ಶವಸಂಸ್ಕಾರಗಳ ಕುರಿತಾದ ಕ್ರಿಸ್ತೀಯ ನೋಟ
ಒಬ್ಬ ಪ್ರಿಯ ವ್ಯಕ್ತಿಯ ಆಕಸ್ಮಿಕ, ಅನಿರೀಕ್ಷಿತ ಸಾವು ವಿಶೇಷವಾಗಿ ದುರಂತಮಯವಾಗಿದೆ. ಅದು ಆಘಾತದಲ್ಲಿ ಪರಿಣಮಿಸಿ, ಅದರಿಂದ ತೀವ್ರವಾದ ಭಾವನಾತ್ಮಕ ವೇದನೆಯು ಉಂಟಾಗುತ್ತದೆ. ಒಬ್ಬ ಪ್ರಿಯ ವ್ಯಕ್ತಿಯು ದೀರ್ಘ ಸಮಯದಿಂದ ಹಾಸಿಗೆಹಿಡಿದು, ವೇದನಾಮಯವಾದ ಅಸ್ವಸ್ಥತೆಯಿಂದ ಸಾಯುವುದನ್ನು ನೋಡುವುದು ಆಶ್ಚರ್ಯಚಕಿತವಾದದ್ದಾಗಿ ಇರುವುದಿಲ್ಲವಾದರೂ, ದುಃಖ ಮತ್ತು ಅಪಾರ ನಷ್ಟದ ಅನಿಸಿಕೆ ಉಳಿಯುತ್ತದೆ.
ಒಬ್ಬ ಪ್ರಿಯ ವ್ಯಕ್ತಿಯ ಮರಣದ ಸನ್ನಿವೇಶಗಳು ಯಾವುವೇ ಆಗಿರಲಿ, ವಿಯೋಗಿಗಳಿಗೆ ಬೆಂಬಲ ಹಾಗೂ ಸಾಂತ್ವನದ ಅಗತ್ಯವಿದೆ. ಒಬ್ಬ ಕ್ರೈಸ್ತ ವಿಯೋಗಿಯು, ಅಶಾಸ್ತ್ರೀಯವಾದ ಶವಸಂಸ್ಕಾರ ಪದ್ಧತಿಗಳನ್ನು ಅನುಸರಿಸುವಂತೆ ಒತ್ತಾಯಿಸಲ್ಪಡುವವರಿಂದ ಹಿಂಸೆಯನ್ನೂ ಎದುರಿಸಬೇಕಾಗಬಹುದು. ಆಫ್ರಿಕದ ಅನೇಕ ದೇಶಗಳಲ್ಲಿ ಹಾಗೂ ಭೂಮಿಯ ಇನ್ನಿತರ ಭಾಗಗಳಲ್ಲಿ ಸಹ ಇದು ಸರ್ವಸಾಮಾನ್ಯವಾಗಿದೆ.
ಅಶಾಸ್ತ್ರೀಯವಾದ ಶವಸಂಸ್ಕಾರ ಪದ್ಧತಿಗಳನ್ನು ಅನುಸರಿಸದಿರಲು ಒಬ್ಬ ಕ್ರೈಸ್ತ ವಿಯೋಗಿಗೆ ಯಾವುದು ಸಹಾಯ ಮಾಡುವುದು? ಅಂತಹ ಪರೀಕ್ಷೆಯ ಸಮಯಗಳಲ್ಲಿ ಜೊತೆ ವಿಶ್ವಾಸಿಗಳು ಹೇಗೆ ಬೆಂಬಲಾತ್ಮಕರಾಗಿರಸಾಧ್ಯವಿದೆ? ಈ ಪ್ರಶ್ನೆಗಳಿಗೆ ಉತ್ತರಗಳು, ಯೆಹೋವನನ್ನು ಪ್ರಸನ್ನಗೊಳಿಸಲು ಪ್ರಯತ್ನಿಸುವ ಎಲ್ಲರಿಗೂ ಸಂಬಂಧಿಸಿದ್ದಾಗಿವೆ. ಏಕೆಂದರೆ “ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ ವಿಧವೆಯರನ್ನೂ ಪರಾಮರಿಸಿ ತನಗೆ ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡಿರುವದೇ ತಂದೆಯಾದ ದೇವರ ಸನ್ನಿಧಾನದಲ್ಲಿ ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ”ಯಾಗಿದೆ.—ಯಾಕೋಬ 1:27.
ಒಂದು ನಂಬಿಕೆಯಿಂದ ಜೋಡಿಸಲ್ಪಟ್ಟಿರುವುದು
ಅನೇಕ ಶವಸಂಸ್ಕಾರ ಪದ್ಧತಿಗಳನ್ನು ಒಂದಕ್ಕೊಂದು ಜೋಡಿಸುವ ಒಂದು ಸಾಮಾನ್ಯ ಅಂಶವು, ಮೃತರು ಪೂರ್ವಿಕರ ಅಗೋಚರ ಕ್ಷೇತ್ರದಲ್ಲಿ ಜೀವಿಸುತ್ತಾರೆ ಎಂಬ ನಂಬಿಕೆಯೇ ಆಗಿದೆ. ಅವರನ್ನು ತೃಪ್ತಿಪಡಿಸಲಿಕ್ಕಾಗಿ, ಶೋಕಿಸುವ ಅನೇಕರು ನಿರ್ದಿಷ್ಟ ಮತಾಚರಣೆಗಳನ್ನು ನಡೆಸುವ ಹಂಗಿಗೆ ಒಳಗಾದವರಾಗಿರುತ್ತಾರೆ. ಅಥವಾ ಆ ಮತಾಚರಣೆಗಳನ್ನು ನಿರ್ವಹಿಸದಿದ್ದರೆ ಆ ಹಾನಿಯು ಇಡೀ ಸಮುದಾಯದ ಮೇಲೆ ಬರುತ್ತದೆ ಎಂದು ನಂಬುವ ನೆರೆಹೊರೆಯವರನ್ನು ತಾವು ಅಸಂತೋಷಗೊಳಿಸುತ್ತೇವೆ ಎಂಬ ಭಯ ಅವರಿಗಿರುತ್ತದೆ.
ನಿಜ ಕ್ರೈಸ್ತನೊಬ್ಬನು ಮನುಷ್ಯರ ಭಯಕ್ಕೆ ಒಳಗಾಗಿ, ದೇವರನ್ನು ಅಪ್ರಸನ್ನಗೊಳಿಸುವ ಪದ್ಧತಿಗಳಲ್ಲಿ ಭಾಗವಹಿಸಬಾರದು. (ಜ್ಞಾನೋಕ್ತಿ 29:25; ಮತ್ತಾಯ 10:28) ಮೃತರು ಪ್ರಜ್ಞಾಹೀನರಾಗಿದ್ದಾರೆ ಎಂದು ಬೈಬಲು ತಿಳಿಸುತ್ತದೆ. ಏಕೆಂದರೆ ಅದು ಹೇಳುವುದು: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ . . . ನೀನು ಸೇರಬೇಕಾದ ಪಾತಾಳದಲ್ಲಿ [“ಷೀಓಲ್ನಲ್ಲಿ,” NW] ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.” (ಪ್ರಸಂಗಿ 9:5, 10) ಆದುದರಿಂದ, ಮೃತರನ್ನು ತೃಪ್ತಿಪಡಿಸಲು ಅಥವಾ ಅವರೊಂದಿಗೆ ಸಂವಾದಮಾಡಲು ಪ್ರಯತ್ನಿಸಬಾರದೆಂದು, ಯೆಹೋವ ದೇವರು ಪುರಾತನ ಸಮಯದ ತನ್ನ ಜನರನ್ನು ಎಚ್ಚರಿಸಿದನು. (ಧರ್ಮೋಪದೇಶಕಾಂಡ 14:1; 18:10-12; ಯೆಶಾಯ 8:19, 20) ಈ ಬೈಬಲ್ ಸಂಬಂಧಿತ ಸತ್ಯತೆಗಳು, ಅನೇಕ ಜನಪ್ರಿಯ ಶವಸಂಸ್ಕಾರ ಪದ್ಧತಿಗಳೊಂದಿಗೆ ಸಹಮತದಿಂದಿಲ್ಲ.
“ಲೈಂಗಿಕ ಶುದ್ಧೀಕರಣ”ದ ಕುರಿತಾಗಿ ಏನು?
