ನೀವು ದೇವರ ಮಹಿಮೆಯನ್ನು ಪ್ರತಿಬಿಂಬಿಸುತ್ತಾ ಇರುವಿರೊ?
“ನಾವೆಲ್ಲರೂ . . . [ಯೆಹೋವನ] ಮಹಿಮೆಯನ್ನು ಪ್ರತಿಬಿಂಬಿಸುವ ಕನ್ನಡಿಯಂತಿದ್ದೇವೆ.” —2 ಕೊರಿಂಥ 3:18, ಪರಿಶುದ್ಧ ಬೈಬಲ್.a
1. ಮೋಶೆಯು ಏನನ್ನು ನೋಡಿದನು, ಮತ್ತು ತದನಂತರ ಏನಾಯಿತು?
ಯಾವ ಮನುಷ್ಯನೂ ನೋಡಿರದಷ್ಟು ವಿಸ್ಮಯಭರಿತ ದರ್ಶನವು ಅದಾಗಿತ್ತು. ಸೀನಾಯಿಬೆಟ್ಟದ ಎತ್ತರ ಪ್ರದೇಶದಲ್ಲಿ ಒಬ್ಬಂಟಿಗನಾಗಿದ್ದ ಮೋಶೆಯು ಮಾಡಿದಂಥ ಒಂದು ಅಸಾಮಾನ್ಯ ಬೇಡಿಕೆಯು ಈಡೇರಿಸಲ್ಪಟ್ಟಿತ್ತು. ಬೇರಾವ ಮಾನವನೂ ಕಂಡಿರದಿದ್ದ ಯೆಹೋವನ ಮಹಿಮೆಯನ್ನು ನೋಡಲು ಅವನಿಗೆ ಅವಕಾಶಕೊಡಲಾಗಿತ್ತು. ಮೋಶೆ ನೇರವಾಗಿ ಯೆಹೋವನನ್ನು ನೋಡಲಿಲ್ಲವೆಂಬುದು ನಿಶ್ಚಯ. ದೇವರ ತೋರಿಕೆಯು ಎಷ್ಟು ಭವ್ಯವಾದದ್ದಾಗಿದೆಯೆಂದರೆ ಯಾವ ಮನುಷ್ಯನೂ ಆತನನ್ನು ನೋಡಿ ಜೀವದಿಂದಿರಲಾರನು. ಆದುದರಿಂದ, ಯೆಹೋವನು ದಾಟಿಹೋಗುವವರೆಗೂ ಮೋಶೆಯ ಮೇಲೆ ಒಂದು ಸಂರಕ್ಷಣಾತ್ಮಕ ಪರದೆಯಾಗಿ ತನ್ನ ‘ಕೈಯನ್ನು’ ಇಟ್ಟನು ಅಂದರೆ ಆತನೊಬ್ಬ ದೇವದೂತ ಪ್ರತಿನಿಧಿಯನ್ನು ಉಪಯೋಗಿಸಿದನೆಂಬುದು ವ್ಯಕ್ತವಾಗುತ್ತದೆ. ಅನಂತರ ಯೆಹೋವನು ಮೋಶೆಗೆ ಮಹಿಮೆಯ ಈ ಹಿಂಬೆಳಕನ್ನು ನೋಡುವಂತೆ ಅನುಮತಿಸಿದನು ಮತ್ತು ಒಬ್ಬ ದೇವದೂತನ ಮುಖಾಂತರ ಮೋಶೆಯೊಂದಿಗೆ ಮಾತಾಡಿದನು ಸಹ. ತದನಂತರ ಏನು ನಡೆಯಿತೆಂದು ಬೈಬಲ್ ಹೀಗೆ ವರ್ಣಿಸುತ್ತದೆ: “ಮೋಶೆ . . . ಸೀನಾಯಿ ಬೆಟ್ಟದಿಂದ ಇಳಿದುಬಂದಾಗ ಅವನು ಯೆಹೋವನ ಸಂಗಡ ಸಂಭಾಷಿಸಿದ್ದರಿಂದ ಅವನ ಮುಖವು ಪ್ರಕಾಶಮಾನವಾಗಿತ್ತು.”—ವಿಮೋಚನಕಾಂಡ 33:18-34:7, 29.
2. ಕ್ರೈಸ್ತರು ಪ್ರತಿಬಿಂಬಿಸುವಂಥ ಮಹಿಮೆಯ ಕುರಿತಾಗಿ ಅಪೊಸ್ತಲ ಪೌಲನು ಏನು ಬರೆದನು?
2 ಮೋಶೆಯೊಂದಿಗೆ ನೀವು ಆ ಬೆಟ್ಟದಲ್ಲಿದ್ದೀರೆಂದು ಊಹಿಸಿಕೊಳ್ಳಿ. ಸರ್ವಶಕ್ತನ ಉಜ್ಜ್ವಲ ತೇಜಸ್ಸನ್ನು ನೋಡಿ, ಆತನ ಮಾತುಗಳನ್ನು ಆಲಿಸುವುದು ಎಷ್ಟು ರೋಮಾಂಚನಕಾರಿ ಆಗಿರುತ್ತಿತ್ತು! ಧರ್ಮಶಾಸ್ತ್ರ ಒಡಂಬಡಿಕೆಯ ಮಧ್ಯಸ್ಥನಾಗಿದ್ದ ಮೋಶೆಯ ಪಕ್ಕದಲ್ಲಿ ನಡೆಯುತ್ತಾ ಸೀನಾಯಿಬೆಟ್ಟದಿಂದ ಕೆಳಗಿಳಿಯುವುದು ಎಂಥ ಒಂದು ವಿಶೇಷಗೌರವ ಆಗಿರುತ್ತಿತ್ತು! ಆದರೆ ನಿಜ ಕ್ರೈಸ್ತರು ದೇವರ ಮಹಿಮೆಯನ್ನು ಪ್ರತಿಬಿಂಬಿಸುವಾಗ ಕೆಲವು ವಿಧಗಳಲ್ಲಿ ಅವರು, ಮೋಶೆ ಆ ಮಹಿಮೆಯನ್ನು ಪ್ರತಿಬಿಂಬಿಸಿದಂಥ ರೀತಿಯನ್ನೂ ಮೀರಿಸುತ್ತಾರೆಂಬುದು ನಿಮಗೆ ತಿಳಿದಿದೆಯೊ? ಈ ಯೋಚನಾಪ್ರೇರಕ ವಾಸ್ತವಾಂಶವು, ಅಪೊಸ್ತಲ ಪೌಲನು ಬರೆದಂಥ ಒಂದು ಪತ್ರದಲ್ಲಿ ಕಂಡುಬರುತ್ತದೆ. ಅಭಿಷಿಕ್ತ ಕ್ರೈಸ್ತರು ‘ಯೆಹೋವನ ಮಹಿಮೆಯನ್ನು ಕನ್ನಡಿಗಳಂತೆ ಪ್ರತಿಬಿಂಬಿಸುತ್ತಾರೆ’ (ಪರಿಶುದ್ಧ ಬೈಬಲ್) ಎಂದು ಅವನು ಬರೆದನು. (2 ಕೊರಿಂಥ 3:7, 8, 18) ಭೂನಿರೀಕ್ಷೆಯಿರುವ ಕ್ರೈಸ್ತರು ಸಹ ಒಂದರ್ಥದಲ್ಲಿ ದೇವರ ಮಹಿಮೆಯನ್ನು ಪ್ರತಿಬಿಂಬಿಸುತ್ತಾರೆ.
ಕ್ರೈಸ್ತರು ದೇವರ ಮಹಿಮೆಯನ್ನು ಪ್ರತಿಬಿಂಬಿಸುವ ವಿಧ
3. ಮೋಶೆಗೆ ಆಗ ಅಸಾಧ್ಯವಾಗಿದ್ದಂಥ ರೀತಿಗಳಲ್ಲಿ ನಾವು ಯೆಹೋವನನ್ನು ತಿಳಿದುಕೊಂಡಿರುವುದು ಹೇಗೆ?
