ಯೆಹೋವನನ್ನು ಮೆಚ್ಚಿಸುವುದೇ ನನ್ನ ಜೀವನದ ಪ್ರಥಮ ಚಿಂತೆ
ತಿಯೊಡೊರಸ್ ನೀರೊಸ್ ಹೇಳಿದಂತೆ
ನನ್ನ ಸೆರೆಮನೆಯ ಕೋಣೆಯ ಬಾಗಿಲು ಕಿರ್ರನೇ ಶಬ್ದಮಾಡಿ ತೆರೆದುಕೊಂಡಿತು. ಒಬ್ಬ ಆಫೀಸರನು ಕೂಗಿ ಕೇಳಿದ್ದು: “ಇಲ್ಲಿ ನೀರೊಸ್ ಯಾರು?” ನಾನು ಎಂದು ನನ್ನ ಗುರುತು ಹೇಳಿದಾಗ, ಅವನು ಆಜ್ಞಾಪಿಸಿದ್ದು: “ಎದ್ದು ಇಲ್ಲಿ ಬಾ, ನಾವು ನಿನ್ನನ್ನು ಕೊಲ್ಲಲಿದ್ದೇವೆ.” ಇದು 1952ರಲ್ಲಿ ಗ್ರೀಸ್ನ ಕೊರಿಂಥದಲ್ಲಿನ ಒಂದು ಮಿಲಿಟರಿ ಕ್ಯಾಂಪ್ನಲ್ಲಿ ಸಂಭವಿಸಿತು. ನನ್ನ ಜೀವವು ತೂಗುಯ್ಯಾಲೆಯಲ್ಲಿದ್ದದ್ದು ಏಕೆ? ಅದನ್ನು ವಿವರಿಸುವ ಮುಂಚೆ, ನನ್ನ ಹಿನ್ನೆಲೆಯ ಬಗ್ಗೆ ಸ್ವಲ್ಪ ವಿಷಯವನ್ನು ನಿಮಗೆ ಹೇಳುತ್ತೇನೆ.
ಸುಮಾರು 1925ರಲ್ಲಿ, ಬೈಬಲ್ ವಿದ್ಯಾರ್ಥಿಗಳು (ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳು ಹೀಗೆ ಜ್ಞಾತರಾಗಿದ್ದರು) ನನ್ನ ತಂದೆಯವರನ್ನು ಸಂಪರ್ಕಿಸಿದರು. ಅವರು ಸ್ವಲ್ಪ ಸಮಯದೊಳಗೆ ಬೈಬಲ್ ವಿದ್ಯಾರ್ಥಿಗಳಲ್ಲಿ ಒಬ್ಬರಾದರು, ಮತ್ತು ತಮ್ಮ ನಂಬಿಕೆಗಳ ಕುರಿತು ತಮ್ಮ ಎಂಟು ಮಂದಿ ಸೋದರಸೋದರಿಯರಿಗೆ ತಿಳಿಸಿದರು. ಅವರೆಲ್ಲರೂ, ಮತ್ತು ಅವರ ಹೆತ್ತವರು ಸಹ ಬೈಬಲ್ ಸತ್ಯವನ್ನು ಅಂಗೀಕರಿಸಿದರು. ತದನಂತರ ತಂದೆಯವರ ವಿವಾಹವಾಯಿತು, ಮತ್ತು ನಾನು 1929ರಲ್ಲಿ ಗ್ರೀಸ್ನ, ಆಗ್ರೀನ್ಯೋದಲ್ಲಿ ಜನಿಸಿದೆ.
ಆ ವರ್ಷಗಳು ಗ್ರೀಸ್ ದೇಶಕ್ಕೆ ಬಹಳ ತ್ರಾಸಿನ ಸಮಯವಾಗಿತ್ತು. ಮೊದಲು, ಜೆನರಲ್ ಮೆಟಾಕ್ಸಾಸ್ನ ಕ್ರೂರ ನಿರಂಕುಶಾಧಿಕಾರವಿತ್ತು. ಅನಂತರ 1939ರಲ್ಲಿ, IIನೆಯ ವಿಶ್ವ ಯುದ್ಧವು ಆರಂಭವಾಯಿತು, ಮತ್ತು ತದನಂತರ ಸ್ವಲ್ಪ ಸಮಯದೊಳಗೆ, ಆ ದೇಶವನ್ನು ನಾಸಿಗಳು ವಶಪಡಿಸಿಕೊಂಡರು. ರೋಗ ಮತ್ತು ಹಸಿವು ಎಲ್ಲೆಲ್ಲೂ ಹರಡಿದ್ದವು. ಊದಿಹೋಗಿದ್ದ ಶವಗಳನ್ನು ಚಿಕ್ಕ ತಳ್ಳುವ ಗಾಡಿಗಳಲ್ಲಿ ಸಾಗಿಸಲಾಗುತ್ತಿತ್ತು. ಲೋಕದಲ್ಲಿನ ದುಷ್ಟತನವು ಮತ್ತು ದೇವರ ರಾಜ್ಯಕ್ಕಾಗಿರುವ ಅಗತ್ಯವು ತೀರ ಸ್ಪಷ್ಟವಾಗಿ ವ್ಯಕ್ತವಾಗುತ್ತಿತ್ತು.
ಸಮರ್ಪಿತ ಸೇವೆಯ ಒಂದು ಜೀವನ
ಇಸವಿ 1942, ಆಗಸ್ಟ್ 20ರಂದು ನಮ್ಮ ಒಂದು ಗುಂಪು, ಥೆಸಲೊನೀಕದ ಹೊರಗೆ ಒಂದು ಕೂಟಕ್ಕಾಗಿ ಜೊತೆಗೂಡಿದ್ದೆವು. ಆಗ ನಮ್ಮ ಅಧ್ಯಕ್ಷ ಮೇಲ್ವಿಚಾರಕರು, ನಗರದ ಮೇಲೆ ಬಾಂಬ್ಗಳನ್ನು ಬೀಳಿಸುತ್ತಿದ್ದ ಬ್ರಿಟಿಷ್ ಯುದ್ಧವಿಮಾನಗಳ ಕಡೆಗೆ ಕೈತೋರಿಸಿ, ‘ಸಭೆಯಾಗಿ ಕೂಡಿಕೊಳ್ಳುವದನ್ನು ನಾವು ಬಿಟ್ಟು ಬಿಡದೆ’ ಇರುವಂತೆ ಕೊಡಲಾಗಿರುವ ಬುದ್ಧಿವಾದಕ್ಕೆ ವಿಧೇಯರಾಗಿರುವುದಿಂದ ನಾವು ಸಂರಕ್ಷಿಸಲ್ಪಟ್ಟಿರುವ ವಿಧವನ್ನು ಎತ್ತಿಹೇಳಿದರು. (ಇಬ್ರಿಯ 10:25) ಆ ಸಂದರ್ಭದಲ್ಲಿ ನಾವು ಸಮುದ್ರದ ತೀರದಲ್ಲಿ ಒಟ್ಟುಗೂಡಿದ್ದೆವು ಮತ್ತು ನಾನು ದೀಕ್ಷಾಸ್ನಾನ ಅಭ್ಯರ್ಥಿಗಳಲ್ಲಿ ಒಬ್ಬನಾಗಿದ್ದೆ. ನಾವು ನೀರಿನಿಂದ ಹೊರಬಂದಾಗ, ಸಾಲಾಗಿ ನಿಂತುಕೊಂಡೆವು ಮತ್ತು ನಮ್ಮ ಕ್ರೈಸ್ತ ಸಹೋದರ ಸಹೋದರಿಯರು ನಾವು ತೆಗೆದುಕೊಂಡಿದ್ದ ನಿರ್ಣಯಕ್ಕಾಗಿ ನಮ್ಮನ್ನು ಶ್ಲಾಘಿಸುತ್ತಾ ಒಂದು ಗೀತೆಯನ್ನು ಹಾಡಿದರು. ಅದು ಎಂತಹ ಒಂದು ಅವಿಸ್ಮರಣೀಯ ದಿನವಾಗಿತ್ತು!
