ಶಿಷ್ಯರನ್ನಾಗಿ ಮಾಡುವ ಜರೂರಿ ಕೆಲಸದ ಕಡೆಗೆ ಒಂದು ಪ್ರಗತಿಪರ ನೋಟ
1 ಭೂಮಿಯನ್ನು ಬಿಟ್ಟು ಹೋಗುವ ಮುಂಚೆ, ಯೇಸು ತನ್ನ ಹಿಂಬಾಲಕರಿಗೆ, “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎಂದು ಆಜ್ಞಾಪಿಸಿದನು. ಅವರು ಒಂದು ತೀವ್ರವಾದ ಸಾರುವ ಮತ್ತು ಕಲಿಸುವ ಕಾರ್ಯಾಚರಣೆಯನ್ನು ಕೈಗೊಂಡು, ತಮ್ಮ ಚಟುವಟಿಕೆಯನ್ನು ಇಡೀ ನಿವಾಸಿತ ಭೂಮಿಯಲ್ಲೇ ವಿಸ್ತರಿಸುವುದನ್ನು ಇದು ಅವಶ್ಯಪಡಿಸಿತು. (ಮತ್ತಾ. 28:19, 20; ಅ. ಕೃ. 1:8) ಈ ನೇಮಕವನ್ನು ಅವರು ಹೊರಲು ತೀರ ಕಷ್ಟಕರವಾದ ಒಂದು ಹೊರೆಯೋಪಾದಿ ಪರಿಗಣಿಸಿದರೊ? ಅಪೊಸ್ತಲ ಯೋಹಾನನಿಗನುಸಾರ, ಅವರು ಅದನ್ನು ಹೊರೆಯೋಪಾದಿ ಪರಿಗಣಿಸಲಿಲ್ಲ. ಶಿಷ್ಯರನ್ನಾಗಿ ಮಾಡುವವನೋಪಾದಿ 65 ವರ್ಷಗಳನ್ನು ಕಳೆದ ಬಳಿಕ, ಅವನು ಬರೆದುದು: “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ.”—1 ಯೋಹಾ. 5:3.
2 ಆದಿ ಕ್ರೈಸ್ತರ ಚಟುವಟಿಕೆಯ ಶಾಸ್ತ್ರೀಯ ದಾಖಲೆಯು, ಅವರು ಯೇಸು ಕ್ರಿಸ್ತನ ಶಿಷ್ಯರನ್ನಾಗಿ ಮಾಡುವ ತಮ್ಮ ನೇಮಕವನ್ನು ಜರೂರಿಯಿಂದ ಮಾಡುತ್ತಿದ್ದರೆಂಬುದನ್ನು ರುಜುಪಡಿಸುತ್ತದೆ. (2 ತಿಮೊ. 4:1, 2) ಅವರು ಇದನ್ನು ಕೇವಲ ಒಂದು ಕರ್ತವ್ಯಪಾಲನೆಯೋಪಾದಿ ಅಲ್ಲ, ಬದಲಾಗಿ ದೇವರನ್ನು ಸ್ತುತಿಸಲಿಕ್ಕಾಗಿ ಮತ್ತು ಇತರರಿಗೆ ರಕ್ಷಣೆಯ ನಿರೀಕ್ಷೆಯನ್ನು ಕೊಡಲಿಕ್ಕಾಗಿ ತಮಗಿದ್ದ ಪ್ರೀತಿಪರ ಅಪೇಕ್ಷೆಯಿಂದಾಗಿ ಮಾಡಿದರು. (ಅ. ಕೃ. 13:47-49) ಶಿಷ್ಯರಾದವರೆಲ್ಲರೂ ತದನಂತರ ಸ್ವತಃ ಶಿಷ್ಯರನ್ನಾಗಿ ಮಾಡುವವರಾಗಿ ಪರಿಣಮಿಸಿದ್ದರಿಂದ, ಪ್ರಥಮ ಶತಮಾನದಲ್ಲಿ ಕ್ರೈಸ್ತ ಸಭೆಯು ತ್ವರಿತಗತಿಯಲ್ಲಿ ಬೆಳೆಯಿತು.—ಅ. ಕೃ. 5:14; 6:7; 16:5.