ಮಧ್ಯ ಆಫ್ರಿಕದ ಕೆಲವು ದೇಶಗಳಲ್ಲಿ, ವಿಯೋಗಿಯಾದ ಪತಿ ಅಥವಾ ಪತ್ನಿಯು, ಮೃತಪಟ್ಟವರ ಸಮೀಪ ಬಂಧುವೊಬ್ಬರೊಂದಿಗೆ ಸಂಭೋಗ ಮಾಡುವಂತೆ ನಿರೀಕ್ಷಿಸಲಾಗುತ್ತದೆ. ಒಂದುವೇಳೆ ಇದು ಮಾಡಲ್ಪಡದಿದ್ದಲ್ಲಿ, ಬದುಕಿ ಉಳಿದಿರುವ ಕುಟುಂಬಕ್ಕೆ ಮೃತ ವ್ಯಕ್ತಿಯು ಹಾನಿಯನ್ನು ಉಂಟುಮಾಡುತ್ತಾನೆಂದು ನಂಬಲಾಗುತ್ತದೆ. ಈ ಮತಾಚರಣೆಯನ್ನು “ಲೈಂಗಿಕ ಶುದ್ಧೀಕರಣ” ಎಂದು ಹೆಸರಿಸಲಾಗಿದೆ. ಆದರೆ ವಿವಾಹದ ಹೊರಗಿನ ಯಾವುದೇ ಲೈಂಗಿಕ ಸಂಬಂಧವನ್ನು ಬೈಬಲು “ಜಾರತ್ವ” ಎಂದು ನಿರೂಪಿಸುತ್ತದೆ. ಕ್ರೈಸ್ತರು “ಜಾರತ್ವಕ್ಕೆ ದೂರವಾಗಿ ಓಡಿಹೋಗ”ಬೇಕಾಗಿರುವುದರಿಂದ, ಅವರು ಧೈರ್ಯದಿಂದ ಈ ಅಶಾಸ್ತ್ರೀಯ ಪದ್ಧತಿಯನ್ನು ಪ್ರತಿಭಟಿಸುತ್ತಾರೆ.—1 ಕೊರಿಂಥ 6:18.
ಮರ್ಸಿ ಎಂಬ ಹೆಸರಿನ ಒಬ್ಬ ವಿಧವೆಯನ್ನು ಪರಿಗಣಿಸಿರಿ.a 1989ರಲ್ಲಿ ಅವಳ ಗಂಡನು ಮೃತಪಟ್ಟಾಗ, ಅವಳು ಒಬ್ಬ ಸಂಬಂಧಿಕನೊಂದಿಗೆ ಲೈಂಗಿಕ ಶುದ್ಧೀಕರಣವನ್ನು ನಡೆಸುವಂತೆ ಅವಳ ಸಂಬಂಧಿಕರು ಬಯಸಿದರು. ಆ ಮತಾಚರಣೆಯು ದೇವರ ನಿಯಮಕ್ಕೆ ವಿರುದ್ಧವಾಗಿತ್ತೆಂಬುದನ್ನು ವಿವರಿಸುತ್ತಾ, ಅವಳು ಅದನ್ನು ನಿರಾಕರಿಸಿದಳು. ಆಶಾಭಂಗಗೊಂಡ ಅವಳ ಸಂಬಂಧಿಕರು, ಅವಳನ್ನು ಶಾಬ್ದಿಕವಾಗಿ ನಿಂದಿಸಿ ಹೊರಟುಹೋದರು. ಒಂದು ತಿಂಗಳ ಬಳಿಕ ಅವರು ಅವಳ ಮನೆಯನ್ನು ಲೂಟಿಮಾಡಿ, ಅದರ ಛಾವಣಿಯ ತಗಡುಗಳನ್ನು ಕಿತ್ತುಹಾಕಿದರು. “ನಿನ್ನ ಧರ್ಮವು ನಿನ್ನನ್ನು ನೋಡಿಕೊಳ್ಳಲಿ” ಎಂದು ಅವರು ಹೇಳಿದರು.
ಸಭೆಯು ಮರ್ಸಿಯನ್ನು ಸಂತೈಸಿ, ಅವಳಿಗಾಗಿ ಒಂದು ಹೊಸ ಮನೆಯನ್ನೂ ಕಟ್ಟಿಸಿಕೊಟ್ಟಿತು. ನೆರೆಹೊರೆಯವರು ಎಷ್ಟು ಪ್ರಭಾವಿತರಾದರೆಂದರೆ, ಕೆಲವರು ಆ ನಿರ್ಮಾಣ ಕೆಲಸದಲ್ಲಿ ಭಾಗವಹಿಸುವ ಮನಸ್ಸುಮಾಡಿದರು. ಅವರಲ್ಲಿ ಮುಖ್ಯಸ್ಥನ ಕ್ಯಾಥೊಲಿಕ್ ಪತ್ನಿಯು ಛಾವಣಿಗಾಗಿ ಹುಲ್ಲನ್ನು ತಂದವರಲ್ಲಿ ಮೊದಲಿಗಳಾಗಿದ್ದಳು. ಮರ್ಸಿಯ ನಂಬಿಗಸ್ತ ನಡವಳಿಕೆಯು ಅವಳ ಮಕ್ಕಳನ್ನು ಉತ್ತೇಜಿಸಿತು. ಅಂದಿನಿಂದ ಅವರಲ್ಲಿ ನಾಲ್ಕು ಮಂದಿ ಯೆಹೋವ ದೇವರಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ ಮತ್ತು ಇತ್ತೀಚೆಗೆ ಒಬ್ಬನು ಶುಶ್ರೂಷಾ ತರಬೇತಿ ಶಾಲೆಗೂ ಹಾಜರಾದನು.
ಲೈಂಗಿಕ ಶುದ್ಧೀಕರಣ ಪದ್ಧತಿಯ ಕಾರಣದಿಂದ, ಕೆಲವು ಕ್ರೈಸ್ತರು ಒಬ್ಬ ಅವಿಶ್ವಾಸಿಯೊಂದಿಗೆ ವಿವಾಹವನ್ನು ಮಾಡಿಕೊಳ್ಳುವ ಒತ್ತಾಯಕ್ಕೂ ಮಣಿದಿದ್ದಾರೆ. ಉದಾಹರಣೆಗಾಗಿ, ತನ್ನ 70ಗಳ ಪ್ರಾಯದಲ್ಲಿರುವ ಒಬ್ಬ ವಿಧುರನು, ಅವಸರದಿಂದ ತನ್ನ ಮೃತ ಪತ್ನಿಯ ಸಂಬಂಧಿಕಳಾಗಿದ್ದ ಒಬ್ಬ ಚಿಕ್ಕ ಹುಡುಗಿಯನ್ನು ಮದುವೆಯಾದನು. ಹೀಗೆ ಮಾಡುವ ಮೂಲಕ, ಲೈಂಗಿಕ ಶುದ್ಧೀಕರಣವನ್ನು ಕೈಕೊಂಡಿದ್ದೇನೆಂದು ಅವನು ಪ್ರತಿಪಾದಿಸಸಾಧ್ಯವಿತ್ತು. ಆದರೂ, ಅಂತಹ ಒಂದು ಕ್ರಮವು, ಕ್ರೈಸ್ತರು “ಕರ್ತನಲ್ಲಿ ಮಾತ್ರ” (NW) ವಿವಾಹವಾಗಬೇಕು ಎಂಬ ಬೈಬಲ್ ಸಲಹೆಗೆ ವ್ಯತಿರಿಕ್ತವಾದದ್ದಾಗಿದೆ.—1 ಕೊರಿಂಥ 7:39.
