ಇಂದಿನ ಜಗತ್ತಿನಲ್ಲೂ ವಿವಾಹವು ಯಶಸ್ವಿಯಾಗಬಲ್ಲದು
“ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.”—ಕೊಲೊಸ್ಸೆ 3:14.
1, 2. (ಎ) ಕ್ರೈಸ್ತ ಸಭೆಯ ವಿಷಯದಲ್ಲಿ ಯಾವ ವಾಸ್ತವಾಂಶವು ಉತ್ತೇಜನದಾಯಕವಾಗಿದೆ? (ಬಿ) ಯಶಸ್ವೀ ವಿವಾಹವು ಅಂದರೇನು?
ಕ್ರೈಸ್ತ ಸಭೆಯನ್ನು ಗಮನಿಸುವಾಗ, 10, 20, 30 ಅಥವಾ ಅದಕ್ಕಿಂತಲೂ ಹೆಚ್ಚು ವರ್ಷಗಳಿಂದ ತಮ್ಮ ಬಾಳಸಂಗಾತಿಗೆ ನಿಷ್ಠೆಯಿಂದುಳಿದಿರುವ ಎಷ್ಟೋ ವಿವಾಹಿತ ದಂಪತಿಗಳನ್ನು ನೋಡಿ ಆನಂದವಾಗುತ್ತದಲ್ಲವೊ? ಈ ಎಲ್ಲಾ ದಂಪತಿಗಳು ಕಷ್ಟವಾಗಲಿ ಸುಖವಾಗಲಿ ಎಲ್ಲಾ ಸಮಯದಲ್ಲೂ ತಮ್ಮ ಸಂಗಾತಿಗಳಿಗೆ ನಿಷ್ಠೆಯಿಂದ ಅಂಟಿಕೊಂಡಿರುತ್ತಾರೆ.—ಆದಿಕಾಂಡ 2:24.
2 ಆದರೆ ಇವರಲ್ಲಿ ಹೆಚ್ಚಿನವರು ತಮ್ಮ ವಿವಾಹದಲ್ಲಿ ಸಮಸ್ಯೆಗಳೂ ಇದ್ದವೆಂದು ಒಪ್ಪಿಕೊಳ್ಳುವರು. ಒಬ್ಬ ಅವಲೋಕನಗಾರನು ಬರೆದುದು: “ಸುಖೀ ವಿವಾಹಗಳು ತೊಂದರೆ ಅಥವಾ ಚಿಂತಾಮುಕ್ತವಾಗಿರುವುದಿಲ್ಲ. ಸಂತೋಷದ ಸಮಯಗಳೂ ಇರುತ್ತವೆ, ದುಃಖದ ಸಮಯಗಳೂ ಇರುತ್ತವೆ . . . ಆದರೆ ಹೇಗೊ . . . ಈ ಜನರು ಆಧುನಿಕ ಜೀವನದ [ತಾಪತ್ರಯಗಳ] ನಡುವೆಯೂ ತಮ್ಮ ವಿವಾಹಬಂಧವನ್ನು ಉಳಿಸಿಕೊಂಡಿರುತ್ತಾರೆ.” ಯಶಸ್ವೀ ದಂಪತಿಗಳು ಜೀವನದ ಒತ್ತಡಗಳಿಂದಾಗಿ, ವಿಶೇಷವಾಗಿ ಅವರು ಮಕ್ಕಳನ್ನು ಬೆಳೆಸಿರುವಲ್ಲಿ, ಎದ್ದುಬಂದಿರುವ ಅನಿವಾರ್ಯ ಬಿರುಗಾಳಿಗಳು ಮತ್ತು ಬಿಕ್ಕಟ್ಟುಗಳನ್ನು ಎದುರಿಸಲು ಕಲಿತಿದ್ದಾರೆ. ನಿಜ ಪ್ರೀತಿಯು “ಎಂದಿಗೂ ಬಿದ್ದುಹೋಗುವದಿಲ್ಲ” ಎಂಬುದನ್ನು ಜೀವನದ ಅನುಭವವು ಇಂಥ ದಂಪತಿಗಳಿಗೆ ಕಲಿಸಿಕೊಟ್ಟಿದೆ.—1 ಕೊರಿಂಥ 13:8.
3. ವಿವಾಹ ಮತ್ತು ವಿಚ್ಛೇದಗಳ ಕುರಿತು ಅಂಕಿಸಂಖ್ಯೆಗಳು ಏನನ್ನು ಸೂಚಿಸುತ್ತವೆ, ಮತ್ತು ಇದು ಯಾವ ಪ್ರಶ್ನೆಗಳಿಗೆ ನಡೆಸುತ್ತದೆ?
3 ಇದಕ್ಕೆ ತದ್ವಿರುದ್ಧವಾಗಿ, ಕೋಟಿಗಟ್ಟಲೆ ವಿವಾಹಗಳು ಮುಳುಗಿರುವ ನಾವೆಗಳಾಗಿ ಪರಿಣಮಿಸಿವೆ. ಒಂದು ವರದಿಯು ಹೇಳುವುದು: “ಇಂದು ಅಮೆರಿಕದಲ್ಲಿನ ವಿವಾಹಗಳಲ್ಲಿ ಅರ್ಧದಷ್ಟು ವಿಚ್ಛೇದದಲ್ಲಿ ಅಂತ್ಯಗೊಳ್ಳುವವೆಂದು ನಿರೀಕ್ಷಿಸಲಾಗಿದೆ. ಮತ್ತು ಇದರಲ್ಲಿ [ವಿಚ್ಛೇದಗಳಲ್ಲಿ] ಅರ್ಧದಷ್ಟು, ಮದುವೆಯಾದ ಮೊದಲ 7.8 ವರ್ಷಗಳೊಳಗೆ ನಡೆಯುವವು. . . . ಪುನರ್ವಿವಾಹವಾಗುವ 75 ಪ್ರತಿಶತ ಜನರಲ್ಲಿ, 60 ಪ್ರತಿಶತ ಮಂದಿ ಪುನಃ ವಿಚ್ಛೇದ ಪಡೆಯುವರು.” ಹಿಂದೆ ವಿಚ್ಛೇದದ ಪ್ರಮಾಣಗಳು ಕಡಿಮೆಯಾಗಿದ್ದ ದೇಶಗಳಲ್ಲಿಯೂ ಪರಿಸ್ಥಿತಿ ಬದಲಾಗಿದೆ. ಉದಾಹರಣೆಗೆ, ಜಪಾನಿನಲ್ಲಿ ವಿಚ್ಛೇದದ ಪ್ರಮಾಣವು ಇತ್ತೀಚಿನ ವರ್ಷಗಳಲ್ಲಿ ಇಮ್ಮಡಿಯಾಗಿದೆ. ಈ ಸ್ಥಿತಿಗೆ ನಡೆಸಿರುವ ಮತ್ತು ಕೆಲವೊಮ್ಮೆ ಕ್ರೈಸ್ತ ಸಭೆಯೊಳಗೂ ತೋರಿಬಂದಿರುವ ಕೆಲವೊಂದು ಒತ್ತಡಗಳು ಯಾವುವು? ವಿವಾಹದ ಏರ್ಪಾಡನ್ನು ಶಿಥಿಲಗೊಳಿಸಲಿಕ್ಕಾಗಿ ಸೈತಾನನು ಮಾಡುವ ಪ್ರಯತ್ನಗಳ ಎದುರಿನಲ್ಲೂ ಅದನ್ನು ಯಶಸ್ವಿಗೊಳಿಸಲು ಏನು ಅಗತ್ಯ?