ಇದಾದ ಸ್ವಲ್ಪದರಲ್ಲೇ, ನಾನು ಮತ್ತು ಇನ್ನೊಬ್ಬ ಹುಡುಗ ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಜನರನ್ನು ಸಂದರ್ಶಿಸುತ್ತಿದ್ದಾಗ, ಪೊಲೀಸರು ನಮ್ಮನ್ನು ಬಂಧಿಸಿ, ಠಾಣೆಗೆ ಕರೆದೊಯ್ದರು. ನಮ್ಮನ್ನು ಕಮ್ಯೂನಿಸ್ಟರೆಂದು ಕಾಣಲಾಗುತ್ತಿದೆಯೆಂದು ಮತ್ತು ನಮ್ಮ ಸಾರುವ ಕೆಲಸವು ನಿಷೇಧಿಸಲ್ಪಟ್ಟಿದೆಯೆಂಬುದನ್ನು ಒತ್ತಿಹೇಳಲು, ನಮ್ಮನ್ನು ಹೊಡೆದು ಹೀಗೆ ಹೇಳಲಾಯಿತು: “ಮೂರ್ಖರೇ, ಯೆಹೋವನೂ ಸ್ಟಾಲಿನನೂ ಒಂದೇ.”
ಆ ಸಮಯದಲ್ಲಿ ಗ್ರೀಸ್ ದೇಶದಲ್ಲಿ ಆಂತರಿಕ ಯುದ್ಧ ನಡೆಯುತ್ತಾ ಇತ್ತು, ಮತ್ತು ಕಮ್ಯೂನಿಸ್ಟ್ ವಿರೋಧಿ ಭಾವನೆಯು ತೀವ್ರವಾಗಿತ್ತು. ಮರುದಿನ, ನಾವು ಪಾತಕಿಗಳಾಗಿದ್ದೇವೊ ಎಂಬಂತೆ, ನಮ್ಮ ಕೈಗಳಿಗೆ ಬೇಡಿಹಾಕಿ ನಮ್ಮನ್ನು ನಮ್ಮ ಮನೆಗಳ ಮುಂದಿನಿಂದ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಆದರೆ ನನಗೆ ಬಂದ ಪರೀಕ್ಷೆಗಳು ಇಲ್ಲಿಗೆ ಮುಗಿಯಲಿಲ್ಲ.
ಶಾಲೆಯಲ್ಲಿ ನಂಬಿಕೆಯ ಪರೀಕ್ಷೆಗಳು
1944ರ ಆದಿ ಭಾಗದಲ್ಲಿ, ನಾನು ಇನ್ನೂ ಒಬ್ಬ ಶಾಲಾ ಹುಡುಗನಾಗಿದ್ದಾಗ, ಥೆಸಲೊನೀಕವು ಇನ್ನೂ ನಾಜಿಗಳ ವಶದಲ್ಲಿತ್ತು. ಒಂದು ದಿನ ಶಾಲೆಯಲ್ಲಿ, ಧರ್ಮದ ಪ್ರೊಫೆಸರನಾಗಿದ್ದ ಒಬ್ಬ ಗ್ರೀಕ್ ಆರ್ತೊಡಾಕ್ಸ್ ಪಾದ್ರಿ, ಆ ದಿನದ ಪಾಠದ ಕುರಿತಾಗಿ ನನ್ನನ್ನು ಪರೀಕ್ಷಿಸುವನೆಂದು ನನಗೆ ಹೇಳಿದನು. “ಅವನೊಬ್ಬ ಆರ್ತೊಡಾಕ್ಸ್ ಕ್ರೈಸ್ತನಲ್ಲ” ಎಂದು ಬೇರೆ ಮಕ್ಕಳು ಹೇಳಿದರು.
“ಅವನು ಯಾವ ಧರ್ಮದವನು?” ಎಂದು ಪ್ರೊಫೆಸರನು ಕೇಳಿದನು.
“ನಾನೊಬ್ಬ ಯೆಹೋವನ ಸಾಕ್ಷಿ,” ಎಂದು ನಾನು ಉತ್ತರಿಸಿದೆ.
“ಕುರಿಗಳ ಮಧ್ಯದಲ್ಲಿ ಒಂದು ತೋಳ,” ಎಂದು ಅರಚುತ್ತಾ ಅವನು ನನ್ನನ್ನು ಹಿಡಿದೆಳೆದು, ಕಪಾಳಕ್ಕೆ ಬೀಸಿ ಹೊಡೆದನು.
‘ತೋಳವನ್ನು ಒಂದು ಕುರಿಯು ಹೇಗೆ ಕಚ್ಚಲು ಸಾಧ್ಯ?’ ಎಂದು ನಾನು ನನ್ನಷ್ಟಕ್ಕೇ ಯೋಚಿಸಿದೆ.
