ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w19 ಫೆಬ್ರವರಿ ಪು. 2-7
  • ಸದಾ ಸಮಗ್ರತೆ ಕಾಪಾಡಿಕೊಳ್ಳಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸದಾ ಸಮಗ್ರತೆ ಕಾಪಾಡಿಕೊಳ್ಳಿ!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸಮಗ್ರತೆ ಅಂದರೆ ಏನು?
  • ಯಾಕೆ ಸಮಗ್ರತೆ ತೋರಿಸಬೇಕು?
  • ನಾವೀಗ ಹೇಗೆ ಸಮಗ್ರತೆ ಕಾಪಾಡಿಕೊಳ್ಳಬಹುದು?
  • ನೀವೇಕೆ ಸಮಗ್ರತೆ ಕಾಪಾಡಿಕೊಳ್ಳಬೇಕು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ನಾವು ನಮ್ಮ ಸಮಗ್ರತೆಯಲ್ಲೇ ನಡೆಯುವೆವು!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ನಿಮ್ಮ ಸಮಗ್ರತೆಯನ್ನು ಬಿಗಿಯಾಗಿ ಹಿಡಿದುಕೊಳ್ಳುವಿರೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ಯೋಬನು ಯೆಹೋವನ ಹೆಸರನ್ನು ಎತ್ತಿಹಿಡಿದನು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
w19 ಫೆಬ್ರವರಿ ಪು. 2-7

ಅಧ್ಯಯನ ಲೇಖನ 6

ಸದಾ ಸಮಗ್ರತೆ ಕಾಪಾಡಿಕೊಳ್ಳಿ!

‘ಸಾಯುವ ತನಕ ನನ್ನ ಯಥಾರ್ಥತೆಯನ್ನು [“ಸಮಗ್ರತೆಯನ್ನು,” NW] ಕಳಕೊಳ್ಳೆನು.’—ಯೋಬ 27:5.

ಗೀತೆ 29 ಸಮಗ್ರತೆಯ ಮಾರ್ಗದಲ್ಲಿ ನಡೆಯುವುದು

ಕಿರುನೋಟa

1. ಈ ಪ್ಯಾರದಲ್ಲಿ ತಿಳಿಸಲಾದ ಮೂರು ಸಾಕ್ಷಿಗಳು ಹೇಗೆ ಯೆಹೋವನ ಪಕ್ಷವಹಿಸಿ ನಿಂತರು?

ಮುಂದಿನ ಮೂರು ಸನ್ನಿವೇಶಗಳನ್ನು ಚಿತ್ರಿಸಿಕೊಳ್ಳಿ. (1) ನಮ್ಮ ಒಬ್ಬ ಯುವ ಸಹೋದರಿ ಶಾಲೆಯಲ್ಲಿ ಓದುತ್ತಿದ್ದಾಳೆ. ಒಂದು ದಿನ ಅವಳ ಶಿಕ್ಷಕಿ ತರಗತಿಯಲ್ಲಿರುವ ಎಲ್ಲರೂ ಒಂದು ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳಬೇಕೆಂದು ಹೇಳುತ್ತಾರೆ. ಈ ಆಚರಣೆಯಲ್ಲಿ ತಾನು ಭಾಗವಹಿಸುವುದು ಯೆಹೋವನಿಗೆ ಇಷ್ಟ ಇಲ್ಲ ಎಂದು ನಮ್ಮ ಸಹೋದರಿಗೆ ಗೊತ್ತು. ಅವಳು ತನ್ನ ಶಿಕ್ಷಕಿಗೆ ತಾನು ಭಾಗವಹಿಸಲ್ಲ ಎಂದು ಗೌರವದಿಂದ ಹೇಳುತ್ತಾಳೆ. (2) ನಾಚಿಕೆ ಸ್ವಭಾವದ ಒಬ್ಬ ಯುವ ಸಹೋದರ ಮನೆ-ಮನೆ ಸೇವೆ ಮಾಡುತ್ತಿದ್ದಾನೆ. ಮುಂದಿನ ಮನೆ ತನ್ನ ಜೊತೆ ಓದುವ ಹುಡುಗನ ಮನೆ ಎಂದು ಅವನಿಗೆ ಗೊತ್ತು. ಆ ಹುಡುಗ ಯೆಹೋವನ ಸಾಕ್ಷಿಗಳನ್ನು ಗೇಲಿಮಾಡುತ್ತಾನೆ ಅಂತ ಕೂಡ ನಮ್ಮ ಸಹೋದರನಿಗೆ ಗೊತ್ತು. ಆದರೂ ಮುಂದೆ ಹೋಗಿ ಆ ಹುಡುಗನ ಮನೆಯ ಬಾಗಿಲನ್ನು ತಟ್ಟುತ್ತಾನೆ. (3) ಕುಟುಂಬವನ್ನು ನೋಡಿಕೊಳ್ಳಲು ಕಷ್ಟಪಟ್ಟು ದುಡಿಯುವ ಒಬ್ಬ ಸಹೋದರ. ಒಂದು ದಿನ ಅವನ ಬಾಸ್‌ ಅವನನ್ನು ಕರೆದು ಒಂದು ಕೆಲಸ ಕೊಡುತ್ತಾರೆ. ಅದನ್ನು ಮಾಡುವುದು ಅಪ್ರಾಮಾಣಿಕತೆ ಆಗುತ್ತದೆ, ಕಾನೂನಿಗೆ ವಿರುದ್ಧವಾಗಿರುತ್ತದೆ. ಈ ಕೆಲಸವನ್ನು ಮಾಡಕ್ಕಾಗಲ್ಲ ಅಂತ ಹೇಳಿದರೆ ಆ ಸಹೋದರ ತನ್ನ ಕೆಲಸ ಕಳಕೊಳ್ಳಬಹುದು. ಆದರೂ ಅವನು ಮುಂದೆ ಹೋಗಿ ತಾನು ಪ್ರಾಮಾಣಿಕನಾಗಿರಬೇಕು, ಕಾನೂನನ್ನು ಪಾಲಿಸಬೇಕೆಂದು ಬಾಸ್‌ಗೆ ಹೇಳುತ್ತಾನೆ. ಯಾಕೆಂದರೆ ದೇವರು ತನ್ನಿಂದ ಇದನ್ನು ಎದುರುನೋಡುತ್ತಾನೆ ಎಂದು ವಿವರಿಸುತ್ತಾನೆ.—ರೋಮ. 13:1-4; ಇಬ್ರಿ. 13:18.

2. ನಾವು ಯಾವ ಪ್ರಶ್ನೆಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ? ಯಾಕೆ?

2 ಈ ಮೂವರಲ್ಲಿ ನೀವು ಯಾವ ಗುಣ ನೋಡಿದಿರಿ? ಅವರಲ್ಲಿ ಧೈರ್ಯ, ಪ್ರಾಮಾಣಿಕತೆ ಮತ್ತು ಬೇರೆ ಗುಣಗಳು ಇರುವುದನ್ನು ನೀವು ನೋಡಿರಬಹುದು. ಆದರೆ ಅವರೆಲ್ಲರಲ್ಲೂ ಒಂದು ಗುಣ ಮುಖ್ಯವಾಗಿ ಎದ್ದುಕಾಣುತ್ತದೆ. ಅದೇ ಸಮಗ್ರತೆ. ಅವರಲ್ಲಿ ಸಮಗ್ರತೆ ಇದ್ದದರಿಂದ ಯೆಹೋವನಿಗೆ ನಿಷ್ಠೆ ತೋರಿಸಿದರು. ಏನೇ ಆದರೂ ಯೆಹೋವನ ಮಟ್ಟಗಳನ್ನು ಅವರಲ್ಲಿ ಒಬ್ಬರೂ ಬಿಟ್ಟುಕೊಡಲಿಲ್ಲ. ಅವರು ಈ ಗುಣವನ್ನು ತೋರಿಸಿದ್ದಕ್ಕೆ ಯೆಹೋವನಿಗೆ ಖಂಡಿತ ಹೆಮ್ಮೆ ಆಗಿರುತ್ತದೆ. ಇದೇ ರೀತಿ ನಮ್ಮ ಬಗ್ಗೆ ಸಹ ನಮ್ಮ ಸ್ವರ್ಗೀಯ ತಂದೆ ಹೆಮ್ಮೆಪಡಬೇಕೆಂದು ಬಯಸುತ್ತೇವೆ. ಹಾಗಾಗಿ ಈ ಪ್ರಶ್ನೆಗಳ ಬಗ್ಗೆ ಚರ್ಚಿಸೋಣ. ಸಮಗ್ರತೆ ಅಂದರೆ ಏನು? ನಾವು ಯಾಕೆ ಸಮಗ್ರತೆ ತೋರಿಸಬೇಕು? ಸವಾಲುಗಳು ತುಂಬಿದ ಈ ದಿನಗಳಲ್ಲೂ ನಾವು ಹೇಗೆ ಸಮಗ್ರತೆ ಕಾಪಾಡಿಕೊಳ್ಳಬಹುದು?