ತಪ್ಪಿಸಿಕೊಳ್ಳಬೇಕಾದ ಹಳ್ಳಗಳು
4. ವಿವಾಹವನ್ನು ಶಿಥಿಲಗೊಳಿಸಬಲ್ಲ ಕೆಲವೊಂದು ಅಂಶಗಳು ಯಾವುವು?
4 ವಿವಾಹವನ್ನು ಶಿಥಿಲಗೊಳಿಸಬಲ್ಲ ಅಂಶಗಳು ಯಾವುದೆಂಬುದನ್ನು ಅರ್ಥಮಾಡಿಕೊಳ್ಳಲು ದೇವರ ವಾಕ್ಯವು ನಮಗೆ ಸಹಾಯಮಾಡುತ್ತದೆ. ಉದಾಹರಣೆಗಾಗಿ, ಈ ಕಡೇ ದಿವಸಗಳಲ್ಲಿ ಇರುವ ಪರಿಸ್ಥಿತಿಗಳ ಕುರಿತಾಗಿ ಅಪೊಸ್ತಲ ಪೌಲನು ತಿಳಿಸಿದ ಮಾತುಗಳನ್ನು ಪರಿಗಣಿಸಿರಿ: “ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿ ಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು; ಇಂಥವರ ಸಹವಾಸವನ್ನೂ ಮಾಡದಿರು.”—2 ತಿಮೊಥೆಯ 3:1-5.
5. ‘ಸ್ವಾರ್ಥಚಿಂತಕರು’ ತಮ್ಮ ವಿವಾಹವನ್ನು ಹೇಗೆ ಅಪಾಯಕ್ಕೆ ಒಡ್ಡುತ್ತಾರೆ, ಮತ್ತು ಈ ವಿಷಯದಲ್ಲಿ ಬೈಬಲಿನ ಸಲಹೆಯೇನು?
5 ನಾವು ಪೌಲನ ಮಾತುಗಳನ್ನು ವಿಶ್ಲೇಷಿಸುವಾಗ, ಅವನು ಪಟ್ಟಿಮಾಡಿರುವ ಅನೇಕ ವಿಷಯಗಳು ವೈವಾಹಿಕ ಸಂಬಂಧಗಳ ಕುಸಿತಕ್ಕೆ ಕಾರಣವಾಗಿರಬಲ್ಲದೆಂಬುದನ್ನು ನೋಡಬಲ್ಲೆವು. ಉದಾಹರಣೆಗೆ, ‘ಸ್ವಾರ್ಥಚಿಂತಕರು’ ತಮ್ಮ ಬಗ್ಗೆ ಮಾತ್ರ ಚಿಂತಿಸಿ, ಇತರರ ಕುರಿತು ಪರಿಗಣನೆಯಿಲ್ಲದವರಾಗಿರುತ್ತಾರೆ. ಕೇವಲ ತಮ್ಮನ್ನೇ ಪ್ರೀತಿಸಿಕೊಳ್ಳುವ ಪತಿ ಇಲ್ಲವೆ ಪತ್ನಿಯರು, ಯಾವಾಗಲೂ ತಾವು ಹೇಳಿದ್ದೇ ನಡೆಯಬೇಕೆಂದು ಹಟಹಿಡಿಯುತ್ತಾರೆ. ಅವರು ಹೊಂದಿಕೊಳ್ಳದವರೂ ಬಗ್ಗದವರೂ ಆಗಿರುತ್ತಾರೆ. ಇಂಥ ಮನೋಭಾವವು ಸುಖೀ ವಿವಾಹಕ್ಕೆ ನಡೆಸಬಲ್ಲದೊ? ಖಂಡಿತವಾಗಿಯೂ ಇಲ್ಲ. ವಿವಾಹಿತ ದಂಪತಿಗಳ ಸಮೇತ ಎಲ್ಲಾ ಕ್ರೈಸ್ತರಿಗೆ ಅಪೊಸ್ತಲ ಪೌಲನು ವಿವೇಕದಿಂದ ಹೀಗೆ ಬುದ್ಧಿವಾದಕೊಟ್ಟನು: “ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ. ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.”—ಫಿಲಿಪ್ಪಿ 2:3, 4.
6. ಹಣದಾಸೆಯು ಒಂದು ವೈವಾಹಿಕ ಸಂಬಂಧವನ್ನು ಹೇಗೆ ಶಿಥಿಲಗೊಳಿಸಬಲ್ಲದು?
6 ಹಣದಾಸೆಯು, ಪತಿಪತ್ನಿಯ ನಡುವೆ ಬಿರುಕನ್ನುಂಟುಮಾಡಬಲ್ಲದು. ಪೌಲನು ಎಚ್ಚರಿಸಿದ್ದು: “ಐಶ್ವರ್ಯವಂತರಾಗಬೇಕೆಂದು ಮನಸ್ಸು ಮಾಡುವವರು ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ. ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ಅದರಿಂದ ಕ್ರಿಸ್ತನಂಬಿಕೆಯನ್ನು ಬಿಟ್ಟು ಅಲೆದಾಡಿ ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.” (1 ತಿಮೊಥೆಯ 6:9, 10) ದುಃಖದ ಸಂಗತಿಯೇನೆಂದರೆ, ಪೌಲನು ಯಾವುದರ ಬಗ್ಗೆ ಎಚ್ಚರಿಸಿದ್ದನೊ ಅದು ಇಂದು ಅನೇಕ ವಿವಾಹಗಳಲ್ಲಿ ವಾಸ್ತವರೂಪವನ್ನು ತಾಳಿದೆ. ಐಶ್ವರ್ಯದ ಬೆನ್ನಟ್ಟುವಿಕೆಯಲ್ಲಿ ಮುಳುಗಿರುವ ಅನೇಕ ಪತಿಪತ್ನಿಯರು ತಮ್ಮ ಸಂಗಾತಿಗಳ ಅಗತ್ಯಗಳನ್ನು ಪೂರೈಸಲು ಅಲಕ್ಷಿಸುತ್ತಾರೆ. ಈ ಅಗತ್ಯಗಳಲ್ಲಿ, ಭಾವನಾತ್ಮಕ ಬೆಂಬಲ ಹಾಗೂ ಕ್ರಮವಾದ, ವಾತ್ಸಲ್ಯಭರಿತ ಸಾಹಚರ್ಯವೆಂಬ ಮೂಲಭೂತ ಅಗತ್ಯವು ಸಹ ಸೇರಿರುತ್ತದೆ.
7. ಕೆಲವೊಂದು ವಿದ್ಯಮಾನಗಳಲ್ಲಿ ಯಾವ ರೀತಿಯ ನಡವಳಿಕೆ ವೈವಾಹಿಕ ದ್ರೋಹಕ್ಕೆ ನಡೆಸಿದೆ?
