ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w08 7/15 ಪು. 12-16
  • ‘ಬೆಳಸುವವನು ದೇವರೇ’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ಬೆಳಸುವವನು ದೇವರೇ’
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ವಿವಿಧ ರೀತಿಯ ಮಣ್ಣು
  • ವಾಕ್ಯವನ್ನು ಕೇಳುವವರ ಜವಾಬ್ದಾರಿ
  • ಮಲಗುವ ಬಿತ್ತನೆಗಾರ
  • ನಮಗಾಗಿ ಪಾಠಗಳು
  • ದೃಷ್ಟಾಂತಗಳ ಮೂಲಕ ಕಲಿಸುವುದು
    ಅತ್ಯಂತ ಮಹಾನ್‌ ಪುರುಷ
  • ‘ನನ್ನ ವಾಕ್ಯದಲ್ಲಿ ನೆಲೆಗೊಂಡಿರಿ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ದೇವರ ವಾಕ್ಯವನ್ನು ಪ್ರೀತಿಸುವುದರಿಂದ ದೊರಕುವ ಪ್ರಯೋಜನಗಳು
    ಕಾವಲಿನಬುರುಜು—1999
  • ಯೇಸುವಿನ ದೃಷ್ಟಾಂತಗಳಿಂದ ಪ್ರಯೋಜನ ಪಡೆಯುವುದು
    ಕಾವಲಿನಬುರುಜು—1990
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
w08 7/15 ಪು. 12-16

‘ಬೆಳಸುವವನು ದೇವರೇ’

“ನೆಡುವವನಾಗಲಿ ನೀರುಹೊಯ್ಯುವವನಾಗಲಿ ವಿಶೇಷವಾದವನಲ್ಲ, ಬೆಳಸುವ ದೇವರೇ ವಿಶೇಷವಾದವನು.”​—⁠1 ಕೊರಿಂ. 3:7.

1. ನಾವು ಯಾವ ವಿಧದಲ್ಲಿ “ದೇವರ ಜೊತೆಕೆಲಸದವರು” ಆಗಿದ್ದೇವೆ?

“ದೇವರ ಜೊತೆಕೆಲಸದವರು.” ಈ ಮಾತುಗಳಲ್ಲಿ ಅಪೊಸ್ತಲ ಪೌಲನು ನಮಗೆಲ್ಲರಿಗಿರುವ ಸದವಕಾಶವನ್ನು ವರ್ಣಿಸಿದನು. (1 ಕೊರಿಂಥ 3:5-9 ಓದಿ.) ಇಲ್ಲಿ ಪೌಲನು ಶಿಷ್ಯರನ್ನಾಗಿ ಮಾಡುವ ಕೆಲಸಕ್ಕೆ ಸೂಚಿಸುತ್ತಿದ್ದನು. ಅವನು ಇದನ್ನು ಬೀಜ ಬಿತ್ತುವ ಮತ್ತು ನೀರುಣಿಸುವ ಕೆಲಸಕ್ಕೆ ಹೋಲಿಸಿದನು. ಈ ಪ್ರಾಮುಖ್ಯ ಕೆಲಸದಲ್ಲಿ ಯಶಸ್ವಿಗಳಾಗಲು ಯೆಹೋವನ ಸಹಾಯದ ಅಗತ್ಯ ನಮಗಿದೆ. ಆದ್ದರಿಂದಲೇ ಪೌಲನು ನಮಗೆ ನೆನಪುಹುಟ್ಟಿಸುವುದು: ‘ಬೆಳಸುವವನು ದೇವರೇ.’

2. ‘ಬೆಳಸುವವನು ದೇವರೇ’ ಎಂಬ ವಾಸ್ತವಾಂಶವು ಶುಶ್ರೂಷೆಯ ಬಗ್ಗೆ ನಮಗೆ ಯೋಗ್ಯ ನೋಟವಿರುವಂತೆ ಹೇಗೆ ಸಹಾಯ ಮಾಡುತ್ತದೆ?

2 ಈ ವಾಸ್ತವಾಂಶವು, ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನಾವೇ ಪ್ರಮುಖರಲ್ಲ ಎಂಬದನ್ನು ತೋರಿಸುತ್ತದೆ ಮತ್ತು ಶುಶ್ರೂಷೆಯ ಬಗ್ಗೆ ನಮಗೆ ಯೋಗ್ಯ ನೋಟವಿರುವಂತೆ ಸಹಾಯ ಮಾಡುತ್ತದೆ. ಸಾರುವುದರಲ್ಲಿ ಮತ್ತು ಬೋಧಿಸುವುದರಲ್ಲಿ ನಾವು ಶ್ರದ್ಧೆಯಿಂದ ಕೆಲಸಮಾಡಿದರೂ ಆಗುವ ಬೆಳವಣಿಗೆಗೆ ಕೀರ್ತಿ ಯೆಹೋವನೊಬ್ಬನಿಗೇ ಸಲ್ಲಬೇಕು. ಏಕೆ? ಒಬ್ಬ ವ್ಯಕ್ತಿ ಹೇಗೆ ಶಿಷ್ಯನಾಗುತ್ತಾನೆ ಎಂಬುದೇ ನಮಗೆ ಪೂರ್ಣವಾಗಿ ಅರ್ಥವಾಗದಿರುವಾಗ ಆತನ ಆಧ್ಯಾತ್ಮಿಕ ಬೆಳವಣಿಗೆಗೆ ನಾವು ಖಂಡಿತ ಕಾರಣರಾಗಿರಲು ಸಾಧ್ಯವಿಲ್ಲ. ರಾಜ ಸೊಲೊಮೋನನು ಸೂಕ್ತವಾಗಿ ಹೇಳಿದ್ದು: “ಎಲ್ಲವನ್ನೂ ಮಾಡುವ ದೇವರ ಕೆಲಸವನ್ನು ತಿಳಿದುಕೊಳ್ಳಲಾರಿರಿ.”​—⁠ಪ್ರಸಂ. 11:5, NIBV.

3. ಬೀಜವನ್ನು ಬಿತ್ತುವುದಕ್ಕೂ ಶಿಷ್ಯರನ್ನಾಗಿ ಮಾಡುವ ಕೆಲಸಕ್ಕೂ ಯಾವ ಹೋಲಿಕೆಯಿದೆ?

