ನಮ್ಮ ಪ್ರಿಯರಿಗಾಗಿ ಮುಂದಾಗಿಯೇ ಯೋಜನೆಯನ್ನು ಮಾಡುವುದು
ಆ್ಯನಿಯ ದುಃಖಕರ ಕಥೆಯು, ಇತ್ತೀಚೆಗೆ ಆಫ್ರಿಕದ ವಾರ್ತಾಪತ್ರಿಕೆಯೊಂದರಲ್ಲಿ ಕಂಡುಬಂತು. ಆ್ಯನಿಯ ಗಂಡ ಒಬ್ಬ ವ್ಯಾಪಾರಸ್ಥನಾಗಿದ್ದನು. 1995ರಲ್ಲಿ ಅವನು ಮೃತಪಟ್ಟನು. ಅವನು 15 ವಾಹನಗಳು, ಬಹಳಷ್ಟು ಬ್ಯಾಂಕ್ ಅಕೌಂಟ್ಗಳು, ಸುಮಾರು 4,000 (ಅಮೆರಿಕನ್) ಡಾಲರುಗಳಷ್ಟು ನಗದು ಹಣ, ಒಂದು ಅಂಗಡಿ, ಒಂದು ಬಾರ್, ಮತ್ತು ಮೂರು ಬೆಡ್ರೂಮ್ಗಳುಳ್ಳ ಮನೆಯೊಂದನ್ನು ಹಿಂದೆ ಬಿಟ್ಟುಹೋದನು. ಅವನು ಉಯಿಲನ್ನು ಮಾತ್ರವೇ ಹಿಂದೆ ಬಿಟ್ಟುಹೋಗಿರಲಿಲ್ಲ.
ಆ್ಯನಿಯ ಮೈದುನನು ಆ ಹಣ ಮತ್ತು ಆಸ್ತಿಯನ್ನು ಸ್ವಾಧೀನಪಡಿಸಿಕೊಂಡು, ಅವಳನ್ನೂ ಅವಳ ಆರು ಮಂದಿ ಮಕ್ಕಳನ್ನೂ ಅವರ ಮನೆಯಿಂದ ಹೊರಹೋಗುವಂತೆ ಬಲಾತ್ಕರಿಸಿದನೆಂಬ ಸುದ್ದಿಯಿದೆ. ನಿರ್ಗತಿಕರಾಗಿ, ಅವಳೂ ಅವಳ ಮಕ್ಕಳೂ ಈಗ ಅವಳ ಅಣ್ಣನೊಂದಿಗೆ ವಾಸಿಸುತ್ತಾರೆ. ಮಕ್ಕಳಲ್ಲಿ ನಾಲ್ಕು ಮಂದಿ ಶಾಲೆಯನ್ನು ಬಿಡಬೇಕಾಯಿತು, ಏಕೆಂದರೆ ಶಾಲಾ ಶುಲ್ಕಗಳಿಗಾಗಿ ಅಥವಾ ಶಾಲಾ ಸಮವಸ್ತ್ರಗಳಿಗಾಗಿ ಹಣವಿಲ್ಲ.
ಆ್ಯನಿ ಹೈ ಕೋರ್ಟಿಗೆ ಮನವಿಮಾಡಿದಳು. ಒಂದು ವಾಹನವನ್ನು ಸೇರಿಸಿ, ಸ್ವಲ್ಪ ಆಸ್ತಿಯನ್ನು ಅವಳಿಗೆ ಹಿಂದೆ ಕೊಡಬೇಕೆಂದು ಕೋರ್ಟು ನಿರ್ಣಯಿಸಿತು. ಆದರೆ ಏನೂ ಹಿಂದೆ ಕೊಡಲ್ಪಡಲಿಲ್ಲ. ತನ್ನ ಮೈದುನನು ಹೈ ಕೋರ್ಟಿನ ನಿರ್ಣಯವನ್ನು ಈಡೇರಿಸುವಂತೆ ಮಾಡಲು, ಲಿಖಿತ ಆಜ್ಞೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಲಿಕ್ಕಾಗಿ ಅವಳು ಪುನಃ ಕೋರ್ಟಿಗೆ ಹೋಗಬೇಕಾಗಿದೆ.
ಮರಣದ ಕುರಿತು ಯೋಚಿಸುವುದೇಕೆ?
ತನ್ನ ಮರಣದ ಸಂಭವನೀಯತೆಯ ವಿಷಯದಲ್ಲಿ ಕುಟುಂಬದ ತಲೆಯು ಯೋಜನೆಯನ್ನು ಮಾಡಲು ತಪ್ಪಿಹೋಗುವಾಗ ಏನು ಸಂಭವಿಸಬಹುದೆಂಬುದನ್ನು, ಆ್ಯನಿಯ ಕಥೆಯು ದೃಷ್ಟಾಂತಿಸುತ್ತದೆ. ಮೃತಪಟ್ಟಾಗ, ಎಲ್ಲ ಮಾನವರ “ಆಸ್ತಿಯು ಇತರರ ಪಾಲಾಗುತ್ತದೆ.” (ಕೀರ್ತನೆ 49:10) ಇದಲ್ಲದೆ, ತಮ್ಮ ಸ್ವತ್ತುಗಳಿಗೆ ಏನು ಮಾಡಲ್ಪಡುತ್ತದೆ ಎಂಬ ವಿಷಯದಲ್ಲಿ ಮೃತರಿಗೆ ಯಾವ ಹಿಡಿತವೂ ಇಲ್ಲ. (ಪ್ರಸಂಗಿ 9:5, 10) ತನ್ನ ಆಸ್ತಿಗಳಿಗೆ ಏನು ಆಗಬೇಕು ಎಂಬ ವಿಷಯದಲ್ಲಿ ತನ್ನ ಅಭಿಪ್ರಾಯವು ಸೇರಿರಲಿಕ್ಕಾಗಿ, ವ್ಯಕ್ತಿಯೊಬ್ಬನು ಮರಣಕ್ಕೆ ಮೊದಲು ಏರ್ಪಾಡುಗಳನ್ನು ಮಾಡಬೇಕು.
