ದಾಂಪತ್ಯ ಬಲಗೊಳಿಸಿರಿ ಸಂತೋಷದಿಂದ ಬಾಳಿರಿ
“ಯೆಹೋವನು ಮನೇ ಕಟ್ಟದಿದ್ದರೆ ಅದನ್ನು ಕಟ್ಟುವವರು ಕಷ್ಟಪಡುವದು ವ್ಯರ್ಥ.”—ಕೀರ್ತ. 127:1ಎ.
1-3. ದಂಪತಿಗಳು ಯಾವ ಸವಾಲುಗಳನ್ನು ಎದುರಿಸುತ್ತಾರೆ? (ಶೀರ್ಷಿಕೆ ಚಿತ್ರ ನೋಡಿ.)
“ಮನಃಪೂರ್ವಕ ಪ್ರಯತ್ನ ಹಾಕಿ, ವಿವಾಹಜೀವನವನ್ನು ಸಫಲಗೊಳಿಸಲು ನಿಮಗೆ ಮನಸ್ಸಿದೆಯೆಂದು ತೋರಿಸಿದರೆ ಯೆಹೋವನು ಖಂಡಿತ ಆಶೀರ್ವದಿಸುವನು.” 38 ವರ್ಷಗಳ ಸುಖ ಸಂಸಾರ ನಡೆಸಿರುವ ಗಂಡನೊಬ್ಬನು ಹೇಳಿದ ಮಾತುಗಳಿವು. ಗಂಡಹೆಂಡತಿಯರು ಜೊತೆಯಾಗಿದ್ದು ಸಂತೋಷದಿಂದಿರಲು, ಕಷ್ಟಕಾಲದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿರಲು ಖಂಡಿತ ಸಾಧ್ಯ.—ಜ್ಞಾನೋ. 18:22.
2 ದಾಂಪತ್ಯದಲ್ಲಿ ಕೆಲವು ತೊಂದರೆಗಳು ಎದುರಾಗುವುದು ಸಾಮಾನ್ಯ. ಬೈಬಲ್ ಇದನ್ನು “ಶರೀರದಲ್ಲಿ ಸಂಕಟ” ಎಂದು ಕರೆಯುತ್ತದೆ. (1 ಕೊರಿಂ. 7:28) ಯಾಕೆ? ದಿನನಿತ್ಯದ ಸಮಸ್ಯೆಗಳು ವಿವಾಹಬಂಧದ ಮೇಲೆ ಒತ್ತಡ ಹಾಕುತ್ತವೆ. ಗಂಡಹೆಂಡತಿಯರು ಅಪರಿಪೂರ್ಣರಲ್ಲವೇ? ಹಾಗಾಗಿ ಒಮ್ಮೊಮ್ಮೆ ಒಬ್ಬರಿನ್ನೊಬ್ಬರ ಮನನೋಯಿಸುತ್ತಾರೆ. ಸಂಗಾತಿಗೆ ಏನನ್ನು ಹೇಳಬೇಕೊ ಅದನ್ನು ಸ್ಪಷ್ಟವಾಗಿ, ಸರಿಯಾಗಿ ಹೇಳುವುದಿಲ್ಲ. ಇದರಿಂದಾಗಿ ಸಮಸ್ಯೆಗಳು ಏಳುತ್ತವೆ. (ಯಾಕೋ. 3:2, 5, 8) ಇನ್ನೂ ಅನೇಕ ದಂಪತಿಗಳು ಉದ್ಯೋಗಕ್ಕೆ ತುಂಬ ಸಮಯ, ಶಕ್ತಿ ಕೊಡಬೇಕಾಗುತ್ತದೆ. ಜೊತೆಗೆ ಮಕ್ಕಳನ್ನೂ ಬೆಳೆಸುವ ಜವಾಬ್ದಾರಿ ಇರುತ್ತದೆ. ಈ ಎಲ್ಲ ಒತ್ತಡ, ದಣಿವಿನ ಮಧ್ಯೆ ಅವರಿಗೆ ದಾಂಪತ್ಯವನ್ನು ಬಲಪಡಿಸಲಿಕ್ಕಾಗಿ ಸಮಯ ಕೊಡಲು ತುಂಬ ಕಷ್ಟವಾಗುತ್ತದೆ. ಆರ್ಥಿಕ ಮುಗ್ಗಟ್ಟು, ಕಾಯಿಲೆ, ಇತರ ಕಷ್ಟಗಳಿಂದಾಗಿ ಪರಸ್ಪರರ ಮೇಲಿನ ಪ್ರೀತಿ, ಗೌರವ ನಿಧಾನವಾಗಿ ಕಮ್ಮಿಯಾಗಬಹುದು. ತುಂಬ ಬಲವಾದದ್ದೆಂದು ತೋರುವ ದಾಂಪತ್ಯವನ್ನು ಸಹ “ಶರೀರಭಾವದ ಕಾರ್ಯಗಳು” ಅಂದರೆ ಲೈಂಗಿಕ ಅನೈತಿಕತೆ, ಬಂಡುತನ, ಹಗೆತನ, ಜಗಳ, ಹೊಟ್ಟೆಕಿಚ್ಚು, ಸಿಟ್ಟು ಇವೆಲ್ಲ ಮುರಿದುಹಾಕಬಲ್ಲವು.—ಗಲಾ. 5:19-21.
3 ಇಷ್ಟೆಲ್ಲ ಸಾಲದು ಎಂಬಂತೆ ಸನ್ನಿವೇಶವನ್ನು ಇನ್ನಷ್ಟು ಕೆಡಿಸುವ ಸಂಗತಿಯೇನೆಂದರೆ, “ಕಡೇ ದಿವಸಗಳಲ್ಲಿ” ಜನರು ಹೆಚ್ಚಾಗಿ ಸ್ವಾರ್ಥಿಗಳೂ, ದೇವರ ಮೇಲೆ ಗೌರವ ಇಲ್ಲದವರೂ ಆಗಿದ್ದಾರೆ. ಈ ಮನೋಭಾವಗಳು ವಿವಾಹಜೀವನಕ್ಕೆ ವಿಷದಂತಿವೆ. (2 ತಿಮೊ. 3:1-4) ಜೊತೆಗೆ, ಒಬ್ಬ ಅಪಾಯಕಾರಿ ಶತ್ರು ವಿವಾಹಬಂಧಗಳನ್ನು ಮುರಿಯಲು ಪಣತೊಟ್ಟಿದ್ದಾನೆ. ಅಪೊಸ್ತಲ ಪೇತ್ರನು ಎಚ್ಚರಿಸುವುದು: “ನಿಮ್ಮ ವಿರೋಧಿಯಾಗಿರುವ ಪಿಶಾಚನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.”—1 ಪೇತ್ರ 5:8; ಪ್ರಕ. 12:12.