3 ಒಬ್ಬ ವ್ಯಕ್ತಿ ಹೇಗೆ ಶಿಷ್ಯನಾಗುತ್ತಾನೆ ಎಂಬುದು ನಮಗೆ ಪೂರ್ಣವಾಗಿ ಅರ್ಥವಾಗದ ಕಾರಣ ನಮಗೆ ಹತಾಶೆಯಾಗುತ್ತದೋ? ಇಲ್ಲ. ಬದಲಾಗಿ ಇದೇ ಅಂಶವು ನಮ್ಮ ಕೆಲಸವನ್ನು ಕುತೂಹಲಕರ ಮತ್ತು ಆಸಕ್ತಿಕರವನ್ನಾಗಿ ಮಾಡುತ್ತದೆ. ರಾಜ ಸೊಲೊಮೋನನು ಹೇಳಿದ್ದು: “ಮುಂಜಾನೆ ಬೀಜಬಿತ್ತು, ಸಂಜೆಯ ತನಕ ಕೈದೆಗೆಯಬೇಡ; ಇದು ಸಫಲವೋ, ಅದು ಸಫಲವೋ, ಒಂದು ವೇಳೆ ಎರಡೂ ಚೆನ್ನಾಗುವವೋ ನಿನಗೆ ತಿಳಿಯದು.” (ಪ್ರಸಂ. 11:6) ಒಂದು ಬೀಜವನ್ನು ನೆಡುವಾಗ ಅದು ಮೊಳಕೆಯೊಡೆಯುವುದೋ ಇಲ್ಲವೋ ನಮಗೆ ತಿಳಿದಿರುವುದಿಲ್ಲ. ಹಲವಾರು ಅಂಶಗಳು ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ಶಿಷ್ಯರನ್ನಾಗಿ ಮಾಡುವ ಕೆಲಸದ ಬಗ್ಗೆಯೂ ಇದನ್ನೇ ಹೇಳಸಾಧ್ಯವಿದೆ. ಇದನ್ನು ಯೇಸು ಎರಡು ಸಾಮ್ಯಗಳಲ್ಲಿ ಎತ್ತಿತೋರಿಸಿದನು. ಇವು ಮಾರ್ಕನ ಸುವಾರ್ತೆಯ 4ನೇ ಅಧ್ಯಾಯದಲ್ಲಿ ನಮಗಾಗಿ ದಾಖಲಾಗಿವೆ. ಆ ಸಾಮ್ಯಗಳಿಂದ ನಾವೇನನ್ನು ಕಲಿಯಸಾಧ್ಯವಿದೆ ಎಂಬುದನ್ನು ಪರಿಗಣಿಸೋಣ.

ವಿವಿಧ ರೀತಿಯ ಮಣ್ಣು

4, 5. ಬೀಜ ಬಿತ್ತುವವನ ಕುರಿತಾದ ಯೇಸುವಿನ ಸಾಮ್ಯವನ್ನು ಸಾರಾಂಶಿಸಿ.

4 ಮಾರ್ಕ 4:1-9ರಲ್ಲಿ ಬೀಜ ಬಿತ್ತುವವನ ಕುರಿತು ಯೇಸು ವರ್ಣಿಸಿದನು. ಅವನು ಬೀಜಗಳನ್ನು ಚದುರಿಸಿದಾಗ ಅವು ಬೇರೆ ಬೇರೆ ಸ್ಥಳಗಳಲ್ಲಿ ಬಿದ್ದವು. ಯೇಸು ಹೇಳಿದ್ದು: “ಕೇಳಿರಿ! ಬಿತ್ತುವವನು ಬಿತ್ತುವದಕ್ಕೆ ಹೊರಟನು. ಬಿತ್ತುವಾಗ ಕೆಲವು ಬೀಜ ದಾರಿಯ ಮಗ್ಗುಲಲ್ಲಿ ಬಿದ್ದವು; ಹಕ್ಕಿಗಳು ಬಂದು ಅವುಗಳನ್ನು ತಿಂದುಬಿಟ್ಟವು. ಬೇರೆ ಕೆಲವು ಬೀಜ ಬಹಳ ಮಣ್ಣಿಲ್ಲದ ಬಂಡೆಯ ನೆಲದಲ್ಲಿ ಬಿದ್ದವು; ಅಲ್ಲಿ ಮಣ್ಣು ತೆಳ್ಳಗಿದ್ದದರಿಂದ ಅವು ಬೇಗ ಮೊಳೆತವು; ಆದರೆ ಬಿಸಲೇರಿದಾಗ ಬಾಡಿ ಬೇರಿಲ್ಲದಕಾರಣ ಒಣಗಿಹೋದವು. ಮತ್ತೆ ಕೆಲವು ಬೀಜ ಮುಳ್ಳುಗಿಡಗಳಲ್ಲಿ ಬಿದ್ದವು; ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟದ್ದರಿಂದ ಅವು ಫಲಕೊಡಲಿಲ್ಲ. ಇನ್ನು ಕೆಲವು ಬೀಜ ಒಳ್ಳೆಯ ನೆಲದಲ್ಲಿ ಬಿದ್ದು ಹುಟ್ಟಿ ಬೆಳೆಯುತ್ತಾ ಬಂದು ಒಂದು ಮೂವತ್ತರಷ್ಟು, ಒಂದು ಅರುವತ್ತರಷ್ಟು, ಒಂದು ನೂರರಷ್ಟು ಫಲವನ್ನು ಕೊಟ್ಟವು.”

5 ಬೈಬಲ್‌ ಸಮಯಗಳಲ್ಲಿ ಸಾಮಾನ್ಯವಾಗಿ ಬೀಜಗಳನ್ನು ಚದುರಿಸುವ ಮೂಲಕ ಬಿತ್ತನೆ ಮಾಡಲಾಗುತ್ತಿತ್ತು. ಬಿತ್ತುವವನು ಬೀಜಗಳನ್ನು ತನ್ನ ವಸ್ತ್ರದ ಮಡಿಕೆಯಲ್ಲಿ ಇಲ್ಲವೇ ಪಾತ್ರೆಯಲ್ಲಿಟ್ಟುಕೊಂಡು ಅದನ್ನು ಎಲ್ಲಾ ಕಡೆ ಚದುರಿಸುತ್ತಿದ್ದನು. ಈ ಸಾಮ್ಯದಲ್ಲಿ ತಿಳಿಸಲಾಗಿರುವ ಬಿತ್ತುವವನು ಬೇಕುಬೇಕೆಂದು ಬೀಜಗಳನ್ನು ವಿವಿಧ ರೀತಿಯ ಮಣ್ಣಿನಲ್ಲಿ ಬಿತ್ತುವುದಿಲ್ಲ. ಬದಲಾಗಿ ಚದುರಿದ ಬೀಜಗಳು ತಾನೇ ವಿವಿಧ ಮಣ್ಣಿನಲ್ಲಿ ಬೀಳುತ್ತವೆ.

6. ಬಿತ್ತುವವನ ಕುರಿತಾದ ಸಾಮ್ಯವನ್ನು ಯೇಸು ಹೇಗೆ ವಿವರಿಸಿದನು?