ನಾವು ಅನಿರೀಕ್ಷಿತವಾಗಿ ಸಾಯಬಹುದೆಂದು ನಮಗೆಲ್ಲರಿಗೂ ತಿಳಿದಿದೆಯಾದರೂ, ಬದುಕಿ ಉಳಿದಿರುವ ತಮ್ಮ ಪ್ರಿಯರಿಗಾಗಿ ಮುಂದಾಗಿಯೇ ಒದಗಿಸುವಿಕೆಗಳನ್ನು ಮಾಡಲು ಅನೇಕ ಜನರು ತಪ್ಪಿಹೋಗುತ್ತಾರೆ. ನಮ್ಮ ಚರ್ಚೆಯು ಆಫ್ರಿಕದಲ್ಲಿರುವ ನಿರ್ದಿಷ್ಟ ಸಾಂಸ್ಕೃತಿಕ ಗುಂಪುಗಳ ಮೇಲೆ ಕೇಂದ್ರೀಕರಿಸುವುದಾದರೂ, ಲೋಕದ ಇತರ ಭಾಗಗಳಲ್ಲಿಯೂ ತದ್ರೀತಿಯ ಸಮಸ್ಯೆಗಳು ಅಸ್ತಿತ್ವದಲ್ಲಿವೆ.
ಮರಣವು ಸಂಭವಿಸುವಲ್ಲಿ, ನಿಮ್ಮ ಆಸ್ತಿಯನ್ನು ಮಾರುವ ವಿಷಯದಲ್ಲಿ ನೀವು ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳುವುದು, ವೈಯಕ್ತಿಕವಾದ ಒಂದು ವಿಷಯವಾಗಿದೆ. (ಗಲಾತ್ಯ 6:5) ಆದರೂ, ‘ಬದುಕಿದ್ದಾಗ ತನ್ನ ಹೆಂಡತಿ ಮಕ್ಕಳನ್ನು ಪೋಷಿಸಿ, ಅವರ ಕಾಳಜಿವಹಿಸುವ ವ್ಯಕ್ತಿಯೊಬ್ಬನು, ತಾನು ಮರಣಹೊಂದುವುದಾದರೆ, ಅವರ ಹಿತಕ್ಷೇಮಕ್ಕಾಗಿ ಯಾವುದೇ ಒದಗಿಸುವಿಕೆಯನ್ನು ಏಕೆ ಮಾಡದೆ ಇರುವನು?’ ಎಂದು ಒಬ್ಬನು ಕೇಳಬಹುದು. ಒಂದು ಮುಖ್ಯ ಕಾರಣವು ಏನೆಂದರೆ, ನಮ್ಮಲ್ಲಿ ಅಧಿಕಾಂಶ ಮಂದಿ ನಾವು ಸಾಯಬಹುದು ಎಂಬ ಸಂಭವನೀಯತೆಯ ಕುರಿತು ನಾವು ಯೋಜಿಸುವ ವಿಷಯವಂತೂ ಬಿಡಿ, ಅದರ ಕುರಿತು ಆಲೋಚಿಸಲೂ ಇಷ್ಟಪಡುವುದಿಲ್ಲ. ವಾಸ್ತವದಲ್ಲಿ, ನಾವು ನಮ್ಮ ಮರಣ ದಿನವನ್ನು ಮುಂಗಾಣಲು ಸಾಧ್ಯವಿಲ್ಲ, ಏಕೆಂದರೆ ಬೈಬಲು ಹೇಳುವುದು: “ನಿಮ್ಮ ಜೀವಮಾನವು ಎಂಥದು? ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆ ಮೇಲೆ ಕಾಣದೆ ಹೋಗುವ ಹಬೆಯಂತಿರುತ್ತೀರಿ.”—ಯಾಕೋಬ 4:14.
ಮರಣದ ಸಂಭವನೀಯತೆಯ ಕುರಿತಾಗಿ ಯೋಜನೆಯನ್ನು ಮಾಡುವುದು ಪ್ರಾಯೋಗಿಕವಾದದ್ದು. ಅದು ಬದುಕಿ ಉಳಿದಿರುವವರಿಗಾಗಿರುವ ಪ್ರೀತಿಪರ ಚಿಂತೆಯನ್ನು ಸಹ ತೋರಿಸುತ್ತದೆ. ನಾವು ನಮ್ಮ ವ್ಯವಹಾರಗಳನ್ನು ಏರ್ಪಡಿಸದಿರುವಲ್ಲಿ, ಇತರರು ಅದನ್ನು ಮಾಡುವರು. ಬಹುಶಃ ನಾವು ಯಾರನ್ನು ಎಂದೂ ಭೇಟಿಯಾಗಿಲ್ಲವೋ ಆ ಜನರೇ ನಮ್ಮ ಆಸ್ತಿಗಳು ಹಾಗೂ ಶವಸಂಸ್ಕಾರದ ಏರ್ಪಾಡುಗಳ ಕುರಿತು ನಿರ್ಣಯಗಳನ್ನು ಮಾಡುವರು. ಕೆಲವು ದೇಶಗಳಲ್ಲಿ ಅಂತಹ ಪರಿಸ್ಥಿತಿಗಳ ಕೆಳಗೆ, ನಮ್ಮ ಹಣ ಹಾಗೂ ಆಸ್ತಿ ಯಾರಿಗೆ ಸೇರಬೇಕೆಂಬುದನ್ನು ಸರಕಾರವೇ ನಿರ್ಧರಿಸುತ್ತದೆ. ಬೇರೆ ಸ್ಥಳಗಳಲ್ಲಿ, ಸಂಬಂಧಿಕರು ನಿರ್ಧರಿಸುತ್ತಾರೆ, ಮತ್ತು ಅನೇಕವೇಳೆ ಈ ನಿರ್ಣಯಗಳಿಂದ ಕುಟುಂಬದೊಳಗೆ ಮತ್ಸರವನ್ನು ಪೋಷಿಸುವ ಜಗಳಗಳು ಉಂಟಾಗುತ್ತವೆ. ಇದಲ್ಲದೆ, ಇತರರಿಂದ ಏನು ನಿರ್ಧರಿಸಲ್ಪಡುತ್ತದೋ ಅದು, ನಾವು ಏನನ್ನು ಅಪೇಕ್ಷಿಸಿದ್ದಿರಬಹುದೋ ಅದಕ್ಕಿಂತ ತೀರ ಭಿನ್ನವಾಗಿರಬಹುದು.
