‘ನಾವು ಮಾಡಬೇಕಾದದ್ದನ್ನೇ ಮಾಡಿದ್ದೇವೆ’
ಜಾರ್ಜ್ ಕೌಚ್ ಅವರಿಂದ ಹೇಳಲ್ಪಟ್ಟಂತೆ
ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಬೆಳಗ್ಗಿನ ಸಮಯವನ್ನು ವ್ಯಯಿಸಿದ ನಂತರ, ನನ್ನ ಜೊತೆಗಿದ್ದವರು ಎರಡು ಸ್ಯಾಂಡ್ವಿಚ್ಗಳನ್ನು ಹೊರತಂದರು. ನಾವು ಅದನ್ನು ತಿಂದು ಮುಗಿಸಿದ ಬಳಿಕ, ನಾನು ಒಂದು ಸಿಗರೇಟನ್ನು ಹೊರಗೆಳೆದೆ. “ನೀನೆಷ್ಟು ಸಮಯದಿಂದ ಸತ್ಯದಲ್ಲಿದ್ದೀ?” ಎಂದವರು ಕೇಳಿದರು. “ನಿನ್ನೆ ರಾತ್ರಿಯೇ ನನ್ನ ಪ್ರಪ್ರಥಮ ಕೂಟಕ್ಕೆ ಹಾಜರಾಗಿದ್ದೆ,” ಎಂದು ನಾನು ಅವರಿಗೆ ಹೇಳಿದೆ.
ನಾನು ಅಮೆರಿಕ ಪೆನ್ಸಿಲ್ವೇನಿಯದ ಪಿಟ್ಸ್ಬರ್ಗ್ನ ಪೂರ್ವಕ್ಕೆ ಸುಮಾರು 50 ಕಿಲೊಮೀಟರುಗಳ ದೂರದಲ್ಲಿದ್ದ ಆವನ್ಮೊರ್ ಎಂಬ ಚಿಕ್ಕ ಪಟ್ಟಣದ ಹತ್ತಿರ ಒಂದು ಫಾರ್ಮ್ನಲ್ಲಿ 1917ರ ಮಾರ್ಚ್ 3ರಂದು ಜನಿಸಿದೆ. ಅಲ್ಲಿ ನನ್ನ ಹೆತ್ತವರು ನನ್ನ ಮೂವರು ಅಣ್ಣಂದಿರು, ಒಬ್ಬ ತಮ್ಮ, ಒಬ್ಬ ಅಕ್ಕ ಮತ್ತು ನನ್ನನ್ನು ಬೆಳೆಸಿದರು.
ನಮಗೆ ಹೆಚ್ಚು ಧಾರ್ಮಿಕ ತರಬೇತಿ ಇರಲಿಲ್ಲ. ಒಂದು ಸಮಯದಲ್ಲಿ ನನ್ನ ಹೆತ್ತವರು ಚರ್ಚಿಗೆ ಹೋಗುತ್ತಿದ್ದರಾದರೂ, ಮಕ್ಕಳಾದ ನಾವು ಇನ್ನೂ ಎಳೆಯರಾಗಿದ್ದಾಗಲೇ ಅವರು ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದರು. ಆದರೂ ನಾವು ಸೃಷ್ಟಿಕರ್ತನಲ್ಲಿ ನಂಬಿಕೆಯನ್ನಿಟ್ಟೆವು, ಮತ್ತು ನಮ್ಮ ಕುಟುಂಬ ಜೀವನದಲ್ಲಿ ಬೈಬಲಿನಲ್ಲಿರುವ ಮೂಲಭೂತ ತತ್ವಗಳನ್ನು ಅನುಸರಿಸಿದೆವು.
ನನ್ನ ಹೆತ್ತವರಿಂದ ನಾನು ಪಡೆದುಕೊಂಡ ಅತಿ ಉತ್ತಮವಾದ ತರಬೇತಿಯು, ಜವಾಬ್ದಾರಿಯನ್ನು ಹೇಗೆ ಸ್ವೀಕರಿಸಿಕೊಳ್ಳಬೇಕು ಮತ್ತು ಪೂರೈಸುವುದು ಎಂಬುದೇ ಆಗಿತ್ತು. ಫಾರ್ಮ್ ಜೀವನವೆಂದರೆ ಅದೇ ಆಗಿತ್ತು. ಆದರೆ ನಮ್ಮ ಜೀವನವು ಕೆಲಸದಲೇ ಮುಳುಗಿರಲಿಲ್ಲ. ಬಾಸ್ಕೆಟ್ಬಾಲ್ ಮತ್ತು ಬೇಸ್ಬಾಲನ್ನು ಆಡುವುದು, ಕುದುರೆ ಸವಾರಿ ಮತ್ತು ಈಜಾಟದಂತಹ ಹಿತಕರವಾದ ಮನೋರಂಜನೆಯಲ್ಲಿ ನಾವು ಆನಂದಿಸಿದೆವು. ಆ ದಿನಗಳಲ್ಲಿ ಹಣದ ಕೊರತೆಯಿತ್ತಾದರೂ, ಫಾರ್ಮ್ನಲ್ಲಿನ ಜೀವನವು ಆನಂದಕರವಾಗಿತ್ತು. ಪ್ರಾಥಮಿಕ ಶಾಲೆಯಲ್ಲಿರುವ ನಾವು ಒಂದು ಕೋಣೆಯುಳ್ಳ ಶಾಲಾ ಮಂದಿರದಲ್ಲಿ ಹಾಜರಾದೆವು ಮತ್ತು ನಮ್ಮ ಪ್ರೌಢ ಶಾಲೆಯ ವರ್ಷಗಳಲ್ಲಿ ಪಟ್ಟಣಕ್ಕೆ ಶಾಲೆಗೆ ಹೋದೆವು.
ಒಂದು ರಾತ್ರಿ ನಾನು ನನ್ನ ಸ್ನೇಹಿತನೊಬ್ಬನೊಂದಿಗೆ ಪಟ್ಟಣದಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ಒಬ್ಬ ಸುಂದರ ಹುಡುಗಿಯು, ನನ್ನ ಸ್ನೇಹಿತನಿಗೆ ನಮಸ್ಕಾರ ಹೇಳಲು ತನ್ನ ಮನೆಯಿಂದ ಹೊರಬಂದಳು. ನನ್ನ ಸ್ನೇಹಿತನು ಅವಳನ್ನು ಫರ್ನ್ ಪ್ರೂ ಎಂದು ನನಗೆ ಪರಿಚಯಮಾಡಿಕೊಟ್ಟನು. ನನಗೆ ಅನುಕೂಲವಾಗಿ, ಅವಳ ಮನೆಯು ನನ್ನ ಪ್ರೌಢ ಶಾಲೆಯು ಇದ್ದ ಬೀದಿಯಲ್ಲೇ ಇತ್ತು. ಅನೇಕ ಸಲ ನಾನು ಅವಳ ಮನೆಯ ಮುಂದೆ ಹಾದುಹೋಗುತ್ತಿದ್ದಾಗ, ಫರ್ನ್ ತನ್ನ ಮನೆಕೆಲಸಗಳನ್ನು ಮಾಡುತ್ತಾ ಹೊರಗಿರುತ್ತಿದ್ದಳು. ಅವಳು ಒಬ್ಬ ಪರಿಶ್ರಮಿ ಜೀವಿಯಾಗಿದ್ದಳೆಂಬುದು ಸುವ್ಯಕ್ತವಾಗಿತ್ತು. ಇದು ನನ್ನನ್ನು ಪ್ರಭಾವಿಸಿತು. ನಾವು ಆಪ್ತ ಗೆಳೆತನವನ್ನು ಮತ್ತು ಪರಸ್ಪರ ಪ್ರೀತಿಯನ್ನು ಬೆಳೆಸಿಕೊಂಡು, 1936ರ ಏಪ್ರಿಲ್ ತಿಂಗಳಿನಲ್ಲಿ ಮದುವೆಯಾದೆವು.
ಬೈಬಲ್ ಸತ್ಯದೊಂದಿಗೆ ಸಂಪರ್ಕ
ನಾನು ಜನಿಸುವ ಮುಂಚೆ, ಒಬ್ಬ ವೃದ್ಧೆ ಇದ್ದಳು. ಆಕೆಯ ಧರ್ಮದ ಕಾರಣ ಪಟ್ಟಣದಲ್ಲಿದ್ದ ಜನರು ಆಕೆಯೊಂದಿಗೆ ತುಂಬ ಕೆಟ್ಟ ರೀತಿಯಲ್ಲಿ ವರ್ತಿಸುತ್ತಿದ್ದರು. ನನ್ನ ತಾಯಿಯು, ಖರೀದಿ ಮಾಡಲು ಪಟ್ಟಣಕ್ಕೆ ಹೋಗುತ್ತಿದ್ದಾಗ ಆಕೆಯನ್ನು ಶನಿವಾರಗಳಂದು ಸಂದರ್ಶಿಸುತ್ತಿದ್ದರು. ತಾಯಿಯವರು ಆಕೆಯ ಮನೆಯನ್ನು ಶುಚಿಗೊಳಿಸಿ, ಚಿಕ್ಕಪುಟ್ಟ ಕೆಲಸಗಳನ್ನು ಮಾಡಲು ಸಹಾಯಮಾಡುತ್ತಿದ್ದರು. ಅವರಿದನ್ನು ಆ ಸ್ತ್ರೀಯು ಸಾಯುವ ತನಕ ಮಾಡಿದರು. ಒಬ್ಬ ಬೈಬಲ್ ವಿದ್ಯಾರ್ಥಿಯಾಗಿದ್ದ—ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳನ್ನು ಹೀಗೆ ಕರೆಯಲಾಗುತ್ತಿತ್ತು—ಈ ಸ್ತ್ರೀಗೆ ನನ್ನ ತಾಯಿಯು ಇಷ್ಟು ದಯಾಪರರಾಗಿದ್ದರಿಂದ ಯೆಹೋವನು ನನ್ನ ತಾಯಿಯನ್ನು ಆಶೀರ್ವದಿಸಿದನೆಂದು ನಾನು ನೆನಸುತ್ತೇನೆ.