3 ಶಿಷ್ಯರನ್ನಾಗಿ ಮಾಡುವ ಕೆಲಸದ ವೇಗವು ಹೆಚ್ಚುತ್ತದೆ: ಈ 20ನೆಯ ಶತಮಾನದಲ್ಲಿ, ಶಿಷ್ಯರನ್ನಾಗಿ ಮಾಡುವ ಸರ್ವಕಾಲದ ಅತಿ ಮಹಾನ್ ಕೆಲಸವು ಪೂರೈಸಲ್ಪಡುತ್ತಿದೆ! ಇಷ್ಟರವರೆಗೆ, ಲಕ್ಷಗಟ್ಟಲೆ ಜನರು ಸುವಾರ್ತೆಯನ್ನು ಸ್ವೀಕರಿಸಿ, ಅದಕ್ಕನುಸಾರ ಕ್ರಿಯೆಗೈದಿದ್ದಾರೆ. (ಲೂಕ 8:15) ಸದ್ಯದ ಈ ವಿಷಯಗಳ ವ್ಯವಸ್ಥೆಯ ಸಮಯವು ಬೇಗನೆ ಮುಗಿದುಹೋಗುತ್ತಾ ಇರುವುದರಿಂದ, ಪ್ರಾಮಾಣಿಕ ಹೃದಯದ ಜನರು ಸತ್ಯವನ್ನು ಬೇಗನೆ ಕಲಿಯಲು ಸಾಧ್ಯಮಾಡುವ ಸಾಧನಗಳನ್ನು, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ನಮಗೆ ಒದಗಿಸಿಕೊಟ್ಟಿದೆ.—ಮತ್ತಾ. 24:45.
4 ನಾವು 1995ರಲ್ಲಿ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕವನ್ನು ಪಡೆದೆವು ಮತ್ತು 1996ರಲ್ಲಿ ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರ್ ನಮಗೆ ದೊರೆಯಿತು. ಜ್ಞಾನ ಪುಸ್ತಕದ ಕುರಿತಾಗಿ, 1996, ಜನವರಿ 15ರ ಕಾವಲಿನಬುರುಜು ಪತ್ರಿಕೆಯ ಸಂಚಿಕೆಯು, 14ನೆಯ ಪುಟದಲ್ಲಿ ತಿಳಿಸಿದ್ದು: “ಈ 192 ಪುಟದ ಪುಸ್ತಕವನ್ನು ತುಲನಾತ್ಮಕವಾಗಿ ಕೊಂಚ ಸಮಯದೊಳಗೆ ಅಭ್ಯಾಸಿಸಸಾಧ್ಯವಿದೆ ಮತ್ತು ‘ನಿತ್ಯಜೀವಕ್ಕಾಗಿ ಯೋಗ್ಯ ಪ್ರವೃತ್ತಿಯುಳ್ಳ’ (NW)ವರು ಅದರ ಅಧ್ಯಯನದ ಮೂಲಕ ಸಾಕಷ್ಟನ್ನು ಕಲಿತು ಯೆಹೋವನಿಗೆ ಸಮರ್ಪಣೆಯನ್ನು ಮಾಡಿ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಶಕ್ತರಾಗಬೇಕು.”—ಅ. ಕೃ. 13:48.
