“ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ”
“ದೇವರ ಚಿತ್ತವನ್ನು ನೆರವೇರಿಸಿ ವಾಗ್ದಾನದ ಫಲವನ್ನು ಹೊಂದಬೇಕಾದರೆ, ನಿಮಗೆ ತಾಳ್ಮೆ ಬೇಕು.”—ಇಬ್ರಿಯ 10:36.
1, 2. (ಎ) ಪ್ರಥಮ ಶತಮಾನದ ಅನೇಕ ಕ್ರೈಸ್ತರಿಗೆ ಏನು ಸಂಭವಿಸಿತು? (ಬಿ) ನಂಬಿಕೆಯು ಏಕೆ ಸುಲಭವಾಗಿ ದುರ್ಬಲವಾಗಬಲ್ಲದು?
ಬೈಬಲ್ ಲೇಖಕರಲ್ಲಿ, ನಂಬಿಕೆಯ ಕುರಿತಾಗಿ ಅತಿ ಹೆಚ್ಚಾಗಿ ಬರೆದ ವ್ಯಕ್ತಿಯೆಂದರೆ ಅಪೊಸ್ತಲ ಪೌಲನೊಬ್ಬನೇ. ಪದೇ ಪದೇ ಅವನು, ಯಾರ ನಂಬಿಕೆಯು ದುರ್ಬಲವಾಗಿತ್ತೊ ಅಥವಾ ನಿರ್ಜೀವವಾಗಿತ್ತೊ ಅಂತಹವರ ಕುರಿತಾಗಿ ಮಾತಾಡಿದನು. ಉದಾಹರಣೆಗಾಗಿ, ಹುಮೆನಾಯ ಮತ್ತು ಅಲೆಕ್ಸಾಂದರನು “ಕ್ರಿಸ್ತನಂಬಿಕೆಯ ವಿಷಯದಲ್ಲಿ ಹಡಗು ಒಡೆದು ನಷ್ಟಪಟ್ಟರು”. (1 ತಿಮೊಥೆಯ 1:19, 20) ದೇಮನು ಪೌಲನನ್ನು ಬಿಟ್ಟುಹೋದನು, ಯಾಕೆಂದರೆ ಅವನು “ಇಹಲೋಕವನ್ನು ಪ್ರೀತಿಸಿ”ದನು. (2 ತಿಮೊಥೆಯ 4:10) ಕೆಲವರು ತಮ್ಮ ಅಕ್ರೈಸ್ತ, ಬೇಜವಾಬ್ದಾರಿ ಕೃತ್ಯಗಳಿಂದಾಗಿ “ನಂಬಿಕೆಯನ್ನು ತಿರಸ್ಕರಿಸಿ”ದರು. ಇತರರು ಅಸತ್ಯವಾದ ವಿವೇಕದಿಂದ ವಂಚಿಸಲ್ಪಟ್ಟು, “ನಂಬಿಕೆಯಿಂದ ಭ್ರಷ್ಟರಾದರು.”—1 ತಿಮೊಥೆಯ 5:8; 6:20, 21.
2 ಆ ಅಭಿಷಿಕ್ತ ಕ್ರೈಸ್ತರು ಬಹುಮಾನವನ್ನು ತರಲಿದ್ದಂತಹ ನಂಬಿಕೆಯನ್ನು ಪ್ರದರ್ಶಿಸುವುದರಲ್ಲಿ ತಪ್ಪಿಹೋದದ್ದೇಕೆ? “ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ.” (ಇಬ್ರಿಯ 11:1) ನಮಗೆ ಅಗೋಚರವಾದವುಗಳಲ್ಲಿ ನಾವು ನಂಬಿಕೆಯನ್ನಿಡುತ್ತೇವೆ. ಗೋಚರವಾಗುವ ವಿಷಯಗಳಿಗಾಗಿ ನಂಬಿಕೆಯು ಬೇಕಾಗಿಲ್ಲ. ಅದೃಶ್ಯವಾಗಿರುವ ಆತ್ಮಿಕ ಐಶ್ವರ್ಯಗಳಿಗಿಂತಲೂ, ದೃಶ್ಯವಾಗಿರುವ ಧನಕ್ಕಾಗಿ ಕೆಲಸಮಾಡುವುದು ಹೆಚ್ಚು ಸುಲಭ. (ಮತ್ತಾಯ 19:21, 22) “ಶರೀರದಾಶೆ ಕಣ್ಣಿನಾಶೆ”ಯಂತಹ ಕಣ್ಣಿಗೆ ಕಾಣುವಂತಹ ಅನೇಕ ಸಂಗತಿಗಳು, ನಮ್ಮ ಅಪರಿಪೂರ್ಣ ಶರೀರವನ್ನು ಬಲವಾಗಿ ಆಕರ್ಷಿಸಬಲ್ಲವು ಮತ್ತು ನಮ್ಮ ನಂಬಿಕೆಯನ್ನು ದುರ್ಬಲಗೊಳಿಸಬಲ್ಲವು.—1 ಯೋಹಾನ 2:16.
3. ಒಬ್ಬ ಕ್ರೈಸ್ತನು ಯಾವ ರೀತಿಯ ನಂಬಿಕೆಯನ್ನು ಬೆಳೆಸಿಕೊಳ್ಳಬೇಕು?
3 ಆದರೂ ಪೌಲನು ಹೇಳುವುದೇನೆಂದರೆ, “ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.” ಮೋಶೆಗೆ ಇಂತಹ ನಂಬಿಕೆಯಿತ್ತು. ಅವನು “ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದನು” ಮತ್ತು “ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.” (ಇಬ್ರಿಯ 11:6, 24, 26, 27) ಒಬ್ಬ ಕ್ರೈಸ್ತನಿಗೆ ಇಂತಹ ನಂಬಿಕೆಯೇ ಆವಶ್ಯಕವಾಗಿದೆ. ಹಿಂದಿನ ಲೇಖನದಲ್ಲಿ ಗಮನಿಸಲ್ಪಟ್ಟಿರುವಂತೆ, ಅಬ್ರಹಾಮನು ಈ ವಿಷಯದಲ್ಲಿ ಒಂದು ಉತ್ತಮ ಮಾದರಿಯಿಟ್ಟನು.
ಅಬ್ರಹಾಮನ ನಂಬಿಕೆಯ ಮಾದರಿ
4. ಅಬ್ರಹಾಮನ ಜೀವನಕ್ರಮವು, ಅವನ ನಂಬಿಕೆಯಿಂದ ಹೇಗೆ ಪ್ರಭಾವಿಸಲ್ಪಟ್ಟಿತು?
4 ಎಲ್ಲ ಜನಾಂಗಗಳಿಗೆ ಆಶೀರ್ವಾದವಾಗಿ ಪರಿಣಮಿಸಲಿರುವ ಸಂತಾನಕ್ಕೆ ಅಬ್ರಹಾಮನು ತಂದೆಯಾಗುವನೆಂದು ದೇವರು ಮಾತುಕೊಟ್ಟಾಗ, ಅವನು ಊರ್ ಪಟ್ಟಣದಲ್ಲಿದ್ದನು. (ಆದಿಕಾಂಡ 12:1-3; ಅ. ಕೃತ್ಯಗಳು 7:2, 3) ಆ ವಾಗ್ದಾನದ ಆಧಾರದ ಮೇಲೆ, ಅಬ್ರಹಾಮನು ಯೆಹೋವನಿಗೆ ವಿಧೇಯನಾಗುತ್ತಾ, ಪ್ರಥಮವಾಗಿ ಖಾರಾನ್ಗೆ ಮತ್ತು ಅನಂತರ ಕಾನಾನ್ ದೇಶಕ್ಕೆ ಹೋದನು. ಅಲ್ಲಿ ಯೆಹೋವನು, ಆ ದೇಶವನ್ನು ಅಬ್ರಹಾಮನ ಸಂತಾನಕ್ಕೆ ಕೊಡುವೆನೆಂದು ಅವನಿಗೆ ಮಾತುಕೊಟ್ಟನು. (ಆದಿಕಾಂಡ 12:7; ನೆಹೆಮೀಯ 9:7, 8) ಆದರೆ ಯೆಹೋವನು ಮಾಡಿದ ವಾಗ್ದಾನದ ಹೆಚ್ಚಿನ ಭಾಗವು, ಅಬ್ರಹಾಮನ ಮರಣದ ನಂತರ ನೆರವೇರಲಿತ್ತು. ಉದಾಹರಣೆಗಾಗಿ, ಒಂದು ಸಮಾಧಿ ಸ್ಥಳದೋಪಾದಿ ಅವನು ಖರೀದಿಸಿದ್ದ ಮಕ್ಪೇಲದ ಗವಿಯೊಂದನ್ನು ಬಿಟ್ಟು ಕಾನಾನ್ ದೇಶದ ಯಾವುದೇ ಭಾಗವು, ಸ್ವತಃ ಅಬ್ರಹಾಮನ ವಶದಲ್ಲಿರಲಿಲ್ಲ. (ಆದಿಕಾಂಡ 23:1-20) ಆದರೂ, ಅವನಿಗೆ ಯೆಹೋವನ ಮಾತಿನಲ್ಲಿ ನಂಬಿಕೆಯಿತ್ತು. ಎಲ್ಲಕ್ಕಿಂತಲೂ ಮಿಗಿಲಾಗಿ, ಅವನು ಭವಿಷ್ಯತ್ತಿನ “ಶಾಶ್ವತವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು ಅಂದರೆ ದೇವರು ಸಂಕಲ್ಪಿಸಿ ನಿರ್ಮಿಸಿದ ಪಟ್ಟಣ”ದ ಮೇಲೆ ನಂಬಿಕೆಯನ್ನಿಟ್ಟಿದ್ದನು. (ಇಬ್ರಿಯ 11:10) ಅಂತಹ ನಂಬಿಕೆಯು ಅವನಿಗೆ ಜೀವನಪರ್ಯಂತ ಪುಷ್ಟಿನೀಡಿತು.
