ಬೈಬಲಿನ ದೃಷ್ಟಿಕೋನ
ಮೃತರಿಗೆ ಗೌರವ ಸಲ್ಲಿಸಬೇಕೊ?
“ಆಳವಾಗಿ ಬೇರೂರಿರುವ ಭಾವನೆಯು, ಅಧಿಕಾಂಶ ಜನರು ಮೃತ ಮಾನವ ದೇಹವನ್ನು ತುಂಬ ಗೌರವದಿಂದ ಕಾಣುವಂತೆ ಮಾಡುತ್ತದೆ, ಆದರೆ ಮೃತ ಪ್ರಾಣಿಯ ಕಡೆಗೆ ಈ ಭಾವನೆಯು ತೋರಿಸಲ್ಪಡುವುದಿಲ್ಲ.”—ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ.
ಒಂದಲ್ಲ ಒಂದು ರೀತಿಯಲ್ಲಿ ಅಧಿಕಾಂಶ ಜನರು ತಮ್ಮ ಮೃತ ಪ್ರಿಯ ವ್ಯಕ್ತಿಗಳಿಗೆ ಗೌರವ ಸಲ್ಲಿಸುತ್ತಾರೆ. ವಾರ್ತಾಪತ್ರಿಕೆಗಳಲ್ಲಿ ಶ್ರದ್ಧಾಂಜಲಿ ಪ್ರಕಟನೆಗಳನ್ನು ಕೊಡುವ ಮೂಲಕ ಮೃತರಿಗೆ ಗೌರವ ತೋರಿಸಲಾಗುತ್ತದೆ, ಮತ್ತು ಗುಣಗಾನಮಾಡಲಾಗುತ್ತದೆ. ಕೆಲವು ದೇಶಗಳಲ್ಲಿ, ಧಾರ್ಮಿಕ ಹಾಗೂ ಸಾಂಪ್ರದಾಯಿಕ ಸಂಸ್ಕಾರಗಳನ್ನು ಒಳಗೊಂಡ ವಿಜೃಂಭಣೆಯ ಶವಸಂಸ್ಕಾರಗಳು ಸರ್ವಸಾಮಾನ್ಯವಾಗಿವೆ. ಮೃತರಿಗಾಗಿರುವ ಸಮಾರಂಭಗಳು ಅನೇಕ ದಿನಗಳು, ವಾರಗಳು ಹಾಗೂ ತಿಂಗಳುಗಳ ವರೆಗೆ ನಡೆಯಬಲ್ಲವು. ಮೃತಪಟ್ಟಿರುವ ಪ್ರಸಿದ್ಧ ಜನರ ನಾಮಾರ್ಥವಾಗಿ, ಶಾಲೆಗಳು, ವಿಮಾನ ನಿಲ್ದಾಣಗಳು, ಬೀದಿಗಳು, ಹಾಗೂ ಪಟ್ಟಣಗಳು ಕಟ್ಟಲ್ಪಟ್ಟಿವೆ. ಗಣ್ಯ ಪುರುಷರ ಸ್ಮರಣಾರ್ಥವಾಗಿ ಸ್ಮಾರಕಗಳು ಸ್ಥಾಪಿಸಲ್ಪಟ್ಟಿವೆ ಮತ್ತು ರಜಾದಿನಗಳು ಜಾರಿಗೆ ಬಂದಿವೆ.