5 ಜೂನ್ 1996ರ ನಮ್ಮ ರಾಜ್ಯದ ಸೇವೆಯ “ಜ್ಞಾನ ಪುಸ್ತಕದೊಂದಿಗೆ ಶಿಷ್ಯರನ್ನಾಗಿ ಮಾಡುವ ವಿಧ” ಎಂಬ ಪುರವಣಿಯು, ನಮಗೆ ಈ ಗುರಿಯನ್ನು ಕೊಟ್ಟಿತು: “ವಿದ್ಯಾರ್ಥಿಯ ಸಂದರ್ಭಗಳ ಮತ್ತು ಸ್ವಾಭಾವಿಕ ಕೌಶಲದ ಮೇಲೆ ಆಧರಿಸುತ್ತಾ, ಅಭ್ಯಾಸವನ್ನು ತ್ವರಿತಗತಿಯಲ್ಲಿ ಮಾಡದೆ, ಒಂದು ಗಂಟೆ ಅಥವಾ ಹೆಚ್ಚಿನ ಒಂದು ಅಭ್ಯಾಸ ಅವಧಿಯಲ್ಲಿ ಹೆಚ್ಚಿನ ಅಧ್ಯಾಯಗಳನ್ನು ನೀವು ಆವರಿಸಲು ನಿಮಗೆ ಸಾಧ್ಯವಾಗಬಹುದು. ಪ್ರತಿ ವಾರ ಅಭ್ಯಾಸಕ್ಕಾಗಿ ಶಿಕ್ಷಕನು ಮತ್ತು ವಿದ್ಯಾರ್ಥಿಯು—ಇಬ್ಬರೂ—ತಮ್ಮ ಭೇಟಿ ನಿಶ್ಚಯವನ್ನು ಇಡುವಾಗ, ವಿದ್ಯಾರ್ಥಿಗಳು ಉತ್ತಮವಾದ ಪ್ರಗತಿಯನ್ನು ಮಾಡುವರು.” ಆ ಲೇಖನವು ಹೀಗೆ ಹೇಳುತ್ತಾ ಮುಂದುವರಿಯಿತು: “ವ್ಯಕ್ತಿಯೊಬ್ಬನು ಜ್ಞಾನ ಪುಸ್ತಕದ ಅಭ್ಯಾಸವೊಂದನ್ನು ಪೂರ್ಣಗೊಳಿಸುವಷ್ಟಕ್ಕೆ, ದೇವರಿಗೆ ಸೇವೆಯನ್ನು ಸಲ್ಲಿಸುವುದರಲ್ಲಿನ ಅವನ ಪ್ರಾಮಾಣಿಕತೆ ಮತ್ತು ಆಸಕ್ತಿಯ ಗಹನತೆಯು ಸುವ್ಯಕ್ತವಾಗಿರುವಂತೆ ನಿರೀಕ್ಷಿಸಲ್ಪಡಬೇಕು.” ಅಕ್ಟೋಬರ್ 1996ರ ನಮ್ಮ ರಾಜ್ಯದ ಸೇವೆಯಲ್ಲಿನ ಪ್ರಶ್ನಾ ಪೆಟ್ಟಿಗೆಯು ವಿವರಿಸಿದ್ದು: “ಸಂಬಂಧಿತವಾಗಿ ಒಂದು ಸ್ವಲ್ಪ ಸಮಯಾವಧಿಯೊಳಗೆ, ಒಬ್ಬ ಪರಿಣಾಮಕಾರಿಯಾದ ಶಿಕ್ಷಕನು, ಪ್ರಾಮಾಣಿಕವಾದ ಸಾಮಾನ್ಯ ವಿದ್ಯಾರ್ಥಿಗೆ, ಯೆಹೋವನನ್ನು ಸೇವಿಸಲು ಒಂದು ಬುದ್ಧಿಮತ್ತೆಯ ನಿರ್ಣಯವನ್ನು ಮಾಡಲು ಸಾಕಾಗುವಷ್ಟು ಜ್ಞಾನವನ್ನು ಗಳಿಸಲಿಕ್ಕಾಗಿ ನೆರವು ನೀಡಲು ಶಕ್ತನಾಗಿರುವನೆಂದು ನಿರೀಕ್ಷಿಸಲಾಗುತ್ತದೆ.”
