ಯೆಹೋವನು ನಂಬಿಗಸ್ತರಿಗೆ ಕೊಟ್ಟಿರುವ ತನ್ನ ವಾಗ್ದಾನಗಳನ್ನು ನೆರವೇರಿಸುತ್ತಾನೆ
“ವಾಗ್ದಾನಮಾಡಿದಾತನು ನಂಬಿಗಸ್ತನು.”—ಇಬ್ರಿಯ 10:23.
1, 2. ಯೆಹೋವನ ವಾಗ್ದಾನಗಳಲ್ಲಿ ನಾವು ಏಕೆ ಪೂರ್ಣ ಭರವಸೆಯನ್ನು ಇಡಬಲ್ಲೆವು?
ಯೆಹೋವನು, ತನ್ನ ಸೇವಕರು ತನ್ನಲ್ಲಿ ಮತ್ತು ತನ್ನ ವಾಗ್ದಾನಗಳಲ್ಲಿ ಒಂದು ದೃಢವಾದ ನಂಬಿಕೆಯನ್ನು ವಿಕಸಿಸಿಕೊಂಡು ಅದನ್ನು ಕಾಪಾಡಿಕೊಳ್ಳಬೇಕೆಂದು ಕೇಳಿಕೊಳ್ಳುತ್ತಾನೆ. ಇಂತಹ ನಂಬಿಕೆಯೊಂದಿಗೆ, ಯೆಹೋವನು ಏನನ್ನು ಮಾಡಲು ವಾಗ್ದಾನಿಸಿದ್ದಾನೊ ಅದನ್ನು ಮಾಡುವನೆಂದು ಒಬ್ಬನು ಸಂಪೂರ್ಣವಾಗಿ ಭರವಸೆಯನ್ನಿಡಬಲ್ಲನು. ಆತನ ಪ್ರೇರಿತ ವಾಕ್ಯವು ಪ್ರಕಟಿಸುವುದು: “ಸೇನಾಧೀಶ್ವರನಾದ ಯೆಹೋವನು ಆಣೆಯಿಟ್ಟು ಹೇಳುವದೇನಂದರೆ—ನಾನು ಸಂಕಲ್ಪಿಸಿದ್ದೇ ನೆರವೇರುವದು, ಉದ್ದೇಶಿಸಿದ್ದೇ ನಿಲ್ಲುವದು, ಖಂಡಿತ.”—ಯೆಶಾಯ 14:24.
2 ‘ಸೇನಾಧೀಶ್ವರನಾದ ಯೆಹೋವನು ಆಣೆಯಿಟ್ಟಿದ್ದಾನೆ’ ಎಂಬ ಹೇಳಿಕೆಯು, ತನ್ನ ವಾಗ್ದಾನಗಳನ್ನು ನೆರವೇರಿಸಲು ಆತನು ಗಂಭೀರವಾದ ಪ್ರಮಾಣವನ್ನು ಕೊಡುತ್ತಾನೆಂಬುದನ್ನು ತೋರಿಸುತ್ತದೆ. ಆದುದರಿಂದಲೇ ಆತನ ವಾಕ್ಯವು ಹೀಗೆ ಹೇಳಸಾಧ್ಯವಿದೆ: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣ ಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” (ಜ್ಞಾನೋಕ್ತಿ 3:5, 6) ಯೆಹೋವನಲ್ಲಿ ನಾವು ಭರವಸೆಯಿಟ್ಟು, ಆತನ ವಿವೇಕಕ್ಕನುಸಾರ ಮಾರ್ಗದರ್ಶಿಸಲ್ಪಡುವಂತೆ ಅನುಮತಿಸುವಾಗ, ನಮ್ಮ ದಾರಿಗಳು ತಪ್ಪದೆ ನಿತ್ಯಜೀವಕ್ಕೆ ನಡಿಸುವವು. ಯಾಕಂದರೆ ದೇವರ ವಿವೇಕವು, “ತನ್ನನ್ನು ಹಿಡಿದುಕೊಳ್ಳುವವರಿಗೆ ಜೀವದ ಮರವಾಗಿದೆ.”—ಜ್ಞಾನೋಕ್ತಿ 3:18; ಯೋಹಾನ 17:3.
ಪುರಾತನ ಸಮಯಗಳಲ್ಲಿ ನಿಜವಾದ ನಂಬಿಕೆ
3. ನೋಹನು ಹೇಗೆ ಯೆಹೋವನಲ್ಲಿ ನಂಬಿಕೆಯನ್ನು ತೋರಿಸಿದನು?
3 ನಿಜ ನಂಬಿಕೆಯುಳ್ಳವರ ಕಡೆಗೆ ಯೆಹೋವನ ಕೃತ್ಯಗಳ ದಾಖಲೆಯು, ಆತನ ವಿಶ್ವಸನೀಯತೆಗೆ ಸಾಕ್ಷ್ಯವನ್ನು ಕೊಡುತ್ತದೆ. ಉದಾಹರಣೆಗಾಗಿ 4,400ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ ದೇವರು ನೋಹನಿಗೆ ಹೇಳಿದ್ದೇನೆಂದರೆ, ಅವನ ದಿನದ ಲೋಕವು ಒಂದು ಭೌಗೋಲಿಕ ಜಲಪ್ರಳಯದಿಂದ ನಾಶಗೊಳಿಸಲ್ಪಡಲಿದೆ. ಮಾನವರನ್ನು ಮತ್ತು ಪ್ರಾಣಿಗಳನ್ನು ಸಂರಕ್ಷಿಸಲಿಕ್ಕೋಸ್ಕರ ಒಂದು ದೊಡ್ಡ ನಾವೆಯನ್ನು ಕಟ್ಟುವಂತೆ ಆತನು ನೋಹನಿಗೆ ಅಪ್ಪಣೆಕೊಟ್ಟನು. ನೋಹನು ಏನು ಮಾಡಿದನು? ಇಬ್ರಿಯ 11:7 ನಮ್ಮಗನ್ನುವುದು: “ನಂಬಿಕೆಯಿಂದಲೇ ನೋಹನು ಅದು ವರೆಗೆ ಕಾಣದಿದ್ದ ಸಂಗತಿಗಳ ವಿಷಯವಾಗಿ ದೈವೋಕ್ತಿಯನ್ನು ಹೊಂದಿ ಭಯಭಕ್ತಿಯುಳ್ಳವನಾಗಿ ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು.” “ಅದು ವರೆಗೆ ಕಾಣದಿದ್ದ” ವಿಷಯ, ಹಿಂದೆಂದೂ ಸಂಭವಿಸಿರದಂತಹ ವಿಷಯದಲ್ಲಿ ನೋಹನಿಗೆ ಏಕೆ ನಂಬಿಕೆಯಿತ್ತು? ಯಾಕಂದರೆ ದೇವರು ಹೇಳುವುದೆಲ್ಲವೂ ಸತ್ಯವಾಗುತ್ತದೆ ಎಂಬುದನ್ನು ತಿಳಿಯುವಷ್ಟರ ಮಟ್ಟಿಗೆ, ಮಾನವ ಕುಟುಂಬದೊಂದಿಗೆ ದೇವರ ಹಿಂದಿನ ವ್ಯವಹಾರಗಳ ಕುರಿತಾದ ಜ್ಞಾನ ಅವನಿಗಿತ್ತು. ಆದುದರಿಂದ ಜಲಪ್ರಳಯವು ಖಂಡಿತವಾಗಿ ಬರುವುದೆಂದು ನೋಹನಿಗೆ ಖಾತ್ರಿಯಿತ್ತು.—ಆದಿಕಾಂಡ 6:9-22.