ಇಡೀ ರಾತ್ರಿ ಜಾಗರಣೆಮಾಡುವ ವ್ರತಾಚರಣೆಗಳು
ಅನೇಕ ದೇಶಗಳಲ್ಲಿ, ಶೋಕಿಸುವವರು ಮೃತರ ಮನೆಯಲ್ಲಿ ಒಟ್ಟುಗೂಡಿ, ಇಡೀ ರಾತ್ರಿ ಜಾಗರಣೆಮಾಡುತ್ತಾರೆ. ಜಾಗರಣೆಮಾಡುವ ಈ ಸಮಯಾವಧಿಗಳು ಅನೇಕವೇಳೆ ಸಂತೋಷಸಮಾರಂಭಗಳು ಹಾಗೂ ದೊಡ್ಡ ಧ್ವನಿಯ ಸಂಗೀತಗಳಿಂದ ಕೂಡಿರುತ್ತವೆ. ಇದು ಮೃತ ವ್ಯಕ್ತಿಯನ್ನು ತೃಪ್ತಿಪಡಿಸುತ್ತದೆ ಮತ್ತು ಬದುಕಿ ಉಳಿದಿರುವ ಕುಟುಂಬವನ್ನು ಮಾಟಮಂತ್ರಗಳಿಂದ ಸಂರಕ್ಷಿಸುತ್ತದೆ ಎಂದು ನಂಬಲಾಗುತ್ತದೆ. ಮೃತ ವ್ಯಕ್ತಿಯ ಅನುಗ್ರಹವನ್ನು ಪಡೆದುಕೊಳ್ಳಲಿಕ್ಕಾಗಿ ಸುಳ್ಳು ಪ್ರಶಂಸೆಯ ಭಾಷಣಗಳು ಕೊಡಲ್ಪಡಬಹುದು. ಒಂದು ಭಾಷಣವು ಮುಗಿದ ಬಳಿಕ, ಇನ್ನೊಬ್ಬ ವ್ಯಕ್ತಿಯು ಭಾಷಣ ಕೊಡಲು ನಿಂತುಕೊಳ್ಳುವ ಮುಂಚೆ, ಶೋಕಿಸುವವರು ಒಂದು ಧಾರ್ಮಿಕ ಗೀತೆಯನ್ನು ಹಾಡಬಹುದು. ಬೆಳಗಾಗುವ ತನಕ ಇದು ಮುಂದುವರಿಯಬಹುದು.b
ನಿಜ ಕ್ರೈಸ್ತನು ಇಡೀ ರಾತ್ರಿ ಜಾಗರಣೆಮಾಡುವಂತಹ ವ್ರತಾಚರಣೆಗಳಲ್ಲಿ ಪಾಲ್ಗೊಳ್ಳುವುದಿಲ್ಲ, ಏಕೆಂದರೆ ಮೃತರು ಜೀವಿತರಿಗೆ ಸಹಾಯ ಮಾಡಲು ಅಥವಾ ಹಾನಿಮಾಡಲು ಅಸಮರ್ಥರಾಗಿದ್ದಾರೆ ಎಂದು ಬೈಬಲು ತೋರಿಸುತ್ತದೆ. (ಆದಿಕಾಂಡ 3:19; ಕೀರ್ತನೆ 146:3, 4; ಯೋಹಾನ 11:11-14) ಶಾಸ್ತ್ರವಚನಗಳು ಪ್ರೇತಾರಾಧನೆಯ ಆಚರಣೆಯನ್ನು ಖಂಡಿಸುತ್ತವೆ. (ಪ್ರಕಟನೆ 9:21; 22:15) ಆದರೂ, ಪ್ರೇತಾರಾಧನೆಗೆ ಸಂಬಂಧಪಟ್ಟ ಆಚರಣೆಗಳನ್ನು ಪಾಲಿಸುವುದರಿಂದ ಇತರರನ್ನು ತಡೆಯುವುದನ್ನು ಕ್ರೈಸ್ತ ವಿಧವೆಯೊಬ್ಬಳು ಕಷ್ಟಕರವಾದದ್ದಾಗಿ ಕಂಡುಕೊಳ್ಳಬಹುದು. ಅವಳ ಮನೆಯಲ್ಲಿ ಇಡೀ ರಾತ್ರಿ ಜಾಗರಣೆಮಾಡುವ ಪದ್ಧತಿಯನ್ನು ನಡೆಸಲು ಅವರು ಒತ್ತಾಯಮಾಡಬಹುದು. ಈ ರೀತಿಯ ಸಂಕಟವನ್ನು ಎದುರಿಸುವ ಕ್ರೈಸ್ತ ವಿಯೋಗಿಗಳಿಗೆ ಸಹಾಯ ಮಾಡಲಿಕ್ಕಾಗಿ ಜೊತೆ ವಿಶ್ವಾಸಿಗಳು ಏನು ಮಾಡಸಾಧ್ಯವಿದೆ?
ಸಂಬಂಧಿಕರೊಂದಿಗೆ ಹಾಗೂ ನೆರೆಹೊರೆಯವರೊಂದಿಗೆ ವಿವೇಚಿಸುವ ಮೂಲಕ, ಸಭಾ ಹಿರಿಯರು ಅನೇಕವೇಳೆ ಕ್ರೈಸ್ತ ವಿಯೋಗಿ ಕುಟುಂಬಕ್ಕೆ ಬೆಂಬಲ ನೀಡಲು ಶಕ್ತರಾಗಿದ್ದಾರೆ. ಅಂತಹ ವಿಚಾರಪರ ತರ್ಕದ ಬಳಿಕ, ಈ ವ್ಯಕ್ತಿಗಳು ಮನೆಯನ್ನು ಪ್ರಶಾಂತವಾಗಿ ಬಿಟ್ಟುಹೋಗಿ, ಇನ್ನೊಂದು ದಿನ ಶವಸಂಸ್ಕಾರಕ್ಕಾಗಿ ಪುನಃ ಒಟ್ಟುಗೂಡಲು ಒಪ್ಪಬಹುದು. ಆದರೆ ಕೆಲವರು ಕಾದಾಟಕ್ಕಿಳಿದರೆ ಆಗೇನು? ವಿಚಾರಪರವಾಗಿ ತರ್ಕಿಸಲಿಕ್ಕಾಗಿರುವ ಸತತ ಪ್ರಯತ್ನಗಳು ಹಿಂಸಾಚಾರದಲ್ಲಿ ಫಲಿಸಬಹುದು. ‘ಕರ್ತನ ದಾಸನು ಜಗಳವಾಡದೆ . . . ಕೇಡನ್ನು ಸಹಿಸಿಕೊಳ್ಳಬೇಕು.’ (2 ತಿಮೊಥೆಯ 2:24) ಆದುದರಿಂದ ಸಹಕಾರ ತೋರಿಸದಿರುವ ಸಂಬಂಧಿಕರು ಆಕ್ರಮಣಶೀಲರಾಗಿ ಮೇಲುಗೈ ಪಡೆಯಲು ಪ್ರಯತ್ನಿಸುವಲ್ಲಿ, ಒಬ್ಬ ಕ್ರೈಸ್ತ ವಿಧವೆಯೂ ಅವಳ ಮಕ್ಕಳೂ ಇದನ್ನು ತಡೆಗಟ್ಟಲು ಅಶಕ್ತರಾಗಿರಬಹುದು. ಆದರೆ ತಮ್ಮ ಮನೆಯಲ್ಲಿ ನಡೆಸಲ್ಪಡುವ ಯಾವುದೇ ಸುಳ್ಳು ಧಾರ್ಮಿಕ ವ್ರತಾಚರಣೆಯಲ್ಲಿ ಅವರು ಭಾಗವಹಿಸುವುದಿಲ್ಲ. ಏಕೆಂದರೆ “ನೀವು ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ” ಎಂಬ ಬೈಬಲಿನ ಆಜ್ಞೆಗೆ ಅವರು ವಿಧೇಯರಾಗುತ್ತಾರೆ.—2 ಕೊರಿಂಥ 6:14.
ಈ ಮೂಲತತ್ವವು ಹೆಣಹೂಳುವಿಕೆಗೂ ಅನ್ವಯಿಸುತ್ತದೆ. ಸುಳ್ಳು ಧರ್ಮದ ಪಾದ್ರಿಯಿಂದ ನಿರ್ದೇಶಿಸಲ್ಪಟ್ಟ, ಹಾಡುವಿಕೆ, ಪ್ರಾರ್ಥನೆ, ಅಥವಾ ಮತಾಚರಣೆಗಳಲ್ಲಿ ಯೆಹೋವನ ಸಾಕ್ಷಿಗಳು ಭಾಗವಹಿಸುವುದಿಲ್ಲ. ಕುಟುಂಬದ ಸಮೀಪ ಸದಸ್ಯರಾಗಿರುವ ಕ್ರೈಸ್ತರು, ಅಂತಹ ಒಂದು ಸಂಸ್ಕಾರಕ್ಕೆ ಹಾಜರಾಗುವುದು ಅಗತ್ಯವೆಂದು ಪರಿಗಣಿಸಿದರೂ, ಅವರು ಅದರಲ್ಲಿ ಪಾಲ್ಗೊಳ್ಳುವುದಿಲ್ಲ.—2 ಕೊರಿಂಥ 6:17; ಪ್ರಕಟನೆ 18:4.