6 ಜ್ಞಾನ ಪುಸ್ತಕವು ಫಲಿತಾಂಶಗಳನ್ನು ಪಡೆದುಕೊಳ್ಳುತ್ತದೆ: ಒಬ್ಬ ಯುವತಿಯು ದೀಕ್ಷಾಸ್ನಾನದ ಸಂದರ್ಭದಲ್ಲಿ, ಜ್ಞಾನ ಪುಸ್ತಕವನ್ನು ಅಭ್ಯಾಸಮಾಡುವುದರ ಕುರಿತು ತನಗೆ ಹೇಗನಿಸಿತೆಂಬುದನ್ನು ತಿಳಿಸಿದಳು. ತುಂಬ ಸಮಯದಿಂದ, ಅವಳು ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ಅಭ್ಯಾಸಮಾಡುತ್ತಿದ್ದಳು. ಜ್ಞಾನ ಪುಸ್ತಕವು ಬಿಡುಗಡೆಮಾಡಲ್ಪಟ್ಟಾಗ, ಆಕೆಯೊಂದಿಗೆ ಅಭ್ಯಾಸಮಾಡುತ್ತಿದ್ದ ಸಹೋದರಿಯು, ಆ ಹೊಸ ಪುಸ್ತಕದಲ್ಲಿ ಅಭ್ಯಾಸವನ್ನು ಆರಂಭಿಸಿದಳು. ತಾನು ಈಗ ಒಂದು ನಿರ್ಣಯವನ್ನು ಮಾಡಲೇಬೇಕಾಗಿದೆ ಎಂಬುದು ಆ ವಿದ್ಯಾರ್ಥಿನಿಗೆ ಬೇಗನೆ ತಿಳಿದುಬಂತು, ಮತ್ತು ಆ ಹಂತದಿಂದ ಅವಳು ಕ್ಷಿಪ್ರವಾದ ಪ್ರಗತಿಯನ್ನು ಮಾಡುವಂತೆ ಪ್ರಚೋದಿಸಲ್ಪಟ್ಟಳು. ಈಗ ನಮ್ಮ ಸಹೋದರಿಯಾಗಿರುವ ಆ ಯುವತಿಯು ಹೇಳುವುದು: “ಸದಾ ಜೀವಿಸಬಲ್ಲಿರಿ ಪುಸ್ತಕವು, ನನಗೆ ಯೆಹೋವನನ್ನು ಪ್ರೀತಿಸುವಂತೆ ಸಹಾಯಮಾಡಿತು, ಆದರೆ ಜ್ಞಾನ ಪುಸ್ತಕವು ನಾನು ಆತನನ್ನು ಸೇವಿಸುವ ನಿರ್ಣಯವನ್ನು ಮಾಡುವಂತೆ ಸಹಾಯಮಾಡಿತು.”
7 ಇನ್ನೊಬ್ಬ ಸ್ತ್ರೀಯು ಎಷ್ಟು ಬೇಗನೆ ಸತ್ಯವನ್ನು ಕಲಿತುಕೊಂಡಳೆಂಬುದನ್ನು ಪರಿಗಣಿಸಿರಿ. ತನ್ನ ಎರಡನೆಯ ಅಭ್ಯಾಸದ ನಂತರ, ಅವಳು ಸರ್ಕಿಟ್ ಮೇಲ್ವಿಚಾರಕನ ಭೇಟಿಯ ಸಮಯದಲ್ಲಿ ರಾಜ್ಯ ಸಭಾಗೃಹದಲ್ಲಿನ ಕೂಟವೊಂದಕ್ಕೆ ಹಾಜರಾದಳು. ಆ ವಾರದಲ್ಲಿ, ಅವಳ ಮೂರನೆಯ ಅಭ್ಯಾಸದ ಸಮಯದಲ್ಲಿ, ತಾನು ಯೆಹೋವನಿಗೆ ಸಮರ್ಪಣೆಯನ್ನು ಮಾಡಿದ್ದೇನೆ, ಮತ್ತು ಒಬ್ಬ ಅಸ್ನಾನಿತ ಪ್ರಚಾರಕಳಾಗಲು ಬಯಸುತ್ತೇನೆ ಎಂದು ಅವರಿಗೆ ಹೇಳಿದಳು. ಅವಳು ಹಿರಿಯರನ್ನು ಭೇಟಿಯಾದಳು, ಅವರು