3 ನಾವು ದೇವರ ಮಹಿಮೆಯನ್ನು ಹೇಗೆ ಪ್ರತಿಬಿಂಬಿಸಸಾಧ್ಯವಿದೆ? ಮೋಶೆಯು ಯೆಹೋವನನ್ನು ನೋಡಿದ ಮತ್ತು ಕೇಳಿದಂಥ ವಿಧದಲ್ಲಿ ನಾವು ಆತನನ್ನು ನೋಡಿಲ್ಲ ಇಲ್ಲವೆ ಕೇಳಿಲ್ಲ. ಹಾಗಿದ್ದರೂ ಆಗ ಮೋಶೆಗೆ ಅಸಾಧ್ಯವಾಗಿದ್ದ ರೀತಿಗಳಲ್ಲಿ ನಾವು ಯೆಹೋವನ ಬಗ್ಗೆ ತಿಳಿದುಕೊಂಡಿದ್ದೇವೆ. ಏಕೆಂದರೆ ಮೋಶೆಯು ಸತ್ತು ಹೆಚ್ಚುಕಡಿಮೆ 1,500 ವರ್ಷಗಳ ಬಳಿಕವೇ ಯೇಸು ಮೆಸ್ಸೀಯನಾಗಿ ಪ್ರತ್ಯಕ್ಷನಾದನು. ಆದುದರಿಂದ ಮೋಶೆಗೆ, ಪಾಪಮರಣಗಳ ಘೋರ ದಬ್ಬಾಳಿಕೆಯಿಂದ ಮಾನವರನ್ನು ವಿಮೋಚಿಸಲಿಕ್ಕಾಗಿ ಮರಣಪಟ್ಟ ಯೇಸುವಿನಲ್ಲಿ ಧರ್ಮಶಾಸ್ತ್ರವು ಹೇಗೆ ನೆರವೇರಿತೆಂಬುದು ತಿಳಿದಿರಲು ಸಾಧ್ಯವಿರಲಿಲ್ಲ. (ರೋಮಾಪುರ 5:20, 21; ಗಲಾತ್ಯ 3:19) ಅಲ್ಲದೆ, ಮೆಸ್ಸೀಯ ರಾಜ್ಯಕ್ಕೆ ಮತ್ತು ಅದು ತರಲಿರುವ ಭೂಪರದೈಸಿಗೆ ನಿಕಟವಾಗಿ ಸಂಬಂಧಿಸಿರುವ ಯೆಹೋವನ ಉದ್ದೇಶದ ವೈಭವವನ್ನು ಮೋಶೆ ಸೀಮಿತ ರೀತಿಯಲ್ಲಿ ಮಾತ್ರ ಗ್ರಹಿಸಲು ಸಾಧ್ಯವಿತ್ತು. ನಾವು ಯೆಹೋವನ ಮಹಿಮೆಯನ್ನು ನಮ್ಮ ಅಕ್ಷರಶಃ ಕಣ್ಣುಗಳಿಂದಲ್ಲ ಬದಲಾಗಿ, ಬೈಬಲ್ ಬೋಧನೆಗಳ ಮೇಲೆ ಆಧಾರಿತವಾಗಿರುವ ನಂಬಿಕೆಯ ಕಣ್ಣುಗಳಿಂದ ಗ್ರಹಿಸುತ್ತೇವೆ. ಅಷ್ಟುಮಾತ್ರವಲ್ಲದೆ, ನಾವು ಯೆಹೋವನ ವಾಣಿಯನ್ನು ಒಬ್ಬ ದೇವದೂತನ ಮೂಲಕವಲ್ಲ ಬದಲಾಗಿ ಬೈಬಲಿನ ಮೂಲಕ ವಿಶೇಷವಾಗಿ, ಯೇಸುವಿನ ಬೋಧನೆಗಳು ಮತ್ತು ಶುಶ್ರೂಷೆಯನ್ನು ಸುಂದರವಾಗಿ ವರ್ಣಿಸುವಂಥ ಸುವಾರ್ತಾ ಪುಸ್ತಕಗಳ ಮುಖಾಂತರ ಕೇಳಿಸಿಕೊಂಡಿದ್ದೇವೆ.
4. (ಎ) ಅಭಿಷಿಕ್ತ ಕ್ರೈಸ್ತರು ದೇವರ ಮಹಿಮೆಯನ್ನು ಹೇಗೆ ಪ್ರತಿಬಿಂಬಿಸುತ್ತಾರೆ? (ಬಿ) ಭೂನಿರೀಕ್ಷೆಯುಳ್ಳವರು ದೇವರ ಮಹಿಮೆಯನ್ನು ಯಾವ ವಿಧಗಳಲ್ಲಿ ಪ್ರತಿಬಿಂಬಿಸಬಲ್ಲರು?
4 ಕ್ರೈಸ್ತರು ದೇವರ ಮಹಿಮೆಯನ್ನು, ತಮ್ಮ ಮುಖಗಳು ಪ್ರಕಾಶಮಾನವಾಗುವುದರ ಮೂಲಕ, ಅಂದರೆ ಕಿರಣಗಳನ್ನು ಹೊರಸೂಸುವ ಮೂಲಕ ಪ್ರತಿಬಿಂಬಿಸುವುದಿಲ್ಲ. ಆದರೆ, ಅವರು ಯೆಹೋವನ ಮಹಿಮಾಭರಿತ ವ್ಯಕ್ತಿತ್ವ ಹಾಗೂ ಉದ್ದೇಶಗಳ ಕುರಿತಾಗಿ ಇತರರಿಗೆ ತಿಳಿಸುವಾಗಲಂತೂ ಅವರ ಮುಖಗಳು ಬಹುಮಟ್ಟಿಗೆ ಕಳೆಯಿಂದ ಬೆಳಗಿರುತ್ತವೆ ಎಂದು ಹೇಳಬಹುದು. ದೇವಜನರು “ಜನಾಂಗಗಳಲ್ಲಿ [ಯೆಹೋವನ] ಮಹಿಮೆಯನ್ನು ಪ್ರಕಟಿಸುವರು” ಎಂದು ಪ್ರವಾದಿ ಯೆಶಾಯನು ನಮ್ಮ ದಿನಗಳ ಬಗ್ಗೆ ಮುಂತಿಳಿಸಿದನು. (ಯೆಶಾಯ 66:19) ಅದಲ್ಲದೆ, 2 ಕೊರಿಂಥ 4:1, 2ರಲ್ಲಿ ನಾವು ಹೀಗೆ ಓದುತ್ತೇವೆ: “ಈ ಸೇವೆಯನ್ನು ಹೊಂದಿದವರಾಗಿರಲಾಗಿ . . . ನಾಚಿಕೆಯನ್ನು ಹುಟ್ಟಿಸುವ ಗುಪ್ತಕಾರ್ಯಗಳನ್ನು ನಾವು ಬಿಟ್ಟುಬಿಟ್ಟು ತಂತ್ರದಲ್ಲಿ ನಡೆಯದೆ ದೇವರ ವಾಕ್ಯವನ್ನು ಕೆಡಿಸದೆ ಸತ್ಯವನ್ನು ಪರಿಷ್ಕಾರವಾಗಿ ಬೋಧಿಸುತ್ತಾ ನಾವು ಸಜ್ಜನರೆಂದು ಪ್ರತಿಮನುಷ್ಯನ ಮನಸ್ಸು ದೇವರ ಮುಂದೆ ಒಪ್ಪಬೇಕಾದ ರೀತಿಯಲ್ಲಿ ನಡೆಯುತ್ತೇವೆ.” ಇಲ್ಲಿ ಪೌಲನು ನಿರ್ದಿಷ್ಟವಾಗಿ “ಹೊಸ ಒಡಂಬಡಿಕೆಗೆ ಸೇವಕರಾಗಿರುವ” ಅಭಿಷಿಕ್ತ ಕ್ರೈಸ್ತರಿಗೆ ಸೂಚಿಸುತ್ತಿದ್ದನು. (2 ಕೊರಿಂಥ 3:6) ಆದರೆ ಅವರ ಈ ಸೇವೆ ಅಥವಾ ಶುಶ್ರೂಷೆಯು, ಭೂಮಿಯ ಮೇಲೆ ನಿತ್ಯಜೀವದ ನಿರೀಕ್ಷೆಯನ್ನು ಪಡೆದಿರುವ ಅಸಂಖ್ಯಾತ ಜನರ ಮೇಲೆ ಪರಿಣಾಮಬೀರಿದೆ. ಈ ಎರಡೂ ಗುಂಪಿನವರ ಶುಶ್ರೂಷೆಯಲ್ಲಿ, ಅವರು ಯೆಹೋವನ ಮಹಿಮೆಯನ್ನು ತಾವು ಕಲಿಸುವಂಥ ಸಂಗತಿಗಳಲ್ಲಿ ಮಾತ್ರವಲ್ಲ ಅವರ ಕೃತ್ಯಗಳಲ್ಲಿಯೂ ಪ್ರತಿಬಿಂಬಿಸುವುದು ಒಳಗೂಡಿರುತ್ತದೆ. ಸರ್ವೋನ್ನತ ದೇವರ ಮಹಿಮೆಯನ್ನು ಪ್ರತಿಬಿಂಬಿಸುವುದು ನಮ್ಮ ಜವಾಬ್ದಾರಿಯಾಗಿದೆ ಮತ್ತು ನಮಗಿರುವ ವಿಶೇಷಗೌರವವೂ ಆಗಿದೆ!
