ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 7/15 ಪು. 24-25
  • ಫಿಲಿಪ್ಪ—ಹುರುಪುಳ್ಳ ಸೌವಾರ್ತಿಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಫಿಲಿಪ್ಪ—ಹುರುಪುಳ್ಳ ಸೌವಾರ್ತಿಕ
  • ಕಾವಲಿನಬುರುಜು—1999
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹೊಸ ಟೆರಿಟೊರಿಗಳನ್ನು ಆರಂಭಿಸುವುದು
  • ಫಿಲಿಪ್ಪನಿಗೆ ಕೊಡಲ್ಪಟ್ಟ ಇನ್ನೂ ಹೆಚ್ಚಿನ ಸುಯೋಗಗಳು
  • “ಯೇಸು ಬಗ್ಗೆ ಸಿಹಿಸುದ್ದಿ” ಸಾರೋಣ
    ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
  • ಪಯನೀಯರ್‌ ಆತ್ಮವನ್ನು ಪ್ರದರ್ಶಿಸಿರಿ
    2004 ನಮ್ಮ ರಾಜ್ಯದ ಸೇವೆ
  • ಫಿಲಿಪ್ಪನು ಐಥಿಯೋಪ್ಯದ ಒಬ್ಬ ಅಧಿಕಾರಿಗೆ ದೀಕ್ಷಾಸ್ನಾನ ಮಾಡಿಸುತ್ತಾನೆ
    ಕಾವಲಿನಬುರುಜು—1996
  • ಸ್ವಾಭಾವಿಕತೆ
    ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
ಇನ್ನಷ್ಟು
ಕಾವಲಿನಬುರುಜು—1999
w99 7/15 ಪು. 24-25

ಫಿಲಿಪ್ಪ—ಹುರುಪುಳ್ಳ ಸೌವಾರ್ತಿಕ

ಯಾರ ನಂಬಿಕೆಯು ಅನುಕರಣೆಗೆ ಯೋಗ್ಯವಾಗಿದೆಯೋ ಅಂತಹ ನಂಬಿಗಸ್ತ ಸ್ತ್ರೀಪುರುಷರ ಕುರಿತಾದ ಅನೇಕ ವೃತ್ತಾಂತಗಳು ಶಾಸ್ತ್ರವಚನಗಳಲ್ಲಿವೆ. ಉದಾಹರಣೆಗಾಗಿ, ಪ್ರಥಮ ಶತಮಾನದ ಕ್ರೈಸ್ತ ಮಿಷನೆರಿಯಾದ ಫಿಲಿಪ್ಪನನ್ನು ತೆಗೆದುಕೊಳ್ಳಿ. ಅವನು ಒಬ್ಬ ಅಪೊಸ್ತಲನಾಗಿರದಿದ್ದರೂ, ರಾಜ್ಯ ಸಂದೇಶವನ್ನು ವ್ಯಾಪಕವಾಗಿ ಸಾರುವುದರಲ್ಲಿ ಅವನನ್ನು ಹೆಚ್ಚು ಪ್ರಭಾವಯುತ ರೀತಿಯಲ್ಲಿ ಉಪಯೋಗಿಸಲಾಗಿತ್ತು. ವಾಸ್ತವದಲ್ಲಿ, ಫಿಲಿಪ್ಪನು “ಸೌವಾರ್ತಿಕ”ನೆಂದು ಸಹ ಪ್ರಸಿದ್ಧನಾಗಿದ್ದನು. (ಅ. ಕೃತ್ಯಗಳು 21:8) ಫಿಲಿಪ್ಪನಿಗೆ ಏಕೆ ಈ ಹೆಸರು ಬಂತು? ಮತ್ತು ನಾವು ಅವನಿಂದ ಯಾವ ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ?