ಆದರೆ, ದೇವರ ವಾಕ್ಯಕ್ಕನುಸಾರವಾಗಿ, ಮೃತರಿಗೆ ಯಾವುದೇ ಗೌರವ ತೋರಿಸಿದರೂ ಅದರ ಅರಿವು ಅವರಿಗೆ ಇರುವುದಿಲ್ಲ. (ಯೋಬ 14:10, 21; ಕೀರ್ತನೆ 49:17) ಮೃತ ವ್ಯಕ್ತಿಗಳು, ಯಾರು ಅವರನ್ನು ಜ್ಞಾಪಿಸಿಕೊಳ್ಳುತ್ತಾರೋ ಅವರ ಸ್ಮರಣೆಯಲ್ಲಿ ಮಾತ್ರ ಉಳಿದಿದ್ದಾರೆ. ಬೈಬಲು ಹೇಳುವುದು: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.” (ಪ್ರಸಂಗಿ 9:5) ಶಾಸ್ತ್ರವಚನಗಳು, ಭವಿಷ್ಯತ್ತಿನಲ್ಲಿ ಸಂಭವಿಸಲಿರುವ ಪುನರುತ್ಥಾನದ ನಿರೀಕ್ಷೆಯನ್ನು ಕೊಡುತ್ತವೆ. (ಯೋಹಾನ 5:28, 29; 11:25) ಆದರೆ ಆ ಸಮಯವು ಬರುವ ತನಕ, ಮೃತರು ಅಸ್ತಿತ್ವದಲ್ಲಿರುವುದಿಲ್ಲ. ಅಕ್ಷರಾರ್ಥಕವಾಗಿ ಅವರು ಮಣ್ಣಾಗುತ್ತಾರೆ.—ಆದಿಕಾಂಡ 3:19; ಯೋಬ 34:15.
ಮೃತರ ಸ್ಥಿತಿಯ ಕುರಿತಾದ ಬೈಬಲಿನ ಸ್ಪಷ್ಟವಾದ ನಿಲುವಿನ ದೃಷ್ಟಿಕೋನದಲ್ಲಿ, ಮೃತರಿಗೆ ಗೌರವವನ್ನು ಸಲ್ಲಿಸುವುದು ಯಾವುದಾದರೂ ಉದ್ದೇಶವನ್ನು ಪೂರೈಸುತ್ತದೊ? ಮೃತ ಪ್ರಿಯ ಜನರ ಶವಸಂಸ್ಕಾರಗಳು ಹಾಗೂ ಹೂಳುವಿಕೆಗೆ ಸಂಬಂಧಿಸಿದ ಸಾಂಪ್ರದಾಯಿಕ ರೀತಿನೀತಿಗಳನ್ನು ಕ್ರೈಸ್ತರು ಅನುಸರಿಸಬೇಕೊ?
ಸುಳ್ಳು ವಿಚಾರಗಳ ಮೇಲಾಧಾರಿತವಾದ ಮತಸಂಸ್ಕಾರಗಳು
ಮೃತರಿಗೆ ಸಂಬಂಧಿಸಿದ ಅಧಿಕಾಂಶ ಸಾಂಪ್ರದಾಯಿಕ ಮತಸಂಸ್ಕಾರಗಳು, ಬೈಬಲೇತರ ಧಾರ್ಮಿಕ ಬೋಧನೆಗಳಲ್ಲಿ ಆಳವಾಗಿ ಬೇರೂರಿದವುಗಳಾಗಿವೆ. ಕೆಲವು ಮತಾಚರಣೆಗಳು ಏಕೆ ಮಾಡಲ್ಪಡುತ್ತವೆಂದರೆ “ಮೃತ ವ್ಯಕ್ತಿಯನ್ನು ಪೈಶಾಚಿಕ ಆಕ್ರಮಣದಿಂದ ತಪ್ಪಿಸಲಿಕ್ಕಾಗಿಯೇ; ಕೆಲವೊಮ್ಮೆ ಮತಾಚರಣೆಗಳನ್ನು ನಡೆಸುವ ಉದ್ದೇಶವು, ಬದುಕಿರುವ ಜನರನ್ನು ಮೃತರ ಸಂಪರ್ಕದಿಂದ ದೂರವಿರಿಸುವುದು ಅಥವಾ ಮೃತರ ಪೀಡನೆಯಿಂದ ಸಂರಕ್ಷಿಸುವುದೇ ಆಗಿರುತ್ತದೆ” ಎಂದು ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುತ್ತದೆ. ಮೃತರು ಒಂದು ಅಗೋಚರ ಸಾಮ್ರಾಜ್ಯದಲ್ಲಿ ಜೀವಿಸುತ್ತಾ ಇರುತ್ತಾರೆ ಎಂಬ ಸುಳ್ಳು ವಿಚಾರಗಳ ಮೇಲಾಧಾರಿತವಾದ ಅಂತಹ ಯಾವುದೇ ಪದ್ಧತಿಯು, ಬೈಬಲ್ ಸತ್ಯತೆಗಳಿಗೆ ವಿರುದ್ಧವಾಗಿದೆ.—ಪ್ರಸಂಗಿ 9:10.
