ಯೆಹೂದಿ ವ್ಯವಸ್ಥೆಗಿಂತ ಬಹಳಷ್ಟು ಶ್ರೇಷ್ಠವಾಗಿದೆ. ಅದು ಪರಿಪೂರ್ಣವಾಗಿಲ್ಲವೆಂಬುದು ನಿಜ, ಆದುದರಿಂದಲೇ ಕೆಲವೊಮ್ಮೆ ಹೊಂದಾಣಿಕೆಗಳು ಮಾಡಲ್ಪಡುತ್ತವೆ. ಆದರೆ ಅದು ಭ್ರಷ್ಟತೆಯಿಂದ ತುಂಬಿರುವುದಾಗಲಿ, ಇಲ್ಲವೆ ಯೆಹೋವ ದೇವರು ಇನ್ನೇನು ಅದರ ಸ್ಥಾನಭರ್ತಿ ಮಾಡುವುದಾಗಲಿ ಇಲ್ಲ. ನಾವು ಅದರಲ್ಲಿ ಗ್ರಹಿಸುವ ಯಾವುದೇ ಅಪರಿಪೂರ್ಣತೆಗಳನ್ನು, ನಮ್ಮನ್ನು ರೇಗಿಸುವಂತೆ ಇಲ್ಲವೆ ಒಂದು ವಿಮರ್ಶಾತ್ಮಕ, ದೂರುವ ಮನೋಭಾವವನ್ನು ಅಂಗೀಕರಿಸಿಕೊಳ್ಳುವಂತೆ ಪ್ರೇರಿಸಲು ಎಂದಿಗೂ ಬಿಡಬಾರದು. ಬದಲಿಗೆ ನಾವು ಯೇಸು ಕ್ರಿಸ್ತನ ನಿಷ್ಠೆಯನ್ನು ಅನುಕರಿಸೋಣ.—1 ಪೇತ್ರ 2:21.
ನಮ್ಮ ಸ್ವಂತ ಅಪರಿಪೂರ್ಣತೆಗಳು
9, 10. (ಎ) ನಮ್ಮನ್ನು ನಿಷ್ಠಾದ್ರೋಹದ ನಡವಳಿಕೆಗೆ ಸೆಳೆಯಲಿಕ್ಕಾಗಿ ಸೈತಾನನ ವಿಷಯಗಳ ವ್ಯವಸ್ಥೆಯು ನಮ್ಮ ಅಪರಿಪೂರ್ಣತೆಗಳನ್ನು ಸ್ವಪ್ರಯೋಜನಕ್ಕೆ ಉಪಯೋಗಿಸಿಕೊಳ್ಳುವುದು ಹೇಗೆ? (ಬಿ) ಒಂದು ಗಂಭೀರ ಪಾಪವನ್ನು ಗೈದಿರುವ ಒಬ್ಬನು ಏನು ಮಾಡಬೇಕು?
9 ನಮ್ಮ ಅಪರಿಪೂರ್ಣತೆಗಳನ್ನು ಸ್ವಪ್ರಯೋಜನಕ್ಕೆ ಉಪಯೋಗಿಸಿಕೊಳ್ಳುವ ಮೂಲಕವೂ, ಸೈತಾನನು ನಿಷ್ಠಾದ್ರೋಹವನ್ನು ಪ್ರವರ್ಧಿಸಲು ಪ್ರಯತ್ನಿಸುತ್ತಾನೆ. ಅವನ ವಿಷಯಗಳ ವ್ಯವಸ್ಥೆಯು, ಯೆಹೋವನ ದೃಷ್ಟಿಯಲ್ಲಿ ತಪ್ಪಾಗಿರುವುದನ್ನು ಮಾಡುವಂತೆ ನಮ್ಮನ್ನು ಪ್ರಲೋಭಿಸುತ್ತಾ, ನಮ್ಮ ಬಲಹೀನತೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತದೆ. ದುಃಖಕರವಾಗಿ, ಪ್ರತಿ ವರ್ಷ ಸಾವಿರಾರು ಜನರು ಅನೈತಿಕತೆಗೆ ವಶವಾಗುತ್ತಾರೆ. ಕೆಲವರು ಇಬ್ಬಗೆಯ ಜೀವನವನ್ನು ನಡೆಸುವ ಮೂಲಕ—ನಂಬಿಗಸ್ತ ಕ್ರೈಸ್ತರಾಗಿ ಉಳಿಯುವ ನಟನೆಮಾಡುವಾಗ ತಪ್ಪುಮಾರ್ಗದಲ್ಲಿ ಮುಂದುವರಿಯುತ್ತಾ—ಈ ನಿಷ್ಠಾದ್ರೋಹವನ್ನು ಹೆಚ್ಚಿಸುತ್ತಾರೆ. ಈ ವಿಷಯದ ಬಗ್ಗೆ ಎಚ್ಚರ! ಪತ್ರಿಕೆಯಲ್ಲಿ “ಯುವ ಜನರು ಪ್ರಶ್ನಿಸುತ್ತಾರೆ . . .” ಎಂಬ ಲೇಖನಮಾಲೆಯಲ್ಲಿ ಬರುವ ಲೇಖನಗಳಿಗೆ ಪ್ರತಿಕ್ರಿಯೆ ತೋರಿಸುತ್ತಾ, ಯುವ ಸ್ತ್ರೀಯೊಬ್ಬಳು ಬರೆದುದು: “ಆ ಲೇಖನಗಳು, ನಾನು ನನ್ನ ಜೀವನದಲ್ಲಿ ಮಾಡಿದುದನ್ನು ವರ್ಣಿಸಿದವು.” ಗುಟ್ಟಾಗಿ ಅವಳು, ಯಾರಲ್ಲಿ ಯೆಹೋವನಿಗಾಗಿ ಪ್ರೀತಿಯಿರಲಿಲ್ಲವೊ ಅಂತಹ ಯುವ ಜನರೊಂದಿಗೆ ಗೆಳೆತನಗಳನ್ನು ಬೆಳೆಸಿಕೊಂಡಿದ್ದಳು. ಫಲಿತಾಂಶವೇನು? ಅವಳು ಬರೆಯುವುದು: “ನನ್ನ ಜೀವನವು ತಳಕಚ್ಚಿತು, ಮತ್ತು ನಾನು ಅನೈತಿಕತೆಯಲ್ಲಿ ಒಳಗೊಂಡೆ, ಇದಕ್ಕಾಗಿ ನನಗೆ ತಪ್ಪುಮನಗಾಣಿಸಬೇಕಾಗಿತ್ತು. ಯೆಹೋವನೊಂದಿಗಿನ ನನ್ನ ಸಂಬಂಧವು ನಷ್ಟಗೊಂಡಿತು, ಮತ್ತು ನನ್ನ ವಿಷಯದಲ್ಲಿ ನನ್ನ ಹೆತ್ತವರಿಗೆ ಹಾಗೂ ಹಿರಿಯರಿಗಿದ್ದ ಭರವಸೆಯು ಇಲ್ಲವಾಯಿತು.”b
10 ಈ ಯುವ ಸ್ತ್ರೀಗೆ ಹಿರಿಯರಿಂದ ಸಹಾಯವು ಸಿಕ್ಕಿತು ಮತ್ತು ಅವಳು ಯೆಹೋವನ ನಿಷ್ಠೆಯುಳ್ಳ ಸೇವೆಗೆ ಹಿಂದಿರುಗಿದಳು. ಆದರೆ ದುರಂತಕರವಾಗಿ ಅನೇಕರು, ಹೆಚ್ಚು ಕೆಟ್ಟದಾದ ಪರಿಣಾಮಗಳನ್ನು ಅನುಭವಿಸುತ್ತಾರೆ, ಮತ್ತು ಕೆಲವರು ಸಭೆಗೆ ಹಿಂದಿರುಗುವುದೇ ಇಲ್ಲ. ನಿಷ್ಠಾವಂತರಾಗಿದ್ದು, ಈ ದುಷ್ಟ ಲೋಕದಲ್ಲಿನ ಪ್ರಲೋಭನೆಯನ್ನು ಪ್ರತಿರೋಧಿಸುವುದು ಎಷ್ಟೊಂದು ಉತ್ತಮ! ಲೌಕಿಕ ಸಾಹಚರ್ಯ ಮತ್ತು ಕೀಳ್ಮಟ್ಟದ ಮನೋರಂಜನೆಯಂತಹ ವಿಷಯಗಳ ಕುರಿತು, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಬರುವ ಎಚ್ಚರಿಕೆಗಳಿಗೆ ಕಿವಿಗೊಡಿರಿ. ಯಾವುದೇ ಸಮಯದಲ್ಲಿ ನೀವು ನಿಷ್ಠಾದ್ರೋಹ ನಡವಳಿಕೆಯಲ್ಲಿ ಬೀಳದೆ ಇರುವಂತಾಗಲಿ. ಆದರೆ ಅದು ಸಂಭವಿಸುವಲ್ಲಿ, ನೀವು ಏನಾಗಿಲ್ಲವೊ ಅದಾಗಿರುವ ನಟನೆ ಎಂದಿಗೂ ಮಾಡಬೇಡಿರಿ. (ಕೀರ್ತನೆ 26:4) ಬದಲಿಗೆ, ಸಹಾಯವನ್ನು ಪಡೆದುಕೊಳ್ಳಿರಿ. ಕ್ರೈಸ್ತ ಹೆತ್ತವರು ಮತ್ತು ಹಿರಿಯರು ಇರುವುದೇ ಅದಕ್ಕಾಗಿ.—ಯಾಕೋಬ 5:14.