ಸ್ವಲ್ಪ ಸಮಯದ ನಂತರ, ನನ್ನ ಅತ್ತೆಯವರ ಎಳೆಯ ಮಗಳು ಅಕಸ್ಮಾತ್ತಾಗಿ ಸತ್ತಳು. ಚರ್ಚು ನನ್ನ ಅತ್ತೆಯವರಿಗೆ ಹೆಚ್ಚು ಸಾಂತ್ವನವನ್ನು ಕೊಡಲಿಲ್ಲ. ಆದರೆ ಒಬ್ಬ ಬೈಬಲ್ ವಿದ್ಯಾರ್ಥಿಯಾಗಿದ್ದ ನೆರೆಹೊರೆಯವಳೊಬ್ಬಳು ಅವರಿಗೆ ಸಾಂತ್ವನವನ್ನು ಕೊಟ್ಟಳು. ಒಬ್ಬ ವ್ಯಕ್ತಿ ಸಾಯುವಾಗ ಏನಾಗುತ್ತದೆಂಬುದನ್ನು ಆ ಬೈಬಲ್ ವಿದ್ಯಾರ್ಥಿಯು ಅವರಿಗೆ ವಿವರಿಸಿದಳು. (ಯೋಬ 14:13-15; ಪ್ರಸಂಗಿ 9:5, 10) ಇದು ತುಂಬ ಸಾಂತ್ವನವನ್ನು ಕೊಟ್ಟಿತು. ನನ್ನ ಅತ್ತೆಯವರು, ನನ್ನ ತಾಯಿಯೊಂದಿಗೆ ಪುನರುತ್ಥಾನದ ನಿರೀಕ್ಷೆಯ ಕುರಿತಾಗಿ ಮಾತಾಡಿದರು. ಇದು ತಾಯಿಯ ಆಸಕ್ತಿಯನ್ನು ಕೆರಳಿಸಿತು. ಏಕಂದರೆ ಅವರು ಚಿಕ್ಕವರಾಗಿದ್ದಾಗ ಅವರ ಹೆತ್ತವರು ಸತ್ತುಹೋದದ್ದರಿಂದ, ಮತ್ತು ಒಬ್ಬ ವ್ಯಕ್ತಿಯು ಸಾಯುವಾಗ ಏನಾಗುತ್ತದೆಂದು ಅವರು ತಿಳಿದುಕೊಳ್ಳಲು ಕಾತುರರಾಗಿದ್ದರು. ಅನೌಪಚಾರಿಕವಾಗಿ ಸಾಕ್ಷಿಕೊಡಲು ಯಾವಾಗಲೂ ಸಂದರ್ಭಗಳ ಲಾಭವನ್ನು ಪಡೆದುಕೊಳ್ಳುವ ಮಹತ್ವವನ್ನು ಆ ಅನುಭವವು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿಸಿತು.
ತಾಯಿ 1930ಗಳಲ್ಲಿ, ಆಗ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಅಧ್ಯಕ್ಷರಾಗಿದ್ದ ಜೋಸೆಫ್ ಎಫ್. ರದರ್ಫರ್ಡ್ರವರ ಆದಿತ್ಯವಾರ ಬೆಳಗ್ಗಿನ ರೇಡಿಯೊ ಪ್ರಸಾರಣಗಳಿಗೆ ಕಿವಿಗೊಡಲಾರಂಭಿಸಿದರು. ಆ ವರ್ಷಗಳಲ್ಲಿ, ಸಾಕ್ಷಿಗಳು, ನಾವು ವಾಸಿಸುತ್ತಿದ್ದಲ್ಲಿ ಮನೆಯಿಂದ ಮನೆಯಲ್ಲಿ ಸಾರುವ ಕೆಲಸವನ್ನೂ ಆರಂಭಿಸಿದರು. ಅವರು, ಅಂಗಳದಲ್ಲಿ ಮರದ ಕೆಳಗೆ ನೆರಳಿನಲ್ಲಿ ಒಂದು ಒಯ್ಯುವ ಪೋನೋಗ್ರಾಫ್ ಅನ್ನು ಇಟ್ಟು, ಸಹೋದರ ರದರ್ಫರ್ಡ್ರ ರೆಕಾರ್ಡ್ ಮಾಡಲ್ಪಟ್ಟ ಪ್ರಸಂಗಗಳನ್ನು ಹಾಕುತ್ತಿದ್ದರು. ಆ ರೆಕಾರ್ಡಿಂಗ್ಗಳು ಮತ್ತು ವಾಚ್ಟವರ್ ಹಾಗೂ ಗೋಲ್ಡನ್ ಏಜ್ (ಈಗ ಅವೇಕ್!) ಪತ್ರಿಕೆಗಳು ತಾಯಿಯ ಆಸಕ್ತಿಯನ್ನು ಸಜೀವವಾಗಿಟ್ಟವು.
ಕೆಲವೊಂದು ವರ್ಷಗಳ ಬಳಿಕ 1938ರಲ್ಲಿ, ವಾಚ್ಟವರ್ ಪತ್ರಿಕೆಯ ಚಂದಾದಾರರಿಗೆ, ಸುಮಾರು 25 ಕಿಲೊಮೀಟರ್ ದೂರದಲ್ಲಿರುವ ಒಂದು ಖಾಸಗಿ ಮನೆಯಲ್ಲಿ ಒಂದು ವಿಶೇಷ ಕೂಟಕ್ಕಾಗಿ ಆಮಂತ್ರಿಸುವ ಒಂದು ಪೋಸ್ಟ್ಕಾರ್ಡನ್ನು ಕಳುಹಿಸಲಾಯಿತು. ಅಮ್ಮ ಅದಕ್ಕೆ ಹಾಜರಾಗಲು ಬಯಸಿದರು, ಆದುದರಿಂದ ಫರ್ನ್ ಮತ್ತು ನಾನು ಮತ್ತು ನನ್ನ ಇಬ್ಬರು ಅಣ್ಣಂದಿರು ಅವರೊಂದಿಗೆ ಹೋದೆವು. ಯೆಹೋವನ ಸಾಕ್ಷಿಗಳ ಸಂಚರಣ ಮೇಲ್ವಿಚಾರಕರಾದ ಜಾನ್ ಬೂತ್ ಮತ್ತು ಜಾರ್ಲ್ಸ್ ಹೆಸ್ಲರ್ರವರು, ಸುಮಾರು ಹನ್ನೆರಡು ಮಂದಿಯಿದ್ದ ನಮ್ಮ ಗುಂಪಿಗೆ ಭಾಷಣಗಳನ್ನು ಕೊಟ್ಟರು. ತದನಂತರ, ಮರುದಿನ ಬೆಳಗ್ಗೆ ಶುಶ್ರೂಷೆಯಲ್ಲಿ ಭಾಗವಹಿಸಲು ಅವರು ಒಂದು ಗುಂಪನ್ನು ಸಂಘಟಿಸಲಾರಂಭಿಸಿದರು. ಯಾರೊಬ್ಬರೂ ಅವರೊಂದಿಗೆ ಹೋಗಲು ಮುಂದೆ ಬರಲಿಲ್ಲ. ಆದುದರಿಂದ ಸಹೋದರ ಹೆಸ್ಲರ್ ನನ್ನನ್ನು ಕರೆದು, ಕೇಳಿದ್ದು: “ನೀನು ಯಾಕೆ ನಮ್ಮೊಂದಿಗೆ ಬರಬಾರದು?” ಅವರು ಏನು ಮಾಡಲಿದ್ದಾರೆಂದು ನನಗೆ ಸರಿಯಾಗಿ ತಿಳಿದಿರಲ್ಲಿಲ್ಲವಾದರೂ, ನಾನು ಅವರಿಗೆ ಸಹಾಯಮಾಡದೆ ಇರಲಿಕ್ಕಾಗಿ ಯಾವುದೇ ಕಾರಣವಿರಲಿಲ್ಲ.
