ಅಂತ್ಯಕ್ರಿಯೆ (ಫ್ಯೂನರಲ್) ಬಗ್ಗೆ ಯೆಹೋವನ ಸಾಕ್ಷಿಗಳ ನೋಟವೇನು?
ಅಂತ್ಯಕ್ರಿಯೆ (ಫ್ಯೂನರಲ್) ಬಗ್ಗೆ ನಮಗಿರೋ ನೋಟ ಹಾಗೂ ನಾವು ಅದನ್ನ ಮಾಡೋ ರೀತಿ ಬೈಬಲ್ ಬೋಧನೆಗಳ ಮೇಲೆ ಹಾಗೂ ಕೆಳಗೆ ಕೊಡಲಾಗಿರೋ ವಿಷಯಗಳ ಮೇಲೆ ಆಧರಿಸಿದೆ:
ನಮ್ಮ ಪ್ರಿಯರು ತೀರಿಹೋದಾಗ ದುಃಖಪಡೋದು ಸಹಜ. ಯೇಸುವಿನ ಶಿಷ್ಯರು ತಮ್ಮ ಪ್ರಿಯರು ತೀರಿಹೋದಾಗ ತುಂಬ ದುಃಖಪಟ್ಟರು. (ಯೋಹಾನ 11:33-35, 38; ಅಪೊಸ್ತಲರ ಕಾರ್ಯ 8:2; 9:39) ಹಾಗಾಗಿ, ನಾವು ಅಂತ್ಯಕ್ರಿಯೆಯನ್ನ ಸಂತೋಷದ ಸಮಯ ಅಂತ ನೋಡೋದಿಲ್ಲ. (ಪ್ರಸಂಗಿ 3:1, 4; 7:1-4) ಬದಲಿಗೆ, ನಾವು ಅದನ್ನು ಒಬ್ಬರಿಗೊಬ್ಬರು ಸಹಾನುಭೂತಿ ತೋರಿಸೋ ಸಮಯ ಅಂತ ನೋಡ್ತೀವಿ.—ರೋಮನ್ನರಿಗೆ 12:15.
ಸತ್ತವರಿಗೆ ಏನೂ ಗೊತ್ತಾಗಲ್ಲ. ಸತ್ತವರು ಯಾವುದೋ ರೂಪದಲ್ಲಿ ಜೀವಂತವಾಗಿದ್ದಾರೆ ಹಾಗೂ ಬದುಕಿರೋರಿಗೆ ಸಹಾಯ ಮಾಡಬಹುದು ಅಥವಾ ಹಾನಿ ಮಾಡಬಹುದು ಅಂತ ಕೆಲವರು ನಂಬ್ತಾರೆ. ಬೈಬಲ್ ಪ್ರಕಾರ ಇದು ತಪ್ಪು. (ಪ್ರಸಂಗಿ 9:5, 6, 10) ತಪ್ಪು ನಂಬಿಕೆಗಳಿಂದಾಗಿ ಜನರು ಅನೇಕ ಪದ್ಧತಿಗಳನ್ನ ಮಾಡ್ತಾರೆ. ಉದಾಹರಣೆಗೆ ಇದರಲ್ಲಿ, ಮೃತದೇಹದ ಬಳಿ ರಾತ್ರಿಯಿಡೀ ಜಾಗರಣೆ ಮಾಡೋದು, ಅಂತ್ಯಸಂಸ್ಕಾರನ ತುಂಬ ಗ್ರಾಂಡ್ ಆಗಿ ಮಾಡೋದು, ಮರಣದ ವಾರ್ಷಿಕೋತ್ಸವವನ್ನ ಆಚರಿಸೋದು, ಸತ್ತವರಿಗಾಗಿ ನೈವೇದ್ಯ ಅರ್ಪಿಸೋದು, ಸತ್ತವರ ಜೊತೆ ಮಾತಾಡೋದು, ಅವರನ್ನ ಪೂಜಿಸೋದು ಹಾಗೂ ವಿಧವೆಯರಿಗೆ ಮಾಡೋ ಕೆಲವು ಆಚರಣೆಗಳು ಸೇರಿದೆ. ಆದರೆ ಯೆಹೋವನ ಸಾಕ್ಷಿಗಳು, ಅವರ ಸಂಸ್ಕೃತಿ ಅಥವಾ ಜನಾಂಗವನ್ನ ಲೆಕ್ಕಿಸದೆ, ಇಂಥ ಯಾವುದೇ ಪದ್ಧತಿಗಳನ್ನ ಮಾಡೋದಿಲ್ಲ. ನಾವು ಬೈಬಲಿನ ಆಜ್ಞೆಗೆ ವಿಧೇಯರಾಗುತ್ತೇವೆ: “ಅವ್ರಿಂದ ಬೇರೆಯಾಗಿ. ಅಶುದ್ಧವಾಗಿದ್ದನ್ನ ಇನ್ನು ಮುಟ್ಟಬೇಡಿ.”—2 ಕೊರಿಂಥ 6:17.