11. ನಾವು ಸರಿಪಡಿಸಲಾಗದಷ್ಟು ಕೆಟ್ಟವರೆಂದು ನಮ್ಮ ಕುರಿತಾಗಿ ಎಣಿಸುವುದು ಏಕೆ ತಪ್ಪಾಗಿರುವುದು, ಬೈಬಲಿನ ಯಾವ ಪೂರ್ವನಿದರ್ಶನವು ನಮ್ಮ ಎಣಿಕೆಯನ್ನು ಸರಿಪಡಿಸಲು ನಮಗೆ ಸಹಾಯ ಮಾಡಸಾಧ್ಯವಿದೆ?
11 ನಮ್ಮ ಅಪರಿಪೂರ್ಣತೆಗಳು ನಮ್ಮನ್ನು ಮತ್ತೊಂದು ವಿಧದಲ್ಲಿ ಅಪಾಯಕ್ಕೆ ಸಿಕ್ಕಿಸಬಹುದು. ನಿಷ್ಠಾದ್ರೋಹದ ಒಂದು ಕ್ರಿಯೆಯನ್ನು ಗೈಯುವ ಕೆಲವರು, ಯೆಹೋವನನ್ನು ಮೆಚ್ಚಿಸಲು ಪ್ರಯತ್ನಿಸುವುದನ್ನು ನಿಲ್ಲಿಸಿಬಿಡುತ್ತಾರೆ. ದಾವೀದನು ಬಹಳ ಗಂಭೀರವಾದ ಪಾಪಗಳನ್ನು ಗೈದನೆಂಬುದನ್ನು ಜ್ಞಾಪಿಸಿಕೊಳ್ಳಿ. ಆದರೂ, ದಾವೀದನು ಮೃತಪಟ್ಟು ಬಹಳ ಸಮಯ ಗತಿಸಿದರೂ, ಯೆಹೋವನು ಅವನನ್ನು ಒಬ್ಬ ನಂಬಿಗಸ್ತ ಸೇವಕನಾಗಿ ಜ್ಞಾಪಿಸಿಕೊಂಡನು. (ಇಬ್ರಿಯ 11:32; 12:1) ಏಕೆ? ಏಕೆಂದರೆ ಯೆಹೋವನನ್ನು ಮೆಚ್ಚಿಸಲು ಪ್ರಯತ್ನಿಸುವುದನ್ನು ಅವನು ಎಂದಿಗೂ ನಿಲ್ಲಿಸಲಿಲ್ಲ. ಜ್ಞಾನೋಕ್ತಿ 24:16 ಹೇಳುವುದು: “ಶಿಷ್ಟನು ಏಳು ಸಾರಿ ಬಿದ್ದರೂ ಮತ್ತೆ ಏಳುವನು.” ನಾವು ಹೆಣಗಾಡುತ್ತಿರುವ ಯಾವುದೊ ಬಲಹೀನತೆಯ ಕಾರಣ, ಚಿಕ್ಕಪುಟ್ಟ ಪಾಪಗಳಿಗೆ ಪದೇ ಪದೇ ಹಿಮ್ಮರಳುವುದಾದರೆ, ನಾವು “ಏಳು”ವುದನ್ನು ಮುಂದುವರಿಸುವಲ್ಲಿ—ಅಂದರೆ, ಪ್ರಾಮಾಣಿಕವಾಗಿ ಪಶ್ಚಾತ್ತಾಪಪಟ್ಟು, ನಿಷ್ಠಾವಂತ ಸೇವೆಯ ಮಾರ್ಗವನ್ನು ಪುನಃ ಆರಂಭಿಸುವುದಾದರೆ—ನಾವು ಯೆಹೋವನ ದೃಷ್ಟಿಯಲ್ಲಿ ಇನ್ನೂ ನೀತಿವಂತರಾಗಿರಬಹುದೆಂಬುದು ನಿಶ್ಚಯ.—2 ಕೊರಿಂಥ 2:7ನ್ನು ಹೋಲಿಸಿರಿ.
ನಿಷ್ಠಾದ್ರೋಹದ ನವಿರಾದ ವಿಧಗಳ ವಿಷಯದಲ್ಲಿ ಜಾಗರೂಕರಾಗಿರಿ!
12. ಫರಿಸಾಯರ ವಿಷಯದಲ್ಲಿ, ಒಂದು ಅನಮ್ಯ, ಕಾನೂನುವಾದಿ ದೃಷ್ಟಿಕೋನವು ನಿಷ್ಠಾದ್ರೋಹಕ್ಕೆ ನಡೆಸಿದ್ದು ಹೇಗೆ?
12 ನಿಷ್ಠಾದ್ರೋಹವು ಹೆಚ್ಚು ನವಿರಾದ ಬಗೆಗಳಲ್ಲಿಯೂ ಬರುತ್ತದೆ. ಅದು ನಿಷ್ಠೆಯ ಸೋಗನ್ನೂ ಹಾಕಿಕೊಳ್ಳಬಹುದು! ಉದಾಹರಣೆಗೆ, ಯೇಸುವಿನ ದಿನದಲ್ಲಿದ್ದ ಫರಿಸಾಯರು, ತಾವು ತುಂಬ ನಿಷ್ಠಾವಂತರೆಂದು ಬಹುಶಃ ತಮ್ಮ ಕುರಿತಾಗಿಯೇ ನೆನಸಿಕೊಂಡರು.c ಆದರೆ ಅವರು ಮಾನವ ನಿರ್ಮಿತ ನಿಯಮಗಳಿಗೆ ನಿಷ್ಠಾವಂತರಾಗಿರುವುದರ ಮತ್ತು ಒಬ್ಬ ಕಠಿನವಾದ ಅನುಯಾಯಿಯಾಗಿರುವುದರ ನಡುವಿನ ವ್ಯತ್ಯಾಸವನ್ನು ನೋಡಲು ವಿಫಲರಾದರು, ಏಕೆಂದರೆ ಅವರು ಅನಮ್ಯರೂ ನಿಷ್ಠುರವಾಗಿ ವಿಮರ್ಶಾತ್ಮಕರೂ ಆಗಿದ್ದರು. (ಪ್ರಸಂಗಿ 7:16ನ್ನು ಹೋಲಿಸಿರಿ.) ಹೀಗೆ ಅವರು—ತಾವು ಸೇವೆಸಲ್ಲಿಸುತ್ತಿರಬೇಕಾಗಿದ್ದ ಜನರಿಗೆ, ಕಲಿಸುತ್ತಿದ್ದೇವೆಂದು ತಾವು ಪ್ರತಿಪಾದಿಸಿದ ಧರ್ಮಶಾಸ್ತ್ರದ ನಿಜಾರ್ಥಕ್ಕೆ, ಮತ್ತು ಸ್ವತಃ ಯೆಹೋವನಿಗೆ—ನಿಜವಾಗಿಯೂ ನಿಷ್ಠಾದ್ರೋಹಿಗಳಾಗಿದ್ದರು. ಇದಕ್ಕೆ ವಿರುದ್ಧವಾಗಿ ಯೇಸು, ಪ್ರೀತಿಯ ಮೇಲೆ ಆಧರಿಸಿದ್ದ ಧರ್ಮಶಾಸ್ತ್ರದ ನಿಜಾರ್ಥಕ್ಕೆ ನಿಷ್ಠಾವಂತನಾಗಿದ್ದನು. ಹೀಗೆ, ಮೆಸ್ಸೀಯ ಸಂಬಂಧಿತ ಪ್ರವಾದನೆಗಳು ಮುಂತಿಳಿಸಿದ್ದಂತೆಯೇ, ಅವನು ಜನರ ಭಕ್ತಿವೃದ್ಧಿಮಾಡಿದನು ಮತ್ತು ಅವರನ್ನು ಉತ್ತೇಜಿಸಿದನು.—ಯೆಶಾಯ 42:3; 50:4; 61:1, 2.
