ಬೇಕಾಗಿವೆ—ಹೆಚ್ಚು ಬೈಬಲ್ ಅಭ್ಯಾಸಗಳು
1 ಯೆಹೋವ ದೇವರು ತನ್ನ ಭೂಸಂಸ್ಥೆಯನ್ನು ಸತತವಾದ ಬೆಳವಣಿಗೆಯೊಂದಿಗೆ ಆಶೀರ್ವದಿಸುತ್ತಿದ್ದಾನೆ. ಕಳೆದ ಸೇವಾ ವರ್ಷದಲ್ಲಿ, 3,75,923 ಮಂದಿ ಲೋಕವ್ಯಾಪಕವಾಗಿ ದೀಕ್ಷಾಸ್ನಾನ ಪಡೆದುಕೊಂಡರು. ಇದು ಪ್ರತಿ ದಿನ 1,000ಕ್ಕಿಂತಲೂ ಹೆಚ್ಚು ಮಂದಿ ಹೊಸ ಶಿಷ್ಯರು, ಅಥವಾ ಪ್ರತಿ ತಾಸಿಗೆ ಸುಮಾರು 43 ವ್ಯಕ್ತಿಗಳ ಸರಾಸರಿಯಾಗಿತ್ತು! ಲೋಕದ ವಿಭಿನ್ನ ಭಾಗಗಳಲ್ಲಿ ದಶಕಗಳಾದ್ಯಂತ ನಮ್ಮ ಸಹೋದರರು ಎದುರಿಸಿರಬಹುದಾದ ಕಷ್ಟದ ಎದುರಿನಲ್ಲೂ, ರಾಜ್ಯದ ಕೆಲಸವು ಅಭಿವೃದ್ಧಿಯಾಗುತ್ತಿದೆ ಮತ್ತು ಗಮನಾರ್ಹವಾದ ವೃದ್ಧಿಗಳ ಅನುಭವವಾಗುತ್ತಿದೆ. ಸುವಾರ್ತೆಯನ್ನು ಹಬ್ಬಿಸುವುದರಲ್ಲಿ ಮಾಡಲಾಗುತ್ತಿರುವ ಅಭಿವೃದ್ಧಿಯ ಕುರಿತಾಗಿ ಓದುವುದು ಎಷ್ಟೊಂದು ರೋಮಾಂಚಕವಾಗಿದೆ!
2 ಭಾರತದ ಬ್ರಾಂಚ್ನಲ್ಲಿ ಕಳೆದ ಸೇವಾ ವರ್ಷದಲ್ಲಿ, ಪ್ರಚಾರಕರು ಮತ್ತು ಆಕ್ಸಿಲಿಯರಿ ಪಯನೀಯರರ ಒಟ್ಟು ಸರಾಸರಿಯಲ್ಲಿ, ಸಾರುತ್ತಾ ವ್ಯಯಿಸಲ್ಪಟ್ಟ ತಾಸುಗಳಲ್ಲಿ, ಮತ್ತು ನೀಡಲ್ಪಟ್ಟ ಪುಸ್ತಕಗಳು, ಪುಸ್ತಿಕೆಗಳು, ಬ್ರೋಷರ್ಗಳು ಮತ್ತು ಪತ್ರಿಕೆಗಳ ಸಂಖ್ಯೆಯಲ್ಲಿ ವೃದ್ಧಿಗಳಾಗಿರುವುದನ್ನು ನಾವೂ ನೋಡಿದೆವು. ದೀಕ್ಷಾಸ್ನಾನ ಪಡೆದುಕೊಂಡವರ ಸಂಖ್ಯೆಯಲ್ಲಿ ವೃದ್ಧಿಯಿತ್ತು ಮತ್ತು ಜ್ಞಾಪಕದ ಹಾಜರಿಯು ಎಲ್ಲ ಕಾಲಕ್ಕೂ ಒಂದು ಉಚ್ಚಾಂಕವಾಗಿತ್ತು. ಪುನರ್ಭೇಟಿ ಮತ್ತು ಬೈಬಲ್ ಅಭ್ಯಾಸದ ಚಟುವಟಿಕೆಯ ಕುರಿತಾಗಿ ಏನು? ಪ್ರಚಾರಕರ ಸಂಖ್ಯೆಯಲ್ಲಿ ಎಂಟು ಪ್ರತಿಶತ ವೃದ್ಧಿಯಾದರೂ, ಪುನರ್ಭೇಟಿಗಳು ಕೇವಲ ಸ್ವಲ್ಪಮಟ್ಟಿಗೆ—ಕೇವಲ 0.5 ಪ್ರತಿಶತ—ವೃದ್ಧಿಯಾದವು ಮತ್ತು ಬೈಬಲ್ ಅಭ್ಯಾಸಗಳಲ್ಲಿ ನಾಲ್ಕು ಪ್ರತಿಶತ ಇಳಿತವಿತ್ತು. ಆದರೂ, ಶುಶ್ರೂಷೆಯ ಈ ವೈಶಿಷ್ಟ್ಯಗಳೇ, ಶಿಷ್ಯರನ್ನಾಗಿ ಮಾಡುವುದಕ್ಕಾಗಿ ಅತ್ಯಾವಶ್ಯಕವಾಗಿವೆ. ಪುನರ್ಭೇಟಿಗಳು ಮತ್ತು ಬೈಬಲ್ ಅಭ್ಯಾಸಗಳಲ್ಲಿನ ಈ ನಕಾರಾತ್ಮಕ ಪ್ರವೃತ್ತಿಯನ್ನು ವ್ಯತಿರಿಕ್ತಗೊಳಿಸಲು ನಮ್ಮಲ್ಲಿ ಪ್ರತಿಯೊಬ್ಬರೂ ಏನು ಮಾಡಸಾಧ್ಯವಿದೆ?
