ಯೆಹೋವನು ನಿಷ್ಠಾವಂತ ಪ್ರೀತಿಯಲ್ಲಿ ಶ್ರೇಷ್ಠನು
“ಯೆಹೋವನು . . . ಪ್ರೀತಿಪೂರ್ವಕ ದಯೆಯಲ್ಲಿ ಶ್ರೇಷ್ಠನು.”—ಕೀರ್ತನೆ 145:8, NW.
1. ದೇವರ ಪ್ರೀತಿಯು ಎಷ್ಟು ವ್ಯಾಪಕವಾಗಿದೆ?
“ದೇವರು ಪ್ರೀತಿಸ್ವರೂಪಿಯು.” (1 ಯೋಹಾನ 4:8) ಈ ಹೃದಯೋತ್ತೇಜಕ ವಾಕ್ಸರಣಿಯು, ಯೆಹೋವನು ಆಳುವ ವಿಧಾನವು ಪ್ರೀತಿಯ ಮೇಲೆ ಆಧಾರಿತವಾಗಿದೆ ಎಂಬುದನ್ನು ರುಜುಪಡಿಸುತ್ತದೆ. ಆತನಿಗೆ ವಿಧೇಯರಾಗದ ಮಾನವರು ಸಹ ಆತನು ಪ್ರೀತಿಯಿಂದ ಒದಗಿಸುವ ಬೆಳಕು ಮತ್ತು ಮಳೆಯಿಂದ ಪ್ರಯೋಜನ ಪಡೆಯುತ್ತಾರೆ! (ಮತ್ತಾಯ 5:44, 45) ಮಾನವ ಜಗತ್ತಿಗಾಗಿ ದೇವರಿಗಿರುವ ಪ್ರೀತಿಯ ಕಾರಣದಿಂದಲೇ, ಆತನ ವೈರಿಗಳು ಸಹ ಪಶ್ಚಾತ್ತಾಪಪಟ್ಟು, ಆತನ ಕಡೆಗೆ ತಿರುಗಿ, ಜೀವವನ್ನು ಪಡೆಯಬಲ್ಲರು. (ಯೋಹಾನ 3:16) ಆದರೆ ಬೇಗನೆ, ಯೆಹೋವನು ತನ್ನನ್ನು ಪ್ರೀತಿಸುವ ಮಾನವರು ನೀತಿಭರಿತ ನೂತನ ಲೋಕದಲ್ಲಿ ನಿತ್ಯಜೀವವನ್ನು ಆನಂದಿಸಲಾಗುವಂತೆ, ಸುಧಾರಿಸಲಾಗದಷ್ಟು ದುಷ್ಟರಾಗಿರುವವರನ್ನು ನಾಶಮಾಡುವನು.—ಕೀರ್ತನೆ 37:9-11, 29; 2 ಪೇತ್ರ 3:13.
2. ಯೆಹೋವನು ತನ್ನೊಂದಿಗೆ ಸಮರ್ಪಣಾ ಸಂಬಂಧದಲ್ಲಿರುವವರಿಗೆ ಯಾವ ವಿಶೇಷ ರೀತಿಯಲ್ಲಿ ಪ್ರೀತಿಯನ್ನು ತೋರಿಸುತ್ತಾನೆ?
2 ಯೆಹೋವನು ತನ್ನ ಸತ್ಯಾರಾಧಕರಿಗೆ ಅಮೂಲ್ಯವೂ ಬಾಳುವಂತಹದ್ದೂ ಆದ ರೀತಿಯಲ್ಲಿ ಪ್ರೀತಿಯನ್ನು ತೋರಿಸುತ್ತಾನೆ. ಅಂತಹ ಪ್ರೀತಿಯನ್ನು ಸೂಚಿಸುವ ಹೀಬ್ರು ಪದವನ್ನು, “ಪ್ರೀತಿಪೂರ್ವಕ ದಯೆ” ಅಥವಾ “ನಿಷ್ಠಾವಂತ ಪ್ರೀತಿ” ಎಂದು ಭಾಷಾಂತರಿಸಲಾಗಿದೆ. ಪುರಾತನ ಇಸ್ರಾಯೇಲಿನ ದಾವೀದ ರಾಜನು ದೇವರ ಪ್ರೀತಿಪೂರ್ವಕ ದಯೆಯನ್ನು ಆಳವಾಗಿ ಗಣ್ಯಮಾಡಿದನು. ತನ್ನ ಸ್ವಂತ ಅನುಭವ ಮತ್ತು ದೇವರು ಇತರರೊಂದಿಗೆ ವ್ಯವಹರಿಸಿದ ರೀತಿಯ ಕುರಿತು ಮನನ ಮಾಡಿದ ಕಾರಣ, ದಾವೀದನು ಭರವಸದಿಂದ ಹೀಗೆ ಹಾಡಸಾಧ್ಯವಾಯಿತು: “ಯೆಹೋವನು . . . ಪ್ರೀತಿಪೂರ್ವಕ ದಯೆಯಲ್ಲಿ ಶ್ರೇಷ್ಠನು.”—ಕೀರ್ತನೆ 145:8, NW.
ದೇವರ ನಿಷ್ಠಾವಂತ ಜನರನ್ನು ಗುರುತಿಸುವುದು
3, 4. (ಎ) ಯೆಹೋವನಿಗೆ ನಿಷ್ಠರಾಗಿರುವವರನ್ನು ಗುರುತಿಸಲು ಕೀರ್ತನೆ 145 ನಮಗೆ ಹೇಗೆ ಸಹಾಯಮಾಡುತ್ತದೆ? (ಬಿ) ದೇವರಿಗೆ ನಿಷ್ಠರಾಗಿರುವವರು ಆತನನ್ನು ‘ಕೊಂಡಾಡುವುದು’ ಹೇಗೆ?
3 ಯೆಹೋವ ದೇವರ ಸಂಬಂಧದಲ್ಲಿ ಪ್ರವಾದಿ ಸಮುವೇಲನ ತಾಯಿಯಾದ ಹನ್ನಳು ಹೇಳಿದ್ದು: “ಆತನು ತನ್ನ ಭಕ್ತರ [“ತನಗೆ ನಿಷ್ಠರಾಗಿರುವವರ,” NW] ಹೆಜ್ಜೆಗಳನ್ನು ಕಾಯುವನು.” (1 ಸಮುವೇಲ 2:9) ಇಂತಹ ‘ನಿಷ್ಠರು’ ಯಾರು? ರಾಜ ದಾವೀದನು ಇದಕ್ಕೆ ಉತ್ತರವನ್ನು ಒದಗಿಸುತ್ತಾನೆ. ಯೆಹೋವನ ಅದ್ಭುತಕರ ಗುಣಗಳನ್ನು ಹೊಗಳಿದ ನಂತರ ಅವನು ಹೇಳುವುದು: “ನಿನ್ನ ಭಕ್ತರು [“ನಿಷ್ಠರು,” NW] ನಿನ್ನನ್ನು ಕೊಂಡಾಡುವರು.” (ಕೀರ್ತನೆ 145:10) ಮನುಷ್ಯರು ದೇವರನ್ನು ಕೊಂಡಾಡುವುದು, ಆತನ ಕುರಿತು ಹೊಗಳಿ ಮಾತಾಡುವ ಮೂಲಕವೇ.