ಸಮಗ್ರತೆ ಅಂದರೆ ಏನು?

3. (ಎ) ಯೆಹೋವನ ಸೇವಕರು ಹೇಗೆ ಸಮಗ್ರತೆ ತೋರಿಸುತ್ತಾರೆ? (ಬಿ) ಸಮಗ್ರತೆ ಅಂದರೆ ಏನೆಂದು ಅರ್ಥಮಾಡಿಕೊಳ್ಳಲು ಯಾವ ಉದಾಹರಣೆಗಳು ಸಹಾಯ ಮಾಡುತ್ತವೆ?

3 ಯೆಹೋವನ ಸೇವಕರು ಹೇಗೆ ಸಮಗ್ರತೆ ತೋರಿಸುತ್ತಾರೆ? ಅವರು ಯೆಹೋವನನ್ನು ಪೂರ್ಣಹೃದಯದಿಂದ ಪ್ರೀತಿಸುತ್ತಾರೆ. ಏನೇ ಆದರೂ ಆ ಪ್ರೀತಿಯನ್ನು ಅವರು ಬಿಟ್ಟುಕೊಡಲ್ಲ. ಎಲ್ಲಾ ಸಮಯದಲ್ಲೂ ಆತನಿಗೆ ಇಷ್ಟವಾದದ್ದನ್ನು ಮಾಡುತ್ತಾರೆ. ಬೈಬಲಿನಲ್ಲಿ ಸಮಗ್ರತೆ ಎಂಬ ಈ ಪದವನ್ನು ಹೇಗೆ ಬಳಸಲಾಗಿದೆ ಎಂದು ನೋಡೋಣ. ಬೈಬಲಿನಲ್ಲಿ “ಸಮಗ್ರತೆ” ಎಂದು ಭಾಷಾಂತರವಾಗಿರುವ ಪದದ ಅರ್ಥ ಏನೆಂದರೆ ಸಂಪೂರ್ಣವಾಗಿರುವುದು, ಲೋಪದೋಷ ಇಲ್ಲದಿರುವುದು. ಉದಾಹರಣೆಗೆ, ಇಸ್ರಾಯೇಲ್ಯರು ಯೆಹೋವನಿಗೆ ಪ್ರಾಣಿ ಯಜ್ಞಗಳನ್ನು ಕೊಡಬೇಕಿತ್ತು. ಆ ಪ್ರಾಣಿಗಳು ಪೂರ್ಣಾಂಗವಾಗಿ ಇರಬೇಕಿತ್ತು.b (ಯಾಜ. 22:21, 22) ಕಾಲಿಲ್ಲದ, ಕಿವಿ ಇಲ್ಲದ, ಕಣ್ಣಿಲ್ಲದ ಅಥವಾ ರೋಗವಿರುವ ಪ್ರಾಣಿಗಳನ್ನು ಅವರು ಯಜ್ಞವಾಗಿ ಕೊಡಬಾರದಿತ್ತು. ಯಾವುದೇ ದೋಷ ಇಲ್ಲದ, ಆರೋಗ್ಯಕರವಾದ ಪ್ರಾಣಿಗಳನ್ನು ಯೆಹೋವನಿಗೆ ಯಜ್ಞವಾಗಿ ಕೊಡಬೇಕಿತ್ತು. (ಮಲಾ. 1:6-9) ಯೆಹೋವನಿಗೆ ಒಂದು ವಿಷಯ ಸಂಪೂರ್ಣವಾಗಿರುವುದು ಅಥವಾ ದೋಷ ಇಲ್ಲದೆ ಇರುವುದು ಎಷ್ಟು ಮುಖ್ಯ ಎಂದು ಇದರಿಂದ ಅರ್ಥವಾಗುತ್ತದೆ. ನೀವು ಒಂದು ಹಣ್ಣನ್ನೋ ಉಪಕರಣವನ್ನೋ ಪುಸ್ತಕವನ್ನೋ ಖರೀದಿಸಲು ಹೋಗುತ್ತೀರಿ ಎಂದು ನೆನಸಿ. ಅದು ಸ್ವಲ್ಪ ಹಾಳಾಗಿದ್ದರೆ ಅಥವಾ ಪುಸ್ತಕದಲ್ಲಿ ಕೆಲವು ಪುಟಗಳೇ ಇಲ್ಲ ಅಂದರೆ ನೀವದನ್ನು ತಗೊಳ್ತೀರಾ? ಖಂಡಿತ ಇಲ್ಲ. ನಾವು ತಗೊಳ್ಳುವ ವಸ್ತು ಚೆನ್ನಾಗಿರಬೇಕು, ಸಂಪೂರ್ಣವಾಗಿ ಇರಬೇಕೆಂದು ಬಯಸುತ್ತೇವೆ. ನಾವು ಯೆಹೋವನಿಗೆ ತೋರಿಸುವ ಪ್ರೀತಿ, ನಿಷ್ಠೆ ಸಹ ಅದೇ ರೀತಿ ಲೋಪದೋಷ ಇಲ್ಲದೆ ಸಂಪೂರ್ಣವಾಗಿ ಇರಬೇಕೆಂದು ಆತನು ಬಯಸುತ್ತಾನೆ.

4. (ಎ) ನಾವು ಪರಿಪೂರ್ಣರಾಗಿದ್ದರೆ ಮಾತ್ರ ಸಮಗ್ರತೆ ತೋರಿಸಕ್ಕಾಗುತ್ತಾ? (ಬಿ) ಕೀರ್ತನೆ 103:12-14 ಕ್ಕೆ ಅನುಸಾರ ಯೆಹೋವನು ನಮ್ಮಿಂದ ಏನನ್ನು ಕೇಳಲ್ಲ?

4 ಹಾಗಾದರೆ ಸಮಗ್ರತೆ ಅನ್ನುವುದು ಪರಿಪೂರ್ಣತೆಗೆ ಸೂಚಿಸುತ್ತದಾ? ಒಂದುವೇಳೆ ವಿಷಯ ಹಾಗಿದ್ದರೆ ನಾವೆಲ್ಲ ತುಂಬ ತಪ್ಪು ಮಾಡುತ್ತೇವಲ್ಲಾ, ನಮ್ಮಲ್ಲಿ ಯಾರೂ ಲಾಯಕ್ಕಿಲ್ಲ ಅಂತ ಅನಿಸಿಬಿಡುತ್ತದೆ. ಆದರೆ ಸಮಗ್ರತೆ ಅನ್ನುವುದು ಪರಿಪೂರ್ಣತೆ ಅಲ್ಲ ಅಂತ ಅರ್ಥಮಾಡಿಕೊಳ್ಳಲು ಎರಡು ಕಾರಣಗಳನ್ನು ನೋಡಿ. ಒಂದು, ಯೆಹೋವನು ನಮ್ಮ ತಪ್ಪುಗಳನ್ನೇ ನೋಡುತ್ತಾ ಇರಲ್ಲ. “ಕರ್ತನೇ, ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು?” ಎಂದು ಆತನ ವಾಕ್ಯ ಹೇಳುತ್ತದೆ. (ಕೀರ್ತ. 130:3) ನಾವು ಅಪರಿಪೂರ್ಣರು, ಪಾಪ ಮಾಡುತ್ತೇವೆ ಎಂದು ಆತನಿಗೆ ಗೊತ್ತು. ಆದ್ದರಿಂದ ಆತನು ನಮ್ಮನ್ನು ಉದಾರವಾಗಿ ಕ್ಷಮಿಸುತ್ತಾನೆ. (ಕೀರ್ತ. 86:5) ಎರಡು, ಯೆಹೋವನಿಗೆ ನಮ್ಮ ಇತಿಮಿತಿಗಳು ಗೊತ್ತು. ನಮ್ಮಿಂದ ಸಾಧ್ಯವಿಲ್ಲದ ವಿಷಯವನ್ನು ಆತನೆಂದೂ ಕೇಳಲ್ಲ. (ಕೀರ್ತನೆ 103:12-14 ಓದಿ.) ಹಾಗಾದರೆ ಯಾವ ವಿಧದಲ್ಲಿ ನಾವು ಯೆಹೋವನ ಮುಂದೆ ದೋಷವಿಲ್ಲದೆ ಸಂಪೂರ್ಣವಾಗಿರಲು ಸಾಧ್ಯ?