4. ಬಲವಾದ, ಸಂತೋಷಭರಿತ ದಾಂಪತ್ಯ ಹೇಗೆ ಸಾಧ್ಯ?
4 ಜಪಾನಿನಲ್ಲಿರುವ ಒಬ್ಬ ಗಂಡ ಒಪ್ಪಿಕೊಳ್ಳುವುದು: “ನನಗೆ ಹಣಕಾಸಿನ ಸಮಸ್ಯೆಯಿತ್ತು. ನಾನು ಹೆಂಡತಿ ಜೊತೆ ಸರಿಯಾಗಿ ಮಾತಾಡುತ್ತಿರಲಿಲ್ಲ. ಹಾಗಾಗಿ ಅವಳಿಗೂ ತುಂಬ ಒತ್ತಡವಿತ್ತು. ಅದೂ ಅಲ್ಲದೆ ಅವಳಿಗೆ ಇತ್ತೀಚೆಗೆ ಗಂಭೀರ ಆರೋಗ್ಯ ಸಮಸ್ಯೆಗಳೂ ಶುರುವಾದವು. ಒಮ್ಮೊಮ್ಮೆ ಈ ಎಲ್ಲ ಒತ್ತಡದಿಂದಾಗಿ ನಮ್ಮ ಮಧ್ಯೆ ಜಗಳ ಆಗುತ್ತಿತ್ತು.” ವಿವಾಹಜೀವನದಲ್ಲಿ ಕೆಲವು ಸವಾಲುಗಳು ಇದ್ದೇ ಇರುವವು. ಆದರೆ ಅವುಗಳನ್ನು ಜಯಿಸಬಲ್ಲೆವು. ಯೆಹೋವನು ಕೊಡುವ ಸಹಾಯದಿಂದ ದಂಪತಿಗಳು ತಮ್ಮ ಬಂಧವನ್ನು ಬಲವಾಗಿರಿಸಿ, ಸಂತೋಷವಾಗಿರಿಸಬಲ್ಲರು. (ಕೀರ್ತನೆ 127:1 ಓದಿ.) ಬಲವಾದ ಮತ್ತು ಶಾಶ್ವತವಾದ ದಾಂಪತ್ಯವನ್ನು ಕಟ್ಟಲು 5 ವಿಧಗಳನ್ನು ಚರ್ಚಿಸೋಣ. ಅದನ್ನು ಬಲವಾಗಿರಿಸಲು ಪ್ರೀತಿ ಏಕೆ ಅತ್ಯಗತ್ಯ ಎಂಬದನ್ನೂ ಪರೀಕ್ಷಿಸೋಣ.
ನಿಮ್ಮ ದಾಂಪತ್ಯದಲ್ಲಿ ಯೆಹೋವನನ್ನು ಒಳಗೂಡಿಸಿ
5, 6. ಗಂಡಹೆಂಡತಿ ತಮ್ಮ ದಾಂಪತ್ಯದಲ್ಲಿ ಯೆಹೋವನನ್ನು ಒಳಗೂಡಿಸಲು ಏನು ಮಾಡಬಹುದು?
5 ಗಂಡಹೆಂಡತಿ ಯೆಹೋವನಿಗೆ ನಿಷ್ಠೆ, ಅಧೀನತೆ ತೋರಿಸಿದರೆ ಅದು ದಾಂಪತ್ಯಕ್ಕೆ ಭದ್ರ ತಳಪಾಯ ಆಗಿರುತ್ತದೆ. (ಪ್ರಸಂಗಿ 4:12 ಓದಿ.) ದೇವರು ಕೊಡುವ ಪ್ರೀತಿಭರಿತ ಮಾರ್ಗದರ್ಶನವನ್ನು ಪಾಲಿಸುವ ಮೂಲಕ ದೇವರನ್ನು ದಾಂಪತ್ಯದಲ್ಲಿ ಒಳಗೂಡಿಸುತ್ತಾರೆ. “ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು” ಎನ್ನುತ್ತದೆ ಬೈಬಲ್. (ಯೆಶಾ. 30:20, 21) ಇಂದು ಯೆಹೋವನ ಮಾತು ದಂಪತಿಗಳಿಗೆ ಕೇಳಿಸಬೇಕಾದರೆ ಅವರು ದೇವರ ವಾಕ್ಯವನ್ನು ಜೊತೆಯಾಗಿ ಓದಬೇಕು. (ಕೀರ್ತ. 1:1-3) ಆನಂದಕರವಾದ, ಭಕ್ತಿಹೆಚ್ಚಿಸುವ ಕುಟುಂಬ ಆರಾಧನೆಯನ್ನು ತಪ್ಪದೇ ಮಾಡುವ ಮೂಲಕ ದಾಂಪತ್ಯವನ್ನು ಬಲಪಡಿಸಬಹುದು. ಅಲ್ಲದೆ ದಿನಾಲೂ ಒಟ್ಟಿಗೆ ಪ್ರಾರ್ಥನೆ ಮಾಡುವ ಮೂಲಕವೂ ಸೈತಾನನ ಲೋಕದಿಂದ ಬರುವ ದಾಳಿಗಳನ್ನು ಎದುರಿಸಸಾಧ್ಯವಿದೆ.