4 ಯೆಹೋವನಿಗೆ ನಿಷ್ಠರಾಗಿರುವವರು ಯಾರೆಂಬುದನ್ನು, ಅವರು ತಮ್ಮ ಬಾಯಿಗಳನ್ನು ಆತನನ್ನು ಹೊಗಳಲು ಉಪಯೋಗಿಸುವುದರಿಂದಲೇ ಗುರುತಿಸಸಾಧ್ಯವಿದೆ. ಸಾಮಾನ್ಯ ಗೋಷ್ಠಿಗಳಲ್ಲಿ ಅಥವಾ ಕ್ರೈಸ್ತ ಕೂಟಗಳಲ್ಲಿನ ಅವರ ಚರ್ಚೆಗಳಲ್ಲಿ ಒಂದು ಸಾಮಾನ್ಯ ವಿಷಯವು ಯಾವುದು? ಯೆಹೋವನ ರಾಜ್ಯವೇ! “ಅವರು ನಿನ್ನ [ಯೆಹೋವನ] ರಾಜ್ಯಮಹತ್ತನ್ನು ಪ್ರಸಿದ್ಧಪಡಿಸುವರು; ನಿನ್ನ ಪ್ರತಾಪವನ್ನು ವರ್ಣಿಸುವರು” ಎಂದು ಹಾಡಿದ ದಾವೀದನ ಭಾವಗಳಲ್ಲಿ ದೇವರ ನಿಷ್ಠಾವಂತ ಸೇವಕರು ಪಾಲಿಗರಾಗುತ್ತಾರೆ.—ಕೀರ್ತನೆ 145:11.
5. ಯೆಹೋವನಿಗೆ ನಿಷ್ಠರಾಗಿರುವವರು ಆತನನ್ನು ಹೊಗಳುವಾಗ ಆತನು ಗಮನ ಕೊಡುತ್ತಾನೆಂದು ನಮಗೆ ಹೇಗೆ ಗೊತ್ತು?
5 ಯೆಹೋವನಿಗೆ ನಿಷ್ಠರಾಗಿರುವವರು ಆತನನ್ನು ಸ್ತುತಿಸುವಾಗ ಆತನು ಗಮನಿಸುತ್ತಾನೊ? ಹೌದು, ಅವರು ಏನು ಹೇಳುತ್ತಾರೊ ಅದಕ್ಕೆ ಆತನು ಗಮನಕೊಡುತ್ತಾನೆ. ನಮ್ಮ ದಿನಗಳಲ್ಲಿನ ಸತ್ಯಾರಾಧನೆಗೆ ಸಂಬಂಧಿಸಿದ ಪ್ರವಾದನೆಯಲ್ಲಿ ಮಲಾಕಿಯನು ಬರೆದುದು: “ಯೆಹೋವನ ಭಕ್ತರು ಒಬ್ಬರಿಗೊಬ್ಬರು ಮಾತಾಡಿಕೊಳ್ಳಲು ಯೆಹೋವನು ಕಿವಿಗೊಟ್ಟು ಆಲಿಸಿ ಭಯಭಕ್ತಿಯಿಂದ ತನ್ನ ನಾಮಸ್ಮರಣೆಮಾಡುವವರ ಹೆಸರುಗಳನ್ನು ತನ್ನ ಮುಂದೆ ಜ್ಞಾಪಕದ ಪುಸ್ತಕದಲ್ಲಿ ಬರೆಯಿಸಿದನು.” (ಮಲಾಕಿಯ 3:16) ಯೆಹೋವನಿಗೆ ನಿಷ್ಠರಾಗಿರುವವರು ಆತನನ್ನು ಹೊಗಳುವಾಗ ಆತನು ಅದನ್ನು ಬಹಳವಾಗಿ ಮೆಚ್ಚಿ ಅವರನ್ನು ಜ್ಞಾಪಕದಲ್ಲಿಡುತ್ತಾನೆ.
6. ಯಾವ ಚಟುವಟಿಕೆಯು ದೇವರಿಗೆ ನಿಷ್ಠರಾಗಿರುವವರನ್ನು ಗುರುತಿಸಲು ನಮಗೆ ಸಹಾಯಮಾಡುತ್ತದೆ?
6 ಯೆಹೋವನ ನಿಷ್ಠಾವಂತ ಸೇವಕರನ್ನು, ಸತ್ಯ ದೇವರ ಆರಾಧಕರಲ್ಲದ ಜನರೊಂದಿಗೆ ಮಾತಾಡಲು ಅವರು ತೋರಿಸುವ ಧೈರ್ಯ ಮತ್ತು ಅವರು ತೆಗೆದುಕೊಳ್ಳುವ ಮೊದಲ ಹೆಜ್ಜೆಯಿಂದಲೂ ಗುರುತಿಸಸಾಧ್ಯವಿದೆ. ಹೌದು, ದೇವರಿಗೆ ನಿಷ್ಠರಾಗಿರುವವರು, “ಆತನ ಮಹತ್ಕಾರ್ಯಗಳನ್ನೂ ಆತನ ರಾಜತ್ವದ ವೈಭವದ ಘನತೆಯನ್ನೂ ಮನುಷ್ಯ ಪುತ್ರರಿಗೆ ತಿಳಿಯಪಡಿಸುವರು.” (ಕೀರ್ತನೆ 145:12, NW) ನೀವು ಯೆಹೋವನ ರಾಜತ್ವದ ಕುರಿತು ಅಪರಿಚಿತರಿಗೆ ತಿಳಿಸಲು ಅವಕಾಶಗಳನ್ನು ಹುಡುಕಿ, ಅವುಗಳ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುತ್ತೀರೊ? ಬೇಗನೇ ದಾಟಿಹೋಗಲಿರುವ ಮಾನವ ಸರಕಾರಗಳಿಗೆ ಅಸದೃಶವಾಗಿ, ದೇವರ ರಾಜತ್ವವಾದರೋ ಶಾಶ್ವತವಾಗಿರುತ್ತದೆ. (1 ತಿಮೊಥೆಯ 1:17) ಜನರು ದೇವರ ಶಾಶ್ವತ ರಾಜತ್ವದ ಬಗ್ಗೆ ಕಲಿತು, ಅದರ ಬೆಂಬಲಿಗರಾಗಿ ತಮ್ಮ ಸ್ಥಾನವನ್ನು ತೆಗೆದುಕೊಳ್ಳುವುದು ತುರ್ತಿನದ್ದಾಗಿದೆ. ದಾವೀದನು ಹಾಡಿದ್ದು: “ನಿನ್ನ ರಾಜ್ಯವು [“ರಾಜತ್ವವು,” NW] ಶಾಶ್ವತವಾಗಿದೆ; ನಿನ್ನ ಆಳ್ವಿಕೆಯು ತಲತಲಾಂತರಕ್ಕೂ ಇರುವದು.”—ಕೀರ್ತನೆ 145:13.
7, 8. ಇಸವಿ 1914ರಲ್ಲಿ ಏನು ನಡೆಯಿತು, ಮತ್ತು ದೇವರು ಈಗ ತನ್ನ ಪುತ್ರನ ರಾಜ್ಯದ ಮೂಲಕ ಆಳುತ್ತಿದ್ದಾನೆಂಬುದಕ್ಕೆ ಯಾವ ಪುರಾವೆಯಿದೆ?
7 ಇಸವಿ 1914ರಿಂದ, ಯೆಹೋವನ ರಾಜತ್ವದ ಕುರಿತು ಮಾತಾಡಲು ಇನ್ನೂ ಹೆಚ್ಚಿನ ಕಾರಣವಿದೆ. ಆ ವರುಷದಲ್ಲಿ ದೇವರು ದಾವೀದನ ಕುಮಾರನಾದ ಯೇಸು ಕ್ರಿಸ್ತನು ಅರಸನಾಗಿರುವ ಸ್ವರ್ಗೀಯ ಮೆಸ್ಸೀಯ ರಾಜ್ಯವನ್ನು ಸ್ಥಾಪಿಸಿದನು. ಹೀಗೆ, ದಾವೀದನ ರಾಜ್ಯವು ಎಂದೆಂದಿಗೂ ಸ್ಥಿರವಾಗಿ ಸ್ಥಾಪಿಸಲ್ಪಡುವುದೆಂಬ ತನ್ನ ವಾಗ್ದಾನವನ್ನು ಯೆಹೋವನು ನೆರವೇರಿಸಿದನು.—2 ಸಮುವೇಲ 7:12, 13; ಲೂಕ 1:32, 33.