5. ನಮ್ಮ ಆಧ್ಯಾತ್ಮಿಕ ಸಮೃದ್ಧಿಯು ಯಾವುದಕ್ಕೆ ಸಾಕ್ಷ್ಯವನ್ನು ಕೊಡುತ್ತದೆ?
5 ಇಂದು ದೇವರ ರಾಜ್ಯದ ಕುರಿತಾದ ಮಹಿಮಾಭರಿತ ಸುವಾರ್ತೆಯು ಯೇಸು ಮುಂತಿಳಿಸಿದಂತೆಯೇ ಸರ್ವಲೋಕದಲ್ಲಿ ಸಾರಲ್ಪಡುತ್ತಿದೆ. (ಮತ್ತಾಯ 24:14) ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ ಸುವಾರ್ತೆಗೆ ಉತ್ಸಾಹದಿಂದ ಪ್ರತಿಕ್ರಿಯೆ ತೋರಿಸಿದ್ದಾರೆ ಮತ್ತು ದೇವರ ಚಿತ್ತವನ್ನು ಮಾಡಲಿಕ್ಕಾಗಿ ತಮ್ಮ ಜೀವನಗಳಲ್ಲಿ ಬದಲಾವಣೆ ಮಾಡಿದ್ದಾರೆ. (ರೋಮಾಪುರ 12:2; ಪ್ರಕಟನೆ 7:9) ಆರಂಭದ ಕ್ರೈಸ್ತರಂತೆ, ಅವರು ತಾವು ಕಂಡುಕೇಳಿದಂಥ ವಿಷಯಗಳನ್ನು ಹೇಳದೆ ಇರಲಾರರು. (ಅ. ಕೃತ್ಯಗಳು 4:20) ಮಾನವ ಇತಿಹಾಸದಲ್ಲಿ ಬೇರಾವುದೇ ಸಮಯಕ್ಕಿಂತಲೂ ಹೆಚ್ಚಾಗಿ ಈಗ 60 ಲಕ್ಷಕ್ಕಿಂತಲೂ ಹೆಚ್ಚು ಜನರು ದೇವರ ಮಹಿಮೆಯನ್ನು ಪ್ರತಿಬಿಂಬಿಸುತ್ತಿದ್ದಾರೆ. ನೀವು ಅವರಲ್ಲಿ ಒಬ್ಬರಾಗಿದ್ದೀರೊ? ದೇವರ ಜನರ ಆಧ್ಯಾತ್ಮಿಕ ಸಮೃದ್ಧಿಯು, ಯೆಹೋವನ ಆಶೀರ್ವಾದ ಹಾಗೂ ಸಂರಕ್ಷಣೆಯಿದೆ ಎಂಬುದಕ್ಕೆ ಮನಗಾಣಿಸುವಂಥ ಸಾಕ್ಷ್ಯವನ್ನು ಕೊಡುತ್ತದೆ. ನಮ್ಮ ವಿರುದ್ಧವಾಗಿ ಶಕ್ತಿಶಾಲಿ ಸೈನ್ಯಗಳು ನಿಂತಿರುವುದರಿಂದ ಯೆಹೋವನ ಆತ್ಮವು ನಮ್ಮ ಮೇಲೆ ಇದೆ ಎಂಬುದು ಇನ್ನೂ ಹೆಚ್ಚು ಸ್ಪಷ್ಟವಾಗಿ ತೋರಿಬರುತ್ತದೆ. ಯೆಹೋವನ ಆತ್ಮವು ನಿಜವಾಗಿಯೂ ನಮ್ಮ ಮೇಲೆ ಇದೆಯೆಂಬುದನ್ನು ನಾವೇಕೆ ಹೇಳಬಹುದೆಂದು ಈಗ ನೋಡೋಣ.
ದೇವರ ಜನರನ್ನು ಮೌನಗೊಳಿಸಲಾಗದು
6. ಯೆಹೋವನ ಪರವಾಗಿ ನಿಲುವನ್ನು ತೆಗೆದುಕೊಳ್ಳಲು ನಂಬಿಕೆ ಮತ್ತು ಧೈರ್ಯ ಏಕೆ ಆವಶ್ಯಕ?
6 ಒಬ್ಬ ನಿಷ್ಕರುಣಿ ಪಾತಕಿಯ ವಿರುದ್ಧ ಕೋರ್ಟಿನಲ್ಲಿ ಸಾಕ್ಷಿಹೇಳುವಂತೆ ನಿಮ್ಮನ್ನು ಕರೆಯಲಾಗಿದೆ ಎಂದಿಟ್ಟುಕೊಳ್ಳಿ. ಆ ಪಾತಕಿಗೆ ಒಂದು ಶಕ್ತಿಶಾಲಿ ಸಂಘಟನೆಯಿದೆ ಮತ್ತು ನೀವು ಅವನನ್ನು ಬಯಲಿಗೆಳೆಯುವುದನ್ನು ತಡೆಯಲು ಅವನು ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಬಳಸುವನೆಂದು ನಿಮಗೆ ತಿಳಿದಿದೆ. ಅಂಥ ಒಬ್ಬ ಪಾತಕಿಯ ವಿರುದ್ಧ ಸಾಕ್ಷಿ ನೀಡಲು ನಿಮಗೆ ಧೈರ್ಯವಿರಬೇಕು ಮಾತ್ರವಲ್ಲದೆ, ಅಧಿಕಾರಿಗಳು ನಿಮ್ಮನ್ನು ಅವನಿಂದ ಸಂರಕ್ಷಿಸುವರೆಂಬ ಭರವಸೆಯೂ ಆವಶ್ಯಕ. ನಾವು ಅದೇ ರೀತಿಯ ಸನ್ನಿವೇಶದಲ್ಲಿದ್ದೇವೆ. ನಾವು ಯೆಹೋವನ ಮತ್ತು ಆತನ ಉದ್ದೇಶಗಳ ಬಗ್ಗೆ ಸಾಕ್ಷಿಯನ್ನು ನೀಡುವಾಗ, ಪಿಶಾಚನಾದ ಸೈತಾನನ ವಿರುದ್ಧ ಪುರಾವೆ ಕೊಡುತ್ತಿದ್ದೇವೆ ಮತ್ತು ಅವನೊಬ್ಬ ಕೊಲೆಗಾರನು ಹಾಗೂ ಭೂಲೋಕದವರೆಲ್ಲರನ್ನೂ ಮರುಳುಗೊಳಿಸುತ್ತಿರುವ ಸುಳ್ಳುಗಾರನೆಂದು ಬಯಲುಪಡಿಸುತ್ತಿದ್ದೇವೆ. (ಯೋಹಾನ 8:44; ಪ್ರಕಟನೆ 12:9) ಯೆಹೋವನ ಪರವಾಗಿ ಮತ್ತು ಪಿಶಾಚನ ವಿರುದ್ಧವಾಗಿ ನಿಲುವನ್ನು ತೆಗೆದುಕೊಳ್ಳಲು ನಂಬಿಕೆ ಹಾಗೂ ಧೈರ್ಯ ಅಗತ್ಯ.