ಅವಳನ್ನು ಒಬ್ಬ ಪ್ರಚಾರಕಳನ್ನಾಗಿ ಅಂಗೀಕರಿಸಿಸಿದರು, ಮತ್ತು ಅವಳು ಮುಂದಿನ ವಾರ ಕ್ಷೇತ್ರ ಸೇವೆಯನ್ನು ಆರಂಭಿಸಿದಳು. ತನ್ನ ಬೈಬಲ್ ಅಭ್ಯಾಸದಲ್ಲಿ ಅವಳು ಎಷ್ಟು ಮಗ್ನಳಾದಳೆಂದರೆ, ಒಂದು ವಾರದಲ್ಲಿ ಎರಡು ಅಥವಾ ಮೂರು ಸಲ ಅಭ್ಯಾಸಮಾಡಲಿಕ್ಕಾಗಿ ಮತ್ತು ಶುಶ್ರೂಷೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯಲಿಕ್ಕೋಸ್ಕರ ಅವಳು ತನ್ನ ಕೆಲಸದಿಂದ ರಜೆಯನ್ನು ಪಡೆದುಕೊಂಡಳು. ಕೆಲವೊಮ್ಮೆ, ಒಂದು ಅಭ್ಯಾಸಾವಧಿಯಲ್ಲಿ ಅವರು ಎರಡು ಅಥವಾ ಮೂರು ಅಧ್ಯಾಯಗಳನ್ನು ಆವರಿಸುತ್ತಿದ್ದರು. ಅವಳು ಏನನ್ನು ಕಲಿಯುತ್ತಿದ್ದಳೊ ಅದನ್ನು ತನ್ನ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಅನ್ವಯಿಸಿಕೊಳ್ಳಲು ಆರಂಭಿಸಿ, ನಾಲ್ಕು ವಾರಗಳಲ್ಲೇ ಜ್ಞಾನ ಪುಸ್ತಕವನ್ನು ಮುಗಿಸಿ, ದೀಕ್ಷಾಸ್ನಾನದ ಕಡೆಗೆ ಪ್ರಗತಿಯನ್ನು ಮಾಡಿದಳು!
8 ಒಬ್ಬ ಸಹೋದರಿಯ ಗಂಡನು, ತಾನು “ಒಬ್ಬ ಪಕ್ಕಾ ಅವಿಶ್ವಾಸಿ ಸಂಗಾತಿ”ಯಾಗಿದ್ದೆ ಎಂದು ಸ್ವತಃ ತನ್ನ ಕುರಿತು ಹೇಳಿಕೊಳ್ಳುತ್ತಾನೆ. ಒಂದು ದಿನ ಒಬ್ಬ ಸಹೋದರನು ಅವನಿಗೆ ಜ್ಞಾನ ಪುಸ್ತಕದಲ್ಲಿ ಒಂದು ಬೈಬಲ್ ಅಭ್ಯಾಸವನ್ನು ನೀಡಿಕೊಂಡನು. ಆದರೆ, ಆ ಮನುಷ್ಯನು ಪ್ರಥಮ ಅಭ್ಯಾಸದ ನಂತರ ಅಥವಾ ತದನಂತರ ಬೇರೆ ಯಾವುದೇ ಸಮಯದಲ್ಲಿ ಅದನ್ನು ನಿಲ್ಲಿಸಸಾಧ್ಯವಿದೆ ಎಂಬ ಷರತ್ತಿನೊಂದಿಗೆ ಇದನ್ನು ನೀಡಿದನು. ಗಂಡನು ತನ್ನ ಶಾಲಾದಿನಗಳಲ್ಲಿ ಚೆನ್ನಾಗಿ ಅಭ್ಯಾಸಮಾಡಿರದಿದ್ದರೂ, ಮತ್ತು 20ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಯಾವುದೇ ರೀತಿಯ ಧಾರ್ಮಿಕ ಸಾಹಿತ್ಯವನ್ನು