3 ಒಂದು ಅಭ್ಯಾಸವನ್ನು ನಡೆಸುವ ಬಯಕೆಯನ್ನು ಬಲಪಡಿಸಿರಿ: ಆತ್ಮಿಕವಾಗಿ ಬಲವುಳ್ಳವರೂ ಸಕ್ರಿಯರೂ ಆಗಿರುವುದರ ಕುರಿತು ನಾವು ಸ್ವತಃ ಗಮನವನ್ನು ಕೇಂದ್ರೀಕರಿಸಿಕೊಳ್ಳುವ ಅಗತ್ಯವಿದೆ. ಕ್ರಿಸ್ತನ ನಿಜ ಹಿಂಬಾಲಕರು “ಸತ್ಕ್ರಿಯೆಗಳಲ್ಲಿ ಆಸಕ್ತ”ರಾಗಿರುತ್ತಾರೆ. (ತೀತ 2:14) ನಾವು ನಮ್ಮ ಶುಶ್ರೂಷೆಯನ್ನು ಪುನರ್ವಿಮರ್ಶಿಸುವಾಗ, ಕ್ಷೇತ್ರದಲ್ಲಿ ಮಾಡಲ್ಪಟ್ಟಿರುವ ಎಲ್ಲ ಸಾಹಿತ್ಯ ಕೊಡಿಕೆಗಳನ್ನು ಅನುಸರಿಸಿಕೊಂಡು ಹೋಗಲು ನಾವು ತೀವ್ರವಾಗಿ ಆತುರವುಳ್ಳವರಾಗಿದ್ದೇವೆಂದು ಹೇಳಸಾಧ್ಯವಿದೆಯೊ? ಆಸಕ್ತಿಯನ್ನು ತೋರಿಸುವವರೆಲ್ಲರಿಗೆ ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸುವ ವಿಷಯದಲ್ಲಿ ನಾವು ಉತ್ಸುಕರಾಗಿದ್ದೇವೊ? (ರೋಮಾ. 12:11) ಅಥವಾ ಪುನರ್ಭೇಟಿಗಳನ್ನು ಮಾಡಲಿಕ್ಕಾಗಿ ಮತ್ತು ಮನೆ ಬೈಬಲ್ ಅಭ್ಯಾಸಗಳನ್ನು ಆರಂಭಿಸಲಿಕ್ಕಾಗಿ ನಾವು ಹೆಚ್ಚು ಬಲವಾದ ಬಯಕೆಯನ್ನು ವಿಕಸಿಸಿಕೊಳ್ಳುವ ಅಗತ್ಯವಿದೆಯೊ?
4 ವೈಯಕ್ತಿಕ ಬೈಬಲ್ ವಾಚನ, ಕ್ರಮವಾದ ಕೂಟದ ಹಾಜರಿ, ಮತ್ತು ಪ್ರಕಾಶನಗಳ ಅಭ್ಯಾಸವು, ನಮ್ಮನ್ನು ಆತ್ಮಿಕವಾಗಿ ಚೈತನ್ಯಭರಿತರೂ ದೇವರ ಆತ್ಮದಿಂದ ಬಲಗೊಳಿಸಲ್ಪಟ್ಟವರೂ ಆಗಿರುವಂತೆ ಮಾಡುವುದು. (ಎಫೆ. 3:16-19) ಇದು ಯೆಹೋವನಲ್ಲಿನ ನಮ್ಮ ನಂಬಿಕೆ ಮತ್ತು ಭರವಸೆಯನ್ನು ಹಾಗೂ ನಮ್ಮ ಜೊತೆಮಾನವನಿಗಾಗಿರುವ ನಮ್ಮ ಪ್ರೀತಿಯನ್ನು ಬಲಗೊಳಿಸುವುದು. ಬೇರೊಬ್ಬ ವ್ಯಕ್ತಿಗೆ ಸತ್ಯವನ್ನು ಕಲಿಸುವಂತೆ ನಾವು ಪ್ರಚೋದಿಸಲ್ಪಡುವೆವು, ಮತ್ತು ಈ ರೀತಿಯಲ್ಲಿ ನಾವು ನಮ್ಮ ಶುಶ್ರೂಷೆಯನ್ನು, ಆಸಕ್ತಿಕರ, ಯಶಸ್ವಿಕರ ಹಾಗೂ ಹುರಿದುಂಬಿಸುವಂತಹದ್ದಾಗಿ ಮಾಡುವೆವು. ಹೌದು, ನಾವು ಹೆಚ್ಚಿನ ಬೈಬಲ್ ಅಭ್ಯಾಸಗಳನ್ನು ನಡೆಸಲು ಬಯಸಬೇಕು!
