ಪಯನೀಯರ್ ಆತ್ಮವನ್ನು ಪ್ರದರ್ಶಿಸಿರಿ
1. ಪಯನೀಯರ್ ಆತ್ಮವನ್ನು ನೀವು ಹೇಗೆ ವರ್ಣಿಸುವಿರಿ?
1 ಸದ್ಯದಲ್ಲಿ ಪಯನೀಯರರಾಗಿ ಸೇವೆಸಲ್ಲಿಸಲು ರಾಜ್ಯ ಪ್ರಚಾರಕರಿಗೆ ಸಾಧ್ಯವಿರಲಿ ಇಲ್ಲದಿರಲಿ ಅವರು ಪಯನೀಯರ್ ಆತ್ಮವನ್ನಂತೂ ತೋರಿಸಸಾಧ್ಯವಿದೆ. ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಆಜ್ಞೆಗೆ ಕಟ್ಟಾಸಕ್ತಿಯಿಂದ ವಿಧೇಯರಾಗಲು ಅವರು ಬಯಸುತ್ತಾರೆ. (ಮತ್ತಾ. 28:19, 20; ಅ. ಕೃ. 18:5) ಅವರು ಜನರ ಕುರಿತು ಚಿಂತೆ ವಹಿಸುತ್ತಾರೆ ಮತ್ತು ತಮ್ಮ ಶುಶ್ರೂಷೆಯನ್ನು ಪೂರೈಸಲಿಕ್ಕೋಸ್ಕರ ತ್ಯಾಗಗಳನ್ನು ಮಾಡುತ್ತಾರೆ. (ಮತ್ತಾ. 9:36; ಅ. ಕೃ. 20:24) ಸತ್ಯವನ್ನು ಕಲಿಯುವಂತೆ ಇತರರಿಗೆ ಸಹಾಯಮಾಡುವುದರಲ್ಲಿ ಅಗತ್ಯವಿರುವುದೆಲ್ಲವನ್ನೂ ಮಾಡಲು ಯೆಹೋವನ ಸೇವಕರು ಸಿದ್ಧರಿದ್ದಾರೆ. (1 ಕೊರಿಂ. 9:19-23) ಇಂತಹ ಆತ್ಮವನ್ನು ತೋರಿಸಿದ ಒಬ್ಬನ ಮಾದರಿಯನ್ನು ಪರಿಗಣಿಸೋಣ. ಅವನೇ ಸೌವಾರ್ತಿಕನಾದ ಫಿಲಿಪ್ಪನು.
2. ಶುಶ್ರೂಷೆಗಾಗಿ ಫಿಲಿಪ್ಪನಿಗಿದ್ದ ಹುರುಪನ್ನು ಹಿರಿಯರು ಮತ್ತು ಶುಶ್ರೂಷಾ ಸೇವಕರು ಹೇಗೆ ಅನುಕರಿಸಬಲ್ಲರು?
2 ಸಾರುವುದು ಮತ್ತು ಬೋಧಿಸುವುದು: ಪ್ರಥಮ ಶತಮಾನದ ಸಭೆಯಲ್ಲಿ ಫಿಲಿಪ್ಪನು ಗಂಭೀರವಾದ ಜವಾಬ್ದಾರಿಗಳನ್ನು ನಿರ್ವಹಿಸಿದನು. (ಅ. ಕೃ. 6:1-6) ಆದರೂ, ಪ್ರಧಾನವಾಗಿ ಅವನು ಸುವಾರ್ತೆಯ ಹುರುಪಿನ ಘೋಷಕನಾಗಿದ್ದನು. (ಅ. ಕೃ. 8:40) ಆದುದರಿಂದ ಇಂದು, ತಮ್ಮ ನೇಮಿತ ಕೆಲಸಗಳನ್ನು ನೋಡಿಕೊಳ್ಳುತ್ತಿರುವಾಗ, ಹಿರಿಯರು ಮತ್ತು ಶುಶ್ರೂಷಾ ಸೇವಕರು ಶುಶ್ರೂಷೆಯಲ್ಲಿ ಉತ್ಸಾಹಪೂರ್ವಕ ಮುಂದಾಳುತ್ವವನ್ನು ತೆಗೆದುಕೊಳ್ಳುವ ಮೂಲಕ ಪಯನೀಯರ್ ಆತ್ಮವನ್ನು ಪ್ರದರ್ಶಿಸಸಾಧ್ಯವಿದೆ. ಇದು ಸಭೆಯ ಆತ್ಮವನ್ನು ಬಡಿದೆಬ್ಬಿಸುತ್ತದೆ!—ರೋಮಾ. 12:11.
