ದೇವರ ವಾಕ್ಯವನ್ನು ಪ್ರೀತಿಸುವುದರಿಂದ ದೊರಕುವ ಪ್ರಯೋಜನಗಳು
“ಜ್ಞಾನವನ್ನು [ವಿವೇಕವನ್ನು] . . . ಪ್ರೀತಿಸಿದರೆ, ನಿನ್ನನ್ನು ಕಾಯುವದು. . . . ಆಕೆಯನ್ನು ಅಪ್ಪಿಕೊಂಡರೆ ನಿನ್ನನ್ನು ಘನಪಡಿಸುವಳು.”—ಜ್ಞಾನೋಕ್ತಿ 4:6, 8.
1. ನಿಜವಾಗಿಯೂ ದೇವರ ವಾಕ್ಯವನ್ನು ಪ್ರೀತಿಸುವುದರಲ್ಲಿ ಏನು ಒಳಗೂಡಿದೆ?
ಒಬ್ಬ ಕ್ರೈಸ್ತನು ಬೈಬಲನ್ನು ಓದಲೇಬೇಕು. ಕೇವಲ ಅದನ್ನು ಓದುವುದು ತಾನೇ ದೇವರ ವಾಕ್ಯಕ್ಕಾಗಿರುವ ಪ್ರೀತಿಯನ್ನು ತೋರಿಸುವುದಿಲ್ಲ. ಒಬ್ಬರು ಬೈಬಲನ್ನು ಓದಿ, ತದನಂತರ ಬೈಬಲು ಖಂಡಿಸುವಂತಹ ಕೆಲಸಗಳನ್ನೇ ಮಾಡುವುದಾದರೆ ಆಗೇನು? ಕೀರ್ತನೆ 119ರ ಬರಹಗಾರನು ಪ್ರೀತಿಸಿದಂತಹ ರೀತಿಯಲ್ಲಿ ಈ ವ್ಯಕ್ತಿಯು ದೇವರ ವಾಕ್ಯವನ್ನು ಪ್ರೀತಿಸುತ್ತಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ದೇವರ ವಾಕ್ಯವನ್ನು ಪ್ರೀತಿಸುವ ಮೂಲಕ, ಅದರ ಆವಶ್ಯಕತೆಗಳಿಗನುಸಾರ ಜೀವಿಸುವಂತೆ ಅವನು ಮಾರ್ಗದರ್ಶಿಸಲ್ಪಟ್ಟನು.—ಕೀರ್ತನೆ 119:97, 101, 105.
2. ದೇವರ ವಾಕ್ಯದ ಮೇಲಾಧಾರಿತವಾದ ವಿವೇಕದಿಂದ ಯಾವ ಪ್ರಯೋಜನಗಳು ದೊರಕುತ್ತವೆ?
2 ದೇವರ ವಾಕ್ಯಕ್ಕೆ ಅನುಸಾರವಾಗಿ ಜೀವಿಸುವುದು, ಒಬ್ಬನ ಆಲೋಚನೆ ಹಾಗೂ ಜೀವನ ರೀತಿಯಲ್ಲಿ ಯಾವಾಗಲೂ ಯೋಗ್ಯವಾದ ಹೊಂದಾಣಿಕೆಗಳನ್ನು ಮಾಡಿಕೊಳ್ಳುವಂತೆ ಅಗತ್ಯಪಡಿಸುತ್ತದೆ. ಇಂತಹ ಜೀವನ ಕ್ರಮವು, ಬೈಬಲನ್ನು ಅಭ್ಯಾಸಿಸುವ ಮೂಲಕ ಪಡೆದುಕೊಳ್ಳುವ ಜ್ಞಾನ ಹಾಗೂ ತಿಳುವಳಿಕೆಯನ್ನು ಪ್ರಾಯೋಗಿಕವಾಗಿ ಅನ್ವಯಿಸಿಕೊಳ್ಳುವಂತೆ ಮಾಡುವ ದೈವಿಕ ವಿವೇಕವನ್ನು ಪ್ರತಿಬಿಂಬಿಸುತ್ತದೆ. “ಜ್ಞಾನವನ್ನು [ವಿವೇಕವನ್ನು] ಪ್ರೀತಿಸಿದರೆ, ನಿನ್ನನ್ನು ಕಾಯುವದು. ಜ್ಞಾನವೆಂಬಾಕೆಯು ಶ್ರೇಷ್ಠಳು ಎಂದು ನೀನು ಭಾವಿಸಿದರೆ ಆಕೆಯು ನಿನ್ನನ್ನು ಉನ್ನತಿಗೆ ತರುವಳು; ಆಕೆಯನ್ನು ಅಪ್ಪಿಕೊಂಡರೆ ನಿನ್ನನ್ನು ಘನಪಡಿಸುವಳು. ಆಕೆಯು ನಿನ್ನ ತಲೆಗೆ ಅಂದದ ಪುಷ್ಪಮಾಲೆಯನ್ನಿಟ್ಟು ಸುಂದರ ಕಿರೀಟವನ್ನು ನಿನಗೆ ಒಪ್ಪಿಸುವಳು.” (ಜ್ಞಾನೋಕ್ತಿ 4:6, 8, 9) ದೇವರ ವಾಕ್ಯಕ್ಕಾಗಿ ಪ್ರೀತಿಯನ್ನು ಬೆಳೆಸಿಕೊಳ್ಳಲಿಕ್ಕಾಗಿ ಮತ್ತು ಅದರ ಮಾರ್ಗದರ್ಶನಕ್ಕನುಸಾರ ನಡೆಯಲಿಕ್ಕಾಗಿ ಇದು ಎಷ್ಟು ಅತ್ಯುತ್ತಮವಾದ ಉತ್ತೇಜನವಾಗಿದೆ! ಕಾಪಾಡಲ್ಪಡಲು, ಉನ್ನತಿಗೆ ಏರಿಸಲ್ಪಡಲು, ಮತ್ತು ಘನಪಡಿಸಲ್ಪಡಲು ಯಾರು ತಾನೇ ಇಷ್ಟಪಡುವುದಿಲ್ಲ?
ಶಾಶ್ವತವಾದ ಹಾನಿಯಿಂದ ಕಾಪಾಡಲ್ಪಡುವುದು
3. ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಕ್ರೈಸ್ತರು ಏಕೆ ತಮ್ಮನ್ನು ಕಾಪಾಡಿಕೊಳ್ಳುವ ಅಗತ್ಯವಿದೆ, ಮತ್ತು ಯಾರಿಂದ?
3 ದೇವರ ವಾಕ್ಯವನ್ನು ಅಭ್ಯಾಸಿಸುವ ಮೂಲಕ ಹಾಗೂ ಅದನ್ನು ಅನ್ವಯಿಸಿಕೊಳ್ಳುವ ಮೂಲಕ ದೊರಕುವ ವಿವೇಕವು ಒಬ್ಬನನ್ನು ಹೇಗೆ ಕಾಪಾಡುತ್ತದೆ? ಒಂದು ವಿಧವು ಯಾವುದೆಂದರೆ, ಆ ವ್ಯಕ್ತಿಯು ಪಿಶಾಚನಾದ ಸೈತಾನನಿಂದ ಕಾಪಾಡಲ್ಪಡುತ್ತಾನೆ. ಕೆಡುಕನಾದ ಸೈತಾನನ ಶೋಧನೆಗಳಿಂದ ತಪ್ಪಿಸಿ ಕಾಪಾಡುವಂತೆ ದೇವರಿಗೆ ಪ್ರಾರ್ಥಿಸಿರಿ ಎಂದು ಯೇಸು ತನ್ನ ಹಿಂಬಾಲಕರಿಗೆ ಕಲಿಸಿದನು. (ಮತ್ತಾಯ 6:13) ಇಂದು, ಈ ಬೇಡಿಕೆಯನ್ನು ನಮ್ಮ ಪ್ರಾರ್ಥನೆಗಳಲ್ಲಿ ಒಳಗೂಡಿಸುವುದರ ಆವಶ್ಯಕತೆಯು ನಿಜವಾಗಿಯೂ ತುಂಬ ಜರೂರಿಯದ್ದಾಗಿದೆ. 1914ರಲ್ಲಿ ಸೈತಾನನು ಮತ್ತು ಅವನ ದೆವ್ವಗಳು ಪರಲೋಕದಿಂದ ದೊಬ್ಬಲ್ಪಟ್ಟರು, ಮತ್ತು ಇದರ ಪರಿಣಾಮವಾಗಿ ಸೈತಾನನು “ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ”ದ್ದಾನೆ. (ಪ್ರಕಟನೆ 12:9, 10, 12) ಇರುವ ಕೊಂಚ ಸಮಯದಲ್ಲಿ, “ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಿರುವವರ” ವಿರುದ್ಧ ಅವನು ನಿಷ್ಫಲವಾಗಿ ಯುದ್ಧವನ್ನು ನಡೆಸುತ್ತಿರುವುದರಿಂದ, ಖಂಡಿತವಾಗಿಯೂ ಅವನ ಕೋಪವು ತುಂಬ ತೀಕ್ಷ್ಣಗೊಂಡಿರಲೇಬೇಕು.—ಪ್ರಕಟನೆ 12:17.