ಬೈಬಲ್‌ ದಾಖಲೆಯಲ್ಲಿ ಫಿಲಿಪ್ಪನ ಹೆಸರು, ಸಾ.ಶ. 33ರ ಪಂಚಾಶತ್ತಮವಾದ ಸ್ವಲ್ಪ ಸಮಯದಲ್ಲೇ ಕಂಡುಬರುತ್ತದೆ. ಆ ಸಮಯದಲ್ಲಿ ಗ್ರೀಕ್‌ ಭಾಷೆಯನ್ನು ಮಾತಾಡುವ ಯೆಹೂದ್ಯರು, ಹೀಬ್ರು ಭಾಷೆಯನ್ನು ಮಾತಾಡುವ ಯೆಹೂದ್ಯರ ವಿರುದ್ಧ ಗುಣುಗುಟ್ಟಲಾರಂಭಿಸಿದರು ಮತ್ತು ದೈನಂದಿನ ಆಹಾರ ವಿತರಣೆಯಲ್ಲಿ ತಮ್ಮ ವಿಧವೆಯರನ್ನು ಕಡೆಗಣಿಸಲಾಗುತ್ತಿದೆ ಎಂದು ವಾದಿಸಿದರು. ಈ ಸಮಸ್ಯೆಯನ್ನು ಬಗೆಹರಿಸಲಿಕ್ಕಾಗಿ, ಅಪೊಸ್ತಲರು “ಒಳ್ಳೆಯ ಹೆಸರು ಪಡೆದುಕೊಂಡಿರುವ ಏಳು ಮಂದಿ ಪುರುಷರನ್ನು” ನೇಮಿಸಿದರು. ಆಯ್ಕೆಮಾಡಲ್ಪಟ್ಟ ಆ ಏಳು ಮಂದಿಯಲ್ಲಿ ಫಿಲಿಪ್ಪನೂ ಒಬ್ಬನಾಗಿದ್ದನು.—ಅ. ಕೃತ್ಯಗಳು 6:1-6.

ಆ ಏಳು ಮಂದಿ ಪುರುಷರು “ಒಳ್ಳೆಯ ಹೆಸರು ಪಡೆದುಕೊಂಡಿದ್ದರು.” ಅವರು “ಸತ್ಕೀರ್ತಿ ಪಡೆದ” ಜನರಾಗಿದ್ದರು ಎಂದು ಜೇಮ್ಸ್‌ ಮಾಫಟ್‌ರ ಭಾಷಾಂತರವು ಹೇಳುತ್ತದೆ. ಹೌದು, ಅವರು ಈ ನೇಮಕವನ್ನು ಪಡೆದುಕೊಂಡಂತಹ ಸಮಯದಲ್ಲಿ, ಈಗಾಗಲೇ ಅವರು ವ್ಯಾವಹಾರಿಕ ಪರಿಜ್ಞಾನವುಳ್ಳ ಆತ್ಮಿಕ ಪುರುಷರೆಂದು ಪ್ರಖ್ಯಾತರಾಗಿದ್ದರು. ಇಂದು ಕ್ರೈಸ್ತ ಮೇಲ್ವಿಚಾರಕರಾಗಿ ಸೇವೆಮಾಡುವವರ ವಿಷಯದಲ್ಲಿಯೂ ಇದು ಸತ್ಯವಾಗಿದೆ. ಅಂತಹ ಪುರುಷರು ಅವಸರದಿಂದ ನೇಮಿಸಲ್ಪಡುವುದಿಲ್ಲ. (1 ತಿಮೊಥೆಯ 5:22) ಅವರು ‘ಹೊರಗಣವರಿಂದ ಒಳ್ಳೆಯವರೆನಿಸಿಕೊಂಡಿರಬೇಕು’ ಮತ್ತು ಅವರು ವಿವೇಚನಾಶೀಲರೂ ಸ್ಥಿರಚಿತ್ತರೂ ಆಗಿದ್ದಾರೆ ಎಂಬುದು ಜೊತೆ ಕ್ರೈಸ್ತರಿಗೂ ತಿಳಿದಿರಬೇಕು.—1 ತಿಮೊಥೆಯ 3:2, 3, 7; ಫಿಲಿಪ್ಪಿ 4:5.