ಸತ್ತವರಿಗೆ ನಿರೀಕ್ಷೆ ಇದೆ. ಸತ್ತವರು ಮತ್ತೆ ಜೀವಂತವಾಗಿ ಎದ್ದು ಬರೋ ಸಮಯ ಬರುತ್ತೆ ಅಂತ ಬೈಬಲ್ ಕಲಿಸುತ್ತೆ. ಆಮೇಲೆ ಯಾರೂ ಮತ್ತೆ ಸಾಯೋದಿಲ್ಲ. (ಅಪೊಸ್ತಲರ ಕಾರ್ಯ 24:15; ಪ್ರಕಟನೆ 21:4) ಈ ನಿರೀಕ್ಷೆಯು ಶತಮಾನಗಳಿಂದ ಕ್ರೈಸ್ತರಿಗೆ ಸಾಂತ್ವನ ನೀಡಿದೆ. ನಮ್ಮ ಪ್ರಿಯರು ಮತ್ತೆ ಜೀವಂತವಾಗಿ ಎದ್ದು ಬರ್ತಾರೆ ಅಂತ ನಾವು ನಂಬ್ತೀವಿ, ಅದಕ್ಕೇ ನಾವು ಅತಿಯಾಗಿ ದುಃಖಪಡೋದಿಲ್ಲ.—1 ಥೆಸಲೊನೀಕ 4:13.
ನಾವು ವಿನಮ್ರರಾಗಿರಬೇಕು ಅಂತ ಬೈಬಲ್ ಸಲಹೆ ಕೊಡುತ್ತೆ. (ಜ್ಞಾನೋಕ್ತಿ 11:2) ಅಂತ್ಯಕ್ರಿಯೆಯು, ಸಮಾಜದಲ್ಲಿ ನಮ್ಮ ಸ್ಥಾನಮಾನವನ್ನ ಅಥವಾ ನಮ್ಮ ”ಹತ್ರ ಇರೋ ವಸ್ತುಗಳನ್ನ ಬೇರೆಯವ್ರಿಗೆ ತೋರಿಸಿ ಜಂಬ ಕೊಚ್ಕೊಳ್ಳೋ” ಸಮಯವಲ್ಲ ಅಂತ ನಾವು ನಂಬ್ತೀವಿ. (1 ಯೋಹಾನ 2:16) ನಾವು ಅಂತ್ಯಕ್ರಿಯೆಯನ್ನ ಅದ್ಧೂರಿಯಾಗಿ ಮನರಂಜನೆಗೋಸ್ಕರ ಅಥವಾ ಜನರ ಬಳಿ ಎಷ್ಟು ಹಣ ಇದೆ, ಶವಪೆಟ್ಟಿಗೆ ಎಷ್ಟು ದುಬಾರಿಯಾಗಿದೆ, ಎಷ್ಟು ದುಬಾರಿ ಬಟ್ಟೆ ಮತ್ತು ಆಭರಣಗಳನ್ನ ಹಾಕಿದ್ದಾರೆ ಅಂತ ಬೇರೆಯವರಿಗೆ ತೋರಿಸೋಕೆ ಮಾಡಲ್ಲ.