4, 5. ಅಬ್ರಹಾಮನು ಯೆಹೋವನಲ್ಲಿ ಏಕೆ ಪೂರ್ಣವಾಗಿ ಭರವಸೆಯನ್ನಿಟ್ಟನು?
4 ನಿಜ ನಂಬಿಕೆಯ ಇನ್ನೊಂದು ಉದಾಹರಣೆಯು ಅಬ್ರಹಾಮನದ್ದಾಗಿದೆ. ಸುಮಾರು 3,900 ವರ್ಷಗಳ ಹಿಂದೆ, ದೇವರು ಅವನಿಗೆ ತನ್ನ ಪತ್ನಿಯಾದ ಸಾರಳಿಂದ ಪಡೆದಂತಹ ಏಕಮಾತ್ರ ಪುತ್ರನಾದ ಇಸಾಕನನ್ನು ಬಲಿಕೊಡುವಂತೆ ಹೇಳಿದನು. (ಆದಿಕಾಂಡ 22:1-10) ಅಬ್ರಹಾಮನು ಹೇಗೆ ಪ್ರತಿಕ್ರಿಯಿಸಿದನು? ಇಬ್ರಿಯ 11:17 ತಿಳಿಸುವುದು: “ಅಬ್ರಹಾಮನು ಪರಿಶೋಧಿತನಾಗಿ ನಂಬಿಕೆಯಿಂದಲೇ ಇಸಾಕನನ್ನು ಸಮರ್ಪಿಸಿದನು.” ಆದರೂ ಕೊನೆಯ ಕ್ಷಣದಲ್ಲಿ, ಯೆಹೋವನ ದೂತನು ಅಬ್ರಹಾಮನನ್ನು ತಡೆದನು. (ಆದಿಕಾಂಡ 22:11, 12) ಆದರೂ, ಅಬ್ರಹಾಮನು ಅಂತಹ ಒಂದು ಕೆಲಸವನ್ನು ಮಾಡುವುದನ್ನು ಪರಿಗಣಿಸಿದ್ದಾದರೂ ಏಕೆ? ಏಕೆಂದರೆ ಇಬ್ರಿಯ 11:19 ಹೇಳುವಂತೆ: “ತನ್ನ ಮಗನು [ಇಸಾಕನು] ಸತ್ತರೂ, ದೇವರು ಅವನನ್ನು ಬದುಕಿಸ ಸಮರ್ಥನಾಗಿದ್ದಾನೆಂದು ತಿಳುಕೊಂಡನು.” ಆದರೆ ಈ ಹಿಂದೆ ಒಂದು ಪುನರುತ್ಥಾನವನ್ನು ನೋಡಿರದಿದ್ದರೂ, ಈ ಹಿಂದಿನ ಪುನರುತ್ಥಾನದ ದಾಖಲೆಯಿರಲಿಲ್ಲವಾದರೂ, ಆದರಲ್ಲಿ ಅಬ್ರಹಾಮನು ನಂಬಿಕೆಯಿಡಶಕ್ತನಾದದ್ದು ಹೇಗೆ?
5 ದೇವರು ಅವರಿಗೆ ಒಬ್ಬ ಮಗನನ್ನು ಕೊಡುವ ವಾಗ್ದಾನ ಮಾಡಿದಾಗ, ಸಾರಳು 89 ವರ್ಷ ಪ್ರಾಯದವಳಾಗಿದ್ದಳು ಎಂಬುದನ್ನು ನೆನಪಿನಲ್ಲಿಡಿರಿ. ಸಾರಳ ಗರ್ಭವು ಮಕ್ಕಳನ್ನು ಹೆರುವ ಸಮಯವನ್ನು ದಾಟಿತ್ತು—ಒಂದರ್ಥದಲ್ಲಿ ಹೇಳುವುದಾದರೆ ಸತ್ತಿತ್ತು. (ಆದಿಕಾಂಡ 18:9-14) ದೇವರು ಸಾರಳ ಗರ್ಭವನ್ನು ಉಜ್ಜೀವಿಸಿದನು ಮತ್ತು ಅವಳು ಇಸಾಕನಿಗೆ ಜನ್ಮವಿತ್ತಳು. (ಆದಿಕಾಂಡ 21:1-3) ಸಾರಳ ಸತ್ತ ಗರ್ಭವನ್ನು ದೇವರು ಮತ್ತೆ ಉಜ್ಜೀವಿಸಿರುವುದರಿಂದ, ಅಗತ್ಯವಿದ್ದಲ್ಲಿ ದೇವರು ಇಸಾಕನನ್ನು ಸಹ ಉಜ್ಜೀವಿಸಶಕ್ತನು ಎಂಬುದು ಅಬ್ರಹಾಮನಿಗೆ ತಿಳಿದಿತ್ತು. ಅಬ್ರಹಾಮನ ಕುರಿತಾಗಿ ರೋಮಾಪುರ 4:20, 21 ಹೇಳುವುದು: “ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ. ದೇವರನ್ನು ಘನಪಡಿಸುವವನಾಗಿ ಆತನು ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ಸಮರ್ಥನೆಂದು ಪೂರಾ ಭರವಸವಿಟ್ಟು ದೃಢ ನಂಬಿಕೆಯುಳ್ಳವನಾದನು.
6. ಯೆಹೋಶುವನು ಯೆಹೋವನಲ್ಲಿ ಭರವಸೆಯನ್ನು ಹೇಗೆ ವ್ಯಕ್ತಪಡಿಸಿದನು?
6 ಮೂರು ಸಾವಿರದ ನಾನೂರು ವರ್ಷಗಳಿಗಿಂತಲೂ ಹೆಚ್ಚು ಸಮಯದ ಹಿಂದೆ, ಯೆಹೋಶುವನು ನೂರು ವರ್ಷಗಳಿಗಿಂತಲೂ ಹೆಚ್ಚು ಪ್ರಾಯದವನಾಗಿದ್ದಾಗ ಮತ್ತು ದೇವರು ಎಷ್ಟು ವಿಶ್ವಾಸಾರ್ಹನು ಎಂಬುದನ್ನು ಜೀವನದುದ್ದಕ್ಕೂ ಅನುಭವಿಸಿದ ಬಳಿಕ, ತನ್ನ ದೃಢ ಭರವಸೆಗೆ ಅವನು ಈ ಕಾರಣವನ್ನು ಕೊಟ್ಟನು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬುದು ನಿಮಗೆ ಮಂದಟ್ಟಾಯಿತಲ್ಲಾ.”—ಯೆಹೋಶುವ 23:14.
7, 8. ಪ್ರಥಮ ಶತಮಾನದಲ್ಲಿ ನಂಬಿಗಸ್ತ ಕ್ರೈಸ್ತರು ಯಾವ ಜೀವರಕ್ಷಕ ಮಾರ್ಗಕ್ರಮವನ್ನು ಕೈಕೊಂಡರು, ಮತ್ತು ಏಕೆ?