ಕೆಲವು ದಿನಗಳ ಬಳಿಕ, ನಮ್ಮಲ್ಲಿ ಸುಮಾರು 350 ಮಂದಿ, ಮಧ್ಯಾಹ್ನದ ಊಟಕ್ಕಾಗಿ ನಮ್ಮ ಮೇಜುಗಳ ಬಳಿ ಕುಳಿತುಕೊಂಡಿದ್ದೆವು. “ಈಗ ನೀರೊಸ್ ಪ್ರಾರ್ಥನೆಮಾಡುವನು” ಎಂದು ಸೂಪರ್ವೈಸರ್ ಹೇಳಿದರು. ಮತ್ತಾಯ 6:9-13ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಯೇಸು ತನ್ನ ಹಿಂಬಾಲಕರಿಗೆ ಕಲಿಸಿದಂತಹ ಪ್ರಾರ್ಥನೆಯಾದ ‘ನಮ್ಮ ತಂದೆ’ ಎಂದು ಕರೆಯಲಾಗುವ ಪ್ರಾರ್ಥನೆಯನ್ನು ನಾನು ಹೇಳಿದೆ. ಸೂಪರ್ವೈಸರನಿಗೆ ಇದು ಇಷ್ಟವಾಗಲಿಲ್ಲ, ಆದುದರಿಂದ, “ನೀನು ಯಾಕೆ ಆ ರೀತಿಯಲ್ಲಿ ಪ್ರಾರ್ಥಿಸಿದೆ?” ಎಂದು ಅವನು ತಾನು ಕುಳಿತುಕೊಂಡಿದ್ದ ಸ್ಥಳದಿಂದಲೇ ನನ್ನನ್ನು ಸಿಟ್ಟಿನಿಂದ ಕೇಳಿದನು.
“ಯಾಕಂದರೆ ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದೇನೆ” ಎಂದು ಉತ್ತರಿಸಿದೆ. ಆಗ ಅವನು ಸಹ ನನ್ನನ್ನು ಹಿಡಿದು, ಕೆನ್ನೆಗೆ ಬಾರಿಸಿದನು. ಅದೇ ದಿನ, ಬೇರೆ ಸಮಯದಲ್ಲಿ ಮತ್ತೊಬ್ಬ ಶಿಕ್ಷಕನು ನನ್ನನ್ನು ತನ್ನ ಆಫೀಸಿಗೆ ಕರೆದು, ಹೇಳಿದ್ದು: “ಶಭಾಷ್ ನೀರೊಸ್, ನೀನು ಏನನ್ನು ನಂಬುತ್ತೀಯೊ ಅದಕ್ಕೆ ಅಂಟಿಕೊಂಡಿರು, ಅದನ್ನು ಬಿಟ್ಟುಕೊಡಬೇಡ.” ಆ ರಾತ್ರಿ, ನನ್ನ ತಂದೆಯವರು, ಅಪೊಸ್ತಲ ಪೌಲನ ಈ ಮಾತುಗಳೊಂದಿಗೆ ನನಗೆ ಸಾಂತ್ವನ ನೀಡಿದರು: “ಕ್ರಿಸ್ತ ಯೇಸುವಿನಲ್ಲಿ ಸದ್ಭಕ್ತರಾಗಿ ಜೀವಿಸುವದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.”—2 ತಿಮೊಥೆಯ 3:12.
ನಾನು ಪ್ರೌಢ ಶಾಲೆಯಲ್ಲಿ ಓದನ್ನು ಮುಗಿಸಿದಾಗ, ಯಾವ ಜೀವನೋದ್ಯೋಗವನ್ನು ಆರಂಭಿಸಬೇಕೆಂದು ನಾನು ಆಯ್ಕೆಮಾಡಬೇಕಿತ್ತು. ಗ್ರೀಸ್ನಲ್ಲಿನ ಆಂತರಿಕ ಕಲಹದಿಂದಾಗಿ, ನಾನು ಕೂಡ ಕ್ರೈಸ್ತ ತಾಟಸ್ಥ್ಯದ ಪಂಥಾಹ್ವಾನವನ್ನು ಎದುರಿಸಬೇಕಾಯಿತು. (ಯೆಶಾಯ 2:4; ಮತ್ತಾಯ 26:52) ಕಟ್ಟಕಡೆಗೆ, 1952ರ ಆದಿ ಭಾಗದಲ್ಲಿ, ಗ್ರೀಕ್ ಇತಿಹಾಸದ ಆ ಕಠಿನವಾದ ಸಮಯಾವಧಿಯಲ್ಲಿ ಶಸ್ತ್ರಾಸ್ತ್ರಗಳನ್ನು ಮುಟ್ಟಲು ನಿರಾಕರಿಸಿದುದಕ್ಕಾಗಿ ನನಗೆ 20 ವರ್ಷಗಳ ಸೆರೆಮನೆವಾಸದ ಶಿಕ್ಷೆವಿಧಿಸಲಾಯಿತು.
ನನ್ನ ಕ್ರೈಸ್ತ ತಾಟಸ್ಥ್ಯವು ಪರೀಕ್ಷಿಸಲ್ಪಟ್ಟದ್ದು
ಮೆಸಲಾಂಗೀಯನ್ ಮತ್ತು ಕೊರಿಂಥದಲ್ಲಿನ ಮಿಲಿಟರಿ ಕ್ಯಾಂಪ್ಗಳಲ್ಲಿ ನಾನು ಬಂಧಿಸಲ್ಪಟ್ಟಾಗ, ನನ್ನ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯು, ನಾನು ರಾಜಕೀಯ ಉದ್ದೇಶಗಳನ್ನು ಬೆಂಬಲಿಸುವ ಒಬ್ಬ ಸೈನಿಕನಾಗಲು ಅನುಮತಿಸಲಾರದೆಂದು ಮಿಲಿಟರಿ ಕಮಾಂಡರ್ಗಳಿಗೆ ವಿವರಿಸುವ ಅವಕಾಶವು ನನಗೆ ಸಿಕ್ಕಿತು. 2 ತಿಮೊಥೆಯ 2:3ಕ್ಕೆ ಸೂಚಿಸುತ್ತಾ, “ನಾನು ಈಗಾಗಲೇ ಯೇಸುವಿನ ಸೈನಿಕನಾಗಿದ್ದೇನೆ” ಎಂದು ವಿವರಿಸಿದೆ. ನನಗೆ ಪುನಃ ಯೋಚಿಸುವಂತೆ ಹೇಳಲಾದಾಗ, ನನ್ನ ನಿರ್ಣಯವು ಅಲ್ಲೇ ಅವಸರದಿಂದ ಮಾಡಲ್ಪಟ್ಟ ಒಂದು ನಿರ್ಣಯವಾಗಿರಲಿಲ್ಲ ಬದಲಾಗಿ ಗಂಭೀರವಾಗಿ ಯೋಚಿಸಿದ ಬಳಿಕ ಮತ್ತು ದೇವರ ಚಿತ್ತವನ್ನು ಮಾಡಲಿಕ್ಕಾಗಿ ಆತನಿಗೆ ಮಾಡಿರುವ ಸಮರ್ಪಣೆಯನ್ನು ಮನಸ್ಸಿನಲ್ಲಿಡುತ್ತಾ ಮಾಡಲ್ಪಟ್ಟಿದೆ ಎಂದು ನಾನು ಹೇಳಿದೆ.