ಅಭ್ಯಾಸಮಾಡದೆ ಇದ್ದರೂ, ಇದನ್ನು ಪ್ರಯತ್ನಿಸಿನೋಡಲು ಒಪ್ಪಿಕೊಂಡನು. ಜ್ಞಾನ ಪುಸ್ತಕದಲ್ಲಿನ ಅಭ್ಯಾಸಕ್ಕೆ ಅವನ ಪ್ರತಿಕ್ರಿಯೆ ಏನಾಗಿತ್ತು? ಅವನಂದದ್ದು: “ಈ ಬೈಬಲ್ ಸಹಾಯಕವು, ಇಷ್ಟೊಂದು ಸರಳವಾಗಿ ಬರೆಯಲ್ಪಟ್ಟಿರುವುದನ್ನು ಕಂಡುಕೊಳ್ಳುವುದು ನಿಜವಾಗಿಯೂ ಹರ್ಷದಾಯಕವಾಗಿತ್ತು. ಅದರ ಮಾಹಿತಿಯು ಎಷ್ಟು ಸ್ಪಷ್ಟವಾಗಿ ಮತ್ತು ತರ್ಕಸಂಗತವಾಗಿ ಪ್ರಸ್ತುತಪಡಿಸಲ್ಪಟ್ಟಿತ್ತೆಂದರೆ, ನಾನು ನಮ್ಮ ಮುಂದಿನ ಅಭ್ಯಾಸಕ್ಕಾಗಿ ತುಂಬ ಕಾತುರದಿಂದ ಎದುರುನೋಡುತ್ತಿದ್ದೆ. ನನ್ನ ಶಿಕ್ಷಕನು, ಸೊಸೈಟಿಯಿಂದ ಕೊಡಲ್ಪಟ್ಟಿರುವ ಶಿಷ್ಯರನ್ನಾಗಿ ಮಾಡುವ ವಿಧಾನಗಳನ್ನು ಚಾತುರ್ಯದಿಂದ ಅನುಸರಿಸಿದನು, ಮತ್ತು ಯೆಹೋವನ ಆತ್ಮದ ಸಹಾಯದಿಂದ, ನಾನು ನಾಲ್ಕು ತಿಂಗಳುಗಳ ಬಳಿಕ ದೀಕ್ಷಾಸ್ನಾನವನ್ನು ಪಡೆದುಕೊಂಡೆ. ಶಿಷ್ಯರನ್ನಾಗಿ ಮಾಡುವ ಕೆಲಸಕ್ಕಾಗಿ ನಾವು ಪ್ರೀತಿಯನ್ನು ವಿಕಸಿಸಿಕೊಳ್ಳುವಲ್ಲಿ, ಕ್ಷೇತ್ರ ಸೇವೆಯಲ್ಲಿ ಸಹೃದಯಿ ವ್ಯಕ್ತಿಗಳಿಗಾಗಿ ಹುಡುಕುತ್ತಾ ಮುಂದುವರಿಯುವಲ್ಲಿ, ಸೊಸೈಟಿಯಿಂದ ಒದಗಿಸಲ್ಪಡುವ ಜ್ಞಾನ ಪುಸ್ತಕ ಮತ್ತು ಇತರ ಬೈಬಲ್ ಸಹಾಯಕಗಳನ್ನು ಉಪಯೋಗಿಸುವಲ್ಲಿ, ಹಾಗೂ ಅತಿ ಪ್ರಾಮುಖ್ಯವಾಗಿ ಯೆಹೋವನ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸುವಲ್ಲಿ, ಶಿಷ್ಯರನ್ನಾಗಿ ಮಾಡಲು ಸಹಾಯ ಮಾಡುವ ಅತಿ ವಿಶೇಷವಾದ ಸುಯೋಗವು ನಮಗಿರಸಾಧ್ಯವಿದೆ.” ಮೇಲಿನ ಅನುಭವಗಳು ನಿಜವಾಗಿಯೂ ಅಸಾಧಾರಣವಾದ ಅನುಭವಗಳಾಗಿವೆ. ನಮ್ಮ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು, ಅಷ್ಟು ಬೇಗನೆ ಸತ್ಯಕ್ಕೆ ಬರುವುದಿಲ್ಲ.