7 ಈ ಕಡೇ ದಿವಸಗಳಲ್ಲಿ ಕೆಲವರು, ‘ಮಮತೆಯಿಲ್ಲದವರೂ ಸಮಾಧಾನವಾಗದವರೂ ದ್ರೋಹಿಗಳೂ’ ಆಗಿರುವರೆಂದು ಸಹ ಪೌಲನು ಹೇಳಿದನು. ವಿವಾಹದ ಪ್ರತಿಜ್ಞೆಯು, ದ್ರೋಹಕ್ಕಲ್ಲ ಬದಲಾಗಿ ಒಂದು ಸ್ಥಾಯೀ ಬಂಧಕ್ಕೆ ನಡೆಸಬೇಕಾದ ಗಂಭೀರ ಮಾತುಕೊಡುವಿಕೆಯಾಗಿದೆ. (ಮಲಾಕಿಯ 2:14-16) ಆದರೆ ಕೆಲವರು, ತಮ್ಮ ಪ್ರಣಯಾತ್ಮಕ ಗಮನವನ್ನು ತಮ್ಮ ವಿವಾಹ ಸಂಗಾತಿಗಳಾಗಿರದ ಇತರ ವ್ಯಕ್ತಿಗಳಿಗೆ ಕೊಡಲಾರಂಭಿಸಿದ್ದಾರೆ. 30ರಿಂದ 39 ವರ್ಷಗಳ ನಡುವಿನ ಪ್ರಾಯದ ಪತ್ನಿಯೊಬ್ಬಳು ವಿವರಿಸಿದ್ದೇನೆಂದರೆ ತನ್ನನ್ನು ಬಿಟ್ಟುಹೋಗಿರುವ ಗಂಡನು, ಬಿಟ್ಟುಹೋಗುವುದಕ್ಕೆ ಮುಂಚೆಯೂ ಇತರ ಸ್ತ್ರೀಯರೊಂದಿಗೆ ತೀರ ಸಲುಗೆಯಿಂದ ಮತ್ತು ವಿಪರೀತ ಒಲುಮೆಯಿಂದ ವರ್ತಿಸುತ್ತಿದ್ದನು. ವಿವಾಹಿತ ಪುರುಷನಾಗಿರುವ ತನಗೆ ಇಂಥ ನಡವಳಿಕೆಯು ಅನುಚಿತವೆಂಬುದನ್ನು ಗ್ರಹಿಸಲು ಅವನು ತಪ್ಪಿಹೋದನು. ಇದಾಗುವುದನ್ನು ನೋಡುತ್ತಿದ್ದಾಗ ಅವಳು ತುಂಬ ನೊಂದಳು, ಮತ್ತು ಅವನು ಹೋಗುತ್ತಿರುವ ಮಾರ್ಗವು ಅಪಾಯಕರವಾಗಿದೆಯೆಂದು ಅವನಿಗೆ ಜಾಣ್ಮೆಯಿಂದ ಎಚ್ಚರಿಸಲು ಪ್ರಯತ್ನಿಸಿದಳು. ಹಾಗಿದ್ದರೂ ಅವನು ವ್ಯಭಿಚಾರಮಾಡಿದನು. ದಯಾಪರವಾದ ಎಚ್ಚರಿಕೆಗಳು ಕೊಡಲ್ಪಟ್ಟರೂ, ತಪ್ಪುಮಾಡುತ್ತಿದ್ದ ಆ ಸಂಗಾತಿಯು ಗಮನಕೊಡಲು ಬಯಸಲಿಲ್ಲ. ಅವನು ದುಡುಕಿನಿಂದ ನೇರವಾಗಿ ಪಾಶದೊಳಗೆ ಬಿದ್ದುಬಿಟ್ಟನು.—ಜ್ಞಾನೋಕ್ತಿ 6:27-29.
8. ಯಾವುದು ವ್ಯಭಿಚಾರಕ್ಕೆ ನಡೆಸಬಲ್ಲದು?
8 ಬೈಬಲು ವ್ಯಭಿಚಾರದ ವಿರುದ್ಧ ಎಷ್ಟು ಸ್ಪಷ್ಟವಾಗಿ ಎಚ್ಚರಿಕೆಯನ್ನು ಕೊಡುತ್ತದೆ! “ವ್ಯಭಿಚಾರಿಯೋ ಕೇವಲ ಬುದ್ಧಿಶೂನ್ಯನು, ಇಂಥಾ ಕಾರ್ಯವನ್ನು ಮಾಡುವವನು ತನ್ನನ್ನೇ ನಾಶಪಡಿಸಿಕೊಳ್ಳುವನು.” (ಜ್ಞಾನೋಕ್ತಿ 6:32) ಸಾಮಾನ್ಯವಾಗಿ, ವ್ಯಭಿಚಾರವು ಅನೈಚ್ಛಿಕವಾಗಿ, ಅಕಸ್ಮಿಕವಾಗಿ ನಡೆಯುವ ಕೃತ್ಯವಾಗಿರುವುದಿಲ್ಲ. ಬೈಬಲ್ ಲೇಖಕನಾದ ಯಾಕೋಬನು ಹೇಳಿದಂತೆ ವ್ಯಭಿಚಾರದಂಥ ಪಾಪವು, ಆ ವಿಚಾರದ ಬಗ್ಗೆ ಯೋಚಿಸುತ್ತಾ ಅದಕ್ಕೆ ನೀರೆರೆದು ಪೋಷಿಸಿದ ನಂತರವೇ ನಡೆಯುತ್ತದೆ. (ಯಾಕೋಬ 1:14, 15) ತಪ್ಪುಮಾಡುತ್ತಿರುವ ಸಂಗಾತಿಯು, ತಾವು ಯಾರಿಗೆ ಜೀವನಪೂರ್ತಿ ನಿಷ್ಠರಾಗಿರುವರೆಂದು ಮಾತುಕೊಟ್ಟಿದ್ದಾರೊ ಆ ಸಂಗಾತಿಗೆ ನಿಷ್ಠರಾಗಿರುವುದನ್ನು ಕ್ರಮೇಣ ನಿಲ್ಲಿಸಿಬಿಡುತ್ತಾರೆ. ಯೇಸು ಹೇಳಿದ್ದು: “ವ್ಯಭಿಚಾರ ಮಾಡಬಾರದೆಂದು ಹೇಳಿಯದೆ ಎಂಬದಾಗಿ ನೀವು ಕೇಳಿದ್ದೀರಷ್ಟೆ. ಆದರೆ ನಾನು ನಿಮಗೆ ಹೇಳುವದೇನಂದರೆ—ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು.”—ಮತ್ತಾಯ 5:27, 28.
9. ಜ್ಞಾನೋಕ್ತಿ 5:18-20ರಲ್ಲಿ ಯಾವ ವಿವೇಕಯುತ ಸಲಹೆಯಿದೆ?
9 ಆದುದರಿಂದ ಜ್ಞಾನೋಕ್ತಿ ಪುಸ್ತಕದಲ್ಲಿ ಉತ್ತೇಜಿಸಲಾಗಿರುವ ಮಾರ್ಗವೇ ವಿವೇಕಯುತವಾದ ಹಾಗೂ ನಿಷ್ಠಾವಂತ ಮಾರ್ಗಕ್ರಮವಾಗಿದೆ: “ನಿನ್ನ ಬುಗ್ಗೆಯು [ದೇವರ] ಆಶೀರ್ವಾದವನ್ನು ಹೊಂದಲಿ, ನಿನ್ನ ಯೌವನಕಾಲದ ಪತ್ನಿಯಲ್ಲಿ ಆನಂದಿಸು. ಆಕೆ ಮನೋಹರವಾದ ಜಿಂಕೆಯಂತೆಯೂ ಅಂದವಾದ ದುಪ್ಪಿಯ ಹಾಗೂ ಇರುವಳಲ್ಲಾ; ಆಕೆಯ ಸ್ತನಗಳು ನಿನ್ನನ್ನು ಸರ್ವದಾ ತೃಪ್ತಿಪಡಿಸಲಿ, ಆಕೆಯ ಪ್ರೀತಿಯಲ್ಲೇ ನಿರಂತರ ಲೀನವಾಗಿರು. ಮಗನೇ, ಏಕೆ ಪರಸ್ತ್ರೀಯಲ್ಲಿ ಭ್ರಮೆಗೊಳ್ಳುವಿ, ಅನ್ಯಳ ಎದೆಯನ್ನು ತಬ್ಬಿಕೊಳ್ಳುವದೇಕೆ?”—ಜ್ಞಾನೋಕ್ತಿ 5:18-20.