4. ಸೈತಾನನ ಒತ್ತಡಗಳು ಮತ್ತು ಜಾಲಗಳಿಂದ ಕ್ರೈಸ್ತರು ಹೇಗೆ ಕಾಪಾಡಲ್ಪಡುತ್ತಾರೆ?
4 ಕೋಪೋದ್ರಿಕ್ತನಾಗಿರುವ ಸೈತಾನನು, ಯಾವಾಗಲೂ ಈ ಕ್ರೈಸ್ತ ಶುಶ್ರೂಷಕರಿಗೆ ತೊಂದರೆಯನ್ನು ಉಂಟುಮಾಡಲು, ಭೀಕರ ಹಿಂಸೆಯನ್ನು ತಂದೊಡ್ಡಲು, ಅಥವಾ ಅವರ ಚಟುವಟಿಕೆಗೆ ಯಾವುದಾದರೊಂದು ವಿಧದಲ್ಲಿ ಅಡೆತಡೆಗಳನ್ನು ತಂದೊಡ್ಡಲು ಯಾವಾಗಲೂ ಪ್ರಯತ್ನಿಸುತ್ತಾನೆ. ಲೌಕಿಕ ಕೀರ್ತಿ, ಆರಾಮವಾಗಿ ಕಾಲಕಳೆಯುವುದನ್ನು ಇಷ್ಟಪಡುವುದು, ಪ್ರಾಪಂಚಿಕ ಸಂಪತ್ತನ್ನು ಸಂಪಾದಿಸಿಕೊಳ್ಳುವುದು, ಮತ್ತು ರಾಜ್ಯದ ಕುರಿತು ಸಾರುವ ಕೆಲಸಕ್ಕೆ ಬದಲಾಗಿ ಸುಖಾನುಭೋಗವನ್ನು ಬೆನ್ನಟ್ಟುವಂತಹ ಸಂಗತಿಗಳ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ರಾಜ್ಯ ಘೋಷಕರನ್ನು ಪ್ರಲೋಭಿಸಲು ಅವನು ಬಯಸುತ್ತಾನೆ. ಸೈತಾನನ ಒತ್ತಡಕ್ಕೆ ಮಣಿಯುವುದು ಅಥವಾ ಅವನ ಜಾಲಗಳಲ್ಲಿ ಸಿಕ್ಕಿಬೀಳುವುದರಿಂದ ದೇವರ ನಂಬಿಗಸ್ತ ಸೇವಕರನ್ನು ಯಾವುದು ಕಾಪಾಡುತ್ತದೆ? ಪ್ರಾರ್ಥನೆಯು, ಯೆಹೋವನೊಂದಿಗೆ ವೈಯಕ್ತಿಕವಾದ ನಿಕಟ ಸಂಬಂಧವು, ಮತ್ತು ಆತನ ವಾಗ್ದಾನಗಳು ಖಂಡಿತವಾಗಿಯೂ ನೆರವೇರುವವು ಎಂಬ ನಂಬಿಕೆಯು ಅತ್ಯಾವಶ್ಯಕವಾದದ್ದಾಗಿದೆ ನಿಶ್ಚಯ. ಆದರೆ, ಇದೆಲ್ಲವೂ ದೇವರ ವಾಕ್ಯದ ಮರುಜ್ಞಾಪನಗಳ ಕುರಿತಾದ ಜ್ಞಾನ ಹಾಗೂ ಅವುಗಳಿಗೆ ಕಿವಿಗೊಡುವ ದೃಢನಿರ್ಧಾರದೊಂದಿಗೆ ಸಂಬಂಧಿಸಿದೆ. ಬೈಬಲನ್ನು ಮತ್ತು ಬೈಬಲ್ ಅಭ್ಯಾಸ ಸಹಾಯಕಗಳನ್ನು ಓದುವ ಮೂಲಕ, ಕ್ರೈಸ್ತ ಕೂಟಗಳಿಗೆ ಹಾಜರಾಗುವ ಮೂಲಕ, ಒಬ್ಬ ಜೊತೆ ವಿಶ್ವಾಸಿಯಿಂದ ಕೊಡಲ್ಪಡುವ ಶಾಸ್ತ್ರೀಯ ಸಲಹೆಗೆ ಕಿವಿಗೊಡುವ ಮೂಲಕ, ಅಥವಾ ದೇವರಾತ್ಮವು ನಮ್ಮ ಮನಸ್ಸಿಗೆ ತರುವಂತಹ ಬೈಬಲ್ ಮೂಲತತ್ವಗಳನ್ನು ಪ್ರಾರ್ಥನಾಪೂರ್ವಕವಾಗಿ ಮನನಮಾಡುವ ಮೂಲಕ ಈ ಮರುಜ್ಞಾಪನಗಳು ನಮಗೆ ಸಿಗುತ್ತವೆ.—ಯೆಶಾಯ 30:21; ಯೋಹಾನ 14:26; 1 ಯೋಹಾನ 2:15-17.
5. ದೇವರ ವಾಕ್ಯದ ಮೇಲಾಧಾರಿತವಾದ ವಿವೇಕವು ನಮ್ಮನ್ನು ಹೇಗೆ ಕಾಪಾಡುತ್ತದೆ?
5 ಯಾರು ದೇವರ ವಾಕ್ಯವನ್ನು ಪ್ರೀತಿಸುತ್ತಾರೋ ಅವರು, ಇನ್ನೂ ಅನೇಕ ವಿಧಗಳಲ್ಲಿ ಕಾಪಾಡಲ್ಪಡುತ್ತಾರೆ. ಉದಾಹರಣೆಗೆ, ಅಮಲೌಷಧದ ದುರುಪಯೋಗ, ಹೊಗೆಸೊಪ್ಪು ಸೇವನೆ, ಮತ್ತು ಲೈಂಗಿಕ ಅನೈತಿಕತೆಗಳಂತಹ ಕೃತ್ಯಗಳಿಂದ ಫಲಿಸುವ ಭಾವನಾತ್ಮಕ ವ್ಯಥೆ ಹಾಗೂ ಶಾರೀರಿಕ ರೋಗಗಳಿಂದ ಅವರು ಪಾರಾಗುತ್ತಾರೆ. (1 ಕೊರಿಂಥ 5:11; 2 ಕೊರಿಂಥ 7:1) ಹರಟೆ ಅಥವಾ ಅಸಭ್ಯ ಮಾತಿನ ಮೂಲಕ ಅಸಹಜ ರೀತಿಯಲ್ಲಿ ಗೆಳೆತನವನ್ನು ಸಂಪಾದಿಸಲು ಅವರು ಪ್ರಯತ್ನಿಸುವುದಿಲ್ಲ. (ಎಫೆಸ 4:31) ಲೌಕಿಕ ವಿವೇಕದಿಂದ ಕೂಡಿದ ವಂಚನಾತ್ಮಕ ತತ್ವಜ್ಞಾನಗಳನ್ನು ಪರೀಕ್ಷಿಸಿ ನೋಡುವ ಮೂಲಕ ಅವರು ಸಂದೇಹಕ್ಕೆ ಬಲಿಯಾಗುವುದಿಲ್ಲ. (1 ಕೊರಿಂಥ 3:19) ದೇವರ ವಾಕ್ಯವನ್ನು ಪ್ರೀತಿಸುವ ಮೂಲಕ, ದೇವರೊಂದಿಗಿನ ತಮ್ಮ ಸಂಬಂಧ ಮತ್ತು ನಿತ್ಯಜೀವದ ನಿರೀಕ್ಷೆಯನ್ನು ತಮ್ಮಿಂದ ಕಸಿದುಕೊಳ್ಳಬಹುದಾದಂತಹ ವಿಷಯಗಳಿಂದ ಅವರು ಕಾಪಾಡಲ್ಪಡುತ್ತಾರೆ. ‘ತಮ್ಮನ್ನೂ ತಮ್ಮ ಉಪದೇಶಕ್ಕೆ ಕಿವಿಗೊಡುವವರನ್ನೂ ರಕ್ಷಿಸುವೆವು’ ಎಂಬುದನ್ನು ತಿಳಿದವರಾಗಿದ್ದು, ಬೈಬಲಿನಲ್ಲಿರುವ ಅದ್ಭುತಕರ ವಾಗ್ದಾನಗಳಲ್ಲಿ ನಂಬಿಕೆಯಿಡುವಂತೆ ತಮ್ಮ ನೆರೆಹೊರೆಯವರಿಗೆ ಸಹಾಯ ಮಾಡುವುದರಲ್ಲಿ ಅವರು ಯಾವಾಗಲೂ ಕಾರ್ಯಮಗ್ನರಾಗಿರುತ್ತಾರೆ.—1 ತಿಮೊಥೆಯ 4:16.
6. ದೇವರ ವಾಕ್ಯದ ಮೇಲಾಧಾರಿತವಾದ ವಿವೇಕವು, ಕಷ್ಟಕರ ಸನ್ನಿವೇಶಗಳ ಕೆಳಗೆ ನಮ್ಮನ್ನು ಹೇಗೆ ಕಾಪಾಡುತ್ತದೆ?
6 ಪ್ರತಿಯೊಬ್ಬರೂ, ಅಂದರೆ ದೇವರ ವಾಕ್ಯವನ್ನು ಪ್ರೀತಿಸುವವರು ಸಹ “ಕಾಲ ಮತ್ತು ಮುಂಗಾಣದ ಸಂಭವಕ್ಕೆ” ಒಳಗಾಗುತ್ತಾರೆ ಎಂಬುದು ಸತ್ಯ. (ಪ್ರಸಂಗಿ 9:11, NW) ನಮ್ಮಲ್ಲಿ ಕೆಲವರು ನೈಸರ್ಗಿಕ ವಿಪತ್ತುಗಳು, ಗಂಭೀರವಾದ ರೋಗಗಳು, ಅಪಘಾತಗಳು, ಅಥವಾ ಅಕಾಲಿಕ ಮರಣವನ್ನು ಹೊಂದುವುದು ಅನಿವಾರ್ಯವಾದದ್ದಾಗಿದೆ. ಆದರೂ, ಒಂದರ್ಥದಲ್ಲಿ ನಾವು ಸುರಕ್ಷಿತರಾಗಿದ್ದೇವೆ. ಹೇಗೆಂದರೆ, ದೇವರ ವಾಕ್ಯವನ್ನು ನಿಜವಾಗಿಯೂ ಪ್ರೀತಿಸುವ ಒಬ್ಬ ವ್ಯಕ್ತಿಗೆ, ಯಾವುದೇ ವಿಪತ್ತು ಶಾಶ್ವತವಾದ ಹಾನಿಯನ್ನು ತರಲಾರದು. ಆದುದರಿಂದ, ಭವಿಷ್ಯತ್ತಿನಲ್ಲಿ ಏನು ಸಂಭವಿಸಬಹುದು ಎಂಬುದರ ಬಗ್ಗೆ ನಾವು ಮಿತಿಮೀರಿ ಚಿಂತಿಸುವ ಅಗತ್ಯವಿಲ್ಲ. ಸಾಧ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡ ಬಳಿಕ, ಇಂದಿನ ಜೀವಿತದ ಅಭದ್ರತೆಯು ನಮ್ಮ ಶಾಂತಿಯನ್ನು ಕಸಿದುಕೊಳ್ಳುವಂತೆ ಬಿಡದೆ, ಎಲ್ಲ ಸಂಗತಿಗಳನ್ನು ಯೆಹೋವನ ಹಸ್ತಗಳಲ್ಲಿ ಬಿಟ್ಟುಬಿಡುವುದು ಹೆಚ್ಚು ಉತ್ತಮವಾದದ್ದಾಗಿದೆ. (ಮತ್ತಾಯ 6:33, 34; ಫಿಲಿಪ್ಪಿ 4:6, 7) ದೇವರು ‘ಎಲ್ಲವನ್ನೂ ಹೊಸದು ಮಾಡುವಾಗ’ ಆಗಲಿರುವ ಪುನರುತ್ಥಾನದ ನಿಶ್ಚಿತ ನಿರೀಕ್ಷೆ ಹಾಗೂ ಹೆಚ್ಚು ಉತ್ತಮವಾದ ಜೀವಿತದ ಆಶ್ವಾಸನೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ.—ಪ್ರಕಟನೆ 21:5; ಯೋಹಾನ 11:25.
ನಿಮ್ಮನ್ನು “ಒಳ್ಳೆಯ ನೆಲ”ವಾಗಿ ರುಜುಪಡಿಸಿಕೊಳ್ಳಿರಿ
7. ತನ್ನ ಬಳಿಗೆ ನೆರೆದುಬಂದಿದ್ದ ಜನರ ಗುಂಪಿಗೆ ಯೇಸು ಯಾವ ದೃಷ್ಟಾಂತವನ್ನು ಹೇಳಿದನು?
7 ದೇವರ ವಾಕ್ಯದ ಕುರಿತು ಯೋಗ್ಯವಾದ ದೃಷ್ಟಿಕೋನವಿರುವುದರ ಮಹತ್ವವು, ಯೇಸುವಿನ ಸಾಮ್ಯಗಳಲ್ಲೊಂದರಲ್ಲಿ ಎತ್ತಿತೋರಿಸಲ್ಪಟ್ಟಿತು. ಯೇಸು ಪ್ಯಾಲೆಸ್ತೀನ್ನಲ್ಲೆಲ್ಲಾ ಸುವಾರ್ತೆಯನ್ನು ಸಾರಿದಂತೆ, ಅವನು ಹೇಳುವುದನ್ನು ಕೇಳಿಸಿಕೊಳ್ಳಲಿಕ್ಕಾಗಿ ಜನರ ಗುಂಪು ಅವನ ಸುತ್ತಲೂ ನೆರೆದಿತ್ತು. (ಲೂಕ 8:1, 4) ಆದರೂ, ಅವರಲ್ಲಿ ಎಲ್ಲರೂ ದೇವರ ವಾಕ್ಯವನ್ನು ಪ್ರೀತಿಸಲಿಲ್ಲ. ಅವನು ಮಾಡುವ ಅದ್ಭುತಗಳನ್ನು ನೋಡಲು ಬಯಸಿದ್ದರಿಂದ ಅಥವಾ ಅವನು ಆಶ್ಚರ್ಯಕರ ರೀತಿಯಲ್ಲಿ ಬೋಧಿಸುವುದನ್ನು ನೋಡಿ ಆನಂದಪಡುತ್ತಿದ್ದುದರಿಂದ, ಅವರಲ್ಲಿ ಅನೇಕರು ಅವನ ಬಳಿಗೆ ಬಂದರು ಎಂಬುದರಲ್ಲಿ ಸಂಶಯವೇ ಇಲ್ಲ. ಆದುದರಿಂದ, ಯೇಸು ಆ ಜನರ ಗುಂಪಿಗೆ ಒಂದು ದೃಷ್ಟಾಂತವನ್ನು ಹೇಳಿದನು: “ಬಿತ್ತುವವನು ಬೀಜವನ್ನು ಬಿತ್ತುವದಕ್ಕೆ ಹೊರಟನು. ಅವನು ಬಿತ್ತುವಾಗ ಕೆಲವು ಬೀಜ ದಾರಿಯ ಮಗ್ಗುಲಲ್ಲಿ ಬಿದ್ದು ತುಳಿಯಲ್ಪಟ್ಟವು; ಆಕಾಶದಲ್ಲಿ ಹಾರಾಡುವ ಹಕ್ಕಿಗಳು ಅವುಗಳನ್ನು ತಿಂದುಬಿಟ್ಟವು. ಬೇರೆ ಕೆಲವು ಬೀಜ ಬಂಡೆಯ ಮೇಲೆ ಬಿದ್ದವು; ಅವು ಮೊಳೆತು ತ್ಯಾವವಿಲ್ಲದ ಕಾರಣ ಒಣಗಿಹೋದವು. ಮತ್ತೆ ಕೆಲವು ಬೀಜ ಮುಳ್ಳುಗಿಡಗಳ ನಡುವೆ ಬಿದ್ದವು; ಅವುಗಳ ಸಂಗಡ ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು. ಇನ್ನು ಕೆಲವು ಬೀಜ ಒಳ್ಳೆಯ ನೆಲದಲ್ಲಿ ಬಿದ್ದು ಮೊಳೆತು ನೂರರಷ್ಟು ಫಲವನ್ನು ಕೊಟ್ಟವು.”—ಲೂಕ 8:5-8.
8. ಯೇಸುವಿನ ದೃಷ್ಟಾಂತದಲ್ಲಿ ಬೀಜವು ಏನಾಗಿದೆ?