ಫಿಲಿಪ್ಪನು ಯೆರೂಸಲೇಮಿನಲ್ಲಿ ತನ್ನ ನೇಮಕವನ್ನು ಯೋಗ್ಯ ರೀತಿಯಲ್ಲಿ ನಿಭಾಯಿಸಿದನು ಎಂಬುದು ಸುವ್ಯಕ್ತ. ಆದರೂ, ಸ್ವಲ್ಪದರಲ್ಲೇ, ತೀಕ್ಷ್ಣ ಹಿಂಸೆಯು ಪ್ರಾರಂಭವಾಯಿತು ಮತ್ತು ಇದು ಕ್ರೈಸ್ತ ಹಿಂಬಾಲಕರನ್ನು ಚದರಿಸಿಬಿಟ್ಟಿತು. ಇತರರಂತೆ ಫಿಲಿಪ್ಪನು ಸಹ ಆ ಪಟ್ಟಣವನ್ನು ಬಿಟ್ಟುಹೋದನು, ಆದರೆ ಅವನ ಶುಶ್ರೂಷೆಯು ಅಲ್ಲಿಗೇ ಕೊನೆಗೊಳ್ಳಲಿಲ್ಲ. ಸ್ವಲ್ಪ ಸಮಯಾನಂತರ, ಅವನು ಒಂದು ಹೊಸ ಕ್ಷೇತ್ರದಲ್ಲಿ, ಅಂದರೆ ಸಮಾರ್ಯದಲ್ಲಿ ಸುವಾರ್ತೆಯನ್ನು ಸಾರುವುದರಲ್ಲಿ ನಿರತನಾಗಿದ್ದನು.—ಅ. ಕೃತ್ಯಗಳು 8:1-5.

ಹೊಸ ಟೆರಿಟೊರಿಗಳನ್ನು ಆರಂಭಿಸುವುದು

ತನ್ನ ಶಿಷ್ಯರು “ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರು”ವರು ಎಂದು ಯೇಸು ಮುಂತಿಳಿಸಿದ್ದನು. (ಅ. ಕೃತ್ಯಗಳು 1:8) ಸಮಾರ್ಯದಲ್ಲಿ ಸಾರುವ ಮೂಲಕ ಫಿಲಿಪ್ಪನು ಈ ಮಾತುಗಳ ನೆರವೇರಿಕೆಯಲ್ಲಿ ಭಾಗಿಯಾಗಿದ್ದನು. ಸಾಮಾನ್ಯವಾಗಿ ಯೆಹೂದ್ಯರು ಸಮಾರ್ಯದವರನ್ನು ಕೀಳಾಗಿ ಕಾಣುತ್ತಿದ್ದರು. ಆದರೆ, ಫಿಲಿಪ್ಪನಿಗೆ ಈ ಜನರ ವಿಷಯದಲ್ಲಿ ತಪ್ಪಾದ ಅಭಿಪ್ರಾಯವಿರಲಿಲ್ಲ. ಆದುದರಿಂದ ಅವನ ನಿಷ್ಪಕ್ಷಪಾತ ಮನೋಭಾವವು ಆಶೀರ್ವದಿಸಲ್ಪಟ್ಟಿತು. ಖಂಡಿತವಾಗಿಯೂ ಸಮಾರ್ಯದವರಲ್ಲಿ ಅನೇಕರು ದೀಕ್ಷಾಸ್ನಾನ ಪಡೆದುಕೊಂಡರು; ಈ ಹಿಂದೆ ಮಂತ್ರವಾದಿಯಾಗಿದ್ದ ಸೀಮೋನನೆಂಬ ವ್ಯಕ್ತಿಯು ಸಹ ಇದರಲ್ಲಿ ಸೇರಿದ್ದನು.—ಅ. ಕೃತ್ಯಗಳು 8:6-13.