5 ಮೊದಲು ಕುಟುಂಬದೊಂದಿಗೆ ಅಭ್ಯಾಸ ಮಾಡಿರಿ: ಮನೆಯಲ್ಲಿ ಮಕ್ಕಳಿರುವ ಕ್ರೈಸ್ತ ಹೆತ್ತವರು, ಕ್ರಮವಾದ ಕುಟುಂಬ ಬೈಬಲ್ ಅಭ್ಯಾಸದ ತಮ್ಮ ಕಾರ್ಯಕ್ರಮದ ಕುರಿತು ಚಿಂತಿತರಾಗಿರಬೇಕು. (ಧರ್ಮೋ. 31:12; ಕೀರ್ತ. 148:12, 13; ಜ್ಞಾನೋ. 22:6) ತಮ್ಮ ಮಕ್ಕಳು ಅಸ್ನಾತ ಪ್ರಚಾರಕರಾಗಲು ಮತ್ತು ಸಮರ್ಪಣೆ ಹಾಗೂ ದೀಕ್ಷಾಸ್ನಾನಕ್ಕಾಗಿ ಅರ್ಹರಾಗುವಂತೆ ಸಿದ್ಧಗೊಳಿಸಲಿಕ್ಕಾಗಿ, ಅಪೇಕ್ಷಿಸು ಬ್ರೋಷರ್ ಮತ್ತು ಅನಂತರ ಜ್ಞಾನ ಪುಸ್ತಕವನ್ನು ಹೆತ್ತವರು ಅವರೊಂದಿಗೆ ಅಭ್ಯಾಸಿಸಬೇಕು. ಮಗುವಿನ ಅಗತ್ಯ ಮತ್ತು ವಯಸ್ಸಿಗನುಸಾರ, ಖಂಡಿತವಾಗಿಯೂ ಹೆಚ್ಚಿನ ವಿಷಯವನ್ನು ಪರಿಗಣಿಸಬಹುದು. ಒಬ್ಬ ಅಸ್ನಾತ ಮಗುವಿನೊಂದಿಗೆ ಅಭ್ಯಾಸಿಸುವ ಒಬ್ಬ ಹೆತ್ತವನು, ಆ ಅಭ್ಯಾಸ, ಸಮಯ ಮತ್ತು ಪುನರ್ಭೇಟಿಗಳನ್ನು ಲೆಕ್ಕಿಸಬಹುದು. ಇದನ್ನು ನಮ್ಮ ರಾಜ್ಯದ ಸೇವೆಯ ಮೇ 1987ರ (ಇಂಗ್ಲಿಷ್) ಸಂಚಿಕೆಯಲ್ಲಿನ ಪ್ರಶ್ನಾ ಪೆಟ್ಟಿಗೆಯಲ್ಲಿ ತಿಳಿಸಲಾಗಿದೆ.
6 ವೈಯಕ್ತಿಕ ವ್ಯವಸ್ಥೆಯನ್ನು ಉತ್ತಮಗೊಳಿಸಿರಿ: ನೀಡಲ್ಪಟ್ಟಿರುವ ಪತ್ರಿಕೆಗಳು, ಬ್ರೋಷರುಗಳು ಮತ್ತು ಪುಸ್ತಕಗಳ ಸಂಖ್ಯೆಯನ್ನು ಪರಿಗಣಿಸುವಾಗ, ಬಹಳಷ್ಟು ಪ್ರಮಾಣದಲ್ಲಿ ಬೀಜವು ಬಿತ್ತಲ್ಪಡುತ್ತಿದೆಯೆಂಬ ವಿಷಯದಲ್ಲಿ ಸಂದೇಹವಿಲ್ಲ. ಬಿತ್ತಲ್ಪಟ್ಟಿರುವ ಸತ್ಯದ ಈ ಬೀಜಗಳು, ಹೊಸ ಶಿಷ್ಯರನ್ನು ಉತ್ಪಾದಿಸಲು ಪ್ರಚಂಡವಾದ ಸಾಧ್ಯತೆಯನ್ನು ಪಡೆದಿವೆ. ಆದರೆ ಒಬ್ಬ ರೈತನು ಅಥವಾ ತೋಟಗಾರನು, ಸತತವಾಗಿ ವ್ಯವಸಾಯ ಮಾಡಿ, ತನ್ನ ಎಲ್ಲ ಪ್ರಯತ್ನಗಳ ನಂತರ, ಕೊಯ್ಯಲಿಕ್ಕಾಗಿ ಎಂದೂ ಸಮಯವನ್ನು ತೆಗೆದುಕೊಳ್ಳದಿದ್ದಲ್ಲಿ ಅವನು ನಿಜವಾಗಿಯೂ ಸಂತೃಪ್ತನಾಗಿರುವನೊ? ನಿಶ್ಚಯವಾಗಿಯೂ ಇಲ್ಲ. ತದ್ರೀತಿಯಲ್ಲಿ, ಪುನಃ ಸಂದರ್ಶನಾ ಶುಶ್ರೂಷೆಯು ಅಗತ್ಯವಾಗಿದೆ.