ಆಸ್ತಿಯನ್ನು ಕಸಿದುಕೊಳ್ಳುವುದು
ತನ್ನ ಗಂಡನು ಮೃತಪಟ್ಟಾಗ ಅತಿ ಹೆಚ್ಚು ಕಷ್ಟಾನುಭವಿಸುವವಳು, ವಿಧವೆಯೇ ಆಗಿರುತ್ತಾಳೆ. ತನ್ನ ಸಂಗಾತಿಯನ್ನು ಕಳೆದುಕೊಳ್ಳುವ ದುಃಖವಲ್ಲದೆ, ಅವಳು ಅನೇಕವೇಳೆ ಆಸ್ತಿ ಕಸಿದುಕೊಳ್ಳುವಿಕೆಗೆ ಬಲಿಯಾಗುತ್ತಾಳೆ. ಆ್ಯನಿಯ ವಿದ್ಯಮಾನದಲ್ಲಿ ಇದನ್ನು ಈ ಮುಂಚೆ ವಿವರಿಸಲಾಗಿತ್ತು. ಆಸ್ತಿ ಕಸಿದುಕೊಳ್ಳುವಿಕೆಗಾಗಿರುವ ಭಾಗಶಃ ಕಾರಣವು, ಪತ್ನಿಯರನ್ನು ಹೇಗೆ ಪರಿಗಣಿಸಲಾಗುತ್ತದೊ ಅದರೊಂದಿಗೆ ಸಂಬಂಧಿಸಿದೆ. ಕೆಲವು ಸಂಸ್ಕೃತಿಗಳಲ್ಲಿ ಒಬ್ಬ ಪುರುಷನ ಪತ್ನಿಯನ್ನು, ಅವನ ಕುಟುಂಬದ ಭಾಗವಾಗಿ ಪರಿಗಣಿಸಲಾಗುವುದಿಲ್ಲ. ಒಂದರ್ಥದಲ್ಲಿ ಅವಳು ಪರಕೀಯಳಾಗಿದ್ದು, ಅವಳು ಯಾವುದೇ ಸಮಯದಲ್ಲಿ ತನ್ನ ಕುಟುಂಬದ ಬಳಿಗೆ ಹಿಂದಿರುಗಬಹುದು ಅಥವಾ ಪುನರ್ವಿವಾಹವಾಗಿ ಇನ್ನೊಂದು ಕುಟುಂಬಕ್ಕೆ ಸೇರಬಹುದು. ಅದಕ್ಕೆ ವೈದೃಶ್ಯವಾಗಿ, ಕೆಲವು ಸಂಸ್ಕೃತಿಗಳ ಯೋಚನಾ ರೀತಿಗನುಸಾರ, ಪುರುಷನೊಬ್ಬನ ಸಹೋದರರು, ಸಹೋದರಿಯರು, ಮತ್ತು ಹೆತ್ತವರು ಅವನನ್ನು ಬಿಟ್ಟುಹೋಗುವುದೇ ಇಲ್ಲ. ಅವನು ಮೃತಪಟ್ಟಲ್ಲಿ, ಅವನಿಗೆ ಏನು ಸೇರಿತ್ತೋ ಅದೆಲ್ಲವೂ ಅವನ ಹೆಂಡತಿ ಮಕ್ಕಳಿಗಲ್ಲ, ಬದಲಾಗಿ ತಮಗೆ ಸೇರಿದ್ದಾಗಿದೆಯೆಂದು ಅವನ ಕುಟುಂಬವು ನಂಬುತ್ತದೆ.