ಗೌರವಾನಿತ್ವ ಶವಸಂಸ್ಕಾರ
ಯೆಹೋವನ ಸಾಕ್ಷಿಗಳಿಂದ ನಡೆಸಲ್ಪಡುವ ಶವಸಂಸ್ಕಾರಗಳು, ಮೃತರನ್ನು ತೃಪ್ತಿಪಡಿಸುವ ಉದ್ದೇಶದಿಂದ ಮಾಡಲ್ಪಡುವ ವ್ರತಾಚರಣೆಗಳನ್ನು ಒಳಗೂಡುವುದಿಲ್ಲ. ರಾಜ್ಯ ಸಭಾಗೃಹದಲ್ಲಾಗಲಿ, ಶವಸಂಸ್ಕಾರ ಗೃಹದಲ್ಲಾಗಲಿ, ಮೃತರ ಮನೆಯಲ್ಲಾಗಲಿ, ಅಥವಾ ಸಮಾಧಿಯ ಪಕ್ಕದಲ್ಲಾಗಲಿ ಒಂದು ಬೈಬಲ್ ಭಾಷಣವು ಕೊಡಲ್ಪಡುತ್ತದೆ. ಈ ಭಾಷಣದ ಉದ್ದೇಶವು, ಮೃತರ ಕುರಿತು ಮತ್ತು ಪುನರುತ್ಥಾನದ ನಿರೀಕ್ಷೆಯ ಕುರಿತು ಬೈಬಲು ಏನು ಹೇಳುತ್ತದೆ ಎಂಬುದನ್ನು ವಿವರಿಸುವ ಮೂಲಕ, ವಿಯೋಗಿಗಳನ್ನು ಸಂತೈಸುವುದೇ ಆಗಿದೆ. (ಯೋಹಾನ 11:25; ರೋಮಾಪುರ 5:12; 2 ಪೇತ್ರ 3:13) ಶಾಸ್ತ್ರವಚನಗಳ ಮೇಲಾಧಾರಿತವಾದ ಒಂದು ಸಂಗೀತವು ಹಾಡಲ್ಪಡಬಹುದು, ಮತ್ತು ಈ ಸಂಸ್ಕಾರವು ಒಂದು ಸಾಂತ್ವನದಾಯಕ ಪ್ರಾರ್ಥನೆಯೊಂದಿಗೆ ಮುಕ್ತಾಯಗೊಳಿಸಲ್ಪಡಬಹುದು.
ಇತ್ತೀಚೆಗೆ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿದ್ದು, ದಕ್ಷಿಣ ಆಫ್ರಿಕದ ಅಧ್ಯಕ್ಷರಾದ ನೆಲ್ಸನ್ ಮಂಡೇಲ ಅವರ ಅತಿ ಕಿರಿಯ ತಂಗಿಯಾಗಿದ್ದವರಿಗೆ ಈ ರೀತಿಯ ಶವಸಂಸ್ಕಾರವು ನಡೆಸಲ್ಪಟ್ಟಿತು. ಈ ಸಂಸ್ಕಾರವು ಮುಗಿದ ಬಳಿಕ, ಅಧ್ಯಕ್ಷರು ಭಾಷಣಕಾರನಿಗೆ ಮನಃಪೂರ್ವಕವಾಗಿ ಉಪಕಾರ ಸಲ್ಲಿಸಿದರು. ಅನೇಕ ಗೌರವಾನಿತ್ವ ವ್ಯಕ್ತಿಗಳು ಹಾಗೂ ಉನ್ನತ ಅಧಿಕಾರಿಗಳು ಅಲ್ಲಿ ಹಾಜರಿದ್ದರು. “ನಾನು ಹಾಜರಾಗಿರುವ ಎಲ್ಲ ಶವಸಂಸ್ಕಾರಗಳಲ್ಲಿ ಇದೇ ಅತ್ಯಂತ ಗೌರವಾನಿತ್ವ ಶವಸಂಸ್ಕಾರವಾಗಿತ್ತು” ಎಂದು ಮಂತ್ರಿಮಂಡಲದ ಸದಸ್ಯರೊಬ್ಬರು ಹೇಳಿದರು.
ಶೋಕವನ್ನು ಪ್ರದರ್ಶಿಸುವ ಉಡುಪುಗಳು ಅಂಗೀಕಾರಾರ್ಹವಾಗಿವೆಯೊ?
ಯೆಹೋವನ ಸಾಕ್ಷಿಗಳು, ಪ್ರಿಯ ಜನರ ಮರಣಕ್ಕಾಗಿ ದುಃಖಿಸುತ್ತಾರೆ. ಯೇಸುವಿನಂತೆ, ಅವರು ಕಣ್ಣೀರು ಸುರಿಸಬಹುದು. (ಯೋಹಾನ 11:35, 36) ಆದರೆ ಯಾವುದೋ ಹೊರತೋರಿಕೆಯ ಮೂಲಕ ತಮ್ಮ ದುಃಖವನ್ನು ಬಹಿರಂಗವಾಗಿ ತೋರಿಸುವುದು ಅಗತ್ಯವೆಂದು ಅವರು ಎಣಿಸುವುದಿಲ್ಲ. (ಮತ್ತಾಯ 6:16-18ನ್ನು ಹೋಲಿಸಿರಿ.) ಅನೇಕ ದೇಶಗಳಲ್ಲಿ, ಮೃತರನ್ನು ತೃಪ್ತಿಪಡಿಸಲಿಕ್ಕಾಗಿ ವಿಧವೆಯರು ವಿಶೇಷವಾದ ಶೋಕಪ್ರದರ್ಶಕ ಉಡುಪುಗಳನ್ನು ಧರಿಸಿಕೊಳ್ಳುವಂತೆ ನಿರೀಕ್ಷಿಸಲಾಗುತ್ತದೆ. ಈ ಉಡುಪುಗಳನ್ನು, ಶವಸಂಸ್ಕಾರವಾದ ಬಳಿಕ ಅನೇಕ ತಿಂಗಳುಗಳ ವರೆಗೆ ಅಥವಾ ಒಂದು ವರ್ಷದ ವರೆಗೂ ಧರಿಸಿಕೊಳ್ಳಬೇಕು, ಮತ್ತು ಆ ಉಡುಪುಗಳ ಕಳಚುವಿಕೆಯು ಇನ್ನೊಂದು ಸಮಾರಂಭಕ್ಕೆ ಅವಕಾಶವನ್ನು ಒದಗಿಸುತ್ತದೆ.
ಶೋಕದ ಸಂಕೇತಗಳನ್ನು ತೋರಿಸಲು ತಪ್ಪಿಹೋಗುವುದು, ಮೃತ ವ್ಯಕ್ತಿಯ ವಿರುದ್ಧ ಒಂದು ಅಪರಾಧದೋಪಾದಿ ಪರಿಗಣಿಸಲ್ಪಡುತ್ತದೆ. ಈ ಕಾರಣದಿಂದಲೇ, ಸ್ವಾಸಿಲೆಂಡ್ನ ಕೆಲವು ಭಾಗಗಳಲ್ಲಿನ ಗೋತ್ರಗಳ ಮುಖ್ಯಸ್ಥರು, ಯೆಹೋವನ ಸಾಕ್ಷಿಗಳನ್ನು ಅವರ ಸ್ವಂತ ಮನೆಗಳಿಂದ ಹಾಗೂ ಪ್ರದೇಶಗಳಿಂದ ಓಡಿಸಿಬಿಟ್ಟಿದ್ದಾರೆ. ಹಾಗಿದ್ದರೂ, ಅಂತಹ ನಂಬಿಗಸ್ತ ಕ್ರೈಸ್ತರು ಬೇರೆ ಕಡೆಗಳಲ್ಲಿ ಜೀವಿಸುತ್ತಿರುವಂತಹ ತಮ್ಮ ಆತ್ಮಿಕ ಸಹೋದರರಿಂದ ಯಾವಾಗಲೂ ಪರಾಮರಿಸಲ್ಪಟ್ಟಿದ್ದಾರೆ.
