ಅಬ್ರಹಾಮನಿಗಿದ್ದಂತಹ ನಂಬಿಕೆ ನಿಮಗಿದೆಯೊ?
“ಮನುಷ್ಯಕುಮಾರನು ಬಂದಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣುವನೋ?”—ಲೂಕ 18:8.
1. ಇಂದಿನ ಕಾಲದಲ್ಲಿ ನಂಬಿಕೆಯನ್ನು ದೃಢವಾಗಿಟ್ಟುಕೊಳ್ಳುವುದು ಏಕೆ ಸುಲಭವಾಗಿರುವುದಿಲ್ಲ?
ಇಂದಿನ ಕಾಲದಲ್ಲಿ, ಒಬ್ಬ ವ್ಯಕ್ತಿಗೆ ತನ್ನ ನಂಬಿಕೆಯನ್ನು ದೃಢವಾಗಿಟ್ಟುಕೊಳ್ಳುವುದು ಅಷ್ಟೇನೂ ಸುಲಭವಾಗಿರುವುದಿಲ್ಲ. ಕ್ರೈಸ್ತರು ಆತ್ಮಿಕ ವಿಷಯಗಳಿಗೆ ಗಮನಹರಿಸದಂತೆ ಮಾಡಲಿಕ್ಕಾಗಿ ಈ ಲೋಕವು ಅವರ ಮೇಲೆ ಒತ್ತಡವನ್ನು ಹಾಕುತ್ತದೆ. (ಲೂಕ 21:34; 1 ಯೋಹಾನ 2:15, 16) ಅವರಲ್ಲಿ ಅನೇಕರು, ಯುದ್ಧಗಳು, ವಿಪತ್ತುಗಳು, ರೋಗಗಳು, ಅಥವಾ ಹಸಿವಿನ ಮಧ್ಯದಲ್ಲಿ ಬದುಕಿ ಉಳಿಯಲು ಹೆಣಗಾಡುತ್ತಾರೆ. (ಲೂಕ 21:10, 11) ಅನೇಕ ರಾಷ್ಟ್ರಗಳಲ್ಲಿ, ಜನರಿಗೆ ಧರ್ಮದಲ್ಲಿರುವ ಆಸಕ್ತಿಯು ಕ್ಷೀಣಿಸುತ್ತಿದೆ ಮತ್ತು ಯಾರು ತಮ್ಮ ನಂಬಿಕೆಗನುಸಾರ ಜೀವಿಸುತ್ತಾರೊ ಅಂಥವರನ್ನು, ವಿಚಾರಹೀನರು ಮತ್ತು ಧರ್ಮಾಂಧರನ್ನಾಗಿ ನೋಡಲಾಗುತ್ತದೆ. ಇದಲ್ಲದೆ, ಅನೇಕ ಕ್ರೈಸ್ತರನ್ನು ಅವರ ನಂಬಿಕೆಗೋಸ್ಕರ ಹಿಂಸಿಸಲಾಗುತ್ತದೆ. (ಮತ್ತಾಯ 24:9) ಆದುದರಿಂದ “ಮನುಷ್ಯಕುಮಾರನು ಬಂದಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣುವನೋ?” ಎಂದು ಸುಮಾರು 2,000 ವರ್ಷಗಳ ಹಿಂದೆ ಯೇಸು ಎಬ್ಬಿಸಿದ ಪ್ರಶ್ನೆಯು ಖಂಡಿತವಾಗಿಯೂ ಸೂಕ್ತವಾಗಿದೆ.—ಲೂಕ 18:8.
2. (ಎ) ಒಬ್ಬ ಕ್ರೈಸ್ತನಿಗೆ ದೃಢವಾದ ನಂಬಿಕೆಯು ಏಕೆ ಅತ್ಯಾವಶ್ಯಕ? (ಬಿ) ನಾವು ಯಾರ ನಂಬಿಕೆಯ ಮಾದರಿಯನ್ನು ಪರಿಗಣಿಸುವುದು ಒಳ್ಳೇದು?
2 ವಾಸ್ತವಾಂಶವೇನೆಂದರೆ, ನಾವು ಈಗ ನಮ್ಮ ಜೀವನವನ್ನು ಸಫಲವಾಗಿಸಲು ಮತ್ತು ಭವಿಷ್ಯತ್ತಿಗಾಗಿ ವಾಗ್ದಾನಿಸಲ್ಪಟ್ಟಿರುವ ನಿತ್ಯ ಜೀವವನ್ನು ಪಡೆಯಲು ದೃಢವಾದ ನಂಬಿಕೆಯು ಅತ್ಯಾವಶ್ಯಕ. ಹಬಕ್ಕೂಕನಿಗೆ ಯೆಹೋವನು ತಿಳಿಸಿದ ಮಾತುಗಳನ್ನು ಉಲ್ಲೇಖಿಸುತ್ತಾ, ಅಪೊಸ್ತಲ ಪೌಲನು ಬರೆದುದು: “ಆದರೆ ನನ್ನವನಾಗಿರುವ ನೀತಿವಂತನು ನಂಬಿಕೆಯಿಂದಲೇ ಬದುಕುವನು; ಅವನು ಹಿಂದೆಗೆದರೆ ಅವನಲ್ಲಿ ನನಗೆ ಸಂತೋಷವಿರುವದಿಲ್ಲ. . . . ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ.” (ಇಬ್ರಿಯ 10:38–11:6; ಹಬಕ್ಕೂಕ 2:4) ಪೌಲನು ತಿಮೊಥೆಯನಿಗೆ ಬರೆದುದು: “ಕ್ರಿಸ್ತ ನಂಬಿಕೆಯುಳ್ಳವರು ಮಾಡತಕ್ಕ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿ ದೇವರು ನಿನ್ನನ್ನು ಕರೆದನು.” (1 ತಿಮೊಥೆಯ 6:12) ಹಾಗಾದರೆ, ಅಚಲವಾದ ನಂಬಿಕೆಯನ್ನು ನಾವು ಹೇಗೆ ಹೊಂದಸಾಧ್ಯವಿದೆ? ಆ ಪ್ರಶ್ನೆಯನ್ನು ಪರಿಗಣಿಸುವಾಗ, ಸುಮಾರು 4,000 ವರ್ಷಗಳ ಹಿಂದೆ ಜೀವಿಸಿದ ಒಬ್ಬ ವ್ಯಕ್ತಿಯ ಜೀವನದಲ್ಲಿ ನಡೆದ ಕೆಲವು ಘಟನೆಗಳನ್ನು ಪರಿಗಣಿಸುವುದು ಉಪಯುಕ್ತವಾಗಿರುವುದು. ಅವನು ಅಷ್ಟು ಸಮಯದ ಹಿಂದೆ ಜೀವಿಸಿದರೂ, ಮೂರು ಪ್ರಧಾನ ಧರ್ಮಗಳಾದ, ಇಸ್ಲಾಮ್ಮತ, ಯೂದಾಯಮತ, ಮತ್ತು ಕ್ರೈಸ್ತಮತವು ಈಗಲೂ ಅವನ ನಂಬಿಕೆಗೆ ತುಂಬ ಮಾನ್ಯತೆಯನ್ನು ನೀಡುತ್ತವೆ. ಆ ವ್ಯಕ್ತಿಯು ಅಬ್ರಹಾಮನಾಗಿದ್ದಾನೆ. ಅವನ ನಂಬಿಕೆಯು ಅಷ್ಟು ಗಮನಾರ್ಹವಾಗಿತ್ತೇಕೆ? ಇಂದು ನಾವು ಅವನನ್ನು ಅನುಕರಿಸಬಹುದೊ?
ದೇವರ ನಿರ್ದೇಶನಕ್ಕೆ ವಿಧೇಯರಾಗಿರುವುದು
3, 4. ತೆರಹನು, ಊರ್ ಪಟ್ಟಣದಿಂದ ಖಾರಾನ್ ಪಟ್ಟಣಕ್ಕೆ ತನ್ನ ಕುಟುಂಬವನ್ನು ಸ್ಥಳಾಂತರಿಸಿದ್ದೇಕೆ?