7 ಸುಮಾರು 1,900 ವರ್ಷಗಳ ಹಿಂದೆ, ಅನೇಕ ನಮ್ರ ಜನರು ನಿಜ ನಂಬಿಕೆಯನ್ನು ಪ್ರದರ್ಶಿಸಿದರು. ಬೈಬಲ್ ಪ್ರವಾದನೆಯ ನೆರವೇರಿಕೆಯಿಂದ, ಯೇಸುವೇ ಮೆಸ್ಸೀಯನಾಗಿದ್ದನು ಎಂಬುದನ್ನು ಅವರು ಗ್ರಹಿಸಿದರು ಮತ್ತು ಅವನ ಬೋಧನೆಗಳನ್ನು ಅಂಗೀಕರಿಸಿದರು. ವಾಸ್ತವಾಂಶಗಳಲ್ಲಿ ಹಾಗೂ ಹೀಬ್ರು ಶಾಸ್ತ್ರವಚನಗಳಲ್ಲಿ ಅವರಿಗೆ ದೃಢವಾದ ಆಧಾರವಿದ್ದುದರಿಂದ, ಯೇಸು ಕಲಿಸಿದ ವಿಷಯಗಳಲ್ಲಿ ಅವರು ನಂಬಿಕೆಯಿಟ್ಟರು. ಹೀಗೆ, ಅಪನಂಬಿಗಸ್ತಿಕೆಯ ಕಾರಣ ಯೂದಾಯ ಮತ್ತು ಯೆರೂಸಲೇಮಿನ ವಿರುದ್ಧ ದೇವರ ನ್ಯಾಯತೀರ್ಪು ಬರಲಿದೆಯೆಂದು ಯೇಸು ಹೇಳಿದಾಗ, ಅವರದನ್ನು ನಂಬಿದರು. ಮತ್ತು ತಮ್ಮ ಜೀವಗಳನ್ನು ರಕ್ಷಿಸಲು ಅವರು ತೆಗೆದುಕೊಳ್ಳಬೇಕಾದ ಮಾರ್ಗಕ್ರಮವನ್ನು ಅವನು ಹೇಳಿದಾಗ, ಅವರದನ್ನು ಕೈಕೊಂಡರು.
8 ಸೈನ್ಯಗಳಿಂದ ಯೆರೂಸಲೇಮ್ ಮುತ್ತಿಗೆಹಾಕಲ್ಪಟ್ಟಾಗ, ಅವರು ಪಲಾಯನಗೈಯಬೇಕೆಂದು ಯೇಸು ವಿಶ್ವಾಸಿಗಳಿಗೆ ಹೇಳಿದನು. ಸಾ.ಶ. 66ನೆಯ ವರ್ಷದಲ್ಲಿ ರೋಮನ್ ಸೇನೆಗಳು ಯೆರೂಸಲೇಮಿನ ವಿರುದ್ಧವಾಗಿ ಬಂದವು. ಆದರೆ ವಿವರಿಸಲ್ಪಟ್ಟಿರದ ಯಾವುದೋ ಕಾರಣಕ್ಕಾಗಿ ಅವರು ಹಿಂದಿರುಗಿಹೋದರು. ಆ ಪಟ್ಟಣವನ್ನು ಬಿಟ್ಟುಹೋಗಲು ಕ್ರೈಸ್ತರಿಗೆ ಅದೇ ಸೂಚನೆಯಾಗಿತ್ತು, ಯಾಕೆಂದರೆ ಯೇಸು ಹೀಗೆ ಹೇಳಿದ್ದನು: “ಆದರೆ ದಂಡುಗಳು ಯೆರೂಸಲೇಮ್ ಪಟ್ಟಣಕ್ಕೆ ಮುತ್ತಿಗೆ ಹಾಕಿರುವುದನ್ನು ನೀವು ಕಾಣುವಾಗ ಅದು ಹಾಳಾಗುವ ಕಾಲ ಸಮೀಪವಾಯಿತೆಂದು ತಿಳುಕೊಳ್ಳಿರಿ. ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ; ಆ ಪಟ್ಟಣದಲ್ಲಿರುವವರು ಅದರೊಳಗಿಂದ ಹೊರಟುಹೋಗಲಿ; ಹಳ್ಳಿಯವರು ಅದರೊಳಕ್ಕೆ ಹೋಗದಿರಲಿ.” (ಲೂಕ 21:20, 21) ನಿಜವಾದ ನಂಬಿಕೆಯಿದ್ದವರು ಯೆರೂಸಲೇಮನ್ನು ಹಾಗೂ ಸುತ್ತಲಿನ ಕ್ಷೇತ್ರವನ್ನು ಬಿಟ್ಟು, ಸುರಕ್ಷಿತ ಸ್ಥಳಕ್ಕೆ ಓಡಿಹೋದರು.
ನಂಬಿಕೆಯ ಕೊರತೆಯ ಫಲಿತಾಂಶಗಳು
9, 10. (ಎ) ಧಾರ್ಮಿಕ ಮುಖಂಡರು ಯೇಸುವಿನಲ್ಲಿನ ತಮ್ಮ ನಂಬಿಕೆಯ ಕೊರತೆಯನ್ನು ತೋರಿಸಿದ್ದು ಹೇಗೆ? (ಬಿ) ಆ ನಂಬಿಕೆಯ ಕೊರತೆಯ ಫಲಿತಾಂಶಗಳೇನಾಗಿದ್ದವು?
9 ನಿಜವಾದ ನಂಬಿಕೆಯಿಲ್ಲದವರು ಏನು ಮಾಡಿದರು? ಅವರಿಗೆ ಅವಕಾಶವಿದ್ದಾಗ ಅವರು ಪಲಾಯನಮಾಡಲಿಲ್ಲ. ತಮ್ಮ ಮುಖಂಡರು ತಮ್ಮನ್ನು ರಕ್ಷಿಸಸಾಧ್ಯವಿದೆಯೆಂದು ಅವರು ನೆನಸಿದರು. ಆದರೂ ಆ ಮುಖಂಡರು ಮತ್ತು ಅವರ ಹಿಂಬಾಲಕರು ಸಹ ಯೇಸುವಿನ ಮೆಸ್ಸೀಯತ್ವದ ಕುರಿತಾದ ಪುರಾವೆಯನ್ನು ಪಡೆದಿದ್ದರು. ಹೀಗಿರುವುದರಿಂದ, ಅವನು ಹೇಳಿದ್ದನ್ನು ಅವರು ಏಕೆ ಅಂಗೀಕರಿಸಲಿಲ್ಲ? ಅವರ ದುಷ್ಟ ಹೃದಯದ ಪ್ರೇರಣೆಯ ಕಾರಣದಿಂದಲೇ. ಯೇಸು ಲಾಜರನನ್ನು ಪುನರುತ್ಥಾನಗೊಳಿಸಿದ ಬಳಿಕ, ಸಾಮಾನ್ಯ ಜನರಲ್ಲಿ ಅನೇಕರು ಅವನ ಬಳಿ ಗುಂಪುಗೂಡುವುದನ್ನು ಅವರು ಕಂಡಾಗಲೇ, ಈ ಮುಂಚೆ ಅದು ಬಯಲಿಗೆ ಬಂತು. ಯೋಹಾನ 11:47, 48 ತಿಳಿಸುವುದು: “ಮಹಾಯಾಜಕರೂ ಫರಿಸಾಯರೂ ಹಿರೀಸಭೆಯನ್ನು ಕೂಡಿಸಿ—ನಾವು ಮಾಡುವದು ಇದೇನು? ಈ ಮನುಷ್ಯನು [ಯೇಸು] ಬಹು ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ; ನಾವು ಅವನನ್ನು ಹೀಗೆಯೇ ಬಿಟ್ಟರೆ ಎಲ್ಲರೂ ಅವನನ್ನು ನಂಬಾರು. ಮತ್ತು ರೋಮ್ ರಾಜ್ಯದವರು ಬಂದು ನಮ್ಮ ಸ್ಥಾನವನ್ನೂ ಜನವನ್ನೂ ಸೆಳಕೊಂಡಾರು ಅಂದರು.” 53ನೆಯ ವಚನವು ಹೇಳುವುದು: “ಆ ದಿನದಿಂದ ಆತನನ್ನು ಕೊಲ್ಲುವದಕ್ಕೆ ಆಲೋಚಿಸುತ್ತಿದ್ದರು.”