7 ಪುನರ್ಭೇಟಿಗಳನ್ನು ಮಾಡಲಿಕ್ಕಾಗಿ ನೀವು ಕ್ರಮವಾಗಿ ಸಮಯವನ್ನು ಬದಿಗಿರಿಸುತ್ತೀರೊ? ಕಂಡುಕೊಳ್ಳಲ್ಪಟ್ಟ ಎಲ್ಲ ಆಸಕ್ತ ಜನರನ್ನು ತಡವಿಲ್ಲದೆ ಪುನಃ ಸಂದರ್ಶಿಸಿರಿ. ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸುವ ಉದ್ದೇಶದಿಂದ ಪುನರ್ಭೇಟಿಗಳನ್ನು ಮಾಡಿರಿ. ನಿಮ್ಮ ಪುನರ್ಭೇಟಿಗಳ ವಿಷಯದಲ್ಲಿ, ನೀಟಾದ, ಕ್ರಮಬದ್ಧವಾದ, ಹಾಗೂ ಸುವ್ಯವಸ್ಥಿತವಾದ ರೆಕಾರ್ಡನ್ನು ನೀವು ಇಡುತ್ತೀರೊ? ಮನೆಯವನ ಹೆಸರು ಮತ್ತು ವಿಳಾಸದೊಂದಿಗೆ ಆರಂಭದ ಭೇಟಿಯ ತಾರೀಖು, ಯಾವುದೇ ಕೊಡಿಕೆಗಳು, ಚರ್ಚಿಸಲ್ಪಟ್ಟ ವಿಷಯದ ಸಂಕ್ಷಿಪ್ತ ವರ್ಣನೆ, ಮತ್ತು ಮುಂದಿನ ಭೇಟಿಯಲ್ಲಿ ವಿಕಸಿಸಸಾಧ್ಯವಿರುವ ಒಂದು ಅಂಶವನ್ನು ಖಂಡಿತ ಬರೆದಿಡಿರಿ. ಪ್ರತಿಯೊಂದು ಪುನರ್ಭೇಟಿಯ ನಂತರ ಹೆಚ್ಚಿನ ಮಾಹಿತಿಯನ್ನು ಬರೆದುಕೊಳ್ಳಲಿಕ್ಕಾಗಿ ನಿಮ್ಮ ರೆಕಾರ್ಡ್ನಲ್ಲಿ ಸ್ಥಳ ಬಿಡಿರಿ.
8 ಒಂದು ಪುನರ್ಭೇಟಿಯನ್ನು ಮಾಡುವುದು ಹೇಗೆಂಬುದನ್ನು ವಿಶ್ಲೇಷಿಸಿರಿ: ಒಬ್ಬ ಆಸಕ್ತ ವ್ಯಕ್ತಿಯನ್ನು ಪುನಃ ಸಂದರ್ಶಿಸುವಾಗ, ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ಕೆಲವೊಂದು ವಿಷಯಗಳು ಯಾವುವು? (1) ಆದರಣೀಯರೂ, ಸ್ನೇಹಪರರೂ, ಉತ್ಸುಕರೂ, ಮತ್ತು ಬಿಗುಮಾನವಿಲ್ಲದವರೂ ಆಗಿರಿ. (2) ಅವನಿಗೆ ಆಸಕ್ತಿಕರವಾಗಿರುವ ವಿಷಯಗಳನ್ನು ಅಥವಾ ಪ್ರಶ್ನೆಗಳನ್ನು ಚರ್ಚಿಸಿರಿ. (3) ಚರ್ಚೆಯು ಸರಳವಾಗಿರಲಿ ಮತ್ತು ಶಾಸ್ತ್ರೀಯವಾಗಿರಲಿ. (4) ಪ್ರತಿಯೊಂದು ಭೇಟಿಯಲ್ಲಿ, ಮನೆಯವನು ತನಗೆ ವೈಯಕ್ತಿಕವಾಗಿ ಮೌಲ್ಯವುಳ್ಳದ್ದೆಂದು ಗ್ರಹಿಸುವಂತಹ ವಿಷಯವನ್ನು ಕಲಿಸಲು ಪ್ರಯತ್ನಿಸಿರಿ. (5) ಮುಂದಿನ ಭೇಟಿಯಲ್ಲಿ ಚರ್ಚಿಸಲ್ಪಡುವ ವಿಷಯಕ್ಕಾಗಿ ಅವನಲ್ಲಿ ಆಸಕ್ತಿಯನ್ನು ಬೆಳೆಸಿರಿ. (6) ತೀರ ಹೆಚ್ಚು ಸಮಯ ಉಳಿಯಬೇಡಿರಿ. (7) ಮನೆಯವನಿಗೆ ಪೇಚಾಟವನ್ನು