ಗಂಡಹೆಂಡತಿ ಜೊತೆಯಾಗಿ ಯೆಹೋವನ ಆರಾಧನೆ ಮಾಡುವಾಗ ದೇವರಿಗೂ ಒಬ್ಬರಿಗೊಬ್ಬರಿಗೂ ಆಪ್ತರಾಗುತ್ತಾರೆ. ಅವರ ದಾಂಪತ್ಯದಲ್ಲೂ ಸಂತೋಷವಿರುತ್ತದೆ (ಪ್ಯಾರ 5, 6 ನೋಡಿ)
6 ಜರ್ಮನಿಯ ಗರ್ಹಾರ್ಡ್ ಎಂಬವರು ಹೇಳುವುದು: “ಕೆಲವು ಸಲ ಸಮಸ್ಯೆಗಳು, ಮನಸ್ತಾಪಗಳು ನಮ್ಮ ಸಂತೋಷಕ್ಕೆ ತಡೆ ತರುತ್ತವೆ. ಆಗೆಲ್ಲ ತಾಳ್ಮೆ ತೋರಿಸಲಿಕ್ಕೆ, ಕ್ಷಮಿಸಲಿಕ್ಕೆ ದೇವರ ವಾಕ್ಯದಲ್ಲಿರುವ ಸಲಹೆಗಳೇ ಸಹಾಯ ಮಾಡಿವೆ.” ಯಶಸ್ವೀ ದಾಂಪತ್ಯಕ್ಕೆ ಈ ಎರಡು ಗುಣಗಳು ಬೇಕೇ ಬೇಕು ಎಂದವರು ಹೇಳುತ್ತಾರೆ. ಗಂಡಹೆಂಡತಿ ಜೊತೆಯಾಗಿ ದೇವರ ಆರಾಧನೆ ಮಾಡುವ ಮೂಲಕ ಆತನನ್ನು ತಮ್ಮ ದಾಂಪತ್ಯದಲ್ಲಿ ಒಳಗೂಡಿಸಬೇಕು. ಆಗ ಅವರು ಯೆಹೋವನಿಗೆ ಹತ್ತಿರವಾಗುತ್ತಾರೆ ಮತ್ತು ಅವರಿಬ್ಬರ ಸಂಬಂಧವೂ ಬಲವಾಗುತ್ತದೆ.
ಗಂಡ—ಕುಟುಂಬದ ಪ್ರೀತಿಯ ತಲೆ
7. ಹೆಂಡತಿ ಜೊತೆ ಗಂಡ ಹೇಗೆ ನಡೆದುಕೊಳ್ಳಬೇಕು?
7 ಗಂಡನು ಕುಟುಂಬದಲ್ಲಿ ಮುಂದಾಳತ್ವ ವಹಿಸುವ ರೀತಿಯಿಂದ ಬಲವಾದ, ಸಂತೋಷದ ದಾಂಪತ್ಯ ಕಟ್ಟಲು ಸಾಧ್ಯ. “ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ” ಎನ್ನುತ್ತದೆ ಬೈಬಲ್. (1 ಕೊರಿಂ. 11:3) ಇದರ ಅರ್ಥವೇನು? ಯೇಸು ತನ್ನ ಶಿಷ್ಯರೊಂದಿಗೆ ಯಾವತ್ತೂ ಕ್ರೂರವಾಗಿ, ಕಠೋರವಾಗಿ ವರ್ತಿಸಲಿಲ್ಲ. ಯಾವಾಗಲೂ ಪ್ರೀತಿಯಿಂದ, ದಯೆಯಿಂದ, ನ್ಯಾಯವಾಗಿ, ಸೌಮ್ಯವಾಗಿ, ದೀನತೆಯಿಂದ ನಡೆದುಕೊಂಡನು. ಗಂಡ ಸಹ ಇದೇ ರೀತಿ ಹೆಂಡತಿ ಜೊತೆ ನಡೆದುಕೊಳ್ಳಬೇಕು.—ಮತ್ತಾ. 11:28-30.
8. ಗಂಡ ತನ್ನ ಹೆಂಡತಿಯ ಪ್ರೀತಿ, ಗೌರವವನ್ನು ಹೇಗೆ ಸಂಪಾದಿಸಿಕೊಳ್ಳಬಹುದು?
8 ಕ್ರೈಸ್ತ ಗಂಡನು ಹೆಂಡತಿಗೆ ‘ನೀನು ನನಗೆ ಗೌರವ ತೋರಿಸಲೇಬೇಕು’ ಎಂದು ಹಕ್ಕು ಚಲಾಯಿಸುವುದಿಲ್ಲ. ಬದಲಾಗಿ ಅವಳೊಂದಿಗೆ “ಜ್ಞಾನಾನುಸಾರವಾಗಿ” ಅಂದರೆ ಪರಿಗಣನೆ ತೋರಿಸುತ್ತಾ ‘ಬಾಳುವೆ ಮಾಡುತ್ತಾನೆ ಮತ್ತು ದುರ್ಬಲ ಪಾತ್ರೆಗೋ ಎಂಬಂತೆ ಗೌರವ ಸಲ್ಲಿಸು’ತ್ತಾನೆ. (1 ಪೇತ್ರ 3:7) ನಾಲ್ಕು ಜನರ ಮುಂದೆ ಆಗಲಿ ಮನೆಯಲ್ಲೇ ಆಗಲಿ ಅವನು ಹೆಂಡತಿಯೊಟ್ಟಿಗೆ ಗೌರವದಿಂದ ಮಾತಾಡಬೇಕು, ಕನಿಕರ ತೋರಿಸಬೇಕು. ತನ್ನ ಹೆಂಡತಿ ತನಗೆ ಅಮೂಲ್ಯಳೆಂದು ಗಂಡ ಆಕೆಯೊಟ್ಟಿಗೆ ಮಾತಾಡುವ ಹಾಗೂ ನಡೆದುಕೊಳ್ಳುವ ರೀತಿಯಿಂದ ತೋರಿಸಬೇಕು. (ಜ್ಞಾನೋ. 31:29) ಹೀಗೆ ಅವನು ಹೆಂಡತಿ ಜೊತೆ ಪ್ರೀತಿಯಿಂದ ನಡಕೊಳ್ಳುವಾಗ ಆಕೆ ಅವನನ್ನು ಪ್ರೀತಿಸುತ್ತಾಳೆ, ಗೌರವಿಸುತ್ತಾಳೆ. ಯೆಹೋವನು ಸಹ ಅವರ ದಾಂಪತ್ಯವನ್ನು ಆಶೀರ್ವದಿಸುತ್ತಾನೆ.