3 ಬೈಬಲಿನ ಆರಂಭದ ಪುಸ್ತಕದಲ್ಲೇ ಅಬ್ರಹಾಮನ (ಮೂಲತಃ ಅಬ್ರಾಮನೆಂದು ಕರೆಯಲ್ಪಟ್ಟನು) ಕುರಿತಾಗಿ ಪ್ರಥಮವಾಗಿ ಉಲ್ಲೇಖಿಸಲಾಗಿದೆ. ಆದಿಕಾಂಡ 11:26ರಲ್ಲಿ ನಾವು ಹೀಗೆ ಓದುತ್ತೇವೆ: “ತೆರಹನು . . . ಅಬ್ರಾಮ, ನಾಹೋರ, ಹಾರಾನ ಎಂಬ ಮಕ್ಕಳನ್ನು ಪಡೆದನು.” ತೆರಹ ಮತ್ತು ಅವನ ಕುಟುಂಬವು, ಊರ್ ಪಟ್ಟಣದಲ್ಲಿ ವಾಸಿಸುತ್ತಿದ್ದರು. ಅದು ದಕ್ಷಿಣ ಮೆಸಪೊಟೇಮಿಯದಲ್ಲಿ ಕಲ್ದೀಯರ ಏಳಿಗೆಹೊಂದುತ್ತಿದ್ದ ಒಂದು ಪಟ್ಟಣವಾಗಿತ್ತು. ಆದರೆ ಅವರು ಅಲ್ಲೇ ತಂಗಲಿಲ್ಲ. “ತೆರಹನು ತನ್ನ ಮಗನಾದ ಅಬ್ರಾಮನನ್ನೂ ತನಗೆ ಮೊಮ್ಮಗನೂ ಹಾರಾನನಿಗೆ ಮಗನೂ ಆಗಿರುವ ಲೋಟನನ್ನೂ ತನಗೆ ಸೊಸೆಯೂ ಅಬ್ರಾಮನಿಗೆ ಹೆಂಡತಿಯೂ ಆಗಿರುವ ಸಾರಯಳನ್ನೂ ಕರಕೊಂಡು ಕಾನಾನ್ ದೇಶಕ್ಕೆ ಹೋಗಬೇಕೆಂದು ಕಲ್ದೀಯರ ಊರ್ ಎಂಬ ಪಟ್ಟಣವನ್ನು ಬಿಟ್ಟನು. ಅವರು ಖಾರಾನ್ ಪಟ್ಟಣಕ್ಕೆ ಬಂದು ಅಲ್ಲೇ ವಾಸಮಾಡಿಕೊಂಡರು.” (ಆದಿಕಾಂಡ 11:31) ಅಬ್ರಹಾಮನ ತಮ್ಮನಾದ ನಾಹೋರನು ಸಹ, ತನ್ನ ಕುಟುಂಬ ಸಮೇತವಾಗಿ ಖಾರಾನ್ ಪಟ್ಟಣಕ್ಕೆ ಸ್ಥಳಾಂತರಿಸಿದನು. (ಆದಿಕಾಂಡ 24:10, 15; 28:1, 2; 29:4) ಆದರೂ, ತೆರಹನು ಅಭಿವೃದ್ಧಿಹೊಂದುತ್ತಿದ್ದ ಊರ್ ಪಟ್ಟಣದಿಂದ, ದೂರದ ಖಾರಾನ್ ಪಟ್ಟಣಕ್ಕೆ ಏಕೆ ಸ್ಥಳಾಂತರಿಸಿದನು?
4 ಅಬ್ರಹಾಮನ ದಿನಗಳ ಸುಮಾರು 2,000 ವರ್ಷಗಳ ಬಳಿಕ, ನಂಬಿಗಸ್ತ ಪುರುಷನಾದ ಸ್ತೆಫನನು, ಯೆಹೂದಿ ಸನ್ಹೇದ್ರಿನ್ನ ಮುಂದೆ ನಿಂತು ಮಾತಾಡುತ್ತಿದ್ದಾಗ, ತೆರಹನ ಕುಟುಂಬವು ಮಾಡಿದ ಈ ಅಸಾಮಾನ್ಯವಾದ ಸ್ಥಳಾಂತರಿಸುವಿಕೆಯನ್ನು ವಿವರಿಸಿದನು. ಅವನಂದದ್ದು: “ನಮ್ಮ ಮೂಲಪುರುಷನಾದ ಅಬ್ರಹಾಮನು ಖಾರಾನಿನಲ್ಲಿ ವಾಸಮಾಡಿದ್ದಕ್ಕಿಂತ ಮುಂಚೆ ಮೆಸೊಪೊತಾಮ್ಯದಲ್ಲಿದ್ದಾಗ ಪ್ರಭಾವಸ್ವರೂಪನಾದ ದೇವರು ಅವನಿಗೆ ಕಾಣಿಸಿಕೊಂಡು—ನಿನ್ನ ಸ್ವದೇಶವನ್ನೂ ನಿನ್ನ ಬಂಧುಬಳಗವನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟುಹೋಗು ಎಂದು ಹೇಳಿದನು. ಆಗ ಅವನು ಕಸ್ದೀಯರ ದೇಶದಿಂದ ಹೊರಟುಹೋಗಿ ಖಾರಾನಿನಲ್ಲಿ ವಾಸವಾಗಿದ್ದನು.” (ಅ. ಕೃತ್ಯಗಳು 7:2-4) ತೆರಹನು ತನ್ನ ಕುಟುಂಬವನ್ನು ಖಾರಾನ್ ಪಟ್ಟಣಕ್ಕೆ ಸ್ಥಳಾಂತರಿಸುವ ಮೂಲಕ, ಅಬ್ರಹಾಮನಿಗಾಗಿ ಯೆಹೋವನ ಚಿತ್ತವೇನಾಗಿತ್ತೊ ಅದಕ್ಕೆ ತಲೆಬಾಗಿದನು.
5. ತನ್ನ ತಂದೆಯು ಸತ್ತ ಬಳಿಕ ಅಬ್ರಹಾಮನು ಎಲ್ಲಿಗೆ ಹೋದನು? ಮತ್ತು ಏಕೆ?
5 ತೆರಹನ ಕುಟುಂಬವು ಆ ಹೊಸ ಪಟ್ಟಣದಲ್ಲಿ ತಳವೂರಿತು. ವರ್ಷಗಳಾನಂತರ ಅಬ್ರಹಾಮನು “ನನ್ನ ಸ್ವದೇಶ” ಎಂದು ಸೂಚಿಸಿ ಮಾತಾಡುತ್ತಿದ್ದಾಗ, ಅವನ ಮನಸ್ಸಿನಲ್ಲಿ ಊರ್ ಪಟ್ಟಣವಲ್ಲ, ಬದಲಾಗಿ ಖಾರಾನ್ ಪಟ್ಟಣವಿತ್ತು. (ಆದಿಕಾಂಡ 24:4) ಹಾಗಿದ್ದರೂ ಖಾರಾನ್ ಪಟ್ಟಣವು, ಅಬ್ರಹಾಮನ ಶಾಶ್ವತ ಬೀಡಾಗಿರಲಿಲ್ಲ. ಸ್ತೆಫನನಿಗನುಸಾರ, “[ಅಬ್ರಹಾಮನ] ತಂದೆ ಸತ್ತ ಮೇಲೆ ದೇವರು ಅವನನ್ನು ಅಲ್ಲಿಂದ ನೀವು ಈಗ ವಾಸವಾಗಿರುವ ಈ ದೇಶಕ್ಕೆ ಬರಮಾಡಿದನು.” (ಅ. ಕೃತ್ಯಗಳು 7:4) ಯೆಹೋವನ ನಿರ್ದೇಶನಕ್ಕೆ ವಿಧೇಯನಾಗಿ, ಅಬ್ರಹಾಮನು ಲೋಟನೊಂದಿಗೆ ಯೂಫ್ರೆಟೀಸ್ ನದಿಯನ್ನು ದಾಟಿ ಕಾನಾನ್ ದೇಶವನ್ನು ಪ್ರವೇಶಿಸಿದನು.a
6. ಯೆಹೋವನು ಅಬ್ರಹಾಮನೊಂದಿಗೆ ಯಾವ ವಾಗ್ದಾನವನ್ನು ಮಾಡಿದನು?
6 ಯೆಹೋವನು ಅಬ್ರಹಾಮನನ್ನು ಕಾನಾನ್ ದೇಶಕ್ಕೆ ಸ್ಥಳಾಂತರಿಸಿದ್ದೇಕೆ? ಏಕೆಂದರೆ ಆ ನಂಬಿಗಸ್ತ ವ್ಯಕ್ತಿಗಾಗಿ ದೇವರು ಕೆಲವು ಉದ್ದೇಶಗಳನ್ನು ಇಟ್ಟಿದ್ದನು. ಯೆಹೋವನು ಅಬ್ರಹಾಮನಿಗೆ ಹೀಗೆ ಹೇಳಿದ್ದನು: “ನೀನು ಸ್ವದೇಶವನ್ನೂ ಬಂಧುಬಳಗವನ್ನೂ ತಂದೆಯ ಮನೆಯನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು. ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸಿ ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು. ನೀನು ಆಶೀರ್ವಾದನಿಧಿಯಾಗುವಿ. ನಿನ್ನನ್ನು ಹರಸುವವರನ್ನು ಹರಸುವೆನು; ನಿನ್ನನ್ನು ಶಪಿಸುವವರನ್ನು ಶಪಿಸುವೆನು. ನಿನ್ನ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವದು.” (ಆದಿಕಾಂಡ 12:1-3) ಅಬ್ರಹಾಮನು, ಯೆಹೋವನ ಸಂರಕ್ಷಣೆಯನ್ನು ಅನುಭವಿಸಿ, ಕಾನಾನ್ ದೇಶವನ್ನು ಸ್ವಾಸ್ಥ್ಯವಾಗಿ ಪಡೆಯಲಿರುವ ಒಂದು ದೊಡ್ಡ ಜನಾಂಗದ ತಂದೆಯಾಗಲಿದ್ದನು. ಎಂತಹ ಒಂದು ಅದ್ಭುತಕರವಾದ ವಾಗ್ದಾನ! ಆದರೆ ಆ ದೇಶವನ್ನು ಬಾಧ್ಯತೆಯಾಗಿ ಪಡೆದುಕೊಳ್ಳಲಿಕ್ಕೋಸ್ಕರ ಅಬ್ರಹಾಮನು ತನ್ನ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಬೇಕಾಗಿತ್ತು.
7. ಯೆಹೋವನು ಏನನ್ನು ವಾಗ್ದಾನಿಸಿದ್ದನೊ ಅದನ್ನು ಪಡೆದುಕೊಳ್ಳಲಿಕ್ಕೋಸ್ಕರ, ಅಬ್ರಹಾಮನು ಯಾವ ಬದಲಾವಣೆಗಳನ್ನು ಮಾಡಲು ಸಿದ್ಧನಾಗಿರಬೇಕಿತ್ತು?
7 ಅಬ್ರಹಾಮನು ಊರ್ ಪಟ್ಟಣದಿಂದ ಹೊರಟುಹೋದಾಗ, ಅಭಿವೃದ್ಧಿಹೊಂದುತ್ತಿರುವ ಪಟ್ಟಣವನ್ನು ಮತ್ತು ಬಹುಶಃ ತನ್ನ ತಂದೆಯ ವಿಸ್ತೃತ ಕುಟುಂಬವನ್ನು ಬಿಟ್ಟುಹೋದನು. ಆ ಕುಲಪತಿಯಾಡಳಿತದ ಸಮಯಗಳಲ್ಲಿ, ಅಭಿವೃದ್ಧಿಹೊಂದುತ್ತಿರುವ ಪಟ್ಟಣವು ಮತ್ತು ವಿಸ್ತೃತ ಕುಟುಂಬವು, ಭದ್ರತೆಯ ಮೂಲಗಳಾಗಿದ್ದವು. ಅಬ್ರಹಾಮನು ಖಾರಾನನ್ನು ಬಿಟ್ಟುಹೋದಾಗ, ತನ್ನ ತಮ್ಮನಾದ ನಾಹೋರನ ಕುಟುಂಬವನ್ನು ಸೇರಿಸಿ ತನ್ನ ತಂದೆಯ ಕುಟುಂಬದಿಂದ ತನ್ನನ್ನು ಪ್ರತ್ಯೇಕಿಸಿಕೊಂಡು, ಒಂದು ಅಪರಿಚಿತ ದೇಶಕ್ಕೆ ಸ್ಥಳಾಂತರಿಸಿದನು. ಕಾನಾನ್ ದೇಶದಲ್ಲಿ ಅವನು ಗೋಡೆಗಳಿಂದ ಸುರಕ್ಷಿತವಾಗಿರುವ ಒಂದು ನಗರವನ್ನು ಪ್ರವೇಶಿಸಲಿಲ್ಲ. ಏಕೆ? ಅಬ್ರಹಾಮನು ಆ ದೇಶವನ್ನು ಪ್ರವೇಶಿಸಿದ ಸ್ವಲ್ಪ ಸಮಯದ ಬಳಿಕ, ಯೆಹೋವನು ಅವನಿಗೆ ಹೇಳಿದ್ದು: “ನೀನೆದ್ದು ಈ ದೇಶದ ಎಲ್ಲಾ ಕಡೆಯಲ್ಲಿಯೂ ತಿರುಗಾಡು; ಇದನ್ನು ನಿನಗೆ ಕೊಡುವೆನು.” (ಆದಿಕಾಂಡ 13:17) 75 ವರ್ಷ ಪ್ರಾಯದ ಅಬ್ರಹಾಮನು ಮತ್ತು 65 ವರ್ಷ ಪ್ರಾಯದ ಅವನ ಹೆಂಡತಿ ಸಾರಳು, ಆ ನಿರ್ದೇಶನಗಳನ್ನು ಪಾಲಿಸಿದರು. “ನಂಬಿಕೆಯಿಂದಲೇ ಅವನು ವಾಗ್ದತ್ತ ದೇಶಕ್ಕೆ ಬಂದಾಗ ಅಲ್ಲಿ ಅನ್ಯದೇಶದಲ್ಲಿ ಇದ್ದವನಂತೆ ಡೇರೆಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿ ಬದುಕಿದನು.”—ಇಬ್ರಿಯ 11:9; ಆದಿಕಾಂಡ 12:4.
ಅಬ್ರಹಾಮನಿಗಿದ್ದಂತಹ ನಂಬಿಕೆಯನ್ನು ಇಂದು ಪ್ರದರ್ಶಿಸುವುದು
8. ಅಬ್ರಹಾಮನ ಮತ್ತು ಇತರ ಪ್ರಾಚೀನ ಸಾಕ್ಷಿಗಳ ಮಾದರಿಯನ್ನು ನೋಡಿ, ನಾವು ಏನನ್ನು ವಿಕಸಿಸಿಕೊಳ್ಳಬೇಕು?
8 ಇಬ್ರಿಯ ಅಧ್ಯಾಯ 11ರಲ್ಲಿ ತಿಳಿಸಲ್ಪಟ್ಟಿರುವ ‘[ಕ್ರೈಸ್ತಪೂರ್ವ] ಸಾಕ್ಷಿಗಳ ಮೇಘ’ದಲ್ಲಿ ಅಬ್ರಹಾಮನು ಮತ್ತು ಅವನ ಕುಟುಂಬವು ಹೆಸರಿಸಲ್ಪಟ್ಟಿದೆ. ದೇವರ ಆ ಆದಿ ಸೇವಕರ ನಂಬಿಕೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ಕ್ರೈಸ್ತರಿಗೆ ‘ತಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನೂ [ನಂಬಿಕೆಯ ಕೊರತೆ] ತೆಗೆದಿಡುವಂತೆ’ ಪೌಲನು ಉತ್ತೇಜಿಸುತ್ತಾನೆ. (ಇಬ್ರಿಯ 12:1) ಹೌದು, ನಂಬಿಕೆಯ ಕೊರತೆಯು ‘ನಮ್ಮನ್ನು ಸುಲಭವಾಗಿ ಹತ್ತಿಕೊಳ್ಳಸಾಧ್ಯವಿದೆ.’ ಆದರೆ ಪೌಲನ ದಿನಗಳಲ್ಲಿ ಹಾಗೂ ನಮ್ಮ ದಿನಗಳಲ್ಲಿ, ನಿಜ ಕ್ರೈಸ್ತರು ಅಬ್ರಹಾಮನಿಗೆ ಮತ್ತು ದೇವರ ಇತರ ಪ್ರಾಚೀನ ಸೇವಕರಿಗಿದ್ದಂತಹದ್ದೇ ರೀತಿಯ ದೃಢವಾದ ನಂಬಿಕೆಯನ್ನು ವಿಕಸಿಸಿಕೊಳ್ಳಲು ಶಕ್ತರಾಗಿರುತ್ತಾರೆ. ತನ್ನ ಕುರಿತಾಗಿ ಮತ್ತು ಜೊತೆ ಕ್ರೈಸ್ತರ ಕುರಿತಾಗಿ ಮಾತಾಡುತ್ತಾ, ಪೌಲನು ಹೇಳುವುದು: “ನಾವಾದರೋ ಹಿಂದೆಗೆದವರಾಗಿ ನಾಶವಾಗುವವರಲ್ಲ, ನಂಬುವವರಾಗಿ ಪ್ರಾಣರಕ್ಷಣೆಯನ್ನು ಹೊಂದುವವರಾಗಿದ್ದೇವೆ.”—ಇಬ್ರಿಯ 10:39.
9, 10. ಇಂದು ಅನೇಕರಿಗೆ, ಅಬ್ರಹಾಮನಿಗಿದ್ದಂತಹದ್ದೇ ರೀತಿಯ ನಂಬಿಕೆಯು ಇದೆಯೆಂಬುದಕ್ಕೆ ಯಾವ ರುಜುವಾತಿದೆ?