7. ಸೈತಾನನು ಎಷ್ಟು ಪ್ರಭಾವಶಾಲಿಯಾಗಿದ್ದಾನೆ, ಮತ್ತು ಅವನೇನು ಮಾಡಲು ಪ್ರಯತ್ನಿಸುತ್ತಾನೆ?
7 ಯೆಹೋವನು ಪರಮೋಚ್ಚನೆಂಬುದು ನಿಜ. ಮತ್ತು ಆತನ ಶಕ್ತಿಯು ಖಂಡಿತವಾಗಿಯೂ ಸೈತಾನನದ್ದಕ್ಕಿಂತ ಎಷ್ಟೋ ಶ್ರೇಷ್ಠವಾಗಿದೆ. ನಾವಾತನನ್ನು ನಿಷ್ಠೆಯಿಂದ ಸೇವಿಸುವಾಗ, ಆತನು ನಮ್ಮನ್ನು ಸಂರಕ್ಷಿಸಲು ಶಕ್ತನಾಗಿದ್ದಾನೆ ಮಾತ್ರವಲ್ಲ, ಹಾಗೆ ಮಾಡಲು ಹಾತೊರೆಯುತ್ತಾನೆಂದೂ ನಾವು ದೃಢಭರವಸೆಯಿಂದ ಇರಬಲ್ಲೆವು. (2 ಪೂರ್ವಕಾಲವೃತ್ತಾಂತ 16:9) ಹೀಗಿದ್ದರೂ, ಸೈತಾನನು ದೆವ್ವಗಳ ಮತ್ತು ದೇವರಿಂದ ದೂರಸರಿದಿರುವ ಮಾನವಕುಲದ ಲೋಕಾಧಿಪತಿಯಾಗಿದ್ದಾನೆ. (ಮತ್ತಾಯ 12:24, 26; ಯೋಹಾನ 14:30) ಭೂಕ್ಷೇತ್ರಕ್ಕೆ ನಿರ್ಬಂಧಿಸಲ್ಪಟ್ಟಿದ್ದು, ಸೈತಾನನು “ಮಹಾ ರೌದ್ರ”ದಿಂದ ತುಂಬಿದವನಾಗಿ ಯೆಹೋವನ ಸೇವಕರನ್ನು ತೀಕ್ಷ್ಣವಾಗಿ ವಿರೋಧಿಸುತ್ತಾನೆ ಮತ್ತು ಸುವಾರ್ತೆ ಸಾರುವವರೆಲ್ಲರ ಬಾಯಿಮುಚ್ಚಿಸಲಿಕ್ಕೆ ಪ್ರಯತ್ನಿಸುತ್ತಾ ತನ್ನ ಕೈಕೆಳಗಿರುವ ಲೋಕವನ್ನು ಬಳಸುತ್ತಾನೆ. (ಪ್ರಕಟನೆ 12:7-9, 12, 17) ಅವನಿದನ್ನು ಹೇಗೆ ಮಾಡುತ್ತಾನೆ? ಕಡಿಮೆಪಕ್ಷ ಮೂರು ವಿಧಗಳಲ್ಲಿ.
8, 9. ಸೈತಾನನು ತಪ್ಪಾದ ರೀತಿಯ ಪ್ರೀತಿಯನ್ನು ಹೇಗೆ ಬಳಸಿಕೊಳ್ಳುತ್ತಾನೆ, ಮತ್ತು ನಾವು ನಮ್ಮ ಒಡನಾಡಿಗಳನ್ನು ಏಕೆ ಜಾಗ್ರತೆಯಿಂದ ಆಯ್ಕೆಮಾಡಬೇಕು?
8 ಸೈತಾನನು ನಮ್ಮನ್ನು ಅಪಕರ್ಷಿಸಲು ಪ್ರಯತ್ನಿಸುವ ಒಂದು ವಿಧವು, ಜೀವನದ ಕಾರ್ಯಕಲಾಪಗಳ ಮೂಲಕವೇ ಆಗಿದೆ. ಈ ಕಡೇ ದಿವಸಗಳಲ್ಲಿರುವ ಜನರು ಹಣದಾಸೆಯವರು, ಸ್ವಾರ್ಥಚಿಂತಕರು ಮತ್ತು ಭೋಗಗಳನ್ನು ಪ್ರೀತಿಸುವವರು ಆಗಿದ್ದಾರೆ. ಅವರು ದೇವರನ್ನು ಪ್ರೀತಿಸುವವರಲ್ಲ. (2 ತಿಮೊಥೆಯ 3:1-4) ಹೆಚ್ಚಿನ ಜನರು ಜೀವನದ ದೈನಂದಿನ ಜಂಜಾಟಗಳಲ್ಲಿ ಮುಳುಗಿರುವುದರಿಂದ, ನಾವು ಅವರ ಬಳಿ ತೆಗೆದುಕೊಂಡು ಹೋಗುವ ಸುವಾರ್ತೆಗೆ ಅವರು ‘ಲಕ್ಷ್ಯ ಕೊಡುವುದಿಲ್ಲ.’ (NW) ಅವರಿಗೆ ಬೈಬಲ್ ಸತ್ಯವನ್ನು ಕಲಿಯಲು ಸ್ವಲ್ಪವೂ ಆಸಕ್ತಿಯಿಲ್ಲ. (ಮತ್ತಾಯ 24:37-39) ಇಂಥ ಮನೋಭಾವವು ನಮಗೂ ತಗಲಿ, ನಾವು ಕ್ರಮೇಣವಾಗಿ ಆಧ್ಯಾತ್ಮಿಕ ಉದಾಸೀನತೆಯ ಸ್ಥಿತಿಗೆ ಇಳಿಯುವಂತೆ ಮಾಡಬಲ್ಲದು. ನಮ್ಮಲ್ಲಿ ಭೌತಿಕ ವಸ್ತುಗಳು ಮತ್ತು ಜೀವನದ ಸುಖಭೋಗಗಳಿಗಾಗಿ ಪ್ರೀತಿಯು ಬೆಳೆಯುವಂತೆ ನಾವು ಬಿಟ್ಟುಕೊಡುವಲ್ಲಿ, ದೇವರ ಮೇಲಿರುವ ನಮ್ಮ ಪ್ರೀತಿಯು ತಣ್ಣಗಾಗಿ ಹೋಗುವುದು.—ಮತ್ತಾಯ 24:12.
9 ಈ ಕಾರಣಕ್ಕಾಗಿಯೇ, ಕ್ರೈಸ್ತರು ತಮ್ಮ ಒಡನಾಡಿಗಳನ್ನು ಜಾಗ್ರತೆಯಿಂದ ಆಯ್ಕೆಮಾಡುತ್ತಾರೆ. ರಾಜ ಸೊಲೊಮೋನನು ಬರೆದುದು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” (ಜ್ಞಾನೋಕ್ತಿ 13:20) ದೇವರ ಮಹಿಮೆಯನ್ನು ಪ್ರತಿಬಿಂಬಿಸುವವರೊಂದಿಗೆ ನಾವು ‘ಸಹವಾಸಿಸೋಣ.’ ಇದನ್ನು ಮಾಡುವುದು ಎಷ್ಟು ಹಿತಕರ! ನಮ್ಮ ಕೂಟಗಳಲ್ಲಿ ಮತ್ತು ಇತರ ಸಮಯಗಳಲ್ಲಿ ನಾವು ನಮ್ಮ ಆಧ್ಯಾತ್ಮಿಕ ಸೋದರಸೋದರಿಯರೊಂದಿಗೆ ಜೊತೆಗೂಡುವಾಗ ಅವರ ಪ್ರೀತಿ, ನಂಬಿಕೆ, ಆನಂದ ಮತ್ತು ವಿವೇಕದಿಂದ ಉತ್ತೇಜನವನ್ನು ಕಂಡುಕೊಳ್ಳುತ್ತೇವೆ. ಅಂಥ ಉತ್ತಮ ಸಹವಾಸವು, ನಮ್ಮ ಶುಶ್ರೂಷೆಯಲ್ಲಿ ಪಟ್ಟುಹಿಡಿಯುವ ನಮ್ಮ ದೃಢನಿರ್ಧಾರವನ್ನು ಇನ್ನಷ್ಟು ಬಲಪಡಿಸುತ್ತದೆ.