ಸುಮಾರು ಮಧ್ಯಾಹ್ನದ ಹೊತ್ತಿನವರೆಗೆ ನಾವು ಮನೆಯಿಂದ ಮನೆಗೆ ಹೋದೆವು, ಮತ್ತು ಅನಂತರ ಸಹೋದರ ಹೆಸ್ಲರ್ ಎರಡು ಸ್ಯಾಂಡ್ವಿಚ್ಗಳನ್ನು ಹೊರತೆಗೆದರು. ನಾವು ಚರ್ಚಿನ ಮೆಟ್ಟಿಲುಗಳ ಮೇಲೆ ಕುಳಿತುಕೊಂಡು, ತಿನ್ನಲು ಆರಂಭಿಸಿದೆವು. ನಾನು ಆ ಸಿಗರೇಟನ್ನು ಹೊರಗೆಳೆದ ನಂತರವೇ, ಸಹೋದರ ಹೆಸ್ಲರ್ರವರಿಗೆ ತಿಳಿದುಬಂತೇನೆಂದರೆ ನಾನು ಕೇವಲ ಒಂದು ಕೂಟಕ್ಕೆ ಹಾಜರಾಗಿದ್ದೇನೆಂಬುದಾಗಿ. ಅದೇ ಸಾಯಂಕಾಲ ಅವರು ನಮ್ಮ ಮನೆಗೆ ಊಟಕ್ಕೆ ಬರುವರೆಂದು ಹೇಳಿ, ನಮ್ಮ ನೆರೆಹೊರೆಯವರನ್ನು ಒಂದು ಬೈಬಲ್ ಚರ್ಚೆಗೆ ಆಮಂತ್ರಿಸುವಂತೆ ನಮ್ಮನ್ನು ಕೇಳಿಕೊಂಡರು. ಸಂಜೆ ಊಟವಾದ ಬಳಿಕ, ಅವರು ನಮ್ಮೊಂದಿಗೆ ಒಂದು ಬೈಬಲ್ ಅಭ್ಯಾಸವನ್ನು ನಡಿಸಿ, ಅಲ್ಲಿ ಬಂದಿದ್ದ ಸುಮಾರು ಹತ್ತು ಮಂದಿಯ ಗುಂಪಿಗೆ ಒಂದು ಭಾಷಣವನ್ನು ಕೊಟ್ಟರು. ಪ್ರತಿ ವಾರ ನಾವು ಬೈಬಲನ್ನು ಅಭ್ಯಾಸಿಸಬೇಕೆಂದು ಅವರು ನಮಗೆ ಹೇಳಿದರು. ನಮ್ಮ ನೆರೆಹೊರೆಯವರು ಇದಕ್ಕೆ ಒಪ್ಪಲಿಲ್ಲವಾದರೂ, ಫರ್ನ್ ಮತ್ತು ನಾನು ಒಂದು ಸಾಪ್ತಾಹಿಕ ಮನೆ ಬೈಬಲ್ ಅಭ್ಯಾಸಕ್ಕಾಗಿ ಏರ್ಪಾಡುಗಳನ್ನು ಮಾಡಿದೆವು.
ಸತ್ಯದಲ್ಲಿ ಪ್ರಗತಿ
ತದನಂತರ ಸ್ವಲ್ಪ ಸಮಯದೊಳಗೆ, ಫರ್ನ್ ಮತ್ತು ನಾನು ಕ್ಷೇತ್ರ ಸೇವೆಗೆ ಹೋದೆವು. ನಾವು ಕಾರಿನ ಹಿಂದಿನ ಆಸನದಲ್ಲಿ ಕುಳಿತುಕೊಂಡಿದ್ದೆವು ಮತ್ತು ನಮ್ಮ ಸಿಗರೇಟ್ಗಳನ್ನು ಹೊತ್ತಿಸಿದ್ದೇವು ಅಷ್ಟೇ. ಅಷ್ಟರಲ್ಲಿ ನನ್ನ ಅಣ್ಣ ನಮ್ಮ ಕಡೆಗೆ ಹಿಂದಿರುಗಿ ನೋಡಿ ಹೇಳಿದ್ದು: “ಸಾಕ್ಷಿಗಳು ಧೂಮಪಾನ ಮಾಡುವುದಿಲ್ಲವೆಂದು ನನಗೆ ಈಗತಾನೇ ತಿಳಿದುಬಂತು.” ತತ್ಕ್ಷಣವೇ, ಫರ್ನ್ ತನ್ನ ಸಿಗರೇಟನ್ನು ಕಿಟಿಕಿಯಿಂದ ಹೊರಗೆಸೆದಳು—ನಾನು ನನ್ನ ಸಿಗರೇಟನ್ನು ಸೇದಿ ಮುಗಿಸಿಬಿಟ್ಟೆ. ನಾವು ಧೂಮಪಾನ ಮಾಡುವುದರಲ್ಲಿ ಆನಂದಿಸುತ್ತಿದ್ದರೂ, ನಾವು ಇನ್ನೆಂದಿಗೂ ಒಂದು ಸಿಗರೇಟನ್ನು ಮುಟ್ಟಲಿಲ್ಲ.
ನಮ್ಮ ದೀಕ್ಷಾಸ್ನಾನದ ನಂತರ ಫರ್ನ್ ಮತ್ತು ನಾನು 1940ರಲ್ಲಿ, ಪಯನೀಯರ್ ಸೇವೆಯನ್ನು—ಪೂರ್ಣ ಸಮಯದ ಸೇವೆಯನ್ನು ಕರೆಯಲಾಗುವಂತೆ—ಉತ್ತೇಜಿಸಿದ ಒಂದು ಲೇಖನವನ್ನು ನಾವು ಅಭ್ಯಾಸಿಸಿದ ಒಂದು ಕೂಟದಲ್ಲಿದ್ದೆವು. ನಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ಒಬ್ಬ ಸಹೋದರನು ಕೇಳಿದ್ದು: “ನೀನು ಮತ್ತು ಫರ್ನ್ ಪಯನೀಯರ್ ಸೇವೆಯನ್ನು ಏಕೆ ಮಾಡಬಾರದು? ಅದನ್ನು ಮಾಡದೆ ಇರಲು ನಿಮ್ಮನ್ನು ತಡೆದುಹಿಡಿಯುವ ಯಾವುದೇ ಸಂಗತಿ ಇಲ್ಲ.” ಅವನು ಹೇಳಿದ ವಿಷಯವನ್ನು ನಾವು ಒಪ್ಪಿಕೊಂಡೆವು ಮತ್ತು ನಮ್ಮನ್ನೇ ನೀಡಿಕೊಂಡೆವು. ನನ್ನ ಉದ್ಯೋಗದ ಸ್ಥಳದಲ್ಲಿ 30 ದಿನದ ನೋಟೀಸನ್ನು ಕೊಟ್ಟೆ, ಮತ್ತು ಪಯನೀಯರ್ ಸೇವೆಯನ್ನು ಮಾಡಲು ನಾವು ಏರ್ಪಾಡುಗಳನ್ನು ಮಾಡಿದೆವು.
ನಾವು ಎಲ್ಲಿ ಸೇವೆ ಸಲ್ಲಿಸಬೇಕೆಂಬುದರ ಕುರಿತು ವಾಚ್ ಟವರ್ ಸೊಸೈಟಿಯೊಂದಿಗೆ ಸಮಾಲೋಚಿಸಿ, ಅನಂತರ ಮೇರಿಲ್ಯಾಂಡ್ನ ಬಾಲ್ಟಿಮೋರ್ಗೆ ಸ್ಥಳಾಂತರಿಸಿದೆವು. ಅಲ್ಲಿ ಪಯನೀಯರರಿಗಾಗಿ ಒಂದು ಮನೆ ಇತ್ತು, ಮತ್ತು ವಸತಿ ಹಾಗೂ ಊಟದ ಖರ್ಚು ಒಂದು ತಿಂಗಳಿಗೆ 10 ಡಾಲರಾಗಿತ್ತು. ಅರ್ಮಗೆದೋನಿನ ವರೆಗೆ ನಮಗೆ ಸಾಕಾಗುವುದೆಂದು ನಾವು ನೆನಸಿದ ಸ್ವಲ್ಪ ಉಳಿತಾಯ ಹಣ ನಮ್ಮಲ್ಲಿತ್ತು. (ಪ್ರಕಟನೆ 16:14, 16) ಎಷ್ಟೆಂದರೂ, ಅರ್ಮಗೆದೋನ್ ತುಂಬ ಹತ್ತಿರವಿದೆಯೆಂದು ನಾವು ಯಾವಾಗಲೂ ನೆನಸಿದೆವು. ಆದುದರಿಂದ ನಾವು ಪಯನೀಯರ್ ಸೇವೆಯನ್ನು ಮಾಡಲಾರಂಭಿಸಿದಾಗ, ನಾವು ನಮ್ಮ ಮನೆಯನ್ನು ಮಾರಿ, ನಮ್ಮ ಹಿಂದಿನ ಬೆನ್ನಟ್ಟುವಿಕೆಗಳನ್ನು ನಿಲ್ಲಿಸಿದೆವು.