ಸಕಾಲದಲ್ಲಿ, ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ ಮರಳುಗಾಡಿನ ದಾರಿಯಲ್ಲಿ ಹೋಗುವಂತೆ ಯೆಹೋವನ ದೂತನು ಫಿಲಿಪ್ಪನಿಗೆ ಮಾರ್ಗದರ್ಶನ ನೀಡಿದನು. ಅಲ್ಲಿ ಫಿಲಿಪ್ಪನು, ಯೆಶಾಯನ ಪ್ರವಾದನೆಯನ್ನು ಗಟ್ಟಿಯಾಗಿ ಓದುತ್ತಿದ್ದಂತಹ ಐಥಿಯೋಪ್ಯ ದೇಶದ ದೊಡ್ಡ ಅಧಿಕಾರಿಯನ್ನು ಕೊಂಡೊಯ್ಯುತ್ತಿರುವ ರಥವನ್ನು ಕಂಡನು. ಫಿಲಿಪ್ಪನು ಆ ರಥದ ಜೊತೆಯಲ್ಲೇ ಓಡುತ್ತಾ ಹೋಗಿ, ಅವನೊಂದಿಗೆ ಒಂದು ಸಂಭಾಷಣೆಯನ್ನು ಆರಂಭಿಸಿದನು. ಐಥಿಯೋಪ್ಯದ ಈ ಅಧಿಕಾರಿಯು ಒಬ್ಬ ಯೆಹೂದಿ ಮತಾವಲಂಬಿಯಾಗಿದ್ದನು. ದೇವರ ಬಗ್ಗೆ ಹಾಗೂ ಶಾಸ್ತ್ರವಚನಗಳ ಬಗ್ಗೆ ಅವನಿಗೆ ಸ್ವಲ್ಪ ಜ್ಞಾನವಿತ್ತಾದರೂ, ತಾನು ಓದುತ್ತಿರುವ ವಿಷಯವನ್ನು ಅರ್ಥಮಾಡಿಕೊಳ್ಳಲು ತನಗೆ ಸಹಾಯದ ಅಗತ್ಯವಿದೆ ಎಂದು ಅವನು ದೀನಭಾವದಿಂದ ಒಪ್ಪಿಕೊಂಡನು. ಆದುದರಿಂದ, ರಥವನ್ನು ಹತ್ತಿ ತನ್ನ ಬಳಿಯಲ್ಲಿ ಕುಳಿತುಕೊಳ್ಳುವಂತೆ ಅವನು ಫಿಲಿಪ್ಪನಿಗೆ ಹೇಳಿದನು. ಅವನಿಗೆ ಸಾಕ್ಷಿನೀಡಿದ ಬಳಿಕ, ಅವರು ನೀರಿನ ಬಳಿಗೆ ಬಂದರು. “ನನಗೆ ದೀಕ್ಷಾಸ್ನಾನವಾಗುವದಕ್ಕೆ ಅಡ್ಡಿ ಏನು”? ಎಂದು ಐಥಿಯೋಪ್ಯದ ಅಧಿಕಾರಿಯು ಕೇಳಿದನು. ಯಾವುದೇ ಹಿಂಜರಿಕೆಯಿಲ್ಲದೆ ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು. ಮತ್ತು ಐಥಿಯೋಪ್ಯದ ಅಧಿಕಾರಿಯು ಹರ್ಷಭರಿತನಾಗಿ ತನ್ನ ದಾರಿಯನ್ನು ಹಿಡಿದುಹೋದನು. ಬಹುಶಃ, ಈ ಹೊಸ ಶಿಷ್ಯನು ತನ್ನ ಸ್ವದೇಶದಲ್ಲಿಯೂ ಸುವಾರ್ತೆಯನ್ನು ಹಬ್ಬಿಸಿರಬೇಕು.—ಅ. ಕೃತ್ಯಗಳು 8:26-39.