10. ದೇವರ ಮಹಿಮೆಯನ್ನು ಪ್ರತಿಬಿಂಬಿಸುವವರ ವಿರುದ್ಧ ಸೈತಾನನು ಕುಚೋದ್ಯವನ್ನು ಯಾವ ವಿಧಗಳಲ್ಲಿ ಬಳಸಿದ್ದಾನೆ?
10 ದೇವರ ಮಹಿಮೆಯನ್ನು ಪ್ರತಿಬಿಂಬಿಸುವುದರಿಂದ ಎಲ್ಲ ಕ್ರೈಸ್ತರನ್ನು ನಿಲ್ಲಿಸಲು ಸೈತಾನನು ಬಳಸುವ ಇನ್ನೊಂದು ವಿಧವು ಕುಚೋದ್ಯ ಆಗಿದೆ. ಈ ತಂತ್ರವು ನಮ್ಮನ್ನು ಆಶ್ಚರ್ಯಪಡಿಸಬೇಕಾಗಿಲ್ಲ. ಏಕೆಂದರೆ ಯೇಸು ಕ್ರಿಸ್ತನ ಭೂಶುಶ್ರೂಷೆಯ ಸಮಯದಲ್ಲಿ ಅವನಿಗೆ ಕುಚೋದ್ಯಮಾಡಲಾಯಿತು, ಅಂದರೆ ಅವನನ್ನು ಗೇಲಿಮಾಡಲಾಯಿತು, ಬೈಯ್ಯಲಾಯಿತು ಮತ್ತು ಅವನ ಮೇಲೆ ಉಗುಳಲಾಯಿತು ಸಹ. (ಮಾರ್ಕ 5:40; ಲೂಕ 16:14; 18:32) ಆರಂಭದ ಕ್ರೈಸ್ತರು ಸಹ ಅಪಹಾಸ್ಯಕ್ಕೆ ಗುರಿಮಾಡಲ್ಪಟ್ಟರು. (ಅ. ಕೃತ್ಯಗಳು 2:13; 17:32) ಆಧುನಿಕ ದಿನದ ಯೆಹೋವನ ಸೇವಕರು ತದ್ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಅಪೊಸ್ತಲ ಪೇತ್ರನಿಗನುಸಾರ, ಅವರಿಗೆ ಕಾರ್ಯತಃ “ಸುಳ್ಳು ಪ್ರವಾದಿಗಳು” ಎಂಬ ಪಟ್ಟವನ್ನು ಕಟ್ಟಲಾಗುವುದು. ಅವನು ಮುಂತಿಳಿಸಿದ್ದು: “ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ—ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? . . . ಸಮಸ್ತವೂ ಲೋಕಾದಿಯಿಂದಿದ್ದ ಹಾಗೆಯೇ ಇರುತ್ತದಲ್ಲಾ ಎಂದು ಹೇಳುವರೆಂಬದಾಗಿ ನೀವು ಮೊದಲು ತಿಳುಕೊಳ್ಳಬೇಕು.” (2 ಪೇತ್ರ 3:3, 4) ದೇವರ ಜನರಿಗೆ ವಾಸ್ತವಿಕ ನೋಟವಿಲ್ಲವೆಂದು ಕುಚೋದ್ಯಮಾಡಲಾಗುತ್ತದೆ. ಬೈಬಲಿನ ನೈತಿಕ ಮಟ್ಟಗಳು ಹಳೇ ಶೈಲಿಯದ್ದು ಎಂದು ದೃಷ್ಟಿಸಲಾಗುತ್ತದೆ. ನಾವು ಸಾರುವಂಥ ಸಂದೇಶವು ಅನೇಕರಿಗೆ ಹುಚ್ಚುಮಾತಾಗಿದೆ. (1 ಕೊರಿಂಥ 1:18, 19) ಕ್ರೈಸ್ತರಾಗಿ ನಾವು ಶಾಲೆಯಲ್ಲಿ, ಕೆಲಸದ ಸ್ಥಳದಲ್ಲಿ, ಮತ್ತು ಕೆಲವೊಮ್ಮೆ ಕುಟುಂಬ ವೃತ್ತದಲ್ಲೂ ಕುಚೋದ್ಯವನ್ನು ಎದುರಿಸಬೇಕಾಗಬಹುದು. ಆದರೆ ಇದಕ್ಕೆಲ್ಲಾ ಜಗ್ಗದೆ, ಯೇಸುವಿನಂತೆಯೇ ದೇವರ ವಾಕ್ಯವು ಸತ್ಯವೆಂದು ತಿಳಿದುಕೊಂಡವರಾಗಿ ನಮ್ಮ ಸಾರುವಿಕೆಯ ಮೂಲಕ ನಾವು ದೇವರ ಮಹಿಮೆಯನ್ನು ಪ್ರತಿಬಿಂಬಿಸುವುದನ್ನು ಮುಂದುವರಿಸುತ್ತೇವೆ.—ಯೋಹಾನ 17:17.
11. ಕ್ರೈಸ್ತರನ್ನು ಮೌನಗೊಳಿಸುವ ಪ್ರಯತ್ನದಲ್ಲಿ ಸೈತಾನನು ಹಿಂಸೆಯನ್ನು ಹೇಗೆ ಉಪಯೋಗಿಸಿದ್ದಾನೆ?
11 ನಮ್ಮನ್ನು ಮೌನಗೊಳಿಸಲು ಪಿಶಾಚನು ಬಳಸುವ ಮೂರನೆಯ ತಂತ್ರವು, ವಿರೋಧ ಇಲ್ಲವೆ ಹಿಂಸೆ ಆಗಿದೆ. ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು: “ಆಗ ನಿಮ್ಮನ್ನು ಉಪದ್ರವಕ್ಕೆ ಒಪ್ಪಿಸಿ ಕೊಲ್ಲುವರು; ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲಾ ಜನಾಂಗಗಳವರು ಹಗೆಮಾಡುವರು.” (ಮತ್ತಾಯ 24:9) ಹೌದು, ಯೆಹೋವನ ಸಾಕ್ಷಿಗಳಾಗಿ ನಾವು ಭೂಮಿಯ ಅನೇಕ ಭಾಗಗಳಲ್ಲಿ ತುಂಬ ಕಠಿನವಾದ ಹಿಂಸೆಯನ್ನು ಎದುರಿಸಿದ್ದೇವೆ. ದೇವರನ್ನು ಸೇವಿಸುವವರ ಮತ್ತು ಪಿಶಾಚನಾದ ಸೈತಾನನನ್ನು ಸೇವಿಸುವವರ ನಡುವೆ ಹಗೆತನ ಬೆಳೆಯುವುದೆಂದು ಯೆಹೋವನು ಬಹುಕಾಲದ ಹಿಂದೆಯೇ ಮುಂತಿಳಿಸಿದ್ದನೆಂದು ನಮಗೆ ತಿಳಿದಿದೆ. (ಆದಿಕಾಂಡ 3:15) ಕಷ್ಟಪರೀಕ್ಷೆಗಳ ಕೆಳಗೆ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮೂಲಕ, ನಾವು ಯೆಹೋವನ ವಿಶ್ವ ಪರಮಾಧಿಕಾರದ ಯುಕ್ತತೆಗೆ ಸಾಕ್ಷ್ಯ ಕೊಡುತ್ತೇವೆಂದೂ ನಮಗೆ ತಿಳಿದಿದೆ. ಇದನ್ನು ಮನಸ್ಸಿನಲ್ಲಿಡುವುದು, ಅತೀ ಕಠಿನವಾದ ಪರಿಸ್ಥಿತಿಗಳಲ್ಲೂ ನಮ್ಮನ್ನು ಬಲವಾಗಿರಿಸುವುದು. ದೇವರ ಮಹಿಮೆಯನ್ನು ಪ್ರತಿಬಿಂಬಿಸಲು ನಾವು ದೃಢನಿಶ್ಚಯವುಳ್ಳವರಾಗಿ ಉಳಿಯುವುದಾದರೆ, ಯಾವುದೇ ರೀತಿಯ ಹಿಂಸೆಯು ನಮ್ಮನ್ನು ಶಾಶ್ವತವಾಗಿ ಮೌನಗೊಳಿಸಲಾರದು.