3. ನಾವು ಪರೀಕ್ಷೆಗಳನ್ನು ಎದುರಿಸುವಾಗ ಪಯನೀಯರ್ ಆತ್ಮವನ್ನು ಹೇಗೆ ಪ್ರದರ್ಶಿಸಬಲ್ಲೆವು?
3 ಸ್ತೆಫನನ ಮರಣವನ್ನು ಹಿಂಬಾಲಿಸುತ್ತಾ ಬಂದ ಹಿಂಸೆಯ ದೊಡ್ಡ ಅಲೆಯು ಶಿಷ್ಯರ ಜೀವನಗಳಲ್ಲಿ ತುಂಬ ಆತಂಕವನ್ನು ಉಂಟುಮಾಡಿತು. ಆದರೂ, ಫಿಲಿಪ್ಪನು ಸಾರುತ್ತಾ ಮುಂದುವರಿದನು, ಮತ್ತು ಸಮಾರ್ಯರ ಮಧ್ಯೆ ಸಾರುವ ಕೆಲಸವನ್ನು ಪ್ರಾರಂಭಿಸಿದ್ದರಲ್ಲಿ ಇವನು ಮುಖ್ಯ ಪಾತ್ರವನ್ನು ವಹಿಸಿದನು. (ಅ. ಕೃ. 8:1, 4-6, 12, 14-17) ನಾವು ಪರೀಕ್ಷೆಗಳನ್ನು ಎದುರಿಸುವಾಗಲೂ ಸುವಾರ್ತೆಯನ್ನು ಪ್ರಚುರಪಡಿಸುತ್ತಾ ಹೋಗುವ ಮೂಲಕ ಮತ್ತು ನಾವು ಭೇಟಿಮಾಡುವ ಎಲ್ಲರಿಗೂ ನಿಷ್ಪಕ್ಷಪಾತದಿಂದ ಸಾರುವ ಮೂಲಕ ಫಿಲಿಪ್ಪನ ಮಾದರಿಯನ್ನು ಹಿಂಬಾಲಿಸಬಲ್ಲೆವು.—ಯೋಹಾ. 4:9.
4. ಒಬ್ಬ ಬೋಧಕನೊಪಾದಿ ಫಿಲಿಪ್ಪನು ಯಾವ ಮಾದರಿಯನ್ನು ಇಟ್ಟನು?
4 ದೇವರ ವಾಕ್ಯವನ್ನು ಬೋಧಿಸುವುದರಲ್ಲಿ ಫಿಲಿಪ್ಪನಿಗಿದ್ದ ನಿಪುಣತೆಯ ಪುರಾವೆಯನ್ನು ಐಥಿಯೋಪ್ಯದ ಕಂಚುಕಿಯು ಮತಾಂತರವಾದ ವೃತ್ತಾಂತದಿಂದ ನಾವು ಕಂಡುಕೊಳ್ಳಬಹುದು. (ಅ. ಕೃ. 8:26-38) ಬೈಬಲನ್ನು ಉಪಯೋಗಿಸುವ ಮತ್ತು ‘ಶಾಸ್ತ್ರಾಧಾರದಿಂದ ವಾದಿಸುವ’ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ನಾವು ಪಯನೀಯರ್ ಆತ್ಮವನ್ನು ಪ್ರದರ್ಶಿಸುವ ಮತ್ತೊಂದು ವಿಧಾನವಾಗಿದೆ. (ಅ. ಕೃ. 17:2, 3) ನಾವು ಫಿಲಿಪ್ಪನಂತೆ, ಜನರು ಕಂಡುಬರುವಲ್ಲೆಲ್ಲಾ ಮತ್ತು ಪ್ರತಿಯೊಂದು ಸೂಕ್ತವಾದ ಸಂದರ್ಭದಲ್ಲಿಯೂ ಸುವಾರ್ತೆಯನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತೇವೆ.