ಹೆಂಡತಿ—ನಮ್ರಳು, ಅಧೀನಳು
9. ಹೆಂಡತಿ ತನ್ನ ಅಧೀನತೆಯನ್ನು ಹೇಗೆ ತೋರಿಸಬಹುದು?
9 ಯೆಹೋವನ ಮೇಲೆ ನಮಗೆ ನಿಸ್ವಾರ್ಥ ಪ್ರೀತಿ ಇದ್ದರೆ ಮತ್ತು ಅದು ಆತನ ತತ್ವಗಳ ಮೇಲೆ ಆಧರಿತವಾಗಿದ್ದರೆ ನಮ್ಮನ್ನೇ ಆತನ ‘ಪ್ರಬಲವಾದ ಹಸ್ತದ ಕೆಳಗೆ ತಗ್ಗಿಸಿಕೊಳ್ಳುವೆವು.’ (1 ಪೇತ್ರ 5:6) ಯೆಹೋವನ ಅಧಿಕಾರಕ್ಕೆ ಹೆಂಡತಿಯು ಗೌರವ ತೋರಿಸುವ ಒಂದು ಪ್ರಮುಖ ವಿಧಾನ ಗಂಡನೊಟ್ಟಿಗೆ ಸಹಕರಿಸುವುದೇ ಆಗಿದೆ. “ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ; ಇದು ಕರ್ತನಲ್ಲಿರುವವರಿಗೆ ಯೋಗ್ಯವಾಗಿದೆ” ಎನ್ನುತ್ತದೆ ಬೈಬಲ್. (ಕೊಲೊ. 3:18) ಗಂಡ ಮಾಡುವ ಕೆಲವೊಂದು ನಿರ್ಣಯಗಳು ಹೆಂಡತಿಗೆ ಇಷ್ಟ ಆಗದೇ ಇರಬಹುದು. ಆದರೆ ಆ ನಿರ್ಣಯಗಳು ದೇವರ ನಿಯಮಗಳಿಗೆ ವಿರುದ್ಧ ಆಗಿಲ್ಲದಿದ್ದರೆ ಆಕೆ ಅವುಗಳಿಗೆ ಸಹಕಾರ ನೀಡಲೇಬೇಕು.—1 ಪೇತ್ರ 3:1.
10. ಪ್ರೀತಿಯಿಂದ ತೋರಿಸುವ ಅಧೀನತೆ ಏಕೆ ಪ್ರಾಮುಖ್ಯ?
10 ಯೆಹೋವನು ಹೆಂಡತಿಗೆ ಕುಟುಂಬದಲ್ಲಿ ಗೌರವದ ಪಾತ್ರ ಕೊಟ್ಟಿದ್ದಾನೆ. ಆಕೆ ಗಂಡನಿಗೆ “ಸಹಚಾರಿಣಿ.” (ಮಲಾ. 2:14) ಗಂಡಹೆಂಡತಿ ಕುಟುಂಬಕ್ಕೆ ಸಂಬಂಧಪಟ್ಟ ನಿರ್ಣಯಗಳನ್ನು ಮಾಡುವಾಗ ಹೆಂಡತಿ ತನ್ನ ಮನಸ್ಸಲ್ಲೇನಿದೆ, ತನಗೆ ಹೇಗನಿಸುತ್ತದೆಂದು ಗೌರವದಿಂದ ಹೇಳಬೇಕು. ಆದರೆ ಗಂಡ ತಕ್ಕೊಳ್ಳುವ ನಿರ್ಣಯ ಏನೇ ಆಗಿದ್ದರೂ ಅಧೀನತೆ ತೋರಿಸಬೇಕು. ಗಂಡನು ವಿವೇಕಿ ಆಗಿದ್ದರೆ ತನ್ನ ಹೆಂಡತಿ ಹೇಳುವುದನ್ನು ಕಿವಿಗೊಟ್ಟು ಆಲಿಸುತ್ತಾನೆ. (ಜ್ಞಾನೋ. 31:10-31) ಹೆಂಡತಿ ಪ್ರೀತಿಯಿಂದ ಅಧೀನತೆ ತೋರಿಸಿದರೆ ಕುಟುಂಬದಲ್ಲಿ ಪ್ರೀತಿ, ಆನಂದ, ಸಾಮರಸ್ಯ ತುಂಬಿರುತ್ತದೆ. ಅಲ್ಲದೆ, ತಾವು ದೇವರು ಮೆಚ್ಚುವುದನ್ನೇ ಮಾಡುತ್ತಿದ್ದೇವೆಂಬ ತೃಪ್ತಿಯೂ ಗಂಡಹೆಂಡತಿಗೆ ಇರುತ್ತದೆ.—ಎಫೆ. 5:22.
ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸಿ
11. ಗಂಡಹೆಂಡತಿ ಒಬ್ಬರನ್ನೊಬ್ಬರು ಕ್ಷಮಿಸುವುದು ಏಕೆ ತುಂಬ ಅಗತ್ಯ?