8 ಯೆಹೋವನು ತನ್ನ ಪುತ್ರನಾದ ಯೇಸು ಕ್ರಿಸ್ತನ ರಾಜ್ಯದ ಮುಖಾಂತರ ಈಗ ಆಳುತ್ತಿದ್ದಾನೆಂಬ ಪುರಾವೆಯನ್ನು, ಯೇಸುವಿನ ಸಾನ್ನಿಧ್ಯದ ಸೂಚನೆಯ ಮುಂದುವರಿಯುತ್ತಿರುವ ನೆರವೇರಿಕೆಯಲ್ಲಿ ನೋಡಸಾಧ್ಯವಿದೆ. ಆ ಸೂಚನೆಯ ಅತಿ ಗಮನಾರ್ಹ ಅಂಶವು, ದೇವರಿಗೆ ನಿಷ್ಠರಾಗಿರುವವರೆಲ್ಲರಿಗಾಗಿ ಯೇಸು ಮುಂತಿಳಿಸಿದ ಕೆಲಸವೇ ಆಗಿದೆ. ಅವನಂದದ್ದು: “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.” (ಮತ್ತಾಯ 24:3-14) ದೇವರಿಗೆ ನಿಷ್ಠರಾಗಿರುವವರು ಈ ಪ್ರವಾದನೆಯನ್ನು ಹುರುಪಿನಿಂದ ನೆರವೇರಿಸುತ್ತಿರುವ ಕಾರಣ, ಮುಂದೆಂದೂ ಪುನರಾವರ್ತಿಸಲಾಗದ ಈ ಮಹತ್ತರವಾದ ಕೆಲಸದಲ್ಲಿ 60 ಲಕ್ಷಕ್ಕಿಂತಲೂ ಹೆಚ್ಚು ಪುರುಷರು, ಸ್ತ್ರೀಯರು ಮತ್ತು ಮಕ್ಕಳು ಭಾಗವಹಿಸುತ್ತಿದ್ದಾರೆ. ಯೆಹೋವನ ರಾಜ್ಯದ ಸಕಲ ವಿರೋಧಿಗಳ ಮೇಲೆ ಅಂತ್ಯವು ಬೇಗನೆ ಬರುವುದು.—ಪ್ರಕಟನೆ 11:15, 18.
ಯೆಹೋವನ ಪರಮಾಧಿಕಾರದಿಂದ ಪ್ರಯೋಜನ ಹೊಂದುವುದು
9, 10. ಯೆಹೋವನು ಮತ್ತು ಮಾನವ ಪ್ರಭುಗಳ ಮಧ್ಯೆ ಯಾವ ತಾರತಮ್ಯವಿದೆ?
9 ನಾವು ಸಮರ್ಪಿತ ಕ್ರೈಸ್ತರಾಗಿರುವಲ್ಲಿ, ಪರಮಾಧಿಕಾರಿ ಯೆಹೋವನೊಂದಿಗೆ ನಮಗಿರುವ ಸಂಬಂಧವು ನಮಗೆ ಅನೇಕ ಪ್ರಯೋಜನಗಳನ್ನು ತರುತ್ತದೆ. (ಕೀರ್ತನೆ 71:5; 116:12) ಉದಾಹರಣೆಗೆ, ನಾವು ದೇವರಿಗೆ ಭಯಪಟ್ಟು, ನೀತಿಯನ್ನು ಆಚರಿಸುತ್ತಿರುವುದರಿಂದ ನಾವು ಆತನ ಅನುಗ್ರಹದಲ್ಲಿ ಆನಂದಿಸುತ್ತೇವೆ ಮತ್ತು ಆಧ್ಯಾತ್ಮಿಕ ರೀತಿಯಲ್ಲಿ ಆತನಿಗೆ ಹತ್ತಿರವಿದ್ದೇವೆ. (ಅ. ಕೃತ್ಯಗಳು 10:34, 35; ಯಾಕೋಬ 4:8) ಇದಕ್ಕೆ ವೈದೃಶ್ಯವಾಗಿ, ಮಾನವಾಧಿಕಾರಿಗಳು ಅನೇಕವೇಳೆ ಗಣ್ಯ ವ್ಯಕ್ತಿಗಳ ಸಂಗಡ, ಅಂದರೆ ಮಿಲಿಟರಿ ನಾಯಕರು, ಧನಿಕ ವ್ಯಾಪಾರಸ್ಥರು ಇಲ್ಲವೆ ಸುಪ್ರಸಿದ್ಧ ಕ್ರೀಡಾಪಟುಗಳು ಮತ್ತು ನಟನಟಿಯರೊಂದಿಗೆ ಸಹವಾಸಮಾಡುವುದು ಕಂಡುಬರುತ್ತದೆ. ಸೋವೀಟನ್ ಎಂಬ ಆಫ್ರಿಕನ್ ವಾರ್ತಾಪತ್ರಕ್ಕನುಸಾರ, ಒಬ್ಬ ಪ್ರಮುಖ ಸರಕಾರಿ ಅಧಿಕಾರಿಯು ತನ್ನ ದೇಶದ ತೀರ ಬಡಪ್ರದೇಶಗಳ ಕುರಿತು ಹೀಗೆ ಹೇಳಿದನು: “ನಮ್ಮಲ್ಲಿ ಹೆಚ್ಚಿನವರು ಅಂತಹ ಕ್ಷೇತ್ರಗಳಿಗೆ ಏಕೆ ಹೋಗಲು ಬಯಸುವುದಿಲ್ಲವೆಂಬದನ್ನು ಅರ್ಥಮಾಡಿಕೊಳ್ಳಬಲ್ಲೆ. ಅಂತಹ ಪರಿಸ್ಥಿತಿಗಳು ಇವೆ ಎಂಬುದನ್ನು ನಾವು ಮರೆಯಲು ಬಯಸುತ್ತೇವಷ್ಟೆ. ಅದು ನಮ್ಮ ಮನಸ್ಸಾಕ್ಷಿಯನ್ನು ಚುಚ್ಚುತ್ತದೆ ಮತ್ತು ನಾವು ಪ್ರಯಾಣಿಸುವ ದುಬಾರಿ [ವಾಹನಗಳೂ] ನಮಗೆ ನಾಚಿಕೆ ಹುಟ್ಟಿಸುತ್ತವೆ.”
10 ಕೆಲವು ಮಂದಿ ಮಾನವ ಅಧಿಕಾರಿಗಳು ತಮ್ಮ ಪ್ರಜೆಗಳ ಹಿತಾಸಕ್ತಿಯನ್ನು ಯಥಾರ್ಥವಾಗಿ ಬಯಸುತ್ತಾರೆಂಬುದು ನಿಜ. ಆದರೆ ಅವರಲ್ಲಿ ಅತಿ ಉತ್ತಮರೂ ತಮ್ಮ ಪ್ರಜೆಗಳನ್ನು ಆಪ್ತ ರೀತಿಯಲ್ಲಿ ಅರಿತುಕೊಂಡಿರುವುದಿಲ್ಲ. ನಾವು ಹೀಗೆ ಕೇಳಬಹುದು: ತನ್ನ ಎಲ್ಲ ಪ್ರಜೆಗಳ ಬಗ್ಗೆ ಚಿಂತಿಸುವ ಮತ್ತು ಸಂಕಟಕಾಲದಲ್ಲಿ ತಟ್ಟನೆ ಪ್ರತಿಯೊಬ್ಬನ ಸಹಾಯಕ್ಕೆ ಬರುವಂಥ ಯಾವುದೇ ಪ್ರಭು ಇದ್ದಾನೋ? ಹೌದು, ಇದ್ದಾನೆ. ದಾವೀದನು ಬರೆದುದು: “ಯೆಹೋವನು ಬಿದ್ದವರನ್ನೆಲ್ಲಾ ಎತ್ತುವವನೂ ಕುಗ್ಗಿದವರನ್ನೆಲ್ಲಾ ಉದ್ಧರಿಸುವವನೂ ಆಗಿದ್ದಾನೆ.”—ಕೀರ್ತನೆ 145:14.