ಅಂತ್ಯಕ್ರಿಯೆ ಬಗ್ಗೆ ನಾವೇನು ನಂಬ್ತೀವೋ ಅದನ್ನ ಬೇರೆಯವರೂ ನಂಬಬೇಕಂತ ನಾವು ಒತ್ತಾಯ ಮಾಡಲ್ಲ. ಈ ವಿಷಯದಲ್ಲಿ: “ನಾವು ಪ್ರತಿಯೊಬ್ರೂ ನಮ್ಮ ನಮ್ಮ ಬಗ್ಗೆ ದೇವರಿಗೆ ಲೆಕ್ಕ ಕೊಡಬೇಕು.” ಅನ್ನೋ ಬೈಬಲ್ ತತ್ವ ಪಾಲಿಸ್ತೀವಿ. (ರೋಮನ್ನರಿಗೆ 14:12) ಆದರೆ ನಮಗೆ ಅವಕಾಶ ಸಿಕ್ಕಾಗೆಲ್ಲಾ ನಾವು ನಂಬೋದನ್ನ ಜನರಿಗೆ ”ಮೃದುವಾಗಿ, ತುಂಬ ಗೌರವದಿಂದ” ಹೇಳ್ತೀವಿ.—1 ಪೇತ್ರ 3:15.
ಯೆಹೋವನ ಸಾಕ್ಷಿಗಳು ಮಾಡೋ ಅಂತ್ಯಕ್ರಿಯೆ ಹೇಗಿರುತ್ತೆ?
ಸ್ಥಳ: ಕುಟುಂಬವು ಅಂತ್ಯಕ್ರಿಯೆಯನ್ನ ಮಾಡಲು ಬಯಸಿದರೆ, ಅವರು ಎಲ್ಲಿ ಬೇಕಾದರೂ ಮಾಡಬಹುದು. ಮನೆಯಲ್ಲಿ, ರಾಜ್ಯ ಸಭಾಗೃಹದಲ್ಲಿ ಅಥವಾ ಸ್ಮಶಾನದಲ್ಲಿ ಮಾಡಬಹುದು.
ಅಲ್ಲಿ ಏನು ನಡೆಯುತ್ತೆ: ಮರಣ ಹೊಂದಿದ ವ್ಯಕ್ತಿಯ ಕುಟುಂಬ ಹಾಗೂ ಸ್ನೇಹಿತರಿಗೆ ಸಾಂತ್ವನ ನೀಡಲು ಒಂದು ಭಾಷಣವನ್ನ ನೀಡಲಾಗುತ್ತೆ. ಮರಣದ ಬಗ್ಗೆ ಬೈಬಲ್ ಏನು ಹೇಳುತ್ತೆ ಹಾಗೂ ಭವಿಷ್ಯದಲ್ಲಿ ತೀರಿಹೋಗಿರೋ ನಮ್ಮ ಪ್ರಿಯರು ಮತ್ತೆ ಈ ಭೂಮಿಯಲ್ಲಿ ಹೇಗೆ ಜೀವಂತವಾಗಿ ಎದ್ದು ಬರುವಂತೆ ದೇವರು ಮಾಡ್ತಾರೆ ಅಂತ ತಿಳಿಸಲಾಗುತ್ತೆ. (ಯೋಹಾನ 11:25; ರೋಮನ್ನರಿಗೆ 5:12; 2 ಪೇತ್ರ 3:13) ಅಂತ್ಯಕ್ರಿಯೆಯ ಈ ಭಾಷಣದಲ್ಲಿ, ತೀರಿಹೋಗಿರೋ ವ್ಯಕ್ತಿಯ ಒಳ್ಳೆ ಗುಣಗಳ ಬಗ್ಗೆ, ಅವನು ಅಥವಾ ಅವಳು ದೇವರಿಗೆ ಹೇಗೆ ನಂಬಿಗಸ್ತರಾಗಿ ಉಳಿದರು ಮತ್ತು ನಾವು ಅವನಿಂದ ಅಥವಾ ಅವಳಿಂದ ಏನು ಕಲಿಯಬಹುದು ಅಂತ ಹೇಳಲಾಗುತ್ತೆ.—2 ಸಮುವೇಲ 1:17-27.