ಅನೇಕರು ಮೃತ ವ್ಯಕ್ತಿಗಳನ್ನು ಪೂಜ್ಯಭಾವದಿಂದ ಕಾಣುತ್ತಾರೆ. ಮೃತ ಪೂರ್ವಜರಿಗೆ ಯಜ್ಞಗಳನ್ನು ಅರ್ಪಿಸುವುದು ಹಾಗೂ ಪ್ರಾರ್ಥಿಸುವುದು ಸಹ ಇಂತಹ ಆರಾಧನೆಯಲ್ಲಿ ಒಳಗೂಡಿದೆ. ಇಂತಹ ಮತಸಂಸ್ಕಾರಗಳಲ್ಲಿ ಒಳಗೂಡುವ ಕೆಲವರು, ತಮ್ಮ ಕೃತ್ಯಗಳನ್ನು ಆರಾಧನೆಯಾಗಿ ಪರಿಗಣಿಸುವುದಿಲ್ಲ, ಅವು ಪೂಜ್ಯಭಾವದ ಅಭಿವ್ಯಕ್ತಿಗಳು ಅಥವಾ ಮೃತರಿಗಾಗಿರುವ ಆಳವಾದ ಗೌರವವನ್ನು ತೋರಿಸುವ ವಿಧಗಳು ಎಂದು ಪರಿಗಣಿಸುತ್ತಾರೆ. ಆದರೂ, ಮೃತ ಪೂರ್ವಜರಿಗೆ ಸಲ್ಲಿಸಲ್ಪಡುವ ಈ ರೀತಿಯ ಭಕ್ತಿಯು ಧಾರ್ಮಿಕ ಆಧಾರವನ್ನು ಹೊಂದಿದ್ದು, ಬೈಬಲ್ ಬೋಧನೆಗಳಿಗೆ ತದ್ವಿರುದ್ಧವಾಗಿದೆ. ಯೇಸು ಕ್ರಿಸ್ತನು ಹೇಳಿದ್ದು: “ನಿನ್ನ ದೇವರಾಗಿರುವ ಯೆಹೋವನಿಗೆ ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು.”—ಲೂಕ 4:8.
ಒಂದು ಸಮತೂಕದ ದೃಷ್ಟಿಕೋನ
ಮೃತರಿಗೆ ಮಾನಸಲ್ಲಿಸುವುದು ಹಾಗೂ ಗೌರವವನ್ನು ತೋರಿಸುವುದು, ಯಾವಾಗಲೂ ಸುಳ್ಳು ಧಾರ್ಮಿಕ ಬೋಧನೆಗಳೊಂದಿಗೆ ಜೊತೆಗೂಡಿದ್ದಾಗಿಲ್ಲ. ಉದಾಹರಣೆಗಾಗಿ, ನಂಬಿಗಸ್ತ ರಾಜನಾದ ಹಿಜ್ಕೀಯನ ಮರಣಾನಂತರ, ಅವನಿಗೆ ಯಾವ ರೀತಿಯಲ್ಲಿ ಗೌರವ ಸಲ್ಲಿಸಲಾಯಿತು ಎಂಬುದನ್ನು ಒಂದು ಬೈಬಲ್ ವೃತ್ತಾಂತವು ತಿಳಿಸುತ್ತದೆ. ದೇವಜನರು “ಅವನ ಶವವನ್ನು ದಾವೀದವಂಶದವರ ಕುಟುಂಬಶ್ಮಶಾನಭೂಮಿಯ ದಿಬ್ಬದ ಮೇಲೆ ಸಮಾಧಿಮಾಡಿದರು. ಅವನ ಉತ್ತರಕ್ರಿಯೆ ನಡೆಯುವಾಗ ಎಲ್ಲಾ ಯೆಹೂದ್ಯರೂ ಯೆರೂಸಲೇಮಿನವರೂ ಅವನನ್ನು ಬಹಳವಾಗಿ ಸನ್ಮಾನಿಸಿದರು.” (2 ಪೂರ್ವಕಾಲವೃತ್ತಾಂತ 32:33) ಇನ್ನೊಂದು ಉದಾಹರಣೆಯು ಯೇಸುವಿನದ್ದಾಗಿದೆ. ಅವನ ಶಿಷ್ಯರು “ಯೇಸುವಿನ ದೇಹವನ್ನು ತಕ್ಕೊಂಡು ಯೆಹೂದ್ಯರಲ್ಲಿ ಹೂಣಿಡುವ ಪದ್ಧತಿಯ ಪ್ರಕಾರ ಅದನ್ನು ಆ ಸುಗಂಧದ್ರವ್ಯಗಳ ಸಹಿತವಾಗಿ ನಾರುಬಟ್ಟೆಯಲ್ಲಿ ಸುತ್ತಿದರು” ಎಂದು ಬೈಬಲ್ ಹೇಳುತ್ತದೆ.—ಯೋಹಾನ 19:40.