11 ದಾಂಪತ್ಯ ಬಾಳಬೇಕಾದರೆ ಗಂಡಹೆಂಡತಿ ಕ್ಷಮಿಸಲು ಕಲಿಯಬೇಕು. ಅವರು “ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿ”ದ್ದರೆ ಅವರ ಬಂಧ ಇನ್ನಷ್ಟು ಗಟ್ಟಿಯಾಗುತ್ತದೆ. (ಕೊಲೊ. 3:13) ಆದರೆ ಸಂಗಾತಿಯು ಹಿಂದೆ ಮಾಡಿದಂಥ ತಪ್ಪುಗಳನ್ನು ಮರೆಯದೆ, ಎತ್ತಿ ಆಡುತ್ತಾ ಇದ್ದರೆ ಆ ಬಂಧ ದುರ್ಬಲಗೊಳ್ಳುತ್ತದೆ. ಕಟ್ಟಡಕ್ಕೆ ಬಿರುಕು ಬಂದರೆ ಅದು ಹೇಗೆ ದುರ್ಬಲಗೊಳ್ಳುತ್ತದೊ ಹಾಗೆಯೇ. ಮನಸ್ಸಲ್ಲೇ ನೋವು ಮತ್ತು ಕೋಪ ಇದ್ದರೆ ಗಂಡಹೆಂಡತಿಗೆ ಒಬ್ಬರನ್ನೊಬ್ಬರು ಕ್ಷಮಿಸಲು ತುಂಬ ಕಷ್ಟವಾಗುತ್ತದೆ. ಆದರೆ ಯೆಹೋವನು ಅವರನ್ನು ಕ್ಷಮಿಸುವಂತೆಯೇ ಗಂಡಹೆಂಡತಿ ಒಬ್ಬರನ್ನೊಬ್ಬರು ಕ್ಷಮಿಸುವಾಗ ಅವರ ದಾಂಪತ್ಯ ಹೆಚ್ಚು ಬಲಗೊಳ್ಳುತ್ತದೆ.—ಮೀಕ 7:18, 19.
12. ಪ್ರೀತಿ “ಬಹು ಪಾಪಗಳನ್ನು ಮುಚ್ಚುತ್ತದೆ” ಹೇಗೆ?
12 ನಿಜ ಪ್ರೀತಿ “ಅನ್ಯಾಯದ” ಅಥವಾ ತಪ್ಪುಗಳ “ಲೆಕ್ಕವನ್ನು ಇಟ್ಟುಕೊಳ್ಳುವುದಿಲ್ಲ.” ಬದಲಿಗೆ “ಬಹು ಪಾಪಗಳನ್ನು ಮುಚ್ಚುತ್ತದೆ.” (1 ಕೊರಿಂ. 13:4, 5; 1 ಪೇತ್ರ 4:8 ಓದಿ.) ಹಾಗಾಗಿ ನಮಗೆ ಬೇರೆಯವರ ಮೇಲೆ ಪ್ರೀತಿ ಇದ್ದರೆ ಅವರನ್ನು ಲೆಕ್ಕವಿಲ್ಲದಷ್ಟು ಸಲ ಕ್ಷಮಿಸುತ್ತೇವೆ. ಅಪೊಸ್ತಲ ಪೇತ್ರನು ತಾನೆಷ್ಟು ಬಾರಿ ಕ್ಷಮಿಸಬೇಕೆಂದು ಯೇಸುವಿಗೆ ಕೇಳಿದಾಗ ಆತನು “ಎಪ್ಪತ್ತೇಳು ಸಾರಿ” ಎಂದು ಉತ್ತರಿಸಿದನು. (ಮತ್ತಾ. 18:21,22) ಏನಿದರ ಅರ್ಥ? ಕ್ರೈಸ್ತನೊಬ್ಬನಿಗೆ ಇತರರನ್ನು ಕ್ಷಮಿಸುವುದಕ್ಕೆ ಮಿತಿಯಿಲ್ಲ ಎನ್ನುವುದೇ.—ಜ್ಞಾನೋ. 10:12.a
13. ಕ್ಷಮಿಸಬಾರದೆಂಬ ಮನೋಭಾವ ನಮ್ಮಲ್ಲಿ ಇರದಂತೆ ನಾವೇನು ಮಾಡಬೇಕು?
13 ಜರ್ಮನಿಯ ಆ್ಯನೆಟ್ ಎಂಬವರು ಹೇಳುವುದು: “ಗಂಡಹೆಂಡತಿ ಒಬ್ಬರನ್ನೊಬ್ಬರು ಕ್ಷಮಿಸದಿದ್ದರೆ ಅವರ ಮಧ್ಯೆ ಅಸಮಾಧಾನ ಬೆಳೆಯುತ್ತದೆ, ಸಂಗಾತಿ ಮೇಲೆ ನಂಬಿಕೆ ಕಳಕೊಳ್ಳುತ್ತಾರೆ. ಇದು ದಾಂಪತ್ಯಕ್ಕೆ ವಿಷದಂತೆ. ಕ್ಷಮಿಸುವುದರಿಂದ ವಿವಾಹಬಂಧ ಬಲಗೊಳ್ಳುತ್ತದೆ, ಒಬ್ಬರಿಗೊಬ್ಬರು ಇನ್ನಷ್ಟು ಹತ್ತಿರವಾಗುತ್ತೀರಿ.” ನಿಮ್ಮ ಸಂಗಾತಿಗೆ ಕೃತಜ್ಞರಾಗಿರಿ. ಅದನ್ನು ಮಾತಲ್ಲಿ ವ್ಯಕ್ತಪಡಿಸಿರಿ. ಅವರನ್ನು ಶ್ಲಾಘಿಸಬಹುದಾದ ವಿಷಯಗಳಿಗಾಗಿ ಹುಡುಕಿ. ಹೀಗೆ ಮಾಡಿದರೆ, ಕ್ಷಮಿಸಬಾರದೆಂಬ ಮನೋಭಾವ ಇರುವುದಿಲ್ಲ. (ಕೊಲೊ. 3:15) ಬದಲಾಗಿ ನಿಮ್ಮಲ್ಲಿ ನೆಮ್ಮದಿ, ಐಕ್ಯ ಹಾಗೂ ದೇವರ ಅನುಗ್ರಹ ಇರುತ್ತದೆ.—ರೋಮ. 14:19.
ಸುವರ್ಣ ನಿಯಮ ಪಾಲಿಸಿ
14, 15. (ಎ) ಸುವರ್ಣ ನಿಯಮ ಅಂದರೇನು? (ಬಿ) ಅದನ್ನು ಪಾಲಿಸಿದರೆ ದಾಂಪತ್ಯ ಹೇಗೆ ಬಲಗೊಳ್ಳುತ್ತದೆ?