8 ಕಿವಿಗೊಡುವವನ ಮನಃಸ್ಥಿತಿಯ ಮೇಲೆ ಅವಲಂಬಿಸಿ, ಸುವಾರ್ತೆಯ ಸಾರುವಿಕೆಗೆ ವಿಭಿನ್ನ ಪ್ರತಿಕ್ರಿಯೆಗಳು ತೋರಿಸಲ್ಪಡುವವು ಎಂಬುದನ್ನು ಯೇಸುವಿನ ಸಾಮ್ಯವು ತೋರಿಸಿತು. ಬಿತ್ತಲ್ಪಡುತ್ತಿರುವ ಬೀಜವು “ದೇವರ ವಾಕ್ಯ”ವಾಗಿದೆ. (ಲೂಕ 8:11) ಅಥವಾ, ಸಾಮ್ಯದ ಇನ್ನೊಂದು ದಾಖಲೆಯು ತಿಳಿಸುವಂತೆ, ಬೀಜವು “ಪರಲೋಕರಾಜ್ಯದ ವಾಕ್ಯ”ವಾಗಿದೆ. (ಮತ್ತಾಯ 13:19) ಈ ಎರಡು ಅಭಿವ್ಯಕ್ತಿಗಳಲ್ಲಿ ಯಾವುದನ್ನಾದರೂ ಯೇಸು ಉಪಯೋಗಿಸಸಾಧ್ಯವಿತ್ತು, ಏಕೆಂದರೆ ದೇವರ ವಾಕ್ಯದ ಮುಖ್ಯ ವಿಷಯವೇ ಪರಲೋಕದ ರಾಜ್ಯವಾಗಿದೆ. ಯೇಸು ಕ್ರಿಸ್ತನು ಅದರ ರಾಜನಾಗಿದ್ದು, ಅದರ ಮೂಲಕ ಯೆಹೋವನು ತನ್ನ ಪರಮಾಧಿಕಾರವನ್ನು ಸಮರ್ಥಿಸುವನು ಮತ್ತು ತನ್ನ ಹೆಸರನ್ನು ಪವಿತ್ರೀಕರಿಸುವನು. (ಮತ್ತಾಯ 6:9, 10) ಅಂದರೆ, ದೇವರ ವಾಕ್ಯವಾದ ಬೈಬಲಿನಲ್ಲಿರುವ ಸುವಾರ್ತೆಯ ಸಂದೇಶವೇ ಆ ಬೀಜವಾಗಿದೆ. ಬಿತ್ತುವುದರಲ್ಲಿ ಮಾದರಿಯನ್ನು ತೋರಿಸಿದ ಯೇಸು ಕ್ರಿಸ್ತನನ್ನು ಅನುಕರಿಸುತ್ತಾ ಯೆಹೋವನ ಸಾಕ್ಷಿಗಳು ಬೀಜವನ್ನು ಬಿತ್ತುವಾಗ, ಅವರು ಈ ರಾಜ್ಯ ಸಂದೇಶಕ್ಕೆ ಹೆಚ್ಚಿನ ಮಹತ್ವವನ್ನು ಕೊಡುತ್ತಾರೆ. ಅವರಿಗೆ ಯಾವ ರೀತಿಯ ಪ್ರತಿಕ್ರಿಯೆ ದೊರಕುತ್ತದೆ?
9. (ಎ) ದಾರಿಯ ಮಗ್ಗುಲಲ್ಲಿ ಬೀಳುವ ಬೀಜಗಳು, (ಬಿ) ಬಂಡೆಯ ಮೇಲೆ ಬೀಳುವ ಬೀಜಗಳು, ಮತ್ತು (ಸಿ) ಮುಳ್ಳುಗಿಡಗಳ ನಡುವೆ ಬೀಳುವ ಬೀಜಗಳು ಏನನ್ನು ಚಿತ್ರಿಸುತ್ತವೆ?
9 ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬೀಳುತ್ತವೆ ಮತ್ತು ತುಳಿಯಲ್ಪಡುತ್ತವೆ ಎಂದು ಯೇಸು ಹೇಳಿದನು. ರಾಜ್ಯದ ಬೀಜವು ತಮ್ಮ ಹೃದಯಗಳಲ್ಲಿ ಮೊಳಕೆಯೊಡೆದು ಬೇರೂರುವಂತೆ ಬಿಡಲು ಸಮಯಾವಕಾಶವಿಲ್ಲದಿರುವಷ್ಟು ಕಾರ್ಯಮಗ್ನರಾಗಿರುವ ಜನರನ್ನು ಇದು ಸೂಚಿಸುತ್ತದೆ. ಅವರು ದೇವರ ವಾಕ್ಯದ ಕಡೆಗೆ ಪ್ರೀತಿಯನ್ನು ಬೆಳೆಸಿಕೊಳ್ಳುವುದಕ್ಕೆ ಮೊದಲೇ, “ಸೈತಾನನು ಬಂದು ಅವರು ನಂಬಿ ರಕ್ಷಣೆ ಹೊಂದಬಾರದೆಂದು ವಾಕ್ಯವನ್ನು ಅವರ ಹೃದಯದಿಂದ ತೆಗೆದುಬಿಡುತ್ತಾನೆ.” (ಲೂಕ 8:12) ಕೆಲವು ಬೀಜಗಳು ಬಂಡೆಯ ಮೇಲೆ ಬೀಳುತ್ತವೆ. ಮೊದಮೊದಲು ಬೈಬಲಿನ ಸಂದೇಶಕ್ಕೆ ಆಕರ್ಷಿತರಾಗುವುದಾದರೂ, ಕಾಲಕ್ರಮೇಣ ಅದು ತಮ್ಮ ಮನಸ್ಸುಗಳ ಮೇಲೆ ಪರಿಣಾಮವನ್ನು ಬೀರುವಂತೆ ಯಾರು ಅವಕಾಶವನ್ನು ಕೊಡುವುದಿಲ್ಲವೋ ಅಂತಹ ಜನರನ್ನು ಇದು ಸೂಚಿಸುತ್ತದೆ. ವಿರೋಧವು ಬರುವಾಗ, ಅಥವಾ ಕೆಲವೊಂದು ಬೈಬಲ್ ಸಲಹೆಗಳನ್ನು ತಮ್ಮ ಜೀವಿತದಲ್ಲಿ ಅನ್ವಯಿಸಿಕೊಳ್ಳುವುದು ತುಂಬ ಕಷ್ಟಕರವೆಂದು ಅವರಿಗೆ ಅನಿಸುವಾಗ, ಬೇರಿಲ್ಲದ ಕಾರಣ ಅವರು “ಬಿದ್ದು ಹೋಗುತ್ತಾರೆ.” (ಲೂಕ 8:13) ಅಷ್ಟುಮಾತ್ರವಲ್ಲ, ವಾಕ್ಯಕ್ಕೆ ಕಿವಿಗೊಟ್ಟರೂ, “ಈ ಜೀವಮಾನದಲ್ಲಿ ಆಗುವ ಚಿಂತೆ ಐಶ್ವರ್ಯ ಭೋಗ”ಗಳಲ್ಲಿ ಸಂಪೂರ್ಣವಾಗಿ ತಲ್ಲೀನರಾಗಿರುವ ಜನರು ಸಹ ಇದ್ದಾರೆ. ಕಾಲಕ್ರಮೇಣ, ಮುಳ್ಳುಗಳ ಮಧ್ಯೆ ಸಿಕ್ಕಿಕೊಂಡ ಗಿಡಗಳಂತೆ ಇವರು ಸಂಪೂರ್ಣವಾಗಿ “ಅಡಗಿಸಲ್ಪಡು”ತ್ತಾರೆ.—ಲೂಕ 8:14.
10, 11. (ಎ) ಒಳ್ಳೆಯ ನೆಲವು ಏನನ್ನು ಚಿತ್ರಿಸುತ್ತದೆ? (ಬಿ) ದೇವರ ವಾಕ್ಯವನ್ನು ನಮ್ಮ ಹೃದಯಗಳಲ್ಲಿ ‘ಇಟ್ಟುಕೊಳ್ಳಲಿಕ್ಕಾಗಿ’ ನಾವೇನು ಮಾಡತಕ್ಕದ್ದು?