6 ನಾವು ಈ ಸಾಮ್ಯದ ಅರ್ಥವನ್ನು ಊಹಿಸಿ ತಿಳಿದುಕೊಳ್ಳಬೇಕಾಗಿಲ್ಲ. ಯೇಸುವೇ ಅದನ್ನು ವಿವರಿಸಿರುವುದನ್ನು ಮಾರ್ಕ 4:14-20ರ ದಾಖಲೆಯಲ್ಲಿ ಕಂಡುಕೊಳ್ಳಬಹುದು. “ಆ ಬಿತ್ತುವವನು ವಾಕ್ಯವೆಂಬ ಬೀಜವನ್ನು ಬಿತ್ತುತ್ತಾನೆ. ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸೈತಾನನು ಬಂದು ಅವರಲ್ಲಿ ಬಿತ್ತಿದ್ದ ವಾಕ್ಯವನ್ನು ತೆಗೆದುಬಿಡುತ್ತಾನೆ. ಇವರೇ ವಾಕ್ಯವು ಬಿತ್ತಲ್ಪಟ್ಟ ದಾರಿಯ ಮಗ್ಗುಲಾಗಿರುವವರು. ಅದೇ ಪ್ರಕಾರ ಬೇರೆ ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ; ತಮಗೆ ಬೇರಿಲ್ಲದ ಕಾರಣ ಇವರು ಸ್ವಲ್ಪ ಕಾಲ ಮಾತ್ರವೇ ಇದ್ದು ಬಳಿಕ ಆ ವಾಕ್ಯದ ನಿಮಿತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಬೇಗ ಎಡವಿಬೀಳುತ್ತಾರೆ; ಇವರೇ ಬೀಜಬಿದ್ದ ಬಂಡೆಯ ನೆಲವಾಗಿರುವವರು. ಇನ್ನು ಕೆಲವರು ವಾಕ್ಯವನ್ನು ಕೇಳಿದಾಗ್ಯೂ ಪ್ರಪಂಚದ ಚಿಂತೆಗಳೂ ಐಶ್ವರ್ಯದಿಂದುಂಟಾಗುವ ಮೋಸವೂ ಇತರ ವಿಷಯಗಳ ಮೇಲಣ ಆಶೆಗಳೂ ಒಳಗೆ ಸೇರಿ ಆ ವಾಕ್ಯವನ್ನು ಅಡಗಿಸಿಬಿಡುವದರಿಂದ ಫಲವನ್ನು ಕೊಡದೆ ಇರುತ್ತಾರೆ; ಇವರೇ ಮುಳ್ಳುಗಿಡಗಳಲ್ಲಿ ಬೀಜಬಿದ್ದ ನೆಲವಾಗಿರುವವರು. ಮತ್ತೆ ಕೆಲವರು ವಾಕ್ಯವನ್ನು ಕೇಳಿ ಕೈಕೊಂಡು ಮೂವತ್ತರಷ್ಟಾಗಲಿ ಅರುವತ್ತರಷ್ಟಾಗಲಿ ನೂರರಷ್ಟಾಗಲಿ ಫಲವನ್ನು ಕೊಡುತ್ತಾರೆ; ಇವರೇ ಬೀಜಬಿದ್ದ ಒಳ್ಳೆಯ ನೆಲವಾಗಿರುವವರು.”

7. ಬೀಜ ಮತ್ತು ವಿವಿಧ ರೀತಿಯ ಮಣ್ಣು ಏನನ್ನು ಪ್ರತಿನಿಧಿಸುತ್ತದೆ?

7 ಇಲ್ಲಿ ಯೇಸು, ವಿವಿಧ ರೀತಿಯ ಬೀಜಗಳನ್ನು ಬಳಸಲಾಗುವುದು ಎಂದು ಹೇಳದೆ ಒಂದೇ ವಿಧದ ಬೀಜದ ಕುರಿತು ಮಾತಾಡಿದ್ದನ್ನು ಗಮನಿಸಿ. ಇದು ಭಿನ್ನ ಫಲಿತಾಂಶಗಳನ್ನು ತರುವ ವಿವಿಧ ರೀತಿಯ ಮಣ್ಣಿನಲ್ಲಿ ಬೀಳುತ್ತದೆ. ಮೊದಲನೇ ವಿಧದ ಮಣ್ಣು ಗಟ್ಟಿಯಾಗಿದೆ; ಎರಡನೆಯದು ತೆಳುವಾದ ಪದರವಾಗಿದೆ; ಮೂರನೆಯದು ಮುಳ್ಳುಗಿಡಗಳಿಂದ ತುಂಬಿಕೊಂಡಿದೆ; ನಾಲ್ಕನೆಯದು ಯಥೇಚ್ಛವಾಗಿ ಫಲಕೊಡುವ ಒಳ್ಳೆಯ ಇಲ್ಲವೇ ಉತ್ತಮ ನೆಲ ಆಗಿದೆ. (ಲೂಕ 8:8) ಆ ಬೀಜ ಏನನ್ನು ಪ್ರತಿನಿಧಿಸುತ್ತದೆ? ದೇವರ ವಾಕ್ಯದಲ್ಲಿರುವ ರಾಜ್ಯದ ಸಂದೇಶವನ್ನೇ. (ಮತ್ತಾ. 13:19) ವಿವಿಧ ರೀತಿಯ ಮಣ್ಣು ಏನಾಗಿದೆ? ಜನರಲ್ಲಿರುವ ಭಿನ್ನ ಭಿನ್ನ ಹೃದಯ ಸ್ಥಿತಿಯೇ.​—⁠ಲೂಕ 8:12, 15 ಓದಿ.

8. (ಎ) ಬಿತ್ತುವವನು ಯಾರನ್ನು ಪ್ರತಿನಿಧಿಸುತ್ತಾನೆ? (ಬಿ) ರಾಜ್ಯ ಸಾರುವ ಕೆಲಸಕ್ಕೆ ಭಿನ್ನ ಪ್ರತಿಕ್ರಿಯೆಗಳು ಸಿಗಲು ಕಾರಣಗಳೇನು?

8 ಬಿತ್ತುವವನು ಯಾರು? ಅವನು ರಾಜ್ಯ ಸುವಾರ್ತೆಯನ್ನು ಘೋಷಿಸುತ್ತಿರುವ ದೇವರ ಜೊತೆಕೆಲಸದವರನ್ನು ಪ್ರತಿನಿಧಿಸುತ್ತಾನೆ. ಇವರು ಪೌಲ ಅಪೊಲ್ಲೋಸರಂತೆ ಸಸಿಯನ್ನು ನೆಟ್ಟು ಅದಕ್ಕೆ ನೀರುಣಿಸುತ್ತಾರೆ. ಅವರು ಶ್ರಮಪಟ್ಟು ಕೆಲಸಮಾಡಿದರೂ ಪ್ರತಿಯೊಬ್ಬರಿಗೆ ಸಿಗುವ ಫಲಿತಾಂಶಗಳು ಭಿನ್ನವಾಗಿರಬಲ್ಲವು. ಏಕೆ? ಏಕೆಂದರೆ ಆ ಸಂದೇಶವನ್ನು ಕೇಳುವ ಜನರ ಹೃದಯದ ಸ್ಥಿತಿಯು ಭಿನ್ನವಾಗಿರುತ್ತದೆ. ಆ ಸಾಮ್ಯದಲ್ಲಿ ತಿಳಿಸಲಾದ ಬಿತ್ತುವವನಿಗೆ ಫಲಿತಾಂಶಗಳ ಮೇಲೆ ಯಾವುದೇ ನಿಯಂತ್ರಣವಿಲ್ಲ. ಈ ವಿಚಾರವು, ಹಲವಾರು ವರ್ಷಗಳು ಇಲ್ಲವೇ ದಶಕಗಳಿಂದ ಸೇವೆಸಲ್ಲಿಸುತ್ತಿದ್ದರೂ ಸ್ವಲ್ಪವೇ ಫಲಿತಾಂಶಗಳನ್ನು ಪಡೆದಿರುವ ನಂಬಿಗಸ್ತ ಸಹೋದರ ಸಹೋದರಿಯರಿಗೆ ತುಂಬ ಸಾಂತ್ವನ ಕೊಡುತ್ತದೆ!a ಯಾವ ರೀತಿಯಲ್ಲಿ?