11. ದೇವರಿಗೆ ನಿಷ್ಠರಾಗಿರುವವರ ಮೇಲೆ ಯಾವ ಪರೀಕ್ಷೆಗಳು ಬರುತ್ತವೆ, ಮತ್ತು ಯಾವ ಸಹಾಯ ಅವರಿಗಿದೆ?
11 ಯೆಹೋವ ದೇವರಿಗೆ ನಿಷ್ಠರಾಗಿರುವವರ ಮೇಲೆ ಅನೇಕ ಪರೀಕ್ಷೆಗಳೂ ವಿಪತ್ತುಗಳೂ ಬರಲು ಕಾರಣ, ಅವರ ಸ್ವಂತ ಅಪರಿಪೂರ್ಣತೆ ಮತ್ತು ಅವರು “ಕೆಡುಕ”ನಾದ ಸೈತಾನನ ವಶದಲ್ಲಿರುವ ಲೋಕದಲ್ಲಿ ಜೀವಿಸುತ್ತಿರುವುದೇ. (1 ಯೋಹಾನ 5:19; ಕೀರ್ತನೆ 34:19) ಕ್ರೈಸ್ತರು ಹಿಂಸೆಯನ್ನು ಅನುಭವಿಸುತ್ತಾರೆ. ಕೆಲವರು ದೀರ್ಘಕಾಲದ ರೋಗದಿಂದ ನರಳುತ್ತಾರೆ ಅಥವಾ ಮರಣದಲ್ಲಿ ಪ್ರಿಯ ವ್ಯಕ್ತಿಯೊಬ್ಬರ ಅಗಲಿಕೆಯ ನೋವಿನಿಂದ ಕೊರಗುತ್ತಾರೆ. ಕೆಲವೊಮ್ಮೆ, ಯೆಹೋವನಿಗೆ ನಿಷ್ಠರಾಗಿರುವವರು ಮಾಡುವ ತಪ್ಪುಗಳು ಅವರು ನಿರುತ್ತೇಜನದಿಂದ ಕುಗ್ಗಿಹೋಗುವಂತೆ ಮಾಡಬಹುದು. ಆದರೆ ಯಾವುದೇ ಪರೀಕ್ಷೆಯು ಬರಲಿ, ಯೆಹೋವನು ಅವರ ದುಃಖೋಪಶಮನಮಾಡಲು ಮತ್ತು ಅವರಲ್ಲಿ ಪ್ರತಿಯೊಬ್ಬನಿಗೆ ಆತ್ಮಿಕ ಬಲವನ್ನು ಒದಗಿಸಲು ಸದಾ ಸಿದ್ಧನಾಗಿದ್ದಾನೆ. ಅರಸನಾದ ಯೇಸು ಕ್ರಿಸ್ತನಿಗೂ ತನ್ನ ನಿಷ್ಠಾವಂತ ಪ್ರಜೆಗಳಲ್ಲಿ ಇದೇ ರೀತಿಯ ಪ್ರೀತಿಪೂರ್ವಕ ಆಸಕ್ತಿಯಿದೆ.—ಕೀರ್ತನೆ 72:12-14.
ತಕ್ಕ ಕಾಲದಲ್ಲಿ ತೃಪ್ತಿಕರ ಆಹಾರ
12, 13. “ಎಲ್ಲಾ ಜೀವಿಗಳ” ಆವಶ್ಯಕತೆಗಳನ್ನು ಯೆಹೋವನು ಎಷ್ಟು ಚೆನ್ನಾಗಿ ಪೂರೈಸುತ್ತಾನೆ?
12 ಯೆಹೋವನು ತನ್ನ ಮಹಾ ಪ್ರೀತಿಪೂರ್ವಕ ದಯೆಯಿಂದಾಗಿ ತನ್ನ ಸೇವಕರಿಗೆ ಬೇಕಾಗುವ ಎಲ್ಲ ಆವಶ್ಯಕತೆಗಳನ್ನು ಒದಗಿಸುತ್ತಾನೆ. ಇದರಲ್ಲಿ ಅವರಿಗೆ ದೊರೆಯುವ ತೃಪ್ತಿಕರವಾದ ಪೌಷ್ಟಿಕ ಆಹಾರವೂ ಸೇರಿದೆ. ರಾಜ ದಾವೀದನು ಬರೆದುದು: “[ಯೆಹೋವನೇ,] ಎಲ್ಲಾ ಜೀವಿಗಳ ಕಣ್ಣುಗಳು ನಿನ್ನನ್ನೇ ನೋಡುತ್ತವೆ; ನೀನು ಅವುಗಳಿಗೆ ಹೊತ್ತುಹೊತ್ತಿಗೆ ಆಹಾರಕೊಡುತ್ತೀ. ನೀನು ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತೀ [“ತೃಪ್ತಿಪಡಿಸುತ್ತೀ,” NW].” (ಕೀರ್ತನೆ 145:15, 16) ವಿಪತ್ತಿನ ಸಮಯದಲ್ಲಿಯೂ ತನಗೆ ನಿಷ್ಠರಾಗಿರುವವರು “ಅನುದಿನದ ಆಹಾರವನ್ನು” ಪಡೆಯುವಂತೆ ಯೆಹೋವನು ಚಮತ್ಕಾರದಿಂದ ಸಂಗತಿಗಳನ್ನು ಏರ್ಪಡಿಸಬಲ್ಲನು.—ಲೂಕ 11:3; 12:29, 30.
13 ‘ಎಲ್ಲಾ ಜೀವಿಗಳು’ ತೃಪ್ತಿ ಹೊಂದುತ್ತವೆಂದು ದಾವೀದನು ಹೇಳಿದನು. ಇದರಲ್ಲಿ ಪಶುಗಳೂ ಸೇರಿವೆ. ಭೂಮಿಯ ಮತ್ತು ಸಮುದ್ರದ ಸಮೃದ್ಧ ಸಸ್ಯರಾಶಿಗಳು ಇಲ್ಲದಿರುತ್ತಿದ್ದಲ್ಲಿ ಜಲಚರಗಳು, ಪಕ್ಷಿಗಳು ಮತ್ತು ಭೂಮೃಗಗಳಿಗೆ ಉಸಿರಾಡಲು ಆಮ್ಲಜನಕವಾಗಲಿ ತಿನ್ನಲು ಆಹಾರವಾಗಲಿ ಇರುತ್ತಿರಲಿಲ್ಲ. (ಕೀರ್ತನೆ 104:14) ಆದರೆ ಅವೆಲ್ಲವುಗಳ ಅಗತ್ಯಗಳು ಪೂರೈಸಲ್ಪಡುವಂತೆ ಯೆಹೋವನು ನೋಡಿಕೊಳ್ಳುತ್ತಾನೆ.
14, 15. ಇಂದು ಆತ್ಮಿಕ ಆಹಾರವು ಹೇಗೆ ಒದಗಿಸಲ್ಪಡುತ್ತಿದೆ?