ಯೆಹೋವನ ಸಾಕ್ಷಿಗಳು ತಮ್ಮ ಮನೆಗಳಿಗೆ ಹಾಗೂ ಪ್ರದೇಶಗಳಿಗೆ ಹಿಂದಿರುಗಲು ಅನುಮತಿಸಲ್ಪಡಬೇಕು ಎಂದು ಹೇಳುತ್ತಾ, ಸ್ವಾಸಿಲೆಂಡ್ನ ಉಚ್ಚ ನ್ಯಾಯಾಲಯವು ಅವರ ಪರವಾಗಿ ತೀರ್ಪು ನೀಡಿದೆ. ಇನ್ನೊಂದು ಮೊಕದ್ದಮೆಯಲ್ಲಿ, ಒಂದು ಪತ್ರ ಹಾಗೂ ಒಂದು ಟೇಪ್ ರೆಕಾರ್ಡಿಂಗ್ ಅನ್ನು—ಅದರಲ್ಲಿ ತನ್ನ ಪತ್ನಿಯು ಶೋಕಪ್ರದರ್ಶಕ ಉಡುಪುಗಳನ್ನು ಧರಿಸಬಾರದೆಂದು ಅವಳ ಮಾಜಿ ಪತಿಯು ಸ್ಪಷ್ಟವಾಗಿ ಹೇಳಿದ್ದನು—ಆಧಾರವಾಗಿ ಕೊಟ್ಟ ಬಳಿಕ, ಒಬ್ಬ ಕ್ರೈಸ್ತ ವಿಧವೆಯನ್ನು ತನ್ನ ಸ್ವಂತ ಆಸ್ತಿಯಲ್ಲಿಯೇ ಉಳಿಯುವಂತೆ ಅನುಮತಿಸಲಾಯಿತು. ಹೀಗೆ, ಅವಳು ನಿಜವಾಗಿಯೂ ತನ್ನ ಪತಿಗೆ ಗೌರವವನ್ನು ತೋರಿಸುವವಳಾಗಿದ್ದಳು ಎಂಬುದನ್ನು ರುಜುಪಡಿಸಲು ಅವಳು ಶಕ್ತಳಾದಳು.
ಒಬ್ಬನ ಮರಣಕ್ಕೆ ಮುಂಚೆಯೇ ಶವಸಂಸ್ಕಾರವನ್ನು ಹೀಗೆಯೇ ನಡಿಸಬೇಕೆಂದು ಸ್ಪಷ್ಟವಾಗಿ ಬರೆದಿಡುವುದು ಬಹಳ ಅಮೂಲ್ಯವಾದದ್ದಾಗಿದೆ; ವಿಶೇಷವಾಗಿ ಅಶಾಸ್ತ್ರೀಯ ರೂಢಿಗಳು ಸರ್ವಸಾಮಾನ್ಯವಾಗಿರುವ ಸ್ಥಳಗಳಲ್ಲಿ. ಕ್ಯಾಮರೂನ್ನ ಒಬ್ಬ ನಿವಾಸಿಯಾದ ವಿಕ್ಟರ್ನ ಉದಾಹರಣೆಯನ್ನು ಪರಿಗಣಿಸಿರಿ. ತನ್ನ ಶವಸಂಸ್ಕಾರದ ಸಮಯದಲ್ಲಿ ಅನುಸರಿಸಬೇಕಾಗಿದ್ದ ಕಾರ್ಯಕ್ರಮವನ್ನು ಅವನು ಲಿಖಿತ ರೂಪದಲ್ಲಿ ಒದಗಿಸಿದನು. ಅವನ ಕುಟುಂಬದಲ್ಲಿ, ಮಾನವ ತಲೆಬುರುಡೆಗಳ ಆರಾಧನೆಯನ್ನೂ ಒಳಗೊಂಡು, ಮೃತರ ಸಂಬಂಧದಲ್ಲಿ ಬಲವಾದ ಸಂಪ್ರದಾಯಗಳಿದ್ದಂತಹ ಒಂದು ಸಂಸ್ಕೃತಿಗೆ ಸೇರಿದ ಅನೇಕ ಪ್ರಭಾವಶಾಲಿ ವ್ಯಕ್ತಿಗಳಿದ್ದರು. ವಿಕ್ಟರನು ಕುಟುಂಬದ ಒಬ್ಬ ಗೌರವಯೋಗ್ಯ ಸದಸ್ಯನಾಗಿದ್ದುದರಿಂದ, ತನ್ನ ತಲೆಬುರುಡೆಯು ಸಹ ಇದೇ ರೀತಿಯಲ್ಲಿ ಆರಾಧಿಸಲ್ಪಡುವುದೆಂದು ಅವನಿಗೆ ಗೊತ್ತಿತ್ತು. ಆದುದರಿಂದ, ಯೆಹೋವನ ಸಾಕ್ಷಿಗಳು ತನ್ನ ಶವಸಂಸ್ಕಾರವನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಅವನು ಸ್ಪಷ್ಟವಾದ ಮಾಹಿತಿಯನ್ನು ಕೊಟ್ಟನು. ಇದು ಅವನ ವಿಧವೆಗೆ ಹಾಗೂ ಮಕ್ಕಳಿಗೆ ಪರಿಸ್ಥಿತಿಯನ್ನು ಹೆಚ್ಚು ಸುಲಭವಾಗಿ ಮಾಡಿತು, ಮತ್ತು ಆ ಸಮುದಾಯದಲ್ಲಿ ಒಂದು ಒಳ್ಳೆಯ ಸಾಕ್ಷಿಯು ಕೊಡಲ್ಪಟ್ಟಿತು.
ಅಶಾಸ್ತ್ರೀಯ ಪದ್ಧತಿಗಳನ್ನು ಅನುಸರಿಸುವುದನ್ನು ತೊರೆಯಿರಿ
ಬೈಬಲಿನ ಜ್ಞಾನವಿರುವ ಕೆಲವರು, ತಮ್ಮನ್ನು ಭಿನ್ನರಾಗಿ ತೋರಿಸಿಕೊಳ್ಳಲು ಭಯಪಟ್ಟಿದ್ದಾರೆ. ಹಿಂಸೆಯನ್ನು ತಡೆಯಲಿಕ್ಕಾಗಿ, ಮೃತರಿಗಾಗಿ ಜಾಗರಣೆಮಾಡುವ ಒಂದು ಸಾಂಪ್ರದಾಯಿಕ ಪದ್ಧತಿಯನ್ನು ಆಚರಿಸುವ ಸೋಗುಹಾಕಿಕೊಳ್ಳುವ ಮೂಲಕ ಅವರು ತಮ್ಮ ನೆರೆಯವರನ್ನು ಮೆಚ್ಚಿಸಲು ಪ್ರಯತ್ನಿಸಿದ್ದಾರೆ. ವಿಯೋಗಿಗಳಿಗೆ ವೈಯಕ್ತಿಕ ಸಾಂತ್ವನವನ್ನು ಒದಗಿಸಲಿಕ್ಕಾಗಿ ಅವರನ್ನು ಭೇಟಿಯಾಗುವುದು ಪ್ರಶಂಸನೀಯವಾಗಿರುವಾಗ, ನಿಜವಾದ ಶವಸಂಸ್ಕಾರಕ್ಕೆ ಮೊದಲು, ಪ್ರತಿ ರಾತ್ರಿ ಮೃತ ವ್ಯಕ್ತಿಯ ಮನೆಯಲ್ಲಿ ಒಂದು ಚಿಕ್ಕ ಶವಸಂಸ್ಕಾರ ಕ್ರಮವನ್ನು ನಡೆಸುವುದನ್ನು ಇದು ಅಗತ್ಯಪಡಿಸುವುದಿಲ್ಲ. ಹೀಗೆ ಮಾಡುವುದು ಇತರ ಪ್ರೇಕ್ಷಕರನ್ನು ಮುಗ್ಗರಿಸಬಹುದು, ಏಕೆಂದರೆ ಅದರಲ್ಲಿ ಭಾಗವಹಿಸುವವರು, ಮೃತರ ಸ್ಥಿತಿಯ ಕುರಿತಾಗಿ ಬೈಬಲು ಏನು ಹೇಳುತ್ತದೋ ಅದನ್ನು ನಿಜವಾಗಿಯೂ ನಂಬುವುದಿಲ್ಲ ಎಂಬ ಅಭಿಪ್ರಾಯವನ್ನು ಅವರಿಗೆ ಕೊಡಬಹುದು.—1 ಕೊರಿಂಥ 10:32.