ತಮ್ಮ ಪತ್ನಿಯರಲ್ಲಿ ಭರವಸೆಯಿಡದ ಗಂಡಂದಿರು ಅಂತಹ ಅಭಿಪ್ರಾಯವನ್ನು ಉತ್ತೇಜಿಸುತ್ತಾರೆ. ತನ್ನ ವ್ಯಾಪಾರ ವ್ಯವಹಾರಗಳ ಕುರಿತು ಮೈಕ್ ತನ್ನ ಅಣ್ಣತಮ್ಮಂದಿರೊಂದಿಗೆ ಮಾತ್ರ ಚರ್ಚಿಸಿದನು. ಅವನ ಆಸ್ತಿಗಳ ವಿಷಯದಲ್ಲಿ ಅವರಿಗೆ ತಿಳಿದಿತ್ತು, ಆದರೆ ಅವನ ಪತ್ನಿಗೆ ಸ್ವಲ್ಪವೇ ವಿಷಯವು ತಿಳಿದಿತ್ತು. ಅವನು ಸತ್ತಾಗ, ಅವನ ಅಣ್ಣತಮ್ಮಂದಿರು ಅವಳ ಬಳಿಗೆ ಬಂದು, ಅವಳ ಗಂಡನು ನಿರೀಕ್ಷಿಸುತ್ತಿದ್ದ ಒಂದು ಸಂದಾಯದ ವಿಷಯದಲ್ಲಿ ತಗಾದೆಮಾಡಿದರು. ಅದರ ಕುರಿತು ಅವಳಿಗೆ ಏನೂ ಗೊತ್ತಿರಲಿಲ್ಲ. ತದನಂತರ, ಅವಳ ಗಂಡನು ಅವಳಿಗಾಗಿ ತಂದಿದ್ದ ಫೋಟೋಕಾಪಿಯರ್ಗಳು ಹಾಗೂ ಟೈಪ್ರೈಟರ್ಗಳನ್ನು ಅವರು ಸ್ವಾಧೀನಪಡಿಸಿಕೊಂಡರು. ಕ್ರಮೇಣ, ಅವನ ಅಣ್ಣತಮ್ಮಂದಿರು ಮನೆಯನ್ನೂ ಅದರಲ್ಲಿದ್ದ ಎಲ್ಲವನ್ನೂ ವಶಪಡಿಸಿಕೊಂಡರು. ಈ ವಿಧವೆಯೂ ಅವಳ ಚಿಕ್ಕ ಮಗಳೂ, ಕೇವಲ ತಮ್ಮ ಬಟ್ಟೆಗಳನ್ನು ಮಾತ್ರ ತೆಗೆದುಕೊಂಡು ಮನೆಯನ್ನು ಬಿಟ್ಟುಹೋಗುವಂತೆ ಒತ್ತಾಯಿಸಲ್ಪಟ್ಟರು.
“ಅವರಿಬ್ಬರೂ ಒಂದೇ ಶರೀರವಾಗಿರುವರು”
ಕ್ರೈಸ್ತ ಗಂಡಂದಿರು ತಮ್ಮ ಪತ್ನಿಯರನ್ನು ಪ್ರೀತಿಸುತ್ತಾರೆ ಮತ್ತು ಅವರನ್ನು ಭರವಸಾರ್ಹರೆಂದು ಪರಿಗಣಿಸುತ್ತಾರೆ. ಅಂತಹ ಪುರುಷರು ಈ ಶಾಸ್ತ್ರೀಯ ಸಲಹೆಯನ್ನು ಹೃದಯಕ್ಕೆ ತೆಗೆದುಕೊಳ್ಳುತ್ತಾರೆ: “ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ.” ಈ ಪುರುಷರು ದೈವಿಕವಾಗಿ ಪ್ರೇರಿತವಾದ ಈ ಹೇಳಿಕೆಯನ್ನು ಸಹ ಒಪ್ಪಿಕೊಳ್ಳುತ್ತಾರೆ: “ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಶರೀರವಾಗಿರುವರು.”—ಎಫೆಸ 5:28, 31.
ದೇವಭಯವುಳ್ಳ ಗಂಡಂದಿರು ಕ್ರೈಸ್ತ ಅಪೊಸ್ತಲ ಪೌಲನೊಂದಿಗೆ ಸಹ ಸಮ್ಮತಿಸುತ್ತಾರೆ, ಅವನು ಬರೆದುದು: “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.” (1 ತಿಮೊಥೆಯ 5:8) ಈ ಮೂಲತತ್ವದೊಂದಿಗೆ ಹೊಂದಿಕೆಯಲ್ಲಿ, ಕ್ರೈಸ್ತ ಗಂಡನೊಬ್ಬನು ಒಂದು ದೀರ್ಘವಾದ ಪ್ರಯಾಣವನ್ನು ಯೋಜಿಸಿರುವಲ್ಲಿ, ತಾನು ಹೊರಹೋಗಿದ್ದಾಗ ತನ್ನ ಕುಟುಂಬವು ಪರಾಮರಿಸಲ್ಪಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾನೆ. ತದ್ರೀತಿಯಲ್ಲಿ, ತನ್ನ ಮರಣದ ಸಂಭವನೀಯತೆಯನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ, ಅವನು ತನ್ನ ಹೆಂಡತಿ ಮಕ್ಕಳಿಗಾಗಿ ಒದಗಿಸುವಿಕೆಯನ್ನು ಮಾಡುವುದು ಸಮಂಜಸವಾಗಿರುವುದಿಲ್ಲವೊ? ಅನಿರೀಕ್ಷಿತ ದುರಂತಕ್ಕಾಗಿ ತಯಾರಿ ಮಾಡುವುದು, ಪ್ರಾಯೋಗಿಕವು ಮಾತ್ರವಲ್ಲ ಪ್ರೀತಿಪರವೂ ಆದದ್ದಾಗಿದೆ.