ಮದುವೆಯಾಗಲು ಅವಸರಪಡಬೇಡಿ
10. ಭಾವೀ ಸಂಗಾತಿಯನ್ನು ತಿಳಿದುಕೊಳ್ಳಲು ಸಮಯ ತೆಗೆದುಕೊಳ್ಳುವುದು ಏಕೆ ವಿವೇಕಯುತ?
10 ಒಂದು ಜೋಡಿಯು ದುಡುಕಿ ವಿವಾಹದ ಸಂಬಂಧಕ್ಕೆ ಕಾಲಿಟ್ಟರೆ ಸಮಸ್ಯೆಗಳು ತಲೆದೋರಬಹುದು. ಅವರು ತೀರ ಎಳೆಯರೂ ಅನನುಭವಿಗಳೂ ಆಗಿರಬಹುದು. ಅಥವಾ ಬಹುಶಃ ಅವರು ಪರಸ್ಪರರ ಪರಿಚಯಮಾಡಿಕೊಳ್ಳಲು ಮತ್ತು ಅವರ ಇಷ್ಟಾನಿಷ್ಟಗಳು, ಜೀವನದಲ್ಲಿನ ತಮ್ಮ ಗುರಿಗಳು, ತಮ್ಮ ಕುಟುಂಬ ಹಿನ್ನೆಲೆಯನ್ನು ತಿಳಿದುಕೊಳ್ಳಲು ಸಮಯವನ್ನು ತೆಗೆದುಕೊಂಡಿರುವುದಿಲ್ಲ. ಆದುದರಿಂದ ತಾಳ್ಮೆತೋರಿಸುತ್ತಾ, ಭಾವೀ ಸಂಗಾತಿಯನ್ನು ತಿಳಿದುಕೊಳ್ಳಲು ಸಮಯ ತೆಗೆದುಕೊಳ್ಳುವುದು ವಿವೇಕಯುತ. ಇಸಾಕನ ಮಗನಾದ ಯಾಕೋಬನ ಕುರಿತಾಗಿ ಯೋಚಿಸಿರಿ. ಅವನು ರಾಹೇಲಳನ್ನು ಮದುವೆಯಾಗುವ ಮುನ್ನ, ಏಳು ವರ್ಷಗಳ ವರೆಗೆ ತನ್ನ ಭಾವೀ ಮಾವನಿಗಾಗಿ ದುಡಿಯಬೇಕಾಗಿತ್ತು. ಮತ್ತು ಅವನದನ್ನು ಮಾಡಲು ಸಿದ್ಧನಿದ್ದನು, ಏಕೆಂದರೆ ಅವನ ಭಾವನೆಗಳು ಬರೀ ಶಾರೀರಿಕ ಆಕರ್ಷಣೆಯ ಮೇಲಲ್ಲ ಬದಲಾಗಿ ನಿಜ ಪ್ರೀತಿಯ ಮೇಲಾಧಾರಿತವಾಗಿತ್ತು.—ಆದಿಕಾಂಡ 29:20-30.
11. (ಎ) ವಿವಾಹಬಂಧವು ಏನೇನನ್ನು ಒಟ್ಟುಗೂಡಿಸುತ್ತದೆ? (ಬಿ) ವಿವಾಹದಲ್ಲಿ ಮಾತುಗಳ ವಿವೇಕಯುತ ಬಳಕೆ ಏಕೆ ಅತ್ಯಾವಶ್ಯಕ?
11 ವಿವಾಹವು ಕೇವಲ ಒಂದು ಪ್ರಣಯಾತ್ಮಕ ಸಂಬಂಧವಲ್ಲ. ವಿವಾಹದ ಬಂಧವು ಎರಡು ಭಿನ್ನ ಕೌಟುಂಬಿಕ ಹಿನ್ನೆಲೆಗಳಿಂದ ಬಂದಿರುವ ಮತ್ತು ವ್ಯತ್ಯಾಸಭರಿತ ವ್ಯಕ್ತಿತ್ವಗಳು, ಭಾವನಾತ್ಮಕ ರಚನೆ ಮತ್ತು ಅನೇಕವೇಳೆ ವಿಭಿನ್ನ ಶೈಕ್ಷಣಿಕ ಹಿನ್ನೆಲೆಗಳ ಇಬ್ಬರು ವ್ಯಕ್ತಿಗಳನ್ನು ಒಟ್ಟಿಗೆ ಸೇರಿಸುತ್ತದೆ. ಕೆಲವೊಮ್ಮೆ ಅದು ಎರಡು ಸಂಸ್ಕೃತಿಗಳ, ಎರಡು ಭಾಷೆಗಳ ಸಂಗಮವೂ ಆಗಿರಬಹುದು. ಏನೂ ಅಲ್ಲದಿದ್ದರೂ ಕಡಿಮೆಪಕ್ಷ ಅದು, ಎಲ್ಲಾ ರೀತಿಯ ವಿಷಯಗಳ ಕುರಿತು ಪರಸ್ಪರ ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯವುಳ್ಳ ವ್ಯಕ್ತಿಗಳ ಮಿಲನವಾಗಿರುತ್ತದೆ. ಈ ಭಿನ್ನ ಅಭಿಪ್ರಾಯಗಳು, ಒಂದು ವಿವಾಹಬಂಧದ ತುಂಬ ನೈಜ ಭಾಗವಾಗಿವೆ. ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ವ್ಯಕ್ತಿಗಳು ಯಾವಾಗಲೂ ಟೀಕಾತ್ಮರು ಮತ್ತು ದೂರುವವರು ಆಗಿರಬಲ್ಲರು, ಇಲ್ಲವೆ ಅವರು ಪ್ರೀತಿಭರಿತ ರೀತಿಯಲ್ಲಿ ಉತ್ತೇಜಿಸುವಂಥವರೂ ಆತ್ಮೋನ್ನತಿಮಾಡುವವರೂ ಆಗಿರಬಲ್ಲರು. ಹೌದು, ನಮ್ಮ ಮಾತುಗಳಿಂದ ನಾವು ನಮ್ಮ ಸಂಗಾತಿಯನ್ನು ಒಂದೊ ಘಾಸಿಗೊಳಿಸಬಲ್ಲೆವು ಇಲ್ಲವೆ ವಾಸಿಮಾಡಬಲ್ಲೆವು. ಲಂಗುಲಗಾಮಿಲ್ಲದ ಮಾತುಗಳು ವಿವಾಹದ ಮೇಲೆ ಮಹತ್ತರವಾದ ಒತ್ತಡವನ್ನು ಹಾಕಬಲ್ಲವು.—ಜ್ಞಾನೋಕ್ತಿ 12:18; 15:1, 2; 16:24; 21:9; 31:26.
12, 13. ವಿವಾಹದ ಕುರಿತಾದ ಯಾವ ವಾಸ್ತವಿಕ ನೋಟವನ್ನು ಉತ್ತೇಜಿಸಲಾಗಿದೆ?