5, 6. ಯೆಹೋವನ ವಾಗ್ದಾನದ ಸಂಬಂಧದಲ್ಲಿ ಅಬ್ರಹಾಮನ ನಂಬಿಕೆಯು ಯಾವ ವಿಧದಲ್ಲಿ ಪರೀಕ್ಷಿಸಲ್ಪಟ್ಟಿತು?
5 ಈ ವಿಷಯವನ್ನು, ಅಬ್ರಹಾಮನ ಸಂತತಿಯು ಒಂದು ಮಹಾ ಜನಾಂಗವಾಗುವುದು ಎಂಬ ವಾಗ್ದಾನದ ಸಂಬಂಧದಲ್ಲಿ ವಿಶೇಷವಾಗಿ ನೋಡಸಾಧ್ಯವಿದೆ. ಇದು ಸಾಕಾರಗೊಳ್ಳಲಿಕ್ಕೋಸ್ಕರ ಅಬ್ರಹಾಮನಿಗೆ ಒಬ್ಬ ಮಗನಿರಬೇಕಿತ್ತು. ಮತ್ತು ಇದಕ್ಕಾಗಿ ಅವನು ದೀರ್ಘ ಸಮಯದ ವರೆಗೆ ಕಾದುಕೊಂಡಿದ್ದನು. ದೇವರ ವಾಗ್ದಾನವನ್ನು ಪ್ರಥಮವಾಗಿ ಕೇಳಿಸಿಕೊಂಡಾಗ, ಅವನು ಎಷ್ಟು ಪ್ರಾಯದವನಾಗಿದ್ದನೆಂದು ನಮಗೆ ಗೊತ್ತಿಲ್ಲ. ಆದರೆ ಅವನು ಖಾರಾನ್ಗೆ ಹೋಗುವ ದೀರ್ಘ ಪ್ರಯಾಣವನ್ನು ಆರಂಭಿಸಿದಾಗ, ಯೆಹೋವನು ಅವನಿಗೆ ಇನ್ನೂ ಮಗುವನ್ನು ದಯಪಾಲಿಸಿರಲಿಲ್ಲ. (ಆದಿಕಾಂಡ 11:30) ಅವನು ‘ಸೊತ್ತನ್ನೂ ದಾಸದಾಸಿಯರನ್ನೂ ಸಂಪಾದಿಸು’ವಷ್ಟು ದೀರ್ಘ ಸಮಯದ ವರೆಗೆ ಖಾರಾನ್ನಲ್ಲಿ ತಂಗಿದ್ದನು. ಕಾನಾನ್ ದೇಶಕ್ಕೆ ಸ್ಥಳಾಂತರಿಸಿದಾಗ ಅವನು 75 ವರ್ಷ ಪ್ರಾಯದವನಾಗಿದ್ದು, ಸಾರಳು 65 ವರ್ಷ ಪ್ರಾಯದವಳಾಗಿದ್ದಳು. ಆದರೆ ಆಗಲೂ ಅವರಿಗೆ ಒಬ್ಬ ಪುತ್ರನು ಜನಿಸಿರಲಿಲ್ಲ. (ಆದಿಕಾಂಡ 12:4, 5) ಸಾರಳು ತನ್ನ 70ರ ಮಧ್ಯಭಾಗದಲ್ಲಿದ್ದಾಗ, ತಾನು ಈಗ ಅಬ್ರಹಾಮನಿಗೆ ಒಂದು ಮಗುವನ್ನು ಹೆರಲು ಸಾಧ್ಯವಾಗದಷ್ಟು ವೃದ್ಧಳಾಗಿದ್ದೇನೆಂದು ತರ್ಕಿಸಿದಳು. ಆದುದರಿಂದ, ಆ ಕಾಲದ ಪದ್ಧತಿಗನುಸಾರ, ಅವಳು ಅಬ್ರಹಾಮನಿಗೆ ತನ್ನ ದಾಸಿಯಾದ ಹಾಗರಳನ್ನು ಕೊಟ್ಟಳು. ಅವಳಿಂದ ಅಬ್ರಹಾಮನಿಗೆ ಒಬ್ಬ ಮಗನು ದಕ್ಕಿದನು. ಆದರೆ ಇದು ವಾಗ್ದತ್ತ ಮಗುವಾಗಿರಲಿಲ್ಲ. ಹಾಗರಳನ್ನು ಮತ್ತು ಅವಳ ಮಗನಾದ ಇಷ್ಮಾಯೇಲನನ್ನು ಕಟ್ಟಕಡೆಗೆ ಹೊರಹಾಕಲಾಯಿತು. ಆದರೂ, ಅಬ್ರಹಾಮನು ಅವರ ಪರವಾಗಿ ಬೇಡಿಕೊಂಡದ್ದರಿಂದ, ತಾನು ಇಷ್ಮಾಯೇಲನನ್ನು ಆಶೀರ್ವದಿಸುವೆನೆಂದು ಯೆಹೋವನು ಮಾತುಕೊಟ್ಟನು.—ಆದಿಕಾಂಡ 16:1-4, 10; 17:15, 16, 18-20; 21:8-21.
6 ದೇವರ ತಕ್ಕ ಸಮಯದಲ್ಲಿ, ಅಂದರೆ ಅವರು ವಾಗ್ದಾನವನ್ನು ಪ್ರಥಮಬಾರಿ ಕೇಳಿಸಿಕೊಂಡ ತುಂಬ ಸಮಯದ ನಂತರ, 100 ವರ್ಷ ಪ್ರಾಯದ ಅಬ್ರಹಾಮನು ಮತ್ತು 90 ವರ್ಷ ಪ್ರಾಯದ ಸಾರಳು ಒಂದು ಗಂಡು ಮಗುವಾಗಿದ್ದ ಇಸಾಕನನ್ನು ಪಡೆದರು. ಅದು ಎಷ್ಟು ಅದ್ಭುತಕರವಾಗಿದ್ದಿರಬೇಕು! “ಮೃತಪ್ರಾಯ”ವಾಗಿದ್ದ ತಮ್ಮ ದೇಹಗಳು ಒಂದು ಹೊಸ ಜೀವವನ್ನು ಉತ್ಪಾದಿಸಿದಾಗ, ಈ ವೃದ್ಧ ದಂಪತಿಗಳಿಗೆ ಅದು ಬಹುಮಟ್ಟಿಗೆ ಒಂದು ಪುನರುತ್ಥಾನದಂತೆ ಇತ್ತು. (ರೋಮಾಪುರ 4:19-21) ಇದಕ್ಕಾಗಿ ಅವರು ಬಹಳ ಸಮಯದ ವರೆಗೆ ಕಾಯಬೇಕಾಗಿತ್ತು, ಆದರೆ ಆ ವಾಗ್ದಾನವು ಕೊನೆಯಲ್ಲಿ ನೆರವೇರಿಸಲ್ಪಟ್ಟಾಗ, ಅವರು ಅಷ್ಟು ಸಮಯದ ವರೆಗೆ ಕಾದದ್ದು ಸಾರ್ಥಕವಾಗಿತ್ತು.
7. ನಂಬಿಕೆಯು ತಾಳ್ಮೆಯೊಂದಿಗೆ ಹೇಗೆ ಸಂಬಂಧಿಸಿದೆ?
7 ನಂಬಿಕೆಯು ಅಲ್ಪಕಾಲದ್ದಾಗಿರಬಾರದೆಂದು ಅಬ್ರಹಾಮನ ಮಾದರಿಯು ನಮಗೆ ಜ್ಞಾಪಕಹುಟ್ಟಿಸುತ್ತದೆ. ಹೀಗೆ ಬರೆಯುವಾಗ, ಪೌಲನು ತಾಳ್ಮೆಯನ್ನು ನಂಬಿಕೆಯೊಂದಿಗೆ ಜೋಡಿಸಿದನು: “ದೇವರ ಚಿತ್ತವನ್ನು ನೆರವೇರಿಸಿ ವಾಗ್ದಾನದ ಫಲವನ್ನು ಹೊಂದಬೇಕಾದರೆ ನಿಮಗೆ ತಾಳ್ಮೆ ಬೇಕು. . . . ನಾವಾದರೋ ಹಿಂದೆಗೆದವರಾಗಿ ನಾಶವಾಗುವವರಲ್ಲ, ನಂಬುವವರಾಗಿ ಪ್ರಾಣರಕ್ಷಣೆಯನ್ನು ಹೊಂದುವವರಾಗಿದ್ದೇವೆ.” (ಇಬ್ರಿಯ 10:36-39) ವಾಗ್ದಾನದ ನೆರವೇರಿಕೆಗಾಗಿ ಅನೇಕರು ದೀರ್ಘ ಸಮಯದಿಂದ ಕಾದುಕೊಂಡಿದ್ದಾರೆ. ಕೆಲವರಾದರೊ ಜೀವನದುದ್ದಕ್ಕೂ ಕಾದಿದ್ದಾರೆ. ಅವರ ಬಲವಾದ ನಂಬಿಕೆಯೇ ಅವರಿಗೆ ಪುಷ್ಟಿನೀಡಿದೆ. ಮತ್ತು ಅಬ್ರಹಾಮನಂತೆ, ಯೆಹೋವನ ತಕ್ಕ ಸಮಯದಲ್ಲಿ ಅವರು ಪ್ರತಿಫಲವನ್ನು ಖಂಡಿತವಾಗಿಯೂ ಪಡೆದುಕೊಳ್ಳುವರು.—ಹಬಕ್ಕೂಕ 2:3.