ಉಂಟುಮಾಡುವಂತಹ ಅಥವಾ ಅವನನ್ನು ಕಷ್ಟದಲ್ಲಿ ಸಿಕ್ಕಿಸುವಂತಹ ಪ್ರಶ್ನೆಗಳನ್ನು ಕೇಳಬೇಡಿರಿ. (8) ಆತ್ಮಿಕ ಗಣ್ಯತೆಯು ವಿಕಸಿಸಲ್ಪಡುವ ಮುಂಚೆಯೇ, ಮನೆಯವನ ತಪ್ಪು ವೀಕ್ಷಣೆಗಳನ್ನು ಅಥವಾ ಕೆಟ್ಟ ಹವ್ಯಾಸಗಳನ್ನು ಖಂಡಿಸದಿರುವಂತೆ ವಿವೇಚನಾಶಕ್ತಿಯನ್ನು ಉಪಯೋಗಿಸಿರಿ.—ಪುನರ್ಭೇಟಿಗಳನ್ನು ಮಾಡುವುದರಲ್ಲಿ ಮತ್ತು ಬೈಬಲ್ ಅಭ್ಯಾಸಗಳನ್ನು ಆರಂಭಿಸುವುದರಲ್ಲಿ ಯಶಸ್ವಿಯಾಗುವ ವಿಧದ ಕುರಿತಾಗಿರುವ ಹೆಚ್ಚಿನ ಸಹಾಯಕ್ಕಾಗಿ, ಮಾರ್ಚ್ 1997ರ ನಮ್ಮ ರಾಜ್ಯದ ಸೇವೆಯ ಪುರವಣಿಯನ್ನು ನೋಡಿರಿ.
9 ಪ್ರತಿಯೊಂದು ಸಾಧ್ಯತೆಯನ್ನು ಪರೀಕ್ಷಿಸಿನೋಡಿ: ಒಂದು ಸಭೆಯಲ್ಲಿ, ಹೆಚ್ಚು ಭದ್ರತೆಯುಳ್ಳ ಹೌಸಿಂಗ್ ಸೊಸೈಟಿಯಲ್ಲಿನ ಎಲ್ಲ ನಿವಾಸಿಗಳ ಹೆಸರುಗಳನ್ನು ಮತ್ತು ಫ್ಲ್ಯಾಟ್ ನಂಬರ್ಗಳನ್ನು ಪಡೆದುಕೊಳ್ಳಲು ಸಾಧ್ಯವಾಯಿತು. ಪ್ರತಿಯೊಬ್ಬ ನಿವಾಸಿಗೆ ಒಂದು ವೈಯಕ್ತಿಕ ಪತ್ರವು ಬರೆಯಲ್ಪಟ್ಟಿತು ಮತ್ತು ಎರಡು ಕಿರುಹೊತ್ತಗೆಗಳನ್ನು ಒಳಸೇರಿಸಲಾಯಿತು. ಪತ್ರದ ಅಂತ್ಯದಲ್ಲಿ, ಒಂದು ಮನೆ ಬೈಬಲ್ ಅಭ್ಯಾಸದ ನೀಡಿಕೆಯನ್ನು ಮಾಡಲಾಯಿತು ಮತ್ತು ಆ ಪತ್ರವನ್ನು ಪಡೆದವನು ಪ್ರತಿಕ್ರಿಯೆಯನ್ನು ತೋರಿಸಲು ಸಾಧ್ಯವಾಗುವಂತೆ ಒಂದು ಸ್ಥಳಿಕ ಫೋನ್ ನಂಬರನ್ನು ಸೇರಿಸಲಾಯಿತು. ಕೆಲವು ದಿನಗಳೊಳಗೆ, ಒಬ್ಬ ಯುವ ಪುರುಷನು ಫೋನ್ ಮಾಡಿ, ಒಂದು ಅಭ್ಯಾಸಕ್ಕಾಗಿ ವಿನಂತಿಸಿಕೊಂಡನು. ಮರುದಿನವೇ ಒಂದು ಪುನರ್ಭೇಟಿಯನ್ನು ಮಾಡಲಾಯಿತು, ಮತ್ತು ಜ್ಞಾನ ಪುಸ್ತಕದಿಂದ ಒಂದು ಅಭ್ಯಾಸವು ಆರಂಭಿಸಲ್ಪಟ್ಟಿತು. ಅದೇ ರಾತ್ರಿ ಅವನು ಸಭಾ ಪುಸ್ತಕ ಅಭ್ಯಾಸಕ್ಕೆ ಹಾಜರಾದನು, ಮತ್ತು ಎಲ್ಲ ಕೂಟಗಳಿಗೆ ಹಾಜರಾಗುವುದನ್ನು ಮುಂದುವರಿಸಿದನು. ಬಹುಮಟ್ಟಿಗೆ ತತ್ಕ್ಷಣವೇ, ಅವನು ಬೈಬಲಿನ ಕ್ರಮದ ದೈನಿಕ ವಾಚನವನ್ನು ಆರಂಭಿಸಿದನು ಮತ್ತು ದೀಕ್ಷಾಸ್ನಾನದ ಕಡೆಗೆ ಸ್ಥಿರವಾದ ಪ್ರಗತಿಯನ್ನು ಮಾಡಿದನು.