ದೇವರ ಆರಾಧನೆಯನ್ನು ತಮ್ಮ ಜೀವಿತದಲ್ಲಿ ಪ್ರಥಮವಾಗಿಡುವಂತೆ ಮತ್ತು ತಮ್ಮ ಸಮಯವನ್ನು ವಿವೇಕದಿಂದ ಉಪಯೋಗಿಸುವಂತೆ ಬೈಬಲ್ ಕ್ರೈಸ್ತರಿಗೆ ಉತ್ತೇಜನ ನೀಡುತ್ತದೆ. (ಮತ್ತಾಯ 6:33; ಎಫೆಸ 5:15, 16) ಆದರೂ, ಕೆಲವು ಸ್ಥಳಗಳಲ್ಲಿ, ಶವಸಂಸ್ಕಾರದ ಕಾರಣದಿಂದ ಒಂದು ವಾರದ ವರೆಗೆ ಅಥವಾ ಅದಕ್ಕಿಂತಲೂ ಹೆಚ್ಚು ಸಮಯದ ವರೆಗೆ ಸಭಾ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಈ ಸಮಸ್ಯೆಯು ಕೇವಲ ಆಫ್ರಿಕ ದೇಶಕ್ಕೆ ಸೀಮಿತವಾಗಿರುವುದಿಲ್ಲ. ಒಂದು ಶವಸಂಸ್ಕಾರದ ಕುರಿತು ದಕ್ಷಿಣ ಅಮೆರಿಕದಿಂದ ಬಂದ ವರದಿಯೊಂದು ಹೇಳುವುದು: “ಮೂರು ಕ್ರೈಸ್ತ ಕೂಟಗಳಲ್ಲಿ ತೀರ ಕಡಿಮೆ ಹಾಜರಿಯಿತ್ತು. ಸುಮಾರು ಹತ್ತು ದಿನಗಳ ವರೆಗೆ ಕ್ಷೇತ್ರ ಸೇವಾ ಏರ್ಪಾಡಿಗೆ ಸರಿಯಾದ ಬೆಂಬಲ ದೊರೆಯಲಿಲ್ಲ. ನಮ್ಮ ಸಹೋದರ ಸಹೋದರಿಯರಲ್ಲಿ ಕೆಲವರು ಶವಸಂಸ್ಕಾರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದನ್ನು ನೋಡಿ, ಸಭೆಯ ಹೊರಗಿನ ಜನರು ಹಾಗೂ ಬೈಬಲ್ ವಿದ್ಯಾರ್ಥಿಗಳು ಸಹ ಆಶ್ಚರ್ಯಚಕಿತರಾದರು ಮತ್ತು ಬೇಸರಗೊಂಡರು.”
ಕೆಲವು ಸಮುದಾಯಗಳಲ್ಲಿ, ಶವಸಂಸ್ಕಾರದ ಬಳಿಕ ವಿಯೋಗಿತ ಕುಟುಂಬವು, ಕೆಲವೊಂದು ಆಪ್ತ ಸ್ನೇಹಿತರನ್ನು ತಮ್ಮ ಮನೆಗೆ ಲಘು ಉಪಾಹಾರಗಳಿಗಾಗಿ ಬರುವಂತೆ ಆಮಂತ್ರಿಸಬಹುದು. ಆದರೆ ಆಫ್ರಿಕದ ಅನೇಕ ಭಾಗಗಳಲ್ಲಿ, ಶವಸಂಸ್ಕಾರಕ್ಕೆ ಹಾಜರಾಗುವ ನೂರಾರು ಮಂದಿ, ಮೃತರ ಮನೆಗೆ ಬಂದು, ಅನೇಕವೇಳೆ ಪ್ರಾಣಿಯಜ್ಞವು ಅರ್ಪಿಸಲ್ಪಟ್ಟು ಮಾಡಿರುವ ಔತಣವನ್ನು ನಿರೀಕ್ಷಿಸುತ್ತಾರೆ. ಕ್ರೈಸ್ತ ಸಭೆಯೊಂದಿಗೆ ಸಹವಾಸಿಸುವ ಕೆಲವರು, ಈ ಪದ್ಧತಿಯನ್ನು ಅನುಕರಿಸಿ, ಮೃತರನ್ನು ತೃಪ್ತಿಪಡಿಸಲಿಕ್ಕಾಗಿರುವ ಸಂಪ್ರದಾಯಬದ್ಧ ಸಮಾರಂಭಗಳನ್ನು ತಾವು ನಡೆಸುತ್ತಿದ್ದೇವೆ ಎಂಬ ಅಭಿಪ್ರಾಯವನ್ನು ಕೊಟ್ಟಿದ್ದಾರೆ.
ಯೆಹೋವನ ಸಾಕ್ಷಿಗಳಿಂದ ನಡೆಸಲ್ಪಡುವ ಶವಸಂಸ್ಕಾರಗಳು, ವಿಯೋಗಿಗಳ ಮೇಲೆ ದುಬಾರಿಯಾದ ಹೊರೆಯನ್ನು ಹೊರಿಸುವುದಿಲ್ಲ. ಆದುದರಿಂದ ಧಾರಾಳವಾಗಿ ಹಣ ಖರ್ಚುಮಾಡುವ ಶವಸಂಸ್ಕಾರ ವೆಚ್ಚಗಳಿಗಾಗಿ, ಹಾಜರಿರುವವರು ಹಣವನ್ನು ಕೊಡುವಂತೆ ಒಂದು ವಿಶೇಷವಾದ ಏರ್ಪಾಡನ್ನು ಮಾಡುವ ಅಗತ್ಯವಿರಬಾರದು. ಬಡ ವಿಧವೆಯರು ಅಗತ್ಯವಾದ ವೆಚ್ಚಗಳನ್ನು ಪೂರೈಸಲು ಅಸಮರ್ಥರಾಗಿರುವಲ್ಲಿ, ಸಭೆಯಲ್ಲಿರುವ ಇತರರು ಸಹಾಯ ಮಾಡಲು ಹರ್ಷಚಿತ್ತರಾಗಿರುವರು ಎಂಬುದರಲ್ಲಿ ಸಂಶಯವೇ ಇಲ್ಲ. ಅಂತಹ ಸಹಾಯವು ಸಾಕಾಗದಿದ್ದಲ್ಲಿ, ಹಿರಿಯರು ಯೋಗ್ಯರಾದ ವ್ಯಕ್ತಿಗಳಿಗೆ ಭೌತಿಕ ನೆರವನ್ನು ಒದಗಿಸುವಂತೆ ಏರ್ಪಾಡನ್ನು ಮಾಡಬಹುದು.—1 ತಿಮೊಥೆಯ 5:3, 4.
ಶವಸಂಸ್ಕಾರದ ಪದ್ಧತಿಗಳು ಯಾವಾಗಲೂ ಬೈಬಲ್ ಮೂಲತತ್ವಗಳೊಂದಿಗೆ ಸಂಘರ್ಷಿಸುವುದಿಲ್ಲ. ಅವುಗಳು ಸಂಘರ್ಷಿಸುವಾಗ, ಕ್ರೈಸ್ತರು ಶಾಸ್ತ್ರವಚನಗಳಿಗೆ ಹೊಂದಿಕೆಯಲ್ಲಿ ಕ್ರಿಯೆಗೈಯಲು ನಿರ್ಧರಿಸುತ್ತಾರೆ.c (ಅ. ಕೃತ್ಯಗಳು 5:29) ಇದು ಇನ್ನೂ ಹೆಚ್ಚಿನ ಸಂಕಟವನ್ನು ತರಬಹುದಾದರೂ, ತಾವು ಅಂತಹ ಪರೀಕ್ಷೆಗಳನ್ನು ಯಶಸ್ವಿಕರವಾಗಿ ನಿಭಾಯಿಸಿದ್ದೇವೆ ಎಂಬುದಕ್ಕೆ, ಅನೇಕ ದೇವರ ಸೇವಕರು ರುಜುವಾತು ನೀಡಬಲ್ಲರು. “ಸಕಲವಿಧವಾಗಿ ಸಂತೈಸುವ ದೇವ”ರಾದ ಯೆಹೋವನಿಂದ ಬರುವ ಬಲದಿಂದ ಮತ್ತು ತಮ್ಮ ಸಂಕಟದ ಸಮಯದಲ್ಲಿ ತಮ್ಮನ್ನು ಸಂತೈಸಿರುವ ಜೊತೆ ವಿಶ್ವಾಸಿಗಳ ಪ್ರೀತಿಪೂರ್ಣ ಸಹಾಯದಿಂದ ಅವರು ಹಾಗೆ ಮಾಡಿದ್ದಾರೆ.—2 ಕೊರಿಂಥ 1:3, 4.