9. ಅಪೊಸ್ತಲ ಪೌಲ ಮತ್ತು ಯೇಸು ಇಬ್ಬರೂ ಯಾವ ಸಾಂತ್ವನಕರ ಸತ್ಯವನ್ನು ಒತ್ತಿಹೇಳಿದರು?

9 ಬಿತ್ತುವವನ ನಂಬಿಗಸ್ತಿಕೆಯನ್ನು ಅವನ ಕೆಲಸದ ಫಲಿತಾಂಶಗಳಿಂದ ಅಳೆಯಲಾಗುವುದಿಲ್ಲ. ಪೌಲನು ಹೇಳಿದ್ದು: “ಪ್ರತಿಯೊಬ್ಬನಿಗೆ ಅವನವನ ಶ್ರಮಕ್ಕೆ ತಕ್ಕಂತೆ ಪ್ರತಿಫಲ ದೊರೆಯುವುದು.” (1 ಕೊರಿಂ. 3:8, NIBV) ಪ್ರತಿಫಲವನ್ನು ಕೆಲಸದ ಫಲಿತಾಂಶಗಳಿಗನುಸಾರ ಅಲ್ಲ ಬದಲಾಗಿ ಪಟ್ಟ ಶ್ರಮಕ್ಕನುಸಾರ ಕೊಡಲಾಗುವುದು. ಈ ಅಂಶವನ್ನು ಯೇಸು ಕೂಡ ತನ್ನ ಶಿಷ್ಯರಿಗೆ ಒತ್ತಿಹೇಳಿದನು. ಅವರು ಆಗ ತಾನೇ ಸಾರುವ ಸಂಚಾರದಿಂದ ಹಿಂತಿರುಗಿದ್ದರು ಮತ್ತು ದೆವ್ವಗಳು ಕೂಡ ಯೇಸುವಿನ ಹೆಸರನ್ನು ಕೇಳಿ ಅಧೀನವಾದದ್ದಕ್ಕೆ ಬಹಳ ಸಂತೋಷಪಟ್ಟರು. ಈ ಸಂಗತಿ ತುಂಬ ರೋಮಾಂಚಕವಾಗಿದ್ದರೂ ಯೇಸು ಅವರಿಗೆ ಹೇಳಿದ್ದು: “ದೆವ್ವಗಳು ನಮಗೆ ಅಧೀನವಾಗಿವೆ ಎಂದು ಸಂತೋಷಪಡದೆ ನಮ್ಮ ಹೆಸರುಗಳು ಪರಲೋಕದಲ್ಲಿ ಬರೆದಿರುತ್ತವೆ ಎಂದು ಸಂತೋಷಪಡಿರಿ.” (ಲೂಕ 10:17-20) ಒಬ್ಬ ಬಿತ್ತುವವನ ಕೆಲಸದಿಂದಾಗಿ ಅನೇಕ ಹೊಸ ಶಿಷ್ಯರು ಫಲಿಸದಿದ್ದರೆ ಇದರರ್ಥ ಅವನು ಇತರರಿಗಿಂತ ಕಡಿಮೆ ಶ್ರದ್ಧೆಯುಳ್ಳವನು ಇಲ್ಲವೇ ಕಡಿಮೆ ನಂಬಿಗಸ್ತನು ಎಂದಲ್ಲ. ಏಕೆಂದರೆ, ಫಲಿತಾಂಶಗಳು ಬಹುಮಟ್ಟಿಗೆ ಕೇಳುಗನ ಹೃದಯದ ಸ್ಥಿತಿಯ ಮೇಲೆ ಅವಲಂಬಿಸಿರುತ್ತವೆ. ಆದರೆ ಅಂತಿಮವಾಗಿ ಬೆಳಸುವವನು ದೇವರೇ!

ವಾಕ್ಯವನ್ನು ಕೇಳುವವರ ಜವಾಬ್ದಾರಿ

10. ವಾಕ್ಯವನ್ನು ಕೇಳುವವನು ಒಳ್ಳೆಯ ನೆಲವಾಗಿರುವನೋ ಇಲ್ಲವೋ ಎಂಬುದನ್ನು ಯಾವುದು ನಿರ್ಧರಿಸುತ್ತದೆ?

10 ವಾಕ್ಯವನ್ನು ಕೇಳುವವರ ಕುರಿತೇನು? ಅವರು ಕೇಳುವರೆಂದು ಮುಂಚಿತವಾಗಿ ನಿರ್ಧರಿಸಲಾಗಿದೆಯೋ? ಇಲ್ಲ. ಅವರು ಒಳ್ಳೆಯ ನೆಲದಂತಿರುವರೋ ಇಲ್ಲವೋ ಎಂಬುದು ಅವರ ಆಯ್ಕೆ. ಒಬ್ಬ ವ್ಯಕ್ತಿಯ ಹೃದಯದ ಸ್ಥಿತಿ ಬದಲಾವಣೆ ಹೊಂದಿ, ಒಂದೇ ಒಳ್ಳೇದಾಗಬಹುದು ಇಲ್ಲವೇ ಕೆಟ್ಟದ್ದಾಗಬಹುದು. (ರೋಮಾ. 6:17) “ಕೆಲವರು ವಾಕ್ಯವನ್ನು ಕೇಳಿದ ಕೂಡಲೇ” ಸೈತಾನನು ಬಂದು ಆ ಬೀಜವನ್ನು ತೆಗೆದುಬಿಡುತ್ತಾನೆ ಎಂದು ಯೇಸು ತನ್ನ ಸಾಮ್ಯದಲ್ಲಿ ತಿಳಿಸಿದನು. ಆದರೆ ಹೀಗೆ ಆಗಲೇಬೇಕೆಂದೇನಿಲ್ಲ. ಯಾಕೋಬ 4:7 ಕ್ರೈಸ್ತರನ್ನು ಉತ್ತೇಜಿಸುವುದು: “ಸೈತಾನನನ್ನು ಎದುರಿಸಿರಿ.” ಆಗ ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು. ಮೊದಮೊದಲು ವಾಕ್ಯವನ್ನು ಸಂತೋಷದಿಂದ ಸ್ವೀಕರಿಸುವ ಆದರೆ “ಬೇರಿಲ್ಲದ ಕಾರಣ” ತದನಂತರ ಬಿದ್ದುಹೋಗುವ ಇತರರ ಕುರಿತು ಯೇಸು ವಿವರಿಸಿದನು. ಆದರೆ ದೇವರ ಸೇವಕರು ‘ನೆಲೆಗೊಂಡು [“ಬೇರೂರಿ ನೆಲೆಗೊಂಡು,” NIBV] ನಿಂತು ಅಗಲ ಉದ್ದ ಎತ್ತರ ಆಳ ಎಷ್ಟೆಂಬದನ್ನು ಗ್ರಹಿಸಲೂ ಜ್ಞಾನಕ್ಕೆ ಮೀರುವ ಕ್ರಿಸ್ತನ ಪ್ರೀತಿಯನ್ನು ತಿಳುಕೊಳ್ಳಲೂ ಪೂರ್ಣಶಕ್ತರಾಗಿರುವಂತೆ’ ಸಲಹೆ ನೀಡಲಾಗಿದೆ.​—⁠ಎಫೆ. 3:17-19; ಕೊಲೊ. 2:6, 7.