9 ಅಬ್ರಹಾಮನ ಸಮಯದಂದಿನಿಂದ ಲೋಕವು ತುಂಬ ಬದಲಾಗಿದೆ ನಿಜ. ಆದರೆ ನಾವು ಈಗಲೂ ಅದೇ ‘ಅಬ್ರಹಾಮನ ದೇವರನ್ನು’ ಸೇವಿಸುತ್ತೇವೆ, ಮತ್ತು ಆತನು ಬದಲಾಗುವುದಿಲ್ಲ. (ಅ. ಕೃತ್ಯಗಳು 3:13; ಮಲಾಕಿಯ 3:6) ಅಬ್ರಹಾಮನ ಸಮಯದಲ್ಲಿ ಯೆಹೋವನು ಆರಾಧಿಸಲ್ಪಡಲು ಎಷ್ಟು ಅರ್ಹನಾಗಿದ್ದನೊ, ಇಂದು ಕೂಡ ಆತನು ಅದಕ್ಕೆ ಅಷ್ಟೇ ಅರ್ಹನಾಗಿದ್ದಾನೆ. (ಪ್ರಕಟನೆ 4:11) ಅನೇಕರು ತಮ್ಮನ್ನು ಯೆಹೋವನಿಗೆ ಸಂಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತಾರೆ, ಮತ್ತು ಅಬ್ರಹಾಮನಂತೆ ಅವರು, ದೇವರ ಚಿತ್ತವನ್ನು ಮಾಡಲು ಆವಶ್ಯಕವಾಗಿರುವ ಯಾವುದೇ ಬದಲಾವಣೆಗಳನ್ನು ತಮ್ಮ ಜೀವಿತಗಳಲ್ಲಿ ಮಾಡುತ್ತಾರೆ. ಕಳೆದ ವರ್ಷದಲ್ಲಿ, “ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ” ನೀರಿನ ದೀಕ್ಷಾಸ್ನಾನವನ್ನು ಪಡೆದುಕೊಳ್ಳುತ್ತಾ, 3,16,092 ಮಂದಿ ತಮ್ಮ ಸಮರ್ಪಣೆಯ ರುಜುವಾತನ್ನು ಕೊಟ್ಟರು.—ಮತ್ತಾಯ 28:19.
10 ಈ ಹೊಸ ಕ್ರೈಸ್ತರಲ್ಲಿ ಹೆಚ್ಚಿನವರು, ತಮ್ಮನ್ನು ಸಮರ್ಪಿಸಿಕೊಳ್ಳಲಿಕ್ಕಾಗಿ ದೂರದ ಅಪರಿಚಿತ ದೇಶಗಳಿಗೆ ಪ್ರಯಾಣಿಸಬೇಕಾಗಿರಲಿಲ್ಲ. ಆದರೆ, ಒಂದು ಆತ್ಮಿಕ ಅರ್ಥದಲ್ಲಿ ಅವರಲ್ಲಿ ಅನೇಕರು ತುಂಬ ದೂರದ ವರೆಗೆ ಪ್ರಯಾಣಿಸಿದ್ದರು. ಉದಾಹರಣೆಗಾಗಿ, ಮೊರೀಷಸ್ನಲ್ಲಿರುವ ಎಲ್ಸೀ ಎಂಬವಳು, ಒಬ್ಬ ಮಾಟಗಾರ್ತಿಯಾಗಿದ್ದಳು. ಎಲ್ಲರೂ ಅವಳಿಗೆ ಭಯಪಡುತ್ತಿದ್ದರು. ಒಬ್ಬ ವಿಶೇಷ ಪಯನೀಯರಳು ಎಲ್ಸೀಯ ಮಗಳೊಂದಿಗೆ ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸಿದಳು. ಇದು, ಎಲ್ಸೀ ‘ಕತ್ತಲೆಯಿಂದ ಬೆಳಕಿಗೆ ತಿರುಗಿಕೊಳ್ಳಲು’ ಮಾರ್ಗವನ್ನು ತೆರೆಯಿತು. (ಅ. ಕೃತ್ಯಗಳು 26:18) ತನ್ನ ಮಗಳ ಆಸಕ್ತಿಯನ್ನು ನೋಡಿ, ಬೈಬಲ್ ಕಥೆಗಳ ನನ್ನ ಪುಸ್ತಕ ಎಂಬ ಪ್ರಕಾಶನವನ್ನು ಅಭ್ಯಾಸಮಾಡಲು ಎಲ್ಸೀ ಒಪ್ಪಿಕೊಂಡಳು. ಅವಳಿಗೆ ಸತತವಾದ ಉತ್ತೇಜನದ ಅಗತ್ಯವಿದ್ದುದರಿಂದ, ಅವಳ ಅಭ್ಯಾಸವನ್ನು ವಾರದಲ್ಲಿ ಮೂರು ಸಲ ನಡೆಸಲಾಗುತ್ತಿತ್ತು. ಅವಳ ಮಾಟಮಂತ್ರದ ಕೆಲಸವು ಅವಳಿಗೆ ಯಾವುದೇ ರೀತಿಯ ಸಂತೋಷವನ್ನು ತಂದುಕೊಡಲಿಲ್ಲ, ಮತ್ತು ಅವಳಿಗೆ ಅನೇಕ ವೈಯಕ್ತಿಕ ಸಮಸ್ಯೆಗಳಿದ್ದವು. ಆದರೆ ಕಟ್ಟಕಡೆಗೆ, ಅವಳು ದೆವ್ವಾರಾಧನೆಯಿಂದ ಸತ್ಯಾರಾಧನೆಯ ವರೆಗಿನ ತನ್ನ ದೀರ್ಘವಾದ ಪ್ರಯಾಣವನ್ನು ಮುಗಿಸಲು ಶಕ್ತಳಾದಳು. ಜನರು ಬಂದು ಅವಳ ಸೇವೆಯನ್ನು ಕೋರಿಕೊಳ್ಳುತ್ತಿದ್ದಾಗ, ಯೆಹೋವನೊಬ್ಬನೇ ಅವರನ್ನು ಕೆಡುಕಿನಿಂದ ಸಂರಕ್ಷಿಸಬಲ್ಲನೆಂದು ಅವಳು ವಿವರಿಸುತ್ತಿದ್ದಳು. ಎಲ್ಸೀ ಈಗ ಒಬ್ಬ ದೀಕ್ಷಾಸ್ನಾನಿತ ಸಾಕ್ಷಿಯಾಗಿದ್ದಾಳೆ, ಮತ್ತು ಅವಳ ಕುಟುಂಬದವರಲ್ಲಿ ಹಾಗೂ ಪರಿಚಯಸ್ಥರಲ್ಲಿ 14 ಮಂದಿ ಸತ್ಯವನ್ನು ಸ್ವೀಕರಿಸಿದ್ದಾರೆ.
11. ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಳ್ಳುವವರು ಯಾವ ಬದಲಾವಣೆಗಳನ್ನು ಮಾಡಲು ಸಿದ್ಧರಾಗಿದ್ದಾರೆ?
11 ದೇವರ ಸೇವೆ ಮಾಡಲು ಕಳೆದ ವರ್ಷ ಸಮರ್ಪಣೆಯನ್ನು ಮಾಡಿಕೊಂಡವರಲ್ಲಿ ಹೆಚ್ಚಿನವರು, ಅಷ್ಟೇನೂ ದೊಡ್ಡ ಬದಲಾವಣೆಗಳನ್ನು ಮಾಡಬೇಕಾಗಿರಲಿಲ್ಲ. ಆದರೆ ಅವರೆಲ್ಲರೂ ಆತ್ಮಿಕವಾಗಿ ಮೃತ ಸ್ಥಿತಿಯಿಂದ, ಜೀವಂತ ಸ್ಥಿತಿಗೆ ಬದಲಾದರು. (ಎಫೆಸ 2:1) ಅವರು ಈ ಲೋಕದಲ್ಲಿ ಜೀವಿಸುತ್ತಿರುವುದಾದರೂ, ಅದರ ಭಾಗವಾಗಿರುವುದಿಲ್ಲ. (ಯೋಹಾನ 17:15, 16) ‘ಪರಲೋಕಸಂಸ್ಥಾನದವರಾಗಿರುವ’ ಅಭಿಷಿಕ್ತ ಕ್ರೈಸ್ತರಂತೆಯೇ ಅವರು ‘ಪ್ರವಾಸಿಗಳು ಮತ್ತು ಪರದೇಶಸ್ಥರಂತೆ’ ಇದ್ದಾರೆ. (ಫಿಲಿಪ್ಪಿ 3:20; 1 ಪೇತ್ರ 2:11) ದೇವರಿಗಾಗಿ ಮತ್ತು ನೆರೆಯವನಿಗಾಗಿರುವ ಪ್ರೀತಿಯಿಂದ ಪ್ರಚೋದಿಸಲ್ಪಟ್ಟು, ಅವರು ತಮ್ಮ ಜೀವಿತಗಳನ್ನು ದೇವರ ಮಟ್ಟಗಳಿಗೆ ಸರಿಹೊಂದಿಸಿಕೊಂಡಿದ್ದಾರೆ. (ಮತ್ತಾಯ 22:37-39) ಅವರು ಸ್ವಾರ್ಥಪರ, ಪ್ರಾಪಂಚಿಕ ಗುರಿಗಳನ್ನು ಬೆನ್ನಟ್ಟುವುದಿಲ್ಲ ಅಥವಾ ಈ ಲೋಕದಲ್ಲಿ ತಾವು ವೈಯಕ್ತಿಕವಾಗಿ ಏನನ್ನಾದರೂ ಸಾಧಿಸಬೇಕೆಂದು ಅವರಿಗನಿಸುವುದಿಲ್ಲ. ಅದರ ಬದಲು, ಅವರು ವಾಗ್ದತ್ತ ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲದ’ ಮೇಲೆ ತಮ್ಮ ದೃಷ್ಟಿಯನ್ನಿಡುತ್ತಾರೆ.—2 ಪೇತ್ರ 3:13; 2 ಕೊರಿಂಥ 4:18.
