ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w19 ಜುಲೈ ಪು. 20-24
  • ಧರ್ಮದಲ್ಲಿ ನಂಬಿಕೆ ಇಲ್ಲದವರಿಗೆ ಸತ್ಯ ಕಲಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಧರ್ಮದಲ್ಲಿ ನಂಬಿಕೆ ಇಲ್ಲದವರಿಗೆ ಸತ್ಯ ಕಲಿಸಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೋಗ್ಯ ಮನೋಭಾವದ ಜನರು ಇದ್ದೇ ಇರುತ್ತಾರೆ
  • ಜನರ ಹೃದಯ ತಲುಪಿ
  • ದೇವರಿದ್ದಾನೆ ಎಂದು ನಂಬದ ಜನರಿಗೂ ಸಾರಿ
  • ದೇವರನ್ನ ನಂಬದವ್ರಿಗೆ ಸೃಷ್ಟಿಕರ್ತನ ಬಗ್ಗೆ ತಿಳ್ಕೊಳ್ಳೋಕೆ ಸಹಾಯ ಮಾಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಸೋತು ಹೋಗಬೇಡಿ ಸಾರುತ್ತಾ ಇರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಬೈಬಲ್‌ ಬೋಧಿಸುತ್ತದೆ ಪುಸ್ತಕದಲ್ಲಿ ಅಧ್ಯಯನಕ್ಕೆ ಸಿದ್ಧರಿಲ್ಲದವರಿಗೆ ಸಹಾಯ
    2013 ನಮ್ಮ ರಾಜ್ಯದ ಸೇವೆ
  • ಯುವಜನರೇ, ನಿಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
w19 ಜುಲೈ ಪು. 20-24

ಅಧ್ಯಯನ ಲೇಖನ 30

ಧರ್ಮದಲ್ಲಿ ನಂಬಿಕೆ ಇಲ್ಲದವರಿಗೆ ಸತ್ಯ ಕಲಿಸಿ

“ನಾನು ಯಾವ ರೀತಿಯಲ್ಲಾದರೂ ಕೆಲವರನ್ನು ರಕ್ಷಿಸಲಿಕ್ಕಾಗಿ ಎಲ್ಲ ರೀತಿಯ ಜನರಿಗೆ ಎಲ್ಲವೂ ಆದೆನು.”—1 ಕೊರಿಂ. 9:22.

ಗೀತೆ 93 ‘ನಿಮ್ಮ ಬೆಳಕು ಪ್ರಕಾಶಿಸಲಿ’

ಕಿರುನೋಟa

1. ಇತ್ತೀಚಿಗಿನ ವರ್ಷಗಳಲ್ಲಿ ಕೆಲವು ದೇಶಗಳಲ್ಲಿ ಯಾವ ಬದಲಾವಣೆ ಆಗಿದೆ?

ಸಾವಿರಾರು ವರ್ಷಗಳವರೆಗೆ ಹೆಚ್ಚಿನ ಜನರು ದೇವರು-ಧರ್ಮ ಅಂತ ತುಂಬ ನಂಬುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಎಲ್ಲ ತಲೆಕೆಳಗಾಗಿದೆ. ದಿನದಿಂದ ದಿನಕ್ಕೆ ಜನರು ಧರ್ಮದಲ್ಲಿ ಆಸಕ್ತಿಯನ್ನು ಕಳಕೊಳ್ಳುತ್ತಿದ್ದಾರೆ. ಕೆಲವು ದೇಶಗಳಲ್ಲಂತೂ ಹೆಚ್ಚಿನಾಂಶ ಜನರು ತಾವು ಯಾವ ಧರ್ಮಕ್ಕೂ ಸೇರಿಲ್ಲ ಅಂತ ಹೇಳಿಕೊಳ್ಳುತ್ತಾರೆ.b—ಮತ್ತಾ. 24:12.

2. ಧರ್ಮದಲ್ಲಿ ನಂಬಿಕೆ ಇಲ್ಲದವರು ಯಾಕೆ ಹೆಚ್ಚಾಗುತ್ತಾ ಇದ್ದಾರೆ?

2 ಧರ್ಮದಲ್ಲಿ ನಂಬಿಕೆ ಇಲ್ಲದವರುc ಯಾಕೆ ಹೆಚ್ಚಾಗುತ್ತಾ ಇದ್ದಾರೆ? ಯಾಕೆಂದರೆ ಕೆಲವರು ತಮ್ಮ ಸುಖ-ಸಂತೋಷ ಅಥವಾ ಚಿಂತೆಯಲ್ಲೇ ಮುಳುಗಿ ಹೋಗಿದ್ದಾರೆ. (ಲೂಕ 8:14) ಇನ್ನು ಕೆಲವರಿಗೆ ದೇವರಿದ್ದಾನೆ ಅನ್ನೋ ನಂಬಿಕೆನೇ ಇಲ್ಲ. ಇತರರು ದೇವರಿದ್ದಾನೆ ಅಂತ ನಂಬುತ್ತಾರೆ ಆದರೆ ಧರ್ಮ-ಸಂಪ್ರದಾಯ ಎಲ್ಲ ಹಳೇ ಕಾಲದ್ದು, ಈಗಿನ ಕಾಲಕ್ಕೆ ಸರಿಹೋಗಲ್ಲ, ವಿಜ್ಞಾನನೂ ಅದನ್ನು ಒಪ್ಪಲ್ಲ, ಅದರಲ್ಲಿ ಯಾವುದೇ ತಿರುಳಿಲ್ಲ ಎಂದು ನೆನಸುತ್ತಾರೆ. ಅವರು ಜೀವ ತನ್ನಿಂದ ತಾನೇ ಬಂತು ಎಂದು ಹೇಳುವುದನ್ನು ತಮ್ಮ ಸ್ನೇಹಿತರಿಂದ, ಶಿಕ್ಷಕರಿಂದ ಅಥವಾ ವಾರ್ತಾ ಮಾಧ್ಯಮದವರಿಂದ ಕೇಳಿಸಿಕೊಂಡಿರಬಹುದು. ಆದರೆ ದೇವರಿದ್ದಾನೆ ಅನ್ನುವುದಕ್ಕಿರುವ ಆಧಾರಗಳನ್ನು ಯಾವತ್ತೂ ಕೇಳಿಸಿಕೊಂಡಿರಲಿಕ್ಕಿಲ್ಲ. ಇನ್ನಿತರರಿಗೆ ಹಣದಾಸೆ ಮತ್ತು ಅಧಿಕಾರದ ದಾಹ ಇರುವ ಧರ್ಮ ಗುರುಗಳನ್ನು ನೋಡಿ ಸಾಕಾಗಿ ಹೋಗಿದೆ. ಕೆಲವು ದೇಶಗಳಲ್ಲಿ ಅಲ್ಲಿನ ಸರಕಾರಗಳೇ ದೇವರನ್ನು ಆರಾಧಿಸುವುದಕ್ಕೆ ಅನುಮತಿಸುತ್ತಿಲ್ಲ.

3. ಈ ಲೇಖನದ ಉದ್ದೇಶವೇನು?