ಮೃತರ ದೇಹ ಹಾಗೂ ಹೂಣಿಡುವ ಪದ್ಧತಿಗೆ ಸಂಬಂಧಿಸಿದ ಅನೇಕ ವಿಶೇಷ ಕಾರ್ಯವಿಧಾನಗಳನ್ನು ಅನುಸರಿಸಲಾಗಿತ್ತು ಎಂಬುದರ ಕುರಿತು ಶಾಸ್ತ್ರವಚನಗಳಲ್ಲಿ ಅನೇಕ ಉದಾಹರಣೆಗಳಿವೆ. ಈ ಪದ್ಧತಿಗಳು ಪೂರ್ವಜರ ಆರಾಧನೆಗಳಾಗಿರಲಿಲ್ಲ, ಅಥವಾ ಬದುಕಿರುವವರ ಜೀವಿತದ ಮೇಲೆ ಮೃತರು ಪ್ರಭಾವ ಬೀರುತ್ತಾರೆ ಎಂಬ ತಪ್ಪಾದ ನಂಬಿಕೆಯ ಮೇಲೆ ಆಧಾರಿತವಾಗಿರಲಿಲ್ಲ. ಬದಲಾಗಿ, ದುಃಖಿತರು ತಮ್ಮ ಮೃತ ಪ್ರಿಯ ಜನರಿಗಾಗಿ ಆಳವಾದ ಗೌರವವನ್ನು ತೋರಿಸಿದರು. ಅಂತಹ ಗೌರವವನ್ನು ಬೈಬಲು ಆಕ್ಷೇಪಿಸುವುದಿಲ್ಲ, ಏಕೆಂದರೆ ಇದು ಮಾನವರ ಸಹಜ ಭಾವನೆಗಳ ಮೇಲೆ ಆಧಾರಿತವಾಗಿದೆ. ಆದರೂ ಬಹಳ ದುಂದುವೆಚ್ಚದ ಅಥವಾ ಅತ್ಯುದ್ರೇಕದ ಶವಸಂಸ್ಕಾರ ಪ್ರದರ್ಶನವನ್ನು ಬೈಬಲು ಸಮ್ಮತಿಸುವುದಿಲ್ಲ. ಇನ್ನೊಂದು ಕಡೆಯಲ್ಲಿ, ಒಬ್ಬ ಪ್ರಿಯ ವ್ಯಕ್ತಿಯ ಮರಣವು ಸಂಭವಿಸುವಾಗ, ಉದಾಸೀನ ಭಾವದವರಾಗಿರುವಂತೆ ಹಾಗೂ ಭಾವಶೂನ್ಯರಾಗಿರುವಂತೆ ಅದು ಕ್ರೈಸ್ತರನ್ನು ಉತ್ತೇಜಿಸುವುದಿಲ್ಲ.