14 ಬೇರೆಯವರು ನಿಮಗೆ ಮಾನಮರ್ಯಾದೆ ಕೊಡಬೇಕೆಂದು ಬಯಸುತ್ತೀರಲ್ಲವಾ? ನೀವು ಮಾತಾಡುವಾಗ ಅವರು ಆಲಿಸಿದರೆ, ನಿಮ್ಮ ಭಾವನೆಗಳ ಬಗ್ಗೆ ಕಾಳಜಿವಹಿಸಿದರೆ ನಿಮಗೆ ಖುಷಿಯಾಗುತ್ತದೆ. ಆದರೆ ಯಾರಾದರೂ ‘ಅವನು ನನಗೆ ಮಾಡಿದ್ದನ್ನೇ ನಾನೂ ಅವನಿಗೆ ಮಾಡುತ್ತೇನೆ!’ ಎಂದು ಹೇಳಿದ್ದನ್ನು ಕೇಳಿದ್ದೀರಾ? ಕೆಲವೊಂದು ಸಂದರ್ಭಗಳಲ್ಲಿ ಹಾಗೆ ಮಾಡುವುದೇ ಸರಿಯನಿಸುತ್ತದೆ. ಆದರೆ ಬೈಬಲ್ ನಮಗೆ, “ಅವನು ನನಗೆ ಮಾಡಿದಂತೆ ನಾನೂ ಅವನಿಗೆ ಮಾಡುವೆನು . . . ಅಂದುಕೊಳ್ಳಬೇಡ” ಎಂದು ಹೇಳುತ್ತದೆ. (ಜ್ಞಾನೋ. 24:29) ಇನ್ನೊಬ್ಬರೊಟ್ಟಿಗೆ ಸಮಸ್ಯೆಯಾದಾಗ ಅದನ್ನು ಬಗೆಹರಿಸುವ ಅತ್ಯುತ್ತಮ ವಿಧವನ್ನು ಯೇಸು ಹೇಳಿಕೊಟ್ಟಿದ್ದಾನೆ. ಇದನ್ನು ‘ಸುವರ್ಣ ನಿಯಮ’ ಎಂದು ಕರೆಯಲಾಗುತ್ತದೆ. “ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅದನ್ನೇ ನೀವು ಸಹ ಅವರಿಗೆ ಮಾಡಿರಿ.” (ಲೂಕ 6:31) ಯೇಸುವಿನ ಮಾತಿನ ಅರ್ಥವೇನೆಂದರೆ, ಜನರು ನಮ್ಮೊಟ್ಟಿಗೆ ಹೇಗೆ ನಡೆದುಕೊಳ್ಳಬೇಕೆಂದು ನಾವು ಇಷ್ಟಪಡುತ್ತೇವೊ ಹಾಗೆಯೇ ಅವರ ಜೊತೆ ನಾವಿರಬೇಕು. ಜನ ನಮ್ಮೊಟ್ಟಿಗೆ ಹೇಗೆ ನಡೆದುಕೊಳ್ಳುತ್ತಾರೊ ಹಾಗಲ್ಲ. ಇದು ದಾಂಪತ್ಯಕ್ಕೂ ಅನ್ವಯ. ಸಂಗಾತಿ ನಮ್ಮ ಜೊತೆ ಹೇಗಿರಬೇಕೆಂದು ನಾವು ಇಷ್ಟಪಡುತ್ತೇವೊ ಹಾಗೆಯೇ ನಾವೂ ಅವರ ಜೊತೆ ಇರಬೇಕು.
15 ಗಂಡಹೆಂಡತಿ ಒಬ್ಬರಿನ್ನೊಬ್ಬರ ಭಾವನೆಗಳ ಬಗ್ಗೆ ನಿಜವಾಗಿ ಕಾಳಜಿ ತೋರಿಸುವಾಗ ತಮ್ಮ ದಾಂಪತ್ಯವನ್ನು ಬಲಪಡಿಸುತ್ತಾರೆ. ದಕ್ಷಿಣ ಆಫ್ರಿಕದಲ್ಲಿನ ಒಬ್ಬ ಗಂಡ ಹೀಗನ್ನುತ್ತಾನೆ: “ನಾವು ಸುವರ್ಣ ನಿಯಮವನ್ನು ನಮ್ಮ ಜೀವನದಲ್ಲಿ ಪಾಲಿಸಲು ಪ್ರಯತ್ನಿಸಿದ್ದೇವೆ. ಒಮ್ಮೊಮ್ಮೆ ನಮಗಿಬ್ಬರಿಗೂ ಸಿಟ್ಟು ಬರುತ್ತದೆ ನಿಜ. ಆದರೂ ‘ನನ್ನ ಸಂಗಾತಿ ನನ್ನೊಟ್ಟಿಗೆ ಹೇಗೆ ಇರಬೇಕೆಂದು ಇಷ್ಟಪಡುತ್ತೇನೆ?’ ಎಂಬ ಮಾತನ್ನು ಇಬ್ಬರೂ ಮನಸ್ಸಿನಲ್ಲಿಟ್ಟು ಗೌರವದಿಂದ ನಡೆದುಕೊಳ್ಳಲು ವಿಶೇಷ ಪ್ರಯತ್ನ ಮಾಡಿದ್ದೇವೆ.”
16. ಯಾವುದೇ ಕಾರಣಕ್ಕೂ ಗಂಡಹೆಂಡತಿ ಏನು ಮಾಡಲೇಬಾರದು?