ಶವಸಂಸ್ಕಾರದ ಪದ್ಧತಿಗಳು
ಈ ವಿಷಯದಲ್ಲಿ ಕ್ರೈಸ್ತ ಗಂಡಂದಿರಿಗೆ ಪರಿಗಣಿಸಲಿಕ್ಕಾಗಿ ಇನ್ನೊಂದು ಅಂಶವಿದೆ. ತನ್ನ ಸಂಗಾತಿಯನ್ನು, ಆಸ್ತಿಯನ್ನು, ಮತ್ತು ಬಹುಶಃ ತನ್ನ ಮಕ್ಕಳನ್ನೂ ಕಳೆದುಕೊಂಡಿರುವ ವಿಧವೆಯ ದುಃಖಕ್ಕೆ ಹೆಚ್ಚನ್ನು ಕೂಡಿಸುತ್ತಾ, ಅವಳು ಸಾಂಪ್ರದಾಯಿಕ ಶೋಕ ಸಂಸ್ಕಾರಗಳನ್ನು ನಡೆಸುವಂತೆ ಕೆಲವು ಸಮಾಜಗಳು ನಿರ್ಬಂಧಪಡಿಸುತ್ತವೆ. ನೈಜೀರಿಯದ ದ ಗಾರ್ಡಿಯನ್ ಎಂಬ ವಾರ್ತಾಪತ್ರವು ಪ್ರಲಾಪಿಸುವುದೇನೆಂದರೆ, ಕೆಲವು ಕ್ಷೇತ್ರಗಳಲ್ಲಿ, ವಿಧವೆಯೊಬ್ಬಳು ತನ್ನ ಗಂಡನ ಹೆಣದೊಂದಿಗೆ ಅದೇ ಕತ್ತಲೆ ಕೋಣೆಯಲ್ಲಿ ಮಲಗುವಂತೆ ಸಂಪ್ರದಾಯವು ಅಗತ್ಯಪಡಿಸುತ್ತದೆ. ಬೇರೆ ಸ್ಥಳಗಳಲ್ಲಿ, ವಿಧವೆಯರು ಬಹುಮಟ್ಟಿಗೆ ಆರು ತಿಂಗಳುಗಳ ಶೋಕಪಡುವ ಕಾಲಾವಧಿಯ ವರೆಗೆ ತಮ್ಮ ಮನೆಬಿಟ್ಟು ಹೊರಗೆ ಬರಲು ಅನುಮತಿಸಲ್ಪಡುವುದಿಲ್ಲ. ಆ ಸಮಯದಲ್ಲಿ ಅವರು ಸ್ನಾನಮಾಡಬಾರದು, ಮತ್ತು ಊಟಕ್ಕೆ ಮೊದಲು ಮತ್ತು ಊಟದ ಅನಂತರ ಅವರು ಕೈಗಳನ್ನು ತೊಳೆದುಕೊಳ್ಳುವುದೂ ನಿಷೇಧಿಸಲ್ಪಡುತ್ತದೆ.
ಅಂತಹ ಪದ್ಧತಿಗಳು ಸಮಸ್ಯೆಗಳನ್ನು ಒಡ್ಡುತ್ತವೆ, ವಿಶೇಷವಾಗಿ ಕ್ರೈಸ್ತ ವಿಧವೆಯರಿಗೆ. ದೇವರನ್ನು ಪ್ರಸನ್ನಗೊಳಿಸಲಿಕ್ಕಾಗಿರುವ ಅವರ ಬಯಕೆಯು, ಬೈಬಲ್ ಬೋಧನೆಗಳೊಂದಿಗೆ ಹೊಂದಿಕೆಯಾಗದಿರುವ ಪದ್ಧತಿಗಳನ್ನು ತೊರೆಯುವಂತೆ ಅವರನ್ನು ಪ್ರಚೋದಿಸುತ್ತದೆ. (2 ಕೊರಿಂಥ 6:14, 17) ಹಾಗಿದ್ದರೂ, ಈ ಪದ್ಧತಿಗಳಿಗೆ ಅನುಸಾರವಾಗಿ ನಡೆದುಕೊಳ್ಳದಿರುವುದಕ್ಕಾಗಿ ವಿಧವೆಯೊಬ್ಬಳು ಹಿಂಸೆಯನ್ನು ಅನುಭವಿಸಬಹುದು. ಅವಳು ತನ್ನ ಪ್ರಾಣರಕ್ಷಣೆಗಾಗಿ ಪಲಾಯನವನ್ನೂ ಮಾಡಬೇಕಾಗಬಹುದು.
ಕಾನೂನುಬದ್ಧ ಕ್ರಮಗಳನ್ನು ತೆಗೆದುಕೊಳ್ಳುವುದು
ಬೈಬಲು ವಿವೇಕಯುತವಾಗಿ ಹೇಳುವುದು: “ಶ್ರಮಶೀಲನ ಯೋಜನೆಗಳು ನಿಶ್ಚಯವಾಗಿಯೂ ಪ್ರಯೋಜನಕ್ಕೆ ಅನುಕೂಲವಾಗುತ್ತವೆ.” (ಜ್ಞಾನೋಕ್ತಿ 21:5, NW) ಕುಟುಂಬದ ತಲೆಯೊಬ್ಬನು ಯಾವ ಯೋಜನೆಗಳನ್ನು ಮಾಡಸಾಧ್ಯವಿದೆ? ಬಹುತೇಕ ಸಮಾಜಗಳಲ್ಲಿ, ಒಂದು ಉಯಿಲನ್ನು ಮಾಡಲು ಅಥವಾ ಒಬ್ಬ ವ್ಯಕ್ತಿಯ ಮರಣವು ಸಂಭವಿಸುವುದಾದರೆ ಅವನ ಆಸ್ತಿಯನ್ನು ಹೇಗೆ ಹಂಚಬೇಕು ಎಂಬುದನ್ನು ವಿವರಿಸುವ ದಾಖಲೆಪತ್ರವನ್ನು ತಯಾರಿಸಲು ಸಾಧ್ಯವಿದೆ. ಶವಸಂಸ್ಕಾರದ ಏರ್ಪಾಡುಗಳ ಕುರಿತಾದ ವಿವರಗಳು ಅದರಲ್ಲಿ ಒಳಗೊಂಡಿರಬಹುದು. ಶವಸಂಸ್ಕಾರ ಹಾಗೂ ಶೋಕ ಸಂಸ್ಕಾರಗಳ ವಿಷಯದಲ್ಲಿ ಒಬ್ಬ ವಿವಾಹ ಸಂಗಾತಿಯು ಏನು ಮಾಡಬೇಕು (ಅಥವಾ ಮಾಡಬಾರದು) ಎಂಬುದನ್ನು ಸಹ ಆ ದಾಖಲೆಪತ್ರವು ಸ್ಪಷ್ಟಪಡಿಸಬಹುದು.