5. ಪ್ರೀತಿ ಇದ್ದರೇನೆ ಸಮಗ್ರತೆ ತೋರಿಸಲು ಆಗುತ್ತದೆ ಯಾಕೆ?

5 ಸಮಗ್ರತೆ ತೋರಿಸಲು ಯೆಹೋವನ ಸೇವಕರಲ್ಲಿ ಮುಖ್ಯವಾಗಿ ಇರಬೇಕಾಗಿರುವುದು ಪ್ರೀತಿ. ದೇವರ ಮೇಲೆ ನಮಗಿರುವ ಪ್ರೀತಿ ಮತ್ತು ನಮ್ಮ ಸ್ವರ್ಗೀಯ ತಂದೆಯಾಗಿರುವ ಆತನಿಗೆ ನಾವು ತೋರಿಸುವ ಭಕ್ತಿ ಯಾವಾಗಲೂ ಸಂಪೂರ್ಣವಾಗಿರಬೇಕು. ಪರೀಕ್ಷೆ ಬಂದಾಗಲೂ ನಾವು ನಮ್ಮ ಪ್ರೀತಿ-ಭಕ್ತಿಯನ್ನು ಹಾಗೇ ಕಾಪಾಡಿಕೊಂಡರೆ ನಮ್ಮಲ್ಲಿ ಸಮಗ್ರತೆ ಇದೆ ಎಂದಾಗುತ್ತದೆ. (1 ಪೂರ್ವ. 28:9; ಮತ್ತಾ. 22:37) ಆರಂಭದಲ್ಲಿ ನೋಡಿದ ಆ ಮೂರು ಸಾಕ್ಷಿಗಳ ಬಗ್ಗೆ ಪುನಃ ಯೋಚಿಸಿ. ಅವರು ಯಾಕೆ ಹಾಗೆ ಪ್ರತಿಕ್ರಿಯಿಸಿದರು? ನಮ್ಮ ಯುವ ಸಹೋದರಿಗೆ ಶಾಲೆಯಲ್ಲಿ ಮೋಜುಮಸ್ತಿ ಮಾಡಲು ಇಷ್ಟ ಇಲ್ಲ ಅಂತಾನಾ? ನಮ್ಮ ಯುವ ಸಹೋದರನಿಗೆ ತನ್ನ ಶಾಲಾ ಸಹಪಾಠಿಯಿಂದ ಗೇಲಿಮಾಡಿಸಿಕೊಳ್ಳಲು ಇಷ್ಟ ಅಂತಾನಾ? ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಇರುವ ನಮ್ಮ ಸಹೋದರನಿಗೆ ಕೆಲಸ ಕಳಕೊಳ್ಳುವುದರ ಬಗ್ಗೆ ಚಿಂತೆ ಇಲ್ಲ ಅಂತಾನಾ? ಇಲ್ಲ. ಯೆಹೋವನಿಗೆ ಕೆಲವು ಮಟ್ಟಗಳಿವೆ ಎಂದು ಅವರಿಗೆ ಗೊತ್ತು. ಅವರ ಸ್ವರ್ಗೀಯ ತಂದೆಗೆ ಏನಿಷ್ಟಾನೋ ಅದನ್ನೇ ಮಾಡಬೇಕೆಂದು ಅವರು ದೃಢಮನಸ್ಸು ಮಾಡಿಕೊಂಡಿದ್ದಾರೆ. ಅವರಿಗೆ ಯೆಹೋವನ ಮೇಲೆ ಪ್ರೀತಿ ಇರುವುದರಿಂದ ಯಾವುದೇ ತೀರ್ಮಾನ ತಗೊಳ್ಳುವ ಮುಂಚೆ ಅದು ದೇವರಿಗೆ ಇಷ್ಟ ಆಗುತ್ತದಾ ಎಂದು ಯೋಚಿಸುತ್ತಾರೆ. ಹೀಗೆ ಅವರು ತಮ್ಮಲ್ಲಿ ಸಮಗ್ರತೆ ಇದೆ ಎಂದು ತೋರಿಸಿಕೊಡುತ್ತಾರೆ.

ಯಾಕೆ ಸಮಗ್ರತೆ ತೋರಿಸಬೇಕು?

6. (ಎ) ನಾವೆಲ್ಲರೂ ಯಾಕೆ ಸಮಗ್ರತೆ ತೋರಿಸಬೇಕು? (ಬಿ) ಆದಾಮ-ಹವ್ವ ಸಮಗ್ರತೆ ತೋರಿಸಿದರಾ?

6 ನಾವೆಲ್ಲರೂ ಯಾಕೆ ಸಮಗ್ರತೆ ತೋರಿಸಬೇಕು? ಯಾಕೆಂದರೆ ಸೈತಾನನು ಯೆಹೋವನಿಗೆ ಸವಾಲು ಹಾಕಿದ್ದಾನೆ ಮತ್ತು ನಮಗೂ ಸವಾಲು ಹಾಕಿದ್ದಾನೆ. ದೇವದೂತನಾಗಿದ್ದ ಇವನು ಏದೆನ್‌ ತೋಟದಲ್ಲಿ ದಂಗೆ ಎದ್ದಾಗ ಸೈತಾನ ಆದನು. ಸೈತಾನ ಅಂದರೆ “ವಿರೋಧಿಸುವವನು” ಎಂದರ್ಥ. ಅವನು ಯೆಹೋವನ ಹೆಸರನ್ನು ಹಾಳುಮಾಡಲು ಪ್ರಯತ್ನಿಸಿದನು. ದೇವರು ಒಳ್ಳೆಯವನಲ್ಲ, ಸ್ವಾರ್ಥಿ, ಒಳಗೊಂದು ಹೊರಗೊಂದು ಮಾಡುತ್ತಾನೆ ಎಂದು ಆಪಾದನೆ ಹಾಕಿದನು. ದುಃಖಕರವಾಗಿ ಆದಾಮಹವ್ವರು ಸೈತಾನನ ಜೊತೆ ಸೇರಿ ಯೆಹೋವನ ವಿರುದ್ಧ ದಂಗೆ ಎದ್ದರು. (ಆದಿ. 3:1-6) ಏದೆನ್‌ ತೋಟದಲ್ಲಿದ್ದಾಗ ಅವರು ಯೆಹೋವನನ್ನು ಇನ್ನೂ ಹೆಚ್ಚು ಪ್ರೀತಿಸಲು ತುಂಬ ಅವಕಾಶ ಇತ್ತು. ಆದರೆ ಸೈತಾನನು ಸವಾಲು ಹಾಕಿದಾಗ ದೇವರ ಮೇಲೆ ಅವರಿಗಿದ್ದ ಪ್ರೀತಿ ಸಂಪೂರ್ಣವಾಗಿರಲಿಲ್ಲ, ಕಡಿಮೆಯಾಗಿತ್ತು. ನಂತರ ಈ ಪ್ರಶ್ನೆ ಎದುರಾಯಿತು: ಯಾವ ಮಾನವನಾದರೂ ಯೆಹೋವನ ಮೇಲಿರುವ ಪ್ರೀತಿಯಿಂದಾಗಿ ಆತನಿಗೆ ನಿಷ್ಠೆ ತೋರಿಸುತ್ತಾನಾ? ಬೇರೆ ಮಾತುಗಳಲ್ಲಿ ಹೇಳುವುದಾದರೆ, ಮಾನವರು ಸಮಗ್ರತೆ ತೋರಿಸಲು ಸಾಧ್ಯನಾ? ಯೋಬನ ವಿಷಯದಲ್ಲಿ ಇದೇ ಪ್ರಶ್ನೆ ಎದುರಾಯಿತು.