[ಅಧ್ಯಯನ ಪ್ರಶ್ನೆಗಳು]
a ಲೇಖನದಲ್ಲಿ ಬದಲಿ ಹೆಸರುಗಳು ಉಪಯೋಗಿಸಲ್ಪಟ್ಟಿವೆ.
b ಕೆಲವು ಭಾಷಾ ಗುಂಪುಗಳು ಮತ್ತು ಸಂಸ್ಕೃತಿಗಳಲ್ಲಿ, “ಜಾಗರಣೆಮಾಡುವುದು” ಎಂಬ ಶಬ್ದವು, ವಿಯೋಗಿಗಳಿಗೆ ಸಾಂತ್ವನ ನೀಡಲಿಕ್ಕಾಗಿ ಅವರನ್ನು ಸಂಕ್ಷಿಪ್ತವಾಗಿ ಭೇಟಿಮಾಡುವುದಕ್ಕೆ ಅನ್ವಯವಾಗುತ್ತದೆ. ಇದರಲ್ಲಿ ಅಶಾಸ್ತ್ರೀಯವಾದ ಯಾವುದೇ ವಿಚಾರವು ಒಳಗೂಡಿರಲಿಕ್ಕಿಲ್ಲ. ಮೇ 22, 1979ರ ಅವೇಕ್! ಪತ್ರಿಕೆಯ 27-8ನೆಯ ಪುಟಗಳನ್ನು ನೋಡಿರಿ.
c ಶವಸಂಸ್ಕಾರಗಳು ಕ್ರೈಸ್ತನೊಬ್ಬನ ಮೇಲೆ ಗಂಭೀರವಾದ ಪರೀಕ್ಷೆಗಳನ್ನು ತಂದೊಡ್ಡುವ ಸಂಭವವಿರುವಾಗ, ಮುಂದೆ ಕಾದಿರಬಹುದಾದ ವಿಷಯಕ್ಕಾಗಿ ಹಿರಿಯರು ದೀಕ್ಷಾಸ್ನಾನದ ಅಭ್ಯರ್ಥಿಗಳನ್ನು ಸಿದ್ಧಪಡಿಸಸಾಧ್ಯವಿದೆ. ಈ ಹೊಸಬರೊಂದಿಗೆ ನಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು ಎಂಬ ಪುಸ್ತಕದಿಂದ ಪ್ರಶ್ನೆಗಳನ್ನು ಚರ್ಚಿಸಲಿಕ್ಕಾಗಿ ಕೂಡಿಬರುವಾಗ, “ಪ್ರಾಣ, ಪಾಪ ಮತ್ತು ಮರಣ” ಹಾಗೂ “ಮಧ್ಯನಂಬಿಕೆ” ಎಂಬ ವಿಭಾಗಗಳಿಗೆ ಜಾಗರೂಕವಾದ ಗಮನವು ಕೊಡಲ್ಪಡಬೇಕು. ಇವೆರಡನ್ನೂ ಚರ್ಚಿಸಲಿಕ್ಕಾಗಿ ಐಚ್ಛಿಕ ಪ್ರಶ್ನೆಗಳು ಇವೆ. ಅಶಾಸ್ತ್ರೀಯವಾದ ಶವಸಂಸ್ಕಾರಗಳಂತಹ ಸನ್ನಿವೇಶಗಳನ್ನು ಎದುರಿಸಬೇಕಾಗಿ ಬಂದಾಗ, ದೇವರ ವಾಕ್ಯವು ತನ್ನಿಂದ ಏನನ್ನು ಅಪೇಕ್ಷಿಸುತ್ತದೆ ಎಂಬುದನ್ನು ಆ ದೀಕ್ಷಾಸ್ನಾನದ ಅಭ್ಯರ್ಥಿಯು ತಿಳಿದುಕೊಳ್ಳಸಾಧ್ಯವಾಗುವಂತೆ, ಈ ಸಮಯದಲ್ಲೇ ಹಿರಿಯರು ಅದರ ಕುರಿತಾದ ಮಾಹಿತಿಯನ್ನು ಒದಗಿಸಬಲ್ಲರು.
[ಪುಟ 23 ರಲ್ಲಿರುವ ಚೌಕ]
ತಮ್ಮ ದೃಢವಾದ ನಿಲುವಿಗಾಗಿ ಆಶೀರ್ವದಿಸಲ್ಪಟ್ಟವರು
ಸೀಬೊಂಗಿಲಿಯು, ಸ್ವಾಸಿಲೆಂಡ್ನಲ್ಲಿ ವಾಸಿಸುತ್ತಿರುವ ಒಬ್ಬ ಧೈರ್ಯವಂತ ಕ್ರೈಸ್ತ ವಿಧವೆಯಾಗಿದ್ದಾಳೆ. ಇತ್ತೀಚೆಗೆ ಅವಳ ಪತಿಯು ಮರಣಪಟ್ಟ ಬಳಿಕ, ಮೃತರನ್ನು ತೃಪ್ತಿಪಡಿಸುತ್ತವೆಂದು ಅನೇಕರಿಂದ ಅಭಿಪ್ರಯಿಸಲ್ಪಟ್ಟ ಪದ್ಧತಿಗಳನ್ನು ಅನುಸರಿಸಲು ಅವಳು ನಿರಾಕರಿಸಿದಳು. ಉದಾಹರಣೆಗಾಗಿ, ಅವಳು ತನ್ನ ತಲೆಯನ್ನು ಬೋಳಿಸಿಕೊಳ್ಳಲಿಲ್ಲ. (ಧರ್ಮೋಪದೇಶಕಾಂಡ 14:1) ಈ ವಿಷಯದಲ್ಲಿ ಅವಳ ಕುಟುಂಬದ ಎಂಟು ಮಂದಿ ಸದಸ್ಯರು ಕೋಪಗೊಂಡು, ಒತ್ತಾಯದಿಂದ ಅವಳ ತಲೆಯನ್ನು ಬೋಳಿಸಿದರು. ಸೀಬೊಂಗಿಲಿಗೆ ಸಾಂತ್ವನವನ್ನು ನೀಡಲಿಕ್ಕಾಗಿ ಅವಳ ಮನೆಗೆ ಯೆಹೋವನ ಸಾಕ್ಷಿಗಳು ಭೇಟಿ ನೀಡುವುದನ್ನು ಕೂಡ ಅವರು ತಡೆದರು. ಆದರೂ, ರಾಜ್ಯ ಸಂದೇಶದಲ್ಲಿ ಆಸಕ್ತರಾಗಿದ್ದ ಇತರ ವ್ಯಕ್ತಿಗಳು, ಹಿರಿಯರಿಂದ ಬರೆಯಲ್ಪಟ್ಟ ಉತ್ತೇಜನದಾಯಕ ಪತ್ರಗಳೊಂದಿಗೆ ಅವಳನ್ನು ಸಂದರ್ಶಿಸಲು ಸಂತೋಷಪಟ್ಟರು. ಸೀಬೊಂಗಿಲಿಯು ವಿಶೇಷವಾದ ಶೋಕಪ್ರದರ್ಶಕ ಉಡುಪುಗಳನ್ನು ಧರಿಸುವಂತೆ ನಿರೀಕ್ಷಿಸಲಾಗಿದ್ದ ದಿನದಂದು, ಆಶ್ಚರ್ಯಕರವಾದ ಸಂಗತಿಯು ನಡೆಯಿತು. ಕುಟುಂಬದ ಪ್ರಭಾವಶಾಲಿ ಸದಸ್ಯನೊಬ್ಬನು, ಸಾಂಪ್ರದಾಯಿಕವಾದ ಶೋಕಪ್ರದರ್ಶಕ ಪದ್ಧತಿಗಳನ್ನು ಅವಳು ಏಕೆ ನಿರಾಕರಿಸುತ್ತಿದ್ದಾಳೆ ಎಂಬುದನ್ನು ಚರ್ಚಿಸಲಿಕ್ಕಾಗಿ ಒಂದು ಕೂಟವನ್ನು ನಡೆಸಿದನು.