12 ಆದುದರಿಂದಲೇ, ಒಬ್ಬ ಭಾವೀ ಸಂಗಾತಿಯನ್ನು ನಿಜವಾಗಿಯೂ ತಿಳಿದುಕೊಳ್ಳಲು ಸಮಯ ತೆಗೆದುಕೊಳ್ಳುವುದು ವಿವೇಕಯುತ. ಒಬ್ಬ ಅನುಭವೀ ಕ್ರೈಸ್ತ ಸಹೋದರಿಯು ಒಮ್ಮೆ ಹೀಗಂದಳು: “ನೀವೊಬ್ಬ ವ್ಯಕ್ತಿಯನ್ನು ನಿಮ್ಮ ಭಾವೀ ವಿವಾಹ ಸಂಗಾತಿಯಾಗಿ ವೀಕ್ಷಿಸುವಾಗ, ಆ ವ್ಯಕ್ತಿಯಲ್ಲಿ ನೀವು ನೋಡಲಪೇಕ್ಷಿಸುವ ಬಹುಶಃ ಹತ್ತು ಮೂಲಭೂತ ಆವಶ್ಯಕತೆಗಳ ಕುರಿತಾಗಿ ಯೋಚಿಸಿರಿ. ಇವುಗಳಲ್ಲಿ ಕೇವಲ ಏಳನ್ನು ನೀವು ಆ ವ್ಯಕ್ತಿಯಲ್ಲಿ ನೋಡಸಾಧ್ಯವಿರುವಲ್ಲಿ, ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ಅವಳಲ್ಲಿ/ಅವನಲ್ಲಿ ಇಲ್ಲದಿರುವ ಆ ಮೂರು ಆವಶ್ಯಕತೆಗಳನ್ನು ನಾನು ಅಲಕ್ಷಿಸಲು ಸಿದ್ಧನಿದ್ದೇನೊ? ಆ ಕುಂದುಗಳನ್ನು ನಾನು ಪ್ರತಿನಿತ್ಯ ಸಹಿಸಲು ಶಕ್ತನಾಗಿರುವೆನೊ/ಶಕ್ತಳಾಗಿರುವೆನೊ?’ ಇದರ ಕುರಿತು ನಿಮಗೆ ಸಂದೇಹಗಳಿರುವಲ್ಲಿ, ತುಸು ನಿಂತು ಪುನಃ ಯೋಚಿಸಿರಿ.” ಆದರೆ ಇದರಲ್ಲಿ ನೀವು ವಾಸ್ತವಿಕ ನೋಟವುಳ್ಳವರಾಗಿರಬೇಕು ನಿಜ. ನೀವು ಮದುವೆಯಾಗಲು ಬಯಸುವಲ್ಲಿ, ನಿಮಗೆ ಒಬ್ಬ ಪರಿಪೂರ್ಣ ಸಂಗಾತಿ ಎಂದೂ ಸಿಗಲಿಕ್ಕಿಲ್ಲವೆಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ಅದೇ ಸಮಯದಲ್ಲಿ ನಿಮ್ಮ ವಿವಾಹ ಸಂಗಾತಿಗೆ ನೀವು ಪರಿಪೂರ್ಣ ಸಂಗಾತಿಯಾಗಿರದಿರುವಿರಿ!—ಲೂಕ 6:41.
13 ವಿವಾಹದಲ್ಲಿ ತ್ಯಾಗಗಳು ಒಳಗೂಡಿರುತ್ತವೆ. ಇದನ್ನು ಪೌಲನು ತನ್ನ ಈ ಮಾತುಗಳಲ್ಲಿ ಎತ್ತಿತೋರಿಸಿದನು: “ನೀವು ಚಿಂತೆಯಿಲ್ಲದವರಾಗಿರಬೇಕೆಂಬದು ನನ್ನ ಇಷ್ಟ. ಮದುವೆಯಿಲ್ಲದವನು ತಾನು ಕರ್ತನನ್ನು ಹೇಗೆ ಮೆಚ್ಚಿಸಬೇಕೆಂದು ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ. ಮದುವೆಯಾದವನು ತನ್ನ ಹೆಂಡತಿಯನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಚಿಂತಿಸುತ್ತಾನೆ. ಅದರಂತೆ ಮುತ್ತೈದೆಗೂ ಕನ್ನಿಕೆಗೂ ವ್ಯತ್ಯಾಸವುಂಟು. ಮದುವೆಯಿಲ್ಲದವಳು ತಾನು ದೇಹಾತ್ಮಗಳಲ್ಲಿ ಪವಿತ್ರಳಾಗಿರಬೇಕೆಂದು ಕರ್ತನ ಕಾರ್ಯಗಳನ್ನು ಕುರಿತು ಚಿಂತಿಸುತ್ತಾಳೆ. ಆದರೆ ಮದುವೆಯಾದವಳು ತನ್ನ ಗಂಡನನ್ನು ಹೇಗೆ ಮೆಚ್ಚಿಸಬೇಕೆಂದು ಪ್ರಪಂಚದ ಕಾರ್ಯಗಳನ್ನು ಕುರಿತು ಚಿಂತಿಸುತ್ತಾಳೆ.”—1 ಕೊರಿಂಥ 7:32-35.
ಕೆಲವು ವಿವಾಹಗಳು ವಿಫಲಗೊಳ್ಳಲು ಕಾರಣ
14, 15. ವಿವಾಹಬಂಧದ ದುರ್ಬಲಗೊಳ್ಳುವಿಕೆಗೆ ಏನು ಕಾರಣವಾಗಿರಬಲ್ಲದು?
14 ಇತ್ತೀಚೆಗೆ ಒಬ್ಬ ಕ್ರೈಸ್ತ ಮಹಿಳೆಯು, ಹನ್ನೆರಡು ವರ್ಷಗಳ ವೈವಾಹಿಕಜೀವನದ ಅನಂತರ ತನ್ನ ಗಂಡನು ಪರಸ್ತ್ರೀಯೊಂದಿಗೆ ಸಂಬಂಧವನ್ನು ಆರಂಭಿಸಿದ್ದರಿಂದ ಫಲಿಸಿದ ವಿಚ್ಛೇದದ ನೋವನ್ನು ಅನುಭವಿಸಿದಳು. ಇದೆಲ್ಲ ಆಗುವ ಮುಂಚೆ ಅವಳು ಯಾವುದಾದರೂ ಎಚ್ಚರಿಕೆಯ ಸೂಚನೆಗಳನ್ನು ಗಮನಿಸಿದ್ದಳೊ? ಅವಳು ವಿವರಿಸಿದ್ದು: “ಅವರು ಪ್ರಾರ್ಥನೆಮಾಡುವುದನ್ನೇ ನಿಲ್ಲಿಸಿಬಿಡುವ ಹಂತವನ್ನು ತಲಪಿದರು. ಕ್ರೈಸ್ತ ಕೂಟಗಳಿಗೆ ಮತ್ತು ಸಾರುವ ಕೆಲಸಕ್ಕೆ ಬಾರದಿರಲು ಅವರು ಕ್ಷುಲ್ಲಕವಾದ ನೆಪಗಳನ್ನು ಕೊಡುತ್ತಿದ್ದರು. ತನಗೆ ತುಂಬ ಕೆಲಸವಿದೆ ಅಥವಾ ತನಗೆ ತುಂಬ ಆಯಾಸವಾಗಿರುವುದರಿಂದ ನನ್ನೊಂದಿಗೆ ಸಮಯ ಕಳೆಯಲು ಸಾಧ್ಯವಿಲ್ಲವೆಂದು ಹೇಳಿಕೊಳ್ಳುತ್ತಿದ್ದರು. ಅವರು ನನ್ನೊಂದಿಗೆ ಮಾತಾಡುತ್ತಿರಲಿಲ್ಲ. ಅವರು ನನ್ನೊಂದಿಗೆ ಆಧ್ಯಾತ್ಮಿಕ ವಿಷಯಗಳನ್ನು ಚರ್ಚಿಸುವುದನ್ನು ನಿಲ್ಲಿಸಿದರು. ಇದೇ ತುಂಬ ದುಃಖದ ಸಂಗತಿಯಾಗಿತ್ತು. ನಾನು ಅವರನ್ನು ಮದುವೆಯಾದಾಗ ಅವರು ಹೀಗಿರಲಿಲ್ಲ.”