7. ಯೋಬ 1:8-11 ರಲ್ಲಿ ತಿಳಿಸಿರುವ ಪ್ರಕಾರ, ಯೋಬನ ಸಮಗ್ರತೆ ಬಗ್ಗೆ ಯೆಹೋವನಿಗೆ ಮತ್ತು ಸೈತಾನನಿಗೆ ಹೇಗನಿಸಿತು?

7 ಇಸ್ರಾಯೇಲ್ಯರು ಐಗುಪ್ತದಲ್ಲಿದ್ದ ಸಮಯದಲ್ಲೇ ಯೋಬನು ಜೀವಿಸಿದ್ದನು. ಯೋಬನು ಜೀವಿಸಿದ ಸಮಯದಲ್ಲಿ ಆತನಷ್ಟು ಸಮಗ್ರತೆ ತೋರಿಸಿದವರು ಬೇರೆ ಯಾರೂ ಇರಲಿಲ್ಲ. ಯೋಬನು ನಮ್ಮಂತೆಯೇ ಅಪರಿಪೂರ್ಣನಾಗಿದ್ದನು. ಕೆಲವೊಮ್ಮೆ ತಪ್ಪು ಮಾಡಿದನು. ಆದರೂ ಆತನು ತೋರಿಸಿದ ಸಮಗ್ರತೆ ಯೆಹೋವನಿಗೆ ತುಂಬ ಇಷ್ಟವಾಯಿತು. ಸೈತಾನನು ಯೋಬನ ಕಾಲಕ್ಕಿಂತ ಮುಂಚೆಯೇ ಒಬ್ಬ ಮನುಷ್ಯನೂ ಸಮಗ್ರತೆ ತೋರಿಸಲ್ಲ ಎಂದು ಯೆಹೋವನ ಹತ್ತಿರ ದೂರುತ್ತಾ ಇದ್ದನು ಅಂತ ತೋರುತ್ತದೆ. ಆದ್ದರಿಂದ ‘ಯೋಬನ ಸಮಗ್ರತೆಯನ್ನು ನೋಡಿದಿಯಾ’ ಎಂದು ಯೆಹೋವನು ಸೈತಾನನನ್ನು ಕೇಳಿದನು. ಯೋಬನ ಜೀವನ ರೀತಿಯು ಸೈತಾನನು ಒಬ್ಬ ಸುಳ್ಳ ಎಂದು ತೋರಿಸುವಂತೆ ಇತ್ತು! ಹಾಗಾಗಿ ಯೋಬನ ಸಮಗ್ರತೆಯನ್ನು ಪರೀಕ್ಷಿಸಲು ಅನುಮತಿ ಕೊಡುವಂತೆ ಸೈತಾನ ಯೆಹೋವನನ್ನು ಕೇಳಿದನು. ಯೆಹೋವನಿಗೆ ತನ್ನ ಸ್ನೇಹಿತನಾದ ಯೋಬನ ಮೇಲೆ ನಂಬಿಕೆ ಇತ್ತು. ಆದ್ದರಿಂದ ಆತನನ್ನು ಪರೀಕ್ಷಿಸಲು ಅನುಮತಿಸಿದನು.—ಯೋಬ 1:8-11 ಓದಿ.

8. ಸೈತಾನ ಯೋಬನಿಗೆ ಏನೆಲ್ಲಾ ಕಷ್ಟ ಕೊಟ್ಟನು?

8 ಸೈತಾನ ಕ್ರೂರಿ, ಕೊಲೆಗಾರ. ಮೊದಲು ಯೋಬನ ಆಸ್ತಿಪಾಸ್ತಿಗೆ ಕೈಹಾಕಿದ, ನಂತರ ಆತನ ಆಳುಗಳನ್ನು ಕೊಲ್ಲಿಸಿದ. ಸಮಾಜದಲ್ಲಿ ಯೋಬನಿಗಿದ್ದ ಹೆಸರನ್ನು ಹಾಳುಮಾಡಿದ. ಆಮೇಲೆ ಆತನ ಕುಟುಂಬದ ಮೇಲೆ ಕೈಹಾಕಿದ. ಆತನ ಮುದ್ದಾದ ಹತ್ತು ಮಕ್ಕಳನ್ನು ಕೊಂದುಹಾಕಿದ. ನಂತರ ಆತನ ಆರೋಗ್ಯವನ್ನು ಹಾಳುಮಾಡಿದ. ಅಡಿಯಿಂದ ಮುಡಿಯ ವರೆಗೆ ತುಂಬ ನೋವು ಕೊಡುವ ದೊಡ್ಡ ಗುಳ್ಳೆಗಳಾಗುವಂತೆ ಮಾಡಿದ. ಯೋಬನ ಹೆಂಡತಿಗೆ ಇದನ್ನೆಲ್ಲಾ ನೋಡಿ ದುಃಖ ತಡಿಯಕ್ಕಾಗದೆ “ದೇವರನ್ನು ದೂಷಿಸಿ ಸಾಯಿ” ಎಂದಳು. ಯೋಬನಿಗೇ ಸಾಯಬೇಕೆಂದು ಅನಿಸಿತು. ಆದರೂ ಸಮಗ್ರತೆ ಕಾಪಾಡಿಕೊಂಡನು. ಆಮೇಲೆ ಸೈತಾನ ಇನ್ನೊಂದು ರೀತಿಯಲ್ಲಿ ದಾಳಿಮಾಡಲು ಪ್ರಯತ್ನಿಸಿದನು. ಯೋಬನ ಮೂರು ಸ್ನೇಹಿತರು ಆತನ ಬಳಿ ಬರುವಂತೆ ಮಾಡಿದನು. ಈ ಪುರುಷರು ಬಂದು ತುಂಬ ದಿನ ಯೋಬನ ಜೊತೆ ಇದ್ದರು, ಆದರೆ ಸಾಂತ್ವನ ಕೊಡುವ ಒಂದು ಮಾತನ್ನೂ ಹೇಳಲಿಲ್ಲ. ಆತನ ಬಗ್ಗೆ ತುಂಬ ತಪ್ಪಾಗಿ ಮಾತಾಡಿದರು, ಬೈದರು. ದೇವರೇ ಯೋಬನಿಗೆ ಇಷ್ಟೆಲ್ಲಾ ಕಷ್ಟ ಕೊಟ್ಟಿರಬೇಕು ಎಂದು ಹೇಳಿದರು. ಯೋಬನು ಸಮಗ್ರತೆ ಕಾಪಾಡಿಕೊಳ್ಳಲು ಅದೇನೇ ಮಾಡಿದರೂ ಯೆಹೋವನು ಅದನ್ನು ಗಮನಿಸಲ್ಲ ಅಂದರು. ಯೋಬನು ಒಳ್ಳೇ ವ್ಯಕ್ತಿ ಅಲ್ಲ, ಅದಕ್ಕೆ ಅವನಿಗೆ ಇಷ್ಟೆಲ್ಲಾ ಕಷ್ಟ ಬಂದಿದೆ ಎಂದರು.—ಯೋಬ 1:13-22; 2:7-11; 15:4, 5; 22:3-6; 25:4-6.

9. ಕಷ್ಟಗಳಿಂದ ಕಂಗಾಲಾಗಿದ್ದರೂ ಯೋಬನು ಏನು ಮಾಡಲಿಲ್ಲ?

