ಬೈಬಲ್ ಕೊಡುವ ಉತ್ತರ
ದೇವರ ವ್ಯಕ್ತಿತ್ವ ಎಂಥದ್ದು?
ದೇವರು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆಕಾಶ, ಭೂಮಿ ಮತ್ತು ಜೀವವಿರುವ ಪ್ರತಿಯೊಂದನ್ನೂ ಸೃಷ್ಟಿ ಮಾಡಿದ್ದಾನೆ. ಆದರೆ ಆತನನ್ನು ಯಾರೂ ಸೃಷ್ಟಿಸಲಿಲ್ಲ. ಆತನಿಗೆ ಆರಂಭ ಅನ್ನುವುದು ಇಲ್ಲ. (ಕೀರ್ತನೆ 90:2) ತಾನು ಯಾರು, ತನ್ನ ಬಗ್ಗೆ ಸತ್ಯ ಏನು ಅಂತ ಮನುಷ್ಯರು ತಿಳಿದುಕೊಳ್ಳಬೇಕು ಎನ್ನುವುದು ದೇವರ ಆಸೆ.—ಅಪೊಸ್ತಲರ ಕಾರ್ಯಗಳು 17:24-27 ಓದಿ.
ದೇವರು ಒಬ್ಬ ವ್ಯಕ್ತಿ. ಆತನಿಗೊಂದು ಹೆಸರಿದೆ. ಆತನ ಪರಿಚಯ ಮಾಡಿಕೊಳ್ಳಲು ಸಾಧ್ಯವಿದೆ. ಸೃಷ್ಟಿಕಾರ್ಯಗಳನ್ನು ಅವಲೋಕಿಸುವುದರಿಂದ ಆತನ ಕೆಲವು ಗುಣಗಳನ್ನು ನಾವು ತಿಳಿದುಕೊಳ್ಳಬಹುದು. (ರೋಮನ್ನರಿಗೆ 1:20) ಆದರೆ ಆತನನ್ನು ಚೆನ್ನಾಗಿ ತಿಳಿದುಕೊಳ್ಳಬೇಕೆಂದರೆ ಬೈಬಲನ್ನು ಕಲಿಯಲೇಬೇಕು. ಅದು ನಮಗೆ ದೇವರ ಪ್ರೀತಿಭರಿತ ವ್ಯಕ್ತಿತ್ವದ ಒಳ್ಳೇ ಪರಿಚಯ ಮಾಡಿಕೊಡುತ್ತದೆ.—ಕೀರ್ತನೆ 103:7-10 ಓದಿ.
ಅನ್ಯಾಯದ ಬಗ್ಗೆ ದೇವರಿಗೆ ಹೇಗನಿಸುತ್ತದೆ?
ಸೃಷ್ಟಿಕರ್ತನಾದ ಯೆಹೋವ ಅನ್ಯಾಯದ ಕೆಲಸಗಳನ್ನು ದ್ವೇಷಿಸುತ್ತಾನೆ. (ಧರ್ಮೋಪದೇಶಕಾಂಡ 25:16) ಆತನು ಮಾನವರನ್ನು ತನ್ನ ಸ್ವರೂಪದಲ್ಲೇ ಸೃಷ್ಟಿಸಿರುವ ಕಾರಣ ನಮ್ಮಲ್ಲಿ ಹೆಚ್ಚಿನವರು ಅನ್ಯಾಯವನ್ನು ದ್ವೇಷಿಸುತ್ತೇವೆ. ಲೋಕದಲ್ಲಿ ನಡೆಯುತ್ತಿರುವ ಅನ್ಯಾಯಕ್ಕೆ ದೇವರು ಕಾರಣನಲ್ಲ. ಆಯ್ಕೆ ಅಥವಾ ನಿರ್ಣಯ ಮಾಡುವ ಸ್ವಾತಂತ್ರ್ಯವನ್ನು ಆತನು ಮಾನವರಿಗೆ ಕೊಟ್ಟಿದ್ದಾನೆ. ಆದರೆ ಅನೇಕರು ಅದನ್ನು ಸರಿಯಾಗಿ ಬಳಸದೆ ಅನ್ಯಾಯವನ್ನೇ ಮಾಡುತ್ತಾರೆ. ಇದರಿಂದ ಯೆಹೋವನು ‘ಹೃದಯದಲ್ಲಿ ನೊಂದುಕೊಳ್ಳುತ್ತಾನೆ.’—ಆದಿಕಾಂಡ 6:5, 6; ಧರ್ಮೋಪದೇಶಕಾಂಡ 32:4, 5 ಓದಿ.
ಯೆಹೋವನು ನ್ಯಾಯವನ್ನು ಮೆಚ್ಚುವವನು. ಅನ್ಯಾಯವನ್ನು ಸಹಿಸಿಕೊಂಡೇ ಇರುವುದಿಲ್ಲ. (ಕೀರ್ತನೆ 37:28, 29) ಆತನು ಶೀಘ್ರದಲ್ಲೇ ಎಲ್ಲ ಅನ್ಯಾಯವನ್ನು ಅಳಿಸಿಹಾಕುತ್ತಾನೆ ಅಂತ ಬೈಬಲ್ ಹೇಳುತ್ತದೆ.—2 ಪೇತ್ರ 3:7-9, 13 ಓದಿ. (w14-E 01/01)
ದೇವರು ಶೀಘ್ರದಲ್ಲೇ ಎಲ್ಲರಿಗೂ ನ್ಯಾಯ ಒದಗಿಸುತ್ತಾನೆ ಅಂತ ಬೈಬಲ್ ಮಾತು ಕೊಡುತ್ತದೆ