15 ಇದೇ ರೀತಿಯ ಎಚ್ಚರಿಕೆಯ ಸೂಚನೆಗಳೊಂದಿಗೆ ವೈಯಕ್ತಿಕ ಬೈಬಲ್ ಅಧ್ಯಯನ, ಪ್ರಾರ್ಥನೆ ಅಥವಾ ಕ್ರೈಸ್ತ ಕೂಟಗಳಲ್ಲಿನ ಹಾಜರಿಯ ಅಲಕ್ಷ್ಯವು ತೋರಿಬರುವುದನ್ನು ಇತರರೂ ವರದಿಸುತ್ತಾರೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಕಟ್ಟಕಡೆಗೆ ತಮ್ಮ ಸಂಗಾತಿಗಳನ್ನು ಬಿಟ್ಟುಹೋದ ವ್ಯಕ್ತಿಗಳು, ಯೆಹೋವನೊಂದಿಗಿನ ತಮ್ಮ ಸಂಬಂಧವು ದುರ್ಬಲವಾಗುವಂತೆ ಬಿಟ್ಟವರಾಗಿದ್ದರು. ಇದರ ಫಲಿತಾಂಶವಾಗಿ, ಅವರ ಆಧ್ಯಾತ್ಮಿಕ ದೃಷ್ಟಿಯು ಮಬ್ಬಾಯಿತು. ಯೆಹೋವನು ಇನ್ನುಮುಂದೆ ಅವರಿಗೆ ಒಬ್ಬ ಜೀವಂತ ದೇವರಾಗಿರಲಿಲ್ಲ. ನೀತಿಯ ವಾಗ್ದತ್ತ ಹೊಸ ಲೋಕವು ಅವರಿಗೆ ಈಗ ಒಂದು ನೈಜತೆಯಾಗಿ ತೋರುತ್ತಿರಲಿಲ್ಲ. ಕೆಲವೊಂದು ಸಂದರ್ಭಗಳಲ್ಲಿ ಈ ಆಧ್ಯಾತ್ಮಿಕ ದುರ್ಬಲಗೊಳ್ಳುವಿಕೆಯು, ಅಪನಂಬಿಗಸ್ತ ಸಂಗಾತಿಯು ವಿವಾಹದ ಹೊರಗೆ ಸಂಬಂಧವನ್ನು ರಚಿಸುವ ಮುಂಚೆಯೇ ನಡೆದಿತ್ತು.—ಇಬ್ರಿಯ 10:38, 39; 11:6; 2 ಪೇತ್ರ 3:13, 14.
16. ವಿವಾಹವನ್ನು ಯಾವುದು ಬಲಪಡಿಸುತ್ತದೆ?
16 ಇದಕ್ಕೆ ವ್ಯತಿರಿಕ್ತವಾಗಿ, ತುಂಬ ಸಂತೋಷದಿಂದಿರುವ ಒಂದು ದಂಪತಿಯು ತಮ್ಮ ವಿವಾಹವು ಯಶಸ್ವಿಯಾಗಲು ತಮ್ಮ ಬಲವಾದ ಆಧ್ಯಾತ್ಮಿಕ ಬಂಧಗಳೇ ಕಾರಣವೆಂದು ಹೇಳುತ್ತಾರೆ. ಅವರು ಜೊತೆಯಾಗಿ ಪ್ರಾರ್ಥಿಸುತ್ತಾರೆ ಮತ್ತು ಅಧ್ಯಯನಮಾಡುತ್ತಾರೆ. ಗಂಡನು ಹೇಳುವುದು: “ನಾವು ಬೈಬಲನ್ನು ಜೊತೆಯಾಗಿ ಓದುತ್ತೇವೆ. ಶುಶ್ರೂಷೆಯಲ್ಲಿ ಜೊತೆಯಾಗಿ ಕೆಲಸಮಾಡುತ್ತೇವೆ. ಯಾವುದೇ ಕೆಲಸವನ್ನು ಜೊತೆಯಾಗಿ ಮಾಡುವುದರಲ್ಲಿ ಆನಂದಿಸುತ್ತೇವೆ.” ಇದರಿಂದ ಕಲಿಯಬಹುದಾದ ಪಾಠವು ಸ್ಪಷ್ಟ: ಯೆಹೋವನೊಂದಿಗೆ ಒಳ್ಳೇ ಸಂಬಂಧವನ್ನು ಕಾಪಾಡಿಕೊಳ್ಳುವುದು ವಿವಾಹದ ಸ್ಥಿರತೆಯನ್ನು ಬಹಳಷ್ಟು ಹೆಚ್ಚಿಸುವುದು.
ವಾಸ್ತವವಾದಿಗಳಾಗಿರಿ ಮತ್ತು ಸಂವಾದಮಾಡಿ
17. (ಎ) ಯಾವ ಎರಡು ವಿಷಯಗಳು ಯಶಸ್ವೀ ವಿವಾಹಕ್ಕೆ ನೆರವು ನೀಡುತ್ತವೆ? (ಬಿ) ಪೌಲನು ಕ್ರೈಸ್ತ ಪ್ರೀತಿಯನ್ನು ಹೇಗೆ ವರ್ಣಿಸುತ್ತಾನೆ?