ದೇವರಿಗೆ ಕಿವಿಗೊಡುವುದು
8. ನಾವು ಇಂದು ದೇವರಿಗೆ ಹೇಗೆ ಕಿವಿಗೊಡಬಹುದು, ಮತ್ತು ಅದು ನಮ್ಮ ನಂಬಿಕೆಯನ್ನು ಏಕೆ ಬಲಪಡಿಸುವುದು?
8 ಕಡಿಮೆಪಕ್ಷ ನಾಲ್ಕು ಸಂಗತಿಗಳು ಅಬ್ರಹಾಮನ ನಂಬಿಕೆಯನ್ನು ಬಲಪಡಿಸಿದವು. ಮತ್ತು ಆ ಸಂಗತಿಗಳು ನಮಗೂ ಸಹಾಯಮಾಡಬಲ್ಲವು. ಪ್ರಥಮವಾಗಿ, ಯೆಹೋವನು ಮಾತಾಡಿದಾಗ, ಆತನಿಗೆ ಕಿವಿಗೊಡುವುದರ ಮೂಲಕ ‘ದೇವರು ಇದ್ದಾನೆ ಎಂಬ ನಂಬಿಕೆ’ಯನ್ನು ಅಬ್ರಹಾಮನು ತೋರಿಸಿದನು. ಹೀಗಿರುವುದರಿಂದ, ಯೆಹೋವನನ್ನು ನಂಬಿದರೂ ಆತನ ಮಾತುಗಳಲ್ಲಿ ನಂಬಿಕೆಯನ್ನಿಡದಿದ್ದ ಯೆರೆಮೀಯನ ದಿನದ ಯೆಹೂದ್ಯರಿಗಿಂತ ಅವನು ತೀರ ಭಿನ್ನನಾಗಿದ್ದನು. (ಯೆರೆಮೀಯ 44:15-19) ಇಂದು, ಯೆಹೋವನು ತನ್ನ ಪ್ರೇರಿತ ವಾಕ್ಯವಾದ ಬೈಬಲಿನ ಮೂಲಕ ನಮ್ಮೊಂದಿಗೆ ಮಾತಾಡುತ್ತಾನೆ. ಅದು “ನಿಮ್ಮ ಹೃದಯದೊಳಗೆ . . . ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸು”ತ್ತದೆಂದು ಪೇತ್ರನು ಹೇಳಿದನು. (2 ಪೇತ್ರ 1:19) ನಾವು ತದೇಕಚಿತ್ತರಾಗಿ ಬೈಬಲನ್ನು ಓದುವಾಗ, ‘ನಂಬಿಕೆಯ ಮಾತುಗಳಿಂದ ಪೋಷಣೆಯನ್ನು’ ಪಡೆದುಕೊಳ್ಳುತ್ತೇವೆ. (1 ತಿಮೊಥೆಯ 4:6, NW; ರೋಮಾಪುರ 10:17) ಇನ್ನೂ ಹೆಚ್ಚಾಗಿ, ಈ ಕಡೇ ದಿನಗಳಲ್ಲಿ, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳು,’ ನಾವು ಬೈಬಲ್ ಮೂಲತತ್ವಗಳನ್ನು ಅನ್ವಯಿಸಿಕೊಳ್ಳಲು ಮತ್ತು ಬೈಬಲ್ ಪ್ರವಾದನೆಯನ್ನು ಅರ್ಥಮಾಡಿಕೊಳ್ಳಲು ಮಾಗದರ್ಶನವನ್ನು ಒದಗಿಸುತ್ತಾ, “ಹೊತ್ತುಹೊತ್ತಿಗೆ” ಆತ್ಮಿಕ “ಆಹಾರ”ವನ್ನು ನೀಡುತ್ತಾ ಇದೆ. (ಮತ್ತಾಯ 24:45-47) ನಾವು ದೃಢವಾದ ನಂಬಿಕೆಯನ್ನು ಹೊಂದಲು, ಈ ಮಾಧ್ಯಮದ ಮೂಲಕ ಯೆಹೋವನಿಗೆ ಕಿವಿಗೊಡುವುದು ಅತ್ಯಗತ್ಯವಾಗಿದೆ.
9. ನಾವು ಕ್ರೈಸ್ತ ನಿರೀಕ್ಷೆಯನ್ನು ನಿಜವಾಗಿ ನಂಬುವಲ್ಲಿ ಪರಿಣಾಮವೇನಾಗಿರುವುದು?
9 ಅಬ್ರಹಾಮನ ನಂಬಿಕೆಯು, ಅವನ ನಿರೀಕ್ಷೆಯೊಂದಿಗೆ ನಿಕಟವಾಗಿ ಸಂಬಂಧಿಸಲ್ಪಟ್ಟಿತು. ಅವನು ‘ತಾನು ಅನೇಕ ಜನಾಂಗಗಳಿಗೆ ಮೂಲಪಿತೃವಾಗುವೆನೆಂದು ನಿರೀಕ್ಷಿಸಿ ನಂಬಿದನು.’ (ರೋಮಾಪುರ 4:18) ಇದು ನಮಗೆ ಸಹಾಯಮಾಡಬಲ್ಲ ಎರಡನೆಯ ಸಂಗತಿಯಾಗಿದೆ. ಯೆಹೋವನು “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡು”ವವನಾಗಿದ್ದಾನೆ ಎಂಬ ಸಂಗತಿಯನ್ನು ನಾವು ಎಂದೂ ಮರೆಯಬಾರದು. ಅಪೊಸ್ತಲ ಪೌಲನು ಹೇಳಿದ್ದು: “ಇದಕ್ಕಾಗಿ ನಾವು ಕಷ್ಟಪಡುತ್ತೇವೆ, ಹೋರಾಡುತ್ತೇವೆ, ಯಾಕೆಂದರೆ ಎಲ್ಲಾ ಮನುಷ್ಯರಿಗೂ, ವಿಶೇಷವಾಗಿ ನಂಬುವವರಿಗೆ, ರಕ್ಷಕನಾಗಿರುವ ಜೀವವುಳ್ಳ ದೇವರ ಮೇಲೆ ನಾವು ನಿರೀಕ್ಷೆಯನ್ನಿಟ್ಟುಕೊಂಡಿದ್ದೇವೆ.” (1 ತಿಮೊಥೆಯ 4:10) ನಾವು ಕ್ರೈಸ್ತ ನಿರೀಕ್ಷೆಯನ್ನು ನಿಜವಾಗಿ ನಂಬುವಲ್ಲಿ, ಅಬ್ರಹಾಮನಂತೆ ನಮ್ಮ ಇಡೀ ಜೀವನಕ್ರಮವು ನಮ್ಮ ನಂಬಿಕೆಯನ್ನು ಪ್ರದರ್ಶಿಸುವುದು.
ದೇವರೊಂದಿಗೆ ಮಾತಾಡುವುದು
10. ಯಾವ ವಿಧದ ಪ್ರಾರ್ಥನೆಯು ನಮ್ಮ ನಂಬಿಕೆಯನ್ನು ಬಲಪಡಿಸುವುದು?
10 ಅಬ್ರಹಾಮನು ದೇವರೊಂದಿಗೆ ಮಾತಾಡಿದನು. ಇದು ಅವನ ನಂಬಿಕೆಯನ್ನು ಬಲಪಡಿಸಿದ ಮೂರನೆಯ ಸಂಗತಿಯಾಗಿತ್ತು. ಯೇಸು ಕ್ರಿಸ್ತನ ಮೂಲಕ ಪ್ರಾರ್ಥನೆ ಮಾಡುವ ವರದಾನವನ್ನು ಉಪಯೋಗಿಸುತ್ತಾ, ಇಂದು ನಾವು ಸಹ ಯೆಹೋವನೊಂದಿಗೆ ಮಾತಾಡಬಲ್ಲೆವು. (ಯೋಹಾನ 14:6; ಎಫೆಸ 6:18) ಸತತವಾಗಿ ಪ್ರಾರ್ಥನೆಯನ್ನು ಮಾಡುವ ಅಗತ್ಯವನ್ನು ಎತ್ತಿತೋರಿಸುವ ಒಂದು ಸಾಮ್ಯವನ್ನು ಹೇಳಿದ ನಂತರ ಯೇಸು ಈ ಪ್ರಶ್ನೆಯನ್ನು ಕೇಳಿದ್ದನು: “ಮನುಷ್ಯಕುಮಾರನು ಬಂದಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣುವನೋ?” (ಲೂಕ 18:8) ನಂಬಿಕೆಯನ್ನು ಬಲಪಡಿಸುವಂತಹ ಪ್ರಾರ್ಥನೆಯು ಯಾಂತ್ರಿಕವಾಗಿ ಮಾಡುವಂತಹದ್ದಾಗಿರುವುದಿಲ್ಲ. ಬದಲಾಗಿ, ಅದು ತುಂಬ ಅರ್ಥಪೂರ್ಣವಾಗಿರುತ್ತದೆ. ಉದಾಹರಣೆಗಾಗಿ, ನಾವು ಮಹತ್ವಪೂರ್ಣ ನಿರ್ಣಯಗಳನ್ನು ಮಾಡಬೇಕಾಗಿರುವಾಗ ಅಥವಾ ತೀವ್ರ ಮಾನಸಿಕ ಒತ್ತಡದ ಕೆಳಗಿರುವಾಗ ಹೃತ್ಪೂರ್ವಕವಾದ ಪ್ರಾರ್ಥನೆಯು ಅತಿ ಆವಶ್ಯಕ.—ಲೂಕ 6:12, 13; 22:41-44.