ಸೀಬೊಂಗಿಲಿ ವರದಿಸುವುದು: “ನನ್ನ ಧಾರ್ಮಿಕ ನಿಶ್ಚಿತಾಭಿಪ್ರಾಯಗಳು, ಶೋಕಪ್ರದರ್ಶಕವಾದ ಕಪ್ಪು ವಸ್ತ್ರಗಳನ್ನು ಧರಿಸುವ ಮೂಲಕ ದುಃಖವನ್ನು ವ್ಯಕ್ತಪಡಿಸಲು ಅನುಮತಿ ನೀಡುತ್ತವೋ ಎಂದು ಅವರು ನನ್ನನ್ನು ಕೇಳಿದರು. ನಾನು ನನ್ನ ನಿಲುವನ್ನು ವಿವರಿಸಿದ ಬಳಿಕ, ನಾವು ನಿನಗೆ ಒತ್ತಾಯಮಾಡುವುದಿಲ್ಲವೆಂದು ಅವರು ನನಗೆ ಹೇಳಿದರು. ನನ್ನ ಆಶ್ಚರ್ಯಕ್ಕೆ, ನನ್ನೊಟ್ಟಿಗೆ ಒರಟಾಗಿ ನಡೆದುಕೊಂಡದ್ದಕ್ಕಾಗಿ ಮತ್ತು ನನ್ನ ಇಷ್ಟಕ್ಕೆ ವಿರುದ್ಧವಾಗಿ ನನ್ನ ತಲೆಯನ್ನು ಬೋಳಿಸಿದ್ದಕ್ಕಾಗಿ ಅವರೆಲ್ಲರೂ ನನ್ನಲ್ಲಿ ಕ್ಷಮೆಯಾಚಿಸಿದರು. ತಮ್ಮನ್ನು ಕ್ಷಮಿಸಲು ಅವರೆಲ್ಲರೂ ನನ್ನ ಬಳಿ ವಿನಂತಿಸಿಕೊಂಡರು.” ತದನಂತರ, ಯೆಹೋವನ ಸಾಕ್ಷಿಗಳ ಬಳಿ ಸತ್ಯ ಧರ್ಮವಿದೆ ಎಂದು ಸೀಬೊಂಗಿಲಿಯ ತಂಗಿಯು ತನ್ನ ನಿಶ್ಚಿತಾಭಿಪ್ರಾಯವನ್ನು ವ್ಯಕ್ತಪಡಿಸಿದಳು, ಮತ್ತು ಅವಳು ಒಂದು ಬೈಬಲ್ ಅಭ್ಯಾಸಕ್ಕಾಗಿ ಕೇಳಿಕೊಂಡಳು.
ಇನ್ನೊಂದು ಉದಾಹರಣೆಯನ್ನು ಪರಿಗಣಿಸಿರಿ: ದಕ್ಷಿಣ ಆಫ್ರಿಕದ ಬೆಂಜಮಿನ್ ಎಂಬ ಹೆಸರಿನ ಒಬ್ಬ ವ್ಯಕ್ತಿಯು, ತನ್ನ ತಂದೆಯ ಅನಿರೀಕ್ಷಿತ ಮರಣದ ಕುರಿತು ಕೇಳಿಸಿಕೊಂಡಾಗ, 29 ವರ್ಷ ವಯಸ್ಸಿನವನಾಗಿದ್ದನು. ಆ ಸಮಯದಲ್ಲಿ ಬೆಂಜಮಿನ್ ತನ್ನ ಕುಟುಂಬದಲ್ಲಿದ್ದ ಏಕಮಾತ್ರ ಸಾಕ್ಷಿಯಾಗಿದ್ದನು. ಹೆಣಹೂಳುವಿಕೆಯ ಸಮಯದಲ್ಲಿ, ಸಮಾಧಿಯ ಬಳಿ ಪ್ರತಿಯೊಬ್ಬರೂ ಸಾಲಾಗಿ ಹೋಗಿ, ಶವಪೆಟ್ಟಿಗೆಯ ಮೇಲೆ ಒಂದು ಹಿಡಿ ಮಣ್ಣನ್ನು ಎಸೆಯುವಂತೆ ಅಪೇಕ್ಷಿಸಲಾಗಿತ್ತು.d ಹೆಣವನ್ನು ಹೂತ ಬಳಿಕ, ಕುಟುಂಬದ ಸಂಬಂಧಿಕ ಸದಸ್ಯರೆಲ್ಲರೂ ತಮ್ಮ ತಲೆಗಳನ್ನು ಬೋಳಿಸಿಕೊಂಡರು. ಈ ಮತಾಚರಣೆಗಳಲ್ಲಿ ಬೆಂಜಮಿನ್ ಪಾಲ್ಗೊಳ್ಳದಿದ್ದ ಕಾರಣ, ತನ್ನ ಮೃತ ತಂದೆಯ ಆತ್ಮದಿಂದ ಅವನು ದಂಡಿಸಲ್ಪಡುವನು ಎಂದು ನೆರೆಹೊರೆಯವರು ಹಾಗೂ ಕುಟುಂಬದ ಸದಸ್ಯರು ಮುನ್ನುಡಿದರು.
“ನನ್ನ ಭರವಸೆಯನ್ನು ನಾನು ಯೆಹೋವನ ಮೇಲೆ ಇಟ್ಟದ್ದರಿಂದ, ನನಗೆ ಏನೂ ಆಗಲಿಲ್ಲ” ಎಂದು ಬೆಂಜಮಿನ್ ಹೇಳುತ್ತಾನೆ. ಅವನಿಗೆ ದಂಡನೆಯು ನೀಡಲ್ಪಡಲಿಲ್ಲ ಎಂಬುದನ್ನು ಕುಟುಂಬದ ಸದಸ್ಯರು ಗಮನಿಸಿದರು. ಸಕಾಲದಲ್ಲಿ, ಅವರಲ್ಲಿ ಅನೇಕರು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದರು ಮತ್ತು ದೇವರಿಗೆ ತಮ್ಮ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನವನ್ನು ಪಡೆದುಕೊಂಡರು. ಬೆಂಜಮಿನ್ನ ಕುರಿತೇನು? ಅವನು ಪೂರ್ಣಸಮಯದ ಸೌವಾರ್ತಿಕ ಕೆಲಸವನ್ನು ಪ್ರವೇಶಿಸಿದನು. ಕಳೆದ ಕೆಲವು ವರ್ಷಗಳಿಂದ, ಒಬ್ಬ ಸಂಚಾರ ಮೇಲ್ವಿಚಾರಕನೋಪಾದಿ ಯೆಹೋವನ ಸಾಕ್ಷಿಗಳ ಸಭೆಗಳನ್ನು ಸಂದರ್ಶಿಸುವ ಅತ್ಯುತ್ತಮವಾದ ಸುಯೋಗವು ಅವನಿಗೆ ದೊರೆತಿದೆ.
[ಪಾದಟಿಪ್ಪಣಿ]
d ಸಮಾಧಿಯೊಳಗೆ ಹೂವುಗಳನ್ನು ಅಥವಾ ಒಂದು ಹಿಡಿ ಮಣ್ಣನ್ನು ಎಸೆಯುವುದರಲ್ಲಿ ಏನೂ ತಪ್ಪಿಲ್ಲ ಎಂದು ಕೆಲವರು ಹೇಳಬಹುದು. ಆದರೂ, ಸಮುದಾಯವು ಈ ಪದ್ಧತಿಯನ್ನು ಮೃತರನ್ನು ತೃಪ್ತಿಪಡಿಸುವ ಒಂದು ವಿಧವಾಗಿ ಪರಿಗಣಿಸುವುದಾದರೆ, ಅಥವಾ ಸುಳ್ಳು ಧರ್ಮದ ಪಾದ್ರಿಯೊಬ್ಬನ ಮೇಲ್ವಿಚಾರಣೆಯ ಕೆಳಗೆ ನಡೆಸಲ್ಪಟ್ಟ ಒಂದು ವ್ರತಾಚರಣೆಯ ಒಂದು ಭಾಗದೋಪಾದಿ ಇದು ಇರುವುದಾದರೆ, ಕ್ರೈಸ್ತನೊಬ್ಬನು ಅದನ್ನು ತೊರೆಯುವನು.—ಮಾರ್ಚ್ 22, 1977ರ ಅವೇಕ್! ಪತ್ರಿಕೆಯ 15ನೆಯ ಪುಟವನ್ನು ನೋಡಿರಿ.