12. ಕಳೆದ ವರ್ಷದ ಯಾವ ವರದಿಯು, ಯೇಸು ತನ್ನ ಸಾನ್ನಿಧ್ಯದ ಸಮಯದಲ್ಲಿ “ಭೂಮಿಯ ಮೇಲೆ ನಂಬಿಕೆಯನ್ನು” ಕಂಡಿದ್ದಾನೆಂಬುದಕ್ಕೆ ರುಜುವಾತನ್ನು ಕೊಡುತ್ತದೆ?
12 ಅಬ್ರಹಾಮನು ಕಾನಾನ್ದೇಶಕ್ಕೆ ಸ್ಥಳಾಂತರಿಸಿದಾಗ, ಅವನು ಮತ್ತು ಅವನ ಕುಟುಂಬವು ಒಂಟಿಯಾಗಿತ್ತು. ಅವರನ್ನು ಬೆಂಬಲಿಸಲು ಮತ್ತು ಸಂರಕ್ಷಿಸಲು ಯೆಹೋವನು ಮಾತ್ರ ಇದ್ದನು. ಆದರೆ ಹೊಸತಾಗಿ ದೀಕ್ಷಾಸ್ನಾನಿತರಾಗಿರುವ ಈ 3,16,092 ಮಂದಿ ಕ್ರೈಸ್ತರು ಒಂಟಿಗರಾಗಿರುವುದಿಲ್ಲ. ಯೆಹೋವನು ಅಬ್ರಹಾಮನನ್ನು ತನ್ನ ಆತ್ಮದ ಮೂಲಕ ಬೆಂಬಲಿಸಿ ಸಂರಕ್ಷಿಸಿದಂತೆ ಇವರನ್ನೂ ಸಂರಕ್ಷಿಸುತ್ತಾನೆ. (ಜ್ಞಾನೋಕ್ತಿ 18:10) ಇದಕ್ಕೆ ಕೂಡಿಸಿ, ಇಂದಿನ ಕೆಲವೊಂದು ರಾಷ್ಟ್ರಗಳಿಗಿಂತಲೂ ಹೆಚ್ಚು ಜನಭರಿತವಾಗಿರುವ, ಲವಲವಿಕೆಯಿಂದ ಕೂಡಿರುವ ಅಂತಾರಾಷ್ಟ್ರೀಯ “ಜನಾಂಗ”ದ ಮೂಲಕ ಆತನು ಅವರನ್ನು ಬೆಂಬಲಿಸುತ್ತಾನೆ. (ಯೆಶಾಯ 66:8) ಆ ಜನಾಂಗದ ಉಚ್ಚಾಂಕವು 58,88,650 ಆಗಿದೆ. ಕಳೆದ ವರ್ಷ ಇವರು ತಮ್ಮ ನೆರೆಯವರೊಂದಿಗೆ ದೇವರ ವಾಗ್ದಾನಗಳ ಕುರಿತಾಗಿ ಮಾತಾಡುವ ಮೂಲಕ ತಮ್ಮ ಸಕ್ರಿಯ ನಂಬಿಕೆಯ ಪುರಾವೆಯನ್ನು ಕೊಟ್ಟರು. (ಮಾರ್ಕ 13:10) ಆಸಕ್ತ ಜನರನ್ನು ಹುಡುಕುತ್ತಾ ಅವರು ಈ ಕೆಲಸದಲ್ಲಿ 118,66,66,708 ತಾಸುಗಳನ್ನು ವ್ಯಯಿಸಿದರು. ಇದು ಅಸಾಧಾರಣವಾದ ಸಮಯದ ಮೊತ್ತವಾಗಿತ್ತು. ಫಲಿತಾಂಶವಾಗಿ, ನಂಬಿಕೆಯನ್ನು ವಿಕಸಿಸಿಕೊಳ್ಳಲು ಬಯಸುವ ಇತರರೊಂದಿಗೆ 43,02,852 ಬೈಬಲ್ ಅಭ್ಯಾಸಗಳನ್ನು ನಡೆಸಲಾಯಿತು. ಅವರ ಹುರುಪನ್ನು ಇನ್ನೂ ಹೆಚ್ಚು ಪ್ರದರ್ಶಿಸುತ್ತಾ, ಈ “ಜನಾಂಗ”ದ 6,98,781 ಮಂದಿ, ಪೂರ್ಣ ಸಮಯ ಅಥವಾ ಒಂದು ಇಲ್ಲವೆ ಹೆಚ್ಚು ತಿಂಗಳುಗಳ ವರೆಗೆ ಪಯನೀಯರ್ ಸೇವೆಯಲ್ಲಿ ಪಾಲ್ಗೊಂಡರು. (ಯೆಹೋವನ ಸಾಕ್ಷಿಗಳ ಕಳೆದ ವರ್ಷದ ಚಟುವಟಿಕೆಯ ಕುರಿತಾದ ಹೆಚ್ಚಿನ ವಿವರಗಳನ್ನು, 12ರಿಂದ 15ನೆಯ ಪುಟಗಳಲ್ಲಿ ಕಂಡುಕೊಳ್ಳಸಾಧ್ಯವಿದೆ.) ಈ ಗಮನಾರ್ಹವಾದ ದಾಖಲೆಯು, “ಮನುಷ್ಯಕುಮಾರನು ಬಂದಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣುವನೋ?” ಎಂಬ ಯೇಸುವಿನ ಪ್ರಶ್ನೆಗೆ ಒಂದು ಸಕಾರಾತ್ಮಕ, ಜೀವಂತ ಉತ್ತರವಾಗಿದೆ.
ಪರೀಕ್ಷೆಗಳ ಎದುರಿನಲ್ಲೂ ನಂಬಿಗಸ್ತಿಕೆ
13, 14. ಕಾನಾನ್ ದೇಶದಲ್ಲಿ ಅಬ್ರಹಾಮ ಮತ್ತು ಅವನ ಕುಟುಂಬವು ಎದುರಿಸಿದ ಕೆಲವೊಂದು ತೊಂದರೆಗಳನ್ನು ವರ್ಣಿಸಿರಿ.
13 ಕಾನಾನ್ದೇಶದಲ್ಲಿ ಅಬ್ರಹಾಮನು ಮತ್ತು ಅವನ ಕುಟುಂಬವು ಅನೇಕವೇಳೆ ತೊಂದರೆಗಳನ್ನು ಎದುರಿಸಿತು. ತೀವ್ರ ಕ್ಷಾಮದಿಂದಾಗಿ ಅವನು ಕಡಿಮೆಪಕ್ಷ ಒಂದು ಸಲವಾದರೂ ಕಾನಾನ್ ದೇಶದಿಂದ ಐಗುಪ್ತಕ್ಕೆ ಹೋಗಬೇಕಾಯಿತು. ಅದಲ್ಲದೆ, ಐಗುಪ್ತ ಮತ್ತು (ಗಾಜಾದ ಸಮೀಪದ) ಗೆರಾರಿನ ಅರಸರು, ಅಬ್ರಹಾಮನ ಹೆಂಡತಿ ಸಾರಳನ್ನು ನೋಡಿ ಆಕರ್ಷಿತರಾದರು. (ಆದಿಕಾಂಡ 12:10-20; 20:1-18) ಅಬ್ರಹಾಮನ ಮತ್ತು ಲೋಟನ ದನಕಾಯುವವರ ನಡುವೆ ನಡೆದ ಸಂಘರ್ಷಣೆಗಳಿಂದಾಗಿ ಆ ಎರಡು ಮನೆತನಗಳು ಬೇರೆ ಬೇರೆಯಾದವು. ಆಗ, ಪ್ರದೇಶವನ್ನು ಆಯ್ಕೆಮಾಡುವ ಪ್ರಥಮ ಅವಕಾಶವನ್ನು ಅಬ್ರಹಾಮನು ನಿಸ್ವಾರ್ಥನಾಗಿ ಲೋಟನಿಗೆ ಕೊಟ್ಟನು. ಫಲವತ್ತಾಗಿದ್ದು, ಸೌಂದರ್ಯದಲ್ಲಿ ಏದೆನ್ ತೋಟದಂತೆ ತೋರುತ್ತಿದ್ದ ಯೊರ್ದಾನ್ ಹೊಳೆಯ ಸುತ್ತಲಿನ ಪ್ರದೇಶವನ್ನು ಲೋಟನು ಆಯ್ಕೆಮಾಡಿದನು.—ಆದಿಕಾಂಡ 13:5-13.