10 ಕೊನೆಯದಾಗಿ, ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬೀಳುತ್ತವೆ. ಇದು “ಸುಗುಣವುಳ್ಳ ಒಳ್ಳೆಯ ಹೃದಯ”ದಿಂದ ರಾಜ್ಯದ ಸಂದೇಶವನ್ನು ಸ್ವೀಕರಿಸುವ ಜನರನ್ನು ಸೂಚಿಸುತ್ತದೆ. ಸಹಜವಾಗಿಯೇ, ನಮ್ಮಲ್ಲಿ ಪ್ರತಿಯೊಬ್ಬರೂ ಈ ವರ್ಗಕ್ಕೆ ಸೇರಿದ್ದೇವೆ ಎಂದು ನಂಬಲು ಇಷ್ಟಪಡುತ್ತೇವೆ. ಆದರೂ, ಅಂತಿಮ ವಿಶ್ಲೇಷಣೆಯಲ್ಲಿ, ಎಣಿಕೆಗೆ ಬರುವುದು ದೇವರ ದೃಷ್ಟಿಕೋನವೇ. (ಜ್ಞಾನೋಕ್ತಿ 17:3; 1 ಕೊರಿಂಥ 4:4, 5) ನಾವು “ಸುಗುಣವುಳ್ಳ ಒಳ್ಳೆಯ ಹೃದಯ”ವನ್ನು ಹೊಂದಿರುವುದು, ಇಂದಿನಿಂದ ಹಿಡಿದು ನಮ್ಮ ಮರಣದ ತನಕ ಅಥವಾ ದೇವರು ಈ ದುಷ್ಟ ವಿಷಯಗಳ ವ್ಯವಸ್ಥೆಗೆ ಅಂತ್ಯವನ್ನು ತರುವ ತನಕ, ನಮ್ಮ ಕೃತ್ಯಗಳಿಂದ ನಾವು ರುಜುಪಡಿಸುವಂತಹ ವಿಚಾರವನ್ನೇ ಅರ್ಥೈಸುತ್ತದೆ ಎಂದು ಆತನ ವಾಕ್ಯವು ಹೇಳುತ್ತದೆ. ರಾಜ್ಯ ಸಂದೇಶಕ್ಕೆ ಆರಂಭದಲ್ಲಿ ನಾವು ತೋರಿಸುವ ಪ್ರತಿಕ್ರಿಯೆಯು ಸಕಾರಾತ್ಮಕವಾಗಿರುವಲ್ಲಿ, ಅದು ಒಳ್ಳೇದೇ ಸರಿ. ಆದರೂ, ಸುಗುಣವುಳ್ಳ ಒಳ್ಳೆಯ ಹೃದಯವಿರುವವರು, ದೇವರ ವಾಕ್ಯವನ್ನು ಅಂಗೀಕರಿಸಿ, ಅದನ್ನು “ಹೃದಯದಲ್ಲಿ ಇಟ್ಟುಕೊಂಡು ತಾಳ್ಮೆಯಿಂದ ಫಲವನ್ನು ಕೊಡುತ್ತಾರೆ.”—ಲೂಕ 8:15.
11 ದೇವರ ವಾಕ್ಯವನ್ನು ನಮ್ಮ ಹೃದಯದಲ್ಲಿ ಇಟ್ಟುಕೊಳ್ಳುವ ಒಂದೇ ಒಂದು ಮಾರ್ಗವು, ಅದನ್ನು ಖಾಸಗಿಯಾಗಿ ಮತ್ತು ಜೊತೆ ವಿಶ್ವಾಸಿಗಳ ಸಹವಾಸದಲ್ಲಿ ಓದುವುದು ಮತ್ತು ಅಭ್ಯಾಸ ಮಾಡುವುದೇ ಆಗಿದೆ. ಯೇಸುವಿನ ನಿಜ ಹಿಂಬಾಲಕರ ಆತ್ಮಿಕ ಅಭಿರುಚಿಗಳ ಮೇಲ್ವಿಚಾರಣೆ ಮಾಡಲಿಕ್ಕಾಗಿ ನೇಮಿಸಲ್ಪಟ್ಟಿರುವ ಮಾಧ್ಯಮದ ಮೂಲಕ ಒದಗಿಸಲ್ಪಡುವ, ಆತ್ಮಿಕ ಆಹಾರದ ಪೂರ್ಣ ಸದುಪಯೋಗವನ್ನು ಪಡೆದುಕೊಳ್ಳುವುದು ಇದರಲ್ಲಿ ಒಳಗೂಡಿದೆ. (ಮತ್ತಾಯ 24:45-47) ಈ ರೀತಿಯಲ್ಲಿ ದೇವರ ವಾಕ್ಯವನ್ನು ತಮ್ಮ ಹೃದಯಗಳಲ್ಲಿ ಇಟ್ಟುಕೊಂಡಿರುವವರು, “ತಾಳ್ಮೆಯಿಂದ ಫಲವನ್ನು ಕೊಡು”ವಂತೆ ಪ್ರೀತಿಯಿಂದ ಪ್ರಚೋದಿಸಲ್ಪಡುತ್ತಾರೆ.
12. ನಾವು ತಾಳ್ಮೆಯಿಂದ ಕೊಡತಕ್ಕ ಫಲವು ಯಾವುದಾಗಿದೆ?
12 ಒಳ್ಳೆಯ ನೆಲವು ಯಾವ ಫಲವನ್ನು ಕೊಡುತ್ತದೆ? ಪ್ರಕೃತಿಯಲ್ಲಿ, ಬೀಜಗಳು ಗಿಡಗಳಾಗಿ ಬೆಳೆದು ಅದೇ ಜಾತಿಯ ಬೀಜಗಳುಳ್ಳ ಹಣ್ಣುಗಳನ್ನು ಬಿಡುತ್ತವೆ, ಮತ್ತು ಇನ್ನೂ ಹೆಚ್ಚಿನ ಫಲವನ್ನು ಪಡೆದುಕೊಳ್ಳಲಿಕ್ಕಾಗಿ, ಈ ಹಣ್ಣುಗಳಿಂದ ತೆಗೆಯಲ್ಪಟ್ಟ ಬೀಜಗಳನ್ನೇ ಪುನಃ ಬಿತ್ತಲಾಗುತ್ತದೆ. ತದ್ರೀತಿಯಲ್ಲಿ, ಸುಗುಣವುಳ್ಳ ಒಳ್ಳೆಯ ಹೃದಯವಿರುವ ಜನರ ವಿಷಯದಲ್ಲಿ ಹೇಳುವುದಾದರೆ, ಅಂತಹ ಜನರಲ್ಲಿ ದೇವರ ವಾಕ್ಯದ ಬೀಜವು ಬೆಳೆಯುತ್ತದೆ ಮತ್ತು ಇದು ಸಕಾಲದಲ್ಲಿ ಅವರು ಇತರರ ಹೃದಯಗಳಲ್ಲಿ ವಾಕ್ಯದ ಬೀಜವನ್ನು ಬಿತ್ತಸಾಧ್ಯವಾಗುವಷ್ಟರ ಮಟ್ಟಿಗೆ ಆತ್ಮಿಕವಾಗಿ ಪ್ರಗತಿಯನ್ನು ಮಾಡುತ್ತಾ ಇರುವಂತೆ ಪ್ರಚೋದಿಸುತ್ತದೆ. (ಮತ್ತಾಯ 28:19, 20) ಆದರೆ ಅವರು ಬೀಜವನ್ನು ಬಿತ್ತುವಾಗ ತಾಳ್ಮೆಯನ್ನು ತೋರಿಸಬೇಕು. “ಕಡೇ ವರೆಗೂ ತಾಳುವವನು ರಕ್ಷಣೆ ಹೊಂದುವನು. ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು” ಎಂದು ಯೇಸು ಹೇಳಿದಾಗ, ಬೀಜವನ್ನು ಬಿತ್ತುವುದರಲ್ಲಿ ತಾಳ್ಮೆಯ ಮಹತ್ವವನ್ನು ತೋರಿಸಿದನು.—ಮತ್ತಾಯ 24:13, 14.
“ಸಕಲಸತ್ಕಾರ್ಯವೆಂಬ ಫಲವನ್ನು ಕೊಡು”ವುದು
13. ದೇವರ ವಾಕ್ಯದ ಜ್ಞಾನಕ್ಕೂ ಫಲವನ್ನು ಫಲಿಸುವುದಕ್ಕೂ ನಡುವೆ ಸಂಬಂಧವಿದ್ದ ಯಾವ ಪ್ರಾರ್ಥನೆಯನ್ನು ಪೌಲನು ಮಾಡಿದನು?