3 ನಾವು ‘ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಬೇಕೆಂಬ’ ಆಜ್ಞೆಯನ್ನು ಯೇಸು ನಮಗೆ ಕೊಟ್ಟಿದ್ದಾನೆ. (ಮತ್ತಾ. 28:19) ಹಾಗಾದರೆ ದೇವರನ್ನು ಪ್ರೀತಿಸಲು ಮತ್ತು ಕ್ರಿಸ್ತನ ಶಿಷ್ಯರಾಗಲು ಧರ್ಮದಲ್ಲಿ ನಂಬಿಕೆ ಇಲ್ಲದವರಿಗೆ ನಾವು ಹೇಗೆ ಸಹಾಯ ಮಾಡಬಹುದು? ನಮ್ಮ ಸಂದೇಶಕ್ಕೆ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವುದು ಅವರ ಹಿನ್ನೆಲೆಯ ಮೇಲೆ ಹೊಂದಿಕೊಂಡಿದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಉದಾಹರಣೆಗೆ, ಯುರೋಪಿನ ವ್ಯಕ್ತಿ ಪ್ರತಿಕ್ರಿಯಿಸಿದಂತೆ ಏಷ್ಯಾದ ವ್ಯಕ್ತಿ ಪ್ರತಿಕ್ರಿಯಿಸುವುದಿಲ್ಲ. ಇದಕ್ಕೆ ಕಾರಣವೇನು? ಯುರೋಪಿನಲ್ಲಿ ಹೆಚ್ಚಿನವರಿಗೆ ಬೈಬಲಿನ ಬಗ್ಗೆ ಸ್ವಲ್ಪವಾದರೂ ಗೊತ್ತು ಮತ್ತು ಎಲ್ಲವನ್ನೂ ದೇವರೇ ಸೃಷ್ಟಿ ಮಾಡಿದ್ದಾನೆ ಅನ್ನುವ ವಿಷಯ ಅವರಿಗೆ ಹೊಸತಲ್ಲ. ಆದರೆ ಏಷ್ಯಾದ ಹೆಚ್ಚಿನ ಜನರಿಗೆ ಬೈಬಲಿನ ಬಗ್ಗೆ ಅಷ್ಟೇನು ಗೊತ್ತಿಲ್ಲ ಅಥವಾ ಏನೂ ಗೊತ್ತಿಲ್ಲ. ಅಲ್ಲಿನ ಕೆಲವು ದೇಶಗಳ ಜನರಂತೂ ಸೃಷ್ಟಿಕರ್ತ ಇದ್ದಾನೆಂದು ಸಹ ನಂಬಲ್ಲ. ಇಂಥ ಎಲ್ಲ ಹಿನ್ನೆಲೆಯ ಜನರ ಹೃದಯವನ್ನು ತಲುಪುವುದು ಹೇಗೆಂದು ಕಲಿಸುವುದೇ ಈ ಲೇಖನದ ಉದ್ದೇಶ ಆಗಿದೆ.

ಯೋಗ್ಯ ಮನೋಭಾವದ ಜನರು ಇದ್ದೇ ಇರುತ್ತಾರೆ

4. ಜನರ ಬಗ್ಗೆ ನಾವು ಯಾಕೆ ಒಳ್ಳೇ ಅಭಿಪ್ರಾಯ ಇಟ್ಟುಕೊಳ್ಳಬೇಕು?

4 ಒಳ್ಳೇ ಅಭಿಪ್ರಾಯ ಇಟ್ಟುಕೊಳ್ಳಿ. ಧರ್ಮದಲ್ಲಿ ನಂಬಿಕೆ ಇಲ್ಲದ ಜನರು ಸಹ ಯೆಹೋವನ ಸಾಕ್ಷಿಗಳಾಗುತ್ತಿದ್ದಾರೆ. ಅವರಲ್ಲಿ ಅನೇಕರು ಮೊದಲಿನಿಂದಲೂ ಒಳ್ಳೇ ರೀತಿಯಲ್ಲಿ, ನ್ಯಾಯ-ನೀತಿಯಿಂದ ಜೀವನ ನಡೆಸುತ್ತಿದ್ದರು. ಆದರೆ ಅವರಿಗೆ ಧರ್ಮಗಳಲ್ಲಿರುವ ಕಪಟತನ ನೋಡಿ ಅಸಹ್ಯ ಆಗುತ್ತಿತ್ತು. ಇನ್ನು ಕೆಲವರು, ತುಂಬ ಕೆಟ್ಟ ಜೀವನ ನಡೆಸುತ್ತಿದ್ದರು, ಮತ್ತು ಅವರಲ್ಲಿ ಹೆಚ್ಚಿನವರಿಗೆ ಕೆಟ್ಟ ಚಟಗಳು ಇದ್ದವು. ಆದರೆ, ಅದನ್ನೆಲ್ಲ ಬಿಟ್ಟುಬಿಟ್ಟು ಸಾಕ್ಷಿಗಳಾಗಿದ್ದಾರೆ. ‘ನಿತ್ಯಜೀವಕ್ಕಾಗಿ ಯೋಗ್ಯವಾದ ಮನೋಭಾವ ಇರುವ’ ಇಂಥ ಜನರನ್ನು ನಾವು ಯೆಹೋವನ ಸಹಾಯದಿಂದ ಸತ್ಯಕ್ಕೆ ತರಲು ಖಂಡಿತ ಸಾಧ್ಯ.—ಅ. ಕಾ. 13:48; 1 ತಿಮೊ. 2:3, 4.

ಆಸ್ಪತ್ರೆಯಲ್ಲಿ ತನ್ನ ಜೊತೆ ಕೆಲಸ ಮಾಡುವ ವ್ಯಕ್ತಿಗೆ ಒಬ್ಬ ಸಹೋದರ ಸಾಕ್ಷಿ ನೀಡುತ್ತಿದ್ದಾನೆ, ನಂತರ ಆ ವ್ಯಕ್ತಿ ನಮ್ಮ ವೆಬ್‌ಸೈಟ್‌ jw.orgನ್ನು ನೋಡುತ್ತಿದ್ದಾನೆ

ಬೈಬಲನ್ನು ನಂಬದವರಿಗೆ ಸಾಕ್ಷಿ ನೀಡಲು ಅವರ ಪರಿಸ್ಥಿತಿಗೆ ತಕ್ಕಂತೆ ಹೊಂದಿಸಿಕೊಳ್ಳಿ(ಪ್ಯಾರ 5-6 ನೋಡಿ)d

5. ಹೆಚ್ಚಾಗಿ ಜನರು ನಮ್ಮ ಸಂದೇಶಕ್ಕೆ ಕಿವಿಗೊಡಲು ಕಾರಣ ಏನು?

5 ದಯೆ ಮತ್ತು ಜಾಣ್ಮೆ ತೋರಿಸಿ. ನಾವು ಏನು ಹೇಳುತ್ತೇವೆ ಅನ್ನುವುದಕ್ಕಿಂತ ನಾವು ಹೇಗೆ ಹೇಳುತ್ತೇವೆ ಅನ್ನುವುದು ಮುಖ್ಯ. ಯಾಕೆಂದರೆ ಹೆಚ್ಚಾಗಿ ಜನ ನಾವು ಹೇಳುವ ರೀತಿ ನೋಡಿನೇ ನಮ್ಮ ಸಂದೇಶಕ್ಕೆ ಕಿವಿಗೊಡುತ್ತಾರೆ. ನಾವು ಪ್ರೀತಿಯಿಂದ, ಜಾಣ್ಮೆಯಿಂದ ಮಾತಾಡಿದರೆ ಮತ್ತು ಅವರ ಬಗ್ಗೆ ಕಾಳಜಿ ಇದೆ ಅಂತ ತೋರಿಸಿಕೊಟ್ಟರೆ ಅವರಿಗದು ಇಷ್ಟ ಆಗುತ್ತದೆ. ನಾವು ಹೇಳುವುದನ್ನು ಅವರು ಒಪ್ಪಲೇಬೇಕಂತ ಬಲವಂತ ಮಾಡಬಾರದು. ಬದಲಿಗೆ, ಅವರಿಗೆ ಧರ್ಮದ ಬಗ್ಗೆ ಯಾವ ಅಭಿಪ್ರಾಯ ಇದೆ ಎಂದು ತಿಳುಕೊಳ್ಳಲು ಪ್ರಯತ್ನಿಸಬೇಕು. ಉದಾಹರಣೆಗೆ, ಕೆಲವರಿಗೆ ಧರ್ಮದ ಬಗ್ಗೆ ಅಪರಿಚಿತರೊಂದಿಗೆ ಮಾತಾಡಲು ಇಷ್ಟ ಆಗುವುದಿಲ್ಲ. ಇನ್ನು ಕೆಲವರಿಗೆ, ದೇವರ ಬಗ್ಗೆ ಬೇರೆಯವರ ಅಭಿಪ್ರಾಯ ಕೇಳುವುದು ಸಭ್ಯತೆ ಅಲ್ಲ ಅಂತ ಅನಿಸುತ್ತದೆ. ಇನ್ನು ಸ್ವಲ್ಪ ಜನಕ್ಕೆ, ತಾವು ಬೈಬಲ್‌ ಕಲಿಯುವುದನ್ನು, ಅದರಲ್ಲೂ ಯೆಹೋವನ ಸಾಕ್ಷಿಗಳಿಂದ ಕಲಿಯುವುದನ್ನು ಯಾರಾದರೂ ನೋಡಿದರೆ ತಮಗೆ ಅವಮಾನ ಎಂದು ನೆನಸುತ್ತಾರೆ. ಹೀಗೆ ಕಾರಣ ಏನೇ ಇರಲಿ, ನಾವು ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. —2 ತಿಮೊ. 2:24.