9 ಇಷ್ಟೆಲ್ಲಾ ಕಷ್ಟ ಅನುಭವಿಸಿದ ಯೋಬನ ಪ್ರತಿಕ್ರಿಯೆ ಏನಾಗಿತ್ತು? ಆತನು ಪರಿಪೂರ್ಣ ವ್ಯಕ್ತಿಯಾಗಿರಲಿಲ್ಲ. ಸ್ನೇಹಿತರು ಅನ್ನುವ ಹೆಸರಲ್ಲಿ ಬಂದು ತನಗೆ ನೋವು ಮಾಡಿದವರನ್ನು ಕೋಪದಿಂದ ಬೈದ. ನಂತರ ತಾನು ಹಾಗೆ ಮಾತಾಡಿದ್ದು ಸರಿಯಲ್ಲ, ಆತುರದಿಂದ ಮಾತಾಡಿಬಿಟ್ಟೆ ಎಂದು ಒಪ್ಪಿಕೊಂಡ. ದೇವರಿಗಿಂತ ತಾನೇ ದೊಡ್ಡ ನೀತಿವಂತ ಅಂತ ಹೇಳುವ ಮಟ್ಟಕ್ಕೆ ಹೋದ. (ಯೋಬ 6:3; 13:4, 5; 32:2; 34:5) ಆದರೂ ತನ್ನ ಜೀವನದ ಅತಿ ಘೋರವಾದ ಸಮಯದಲ್ಲೂ ಆತನು ದೇವರ ವಿರುದ್ಧ ತಿರುಗಿ ಬೀಳಲಿಲ್ಲ. ಆತನ ಸ್ನೇಹಿತರು ಅಂತ ಬಂದವರು ಸುಳ್ಳು-ಸುಳ್ಳಾಗಿ ಏನೇ ಹೇಳಿದರೂ ಆತನು ಅದನ್ನು ನಂಬಲಿಲ್ಲ. ‘ನೀವು ನ್ಯಾಯವಂತರೆಂದು ನಾನು ಒಪ್ಪುವದು ದೂರವಾಗಿರಲಿ, ಸಾಯುವ ತನಕ ನನ್ನ ಯಥಾರ್ಥತೆಯನ್ನು ಕಳಕೊಳ್ಳೆನು’ ಅಥವಾ ‘ಸಮಗ್ರತೆಯನ್ನು ಬಿಡೆನು’ ಎಂದನು. (ಯೋಬ 27:5) ಆ ಮಾತುಗಳಿಗೆ ತುಂಬ ಶಕ್ತಿ ಇದೆ. ಅದೇನೇ ಆದರೂ ಯೋಬನು ತನ್ನ ಸಮಗ್ರತೆಯನ್ನು ಬಿಟ್ಟುಕೊಡಲ್ಲ ಅಂದನು. ನಾವೂ ಅದನ್ನೇ ಮಾಡಬಲ್ಲೆವು.

10. ಸೈತಾನನು ಯೋಬನ ಸಮಗ್ರತೆಗೆ ಮಸಿ ಬಳಿಯಲು ಪ್ರಯತ್ನಿಸಿದಂತೆ ನಮ್ಮ ವಿಷಯದಲ್ಲೂ ಏನು ಮಾಡಲು ಬಯಸುತ್ತಾನೆ?

10 ಸೈತಾನನು ಯೋಬನ ಸಮಗ್ರತೆಗೆ ಮಸಿ ಬಳಿಯಲು ಪ್ರಯತ್ನಿಸಿದಂತೆ ನಮ್ಮೆಲ್ಲರ ವಿಷಯದಲ್ಲೂ ಮಾಡಲು ಬಯಸುತ್ತಾನೆ. ನಿಮಗೆ ದೇವರ ಮೇಲೆ ನಿಜವಾದ ಪ್ರೀತಿ ಇಲ್ಲ, ಕಷ್ಟ ಬಂದರೆ ದೇವರನ್ನು ಬಿಟ್ಟು ಓಡಿಹೋಗುತ್ತೀರಿ, ಸಮಗ್ರತೆ ಇರೋ ತರ ನಾಟಕ ಆಡುತ್ತೀರಿ ಅಂತಾನೆ. (ಯೋಬ 2:4, 5; ಪ್ರಕ. 12:10) ಇದನ್ನೆಲ್ಲಾ ಕೇಳಿದಾಗ ನಿಮಗೆ ಹೇಗನಿಸುತ್ತದೆ? ತುಂಬ ನೋವಾಗುತ್ತದೆ ಅಲ್ವಾ? ಆದರೂ ಯೆಹೋವನಿಗೆ ನಿಮ್ಮ ಮೇಲೆ ತುಂಬ ನಂಬಿಕೆ ಇರುವುದರಿಂದ ಒಂದು ಅದ್ಭುತ ಅವಕಾಶವನ್ನು ನಿಮ್ಮ ಮುಂದೆ ಇಟ್ಟಿದ್ದಾನೆ. ನಿಮ್ಮ ಸಮಗ್ರತೆಯನ್ನು ಪರೀಕ್ಷಿಸಲು ಸೈತಾನನಿಗೆ ಅನುಮತಿ ಕೊಡುತ್ತಾನೆ. ನೀವು ಖಂಡಿತ ನಿಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳುತ್ತೀರಿ ಮತ್ತು ಸೈತಾನ ಒಬ್ಬ ಶುದ್ಧ ಸುಳ್ಳ ಅಂತ ರುಜುಪಡಿಸಲು ಸಹಾಯ ಮಾಡುತ್ತೀರಿ ಅನ್ನುವ ನಂಬಿಕೆ ಯೆಹೋವನಿಗೆ ಇದೆ. ಅಷ್ಟೇ ಅಲ್ಲ, ಸೈತಾನನ ವಿರುದ್ಧ ಜಯಗಳಿಸಲು ನಾನು ನಿಮಗೆ ಸಹಾಯ ಮಾಡುತ್ತೇನೆ ಎಂದು ಆತನು ಹೇಳಿದ್ದಾನೆ. (ಇಬ್ರಿ. 13:6) ಇಡೀ ವಿಶ್ವದ ಪರಮಾಧಿಕಾರಿ ನಮ್ಮನ್ನು ನಂಬುತ್ತಾನೆ ಅಂತ ನೆನಸುವಾಗ ಎಷ್ಟು ಸಂತೋಷವಾಗುತ್ತದೆ ಅಲ್ವಾ? ಸಮಗ್ರತೆಗೆ ಎಷ್ಟು ಬೆಲೆ ಇದೆ ನೋಡಿ! ಸೈತಾನ ಮಹಾ ಸುಳ್ಳ ಎಂದು ರುಜುಪಡಿಸಲು ಇದು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ನಮ್ಮ ಸ್ವರ್ಗೀಯ ತಂದೆಯ ಹೆಸರಿಗೆ ಮಹಿಮೆ ತರಲು ಹಾಗೂ ಆತನು ಆಳುವ ವಿಧವೇ ಅತ್ಯುತ್ತಮವಾದದ್ದು ಎಂದು ರುಜುಪಡಿಸಲು ಸಮಗ್ರತೆ ಸಹಾಯ ಮಾಡುತ್ತದೆ. ಈ ಅತ್ಯಾವಶ್ಯಕ ಗುಣವನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದು?

ನಾವೀಗ ಹೇಗೆ ಸಮಗ್ರತೆ ಕಾಪಾಡಿಕೊಳ್ಳಬಹುದು?

11. ಯೋಬನ ಉದಾಹರಣೆಯಿಂದ ಏನು ಕಲಿಯಬಹುದು?

11 ಈ “ಕಡೇ ದಿವಸಗಳಲ್ಲಿ” ಸೈತಾನ ನಮ್ಮ ಮೇಲೆ ದಾಳಿಮಾಡುವುದನ್ನು ಜಾಸ್ತಿ ಮಾಡಿದ್ದಾನೆ. (2 ತಿಮೊ. 3:1) ಇಂಥ ಕರಾಳ ಸಮಯದಲ್ಲಿ ಸಮಗ್ರತೆ ಕಾಪಾಡಿಕೊಳ್ಳಲು ನಾವೇನು ಮಾಡಬೇಕು? ನಾವೇನು ಮಾಡಬೇಕೆಂದು ಪುನಃ ಯೋಬನ ಉದಾಹರಣೆಯಿಂದನೇ ಕಲಿಯುತ್ತೇವೆ. ಪರೀಕ್ಷೆಗಳು ಬರುವ ಎಷ್ಟೋ ಸಮಯದ ಮುಂಚೆನೇ ಆತನು ಸಮಗ್ರತೆ ಕಾಪಾಡಿಕೊಂಡಿದ್ದನು. ಅದೇ ರೀತಿ ನಾವು ಸಹ ಸಮಗ್ರತೆ ಕಾಪಾಡಿಕೊಳ್ಳಲು ಏನು ಮಾಡಬೇಕೆಂದು ಮೂರು ವಿಷಯಗಳನ್ನು ನೋಡೋಣ.