17 ಒಂದು ಯಶಸ್ವೀ ವಿವಾಹಕ್ಕೆ ನೆರವು ನೀಡುವ ಇನ್ನೂ ಎರಡು ವಿಷಯಗಳಿವೆ: ಕ್ರೈಸ್ತ ಪ್ರೀತಿ ಮತ್ತು ಸಂವಾದ. ಇಬ್ಬರು ವ್ಯಕ್ತಿಗಳು ಪರಸ್ಪರರಲ್ಲಿ ಅನುರಕ್ತರಾಗಿರುವಾಗ ಪರಸ್ಪರರ ಲೋಪದೋಷಗಳು ಕಣ್ಣಿಗೆಬೀಳುವುದಿಲ್ಲ. ಈ ಜೋಡಿಯು, ಬಹುಶಃ ಪ್ರಣಯದ ಕಾದಂಬರಿಗಳು ಇಲ್ಲವೆ ಚಲನಚಿತ್ರಗಳಲ್ಲಿ ತಾವು ನೋಡಿರುವಂಥ ವಿಷಯಗಳ ಮೇಲಾಧಾರಿತವಾದ ವಿಪರೀತವಾಗಿ ಉಚ್ಚವಾದ ನಿರೀಕ್ಷಣೆಗಳೊಂದಿಗೆ ವಿವಾಹಜೀವನಕ್ಕೆ ಕಾಲಿರಿಸಬಹುದು. ಆದರೆ ಕಟ್ಟಕಡೆಗೆ ಆ ದಂಪತಿಯು ವಾಸ್ತವಿಕತೆಯನ್ನು ಎದುರಿಸಲೇಬೇಕಾಗುತ್ತದೆ. ಆಗ, ಚಿಕ್ಕಪುಟ್ಟ ತಪ್ಪುಗಳು ಅಥವಾ ಸ್ವಲ್ಪ ಕಿರಿಕಿರಿಗೊಳಿಸುವ ರೂಢಿಗಳು ದೊಡ್ಡ ಸಮಸ್ಯೆಗಳಾಗಿ ಪರಿಣಮಿಸಬಲ್ಲವು. ಹಾಗಾಗುವಲ್ಲಿ ಕ್ರೈಸ್ತರು ಆತ್ಮದ ಫಲವನ್ನು ತೋರಿಸುವ ಅಗತ್ಯವಿದೆ, ಮತ್ತು ಇದರಲ್ಲಿ ಒಂದು ಪ್ರೀತಿ ಆಗಿದೆ. (ಗಲಾತ್ಯ 5:22, 23) ಹೌದು, ಪ್ರೀತಿ ತುಂಬ ಶಕ್ತಿಶಾಲಿಯಾಗಿದೆ. ಆದರೆ ಇದು ಪ್ರಣಯಾತ್ಮಕ ಪ್ರೀತಿಯಲ್ಲ ಬದಲಾಗಿ ಕ್ರೈಸ್ತ ಪ್ರೀತಿಯಾಗಿದೆ. ಪೌಲನು ಇಂಥ ಕ್ರೈಸ್ತ ಪ್ರೀತಿಯನ್ನು ವರ್ಣಿಸುತ್ತಾ ಹೀಗಂದನು: ‘ಪ್ರೀತಿ ಬಹು ತಾಳ್ಮೆಯುಳ್ಳದ್ದು, ದಯೆ ತೋರಿಸುವದು. ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ, ಸಿಟ್ಟುಗೊಳ್ಳುವದಿಲ್ಲ, ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವದಿಲ್ಲ; ಎಲ್ಲವನ್ನೂ ಅಡಗಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ಸಹಿಸಿಕೊಳ್ಳುತ್ತದೆ.’ (1 ಕೊರಿಂಥ 13:4-7) ಸ್ಪಷ್ಟವಾಗಿಯೇ, ನಿಜವಾದ ಪ್ರೀತಿಯು ಮಾನವ ಕುಂದುಕೊರತೆಗಳ ಪರಿಣಾಮಗಳನ್ನು ಸೈರಿಸಿಕೊಳ್ಳುತ್ತದೆ. ವಾಸ್ತವಿಕ ದೃಷ್ಟಿಯಿಂದ ಅದು ಪರಿಪೂರ್ಣತೆಯನ್ನು ನಿರೀಕ್ಷಿಸುವುದಿಲ್ಲ.—ಜ್ಞಾನೋಕ್ತಿ 10:12.
18. ಸಂವಾದವು ಒಂದು ಸಂಬಂಧವನ್ನು ಹೇಗೆ ಬಲಪಡಿಸಬಲ್ಲದು?
18 ಸಂವಾದವೂ ಅತ್ಯಾವಶ್ಯಕ. ಮದುವೆಯಾಗಿ ಎಷ್ಟೇ ವರ್ಷಗಳು ದಾಟಿರಲಿ, ಪತಿಪತ್ನಿಯರು ಪರಸ್ಪರರೊಂದಿಗೆ ಮಾತಾಡಬೇಕು ಮತ್ತು ಒಬ್ಬರು ಮಾತಾಡುವಾಗ ಇನ್ನೊಬ್ಬರು ನಿಜವಾಗಿಯೂ ಕಿವಿಗೊಡಬೇಕು. ಒಬ್ಬ ಪತಿ ಹೇಳಿದ್ದು: “ನಾವು ನಮ್ಮ ಭಾವನೆಗಳನ್ನು ಮುಚ್ಚುಮರೆಯಿಲ್ಲದೆ ವ್ಯಕ್ತಪಡಿಸುತ್ತೇವೆ. ಆದರೆ ಅದನ್ನು ಸ್ನೇಹಪರ ವಿಧದಲ್ಲಿ ಮಾಡುತ್ತೇವೆ.” ಅನುಭವ ಹೆಚ್ಚುತ್ತಾ ಹೋದಂತೆ ಒಬ್ಬ ಗಂಡ ಇಲ್ಲವೆ ಹೆಂಡತಿಯು, ಏನನ್ನು ಮಾತುಗಳಲ್ಲಿ ಹೇಳಲಾಗುತ್ತದೊ ಅದನ್ನು ಮಾತ್ರವಲ್ಲದೆ ಏನನ್ನು ಹೇಳಲಾಗುವುದಿಲ್ಲವೊ ಅದಕ್ಕೂ ಕಿವಿಗೊಡಲು ಕಲಿಯುತ್ತಾರೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ವರ್ಷಗಳು ಉರುಳಿದಂತೆ ಸಂತೋಷಭರಿತ ವಿವಾಹಿತ ಜೋಡಿಯು, ಮಾತುಗಳಲ್ಲಿ ಹೇಳಲ್ಪಟ್ಟಿರದಂಥ ವಿಚಾರಗಳು ಇಲ್ಲವೆ ವ್ಯಕ್ತಪಡಿಸಲಾಗಿರದ ಭಾವನೆಗಳನ್ನು ವಿವೇಚಿಸಿ ತಿಳಿಯಲು ಕಲಿಯುತ್ತದೆ. ಕೆಲವು ಹೆಂಡತಿಯರು, ತಮ್ಮ ಗಂಡಂದಿರು ತಮಗೆ ನಿಜವಾಗಿ ಕಿವಿಗೊಡುವುದಿಲ್ಲ ಎಂದು ಹೇಳಿದ್ದಾರೆ. ಮತ್ತು ಕೆಲವು ಗಂಡಂದಿರು ತಮ್ಮ ಹೆಂಡತಿಯರು, ಅತಿ ಅನನುಕೂಲವಾಗಿರುವ ಸಮಯದಲ್ಲೇ ಮಾತಾಡಲಪೇಕ್ಷಿಸುತ್ತಾರೆಂದು ದೂರಿದ್ದಾರೆ. ಸಂವಾದದಲ್ಲಿ ಕರುಣೆ ಮತ್ತು ತಿಳಿವಳಿಕೆಯೂ ಒಳಗೂಡಿದೆ. ಪರಿಣಾಮಕಾರಿಯಾದ ಸಂವಾದವು ಗಂಡನಿಗೂ ಹೆಂಡತಿಗೂ ಉಪಯುಕ್ತ.—ಯಾಕೋಬ 1:19.
19. (ಎ) ಕ್ಷಮೆಕೇಳುವುದು ಏಕೆ ಕಷ್ಟಕರವಾಗಿರಬಲ್ಲದು? (ಬಿ) ಕ್ಷಮೆಯಾಚಿಸುವಂತೆ ನಮ್ಮನ್ನು ಯಾವುದು ಪ್ರಚೋದಿಸುವುದು?