10 ಯೇಸು ಎಂತಹ ಒಂದು ಬೆರಗುಗೊಳಿಸುವ ಅದ್ಭುತಕಾರ್ಯವನ್ನು ನಡಿಸಿದ್ದನು—ಲಾಜರನನ್ನು ಸತ್ತವರೊಳಗಿಂದ ಉಜ್ಜೀವಿಸಿದ್ದನು! ಆದರೆ ಅದನ್ನು ಮಾಡಿದ್ದಕ್ಕಾಗಿ ಆ ಧಾರ್ಮಿಕ ಮುಖಂಡರು ಯೇಸುವನ್ನು ಕೊಲ್ಲಲು ಬಯಸಿದರು. “ಮಹಾಯಾಜಕರು ಲಾಜರನನ್ನು ಕೊಲ್ಲಬೇಕೆಂದು ಆಲೋಚಿಸಿದರು. ಯಾಕಂದರೆ ಅವನ ದೆಸೆಯಿಂದ ಯೆಹೂದ್ಯರಲ್ಲಿ ಅನೇಕರು ಹೋಗಿ ಯೇಸುವನ್ನು ನಂಬುವವರಾದರು.” ಇದರಿಂದ ಅವರ ಘೋರ ದುಷ್ಟತನವು ಮತ್ತಷ್ಟು ಬಯಲಿಗೆಳೆಯಲ್ಪಟ್ಟಿತು. (ಯೋಹಾನ 12:10, 11) ಆಗತಾನೆ ಲಾಜರನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದನು, ಮತ್ತು ಆ ಯಾಜಕರು ಅವನು ಪುನಃ ಸಾಯುವುದನ್ನು ನೋಡಬಯಸಿದರು! ಅವರು ದೇವರ ಚಿತ್ತದ ಕುರಿತು ಅಥವಾ ಸಾಮಾನ್ಯ ಜನರ ಹಿತಕ್ಷೇಮದ ಕುರಿತು ಚಿಂತಿತರಾಗಿರಲಿಲ್ಲ. ಅವರು ಸ್ವಾರ್ಥಿಗಳಾಗಿದ್ದು, ತಮ್ಮ ಸ್ಥಾನಮಾನಗಳು ಮತ್ತು ತಮ್ಮ ಪ್ರಯೋಜನಗಳ ಕುರಿತು ಮಾತ್ರವೇ ಆಸಕ್ತಿಯುಳ್ಳವರಾಗಿದ್ದರು. “ದೇವರಿಂದ ಬರುವ ಮಾನಕ್ಕಿಂತ ಮನುಷ್ಯರಿಂದ ಬರುವ ಮಾನವೇ ಅವರಿಗೆ ಇಷ್ಟವಾಗಿತ್ತು.” (ಯೋಹಾನ 12:43) ಆದರೆ ತಮ್ಮ ನಂಬಿಕೆಯ ಕೊರತೆಯ ಕಾರಣ ಅವರು ಶಿಕ್ಷೆಯನ್ನು ಅನುಭವಿಸಿದರು. ಸಾ.ಶ. 70ನೆಯ ವರ್ಷದಲ್ಲಿ, ರೋಮನ್ ಸೇನೆಗಳು ಹಿಂದಿರುಗಿ ಬಂದವು ಮತ್ತು ಅವರ ಸ್ಥಳವನ್ನೂ ಜನಾಂಗವನ್ನೂ ಅವರಲ್ಲಿ ಅನೇಕರನ್ನೂ ನಾಶಮಾಡಿದವು.
ನಮ್ಮ ಸಮಯದಲ್ಲಿ ಪ್ರದರ್ಶಿಸಲ್ಪಟ್ಟಿರುವ ನಂಬಿಕೆ
11. ಈ ಶತಮಾನದ ಆರಂಭದಲ್ಲಿ, ನಿಜ ನಂಬಿಕೆಯು ಹೇಗೆ ಪ್ರದರ್ಶಿಸಲ್ಪಟ್ಟಿತು?
11 ಈ ಶತಮಾನದಲ್ಲಿಯೂ, ನಿಜ ನಂಬಿಕೆಯುಳ್ಳ ಅನೇಕ ಸ್ತ್ರೀಪುರುಷರಿದ್ದಾರೆ. ದೃಷ್ಟಾಂತಕ್ಕಾಗಿ, 1900ಗಳ ಆರಂಭದಲ್ಲಿ ಸಾಮಾನ್ಯ ಜನರು ಒಂದು ಶಾಂತಿಭರಿತ, ಸಂತುಷ್ಟ ಭವಿಷ್ಯತ್ತಿಗಾಗಿ ಮುನ್ನೋಡುತ್ತಿದ್ದರು. ಅದೇ ಸಮಯದಲ್ಲಿ ಯೆಹೋವನಲ್ಲಿ ನಂಬಿಕೆಯಿಟ್ಟವರು, ಮಾನವಕುಲವು ಅತ್ಯಂತ ತೊಂದರೆಯ ಸಮಯವನ್ನು ಪ್ರವೇಶಿಸಲಿಕ್ಕಿದೆ ಎಂಬುದನ್ನು ಪ್ರಕಟಿಸುತ್ತಿದ್ದರು. ದೇವರ ವಾಕ್ಯದಲ್ಲಿ, ಮತ್ತಾಯ ಅಧ್ಯಾಯ 24, 2 ತಿಮೊಥೆಯ ಅಧ್ಯಾಯ 3, ಮತ್ತು ಬೇರೆ ಕಡೆಗಳಲ್ಲಿ ಇದೇ ವಿಷಯವು ಮುಂತಿಳಿಸಲ್ಪಟ್ಟಿತು. ಏನು ಸಂಭವಿಸುವುದೆಂದು ನಂಬಿಕೆಯುಳ್ಳ ಆ ಜನರು ಹೇಳಿದ್ದರೋ ಅದು, 1914ರಲ್ಲಿ Iನೆಯ ಲೋಕ ಯುದ್ಧದೊಂದಿಗೆ ಆರಂಭಿಸುತ್ತಾ, ವಾಸ್ತವವಾಗಿ ಸಂಭವಿಸಿತು. ಲೋಕವು ನಿಜವಾಗಿಯೂ, “ನಿಭಾಯಿಸಲು ಕಷ್ಟಕರವಾದ ಕಠಿನ ಸಮಯ” (NW)ಗಳೊಂದಿಗೆ ಮುಂತಿಳಿಸಲ್ಪಟ್ಟ “ಕಡೇ ದಿವಸಗಳನ್ನು” ಪ್ರವೇಶಿಸಿತ್ತು. (2 ತಿಮೊಥೆಯ 3:1) ಲೋಕ ಪರಿಸ್ಥಿತಿಗಳ ಕುರಿತಾದ ಸತ್ಯವು ಇತರರಿಗೆ ತಿಳಿದಿರದಿದ್ದಾಗ, ಯೆಹೋವನ ಸೇವಕರಿಗೆ ಅದು ಏಕೆ ತಿಳಿದಿತ್ತು? ಏಕೆಂದರೆ ಯೆಹೋಶುವನಂತೆ, ಯೆಹೋವನ ಒಂದು ಮಾತೂ ನೆರವೇರದೆ ಹೋಗುವುದಿಲ್ಲ ಎಂಬ ನಂಬಿಕೆ ಅವರಿಗಿತ್ತು.