6. (ಎ)  ಜನರಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುವ ಗುಣವನ್ನು ಪೌಲನು ಹೇಗೆ ತೋರಿಸಿದನು? (ಬಿ) ನಾವು ಆತನನ್ನು ಹೇಗೆ ಅನುಕರಿಸಬಹುದು?

6 ನಾವು ಮಾತಿನ ಮಧ್ಯೆ “ಬೈಬಲ್‌,” “ಸೃಷ್ಟಿ,” “ದೇವರು” ಅಥವಾ “ಧರ್ಮ” ಎಂಬ ಪದಗಳನ್ನು ಉಪಯೋಗಿಸುವುದು ಜನರಿಗೆ ಇಷ್ಟವಾಗುತ್ತಿಲ್ಲ ಅಂತ ಗೊತ್ತಾದರೆ ಏನು ಮಾಡಬೇಕು? ಅಪೊಸ್ತಲ ಪೌಲನನ್ನು ಅನುಕರಿಸುತ್ತಾ ಅವರಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ಮಾತಾಡಬೇಕು. ಪೌಲನು ಯೆಹೂದ್ಯರೊಂದಿಗೆ ಮಾತಾಡುವಾಗ ಶಾಸ್ತ್ರಗ್ರಂಥವನ್ನು ಉಪಯೋಗಿಸಿದನು. ಆದರೆ ಅರಿಯೊಪಾಗದಲ್ಲಿ ಗ್ರೀಕ್‌ ತತ್ವಜ್ಞಾನಿಗಳೊಂದಿಗೆ ಮಾತಾಡುವಾಗ ತಾನು ಶಾಸ್ತ್ರಗ್ರಂಥದಲ್ಲಿರುವ ವಿಷಯವನ್ನೇ ತಿಳಿಸುತ್ತಿದ್ದೇನೆ ಅಂತ ಹೇಳಲಿಲ್ಲ. (ಅ. ಕಾ. 17:2, 3, 22-31) ಪೌಲನ ಈ ಮಾದರಿಯನ್ನು ನಾವು ಹೇಗೆ ಅನುಕರಿಸಬಹುದು? ಬೈಬಲನ್ನು ಇಷ್ಟಪಡದ ಜನರನ್ನು ನೀವು ಭೇಟಿ ಮಾಡಿದರೆ ಅವರೊಂದಿಗೆ ಮಾತಾಡುವಾಗ ಬೈಬಲಿನಿಂದ ಓದಿ ಹೇಳಬೇಡಿ ಅಥವಾ ಬೈಬಲಿನಲ್ಲಿ ಹೀಗಿದೆ ಅಂತ ಹೇಳಬೇಡಿ. ಕೆಲವರು, ನೀವು ಬೈಬಲಿನಿಂದ ವಚನ ತೋರಿಸುವುದನ್ನು ಬೇರೆಯವರು ನೋಡಿ ಏನಂದುಕೊಳ್ಳುತ್ತಾರೋ ಎಂದು ಹಿಂಜರಿಯಬಹುದು. ಆಗ ಬೇರೆಯವರಿಗೆ ಗೊತ್ತಾಗದ ರೀತಿಯಲ್ಲಿ ಅಂದರೆ ಮೊಬೈಲ್‌ ಅಥವಾ ಟ್ಯಾಬ್‌ನಿಂದ ವಚನವನ್ನು ತೆರೆದು ಓದಿ.

7. ಒಂದನೇ ಕೊರಿಂಥ 9:20-23​ರಲ್ಲಿ ಕೊಟ್ಟಿರುವ ಪೌಲನ ಉದಾಹರಣೆಯನ್ನು ನಾವು ಹೇಗೆ ಅನುಕರಿಸಬಹುದು?

7 ಅರ್ಥಮಾಡಿಕೊಳ್ಳಿ ಮತ್ತು ಕೇಳಿಸಿಕೊಳ್ಳಿ. ನಾವು ಭೇಟಿಯಾಗುವ ಜನರ ಮೇಲೆ ಯಾವ ವಿಷಯಗಳು ಪ್ರಭಾವ ಬೀರಿವೆ ಅನ್ನುವುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. (ಜ್ಞಾನೋ. 20:5) ಈ ವಿಷಯದಲ್ಲೂ ಪೌಲನು ಉತ್ತಮ ಮಾದರಿ ಇಟ್ಟಿದ್ದಾನೆ. ಆತನು ಯೆಹೂದ್ಯರ ಮಧ್ಯದಲ್ಲಿ ಬೆಳೆದನು. ಹಾಗಾಗಿ, ಅನ್ಯರಿಗೆ ಸಾರುವಾಗ ಆತನು ಅವರಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕಿತ್ತು. ಯಾಕೆಂದರೆ, ಅವರಿಗೆ ಯೆಹೋವನ ಬಗ್ಗೆ ಮತ್ತು ಶಾಸ್ತ್ರಗ್ರಂಥದ ಬಗ್ಗೆ ಅಲ್ಪ-ಸ್ವಲ್ಪ ಗೊತ್ತಿತ್ತು ಅಥವಾ ಏನೂ ಗೊತ್ತಿರಲಿಲ್ಲ. ನಾವು ಸಹ ನಮ್ಮ ಟೆರಿಟೊರಿಯಲ್ಲಿರುವ ಜನರನ್ನು, ಅವರ ಭಾವನೆ-ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಬೇಕು. ಇದನ್ನು ಹೇಗೆ ಮಾಡುವುದೆಂದು ಕಲಿಯಲು ನಾವು ಸಭೆಯಲ್ಲಿರುವ ಅನುಭವಸ್ಥರನ್ನು ಕೇಳಬಹುದು ಅಥವಾ ನಮ್ಮ ಪ್ರಕಾಶನಗಳಲ್ಲಿ ಸಂಶೋಧನೆ ಮಾಡಬಹುದು. —1 ಕೊರಿಂಥ 9:20-23 ಓದಿ.

8. ಬೈಬಲಿನ ಬಗ್ಗೆ ಸಂಭಾಷಣೆ ಆರಂಭಿಸುವ ಒಂದು ವಿಧ ಯಾವುದು?