ಇದರಿಂದಾಗಿ, ನಾನು ಕಡ್ಡಾಯ ದುಡಿಮೆಯನ್ನು ಮಾಡಬೇಕಾಯಿತು, 20 ದಿನಗಳ ವರೆಗೆ ದಿನ ಬಿಟ್ಟು ದಿನ ಊಟವಿಲ್ಲದೆ, ಒಂದು ಮೀಟರ್ ಉದ್ದ ಮತ್ತು ಎರಡು ಮೀಟರ್ ಅಗಲಕ್ಕಿಂತಲೂ ಕಡಿಮೆ ಅಳತೆಯ ಒಂದು ಕೋಣೆಯ ಸಿಮೆಂಟ್ ನೆಲದ ಮೇಲೆ ಮಲಗಬೇಕಾಯಿತು. ಮತ್ತು ಈ ಕೋಣೆಯಲ್ಲಿ ನನ್ನೊಂದಿಗೆ ಇನ್ನಿಬ್ಬರು ಸಾಕ್ಷಿಗಳಿದ್ದರು! ಈ ಸಮಯದಲ್ಲೇ, ಕೊರಿಂಥದ ಕ್ಯಾಂಪ್ನಲ್ಲಿದ್ದಾಗ, ನನ್ನನ್ನು ವಧಿಸಲಿಕ್ಕಾಗಿ ನನ್ನ ಸೆರೆಮನೆಯ ಕೋಣೆಯಿಂದ ಕರೆಯಲಾಗಿತ್ತು.
ನಾವು ವಧ್ಯಸ್ಥಾನಕ್ಕೆ ಹೋಗುತ್ತಿದ್ದಂತೆ, “ನಿನಗೆ ಏನೂ ಹೇಳಲಿಕ್ಕಿಲ್ಲವೊ?” ಎಂದು ಆಫೀಸರನು ಕೇಳಿದನು.
“ಇಲ್ಲ,” ಎಂದು ನಾನು ಉತ್ತರಿಸಿದೆ.
“ನಿನ್ನ ಕುಟುಂಬಕ್ಕೆ ಪತ್ರ ಬರೆಯುವುದಿಲ್ಲವೊ?”
“ಇಲ್ಲ, ನನ್ನನ್ನು ಇಲ್ಲಿ ಕೊಲ್ಲಲಾಗಬಹುದೆಂದು ಅವರಿಗೆ ಈಗಾಗಲೇ ತಿಳಿದಿದೆ,” ಎಂದು ನಾನು ಉತ್ತರಿಸಿದೆ.
ನಾವು ಅಂಗಳಕ್ಕೆ ಬಂದೆವು, ಮತ್ತು ಗೋಡೆಗೆ ಬೆನ್ನು ಮಾಡಿ ನಿಲ್ಲುವಂತೆ ನನಗೆ ಆಜ್ಞಾಪಿಸಲಾಯಿತು. ಅನಂತರ, ಸೈನಿಕರಿಗೆ ಗುಂಡಿಟ್ಟು ಕೊಲ್ಲುವಂತೆ ಆಜ್ಞಾಪಿಸುವ ಬದಲಿಗೆ, “ಅವನನ್ನು ಒಳಗೆ ಕರೆದುಕೊಂಡುಹೋಗಿ” ಎಂದು ಆ ಆಫೀಸರನು ಆಜ್ಞೆ ಕೊಟ್ಟನು. ಇದೆಲ್ಲವೂ ನನ್ನ ನಿರ್ಣಯವನ್ನು ಪರೀಕ್ಷಿಸಲಿಕ್ಕಾಗಿ ಮಾಡಲ್ಪಟ್ಟ ಒಂದು ನಾಟಕವಾಗಿತ್ತಷ್ಟೇ.
ತದನಂತರ ನನ್ನನ್ನು ಮಾಕ್ರೊನೀಸಸ್ ದ್ವೀಪಕ್ಕೆ ಕಳುಹಿಸಲಾಯಿತು. ಅಲ್ಲಿ ನಾನು ಬೈಬಲೊಂದನ್ನು ಬಿಟ್ಟು ಬೇರೆ ಯಾವುದೇ ಸಾಹಿತ್ಯವನ್ನು ಇಟ್ಟುಕೊಳ್ಳಲು ಅನುಮತಿಸಲ್ಪಟ್ಟಿರಲಿಲ್ಲ. ಬಹುಮಟ್ಟಿಗೆ 500 ಕ್ರಿಮಿನಲ್ ಸೆರೆವಾಸಿಗಳಿಂದ ಪ್ರತ್ಯೇಕವಾದ ಒಂದು ಚಿಕ್ಕ ಮನೆಯಲ್ಲಿ ಹದಿಮೂರು ಸಾಕ್ಷಿಗಳನ್ನು ಇಡಲಾಯಿತು. ಆದರೂ, ಒಂದಲ್ಲ ಒಂದು ರೀತಿಯಲ್ಲಿ ಸಾಹಿತ್ಯವನ್ನು ನಮಗೆ ಕಳ್ಳತನದಿಂದ ಸಾಗಿಸಲಾಗುತ್ತಿತ್ತು. ಉದಾಹರಣೆಗಾಗಿ ಒಂದು ದಿನ, ಲೂಕೂಮ್ಯಾ (ಒಂದು ಜನಪ್ರಿಯ ಮಿಠಾಯಿ)ದ ಒಂದು ಡಬ್ಬವನ್ನು ನನಗೆ ಕಳುಹಿಸಲಾಯಿತು. ಪರೀಕ್ಷಕರು ಆ ಲೂಕೂಮ್ಯಾದ ರುಚಿ ನೋಡಲು ಎಷ್ಟು ಕಾತುರರಾಗಿದ್ದರೆಂದರೆ, ಅಡಿಯಲ್ಲಿ ಬಚ್ಚಿಡಲ್ಪಟ್ಟಿದ್ದ ವಾಚ್ಟವರ್ ಪತ್ರಿಕೆಯನ್ನು ಅವರು ಗಮನಿಸಲಿಲ್ಲ. “ಸೈನಿಕರು ಲೂಕೂಮ್ಯಾ ತಿಂದರು ಆದರೆ ನಾವು ದ ವಾಚ್ಟವರ್ ಅನ್ನು ‘ತಿಂದೆವು!’” ಎಂದು ಒಬ್ಬ ಸಾಕ್ಷಿಯು ಹೇಳಿದನು.