11. (ಎ) ಅಬ್ರಹಾಮನು ದೇವರೊಂದಿಗೆ ಮನಬಿಚ್ಚಿ ಮಾತಾಡಿದಾಗ, ಅವನು ಹೇಗೆ ಬಲಪಡಿಸಲ್ಪಟ್ಟನು? (ಬಿ) ಅಬ್ರಹಾಮನ ಅನುಭವದಿಂದ ನಾವೇನನ್ನು ಕಲಿತುಕೊಳ್ಳಸಾಧ್ಯವಿದೆ?
11 ಅಬ್ರಹಾಮನು ವೃದ್ಧನಾಗುತ್ತಾ ಇದ್ದನಾದರೂ, ಯೆಹೋವನು ಇನ್ನೂ ಅವನಿಗೆ ವಾಗ್ದತ್ತ ಸಂತಾನವನ್ನು ಕೊಡದಿದ್ದಾಗ, ಅವನು ದೇವರಿಗೆ ತನ್ನ ಚಿಂತೆಯನ್ನು ವ್ಯಕ್ತಪಡಿಸಿದನು. ಯೆಹೋವನು ಅವನಿಗೆ ಪುನರಾಶ್ವಾಸನೆಯನ್ನು ಕೊಟ್ಟನು. ಮುಂದೇನಾಯಿತು? ಅಬ್ರಹಾಮನು “ಯೆಹೋವನನ್ನು ನಂಬಿದನು; ಯೆಹೋವನು ಅವನ ನಂಬಿಕೆಯನ್ನು ಅವನ ಲೆಕ್ಕಕ್ಕೆ ನೀತಿಯೆಂದು ಎಣಿಸಿದನು.” ಅನಂತರ ಯೆಹೋವನು ತನ್ನ ಪುನರಾಶ್ವಾಸನೆಯ ಮಾತುಗಳನ್ನು ದೃಢೀಕರಿಸಲು ಅವನಿಗೆ ಒಂದು ಚಿಹ್ನೆಯನ್ನು ಕೊಟ್ಟನು. (ಆದಿಕಾಂಡ 15:1-18) ನಾವು ಪ್ರಾರ್ಥನೆಯಲ್ಲಿ ಯೆಹೋವನೊಂದಿಗೆ ಮನಬಿಚ್ಚಿ ಮಾತಾಡುವಾಗ, ಯೆಹೋವನ ವಾಕ್ಯವಾದ ಬೈಬಲಿನಲ್ಲಿರುವ ಆತನ ಆಶ್ವಾಸನೆಗಳನ್ನು ಅಂಗೀಕರಿಸುವಾಗ, ಮತ್ತು ಪೂರ್ಣ ನಂಬಿಕೆಯಿಂದ ಅವನಿಗೆ ವಿಧೇಯರಾಗುವಾಗ, ಯೆಹೋವನು ನಮ್ಮ ನಂಬಿಕೆಯನ್ನೂ ಬಲಪಡಿಸುವನು.—ಮತ್ತಾಯ 21:22; ಯೂದ 20, 21.
12, 13. (ಎ) ಅಬ್ರಹಾಮನು ಯೆಹೋವನ ನಿರ್ದೇಶನದಂತೆ ಕ್ರಿಯೆಗೈದಾಗ ಅವನು ಹೇಗೆ ಆಶೀರ್ವದಿಸಲ್ಪಟ್ಟನು? (ಬಿ) ಯಾವ ರೀತಿಯ ಅನುಭವಗಳು ನಮ್ಮ ನಂಬಿಕೆಯನ್ನು ಬಲಪಡಿಸುವವು?
12 ಅಬ್ರಹಾಮನು ಯೆಹೋವನ ನಿರ್ದೇಶನದಂತೆಯೇ ಮಾಡಿದಾಗ, ದೇವರು ಅವನಿಗೆ ಕೊಟ್ಟ ಬೆಂಬಲವು ಅವನ ನಂಬಿಕೆಯನ್ನು ಬಲಪಡಿಸಿದ ನಾಲ್ಕನೆಯ ಸಂಗತಿಯಾಗಿತ್ತು. ಆಕ್ರಮಣಮಾಡುತ್ತಿದ್ದ ರಾಜರುಗಳಿಂದ ಲೋಟನನ್ನು ರಕ್ಷಿಸಲು ಅಬ್ರಹಾಮನು ಹೋದಾಗ, ಯೆಹೋವನು ಅವನಿಗೆ ಜಯವನ್ನು ನೀಡಿದನು. (ಆದಿಕಾಂಡ 14:16, 20) ತನ್ನ ಸಂತಾನವು ಬಾಧ್ಯತೆಯಾಗಿ ಪಡೆಯಲಿದ್ದ ದೇಶದಲ್ಲಿ ಅಬ್ರಹಾಮನು ಒಬ್ಬ ತಾತ್ಕಾಲಿಕ ನಿವಾಸಿಯಾಗಿದ್ದರೂ, ಯೆಹೋವನು ಅವನನ್ನು ಭೌತಿಕವಾಗಿ ಆಶೀರ್ವದಿಸಿದನು. (ಆದಿಕಾಂಡ 14:21-23ನ್ನು ಹೋಲಿಸಿರಿ.) ಇಸಾಕನಿಗಾಗಿ ಒಬ್ಬ ಯೋಗ್ಯ ಪತ್ನಿಯನ್ನು ಹುಡುಕಲು, ಯೆಹೋವನು ಅಬ್ರಹಾಮನ ಸೇವಕನನ್ನು ಮಾರ್ಗದರ್ಶಿಸಿದನು. (ಆದಿಕಾಂಡ 24:10-27) ಹೌದು, ಯೆಹೋವನು “[ಅಬ್ರಹಾಮನನ್ನು] ಸಕಲವಿಷಯಗಳಲ್ಲಿ ಅಭಿವೃದ್ಧಿಪಡಿಸಿದ್ದನು.” (ಆದಿಕಾಂಡ 24:1) ಇದರಿಂದಾಗಿ ಅವನ ನಂಬಿಕೆಯು ಬಹಳಷ್ಟು ಬಲಗೊಳಿಸಲ್ಪಟ್ಟಿತು ಮತ್ತು ಯೆಹೋವ ದೇವರೊಂದಿಗಿನ ಅವನ ಸಂಬಂಧವು ತುಂಬ ಆಪ್ತವಾಯಿತು. ಆದ್ದರಿಂದ ಯೆಹೋವನು ಅವನನ್ನು ‘ನನ್ನ ಸ್ನೇಹಿತನು’ ಎಂದು ಕರೆದನು.—ಯೆಶಾಯ 41:8; ಯಾಕೋಬ 2:23.
13 ಇಂದು ನಾವು ಸಹ ಅಷ್ಟೇ ಬಲವಾದ ನಂಬಿಕೆಯುಳ್ಳವರಾಗಿರಲು ಸಾಧ್ಯವಿದೆಯೊ? ಹೌದು. ಅಬ್ರಹಾಮನಂತೆ ನಾವು, ಯೆಹೋವನ ಆಜ್ಞೆಗಳಿಗೆ ವಿಧೇಯರಾಗುವ ಮೂಲಕ ಆತನನ್ನು ಪರೀಕ್ಷಿಸುವುದಾದರೆ, ಆತನು ನಮ್ಮನ್ನೂ ಆಶೀರ್ವದಿಸುವನು ಮತ್ತು ಅದು ನಮ್ಮ ನಂಬಿಕೆಯನ್ನು ಬಲಪಡಿಸುವುದು. ಉದಾಹರಣೆಗಾಗಿ, ಸುವಾರ್ತೆಯನ್ನು ಸಾರುವ ಆತನ ಆಜ್ಞೆಗೆ ಅನೇಕರು ವಿಧೇಯರಾದಾಗ ಅವರು ಅದ್ಭುತಕರವಾದ ರೀತಿಯಲ್ಲಿ ಆಶೀರ್ವದಿಸಲ್ಪಟ್ಟರೆಂದು 1998ರ ಸೇವಾ ವರದಿಯು ತೋರಿಸುತ್ತದೆ.—ಮಾರ್ಕ 13:10.
ಇಂದು ನಂಬಿಕೆಯ ದಾಖಲೆ
14. ರಾಜ್ಯ ವಾರ್ತೆ ನಂ. 35ನ್ನು ವಿತರಿಸುವ ಕಾರ್ಯಾಚರಣೆಯನ್ನು ಯೆಹೋವನು ಹೇಗೆ ಆಶೀರ್ವದಿಸಿದನು?