8 “ಯೋಗ್ಯರನ್ನು” ಹುಡುಕುವುದೇ ನಮ್ಮ ಗುರಿ. (ಮತ್ತಾ. 10:11) ಈ ಗುರಿಯನ್ನು ಸಾಧಿಸಲು ನಾವು ಜನರ ಅಭಿಪ್ರಾಯ ಏನಂತ ಕೇಳಬೇಕು ಮತ್ತು ಅವರು ಹೇಳುವಾಗ ಗಮನಕೊಟ್ಟು ಕೇಳಿಸಿಕೊಳ್ಳಬೇಕು. ಇಂಗ್ಲೆಂಡಿನ ಒಬ್ಬ ಸಹೋದರ ಈ ಪ್ರಶ್ನೆಗಳಲ್ಲಿ ಒಂದನ್ನು ಕೇಳುತ್ತಾರೆ: ಮದುವೆ ಜೀವನ ಚೆನ್ನಾಗಿರಲು ಏನು ಮಾಡಬೇಕು? ಮಕ್ಕಳನ್ನು ಒಳ್ಳೇ ರೀತಿಯಲ್ಲಿ ಬೆಳೆಸೋದು ಹೇಗೆ? ಅನ್ಯಾಯವನ್ನು ಸಹಿಸಿಕೊಂಡು ಹೋಗುವುದು ಹೇಗೆ? ಜನರು ತಮ್ಮ ಅಭಿಪ್ರಾಯ ಹೇಳಿದ ನಂತರ ಅವರು, “ಇದ್ರ ಬಗ್ಗೆ ಸುಮಾರು 2,000 ವರ್ಷಗಳ ಹಿಂದೆ ಬರೆದ ಒಂದು ಸಲಹೆಯನ್ನ ನಿಮಗೆ ತೋರಿಸಬಹುದಾ?” ಅಂತ ಕೇಳುತ್ತಾರೆ. ನಂತರ, “ಬೈಬಲ್‌” ಅನ್ನೋ ಪದ ಉಪಯೋಗಿಸದೆನೇ ತಮ್ಮ ಫೋನಿಂದ ಒಂದು ಸೂಕ್ತ ವಚನ ತೋರಿಸುತ್ತಾರೆ.

ಜನರ ಹೃದಯ ತಲುಪಿ

9. ದೇವರ ಬಗ್ಗೆ ಮಾತಾಡಲು ಇಷ್ಟಪಡದ ಜನರೊಂದಿಗೆ ನಾವು ಹೇಗೆ ಮಾತಾಡಬಹುದು?

9 ದೇವರ ಬಗ್ಗೆ ಮಾತಾಡಲು ಇಷ್ಟಪಡದ ಜನರೊಂದಿಗೆ ನಾವು ಅವರಿಗೆ ಇಷ್ಟವಾಗುವ ಬೇರೆ ವಿಷಯದ ಬಗ್ಗೆ ಮಾತಾಡಬಹುದು. ಹೀಗೆ ಅವರ ಹೃದಯವನ್ನು ತಲುಪಬಹುದು. ಉದಾಹರಣೆಗೆ, ಅನೇಕರಿಗೆ ಪರಿಸರ ಅಂದರೆ ಇಷ್ಟ. ಆದ್ದರಿಂದ ನಾವು ಅವರಿಗೆ ಈ ರೀತಿ ಹೇಳಬಹುದು: “ವಿಜ್ಞಾನಿಗಳು ಹೊಸ ವಸ್ತುವನ್ನು ತಯಾರಿಸುವಾಗ ಹೆಚ್ಚಾಗಿ ಪರಿಸರದಲ್ಲಿರುವ ಯಾವುದೋ ಒಂದು ರಚನೆಯನ್ನು ನಕಲು ಮಾಡಿರುತ್ತಾರೆ. ಉದಾಹರಣೆಗೆ, ಕೀಟಗಳ ಕಿವಿ ರಚನೆಯನ್ನು ನೋಡಿ ಮೈಕ್ರೋಫೋನ್‌ ತಯಾರಿಸಿದ್ದಾರೆ ಮತ್ತು ಅವುಗಳ ಕಣ್ಣಿನ ರಚನೆಯನ್ನು ನೋಡಿ ಕ್ಯಾಮರಾಗಳನ್ನು ತಯಾರಿಸಿದ್ದಾರೆ. ಹಾಗಾದರೆ, ಈ ಜೀವರಾಶಿ ಅಥವಾ ಪರಿಸರ ಹೇಗೆ ಬಂತು? ನೀವೇನು ನೆನಸುತ್ತೀರಿ? ತನ್ನಿಂದ ತಾನೇ ಬಂತಾ? ಯಾರಾದರೂ ಸೃಷ್ಟಿಮಾಡಿದ್ರಾ ಅಥವಾ ಬೇರೇನಾದರೂ ಕಾರಣ ಇದೆಯಾ?” ಅವರ ಉತ್ತರವನ್ನು ಕೇಳಿಸಿಕೊಂಡ ನಂತರ ನಾವು ಹೀಗೆ ಹೇಳಬಹುದು: “ವಿಜ್ಞಾನಿಗಳು ಕಿವಿ ಮತ್ತು ಕಣ್ಣಿನ ರಚನೆ ನೋಡಿ ವಸ್ತುಗಳನ್ನು ತಯಾರಿಸಿದ್ದಾರೆ ಅಂದ ಮೇಲೆ ಅವರು ಆ ರಚನೆ ಮಾಡಿದವನಿಂದ ಕಲಿತ ಹಾಗೆ ಆಗುತ್ತಲ್ವಾ? ಹಿಂದಿನ ಕಾಲದ ಒಬ್ಬ ಕವಿ ಹೇಳಿರುವ ಒಂದು ಮಾತು ನನಗೆ ತುಂಬ ಇಷ್ಟ ಆಯ್ತು. ಅಲ್ಲಿ, ‘ಕಿವಿಮಾಡಿದವನು ಕೇಳನೋ? ಕಣ್ಣುಕೊಟ್ಟವನು ನೋಡನೋ? ಆತನೇ ಮನುಷ್ಯರಿಗೆ ಜ್ಞಾನ ಕೊಡುತ್ತಾನೆ’ ಅಂತ ಹೇಳುತ್ತೆ. ಈ ಮಾತನ್ನು ಕೆಲವು ವಿಜ್ಞಾನಿಗಳೂ ಒಪ್ಪಿಕೊಳ್ಳುತ್ತಾರೆ ಮತ್ತು ಸೃಷ್ಟಿಕರ್ತನಿದ್ದಾನೆ ಎಂದು ನಂಬುತ್ತಾರೆ.” (ಕೀರ್ತ. 94:9, 10) ನಂತರ ನಾವು jw.orgನಲ್ಲಿ “ಸಂದರ್ಶನಗಳು ಮತ್ತು ಅನುಭವಗಳು” ಎಂಬ ವಿಷಯದ ಕೆಳಗಿನ “ಜೀವದ ಉಗಮದ ಬಗ್ಗೆ ಅಭಿಪ್ರಾಯಗಳು” ಎಂಬ ಸರಣಿ ವಿಡಿಯೋಗಳಲ್ಲಿ ಒಂದನ್ನು ತೋರಿಸಬಹುದು. (ಪ್ರಕಾಶನಗಳು > ವಿಡಿಯೋಗಳು ನೋಡಿ.) ಅಥವಾ ಜೀವವು ಸೃಷ್ಟಿಸಲ್ಪಟ್ಟಿತೋ? ಮತ್ತು ಜೀವನದ ಉಗಮ—ಪರಿಗಣಿಸಬೇಕಾದ ಐದು ಪ್ರಶ್ನೆಗಳು (ಇಂಗ್ಲಿಷ್‌) ಎಂಬ ಕಿರುಹೊತ್ತಗೆಗಳಲ್ಲಿ ಯಾವುದಾದರೊಂದನ್ನು ನೀಡಬಹುದು.