ಆ ಸಮಯದಲ್ಲಿ ಹೊಸತಾಗಿ ಬಿಡುಗಡೆಯಾಗಿದ್ದ, ಧರ್ಮವು ಮಾನವಕುಲಕ್ಕಾಗಿ ಏನನ್ನು ಮಾಡಿದೆ? ಎಂಬ (ಇಂಗ್ಲಿಷ್) ಪುಸ್ತಕದ ಒಂದು ಪ್ರತಿಯು ನಮಗೆ ದೊರಕಿತು, ಮತ್ತು ಇಂಗ್ಲಿಷ್ ಭಾಷೆ ತಿಳಿದಿದ್ದ ಒಬ್ಬ ಸಾಕ್ಷಿ ಸೆರೆವಾಸಿಯು ಅದನ್ನು ಭಾಷಾಂತರಿಸಿದನು. ನಮ್ಮ ಕೂಟಗಳನ್ನು ಗುಪ್ತವಾಗಿ ನಡೆಸುತ್ತಾ, ನಾವು ದ ವಾಚ್ಟವರ್ ಪತ್ರಿಕೆಯನ್ನು ಸಹ ಅಭ್ಯಾಸಿಸಿದೆವು. ನಾವು ಸೆರೆಮನೆಯನ್ನು, ನಮ್ಮ ಆತ್ಮಿಕತೆಯನ್ನು ಬಲಪಡಿಸಲಿಕ್ಕಾಗಿ ಒಂದು ಸಂದರ್ಭವನ್ನಾಗಿ ಅಂದರೆ, ಒಂದು ಶಾಲೆಯೋಪಾದಿ ವೀಕ್ಷಿಸಿದೆವು. ಎಲ್ಲಕ್ಕಿಂತಲೂ ಮಿಗಿಲಾಗಿ, ನಮ್ಮ ಸಮಗ್ರತೆಯ ಮಾರ್ಗಕ್ರಮವು ಯೆಹೋವನನ್ನು ಮೆಚ್ಚಿಸುತ್ತದೆಂದು ನಮಗೆ ಗೊತ್ತಿದ್ದುದ್ದರಿಂದ ನಾವು ಸಂತೋಷಿತರಾಗಿದ್ದೆವು.
ನಾನು ಬಂಧಿಸಲ್ಪಟ್ಟಿದ್ದ ಸೆರೆಮನೆಗಳಲ್ಲಿ ಕೊನೆಯದ್ದು, ಪೂರ್ವ ಪೆಲೊಪೊನಿಸೊಸ್ನಲ್ಲಿ ಟೈರೀಂತಾ ನಗರದಲ್ಲಿತ್ತು. ಒಬ್ಬ ಜೊತೆ ಸೆರೆವಾಸಿಯೊಂದಿಗೆ ನಾನು ಬೈಬಲ್ ಅಭ್ಯಾಸವನ್ನು ನಡೆಸುತ್ತಿದ್ದಾಗ ಜಾಗರೂಕತೆಯಿಂದ ಲಕ್ಷ್ಯಕೊಡುತ್ತಿದ್ದ ಒಬ್ಬ ಪಹರೆಯವನನ್ನು ನಾನು ಗಮನಿಸಿದೆ. ವರ್ಷಗಳ ನಂತರ, ಥೆಸಲೊನೀಕದಲ್ಲಿ ಆ ಪಹರೆಯವನನ್ನು ಭೇಟಿಯಾಗುವುದು ಎಂತಹ ಒಂದು ಆಶ್ಚರ್ಯವಾಗಿತ್ತು! ಅಷ್ಟರೊಳಗೆ ಅವನೊಬ್ಬ ಸಾಕ್ಷಿಯಾಗಿದ್ದನು. ತದನಂತರ, ಅವನ ಮಕ್ಕಳಲ್ಲಿ ಒಬ್ಬನನ್ನು ಸೆರೆಮನೆಗೆ ಕಳುಹಿಸಲಾಯಿತು. ಒಬ್ಬ ಪಹರೆಯವನೋಪಾದಿ ಕೆಲಸಮಾಡಲಿಕ್ಕಾಗಿ ಅಲ್ಲ, ಬದಲಾಗಿ ಒಬ್ಬ ಸೆರೆಮನೆವಾಸಿಯಾಗಿ. ನನ್ನನ್ನು ಸೆರೆಮನೆಗೆ ಏಕೆ ಹಾಕಲಾಗಿತ್ತೊ ಅದೇ ಕಾರಣಕ್ಕಾಗಿ ಅವನನ್ನು ಸೆರೆಮನೆಗೆ ಹಾಕಲಾಗಿತ್ತು.
ಬಿಡುಗಡೆಯ ನಂತರ ನವೀಕರಿಸಲ್ಪಟ್ಟ ಚಟುವಟಿಕೆ
ಆರಂಭದಲ್ಲಿ ವಿಧಿಸಲಾದ 20 ವರ್ಷದ ಸೆರೆಮನೆವಾಸದಲ್ಲಿ ನಾನು ಕೇವಲ ಮೂರು ವರ್ಷಗಳ ವರೆಗೆ ಮಾತ್ರ ಸೆರೆಯಲ್ಲಿದ್ದೆ. ನನ್ನ ಬಿಡುಗಡೆಯ ನಂತರ ನಾನು ಅಥೇನ್ಸ್ನಲ್ಲಿ ವಾಸಿಸಲು ನಿರ್ಣಯಿಸಿದೆ. ಆದರೆ, ನಾನು ಸ್ವಲ್ಪ ಸಮಯದೊಳಗೆ ಶ್ವಾಸಕೋಶಾವರಣ ಊರಿಯೂತದಿಂದ ಅಸ್ವಸ್ಥನಾದೆ, ಮತ್ತು ನಾನು ಥೆಸಲೊನೀಕಕ್ಕೆ ಹಿಂದಿರುಗಲೇಬೇಕಾಯಿತು. ಎರಡು ತಿಂಗಳುಗಳ ವರೆಗೆ ನಾನು ಹಾಸಿಗೆಯಲ್ಲಿದ್ದೆ. ಅನಂತರ ಕೂಲಾ ಎಂಬ ಸುಂದರ ಹುಡುಗಿಯನ್ನು ಭೇಟಿಯಾದೆ. ನಾವು 1959ರ ಡಿಸೆಂಬರ್ ತಿಂಗಳಿನಲ್ಲಿ ವಿವಾಹವಾದೆವು. 1962ರಲ್ಲಿ, ಅವಳು ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕರನ್ನು ಆಗ ಕರೆಯಲಾಗುತ್ತಿದ್ದಂತೆ ಒಬ್ಬ ಪಯನೀಯರಳಾಗಿ ಸೇವೆ ಸಲ್ಲಿಸಲು ಆರಂಭಿಸಿದಳು. ಮೂರು ವರ್ಷಗಳ ಬಳಿಕ, ನಾನು ಅವಳೊಂದಿಗೆ ಪಯನೀಯರ್ ಕೆಲಸದಲ್ಲಿ ಜೊತೆಗೂಡಲು ಶಕ್ತನಾದೆ.