ಸಮಾರ್ಯದವರು ಹಾಗೂ ಐಥಿಯೋಪ್ಯ ದೇಶದ ಅಧಿಕಾರಿಯನ್ನು ಒಳಗೊಂಡಿದ್ದ ಫಿಲಿಪ್ಪನ ಶುಶ್ರೂಷೆಯಿಂದ ನಾವು ಯಾವ ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ? ಕೆಲವೊಂದು ರಾಷ್ಟ್ರದ, ಕುಲದ, ಅಥವಾ ಸಾಮಾಜಿಕ ಅಂತಸ್ತುಳ್ಳ ವ್ಯಕ್ತಿಗಳು ಸುವಾರ್ತೆಯನ್ನು ಕೇಳಿಸಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ನಾವು ಎಂದೂ ಊಹಿಸಬಾರದು. ಅದಕ್ಕೆ ಬದಲಾಗಿ, “ಎಲ್ಲ ರೀತಿಯ ಜನರಿಗೆ” ರಾಜ್ಯ ಸಂದೇಶವನ್ನು ಪ್ರಕಟಪಡಿಸಬೇಕು. (1 ಕೊರಿಂಥ 9:19-23) ಎಲ್ಲರಿಗೆ ಸುವಾರ್ತೆಯನ್ನು ಸಾರುತ್ತಾ ನಾವು ನಮ್ಮನ್ನು ನೀಡಿಕೊಳ್ಳುವಲ್ಲಿ, ಈ ದುಷ್ಟ ವ್ಯವಸ್ಥೆಗೆ ಅಂತ್ಯವು ಬರುವ ಮೊದಲು, ‘ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡುವ’ ಕೆಲಸದಲ್ಲಿ ಯೆಹೋವನು ನಮ್ಮನ್ನು ಉಪಯೋಗಿಸಬಲ್ಲನು.—ಮತ್ತಾಯ 28:19, 20.

ಫಿಲಿಪ್ಪನಿಗೆ ಕೊಡಲ್ಪಟ್ಟ ಇನ್ನೂ ಹೆಚ್ಚಿನ ಸುಯೋಗಗಳು

ಐಥಿಯೋಪ್ಯ ದೇಶದ ಅಧಿಕಾರಿಗೆ ಸುವಾರ್ತೆಯನ್ನು ಸಾರಿದ ಬಳಿಕ ಫಿಲಿಪ್ಪನು ಅಜೋತಿನಲ್ಲಿ ಸಾಕ್ಷಿನೀಡುತ್ತಾ, “ಅಲ್ಲಿಂದ ಕೈಸರೈಯದ ತನಕ ಎಲ್ಲಾ ಊರುಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ಹೋದನು.” (ಅ. ಕೃತ್ಯಗಳು 8:40) ಪ್ರಥಮ ಶತಮಾನದಲ್ಲಿ, ಈ ಪಟ್ಟಣಗಳಲ್ಲಿ ಅನ್ಯರು ಅತ್ಯಧಿಕ ಸಂಖ್ಯೆಯಲ್ಲಿದ್ದರು. ಫಿಲಿಪ್ಪನು ಉತ್ತರ ಭಾಗದಲ್ಲಿದ್ದ ಕೈಸರೈಯಕ್ಕೆ ಹೋಗುತ್ತಿದ್ದಾಗ, ಲುದ್ದ ಮತ್ತು ಯೊಪ್ಪ ಎಂಬ ಪ್ರಮುಖ ಯೆಹೂದಿ ಕೇಂದ್ರಗಳಲ್ಲಿಯೂ ಅವನು ಸುವಾರ್ತೆಯನ್ನು ಸಾರಿದ್ದಿರಬಹುದು. ಬಹುಶಃ, ಈ ಕಾರಣದಿಂದಲೇ ಸಮಯಾನಂತರ ಆ ಕ್ಷೇತ್ರಗಳಲ್ಲಿ ಅನೇಕ ಶಿಷ್ಯರು ಕಂಡುಬಂದಿದ್ದಿರಬಹುದು.—ಅ. ಕೃತ್ಯಗಳು 9:32-43.