ಯೋಬನು ತನ್ನ ಮಕ್ಕಳಿಗೆ ಯೆಹೋವನ ಅದ್ಭುತವಾದ ಸೃಷ್ಟಿಯ ಬಗ್ಗೆ ತಿಳಿಸುತ್ತಿದ್ದಾನೆ

ಸಮಗ್ರತೆ ಕಾಪಾಡಿಕೊಳ್ಳಲು ನಮಗೆ ಸಹಾಯ ಮಾಡುವ ಕೆಲವು ವಿಧಗಳು ಯಾವುವು?(ಪ್ಯಾರ 12 ನೋಡಿ)c

12. (ಎ) ಯೋಬ 26:7, 8, 14 ರಲ್ಲಿರುವ ಪ್ರಕಾರ, ಯೋಬನು ಯೆಹೋವನ ಮೇಲೆ ಭಯಭಕ್ತಿಯನ್ನು ಹೇಗೆ ಬೆಳೆಸಿಕೊಂಡನು? (ಬಿ) ನಾವು ಸಹ ಅದೇ ಭಯಭಕ್ತಿಯನ್ನು ಹೇಗೆ ಬೆಳೆಸಿಕೊಳ್ಳಬಹುದು?

12 ಯೋಬನು ಯೆಹೋವನ ಮೇಲೆ ಭಯಭಕ್ತಿ ಬೆಳೆಸಿಕೊಳ್ಳುವ ಮೂಲಕ ಆತನ ಮೇಲಿರುವ ಪ್ರೀತಿಯನ್ನು ಬಲಪಡಿಸಿಕೊಂಡನು. ಯೋಬನು ಯೆಹೋವನ ಅದ್ಭುತ ಸೃಷ್ಟಿಯನ್ನು ನೋಡಿ ಆನಂದಿಸಲು ಸಮಯ ತಗೊಂಡನು. (ಯೋಬ 26:7, 8, 14 ಓದಿ.) ಭೂಮಿ, ಆಕಾಶ, ಮೋಡ ಮತ್ತು ಗುಡುಗಿನ ಬಗ್ಗೆ ಯೋಚಿಸಿದಾಗ ಆತನಿಗೆ ತುಂಬ ಆಶ್ಚರ್ಯ ಆಯಿತು. ಆದರೂ ತನಗೆ ವಿಶಾಲವಾದ ಸೃಷ್ಟಿಯ ಬಗ್ಗೆ ಸ್ವಲ್ಪನೇ ಗೊತ್ತು ಎಂದು ಅರ್ಥಮಾಡಿಕೊಂಡನು. ಯೆಹೋವನ ಮಾತುಗಳನ್ನು ಸಹ ಆತನು ತುಂಬ ಮಾನ್ಯ ಮಾಡಿದನು. ದೇವರ ಮಾತುಗಳನ್ನು ‘ಎದೆಯಲ್ಲಿ ನಿಧಿಯಾಗಿ ಇಟ್ಟುಕೊಂಡಿದ್ದೇನೆ’ ಎಂದನು. (ಯೋಬ 23:12) ಯೆಹೋವನ ಬಗ್ಗೆ ಯೋಚಿಸುವಾಗ ಆತನಿಗೆ ಮೈ ಜುಮ್ಮೆನಿಸುತ್ತಿತ್ತು. ದೇವರ ಮೇಲೆ ತುಂಬ ಗೌರವ ಬೆಳೆಸಿಕೊಂಡನು. ಆತನು ತನ್ನ ಸ್ವರ್ಗೀಯ ತಂದೆಯನ್ನು ಪ್ರೀತಿಸಿದನು ಮತ್ತು ಆತನಿಗೆ ಇಷ್ಟವಾದ ವಿಷಯಗಳನ್ನೇ ಮಾಡಲು ಬಯಸಿದನು. ಇದರಿಂದ ಸಮಗ್ರತೆ ಕಾಪಾಡಿಕೊಳ್ಳಬೇಕೆಂಬ ಆಸೆ ಯೋಬನಲ್ಲಿ ಬಲವಾಯಿತು. ನಾವು ಸಹ ಯೋಬನ ತರಾನೇ ಮಾಡಬೇಕು. ಯೋಬನ ಕಾಲಕ್ಕಿಂತ ನಮ್ಮ ಕಾಲದಲ್ಲಿ ಸೃಷ್ಟಿಯ ಅದ್ಭುತಗಳ ಬಗ್ಗೆ ನಮಗೆ ತುಂಬ ಗೊತ್ತಿದೆ. ಯೆಹೋವನು ಎಂಥ ವ್ಯಕ್ತಿ ಎಂದು ತಿಳಿದುಕೊಳ್ಳಲು ನಮಗೆ ಪೂರ್ತಿ ಬೈಬಲ್‌ ಸಹ ಇದೆ. ನಾವು ಕಲಿಯುವ ಎಲ್ಲಾ ವಿಷಯಗಳು ನಮ್ಮ ಹೃದಯದಲ್ಲಿ ಭಯಭಕ್ತಿಯನ್ನು ಜಾಸ್ತಿ ಮಾಡುತ್ತವೆ. ದೇವರ ಮೇಲೆ ಭಯಭಕ್ತಿ ಬೆಳೆಸಿಕೊಂಡಾಗ ಆತನ ಮೇಲೆ ಪ್ರೀತಿ ಜಾಸ್ತಿ ಆಗುತ್ತದೆ. ಆತನ ಮಾತನ್ನು ಕೇಳಲು ಮನಸ್ಸಾಗುತ್ತದೆ. ಸಮಗ್ರತೆ ಕಾಪಾಡಿಕೊಳ್ಳಬೇಕೆಂಬ ಆಸೆ ಬಲವಾಗುತ್ತದೆ.—ಯೋಬ 28:28.

ಒಬ್ಬ ಸಹೋದರ ತನ್ನ ಜೊತೆ ಕೆಲಸ ಮಾಡುವವರು ತೋರಿಸುವ ಕಾಮಪ್ರಚೋದಕ ಚಿತ್ರವನ್ನು ನೋಡಲು ನಿರಾಕರಿಸುತ್ತಿದ್ದಾನೆ

ನಾವು ಸಮಗ್ರತೆ ಕಾಪಾಡಿಕೊಳ್ಳಬೇಕಾದರೆ ಕಾಮಪ್ರಚೋದಕ ಚಿತ್ರಗಳನ್ನು ನೋಡಬಾರದು (ಪ್ಯಾರ 13 ನೋಡಿ)d

13-14. (ಎ) ಯೋಬ 31:1 ರಲ್ಲಿರುವ ಪ್ರಕಾರ, ಯೋಬನು ಹೇಗೆ ವಿಧೇಯತೆ ತೋರಿಸಿದನು? (ಬಿ) ಯೋಬನ ಮಾದರಿಯನ್ನು ನಾವು ಹೇಗೆ ಅನುಕರಿಸಬಹುದು?