ಆದುದರಿಂದ, ಯೆಹೋವನ ಸಾಕ್ಷಿಗಳು ತಮ್ಮ ಪ್ರಿಯ ಜನರ ಶವಸಂಸ್ಕಾರ ಅಥವಾ ಹೂಣಿಡುವಿಕೆಗೆ ಹಾಜರಾಗುವಾಗ, ಮೃತರಿಗೆ ಯೋಗ್ಯವಾದ ಗೌರವ ಹಾಗೂ ಮಾನವನ್ನು ಸಲ್ಲಿಸುತ್ತಾರೆ. (ಪ್ರಸಂಗಿ 7:2) ಹೂವುಗಳು, ಶವಸಂಸ್ಕಾರದ ರೀತಿನೀತಿಗಳು, ಹಾಗೂ ಇತರ ಸ್ಥಳಿಕ ಪದ್ಧತಿಗಳ ವಿಷಯಕ್ಕೆ ಬರುವಾಗ, ಬೈಬಲ್ ಬೋಧನೆಗಳೊಂದಿಗೆ ಸಂಘರ್ಷಿಸುವ ಪದ್ಧತಿಗಳಿಂದ ದೂರವಿರಲಿಕ್ಕಾಗಿ ಕ್ರೈಸ್ತರು ಜಾಗರೂಕತೆಯಿಂದ ವೈಯಕ್ತಿಕ ಆಯ್ಕೆಗಳನ್ನು ಮಾಡುತ್ತಾರೆ. ಹೀಗೆ ಮಾಡುವಾಗ ಒಳ್ಳೆಯ ವಿವೇಚನೆ ಹಾಗೂ ಸಮತೂಕತೆಯ ಅಗತ್ಯವಿದೆ. ಎನ್‌ಸೈಕ್ಲೊಪೀಡಿಯ ಆಫ್ ರಿಲಿಜನ್ ಆ್ಯಂಡ್ ಎಥಿಕ್ಸ್ ವಿವರಿಸುವುದೇನೆಂದರೆ, “ಕಾಲ ಬದಲಾದಂತೆ ಒಂದು ಮತಾಚರಣೆಯ ಅರ್ಥ ಹಾಗೂ ಮೌಲ್ಯವು ಬದಲಾಗುತ್ತಾ ಇರುತ್ತದೆ. ಆದುದರಿಂದ, ಈ ಮತಾಚರಣೆಗೆ ಆರಂಭದಲ್ಲಿ ಯಾವ ಅರ್ಥವು ಕೊಡಲ್ಪಟ್ಟಿತ್ತೋ ಅದು ಇತ್ತೀಚಿನ ಸಮಯಗಳಲ್ಲಿ ತುಂಬ ಭಿನ್ನವಾಗಿರಬಹುದು. ಹಾಗೂ ಅದರ ಸದ್ಯದ ಜನಪ್ರಿಯತೆಯು, ಅದರ ಮೂಲದ ಬಗ್ಗೆ ಯಾವ ವಿಚಾರವನ್ನೂ ತಿಳಿಯಪಡಿಸದಿರಬಹುದು.”a
ಗುಣಗಾನ ಮಾಡುವುದು ತಪ್ಪೊ?
ಸಮತೂಕ ನೋಟವುಳ್ಳವರಾಗಿರುವ ಮೂಲತತ್ವವು, ಮೃತರ ಗುಣಗಾನ ಮಾಡುವ ವಿಷಯಕ್ಕೂ ಅನ್ವಯವಾಗುತ್ತದೆ. ಶವಸಂಸ್ಕಾರಗಳಲ್ಲಿ, ಯೆಹೋವನ ಸಾಕ್ಷಿಗಳು ವಿಯೋಗಿಗಳಿಗೆ ಸಾಂತ್ವನ ನೀಡಲು ಪ್ರಯತ್ನಿಸುತ್ತಾರೆ. (2 ಕೊರಿಂಥ 1:3-5) ಔಪಚಾರಿಕ ಕಾರ್ಯಕ್ರಮದಲ್ಲಿ, ಒಂದು ಅಥವಾ ಹೆಚ್ಚು ಭಾಷಣಕರ್ತರು ಒಳಗೂಡಿರಬಹುದು. ಆದರೆ ಆ ಸಂದರ್ಭವನ್ನು ಮೃತರ ಗುಣಗಾನ ಮಾಡುವ ಒಂದು ಪ್ರದರ್ಶನವಾಗಿ ಪರಿವರ್ತಿಸುವುದು ಯೋಗ್ಯವಾದದ್ದಲ್ಲ. ಅದಕ್ಕೆ ಬದಲಾಗಿ, ಶವಸಂಸ್ಕಾರವು ನಮಗೆ ಪುನರುತ್ಥಾನದ ನಿರೀಕ್ಷೆಯನ್ನು ಒದಗಿಸುವುದರಲ್ಲಿ ದೇವರು ತೋರಿಸಿದ ದಯಾಭಾವವನ್ನು ಒಳಗೊಂಡು, ದೇವರ ಅದ್ಭುತ ಗುಣಗಳನ್ನು ಹೊಗಳುವ ಸಂದರ್ಭವನ್ನು ಕೊಡುತ್ತದೆ.