14 ತದನಂತರ, ದೂರದಲ್ಲಿರುವ ಏಲಾಮಿನ ಅರಸನು ಮತ್ತು ಅವನ ಮಿತ್ರರಾಜರು ಹಾಗೂ ಸಿದ್ದೀಮ್ ತಗ್ಗಿನಲ್ಲಿರುವ ಐದು ನಗರಗಳ ರಾಜರ ನಡುವಿನ ಒಂದು ಯುದ್ಧದಲ್ಲಿ ಲೋಟನು ಸಿಕ್ಕಿಕೊಂಡನು. ಆ ಪರದೇಶಿ ರಾಜರು, ಈ ಸ್ಥಳಿಕ ರಾಜರನ್ನು ಸೋಲಿಸಿ, ಲೋಟನನ್ನು ಮತ್ತು ಅವನ ಸರಕುಗಳನ್ನೂ ಸುಲಿಗೆಮಾಡಿದರು. ನಡೆದ ಸಂಗತಿಯು ಅಬ್ರಹಾಮನ ಕಿವಿಗೆ ಬಿದ್ದಾಗ, ಅವನು ಆ ಪರದೇಶಿ ರಾಜರನ್ನು ನಿರ್ಭೀತಿಯಿಂದ ಬೆನ್ನಟ್ಟಿಕೊಂಡು ಹೋದನು. ಅವನು, ಲೋಟನನ್ನು ಮತ್ತು ಅವನ ಕುಟುಂಬವನ್ನು ಹಾಗೂ ಕಸಿದುಕೊಳ್ಳಲ್ಪಟ್ಟ ಸ್ಥಳಿಕ ರಾಜರ ಸರಕುಗಳನ್ನು ಪುನಃ ಪಡೆದುಕೊಳ್ಳಲು ಶಕ್ತನಾದನು. (ಆದಿಕಾಂಡ 14:1-16) ಆದರೆ ಕಾನಾನ್ ದೇಶದಲ್ಲಿ ಲೋಟನಿಗೆ ಅದು ತೀರ ಕೆಟ್ಟದಾದ ಅನುಭವವಾಗಿರಲಿಲ್ಲ. ಆ ನಗರವು ಅನೈತಿಕತೆಗೆ ಕುಖ್ಯಾತವಾಗಿದ್ದರೂ, ಯಾವುದೊ ಒಂದು ಕಾರಣಕ್ಕಾಗಿ ಅವನು ಸೋದೋಮಿಗೆ ಹೋಗಿ ವಾಸಿಸಲಾರಂಭಿಸಿದನು.b (2 ಪೇತ್ರ 2:6-8) ನಗರವು ನಾಶಗೊಳಿಸಲ್ಪಡುವುದೆಂದು ಇಬ್ಬರು ದೇವದೂತರು ಅವನಿಗೆ ಎಚ್ಚರಿಸಿದಾಗ, ಲೋಟನು ತನ್ನ ಹೆಂಡತಿ ಮತ್ತು ಪುತ್ರಿಯರೊಂದಿಗೆ ಅಲ್ಲಿಂದ ಓಡಿಹೋದನು. ಆದರೆ, ದೇವದೂತರು ಕೊಟ್ಟಿದ್ದ ನಿರ್ದಿಷ್ಟ ಸೂಚನೆಗಳನ್ನು ಅಲಕ್ಷಿಸಿದ್ದರಿಂದ ಲೋಟನ ಹೆಂಡತಿಯು ಉಪ್ಪಿನ ಕಂಬವಾದಳು. ಸ್ವಲ್ಪ ಸಮಯದ ವರೆಗೆ ಲೋಟನು ತನ್ನ ಇಬ್ಬರು ಪುತ್ರಿಯರೊಂದಿಗೆ ಚೋಗರಿನಲ್ಲಿರುವ ಒಂದು ಗವಿಯಲ್ಲಿ ವಾಸಿಸಬೇಕಾಯಿತು. (ಆದಿಕಾಂಡ 19:1-30) ಈ ಘಟನೆಗಳಿಂದಾಗಿ ಅಬ್ರಹಾಮನು ಚಿಂತೆಗೀಡಾಗಿದ್ದಿರಬಹುದು. ಏಕೆಂದರೆ ಲೋಟನು ಅಬ್ರಹಾಮನ ಮನೆತನದ ಭಾಗದೋಪಾದಿ ಕಾನಾನ್ ದೇಶಕ್ಕೆ ಬಂದಿದ್ದನು.
15. ಒಂದು ಅಪರಿಚಿತ ದೇಶದಲ್ಲಿ, ಗುಡಾರಗಳಲ್ಲಿ ವಾಸಿಸುತ್ತಿದ್ದಾಗ ಬಂದ ಸಮಸ್ಯೆಗಳ ಎದುರಿನಲ್ಲೂ, ಅಬ್ರಹಾಮನು ಯಾವ ರೀತಿಯ ನಕಾರಾತ್ಮಕ ಆಲೋಚನೆಯನ್ನು ದೂರವಿಟ್ಟಿರಬಹುದು?
15 ತಾನು ಸುರಕ್ಷಿತವಾದ ಊರ್ ಪಟ್ಟಣದಲ್ಲಿ ತನ್ನ ತಂದೆಯ ವಿಸ್ತರಿತ ಕುಟುಂಬದೊಂದಿಗೆ ಅಥವಾ ಖಾರಾನಿನಲ್ಲಿ ತನ್ನ ಸಹೋದರನಾದ ನಾಹೋರನೊಂದಿಗೆ ಹಿಂದುಳಿಯುತ್ತಿದ್ದರೆ ಚೆನ್ನಾಗಿರುತ್ತಿತ್ತೆಂದು ಅಬ್ರಹಾಮನು ಎಂದಾದರೂ ನೆನಸಿದನೊ? ಗುಡಾರಗಳಲ್ಲಿ ವಾಸಿಸುವ ಬದಲಿಗೆ, ಗೋಡೆಗಳಿಂದ ಸುರಕ್ಷಿತವಾಗಿರುವ ಒಂದು ನಗರದಲ್ಲಿ ತಾನು ನೆಲೆಸಬೇಕಿತ್ತೆಂದು ಅವನು ಎಂದಾದರೂ ಆಶಿಸಿದನೊ? ಒಂದು ಅಪರಿಚಿತ ದೇಶದಲ್ಲಿ ಅಲೆಮಾರಿಯಾಗಿರುವ ಮೂಲಕ ತಾನು ಮಾಡಿದ್ದ ತ್ಯಾಗಗಳೆಲ್ಲ ಮೂರ್ಖತನವಾಗಿತ್ತೆಂದು ಅವನು ಎಂದಾದರೂ ಸಂದೇಹಿಸಿದನೊ? ಅಬ್ರಹಾಮ ಮತ್ತು ಅವನ ಕುಟುಂಬದ ಕುರಿತಾಗಿ ಮಾತಾಡುತ್ತಾ, ಅಪೊಸ್ತಲ ಪೌಲನು ಗಮನಿಸಿದ್ದು: “ತಾವು ಹೊರಟು ಬಂದಿದ್ದ ದೇಶದ ಮೇಲೆ ಮನಸ್ಸಿಟ್ಟವರಾಗಿದ್ದರೆ ತಿರಿಗಿ ಅಲ್ಲಿಗೆ ಹೋಗುವದಕ್ಕೆ ಅವರಿಗೆ ಯಾವಾಗಲೂ ಅವಕಾಶವಿತ್ತು.” (ಇಬ್ರಿಯ 11:15) ಆದರೆ ಅವರು ಪುನಃ ಹೋಗಲಿಲ್ಲ. ಆ ಕಷ್ಟದೆಸೆಗಳ ಎದುರಿನಲ್ಲಿ ಧೈರ್ಯಗುಂದದೆ, ಅವರು ಎಲ್ಲಿರಬೇಕೆಂದು ಯೆಹೋವನು ಬಯಸಿದನೊ ಅಲ್ಲಿಯೇ ಉಳಿದರು.