14 ಪ್ರಾಣಿಗಳಿಗೆ ಅಸದೃಶವಾಗಿ, ಮಾನವನಿಗಾದರೊ ಆತ್ಮಿಕ ಆವಶ್ಯಕತೆಯಿದೆ. (ಮತ್ತಾಯ 5:3) ಯೆಹೋವನು ತನ್ನ ನಿಷ್ಠಾವಂತರ ಆತ್ಮಿಕ ಆವಶ್ಯಕತೆಗಳನ್ನು ಎಷ್ಟು ಆಶ್ಚರ್ಯಕರವಾಗಿ ತೃಪ್ತಿಪಡಿಸುತ್ತಾನೆ! “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಯೇಸುವಿನ ಹಿಂಬಾಲಕರಿಗೆ ‘ಹೊತ್ತುಹೊತ್ತಿನ’ ಆತ್ಮಿಕ ಆಹಾರವನ್ನು ಒದಗಿಸುವನೆಂದು ಯೇಸು ತನ್ನ ಮರಣಕ್ಕೆ ಮುಂಚೆ ವಚನಕೊಟ್ಟನು. (ಮತ್ತಾಯ 24:45) ಇಂದು, ಅಭಿಷಿಕ್ತರಾದ 1,44,000 ಮಂದಿಯಲ್ಲಿ ಉಳಿಕೆಯವರು ಆ ವರ್ಗದವರಾಗಿರುತ್ತಾರೆ. ಅವರ ಮೂಲಕ ಯೆಹೋವನು ನಿಶ್ಚಯವಾಗಿಯೂ ಸಮೃದ್ಧವಾಗಿ ಆತ್ಮಿಕ ಆಹಾರವನ್ನು ಒದಗಿಸಿರುತ್ತಾನೆ.
15 ಉದಾಹರಣೆಗೆ, ಯೆಹೋವನ ಸಾಕ್ಷಿಗಳಲ್ಲಿ ಹೆಚ್ಚಿನವರು ಈಗ ತಮ್ಮ ಸ್ವಂತ ಭಾಷೆಗಳಲ್ಲಿ ಒಂದು ನವೀನ ಮತ್ತು ನಿಷ್ಕೃಷ್ಟವಾದ ಬೈಬಲ್ ಭಾಷಾಂತರದಿಂದ ಪ್ರಯೋಜನ ಪಡೆಯುತ್ತಾರೆ. ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರವುa ಎಷ್ಟು ಆಶ್ಚರ್ಯಕರವಾದ ಆಶೀರ್ವಾದವಾಗಿರುತ್ತದೆ! ಇದಲ್ಲದೆ, ಬೈಬಲ್ ಅಧ್ಯಯನ ಸಹಾಯಕಗಳ ಕೋಟ್ಯಂತರ ಪ್ರತಿಗಳು 300ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರಕಾಶಿಸಲ್ಪಡುತ್ತಿವೆ. ಈ ಎಲ್ಲಾ ಆತ್ಮಿಕ ಆಹಾರವು ಭೂಲೋಕದಲ್ಲೆಲ್ಲಾ ಇರುವ ಸತ್ಯಾರಾಧಕರಿಗೆ ಒಂದು ಆಶೀರ್ವಾದವಾಗಿದೆ. ಈ ಎಲ್ಲಾ ವಿಷಯಗಳಿಗಾಗಿ ಕೀರ್ತಿ ಯಾರಿಗೆ ಸಲ್ಲಬೇಕು? ಯೆಹೋವ ದೇವರಿಗೆ. ಆತನು ತನ್ನ ಮಹಾ ಪ್ರೀತಿಪೂರ್ವಕ ದಯೆಯ ಮೂಲಕ, ಆಳು ವರ್ಗವು “ಹೊತ್ತುಹೊತ್ತಿಗೆ ಆಹಾರ”ವನ್ನು ಒದಗಿಸುವಂತೆ ಸಾಧ್ಯಮಾಡಿದ್ದಾನೆ. ಇಂತಹ ಒದಗಿಸುವಿಕೆಗಳ ಮೂಲಕ, ಸದ್ಯದ ದಿನದ ಆತ್ಮಿಕ ಪರದೈಸಿನಲ್ಲಿ “ಎಲ್ಲಾ ಜೀವಿಗಳ ಇಷ್ಟ”ವು ನೆರವೇರಿಸಲ್ಪಡುತ್ತಿದೆ. ಮತ್ತು ಬೇಗನೆ ಈ ಭೂಮಿಯು ವಾಸ್ತವದಲ್ಲಿ ಒಂದು ಪರದೈಸಾಗಿ ಮಾರ್ಪಡುವುದನ್ನು ನೋಡುವ ನಿರೀಕ್ಷೆಯ ಬಗ್ಗೆ ಯೆಹೋವನ ಸೇವಕರು ಎಷ್ಟೊಂದು ಹರ್ಷಿಸುತ್ತಾರೆ!
16, 17. (ಎ) ತಕ್ಕ ಕಾಲದಲ್ಲಿ ಒದಗಿಸಲ್ಪಟ್ಟ ಆತ್ಮಿಕ ಆಹಾರದ ಯಾವ ಉದಾಹರಣೆಗಳಿವೆ? (ಬಿ) ಸೈತಾನನಿಂದ ಎಬ್ಬಿಸಲ್ಪಟ್ಟ ಪ್ರಧಾನ ವಿವಾದಾಂಶದ ಸಂಬಂಧದಲ್ಲಿ ದೇವರಿಗೆ ನಿಷ್ಠರಾಗಿರುವವರ ಅನಿಸಿಕೆಗಳನ್ನು ಕೀರ್ತನೆ 145 ಹೇಗೆ ವ್ಯಕ್ತಪಡಿಸುತ್ತದೆ?
16 ಆತ್ಮಿಕ ಆಹಾರವು ತಕ್ಕ ಕಾಲದಲ್ಲಿ ದೊರೆತದ್ದರ ಒಂದು ಗಮನಾರ್ಹ ಉದಾಹರಣೆಯನ್ನು ಪರಿಗಣಿಸಿರಿ. ಎರಡನೆಯ ಲೋಕ ಯುದ್ಧವು ಯುರೋಪಿನಲ್ಲಿ 1939ರಲ್ಲಿ ಆರಂಭವಾಯಿತು. ಅದೇ ವರುಷದ ಕಾವಲಿನಬುರುಜು (ಇಂಗ್ಲಿಷ್) ಪತ್ರಿಕೆಯ ನವೆಂಬರ್ 1ರ ಸಂಚಿಕೆಯು “ತಾಟಸ್ಥ್ಯ” ಎಂಬ ಶೀರ್ಷಿಕೆಯುಳ್ಳ ಲೇಖನವನ್ನು ಪ್ರಕಟಿಸಿತು. ಅದರಲ್ಲಿ ಪ್ರಸ್ತುತಪಡಿಸಲ್ಪಟ್ಟ ಸ್ಪಷ್ಟವಾದ ಮಾಹಿತಿಯ ಕಾರಣದಿಂದ, ಲೋಕದಾದ್ಯಂತ ಇದ್ದ ಯೆಹೋವನ ಸಾಕ್ಷಿಗಳು, ಯುದ್ಧಹೂಡುತ್ತಿರುವ ಜನಾಂಗಗಳ ವ್ಯವಹಾರಗಳಲ್ಲಿ ಕಟ್ಟುನಿಟ್ಟಾದ ತಾಟಸ್ಥ್ಯವನ್ನು ಕಾಪಾಡಿಕೊಳ್ಳುವ ಆವಶ್ಯಕತೆಯನ್ನು ಮನಗಂಡರು. ಇದರ ಪರಿಣಾಮವಾಗಿ ಆ ಆರು ವರುಷಗಳ ಹೋರಾಟದಲ್ಲಿ ಎರಡೂ ಪಕ್ಷಗಳ ಸರಕಾರಗಳ ರೋಷವು ಅವರ ಮೇಲೆ ಬಂದೆರಗಿತು. ಆದರೆ, ನಿಷೇಧ ಮತ್ತು ಹಿಂಸೆಗಳ ಹೊರತಾಗಿಯೂ ದೇವರಿಗೆ ನಿಷ್ಠರಾಗಿರುವವರು ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಹೋದರು. ಮತ್ತು 1939ರಿಂದ 1946ರ ವರೆಗೆ, ಬೆರಗುಗೊಳಿಸುವ 157 ಪ್ರತಿಶತ ಅಭಿವೃದ್ಧಿಯಿಂದ ಅವರು ಹರಸಲ್ಪಟ್ಟರು. ಇದಲ್ಲದೆ, ಆ ಯುದ್ಧಕಾಲದಲ್ಲಿ ಅವರು ತೋರಿಸಿದ ಗಮನಾರ್ಹವಾದ ಸಮಗ್ರತೆಯ ದಾಖಲೆಯು, ಜನರು ಸತ್ಯ ಧರ್ಮವನ್ನು ಗುರುತಿಸುವಂತೆ ಸಹಾಯಮಾಡುತ್ತಾ ಮುಂದುವರಿಯುತ್ತಿದೆ.—ಯೆಶಾಯ 2:2-4.