11. ಚಿಂತೆಗಳೂ ಐಶ್ವರ್ಯವೂ ವಾಕ್ಯವನ್ನು ಅಡಗಿಸಿ ಬಿಡುವುದನ್ನು ಒಬ್ಬನು ಹೇಗೆ ತಡೆಯಬಲ್ಲನು?

11 ವಾಕ್ಯವನ್ನು ಕೇಳಿದ ಇನ್ನಿತರರು “ಪ್ರಪಂಚದ ಚಿಂತೆಗಳೂ ಐಶ್ವರ್ಯದಿಂದುಂಟಾಗುವ ಮೋಸವೂ ಇತರ ವಿಷಯಗಳ ಮೇಲಣ ಆಶೆಗಳೂ ಒಳಗೆ ಸೇರಿ ಆ ವಾಕ್ಯವನ್ನು ಅಡಗಿಸಿಬಿಡು”ವಂತೆ ಬಿಟ್ಟುಕೊಡುತ್ತಾರೆಂದು ವರ್ಣಿಸಲಾಗಿದೆ. (1 ತಿಮೊ. 6:9, 10) ಇದಾಗದಂತೆ ಅವರು ಹೇಗೆ ತಡೆಯಬಲ್ಲರು? ಅಪೊಸ್ತಲ ಪೌಲನು ಉತ್ತರಿಸುವುದು: “ದ್ರವ್ಯಾಶೆ [“ಹಣದಾಶೆ,” NIBV]ಯಿಲ್ಲದವರಾಗಿರಿ; ನಿಮಗಿರುವವುಗಳಲ್ಲಿ ತೃಪ್ತರಾಗಿರಿ; ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲವೆಂದು ದೇವರು ತಾನೇ ಹೇಳಿದ್ದಾನೆ.”​—⁠ಇಬ್ರಿ. 13:5.

12. ಒಳ್ಳೆಯ ನೆಲವನ್ನು ಪ್ರತಿನಿಧಿಸುವವರು ಬೇರೆ ಬೇರೆ ಪ್ರಮಾಣದಲ್ಲಿ ಫಲಕೊಡುವುದೇಕೆ?

12 ಕೊನೆಯದಾಗಿ ಒಳ್ಳೆಯ ನೆಲದಲ್ಲಿ ಬಿತ್ತಲಾದ ಬೀಜಗಳು ‘ಮೂವತ್ತರಷ್ಟು, ಅರುವತ್ತರಷ್ಟು, ನೂರರಷ್ಟು ಫಲವನ್ನು ಕೊಡುತ್ತವೆ’ ಎಂದು ಯೇಸು ತಿಳಿಸಿದನು. ವಾಕ್ಯವನ್ನು ಕೇಳಿ ಅದನ್ನು ಕೈಕೊಂಡ ಕೆಲವರ ಹೃದಯದ ಸ್ಥಿತಿ ಉತ್ತಮವಾಗಿದ್ದು ಅವರು ಫಲ ಕೊಡುತ್ತಾರಾದರೂ ಅವರು ಸುವಾರ್ತೆ ಸಾರುವುದರಲ್ಲಿ ಎಷ್ಟರಮಟ್ಟಿಗೆ ಭಾಗವಹಿಸುತ್ತಾರೆ ಎಂಬುದು ಅವರವರ ಸನ್ನಿವೇಶಕ್ಕನುಸಾರ ಭಿನ್ನವಾಗಿರುತ್ತದೆ. ಉದಾಹರಣೆಗೆ, ಇಳಿವಯಸ್ಸು ಅಥವಾ ಶಕ್ತಿಕುಂದಿಸುವ ಕಾಯಿಲೆಯಿಂದಾಗಿ ಕೆಲವರಿಗೆ ಸಾರುವ ಕೆಲಸದಲ್ಲಿ ಹೆಚ್ಚನ್ನು ಮಾಡಲು ಸಾಧ್ಯವಾಗಲಿಕ್ಕಿಲ್ಲ. (ಮಾರ್ಕ 12:43, 44 ಹೋಲಿಸಿ.) ಅಂಥ ಸಂದರ್ಭದಲ್ಲೂ ಬಿತ್ತುವವನಿಗೆ ಬೀಜದ ಬೆಳವಣಿಗೆಯ ಮೇಲೆ ಸ್ವಲ್ಪ ನಿಯಂತ್ರಣವಿರಬಹುದು ಅಥವಾ ನಿಯಂತ್ರಣವೇ ಇರಲಿಕ್ಕಿಲ್ಲ. ಆದರೆ ಯೆಹೋವನು ಅದನ್ನು ಬೆಳೆಸುವುದನ್ನು ನೋಡುವಾಗ ಅವನು ಸಂತೋಷಿಸುತ್ತಾನೆ.​—⁠ಕೀರ್ತನೆ 126:5, 6 ಓದಿ.

ಮಲಗುವ ಬಿತ್ತನೆಗಾರ

13, 14. (ಎ) ಬೀಜ ಬಿತ್ತುವವನ ಕುರಿತ ಯೇಸುವಿನ ಸಾಮ್ಯವನ್ನು ಸಾರಾಂಶಿಸಿ. (ಬಿ) ಬಿತ್ತುವವನು ಯಾರು, ಮತ್ತು ಬೀಜ ಏನನ್ನು ಪ್ರತಿನಿಧಿಸುತ್ತದೆ?