1942ರಿಂದ 1947ರ ವರೆಗೆ ನಾವು ಬಾಲ್ಟಿಮೋರ್ನಲ್ಲಿ ಪಯನೀಯರ್ ಸೇವೆಯನ್ನು ಮಾಡಿದೆವು. ಆ ವರ್ಷಗಳಲ್ಲಿ ಯೆಹೋವನ ಸಾಕ್ಷಿಗಳ ಕೆಲಸಕ್ಕೆ ತೀವ್ರ ವಿರೋಧವಿತ್ತು. ನಮ್ಮ ಕಾರ್ನಲ್ಲಿ ನಮ್ಮ ಬೈಬಲ್ ವಿದ್ಯಾರ್ಥಿಗಳ ಮನೆಗಳಿಗೆ ಹೋಗುವ ಬದಲಿಗೆ, ಬೇರೆ ಯಾರಾದರೂ ನಮ್ಮನ್ನು ಅವರ ಮನೆಗಳಿಗೆ ತಲಪಿಸುವಂತೆ ಏರ್ಪಡಿಸುತ್ತಿದ್ದೆವು. ಈ ರೀತಿಯಲ್ಲಿ ನಮ್ಮ ಕಾರಿನ ಟಯರುಗಳನ್ನು ಯಾರಿಗೂ ಸೀಳಲಾಗುತ್ತಿರಲಿಲ್ಲ. ಯಾರೂ ಅಂತಹ ವಿರೋಧವನ್ನು ಇಷ್ಟಪಡುವುದಿಲ್ಲವಾದರೂ, ನಾವು ಕ್ಷೇತ್ರ ಸೇವೆಯನ್ನು ಯಾವಾಗಲೂ ಆನಂದಿಸಿದೆವೆಂದು ನಾನು ಹೇಳಬಲ್ಲೆ. ವಾಸ್ತವದಲ್ಲಿ, ಕರ್ತನ ಕೆಲಸವನ್ನು ಮಾಡುವಾಗ ಸ್ವಲ್ಪ ರೋಮಾಂಚಕಾರಿ ಅನುಭವಗಳಿಗಾಗಿ ನಾವು ಮುನ್ನೋಡುತ್ತಿದ್ದೆವು.
ನಾವು ಉಳಿಸಿದ್ದಂತಹ ಎಲ್ಲ ಹಣವು ಬೇಗನೆ ಖರ್ಚಾಗಿ ಹೋಯಿತು. ನಮ್ಮ ಕಾರಿನ ಟೈಯರುಗಳು ಸವೆದುಹೋದವು, ಮತ್ತು ನಮ್ಮ ಬಟ್ಟೆಗಳು ಹಾಗೂ ಶೂಗಳು ಕೂಡ ಹಾಳಾದವು. ನಾವು ಎರಡೋ ಮೂರು ಸಲ ದೀರ್ಘ ಸಮಯದ ತನಕ ಖಾಯಿಲೆ ಬಿದ್ದೆವು. ಪಯನೀಯರ್ ಸೇವೆಯನ್ನು ಮುಂದುವರಿಸಿಕೊಂಡು ಹೋಗುವುದು ಸುಲಭವಾಗಿರಲ್ಲಿಲ್ಲವಾದರೂ, ನಾವು ಅದನ್ನು ಬಿಟ್ಟುಬಿಡುವುದರ ಕುರಿತಾಗಿ ಎಂದೂ ಯೋಚಿಸಲಿಲ್ಲ. ನಾವು ಅದರ ಕುರಿತಾಗಿ ಎಂದೂ ಮಾತಾಡಲೂ ಇಲ್ಲ. ನಾವು ಪಯನೀಯರ್ ಕೆಲಸದಲ್ಲಿ ಉಳಿಯಲು ಸಾಧ್ಯವಾಗುವಂತೆ ನಮ್ಮ ಜೀವನ ಶೈಲಿಯನ್ನು ಸರಳೀಕರಿಸಿದೆವು.
ನೇಮಕದ ಬದಲಾವಣೆಗಳು
1947ರಲ್ಲಿ ನಾವು ಕ್ಯಾಲಿಫೋರ್ನಿಯದ ಲಾಸ್ ಆ್ಯಂಜಲೀಸ್ನಲ್ಲಿನ ಅಧಿವೇಶನಕ್ಕೆ ಹೋದೆವು. ಅಲ್ಲಿದ್ದಾಗ ನನ್ನ ಅಣ್ಣ ವಿಲ್ಯಮ್ ಮತ್ತು ನನಗೆ, ಸಭೆಗಳನ್ನು ಸಂದರ್ಶಿಸಿ ಅವುಗಳನ್ನು ಸಹಾಯಮಾಡುವುದಕ್ಕೆ ನೇಮಿಸಿದ ಸಂಚರಣ ಕೆಲಸಕ್ಕೆ ಒಂದು ಪತ್ರವನ್ನು ಕೊಡಲಾಯಿತು. ಆ ಸಮಯದಲ್ಲಿ ಆ ಕೆಲಸಕ್ಕಾಗಿ ನಮಗೆ ಯಾವುದೇ ವಿಶೇಷ ತರಬೇತಿ ಸಿಗಲಿಲ್ಲ. ನಾವು ನಮ್ಮ ನೇಮಕವನ್ನು ಸ್ವೀಕರಿಸಿದೆವಷ್ಟೇ. ಮುಂದಿನ ಏಳು ವರ್ಷಗಳಲ್ಲಿ, ಫರ್ನ್ ಮತ್ತು ನಾನು ಒಹಾಯೊ, ಮಿಷಿಗನ್, ಇಂಡಿಯಾನಾ, ಇಲಿನೊಯಿ, ಮತ್ತು ನ್ಯೂ ಯಾರ್ಕ್ನಲ್ಲಿ ಸೇವೆಸಲ್ಲಿಸಿದೆವು. 1954ರಲ್ಲಿ ನಮ್ಮನ್ನು, ಮಿಷನೆರಿಗಳ ತರಬೇತಿಗಾಗಿರುವ ಒಂದು ಶಾಲೆಯಾದ ಗಿಲ್ಯಡ್ನ 24ನೆಯ ತರಗತಿಗೆ ಹಾಜರಾಗಲು ಆಮಂತ್ರಿಸಲಾಯಿತು. ಅಲ್ಲಿದ್ದಾಗ ಫರ್ನ್ಳಿಗೆ ಪೋಲಿಯೊ ತಗಲಿತು. ಸಂತೋಷಕರವಾಗಿ ಅವಳು ಅದರಿಂದ ಚೇತರಿಸಿಕೊಂಡಳು, ಮತ್ತು ನಮ್ಮನ್ನು ನ್ಯೂ ಯಾರ್ಕ್ ಹಾಗೂ ಕಾನೆಕ್ಟಿಕಟ್ನಲ್ಲಿ ಸಂಚರಣ ಕೆಲಸಕ್ಕೆ ನೇಮಿಸಲಾಯಿತು.
ನಾವು ಕಾನೆಕ್ಟಿಕಟ್ನ ಸ್ಟ್ಯಾಮ್ಫರ್ಡ್ನಲ್ಲಿ ಸೇವೆಸಲ್ಲಿಸುತ್ತಿದ್ದಾಗ, ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾಗಿದ್ದ ನೇತನ್ ಎಚ್. ನಾರ್ರವರು, ನಾವು ಅವರು ಮತ್ತು ಅವರ ಹೆಂಡತಿಯಾದ ಆಡ್ರೀಯೊಂದಿಗೆ ನಮ್ಮ ವಾರಾಂತ್ಯವನ್ನು ಕಳೆಯುವಂತೆ ಕೇಳಿದರು. ಅವರು ನಮಗೆ ರಾತ್ರಿಯೂಟಕ್ಕೆ ರುಚಿಕರವಾದ ಬೀಫ್ಸ್ಟೇಕನ್ನು ತಯಾರಿಸಿದರು. ನಾವು ಈ ಮುಂಚೆಯೇ ಅವರೊಂದಿಗೆ ಪರಿಚಿತರಾಗಿದ್ದೆವು. ಮತ್ತು ಸಹೋದರ ನಾರ್ರವರ ಮನಸ್ಸಿನಲ್ಲಿ ನಮ್ಮ ಸಹವಾಸ ಹಾಗೂ ರಾತ್ರಿಯೂಟಕ್ಕಿಂತ ಹೆಚ್ಚಾಗಿ ಬೇರೇನೊ ವಿಷಯವಿದೆಯೆಂದು ತಿಳಿಯುವಷ್ಟು ಒಳ್ಳೆಯ ಪರಿಚಯ ನನಗಿತ್ತು. ತದನಂತರ ಆ ಸಾಯಂಕಾಲ ಅವರು ನನಗೆ, “ನಿನಗೆ ಬೆತೆಲಿಗೆ ಬರಲು ಇಷ್ಟವಿದೆಯೊ?” ಎಂದು ಕೇಳಿದರು.
“ನಾನು ಏನೂ ಹೇಳಲಾರೆ; ನನಗೆ ಬೆತೆಲ್ ಜೀವನದ ಕುರಿತಾಗಿ ಹೆಚ್ಚೇನೂ ಗೊತ್ತಿಲ್ಲ” ಎಂದು ನಾನು ಉತ್ತರಿಸಿದೆ.
