ಕ್ರಿಸ್ತನನ್ನು ಕ್ರಿಸ್ಮಸ್ನಿಂದ ಹೊರಗಿಡಲಾಗಿದೆಯೊ?
“ಕ್ರಿಸ್ಮಸ್ ಹಬ್ಬದ ಸಂಭ್ರಮೋತ್ಸವಗಳನ್ನು ನನಗೆ ಒಪ್ಪಿಕೊಳ್ಳಲು ಆಗುವುದೇ ಇಲ್ಲ. ಅವುಗಳಿಗೆ ಯೇಸುವಿನ ಜೀವನ ಮತ್ತು ಬೋಧನೆಗಳೊಂದಿಗೆ ಹೊಂದಿಕೆಯೇ ಇಲ್ಲವೆಂದು ನನಗೆ ತೋರುತ್ತದೆ.”—ಮೋಹನ್ದಾಸ್ ಕೆ. ಗಾಂಧಿ.
ಅನೇಕರು ಗಾಂಧಿಯವರ ಈ ಹೇಳಿಕೆಯನ್ನು ಒಪ್ಪುವುದೇ ಇಲ್ಲ. ‘ಒಬ್ಬ ಹಿಂದೂ ರಾಜನೀತಿಜ್ಞನಿಗೆ ಕ್ರೈಸ್ತರ ಹಬ್ಬದ ಕುರಿತಾಗಿ ಏನು ಗೊತ್ತಿರುತ್ತದೆ?’ ಎಂದು ಅವರು ನೆನಸಬಹುದು. ಆದರೆ, ಕ್ರಿಸ್ಮಸ್ ಹಬ್ಬವನ್ನು ಲೋಕದಾದ್ಯಂತ ಆಚರಿಸಲಾಗುತ್ತಿದ್ದು, ಅದು ಎಲ್ಲ ಸಂಸ್ಕೃತಿಗಳನ್ನು ಪ್ರಭಾವಿಸಿದೆ ಎಂಬುದು ಒಪ್ಪತಕ್ಕ ವಿಷಯವೇ. ಪ್ರತಿವರ್ಷ ಡಿಸೆಂಬರ್ ತಿಂಗಳಿನಲ್ಲಿ, ಈ ಹಬ್ಬವನ್ನು ಪ್ರತಿಯೊಂದು ಸಂಸ್ಕೃತಿಯಲ್ಲೂ ಆಚರಿಸಲಾಗುತ್ತಿರುವಂತೆ ತೋರುತ್ತದೆ.
ಉದಾಹರಣೆಗಾಗಿ, ಸುಮಾರು 14 ಕೋಟಿ 5 ಲಕ್ಷ ಏಷಿಯನರು ಕ್ರಿಸ್ಮಸನ್ನು ಆಚರಿಸುತ್ತಾರೆ. ಒಂದು ದಶಕಕ್ಕೆ ಹಿಂದಿನ ಸಮಯಕ್ಕಿಂತ ನಾಲ್ಕು ಕೋಟಿ ಹೆಚ್ಚು ಜನರು ಈಗ ಅದನ್ನು ಆಚರಿಸುತ್ತಾರೆ. ಗಾಂಧಿಯವರು “ಸಂಭ್ರಮೋತ್ಸವಗಳು” ಎಂದು ಹೇಳಿದಾಗ, ಅವರು ಆಧುನಿಕ ದಿನದ ಕ್ರಿಸ್ಮಸ್ನ ಪ್ರಾಪಂಚಿಕ ಅಂಶವನ್ನು, ಅಂದರೆ ನಾವೆಲ್ಲರೂ ನೋಡಬಹುದಾದ ಹುಚ್ಚುಹುಚ್ಚಿನ ಖರೀದಿಯನ್ನು ಅರ್ಥೈಸುತ್ತಿದ್ದಲ್ಲಿ, ಕ್ರಿಸ್ಮಸ್ ಆಚರಣೆಯಲ್ಲಿ ಈ ಅಂಶವೇ ಅನೇಕವೇಳೆ ಹೆಚ್ಚು ಪ್ರಾಮುಖ್ಯವಾಗಿರುತ್ತದೆ ಎಂಬ ಮಾತನ್ನು ನಾವು ನಿರಾಕರಿಸಲಾರೆವು. ಏಷಿಯವೀಕ್ ಎಂಬ ಪತ್ರಿಕೆಯು ತಿಳಿಸುವುದು: “ಏಷಿಯದಲ್ಲಿ ಕ್ರಿಸ್ಮಸ್ ಹಬ್ಬವು—ಹಾಂಗ್ಕಾಂಗ್ನಲ್ಲಿನ ಹಬ್ಬದ ದೀಪಗಳಿಂದ ಹಿಡಿದು, ಬೀಜಿಂಗ್ನಲ್ಲಿನ ಹೋಟೇಲ್ ಲಾಬಿಗಳಲ್ಲಿರುವ ದೊಡ್ಡ ಕ್ರಿಸ್ಮಸ್ ಮರಗಳು ಮತ್ತು ಸಿಂಗಾಪುರ್ನಲ್ಲಿನ ಮುಖ್ಯ ನಗರದಲ್ಲಿರುವ ಕ್ರಿಸ್ಮಸ್ ಗೋದಲಿಯ ವರೆಗೆ—ಬಹುಮಟ್ಟಿಗೆ ಒಂದು ಐಹಿಕ (ಮುಖ್ಯವಾಗಿ ಮಾರಾಟದ) ಘಟನೆಯಾಗಿದೆ.”
ಆಧುನಿಕ ಸಮಯದಲ್ಲಿನ ಕ್ರಿಸ್ಮಸ್ ಹಬ್ಬದ ಆಚರಣೆಯಿಂದ ಕ್ರಿಸ್ತನನ್ನು ಹೊರಗಿಡಲಾಗಿದೆಯೊ? ಸಾ.ಶ. ನಾಲ್ಕನೆಯ ಶತಮಾನದಿಂದ, ಡಿಸೆಂಬರ್ 25ರಂದು ಕ್ರಿಸ್ಮಸನ್ನು ಅಧಿಕೃತವಾಗಿ ಆಚರಿಸಲಾಗುತ್ತಿದೆ. ಆ ಶತಮಾನದಲ್ಲಿ, ರೋಮನ್ ಕ್ಯಾಥೊಲಿಕ್ ಚರ್ಚು ಆ ದಿನವನ್ನು ಯೇಸುವಿನ ಜನನದ ಧಾರ್ಮಿಕ ಆಚರಣೆಗಾಗಿ ಗೊತ್ತುಪಡಿಸಿತು. ಆದರೆ ಅಮೆರಿಕದಲ್ಲಿ ನಡೆಸಲ್ಪಟ್ಟ ಇತ್ತೀಚಿನ ಸಮೀಕ್ಷೆಗನುಸಾರ, ಕ್ರಿಸ್ಮಸ್ ಹಬ್ಬದ ಮುಖ್ಯ ಅಂಶವು ಕ್ರಿಸ್ತನ ಜನನವಾಗಿದೆಯೆಂದು, ಕೇವಲ 33 ಪ್ರತಿಶತ ಮಂದಿಗೆ ಅನಿಸಿತು.