ಇಂದು ತಾಳ್ಮೆಯನ್ನು ಪ್ರದರ್ಶಿಸುವುದು
16, 17. (ಎ) ಇಂದು ಅನೇಕ ಕ್ರೈಸ್ತರು ಯಾವ ಕಷ್ಟದೆಸೆಗಳನ್ನು ಎದುರಿಸುತ್ತಾರೆ? (ಬಿ) ಕ್ರೈಸ್ತರಿಗೆ ಯಾವ ಸಕಾರಾತ್ಮಕ ಮನೋಭಾವವಿದೆ? ಏಕೆ?
16 ಇಂದು ಕ್ರೈಸ್ತರಲ್ಲೂ ತದ್ರೀತಿಯ ತಾಳ್ಮೆಯನ್ನು ನೋಡಸಾಧ್ಯವಿದೆ. ದೇವರ ಸೇವೆ ಮಾಡುವುದು ನಿಜ ಕ್ರೈಸ್ತರಿಗೆ ಅಪರಿಮಿತವಾದ ಆನಂದವನ್ನು ತರುತ್ತದಾದರೂ, ಈ ಕಡೇ ದಿವಸಗಳಲ್ಲಿ ಜೀವನ ಸಾಗಿಸುವುದು ಅಷ್ಟೇನೂ ಸುಲಭವಾದದ್ದಾಗಿರುವುದಿಲ್ಲ. ಅವರು ಒಂದು ಆತ್ಮಿಕ ಪ್ರಮೋದವನದಲ್ಲಿ ಜೀವಿಸುತ್ತಿದ್ದಾರಾದರೂ, ತಮ್ಮ ನೆರೆಹೊರೆಯವರು ಅನುಭವಿಸುತ್ತಿರುವಂತಹ ಆರ್ಥಿಕ ಒತ್ತಡಗಳನ್ನೇ ಅವರೂ ಅನುಭವಿಸುತ್ತಾರೆ. (ಯೆಶಾಯ 11:6-9) ಅನೇಕರು, ರಾಷ್ಟ್ರಗಳ ಯುದ್ಧಗಳಲ್ಲಿ ಮುಗ್ಧ ಬಲಿಪಶುಗಳಾಗಿದ್ದಾರೆ, ಮತ್ತು ಕೆಲವರದ್ದು ಏನೂ ತಪ್ಪಿಲ್ಲದಿದ್ದರೂ ಅವರು ಕಡು ಬಡತನದಲ್ಲಿದ್ದಾರೆ. ಇದಕ್ಕೆ ಕೂಡಿಸಿ, ತಾವು ಅಲ್ಪಸಂಖ್ಯಾತರು ಆಗಿರುವುದರಿಂದ ಬರುವ ಸಮಸ್ಯೆಗಳನ್ನು ಅವರು ತಾಳಿಕೊಳ್ಳುತ್ತಾರೆ. ಅನೇಕ ದೇಶಗಳಲ್ಲಿ, ಅಧಿಕಾಂಶ ಜನರು ಸುವಾರ್ತೆಯಲ್ಲಿ ಪೂರ್ತಿ ನಿರಾಸಕ್ತರಾಗಿದ್ದರೂ, ಅವರು ಅದನ್ನು ಸಾರುತ್ತಾ ಇದ್ದಾರೆ. ಬೇರೆ ದೇಶಗಳಲ್ಲಿ ಅವರು, ‘ಕಾನೂನಿನ ಮೂಲಕ ಕೇಡನ್ನು ಕಲ್ಪಿಸುವ’ ಮತ್ತು “ನಿರ್ದೋಷಿಗಳನ್ನೂ ದುಷ್ಟರೆಂದು ಹೇಳಿ ಹತಿಸುವ”ವವರ ಕುಯುಕ್ತಿಯ ದಾಳಿಗಳಿಗೆ ತುತ್ತಾಗುತ್ತಾರೆ. (ಕೀರ್ತನೆ 94:20, 21, NW) ಕ್ರೈಸ್ತರು ಆಕ್ರಮಣಕ್ಕೆ ಒಳಗಾಗದ ಮತ್ತು ತಮ್ಮ ಉಚ್ಚ ಮಟ್ಟಗಳಿಗಾಗಿ ಶ್ಲಾಘಿಸಲ್ಪಡುವ ದೇಶಗಳಲ್ಲೂ, ಅವರು ತಮ್ಮ ಸಹಪಾಠಿಗಳು ಮತ್ತು ಜೊತೆ ಕೆಲಸಗಾರರಿಂದ ಭಿನ್ನರಾಗಿರುವುದರ ಕುರಿತಾಗಿ ಪ್ರಜ್ಞಾವಂತರಾಗಿದ್ದಾರೆ. ಇದು ಬಹುಮಟ್ಟಿಗೆ ಅಬ್ರಹಾಮನಂತಿರುತ್ತದೆ. ಅವನ ಸುತ್ತಮುತ್ತಲಿನ ಜನರು ನಗರಗಳಲ್ಲಿ ವಾಸಿಸುತ್ತಿದ್ದರೂ, ಅವನು ಗುಡಾರಗಳಲ್ಲಿ ವಾಸಿಸುತ್ತಿದ್ದನು. ಹೌದು, ಈ ಲೋಕದಲ್ಲಿ ಜೀವಿಸುತ್ತಿದ್ದು, ಅದೇ ಸಮಯದಲ್ಲಿ ಅದರ “ಭಾಗವಾಗಿರದೇ” ಇರುವುದು ಸುಲಭವಲ್ಲ.—ಯೋಹಾನ 17:14, NW.
17 ಆದುದರಿಂದ, ನಾವು ದೇವರಿಗೆ ಮಾಡಿರುವ ಸಮರ್ಪಣೆಯ ಕುರಿತು ಎಂದಾದರೂ ವಿಷಾದಿಸುತ್ತೇವೊ? ಎಲ್ಲರಂತೆ, ನಾವು ಸಹ ಲೋಕದ ಭಾಗವಾಗಿಯೇ ಉಳಿಯುತ್ತಿದ್ದರೆ ಒಳ್ಳೇದಾಗಿರುತ್ತಿತ್ತೆಂದು ಆಶಿಸುತ್ತೇವೊ? ಯೆಹೋವನ ಸೇವೆಗಾಗಿ ನಾವು ಮಾಡಿರುವ ತ್ಯಾಗಗಳ ಕುರಿತಾಗಿ ನಾವು ಪ್ರಲಾಪಿಸುತ್ತೇವೊ? ಖಂಡಿತವಾಗಿಯೂ ಇಲ್ಲ! ನಾವು ಬಿಟ್ಟುಬಂದಿರುವ ಸಂಗತಿಗಳನ್ನು ಆಶಿಸುತ್ತಾ ಹಿಂದೆ ನೋಡುವುದಿಲ್ಲ. ಬದಲಿಗೆ, ನಾವು ಈಗ ಆನಂದಿಸುತ್ತಿರುವ ಮತ್ತು ಭವಿಷ್ಯತ್ತಿನಲ್ಲಿ ಆನಂದಿಸಲಿರುವ ಆಶೀರ್ವಾದಗಳ ತುಲನೆಯಲ್ಲಿ, ನಾವು ಮಾಡಿರಬಹುದಾದ ತ್ಯಾಗಗಳು ತೃಣಮಾತ್ರವೆಂದು ನಾವು ಗ್ರಹಿಸುತ್ತೇವೆ. (ಲೂಕ 9:62; ಫಿಲಿಪ್ಪಿ 3:8) ಅಷ್ಟುಮಾತ್ರವಲ್ಲದೆ, ಲೋಕದಲ್ಲಿರುವ ಜನರು ಸಂತೋಷದಿಂದಿದ್ದಾರೊ? ಸತ್ಯಸಂಗತಿಯೇನೆಂದರೆ, ಅವರಲ್ಲಿ ಅನೇಕರು ಈಗಾಗಲೇ ನಮ್ಮ ಬಳಿ ಇರುವ ಉತ್ತರಗಳಿಗಾಗಿ ಇನ್ನೂ ಹುಡುಕುತ್ತಾ ಇದ್ದಾರೆ. ನಾವು ಪಾಲಿಸುತ್ತಿರುವ ಬೈಬಲಿನಲ್ಲಿನ ದೇವರ ನಿರ್ದೇಶನವನ್ನು ಅವರು ಪಾಲಿಸದೆ ಇರುವುದರಿಂದ ಕಷ್ಟಾನುಭವಿಸುತ್ತಾರೆ. (ಕೀರ್ತನೆ 119:105) ಮತ್ತು ನಾವು ನಮ್ಮ ಜೊತೆ ವಿಶ್ವಾಸಿಗಳೊಂದಿಗೆ ಆನಂದಿಸುವಂತಹ ಕ್ರೈಸ್ತ ಒಡನಾಟ ಮತ್ತು ಆನಂದಕರ ಸಾಹಚರ್ಯಕ್ಕಾಗಿ ಅವರು ಹಾತೊರೆಯುತ್ತಾರೆ.—ಕೀರ್ತನೆ 133:1; ಕೊಲೊಸ್ಸೆ 3:14.