12. ಸೈತಾನನ ವಿರೋಧದ ಮಧ್ಯೆಯೂ ನಾವು ನಂಬಿಗಸ್ತರಾಗಿ ಉಳಿಯುವಾಗ ನಾವೇಕೆ ಹರ್ಷಿಸಬೇಕು?
12 ನೀವು ಲೋಕದ ಸೆಳೆತವನ್ನು ಪ್ರತಿರೋಧಿಸುತ್ತೀರೊ? ಅಪಹಾಸ್ಯ ಹಾಗೂ ವಿರೋಧದ ಮಧ್ಯೆಯೂ ನಂಬಿಗಸ್ತರಾಗಿರುತ್ತೀರೊ? ಹಾಗಿದ್ದರೆ, ಹರ್ಷಿಸಲು ನಿಮಗೆ ಸಕಾರಣವಿದೆ. ತನ್ನನ್ನು ಹಿಂಬಾಲಿಸುವವರಿಗೆ ಯೇಸು ಆಶ್ವಾಸನೆಯಿತ್ತದ್ದು: “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು. ಸಂತೋಷಪಡಿರಿ, ಉಲ್ಲಾಸಪಡಿರಿ; ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವದು; ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನೂ ಹೀಗೆಯೇ ಹಿಂಸೆಪಡಿಸಿದರಲ್ಲಾ.” (ಮತ್ತಾಯ 5:11, 12) ನೀವು ತೋರಿಸುವ ತಾಳ್ಮೆಯು, ಯೆಹೋವನ ಶಕ್ತಿಶಾಲಿ ಪವಿತ್ರಾತ್ಮವು ನಿಮ್ಮ ಮೇಲಿದ್ದು, ಆತನ ಮಹಿಮೆಯನ್ನು ಪ್ರತಿಬಿಂಬಿಸಲು ನಿಮ್ಮನ್ನು ಶಕ್ತಗೊಳಿಸುತ್ತಿದೆ ಎಂಬುದಕ್ಕೆ ಸಾಕ್ಷ್ಯವನ್ನು ಕೊಡುತ್ತದೆ.—2 ಕೊರಿಂಥ 12:9.
ಯೆಹೋವನ ಸಹಾಯದಿಂದ ತಾಳಿಕೊಳ್ಳುವುದು
13. ನಮ್ಮ ಕ್ರೈಸ್ತ ಶುಶ್ರೂಷೆಯಲ್ಲಿ ನಾವು ತಾಳಿಕೊಳ್ಳಲು ಒಂದು ಮುಖ್ಯ ಕಾರಣ ಏನು?
13 ನಾವು ಶುಶ್ರೂಷೆಯಲ್ಲಿ ತಾಳಿಕೊಳ್ಳಲು ಒಂದು ಮುಖ್ಯ ಕಾರಣವೇನೆಂದರೆ, ನಾವು ಯೆಹೋವನನ್ನು ಪ್ರೀತಿಸುತ್ತೇವೆ ಮತ್ತು ಆತನ ಮಹಿಮೆಯನ್ನು ಪ್ರತಿಬಿಂಬಿಸಲು ಹರ್ಷಿಸುತ್ತೇವೆ ಎಂಬುದೇ. ಮಾನವರಲ್ಲಿ, ತಾವು ಯಾರನ್ನು ಪ್ರೀತಿಸಿ ಗೌರವಿಸುತ್ತಾರೊ ಅವರನ್ನು ಅನುಕರಿಸುವ ಪ್ರವೃತ್ತಿಯಿದೆ. ಯೆಹೋವ ದೇವರಿಗಿಂತಲೂ ಹೆಚ್ಚು ಅನುಕರಣಯೋಗ್ಯನಾಗಿರುವ ವ್ಯಕ್ತಿ ಬೇರಾರೂ ಇಲ್ಲ. ಆತನಿಗಿರುವ ಮಹಾ ಪ್ರೀತಿಯಿಂದಾಗಿಯೇ ಆತನು ಸತ್ಯಕ್ಕೆ ಸಾಕ್ಷಿಯನ್ನು ಕೊಡಲಿಕ್ಕಾಗಿ ಮತ್ತು ವಿಧೇಯ ಮಾನವಕುಲವನ್ನು ವಿಮೋಚಿಸಲಿಕ್ಕಾಗಿ ತನ್ನ ಮಗನನ್ನು ಭೂಮಿಗೆ ಕಳುಹಿಸಿದನು. (ಯೋಹಾನ 3:16; 18:37) ದೇವರಂತೆ ನಮ್ಮ ಅಪೇಕ್ಷೆಯೂ ಏನೆಂದರೆ ಎಲ್ಲ ರೀತಿಯ ಜನರು ಪಶ್ಚಾತ್ತಾಪಪಟ್ಟು ರಕ್ಷಣೆಪಡೆಯಬೇಕೆಂದೇ. ಈ ಕಾರಣದಿಂದಲೇ ನಾವು ಅವರಿಗೆ ಸಾರುತ್ತೇವೆ. (2 ಪೇತ್ರ 3:9) ಈ ಅಪೇಕ್ಷೆಯ ಜೊತೆಯಲ್ಲಿ, ದೇವರನ್ನು ಅನುಕರಿಸಬೇಕೆಂದು ನಮಗಿರುವ ದೃಢನಿಶ್ಚಯವು ನಮ್ಮ ಶುಶ್ರೂಷೆಯ ಮೂಲಕ ಆತನ ಮಹಿಮೆಯನ್ನು ಪ್ರತಿಬಿಂಬಿಸುವುದರಲ್ಲಿ ಪಟ್ಟುಹಿಡಿಯಲು ನಮ್ಮನ್ನು ಪ್ರಚೋದಿಸುತ್ತದೆ.
14. ನಮ್ಮ ಶುಶ್ರೂಷೆಯಲ್ಲಿ ತಾಳಿಕೊಳ್ಳುವಂತೆ ಯೆಹೋವನು ನಮ್ಮನ್ನು ಹೇಗೆ ಬಲಪಡಿಸುತ್ತಾನೆ?