17 ಯೆಹೋವನು ಒದಗಿಸುವ ಆತ್ಮಿಕ ಆಹಾರವು ಸಮಯೋಚಿತ ಮಾತ್ರವಲ್ಲ, ಅತಿ ತೃಪ್ತಿಕರವೂ ಆಗಿದೆ. ಎರಡನೆಯ ಲೋಕ ಯುದ್ಧದ ಸಮಯದಲ್ಲಿ ಜನಾಂಗಗಳು ಕದನದಲ್ಲಿ ಮುಳುಗಿದ್ದಾಗ, ಯೆಹೋವನ ಸಾಕ್ಷಿಗಳು ತಮ್ಮ ಸ್ವಂತ ರಕ್ಷಣೆಗಿಂತಲೂ ಅಧಿಕ ಪ್ರಾಮುಖ್ಯವಾಗಿರುವ ಒಂದು ವಿಷಯದ ಮೇಲೆ ಗಮನವನ್ನು ಕೇಂದ್ರೀಕರಿಸುವಂತೆ ಅವರಿಗೆ ಸಹಾಯಮಾಡಲಾಯಿತು. ಇಡೀ ವಿಶ್ವವನ್ನು ಒಳಗೂಡಿರುವ ಪ್ರಧಾನ ವಿವಾದಾಂಶವು ಯೆಹೋವನ ನ್ಯಾಯವಾದ ಪರಮಾಧಿಕಾರಕ್ಕೆ ಸಂಬಂಧಿಸಲ್ಪಟ್ಟಿದೆ ಎಂಬದನ್ನು ಅರಿತುಕೊಳ್ಳುವಂತೆ ಯೆಹೋವನು ಅವರಿಗೆ ಸಹಾಯಮಾಡಿದನು. ಹೀಗೆ ಯೆಹೋವನ ಪ್ರತಿಯೊಬ್ಬ ಸಾಕ್ಷಿಯು ತನ್ನ ನಿಷ್ಠೆಯ ಮೂಲಕ ಯೆಹೋವನ ಪರಮಾಧಿಕಾರದ ನಿರ್ದೋಷೀಕರಣದಲ್ಲಿ ಮತ್ತು ಪಿಶಾಚನನ್ನು ಸುಳ್ಳುಗಾರನೆಂದು ರುಜುಪಡಿಸುವುದರಲ್ಲಿ ಒಂದು ಚಿಕ್ಕ ಪಾತ್ರವನ್ನು ವಹಿಸಿದ್ದನೆಂದು ತಿಳಿಯುವುದು ಎಷ್ಟು ತೃಪ್ತಿದಾಯಕವಾಗಿದೆ! (ಜ್ಞಾನೋಕ್ತಿ 27:11) ಯೆಹೋವನ ಮೇಲೆ ಮತ್ತು ಆತನು ಆಳುವ ವಿಧಾನದ ಮೇಲೆ ಅಪವಾದ ಹೊರಿಸಿದ ಸೈತಾನನಿಗೆ ಅಸದೃಶವಾಗಿ, ಯೆಹೋವನಿಗೆ ನಿಷ್ಠೆಯಿಂದಿರುವವರು “ಯೆಹೋವನ ಮಾರ್ಗಗಳೆಲ್ಲಾ ನೀತಿಯುಳ್ಳವುಗಳು” ಎಂದು ಬಹಿರಂಗವಾಗಿ ಸಾರುತ್ತಾ ಹೋಗುತ್ತಾರೆ.—ಕೀರ್ತನೆ 145:17.
18. ತಕ್ಕ ಕಾಲದಲ್ಲಿ ಸಿಗುವ ಮತ್ತು ಅತಿ ತೃಪ್ತಿಕರವಾದ ಆತ್ಮಿಕ ಆಹಾರದ ಸಂಬಂಧದಲ್ಲಿ ಇತ್ತೀಚಿನ ಯಾವ ಉದಾಹರಣೆಯಿದೆ?
18 ತಕ್ಕ ಕಾಲದಲ್ಲಿ ದೊರೆತ ಮತ್ತು ತೃಪ್ತಿದಾಯಕವಾದ ಆತ್ಮಿಕ ಆಹಾರದ ಇನ್ನೊಂದು ಉದಾಹರಣೆಯು, ಯೆಹೋವನ ಸಮೀಪಕ್ಕೆ ಬನ್ನಿರಿ ಎಂಬ ಪುಸ್ತಕವೇ. ಇದು 2002/03ರಲ್ಲಿ ಲೋಕದಾದ್ಯಂತ ನಡೆದ “ಹುರುಪಿನ ರಾಜ್ಯ ಘೋಷಕರು” ಎಂಬ ನೂರಾರು ಜಿಲ್ಲಾ ಅಧಿವೇಶನಗಳಲ್ಲಿ ಬಿಡುಗಡೆಯಾಯಿತು. “ನಂಬಿಗಸ್ತನೂ ವಿವೇಕಿಯೂ ಆದ ಆಳು” ತಯಾರಿಸಿ, ಯೆಹೋವನ ಸಾಕ್ಷಿಗಳು ಪ್ರಕಾಶಪಡಿಸಿದ ಈ ಪುಸ್ತಕವು ಕೀರ್ತನೆ 145ರಲ್ಲಿ ತಿಳಿಸಲ್ಪಟ್ಟಿರುವ ಗುಣಗಳು ಸೇರಿರುವ ಯೆಹೋವ ದೇವರ ಅದ್ಭುತಕರ ಗುಣಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ಉತ್ತಮ ಪುಸ್ತಕವು ದೇವರಿಗೆ ನಿಷ್ಠರಾಗಿರುವವರು ಆತನ ಇನ್ನೂ ಸಮೀಪಕ್ಕೆ ಬರುತ್ತಾ ಇರಲು ಸಹಾಯಮಾಡುವುದರಲ್ಲಿ ನಿಶ್ಚಯವಾಗಿಯೂ ಪ್ರಮುಖ ಪಾತ್ರವನ್ನು ವಹಿಸುವುದು.
ಯೆಹೋವನಿಗೆ ಇನ್ನೂ ಸಮೀಪವಾಗುವ ಸಮಯ
19. ಯಾವ ನಿರ್ಣಾಯಕ ಕಾಲವು ಸಮೀಪಿಸುತ್ತಿದೆ, ಮತ್ತು ನಾವು ಅದನ್ನು ಹೇಗೆ ನಿಭಾಯಿಸಬಲ್ಲೆವು?