ಇದರ ಕುರಿತಾಗಿ ಹಲವಾರು ವಾರಗಳ ವರೆಗೆ ಯೋಚಿಸಿದ ನಂತರ, ನಾವು ಸಹೋದರ ನಾರ್ಗೆ ಅವರು ಬಯಸುವಲ್ಲಿ ನಾವು ಬೆತೆಲಿಗೆ ಬರುವೆವೆಂದು ಹೇಳಿದೆವು. ಮುಂದಿನ ವಾರ, ನಮ್ಮ 21ನೆಯ ವಿವಾಹ ವಾರ್ಷಿಕೋತ್ಸವವಾಗಿದ್ದ 1957ರ ಏಪ್ರಿಲ್ 27ರಂದು, ನಾವು ಬೆತೆಲಿಗೆ ಬರುವಂತೆ ಹೇಳಿದ ಒಂದು ಪತ್ರವನ್ನು ಪಡೆದೆವು.
ಬೆತೆಲಿನಲ್ಲಿ ಆ ಪ್ರಥಮ ದಿನದಂದು, ನನ್ನಿಂದ ಏನು ನಿರೀಕ್ಷಿಸಲ್ಪಟ್ಟಿದೆಯೆಂಬುದರ ಕುರಿತಾಗಿ ಸಹೋದರ ನಾರ್ ಸ್ಪಷ್ಟವಾದ ನಿರ್ದೇಶನವನ್ನು ಕೊಟ್ಟರು. ಅವರು ನನಗಂದದ್ದು: “ನೀನು ಇನ್ನು ಮುಂದೆ ಒಬ್ಬ ಸರ್ಕಿಟ್ ಸೇವಕನಲ್ಲ; ನೀನು ಇಲ್ಲಿ ಬೆತೆಲಿನಲ್ಲಿ ಕೆಲಸಮಾಡಲು ಬಂದಿರುವಿ. ನೀನು ಮಾಡಬೇಕಾದ ಅತಿ ಪ್ರಾಮುಖ್ಯ ಕೆಲಸ ಇದಾಗಿದೆ, ಮತ್ತು ನೀನು ಇಲ್ಲಿ ಬೆತೆಲಿನಲ್ಲಿ ಪಡೆಯುವ ತರಬೇತಿಯನ್ನು ಅನ್ವಯಿಸಲು ನಿನ್ನ ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸುವಂತೆ ನಾವು ಬಯಸುತ್ತೇವೆ. ನೀನಿಲ್ಲಿ ಉಳಿಯಬೇಕೆಂದು ನಮ್ಮ ಬಯಕೆ.”
ಬೆತೆಲಿನಲ್ಲಿ ಅರ್ಥಭರಿತ ಜೀವನ
ನನಗೆ ಸಿಕ್ಕಿದ ಪ್ರಥಮ ನೇಮಕವು, ಮ್ಯಾಗಸಿನ್ ಮತ್ತು ಮೇಲಿಂಗ್ ಡಿಪಾರ್ಟ್ಮೆಂಟ್ಗಳಲ್ಲಿತ್ತು. ನಂತರ, ಸುಮಾರು ಮೂರು ವರ್ಷಗಳ ಬಳಿಕ, ನಾನು ಅವರ ಆಫೀಸಿಗೆ ಬರುವಂತೆ ಸಹೋದರ ನಾರ್ ನನಗೆ ಹೇಳಿಕಳುಹಿಸಿದರು. ನಾನು ಬೆತೆಲಿಗೆ ತರಲ್ಪಟ್ಟ ಮುಖ್ಯ ಕಾರಣವು ನಾನು ಹೋಮ್ ಡಿಪಾರ್ಟ್ಮೆಂಟ್ನಲ್ಲಿ ಕೆಲಸಮಾಡುವದಕ್ಕೆ, ಎಂದು ಅವರು ನನಗೆ ಹೇಳಿದರು. ಅವರ ಸೂಚನೆಗಳು ತುಂಬ ನೇರವಾಗಿದ್ದವು, “ಬೆತೆಲ್ ಹೋಮ್ (ಮನೆ) ಅನ್ನು ನೋಡಿಕೊಳ್ಳಲಿಕ್ಕಾಗಿ ನೀನು ಇಲ್ಲಿರುವಿ.”
ಬೆತೆಲ್ ಮನೆಯನ್ನು ನೋಡಿಕೊಳ್ಳುವುದು, ನಾನು ಫಾರ್ಮ್ನಲ್ಲಿ ಬೆಳೆಯುತ್ತಿದ್ದಾಗ ನನ್ನ ಹೆತ್ತವರು ನನಗೆ ಕಲಿಸಿದಂತಹ ಪಾಠಗಳನ್ನು ನನ್ನ ಜ್ಞಾಪಕಕ್ಕೆ ತಂದಿತು. ಒಂದು ಬೆತೆಲ್ ಮನೆಯು ಬಹುಮಟ್ಟಿಗೆ ಒಂದು ಸಾಮಾನ್ಯ ಕುಟುಂಬ ಮನೆತನದಂತೆಯೇ ಇದೆ. ಬಟ್ಟೆಗಳನ್ನು ಒಗೆಯಬೇಕು, ಊಟಗಳನ್ನು ತಯಾರಿಸಬೇಕು, ಪಾತ್ರೆಗಳನ್ನು ತೊಳೆಯಬೇಕು, ಹಾಸಿಗೆಗಳನ್ನು ಸರಿಪಡಿಸಬೇಕು, ಮುಂತಾದ ಕೆಲಸಗಳು ಇರುತ್ತವೆ. ಮನೆಯ ಸಂಘಟನಾ ವ್ಯವಸ್ಥೆಯು, ಬೆತೆಲನ್ನು ಜೀವಿಸಲು ಒಂದು ಸುಖಕರವಾದ, ಒಬ್ಬ ವ್ಯಕ್ತಿಯು ಅದನ್ನು ತನ್ನ ಮನೆಯೆಂದು ಕರೆಯಲು ಸಾಧ್ಯವಾಗುವಂತಹ ರೀತಿಯ ಸ್ಥಳವನ್ನಾಗಿ ಮಾಡಲು ಪ್ರಯತ್ನಿಸುತ್ತದೆ.
ಬೆತೆಲ್ ಕಾರ್ಯನಡಿಸುವ ವಿಧದಿಂದ ಕುಟುಂಬಗಳು ಕಲಿಯಬಹುದಾದ ಅನೇಕ ಪಾಠಗಳಿವೆಯೆಂದು ನಾನು ನಂಬುತ್ತೇನೆ. ನಾವು ಬೆಳಗ್ಗೆ ಬೇಗನೆ ಎದ್ದು, ಒಂದು ದೈನಿಕ ಬೈಬಲ್ ವಚನವನ್ನು ಪರಿಗಣಿಸುವ ಮೂಲಕ ನಮ್ಮ ದಿನವನ್ನು ಆತ್ಮಿಕ ವಿಚಾರಗಳೊಂದಿಗೆ ಆರಂಭಿಸುತ್ತೇವೆ. ಕಷ್ಟಪಟ್ಟು ದುಡಿಯಲು ಮತ್ತು ಒಂದು ಸಮತೆಯದ್ದಾದರೂ ಕಾರ್ಯಮಗ್ನವಾದ ಜೀವನವನ್ನು ನಡೆಸಲು ನಮ್ಮಿಂದ ಅಪೇಕ್ಷಿಸಲಾಗುತ್ತದೆ. ಕೆಲವರು ಯೋಚಿಸುವಂತೆ ಬೆತೆಲ್ ಒಂದು ಸಂನ್ಯಾಸಿಮಠದಂತಿರುವುದಿಲ್ಲ. ನಮ್ಮ ಕಾರ್ಯತಖ್ತೆಯ ಜೀವನ ಕ್ರಮದಿಂದಾಗಿ ನಾವು ತುಂಬ ಕೆಲಸವನ್ನು ಸಾಧಿಸುತ್ತೇವೆ. ತಾವು ಇಲ್ಲಿ ಪಡೆದಿರುವ ತರಬೇತಿಯು, ತಮಗೆ ತದನಂತರ ತಮ್ಮ ಕುಟುಂಬಗಳಲ್ಲಿ ಮತ್ತು ಕ್ರೈಸ್ತ ಸಭೆಯಲ್ಲಿ ಜವಾಬ್ದಾರಿಗಳನ್ನು ಸ್ವೀಕರಿಸಲು ಸಹಾಯಮಾಡಿತ್ತೆಂದು ಅನೇಕರು ಹೇಳಿದ್ದಾರೆ.