14 ಹಿಂದೆ 1997ರ ಅಕ್ಟೋಬರ್ ತಿಂಗಳಿನಲ್ಲಿ, ಲಕ್ಷಗಟ್ಟಲೆ ಸಾಕ್ಷಿಗಳ ಹುರುಪು ಮತ್ತು ಉತ್ಸಾಹದಿಂದಾಗಿ ರಾಜ್ಯ ವಾರ್ತೆ ನಂ. 35ನ್ನು ವಿತರಿಸುವ ಲೋಕವ್ಯಾಪಕ ಕಾರ್ಯಾಚರಣೆಯು ಯಶಸ್ವಿಯಾಯಿತು. ಘಾನದಲ್ಲಿ ಏನು ನಡೆಯಿತೊ ಅದು ಕೇವಲ ಒಂದು ನಮೂನೆಯಾಗಿದೆ. ಸುಮಾರು 25 ಲಕ್ಷ ಪ್ರತಿಗಳನ್ನು ನಾಲ್ಕು ಭಾಷೆಗಳಲ್ಲಿ ವಿತರಿಸಲಾಯಿತು. ಫಲಿತಾಂಶವಾಗಿ ಸುಮಾರು 2,000 ಬೈಬಲ್ ಅಭ್ಯಾಸಗಳನ್ನು ವಿನಂತಿಸಲಾಯಿತು. ಸೈಪ್ರಸ್ನಲ್ಲಿ ಇಬ್ಬರು ಸಾಕ್ಷಿಗಳು ರಾಜ್ಯ ವಾರ್ತೆಯನ್ನು ವಿತರಿಸುತ್ತಿದ್ದಾಗ, ಒಬ್ಬ ಪಾದ್ರಿಯು ತಮ್ಮನ್ನು ಹಿಂಬಾಲಿಸುತ್ತಿರುವುದನ್ನು ಗಮನಿಸಿದರು. ಸ್ವಲ್ಪ ಸಮಯದ ನಂತರ, ಅವರು ಅವನಿಗೆ ರಾಜ್ಯ ವಾರ್ತೆಯ ಒಂದು ಪ್ರತಿಯನ್ನು ನೀಡಿದರು. ಆದರೆ ಅವನ ಕೈಯಲ್ಲಿ ಈಗಾಗಲೇ ಒಂದು ಪ್ರತಿ ಇತ್ತು. ಅವನು ಹೇಳಿದ್ದು: “ಅದರಲ್ಲಿರುವ ಸಂದೇಶದಿಂದ ನಾನೆಷ್ಟು ಪ್ರಭಾವಿತನಾದೆನೆಂದರೆ, ಅದನ್ನು ತಯಾರಿಸಿದ ಜನರನ್ನು ನಾನು ಅಭಿನಂದಿಸಲು ಬಯಸಿದೆ.” ಡೆನ್ಮಾರ್ಕ್ನಲ್ಲಿ, ರಾಜ್ಯ ವಾರ್ತೆಯ 15 ಲಕ್ಷ ಪ್ರತಿಗಳನ್ನು ವಿತರಿಸಿದರು ಮತ್ತು ಉತ್ತಮ ಫಲಿತಾಂಶಗಳನ್ನು ಪಡೆದರು. ಅಲ್ಲಿ ಪಬ್ಲಿಕ್ ರಿಲೇಷನ್ಸ್ನಲ್ಲಿ ಕೆಲಸಮಾಡುವ ಮಹಿಳೆಯೊಬ್ಬಳು ಹೇಳಿದ್ದು: “ಆ ಕಿರುಹೊತ್ತಗೆಯಲ್ಲಿ ಎಲ್ಲರಿಗಾಗಿ ಒಂದು ಸಂದೇಶವಿದೆ. ಅದನ್ನು ಅರ್ಥಮಾಡಿಕೊಳ್ಳುವುದು ಸುಲಭ, ಅದು ಒಬ್ಬ ವ್ಯಕ್ತಿಯ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ, ಮತ್ತು ಇನ್ನೂ ಹೆಚ್ಚನ್ನು ತಿಳಿದುಕೊಳ್ಳಬೇಕೆಂಬ ಆಸೆಯನ್ನು ಹುಟ್ಟಿಸುತ್ತದೆ. ಅದು ನಿಜವಾಗಿಯೂ ತನ್ನ ಗುರಿಯನ್ನು ತಪ್ಪುವುದಿಲ್ಲ!”
15. ಎಲ್ಲ ಕಡೆಗಳಲ್ಲಿರುವ ಜನರನ್ನು ತಲಪಲು ಮಾಡಲ್ಪಟ್ಟಿರುವ ಪ್ರಯತ್ನವನ್ನು ಯೆಹೋವನು ಆಶೀರ್ವದಿಸಿದನೆಂಬುದನ್ನು ಯಾವ ಅನುಭವಗಳು ತೋರಿಸುತ್ತವೆ?
15 1998ರಲ್ಲಿ, ಜನರಿಗೆ ಕೇವಲ ತಮ್ಮ ಮನೆಗಳಲ್ಲಿ ಮಾತ್ರವಲ್ಲ, ಬದಲಾಗಿ ಅವರು ಇರುವಲ್ಲೆಲ್ಲ ಸಾರುವ ಪ್ರಯತ್ನವನ್ನು ಮಾಡಲಾಯಿತು. ಕೋಟ್ಡೀವಾರ್ನಲ್ಲಿ, ಒಬ್ಬ ಮಿಷನೆರಿ ದಂಪತಿಗಳು, ಹಡಗುಕಟ್ಟೆಗಳಲ್ಲಿ 322 ಹಡಗುಗಳನ್ನು ಭೇಟಿಮಾಡಿದರು. ಅವರು 247 ಪುಸ್ತಕಗಳನ್ನು, 2,284 ಪತ್ರಿಕೆಗಳನ್ನು, 500 ಬ್ರೋಷರುಗಳನ್ನು, ಮತ್ತು ನೂರಾರು ಕಿರುಹೊತ್ತಗೆಗಳನ್ನು, ಹಾಗೂ ಸಮುದ್ರಯಾನ ಮಾಡುತ್ತಿರುವಾಗ ಆ ನಾವಿಕರು ವೀಕ್ಷಿಸುವಂತೆ ವಿಡಿಯೊಕ್ಯಾಸೆಟುಗಳನ್ನು ನೀಡಿದರು. ಕೆನಡದಲ್ಲಿ ಒಬ್ಬ ಸಾಕ್ಷಿಯು, ಒಂದು ಆಟೊಮೊಬೈಲ್ ರಿಪೇರಿ ಶಾಪ್ಗೆ ಹೋದಾಗ, ಧಣಿಯು ಆಸಕ್ತಿ ತೋರಿಸಿದನು. ಗಿರಾಕಿಗಳು ಬಂದುಹೋಗುತ್ತಾ ಇದ್ದುದರಿಂದ, ನಡುನಡುವೆ ಸಾಕ್ಷಿ ನೀಡಲ್ಪಟ್ಟ ಸಮಯವನ್ನು ಲೆಕ್ಕಿಸಿದಾಗ ಅದು ಒಂದೇ ಒಂದು ತಾಸಾಗಿತ್ತಾದರೂ, ಸಹೋದರನು ನಾಲ್ಕೂವರೆ ತಾಸುಗಳ ವರೆಗೆ ಅಲ್ಲಿದ್ದನು. ತದನಂತರ, ಕೊನೆಗೆ ರಾತ್ರಿ 10:00 ಗಂಟೆಗೆ ಒಂದು ಅಭ್ಯಾಸವನ್ನು ಏರ್ಪಡಿಸಲಾಯಿತು. ಆದರೆ ಕೆಲವೊಮ್ಮೆ, ಮಧ್ಯರಾತ್ರಿ ಕಳೆದ ನಂತರವೇ ಆ ಅಭ್ಯಾಸವನ್ನು ಆರಂಭಿಸಲು ಸಾಧ್ಯವಾಗುತ್ತಿತ್ತು ಮತ್ತು ಅದು ಬೆಳಿಗ್ಗೆ ಸುಮಾರು ಎರಡು ಗಂಟೆಯ ತನಕ ನಡೆಯುತ್ತಿತ್ತು. ಈ ಸಮಯಗಳಿಗನುಸಾರ ಅಭ್ಯಾಸವನ್ನು ನಡಿಸುವುದು ಕಷ್ಟಕರವಾಗಿದ್ದರೂ ಅದರಿಂದ ಒಳ್ಳೆಯ ಫಲಿತಾಂಶಗಳು ದೊರೆತವು. ಕೂಟಗಳನ್ನು ಹಾಜರಾಗಲಿಕ್ಕಾಗಿ ಆ ವ್ಯಕ್ತಿಯು ಭಾನುವಾರಗಳಂದು ತನ್ನ ಅಂಗಡಿಯನ್ನು ಮುಚ್ಚಲು ನಿರ್ಣಯಿಸಿದನು. ಸ್ವಲ್ಪ ಸಮಯದೊಳಗೆ ಅವನು ಮತ್ತು ಅವನ ಕುಟುಂಬವು ಉತ್ತಮ ಪ್ರಗತಿಯನ್ನು ಮಾಡಿತು.
16. ಅಪೇಕ್ಷಿಸು ಬ್ರೋಷರ್ ಮತ್ತು ಜ್ಞಾನ ಪುಸ್ತಕವು, ಸಾರುವ ಮತ್ತು ಕಲಿಸುವ ಕೆಲಸದಲ್ಲಿ ಪ್ರಭಾವಶಾಲಿ ಸಾಧನಗಳಾಗಿವೆ ಎಂದು ಯಾವ ಅನುಭವಗಳು ತೋರಿಸುತ್ತವೆ?