ಲೀಆ ಎಂಬ ಹೆಸರಿನ ಸ್ತ್ರೀಯೊಬ್ಬಳು, 1992ರಲ್ಲಿ ತನ್ನ ಗಂಡನನ್ನು ಮರಣದಲ್ಲಿ ಕಳೆದುಕೊಂಡಳು. ಅವಳನ್ನುವುದು: “ನನಗೆ ಐದು ಮಕ್ಕಳಿದ್ದಾರೆ—ನಾಲ್ಕು ಹುಡುಗಿಯರು ಮತ್ತು ಒಬ್ಬ ಹುಡುಗ. ಮೃತಪಡುವ ಸ್ವಲ್ಪ ಸಮಯಕ್ಕೆ ಮುಂಚೆ ನನ್ನ ಗಂಡ ಅಸ್ವಸ್ಥರಾಗಿದ್ದರು. ಆದರೆ ಅವರು ಅಸ್ವಸ್ಥರಾಗುವುದಕ್ಕೆ ಮುಂಚೆಯೇ, ತನ್ನ ಎಲ್ಲ ಸ್ವತ್ತುಗಳು ನನಗೆ ಮತ್ತು ನಮ್ಮ ಮಕ್ಕಳಿಗೆ ಸೇರುವಂತೆ ಇಷ್ಟಪಡುತ್ತೇನೆಂಬುದನ್ನು ವಿವರಿಸುವ ಉಯಿಲನ್ನು ಬರೆದರು. ವಿಮೆಯ ಹಣ, ಫಾರ್ಮ್ ಜಮೀನು, ಫಾರ್ಮಿನ ಪ್ರಾಣಿಗಳು, ಮತ್ತು ಒಂದು ಮನೆಯು ಇದರಲ್ಲಿ ಒಳಗೂಡಿತ್ತು. ಅವರು ಉಯಿಲಿಗೆ ಸಹಿಹಾಕಿ, ಅದನ್ನು ನನಗೆ ಕೊಟ್ಟರು. . . . ನನ್ನ ಗಂಡ ಮೃತಪಟ್ಟ ಬಳಿಕ, ಸಂಬಂಧಿಕರು ಅವರ ಆಸ್ತಿಯಲ್ಲಿ ಪಾಲನ್ನು ಪಡೆದುಕೊಳ್ಳಲು ಬಯಸಿದರು. ನನ್ನ ಗಂಡ ತನ್ನ ಸ್ವಂತ ಹಣದಿಂದ ಫಾರ್ಮ್ ಜಮೀನನ್ನು ಕೊಂಡುಕೊಂಡಿದ್ದರು ಮತ್ತು ಇದರಿಂದಾಗಿ ಆಸ್ತಿಯ ವಿಷಯದಲ್ಲಿ ವಾದಿಸುವ ಹಕ್ಕು ಅವರಿಗಿಲ್ಲ ಎಂದು ನಾನು ಅವರಿಗೆ ಹೇಳಿದೆ. ಅವರು ಲಿಖಿತ ಉಯಿಲನ್ನು ನೋಡಿದಾಗ, ಅದನ್ನು ಅವರು ಒಪ್ಪಿಕೊಂಡರು.”
ವಿಷಯಗಳನ್ನು ಕುಟುಂಬದೊಂದಿಗೆ ಚರ್ಚಿಸುವುದು
ತನ್ನ ನಂಬಿಕೆಗಳು ಹಾಗೂ ಬಯಕೆಗಳ ಕುರಿತು ವ್ಯಕ್ತಿಯೊಬ್ಬನು ತನ್ನ ಕುಟುಂಬದೊಂದಿಗೆ ಮಾತಾಡದಿರುವಲ್ಲಿ, ಸಮಸ್ಯೆಗಳು ಏಳಬಹುದು. ಒಬ್ಬ ವ್ಯಕ್ತಿಯ ದೃಷ್ಟಾಂತವನ್ನು ಪರಿಗಣಿಸಿರಿ. ಅವನ ಹೂಳುವಿಕೆಯು ಸ್ಥಳೀಯ ಪದ್ಧತಿಗನುಸಾರ ಹಳ್ಳಿಯಲ್ಲಿಯೇ ನಡೆಯಬೇಕೆಂದು ಅವನ ಸಂಬಂಧಿಕರು ಒತ್ತಾಯಪಡಿಸಿದರು. ಅವನ ವಿಧವೆ ಪತ್ನಿ ಹಾಗೂ ಅವಳ ಮಕ್ಕಳ ಜೀವಿತಗಳ ಮೇಲೆ ಬೆದರಿಕೆ ಹಾಕಲ್ಪಟ್ಟಾಗ, ಅವನ ಮೃತದೇಹವನ್ನು ಸಂಬಂಧಿಕರೊಂದಿಗೆ ಬಿಟ್ಟುಹೋಗುವಂತೆ ಅವರು ಒತ್ತಾಯಿಸಲ್ಪಟ್ಟರು. ಅವಳು ಪ್ರಲಾಪಿಸುವುದು: “ತಾವು ಯಾವ ರೀತಿಯಲ್ಲಿ ಹೂಳಲ್ಪಡಲು ಬಯಸುತ್ತಾರೆಂಬುದನ್ನು ನನ್ನ ಗಂಡ ತಮ್ಮ ಮಾವಂದಿರು ಅಥವಾ ಸೋದರನೆಂಟರಲ್ಲಿ ಕೇವಲ ಒಬ್ಬರಿಗಾದರೂ ಹೇಳಿರುತ್ತಿದ್ದರೆ, ತಮ್ಮ ಸಾಂಪ್ರದಾಯಿಕ ಶವಸಂಸ್ಕಾರ ಪದ್ಧತಿಗಳನ್ನು ಕೈಕೊಳ್ಳುವಂತೆ ಕುಟುಂಬವು ಪಟ್ಟುಹಿಡಿಯುತ್ತಿರಲಿಲ್ಲ.”