13 ಮಾರ್ಕ 4:26-29ರಲ್ಲಿ ಬಿತ್ತುವವನ ಕುರಿತಾದ ಇನ್ನೊಂದು ಸಾಮ್ಯವಿದೆ. “ಒಬ್ಬನು ಭೂಮಿಯಲ್ಲಿ ಬೀಜವನ್ನು ಹಾಕಿ ರಾತ್ರಿ ಮಲಗುತ್ತಾ ಹಗಲು ಎದ್ದಿರುತ್ತಾ ಇರಲು ಅವನಿಗೆ ತಿಳಿಯದ ರೀತಿಯಲ್ಲಿ ಆ ಬೀಜವು ಹುಟ್ಟಿ ಬೆಳೆಯುವದು. ಇದರಂತೆ ದೇವರ ರಾಜ್ಯ. ಭೂಮಿಯು ಮೊದಲು ಗರಿಯನ್ನೂ, ಆ ಮೇಲೆ ಹೊಡೆಯನ್ನೂ, ತರುವಾಯ ತೆನೆಯಲ್ಲಿ ತುಂಬಾ ಕಾಳನ್ನೂ ತನ್ನಷ್ಟಕ್ಕೆ ತಾನೇ ಹುಟ್ಟಿಸುತ್ತದೆ. ಆದರೆ ಫಲಮಾಗಿದ ಕೂಡಲೆ ಅವನು ಸುಗ್ಗಿಕಾಲ ಬಂತೆಂದು ಕೊಯಿಸುತ್ತಾನೆ.”

14 ಈ ಬಿತ್ತುವವನು ಯಾರು? ಈತನು ಯೇಸುವೆಂದು ಕ್ರೈಸ್ತಪ್ರಪಂಚದ ಕೆಲವರು ನಂಬುತ್ತಾರೆ. ಆದರೆ ಯೇಸು ಮಲಗುತ್ತಾನೆ ಮತ್ತು ಬೀಜ ಬೆಳೆಯುವಾಗ ಆತನಿಗೆ ತಿಳಿಯುವುದಿಲ್ಲ ಎಂದು ಹೇಗೆ ಹೇಳಸಾಧ್ಯ? ಬೆಳವಣಿಗೆಯ ಕುರಿತು ಯೇಸುವಿಗೆ ಖಂಡಿತ ತಿಳಿದಿದೆ! ಈ ಮುಂಚೆ ತಿಳಿಸಲಾಗಿರುವ ಬಿತ್ತುವವನಂತೆಯೇ ಈ ಬಿತ್ತುವವನು ಸಹ ರಾಜ್ಯದ ಬೀಜವನ್ನು ಹುರುಪಿನ ಸಾರುವಿಕೆಯ ಮೂಲಕ ಬಿತ್ತುತ್ತಿರುವ ಪ್ರತಿಯೊಬ್ಬ ರಾಜ್ಯ ಘೋಷಕನನ್ನು ಪ್ರತಿನಿಧಿಸುತ್ತಾನೆ. ಬೀಜವು ಅವರು ಸಾರುತ್ತಿರುವ ವಾಕ್ಯವೇ ಆಗಿದೆ.b

15, 16. ಬಿತ್ತುವವನ ಕುರಿತಾದ ಸಾಮ್ಯದಲ್ಲಿ ಯೇಸು ಅಕ್ಷರಾರ್ಥಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಕುರಿತು ಯಾವ ಸತ್ಯವನ್ನು ತಿಳಿಸಿದನು?

15 ಬಿತ್ತುವವನು ‘ರಾತ್ರಿ ಮಲಗುತ್ತಾ ಹಗಲು ಎದ್ದಿರುತ್ತಾ ಇರುತ್ತಾನೆ’ ಎಂದು ಯೇಸು ಹೇಳಿದನು. ಇದರರ್ಥ ಬಿತ್ತುವವನು ಅಲಕ್ಷ್ಯ ತೋರಿಸುತ್ತಾನೆಂದಲ್ಲ ಬದಲಾಗಿ ಹೆಚ್ಚಿನ ಜನರ ಸಾಮಾನ್ಯ ದಿನಚರಿಯನ್ನು ಇದು ಚಿತ್ರಿಸುತ್ತದೆ. ಆ ವಚನದಲ್ಲಿನ ಪದಪ್ರಯೋಗವು, ಹಗಲಿಗೆ ದುಡಿಯುವ ಮತ್ತು ರಾತ್ರಿ ಮಲಗುವ ನಿರಂತರ ಪ್ರಕ್ರಿಯೆಯ ಒಂದು ಸಮಯಾವಧಿಗೆ ಸೂಚಿಸುತ್ತದೆ. ಆ ಸಮಯದಲ್ಲಿ ಏನು ನಡೆಯಿತೆಂಬುದನ್ನು ಯೇಸು ವಿವರಿಸಿದ್ದು: “ಅವನಿಗೆ ತಿಳಿಯದ ರೀತಿಯಲ್ಲಿ ಆ ಬೀಜವು ಹುಟ್ಟಿ ಬೆಳೆಯುವದು.” ಈ ಬೆಳವಣಿಗೆಯು “ತನ್ನಷ್ಟಕ್ಕೆ ತಾನೇ” ಸಂಭವಿಸುತ್ತದೆ ಎಂಬ ವಿಚಾರವು ಮಹತ್ತ್ವದ್ದಾಗಿದೆ.c

16 ಯೇಸು ಇಲ್ಲಿ ಏನನ್ನು ಸೂಚಿಸುತ್ತಿದ್ದನು? ಬೆಳವಣಿಗೆಗೆ ಮತ್ತು ಅದು ಸಾಗುವ ನಿಧಾನಗತಿಗೆ ಒತ್ತುಕೊಡಲಾಗಿರುವುದನ್ನು ಗಮನಿಸಿ. “ಭೂಮಿಯು ಮೊದಲು ಗರಿಯನ್ನೂ, ಆ ಮೇಲೆ ಹೊಡೆಯನ್ನೂ, ತರುವಾಯ ತೆನೆಯಲ್ಲಿ ತುಂಬಾ ಕಾಳನ್ನೂ ತನ್ನಷ್ಟಕ್ಕೆ ತಾನೇ ಹುಟ್ಟಿಸುತ್ತದೆ.” (ಮಾರ್ಕ 4:28) ಈ ಬೆಳವಣಿಗೆಯು ನಿಧಾನವಾಗಿ ಹಾಗೂ ಹಂತಹಂತವಾಗಿ ನಡೆಯುತ್ತದೆ. ಅದರ ವೇಗವನ್ನು ಹೆಚ್ಚಿಸಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ. ಆಧ್ಯಾತ್ಮಿಕ ಬೆಳವಣಿಗೆಯ ಸಂಬಂಧದಲ್ಲೂ ಇದು ನಿಜ. ಯೋಗ್ಯ ವ್ಯಕ್ತಿಯ ಹೃದಯದಲ್ಲಿ ಸತ್ಯದ ಬೀಜ ಬೆಳೆಯಲು ಯೆಹೋವನು ಅನುಮತಿಸುವಾಗ ಬೆಳವಣಿಗೆಯು ಹಂತಹಂತವಾಗಿ ನಡೆಯುತ್ತದೆ.​—⁠ಅ. ಕೃ. 13:48; ಇಬ್ರಿ. 6:1.