16 ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರ್ ಮತ್ತು ನಿತ್ಯಜೀವಕ್ಕೆ ನಡಿಸುವ ಜ್ಞಾನ ಎಂಬ ಪುಸ್ತಕವು, ಸಾರುವ ಮತ್ತು ಕಲಿಸುವ ಕೆಲಸದಲ್ಲಿ ಪ್ರಭಾವಶಾಲಿ ಸಾಧನಗಳಾಗಿ ಮುಂದುವರಿಯುತ್ತವೆ. ಇಟಲಿಯಲ್ಲಿ, ಒಂದು ಬಸ್ಸಿಗಾಗಿ ಕಾಯುತ್ತಿದ್ದ ಒಬ್ಬ ಕ್ರೈಸ್ತ ಸಂನ್ಯಾಸಿನಿ, ರಾಜ್ಯ ವಾರ್ತೆಯ ಒಂದು ಪ್ರತಿಯನ್ನು ಸ್ವೀಕರಿಸಿದಳು. ಮರುದಿನ ಅವಳನ್ನು ಪುನಃ ಮಾತಾಡಿಸಲಾಯಿತು ಮತ್ತು ಅವಳು ಅಪೇಕ್ಷಿಸು ಬ್ರೋಷರನ್ನು ಸ್ವೀಕರಿಸಿದಳು. ಅಂದಿನಿಂದ ಪ್ರತಿ ದಿನ, ಬಸ್ನಿಲ್ದಾಣದಲ್ಲಿ ಅವಳೊಂದಿಗೆ 10ರಿಂದ 15 ನಿಮಿಷಗಳ ಬೈಬಲ್ ಅಭ್ಯಾಸವನ್ನು ನಡೆಸಲಾಗುತ್ತಿತ್ತು. ಒಂದೂವರೆ ತಿಂಗಳ ನಂತರ, ತನ್ನ ಅಭ್ಯಾಸವನ್ನು ಮುಂದುವರಿಸಲಿಕ್ಕಾಗಿ ಅವಳು ಕಾನ್ವೆಂಟನ್ನು ಬಿಟ್ಟು, ಸ್ವದೇಶವಾದ ಗ್ವಾಟೆಮಾಲಕ್ಕೆ ಹಿಂದಿರುಗಿ ಹೋಗಲು ನಿರ್ಧರಿಸಿದಳು. ಮಲಾವಿಯಲ್ಲಿ, ಒಬ್ಬ ಉತ್ಸಾಹಿ ಚರ್ಚುಹೋಕಳಾಗಿದ್ದ ಲೋಬೀನಾ ಎಂಬವಳು, ತನ್ನ ಪುತ್ರಿಯರು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದಾಗ ಕೋಪಗೊಂಡಳು. ಆದರೂ, ಆ ಹುಡುಗಿಯರು ಸಾಧ್ಯವಿದ್ದಾಗಲ್ಲೆಲ್ಲ ತಮ್ಮ ತಾಯಿಯೊಂದಿಗೆ ಬೈಬಲ್ ಸತ್ಯದ ಕುರಿತಾಗಿ ಮಾತಾಡಿದರು. 1997ರ ಜೂನ್ ತಿಂಗಳಿನಲ್ಲಿ, ಲೊಬೀನಾ ಜ್ಞಾನ ಪುಸ್ತಕವನ್ನು ನೋಡಿದಳು ಮತ್ತು ಅದರ ಶೀರ್ಷಿಕೆಯು ಅವಳ ಆಸಕ್ತಿಯನ್ನು ಕೆರಳಿಸಿತು. ಜುಲೈ ತಿಂಗಳಿನಲ್ಲಿ ಅವಳು ಒಂದು ಬೈಬಲ್ ಅಭ್ಯಾಸಕ್ಕಾಗಿ ಒಪ್ಪಿಕೊಂಡಳು. ಆಗಸ್ಟ್ ತಿಂಗಳಿನಲ್ಲಿ, ಅವಳು ಒಂದು ಜಿಲ್ಲಾ ಅಧಿವೇಶನಕ್ಕೆ ಹಾಜರಾಗಿ, ಇಡೀ ಕಾರ್ಯಕ್ರಮವನ್ನು ಗಮನವಿಟ್ಟು ಆಲಿಸಿದಳು. ಆ ತಿಂಗಳ ಅಂತ್ಯದೊಳಗೆ ಅವಳು ಚರ್ಚನ್ನು ಬಿಟ್ಟು, ಒಬ್ಬ ಅಸ್ನಾನಿತ ಪ್ರಚಾರಕಳಾಗಲು ಅರ್ಹಳಾದಳು. 1997ರ ನವೆಂಬರ್ ತಿಂಗಳಿನಲ್ಲಿ ಅವಳು ದೀಕ್ಷಾಸ್ನಾನವನ್ನು ಪಡೆದುಕೊಂಡಳು.
17, 18. ಸೊಸೈಟಿಯ ವಿಡಿಯೊಗಳು, ಕೆಲವರಿಗೆ ಅದೃಶ್ಯವಾಗಿರುವ ವಿಷಯಗಳನ್ನು ‘ನೋಡು’ವಂತೆ ಹೇಗೆ ಸಹಾಯಮಾಡಿವೆ?
17 ಸೊಸೈಟಿಯ ವಿಡಿಯೊಕ್ಯಾಸೆಟ್ಟುಗಳು ಅನೇಕರಿಗೆ ಆತ್ಮಿಕ ವಿಷಯಗಳನ್ನು “ನೋಡಲು” ಸಹಾಯಮಾಡಿವೆ. ಮೊರೀಷಸ್ನಲ್ಲಿ ಒಬ್ಬ ವ್ಯಕ್ತಿಯು, ಚರ್ಚಿನಲ್ಲಿನ ಅನೈಕ್ಯತೆಯನ್ನು ನೋಡಿ ಚರ್ಚನ್ನು ಬಿಟ್ಟು ಬಂದನು. ಒಬ್ಬ ಮಿಷನೆರಿಯು, ದೈವಿಕ ಬೋಧನೆಯಿಂದ ಐಕ್ಯಗೊಳಿಸಲ್ಪಟ್ಟವರು (ಇಂಗ್ಲಿಷ್) ಎಂಬ ವಿಡಿಯೊ ಕ್ಯಾಸೆಟನ್ನು ಉಪಯೋಗಿಸುತ್ತಾ, ಯೆಹೋವನ ಸಾಕ್ಷಿಗಳ ನಡುವೆ ಇರುವ ಐಕ್ಯತೆಯನ್ನು ಅವನಿಗೆ ತೋರಿಸಿದನು. ಇದರಿಂದ ಪ್ರಭಾವಿತನಾಗಿ, ಆ ವ್ಯಕ್ತಿಯು ಹೇಳಿದ್ದು: “ಯೆಹೋವನ ಸಾಕ್ಷಿಗಳಾದ ನೀವು ಈಗಾಗಲೇ ಪ್ರಮೋದವನದಲ್ಲಿದ್ದೀರಿ!” ಅನಂತರ, ಅವನು ಒಂದು ಬೈಬಲ್ ಅಭ್ಯಾಸಕ್ಕಾಗಿ ಒಪ್ಪಿಕೊಂಡನು. ಜಪಾನಿನಲ್ಲಿರುವ ಒಬ್ಬ ಸಹೋದರಿಯು, ತನ್ನ ಅವಿಶ್ವಾಸಿ ಗಂಡನಿಗೆ, ಯೆಹೋವನ ಸಾಕ್ಷಿಗಳು—ಆ ಹೆಸರಿನ ಹಿಂದಿರುವ ಸಂಸ್ಥೆ (ಇಂಗ್ಲಿಷ್) ಎಂಬ ವಿಡಿಯೊವನ್ನು ತೋರಿಸಿದಾಗ, ಅವನು ಒಂದು ಕ್ರಮದ ಬೈಬಲ್ ಅಭ್ಯಾಸವನ್ನು ಮಾಡಲು ಪ್ರಚೋದಿಸಲ್ಪಟ್ಟನು. ದೈವಿಕ ಬೋಧನೆಯ ಮೂಲಕ ಐಕ್ಯರು (ಇಂಗ್ಲಿಷ್) ಎಂಬ ವಿಡಿಯೊವನ್ನು ನೋಡಿದ ಬಳಿಕ, ಅವನು ಒಬ್ಬ ಯೆಹೋವನ ಸಾಕ್ಷಿಯಾಗಲು ಬಯಸಿದನು. ಬೈಬಲ್—ವಾಸ್ತವಾಂಶ ಮತ್ತು ಪ್ರವಾದನೆಯ ಒಂದು ಪುಸ್ತಕ ಎಂಬ ಶೀರ್ಷಿಕೆಯುಳ್ಳ ಮೂರು ಭಾಗದ ಸರಣಿಯ ವಿಡಿಯೊಗಳು, ಅವನಿಗೆ ಬೈಬಲ್ ಮೂಲತತ್ವಗಳನ್ನು ತನ್ನ ಜೀವಿತದಲ್ಲಿ ಅನ್ವಯಿಸಿಕೊಳ್ಳಲು ಸಹಾಯಮಾಡಿದವು. ಕೊನೆಯಲ್ಲಿ, ಯೆಹೋವನ ಸಾಕ್ಷಿಗಳು ನಾಸಿ ಆಕ್ರಮಣದೆದುರು ಸ್ಥಿರ ನಿಲ್ಲುತ್ತಾರೆ (ಇಂಗ್ಲಿಷ್) ಎಂಬ ವಿಡಿಯೊ, ಯೆಹೋವನು ತನ್ನ ಜನರು ಸೈತಾನನ ಆಕ್ರಮಣಗಳನ್ನು ಎದುರಿಸಿ ನಿಲ್ಲುವಂತೆ ಬಲಪಡಿಸುತ್ತಾನೆಂಬುದನ್ನು ತೋರಿಸಿತು. ಆ ವ್ಯಕ್ತಿಯು 1997ರ ಅಕ್ಟೋಬರ್ ತಿಂಗಳಿನಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡನು.