9 ವಿದ್ಯಾರ್ಥಿಗಳು ವಿಭಿನ್ನ ವೇಗದಲ್ಲಿ ಪ್ರಗತಿಮಾಡುತ್ತಾರೆ: ದೇವರ ವಾಕ್ಯದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸಾಮರ್ಥ್ಯಗಳು ಗಣನೀಯವಾಗಿ ವಿಭಿನ್ನವಾಗಿರಬಲ್ಲವು ಎಂಬುದು ಅಂಗೀಕರಿಸಲೇಬೇಕಾದಂತಹ ವಿಷಯವಾಗಿದೆ. ಆತ್ಮಿಕ ಬೆಳವಣಿಗೆಯು ನಿಧಾನವಾಗಿರಬಲ್ಲದು ಅಥವಾ ತೀವ್ರಗತಿಯದ್ದಾರಬಲ್ಲದು. ಕೆಲವು ವಿದ್ಯಾರ್ಥಿಗಳು, ಇತರರಿಗಿಂತ ಬೇಗನೆ, ಅಂದರೆ ಕೆಲವೇ ತಿಂಗಳುಗಳೊಳಗೆ ಪ್ರಗತಿಯನ್ನು ಮಾಡುತ್ತಾರೆ. ಒಬ್ಬ ವ್ಯಕ್ತಿಯ ಆತ್ಮಿಕ ಬೆಳವಣಿಗೆಯ ಪ್ರಮಾಣವು, ಅವನ ಶೈಕ್ಷಣಿಕ ಹಿನ್ನಲೆ, ಆತ್ಮಿಕ ವಿಷಯಗಳಿಗಾಗಿ ಅವನಲ್ಲಿರುವ ಗಣ್ಯತೆಯ ಮಟ್ಟ, ಮತ್ತು ಯೆಹೋವನಿಗಾಗಿ ಅವನಲ್ಲಿರುವ ಭಕ್ತಿಯ ಆಳದಿಂದ ಪ್ರಭಾವಿಸಲ್ಪಡುತ್ತದೆ. ನಾವು ಅಭ್ಯಾಸಮಾಡುವ ಪ್ರತಿಯೊಬ್ಬರೂ, ವಿಶ್ವಾಸಿಗಳಾಗಿ ಪರಿಣಮಿಸಿದ ಪುರಾತನ ಬೇರೋಯದವರಂತೆ, ಶಾಸ್ತ್ರವಚನಗಳನ್ನು ದಿನನಿತ್ಯವೂ ಅಭ್ಯಾಸಿಸಲು ‘ಸಿದ್ಧಮನಸ್ಸುಳ್ಳ’ವರಾಗಿರುವುದಿಲ್ಲ.—ಅ. ಕೃ. 17:11, 12.
10 ಆದುದರಿಂದಲೇ ಮೇ 1998ರ ನಮ್ಮ ರಾಜ್ಯದ ಸೇವೆಯ, “ಬೇಕಾಗಿವೆ—ಹೆಚ್ಚು ಬೈಬಲ್ ಅಭ್ಯಾಸಗಳು” ಎಂಬ ಪುರವಣಿಯು, ಈ ವಾಸ್ತವಿಕ ನಿರ್ದೇಶನವನ್ನು ಕೊಡುತ್ತದೆ: “ನಿಶ್ಚಯವಾಗಿಯೂ ಎಲ್ಲ ಬೈಬಲ್ ವಿದ್ಯಾರ್ಥಿಗಳು ಒಂದೇ ಪ್ರಮಾಣದಲ್ಲಿ ಪ್ರಗತಿ ಮಾಡುವುದಿಲ್ಲ. ಕೆಲವರು ಇತರರಷ್ಟು ಆತ್ಮಿಕ ಪ್ರವೃತ್ತಿಯುಳ್ಳವರಾಗಿರುವುದಿಲ್ಲ, ಇಲ್ಲವೇ ಕಲಿಸಲ್ಪಡುವಂತಹ ವಿಷಯಗಳನ್ನು ಬೇಗನೇ ಗ್ರಹಿಸಿಕೊಳ್ಳುವಷ್ಟು ಚುರುಕಾಗಿರುವುದಿಲ್ಲ. ಇತರರು ತೀರ ಕಾರ್ಯಮಗ್ನ ಜೀವಿತಗಳನ್ನು ನಡಿಸುತ್ತಿದ್ದು, ಪ್ರತಿ ವಾರ ಒಂದು ಇಡೀ ಅಧ್ಯಾಯವನ್ನು ಆವರಿಸಲು ಬೇಕಾದ ಸಮಯವನ್ನು ಮೀಸಲಾಗಿಡಲು ಶಕ್ತರಾಗಿರಲಿಕ್ಕಿಲ್ಲ. ಹೀಗಿರುವುದರಿಂದ, ನಿರ್ದಿಷ್ಟ ಅಧ್ಯಾಯಗಳನ್ನು ಆವರಿಸಲಿಕ್ಕಾಗಿ ಒಂದು ಅಭ್ಯಾಸ ಅವಧಿಗಿಂತ ಹೆಚ್ಚು ಅವಧಿಗಳಲ್ಲಿ ಅಭ್ಯಾಸಮಾಡುವುದು ಮತ್ತು ಪುಸ್ತಕವನ್ನು ಪೂರ್ಣಗೊಳಿಸಲು ಹೆಚ್ಚು ತಿಂಗಳುಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿರಬಹುದು.”