10. ದೇವರ ಬಗ್ಗೆ ಮಾತಾಡಲು ಇಷ್ಟಪಡದ ಜನರೊಂದಿಗೆ ನಾವು ಬೇರೆ ಯಾವ ರೀತಿಯಲ್ಲಿ ಸಂಭಾಷಣೆ ಆರಂಭಿಸಬಹುದು?

10 ಹೆಚ್ಚಿನ ಜನರು ಉತ್ತಮ ಜೀವನ ಬೇಕು ಅಂತ ಬಯಸುತ್ತಾರೆ. ಆದರೆ, ಅವರಲ್ಲಿ ಅನೇಕರು ಭೂಮಿ ನಾಶವಾಗಿ ಹೋಗುತ್ತೇನೋ ಅಥವಾ ಮುಂದೊಂದು ದಿನ ಅದರಲ್ಲಿ ಯಾರೂ ಬದುಕಿರಲ್ಲವೇನೋ ಅಂತ ನೆನಸುತ್ತಾರೆ. ನಾರ್ವೆಯಲ್ಲಿನ ಒಬ್ಬ ಸಂಚರಣ ಮೇಲ್ವಿಚಾರಕರು ಗಮನಿಸಿರುವುದೇನೆಂದರೆ, ದೇವರ ಬಗ್ಗೆ ಮಾತಾಡಲು ಇಷ್ಟಪಡದ ಜನರು ಹೆಚ್ಚಾಗಿ ಲೋಕದ ಪರಿಸ್ಥಿತಿಯ ಬಗ್ಗೆ ಮಾತಾಡಲು ಇಷ್ಟಪಡುತ್ತಾರೆ. ಹಾಗಾಗಿ ಆ ಸಹೋದರ ಜನರನ್ನು ವಂದಿಸಿದ ನಂತರ ಹೀಗೆ ಕೇಳುತ್ತಾರೆ: “ನಮಗೆ ಮುಂದೆ ಒಂದು ಒಳ್ಳೇ ಜೀವನ ಯಾರಿಂದ ಸಿಗಬಹುದು ಅಂತ ನಿಮಗನಿಸುತ್ತೆ? ರಾಜಕಾರಣಿಗಳಿಂದನಾ? ವಿಜ್ಞಾನಿಗಳಿಂದನಾ ಅಥವಾ ಇನ್ಯಾರಿಂದಾದರೂ ಸಿಗಬಹುದಾ?” ಜನರ ಉತ್ತರವನ್ನು ಕೇಳಿಸಿಕೊಂಡ ನಂತರ, ನಮಗೆ ಸಿಗಲಿರುವ ಸುಂದರ ಜೀವನದ ಬಗ್ಗೆ ಒಂದು ವಚನವನ್ನು ಅವರು ಓದುತ್ತಾರೆ ಅಥವಾ ಬಾಯಿಮಾತಲ್ಲಿ ಹೇಳುತ್ತಾರೆ. ಭೂಮಿ ಶಾಶ್ವತವಾಗಿ ಇರುತ್ತದೆ ಮತ್ತು ಒಳ್ಳೆಯವರು ಸದಾಕಾಲಕ್ಕೂ ಬದುಕುತ್ತಾರೆ ಎಂದು ಬೈಬಲಿನಲ್ಲಿ ಕೊಡಲಾಗಿರುವ ಮಾತನ್ನು ಕೇಳಿದಾಗ ಕೆಲವರು ಆಸಕ್ತಿ ತೋರಿಸಿದ್ದಾರೆ.—ಕೀರ್ತ. 37:29; ಪ್ರಸಂ. 1:4.

11. (ಎ) ನಾವು ಯಾಕೆ ಬೇರೆ ಬೇರೆ ವಿಷಯಗಳ ಬಗ್ಗೆ ಮಾತಾಡಬೇಕು? (ಬಿ) ರೋಮನ್ನರಿಗೆ 1:14-16​ರಲ್ಲಿ ಕೊಟ್ಟಿರುವ ಪೌಲನ ಉದಾಹರಣೆಯನ್ನು ನಾವು ಹೇಗೆ ಅನುಕರಿಸಬಹುದು?

11 ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಒಬ್ಬರಿಗೆ ಇಷ್ಟವಾಗುವ ವಿಷಯ ಇನ್ನೊಬ್ಬರಿಗೆ ಇಷ್ಟವಾಗದೇ ಇರಬಹುದು. ಹಾಗಾಗಿ ನಾವು ಜನರಿಗೆ ತಕ್ಕಂತೆ ಬೇರೆ ಬೇರೆ ವಿಷಯಗಳ ಬಗ್ಗೆ ಮಾತಾಡಬೇಕು. ದೇವರು ಅಥವಾ ಬೈಬಲಿನ ಬಗ್ಗೆ ಮಾತಾಡಿದರೆ ಕೆಲವರು ಕೇಳುತ್ತಾರೆ, ಇನ್ನು ಕೆಲವರು ಬೈಬಲ್‌ ಬಿಟ್ಟು ಬೇರೆ ವಿಷಯದ ಬಗ್ಗೆ ಮಾತಾಡಿದರೆ ಕೇಳುತ್ತಾರೆ. ಸನ್ನಿವೇಶ ಏನೇ ಇರಲಿ, ಎಲ್ಲಾ ರೀತಿಯ ಜನರಿಗೆ ಸಾರುವ ಅವಕಾಶ ಸಿಗುವಾಗ ಅದನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕು. (ರೋಮನ್ನರಿಗೆ 1:14-16 ಓದಿ.) ಆದರೆ, ಯೋಗ್ಯ ಜನರ ಹೃದಯದಲ್ಲಿ ಸತ್ಯದ ಬೀಜ ಬೆಳೆಯುವಂತೆ ಮಾಡುವುದು ಯೆಹೋವನೇ ಎಂದು ನಾವು ಯಾವತ್ತೂ ಮರೆಯಬಾರದು. —1 ಕೊರಿಂ. 3:6, 7.

ದೇವರಿದ್ದಾನೆ ಎಂದು ನಂಬದ ಜನರಿಗೂ ಸಾರಿ

ಒಬ್ಬ ಯೆಹೋವನ ಸಾಕ್ಷಿ ಬೈಬಲ್‌ ಬಗ್ಗೆ ಹೆಚ್ಚು ಗೊತ್ತಿರದ ದೇಶದಿಂದ ಬಂದ ಸ್ತ್ರೀಗೆ ಬೈಬಲಿನಲ್ಲಿರುವ ವಿವೇಕಯುತ ಮಾತುಗಳನ್ನು ತಿಳಿಸುತ್ತಿದ್ದಾಳೆ

ಅನೇಕ ಪ್ರಚಾರಕರು ಬೈಬಲ್‌ ಬಗ್ಗೆ ಹೆಚ್ಚು ಗೊತ್ತಿರದ ದೇಶಗಳಿಂದ ಬಂದ ಜನರಿಗೆ ಕಾಳಜಿ ತೋರಿಸುತ್ತಾರೆ ಮತ್ತು ಅವರಿಗೆ ಬೈಬಲಿನಲ್ಲಿರುವ ವಿವೇಕಯುತ ಮಾತುಗಳನ್ನು ತಿಳಿಸುತ್ತಾರೆ (ಪ್ಯಾರ 12-13 ನೋಡಿ)

12. ಸೃಷ್ಟಿಕರ್ತನು ಇರಬಹುದಾ ಎಂಬ ಯೋಚನೆ ಸಹ ಬಂದಿರದ ಏಷ್ಯಾದ ಕೆಲವು ದೇಶಗಳ ಅನೇಕರಿಗೆ ನಾವು ಹೇಗೆ ಸಾರಬಹುದು?