18 ಹಿಂದಿನ ಸೇವಾ ವರ್ಷದಲ್ಲಿ, ಆನಂದಿಸಲಾಗಿರುವ ಅನೇಕಾನೇಕ ಅನುಭವಗಳಲ್ಲಿ ಇವು ಕೆಲವೇ ಆಗಿವೆ. ಯೆಹೋವನ ಸಾಕ್ಷಿಗಳಿಗೆ ಸಜೀವ ನಂಬಿಕೆಯಿದೆ ಮತ್ತು ಅವರ ಚಟುವಟಿಕೆಯನ್ನು ಆಶೀರ್ವದಿಸುವ ಮೂಲಕ ಯೆಹೋವನು ಆ ನಂಬಿಕೆಯನ್ನು ಬಲಪಡಿಸುತ್ತಿದ್ದಾನೆಂಬುದನ್ನು ಅವು ತೋರಿಸುತ್ತವೆ.—ಯಾಕೋಬ 2:17.
ಇಂದೇ ನಂಬಿಕೆಯನ್ನು ಬೆಳೆಸಿಕೊಳ್ಳಿರಿ
19. (ಎ) ನಾವು ಹೇಗೆ ಅಬ್ರಹಾಮನಿಗಿಂತಲೂ ಹೆಚ್ಚು ಉತ್ತಮವಾದ ಸ್ಥಿತಿಯಲ್ಲಿದ್ದೇವೆ? (ಬಿ) ಕಳೆದ ವರ್ಷ ಯೇಸುವಿನ ಯಜ್ಞಾರ್ಪಿತ ಮರಣವನ್ನು ಸ್ಮರಿಸಲು ಎಷ್ಟು ಮಂದಿ ಒಟ್ಟುಗೂಡಿದರು? (ಸಿ) ಕಳೆದ ವರ್ಷ, ಯಾವ ದೇಶಗಳಲ್ಲಿ ಗಮನಾರ್ಹವಾದ ಜ್ಞಾಪಕ ಹಾಜರಿಗಳಿದ್ದವು? (12ರಿಂದ 15ನೆಯ ಪುಟಗಳಲ್ಲಿರುವ ಚಾರ್ಟನ್ನು ನೋಡಿರಿ.)
19 ಇಂದು ಅನೇಕ ರೀತಿಯಲ್ಲಿ ನಾವು ಅಬ್ರಹಾಮನು ಇದ್ದುದಕ್ಕಿಂತಲೂ ಹೆಚ್ಚು ಉತ್ತಮವಾದ ಸ್ಥಿತಿಯಲ್ಲಿದ್ದೇವೆ. ಯೆಹೋವನು ಅಬ್ರಹಾಮನಿಗೆ ಮಾಡಿದ ಪ್ರತಿಯೊಂದು ವಾಗ್ದಾನವನ್ನು ನೆರವೇರಿಸಿದನೆಂದು ನಮಗೆ ತಿಳಿದಿದೆ. ಅಬ್ರಹಾಮನ ವಂಶಜರು ನಿಶ್ಚಯವಾಗಿಯೂ ಕಾನಾನ್ ದೇಶವನ್ನು ಬಾಧ್ಯತೆಯಾಗಿ ಪಡೆದುಕೊಂಡರು ಮತ್ತು ಖಂಡಿತವಾಗಿಯೂ ಒಂದು ದೊಡ್ಡ ಜನಾಂಗವಾದರು. (1 ಅರಸುಗಳು 4:20; ಇಬ್ರಿಯ 11:12) ಅಷ್ಟುಮಾತ್ರವಲ್ಲದೆ, ಅಬ್ರಹಾಮನು ಖಾರಾನ್ ಪಟ್ಟಣವನ್ನು ಬಿಟ್ಟು 1,971 ವರ್ಷಗಳು ಕಳೆದ ಬಳಿಕ, ಅವನ ವಂಶಜನಾದ ಯೇಸುವನ್ನು, ಸ್ನಾನಿಕನಾದ ಯೋಹಾನನು ನೀರಿನಲ್ಲಿ ಮತ್ತು ಅನಂತರ ಸ್ವತಃ ಯೆಹೋವನೇ ಪವಿತ್ರಾತ್ಮದಿಂದ ದೀಕ್ಷಾಸ್ನಾನ ಮಾಡಿಸಿದನು. ಆಗ ಅವನು ಮೆಸ್ಸೀಯನಾಗಿ, ಆತ್ಮಿಕ ಅರ್ಥದಲ್ಲಿ ಸಂಪೂರ್ಣವಾಗಿ ಅಬ್ರಹಾಮನ ಸಂತತಿಯಾದನು. (ಮತ್ತಾಯ 3:16, 17; ಗಲಾತ್ಯ 3:16) ಸಾ.ಶ. 33ರ ನೈಸಾನ್ 14ರಂದು, ಯೇಸು ತನ್ನ ಜೀವವನ್ನು ಅರ್ಪಿಸಿದನು. ಮತ್ತು ಅವನಲ್ಲಿ ನಂಬಿಕೆಯನ್ನಿಡುವವರಿಗೆ ಇದು ಒಂದು ಪ್ರಾಯಶ್ಚಿತ್ತ ಯಜ್ಞವಾಗಿತ್ತು. (ಮತ್ತಾಯ 20:28; ಯೋಹಾನ 3:16) ಈಗ ಕೋಟಿಗಟ್ಟಲೆ ಜನರು, ಆತನ ಮೂಲಕ ತಮ್ಮನ್ನು ಆಶೀರ್ವದಿಸಿಕೊಳ್ಳಸಾಧ್ಯವಿತ್ತು. ಕಳೆದ ವರ್ಷ, ಪ್ರೀತಿಯ ಈ ಅದ್ಭುತಕರ ಕೃತ್ಯವನ್ನು ಜ್ಞಾಪಿಸಿಕೊಳ್ಳಲಿಕ್ಕೋಸ್ಕರ ನೈಸಾನ್ 14ರಂದು 1,38,96,312 ಮಂದಿ ಒಟ್ಟುಗೂಡಿದರು. ಯೆಹೋವನು ಮಹಾನ್ ವಾಗ್ದಾನಪಾಲಕನಾಗಿದ್ದಾನೆ ಎಂಬುದನ್ನು ಸಮರ್ಥಿಸಲು ಅದು ಎಷ್ಟು ಬಲವಾದ ರುಜುವಾತಾಗಿದೆ!
20, 21. ಪ್ರಥಮ ಶತಮಾನದಲ್ಲಿ, ಎಲ್ಲ ಜನಾಂಗಗಳಿಂದ ಬಂದ ಜನರು ಅಬ್ರಹಾಮನ ಸಂತತಿಯ ಮೂಲಕ ತಮ್ಮನ್ನು ಆಶೀರ್ವದಿಸಿಕೊಂಡದ್ದು ಹೇಗೆ, ಮತ್ತು ಇಂದು ಅವರು ತಮ್ಮನ್ನು ಹೇಗೆ ಆಶೀರ್ವದಿಸಿಕೊಳ್ಳುತ್ತಿದ್ದಾರೆ?
20 ಪ್ರಥಮ ಶತಮಾನದಲ್ಲಿ, ಮಾಂಸಿಕ ಇಸ್ರಾಯೇಲ್ಯರಿಂದ ಆರಂಭವಾಗಿ ಎಲ್ಲ ರಾಷ್ಟ್ರಗಳಿಂದ ಅನೇಕರು ಅಬ್ರಹಾಮನ ಈ ಸಂತತಿಯಲ್ಲಿ ನಂಬಿಕೆಯನ್ನಿಟ್ಟರು. ಹೀಗೆ ಅವರು ಒಂದು ಹೊಸ ಆತ್ಮಿಕ ‘ದೇವರ ಇಸ್ರಾಯೇಲಿನ’ ಸದಸ್ಯರು ಹಾಗೂ ದೇವರ ಅಭಿಷಿಕ್ತ ಪುತ್ರರಾದರು. (ಗಲಾತ್ಯ 3:26-29; 6:16; ಅ. ಕೃತ್ಯಗಳು 3:25, 26) ಅವರು ದೇವರ ರಾಜ್ಯದಲ್ಲಿ ಜೊತೆ ಅರಸರಾಗಿ ಸ್ವರ್ಗದಲ್ಲಿ ಅಮರ ಜೀವಿತದ ಅಭಯ ನಿರೀಕ್ಷೆಯಲ್ಲಿದ್ದರು. ಕೇವಲ 1,44,000 ಮಂದಿ ಆ ರೀತಿಯಲ್ಲಿ ಆಶೀರ್ವದಿಸಲ್ಪಡುವರು ಮತ್ತು ಅವರಲ್ಲಿ ಈಗ ಕೆಲವರೇ ಉಳಿದಿದ್ದಾರೆ. (ಪ್ರಕಟನೆ 5:9, 10; 7:4) ಕಳೆದ ವರ್ಷ, 8,756 ಮಂದಿ, ಜ್ಞಾಪಕದ ಸಮಯದಲ್ಲಿ ಕುರುಹುಗಳಲ್ಲಿ ಪಾಲ್ಗೊಳ್ಳುವ ಮೂಲಕ ತಾವು ಈ ಗುಂಪಿಗೆ ಸೇರಿದವರಾಗಿದ್ದೇವೆಂಬ ತಮ್ಮ ನಂಬಿಕೆಗೆ ಸಾಕ್ಷ್ಯವನ್ನು ಕೊಟ್ಟರು.