10 ಪ್ರಚಾರಕರ ಒಂದು ಗುಂಪು, ಕೆಲವೊಂದು ಪುನರ್ಭೇಟಿಗಳನ್ನು ಜೊತೆಯಾಗಿ ಮಾಡಲು ಏರ್ಪಾಡು ಮಾಡಿತು. ಒಬ್ಬ ಸಹೋದರಿಯು ತನ್ನ ಒಂದು ಸಂದರ್ಶನವನ್ನು ಮಾಡಿದಾಗ, ಅವಳು ಯಾರನ್ನು ಸಂದರ್ಶಿಸಲು ಹೋಗಿದ್ದಳೋ ಆ ವ್ಯಕ್ತಿಯು ಮನೆಯಲ್ಲಿರಲಿಲ್ಲ, ಆದರೆ ಇನ್ನೊಬ್ಬ ಯುವತಿಯು ಬಾಗಿಲಿಗೆ ಬಂದು, “ನಾನು ನಿಮಗಾಗಿ ಕಾಯುತ್ತಿದ್ದೆ” ಎಂದು ಹೇಳಿದಳು. ಆ ಮನೆಯಾಕೆ ಒಬ್ಬ ಪರಿಚಯಸ್ಥಳಿಂದ ಈ ಹಿಂದೆ ಒಂದು ಜ್ಞಾನ ಪುಸ್ತಕವನ್ನು ಪಡೆದುಕೊಂಡಿದ್ದಳು. ಆ ಸಹೋದರಿಯರು ಅವಳ ಮನೆಗೆ ಹೋಗುವುದರೊಳಗೆ, ಅವಳು ಆ ಪುಸ್ತಕವನ್ನು ಎರಡು ಸಲ ಓದಿದ್ದಳು ಮತ್ತು ಅದರಲ್ಲಿದ್ದ ಮಾಹಿತಿಯಿಂದ ತುಂಬ ಪ್ರಭಾವಿತಳಾಗಿದ್ದಳು. ಸಾಕ್ಷಿಗಳು ಅವಳನ್ನು ಆ ದಿನ ಸಂದರ್ಶಿಸಿದ್ದು ಅವಳಿಗೆ ಆಶ್ಚರ್ಯವನ್ನುಂಟುಮಾಡಲಿಲ್ಲ, ಯಾಕಂದರೆ ಅವರು ಬಂದು, ತನ್ನೊಂದಿಗೆ ಬೈಬಲನ್ನು ಅಭ್ಯಾಸಿಸುವಂತೆ ತಾನು ಪ್ರಾರ್ಥಿಸುತ್ತಿದ್ದೆನೆಂದು ಅವಳು ಹೇಳಿದಳು. ಒಂದು ಅಭ್ಯಾಸವು ಆರಂಭಿಸಲ್ಪಟ್ಟಿತು, ಅವಳು ಸಭಾ ಕೂಟಗಳಿಗೆ ಹಾಜರಾಗಲಾರಂಭಿಸಿದಳು, ಮತ್ತು ಬೇಗನೆ ಪ್ರಗತಿಯನ್ನು ಮಾಡಿದಳು.
11 ದೀಕ್ಷಾಸ್ನಾನ ಪಡೆದು ಸುಮಾರು 25 ವರ್ಷಗಳು ದಾಟಿರುವ ಒಬ್ಬ ಸಹೋದರಿಯು, ಇತ್ತೀಚೆಗೆ ತನ್ನ ತಾಯಿಗೆ ಒಂದು ಜ್ಞಾನ ಪುಸ್ತಕವನ್ನು ಕೊಟ್ಟಳು. ಒಬ್ಬ ಚರ್ಚ್ ಸದಸ್ಯರಾಗಿರುವ ಅವಳ ತಾಯಿ, ಪುಸ್ತಕವನ್ನು ಓದಲಾರಂಭಿಸಿದರು. ಅವರು ಎರಡು ಅಧ್ಯಾಯಗಳನ್ನು ಓದಿ ಮುಗಿಸಿದ ನಂತರ, ತಮ್ಮ ಮಗಳಿಗೆ ಫೋನ್ ಮಾಡಿ, “ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಲು ಬಯಸುತ್ತೇನೆ!” ಎಂದು ಹೇಳಿ ಮಗಳನ್ನು ಬೆರಗುಗೊಳಿಸಿದರು. ಆ ತಾಯಿ ಅಭ್ಯಾಸ ಮಾಡಲಾರಂಭಿಸಿದರು ಮತ್ತು ಈಗ ದೀಕ್ಷಾಸ್ನಾನಹೊಂದಿದ್ದಾರೆ.