ಶವಸಂಸ್ಕಾರದ ಭಾಷಣದಲ್ಲಿ ಮೃತರ ಒಳ್ಳೆಯ ಗುಣಗಳನ್ನು ಜ್ಞಾಪಿಸಿಕೊಳ್ಳುವುದು ತಪ್ಪು ಎಂದು ಇದರ ಅರ್ಥವಲ್ಲ. (2 ಸಮುವೇಲ 1:17-27ನ್ನು ಹೋಲಿಸಿರಿ.) ಮೃತ ವ್ಯಕ್ತಿಯು ತನ್ನ ಮರಣಪರ್ಯಂತ ದೇವರಿಗೆ ನಂಬಿಗಸ್ತನಾಗಿ ಉಳಿದಿರುವಾಗ, ಅವನು ಅಥವಾ ಅವಳು ಅನುಕರಿಸಲು ಯೋಗ್ಯವಾದ ಅತ್ಯುತ್ತಮ ಮಾದರಿಯಾಗಿ ಪರಿಣಮಿಸುತ್ತಾರೆ. (ಇಬ್ರಿಯ 6:12) ದೇವರ ಸೇವಕರ ಯಥಾರ್ಥತೆಯನ್ನು ಕಾಪಾಡಿಕೊಳ್ಳುವ ಮಾರ್ಗಕ್ರಮದ ಕುರಿತು ಮನನಮಾಡುವುದು ಒಳಿತನ್ನು ಉಂಟುಮಾಡುತ್ತದೆ. ಶವಸಂಸ್ಕಾರದ ಸಮಯದಲ್ಲಿ ಇತರರೊಂದಿಗೆ ಈ ಸಕಾರಾತ್ಮಕ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು, ಬದುಕಿರುವವರಿಗೆ ಸಾಂತ್ವನವನ್ನು ನೀಡುತ್ತದೆ ಹಾಗೂ ಆದರದಿಂದ ಮೃತರನ್ನು ಜ್ಞಾಪಿಸಿಕೊಳ್ಳುವಂತೆ ಮಾಡುತ್ತದೆ.
ನಿಜ ಕ್ರೈಸ್ತರು ಮೃತರನ್ನು ಆರಾಧಿಸುವುದಿಲ್ಲ. ಬೈಬಲ್ ಸತ್ಯತೆಗಳಿಗೆ ವಿರುದ್ಧವಾಗಿರುವ ಜನಪ್ರಿಯ ಮತಾಚರಣೆಗಳಲ್ಲಿ ಅವರು ಒಳಗೂಡುವುದಿಲ್ಲ. ಅದಕ್ಕೆ ಬದಲಾಗಿ, ಮೃತರು ಕೇವಲ ಮಣ್ಣಾಗಿದ್ದು, ಎಲ್ಲ ಶವಸಂಸ್ಕಾರ ಪದ್ಧತಿಗಳು ಉದ್ದೇಶರಹಿತವಾಗಿವೆ ಹಾಗೂ ಅನಗತ್ಯವಾಗಿವೆ ಎಂದು ದೇವರ ಸೇವಕರಿಗೆ ಗೊತ್ತಿರುವುದರಿಂದ, ಅವರು ಈ ವಿಪರೀತ ಮನೋಭಾವವನ್ನು ತಿರಸ್ಕರಿಸುತ್ತಾರೆ. ಅವರು ತಮ್ಮ ಮೃತ ಜನರಿಗಾಗಿ ಶೋಕಿಸುತ್ತಾರೆ ಮತ್ತು ಅವರನ್ನು ಜ್ಞಾಪಿಸಿಕೊಳ್ಳುತ್ತಾರೆ. ಆದರೆ ಅವರ ನೋವು ಹಾಗೂ ದುಃಖವು, ಮೃತರು ಕಷ್ಟಾನುಭವಿಸುವುದಿಲ್ಲ ಮತ್ತು ಪುನರುತ್ಥಾನದ ನಿರೀಕ್ಷೆಯಿದೆ ಎಂಬ ಬೈಬಲ್ ಸತ್ಯತೆಗಳಿಂದ ಶಮನಗೊಳಿಸಲ್ಪಡುತ್ತದೆ.