1965ರ ಜನವರಿ ತಿಂಗಳಲ್ಲಿ, ಸಭೆಗಳನ್ನು ಆತ್ಮಿಕವಾಗಿ ಬಲಪಡಿಸಲಿಕ್ಕೋಸ್ಕರ ಅವುಗಳನ್ನು ಸಂದರ್ಶಿಸಲಿಕ್ಕಾಗಿ ನಮ್ಮನ್ನು ಸರ್ಕಿಟ್ ಕೆಲಸಕ್ಕೆ ನೇಮಿಸಲಾಯಿತು. ಆ ವರ್ಷದ ಬೇಸಗೆಯಲ್ಲಿ, ಆಸ್ಟ್ರೀಯದ ವಿಯೆನ್ನಾದಲ್ಲಿ ನಮ್ಮ ಪ್ರಪ್ರಥಮ ದೊಡ್ಡ ಜಿಲ್ಲಾ ಅಧಿವೇಶನಕ್ಕೆ ಹಾಜರಾಗುವ ಸುಯೋಗವೂ ನಮಗಿತ್ತು. ಗ್ರೀಸ್ನಲ್ಲಿ ನಡೆಯುತ್ತಿದ್ದ ನಮ್ಮ ಸಮ್ಮೇಳನಗಳಿಗಿಂತ ಅದು ಭಿನ್ನವಾಗಿತ್ತು. ಗ್ರೀಸ್ನಲ್ಲಿ ನಮ್ಮ ಕೆಲಸವು ನಿಷೇಧಿಸಲ್ಪಟ್ಟಿದ್ದುದ್ದರಿಂದ ನಾವು ಕಾಡುಗಳಲ್ಲಿ ಗುಪ್ತವಾಗಿ ಸೇರಿಬರಬೇಕಾಗಿತ್ತು. 1965ರ ಅಂತ್ಯ ಭಾಗದಲ್ಲಿ, ನಮ್ಮನ್ನು ಅಥೇನ್ಸ್ನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿನಲ್ಲಿ ಕೆಲಸಮಾಡಲು ಆಮಂತ್ರಿಸಲಾಯಿತು. ಆದರೆ ನನ್ನ ಕೆಲವು ಸಂಬಂಧಿಕರ ಆರೋಗ್ಯ ಸಮಸ್ಯೆಗಳಿಂದಾಗಿ, ನಾವು 1967ರಲ್ಲಿ ಥೆಸಲೊನೀಕಕ್ಕೆ ಹಿಂದಿರುಗಬೇಕಾಯಿತು.
ಕುಟುಂಬದ ಜವಾಬ್ದಾರಿಗಳನ್ನು ಪರಾಮರಿಸುತ್ತಿರುವಾಗ, ನಾವು ಸುವಾರ್ತಾ ಕೆಲಸದಲ್ಲಿ ತುಂಬ ಕಾರ್ಯಮಗ್ನರಾಗಿದ್ದೆವು. ಒಂದು ಸಮಯದಲ್ಲಿ, ನನ್ನ ಸೋದರಸಂಬಂಧಿಯಾದ ಕೊಸ್ಟಾಸ್ನೊಂದಿಗೆ ಮಾತಾಡುತ್ತಿದ್ದಾಗ, ದೇವರ ಸಂಸ್ಥೆಯ ಸೊಬಗು, ಮತ್ತು ಅದರಲ್ಲಿರುವ ಪ್ರೀತಿ, ಐಕ್ಯ, ಮತ್ತು ದೇವರ ಕಡೆಗಿನ ವಿಧೇಯತೆಯನ್ನು ಅವನಿಗೆ ವರ್ಣಿಸಿದೆ. ಅವನಂದದ್ದು, “ದೇವರು ಅಸ್ತಿತ್ವದಲ್ಲಿ ಇರುತ್ತಿದ್ದಲ್ಲಿ ಮಾತ್ರ ಇದೆಲ್ಲವೂ ತುಂಬ ಚೆನ್ನಾಗಿರುತ್ತಿತ್ತು.” ದೇವರು ಇದ್ದಾನೊ ಇಲ್ಲವೊ ಎಂಬುದನ್ನು ಪರೀಕ್ಷಿಸಿ ನೋಡಲು ನಾನು ನೀಡಿದ ಆಮಂತ್ರಣವನ್ನು ಅವನು ಸ್ವೀಕರಿಸಿದನು. 1969ರ ಆಗಸ್ಟ್ ತಿಂಗಳಿನಲ್ಲಿ ನಾವು ಜರ್ಮನಿಯ ನ್ಯೂರೆಮ್ಬರ್ಗ್ನಲ್ಲಿರುವ ಯೆಹೋವನ ಸಾಕ್ಷಿಗಳ ಒಂದು ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಹಾಜರಾಗುತ್ತಿರುವೆವು ಎಂದು ನಾನು ತಿಳಿಸಿದೆ. ನಾನು ನಿಮ್ಮೊಂದಿಗೆ ಜೊತೆಗೂಡಬಹುದೊ ಎಂದು ಅವನು ಕೇಳಿದನು, ಮತ್ತು ನಮ್ಮೊಂದಿಗೆ ಬೈಬಲನ್ನು ಅಭ್ಯಾಸಿಸುತ್ತಿದ್ದ ಅವನ ಸ್ನೇಹಿತನಾದ ಆಲೆಕಾಸ್ ಕೂಡ ನಮ್ಮೊಂದಿಗೆ ಬರಲು ಇಚ್ಛಿಸಿದನು.
ನ್ಯೂರೆಮ್ಬರ್ಗ್ ಅಧಿವೇಶನವು ತುಂಬ ವಿಶೇಷವಾದದ್ದಾಗಿತ್ತು! ಹಿಟ್ಲರನು ತನ್ನ ಮಿಲಿಟರಿ ವಿಜಯೋತ್ಸವಗಳನ್ನು ಆಚರಿಸುತ್ತಿದ್ದ ದೊಡ್ಡ ಸ್ಟೇಡಿಯಮ್ನಲ್ಲೇ ಆ ಅಧಿವೇಶನವು ನಡಿಸಲ್ಪಟ್ಟಿತು. ನಮ್ಮ ಹಾಜರಿಯು, 1,50,000ಕ್ಕಿಂತಲೂ ಹೆಚ್ಚು ಜನರ ಉಚ್ಚಾಂಕವನ್ನು ತಲಪಿತು ಮತ್ತು ಯೆಹೋವನ ಆತ್ಮವು ಇಡೀ ಕಾರ್ಯಕಲಾಪಗಳಲ್ಲಿ ತೋರಿಬಂತು. ತದನಂತರ ಸ್ವಲ್ಪ ಸಮಯದೊಳಗೆ, ಕೊಸ್ಟಾಸ್ ಮತ್ತು ಆಲೆಕಾಸ್ ದೀಕ್ಷಾಸ್ನಾನ ಹೊಂದಿದರು. ಅವರಿಬ್ಬರೂ ಈಗ ಕ್ರೈಸ್ತ ಹಿರಿಯರಾಗಿ ಸೇವೆಸಲ್ಲಿಸುತ್ತಿದ್ದಾರೆ ಮತ್ತು ಅವರ ಕುಟುಂಬಗಳು ಕೂಡ ಸಾಕ್ಷಿಗಳಾಗಿದ್ದಾರೆ.