13 ಫಲವನ್ನು ಕೊಡುವ ಅಗತ್ಯದ ಕುರಿತು ಅಪೊಸ್ತಲ ಪೌಲನು ಸಹ ಮಾತಾಡಿದನು, ಮತ್ತು ಫಲವನ್ನು ಕೊಡುವ ವಿಷಯವನ್ನು ದೇವರ ವಾಕ್ಯದೊಂದಿಗೆ ಅವನು ಸಂಬಂಧಿಸಿದನು. ತನ್ನ ಜೊತೆ ವಿಶ್ವಾಸಿಗಳ ಪರವಾಗಿ ಅವನು ಪ್ರಾರ್ಥಿಸಿದ್ದು: ‘ನೀವು ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ ಕರ್ತನ [ದೇವರ] ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿಕೊಂಡು ಆತನಿಗೆ [ಯೆಹೋವನಿಗೆ] ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿರಬೇಕೆಂತಲೂ ನೀವು ಸಕಲಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ ದೇವಜ್ಞಾನದಿಂದ ಅಭಿವೃದ್ಧಿಯಾಗುತ್ತಾ ಇರಿ.’—ಕೊಲೊಸ್ಸೆ 1:9, 10; ಫಿಲಿಪ್ಪಿ 1:9-11.
14-16. ಪೌಲನ ಪ್ರಾರ್ಥನೆಗೆ ಹೊಂದಿಕೆಯಲ್ಲಿ, ದೇವರ ವಾಕ್ಯವನ್ನು ಪ್ರೀತಿಸುವವರಿಂದ ಯಾವ ಫಲವು ಉತ್ಪಾದಿಸಲ್ಪಡುತ್ತದೆ?
14 ಹೀಗೆ, ಬೈಬಲ್ ಜ್ಞಾನವನ್ನು ಪಡೆದುಕೊಳ್ಳುವುದು ತಾನೇ ಅಂತಿಮ ಗುರಿಯಾಗಿರುವುದಿಲ್ಲ ಎಂಬುದನ್ನು ಪೌಲನು ತೋರಿಸುತ್ತಾನೆ. ಅದಕ್ಕೆ ಬದಲಾಗಿ, ದೇವರ ವಾಕ್ಯಕ್ಕಾಗಿರುವ ಪ್ರೀತಿಯು, ‘ಸಕಲಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ’ ಇರುವ ಮೂಲಕ “ಯೆಹೋವನಿಗೆ ಯೋಗ್ಯರಾಗಿ ನಡೆ”ದುಕೊಳ್ಳುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಯಾವ ಸತ್ಕಾರ್ಯ? ರಾಜ್ಯದ ಸುವಾರ್ತೆಯನ್ನು ಸಾರುವುದು ಈ ಕಡೇ ದಿವಸಗಳಲ್ಲಿ ಜೀವಿಸುತ್ತಿರುವ ಕ್ರೈಸ್ತರಿಗೆ ಅತಿ ಪ್ರಾಮುಖ್ಯವಾದ ನೇಮಕವಾಗಿದೆ. (ಮಾರ್ಕ 13:10) ಇದಕ್ಕೆ ಕೂಡಿಸಿ, ದೇವರ ವಾಕ್ಯವನ್ನು ಪ್ರೀತಿಸುವವರು, ಈ ಕೆಲಸಕ್ಕೆ ಕ್ರಮವಾಗಿ ಆರ್ಥಿಕ ರೀತಿಯಲ್ಲಿ ಸಹಾಯವನ್ನು ಮಾಡಲಿಕ್ಕಾಗಿ ತಮ್ಮ ಕೈಲಾದುದೆಲ್ಲವನ್ನೂ ಮಾಡುತ್ತಾರೆ. “ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು” ಎಂದು ತಿಳಿದವರಾಗಿದ್ದು, ಈ ಸುಯೋಗದಲ್ಲಿ ಅವರು ಆನಂದಿಸುತ್ತಾರೆ. (2 ಕೊರಿಂಥ 9:7) ಎಲ್ಲಿ ರಾಜ್ಯ ಸಾರುವಿಕೆಯ ಚಟುವಟಿಕೆಯು ಮಾರ್ಗದರ್ಶಿಸಲ್ಪಡುತ್ತದೋ ಮತ್ತು ಎಲ್ಲಿ ಬೈಬಲುಗಳು ಹಾಗೂ ಬೈಬಲ್ ಸಾಹಿತ್ಯಗಳು ತಯಾರಿಸಲ್ಪಡುತ್ತವೋ ಅಂತಹ ನೂರಕ್ಕಿಂತಲೂ ಹೆಚ್ಚು ಬೆತೆಲ್ ಸೌಕರ್ಯಗಳನ್ನು ನೋಡಿಕೊಳ್ಳುವ ವೆಚ್ಚವನ್ನು ಸರಿದೂಗಿಸಲು ಅವರ ಕಾಣಿಕೆಗಳು ಸಹಾಯ ಮಾಡುತ್ತವೆ. ದೊಡ್ಡ ದೊಡ್ಡ ಕ್ರೈಸ್ತ ಅಧಿವೇಶನಗಳ ಖರ್ಚುಗಳಿಗೆ ವಿನಿಯೋಗಿಸಲು ಮತ್ತು ಸಂಚರಣ ಮೇಲ್ವಿಚಾರಕರು, ಮಿಷನೆರಿಗಳು, ಹಾಗೂ ಇನ್ನಿತರ ಪೂರ್ಣ ಸಮಯದ ಸೌವಾರ್ತಿಕರನ್ನು ಬೇರೆ ಕಡೆಗೆ ಕಳುಹಿಸಲು ಸಹ ಅವರ ಕಾಣಿಕೆಗಳು ಸಹಾಯ ಮಾಡುತ್ತವೆ.
15 ಸತ್ಯಾರಾಧನೆಯ ಕೇಂದ್ರಗಳನ್ನು ನಿರ್ಮಿಸುವುದು ಹಾಗೂ ಅವುಗಳನ್ನು ನೋಡಿಕೊಳ್ಳುವುದು ಸಹ ಈ ಸತ್ಕಾರ್ಯದಲ್ಲಿ ಒಳಗೂಡಿದೆ. ದೇವರ ವಾಕ್ಯಕ್ಕಾಗಿರುವ ಪ್ರೀತಿಯು, ಸಮ್ಮೇಳನದ ಹಾಲ್ಗಳು ಮತ್ತು ರಾಜ್ಯ ಸಭಾಗೃಹಗಳು ಕಡೆಗಣಿಸಲ್ಪಡುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುವಂತೆ ದೇವರ ಆರಾಧಕರನ್ನು ಪ್ರಚೋದಿಸುತ್ತದೆ. (ನೆಹೆಮೀಯ 10:39ನ್ನು ಹೋಲಿಸಿರಿ.) ಇಂತಹ ಕಟ್ಟಡಗಳ ಮುಂದೆ ದೇವರ ಹೆಸರು ಕಂಡುಬರುವುದರಿಂದ, ಈ ಕಟ್ಟಡಗಳ ಒಳಗೂ ಹೊರಗೂ ಶುಚಿಯಾಗಿಯೂ ಆಕರ್ಷಕವಾಗಿಯೂ ಇಡುವುದು ಅತ್ಯಾವಶ್ಯಕವಾದದ್ದಾಗಿದೆ. ಅಷ್ಟುಮಾತ್ರವಲ್ಲ, ಇಂತಹ ಸಭಾಗೃಹಗಳ ಒಳಗೆ ಆರಾಧನೆಯನ್ನು ಸಲ್ಲಿಸುವ ಜನರ ನಡೆನುಡಿಯು ಸಹ ನಿಷ್ಕಳಂಕವಾಗಿರಬೇಕು. (2 ಕೊರಿಂಥ 6:3) ಕೆಲವು ಕ್ರೈಸ್ತರು ಇನ್ನೂ ಹೆಚ್ಚಿನದ್ದನ್ನು ಮಾಡಶಕ್ತರಾಗಿದ್ದಾರೆ. ದೇವರ ವಾಕ್ಯಕ್ಕಾಗಿರುವ ಪ್ರೀತಿಯು ಅವರನ್ನು, ಬಡತನ ಅಥವಾ ಕೌಶಲಗಳ ಕೊರತೆಯ ಕಾರಣದಿಂದ ಲೋಕದ ಯಾವ ಭಾಗಗಳಲ್ಲಿ ಅಗತ್ಯವಿದೆಯೋ ಅಲ್ಲಿ ಹೊಸ ಆರಾಧನಾ ಸ್ಥಳಗಳನ್ನು ಕಟ್ಟುವ ಕೆಲಸದಲ್ಲಿ ಪಾಲ್ಗೊಳ್ಳಲಿಕ್ಕಾಗಿ ತುಂಬ ದೂರದ ವರೆಗೆ ಪ್ರಯಾಣಿಸುವಂತೆ ಉತ್ತೇಜಿಸುತ್ತದೆ.—2 ಕೊರಿಂಥ 8:14.