13. (ಎ) ಕ್ರೈಸ್ತ ಹೆತ್ತವರು ಹೇಗೆ ನಿಷ್ಠಾದ್ರೋಹಿಗಳಾಗಿರಬಹುದು? (ಬಿ) ತಮ್ಮ ಮಕ್ಕಳಿಗೆ ಶಿಸ್ತನ್ನು ನೀಡುವಾಗ, ಹೆತ್ತವರು ಬಹಳ ನಿಷ್ಠುರರೂ ವಿಮರ್ಶಾತ್ಮಕರೂ ಇಲ್ಲವೆ ನಕಾರಾತ್ಮಕರೂ ಆಗಿರುವುದರಿಂದ ಏಕೆ ದೂರವಿರಬೇಕು?
13 ಒಂದಿಷ್ಟು ಪ್ರಮಾಣದ ಅಧಿಕಾರವುಳ್ಳ ಕ್ರೈಸ್ತರು, ಈ ಸಂಬಂಧದಲ್ಲಿ ಯೇಸುವಿನ ನಿದರ್ಶನದಿಂದ ಬಹಳವಾಗಿ ಪ್ರಯೋಜನ ಪಡೆದುಕೊಳ್ಳುತ್ತಾರೆ. ಉದಾಹರಣೆಗೆ, ತಮ್ಮ ಮಕ್ಕಳನ್ನು ತಾವು ಶಿಸ್ತಿಗೊಳಪಡಿಸಬೇಕೆಂದು ನಿಷ್ಠಾವಂತ ಹೆತ್ತವರಿಗೆ ತಿಳಿದಿದೆ. (ಜ್ಞಾನೋಕ್ತಿ 13:24) ಆದರೂ, ಕೋಪದಲ್ಲಿ ಕೊಡಲ್ಪಟ್ಟ ನಿಷ್ಠುರ ಶಿಸ್ತಿನಿಂದ ಇಲ್ಲವೆ ಟೀಕೆಯ ಸತತವಾದ ಸುರಿಮಳೆಯಿಂದ ಅವರು ತಮ್ಮ ಎಳೆಯರನ್ನು ಕೆರಳಿಸುವುದಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ತಮ್ಮ ಹೆತ್ತವರನ್ನು ತಾವು ಎಂದಿಗೂ ಪ್ರಸನ್ನಗೊಳಿಸಸಾಧ್ಯವಿಲ್ಲವೆಂದು ಭಾವಿಸುವ, ಇಲ್ಲವೆ ತಮ್ಮ ಹೆತ್ತವರ ಧರ್ಮವು, ತಮ್ಮನ್ನು ಕೇವಲ ನಕಾರಾತ್ಮಕರನ್ನಾಗಿಯೂ ಟೀಕಾತ್ಮಕರನ್ನಾಗಿಯೂ ಮಾಡುತ್ತಿರುವಂತೆ ತೋರುತ್ತಿದೆ ಎಂದು ಭಾವಿಸುವ ಮಕ್ಕಳು, ಎದೆಗುಂದಿ, ಫಲಸ್ವರೂಪವಾಗಿ ಸತ್ಯ ನಂಬಿಕೆಯಿಂದ ದೂರಹೋಗಬಹುದು.—ಕೊಲೊಸ್ಸೆ 3:21.
14. ಕ್ರೈಸ್ತ ಕುರುಬರು ತಾವು ಸೇವೆಸಲ್ಲಿಸುವ ಮಂದೆಗೆ ಹೇಗೆ ನಿಷ್ಠಾವಂತರಾಗಿ ಪರಿಣಮಿಸಬಹುದು?
14 ತದ್ರೀತಿಯಲ್ಲಿ, ಮಂದೆಯು ಎದುರಿಸುವ ಸಮಸ್ಯೆಗಳಿಗೆ ಹಾಗೂ ಅಪಾಯಗಳಿಗೆ ಕ್ರೈಸ್ತ ಹಿರಿಯರು ಮತ್ತು ಸಂಚರಣ ಮೇಲ್ವಿಚಾರಕರು ಗಮನಕೊಡುತ್ತಾರೆ. ನಿಷ್ಠಾವಂತ ಕುರುಬರೋಪಾದಿ—ಮೊದಲು ತಮ್ಮಲ್ಲಿ ಎಲ್ಲ ನಿಜತ್ವಗಳು ಇವೆಯೆಂಬುದನ್ನು ಖಚಿತಪಡಿಸಿಕೊಳ್ಳುತ್ತಾ ಮತ್ತು ಅವರು ಹೇಳುವಂತಹದ್ದನ್ನು ಬೈಬಲಿನ ಹಾಗೂ ಸೊಸೈಟಿಯ ಪ್ರಕಾಶನಗಳ ಮೇಲೆ ಜಾಗರೂಕವಾಗಿ ಆಧರಿಸುತ್ತಾ—ಅವರು ಅಗತ್ಯವಿರುವಾಗ ಸಲಹೆಯನ್ನು ನೀಡುತ್ತಾರೆ. (ಕೀರ್ತನೆ 119:105; ಜ್ಞಾನೋಕ್ತಿ 18:13) ಆತ್ಮಿಕ ಆತ್ಮೋನ್ನತಿ ಹಾಗೂ ಪೋಷಣೆಗಾಗಿ ಕುರಿಗಳು ತಮ್ಮ ಮೇಲೆ ಆತುಕೊಂಡಿವೆ ಎಂಬುದೂ ಅವರಿಗೆ ತಿಳಿದಿದೆ. ಆದುದರಿಂದ, ಒಳ್ಳೆಯ ಕುರುಬನಾದ ಯೇಸು ಕ್ರಿಸ್ತನನ್ನು ಅನುಕರಿಸಲು ಅವರು ಪ್ರಯತ್ನಿಸುತ್ತಾರೆ. ಪ್ರತಿ ವಾರ ಕ್ರೈಸ್ತ ಕೂಟಗಳಲ್ಲಿ ಅವರು, ನಿಷ್ಠೆಯಿಂದ ಕುರಿಗಳ ಶುಶ್ರೂಷೆಮಾಡುತ್ತಾರೆ—ಅವರನ್ನು ಛಿದ್ರಮಾಡುವ ಮೂಲಕವಾಗಿ ಅಲ್ಲ, ಬದಲಿಗೆ, ಅವರ ಆತ್ಮೋನ್ನತಿ ಮಾಡಿ, ಅವರ ನಂಬಿಕೆಯನ್ನು ಬಲಪಡಿಸುವ ಮೂಲಕವೇ.—ಮತ್ತಾಯ 20:28; ಎಫೆಸ 4:11, 12; ಇಬ್ರಿಯ 13:20, 21.
15. ಪ್ರಥಮ ಶತಮಾನದಲ್ಲಿದ್ದ ಕೆಲವರು ತಮಗೆ ಅನುಚಿತವಾದ ನಿಷ್ಠೆಗಳಿದ್ದವೆಂಬುದನ್ನು ಹೇಗೆ ತೋರಿಸಿದರು?