ಒಬ್ಬ ಆಸಕ್ತ ಮಹಿಳೆಯೊಂದಿಗೆ ನಾನು ಅಭ್ಯಾಸವನ್ನು ಮಾಡಲಾರಂಭಿಸಿದೆ. ಅವಳ ಗಂಡನು, ನಮ್ಮ ನಂಬಿಕೆಗಳನ್ನು ಪರೀಕ್ಷಿಸಲು ಬಯಸುತ್ತೇನೆಂದು ಹೇಳಿದನು. ಸ್ವಲ್ಪ ಸಮಯದ ನಂತರ ಅವನು, ಒಬ್ಬ ಗ್ರೀಕ್ ಆರ್ತೊಡಾಕ್ಸ್ ದೇವತಾಶಾಸ್ತ್ರಜ್ಞನಾದ ಶ್ರೀ. ಸಾಕೊಸ್ರನ್ನು ಒಂದು ಚರ್ಚೆಗಾಗಿ ಆಮಂತ್ರಿಸಿದ್ದೇನೆಂದು ನನಗೆ ಹೇಳಿದನು. ಆ ಗಂಡನು ನಮ್ಮಿಬ್ಬರಿಗೂ ಕೆಲವು ಪ್ರಶ್ನೆಗಳನ್ನು ಕೇಳಬಯಸಿದನು. ಶ್ರೀ. ಸಾಕೊಸ್, ಒಬ್ಬ ಪಾದ್ರಿಯೊಂದಿಗೆ ಬಂದನು. ಆ ಮಹಿಳೆಯ ಗಂಡನು ಹೀಗೆ ಹೇಳುತ್ತಾ ಆರಂಭಿಸಿದನು: “ಪ್ರಥಮವಾಗಿ, ಶ್ರೀ. ಸಾಕೊಸ್ ಮೂರು ಪ್ರಶ್ನೆಗಳನ್ನು ಉತ್ತರಿಸುವಂತೆ ನಾನು ಬಯಸುತ್ತೇನೆ.”
ನಮ್ಮ ಚರ್ಚೆಗಳಲ್ಲಿ ನಾವು ಉಪಯೋಗಿಸುತ್ತಿದ್ದ ಬೈಬಲ್ ಭಾಷಾಂತರವನ್ನು ಎತ್ತಿಹಿಡಿಯುತ್ತಾ, ಅವನು ಕೇಳಿದ್ದು: “ಒಂದನೆಯ ಪ್ರಶ್ನೆ: ಇದು ಒಂದು ನೈಜ ಬೈಬಲ್ ಆಗಿದೆಯೊ ಅಥವಾ ಇದು ಈ ಸಾಕ್ಷಿಗಳ ಬೈಬಲ್ ಆಗಿದೆಯೊ?” ಅದೊಂದು ಅಧಿಕೃತ ಭಾಷಾಂತರವಾಗಿದೆಯೆಂದು ಶ್ರೀ. ಸಾಕೊಸ್ ಉತ್ತರಿಸಿದರು, ಮತ್ತು ಅವರು ಯೆಹೋವನ ಸಾಕ್ಷಿಗಳನ್ನು “ಬೈಬಲ್ ಪ್ರಿಯರು” ಎಂದು ಕೂಡ ವರ್ಣಿಸಿದರು.
ಮನೆಯವನು ಮುಂದುವರಿಸುತ್ತಾ ಕೇಳಿದ್ದು: “ಎರಡನೆಯ ಪ್ರಶ್ನೆ: ಯೆಹೋವನ ಸಾಕ್ಷಿಗಳು ಸುನಡತೆಯುಳ್ಳವರೊ?” ವಾಸ್ತವದಲ್ಲಿ, ಅವನು ತನ್ನ ಹೆಂಡತಿಯು ಯಾವ ರೀತಿಯ ಜನರೊಂದಿಗೆ ಸಹವಾಸಿಸುತ್ತಿದ್ದಾಳೆಂದು ತಿಳಿಯಬಯಸಿದ್ದನು. ಅವರು ಖಂಡಿತವಾಗಿಯೂ ಸುನಡತೆಯವರಾಗಿದ್ದಾರೆಂದು ಆ ದೇವತಾಶಾಸ್ತ್ರಜ್ಞನು ಉತ್ತರಿಸಿದನು.
ಅವನು ಮುಂದುವರಿದು ಕೇಳಿದ್ದು: “ಮೂರನೆಯ ಪ್ರಶ್ನೆ, ಯೆಹೋವನ ಸಾಕ್ಷಿಗಳಿಗೆ ಸಂಬಳ ಸಿಗುತ್ತದೊ?” “ಇಲ್ಲ” ಎಂದು ಆ ದೇವತಾಶಾಸ್ತ್ರಜ್ಞನು ಉತ್ತರಿಸಿದನು.
“ನನ್ನ ಪ್ರಶ್ನೆಗಳಿಗೆ ಉತ್ತರಗಳು ಸಿಕ್ಕಿವೆ, ಮತ್ತು ನಾನು ನನ್ನ ನಿರ್ಣಯವನ್ನು ಮಾಡಿದ್ದೇನೆ,” ಎಂದು ಆ ಮನುಷ್ಯನು ಸಮಾಪ್ತಿಗೊಳಿಸಿದನು. ತದನಂತರ ಅವನು ತನ್ನ ಬೈಬಲ್ ಅಭ್ಯಾಸವನ್ನು ಮುಂದುವರಿಸಿದನು ಮತ್ತು ಬೇಗನೆ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೋಪಾದಿ ದೀಕ್ಷಾಸ್ನಾನಪಡೆದುಕೊಂಡನು.