ಕೆಲವು ಸಮಾಜಗಳಲ್ಲಿ, ಒಂದು ಮೌಖಿಕ ಒಪ್ಪಂದವು ಲಿಖಿತ ದಾಖಲೆಪತ್ರದಷ್ಟೇ ಬಂಧಕವಾಗಿರುತ್ತದೆ. ಸ್ವಾಸಿಲೆಂಡ್ನ ಕೆಲವು ಭಾಗಗಳಲ್ಲಿ ಸನ್ನಿವೇಶವು ಇದೇ ಆಗಿದೆ. ಅಲ್ಲಿ ಸಾಂಪ್ರದಾಯಿಕ ಶವಸಂಸ್ಕಾರ ಹಾಗೂ ಶೋಕದ ಕಾರ್ಯವಿಧಾನಗಳನ್ನು ಉತ್ತೇಜಿಸುವ ವಿಶ್ವಾಸವು ಅನೇಕರಿಗಿದೆ. ಇದನ್ನು ತಿಳಿದವನಾಗಿದ್ದು, ಐಸಕ್ ಎಂಬ ಹೆಸರಿನ ಕ್ರೈಸ್ತನೊಬ್ಬನು, ಯೆಹೋವನ ಸಾಕ್ಷಿಗಳಲ್ಲದ ತನ್ನ ಸಂಬಂಧಿಕರನ್ನು ಒಟ್ಟುಗೂಡಿಸಿ, ತನ್ನ ಮರಣಾನಂತರ ಏನು ಮಾಡಲ್ಪಡುವಂತೆ ತಾನು ಬಯಸುತ್ತೇನೆಂಬುದನ್ನು ಚರ್ಚಿಸಿದನು. ನಿರ್ದಿಷ್ಟ ಭೌತಿಕ ಸ್ವತ್ತುಗಳು ಯಾರಿಗೆ ಸೇರಬೇಕು ಎಂಬುದನ್ನು ಅವನು ಅವರಿಗೆ ಹೇಳಿದನು, ಮತ್ತು ತನ್ನ ಶವಸಂಸ್ಕಾರವು ಹೇಗೆ ನಡೆಸಲ್ಪಡಬೇಕೆಂಬುದನ್ನು ಅವನು ಸ್ಪಷ್ಟವಾಗಿ ವಿವರಿಸಿದನು. ಅವನು ಮೃತಪಟ್ಟ ಬಳಿಕ, ಅವನ ಅಪೇಕ್ಷೆಗಳಿಗನುಸಾರ ಕೆಲಸಗಳು ನಿರ್ವಹಿಸಲ್ಪಟ್ಟವು. ಐಸಕ್ಗೆ ಕ್ರೈಸ್ತ ರೀತಿಗನುಸಾರ ಸಮಾಧಿಯಾಯಿತು, ಮತ್ತು ಅವನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಲಾಯಿತು.
ನಿಮ್ಮ ಕುಟುಂಬವನ್ನು ಸಂರಕ್ಷಿಸಿರಿ
ನೀವು ಸತ್ತ ಪಕ್ಷದಲ್ಲಿ, ನಿಮ್ಮ ಕುಟುಂಬವನ್ನು ಸಂರಕ್ಷಿಸಲಿಕ್ಕಾಗಿ ನೀವು ಏನು ಮಾಡುವಿರೆಂಬುದು ಒಂದು ವೈಯಕ್ತಿಕ ವಿಷಯವಾಗಿದೆಯಾದರೂ, ಎಡ್ವರ್ಡ್ ಎಂಬ ಹೆಸರಿನ ಕ್ರೈಸ್ತನೊಬ್ಬನು ಹೇಳುವುದು: “ನನ್ನ ಕುಟುಂಬದ ಎಂಟು ಮಂದಿ ಸದಸ್ಯರ ಪ್ರಯೋಜನಕ್ಕಾಗಿ ನಾನು ಜೀವ ವಿಮೆ ಮಾಡಿದ್ದೇನೆ. ನನ್ನ ಬ್ಯಾಂಕ್ ಅಕೌಂಟಿಗೆ ನನ್ನ ಹೆಂಡತಿಯೇ ಸಹಿ ಹಾಕಿದ್ದಾಳೆ. ಆದುದರಿಂದ ನಾನು ಸಾಯುವಲ್ಲಿ, ಅವಳು ಅಕೌಂಟಿನಿಂದ ಹಣವನ್ನು ತೆಗೆದುಕೊಳ್ಳಸಾಧ್ಯವಿದೆ. . . . ನನ್ನ ಕುಟುಂಬದ ಪ್ರಯೋಜನಕ್ಕಾಗಿ ನಾನು ಒಂದು ಉಯಿಲನ್ನೂ ಮಾಡಿದ್ದೇನೆ. ನಾನು ಸಾಯುವಲ್ಲಿ, ನಾನು ಏನನ್ನು ಬಿಟ್ಟುಹೋಗುತ್ತೇನೋ ಅದು ನನ್ನ ಹೆಂಡತಿ ಮಕ್ಕಳಿಗಾಗಿರುವುದು. ನಾನು ಐದು ವರ್ಷಗಳ ಹಿಂದೆಯೇ ನನ್ನ ಉಯಿಲನ್ನು ಬರೆದೆ. ಅದು