15 ನಿಷ್ಠಾದ್ರೋಹದ ಮತ್ತೊಂದು ನವಿರಾದ ಬಗೆಯು, ಅನುಚಿತವಾದ ನಿಷ್ಠೆಯಾಗಿದೆ. ಬೈಬಲ್ ಸಂಬಂಧಿತ ಅರ್ಥದಲ್ಲಿ ನಿಜವಾದ ನಿಷ್ಠೆಯು, ಯೆಹೋವ ದೇವರ ಕಡೆಗಿರುವ ನಮ್ಮ ನಿಷ್ಠೆಗೆ ಮಿಗಿಲಾಗಿ ಯಾವುದೇ ನಿಷ್ಠೆಗೆ ಆದ್ಯತೆ ಕೊಡುವುದನ್ನು ಅನುಮತಿಸುವುದಿಲ್ಲ. ಪ್ರಥಮ ಶತಮಾನದಲ್ಲಿದ್ದ ಅನೇಕ ಯೆಹೂದ್ಯರು, ಮೋಶೆಯ ಧರ್ಮಶಾಸ್ತ್ರಕ್ಕೆ ಮತ್ತು ಯೆಹೂದಿ ವಿಷಯಗಳ ವ್ಯವಸ್ಥೆಗೆ ಮೊಂಡುತನದಿಂದ ಅಂಟಿಕೊಂಡರು. ಆದರೂ, ಆ ದಂಗೆಕೋರ ರಾಷ್ಟ್ರದಿಂದ ಆತ್ಮಿಕ ಇಸ್ರಾಯೇಲ್ಯರ ರಾಷ್ಟ್ರಕ್ಕೆ ತನ್ನ ಆಶೀರ್ವಾದವನ್ನು ವರ್ಗಾಯಿಸುವ ಯೆಹೋವನ ಸಮಯವು ಬಂದಿತ್ತು. ಸಂಬಂಧಸೂಚಕವಾಗಿ ಕೆಲವರು ಮಾತ್ರ ಯೆಹೋವನಿಗೆ ನಿಷ್ಠಾವಂತರಾಗಿದ್ದು, ಈ ಬಹುಮುಖ್ಯವಾದ ಬದಲಾವಣೆಗೆ ಹೊಂದಿಕೊಂಡರು. ಸತ್ಯ ಕ್ರೈಸ್ತರಲ್ಲಿಯೂ, ಕೆಲವು ಯೆಹೂದ್ಯರು, ಕ್ರಿಸ್ತನಲ್ಲಿ ನೆರವೇರಿದ್ದ ಮೋಶೆಯ ಧರ್ಮಶಾಸ್ತ್ರದ “ಕೆಲಸಕ್ಕೆ ಬಾರದ ದರಿದ್ರಬಾಲಬೋಧೆಗೆ” ಹಿಂದಿರುಗುವ ವಿಷಯದಲ್ಲಿ ಪಟ್ಟುಹಿಡಿದರು.—ಗಲಾತ್ಯ 4:9; 5:6-12; ಫಿಲಿಪ್ಪಿ 3:2, 3.
16. ಯೆಹೋವನ ನಿಷ್ಠಾವಂತ ಸೇವಕರು ಹೊಂದಾಣಿಕೆಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ?
16 ತದ್ವಿರುದ್ಧವಾಗಿ, ಆಧುನಿಕ ಸಮಯಗಳಲ್ಲಿರುವ ಯೆಹೋವನ ಜನರು, ಬದಲಾವಣೆಯ ಸಮಯಗಳಲ್ಲಿ ತಾವು ನಿಷ್ಠಾವಂತರೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಪ್ರಕಟಿತ ಸತ್ಯದ ಬೆಳಕು ಉಜ್ವಲವಾಗುತ್ತಾ ಹೋದಂತೆ, ಹೊಂದಾಣಿಕೆಗಳು ಮಾಡಲ್ಪಡುತ್ತವೆ. (ಜ್ಞಾನೋಕ್ತಿ 4:18) ಇತ್ತೀಚೆಗೆ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು,” ಮತ್ತಾಯ 24:34ರಲ್ಲಿ ಉಪಯೋಗಿಸಲ್ಪಟ್ಟ “ಸಂತತಿ” ಎಂಬ ಪದ, ಮತ್ತು ಮತ್ತಾಯ 25:31-46ರಲ್ಲಿ ಉಲ್ಲೇಖಿಸಲ್ಪಟ್ಟ “ಕುರಿಗಳು” ಮತ್ತು “ಆಡುಗಳ” ನ್ಯಾಯತೀರ್ಪಿನ ಸಮಯ, ಅಷ್ಟೇ ಅಲ್ಲದೆ ನಿರ್ದಿಷ್ಟ ಪ್ರಕಾರಗಳ ನಾಗರಿಕ ಸೇವೆಯ ಕಡೆಗಿನ ನಮ್ಮ ದೃಷ್ಟಿಕೋನದ ವಿಷಯದಲ್ಲಿ ನಮಗಿದ್ದ ತಿಳಿವಳಿಕೆಯನ್ನು ಪರಿಷ್ಕರಿಸಲು ನಮಗೆ ಸಹಾಯ ಮಾಡಿದೆ. (ಮತ್ತಾಯ 24:45) ಯೆಹೋವನ ಸಾಕ್ಷಿಗಳಲ್ಲಿ ಅನೇಕರು ಇಂತಹ ವಿಷಯಗಳ ಸಂಬಂಧದಲ್ಲಿ ಹಿಂದಿನ ತಿಳಿವಳಿಕೆಗೆ ಅನಮ್ಯವಾಗಿ ಅಂಟಿಕೊಂಡಿದ್ದು, ಪ್ರಗತಿಮಾಡಲು ನಿರಾಕರಿಸಿದ್ದರೆ, ಕೆಲವು ಧರ್ಮಭ್ರಷ್ಟರು ಹರ್ಷಿಸುತ್ತಿದ್ದರೆಂಬುದರಲ್ಲಿ ಸಂದೇಹವಿಲ್ಲ. ಆ ರೀತಿಯ ಯಾವ ವಿಷಯವೂ ಸಂಭವಿಸಿಲ್ಲ. ಏಕೆ? ಯೆಹೋವನ ಜನರು ನಿಷ್ಠಾವಂತರಾಗಿದ್ದಾರೆ.
17. ಕೆಲವೊಮ್ಮೆ ಪ್ರಿಯ ಜನರು ನಮ್ಮ ನಿಷ್ಠೆಯನ್ನು ಹೇಗೆ ಪರೀಕ್ಷೆಗೊಳಪಡಿಸಬಹುದು?
17 ಅನುಚಿತ ನಿಷ್ಠೆಗಳ ವಿಷಯವಾದರೊ, ನಮ್ಮನ್ನು ವೈಯಕ್ತಿಕವಾಗಿ ಬಾಧಿಸಬಹುದು. ಪ್ರಿಯ ಮಿತ್ರನೊಬ್ಬನು ಇಲ್ಲವೆ ಕುಟುಂಬದ ಒಬ್ಬ ಸದಸ್ಯನು ಕೂಡ, ಬೈಬಲಿನ ಮೂಲತತ್ವಗಳನ್ನು ಉಲ್ಲಂಘಿಸುವ ಒಂದು ಮಾರ್ಗವನ್ನು ಆರಿಸಿಕೊಳ್ಳುವಾಗ, ನಿಷ್ಠೆಗಳ ನಡುವೆ ನಾವು ಛಿದ್ರರಾಗುತ್ತಿರುವ ಅನಿಸಿಕೆ ನಮಗಾಗಬಹುದು. ಸ್ವಾಭಾವಿಕವಾಗಿ, ಕುಟುಂಬ ಸದಸ್ಯರಿಗೆ ನಿಷ್ಠಾವಂತರಾಗಿರುವ ಅನಿಸಿಕೆ ನಮಗಾಗುತ್ತದೆ. ಆದರೆ ಯೆಹೋವನ ಕಡೆಗಿರುವ ನಮ್ಮ ನಿಷ್ಠೆಗೆ ಮಿಗಿಲಾಗಿ ಕುಟುಂಬ ಸದಸ್ಯರ ಕಡೆಗಿರುವ ನಮ್ಮ ನಿಷ್ಠೆಗೆ ನಾವು ಎಂದಿಗೂ ಸ್ಥಾನವನ್ನು ಕೊಡಬಾರದು! (1 ಸಮುವೇಲ 23:16-18 ನ್ನು ಹೋಲಿಸಿರಿ.) ನಾವು ಒಂದು ಗಂಭೀರವಾದ ಪಾಪವನ್ನು ಅಡಗಿಸಲು ತಪ್ಪಿತಸ್ಥರಿಗೆ ಸಹಾಯ ಮಾಡುವುದೂ ಇಲ್ಲ ಅಥವಾ ‘ಶಾಂತಭಾವದಿಂದ ತಿದ್ದಿ ಸರಿಮಾಡಲು’ ಪ್ರಯತ್ನಿಸುತ್ತಿರುವ ಹಿರಿಯರ ವಿರುದ್ಧ ಅವರ ಪಕ್ಷ ವಹಿಸುವುದೂ ಇಲ್ಲ. (ಗಲಾತ್ಯ 6:1) ಹಾಗೆ ಮಾಡುವುದು, ಯೆಹೋವನ, ಆತನ ಸಂಸ್ಥೆಯ, ಮತ್ತು ಪ್ರಿಯ ವ್ಯಕ್ತಿಯ ಪ್ರತಿ ನಿಷ್ಠಾದ್ರೋಹವಾಗಿರುವುದು. ಎಷ್ಟೆಂದರೂ, ಒಬ್ಬ ಪಾಪಿ ಹಾಗೂ ಅವನಿಗೆ ಬೇಕಾಗಿರುವ ಶಿಸ್ತಿನ ನಡುವೆ ನಿಲ್ಲುವುದು, ಕಾರ್ಯತಃ, ಯೆಹೋವನ ಪ್ರೀತಿಯ ಒಂದು ಅಭಿವ್ಯಕ್ತಿಯು ಪಾಪಿಯನ್ನು ತಲಪುವುದರಿಂದ ತಡೆಯುವುದಾಗಿದೆ. (ಇಬ್ರಿಯ 12:5-7) “ಮಿತ್ರನು ಮಾಡುವ ಗಾಯಗಳು ಮೇಲಿಗಾಗಿಯೇ” ಎಂಬುದನ್ನೂ ನೆನಪಿನಲ್ಲಿಟ್ಟುಕೊಳ್ಳಿರಿ. (ಜ್ಞಾನೋಕ್ತಿ 27:6) ದೇವರ ವಾಕ್ಯದ ಮೇಲೆ ಆಧರಿಸಿರುವ, ಮುಚ್ಚುಮರೆಯಿಲ್ಲದ, ಪ್ರೀತಿಪೂರ್ಣ ಸಲಹೆಯು, ತಪ್ಪುಮಾಡುತ್ತಿರುವ ಒಬ್ಬ ಪ್ರಿಯ ವ್ಯಕ್ತಿಯ ದುರಭಿಮಾನವನ್ನು ಘಾಸಿಗೊಳಿಸಬಹುದು, ಆದರೆ ಕಟ್ಟಕಡೆಯಲ್ಲಿ ಅದು ಜೀವರಕ್ಷಕವಾಗಿ ರುಜುವಾಗಬಹುದು!