14 ಕ್ರೈಸ್ತ ಶುಶ್ರೂಷೆಯಲ್ಲಿ ತಾಳಿಕೊಳ್ಳಲು ನಮಗೆ ಬೇಕಾದ ಬಲವು ಮೂಲಭೂತವಾಗಿ ಯೆಹೋವನಿಂದ ಬರುತ್ತದೆ. ತನ್ನ ಆತ್ಮ, ತನ್ನ ಸಂಘಟನೆ, ಮತ್ತು ತನ್ನ ವಾಕ್ಯವಾದ ಬೈಬಲಿನ ಮೂಲಕ ಆತನು ನಮ್ಮನ್ನು ಪೋಷಿಸಿ ಬಲಪಡಿಸುತ್ತಾನೆ. ತನ್ನ ಮಹಿಮೆಯನ್ನು ಪ್ರತಿಬಿಂಬಿಸಲು ಸಿದ್ಧರಿರುವವರಿಗೆ ಯೆಹೋವನು ‘ತಾಳ್ಮೆ ಕೊಡುತ್ತಾನೆ.’ ಆತನು ನಮ್ಮ ಪ್ರಾರ್ಥನೆಗಳನ್ನು ಉತ್ತರಿಸುತ್ತಾನೆ ಮತ್ತು ಕಷ್ಟಪರೀಕ್ಷೆಗಳೊಂದಿಗೆ ವ್ಯವಹರಿಸಲು ಬೇಕಾದ ವಿವೇಕವನ್ನು ಕೊಡುತ್ತಾನೆ. (ರೋಮಾಪುರ 15:5, NIBV; ಯಾಕೋಬ 1:5) ಅದಲ್ಲದೆ, ನಮಗೆ ಸಹಿಸಲು ಅಸಾಧ್ಯವಾಗಿರುವಂಥ ಯಾವುದೇ ಪರೀಕ್ಷೆಗೆ ಗುರಿಯಾಗುವಂತೆ ಯೆಹೋವನು ಅನುಮತಿಸುವುದಿಲ್ಲ. ನಾವು ಯೆಹೋವನಲ್ಲಿ ಭರವಸೆಯಿಟ್ಟರೆ, ತಪ್ಪಿಸಿಕೊಳ್ಳುವ ಮಾರ್ಗವನ್ನು ಆತನು ಸಿದ್ಧಮಾಡಿಕೊಡುವನು ಮತ್ತು ಹೀಗೆ ನಾವು ಆತನ ಮಹಿಮೆಯನ್ನು ಪ್ರತಿಬಿಂಬಿಸುತ್ತಾ ಮುಂದುವರಿಯುವಂತೆ ನಮ್ಮನ್ನು ಶಕ್ತಗೊಳಿಸುತ್ತಾನೆ—1 ಕೊರಿಂಥ 10:13.
15. ತಾಳಿಕೊಳ್ಳುವಂತೆ ನಮಗೇನು ಸಹಾಯಮಾಡುತ್ತದೆ?
15 ನಮ್ಮ ಶುಶ್ರೂಷೆಯಲ್ಲಿ ತಾಳಿಕೊಳ್ಳುವುದು ದೇವರಾತ್ಮವು ನಮ್ಮ ಮೇಲಿದೆ ಎಂಬುದಕ್ಕೆ ಸಾಕ್ಷ್ಯವನ್ನು ಕೊಡುತ್ತದೆ. ದೃಷ್ಟಾಂತಕ್ಕೆ: ಒಂದು ನಿರ್ದಿಷ್ಟ ವಿಧದ ಬ್ರೆಡ್ ಅನ್ನು ಮನೆಯಿಂದ ಮನೆಗೆ ಹೋಗಿ ಉಚಿತವಾಗಿ ವಿತರಿಸುವಂತೆ ನಿಮ್ಮನ್ನು ಯಾರೊ ಕೇಳಿಕೊಳ್ಳುತ್ತಾರೆ ಎಂದಿಟ್ಟುಕೊಳ್ಳಿ. ಇದನ್ನು ನಿಮ್ಮ ಸ್ವಂತ ಖರ್ಚಿನಲ್ಲಿ ಮತ್ತು ನಿಮ್ಮ ಸ್ವಂತ ಸಮಯದಲ್ಲಿ ಮಾಡುವಂತೆ ಹೇಳಲಾಗುತ್ತದೆ. ಆದರೆ ನೀವು ಕೊಡುತ್ತಿರುವ ಈ ಬ್ರೆಡ್ ಅನ್ನು ಕೆಲವೇ ಮಂದಿ ಇಷ್ಟಪಡುತ್ತಾರೆಂದು ನಿಮಗೆ ನಂತರ ತಿಳಿದುಬರುತ್ತದೆ; ಇದನ್ನು ವಿತರಿಸಲು ನೀವು ಮಾಡುವ ಪ್ರಯತ್ನಗಳನ್ನು ಕೆಲವರು ವಿರೋಧಿಸುತ್ತಾರೆ ಸಹ. ಇಂಥ ಒಂದು ಕೆಲಸವನ್ನು ನೀವು ತಿಂಗಳು ತಿಂಗಳು, ವರ್ಷವರ್ಷ ಮಾಡುತ್ತಾ ಮುಂದುವರಿಯುವಿರೆಂದು ನೆನಸುತ್ತೀರೊ? ಬಹುಶಃ ಇಲ್ಲ. ಆದರೆ ನಿಮ್ಮ ಸ್ವಂತ ಸಮಯ ಮತ್ತು ಸ್ವಂತ ಖರ್ಚಿನಲ್ಲಿ ಸುವಾರ್ತೆಯನ್ನು ವರ್ಷಗಟ್ಟಲೆ ಸಮಯ ಬಹುಶಃ ದಶಕಗಳ ಸಮಯದಿಂದ ಘೋಷಿಸುವ ಮೂಲಕ ವಾಸ್ತವದಲ್ಲಿ ನೀವಿದನ್ನೇ ಮಾಡಿರುತ್ತೀರಿ. ಏಕೆ? ನೀವು ಯೆಹೋವನನ್ನು ಪ್ರೀತಿಸುತ್ತಿರುವುದರಿಂದ ಮತ್ತು ತಾಳಿಕೊಳ್ಳುವಂತೆ ನೀವು ಮಾಡುತ್ತಿರುವ ಪ್ರಯತ್ನಗಳನ್ನು ಆಶೀರ್ವದಿಸುವ ಮೂಲಕ ಆತನು ನಿಮಗೆ ಸಹಾಯಮಾಡಿರುವುದರಿಂದಲೇ ಅಲ್ಲವೇ? ಖಂಡಿತವಾಗಿಯೂ ಹೌದು!
ಸ್ಮರಿಸಲ್ಪಡಲಿರುವ ಒಂದು ಕೆಲಸ
16. ನಮ್ಮ ಶುಶ್ರೂಷೆಯಲ್ಲಿ ತಾಳಿಕೊಳ್ಳುವುದರಿಂದ ನಮಗೂ ನಮಗೆ ಕಿವಿಗೊಡುವವರಿಗೂ ಏನು ಪ್ರಯೋಜನವಿದೆ?
16 ಹೊಸ ಒಡಂಬಡಿಕೆಯ ಶುಶ್ರೂಷೆಯು ಸರಿಸಾಟಿಯಿಲ್ಲದ ಒಂದು ವರದಾನವಾಗಿದೆ. (2 ಕೊರಿಂಥ 4:7) ಭೂಗೋಳದಾದ್ಯಂತ ಬೇರೆ ಕುರಿಗಳು ನಡೆಸುತ್ತಿರುವ ಕ್ರೈಸ್ತ ಶುಶ್ರೂಷೆಯು ಅದೇ ರೀತಿಯಲ್ಲಿ ಒಂದು ನಿಕ್ಷೇಪದಂತಿದೆ. ನಿಮ್ಮ ಶುಶ್ರೂಷೆಯಲ್ಲಿ ನೀವು ತಾಳಿಕೊಳ್ಳುತ್ತಾ ಮುಂದುವರಿಯುವಾಗ, ಪೌಲನು ತಿಮೊಥೆಯನಿಗೆ ಬರೆದಂತೆ ನೀವು, ‘ನಿಮ್ಮನ್ನೂ ನಿಮ್ಮ ಉಪದೇಶ ಕೇಳುವವರನ್ನೂ ರಕ್ಷಿಸ’ಸಾಧ್ಯವಿದೆ. (1 ತಿಮೊಥೆಯ 4:16) ಇದರರ್ಥವೇನೆಂದು ಯೋಚಿಸಿರಿ. ನೀವು ಸಾರುವ ಸುವಾರ್ತೆಯು, ಇತರರಿಗೆ ಸದಾ ಜೀವಿಸುವ ಅವಕಾಶವನ್ನು ಕೊಡುತ್ತದೆ. ನೀವು ಯಾರಿಗೆ ಆಧ್ಯಾತ್ಮಿಕ ಸಹಾಯವನ್ನು ಕೊಡುತ್ತೀರೊ ಅವರೊಂದಿಗೆ ಸ್ನೇಹದ ಬಲವಾದ ಬಂಧವನ್ನು ಬೆಸೆಯಬಲ್ಲಿರಿ. ದೇವರ ಬಗ್ಗೆ ಕಲಿಯುವಂತೆ ನೀವು ಯಾರಿಗೆ ಸಹಾಯಮಾಡಿದ್ದೀರೊ ಅವರೊಂದಿಗೆ ಪರದೈಸಿನಲ್ಲಿ ನಿತ್ಯಕ್ಕೂ ಜೀವಿಸುವುದು ಎಂಥ ಆನಂದವಾಗಿರುವುದು ಎಂಬುದನ್ನು ಊಹಿಸಿಕೊಳ್ಳಿರಿ! ಅವರಿಗೆ ಸಹಾಯಮಾಡಲು ನೀವು ಮಾಡಿರುವ ಪ್ರಯತ್ನಗಳನ್ನು ಅವರು ಖಂಡಿತವಾಗಿಯೂ ಮರೆಯದಿರುವರು. ತೃಪ್ತಿಯನ್ನು ಕೊಡುವಂಥ ಎಷ್ಟು ಒಳ್ಳೇ ಕಾರಣ!