13 ಯೋಬನು ಎಲ್ಲಾ ವಿಷಯದಲ್ಲೂ ವಿಧೇಯತೆ ತೋರಿಸಿದ್ದು ಸಮಗ್ರತೆ ತೋರಿಸಲು ಸಹಾಯ ಮಾಡಿತು. ಸಮಗ್ರತೆಗೂ ವಿಧೇಯತೆಗೂ ಬಲವಾದ ನಂಟಿದೆ ಎಂದು ಯೋಬನಿಗೆ ಗೊತ್ತಿತ್ತು. ನಾವು ಪ್ರತಿ ಸಾರಿ ವಿಧೇಯತೆ ತೋರಿಸುವಾಗ ಸಮಗ್ರತೆ ತೋರಿಸಲು ಪ್ರೋತ್ಸಾಹ ಸಿಗುತ್ತದೆ. ಯೋಬ ಪ್ರತಿ ದಿನ ಯೆಹೋವನಿಗೆ ವಿಧೇಯತೆ ತೋರಿಸಲು ತುಂಬ ಪ್ರಯತ್ನ ಮಾಡಿದನು. ಉದಾಹರಣೆಗೆ, ಬೇರೆ ಸ್ತ್ರೀಯರೊಂದಿಗೆ ನಡಕೊಳ್ಳುವ ರೀತಿ ಸರಿಯಾಗಿರುವಂತೆ ನೋಡಿಕೊಂಡನು. (ಯೋಬ 31:1 ಓದಿ.) ತನ್ನ ಹೆಂಡತಿಯನ್ನು ಬಿಟ್ಟು ಬೇರೆ ಯಾವ ಸ್ತ್ರೀಯನ್ನೇ ಆಗಲಿ ನೋಡಿ ಆಸೆಪಡುವುದು ತಪ್ಪು ಎಂದು ಆತನಿಗೆ ಗೊತ್ತಿತ್ತು. ಇಂದು ನಮ್ಮ ಸುತ್ತಲೂ ಲೈಂಗಿಕ ಅನೈತಿಕತೆ ತುಂಬಿದೆ. ಯೋಬನಂತೆ ನಾವು ಸಹ ನಮ್ಮ ಹೆಂಡತಿಯನ್ನು ಬಿಟ್ಟು ಬೇರೆ ಯಾರ ಮೇಲೂ ತಪ್ಪಾದ ಆಸೆಗಳನ್ನು ಬೆಳೆಸಿಕೊಳ್ಳಬಾರದು ಅಂತ ದೃಢನಿರ್ಧಾರ ಮಾಡಿದ್ದೇವಾ? ಯಾವುದೇ ವಿಧದಲ್ಲಿ ಕಾಮಪ್ರಚೋದಕ ಚಿತ್ರಗಳನ್ನು ನೋಡದೇ ಇರಲು ದೃಢಮನಸ್ಸು ಮಾಡಿದ್ದೇವಾ? (ಮತ್ತಾ. 5:28) ನಾವು ಈ ರೀತಿ ಪ್ರತಿ ದಿನ ಸ್ವನಿಯಂತ್ರಣ ತೋರಿಸಿದರೆ ಸಮಗ್ರತೆ ತೋರಿಸಲು ಸಾಧ್ಯವಾಗುತ್ತದೆ.

ದುಬಾರಿಯಾದ ಒಂದು ದೊಡ್ಡ ಟಿವಿಯನ್ನು ಖರೀದಿಸುವಂತೆ ಸೇಲ್ಸ್‌ಮ್ಯಾನ್‌ ಒತ್ತಾಯ ಮಾಡುವಾಗ ಸಹೋದರನು ನಿರಾಕರಿಸುತ್ತಿದ್ದಾನೆ

ನಾವು ಸಮಗ್ರತೆ ಕಾಪಾಡಿಕೊಳ್ಳಬೇಕಾದರೆ ಪ್ರಾಪಂಚಿಕ ವಸ್ತುಗಳ ಬಗ್ಗೆ ಸರಿಯಾದ ನೋಟ ಇಟ್ಟುಕೊಳ್ಳಬೇಕು (ಪ್ಯಾರ 14 ನೋಡಿ)e

14 ಯೋಬನು ಸಿರಿಸಂಪತ್ತನ್ನು ಸಹ ಯೆಹೋವನ ದೃಷ್ಟಿಯಿಂದ ನೋಡಿದನು. ಆಸ್ತಿಪಾಸ್ತಿಯನ್ನೇ ದೇವರನ್ನಾಗಿ ಮಾಡಿಕೊಂಡರೆ ದೊಡ್ಡ ತಪ್ಪಾಗಿ ಬಿಡುತ್ತದೆ ಮತ್ತು ಅದಕ್ಕೆ ತಕ್ಕ ಶಿಕ್ಷೆ ಸಿಗುತ್ತದೆ ಎಂದು ಆತನಿಗೆ ಗೊತ್ತಿತ್ತು. (ಯೋಬ 31:24, 25, 28) ದುಡ್ಡೇ ದೊಡ್ಡಪ್ಪ ಎಂದು ನಂಬಿಕೊಂಡಿರುವ ಲೋಕದಲ್ಲಿ ನಾವು ಜೀವಿಸುತ್ತಿದ್ದೇವೆ. ದುಡ್ಡು ಮತ್ತು ಸಿರಿಸಂಪತ್ತಿನ ಬಗ್ಗೆ ಸರಿಯಾದ ನೋಟ ಇಟ್ಟುಕೊಳ್ಳಬೇಕೆಂಬ ಬೈಬಲಿನ ಮಾತಿಗೆ ನಾವು ಕಿವಿಗೊಡಬೇಕು. ಆಗ ಸಮಗ್ರತೆ ಕಾಪಾಡಿಕೊಳ್ಳಲು ಹೊಸ ಬಲ ಸಿಗುತ್ತದೆ.—ಜ್ಞಾನೋ. 30:8, 9; ಮತ್ತಾ. 6:19-21.

ಸಹೋದರನು ಹೊಸಲೋಕದ ಬಗ್ಗೆ ಧ್ಯಾನಿಸುತ್ತಾ ಪ್ರಾರ್ಥನೆ ಮಾಡುತ್ತಿದ್ದಾನೆ

ನಾವು ಸಮಗ್ರತೆ ಕಾಪಾಡಿಕೊಳ್ಳಬೇಕಾದರೆ ನಮ್ಮ ನಿರೀಕ್ಷೆಯನ್ನು ಬಲವಾಗಿ ಇಟ್ಟುಕೊಳ್ಳಬೇಕು (ಪ್ಯಾರ 15 ನೋಡಿ)f

15. (ಎ) ಯಾವ ವಿಚಾರವನ್ನು ಮನಸ್ಸಲ್ಲಿಟ್ಟದ್ದರಿಂದ ಯೋಬನಿಗೆ ಸಮಗ್ರತೆ ತೋರಿಸಲು ಸಾಧ್ಯವಾಯಿತು? (ಬಿ) ಯೆಹೋವನು ಕೊಡುವ ನಿರೀಕ್ಷೆಯ ಮೇಲೆ ಮನಸ್ಸಿಟ್ಟರೆ ಹೇಗೆ ಸಹಾಯವಾಗುತ್ತದೆ?