17. ಸತ್ಯದ ಬೀಜವು ಫಲಕೊಡುವಾಗ ಇನ್ಯಾರು ಸಂತೋಷಿಸುತ್ತಾರೆ?

17 “ಫಲಮಾಗಿದ ಕೂಡಲೆ” ಅದರ ಕೊಯ್ಲಿನಲ್ಲಿ ಬಿತ್ತುವವನು ಹೇಗೆ ಪಾಲ್ಗೊಳ್ಳುತ್ತಾನೆ? ಹೊಸ ಶಿಷ್ಯರಲ್ಲಿ ರಾಜ್ಯದ ಸತ್ಯವು ಬೆಳೆಯುವಂತೆ ಯೆಹೋವನು ಮಾಡುವಾಗ ಕ್ರಮೇಣ ಅವರು ತಮ್ಮ ಜೀವನವನ್ನು ಆತನಿಗೆ ಸಮರ್ಪಿಸುವ ಹಂತಕ್ಕೆ ತಲಪುತ್ತಾರೆ. ಇದನ್ನು ಮಾಡಲು ದೇವರ ಮೇಲಣ ಪ್ರೀತಿಯೇ ಅವರನ್ನು ಪ್ರಚೋದಿಸುತ್ತದೆ. ಈ ಸಮರ್ಪಣೆಯನ್ನು ಅವರು ನೀರಿನ ದೀಕ್ಷಾಸ್ನಾನದ ಮೂಲಕ ಬಹಿರಂಗಗೊಳಿಸುತ್ತಾರೆ. ಪ್ರಗತಿ ಮಾಡುತ್ತ ಪ್ರೌಢರಾಗುವ ಸಹೋದರರು ಕ್ರಮೇಣ ಸಭೆಗಳಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಲು ಶಕ್ತರಾಗುತ್ತಾರೆ. ವ್ಯಕ್ತಿಯೊಬ್ಬನನ್ನು ಶಿಷ್ಯನನ್ನಾಗಿ ಮಾಡಿದ ಬೀಜ ಬಿತ್ತನೆಯಲ್ಲಿ ಇತರ ರಾಜ್ಯ ಘೋಷಕರು ವೈಯಕ್ತಿಕವಾಗಿ ಸೇರಿಲ್ಲವಾದರೂ ಆ ಬಿತ್ತುವವನೊಂದಿಗೆ ಅವರು ಸಹ ಈ ರಾಜ್ಯ ಫಲವನ್ನು ಕೊಯ್ಯುತ್ತಾರೆ. (ಯೋಹಾನ 4:36-38 ಓದಿ.) ಹೀಗೆ, “ಬಿತ್ತುವವನಿಗೂ ಕೊಯ್ಯುವವನಿಗೂ ಕೂಡ ಸಂತೋಷವಾಗುವದು.”

ನಮಗಾಗಿ ಪಾಠಗಳು

18, 19. (ಎ) ಯೇಸುವಿನ ಸಾಮ್ಯಗಳ ಕುರಿತಾದ ಚರ್ಚೆಯು ವೈಯಕ್ತಿಕವಾಗಿ ನಿಮ್ಮನ್ನು ಹೇಗೆ ಉತ್ತೇಜಿಸಿದೆ? (ಬಿ) ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸಲಾಗುವುದು?

18 ಮಾರ್ಕ ಪುಸ್ತಕದ 4ನೇ ಅಧ್ಯಾಯದಲ್ಲಿ ದಾಖಲಾದ ಈ ಎರಡು ಸಾಮ್ಯಗಳನ್ನು ಚರ್ಚಿಸುವ ಮೂಲಕ ಏನು ಕಲಿತೆವು? ನಮಗೆ ಬಿತ್ತುವ ಕೆಲಸವನ್ನು ಮಾಡಲಿಕ್ಕಿದೆ ಎಂಬುದನ್ನು ಸ್ಪಷ್ಟವಾಗಿ ಗ್ರಹಿಸಿದೆವು. ಯಾವುದೇ ನೆವಗಳು ಮತ್ತು ಸಂಭಾವ್ಯ ಸಮಸ್ಯೆಗಳು ಇಲ್ಲವೇ ತೊಂದರೆಗಳು ಈ ಕೆಲಸವನ್ನು ಮಾಡದಂತೆ ನಮ್ಮನ್ನು ತಡೆಗಟ್ಟಬಾರದು. (ಪ್ರಸಂ. 11:4) ದೇವರ ಜೊತೆಕೆಲಸದವರಲ್ಲಿ ಒಬ್ಬರಾಗಿರುವ ಅತ್ಯದ್ಭುತ ಸುಯೋಗ ನಮಗಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ನಮ್ಮ ಪ್ರಯತ್ನಗಳನ್ನೂ ಸಂದೇಶವನ್ನು ಸ್ವೀಕರಿಸುವ ಜನರ ಪ್ರಯತ್ನಗಳನ್ನೂ ಹರಸುತ್ತಾ ಆಧ್ಯಾತ್ಮಿಕ ಬೆಳವಣಿಗೆಯನ್ನು ಉಂಟುಮಾಡುವವನು ಯೆಹೋವನೇ. ನಾವು ಯಾವುದೇ ವ್ಯಕ್ತಿಯಲ್ಲಿ ಆಧ್ಯಾತ್ಮಿಕ ಬೆಳವಣಿಗೆಯ ವೇಗವನ್ನು ಹೆಚ್ಚಿಸಲಾರೆವೆಂದು ನಮಗೆ ತಿಳಿದಿದೆ. ಬೆಳವಣಿಗೆಯು ನಿಧಾನಗತಿಯಲ್ಲಿ ಆಗುವಾಗ ಇಲ್ಲವೇ ಬೆಳವಣಿಗೆಯೇ ಆಗದಿರುವಾಗ ನಾವು ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಇಲ್ಲವೇ ಎದೆಗುಂದಬಾರದೆಂದು ತಿಳಿದುಕೊಂಡೆವು. ಯೆಹೋವನಿಗೂ, ‘ಪರಲೋಕ ರಾಜ್ಯದ ಸುವಾರ್ತೆಯು ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರುವಂತೆ’ ಆತನು ನಮಗೆ ಕೊಟ್ಟ ಸುಯೋಗಕ್ಕೂ ನಂಬಿಗಸ್ತರಾಗಿರುವುದರ ಮೇಲೆ ನಮ್ಮ ಸಫಲತೆ ಹೊಂದಿಕೊಂಡಿದೆ ಎಂದು ತಿಳಿಯುವುದು ಎಷ್ಟು ಸಾಂತ್ವನಕರ!​—⁠ಮತ್ತಾ. 24:14.