12 ದೇವರನ್ನೇ ನಂಬದ, ವಿಗ್ರಹಾರಾಧನೆ ಮಾಡದ ಜನರು ಭೂಮಿಯ ಅನೇಕ ಕಡೆಗಳಲ್ಲಿ ಇದ್ದಾರೆ. ಇವರಲ್ಲಿ, ಸರಕಾರಗಳು ಧಾರ್ಮಿಕ ಚಟುವಟಿಕೆಗಳ ಮೇಲೆ ಸ್ವಲ್ಪ ಮಟ್ಟಿಗೆ ನಿರ್ಬಂಧ ಹೇರಿರುವ ದೇಶದಿಂದ ಬಂದವರೂ ಇದ್ದಾರೆ. ಏಷ್ಯಾದ ಕೆಲವು ದೇಶಗಳಲ್ಲಿ ಅನೇಕರಿಗೆ ಸೃಷ್ಟಿಕರ್ತನು ಇರಬಹುದಾ ಎಂಬ ಯೋಚನೆ ಸಹ ಯಾವತ್ತೂ ಬಂದಿರುವುದಿಲ್ಲ. ಇಂಥವರಲ್ಲಿ ಕೆಲವರಿಗೆ ಬೈಬಲ್‌ ಬಗ್ಗೆ ಕುತೂಹಲ ಇರುತ್ತೆ, ಹಾಗಾಗಿ ಅದನ್ನು ಕಲಿಯಲು ಒಪ್ಪಿಕೊಳ್ಳುತ್ತಾರೆ. ಇನ್ನು ಕೆಲವರು ಬೈಬಲ್‌ ಬಗ್ಗೆ ಕಲಿಯಲು ಆರಂಭದಲ್ಲಿ ಅಷ್ಟು ಆಸಕ್ತಿ ತೋರಿಸುವುದಿಲ್ಲ. ಇಂಥವರಿಗೆ ಸಹಾಯ ಮಾಡಲು ನಾವೇನು ಮಾಡಬಹುದು? ಅನೇಕ ಅನುಭವಸ್ಥ ಪ್ರಚಾರಕರು ಹೀಗೆ ಮಾಡಿ ಉತ್ತಮ ಪ್ರತಿಫಲ ಪಡೆದಿದ್ದಾರೆ: ಆರಂಭದಲ್ಲಿ, ಜನರು ಸಾಮಾನ್ಯವಾಗಿ ಮಾತಾಡುವ ವಿಷಯದ ಬಗ್ಗೆಯೇ ಮಾತಾಡಿ, ಅವರ ಬಗ್ಗೆ ಕಾಳಜಿ ತೋರಿಸುತ್ತಾರೆ. ನಂತರ, ತಮ್ಮ ಜೀವನದಲ್ಲಿ ಬೈಬಲಿನ ಒಂದು ತತ್ವವನ್ನು ಅನ್ವಯಿಸಿದಾಗ ಎಷ್ಟು ಸುಧಾರಣೆ ಆಯಿತು ಅಂತ ಸಮಯ-ಸಂದರ್ಭ ನೋಡಿ ಹೇಳುತ್ತಾರೆ.

13. ಯಾವ ವಿಷಯ ಜನರನ್ನು ಬೈಬಲಿನ ಕಡೆಗೆ ಆಕರ್ಷಿಸಬಹುದು? (ಮುಖಪುಟ ಚಿತ್ರ ನೋಡಿ.)

13 ಅನೇಕ ಜನರು ಬೈಬಲಿನಲ್ಲಿರುವ ವಿವೇಕದ ಸಲಹೆಗಳನ್ನು ನೋಡಿ ಅದರ ಕಡೆಗೆ ಆಕರ್ಷಿತರಾಗಿದ್ದಾರೆ. (ಪ್ರಸಂ. 7:12) ಚೈನೀಸ್‌ ಭಾಷೆ ಮಾತಾಡುವ ಜನರನ್ನು ಭೇಟಿ ಮಾಡುವ ನ್ಯೂಯಾರ್ಕಿನ ಒಬ್ಬ ಸಹೋದರಿ ಹೀಗೆ ಹೇಳುತ್ತಾರೆ: “ನಾನು ಆ ಜನರ ಕಡೆಗೆ ಕಾಳಜಿ ತೋರಿಸುತ್ತೇನೆ ಮತ್ತು ಅವರು ಮಾತಾಡುವಾಗ ಕಿವಿಗೊಡುತ್ತೇನೆ. ಅವರು ಹೊಸದಾಗಿ ಇಲ್ಲಿಗೆ ಸ್ಥಳಾಂತರಿಸಿದ್ದಾರೆ ಎಂದು ಗೊತ್ತಾದರೆ, ‘ಇಲ್ಲಿ ಹೊಂದಿಕೊಳ್ಳೋಕೆ ಆಗ್ತಿದೆಯಾ? ಕೆಲಸ ಸಿಕ್ತಾ? ಇಲ್ಲಿನ ಜನ ನಿಮ್ಮ ಜೊತೆ ಚೆನ್ನಾಗಿ ನಡಕೊಳ್ತಾರಾ?’ ಅಂತ ಕೇಳುತ್ತೇನೆ.” ಹೀಗೆ ಮಾತಾಡ್ತಾ ಮಾತಾಡ್ತಾ ಆ ಸಹೋದರಿ ಬೈಬಲಿನ ಬಗ್ಗೆ ತಿಳಿಸಲು ಪ್ರಯತ್ನಿಸುತ್ತಾರೆ. ಸಮಯ-ಸಂದರ್ಭ ನೋಡಿ ಅವರು ಹೀಗೆ ಹೇಳುತ್ತಾರೆ: “ಜನರ ಜೊತೆ ಚೆನ್ನಾಗಿ ಇರಬೇಕೆಂದರೆ ಏನು ಮಾಡಬೇಕು ಅಂತ ನಿಮಗನಿಸುತ್ತೆ? ನಾನು ಬೈಬಲಿನಲ್ಲಿರುವ ಒಂದು ನುಡಿಮುತ್ತನ್ನ ನಿಮಗೆ ತೋರಿಸಬಹುದಾ? ಅದೇನಂದ್ರೆ, ‘ವ್ಯಾಜ್ಯದ ಆರಂಭವು ಏರಿಗೆ ಬಿಲಬಿದ್ದಂತೆ; ಸಿಟ್ಟೇರುವದಕ್ಕೆ ಮುಂಚೆ ಜಗಳವನ್ನು ಬಿಟ್ಟುಬಿಡು.’ ಜನರ ಜೊತೆ ಚೆನ್ನಾಗಿರೋಕೆ ಈ ಸಲಹೆ ನಮಗೆ ಸಹಾಯ ಮಾಡುತ್ತೆ ಅಂತ ನಿಮಗನಿಸುತ್ತಾ?” (ಜ್ಞಾನೋ. 17:14) ಈ ರೀತಿ ಸಂಭಾಷಣೆ ಮಾಡುವ ಮೂಲಕ ಆಸಕ್ತ ಜನರನ್ನು ಗುರುತಿಸಲು ನಮಗೆ ಸಾಧ್ಯವಾಗುತ್ತದೆ.

14. ದೇವರಲ್ಲಿ ನಂಬಿಕೆ ಇಲ್ಲ ಅಂತ ಹೇಳುವ ಜನರಿಗೆ ಪೂರ್ವ ದೇಶದ ಒಬ್ಬ ಸಹೋದರ ಹೇಗೆ ಸಹಾಯ ಮಾಡುತ್ತಾರೆ?