12. ಇಂದು, ಯೆಹೋವನ ಯಾವ ವಾಗ್ದಾನದಲ್ಲಿ ಆತನ ಸೇವಕರು ಪೂರ್ಣವಾಗಿ ಭರವಸೆಯನ್ನಿಡುತ್ತಾರೆ?
12 ಇಂದು, ಆತನಲ್ಲಿ ತಮ್ಮ ಭರವಸೆಯನ್ನಿಡುವ ಯೆಹೋವನ ಸೇವಕರ ಸಂಖ್ಯೆಯು ಲೋಕವ್ಯಾಪಕವಾಗಿ ಸುಮಾರು ಅರವತ್ತು ಲಕ್ಷವಾಗಿದೆ. ದೇವರ ಪ್ರವಾದನಾತ್ಮಕ ವಾಕ್ಯದ ನೆರವೇರಿಕೆಯಲ್ಲಿನ ಪುರಾವೆಯಿಂದಾಗಿ, ಅತಿ ಬೇಗನೆ ದೇವರು ಈ ಹಿಂಸಾತ್ಮಕ, ಅನೈತಿಕ ವಿಷಯಗಳ ವ್ಯವಸ್ಥೆಯನ್ನು ಅಂತ್ಯಗೊಳಿಸುವನೆಂಬುದು ಅವರಿಗೆ ತಿಳಿದಿದೆ. ಆದುದರಿಂದ, ತಾವು 1 ಯೋಹಾನ 2:17ರ ನೆರವೇರಿಕೆಯನ್ನು ನೋಡಲಿರುವ ಸಮಯವು ಹತ್ತಿರವಿದೆಯೆಂದು ಅವರಿಗೆ ಭರವಸೆಯಿದೆ. ಅದು ಹೇಳುವುದು: “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” ಈ ವಾಗ್ದಾನವನ್ನು ಯೆಹೋವನು ನೆರವೇರಿಸುವನೆಂದು ಆತನ ಸೇವಕರಿಗೆ ಸಂಪೂರ್ಣ ಭರವಸೆಯಿದೆ.
13. ನೀವು ಎಷ್ಟರ ಮಟ್ಟಿಗೆ ಯೆಹೋವನಲ್ಲಿ ಭರವಸೆಯನ್ನಿಡಬಲ್ಲಿರಿ?
13 ನೀವು ಎಷ್ಟರ ಮಟ್ಟಿಗೆ ಯೆಹೋವನಲ್ಲಿ ಭರವಸೆಯಿಡಬಲ್ಲಿರಿ? ನೀವು ಆತನಲ್ಲಿ ಸಂಪೂರ್ಣವಾಗಿ ಭರವಸೆಯನ್ನಿಡಬಲ್ಲಿರಿ! ಆತನನ್ನು ಸೇವಿಸುತ್ತಿರುವುದಕ್ಕಾಗಿ ನೀವು ಈಗ ನಿಮ್ಮ ಜೀವವನ್ನು ಕಳೆದುಕೊಂಡರೂ, ಪುನರುತ್ಥಾನದಲ್ಲಿ ಆತನು ನಿಮಗೆ ಒಂದು ಹೆಚ್ಚು ಭವ್ಯವಾದ ಜೀವನವನ್ನು ಕೊಡುವನು. ಯೇಸು ನಮಗೆ ಆಶ್ವಾಸನೆ ನೀಡುವುದು: “[“ಸ್ಮರಣೆಯ,” NW] ಸಮಾಧಿಗಳಲ್ಲಿ [ಅಂದರೆ, ದೇವರ ಸ್ಮರಣೆಯಲ್ಲಿ]ರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.” (ಯೋಹಾನ 5:28, 29) ಅದನ್ನು ಮಾಡಸಾಧ್ಯವಿರುವ ಯಾವನೇ ವೈದ್ಯ, ರಾಜಕೀಯ ನಾಯಕ, ವಿಜ್ಞಾನಿ, ವ್ಯಾಪಾರಿ ಅಥವಾ ಬೇರೆ ಯಾವನೇ ಮನುಷ್ಯನನ್ನು ನೀವು ಬಲ್ಲಿರೊ? ಅವರದನ್ನು ಮಾಡಲಾರರೆಂದು ಅವರ ಗತಕಾಲದ ದಾಖಲೆಯು ತೋರಿಸುತ್ತದೆ. ಯೆಹೋವನು ಅದನ್ನು ಮಾಡಬಲ್ಲನು, ಮತ್ತು ಮಾಡುವನು!
ನಂಬಿಗಸ್ತರಿಗಾಗಿ ಒಂದು ಅದ್ಭುತಕರವಾದ ಭವಿಷ್ಯತ್ತು
14. ದೇವರ ವಾಕ್ಯವು ನಂಬಿಗಸ್ತರಿಗೆ ಎಂತಹ ಅದ್ಭುತಕರವಾದ ಭವಿಷ್ಯತ್ತನ್ನು ವಾಗ್ದಾನಿಸುತ್ತದೆ?
14 ದೇವರ ಸ್ವರ್ಗೀಯ ರಾಜ್ಯದ ಕೆಳಗೆ ಒಂದು ಹೊಸ ಲೋಕದ ನಿಶ್ಚಯತೆಯನ್ನು ಯೇಸು ಹೀಗೆ ಹೇಳುತ್ತಾ ಸೂಚಿಸಿದನು: “ಶಾಂತರು ಧನ್ಯರು; ಅವರು ಭೂಮಿಗೆ ಬಾಧ್ಯರಾಗುವರು.” (ಮತ್ತಾಯ 5:5) ಅದು ಕೀರ್ತನೆ 37:29ರಲ್ಲಿರುವ ದೇವರ ವಾಗ್ದಾನವನ್ನು ಪುಷ್ಟೀಕರಿಸಿತು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.” ಮತ್ತು ಯೇಸುವಿನ ಮರಣಕ್ಕೆ ಸ್ವಲ್ಪ ಮುಂಚೆ, ಒಬ್ಬ ದುಷ್ಕರ್ಮಿಯು ಅವನಲ್ಲಿ ನಂಬಿಕೆಯಿಟ್ಟಾಗ, ಯೇಸು ಆ ಮನುಷ್ಯನಿಗೆ ಹೇಳಿದ್ದು: “ನನ್ನ ಸಂಗಡ ಪರದೈಸಿನಲ್ಲಿರುವಿ.” (ಲೂಕ 23:43) ಹೌದು, ದೇವರ ರಾಜ್ಯದ ಅರಸನೋಪಾದಿ, ಆ ಪ್ರಮೋದವನದಲ್ಲಿ ಸದಾಕಾಲ ಜೀವಿಸುವ ಅವಕಾಶದೊಂದಿಗೆ ಈ ಮನುಷ್ಯನು ಇದೇ ಭೂಮಿಯಲ್ಲಿ ಪುನರುತ್ಥಾನಗೊಳಿಸಲ್ಪಡುವಂತೆ ಯೇಸು ಮಾಡುವನು. ಇಂದು ಯೆಹೋವನ ರಾಜ್ಯದಲ್ಲಿ ನಂಬಿಕೆಯಿಡುವವರೆಲ್ಲರೂ ಪ್ರಮೋದವನದಲ್ಲಿ ಜೀವಿಸುವುದನ್ನು ಎದುರುನೋಡಸಾಧ್ಯವಿದೆ. ಆಗ, “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದೆಹೋಯಿತು.”—ಪ್ರಕಟನೆ 21:4.