16 ನಿಮ್ಮ ಸಂಗಾತಿಯ ದೌರ್ಬಲ್ಯಗಳ ಬಗ್ಗೆ ಊರಿಗೆಲ್ಲ ಡಂಗುರ ಸಾರಬೇಡಿ. ಇಲ್ಲವೇ ಅವರ ಬಗ್ಗೆ ನಿಮಗೆ ಕಿರಿಕಿರಿಯಾಗುವ ವಿಷಯಗಳನ್ನು ಹೇಳುತ್ತಾ ಅವರಿಗೆ ಗೋಳು ಹಾಕಿಕೊಳ್ಳಬೇಡಿ. ಬೇರೆಯವರೊಟ್ಟಿಗೂ ಅವುಗಳ ಬಗ್ಗೆ ಮಾತಾಡುತ್ತಾ ಇರಬೇಡಿ. ತಮಾಷೆಗೂ ಹಾಗೆ ಮಾಡಬೇಡಿ. ನೆನಪಿಡಿ, ವಿವಾಹ ಜೀವನ ಒಂದು ಪೈಪೋಟಿ ಅಲ್ಲ. ಯಾರಿಗೆ ಹೆಚ್ಚು ಬಲ ಇದೆ, ಯಾರು ಹೆಚ್ಚು ಜೋರಾಗಿ ಕಿರುಚುತ್ತಾರೆ, ನೋಯಿಸುವ ಮಾತು ಯಾರಿಂದ ಜಾಸ್ತಿ ಬರುತ್ತದೆಂಬ ಸ್ಪರ್ಧೆ ಅದಲ್ಲ. ನಾವೆಲ್ಲರೂ ಅಪರಿಪೂರ್ಣರು, ಒಮ್ಮೊಮ್ಮೆ ಬೇರೆಯವರ ಸಿಟ್ಟೆಬ್ಬಿಸುತ್ತೇವೆ ನಿಜ. ನಮ್ಮ ಸಂಗಾತಿಯೂ ನಮಗೆ ಹಾಗೆ ಮಾಡಬಹುದು. ಆದರೆ ಸಂಗಾತಿಯನ್ನು ಅವಮಾನಿಸಲು, ಚುಚ್ಚಿಚುಚ್ಚಿ ಮಾತಾಡಲು ಅಥವಾ ಅದು ಸಾಲದೆಂದು ಜೋರಾಗಿ ತಳ್ಳಲು, ಹೊಡೆಯಲು, ಬಡಿಯಲು ನ್ಯಾಯವಾದ ಕಾರಣ ಇಲ್ಲವೇ ಇಲ್ಲ!—ಜ್ಞಾನೋಕ್ತಿ 17:27; 31:26 ಓದಿ.
17. ಗಂಡಂದಿರು ಸುವರ್ಣ ನಿಯಮವನ್ನು ಹೇಗೆ ಪಾಲಿಸಬೇಕು?
17 ಕೆಲವು ಸಂಸ್ಕೃತಿಗಳಲ್ಲಿ ಪುರುಷರು ಶಕ್ತಿಪ್ರದರ್ಶನ ಮಾಡಲು ಹೆಂಡತಿಯರನ್ನು ಪೀಡಿಸುತ್ತಾರೆ ಇಲ್ಲವೆ ಹೊಡೆಯುತ್ತಾರೆ. ಆದರೆ “ದೀರ್ಘಶಾಂತನು ಶೂರರಿಗಿಂತಲೂ ಶ್ರೇಷ್ಠ; ತನ್ನ ಮನಸ್ಸನ್ನು ಆಳುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಉತ್ತಮನು” ಎನ್ನುತ್ತದೆ ಬೈಬಲ್. (ಜ್ಞಾನೋ. 16:32, ಪವಿತ್ರ ಗ್ರಂಥ ಭಾಷಾಂತರ) ಭೂಮಿಯಲ್ಲಿ ಜೀವಿಸಿದ ಅತ್ಯಂತ ಮಹಾನ್ ಪುರುಷನಾದ ಯೇಸು ಅಂಥ ಸ್ವನಿಯಂತ್ರಣ ತೋರಿಸಿದನು. ಈ ರೀತಿಯ ಸ್ವನಿಯಂತ್ರಣ ತೋರಿಸಲು ಒಬ್ಬ ವ್ಯಕ್ತಿಗೆ ಮನೋಬಲ ಇರಬೇಕು. ಪತ್ನಿಯನ್ನು ಪೀಡಿಸುವ ಇಲ್ಲವೆ ಹೊಡೆಯುವ ಪುರುಷನೇ ಬಲಹೀನ ವ್ಯಕ್ತಿ. ಅವನು ಯೆಹೋವನೊಂದಿಗಿನ ತನ್ನ ಸಂಬಂಧವನ್ನು ಕಳೆದುಕೊಳ್ಳುವನು. ಧೀರನೂ, ಬಲಿಷ್ಠನೂ ಆಗಿದ್ದ ಕೀರ್ತನೆಗಾರ ದಾವೀದನು ಹೇಳಿದ್ದು: “ಭಯಪಡಿರಿ, [“ಕೋಪಮಾಡಿದರೂ,” ಪಾದಟಿಪ್ಪಣಿ] ಪಾಪಮಾಡಬೇಡಿರಿ, ಮೌನವಾಗಿರಿ; ಹಾಸಿಗೆಯ ಮೇಲೆ ಇರುವಾಗ ಹೃದಯದಲ್ಲೇ ಆಲೋಚಿಸಿಕೊಳ್ಳಿರಿ.”—ಕೀರ್ತ. 4:4.
“ಪ್ರೀತಿಯನ್ನು ಧರಿಸಿಕೊಳ್ಳಿರಿ”
18. ಪ್ರೀತಿ ತೋರಿಸುತ್ತಾ ಇರುವುದು ಏಕೆ ಪ್ರಾಮುಖ್ಯ?
18 ಒಂದು ಕೊರಿಂಥ 13:4-7 ಓದಿ. ದಾಂಪತ್ಯದಲ್ಲಿ ಪ್ರೀತಿ ತುಂಬ ಪ್ರಾಮುಖ್ಯ. ಬೈಬಲ್ ಹೀಗನ್ನುತ್ತದೆ: “ಸಹಾನುಭೂತಿಯ ಕೋಮಲ ಮಮತೆಯನ್ನೂ ದಯೆಯನ್ನೂ ದೀನಮನಸ್ಸನ್ನೂ ಸೌಮ್ಯಭಾವವನ್ನೂ ದೀರ್ಘ ಸಹನೆಯನ್ನೂ ಧರಿಸಿಕೊಳ್ಳಿರಿ. ಇದೆಲ್ಲಾದರ ಜೊತೆಗೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಏಕೆಂದರೆ ಇದು ಐಕ್ಯದ ಪರಿಪೂರ್ಣ ಬಂಧವಾಗಿದೆ.” (ಕೊಲೊ. 3:12, 14) ಗಂಡಹೆಂಡತಿ ನಿಸ್ವಾರ್ಥ ಪ್ರೀತಿ ತೋರಿಸಬೇಕು. ಹೀಗೆ, ಇತರರಿಗಾಗಿ ಜೀವವನ್ನೇ ಕೊಟ್ಟ ಯೇಸು ಕ್ರಿಸ್ತನನ್ನು ಅನುಕರಿಸಬಲ್ಲರು. ಇಂಥ ಪ್ರೀತಿ ದಾಂಪತ್ಯದ ತಳಪಾಯ ಆಗಿರಬೇಕು. ಆಗ ಕಿರಿಕಿರಿಗೊಳಿಸುವ ರೂಢಿಗಳು, ಗಂಭೀರ ಕಾಯಿಲೆ, ಆರ್ಥಿಕ ಮುಗ್ಗಟ್ಟು, ಅತ್ತೆಮಾವ ಜೊತೆ ಸಮಸ್ಯೆ, ಸಂಗಾತಿಯ ಸಂಬಂಧಿಕರೊಂದಿಗೆ ಸಮಸ್ಯೆ ಎದುರಾದರೂ ದಾಂಪತ್ಯ ಅಲುಗಾಡದೆ ದೃಢವಾಗಿ ನಿಲ್ಲುತ್ತದೆ.