19 ಯೆಹೋವನ ಪರಮಾಧಿಕಾರದ ವಿವಾದಾಂಶವನ್ನು ಇತ್ಯರ್ಥಗೊಳಿಸುವುದರಲ್ಲಿ ಒಂದು ನಿರ್ಣಾಯಕ ಹಂತವು ಸಮೀಪಿಸುತ್ತಿದೆ. ಯೆಹೆಜ್ಕೇಲ ಅಧ್ಯಾಯ 38ರಲ್ಲಿ ಮುಂತಿಳಿಸಿರುವಂತೆ, ಸೈತಾನನು ‘ಮಾಗೋಗ್ ದೇಶದ ಗೋಗ’ನೋಪಾದಿ ತನ್ನ ಪಾತ್ರವನ್ನು ಬೇಗನೆ ಪೂರೈಸುವನು. ಇದರಲ್ಲಿ ಯೆಹೋವನ ಜನರ ಮೇಲೆ ಒಂದು ಲೋಕವ್ಯಾಪಕ ಆಕ್ರಮಣವು ಸೇರಿರುವುದು. ಇದು ದೇವರಿಗೆ ನಿಷ್ಠರಾಗಿರುವವರ ಸಮಗ್ರತೆಯನ್ನು ಮುರಿಯಲು ಸೈತಾನನು ಮಾಡುವ ಮಹಾಪ್ರಯತ್ನವಾಗಿರುವುದು. ಆಗ ಯೆಹೋವನ ಆರಾಧಕರು ಹಿಂದೆಂದೂ ಮಾಡಿರದಷ್ಟು ಶ್ರದ್ಧಾಪೂರ್ವಕವಾಗಿ ಆತನಿಗೆ ಮೊರೆಯಿಡಬೇಕಾಗುವುದು, ಅಳುತ್ತಲೂ ಆತನ ಸಹಾಯಕ್ಕಾಗಿ ಬೇಡಿಕೊಳ್ಳಬೇಕಾಗುವುದು. ದೇವರ ಬಗ್ಗೆ ಅವರಿಗಿರುವ ಪೂಜ್ಯಭಾವದ ಭಯ ಮತ್ತು ಪ್ರೀತಿಯು ವ್ಯರ್ಥವಾಗಿ ಪರಿಣಮಿಸೀತೆ? ಖಂಡಿತವಾಗಿಯೂ ಇಲ್ಲ, ಏಕೆಂದರೆ ಕೀರ್ತನೆ 145 ಹೇಳುವುದು: “ಯೆಹೋವನಿಗೆ ಮೊರೆಯಿಡುವವರು, ಯಥಾರ್ಥವಾಗಿ ಮೊರೆಯಿಡುವದಾದರೆ ಆತನು ಹತ್ತಿರವಾಗಿಯೇ ಇದ್ದಾನೆ. ತನ್ನಲ್ಲಿ ಭಯಭಕ್ತಿಯುಳ್ಳವರ ಇಷ್ಟವನ್ನು ನೆರವೇರಿಸುತ್ತಾನೆ; ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ. ಯೆಹೋವನು ತನ್ನನ್ನು ಪ್ರೀತಿಸುವವರೆಲ್ಲರನ್ನು ಕಾಪಾಡುತ್ತಾನೆ; ಆದರೆ ಎಲ್ಲಾ ದುಷ್ಟರನ್ನು ಸಂಹರಿಸುತ್ತಾನೆ.”—ಕೀರ್ತನೆ 145:18-20.
20. ಕೀರ್ತನೆ 145:18-20ರ ಮಾತುಗಳು ಹತ್ತಿರದ ಭವಿಷ್ಯತ್ತಿನಲ್ಲಿ ಹೇಗೆ ಸತ್ಯವೆಂದು ರುಜುವಾಗುವವು?
20 ಯೆಹೋವನು ಸಕಲ ದುಷ್ಟರನ್ನು ನಾಶಮಾಡುವಾಗ ಆತನ ಸಾಮೀಪ್ಯವನ್ನು ಮತ್ತು ರಕ್ಷಣಾಶಕ್ತಿಯನ್ನು ಅನುಭವಿಸುವುದು ಅದೆಷ್ಟು ರೋಮಾಂಚಕವಾಗಿರುವುದು! ಈಗ ತೀರ ಹತ್ತಿರದಲ್ಲಿರುವ ಆ ನಿರ್ಣಾಯಕ ಸಮಯದಲ್ಲಿ, ಯೆಹೋವನು ‘ಯಥಾರ್ಥವಾಗಿ ಮೊರೆಯಿಡುವವರಿಗೆ’ ಮಾತ್ರ ಕಿವಿಗೊಡುವನು. ಕಪಟಿಗಳಿಗೆ ಆತನು ನಿಶ್ಚಯವಾಗಿಯೂ ಕಿವಿಗೊಡನು. ದುಷ್ಟರು ಕೊನೆಯ ಕ್ಷಣದಲ್ಲಿ ದೇವರ ನಾಮವನ್ನು ಎತ್ತಿ ಪ್ರಾರ್ಥಿಸುವುದು ಯಾವಾಗಲೂ ವ್ಯರ್ಥವಾಗಿ ಪರಿಣಮಿಸಿದೆಯೆಂದು ದೇವರ ವಾಕ್ಯವು ತೋರಿಸುತ್ತದೆ.—ಜ್ಞಾನೋಕ್ತಿ 1:28, 29; ಮೀಕ 3:4; ಲೂಕ 13:24, 25.
21. ಯೆಹೋವನಿಗೆ ನಿಷ್ಠರಾಗಿರುವವರು ದೈವಿಕ ನಾಮವನ್ನು ಉಪಯೋಗಿಸಲು ತಾವು ಸಂತೋಷಿಸುತ್ತೇವೆಂಬದನ್ನು ಹೇಗೆ ತೋರಿಸುತ್ತಾರೆ?
21 ಯೆಹೋವನಿಗೆ ಭಯಪಡುವವರು ಹಿಂದೆಂದಿಗಿಂತಲೂ ಹೆಚ್ಚಾಗಿ ಆತನಿಗೆ ‘ಯಥಾರ್ಥವಾಗಿ ಮೊರೆಯಿಡಬೇಕಾದ’ ಸಮಯವು ಇದಾಗಿದೆ. ಆತನಿಗೆ ನಿಷ್ಠರಾಗಿರುವವರು ತಮ್ಮ ಪ್ರಾರ್ಥನೆಗಳಲ್ಲಿಯೂ ಕೂಟಗಳಲ್ಲಿ ನೀಡುವ ಹೇಳಿಕೆಗಳಲ್ಲಿಯೂ ಆತನ ನಾಮವನ್ನು ಉಪಯೋಗಿಸಲು ಸಂತೋಷಿಸುತ್ತಾರೆ. ಖಾಸಗಿ ಸಂಭಾಷಣೆಗಳಲ್ಲಿಯೂ ಅವರು ದೈವಿಕ ನಾಮವನ್ನು ಉಪಯೋಗಿಸುತ್ತಾರೆ. ಮತ್ತು ತಮ್ಮ ಸಾರ್ವಜನಿಕ ಶುಶ್ರೂಷೆಯಲ್ಲಿ ಯೆಹೋವನ ನಾಮವನ್ನು ಧೈರ್ಯದಿಂದ ಪ್ರಕಟಿಸುತ್ತಾರೆ.—ರೋಮಾಪುರ 10:10, 13-15.
22. ಪ್ರಾಪಂಚಿಕ ಮನೋಭಾವಗಳನ್ನೂ ಅಪೇಕ್ಷೆಗಳನ್ನೂ ಪ್ರತಿರೋಧಿಸುತ್ತಾ ಹೋಗುವುದು ಅತ್ಯಾವಶ್ಯಕವೇಕೆ?