19 ಹೊಸ ಶಿಷ್ಯರ ಬೆಳವಣಿಗೆ ಮತ್ತು ರಾಜ್ಯ ಕೆಲಸದ ಕುರಿತು ಯೇಸು ನಮಗೆ ಇನ್ನೇನು ಕಲಿಸಿದ್ದಾನೆ? ಇದಕ್ಕೆ ಉತ್ತರವು ಸುವಾರ್ತಾ ವೃತ್ತಾಂತಗಳಲ್ಲಿ ದಾಖಲಾಗಿರುವ ಬೇರೆ ಸಾಮ್ಯಗಳಲ್ಲಿದೆ. ಅವುಗಳಲ್ಲಿ ಕೆಲವೊಂದನ್ನು ಮುಂದಿನ ಲೇಖನದಲ್ಲಿ ಪರಿಗಣಿಸಲಿದ್ದೇವೆ.

[ಪಾದಟಿಪ್ಪಣಿಗಳು]

a ಐಸ್‌ಲೆಂಡ್‌ನಲ್ಲಿ ಸಹೋದರ ಜಾರ್ಜ್‌ ಫಿಯೋಲ್‌ನಿರ್‌ ಲಿಂಡಾಲ್‌ರವರ ಶುಶ್ರೂಷೆಯ ಕುರಿತು ಯೆಹೋವನ ಸಾಕ್ಷಿಗಳ ವರ್ಷಪುಸ್ತಕ-2005, ಪುಟ 210-211ನ್ನು ಪರಿಗಣಿಸಿ. ಐರ್ಲೆಂಡ್‌ನ ನಂಬಿಗಸ್ತ ಸೇವಕರು ತತ್‌ಕ್ಷಣ ಫಲಿತಾಂಶಗಳು ಸಿಗದಿರುವಾಗಲೂ ಶುಶ್ರೂಷೆಯಲ್ಲಿ ಪಟ್ಟುಹಿಡಿದ ಅನುಭವಗಳನ್ನೂ ಯೆಹೋವನ ಸಾಕ್ಷಿಗಳ ವರ್ಷಪುಸ್ತಕ-1998, ಪುಟ 82-99ರಲ್ಲಿ ನೋಡಿ.

b ಈ ಪತ್ರಿಕೆ ಮುಂಚೆ ವಿವರಿಸಿತ್ತೇನೆಂದರೆ ಬೀಜವು ಒಬ್ಬ ವ್ಯಕ್ತಿಯಲ್ಲಿ ಪಕ್ವಗೊಳ್ಳಬೇಕಾದ ಗುಣಗಳನ್ನು ಪ್ರತಿನಿಧಿಸುತ್ತದೆ. ಪರಿಸರದ ಮೇಲೆ ಹೊಂದಿಕೊಂಡು ಈ ಗುಣಗಳು ಒಳ್ಳೆಯದಾಗಬಹುದು ಇಲ್ಲವೇ ಕೆಟ್ಟದ್ದಾಗಬಹುದು ಎಂದು ಎಣಿಸಲಾಗಿತ್ತು. ಆದರೆ ಗಮನಿಸಬೇಕಾದ ವಿಷಯವೇನೆಂದರೆ ಯೇಸುವಿನ ಸಾಮ್ಯದಲ್ಲಿ ತಿಳಿಸಲಾದ ಬೀಜವು ಕೆಟ್ಟದ್ದಾಗುವುದಿಲ್ಲ ಇಲ್ಲವೇ ಕೆಟ್ಟ ಫಲವನ್ನು ಕೊಡುವುದಿಲ್ಲ. ಅದು ಕೇವಲ ಪಕ್ವಗೊಳ್ಳುತ್ತದೆ ಅಷ್ಟೇ.​—⁠1980, ಜೂನ್‌ 15ರ ಕಾವಲಿನಬುರುಜು (ಇಂಗ್ಲಿಷ್‌) ಪುಟ 17-19 ನೋಡಿ.

c ಇದೇ ಅಭಿವ್ಯಕ್ತಿಯನ್ನು ಅ. ಕೃತ್ಯಗಳು 12:10ರಲ್ಲಿ ಉಪಯೋಗಿಸಲಾಗಿದೆ. ಅಲ್ಲಿ, ಕಬ್ಬಿಣದ ಬಾಗಿಲು “ತನ್ನಷ್ಟಕ್ಕೆ ತಾನೇ” ತೆರೆದುಕೊಳ್ಳುವ ಕುರಿತು ತಿಳಿಸಲಾಗಿದೆ.

ನಿಮಗೆ ಜ್ಞಾಪಕವಿದೆಯೇ?

• ಬೀಜವನ್ನು ಬಿತ್ತುವುದಕ್ಕೂ ರಾಜ್ಯ ಸಂದೇಶ ಸಾರುವುದಕ್ಕೂ ಇರುವ ಕೆಲವು ಹೋಲಿಕೆಗಳಾವುವು?

• ರಾಜ್ಯ ಘೋಷಕನ ನಂಬಿಗಸ್ತಿಕೆಯನ್ನು ಯೆಹೋವನು ಹೇಗೆ ಅಳೆಯುತ್ತಾನೆ?

• ಅಕ್ಷರಾರ್ಥಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಮಧ್ಯೆ ಇರುವ ಯಾವ ಹೋಲಿಕೆಯನ್ನು ಯೇಸು ಒತ್ತಿಹೇಳಿದನು?

• “ಬಿತ್ತುವವನಿಗೂ ಕೊಯ್ಯುವವನಿಗೂ ಕೂಡ ಸಂತೋಷವಾಗುವದು” ಹೇಗೆ?

[ಪುಟ 13ರಲ್ಲಿರುವ ಚಿತ್ರಗಳು]

ದೇವರ ರಾಜ್ಯದ ಘೋಷಕನನ್ನು ಯೇಸು ಬೀಜ ಬಿತ್ತುವವನಿಗೆ ಹೋಲಿಸಿದ್ದೇಕೆ?

[ಪುಟ 15ರಲ್ಲಿರುವ ಚಿತ್ರಗಳು]

ಒಳ್ಳೆಯ ನೆಲವನ್ನು ಪ್ರತಿನಿಧಿಸುವವರು ಅವರವರ ಸನ್ನಿವೇಶಕ್ಕನುಸಾರ ರಾಜ್ಯದ ಕುರಿತು ಸಾರುವುದರಲ್ಲಿ ಪೂರ್ಣಹೃದಯದಿಂದ ಪಾಲ್ಗೊಳ್ಳುತ್ತಾರೆ

[ಪುಟ 16ರಲ್ಲಿರುವ ಚಿತ್ರಗಳು]

ಬೆಳೆಸುವವನು ದೇವರೇ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