19, 20. (ಎ) ದಾಂಪತ್ಯವನ್ನು ಬಲಗೊಳಿಸಿ ಸಂತೋಷಕರ ಬಾಳು ನಡೆಸುವುದರಲ್ಲಿ ಗಂಡಹೆಂಡತಿ ಹೇಗೆ ಯಶಸ್ವಿಗಳಾಗಬಲ್ಲರು? (ಬಿ) ಮುಂದಿನ ಲೇಖನದಲ್ಲಿ ಏನನ್ನು ಪರಿಗಣಿಸುವೆವು?
19 ಯಶಸ್ವೀ ವಿವಾಹ ಜೀವನಕ್ಕೆ ಪ್ರೀತಿ, ನಿಷ್ಠೆ, ಯಥಾರ್ಥ ಪ್ರಯತ್ನ ಇವೆಲ್ಲವೂ ಅಗತ್ಯ. ಕಷ್ಟಗಳು ಬಂದಾಕ್ಷಣ ಗಂಡಹೆಂಡತಿ ತಮ್ಮ ವಿವಾಹಬಂಧ ಮುರಿದುಹಾಕಬಾರದು. ಬದಲಾಗಿ ಒಬ್ಬರಿಗೊಬ್ಬರಿಗೆ ಹೆಚ್ಚು ಆಪ್ತರಾಗಿರಲು ದೃಢತೀರ್ಮಾನ ಮಾಡಬೇಕು. “ಪ್ರೀತಿಯು ಎಂದಿಗೂ ವಿಫಲವಾಗುವುದಿಲ್ಲ.” ಆದ್ದರಿಂದ ಯೆಹೋವನನ್ನು ಮತ್ತು ಒಬ್ಬರನ್ನೊಬ್ಬರನ್ನು ಪ್ರೀತಿಸುವ ದಂಪತಿಗಳು ಸಮಸ್ಯೆಗಳನ್ನು ಬಗೆಹರಿಸಲು ದೃಢಮನಸ್ಸು ಮಾಡಬೇಕು.—1 ಕೊರಿಂ. 13:8; ಮತ್ತಾ. 19:5, 6; ಇಬ್ರಿ. 13:4.
20 ನಾವೀಗ ಜೀವಿಸುತ್ತಿರುವ “ಕಷ್ಟಕರವಾದ ಕಠಿನಕಾಲ”ಗಳಲ್ಲಿ ವಿವಾಹಬಂಧವನ್ನು ಬಲಗೊಳಿಸಿ, ಸಂತೋಷಕರವಾದ ಬಾಳನ್ನು ನಡೆಸುವುದು ಕಷ್ಟ. (2 ತಿಮೊ. 3:1) ಆದರೆ ಯೆಹೋವನ ಸಹಾಯದಿಂದ ಅದು ಸಾಧ್ಯ. ಹಾಗಿದ್ದರೂ, ಲೋಕಕ್ಕಿರುವ ಲೈಂಗಿಕತೆಯ ಗೀಳಿನ ವಿರುದ್ಧವೂ ದಂಪತಿಗಳು ಹೋರಾಡಬೇಕಾಗುತ್ತದೆ. ಹಾಗಾಗಿ, ಗಂಡಹೆಂಡತಿ ತಮ್ಮ ದಾಂಪತ್ಯವನ್ನು ಹೇಗೆ ಬಲವಾಗಿರಿಸಬಲ್ಲರೆಂದು ಮುಂದಿನ ಲೇಖನದಲ್ಲಿ ನೋಡೋಣ.
a ಕ್ರೈಸ್ತ ದಂಪತಿಗಳು ಒಬ್ಬರಿನ್ನೊಬ್ಬರ ತಪ್ಪುಗಳನ್ನು ಕ್ಷಮಿಸಿ, ತಮ್ಮ ಸಮಸ್ಯೆಗಳನ್ನು ಬಗೆಹರಿಸಬೇಕು. ಹಾಗಿದ್ದರೂ, ವ್ಯಭಿಚಾರ ಮಾಡಿದ ಸಂಗಾತಿಯನ್ನು ಕ್ಷಮಿಸಬೇಕಾ ಬಾರದಾ ಎಂದು ನಿರ್ಣಯಿಸುವ ಹಕ್ಕು ಆ ತಪ್ಪು ಮಾಡಿರದ ಸಂಗಾತಿಗೆ ಇದೆಯೆಂದು ಬೈಬಲ್ ಹೇಳುತ್ತದೆ. (ಮತ್ತಾ. 19:9) ಸೆಪ್ಟೆಂಬರ್ 8, 1995ರ ಎಚ್ಚರ! ಪತ್ರಿಕೆಯಲ್ಲಿ “ಬೈಬಲಿನ ದೃಷ್ಟಿಕೋನ: ವ್ಯಭಿಚಾರ—ಕ್ಷಮಿಸಬೇಕೊ ಅಥವಾ ಕ್ಷಮಿಸಬಾರದೊ?” ಎಂಬ ಲೇಖನ ನೋಡಿ.