5. ತಮ್ಮ ಮಕ್ಕಳಲ್ಲಿ ಪಯನೀಯರ್ ಆತ್ಮವನ್ನು ತುಂಬಿಸುವಂತೆ ಕ್ರೈಸ್ತ ಹೆತ್ತವರಿಗೆ ಯಾವುದು ಸಹಾಯಮಾಡಬಲ್ಲದು?
5 ಕುಟುಂಬ ಮತ್ತು ಸಭೆ: ಫಿಲಿಪ್ಪನ ಮನೋಭಾವ ಮತ್ತು ಮಾದರಿಯು ಅವನ ಹೆಣ್ಣುಮಕ್ಕಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಿತು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. (ಅ. ಕೃ. 21:9) ತದ್ರೀತಿಯಲ್ಲಿ, ತಮ್ಮ ಜೀವನಗಳನ್ನು ರಾಜ್ಯದ ಅಭಿರುಚಿಗಳ ಮೇಲೆ ಕೇಂದ್ರೀಕರಿಸಿರುವ ಕ್ರೈಸ್ತ ಹೆತ್ತವರು ತಮ್ಮ ಮಕ್ಕಳು ಸಹ ಅದನ್ನೇ ಮಾಡುವಂತೆ ಪ್ರೋತ್ಸಾಹಿಸುತ್ತಾರೆ. ಇಡೀ ವಾರ ಕೆಲಸ ಮಾಡಿ ದಣಿದಿರುವುದಾದರೂ, ಇತರರಿಗೆ ಉತ್ಸಾಹದಿಂದ ಸಾರುವ ಹೆತ್ತವರು ಒಂದು ಮಗುವಿನ ಮನಸ್ಸಿನ ಮೇಲೆ ಗಾಢವಾದ ಪ್ರಭಾವವನ್ನು ಬೀರಬಲ್ಲರು.—ಜ್ಞಾನೋ. 22:6.
6. ನಮ್ಮ ಸಭೆಯಲ್ಲಿರುವ ಪಯನೀಯರರಿಗೆ ನಾವು ಹೇಗೆ ಗಣ್ಯತೆಯನ್ನು ತೋರಿಸಬಲ್ಲೆವು?
6 ಫಿಲಿಪ್ಪನು ಯೆಹೋವನ ಸೇವೆಯಲ್ಲಿ ಕಠಿನವಾಗಿ ಶ್ರಮಿಸುತ್ತಿದ್ದ ಪೌಲ ಮತ್ತು ಲೂಕ ಎಂಬ ಹುರುಪಿನ ಕ್ರೈಸ್ತರಿಗೆ ಅತಿಥಿಸತ್ಕಾರವನ್ನು ತೋರಿಸಿದನು. (ಅ. ಕೃ. 21:8, 10) ಹುರುಪುಳ್ಳ ವ್ಯಕ್ತಿಗಳಿಗೆ ನಾವು ಇಂದು ಹೇಗೆ ನಮ್ಮ ಗಣ್ಯತೆಯನ್ನು ತೋರಿಸಬಲ್ಲೆವು? ಕೆಲವರು ಮಾತ್ರ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಂಥ ದಿನದಲ್ಲಿ, ಒಂದು ಬೆಳಗ್ಗೆಯೊ ಅಥವಾ ಮಧ್ಯಾಹ್ನವೊ ಪಯನೀಯರರೊಂದಿಗೆ ಸೇವೆಮಾಡಲು ನಾವು ಮುಂದೆ ಬರಬಹುದು. (ಫಿಲಿ. 2:4) ಆತ್ಮೋನ್ನತಿ ಮಾಡುವ ಸಹವಾಸಕ್ಕಾಗಿ ನಾವು ಅವರನ್ನು ನಮ್ಮ ಮನೆಗಳಿಗೆ ಸಹ ಆಮಂತ್ರಿಸಬಹುದು. ನಮ್ಮ ಪರಿಸ್ಥಿತಿಗಳು ಏನೇ ಆಗಿರಲಿ, ನಾವೆಲ್ಲರೂ ಪಯನೀಯರ್ ಆತ್ಮವನ್ನು ತೋರಿಸಲು ಪರಿಶ್ರಮಿಸೋಣ.