ಸುಮಾರು 20 ವರ್ಷಗಳ ಬಳಿಕ, ಫಿಲಿಪ್ಪನ ಹೆಸರು ಕೊನೆಯ ಬಾರಿ ಕಂಡುಬರುತ್ತದೆ. ತನ್ನ ಮೂರನೆಯ ಮಿಷನೆರಿ ಪ್ರಯಾಣದ ಕೊನೆಯಲ್ಲಿ ಪೌಲನು ಪ್ತೊಲೆಮಾಯಕ್ಕೆ ಬಂದು ಮುಟ್ಟಿದನು. “ಮರುದಿನ ಹೊರಟು ಕೈಸರೈಯಕ್ಕೆ ಬಂದು ಸೌವಾರ್ತಿಕನಾದ ಫಿಲಿಪ್ಪನ ಮನೆಗೆ ಹೋಗಿ ಅವನ ಬಳಿಯಲ್ಲಿಯೇ ಇಳುಕೊಂಡೆವು” ಎಂದು ಪೌಲನ ಪ್ರಯಾಣ ಸಂಗಾತಿಯಾಗಿದ್ದ ಲೂಕನು ಹೇಳುತ್ತಾನೆ. ಈ ಬಾರಿ ಪೌಲನು ಬಂದಾಗ ಫಿಲಿಪ್ಪನಿಗೆ “ಮದುವೆಯಾಗದ ನಾಲ್ಕುಮಂದಿ ಹೆಣ್ಣುಮಕ್ಕಳಿದ್ದರು; ಅವರು ಪ್ರವಾದಿಸುವವರಾಗಿದ್ದರು.”—ಅ. ಕೃತ್ಯಗಳು 21:8, 9.

ಫಿಲಿಪ್ಪನು ಕೈಸರೈಯದಲ್ಲಿ ನೆಲೆಸಿದ್ದನು ಎಂಬುದು ಸ್ಪಷ್ಟ. ಆದರೆ, ಅವನು ತನ್ನ ಮಿಷನೆರಿ ಮನೋಭಾವವನ್ನು ಕಳೆದುಕೊಂಡಿರಲಿಲ್ಲ. ಏಕೆಂದರೆ, ಲೂಕನು ಅವನನ್ನು “ಸೌವಾರ್ತಿಕನು” ಎಂದು ಕರೆಯುತ್ತಾನೆ. ಕೆಲವೊಮ್ಮೆ ಈ ಅಭಿವ್ಯಕ್ತಿಯು, ಇದು ವರೆಗೂ ಸುವಾರ್ತೆಯು ತಲಪಿರದಂತಹ ಕ್ಷೇತ್ರಗಳಲ್ಲಿ ಸುವಾರ್ತೆಯನ್ನು ಸಾರಲಿಕ್ಕಾಗಿ ತನ್ನ ಮನೆಯನ್ನು ಬಿಟ್ಟುಹೋಗುವಂತಹ ಒಬ್ಬ ವ್ಯಕ್ತಿಯನ್ನು ಸೂಚಿಸುತ್ತದೆ. ಪ್ರವಾದಿಸುವವರಾಗಿದ್ದ ನಾಲ್ಕು ಮಂದಿ ಹೆಣ್ಣುಮಕ್ಕಳು ಫಿಲಿಪ್ಪನಿಗಿದ್ದರು ಎಂಬ ವಾಸ್ತವಾಂಶವು, ಅವರು ಸಹ ಹುರುಪುಳ್ಳವನಾಗಿದ್ದ ತಮ್ಮ ತಂದೆಯ ಮಾದರಿಯನ್ನೇ ಅನುಕರಿಸಿದರು ಎಂಬುದನ್ನು ಸ್ಪಷ್ಟಪಡಿಸುತ್ತದೆ.