14 ದೇವರನ್ನು ನಂಬದ ಜನರೊಂದಿಗೆ ನಾವು ಹೇಗೆ ಮಾತಾಡಬಹುದು? ಅಂಥ ಜನರಿಗೆ ಸಾರಿದ ಒಳ್ಳೇ ಅನುಭವ ಇರುವ ಪೂರ್ವ ದೇಶದ ಒಬ್ಬ ಸಹೋದರ ಹೀಗೆ ಹೇಳುತ್ತಾರೆ: “ಇಲ್ಲಿರುವ ಒಬ್ಬ ವ್ಯಕ್ತಿ ‘ನನಗೆ ದೇವರಲ್ಲಿ ನಂಬಿಕೆ ಇಲ್ಲ’ ಅಂತ ಹೇಳಿದರೆ ಅದರರ್ಥ ಅವನು ತನ್ನ ಸುತ್ತಮುತ್ತಲಿನ ಜನರು ಆರಾಧಿಸುವ ದೇವರುಗಳನ್ನು ನಂಬಲ್ಲ ಅಂತ. ಆದ್ದರಿಂದ ನಾನು ಅವರ ಮಾತನ್ನು ಒಪ್ಪುತ್ತಾ ಹೆಚ್ಚಿನ ದೇವರುಗಳನ್ನು ಮನುಷ್ಯರೇ ಮಾಡಿಕೊಂಡಿದ್ದಾರೆ ಮತ್ತು ಅವರು ನಿಜವಾಗಿಯೂ ಇಲ್ಲ ಅಂತ ಹೇಳುತ್ತೇನೆ. ನಂತರ, ಯೆರೆಮೀಯ 16:20​ನ್ನು ತೆರೆದು ಅಲ್ಲಿರುವ, ‘ಮನುಷ್ಯಮಾತ್ರದವನು ದೇವರುಗಳನ್ನು ಕಲ್ಪಿಸಿಕೊಳ್ಳಬಲ್ಲನೇ? ಇವು ದೇವರುಗಳೇ ಅಲ್ಲ’ ಎಂಬ ಮಾತನ್ನು ಓದುತ್ತೇನೆ. ನಂತರ, ‘ನಿಜವಾದ ದೇವರು ಯಾರು, ಮನುಷ್ಯರು ಮಾಡಿದ ದೇವರು ಯಾರು ಅಂತ ಕಂಡುಹಿಡಿಯೋದು ಹೇಗೆ ?’ ಅಂತ ಕೇಳುತ್ತೇನೆ. ಅವರ ಹೇಳುವುದನ್ನು ಗಮನಕೊಟ್ಟು ಕೇಳಿಸಿಕೊಂಡ ಮೇಲೆ ನಾನು ಯೆಶಾಯ 41:23​ನ್ನು ಓದ್ತೇನೆ. ‘ನೀವು ದೇವರುಗಳೆಂದು ನಮಗೆ ಅರಿವು ಹುಟ್ಟುವಂತೆ ಮುಂದಾಗತಕ್ಕವುಗಳನ್ನು ತಿಳಿಸಿರಿ’ ಅಂತ ಅಲ್ಲಿ ಹೇಳುತ್ತೆ. ನಂತರ, ಈ ಹಿಂದೆ ಯೆಹೋವನು ಹೇಳಿರುವ ಮಾತು ಹೇಗೆ ನೆರವೇರಿದೆ ಅನ್ನುವುದಕ್ಕಿರುವ ಒಂದು ಉದಾಹರಣೆಯನ್ನು ತೋರಿಸುತ್ತೇನೆ.”

15. ಪೂರ್ವ ಏಷ್ಯಾದ ಸಹೋದರನ ಉದಾಹರಣೆಯಿಂದ ನಾವೇನು ಕಲಿಯಬಹುದು?

15 ಪೂರ್ವ ಏಷ್ಯಾದ ಒಬ್ಬ ಸಹೋದರ ಪುನರ್ಭೇಟಿಗಳನ್ನು ಮಾಡುವಾಗ ಏನು ಮಾಡುತ್ತಾರೆಂದು ಗಮನಿಸಿ. “ನಾನು ಬೈಬಲಿನಿಂದ ಕೆಲವು ವಿವೇಕದ ಸಲಹೆಗಳನ್ನು, ನೆರವೇರಿರುವ ಪ್ರವಾದನೆಗಳನ್ನು ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ತೋರಿಸುತ್ತೇನೆ. ನಂತರ, ಈ ಎಲ್ಲಾ ವಿಷಯಗಳು ಜೀವವುಳ್ಳ ಮತ್ತು ವಿವೇಕಿ ಸೃಷ್ಟಿಕರ್ತನೊಬ್ಬ ಇದ್ದಾನೆ ಅನ್ನುವುದಕ್ಕೆ ಆಧಾರ ಎಂದು ಸ್ಪಷ್ಟವಾಗಿ ವಿವರಿಸುತ್ತೇನೆ. ಒಬ್ಬ ವ್ಯಕ್ತಿ ದೇವರಿದ್ದಾನೆ ಎಂದು ಒಪ್ಪಿಕೊಂಡರೆ, ನಾನು ಅವನಿಗೆ ಬೈಬಲಿನಲ್ಲಿ ಯೆಹೋವನ ಬಗ್ಗೆ ಇರುವ ವಿಷಯಗಳನ್ನು ತೋರಿಸೋಕೆ ಶುರು ಮಾಡುತ್ತೇನೆ.”

16. (ಎ) ಇಬ್ರಿಯ 11:6​ರ ಪ್ರಕಾರ ವಿದ್ಯಾರ್ಥಿಗಳಿಗೆ ದೇವರಲ್ಲಿ ಮತ್ತು ಬೈಬಲಿನಲ್ಲಿ ನಂಬಿಕೆ ಯಾಕೆ ಇರಬೇಕು? (ಬಿ) ಅವರು ಆ ನಂಬಿಕೆಯನ್ನು ಬೆಳೆಸಿಕೊಳ್ಳಲು ನಾವು ಹೇಗೆ ಸಹಾಯ ಮಾಡಬಹುದು?

16 ಧರ್ಮದಲ್ಲಿ ನಂಬಿಕೆ ಇಲ್ಲದ ಜನರಿಗೆ ಬೈಬಲ್‌ ಬಗ್ಗೆ ಕಲಿಸುವಾಗ, ದೇವರಿದ್ದಾನೆ ಎಂಬ ಅವರ ನಂಬಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತಾ ಇರಬೇಕು. (ಇಬ್ರಿಯ 11:6 ಓದಿ.) ಜೊತೆಗೆ, ಬೈಬಲಿನ ಮೇಲೆ ನಂಬಿಕೆ ಇಡಲು ಅವರಿಗೆ ಸಹಾಯ ಮಾಡಬೇಕು. ಕೆಲವು ಸತ್ಯಗಳನ್ನು ನಾವು ಪುನಃ ಪುನಃ ಹೇಳಬೇಕಾಗಬಹುದು. ಬೈಬಲ್‌ ಕಲಿಸೋಕೆ ಹೋದಾಗೆಲ್ಲ, ಬೈಬಲ್‌ ದೇವರ ವಾಕ್ಯ ಅನ್ನುವುದಕ್ಕಿರುವ ಆಧಾರವನ್ನು ಚರ್ಚಿಸಬೇಕು. ಇದನ್ನು ಮಾಡಲು ಈಗಾಗಲೇ ನೆರವೇರಿರುವ ಬೈಬಲ್‌ ಪ್ರವಾದನೆಗಳ ಬಗ್ಗೆ, ಬೈಬಲ್‌ ವೈಜ್ಞಾನಿಕವಾಗಿ ಮತ್ತು ಇತಿಹಾಸದ ವಿಷಯದಲ್ಲೂ ನಿಖರವಾಗಿದೆ ಅನ್ನುವುದಕ್ಕಿರುವ ಆಧಾರಗಳ ಬಗ್ಗೆ ಅಥವಾ ಬೈಬಲಿನಲ್ಲಿರುವ ವಿವೇಕದ ಸಲಹೆಗಳ ಬಗ್ಗೆ ಚುಟುಕಾಗಿ ಚರ್ಚಿಸಬಹುದು.