ನೀವೇನು ನೆನಸುತ್ತೀರಿ? ಖರೀದಿಸುವಂತೆ ಒತ್ತಾಯಪಡಿಸುವ ಜಾಹೀರಾತುಗಳು, ಉಡುಗೊರೆಗಳ ಗಡಿಬಿಡಿಯ ಖರೀದಿ, ಕ್ರಿಸ್ಮಸ್ ಮರಗಳನ್ನು ಶೃಂಗರಿಸುವುದು, ಪಾರ್ಟಿಗಳನ್ನು ಏರ್ಪಡಿಸಿ ಅವುಗಳಿಗೆ ಹಾಜರಾಗುವುದು, ಕಾರ್ಡುಗಳನ್ನು ಕಳುಹಿಸುವುದು—ಈ ಎಲ್ಲ ಸಡಗರದ ನಡುವೆ ಯೇಸುವನ್ನು ಹೇಗೊ ಅಲಕ್ಷಿಸಲಾಗಿದೆಯೆಂದು ನಿಮಗೆ ಕೆಲವೊಮ್ಮೆ ಅನಿಸುತ್ತದೊ?
ಕ್ರಿಸ್ತನಿಗೆ ಕ್ರಿಸ್ಮಸ್ನಲ್ಲಿ ಮಹತ್ವವನ್ನು ಕೊಡುವ ಒಂದು ವಿಧವು, ಯೇಸುವಿನ ಜನನದ ಗೋದಲಿ ದೃಶ್ಯವನ್ನು ಪ್ರದರ್ಶಿಸುವುದು ಆಗಿದೆಯೆಂದು ಅನೇಕರಿಗನಿಸುತ್ತದೆ. ಗೋದಲಿಯಲ್ಲಿರುವ ಮಗು ಯೇಸುವಿನ ಸುತ್ತಲೂ ನಿಂತಿರುವ, ಮರಿಯ, ಯೋಸೇಫ, ಕೆಲವು ಕುರುಬರು, “ಮೂವರು ಜ್ಞಾನಿ ಪುರುಷರು,” ಅಥವಾ “ಮೂವರು ಅರಸರು,” ಕೆಲವು ದನಕರುಗಳು, ಮತ್ತು ಕೆಲವು ಪ್ರೇಕ್ಷಕರನ್ನು ಪ್ರತಿನಿಧಿಸುವ ಕೆಲವೊಂದು ಮೂರ್ತಿಗಳನ್ನು ನೀವು ನೋಡಿದ್ದಿರಬಹುದು. ಈ ಗೋದಲಿಗಳು, ಜನರಿಗೆ ಕ್ರಿಸ್ಮಸ್ ಹಬ್ಬದ ನಿಜಾರ್ಥವನ್ನು ಜ್ಞಾಪಿಸಿಕೊಳ್ಳಲು ಸಹಾಯಮಾಡುತ್ತವೆಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಯು.ಎಸ್. ಕ್ಯಾಥೊಲಿಕ್ ಪತ್ರಿಕೆಗನುಸಾರ, “ಒಂದು ಗೋದಲಿಯು, ಯಾವುದೇ ಒಂದು ಸುವಾರ್ತಾ ಪುಸ್ತಕವು ಕೊಡಸಾಧ್ಯವಿರುವುದಕ್ಕಿಂತಲೂ ಹೆಚ್ಚು ಪೂರ್ಣವಾದ ಚಿತ್ರಣವನ್ನು ಕೊಡುತ್ತದೆ. ಆದರೆ ಅದೇ ಸಮಯದಲ್ಲಿ ಅದು ಈ ಕಥನಗಳ ಐತಿಹಾಸಿಕವಲ್ಲದ ವೈಶಿಷ್ಟ್ಯವನ್ನು ಎತ್ತಿತೋರಿಸುತ್ತದೆ.”