16 “ಸಕಲಸತ್ಕಾರ್ಯವೆಂಬ ಫಲವನ್ನು ಕೊಡು”ವುದರಲ್ಲಿ, ಕುಟುಂಬದ ಜವಾಬ್ದಾರಿಗಳನ್ನು ಹೊರುವುದು ಮತ್ತು ಜೊತೆ ಕ್ರೈಸ್ತರಿಗಾಗಿ ಚಿಂತೆಯನ್ನು ತೋರಿಸುವುದು ಸಹ ಒಳಗೂಡಿದೆ. ದೇವರ ವಾಕ್ಯಕ್ಕಾಗಿರುವ ಪ್ರೀತಿಯು, “ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರ” ಆವಶ್ಯಕತೆಗಳಿಗೆ ಪ್ರತಿಕ್ರಿಯಿಸುತ್ತಾ, “ಮೊದಲು [ನಮ್ಮ] ಸ್ವಂತ ಮನೆವಾರ್ತೆಯಲ್ಲಿ ದೈವಿಕ ಭಕ್ತಿಯನ್ನು ತೋರಿಸುತ್ತಾ ಮುಂದುವರಿಯುವಂತೆ” ನಮ್ಮನ್ನು ಪ್ರಚೋದಿಸುತ್ತದೆ. (ಗಲಾತ್ಯ 6:10; 1 ತಿಮೊಥೆಯ 5:4, 8, NW) ಈ ವಿಷಯಕ್ಕೆ ಸಂಬಂಧಿಸಿ, ಅಸ್ವಸ್ಥರನ್ನು ಭೇಟಿಮಾಡುವುದು ಮತ್ತು ಶೋಕಗ್ರಸ್ತರನ್ನು ಸಂತೈಸುವುದು ಸಹ ಸತ್ಕಾರ್ಯವಾಗಿದೆ. ಇದಲ್ಲದೆ, ಪಂಥಾಹ್ವಾನದಾಯಕವಾದ ವೈದ್ಯಕೀಯ ಸನ್ನಿವೇಶಗಳನ್ನು ಎದುರಿಸುವ ವ್ಯಕ್ತಿಗಳಿಗೆ ಸಹಾಯ ಮಾಡುತ್ತಿರುವ ಸಭಾ ಹಿರಿಯರು ಮತ್ತು ಹಾಸ್ಪಿಟಲ್ ಲಿಏಸಾನ್ ಕಮಿಟಿಗಳಿಂದ ಎಷ್ಟು ಅಮೂಲ್ಯವಾದ ಕೆಲಸವು ಪೂರೈಸಲ್ಪಡುತ್ತಿದೆ! (ಅ. ಕೃತ್ಯಗಳು 15:29) ಇಂದು ವಿಪತ್ತುಗಳು ಸಹ ಅತ್ಯಧಿಕಗೊಳ್ಳುತ್ತಿವೆ—ಇವುಗಳಲ್ಲಿ ಕೆಲವು ನೈಸರ್ಗಿಕವಾಗಿವೆ ಮತ್ತು ಇನ್ನು ಕೆಲವು ಮಾನವರ ಅಚಾತುರ್ಯಗಳಿಂದಾಗಿವೆ. ದೇವರಾತ್ಮದ ಸಹಾಯದಿಂದ, ಭೂಮಿಯ ಅನೇಕ ಭಾಗಗಳಲ್ಲಿ ವಿಪತ್ತುಗಳು ಅಥವಾ ಅಪಘಾತಗಳಿಗೆ ಬಲಿಯಾಗಿರುವ ಜೊತೆ ವಿಶ್ವಾಸಿಗಳಿಗೆ ಮತ್ತು ಇತರರಿಗೆ ತ್ವರಿತಗತಿಯ ಪರಿಹಾರವನ್ನು ಒದಗಿಸುವುದರಲ್ಲಿ, ಯೆಹೋವನ ಸಾಕ್ಷಿಗಳು ಒಂದು ಅತ್ಯುತ್ತಮ ದಾಖಲೆಯನ್ನು ಸ್ಥಾಪಿಸಿದ್ದಾರೆ. ಇವೆಲ್ಲವೂ, ದೇವರ ವಾಕ್ಯವನ್ನು ಪ್ರೀತಿಸುವವರಿಂದ ವ್ಯಕ್ತಪಡಿಸಲ್ಪಡುವ ಒಳ್ಳೆಯ ಫಲಗಳಾಗಿವೆ.
ಅದ್ಭುತಕರವಾದ ಭಾವೀ ಪ್ರಯೋಜನಗಳು
17, 18. (ಎ) ರಾಜ್ಯದ ಬೀಜವನ್ನು ಬಿತ್ತುವ ಮೂಲಕ ಏನು ಪೂರೈಸಲ್ಪಡುತ್ತಿದೆ? (ಬಿ) ದೇವರ ವಾಕ್ಯವನ್ನು ಪ್ರೀತಿಸುವವರು, ಅತಿ ಬೇಗನೆ ಯಾವ ವಿಪ್ಲವಕರ ಘಟನೆಗಳನ್ನು ಕಣ್ಣಾರೆ ನೋಡುವರು?
17 ರಾಜ್ಯದ ಬೀಜವನ್ನು ಬಿತ್ತುವ ಕೆಲಸವು, ಮಾನವಕುಲಕ್ಕೆ ಮಹತ್ತರವಾದ ಪ್ರಯೋಜನಗಳನ್ನು ಉಂಟುಮಾಡುತ್ತದೆ. ಇತ್ತೀಚಿನ ವರ್ಷಗಳಲ್ಲಿ, ಪ್ರತಿ ವರ್ಷ 3,00,000ಕ್ಕಿಂತಲೂ ಹೆಚ್ಚು ಜನರು ಎಷ್ಟರ ಮಟ್ಟಿಗೆ ಬೈಬಲ್ ಸಂದೇಶವು ತಮ್ಮ ಹೃದಯಗಳಲ್ಲಿ ಬೇರೂರುವಂತೆ ಬಿಟ್ಟಿದ್ದಾರೆಂದರೆ, ಅವರು ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡು, ನೀರಿನ ದೀಕ್ಷಾಸ್ನಾನದ ಮೂಲಕ ಇದನ್ನು ಸಂಕೇತಿಸಿದ್ದಾರೆ. ಎಂತಹ ಅದ್ಭುತಕರವಾದ ಭವಿಷ್ಯತ್ತು ಅವರಿಗಾಗಿ ಕಾದಿರಿಸಲ್ಪಟ್ಟಿದೆ!
18 ಅತಿ ಬೇಗನೆ, ಯೆಹೋವ ದೇವರು ತನ್ನ ಹೆಸರನ್ನು ಮಹಿಮೆಗೇರಿಸಲು ಕಾರ್ಯನಡಿಸುವನು ಎಂಬುದು ದೇವರ ವಾಕ್ಯವನ್ನು ಪ್ರೀತಿಸುವವರ ಅರಿವಿಗೆ ಬರುತ್ತದೆ. ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ “ಮಹಾ ಬಾಬೆಲ್” ಸಂಪೂರ್ಣವಾಗಿ ನಾಶಮಾಡಲ್ಪಡುವುದು. (ಪ್ರಕಟನೆ 18:2, 8, NW) ತದನಂತರ, ಯಾರು ದೇವರ ವಾಕ್ಯಕ್ಕೆ ಅನುಸಾರವಾಗಿ ಜೀವಿಸಲು ನಿರಾಕರಿಸುತ್ತಾರೋ ಅವರನ್ನು ಅರಸನಾದ ಯೇಸು ಕ್ರಿಸ್ತನು ಮರಣಕ್ಕೆ ಒಪ್ಪಿಸುವನು. (ಕೀರ್ತನೆ 2:9-11; ದಾನಿಯೇಲ 2:44) ಆಮೇಲೆ, ದುಷ್ಕೃತ್ಯ, ಯುದ್ಧ, ಮತ್ತು ಇತರ ವಿಪತ್ತುಗಳಿಂದ ದೇವರ ರಾಜ್ಯವು ಶಾಶ್ವತವಾದ ಪರಿಹಾರವನ್ನು ನೀಡುವುದು. ಇನ್ನೆಂದಿಗೂ ವೇದನೆ, ಅಸ್ವಸ್ಥತೆ, ಮತ್ತು ಮರಣದ ಕಾರಣದಿಂದ ನೊಂದಿರುವ ಜನರನ್ನು ಸಂತೈಸುವ ಅಗತ್ಯವಿರುವುದಿಲ್ಲ.—ಪ್ರಕಟನೆ 21:3, 4.