ಹಿಂಸೆಯ ಎದುರಿನಲ್ಲೂ ನಿಷ್ಠೆಯು ದೃಢವಾಗಿ ನಿಲ್ಲುತ್ತದೆ
18, 19. (ಎ) ನಾಬೋತನಿಂದ ಆಹಾಬನಿಗೆ ಏನು ಬೇಕಾಗಿತ್ತು, ಮತ್ತು ನಾಬೋತನು ಏಕೆ ನಿರಾಕರಿಸಿದನು? (ಬಿ) ನಾಬೋತನ ನಿಷ್ಠೆಯು ಅವನು ತೆತ್ತ ಬೆಲೆಗೆ ಯೋಗ್ಯವಾಗಿತ್ತೊ? ವಿವರಿಸಿರಿ.
18 ಕೆಲವೊಮ್ಮೆ, ನಮ್ಮ ನಿಷ್ಠೆಯ ಮೇಲೆ ಸೈತಾನನ ಆಕ್ರಮಣಗಳು ನೇರವಾಗಿರುತ್ತವೆ. ನಾಬೋತನ ವಿದ್ಯಮಾನವನ್ನು ಪರಿಗಣಿಸಿರಿ. ತನ್ನ ದ್ರಾಕ್ಷೇ ತೋಟವನ್ನು ಮಾರುವಂತೆ ಅರಸನಾದ ಆಹಾಬನು ಅವನನ್ನು ಒತ್ತಾಯಿಸಿದಾಗ, ಅವನು ಉತ್ತರಿಸಿದ್ದು: “ನಾನು ಪಿತ್ರಾರ್ಜಿತಸ್ವಾಸ್ತ್ಯವನ್ನು ನಿನಗೆ ಮಾರದಂತೆ ಯೆಹೋವನು ನನ್ನನ್ನು ತಡೆಯಲಿ.” (1 ಅರಸುಗಳು 21:3) ನಾಬೋತನು ಹಠಮಾರಿಯಾಗಿರಲಿಲ್ಲ, ಅವನು ನಿಷ್ಠಾವಂತನಾಗಿದ್ದನು. ಯಾವ ಇಸ್ರಾಯೇಲ್ಯನೂ ಪಿತ್ರಾರ್ಜಿತ ನೆಲವನ್ನು ಮಾರಬಾರದೆಂದು ಮೋಶೆಯ ಧರ್ಮಶಾಸ್ತ್ರವು ಆಜ್ಞಾಪಿಸಿತು. (ಯಾಜಕಕಾಂಡ 25:23-28) ಈ ದುಷ್ಟ ಅರಸನು ತನ್ನನ್ನು ಕೊಲ್ಲಿಸಸಾಧ್ಯವಿತ್ತೆಂದು ನಾಬೋತನಿಗೆ ನಿಶ್ಚಯವಾಗಿ ಗೊತ್ತಿತ್ತು, ಏಕೆಂದರೆ ಯೆಹೋವನ ಪ್ರವಾದಿಗಳಲ್ಲಿ ಅನೇಕರನ್ನು ಕೊಂದುಹಾಕುವಂತೆ ತನ್ನ ಪತ್ನಿ ಈಜೆಬೆಲಳನ್ನು ಈಗಾಗಲೇ ಆಹಾಬನು ಅನುಮತಿಸಿದ್ದನು! ಆದರೂ ನಾಬೋತನು ದೃಢವಾಗಿ ನಿಂತನು.—1 ಅರಸುಗಳು 18:4.
19 ನಿಷ್ಠೆಯು ಕೆಲವೊಮ್ಮೆ ಒಂದು ಬೆಲೆಯನ್ನು ವಸೂಲುಮಾಡುತ್ತದೆ. ಈಜೆಬೆಲಳು, ಕೆಲವು ‘ದುಷ್ಟ ಮನುಷ್ಯರ’ ಸಹಾಯದಿಂದ, ನಾಬೋತನು ಮಾಡಿರದಿದ್ದ ಒಂದು ಅಪರಾಧಕ್ಕಾಗಿ ಅವನ ವಿರುದ್ಧ ಸಂಚು ಹೂಡಿದಳು. ಫಲಸ್ವರೂಪವಾಗಿ, ಅವನು ಮತ್ತು ಅವನ ಪುತ್ರರು ಮರಣದಂಡನೆಗೆ ಒಳಗಾದರು. (1 ಅರಸುಗಳು 21:7-16; 2 ಅರಸುಗಳು 9:26) ಅದು, ನಾಬೋತನ ನಿಷ್ಠೆಯು ಅನುಚಿತವಾದದ್ದೆಂದು ಅರ್ಥೈಸುತ್ತದೊ? ಇಲ್ಲ! ಪುನರುತ್ಥಾನದ ಸಮಯದ ತನಕ ಸಮಾಧಿಯಲ್ಲಿ ಸುರಕ್ಷಿತವಾಗಿ ಮಲಗಿಕೊಂಡಿರುತ್ತಾ, ಪ್ರಚಲಿತವಾಗಿ ಯಾರು ಯೆಹೋವನ ಸ್ಮರಣೆಯಲ್ಲಿ ‘ಜೀವಂತ’ರಾಗಿದ್ದಾರೊ, ಆ ಅನೇಕ ನಿಷ್ಠಾವಂತ ಸ್ತ್ರೀಪುರುಷರಲ್ಲಿ ನಾಬೋತನು ಒಬ್ಬನಾಗಿದ್ದಾನೆ.—ಲೂಕ 20:38; ಅ. ಕೃತ್ಯಗಳು 24:15.
20. ನಿರೀಕ್ಷೆಯು ನಮ್ಮ ನಿಷ್ಠೆಯನ್ನು ಕಾಪಾಡಿಕೊಳ್ಳುವಂತೆ ನಮಗೆ ಹೇಗೆ ಸಹಾಯ ಮಾಡಬಲ್ಲದು?
20 ಪುನರುತ್ಥಾನದ ಅದೇ ವಾಗ್ದಾನವು, ಇಂದು ಯೆಹೋವನ ನಿಷ್ಠಾವಂತರಿಗೆ ಆಶ್ವಾಸನೆಯನ್ನು ಕೊಡುತ್ತದೆ. ನಮ್ಮ ನಿಷ್ಠೆಯು ನಮಗೆ ಈ ಲೋಕದಲ್ಲಿ ಬಹಳಷ್ಟು ನಷ್ಟವನ್ನು ತರಬಹುದೆಂದು ನಮಗೆ ಗೊತ್ತಿದೆ. ಯೇಸು ಕ್ರಿಸ್ತನು ತನ್ನ ನಿಷ್ಠೆಗಾಗಿ ತನ್ನ ಜೀವದ ಬೆಲೆ ತೆತ್ತನು, ಮತ್ತು ತನ್ನ ಹಿಂಬಾಲಕರು ಇದಕ್ಕಿಂತ ಉತ್ತಮವಾಗಿ ಉಪಚರಿಸಲ್ಪಡಲಾರರೆಂದು ಅವನು ಅವರಿಗೆ ಹೇಳಿದನು. (ಯೋಹಾನ 15:20) ಭವಿಷ್ಯತ್ತಿಗಾಗಿದ್ದ ಅವನ ನಿರೀಕ್ಷೆಯು ಅವನನ್ನು ಪೋಷಿಸಿದಂತೆಯೇ, ನಮ್ಮ ನಿರೀಕ್ಷೆಯಿಂದ ನಾವೂ ಪೋಷಿಸಲ್ಪಡುತ್ತೇವೆ. (ಇಬ್ರಿಯ 12:2) ಹೀಗೆ, ನಾವು ಎಲ್ಲ ವಿಧದ ಹಿಂಸೆಯ ಎದುರಿನಲ್ಲಿ ನಿಷ್ಠಾವಂತರಾಗಿ ಉಳಿಯಬಲ್ಲೆವು.