15, 16. ಹೊಸ ಲೋಕದಲ್ಲಿ ಜೀವನವು ಏಕೆ ಅಷ್ಟೊಂದು ಶಾಂತಿಭರಿತವಾಗಿರುವುದು?
15 ಆ ಹೊಸ ಲೋಕವನ್ನು ನಾವು ನಮ್ಮ ಮನಸ್ಸುಗಳಲ್ಲಿ ಕಲ್ಪನೆ ಮಾಡಿಕೊಳ್ಳೋಣ. ನಾವು ಈಗಾಗಲೇ ಅದರಲ್ಲಿ ಜೀವಿಸುತ್ತಿದ್ದೇವೆಂದು ಊಹಿಸಿಕೊಳ್ಳಿರಿ. ಆ ಕೂಡಲೇ ನಾವು ಪೂರ್ಣ ಶಾಂತಿಯಲ್ಲಿ ಜೊತೆಯಾಗಿ ಜೀವಿಸುತ್ತಿರುವ ಸಂತೋಷಭರಿತ ಜನರನ್ನು ಎಲ್ಲೆಡೆಯೂ ಗಮನಿಸುತ್ತೇವೆ. ಯೆಶಾಯ 14:7ರಲ್ಲಿ ವರ್ಣಿಸಲ್ಪಟ್ಟಿರುವ ಪರಿಸ್ಥಿತಿಗಳಿಗೆ ಹೋಲುವಂತಹ ಪರಿಸ್ಥಿತಿಗಳಲ್ಲಿ ಅವರು ಆನಂದಿಸುತ್ತಿದ್ದಾರೆ: “ಭೂಲೋಕವೆಲ್ಲಾ ಶಾಂತವಾಗಿ ವಿಶ್ರಾಂತಿಗೊಂಡಿದೆ, ಜನರು ಹರ್ಷಧ್ವನಿಗೈಯುತ್ತಾರೆ.” ಅವರು ಏಕೆ ಹಾಗಿದ್ದಾರೆ? ಒಂದು ಕಾರಣ, ಮನೆಗಳ ಬಾಗಿಲುಗಳಿಗೆ ಬೀಗಗಳಿಲ್ಲವೆಂಬುದನ್ನು ಗಮನಿಸಿರಿ. ಬೀಗಗಳ ಅಗತ್ಯವಿಲ್ಲ, ಯಾಕಂದರೆ ಅಲ್ಲಿ ಪಾತಕ ಅಥವಾ ಹಿಂಸಾಚಾರವಿಲ್ಲ. ಅದು ಹೇಗಿರುವುದೆಂದು ದೇವರ ವಾಕ್ಯವು ಹೇಳಿತೋ ಹಾಗೆಯೇ ಇರುವುದು: “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.”—ಮೀಕ 4:4.
16 ಇನ್ನು ಮುಂದೆ ಯುದ್ಧವೂ ಇಲ್ಲ, ಯಾಕಂದರೆ ಈ ಹೊಸ ಲೋಕದಲ್ಲಿ ಯುದ್ಧವು ಬಹಿಷ್ಕರಿಸಲ್ಪಟ್ಟಿದೆ. ಎಲ್ಲ ಶಸ್ತ್ರಗಳು ಶಾಂತಿಯ ಸಲಕರಣೆಗಳಾಗಿ ಬದಲಾಯಿಸಲ್ಪಟ್ಟಿವೆ. ಪೂರ್ಣ ಅರ್ಥದಲ್ಲಿ, ಯೆಶಾಯ 2:4 ನೆರವೇರಿಸಲ್ಪಟ್ಟಿದೆ: “ಅವರು ತಮ್ಮ ಆಯುಧಗಳನ್ನು ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು. ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.” ಆದರೆ, ನಾವು ಅದನ್ನೇ ನಿರೀಕ್ಷಿಸಿದ್ದೇವೆ! ಏಕೆ? ಏಕೆಂದರೆ ಹೊಸ ಲೋಕದ ಅನೇಕ ನಿವಾಸಿಗಳು, ಹಳೆಯ ಲೋಕದಲ್ಲಿ ದೇವರನ್ನು ಸೇವಿಸುತ್ತಿರುವಾಗಲೇ ಹಾಗೆ ಮಾಡಲು ಕಲಿತಿದ್ದರು.
17. ದೇವರ ರಾಜ್ಯದ ಕೆಳಗೆ ಯಾವ ಜೀವನ ಪರಿಸ್ಥಿತಿಗಳು ಇರುವವು?
17 ನೀವು ಗಮನಿಸುವಂತಹ ಇನ್ನೊಂದು ವಿಷಯವೇನೆಂದರೆ, ಬಡತನವಿಲ್ಲ. ಯಾರೊಬ್ಬನೂ ದರಿದ್ರ ಗುಡಿಸಿಲಿನಲ್ಲಿ ಜೀವಿಸುವುದಿಲ್ಲ ಅಥವಾ ಹರಕು ಬಟ್ಟೆಗಳನ್ನು ಧರಿಸುವುದಿಲ್ಲ ಅಥವಾ ನಿರ್ಗತಿಕನಾಗಿರುವುದಿಲ್ಲ. ಪ್ರತಿಯೊಬ್ಬನಿಗೂ ಜೀವನ ಸೌಕರ್ಯಗಳಿರುವ ಮನೆ ಮತ್ತು ಸುಂದರವಾದ ಮರಗಳು ಹಾಗೂ ಹೂವುಗಳುಳ್ಳ ಸುಸ್ಥಿತಿಯ ಆಸ್ತಿಯಿದೆ. (ಯೆಶಾಯ 35:1, 2; 65:21, 22; ಯೆಹೆಜ್ಕೇಲ 34:27) ಮತ್ತು ಹಸಿವೆಯೂ ಇಲ್ಲ, ಯಾಕಂದರೆ ಎಲ್ಲರಿಗೂ ಸಾಕಷ್ಟು ಆಹಾರವಿರುವುದು ಎಂಬ ತನ್ನ ವಾಗ್ದಾನವನ್ನು ದೇವರು ನೆರವೇರಿಸಿದ್ದಾನೆ: “ಭೂಮಿಯ ಮೇಲೆ ಬೆಳೆಯು ಸಂಪದ್ಭರಿತವಾಗಿರುವುದು. ಪರ್ವತಗಳ ಮೇಲೆಲ್ಲಾ ಬೆಳೆಯು ಉಕ್ಕಿಹರಿಯುವುದು.” (ಕೀರ್ತನೆ 72:16, NW) ನಿಜವಾಗಿಯೂ, ದೇವರ ರಾಜ್ಯದ ಮಾರ್ಗದರ್ಶನದ ಕೆಳಗೆ, ದೇವರು ಹಿಂದೆ ಏದೆನಿನಲ್ಲಿ ಉದ್ದೇಶಿಸಿದಂತೆ, ಒಂದು ಮಹಿಮಾಭರಿತವಾದ ಪ್ರಮೋದವನವು ಭೂವ್ಯಾಪಕವಾಗಿ ವಿಸ್ತರಿಸುವುದು.—ಆದಿಕಾಂಡ 2:8.