17. ನಾವಿರುವ ಈ ಸಮಯವು ಮಾನವ ಇತಿಹಾಸದಲ್ಲೇ ಒಂದು ಅಪೂರ್ವ ಸಮಯಾವಧಿಯಾಗಿದೆ ಏಕೆ?
17 ನೀವು ಮಾನವ ಇತಿಹಾಸದಲ್ಲೇ ಅಪೂರ್ವವಾದ ಸಮಯಾವಧಿಯಲ್ಲಿ ಜೀವಿಸುತ್ತಿದ್ದೀರಿ. ದೇವರಿಂದ ದೂರಸರಿದಿರುವ ಒಂದು ಲೋಕದಲ್ಲಿ ಸುವಾರ್ತೆಯನ್ನು ಪುನಃ ಎಂದಿಗೂ ಸಾರಲಾಗುವುದಿಲ್ಲ. ನೋಹನೂ ಅಂಥ ಒಂದು ಲೋಕದಲ್ಲಿ ಜೀವಿಸಿದನು, ಮತ್ತು ಅದು ಗತಿಸಿಹೋಗುವುದನ್ನು ನೋಡಿದನು. ನಾವೆಯನ್ನು ಕಟ್ಟುವ ಮೂಲಕ ದೇವರ ಚಿತ್ತವನ್ನು ನಂಬಿಗಸ್ತಿಕೆಯಿಂದ ಪೂರೈಸಿದ್ದೇನೆಂದು ತಿಳಿದು ಅವನೆಷ್ಟು ಹರ್ಷಗೊಂಡಿರಬೇಕು. ಇದರಿಂದಾಗಿ ಅವನ ಮತ್ತು ಅವನ ಕುಟುಂಬದ ಜೀವರಕ್ಷಣೆ ಆಯಿತು. (ಇಬ್ರಿಯ 11:7) ನಿಮಗೂ ಅಂಥ ಆನಂದವಿರಬಲ್ಲದು. ಹೊಸ ಲೋಕದಲ್ಲಿರುವಾಗ ನೀವು, ರಾಜ್ಯಾಭಿರುಚಿಗಳನ್ನು ಪ್ರವರ್ಧಿಸಲು ನಿಮ್ಮಿಂದಾದುದೆಲ್ಲವನ್ನು ಮಾಡಿದ್ದೀರೆಂಬ ಅರಿವಿನೊಂದಿಗೆ ಈ ಕಡೇ ದಿವಸಗಳಲ್ಲಿನ ನಿಮ್ಮ ಚಟುವಟಿಕೆಯ ಕಡೆಗೆ ಹಿನ್ನೋಟ ಬೀರುವಾಗ ನಿಮಗೆ ಹೇಗನಿಸುವುದೆಂಬುದರ ಕುರಿತು ಸ್ವಲ್ಪ ಯೋಚಿಸಿ!
18. ಯೆಹೋವನು ತನ್ನ ಸೇವಕರಿಗೆ ಯಾವ ಆಶ್ವಾಸನೆ ಮತ್ತು ಉತ್ತೇಜನವನ್ನು ಕೊಡುತ್ತಾನೆ?
18 ಹಾಗಾದರೆ ನಾವು ದೇವರ ಮಹಿಮೆಯನ್ನು ಪ್ರತಿಬಿಂಬಿಸುತ್ತಾ ಇರೋಣ. ನಾವು ಹೀಗೆ ಮಾಡಿದರೆ, ಇದನ್ನು ನಾವು ಸದಾಕಾಲವೂ ಸ್ಮರಿಸುತ್ತಿರುವೆವು. ಯೆಹೋವನು ಸಹ ನಮ್ಮ ಕೆಲಸಗಳನ್ನು ಸ್ಮರಣೆಯಲ್ಲಿಡುತ್ತಾನೆ. ಬೈಬಲ್ ಈ ಉತ್ತೇಜನದ ಮಾತುಗಳನ್ನು ಹೇಳುತ್ತದೆ: “ನೀವು ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ. ನೀವು ಉಪಚಾರಮಾಡುವದರಲ್ಲಿ ಯಾವ ಆಸಕ್ತಿಯನ್ನು ತೋರಿಸಿದ್ದೀರೋ ನಿಮ್ಮ ನಿರೀಕ್ಷೆ ದೃಢಮಾಡಿಕೊಂಡು ಕಡೇ ತನಕ ಹಿಡಿಯುವದರಲ್ಲಿಯೂ ನಿಮ್ಮಲ್ಲಿ ಪ್ರತಿಯೊಬ್ಬರು ಅದೇ ಆಸಕ್ತಿಯನ್ನು ತೋರಿಸಬೇಕೆಂದು ಅಪೇಕ್ಷಿಸುತ್ತೇವೆ. ನೀವು ಮಂದಮತಿಗಳಾಗಿರದೆ ಯಾರು ವಾಗ್ದಾನಗಳನ್ನು ನಂಬಿ ಅವುಗಳ ಫಲಕ್ಕೋಸ್ಕರ ಬಹು ದಿವಸಗಳವರೆಗೂ ಕಾದಿದ್ದು ಆ ಫಲವನ್ನು ಹೊಂದುತ್ತಾರೋ ಅವರನ್ನು ಅನುಸರಿಸುವವರಾಗಬೇಕೆಂದು ಕೋರುತ್ತೇನೆ.”—ಇಬ್ರಿಯ 6:10-12.
[ಪಾದಟಿಪ್ಪಣಿ]
a Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
ನೀವು ವಿವರಿಸಬಲ್ಲಿರೊ?
• ಕ್ರೈಸ್ತರು ದೇವರ ಮಹಿಮೆಯನ್ನು ಹೇಗೆ ಪ್ರತಿಬಿಂಬಿಸುತ್ತಾರೆ?
• ದೇವರ ಜನರನ್ನು ಮೌನಗೊಳಿಸುವ ಪ್ರಯತ್ನದಲ್ಲಿ ಸೈತಾನನು ಉಪಯೋಗಿಸುವ ಕೆಲವು ತಂತ್ರಗಳು ಯಾವುವು?
• ದೇವರಾತ್ಮವು ನಮ್ಮ ಮೇಲಿದೆ ಎಂಬುದಕ್ಕೆ ಯಾವ ಸಾಕ್ಷ್ಯವಿದೆ?
[ಪುಟ 15ರಲ್ಲಿರುವ ಚಿತ್ರ]
ಮೋಶೆಯ ಮುಖವು ಮಹಿಮೆಯನ್ನು ಪ್ರತಿಬಿಂಬಿಸಿತು
[ಪುಟ 16, 17ರಲ್ಲಿರುವ ಚಿತ್ರಗಳು]
ನಾವು ನಮ್ಮ ಶುಶ್ರೂಷೆಯಲ್ಲಿ ದೇವರ ಮಹಿಮೆಯನ್ನು ಪ್ರತಿಬಿಂಬಿಸುತ್ತೇವೆ