19, 20. ದೇವರ ವಾಕ್ಯವನ್ನು ನಿಜವಾಗಿಯೂ ಪ್ರೀತಿಸುವವರಿಗೆ, ಅದ್ಭುತಕರವಾದ ಯಾವ ಭವಿಷ್ಯತ್ತು ಕಾದಿರಿಸಲ್ಪಟ್ಟಿದೆ?
19 ಆಗ, ಯಾರು ದೇವರ ವಾಕ್ಯವನ್ನು ಪ್ರೀತಿಸುತ್ತಾರೋ ಅವರಿಂದ ಎಂತಹ ವಿಶೇಷ ಸತ್ಕಾರ್ಯಗಳು ಪೂರೈಸಲ್ಪಡುವವು! ಅರ್ಮಗೆದೋನ್ನಿಂದ ಪಾರಾಗುವವರು ಈ ಭೂಮಿಯನ್ನು ಪ್ರಮೋದವನವನ್ನಾಗಿ ರೂಪಾಂತರಿಸುವ ಆನಂದಮಯ ಕೆಲಸವನ್ನು ಆರಂಭಿಸುವರು. ಮೃತರಿಗಾಗುವ ಪುನರುತ್ಥಾನದಲ್ಲಿ ಪಾಲ್ಗೊಳ್ಳುವ ಪ್ರತೀಕ್ಷೆಯಿಂದ, ಈಗ ಸಮಾಧಿಯಲ್ಲಿ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿರುವ ಮತ್ತು ದೇವರ ಸ್ಮರಣೆಯಲ್ಲಿರುವ ಮೃತ ಮಾನವರ ಆವಶ್ಯಕತೆಗಳಿಗಾಗಿ ಸಿದ್ಧತೆಗಳನ್ನು ಮಾಡುವಂತಹ ರೋಮಾಂಚಕ ಸುಯೋಗವು ಅವರಿಗಿರುವುದು. (ಯೋಹಾನ 5:28, 29) ಆ ಸಮಯದಲ್ಲಿ, ಸಾರ್ವಭೌಮನಾದ ಯೆಹೋವನಿಂದ ಘನತೆಗೇರಿಸಲ್ಪಟ್ಟಿರುವ ಆತನ ಮಗನಾದ ಯೇಸು ಕ್ರಿಸ್ತನ ಮೂಲಕ ಭೂನಿವಾಸಿಗಳಿಗೆ ಪರಿಪೂರ್ಣ ಮಾರ್ಗದರ್ಶನವು ಒದಗಿಸಲ್ಪಡುವುದು. ‘ಸುರುಳಿಗಳು ತೆರೆಯಲ್ಪಡುವವು’ ಮತ್ತು ಹೊಸ ಲೋಕದ ಜೀವನ ರೀತಿಯ ಕುರಿತಾದ ಯೆಹೋವನ ಉಪದೇಶಗಳನ್ನು ಇವು ಪ್ರಕಟಪಡಿಸುವವು.—ಪ್ರಕಟನೆ 20:12 NW.
20 ಯೆಹೋವನ ನೇಮಿತ ಸಮಯದಲ್ಲಿ, ನಂಬಿಗಸ್ತ ಅಭಿಷಿಕ್ತ ಕ್ರೈಸ್ತರ ಇಡೀ ಗುಂಪು, ‘ಕ್ರಿಸ್ತನೊಂದಿಗೆ ಸಹಬಾಧ್ಯಸ್ಥ’ರೋಪಾದಿ ತಮ್ಮ ಸ್ವರ್ಗೀಯ ಬಹುಮಾನವನ್ನು ಪಡೆದುಕೊಳ್ಳಲಿಕ್ಕಾಗಿ ಎಬ್ಬಿಸಲ್ಪಡುವುದು. (ರೋಮಾಪುರ 8:17) ಕ್ರಿಸ್ತನ ಸಾವಿರ ವರ್ಷದಾಳಿಕೆಯ ಸಮಯದಲ್ಲಿ, ಭೂಮಿಯಲ್ಲಿ ದೇವರ ವಾಕ್ಯವನ್ನು ಪ್ರೀತಿಸುವ ಎಲ್ಲ ಮಾನವರ ಮನಸ್ಸು ಹಾಗೂ ದೇಹವು ಪರಿಪೂರ್ಣತೆಗೇರಿಸಲ್ಪಡುವುದು. ಅಂತಿಮ ಪರೀಕ್ಷೆಯ ಕೆಳಗೆ ನಂಬಿಗಸ್ತರಾಗಿ ರುಜುಪಡಿಸಿಕೊಂಡವರಿಗೆ, ಅನಂತರ ನಿತ್ಯಜೀವದ ಬಹುಮಾನವು ಕೊಡಲ್ಪಡುವುದು ಮತ್ತು ಅವರು “ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ” ಆನಂದಿಸುವರು. (ರೋಮಾಪುರ 8:21; ಪ್ರಕಟನೆ 20:1-3, 7-10) ಅದು ಎಷ್ಟು ಅದ್ಭುತಕರವಾದ ಸಮಯವಾಗಿರುವುದು! ನಿಜವಾಗಿಯೂ, ಯೆಹೋವನು ನಮಗೆ ಸ್ವರ್ಗೀಯ ನಿರೀಕ್ಷೆಯನ್ನೇ ಕೊಟ್ಟಿರಲಿ ಅಥವಾ ಭೂನಿರೀಕ್ಷೆಯನ್ನೇ ಕೊಟ್ಟಿರಲಿ, ಆತನ ವಾಕ್ಯವನ್ನು ಯಾವಾಗಲೂ ಪ್ರೀತಿಸುವುದು ಹಾಗೂ ದೈವಿಕ ವಿವೇಕಕ್ಕನುಸಾರ ಜೀವಿಸಲು ನಿರ್ಧರಿಸುವುದು, ಈಗ ನಮ್ಮನ್ನು ಕಾಪಾಡುವುದು. ಮತ್ತು ನಾವು ‘ಅದನ್ನು ಅಪ್ಪಿಕೊಳ್ಳುವುದರಿಂದ’ ಭವಿಷ್ಯತ್ತಿನಲ್ಲಿ ‘ನಮ್ಮನ್ನು ಘನಪಡಿಸುವುದು.’—ಜ್ಞಾನೋಕ್ತಿ 4:6, 8.
ನೀವು ವಿವರಿಸಬಲ್ಲಿರೊ?
◻ ದೇವರ ವಾಕ್ಯಕ್ಕಾಗಿರುವ ಪ್ರೀತಿಯು ನಮ್ಮನ್ನು ಹೇಗೆ ಕಾಪಾಡುವುದು?
◻ ಯೇಸುವಿನ ದೃಷ್ಟಾಂತದಲ್ಲಿ ಸೂಚಿಸಲ್ಪಟ್ಟ ಬೀಜವು ಏನಾಗಿದೆ, ಮತ್ತು ಅದನ್ನು ಹೇಗೆ ಬಿತ್ತಲಾಗುತ್ತದೆ?
◻ ನಾವು “ಒಳ್ಳೆಯ ನೆಲ”ವಾಗಿ ಹೇಗೆ ರುಜುಪಡಿಸಿಕೊಳ್ಳಬಲ್ಲೆವು?
◻ ದೇವರ ವಾಕ್ಯವನ್ನು ಪ್ರೀತಿಸುವವರು ಯಾವ ಪ್ರಯೋಜನಗಳನ್ನು ಮುನ್ನೋಡಸಾಧ್ಯವಿದೆ?
[ಪುಟ 16 ರಲ್ಲಿರುವ ಚಿತ್ರ]
ಯೇಸುವಿನ ದೃಷ್ಟಾಂತದಲ್ಲಿ ತಿಳಿಸಲ್ಪಟ್ಟ ಬೀಜವು, ದೇವರ ವಾಕ್ಯದಲ್ಲಿರುವ ಸುವಾರ್ತೆಯ ಸಂದೇಶವನ್ನು ಚಿತ್ರಿಸುತ್ತದೆ
[ಕೃಪೆ]
Garo Nalbandian
[ಪುಟ 17 ರಲ್ಲಿರುವ ಚಿತ್ರ]
ಬೀಜ ಬಿತ್ತುವುದರಲ್ಲೇ ಆದರ್ಶಪ್ರಾಯನಾದ ವ್ಯಕ್ತಿಯನ್ನು ಯೆಹೋವನ ಸಾಕ್ಷಿಗಳು ಅನುಕರಿಸುತ್ತಾರೆ
[ಪುಟ 18 ರಲ್ಲಿರುವ ಚಿತ್ರಗಳು]
ಅರ್ಮಗೆದೋನ್ನಿಂದ ಪಾರಾಗುವವರು ಭೂಮಿಯ ಫಲಗಳನ್ನು ಅನುಭವಿಸುವರು