[ಅಧ್ಯಯನ ಪ್ರಶ್ನೆಗಳು]
a ಕಾವಲಿನಬುರುಜು ಪತ್ರಿಕೆಯ, ಜನವರಿ 15, 1992ರ ಸಂಚಿಕೆಯ 31ನೆಯ ಪುಟವು, ಈ ಕೆಳಗಿನ ಮಾರ್ಗದರ್ಶನವನ್ನು ಒದಗಿಸುತ್ತದೆ: “ಒಬ್ಬ ನಿಜ ಕ್ರೈಸ್ತನು ಇದನ್ನು ಪರಿಗಣಿಸತಕ್ಕದ್ದು: ಒಂದು ಪದ್ಧತಿಯನ್ನು ಅನುಸರಿಸುವುದು, ನಾನು ಅಶಾಸ್ತ್ರೀಯ ನಂಬಿಕೆಗಳನ್ನು ಅಥವಾ ಸಂಪ್ರದಾಯಗಳನ್ನು ಅಂಗೀಕರಿಸಿದ್ದೇನೆಂದು ಇತರರಿಗೆ ತಿಳಿಯಪಡಿಸುತ್ತದೊ? ಕಾಲಾವಧಿ ಹಾಗೂ ಸ್ಥಳವು, ಈ ಪ್ರಶ್ನೆಯ ಉತ್ತರದ ಮೇಲೆ ಪ್ರಭಾವ ಬೀರಸಾಧ್ಯವಿದೆ. ಒಂದು ಪದ್ಧತಿ (ಅಥವಾ ಏರ್ಪಾಡು)ಗೆ, ಸಾವಿರಾರು ವರ್ಷಗಳ ಹಿಂದೆ ಒಂದು ಸುಳ್ಳು ಧಾರ್ಮಿಕ ಅರ್ಥವು ಇದ್ದಿರಬಹುದು ಅಥವಾ ಇಂದು ಬಹು ದೂರದ ದೇಶದಲ್ಲಿ ಅಂತಹ ಅರ್ಥವು ಈಗಲೂ ಇರಬಹುದು. ಆದರೆ ಸಮಯವನ್ನು ಹಾಳುಮಾಡುವಂತಹ ಅನ್ವೇಷಣೆಯನ್ನು ನಡೆಸುವುದಕ್ಕೆ ಬದಲಾಗಿ, ಸ್ವತಃ ಹೀಗೆ ಪ್ರಶ್ನಿಸಿಕೊಳ್ಳಿರಿ: ‘ನಾನು ವಾಸಿಸುತ್ತಿರುವ ಸ್ಥಳದಲ್ಲಿ ಇದರ ಕುರಿತಾದ ಸಾಮಾನ್ಯ ದೃಷ್ಟಿಕೋನವೇನು?’—1 ಕೊರಿಂಥ 10:25-29ನ್ನು ಹೋಲಿಸಿರಿ.”
[ಪುಟ 21 ರಲ್ಲಿರುವ ಚಿತ್ರ]
1632ರಲ್ಲಿ ಸ್ವೀಡನ್‌ನ ರಾಜನಾದ IIನೆಯ ಗುಸ್ಟಾವ್‌ನ ಮರಣಾನಂತರ, ಅವನ ಗೌರವಾರ್ಥವಾಗಿ ನಡೆಸಲ್ಪಟ್ಟ ಶವಸಂಸ್ಕಾರದ ಮೆರವಣಿಗೆ
[ಕೃಪೆ]
From the book Bildersaal deutscher Geschichte