12 ಈ ಸಲಹೆಗಳನ್ನು ಪ್ರಯತ್ನಿಸಿರಿ: ಅಭ್ಯಾಸಗಳನ್ನು ಆರಂಭಿಸಲಿಕ್ಕಾಗಿ ನೀವು ಎಂದಾದರೂ ನೇರವಾದ ಪ್ರಸ್ತಾವವನ್ನು ಉಪಯೋಗಿಸಿದ್ದೀರೊ? ನೀವು ಸರಳವಾಗಿ ಹೀಗೆ ಹೇಳಬಹುದು: “ನೀವು ಒಂದು ಉಚಿತವಾದ ಮನೆ ಬೈಬಲ್ ಅಭ್ಯಾಸವನ್ನು ಪಡೆಯಲು ಇಷ್ಟಪಡುವಲ್ಲಿ, ಅದನ್ನು ಹೇಗೆ ಮಾಡಲಾಗುತ್ತದೆಂಬುದನ್ನು ನಾನು ನಿಮಗೆ ಕೆಲವೇ ನಿಮಿಷಗಳಲ್ಲಿ ತೋರಿಸಬಲ್ಲೆ. ನೀವು ಅದರಲ್ಲಿ ಆನಂದಿಸಿದರೆ, ಅದನ್ನು ಮುಂದುವರಿಸಸಾಧ್ಯವಿದೆ.” ಆ ವಿಧದಲ್ಲಿ ಹೇಳುವಾಗ, ಅನೇಕ ಜನರು ಆ ನೀಡಿಕೆಯನ್ನು ಸ್ವೀಕರಿಸಿ, ಒಂದು ಬೈಬಲ್ ಅಭ್ಯಾಸದ ಪ್ರತ್ಯಕ್ಷಾಭಿನಯವನ್ನು ವೀಕ್ಷಿಸಲು ಹಿಂದೆಮುಂದೆ ನೋಡುವುದಿಲ್ಲ.
13 ಅಭ್ಯಾಸದ ಆರಂಭದಿಂದಲೇ, ಉಲ್ಲೇಖಿತ ಶಾಸ್ತ್ರವಚನಗಳನ್ನು ಓದುವ ಮೂಲಕ ಮತ್ತು ಮುದ್ರಿತ ಪ್ರಶ್ನೆಗಳಿಗೆ ಉತ್ತರವಾಗಿ ಮುಖ್ಯ ಪದಗಳಿಗೆ ಅಡಿಗೆರೆಹಾಕುವ ಮೂಲಕ, ಮುಂಚಿತವಾಗಿ ತಯಾರಿಸುವುದು ಹೇಗೆಂಬುದನ್ನು ವಿದ್ಯಾರ್ಥಿಗೆ ತೋರಿಸಿರಿ. ಕೇವಲ ಮುಖ್ಯ ಅಂಶಗಳ ಮೇಲೆ ಕೇಂದ್ರೀಕರಿಸಿರಿ. ಆರಂಭದ ಕೆಲವೊಂದು ಅಭ್ಯಾಸಾವಧಿಗಳಲ್ಲಿ ನಾವು ಸ್ವಲ್ಪ ಹೊಂದಿಕೊಳ್ಳುವವರಾಗಿರುವ ಅಗತ್ಯವಿದೆಯಾದರೂ, ಒಂದು ಬೈಬಲ್ ಅಭ್ಯಾಸವು ಕ್ರಮವಾಗಿ ನಡೆಸಲ್ಪಡುವುದು ಪ್ರಾಮುಖ್ಯವಾದ ಸಂಗತಿಯಾಗಿದೆ. ನೀವು ಪ್ರಾರ್ಥನೆಯನ್ನು ಅಭ್ಯಾಸದ ಅತ್ಯಾವಶ್ಯಕ ಭಾಗವಾಗಿ ಹೇಗೆ ಪರಿಚಯಿಸುವಿರಿ ಮತ್ತು ವಿರೋಧಕ್ಕಾಗಿ ನೀವು ವಿದ್ಯಾರ್ಥಿಯನ್ನು ಶಾಸ್ತ್ರೀಯವಾಗಿ ಹೇಗೆ ಸಿದ್ಧಗೊಳಿಸುವಿರಿ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ. ಸಾಧ್ಯವಾಗುವಷ್ಟರ ಮಟ್ಟಿಗೆ, ಅಭ್ಯಾಸವನ್ನು ಸ್ವಾರಸ್ಯಕರವಾಗಿ ಮಾಡಿರಿ!