ತಮ್ಮ ಮಕ್ಕಳೇ ತಮ್ಮ ಮುಖ್ಯ ಶಿಷ್ಯರಾಗಿದ್ದಾರೆ ಎಂಬುದನ್ನು ಆಧುನಿಕ ದಿನದ ಕ್ರೈಸ್ತ ಹೆತ್ತವರು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಕೌಟುಂಬಿಕ ಜವಾಬ್ದಾರಿಗಳ ಕಾರಣ ಅಂತಹ ಹೆತ್ತವರು ಕೆಲವೊಂದು ದೇವಪ್ರಭುತ್ವ ಸುಯೋಗಗಳನ್ನು ಬಿಟ್ಟುಕೊಡಬೇಕಾಗಿರುವುದಾದರೂ, ಫಿಲಿಪ್ಪನಂತೆ ಅವರು ದೇವರ ಮನಃಪೂರ್ವಕ ಸೇವಕರೂ ಆದರ್ಶಪ್ರಾಯ ಹೆತ್ತವರೂ ಆಗಿರಸಾಧ್ಯವಿದೆ.—ಎಫೆಸ 6:4.

ಪೌಲನ ಹಾಗೂ ಅವನ ಸಂಗಡಿಗನ ಭೇಟಿಯು, ಅತಿಥಿ ಸತ್ಕಾರವನ್ನು ತೋರಿಸಲಿಕ್ಕಾಗಿ ಫಿಲಿಪ್ಪನ ಕುಟುಂಬಕ್ಕೆ ಒಂದು ಅತ್ಯುತ್ತಮ ಅವಕಾಶವನ್ನು ಮಾಡಿಕೊಟ್ಟಿತು. ಅವರು ಮಾಡಿಕೊಂಡ ಪ್ರೋತ್ಸಾಹದ ವಿನಿಮಯವನ್ನು ಕಲ್ಪಿಸಿಕೊಳ್ಳಿರಿ! ಬಹುಶಃ ಈ ಸಂದರ್ಭದಲ್ಲೇ, ಫಿಲಿಪ್ಪನ ಚಟುವಟಿಕೆಗಳ ಕುರಿತಾದ ವಿವರಗಳನ್ನು ಲೂಕನು ಸಂಗ್ರಹಿಸಿದ್ದಿರಬೇಕು ಮತ್ತು ಸಮಯಾನಂತರ ಅಪೊಸ್ತಲ ಕೃತ್ಯಗಳು ಪುಸ್ತಕದ 6 ಹಾಗೂ 8ನೆಯ ಅಧ್ಯಾಯಗಳಲ್ಲಿ ಸೇರಿಸಿದ್ದಿರಬೇಕು.

ರಾಜ್ಯಾಭಿರುಚಿಗಳನ್ನು ಮುಂದುವರಿಸಲಿಕ್ಕಾಗಿ ಯೆಹೋವ ದೇವರು ಫಿಲಿಪ್ಪನನ್ನು ಅತ್ಯಧಿಕವಾಗಿ ಉಪಯೋಗಿಸಿದನು. ಫಿಲಿಪ್ಪನ ಹುರುಪು ಅವನನ್ನು ಹೊಸ ಕ್ಷೇತ್ರಗಳಲ್ಲಿ ಸುವಾರ್ತೆಯನ್ನು ಸಾರಲು ಹಾಗೂ ತನ್ನ ಮನೆಯಲ್ಲಿ ಒಳ್ಳೆಯ ಆತ್ಮಿಕ ವಾತಾವರಣವನ್ನು ಸೃಷ್ಟಿಸಲು ಸಮರ್ಥನನ್ನಾಗಿ ಮಾಡಿತು. ನೀವು ಸಹ ತದ್ರೀತಿಯ ಸುಯೋಗಗಳನ್ನು ಹಾಗೂ ಆಶೀರ್ವಾದಗಳನ್ನು ಪಡೆದುಕೊಳ್ಳಲು ಬಯಸುತ್ತೀರೋ? ಹಾಗಿರುವಲ್ಲಿ, ಸೌವಾರ್ತಿಕನಾದ ಫಿಲಿಪ್ಪನು ತೋರಿಸಿದ ಗುಣಗಳನ್ನು ಅನುಕರಿಸುವುದು ನಿಮಗೆ ಪ್ರಯೋಜನಕರವಾಗುವುದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