ಆದರೆ ಒಂದು ಕ್ರಿಸ್ಮಸ್ ಗೋದಲಿಯ ದೃಶ್ಯವು, ಬೈಬಲಿನ ಸುವಾರ್ತಾ ವೃತ್ತಾಂತಗಳು ಐತಿಹಾಸಿಕವಲ್ಲ ಎಂಬುದನ್ನು ಹೇಗೆ ಸೂಚಿಸಸಾಧ್ಯವಿದೆ? ಆಕರ್ಷಕವಾಗಿ ಪೆಯಿಂಟ್ ಮಾಡಲ್ಪಟ್ಟಿರುವ ಚಿಕ್ಕ ಮೂರ್ತಿಗಳು, ಕ್ರಿಸ್ತನ ಜನನವು ಒಂದು ಪುರಾಣ ಕಥೆ ಅಥವಾ ಕಟ್ಟು ಕಥೆಯಾಗಿರುವುದರ ಅಭಿಪ್ರಾಯವನ್ನು ಮೂಡಿಸುತ್ತವೆ. 13ನೆಯ ಶತಮಾನದಲ್ಲಿ ಒಬ್ಬ ಸಂನ್ಯಾಸಿಯಿಂದ ಈ ಗೋದಲಿ ದೃಶ್ಯವು ಜನಪ್ರಿಯಗೊಳಿಸಲ್ಪಟ್ಟಾಗ, ಅದು ಒಂದು ಆಡಂಬರದ ಸಂಗತಿಯಾಗಿರಲಿಲ್ಲ. ಆದರೆ ಇಂದು, ಈ ಹಬ್ಬದೊಂದಿಗೆ ಸಂಬಂಧಿಸಿರುವ ಇತರ ಸಂಗತಿಗಳಂತೆಯೇ, ಈ ಕ್ರಿಸ್ಮಸ್ ಗೋದಲಿಗಳು ಒಂದು ದೊಡ್ಡ ವ್ಯಾಪಾರವಾಗಿ ಬಿಟ್ಟಿವೆ. ಇಟಲಿಯ ನೇಪಲ್ಸ್ನಲ್ಲಿ, ಅಂಗಡಿಗಳು ಇಡೀ ವರ್ಷ ಗೋದಲಿ ದೃಶ್ಯಗಳಿಗಾಗಿ ಅಥವಾ ಪ್ರೆಸೆಪಿಗಾಗಿ ಮೂರ್ತಿಗಳನ್ನು ಮಾರಾಟಮಾಡುತ್ತವೆ. ಹೆಚ್ಚು ಜನಪ್ರಿಯವಾದ ಮೂರ್ತಿಗಳು, ಸುವಾರ್ತಾ ವೃತ್ತಾಂತಗಳಲ್ಲಿರುವ ವ್ಯಕ್ತಿಗಳನ್ನಲ್ಲ ಬದಲಾಗಿ, ರಾಜಕುಮಾರಿ ಡಯಾನಾ, ಮದರ್ ತೆರೆಸಾ, ಮತ್ತು ಬಟ್ಟೆ ವಿನ್ಯಾಸಕನಾದ ಜಾನಿ ವರ್ಸಾಚೆಯಂತಹ ಆಧುನಿಕ ದಿನದ ಹೆಸರಾಂತ ವ್ಯಕ್ತಿಗಳನ್ನು ಪ್ರತಿನಿಧಿಸುತ್ತವೆ. ಬೇರೆ ಕಡೆಗಳಲ್ಲಿ, ಪ್ರೆಸೆಪಿಯನ್ನು ಚಾಕಲೇಟ್, ಪಾಸ್ಟ ಮತ್ತು ಸಮುದ್ರದ ಚಿಪ್ಪುಗಳಿಂದಲೂ ತಯಾರಿಸಲಾಗುತ್ತದೆ. ಇಂತಹ ಗೋದಲಿ ಪ್ರದರ್ಶನಗಳಲ್ಲಿ ಐತಿಹಾಸಿಕತೆಯನ್ನು ಕಾಣುವುದು ಏಕೆ ಕಷ್ಟಕರವೆಂಬುದು ನಿಮಗೆ ಈಗ ಅರ್ಥವಾಗಬಹುದು.