15 ಸಮಗ್ರತೆ ತೋರಿಸಿದರೆ ದೇವರು ತಕ್ಕ ಪ್ರತಿಫಲ ಕೊಡುತ್ತಾನೆ ಎಂಬ ನಂಬಿಕೆ ಯೋಬನಿಗಿತ್ತು. ತಾನು ತೋರಿಸುವ ಸಮಗ್ರತೆ ದೇವರಿಗೆ ಮುಖ್ಯ ಎಂದು ಯೋಬನಿಗೆ ಗೊತ್ತಿತ್ತು. (ಯೋಬ 31:5) ಎಷ್ಟೇ ಕಷ್ಟ ಬಂದರೂ ದೇವರು ಕೊನೆಯಲ್ಲಿ ತಕ್ಕ ಪ್ರತಿಫಲ ಕೊಡುತ್ತಾನೆ ಎಂಬ ದೃಢಭರವಸೆ ಆತನಿಗಿತ್ತು. ಆದ್ದರಿಂದ ಏನೇ ಆದರೂ ಸಮಗ್ರತೆಯನ್ನು ಬಿಟ್ಟುಕೊಡಲ್ಲ ಎಂದು ದೃಢಮನಸ್ಸು ಮಾಡಿಕೊಂಡಿದ್ದನು. ಯೆಹೋವನಿಗೆ ಯೋಬನು ತೋರಿಸಿದ ಸಮಗ್ರತೆ ತುಂಬ ಇಷ್ಟವಾಯಿತು. ಆದ್ದರಿಂದ ಆತನಿಗೆ ತುಂಬ ಆಶೀರ್ವಾದಗಳನ್ನು ಕೊಟ್ಟನು. ಆತನು ಅಪರಿಪೂರ್ಣನಾಗಿದ್ದರೂ ದೇವರ ಅನುಗ್ರಹ ಸಿಕ್ಕಿತು. (ಯೋಬ 42:12-17; ಯಾಕೋ. 5:11) ಮುಂದೆ ಯೋಬನಿಗೆ ಇನ್ನೂ ಅನೇಕ ಅದ್ಭುತವಾದ ಆಶೀರ್ವಾದಗಳು ಸಿಗಲಿವೆ. ಯೆಹೋವನು ನಿಮ್ಮ ಸಮಗ್ರತೆಯನ್ನು ಸಹ ಆಶೀರ್ವದಿಸುತ್ತಾನೆ ಎಂಬ ನಂಬಿಕೆ ಇದೆಯಾ? ನಮ್ಮ ದೇವರು ಬದಲಾಗಿಲ್ಲ. (ಮಲಾ. 3:6) ಯೆಹೋವನು ನಮ್ಮ ಸಮಗ್ರತೆಯನ್ನು ಮಾನ್ಯಮಾಡುತ್ತಾನೆ ಎಂದು ನಾವು ಮನಸ್ಸಲ್ಲಿಡಬೇಕು. ಆಗ ಉಜ್ವಲ ಭವಿಷ್ಯ ಸಿಗುತ್ತದೆ ಎಂಬ ನಂಬಿಕೆ ಬಲವಾಗುತ್ತದೆ.—1 ಥೆಸ. 5:8, 9.

16. ನಾವು ಯಾವ ದೃಢತೀರ್ಮಾನ ಮಾಡಬೇಕು?

16 ಏನೇ ಆದರೂ ನಿಮ್ಮ ಸಮಗ್ರತೆಯನ್ನು ಬಿಟ್ಟುಕೊಡಬೇಡಿ. ಕೆಲವೊಮ್ಮೆ ಈ ಹೋರಾಟವನ್ನು ನೀವೊಬ್ಬರೇ ಮಾಡುತ್ತಿದ್ದೀರಿ ಎಂದು ಅನಿಸಬಹುದು. ಆದರೆ ಅದು ನಿಜ ಅಲ್ಲ. ಲೋಕವ್ಯಾಪಕವಾಗಿ ಲಕ್ಷಾಂತರ ಮಂದಿ ಈ ಹೋರಾಟವನ್ನು ನಂಬಿಗಸ್ತಿಕೆಯಿಂದ ಮಾಡುತ್ತಿದ್ದಾರೆ. ಹಿಂದಿನ ಕಾಲದಲ್ಲೂ ಅನೇಕ ಸ್ತ್ರೀ-ಪುರುಷರು ಈ ಹೋರಾಟವನ್ನು ಮಾಡಿ ಜಯಿಸಿದ್ದಾರೆ. ಅವರಿಗೆ ಜೀವ ಬೆದರಿಕೆ ಹಾಕಿದರೂ ತಮ್ಮ ಸಮಗ್ರತೆಯನ್ನು ಜೀವಂತವಾಗಿ ಇಟ್ಟುಕೊಂಡರು. ನಾವು ಸಹ ಇದನ್ನೇ ಮಾಡಬಹುದು. (ಇಬ್ರಿ. 11:36-38; 12:1) ನಾವೆಲ್ಲರೂ ಯೋಬನಂತೆಯೇ ‘ಸಾಯುವ ತನಕ ನನ್ನ ಸಮಗ್ರತೆಯನ್ನು ಕಳಕೊಳ್ಳೆನು’ ಎಂದು ದೃಢವಾಗಿ ಹೇಳೋಣ. ನಾವು ತೋರಿಸುವ ಸಮಗ್ರತೆ ಯೆಹೋವನ ಮುಕುಟದಲ್ಲಿಟ್ಟ ಮಾಣಿಕ್ಯದಂತೆ ಇರಲಿ!

ನಿಮ್ಮ ಉತ್ತರವೇನು?

  • ಸಮಗ್ರತೆ ಅಂದರೆ ಏನು?

  • ನಾವು ಯಾಕೆ ಸಮಗ್ರತೆ ತೋರಿಸಬೇಕು?

  • ನಾವು ಹೇಗೆ ಸಮಗ್ರತೆ ಕಾಪಾಡಿಕೊಳ್ಳಬಹುದು?

ಗೀತೆ 63 ಸದಾ ನಿಷ್ಠರು

a ಸಮಗ್ರತೆ ಅಂದರೆ ಏನು? ತನ್ನ ಸೇವಕರು ಸಮಗ್ರತೆ ತೋರಿಸಿದಾಗ ಯೆಹೋವನಿಗೆ ಯಾಕೆ ಇಷ್ಟ ಆಗುತ್ತದೆ? ನಾವೆಲ್ಲರೂ ಸಮಗ್ರತೆ ತೋರಿಸುವುದು ಯಾಕೆ ಮುಖ್ಯ? ಈ ಪ್ರಶ್ನೆಗಳಿಗೆ ಬೈಬಲ್‌ ಕೊಡುವ ಉತ್ತರವನ್ನು ಈ ಲೇಖನದಲ್ಲಿ ನೋಡಲಿದ್ದೇವೆ. ನಾವು ಹೇಗೆ ಪ್ರತಿ ದಿನ ಸಮಗ್ರತೆ ಕಾಪಾಡಿಕೊಳ್ಳಬಹುದು ಎಂದು ಸಹ ಈ ಲೇಖನದಿಂದ ಕಲಿಯಲಿದ್ದೇವೆ. ಸಮಗ್ರತೆ ಕಾಪಾಡಿಕೊಳ್ಳುವುದರಿಂದ ನಮಗೆ ದೊಡ್ಡ ಆಶೀರ್ವಾದಗಳು ಸಿಗುತ್ತವೆ.

b ಒಂದು ಪ್ರಾಣಿಯ ವಿಷಯದಲ್ಲಿ ಹೇಳಲಾಗಿರುವ “ಪೂರ್ಣಾಂಗ” ಎನ್ನುವುದಕ್ಕಿರುವ ಹೀಬ್ರು ಪದಕ್ಕೂ ಮನುಷ್ಯರ ವಿಷಯದಲ್ಲಿ ಹೇಳಲಾಗಿರುವ “ಸಮಗ್ರತೆ” ಎಂಬ ಹೀಬ್ರು ಪದಕ್ಕೂ ಸಂಬಂಧ ಇದೆ.

c ಚಿತ್ರ ವಿವರಣೆ: ಯೋಬನು ತನ್ನ ಮಕ್ಕಳಿಗೆ ಯೆಹೋವನ ಅದ್ಭುತವಾದ ಸೃಷ್ಟಿಯ ಬಗ್ಗೆ ತಿಳಿಸುತ್ತಿದ್ದಾನೆ.

d ಚಿತ್ರ ವಿವರಣೆ: ಒಬ್ಬ ಸಹೋದರ ತನ್ನ ಜೊತೆ ಕೆಲಸ ಮಾಡುವವರು ತೋರಿಸುವ ಕಾಮಪ್ರಚೋದಕ ಚಿತ್ರವನ್ನು ನೋಡಲು ನಿರಾಕರಿಸುತ್ತಿದ್ದಾನೆ.

e ಚಿತ್ರ ವಿವರಣೆ: ದುಬಾರಿಯಾದ ಒಂದು ದೊಡ್ಡ ಟಿವಿಯನ್ನು ಖರೀದಿಸುವಂತೆ ಸೇಲ್ಸ್‌ಮ್ಯಾನ್‌ ಒತ್ತಾಯ ಮಾಡುವಾಗ ಸಹೋದರನು ನಿರಾಕರಿಸುತ್ತಿದ್ದಾನೆ.

f ಚಿತ್ರ ವಿವರಣೆ: ಸಹೋದರನು ಹೊಸಲೋಕದ ಬಗ್ಗೆ ಧ್ಯಾನಿಸುತ್ತಾ ಪ್ರಾರ್ಥನೆ ಮಾಡುತ್ತಿದ್ದಾನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