ಬೆತೆಲಿಗೆ ಬರುವ ಯುವ ಪುರುಷರು ಮತ್ತು ಸ್ತ್ರೀಯರು, ಶುಚಿಮಾಡಲು, ಲಾಂಡ್ರಿ ಕೆಲಸ, ಅಥವಾ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ನೇಮಿಸಲ್ಪಡಬಹುದು. ಅಂತಹ ದೈಹಿಕ ಕೆಲಸವು ಹೀನಾಯವಾದದ್ದು, ಮತ್ತು ನಮ್ಮ ಘನತೆಗೆ ಕುಂದು ತರುವಂತಹದ್ದೆಂದು ನಾವು ನಂಬುವಂತೆ ಲೋಕವು ಬಯಸಬಹುದು. ಆದರೂ, ಬೆತೆಲಿನಲ್ಲಿರುವ ಯುವ ವ್ಯಕ್ತಿಗಳು, ನಮ್ಮ ಕುಟುಂಬವು ಯೋಗ್ಯವಾಗಿ ಮತ್ತು ಸಂತೋಷಕರವಾಗಿ ಕಾರ್ಯನಡಿಸಲು ಆವಶ್ಯವಾಗಿರುವ ಅಂತಹ ಕೆಲಸದ ನೇಮಕಗಳನ್ನು ಗಣ್ಯಮಾಡಲಾರಂಭಿಸುತ್ತಾರೆ.
ನಿಜವಾಗಿ ಸಂತೋಷದಿಂದಿರಲು ನಿಮಗೆ ಸ್ಥಾನಮಾನದ ಅಗತ್ಯವಿದೆಯೆಂಬ ವಿಚಾರವನ್ನೂ ಲೋಕವು ಪ್ರವರ್ಧಿಸಬಹುದು. ಅದು ತಪ್ಪು. ನಮಗೆ ನೇಮಿಸಲ್ಪಟ್ಟಿರುವ ಕೆಲಸವನ್ನು ನಾವು ಮಾಡುವಾಗ, ‘ನಾವು ಮಾಡಬೇಕಾದದ್ದನ್ನೇ ಮಾಡುತ್ತಿದ್ದೇವೆ’ ಮತ್ತು ನಾವು ಯೆಹೋವನ ಆಶೀರ್ವಾದವನ್ನು ಪಡೆಯುತ್ತೇವೆ. (ಲೂಕ 17:10) ನಾವು ನಮ್ಮ ಕೆಲಸದ ಉದ್ದೇಶವನ್ನು—ಯೆಹೋವನ ಚಿತ್ತವನ್ನು ಮಾಡುವುದು ಮತ್ತು ರಾಜ್ಯ ಅಭಿರುಚಿಗಳನ್ನು ಅಭಿವೃದ್ಧಿಗೊಳಿಸುವುದು—ಮನಸ್ಸಿನಲ್ಲಿಡುವುದಾದರೆ ಮಾತ್ರ ನಮಗೆ ನಿಜ ಸಂತೃಪ್ತಿ ಮತ್ತು ಸಂತೋಷವಿರಸಾಧ್ಯವಿದೆ. ನಾವದನ್ನು ಮನಸ್ಸಿನಲ್ಲಿಡುವುದಾದರೆ, ಯಾವುದೇ ನೇಮಕವು ಆನಂದದಾಯಕವೂ, ತೃಪ್ತಿಕರವೂ ಆಗಿರಸಾಧ್ಯವಿದೆ.
ವಿಸ್ತರಣೆಯ ಕೆಲಸದಲ್ಲಿ ಭಾಗವಹಿಸುವ ಸುಯೋಗ
ನಾವು ಬೆತೆಲಿಗೆ ಬರುವ ಒಂದು ದಶಕಕ್ಕಿಂತಲೂ ಹೆಚ್ಚು ಸಮಯದ ಮುಂಚೆ, 1942ರಲ್ಲಿನ ಒಹಾಯೊದ ಕ್ಲೀವ್ಲ್ಯಾಂಡ್ ಅಧಿವೇಶನದಲ್ಲಿ ಸಹೋದರ ನಾರ್, “ಶಾಂತಿ—ಅದು ಬಾಳಬಲ್ಲದೊ?” ಎಂಬ ಭಾಷಣವನ್ನು ಕೊಟ್ಟರು. ಆಗ ನಡೆಯುತ್ತಾ ಇದ್ದ IIನೇ ಲೋಕ ಯುದ್ಧವು ಅಂತ್ಯಗೊಂಡು, ವಿಸ್ತೃತವಾದ ಸಾರುವ ಕಾರ್ಯಚರಣೆಗಾಗಿ ಒಂದು ಅವಕಾಶವಿರುವ ಒಂದು ಶಾಂತಿಯ ಸಮಯವಿರುವುದೆಂದು ಅವರು ಸ್ಪಷ್ಟಪಡಿಸಿದರು. 1943ರಲ್ಲಿ, ಮಿಷನೆರಿಗಳನ್ನು ತರಬೇತಿಗೊಳಿಸಲಿಕ್ಕಾಗಿ ಗಿಲ್ಯಡ್ ಶಾಲೆ ಮತ್ತು ಸಹೋದರರ ಬಹಿರಂಗವಾಗಿ ಮಾತನಾಡುವ ಸಾಮರ್ಥ್ಯಗಳನ್ನು ಉತ್ತಮಗೊಳಿಸಲಿಕ್ಕಾಗಿ ದೇವಪ್ರಭುತ್ವ ಶುಶ್ರೂಷ ಶಾಲೆಯು ಸ್ಥಾಪಿಸಲ್ಪಟ್ಟವು. ದೊಡ್ಡ ಅಧಿವೇಶನಗಳನ್ನೂ ಸಂಘಟಿಸಲಾಯಿತು. 1950ಗಳಲ್ಲಿ ವಿಶೇಷವಾಗಿ ಪ್ರಖ್ಯಾತವಾದವುಗಳು, ನ್ಯೂ ಯಾರ್ಕ್ನ ಯಾಂಕೀ ಸ್ಟೇಡಿಯಮ್ನಲ್ಲಿ ನಡೆಸಲ್ಪಟ್ಟ ಅಧಿವೇಶನಗಳಾಗಿದ್ದವು. 1950 ಮತ್ತು 1953ರಲ್ಲಿ ಅಲ್ಲಿ ನಡೆದ ಅಧಿವೇಶನಗಳ ಸಂಬಂಧದಲ್ಲಿ, ಆ ಎರಡೂ ಅಧಿವೇಶನಗಳಿಗಾಗಿ ಎಂಟು ದಿನಗಳಿಗಾಗಿ ಹತ್ತಾರು ಸಾವಿರ ಜನರಿಗೆ ವಸತಿಸ್ಥಳವನ್ನು ಒದಗಿಸಿದ ದೊಡ್ಡ ಟ್ರೇಲರ್ ಸಿಟಿಯನ್ನು ಏರ್ಪಡಿಸುವ ಅವಕಾಶ ನನಗಿತ್ತು.
ಆ ಅಧಿವೇಶನಗಳ ನಂತರ—1958ರಲ್ಲಿನ ಎಲ್ಲಕ್ಕಿಂತಲೂ ದೊಡ್ಡದಾದ ಅಧಿವೇಶನವನ್ನು ಸೇರಿಸಿ—ರಾಜ್ಯ ಪ್ರಚಾರಕರಲ್ಲಿ ತುಂಬ ವೃದ್ಧಿಗಳಿದ್ದವು. ಇದು ಬೆತೆಲಿನಲ್ಲಿ ನಮ್ಮ ಕೆಲಸವನ್ನು ನೇರವಾಗಿ ಪ್ರಭಾವಿಸಿತು. 1960ಗಳ ಕಡೇ ಭಾಗದಲ್ಲಿ ಮತ್ತು 1970ಗಳ ಆದಿಭಾಗದಲ್ಲಿ, ಕೆಲಸಮಾಡುವವರಿಗಾಗಿ ಜಾಗ ಮತ್ತು ಕೋಣೆಗಳ ತೀವ್ರ ಅಗತ್ಯವಿತ್ತು. ಬೆಳೆಯುತ್ತಿದ್ದ ನಮ್ಮ ಕುಟುಂಬಕ್ಕಾಗಿ ನಮಗೆ ಹೆಚ್ಚು ಬೆಡ್ರೂಮುಗಳು, ಅಡುಗೆಕೋಣೆಗಳು ಮತ್ತು ಭೋಜನಶಾಲೆಗಳು ಬೇಕಾಗಿದ್ದವು.