18. ಆ ಹೊಸ ಲೋಕದಲ್ಲಿ ಯಾವ ವಿಷಯಗಳು ಇನ್ನು ಮುಂದೆ ಜನರಿಗೆ ಅಪಾಯವನ್ನೊಡ್ಡುವುದಿಲ್ಲ?
18 ಪ್ರತಿಯೊಬ್ಬರಿಗೂ ಇರುವ ಹುರುಪಿನ ಶಕ್ತಿಯನ್ನು ನೋಡಿಯೂ ನೀವು ಆಶ್ಚರ್ಯಪಡುತ್ತೀರಿ. ಏಕೆಂದರೆ ಅವರಿಗೆ ಈಗ ಪರಿಪೂರ್ಣ ದೇಹಗಳು ಮತ್ತು ಮನಸ್ಸುಗಳು ಇವೆ. ಇನ್ನು ಮುಂದೆ ಅಸ್ವಸ್ಥತೆ, ವೇದನೆ ಅಥವಾ ಮರಣವಿಲ್ಲ. ಯಾರೊಬ್ಬರೂ ಗಾಲಿಕುರ್ಚಿಯಲ್ಲಿ ಅಥವಾ ಆಸ್ಪತ್ರೆಯ ಮಂಚದಲ್ಲಿಲ್ಲ. ಅದೆಲ್ಲವೂ ಸದಾಕಾಲಕ್ಕಾಗಿ ಇಲ್ಲವಾಗಿದೆ. (ಯೆಶಾಯ 33:24; 35:5, 6) ಅಷ್ಟೇಕೆ, ಪ್ರಾಣಿಗಳಲ್ಲಿ ಒಂದೂ ಅಪಾಯಕಾರಿಯಾಗಿರುವುದಿಲ್ಲ, ಯಾಕಂದರೆ ದೇವರ ಶಕ್ತಿಯ ಮೂಲಕ ಅವುಗಳನ್ನು ಶಾಂತಸ್ವಭಾವದವುಗಳಾಗಿ ಮಾಡಲಾಗಿದೆ!—ಯೆಶಾಯ 11:6-8; 65:25; ಯೆಹೆಜ್ಕೇಲ 34:25.
19. ಹೊಸ ಲೋಕದಲ್ಲಿನ ಪ್ರತಿಯೊಂದು ದಿನವು ಏಕೆ “ಮಹಾಸೌಖ್ಯ”ದ ದಿನವಾಗಿರುವುದು?
19 ಈ ಹೊಸ ಲೋಕದ ನಂಬಿಗಸ್ತ ನಿವಾಸಿಗಳಿಂದ ಎಷ್ಟು ಅದ್ಭುತಕರವಾದ ನಾಗರಿಕತೆಯು ರಚಿಸಲ್ಪಟ್ಟಿದೆ! ಅವರ ಶಕ್ತಿ ಮತ್ತು ಕೌಶಲಗಳು ಹಾಗೂ ಭೂಮಿಯ ಸಂಪತ್ತು, ಹಾನಿಕರವಾದ ಬೆನ್ನಟ್ಟುವಿಕೆಗಳಿಗಾಗಿ ಅಲ್ಲ, ಬದಲಿಗೆ ಪ್ರಯೋಜನಕರವಾದ ಬೆನ್ನಟ್ಟುವಿಕೆಗಳಿಗಾಗಿ ವಿನಿಯೋಗಿಸಲ್ಪಡುತ್ತದೆ; ಇತರರೊಂದಿಗೆ ಪ್ರತಿಸ್ಪರ್ಧಿಸಲು ಅಲ್ಲ ಬದಲಾಗಿ ಅವರೊಂದಿಗೆ ಸಹಕರಿಸಲಿಕ್ಕಾಗಿ ಉಪಯೋಗಿಸಲ್ಪಡುತ್ತದೆ. ಮತ್ತು ನೀವು ಭೇಟಿಯಾಗುವ ಪ್ರತಿಯೊಬ್ಬ ವ್ಯಕ್ತಿಯು, ನೀವು ಭರವಸೆಯನ್ನಿಡಸಾಧ್ಯವಿರುವ ಒಬ್ಬ ವ್ಯಕ್ತಿಯಾಗಿದ್ದಾನೆ, ಏಕಂದರೆ ದೇವರು ವಾಗ್ದಾನಿಸಿದಂತೆ, ಎಲ್ಲರೂ “ಯೆಹೋವನಿಂದ ಶಿಕ್ಷಿತರು.” (ಯೆಶಾಯ 54:13) ಪ್ರತಿಯೊಬ್ಬರೂ ದೇವರ ನಿಯಮಗಳಿಂದ ನಡಿಸಲ್ಪಡುವುದರಿಂದ, “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” (ಯೆಶಾಯ 11:9) ನಿಜವಾಗಿಯೂ, ಈ ಹೊಸ ಲೋಕದಲ್ಲಿ ಪ್ರತಿ ದಿನವು, ಕೀರ್ತನೆ 37:11 ಹೇಳಿರುವಂತೆ “ಮಹಾಸೌಖ್ಯ”ದ ದಿನವಾಗಿರುವುದು.
ಒಂದು ಸಂತೋಷಕರ ಭವಿಷ್ಯತ್ತಿನ ಖಾತರಿ ಕೊಡಲ್ಪಡುತ್ತದೆ
20. ಒಂದು ಶಾಂತಿಭರಿತ ಭವಿಷ್ಯತ್ತನ್ನು ಆನಂದಿಸಲು ನಾವೇನು ಮಾಡಬೇಕು?