21 ಇಂದು ಯೆಹೋವನ ಸಾಕ್ಷಿಗಳಲ್ಲಿ ಬಹುಮಟ್ಟಿಗೆ ಎಲ್ಲರೂ, ಪ್ರಕಟನೆ 7:9-17ರಲ್ಲಿ ಪ್ರವಾದಿಸಲ್ಪಟ್ಟಿರುವ “ಮಹಾ ಸಮೂಹ”ಕ್ಕೆ ಸೇರಿದ್ದಾರೆ. ಯೇಸುವಿನ ಮೂಲಕ ಅವರು ತಮ್ಮನ್ನು ಆಶೀರ್ವದಿಸಿಕೊಳ್ಳುವುದರಿಂದ, ಅವರಿಗೆ ಪ್ರಮೋದವನ ಭೂಮಿಯಲ್ಲಿ ನಿತ್ಯಜೀವದ ನಿರೀಕ್ಷೆಯಿದೆ. (ಪ್ರಕಟನೆ 21:3-5) 1998ರಲ್ಲಿ ಸಾರುವ ಕೆಲಸದಲ್ಲಿ ಪಾಲ್ಗೊಂಡ 58,88,650 ಮಂದಿ, ಈ ಸಮೂಹವು ನಿಜವಾಗಿಯೂ “ಮಹಾ ಸಮೂಹ”ವಾಗಿದೆ ಎಂಬುದಕ್ಕೆ ರುಜುವಾತಾಗಿದ್ದಾರೆ. ಮೊತ್ತಮೊದಲ ಬಾರಿಗೆ ರಷ್ಯ ಹಾಗೂ ಯುಕ್ರೇನ್ ದೇಶಗಳು, 1,00,000ಕ್ಕಿಂತಲೂ ಹೆಚ್ಚು ಮಂದಿ ಪ್ರಚಾರಕರನ್ನು ವರದಿಸುವುದನ್ನು ನೋಡುವುದು ತುಂಬ ರೋಮಾಂಚಕವಾಗಿತ್ತು. ಅಮೆರಿಕದ ವರದಿಯು ಸಹ ತುಂಬ ಎದ್ದುಕಾಣುವಂತಹದ್ದಾಗಿತ್ತು—ಅಂದರೆ, ಆಗಸ್ಟ್ ತಿಂಗಳಿನಲ್ಲಿ 10,40,283 ಪ್ರಚಾರಕರು! ಕಳೆದ ವರ್ಷ 1,00,000ಕ್ಕಿಂತಲೂ ಹೆಚ್ಚಿನ ಸಂಖ್ಯೆಯನ್ನು ವರದಿಸಿದ 19 ದೇಶಗಳಲ್ಲಿ ಈ ಮೂರು ದೇಶಗಳೂ ಸೇರಿವೆ.
ನಿರೀಕ್ಷೆಯು ಬೇಗನೆ ಕೈಗೂಡಲಿದೆ
22, 23. (ಎ) ನಾವು ಇಂದೇ ನಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಬೇಕು ಏಕೆ? (ಬಿ) ಪೌಲನು ತಿಳಿಸಿದ ಅಪನಂಬಿಗಸ್ತ ವ್ಯಕ್ತಿಗಳಂತಿರದೆ, ನಾವು ಅಬ್ರಹಾಮನಂತೆ ಹೇಗಿರಸಾಧ್ಯವಿದೆ?
22 ಯೆಹೋವನ ವಾಗ್ದಾನಗಳು ಎಷ್ಟರ ಮಟ್ಟಿಗೆ ನೆರವೇರಿವೆ ಎಂಬ ವಿಷಯವನ್ನು ಜ್ಞಾಪಕಕ್ಕೆ ಹಾಜರಾದವರಿಗೆ ನೆನಪುಹುಟ್ಟಿಸಲಾಯಿತು. 1914ರಲ್ಲಿ, ಯೇಸು ದೇವರ ಸ್ವರ್ಗೀಯ ರಾಜ್ಯದ ರಾಜನೋಪಾದಿ ಸಿಂಹಾಸನಾರೂಢನಾಗಿ, ರಾಜ್ಯಾಧಿಕಾರದಲ್ಲಿ ತನ್ನ ಸಾನ್ನಿಧ್ಯವನ್ನು ಆರಂಭಿಸಿದನು. (ಮತ್ತಾಯ 24:3; ಪ್ರಕಟನೆ 11:15) ಹೌದು, ಅಬ್ರಹಾಮನ ಸಂತತಿಯು ಈಗ ಸ್ವರ್ಗದಲ್ಲಿ ಆಳುತ್ತಿದೆ! ಯಾಕೋಬನು ತನ್ನ ದಿನದ ಕ್ರೈಸ್ತರಿಗೆ ಹೇಳಿದ್ದು: “ನೀವೂ ದೀರ್ಘಶಾಂತಿಯಿಂದಿರಿ; ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ, ಕರ್ತನ ಪ್ರತ್ಯಕ್ಷತೆಯು [“ಸಾನ್ನಿಧ್ಯವು,” NW] ಹತ್ತಿರವಾಯಿತು.” (ಯಾಕೋಬ 5:8) ಆ ಸಾನ್ನಿಧ್ಯವು ಈಗ ನೈಜತೆಯಾಗಿದೆ! ನಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಲು ಇದು ಎಷ್ಟೊಂದು ಕಾರಣಗಳನ್ನು ಒದಗಿಸುತ್ತದೆ ಅಲ್ಲವೆ!
23 ದೇವರ ವಾಗ್ದಾನಗಳಲ್ಲಿರುವ ನಮ್ಮ ಭರವಸೆಯು, ಕ್ರಮವಾದ ಬೈಬಲ್ ಅಭ್ಯಾಸ ಮತ್ತು ಅರ್ಥಪೂರ್ಣವಾದ ಪ್ರಾರ್ಥನೆಯ ಮೂಲಕ ಸದಾ ದೃಢಗೊಳ್ಳುತ್ತಾ ಇರಲಿ. ನಾವು ಯೆಹೋವನ ವಾಕ್ಯಕ್ಕೆ ವಿಧೇಯರಾದಂತೆ, ನಾವೆಂದೂ ಆತನ ಆಶೀರ್ವಾದದಲ್ಲಿ ಆನಂದಿಸುವುದನ್ನು ನಿಲ್ಲಿಸದಿರೋಣ. ಆಗ ನಾವು, ಪೌಲನು ತಿಳಿಸಿದಂತಹ ದುರ್ಬಲಗೊಂಡಿದ್ದ ಅಥವಾ ಸತ್ತಂತಹ ನಂಬಿಕೆಯುಳ್ಳವರಂತಿರದೆ, ಅಬ್ರಹಾಮನಂತಿರುವೆವು. ನಮ್ಮ ಅತಿ ಪವಿತ್ರ ನಂಬಿಕೆಯಿಂದ ನಮ್ಮನ್ನು ಯಾವುದೂ ಅಗಲಿಸಲಾರದು. (ಯೂದ 20) 1999ರ ಸೇವಾ ವರ್ಷದಲ್ಲಿ ಮತ್ತು ಮುಂದೆ ನಿತ್ಯಕ್ಕೂ ಇದು ಯೆಹೋವನ ಸೇವಕರೆಲ್ಲರಲ್ಲಿ ಸತ್ಯವಾಗಲೆಂದು ನಾವು ಪ್ರಾರ್ಥಿಸುತ್ತೇವೆ.
ನಿಮಗೆ ತಿಳಿದಿದೆಯೊ?
◻ ನಾವು ಇಂದು ದೇವರಿಗೆ ಹೇಗೆ ಕಿವಿಗೊಡಸಾಧ್ಯವಿದೆ?
◻ ಅರ್ಥಪೂರ್ಣ ಪ್ರಾರ್ಥನೆಗಳನ್ನು ಮಾಡುವುದರಿಂದ ಯಾವ ಪ್ರಯೋಜನಗಳು ಬರುತ್ತವೆ?
◻ ನಾವು ವಿಧೇಯತೆಯಿಂದ ಯೆಹೋವನ ಮಾರ್ಗದರ್ಶನವನ್ನು ಅನುಸರಿಸುವಲ್ಲಿ ನಮ್ಮ ನಂಬಿಕೆಯು ಹೇಗೆ ಬಲಗೊಳಿಸಲ್ಪಡುವುದು?
◻ ವಾರ್ಷಿಕ ವರದಿಯಲ್ಲಿ (12ರಿಂದ 15ನೆಯ ಪುಟಗಳು) ಯಾವ ಅಂಶಗಳು ವಿಶೇಷವಾಗಿ ನಿಮ್ಮ ಗಮನವನ್ನು ಸೆಳೆದವು?
[ಪುಟ 12-15ರಲ್ಲಿರುವಚಿತ್ರ]
ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ 1998ನೆಯ ಸೇವಾ ವರ್ಷದ ವರದಿ
(For fully formatted text, see publication.)
[ಪುಟ 16 ರಲ್ಲಿರುವ ಚಿತ್ರ]
ನಾವು ಯೆಹೋವನ ವಾಕ್ಯಕ್ಕೆ ಕಿವಿಗೊಡುವಲ್ಲಿ, ಆತನ ವಾಗ್ದಾನಗಳಲ್ಲಿನ ನಮ್ಮ ಭರವಸೆಯು ಇನ್ನೂ ಹೆಚ್ಚು ದೃಢಗೊಳ್ಳುವುದು
[ಪುಟ 18 ರಲ್ಲಿರುವ ಚಿತ್ರ]
ನಾವು ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಾಗ ನಮ್ಮ ನಂಬಿಕೆಯು ಬಲಗೊಳಿಸಲ್ಪಡುತ್ತದೆ