21. ಯೆಹೋವನು ತನ್ನ ನಿಷ್ಠಾವಂತ ಜನರಿಗೆ ಯಾವ ಆಶ್ವಾಸನೆಗಳನ್ನು ಕೊಡುತ್ತಾನೆ?
21 ಇಂದು, ನಮ್ಮಲ್ಲಿ ಸಂಬಂಧಸೂಚಕವಾಗಿ ಕೆಲವರು ಮಾತ್ರ, ನಮ್ಮ ನಿಷ್ಠೆಯ ಮೇಲೆ ಇಂತಹ ನೇರ ಆಕ್ರಮಣಗಳನ್ನು ಅನುಭವಿಸುತ್ತೇವೆಂಬುದು ನಿಜ. ಆದರೆ ಅಂತ್ಯವು ಬರುವ ಮೊದಲು, ದೇವರ ಜನರು ಹೆಚ್ಚಿನ ಹಿಂಸೆಯನ್ನು ಎದುರಿಸಬಹುದು. ನಮ್ಮ ನಿಷ್ಠೆಯನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ನಾವು ಹೇಗೆ ನಿಶ್ಚಿತರಾಗಿರಬಲ್ಲೆವು? ಈಗ ನಮ್ಮ ನಿಷ್ಠೆಯನ್ನು ಕಾಪಾಡಿಕೊಳ್ಳುವ ಮೂಲಕವೇ. ಯೆಹೋವನು, ತನ್ನ ರಾಜ್ಯದ ಕುರಿತು ಸಾರುವ ಮತ್ತು ಕಲಿಸುವ ಒಂದು ಮಹಾ ನಿಯೋಗವನ್ನು ನಮಗೆ ಕೊಟ್ಟಿದ್ದಾನೆ. ಈ ಅತ್ಯಾವಶ್ಯಕ ಕೆಲಸವನ್ನು ನಾವು ನಿಷ್ಠೆಯಿಂದ ಕಾಪಾಡಿಕೊಳ್ಳೋಣ. (1 ಕೊರಿಂಥ 15:58) ಯೆಹೋವನ ಸಂಸ್ಥೆಯ ಪ್ರತಿ ನಮ್ಮ ನಿಷ್ಠೆಯನ್ನು ಮಾನವ ಅಪರಿಪೂರ್ಣತೆಗಳು ಸವೆಸುವಂತೆ ಬಿಡಲು ನಾವು ನಿರಾಕರಿಸುವುದಾದರೆ, ಮತ್ತು ನಿಷ್ಠಾದ್ರೋಹದ ನವಿರಾದ ವಿಧಗಳಂತಹ ಅನುಚಿತವಾದ ನಿಷ್ಠೆಗಳ ವಿರುದ್ಧ ನಾವು ಎಚ್ಚರವಾಗಿರುವುದಾದರೆ, ನಮ್ಮ ನಿಷ್ಠೆಯು ಹೆಚ್ಚು ತೀಕ್ಷ್ಣವಾಗಿ ಪರೀಕ್ಷಿಸಲ್ಪಡುವಲ್ಲಿ ನಾವು ಹೆಚ್ಚು ಉತ್ತಮವಾಗಿ ಸಿದ್ಧರಿರುವೆವು. ಏನೇ ಆಗಲಿ, ಯೆಹೋವನು ತನ್ನ ನಿಷ್ಠಾವಂತ ಸೇವಕರ ಪ್ರತಿ ವಿಫಲವಾಗದ ರೀತಿಯಲ್ಲಿ ನಿಷ್ಠಾವಂತನಾಗಿದ್ದಾನೆಂಬ ವಿಷಯದಲ್ಲಿ ನಾವು ಯಾವಾಗಲೂ ನಿಶ್ಚಿತರಾಗಿರಬಹುದು. (2 ಸಮುವೇಲ 22:26) ಹೌದು, ಆತನು ತನ್ನ ನಿಷ್ಠಾವಂತರನ್ನು ರಕ್ಷಿಸುವನು!—ಕೀರ್ತನೆ 97:10.
[ಅಧ್ಯಯನ ಪ್ರಶ್ನೆಗಳು]
a ಇಂತಹ ಒಂದು ಲಾಭದಾಯಕ ವಾಣಿಜ್ಯ ವ್ಯವಹಾರವನ್ನು ಆಕ್ರಮಿಸಲು, ಯೇಸು ಧೈರ್ಯವಂತನಾಗಿದ್ದನು. ಒಬ್ಬ ಇತಿಹಾಸಕಾರನಿಗನುಸಾರ, ದೇವಾಲಯದ ತೆರಿಗೆಯನ್ನು, ನಿರ್ದಿಷ್ಟವಾದ ಒಂದು ಪುರಾತನ ಯೆಹೂದಿ ನಾಣ್ಯದಲ್ಲಿ ಸಲ್ಲಿಸಬೇಕಿತ್ತು. ಹೀಗೆ ದೇವಾಲಯವನ್ನು ಸಂದರ್ಶಿಸುತ್ತಿರುವ ಅನೇಕ ಸಂದರ್ಶಕರಿಗೆ, ತೆರಿಗೆಯನ್ನು ಸಲ್ಲಿಸುವ ಸಲುವಾಗಿ ತಮ್ಮ ಹಣಕ್ಕೆ ಚಿಲ್ಲರೆಯನ್ನು ಪಡೆದುಕೊಳ್ಳುವ ಅಗತ್ಯವಿತ್ತು. ವಿನಿಮಯಕ್ಕಾಗಿ ನಿಗದಿಮಾಡಿದ ಬೆಲೆಯನ್ನು ವಿಧಿಸುವಂತೆ ಚಿನಿವಾರರು ಅನುಮತಿಸಲ್ಪಟ್ಟರು, ಮತ್ತು ಹೀಗೆ ಅವರು ಬಹಳಷ್ಟು ಮೊತ್ತದ ಹಣವನ್ನು ಗಳಿಸಿದರು.
b ಡಿಸೆಂಬರ್ 22, 1993; ಜನವರಿ 8, 1994; ಮತ್ತು ಜನವರಿ 22, 1994ರ ಅವೇಕ್! ಪತ್ರಿಕೆಯನ್ನು ನೋಡಿರಿ.
c ಅವರ ಭ್ರಾತೃತ್ವವು ಹ್ಯಾಸಿಡಿಮ್—ಗ್ರೀಕ್ ಪ್ರಭಾವದ ವಿರುದ್ಧ ಹೋರಾಡಲು ಅನೇಕ ಶತಮಾನಗಳ ಮುಂಚೆ ಎದ್ದಂತಹ ಒಂದು ಗುಂಪಿನಿಂದ ಉದ್ಭವಿಸಿತು. ಹ್ಯಾಸಿಡಿಮ್ ಗುಂಪಿನವರು ತಮ್ಮ ಹೆಸರನ್ನು ಹೀಬ್ರು ಪದವಾದ ಕಾಸಿಧಿಮ್ ಇಂದ ತೆಗೆದುಕೊಂಡರು. ಅದರ ಅರ್ಥ “ನಿಷ್ಠಾವಂತರು” ಇಲ್ಲವೆ “ಧರ್ಮಶ್ರದ್ಧೆಯುಳ್ಳವರು” ಎಂದಾಗಿದೆ. ಯೆಹೋವನ “ನಿಷ್ಠಾವಂತರನ್ನು” (NW) ಉಲ್ಲೇಖಿಸುವ ವಚನಗಳು, ಯಾವುದೊ ವಿಶೇಷ ವಿಧದಲ್ಲಿ ತಮಗೆ ಅನ್ವಯಿಸಿದವೆಂದು ಅವರಿಗೆ ಅನಿಸಿದ್ದಿರಬಹುದು. (ಕೀರ್ತನೆ 50:5) ಅವರು, ಮತ್ತು ಅವರ ಅನಂತರ ಬಂದ ಫರಿಸಾಯರು, ಮತಾಂಧರೂ, ಧರ್ಮಶಾಸ್ತ್ರದ ಸ್ವನೇಮಿತ ರಕ್ಷಕರೂ ಆಗಿದ್ದರು.