14 ನಿಶ್ಚಯವಾಗಿಯೂ ಎಲ್ಲ ಬೈಬಲ್ ವಿದ್ಯಾರ್ಥಿಗಳು ಒಂದೇ ಪ್ರಮಾಣದಲ್ಲಿ ಪ್ರಗತಿ ಮಾಡುವುದಿಲ್ಲ. ಕೆಲವರು ಇತರರಷ್ಟು ಆತ್ಮಿಕ ಪ್ರವೃತ್ತಿಯುಳ್ಳವರಾಗಿರುವುದಿಲ್ಲ, ಇಲ್ಲವೇ ಕಲಿಸಲ್ಪಡುವಂತಹ ವಿಷಯಗಳನ್ನು ಬೇಗನೇ ಗ್ರಹಿಸಿಕೊಳ್ಳುವಷ್ಟು ಚುರುಕಾಗಿರುವುದಿಲ್ಲ. ಇತರರು ತೀರ ಕಾರ್ಯಮಗ್ನ ಜೀವಿತಗಳನ್ನು ನಡಿಸುತ್ತಿದ್ದು, ಪ್ರತಿ ವಾರ ಒಂದು ಇಡೀ ಅಧ್ಯಾಯವನ್ನು ಆವರಿಸಲು ಬೇಕಾದ ಸಮಯವನ್ನು ಮೀಸಲಾಗಿಡಲು ಶಕ್ತರಾಗಿರಲಿಕ್ಕಿಲ್ಲ. ಹೀಗಿರುವುದರಿಂದ, ನಿರ್ದಿಷ್ಟ ಅಧ್ಯಾಯಗಳನ್ನು ಆವರಿಸಲಿಕ್ಕಾಗಿ ಒಂದು ಅಭ್ಯಾಸ ಅವಧಿಗಿಂತ ಹೆಚ್ಚು ಅವಧಿಗಳಲ್ಲಿ ಅಭ್ಯಾಸಮಾಡುವುದು ಮತ್ತು ಪುಸ್ತಕವನ್ನು ಪೂರ್ಣಗೊಳಿಸಲು ಹೆಚ್ಚು ತಿಂಗಳುಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿರಬಹುದು. ಕೆಲವು ಸಂದರ್ಭಗಳಲ್ಲಿ, ನಾವು ಮೊದಲು ಅಪೇಕ್ಷಿಸು ಬ್ರೋಷರನ್ನು ಅಭ್ಯಾಸಿಸಬಹುದು ಮತ್ತು ಅನಂತರ ಜ್ಞಾನ ಪುಸ್ತಕವನ್ನು ಅಭ್ಯಾಸಿಸಲು ಮುಂದುವರಿಯಬಹುದು. ಇದರೊಂದಿಗೆ, ಸಭಾ ಕೂಟಗಳಲ್ಲಿನ ಅವರ ಹಾಜರಿಯು, ಪ್ರತಿಯೊಬ್ಬ ವಿದ್ಯಾರ್ಥಿಗೆ ಸತ್ಯದಲ್ಲಿ ಒಂದು ದೃಢವಾದ ತಳಪಾಯವನ್ನು ಹಾಕಲು ಸಹಾಯಮಾಡುವುದು.
15 ಎಲ್ಲಕ್ಕಿಂತಲೂ ಮಿಗಿಲಾಗಿ, ಒಂದು ಬೈಬಲ್ ಅಭ್ಯಾಸಕ್ಕಾಗಿ ಪ್ರಾರ್ಥಿಸಿರಿ! (1 ಯೋಹಾ. 3:22) ಒಬ್ಬ ಕ್ರೈಸ್ತನಿಗೆ ಅತಿ ಪ್ರತಿಫಲದಾಯಕವಾದ ಅನುಭವಗಳಲ್ಲಿ ಒಂದು, ಯೇಸು ಕ್ರಿಸ್ತನ ಶಿಷ್ಯನಾಗುವಂತೆ ಒಬ್ಬ ವ್ಯಕ್ತಿಗೆ ಸಹಾಯಮಾಡಲು ಯೆಹೋವನಿಂದ ಉಪಯೋಗಿಸಲ್ಪಡುವುದೇ ಆಗಿದೆ. (ಅ. ಕೃ. 20:35; 1 ಕೊರಿಂ. 3:6-9; 1 ಥೆಸ. 2:8) ಹೆಚ್ಚಿನ ಅಭ್ಯಾಸಗಳನ್ನು ಆರಂಭಿಸಲಿಕ್ಕಾಗಿರುವ ನಮ್ಮ ಪ್ರಯತ್ನಗಳ ಮೇಲೆ ಯೆಹೋವನ ಹೇರಳವಾದ ಆಶೀರ್ವಾದವಿರುವುದೆಂಬ ಪೂರ್ಣ ಭರವಸೆಯೊಂದಿಗೆ, ಬೈಬಲ್ ಅಭ್ಯಾಸದ ಕೆಲಸದಲ್ಲಿ ತುಂಬ ಹುರುಪನ್ನು ತೋರಿಸುವ ಸಮಯವು ಇದಾಗಿದೆ!
[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]
ಒಂದು ಹೊಸ ಬೈಬಲ್ ಅಭ್ಯಾಸವನ್ನು ಆರಂಭಿಸಲಿಕ್ಕಾಗಿ ನೀವು ಪ್ರಾರ್ಥಿಸುತ್ತಿದ್ದೀರೊ?