22 ಯೆಹೋವ ದೇವರೊಂದಿಗೆ ನಮಗಿರುವ ನಿಕಟ ಸಂಬಂಧದಿಂದ ಪ್ರಯೋಜನ ಹೊಂದುತ್ತಾ ಮುಂದುವರಿಯಬೇಕಾದರೆ, ನಾವು ಪ್ರಾಪಂಚಿಕತೆ, ಅಹಿತಕರ ಮನೋರಂಜನೆ, ಕ್ಷಮಿಸದಿರುವ ಮನೋಭಾವ ಅಥವಾ ಬಡಸ್ಥಿತಿಯಲ್ಲಿರುವವರ ಕಡೆಗೆ ಔದಾಸೀನ್ಯಭಾವದಂಥ ಆತ್ಮಿಕವಾಗಿ ಹಾನಿಕರವಾದ ವಿಷಯಗಳನ್ನು ಪ್ರತಿರೋಧಿಸುತ್ತಾ ಹೋಗಬೇಕು. (1 ಯೋಹಾನ 2:15-17; 3:15-17) ಇವುಗಳನ್ನು ತಿದ್ದಿಕೊಳ್ಳದೇ ಇರುವಲ್ಲಿ, ಈ ರೀತಿಯ ಬೆನ್ನಟ್ಟುವಿಕೆಗಳು ಮತ್ತು ಪ್ರವೃತ್ತಿಗಳು ಘೋರ ಪಾಪಗಳ ರೂಢಿಮಾಡುವಿಕೆಗೂ ಮತ್ತು ಅಂತಿಮವಾಗಿ ಯೆಹೋವನ ಮೆಚ್ಚುಗೆಯ ನಷ್ಟಕ್ಕೂ ನಡೆಸಬಲ್ಲವು. (1 ಯೋಹಾನ 2:1, 2; 3:6) ಆದುದರಿಂದ, ನಾವು ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುವಲ್ಲಿ ಮಾತ್ರ ಆತನು ನಮಗೆ ಪ್ರೀತಿಪೂರ್ವಕ ದಯೆಯನ್ನು ಅಥವಾ ನಿಷ್ಠಾವಂತ ಪ್ರೀತಿಯನ್ನು ತೋರಿಸುತ್ತಾ ಹೋಗುವನೆಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ವಿವೇಕಪ್ರದವಾದ ಮಾರ್ಗವಾಗಿದೆ.—2 ಸಮುವೇಲ 22:26.
23. ದೇವರಿಗೆ ನಿಷ್ಠರಾಗಿರುವವರೆಲ್ಲರಿಗೆ ಯಾವ ಮಹಾ ಭವಿಷ್ಯತ್ತು ಕಾದಿದೆ?
23 ಆದಕಾರಣ, ಯೆಹೋವನಿಗೆ ನಿಷ್ಠರಾಗಿರುವವರೆಲ್ಲರಿಗಾಗಿ ಕಾದಿರುವ ಭವ್ಯ ಭವಿಷ್ಯತ್ತಿನ ಮೇಲೆ ನಾವು ನಮ್ಮ ಯೋಚನೆಗಳನ್ನು ಕೇಂದ್ರೀಕರಿಸುತ್ತಾ ಹೋಗೋಣ. ಹಾಗೆ ಮಾಡುವ ಮೂಲಕ, ‘ದಿನವಿಡೀ’ ಮತ್ತು “ಯುಗಯುಗಾಂತರಗಳಲ್ಲಿ” ಯೆಹೋವನನ್ನು ಹೊಗಳಿ, ಕೊಂಡಾಡಿ, ಸ್ತುತಿಸುವವರ ಮಧ್ಯೆ ಒಳಗೂಡಿರುವ ಆಶ್ಚರ್ಯಕರವಾದ ಪ್ರತೀಕ್ಷೆ ನಮ್ಮದಾಗಿರುವುದು. (ಕೀರ್ತನೆ 145:1, 2) ಈ ಕಾರಣ, ನಾವು ‘ನಿತ್ಯಜೀವಕ್ಕಾಗಿ ನಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳೋಣ.’ (ಯೂದ 20, 21) ನಮ್ಮ ಸ್ವರ್ಗೀಯ ತಂದೆಯು ತನ್ನನ್ನು ಪ್ರೀತಿಸುವವರಿಗೆ ತೋರಿಸುವ ಪ್ರೀತಿಪೂರ್ವಕ ದಯೆಯ ಜೊತೆಗೆ ಆತನ ಇತರ ಅದ್ಭುತಕರ ಗುಣಗಳಿಂದ ನಾವು ಪ್ರಯೋಜನ ಪಡೆಯುತ್ತಾ ಹೋಗುವಾಗ, ನಮ್ಮ ಭಾವನೆಗಳು ಸದಾ ಕೀರ್ತನೆ 145ರ ಕೊನೆಯಲ್ಲಿ ದಾವೀದನು ಹೇಳಿದ ಮಾತುಗಳಂತೆಯೇ ಇರಲಿ: “ನನ್ನ ಬಾಯಿ ಯೆಹೋವನನ್ನು ಕೀರ್ತಿಸುವದು; ಎಲ್ಲಾ ಜೀವಿಗಳು ಆತನ ಪರಿಶುದ್ಧ ನಾಮವನ್ನು ಯುಗಯುಗಾಂತರಗಳಲ್ಲಿಯೂ ಕೊಂಡಾಡಲಿ.”
[ಪಾದಟಿಪ್ಪಣಿ]
a ಕನ್ನಡದಲ್ಲಿ ಲಭ್ಯವಿಲ್ಲ.
ನೀವು ಹೇಗೆ ಉತ್ತರಿಸುವಿರಿ?
• ಕೀರ್ತನೆ 145 ದೇವರಿಗೆ ನಿಷ್ಠರಾಗಿರುವವರನ್ನು ಗುರುತಿಸಲು ಹೇಗೆ ಸಹಾಯ ಮಾಡುತ್ತದೆ?
• ಯೆಹೋವನು ‘ಎಲ್ಲಾ ಜೀವಿಗಳ ಇಷ್ಟವನ್ನು’ ತೃಪ್ತಿಪಡಿಸುವುದು ಹೇಗೆ?
• ನಾವು ಯೆಹೋವನಿಗೆ ಇನ್ನೂ ಸಮೀಪವಾಗುವ ಅಗತ್ಯವಿದೆ ಏಕೆ?
[ಪುಟ 16ರಲ್ಲಿರುವ ಚಿತ್ರ]
ದೇವರಿಗೆ ನಿಷ್ಠರಾಗಿರುವವರು ಆತನ ಮಹತ್ಕಾರ್ಯಗಳನ್ನು ಚರ್ಚಿಸುತ್ತಿರಲು ಸಂತೋಷಿಸುತ್ತಾರೆ
[ಪುಟ 17ರಲ್ಲಿರುವ ಚಿತ್ರ]
ಅಪರಿಚಿತರು ದೇವರ ರಾಜತ್ವದ ಕುರಿತು ಕಲಿಯುವಂತೆ ಯೆಹೋವನ ಸೇವಕರು ಅವರಿಗೆ ಧೈರ್ಯದಿಂದ ಸಹಾಯ ನೀಡುತ್ತಾರೆ
[ಪುಟ 18ರಲ್ಲಿರುವ ಚಿತ್ರಗಳು]
ಯೆಹೋವನು “ಎಲ್ಲಾ ಜೀವಿಗಳಿಗೆ” ಆಹಾರವನ್ನು ಒದಗಿಸುತ್ತಾನೆ
[ಕೃಪೆ]
ಪ್ರಾಣಿಗಳು: Parque de la Naturaleza de Cabárceno
[ಪುಟ 19ರಲ್ಲಿರುವ ಚಿತ್ರ]
ಪ್ರಾರ್ಥನೆಯಲ್ಲಿ ಸಹಾಯ ಕೇಳುವ ತನ್ನ ನಿಷ್ಠರಿಗೆ ಯೆಹೋವನು ಶಕ್ತಿ ಮತ್ತು ಮಾರ್ಗದರ್ಶನವನ್ನು ಕೊಡುತ್ತಾನೆ