ನೀವು ಹೇಗೆ ಉತ್ತರಿಸುವಿರಿ?
◻ ಇತರರ ಅಪರಿಪೂರ್ಣತೆಗಳು ನಮ್ಮನ್ನು ನಿಷ್ಠಾದ್ರೋಹಕ್ಕೆ ನಡೆಸುವಂತೆ ಬಿಡುವುದನ್ನು ನಾವು ಹೇಗೆ ದೂರವಿರಿಸಸಾಧ್ಯವಿದೆ?
◻ ಯಾವ ವಿಧಗಳಲ್ಲಿ ನಮ್ಮ ಸ್ವಂತ ಅಪರಿಪೂರ್ಣತೆಗಳು ನಮ್ಮನ್ನು ನಿಷ್ಠಾದ್ರೋಹ ನಡವಳಿಕೆಗೆ ನಡೆಸಬಹುದು?
◻ ಅನುಚಿತವಾಗಿ ನಮ್ಮ ನಿಷ್ಠೆಗಳನ್ನು ಪ್ರದರ್ಶಿಸುವ ಪ್ರವೃತ್ತಿಯನ್ನು ನಾವು ಹೇಗೆ ಪ್ರತಿರೋಧಿಸಬಲ್ಲೆವು?
◻ ಹಿಂಸೆಯ ಸಮಯಗಳಲ್ಲೂ ನಮ್ಮ ನಿಷ್ಠೆಯನ್ನು ಕಾಪಾಡಿಕೊಳ್ಳುವಂತೆ ಯಾವುದು ನಮಗೆ ಸಹಾಯ ಮಾಡುವುದು?
[ಪುಟ 9 ರಲ್ಲಿರುವ ಚೌಕ]
ನಿಷ್ಠೆಯಿಂದ ಬೆತೆಲ್ನಲ್ಲಿ ಸೇವೆಸಲ್ಲಿಸುವುದು
“ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆಯಲಿ.” ಹೀಗೆಂದು ಅಪೊಸ್ತಲ ಪೌಲನು ಬರೆದನು. (1 ಕೊರಿಂಥ 14:40) ಒಂದು ಸಭೆಯು ಕಾರ್ಯನಡೆಸಬೇಕಾದರೆ, “ಕ್ರಮ” ಇಲ್ಲವೆ ಸಂಘಟನೆಯ ಅಗತ್ಯವಿರುವುದೆಂದು ಪೌಲನಿಗೆ ಗೊತ್ತಿತ್ತು. ತದ್ರೀತಿಯಲ್ಲಿ ಇಂದು, ಹಿರಿಯರಿಗೆ, ವಿಭಿನ್ನ ಪುಸ್ತಕಾಭ್ಯಾಸದ ಸ್ಥಳಗಳಿಗೆ ಸಭೆಯ ಸದಸ್ಯರನ್ನು ನೇಮಿಸುವ, ಕ್ಷೇತ್ರ ಸೇವೆಗಾಗಿ ಕೂಟಗಳನ್ನು ಏರ್ಪಡಿಸುವ, ಮತ್ತು ಟೆರಿಟೊರಿಯ ವ್ಯಾಪ್ತಿಯನ್ನು ಪರಿಶೀಲಿಸುವಂತಹ ವ್ಯಾವಹಾರಿಕ ವಿಷಯಗಳ ಕುರಿತು ನಿರ್ಣಯಗಳನ್ನು ಮಾಡಬೇಕಾಗುತ್ತದೆ. ಇಂತಹ ಏರ್ಪಾಡುಗಳು ಕೆಲವೊಮ್ಮೆ ನಿಷ್ಠೆಯ ಪರೀಕ್ಷೆಗಳನ್ನು ಒಡ್ಡಬಹುದು. ಅವು ದೈವಿಕವಾಗಿ ಪ್ರೇರಿಸಲ್ಪಟ್ಟ ಆಜ್ಞೆಗಳಾಗಿರುವುದಿಲ್ಲ, ಮತ್ತು ಅವು ಪ್ರತಿಯೊಬ್ಬ ವ್ಯಕ್ತಿಯ ಇಷ್ಟಕ್ಕನುಸಾರ ಇರುವುದಿಲ್ಲ.
ಕ್ರೈಸ್ತ ಸಭೆಯಲ್ಲಿ ಮಾಡಲ್ಪಡುವ ಕೆಲವೊಂದು ವ್ಯಾವಹಾರಿಕ ಏರ್ಪಾಡುಗಳಿಗೆ ನಿಷ್ಠಾವಂತರಾಗಿರುವುದನ್ನು ನೀವು ಕೆಲವೊಮ್ಮೆ ಒಂದು ಪಂಥಾಹ್ವಾನವಾಗಿ ಕಂಡುಕೊಳ್ಳುತ್ತೀರೊ? ಹಾಗಿರುವಲ್ಲಿ, ನೀವು ಬೆತೆಲಿನ ಉದಾಹರಣೆಯನ್ನು ಸಹಾಯಕಾರಿಯಾಗಿ ಕಂಡುಕೊಳ್ಳಬಹುದು. “ದೇವರ ಮನೆ” ಎಂಬ ಅರ್ಥಕೊಡುವ ಒಂದು ಹೀಬ್ರು ಪದದಿಂದ ಬಂದಿರುವ ಬೆತೆಲ್ ಎಂಬ ಹೆಸರು, ಅಮೆರಿಕದ ಮುಖ್ಯಕಾರ್ಯಾಲಯವನ್ನು ಸೇರಿಸಿ, ವಾಚ್ ಟವರ್ ಸೊಸೈಟಿಯ ಎಲ್ಲ 104 ಬ್ರಾಂಚುಗಳಿಗೆ ಕೊಡಲ್ಪಟ್ಟಿದೆ.* ಬೆತೆಲ್ ಕಟ್ಟಡಗಳಲ್ಲಿ ವಾಸಿಸುವ ಹಾಗೂ ಕೆಲಸಮಾಡುವ ಸ್ವಯಂಸೇವಕರು, ಈ ಸ್ಥಳಗಳು ಯೆಹೋವನಿಗಾಗಿ ಪೂಜ್ಯಭಾವನೆ ಮತ್ತು ಭಯಭಕ್ತಿಯನ್ನು ಪ್ರತಿಬಿಂಬಿಸಬೇಕೆಂದು ಬಯಸುತ್ತಾರೆ. ಇದು ಪ್ರತಿಯೊಬ್ಬರ ವತಿಯಿಂದ ನಿಷ್ಠೆಯನ್ನು ಕೇಳಿಕೊಳ್ಳುತ್ತದೆ.
ಬೆತೆಲನ್ನು ಸಂದರ್ಶಿಸುವವರು, ಅವರು ಅಲ್ಲಿ ನೋಡುವ ಕ್ರಮಬದ್ಧತೆ ಮತ್ತು ಸ್ವಚ್ಛತೆಯ ಕುರಿತು ಅನೇಕ ವೇಳೆ ಹೇಳಿಕೆ ನೀಡುತ್ತಾರೆ. ಕೆಲಸಮಾಡುವವರು ಸಂಘಟಿತರೂ ಸಂತೋಷದಿಂದಿರುವವರೂ ಆಗಿದ್ದಾರೆ; ಅವರ ನುಡಿ ಮತ್ತು ಶಿಷ್ಟಾಚಾರಗಳು, ಮತ್ತು ಅವರ ತೋರಿಕೆಯು ಸಹ, ಪ್ರೌಢ, ಬೈಬಲ್ ಶಿಕ್ಷಿತ ಕ್ರೈಸ್ತ ಮನಸ್ಸಾಕ್ಷಿಗಳನ್ನು ಪ್ರತಿಬಿಂಬಿಸುತ್ತದೆ. ಬೆತೆಲ್ ಕುಟುಂಬದ ಸದಸ್ಯರೆಲ್ಲರು, ದೇವರ ವಾಕ್ಯದ ಮಟ್ಟಗಳಿಗೆ ನಿಷ್ಠೆಯಿಂದ ಅಂಟಿಕೊಳ್ಳುತ್ತಾರೆ.