18. ಅಬ್ರಹಾಮನಂತಹ ಧೈರ್ಯವನ್ನು ಕ್ರೈಸ್ತರು ತೋರಿಸುವಾಗ, ಫಲಿತಾಂಶವೇನಾಗಿರುತ್ತದೆ?
18 ಲೋಟನನ್ನು ಸೆರೆಹಿಡಿದವರನ್ನು ಬೆನ್ನಟ್ಟಿಕೊಂಡು ಹೋದ ಅಬ್ರಹಾಮನಂತೆ, ನಾವು ಕೆಲವೊಮ್ಮೆ ಧೈರ್ಯಶಾಲಿಗಳಾಗಿರಬೇಕಾಗಬಹುದು. ಆದರೆ ನಾವು ಧೈರ್ಯಶಾಲಿಗಳಾಗಿರುವಾಗ, ಯೆಹೋವನು ಒಳ್ಳೆಯ ಫಲಿತಾಂಶವನ್ನು ಕೊಡುತ್ತಾನೆ. ಉದಾಹರಣೆಗಾಗಿ, ಉತ್ತರ ಐರ್ಲೆಂಡ್ನಲ್ಲಿ, ಪಂಥಗಳ ನಡುವಿನ ಹಿಂಸಾಚಾರದಿಂದಾಗಿ, ದ್ವೇಷವು ಜನರ ಮನಸ್ಸುಗಳಲ್ಲಿ ಆಳವಾಗಿ ಬೇರೂರಿದೆ. ಈ ವಿಷಯದಲ್ಲಿ ತಟಸ್ಥರಾಗಿರುವುದಕ್ಕಾಗಿ ಧೈರ್ಯ ಬೇಕಾಗುತ್ತದೆ. ಆದರೆ ನಂಬಿಗಸ್ತ ಕ್ರೈಸ್ತರು, ಯೆಹೋವನು ಯೆಹೋಶುವನಿಗೆ ಹೇಳಿದ ಮಾತುಗಳನ್ನು ಅನುಸರಿಸಿದ್ದಾರೆ: “ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ.” (ಯೆಹೋಶುವ 1:9; ಕೀರ್ತನೆ 27:14) ಈ ಎಲ್ಲ ವರ್ಷಗಳಲ್ಲಿ ತಮ್ಮ ನಿರ್ಭೀತಿಯ ನಿಲುವಿನಿಂದಾಗಿ ಅವರು ಗೌರವವನ್ನು ಗಿಟ್ಟಿಸಿಕೊಂಡಿದ್ದಾರೆ, ಮತ್ತು ಇಂದು ಅವರು ಆ ದೇಶದ ಎಲ್ಲ ಸಮುದಾಯಗಳಲ್ಲಿ ಮುಚ್ಚುಮರೆಯಿಲ್ಲದೆ ಸಾರಬಲ್ಲರು.
19. ಕ್ರೈಸ್ತರು ಎಲ್ಲಿರಲು ಸಂತೋಷಪಡುತ್ತಾರೆ, ಮತ್ತು ಅವರು ಯೆಹೋವನ ನಿರ್ದೇಶನವನ್ನು ಅನುಸರಿಸುವಾಗ ಯಾವ ಫಲಿತಾಂಶವನ್ನು ಭರವಸೆಯಿಂದ ನಿರೀಕ್ಷಿಸಸಾಧ್ಯವಿದೆ?
19 ನಾವು ಎಂತಹ ಸನ್ನಿವೇಶವನ್ನೇ ಎದುರಿಸಲಿ, ನಾವು ಯೆಹೋವನ ನಿರ್ದೇಶನವನ್ನು ಅನುಸರಿಸುವಲ್ಲಿ, ಫಲಿತಾಂಶವು ಆತನಿಗೆ ಗೌರವವನ್ನು ತರುವುದು ಮತ್ತು ನಮಗೆ ಶಾಶ್ವತ ಪ್ರಯೋಜನವನ್ನು ತರುವುದೆಂಬ ವಿಷಯವನ್ನು ನಾವು ಎಂದೂ ಸಂದೇಹಿಸಬೇಕಾಗಿಲ್ಲ. ಪಂಥಾಹ್ವಾನಗಳನ್ನು ಎದುರಿಸಿ, ತ್ಯಾಗಗಳನ್ನು ಮಾಡಬೇಕಾದರೂ, ನಮ್ಮ ಕ್ರೈಸ್ತ ಸಹೋದರರ ಸಾಹಚರ್ಯವನ್ನು ಆನಂದಿಸುತ್ತಾ, ದೇವರು ವಾಗ್ದಾನಿಸಿರುವ ನಿತ್ಯ ಭವಿಷ್ಯತ್ತನ್ನು ಭರವಸೆಯಿಂದ ಎದುರುನೋಡುತ್ತಾ ಇರುವಲ್ಲಿ, ಯೆಹೋವನ ಸೇವೆಯನ್ನು ಬಿಟ್ಟು ನಾವು ಬೇರೆಲ್ಲಿಯೂ ಹೋಗಲು ಬಯಸುವುದಿಲ್ಲ.
[ಅಧ್ಯಯನ ಪ್ರಶ್ನೆಗಳು]
a ಅಬ್ರಹಾಮನ ತಮ್ಮನಾಗಿದ್ದ ಲೋಟನ ತಂದೆಯು ಸತ್ತಾಗ, ಅಬ್ರಹಾಮನು ತನ್ನ ಸೋದರಮಗನಾದ ಲೋಟನನ್ನು ದತ್ತುತೆಗೆದುಕೊಂಡನೆಂದು ವ್ಯಕ್ತವಾಗುತ್ತದೆ.—ಆದಿಕಾಂಡ 11:27, 28; 12:5.
b ಆ ನಾಲ್ಕು ಮಂದಿ ರಾಜರಿಂದ ಸೆರೆಹಿಡಿಯಲ್ಪಟ್ಟ ಅನುಭವವಾದ ನಂತರ, ಲೋಟನು ಹೆಚ್ಚಿನ ಸುರಕ್ಷೆಗಾಗಿ ನಗರದಲ್ಲಿ ವಾಸಿಸಲಾರಂಭಿಸಿದ್ದಿರಬಹುದು ಎಂದು ಕೆಲವರು ಸೂಚಿಸಿದ್ದಾರೆ.
ನಿಮಗೆ ನೆನಪಿದೆಯೊ?
◻ ದೃಢವಾದ ನಂಬಿಕೆಯು ಏಕೆ ಅತ್ಯಾವಶ್ಯಕವಾಗಿದೆ?
◻ ಅಬ್ರಹಾಮನು ತನಗೆ ದೃಢವಾದ ನಂಬಿಕೆಯಿದೆಯೆಂದು ಹೇಗೆ ತೋರಿಸಿದನು?
◻ ಸಮರ್ಪಣೆಯನ್ನು ಮಾಡಲು ಒಬ್ಬ ವ್ಯಕ್ತಿಯು ತನ್ನ ಜೀವಿತದಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕು?
◻ ಯಾವುದೇ ಸಮಸ್ಯೆಗಳು ಬಂದರು ಕೂಡ, ನಾವು ದೇವರನ್ನು ಸೇವಿಸಲು ಏಕೆ ಸಂತೋಷವುಳ್ಳವರಾಗಿದ್ದೇವೆ?
[ಪುಟ 7 ರಲ್ಲಿರುವ ಚಿತ್ರ]
ವಾಗ್ದಾನವನ್ನು ಬಾಧ್ಯತೆಯಾಗಿ ಪಡೆದುಕೊಳ್ಳಲಿಕ್ಕೋಸ್ಕರ ಅಬ್ರಹಾಮನು ತನ್ನ ಜೀವಿತದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಲು ಸಿದ್ಧನಿದ್ದನು
[ಪುಟ 9 ರಲ್ಲಿರುವ ಚಿತ್ರ]
ಯೇಸು ತನ್ನ ಸಾನ್ನಿಧ್ಯದ ಸಮಯದಲ್ಲಿ “ಭೂಮಿಯ ಮೇಲೆ ನಂಬಿಕೆ”ಯನ್ನು ಕಂಡುಕೊಂಡಿದ್ದಾನೆಂದು ರುಜುವಾತು ತೋರಿಸುತ್ತದೆ