ಇದಾದ ಮೇಲೆ ಒಂದು ಬೈಬಲ್ ಆಧಾರಿತ ಹಾಡನ್ನ ಹಾಡಬಹುದು. (ಕೊಲೊಸ್ಸೆ 3:16) ನಂತರ ಕೊನೆಯಲ್ಲಿ ಎಲ್ಲರಿಗೂ ಸಾಂತ್ವನ ನೀಡುವ ಪ್ರಾರ್ಥನೆಯನ್ನ ಮಾಡಲಾಗುತ್ತೆ.—ಫಿಲಿಪ್ಪಿ 4:6, 7.
ಹಣ ಅಥವಾ ಕಾಣಿಕೆ ಕೇಳುವುದಿಲ್ಲ: ನಾವು ನಡೆಸುವ ಯಾವುದೇ ಕೂಟಗಳಲ್ಲೂ ಜನರಿಂದ ಹಣ ಅಥವಾ ಕಾಣಿಕೆಯನ್ನ ಕೇಳೋದಿಲ್ಲ. ಅಂತ್ಯಕ್ರಿಯೆ (ಫ್ಯೂನರಲ್) ಮಾಡಲು ಕೂಡ ನಾವು ಹಣ ಕೇಳುವುದಿಲ್ಲ.—ಮತ್ತಾಯ 10:8.
ಯಾರೆಲ್ಲಾ ಬರಬಹುದು: ಯೆಹೋವನ ಸಾಕ್ಷಿಗಳಲ್ಲದವರು ಸಹ ಅಂತ್ಯಕ್ರಿಯೆಯ ಭಾಷಣವನ್ನ ಕೇಳಲು ರಾಜ್ಯ ಸಭಾಗೃಹಕ್ಕೆ ಬರಬಹುದು. ನಮ್ಮ ಇತರ ಕೂಟಗಳ ತರಾನೇ, ಈ ಕೂಟಕ್ಕೂ ಎಲ್ಲರೂ ಹಾಜರಾಗಬಹುದು.
ಯೆಹೋವನ ಸಾಕ್ಷಿಗಳು ಇತರ ಧರ್ಮದ ಜನರ ಅಂತ್ಯಕ್ರಿಯೆಗಳಿಗೆ ಹಾಜರಾಗ್ತಾರಾ?
ಅಂತಹ ಕಾರ್ಯಕ್ರಮಕ್ಕೆ ಹಾಜರಾಗಬೇಕಾ ಬೇಡವಾ ಅನ್ನೋದು ಪ್ರತಿಯೊಬ್ಬ ಸಾಕ್ಷಿಯ ಸ್ವಂತ ನಿರ್ಧಾರ ಆಗಿದೆ. ಅವರು ಬೈಬಲಿನಿಂದ ಕಲಿತ ವಿಷಯಗಳ ಆಧಾರದ ಮೇಲೆ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಾರೆ. (1 ತಿಮೊತಿ 1:19) ಆದರೆ ಯೆಹೋವನ ಸಾಕ್ಷಿಗಳು ಬೈಬಲ್ ತತ್ವಗಳಿಗೆ ವಿರುದ್ಧವಾದ ಯಾವುದೇ ಧಾರ್ಮಿಕ ಆಚರಣೆಗಳಲ್ಲಿ ತೊಡಗುವುದಿಲ್ಲ.—2 ಕೊರಿಂಥ 6:14-17.