19 ಕೆಲವೊಮ್ಮೆ ಸಂವಾದದಲ್ಲಿ ಕ್ಷಮೆಕೇಳುವುದೂ ಸೇರಿರುತ್ತದೆ. ಇದನ್ನು ಮಾಡುವುದು ಯಾವಾಗಲೂ ಸುಲಭವಲ್ಲ. ತಪ್ಪುಗಳನ್ನು ಒಪ್ಪಿಕೊಳ್ಳಲು ನಮ್ರತೆ ಬೇಕು. ಆದರೆ ಇದರಿಂದ ವಿವಾಹವು ಎಷ್ಟು ಬಲಗೊಳ್ಳುವುದು! ಮನಃಪೂರ್ವಕವಾದ ಕ್ಷಮೆಯಾಚನೆಯು, ಮುಂದೆ ಜಗಳಕ್ಕೆ ಆಸ್ಪದವಾಗುವ ಕಾರಣವನ್ನು ತೆಗೆದುಹಾಕುತ್ತದೆ, ಮತ್ತು ನಿಜವಾದ ಕ್ಷಮಾಪಣೆ ಹಾಗೂ ಸಮಸ್ಯೆಯ ಪರಿಹಾರಕ್ಕೆ ಮಾರ್ಗವನ್ನು ತೆರೆಯುತ್ತದೆ. ಪೌಲನು ತಿಳಿಸಿದ್ದು: “ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ. ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.”—ಕೊಲೊಸ್ಸೆ 3:13, 14.
20. ಒಬ್ಬ ಕ್ರೈಸ್ತನು ಖಾಸಗಿಯಾಗಿ ಮತ್ತು ಇತರರ ಸಮ್ಮುಖದಲ್ಲಿ ತನ್ನ ವಿವಾಹ ಸಂಗಾತಿಯನ್ನು ಹೇಗೆ ಉಪಚರಿಸಬೇಕು?
20 ವಿವಾಹದಲ್ಲಿ ಪರಸ್ಪರ ಬೆಂಬಲವೂ ಅತ್ಯಾವಶ್ಯಕ. ಕ್ರೈಸ್ತ ಪತಿಪತ್ನಿಯರು, ಒಬ್ಬರಿನ್ನೊಬ್ಬರ ಮೇಲೆ ಭರವಸೆಯಿಡಲು, ಒಬ್ಬರನ್ನೊಬ್ಬರು ಹೊಂದಿಕೊಳ್ಳಲು ಶಕ್ತರಾಗಿರಬೇಕು. ಪತಿಪತ್ನಿ ಪರಸ್ಪರರನ್ನು ಶಿಥಿಲಗೊಳಿಸಬಾರದು ಇಲ್ಲವೆ ಪರಸ್ಪರರ ಆತ್ಮವಿಶ್ವಾಸವನ್ನು ಬೇರೆ ವಿಧಗಳಲ್ಲಿ ಕುಂದಿಸಬಾರದು. ನಾವು ನಮ್ಮ ವಿವಾಹ ಸಂಗಾತಿಗಳನ್ನು ಪ್ರೀತಿಯಿಂದ ಪ್ರಶಂಸಿಸುವವರಾಗಿರಲು ಬಯಸುತ್ತೇವೆ; ಕಠೋರವಾಗಿ ಟೀಕಿಸುವವರಲ್ಲ. (ಜ್ಞಾನೋಕ್ತಿ 31:29) ಅವರ ಬಗ್ಗೆ ಅವಿವೇಕದ, ವಿಚಾರಹೀನ ಜೋಕುಗಳನ್ನು ಮಾಡುವ ಮೂಲಕ ನಾವು ಅವರನ್ನು ನಿಶ್ಚಯವಾಗಿಯೂ ತುಚ್ಛೀಕರಿಸುವುದಿಲ್ಲ. (ಕೊಲೊಸ್ಸೆ 4:6) ಇಂಥ ಪರಸ್ಪರ ಬೆಂಬಲವು, ಕ್ರಮವಾಗಿ ಪ್ರೇಮದ ವ್ಯಕ್ತಪಡಿಸುವಿಕೆಗಳ ಮೂಲಕ ಬಲಗೊಳ್ಳುತ್ತದೆ. ಒಂದು ಸ್ಪರ್ಶ ಇಲ್ಲವೆ ಶಾಂತವಾದ ದನಿಯಲ್ಲಿ ಪ್ರೀತಿಯ ಮಾತು, “ನಾನು ಈಗಲೂ ನಿನ್ನನ್ನು ಪ್ರೀತಿಸುತ್ತೇನೆ. ನೀನು ನನ್ನೊಂದಿಗಿರುವುದು ನನಗೆ ತುಂಬ ಸಂತೋಷ” ಎಂಬುದನ್ನು ಹೇಳಬಲ್ಲದು. ಇವೆಲ್ಲವೂ, ಇಂದಿನ ಜಗತ್ತಿನಲ್ಲೂ ಒಂದು ಸಂಬಂಧದ ಮೇಲೆ ಪ್ರಭಾವಬೀರುವ ಮತ್ತು ವಿವಾಹವು ಯಶಸ್ವಿಯಾಗುವಂತೆ ಸಹಾಯಮಾಡಬಲ್ಲ ಕೆಲವು ಅಂಶಗಳಾಗಿವೆ. ಇನ್ನೂ ಕೆಲವೊಂದು ಅಂಶಗಳಿವೆ, ಮತ್ತು ಮುಂದಿನ ಲೇಖನವು ವಿವಾಹವನ್ನು ಯಶಸ್ವಿಗೊಳಿಸುವುದು ಹೇಗೆಂಬುದಕ್ಕೆ ಹೆಚ್ಚಿನ ಶಾಸ್ತ್ರೀಯ ನಿರ್ದೇಶನಗಳನ್ನು ಕೊಡುವುದು.a
[ಪಾದಟಿಪ್ಪಣಿ]
a ಸವಿಸ್ತಾರವಾದ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟ ಕುಟುಂಬ ಸಂತೋಷದ ರಹಸ್ಯ ಎಂಬ ಪ್ರಕಾಶನವನ್ನು ನೋಡಿ.
ನೀವು ವಿವರಿಸಬಲ್ಲಿರಾ?
• ಒಂದು ವಿವಾಹವನ್ನು ಶಿಥಿಲಗೊಳಿಸಬಲ್ಲ ಕೆಲವೊಂದು ಅಂಶಗಳು ಯಾವುವು?
• ಮದುವೆಯಾಗಲು ಅವಸರಪಡುವುದು ಏಕೆ ವಿವೇಕಯುತವಲ್ಲ?
• ಆಧ್ಯಾತ್ಮಿಕತೆಯು ಹೇಗೆ ವಿವಾಹದ ಮೇಲೆ ಪ್ರಭಾವಬೀರುತ್ತದೆ?
• ಯಾವ ಅಂಶಗಳು ವಿವಾಹವನ್ನು ಸ್ಥಿರಪಡಿಸಲು ಸಹಾಯಮಾಡುತ್ತವೆ?
[ಪುಟ 12ರಲ್ಲಿರುವ ಚಿತ್ರ]
ವಿವಾಹವು ಕೇವಲ ಒಂದು ಪ್ರಣಯಾತ್ಮಕ ಸಂಬಂಧವಲ್ಲ
[ಪುಟ 14ರಲ್ಲಿರುವ ಚಿತ್ರಗಳು]
ಯೆಹೋವನೊಂದಿಗಿನ ಬಲವಾದ ಸಂಬಂಧವು ಒಂದು ದಂಪತಿಗೆ ತಮ್ಮ ವಿವಾಹವನ್ನು ಯಶಸ್ವಿಗೊಳಿಸಲು ಸಹಾಯಮಾಡುತ್ತದೆ