ಫ್ಯಾಕ್ಟರಿ ಮೇಲ್ವಿಚಾರಕರಾಗಿದ್ದ ಸಹೋದರ ಮ್ಯಾಕ್ಸ್ ಲಾರ್ಸನ್, ಮತ್ತು ನಾನು ವಿಸ್ತರಣಕಾರ್ಯಕ್ಕಾಗಿ ಸೂಕ್ತವಾದ ಸೈಟನ್ನು ಹುಡುಕುವಂತೆ ಸಹೋದರ ನಾರ್ ಕೇಳಿಕೊಂಡರು. 1957ರಲ್ಲಿ ನಾನು ಬೆತೆಲಿಗೆ ಬಂದಾಗ, ಸುಮಾರು 500 ಮಂದಿಯಿದ್ದ ನಮ್ಮ ಕುಟುಂಬವು, ಒಂದು ದೊಡ್ಡ ನಿವಾಸಿ ಕಟ್ಟಡದಲ್ಲಿ ವಾಸಿಸುತ್ತಿತ್ತು. ವರ್ಷಗಳು ದಾಟಿದಂತೆ, ಸೊಸೈಟಿಯು ಹತ್ತಿರದಲ್ಲಿದ್ದ ಟವರ್ಸ್, ಸ್ಟ್ಯಾಂಡಿಷ್, ಮತ್ತು ಬೊಸೆರ್ಟ್ ಎಂಬ ಮೂರು ಹೋಟೇಲುಗಳನ್ನು ಮತ್ತು ಅನೇಕ ಚಿಕ್ಕ ಅಪಾರ್ಟ್ಮೆಂಟ್ ಕಟ್ಟಡಗಳನ್ನು ಖರೀದಿಸಿ ನವೀಕರಿಸಿತು. 1986ರಲ್ಲಿ ಸೊಸೈಟಿಯು, ಹೊಟೇಲ್ ಮಾರ್ಗರೇಟ್ ಇದ್ದ ಸ್ಥಳವನ್ನು ಖರೀದಿಸಿ, ಅಲ್ಲಿ ನಿರ್ಮಿಸಲ್ಪಟ್ಟ ಭವ್ಯವಾದ ಹೊಸ ಕಟ್ಟಡವನ್ನು ಸುಮಾರು 250 ವ್ಯಕ್ತಿಗಳಿಗಾಗಿ ಒಂದು ಮನೆಯನ್ನಾಗಿ ಪರಿವರ್ತಿಸಿತು. ಅನಂತರ 1990ಗಳ ಆರಂಭದ ಭಾಗದಲ್ಲಿ, ಹೆಚ್ಚಿನ 1,000 ಕೆಲಸಗಾರರಿಗೆ ವಸತಿಯನ್ನೊದಗಿಸಲು, 30 ಮಳಿಗೆಯ ನಿವಾಸ ಕಟ್ಟಡವನ್ನು ನಿರ್ಮಿಸಲಾಯಿತು. ಬ್ರೂಕ್ಲಿನ್ ಬೆತೆಲ್ ಈಗ ನಮ್ಮ ಕುಟುಂಬದ 3,300ಕ್ಕಿಂತಲೂ ಹೆಚ್ಚು ಸದಸ್ಯರಿಗೆ ವಸತಿ ಹಾಗೂ ಊಟವನ್ನು ಒದಗಿಸಬಲ್ಲದು.
ಬ್ರೂಕ್ಲಿನ್ ಬೆತೆಲಿನಿಂದ ಸುಮಾರು 160 ಕಿಲೋಮೀಟರ್ ದೂರದಲ್ಲಿನ ನ್ಯೂ ಯಾರ್ಕ್ನ ವಾಲ್ಕಿಲ್ನಲ್ಲಿಯೂ ಸೈಟನ್ನು ಖರೀದಿಸಲಾಯಿತು. 1960ಗಳ ಕೊನೆಯ ಭಾಗದಲ್ಲಿ ಆರಂಭಿಸುತ್ತಾ, ವರ್ಷಗಳು ದಾಟಿದಂತೆ ಅಲ್ಲಿ ನಿವಾಸಗಳನ್ನು ಮತ್ತು ಒಂದು ದೊಡ್ಡ ಮುದ್ರಣಾಲಯವನ್ನು ನಿರ್ಮಿಸಲಾಯಿತು. ಈಗ, ನಮ್ಮ ಬೆತೆಲ್ ಕುಟುಂಬದ ಸುಮಾರು 1,200 ಸದಸ್ಯರು ಅಲ್ಲಿ ವಾಸಿಸಿ, ಕೆಲಸಮಾಡುತ್ತಾರೆ. 1980ರಲ್ಲಿ, ಹೆದ್ದಾರಿಗೆ ಸಮೀಪದಲ್ಲಿ ಹಾಗೂ ನ್ಯೂ ಯಾರ್ಕ್ ನಗರಕ್ಕೆ ಹತ್ತಿರದಲ್ಲಿರುವ ಸುಮಾರು 600 ಎಕ್ರೆಗಳ ಸೈಟಿಗಾಗಿ ಹುಡುಕಾಟವು ಆರಂಭವಾಯಿತು. ಸ್ಥಿರಾಸ್ತಿ ಏಜೆಂಟ್ ನಗುತ್ತಾ ಹೇಳಿದ್ದು: “ನಿಮಗೆ ಅಂತಹ ಸೈಟು ಎಲ್ಲಿ ಸಿಗುವುದು? ಅದು ಸಾಧ್ಯವೇ ಇಲ್ಲ.” ಆದರೆ, ಮರುದಿನ ಬೆಳಗ್ಗೆ ಅವನು ಫೋನ್ ಮಾಡಿ ಹೇಳಿದ್ದು: “ನನಗೆ ನಿಮ್ಮ ಸೈಟು ಸಿಕ್ಕಿತು.” ಇಂದು, ಅದು ನ್ಯೂ ಯಾರ್ಕ್ನ ಪ್ಯಾಟರ್ಸನ್ನಲ್ಲಿನ ವಾಚ್ಟವರ್ ಎಡ್ಯೂಕೇಷನಲ್ ಸೆಂಟರ್ ಎಂದು ಜ್ಞಾತವಾಗಿದೆ. ಅಲ್ಲಿ ಶಾಲೆಗಳನ್ನು ನಡಿಸಲಾಗುತ್ತದೆ, ಮತ್ತು 1,300 ಶುಶ್ರೂಷಕರಿಗಿಂತಲೂ ಹೆಚ್ಚು ಮಂದಿಯುಳ್ಳ ಒಂದು ಕುಟುಂಬವಿದೆ.
ನಾನು ಕಲಿತಿರುವ ಪಾಠಗಳು
ಒಬ್ಬ ಒಳ್ಳೇ ಮೇಲ್ವಿಚಾರಕನು, ಇತರರಿಂದ ಅಮೂಲ್ಯವಾದ ಮಾಹಿತಿಯನ್ನು ಹೊರಡಿಸಬಲ್ಲನೆಂದು ನಾನು ಕಲಿತಿದ್ದೇನೆ. ಬೆತೆಲ್ ಮೇಲ್ವಿಚಾರಕನೋಪಾದಿ, ಕಾರ್ಯರೂಪಕ್ಕೆ ಹಾಕುವ ಸುಯೋಗವಿದ್ದ ನನ್ನ ಹೆಚ್ಚಿನ ವಿಚಾರಗಳು, ಇತರರಿಂದ ಬಂದವುಗಳಾಗಿವೆ.
ನಾನು ಬೆತೆಲಿಗೆ ಬಂದಾಗ, ನಾನು ಈಗ ಇರುವಂತೆ ಅನೇಕರು ವೃದ್ಧರಾಗಿದ್ದರು. ಹೆಚ್ಚಿನವರು ಈಗ ತೀರಿಹೋಗಿದ್ದಾರೆ. ವೃದ್ಧರಾಗಿ ಸಾಯುವವರ ಸ್ಥಾನಭರ್ತಿ ಮಾಡುವವರು ಯಾರು? ಯಾವಾಗಲೂ ಹೆಚ್ಚಿನ ಸಾಮರ್ಥ್ಯವುಳ್ಳವರು ಅಲ್ಲ. ಇಲ್ಲಿರುವ, ತಮ್ಮ ಕೆಲಸವನ್ನು ನಂಬಿಗಸ್ತಿಕೆಯಿಂದ ನಡಿಸುತ್ತಾ, ತಮ್ಮನ್ನು ಲಭ್ಯಗೊಳಿಸುವವರೇ ಆಗಿರುತ್ತಾರೆ.
ನೆನಪಿನಲ್ಲಿಡಬೇಕಾದ ಇನ್ನೊಂದು ಪ್ರಾಮುಖ್ಯ ಸಂಗತಿಯು, ಒಬ್ಬ ಒಳ್ಳೇ ಪತ್ನಿಯ ಮೌಲ್ಯ. ನನ್ನ ಪ್ರಿಯ ಹೆಂಡತಿಯಾದ ಫರ್ನ್, ನನ್ನ ದೇವಪ್ರಭುತ್ವ ನೇಮಕಗಳನ್ನು ಪೂರೈಸುವುದರಲ್ಲಿ ನನಗೆ ತುಂಬ ಸಹಾಯಮಾಡಿದ್ದಾಳೆ. ತಮ್ಮ ಹೆಂಡತಿಯರು ಅವರ ನೇಮಕಗಳಲ್ಲಿ ಆನಂದಿಸುತ್ತಿದ್ದಾರೆಂಬುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಗಂಡಂದಿರಿಗಿದೆ. ಫರ್ನ್ ಮತ್ತು ನಾನು ಮಾಡಲು ಇಷ್ಟಪಡುವ ಯಾವುದೇ ಕೆಲಸವನ್ನು ಯೋಜಿಸಲು ನಾನು ಪ್ರಯತ್ನಿಸುತ್ತೇನೆ. ಅದು ದುಬಾರಿಯಾಗಿರಬೇಕೆಂದಿಲ್ಲ. ಸಾಮಾನ್ಯವಾದ ದಿನಚರಿಯಿಂದ ಭಿನ್ನವಾದಂತಹದ್ದಾಗಿರಬೇಕು ಅಷ್ಟೇ. ತನ್ನ ಹೆಂಡತಿಯನ್ನು ಸಂತೋಷಗೊಳಿಸುವಂತಹ ವಿಷಯಗಳನ್ನು ಮಾಡುವುದು ಗಂಡನ ಜವಾಬ್ದಾರಿಯಾಗಿದೆ. ಅವಳೊಂದಿಗೆ ಅವನು ಕಳೆಯುವ ಸಮಯ ಬಹಳ ಅಮೂಲ್ಯವಾಗಿದೆ ಮತ್ತು ಬೇಗನೆ ಸರಿದು ಹೋಗುತ್ತದೆ, ಆದುದರಿಂದ ಅವನು ಅದರ ಪೂರ್ಣ ಲಾಭವನ್ನು ಪಡೆದುಕೊಳ್ಳಬೇಕು.