ಒಂದು ಸಮೃದ್ಧ, ಪ್ರತಿಫಲದಾಯಕ ಜೀವನ
ಜನವರಿ 1976ರಲ್ಲಿ ನಾನು ಪುನಃ ಒಬ್ಬ ಸರ್ಕಿಟ್ ಮೇಲ್ವಿಚಾರಕನೋಪಾದಿ ಸೇವೆಸಲ್ಲಿಸಲಾರಂಭಿಸಿದೆ. ಸುಮಾರು ಆರು ವರ್ಷಗಳ ಬಳಿಕ, ಗ್ರೀಸ್ನಲ್ಲಿ ಒಂದು ಹೊಸ ರೀತಿಯ ಸಾರುವಿಕೆಯನ್ನು ಮುಂದೂಡುವುದರಲ್ಲಿ ಪಾಲ್ಗೊಳ್ಳುವ ಸುಯೋಗ ನನಗಿತ್ತು—ಅದು ಬೀದಿ ಸಾಕ್ಷಿಕಾರ್ಯವಾಗಿತ್ತು. ಆನಂತರ, 1991ರ ಅಕ್ಟೋಬರ್ ತಿಂಗಳಿನಲ್ಲಿ, ನನ್ನ ಹೆಂಡತಿ ಮತ್ತು ನಾನು ವಿಶೇಷ ಪಯನೀಯರರಾಗಿ ಸೇವೆಸಲ್ಲಿಸಲಾರಂಭಿಸಿದೆವು. ಕೆಲವು ತಿಂಗಳುಗಳ ಬಳಿಕ, ನಾನು ಕ್ವಾಡ್ರಪಲ್ ಬೈಪಾಸ್ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಆ ಶಸ್ತ್ರಚಿಕಿತ್ಸೆಯು ಯಶಸ್ವಿಯಾಯಿತು. ಈಗ ನನ್ನ ಆರೋಗ್ಯವು ಸಾಧಾರಣಮಟ್ಟಿಗೆ ಪರವಾಗಿಲ್ಲ, ಮತ್ತು ನಾನು ಪುನಃ ಪೂರ್ಣ ಸಮಯದ ಕೆಲಸವನ್ನು ಆರಂಭಿಸಲು ಶಕ್ತನಾಗಿದ್ದೇನೆ. ಥೆಸಲೊನೀಕದಲ್ಲಿರುವ ಸಭೆಗಳಲ್ಲೊಂದರಲ್ಲಿ ನಾನು ಒಬ್ಬ ಹಿರಿಯನಾಗಿಯೂ ಸೇವೆಸಲ್ಲಿಸುತ್ತಿದ್ದೇನೆ, ಮತ್ತು ವೈದ್ಯಕೀಯ ಅಗತ್ಯಗಳಿರುವವರಿಗೆ ನೆರವು ನೀಡಲು ಸ್ಥಳಿಕ ಹಾಸ್ಪಿಟಲ್ ಲೈಅಸನ್ ಕಮಿಟಿಯೊಂದಿಗೆ ಕೆಲಸಮಾಡುತ್ತೇನೆ.
ನನ್ನ ಜೀವನವನ್ನು ಹಿಂದಿರುಗಿ ನೋಡುವಾಗ, ನನ್ನ ಸ್ವರ್ಗೀಯ ತಂದೆಗೆ ಮೆಚ್ಚುವಂತಹ ಕೆಲಸವನ್ನು ಮಾಡುವುದು ಎಷ್ಟು ತೃಪ್ತಿದಾಯಕವಾಗಿದೆ ಎಂಬುದು ನನಗೆ ಅರಿವಾಗುತ್ತದೆ. “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವದು” ಎಂಬ ಆತನ ಮನಸೆಳೆಯುವ ಆಮಂತ್ರಣವನ್ನು ನಾನು ತುಂಬ ಸಮಯದ ಹಿಂದೆಯೇ ಸ್ವೀಕರಿಸಿದ್ದಕ್ಕೆ ನಾನು ಹರ್ಷಿಸುತ್ತೇನೆ. (ಜ್ಞಾನೋಕ್ತಿ 27:11) ಯೆಹೋವನ ಸಂಸ್ಥೆಯೊಳಗೆ ಬರುತ್ತಿರುವ ಪ್ರಾಮಾಣಿಕ ಜನರ ಸಂಖ್ಯೆಯಲ್ಲಿನ ವೃದ್ಧಿಯನ್ನು ನೋಡಿ ನನಗೆ ನಿಜವಾಗಿಯೂ ಆನಂದವಾಗುತ್ತದೆ. ಬೈಬಲ್ ಸತ್ಯದ ಮೂಲಕ ಜನರನ್ನು ಬಿಡುಗಡೆಗೊಳಿಸುವುದರಲ್ಲಿ ಪಾಲ್ಗೊಳ್ಳುವುದು, ಮತ್ತು ಈ ರೀತಿಯಲ್ಲಿ ಒಂದು ನೀತಿಯ ಹೊಸ ಲೋಕದಲ್ಲಿ ನಿತ್ಯ ಜೀವದ ಪ್ರತೀಕ್ಷೆಯನ್ನು ಅವರಿಗೆ ಲಭ್ಯಗೊಳಿಸುವುದು, ನಿಜವಾಗಿಯೂ ಒಂದು ಸುಯೋಗವಾಗಿದೆ!—ಯೋಹಾನ 8:32; 2 ಪೇತ್ರ 3:13.
ಯೆಹೋವನ ಯುವ ಸೇವಕರು, ಪೂರ್ಣ ಸಮಯದ ಶುಶ್ರೂಷೆಯನ್ನು ತಮ್ಮ ಗುರಿಯನ್ನಾಗಿ ಇಡಲು, ತಮ್ಮ ಸಮಯ ಮತ್ತು ಬಲವನ್ನು ಆತನಿಗೆ ಕೊಡುವಂತೆ ನಾವು ಯಾವಾಗಲೂ ಉತ್ತೇಜಿಸುತ್ತೇವೆ. ನಿಜವಾಗಿಯೂ, ಯೆಹೋವನಲ್ಲಿ ಭರವಸೆಯಿಡುವುದು ಮತ್ತು ಆತನ ಹೃದಯವನ್ನು ಸಂತೋಷಪಡಿಸುವುದರಲ್ಲಿ ಉತ್ಕೃಷ್ಟ ಆನಂದವನ್ನು ಕಂಡುಕೊಳ್ಳುವುದು, ಒಬ್ಬ ವ್ಯಕ್ತಿಯು ಆನಂದಿಸಸಾಧ್ಯವಿರುವ ಅತಿ ಸಂತೃಪ್ತಿಕರವಾದ ಜೀವನವಾಗಿದೆ!—ಜ್ಞಾನೋಕ್ತಿ 3:5; ಪ್ರಸಂಗಿ 12:1.
[ಪುಟ 21 ರಲ್ಲಿರುವ ಚಿತ್ರ]
(ಎಡದಿಂದ ಬಲಕ್ಕೆ)
1965ರಲ್ಲಿ ಬೆತೆಲ್ ಅಡುಗೆಮನೆಯಲ್ಲಿ ಕೆಲಸಮಾಡುತ್ತಿರುವುದು
ನಮ್ಮ ಸಾರುವ ಕೆಲಸವು ನಿಷೇಧಿಸಲ್ಪಟ್ಟಾಗ 1970ರಲ್ಲಿ ಒಂದು ಭಾಷಣವನ್ನು ಕೊಡುತ್ತಿರುವುದು
1959ರಲ್ಲಿ ನನ್ನ ಹೆಂಡತಿಯೊಂದಿಗೆ
[ಪುಟ 23 ರಲ್ಲಿರುವ ಚಿತ್ರ]
ನನ್ನ ಹೆಂಡತಿ ಕೂಲಾಳೊಂದಿಗೆ