ಒಬ್ಬ ವಕೀಲನಿಂದ ತಯಾರಿಸಲ್ಪಟ್ಟಿತು, ಮತ್ತು ನನ್ನ ಹೆಂಡತಿ ಹಾಗೂ ಮಗನ ಬಳಿ ಒಂದು ಪ್ರತಿಯಿದೆ. ನನ್ನ ಶವಸಂಸ್ಕಾರದ ಕುರಿತಾದ ನಿರ್ಣಯಗಳಲ್ಲಿ ನನ್ನ ಸಂಬಂಧಿಕರು ಒಳಗೂಡಬಾರದೆಂದು ನನ್ನ ಉಯಿಲಿನಲ್ಲಿ ನಾನು ನಿಖರವಾಗಿ ವಿವರಿಸಿದ್ದೇನೆ. ನಾನು ಯೆಹೋವನ ಸಂಸ್ಥೆಗೆ ಸೇರಿದವನಾಗಿದ್ದೇನೆ. ಆದುದರಿಂದ, ನನ್ನ ಶವಸಂಸ್ಕಾರವನ್ನು ನಡಿಸುವಂತೆ ಕೇವಲ ಒಬ್ಬನೇ ಒಬ್ಬ ಸಾಕ್ಷಿ ಅಥವಾ ಇಬ್ಬರು ಸಾಕ್ಷಿಗಳು ಇದ್ದರೂ ಅಷ್ಟೇ ಸಾಕು. ನಾನು ಈ ವಿಷಯವನ್ನು ನನ್ನ ಕುಟುಂಬದ ಸಂಬಂಧಿಕರೊಂದಿಗೆ ಚರ್ಚಿಸಿದ್ದೇನೆ.”
ಒಂದರ್ಥದಲ್ಲಿ, ಅಂತಹ ಏರ್ಪಾಡುಗಳನ್ನು ಮಾಡುವುದು ನಿಮ್ಮ ಕುಟುಂಬಕ್ಕೆ ಒಂದು ಉಡುಗೊರೆಯಾಗಿದೆ. ನಿಶ್ಚಯವಾಗಿಯೂ, ಮರಣದ ಸಂಭವನೀಯತೆಗಾಗಿ ಯೋಜನೆಯನ್ನು ಮಾಡುವುದು, ಚಾಕಲೇಟುಗಳು ಅಥವಾ ಹೂಗೊಂಚಲುಗಳ ಉಡುಗೊರೆಯಂತಿರುವುದಿಲ್ಲ. ಆದರೂ, ಅದು ನಿಮ್ಮ ಪ್ರೀತಿಯನ್ನು ತೋರಿಸುತ್ತದೆ. ನೀವು ಇನ್ನುಮುಂದೆ ಅವರೊಂದಿಗೆ ಇಲ್ಲದಿರುವಾಗಲೂ, ನೀವು ‘ನಿಮ್ಮ ಮನೆಯವರನ್ನು ಸಂರಕ್ಷಿಸ’ಲು ಬಯಸುತ್ತೀರಿ ಎಂಬುದನ್ನು ಅದು ರುಜುಪಡಿಸುತ್ತದೆ.
[ಪುಟ 21 ರಲ್ಲಿರುವ ಚೌಕ/ಚಿತ್ರಗಳು]
ಯೇಸು ತನ್ನ ತಾಯಿಗಾಗಿ ಒದಗಿಸುವಿಕೆಯನ್ನು ಮಾಡಿದನು
“ಯೇಸುವಿನ ಶಿಲುಬೆಯ ಬಳಿಯಲ್ಲಿ ಆತನ ತಾಯಿಯೂ ಆತನ ತಾಯಿಯ ತಂಗಿಯೂ ಕ್ಲೋಪನ ಹೆಂಡತಿಯಾದ ಮರಿಯಳೂ ಮಗ್ದಲದ ಮರಿಯಳೂ ನಿಂತಿದ್ದರು. ಯೇಸು ತನ್ನ ತಾಯಿಯನ್ನೂ ಹತ್ತರದಲ್ಲಿ ನಿಂತಿದ್ದ ತನ್ನ ಪ್ರೀತಿಯ ಶಿಷ್ಯನನ್ನೂ ನೋಡಿ ತಾಯಿಗೆ—ಅಮ್ಮಾ, ಇಗೋ ನಿನ್ನ ಮಗನು ಎಂದು ಹೇಳಿದನು. ತರುವಾಯ ಆ ಶಿಷ್ಯನಿಗೆ—ಇಗೋ ನಿನ್ನ ತಾಯಿ ಎಂದು ಹೇಳಿದನು. ಆ ಹೊತ್ತಿನಿಂದ ಆ ಶಿಷ್ಯನು [ಯೋಹಾನನು] ಆಕೆಯನ್ನು ತನ್ನ ಮನೆಯಲ್ಲೇ ಇರಿಸಿಕೊಂಡನು.”—ಯೋಹಾನ 19:25-27.
[ಪುಟ 22 ರಲ್ಲಿರುವ ಚಿತ್ರ]
ಅನೇಕ ಕ್ರೈಸ್ತರು ತಮ್ಮ ಕುಟುಂಬಗಳನ್ನು ಸಂರಕ್ಷಿಸಲಿಕ್ಕಾಗಿ ಜಾಗ್ರತೆಯಿಂದ ಕಾನೂನುಬದ್ಧ ಕ್ರಮಗಳನ್ನು ಕೈಗೊಳ್ಳುತ್ತಾರೆ