17. ನಾವು ಪ್ರೀತಿ ತೋರಿಸುವಾಗ ಜನರ ಮೇಲೆ ಎಂಥ ಪ್ರಭಾವ ಬೀರುತ್ತದೆ?

17 ಜನರಿಗೆ ಧರ್ಮದಲ್ಲಿ ನಂಬಿಕೆ ಇರಲಿ, ಇಲ್ಲದಿರಲಿ ಅವರಿಗೆ ಪ್ರೀತಿ ತೋರಿಸುವ ಮೂಲಕ ಕ್ರಿಸ್ತನ ಶಿಷ್ಯರಾಗಲು ನಾವು ಸಹಾಯ ಮಾಡಬೇಕು. (1 ಕೊರಿಂ. 13:1) ಅವರಿಗೆ ಬೋಧಿಸುವಾಗ ನಮ್ಮ ಗುರಿ ದೇವರು ನಮ್ಮೆಲ್ಲರನ್ನು ಪ್ರೀತಿಸುತ್ತಾನೆ ಮತ್ತು ಆತನನ್ನು ನಾವು ಪ್ರೀತಿಸಬೇಕೆಂದು ಬಯಸುತ್ತಾನೆ ಎಂದು ಅವರಿಗೆ ಮನದಟ್ಟು ಮಾಡುವುದೇ ಆಗಿರಬೇಕು. ಧರ್ಮದಲ್ಲಿ ಸ್ವಲ್ಪವೇ ಆಸಕ್ತಿ ಇದ್ದ ಅಥವಾ ಸ್ವಲ್ಪವೂ ಆಸಕ್ತಿ ಇಲ್ಲದಿದ್ದ ಜನರು ದೇವರನ್ನು ಪ್ರೀತಿಸಿ ದೀಕ್ಷಾಸ್ನಾನ ಪಡೆಯುತ್ತಿದ್ದಾರೆ. ಆದ್ದರಿಂದ ಎಲ್ಲಾ ರೀತಿಯ ಜನರ ಬಗ್ಗೆ ಒಳ್ಳೇ ಅಭಿಪ್ರಾಯವನ್ನಿಟ್ಟು ಪ್ರೀತಿಯಿಂದ ಅವರಿಗೆ ಕಾಳಜಿ ತೋರಿಸಿ. ಅವರು ಮಾತಾಡುವಾಗ ಕಿವಿಗೊಡಿ. ಅವರನ್ನು ಅರ್ಥಮಾಡಿಕೊಳ್ಳಿ. ಕ್ರಿಸ್ತನ ಶಿಷ್ಯರಾಗಲು ಅವರಿಗೆ ನಿಮ್ಮ ಮಾದರಿಯ ಮೂಲಕ ಕಲಿಸಿ.

ನಿಮ್ಮ ಉತ್ತರವೇನು?

  • ಜನರ ಬಗ್ಗೆ ಒಳ್ಳೇ ಅಭಿಪ್ರಾಯ ಕಾಪಾಡಿಕೊಳ್ಳುವುದು ಹೇಗೆ?

  • ಧರ್ಮದಲ್ಲಿ ನಂಬಿಕೆ ಇಲ್ಲದವರ ಹೃದಯವನ್ನು ತಲುಪುವುದು ಹೇಗೆ?

  • ನಮಗೆ ಸಿಗುವ ಎಲ್ಲಾ ರೀತಿಯ ಜನರಿಗೆ ಸತ್ಯವನ್ನು ತಿಳಿಸಬೇಕು ಯಾಕೆ?

ಗೀತೆ 153 ಹೇಗನಿಸುತ್ತದೆ?

a ಹಿಂದೆಂದಿಗಿಂತ ಈಗ ನಮಗೆ ಹೆಚ್ಚಾಗಿ ಧರ್ಮದಲ್ಲಿ ಆಸಕ್ತಿ ಇಲ್ಲದ ಅಥವಾ ನಂಬಿಕೆ ಇಲ್ಲದ ಜನರು ಸೇವೆಯಲ್ಲಿ ಸಿಗುತ್ತಾರೆ. ಅವರ ಜೊತೆ ಹೇಗೆ ಬೈಬಲ್‌ ಬಗ್ಗೆ ಮಾತಾಡಬಹುದು, ಅವರು ಬೈಬಲ್‌ ಮೇಲೆ, ಯೆಹೋವ ದೇವರ ಮೇಲೆ ನಂಬಿಕೆ ಇಡಲು ನಾವು ಹೇಗೆ ಸಹಾಯ ಮಾಡಬಹುದು ಎಂದು ಈ ಲೇಖನದಲ್ಲಿ ಕಲಿಯಲಿದ್ದೇವೆ.

b ಸಮೀಕ್ಷೆಗಳ ಪ್ರಕಾರ, ಅಂಥ ಕೆಲವು ದೇಶಗಳು ಯಾವುವೆಂದರೆ: ಅಲ್ಬೇನಿಯ, ಆಸ್ಟ್ರೇಲಿಯ, ಆಸ್ಟ್ರಿಯ, ಅಜರ್ಬೈಜಾನ್‌, ಕೆನಡ, ಚೀನಾ, ಚೆಕ್‌ ಗಣರಾಜ್ಯ, ಡೆನ್ಮಾರ್ಕ್‌, ಫ್ರಾನ್ಸ್‌, ಜರ್ಮನಿ, ಹಾಂಗ್‌ ಕಾಂಗ್‌, ಐರ್ಲೆಂಡ್‌, ಇಸ್ರೇಲ್‌, ಜಪಾನ್‌, ನೆದರ್ಲೆಂಡ್‌, ನಾರ್ವೆ, ದಕ್ಷಿಣ ಕೊರಿಯ, ಸ್ಪೇನ್‌, ಸ್ವೀಡನ್‌, ಸ್ವಿಟ್ಜರ್‌ಲೆಂಡ್‌, ಯುರೋಪ್‌ ಮತ್ತು ವಿಯೆಟ್ನಾಂ.

c ಪದ ವಿವರಣೆ: ಈ ಲೇಖನದಲ್ಲಿ, ಧರ್ಮದಲ್ಲಿ ನಂಬಿಕೆ ಇಲ್ಲದವರು ಅನ್ನುವುದು ಯಾವುದೇ ಧರ್ಮಕ್ಕೆ ಸೇರಿಲ್ಲದವರನ್ನು ಮಾತ್ರವಲ್ಲ, ದೇವರಿದ್ದಾನೆ ಎಂದು ನಂಬದವರನ್ನು ಸಹ ಸೂಚಿಸುತ್ತದೆ.

d ಚಿತ್ರ ವಿವರಣೆ: ಆಸ್ಪತ್ರೆಯಲ್ಲಿ ತನ್ನ ಜೊತೆ ಕೆಲಸ ಮಾಡುವ ವ್ಯಕ್ತಿಗೆ ಒಬ್ಬ ಸಹೋದರ ಸಾಕ್ಷಿ ನೀಡುತ್ತಿದ್ದಾನೆ, ನಂತರ ಆ ವ್ಯಕ್ತಿ ನಮ್ಮ ವೆಬ್‌ಸೈಟ್‌ jw.orgನ್ನು ನೋಡುತ್ತಿದ್ದಾನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