ಇದಕ್ಕೆ ಕೂಡಿಸಿ, ಆಡಳಿತ ಮಂಡಲಿಯು ಅವರಿಗೆ, ಐಕ್ಯವಾಗಿ ಒಟ್ಟಿಗೆ ವಾಸಿಸುವುದು (ಇಂಗ್ಲಿಷ್) ಎಂಬ ಶೀರ್ಷಿಕೆಯುಳ್ಳ ಕೈಪಿಡಿಯನ್ನು ಒದಗಿಸುತ್ತದೆ. ಈ ಕೈಪಿಡಿಯು, ದಯಾಪರವಾಗಿ, ಇಂತಹ ದೊಡ್ಡ ಕುಟುಂಬಕ್ಕೆ ಚೆನ್ನಾಗಿ ಒಟ್ಟಿಗೆ ಕೆಲಸಮಾಡಲು ಬೇಕಾಗುವ ಕೆಲವು ಪ್ರಾಯೋಗಿಕ ಏರ್ಪಾಡುಗಳನ್ನು ಸ್ಥಾಪಿಸುತ್ತದೆ. (ಕೀರ್ತನೆ 133:1) ದೃಷ್ಟಾಂತಕ್ಕೆ, ಅದು ಕೋಣೆಗಳು, ಊಟಗಳು, ಜನಾರೋಗ್ಯ, ಉಡುಪು ಮತ್ತು ಕೇಶಾಲಂಕಾರ, ಮತ್ತು ತದ್ರೀತಿಯ ವಿಷಯಗಳನ್ನು ಚರ್ಚಿಸುತ್ತದೆ. ಬೆತೆಲ್ ಕುಟುಂಬದ ಸದಸ್ಯರು—ತಮ್ಮ ವೈಯಕ್ತಿಕ ಇಚ್ಛೆಗಳು ತಮ್ಮನ್ನು ಮತ್ತೊಂದು ದಿಕ್ಕಿಗೆ ನಡೆಸಬಹುದಾದರೂ—ಇಂತಹ ಏರ್ಪಾಡುಗಳನ್ನು ನಿಷ್ಠೆಯಿಂದ ಬೆಂಬಲಿಸುತ್ತಾರೆ ಮತ್ತು ಅವುಗಳಿಗೆ ಅಂಟಿಕೊಳ್ಳುತ್ತಾರೆ. ಅವರು ಈ ಕೈಪಿಡಿಯನ್ನು, ನಿಯಮಗಳು ಮತ್ತು ಕಟ್ಟಳೆಗಳ ಒಂದು ಅನಮ್ಯ ಮೊತ್ತವಾಗಿ ಅಲ್ಲ, ಐಕ್ಯ ಹಾಗೂ ಸಾಮರಸ್ಯವನ್ನು ಪ್ರವರ್ಧಿಸಲು ರಚಿಸಲ್ಪಟ್ಟ ಪ್ರಯೋಜನಕರ ಮಾರ್ಗದರ್ಶನಗಳ ಒಂದು ಮೊತ್ತವಾಗಿ ವೀಕ್ಷಿಸುತ್ತಾರೆ. ಈ ಬೈಬಲಾಧಾರಿತ ಕಾರ್ಯವಿಧಾನಗಳನ್ನು ಎತ್ತಿಹಿಡಿಯುವುದರಲ್ಲಿ ಮೇಲ್ವಿಚಾರಕರು ನಿಷ್ಠಾವಂತರಾಗಿದ್ದಾರೆ, ಮತ್ತು ತಮ್ಮ ಪವಿತ್ರ ಬೆತೆಲ್ ಸೇವೆಯನ್ನು ಬೆನ್ನಟ್ಟುವಂತೆ ಬೆತೆಲ್ ಕುಟುಂಬವನ್ನು ಕಟ್ಟಲು ಮತ್ತು ಉತ್ತೇಜಿಸಲು, ಅವುಗಳನ್ನು ಸಕಾರಾತ್ಮಕ ವಿಧದಲ್ಲಿ ಉಪಯೋಗಿಸುತ್ತಾರೆ.
* ಈ ಫ್ಯಾಕ್ಟರಿ, ಆಫೀಸು, ಮತ್ತು ನಿವಾಸದ ಕಟ್ಟಡಗಳು, ದೇವರ ಮಹಾ ಆತ್ಮಿಕ ಆಲಯವನ್ನು ಇಲ್ಲವೆ ಮನೆಯನ್ನು ಸೂಚಿಸುವುದಿಲ್ಲ. ದೇವರ ಆತ್ಮಿಕ ಆಲಯವು, ಶುದ್ಧ ಆರಾಧನೆಗಾಗಿರುವ ಆತನ ಏರ್ಪಾಡಾಗಿದೆ. (ಮಿಕಾ 4:1) ಹೀಗಿರುವುದರಿಂದ, ಅದು ಭೂಮಿಯ ಮೇಲಿರುವ ಯಾವುದೇ ಭೌತ ರಚನೆಗೆ ಸೀಮಿತವಾಗಿರುವುದಿಲ್ಲ.
[ಪುಟ 10 ರಲ್ಲಿರುವ ಚೌಕ]
ನಿಷ್ಠಾವಂತ ಮತ್ತು ಕಾನೂನುವಾದಿ
ಹಿಂದೆ 1916ರಲ್ಲಿ, ಎನ್ಸೈಕ್ಲೊಪೀಡಿಯ ಆಫ್ ರಿಲಿಜನ್ ಆ್ಯಂಡ್ ಎತಿಕ್ಸ್ ಗಮನಿಸಿದ್ದೇನೆಂದರೆ, “ನಿಷ್ಠಾವಂತ ಮತ್ತು ಕಾನೂನುವಾದಿಯ ನಡುವಿನ ಈ ವ್ಯತ್ಯಾಸವನ್ನು ಎಲ್ಲ ಸಮಯಗಳಲ್ಲಿ ಮತ್ತು ಎಲ್ಲ ಸ್ಥಳಗಳಲ್ಲಿ ಕಂಡುಕೊಳ್ಳಬಹುದು.” ಅದು ವಿವರಿಸಿದ್ದು: “ತನಗೆ ಹೇಳಿರುವುದನ್ನು ಮಾಡುವ, ನಿಯಮಗಳನ್ನು ಉಲ್ಲಂಘಿಸದ ಕಾನೂನುವಾದಿಯು ಇದ್ದಾನೆ; ಅವನು ಲಿಖಿತ ವಚನಕ್ಕೆ ನಂಬಿಗಸ್ತಿಕೆಯಿಂದ ಅಂಟಿಕೊಳ್ಳುತ್ತಾನೆ. ಇದನ್ನೇ ಮಾಡುವ ನಿಷ್ಠಾವಂತನು ಇದ್ದಾನೆ, ಆದರೆ . . . ಹೆಚ್ಚಿನ ವಿಷಯಗಳಿಗಾಗಿ ಅವನ ಮೇಲೆ ಭರವಸೆಯಿಡಸಾಧ್ಯವಿದೆ, ಅವನು ತನ್ನ ಇಡೀ ಮನಸ್ಸನ್ನು ತನ್ನ ಕರ್ತವ್ಯದಲ್ಲಿ ಹಾಕುತ್ತಾನೆ, ನಿರ್ವಹಿಸಲ್ಪಡಲಿಕ್ಕಾಗಿರುವ ಉದ್ದೇಶದ ನಿಜಾರ್ಥಕ್ಕನುಸಾರ ತನ್ನ ಮನೋಭಾವವನ್ನು ಅವನು ರಚಿಸಿಕೊಳ್ಳುತ್ತಾನೆ.” ತದನಂತರ, ಅದೇ ಗ್ರಂಥವು ಗಮನಿಸಿದ್ದು: “ನಿಷ್ಠಾವಂತರಾಗಿರುವುದು ನ್ಯಾಯಬದ್ಧರಾಗಿರುವುದಕ್ಕಿಂತಲೂ ಹೆಚ್ಚಿನದ್ದಾಗಿದೆ. . . . ನಿಷ್ಠಾವಂತ ಮನುಷ್ಯನು ಸಂಪೂರ್ಣ ಹೃದಯ ಮತ್ತು ಮನಸ್ಸಿನಿಂದ ಕಾರ್ಯಮಾಡುವ ವ್ಯಕ್ತಿಯಾಗಿ, ನ್ಯಾಯವನ್ನು ಪರಿಪಾಲಿಸುವ ಮನುಷ್ಯನಿಗಿಂತ ಭಿನ್ನನಾಗಿದ್ದಾನೆ . . . ಅವನು ಕರ್ತವ್ಯೋಲ್ಲಂಘನೆ, ಕರ್ತವ್ಯಲೋಪ, ಇಲ್ಲವೆ ಅಜ್ಞಾನದ ಪಾಪಗಳಿಗೆ ಬಲಿಬೀಳುವಂತೆ ತನ್ನನ್ನು ಅನುಮತಿಸಿಕೊಳ್ಳುವುದಿಲ್ಲ.”