ಹಾಗಾದರೆ, ಇಂತಹ ಗೋದಲಿಗಳು “ಯಾವುದೇ ಒಂದು ಸುವಾರ್ತಾ ಪುಸ್ತಕವು ಕೊಡಸಾಧ್ಯವಿರುವುದಕ್ಕಿಂತಲೂ ಹೆಚ್ಚು ಪೂರ್ಣವಾದ ಚಿತ್ರಣವನ್ನು ಕೊಡು”ವುದು ಹೇಗೆ? ಸುವಾರ್ತಾ ವೃತ್ತಾಂತಗಳು ನಿಜವಾಗಿ ಐತಿಹಾಸಿಕವಲ್ಲವೊ? ಹಾಗಿರಲಿಕ್ಕಿಲ್ಲ, ಯಾಕಂದರೆ ಪಕ್ಕಾ ಸಂದೇಹವಾದಿಗಳು ಕೂಡ, ಯೇಸು ಒಬ್ಬ ನೈಜ, ಐತಿಹಾಸಿಕ ವ್ಯಕ್ತಿಯಾಗಿದ್ದನೆಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದುದರಿಂದ ಅವನು ಒಂದು ಸಮಯದಲ್ಲಿ ಒಂದು ನೈಜ ಮಗುವಿನೋಪಾದಿ, ಒಂದು ನೈಜ ಸ್ಥಳದಲ್ಲಿ ಜನಿಸಿರಲೇಬೇಕು. ಅವನ ಜನನದ ಸಮಯದಲ್ಲಿ ನಡೆದಂತಹ ಘಟನೆಗಳ ಕುರಿತಾದ ಹೆಚ್ಚು ಪೂರ್ಣವಾದ ಚಿತ್ರಣವನ್ನು ಪಡೆಯಲು, ಒಂದು ಗೋದಲಿಯ ದೃಶ್ಯವನ್ನು ಕೇವಲ ದಿಟ್ಟಿಸಿನೋಡುವುದಕ್ಕಿಂತಲೂ ಹೆಚ್ಚು ಉತ್ತಮವಾದ ಮಾರ್ಗವು ಖಂಡಿತವಾಗಿಯೂ ಇರಲೇಬೇಕು!
ವಾಸ್ತವದಲ್ಲಿ ಅಂತಹ ಮಾರ್ಗವು ಇದೆ. ಇಬ್ಬರು ಇತಿಹಾಸಗಾರರು, ಯೇಸುವಿನ ಜನನದ ಕುರಿತಾಗಿ ತಮ್ಮದೇ ಆದ ವೃತ್ತಾಂತಗಳನ್ನು ಬರೆದರು. ಕ್ರಿಸ್ಮಸ್ ಸಮಯದಲ್ಲಿ ಕ್ರಿಸ್ತನನ್ನು ಬಹುಮಟ್ಟಿಗೆ ಅಲಕ್ಷಿಸಲಾಗಿದೆಯೆಂದು ನಿಮಗೆ ಕೆಲವೊಮ್ಮೆ ಅನಿಸುವಲ್ಲಿ, ಈ ವೃತ್ತಾಂತಗಳನ್ನು ನೀವಾಗಿಯೇ ಏಕೆ ಪರಿಶೀಲಿಸಿ ನೋಡಬಾರದು? ಅವುಗಳಲ್ಲಿ ಪುರಾಣಕಥೆಗಳು ಅಥವಾ ಐತಿಹ್ಯಗಳ ಬದಲಾಗಿ, ಒಂದು ಆಕರ್ಷಕ ಕಥೆ, ಅಂದರೆ, ಯೇಸುವಿನ ಜನನದ ಕುರಿತಾದ ನಿಜವಾದ ಕಥೆಯಿರುವುದನ್ನು ನೀವು ಕಂಡುಕೊಳ್ಳುವಿರಿ.
[ಪುಟ 3 ರಲ್ಲಿರುವ ಚಿತ್ರ ಕೃಪೆ]
3-6, 8, ಮತ್ತು 9ನೆಯ ಪುಟಗಳಲ್ಲಿರುವ ಬಾರ್ಡರ್: Fifty Years of Soviet Art