ಯೇಸು ಯಾವುದರ ಕುರಿತಾಗಿ ಮಾತಾಡಿದನೊ ಆ ಕಡೇ ದಿವಸಗಳಲ್ಲಿ ಜೀವಿಸಲು ನಾನು ಸಂತೋಷಿತನಾಗಿದ್ದೇನೆ. ಮಾನವ ಇತಿಹಾಸದಲ್ಲೇ ಇದು ಅತ್ಯಂತ ಆಶ್ಚರ್ಯಕರವಾದ ಸಮಯವಾಗಿದೆ. ವಾಗ್ದತ್ತ ಹೊಸ ಲೋಕದ ಆಗಮನಕ್ಕೆ ತಯಾರಿಯಲ್ಲಿ, ಕರ್ತನು ತನ್ನ ಸಂಸ್ಥೆಯನ್ನು ಬೆಳೆಸುತ್ತಿರುವ ವಿಧವನ್ನು ನಾವು ಗಮನಿಸಿ, ನಮ್ಮ ನಂಬಿಕೆಯ ಕಣ್ಣುಗಳಿಂದ ನೋಡಬಲ್ಲೆವು. ಯೆಹೋವನ ಸೇವೆಯಲ್ಲಿ ನನ್ನ ಕಳೆದಿರುವ ಜೀವಮಾನಕಾಲವನ್ನು ಹಿಂದಿರುಗಿ ನೋಡುವಾಗ, ಈ ಸಂಸ್ಥೆಯನ್ನು ನಡಿಸುವವರು ಮನುಷ್ಯರಲ್ಲ, ಯೆಹೋವನೆಂಬುದನ್ನು ನಾನು ನೋಡಬಲ್ಲೆ. ನಾವು ಆತನ ಸೇವಕರಾಗಿದ್ದೇವಷ್ಟೇ. ಹೀಗಿರುವುದರಿಂದ, ನಾವು ಯಾವಾಗಲೂ ಆತನ ನಿರ್ದೇಶನಕ್ಕೆ ಎದುರುನೋಡಬೇಕು. ನಾವು ಏನು ಮಾಡಬೇಕೆಂಬುದನ್ನು ಅವನು ಒಮ್ಮೆ ಸ್ಪಷ್ಟಪಡಿಸಿದ ಬಳಿಕ, ನಾವು ಸಿದ್ಧಮನಸ್ಸಿನಿಂದ ವಿಧೇಯರಾಗಿ ಅದನ್ನು ಜೊತೆಯಾಗಿ ಮಾಡಬೇಕು.
ಸಂಸ್ಥೆಯೊಂದಿಗೆ ಪೂರ್ಣವಾಗಿ ಸಹಕರಿಸಿರಿ, ಮತ್ತು ಆಗ ನಿಮಗೆ ಒಂದು ಸಂತೃಪ್ತ, ಸಂತೋಷಕರ ಜೀವನದ ಗ್ಯಾರಂಟಿ ಇರುವುದು. ನೀವೇನೇ ಮಾಡುತ್ತಿರಲಿ—ಪಯನೀಯರ್ ಸೇವೆಯಾಗಲಿ, ಸರ್ಕಿಟ್ ಕೆಲಸವಾಗಿರಲಿ, ಒಬ್ಬ ಪ್ರಚಾರಕನೋಪಾದಿ ಸಭೆಯೊಂದಿಗೆ ಸೇವಿಸುತ್ತಿರಲಿ, ಬೆತೆಲ್ ಸೇವೆಯಾಗಲಿ, ಅಥವಾ ಮಿಷನೆರಿ ಸೇವೆಯಾಗಲಿ—ಕೊಡಲ್ಪಟ್ಟಿರುವ ನಿರ್ದೇಶನವನ್ನು ಅನುಸರಿಸಿರಿ, ಮತ್ತು ನಿಮ್ಮ ನೇಮಕವನ್ನು ಅಮೂಲ್ಯವೆಂದೆಣಿಸಿರಿ. ಪ್ರತಿಯೊಂದು ನೇಮಕವನ್ನು ಮತ್ತು ಯೆಹೋವನ ಸೇವೆಯಲ್ಲಿ ಪ್ರತಿಯೊಂದು ಕೆಲಸದ ದಿನದಲ್ಲಿ ಆನಂದಿಸಲು ನಿಮ್ಮಿಂದಾದಷ್ಟನ್ನು ಮಾಡಿರಿ. ನೀವು ಕೆಲವೊಮ್ಮೆ ದಣಿಯುವಿರಿ, ಮತ್ತು ಸುಸ್ತಾಗುವಿರಿ ಅಥವಾ ನಿರುತ್ತೇಜಿತರಾಗಬಹುದು. ಆ ಸಮಯದಲ್ಲೇ, ನೀವು ಯೆಹೋವನಿಗೆ ನಿಮ್ಮ ಜೀವನವನ್ನು ಸಮರ್ಪಿಸಿಕೊಂಡಿರುವ ಉದ್ದೇಶವನ್ನು ಜ್ಞಾಪಿಸಿಕೊಳ್ಳಬೇಕು. ಆ ಉದ್ದೇಶವು, ನಿಮ್ಮ ಚಿತ್ತವನ್ನಲ್ಲ ಬದಲಾಗಿ ಆತನ ಚಿತ್ತವನ್ನು ಮಾಡುವುದಾಗಿದೆ.
ನಾನು ಕೆಲಸಕ್ಕೆ ಬಂದು, ನಾನು ಮಾಡಿರುವ ಕೆಲಸದಲ್ಲಿ ಆನಂದಿಸದೆ ಇದ್ದ ಒಂದು ದಿನವೂ ಇಲ್ಲ. ಯಾಕೆ? ಯಾಕಂದರೆ ನಾವು ಯೆಹೋವನಿಗೆ ನಮ್ಮನ್ನೇ ಪೂರ್ಣಪ್ರಾಣದಿಂದ ನೀಡುವಾಗ, ‘ನಾವು ಮಾಡಬೇಕಾದದ್ದನ್ನೇ ಮಾಡಿದ್ದೇವೆ’ ಎಂಬ ಅರಿವಿನಿಂದ ಬರುವ ತೃಪ್ತಿ ನಮಗೆ ಸಿಗುತ್ತದೆ.
[ಪುಟ 19 ರಲ್ಲಿರುವ ಚಿತ್ರ]
ಮ್ಯಾಗಸಿನ್ ಡಿಪಾರ್ಟ್ಮೆಂಟ್
[ಪುಟ 19 ರಲ್ಲಿರುವ ಚಿತ್ರ]
1950, ಟ್ರೇಲರ್ ಸಿಟಿ
[ಪುಟ 19 ರಲ್ಲಿರುವ ಚಿತ್ರ]
1946, ಬ್ಯಾಲ್ಟಿಮೋರ್ನಲ್ಲಿ ಪಯನೀಯರ್ ಸೇವೆಯನ್ನು ಮಾಡುತ್ತಿರುವುದು
[ಪುಟ 19 ರಲ್ಲಿರುವ ಚಿತ್ರ]
1950ರಲ್ಲಿ ಫರ್ನ್ಳೊಂದಿಗೆ ಟ್ರೇಲರ್ ಸಿಟಿಯಲ್ಲಿ
[ಪುಟ 22 ರಲ್ಲಿರುವ ಚಿತ್ರ]
ಆಡ್ರೀ ಮತ್ತು ನೇತನ್ ನಾರ್ರವರೊಂದಿಗೆ
[ಪುಟ 23 ರಲ್ಲಿರುವ ಚಿತ್ರ]
ನ್ಯೂ ಯಾರ್ಕ್ನ, ಪ್ಯಾಟರ್ಸನ್ನಲ್ಲಿ ವಾಚ್ ಟವರ್ ಎಡ್ಯೂಕೇಷನಲ್ ಸೆಂಟರ್
[ಪುಟ 24 ರಲ್ಲಿರುವ ಚಿತ್ರ]
ಇಂದು ಫರ್ನ್ಳೊಂದಿಗೆ