20 ಆ ಸಂತೋಷದ ಭವಿಷ್ಯತ್ತಿನ ಭಾಗವಾಗಿರಲು ನಾವೇನು ಮಾಡಬೇಕು? ಯೆಶಾಯ 55:6 ನಮಗನ್ನುವುದು: “ಯೆಹೋವನು ಸಿಕ್ಕುವ ಕಾಲದಲ್ಲಿ, ಆತನನ್ನು ಆಶ್ರಯಿಸಿರಿ [“ಹುಡುಕಿರಿ,” NW]. ಆತನು ಸಮೀಪವಿರುವಾಗ ಆತನಿಗೆ ಬಿನ್ನಹಮಾಡಿರಿ.” ಮತ್ತು ನಾವು ಆತನನ್ನು ಹುಡುಕಿದಂತೆ, ನಮ್ಮ ಮನೋಭಾವವು ಕೀರ್ತನೆ 143:10ರಲ್ಲಿ ವರ್ಣಿಸಲ್ಪಟ್ಟಿರುವಂತೆ ಇರಬೇಕು: “ನಿನ್ನ ಚಿತ್ತದಂತೆ ನಡಕೊಳ್ಳುವದನ್ನು ನನಗೆ ಕಲಿಸು; ನನ್ನ ದೇವರು ನೀನಲ್ಲವೋ?” ಇದನ್ನು ಮಾಡುವವರು, ಈ ಕಡೇ ದಿವಸಗಳಲ್ಲಿ ಯೆಹೋವನ ಮುಂದೆ ನಿರ್ದೋಷಿಗಳಾಗಿ ನಡೆಯಬಲ್ಲರು ಮತ್ತು ಒಂದು ಉತ್ತಮ ಭವಿಷ್ಯತ್ತಿಗಾಗಿ ಎದುರುನೋಡಬಲ್ಲರು. “ಒಳ್ಳೇ ನಡತೆಯುಳ್ಳವನನ್ನು ನೋಡು, ಯಥಾರ್ಥನನ್ನು ಲಕ್ಷಿಸು; ಶಾಂತನಿಗೆ ಸಂತಾನವೃದ್ಧಿ ಆಗುವದು. ದ್ರೋಹಿಗಳೆಲ್ಲರೂ ನಾಶವಾಗುವರು; ದುಷ್ಟರ ಸಂತಾನವು ತೆಗೆದುಹಾಕಲ್ಪಡುವದು.”—ಕೀರ್ತನೆ 37:37, 38.
21, 22. ದೇವರು ಇಂದು ಏನನ್ನು ರಚಿಸುತ್ತಿದ್ದಾನೆ, ಮತ್ತು ಆ ತರಬೇತಿಯು ಹೇಗೆ ಪೂರೈಸಲ್ಪಡುತ್ತಿದೆ?
21 ತನ್ನ ಚಿತ್ತವನ್ನು ಮಾಡಲು ಬಯಸುವವರನ್ನು ಯೆಹೋವನು ಈಗಲೇ ಪ್ರತಿಯೊಂದು ಜನಾಂಗದಿಂದ ಕರೆಯುತ್ತಿದ್ದಾನೆ. ಆತನು ಅವರನ್ನು ತನ್ನ ಹೊಸ ಭೂಸಮಾಜದ ತಳಪಾಯದೋಪಾದಿ ರೂಪಿಸುತ್ತಾ ಇದ್ದಾನೆ. ಇದು ಬೈಬಲ್ ಪ್ರವಾದನೆಯು ಮುಂತಿಳಿಸಿದಂತೆಯೇ ಇದೆ: “ಅಂತ್ಯಕಾಲದಲ್ಲಿ [ನಾವು ಈಗ ಜೀವಿಸುತ್ತಿರುವ ಸಮಯದಲ್ಲಿ] . . . ಹೊರಟುಬಂದ ಬಹು ಜನಾಂಗದವರು—ಬನ್ನಿರಿ, ಯೆಹೋವನ ಪರ್ವತಕ್ಕೆ [ಆತನ ಉನ್ನತಕ್ಕೇರಿಸಲ್ಪಟ್ಟಿರುವ ಸತ್ಯಾರಾಧನೆಯ ಕಡೆಗೆ] ಹೋಗೋಣ! . . . ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು.”—ಯೆಶಾಯ 2:2, 3.
22 ಪ್ರಕಟನೆ 7:9 ಇವರನ್ನು, ‘ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವ ಮಹಾ ಸಮೂಹ’ ಎಂದು ವರ್ಣಿಸುತ್ತದೆ. 14ನೆಯ ವಚನವು ತಿಳಿಸುವುದು: “ಇವರು ಆ ಮಹಾ ಹಿಂಸೆ [“ಸಂಕಟ,” NW]ಯನ್ನು ಅನುಭವಿಸಿ ಬಂದವರು,” ಅವರು ಸದ್ಯದ ವ್ಯವಸ್ಥೆಯ ಅಂತ್ಯವನ್ನು ಪಾರಾಗುತ್ತಾರೆ. ಹೊಸ ಲೋಕಕ್ಕಾಗಿರುವ ಈ ತಳಪಾಯವು—ಪ್ರತಿ ವರ್ಷ ಅನೇಕ ಹೊಸಬರು ಅದರ ಭಾಗವಾಗುತ್ತಾ—ಈಗ ಸುಮಾರು ಅರವತ್ತು ಲಕ್ಷ ಮಂದಿಯಿಂದ ಕೂಡಿದೆ. ಯೆಹೋವನ ಈ ಎಲ್ಲ ನಂಬಿಗಸ್ತ ಸೇವಕರು, ಆತನ ಹೊಸ ಲೋಕದಲ್ಲಿನ ಜೀವಿತಕ್ಕಾಗಿ ತರಬೇತುಗೊಳಿಸಲ್ಪಡುತ್ತಿದ್ದಾರೆ. ಈ ಭೂಮಿಯನ್ನು ಒಂದು ಪ್ರಮೋದವನವಾಗಿ ಪರಿವರ್ತಿಸಲಿಕ್ಕಾಗಿ ಅಗತ್ಯವಿರುವ ಆತ್ಮಿಕ ಮತ್ತು ಇತರ ಕೌಶಲಗಳನ್ನು ಅವರು ಕಲಿಯುತ್ತಿದ್ದಾರೆ. ಮತ್ತು ಆ ಪ್ರಮೋದವನವು ಒಂದು ವಾಸ್ತವಿಕತೆಯಾಗಿ ಪರಿಣಮಿಸುವುದೆಂದು ಅವರಿಗೆ ಪೂರ್ಣ ಭರವಸೆಯಿದೆ, ಯಾಕಂದರೆ “ವಾಗ್ದಾನಮಾಡಿದಾತನು ನಂಬಿಗಸ್ತನು.”—ಇಬ್ರಿಯ 10:23.
ಪುನರ್ವಿಮರ್ಶೆಗಾಗಿ ಅಂಶಗಳು
◻ ನಂಬಿಕೆಯ ಕೊರತೆಯು, ಪ್ರಥಮ ಶತಮಾನದಲ್ಲಿ ಯಾವ ಫಲಿತಾಂಶಗಳನ್ನು ತಂದಿತು?
◻ ದೇವರ ಸೇವಕರು ಎಷ್ಟರ ಮಟ್ಟಿಗೆ ಆತನಲ್ಲಿ ಭರವಸೆಯಿಡಬಲ್ಲರು?
◻ ನಂಬಿಗಸ್ತರಿಗಾಗಿ ಯಾವ ಭವಿಷ್ಯತ್ತು ಕಾದಿರಿಸಲ್ಪಟ್ಟಿದೆ?
◻ ದೇವರ ಹೊಸ ಲೋಕದಲ್ಲಿ ನಮಗಾಗಿ ಒಂದು ಸಂತೋಷದ ಭವಿಷ್ಯತ್ತನ್ನು ಖಚಿತಪಡಿಸಿಕೊಳ್ಳಲು ನಾವೇನನ್ನು ಮಾಡಬೇಕು?
[ಪುಟ 18 ರಲ್ಲಿರುವ ಚಿತ್ರ]
ಈಗಾಗಲೇ ಯೆಹೋವನು, ಹೊಸ ಭೂಸಮಾಜದ ತಳಪಾಯವನ್ನು ರಚಿಸುತ್ತಿದ್ದಾನೆ