11 ಶಿಷ್ಯರನ್ನಾಗಿ ಮಾಡುವವರು ಸಮತೂಕದ ಒಂದು ನೋಟವನ್ನಿಡುತ್ತಾರೆ: ವಿದ್ಯಾರ್ಥಿಯ ಸಂದರ್ಭಗಳು ಮತ್ತು ಸ್ವಾಭಾವಿಕ ಕೌಶಲಕ್ಕನುಸಾರ ಅಭ್ಯಾಸದ ಗತಿಯನ್ನು ಗೊತ್ತುಮಾಡುವುದು ಆವಶ್ಯಕ. ಅಪೇಕ್ಷಿಸು ಬ್ರೋಷರಿನಲ್ಲಿ ಅಭ್ಯಾಸಗಳನ್ನು ಆರಂಭಿಸುವಂತೆ ನಾವು ಉತ್ತೇಜಿಸಲ್ಪಡುವುದರಿಂದ, ಜ್ಞಾನ ಪುಸ್ತಕವನ್ನು ಆರಂಭಿಸುವ ಮುಂಚೆ ಅದನ್ನು ಆವರಿಸಲಿಕ್ಕಾಗಿ ಎರಡು ಅಥವಾ ಮೂರು ತಿಂಗಳುಗಳು ತಗಲಬಹುದು. ಜೂನ್ 1996ರ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿ ಕೊಡಲ್ಪಟ್ಟಿರುವ ಎಲ್ಲ ಸಲಹೆಗಳನ್ನು ನಾವು ಅನ್ವಯಿಸುವಲ್ಲಿ, ಜ್ಞಾನ ಪುಸ್ತಕವನ್ನು ಮುಗಿಸಲು ಇನ್ನೂ ಆರರಿಂದ ಒಂಬತ್ತು ತಿಂಗಳುಗಳು ತಗಲಬಹುದು. ಇತ್ತೀಚೆಗೆ ಜ್ಞಾನ ಪುಸ್ತಕದಲ್ಲಿ ಅಭ್ಯಾಸವನ್ನು ಆರಂಭಿಸಿದವರು, ವಿದ್ಯಾರ್ಥಿಯು ಮೂಲಭೂತ ಬೈಬಲ್ ಸತ್ಯಗಳನ್ನು ಹೆಚ್ಚು ಬೇಗನೆ ಕಲಿತುಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ, ಅಪೇಕ್ಷಿಸು ಬ್ರೋಷರನ್ನು ಅಭ್ಯಾಸಿಸಲು ಆರಂಭಿಸಿದರು. ತದನಂತರ ಜ್ಞಾನ ಪುಸ್ತಕದ ಅಭ್ಯಾಸವನ್ನು ಪುನಃ ಆರಂಭಿಸಲಾಯಿತು. ಜ್ಞಾನ ಪುಸ್ತಕದಲ್ಲೇ ಒಂದು ಅಭ್ಯಾಸವು ಆರಂಭಿಸಲ್ಪಟ್ಟು, ಅದು ಚೆನ್ನಾಗಿ ಪ್ರಗತಿಯಾಗುತ್ತಿರುವಲ್ಲಿ, ಆ ಪುಸ್ತಕವನ್ನು ಪೂರ್ಣಗೊಳಿಸಿದ ಬಳಿಕ ಅಪೇಕ್ಷಿಸು ಬ್ರೋಷರನ್ನು ಅಭ್ಯಾಸಮಾಡುವುದು ಉಪಯುಕ್ತವಾಗಿರಬಹುದು. ಈ ರೀತಿಯಲ್ಲಿ ದೇವರ ವಾಕ್ಯದ ಮೂಲಭೂತ ಸತ್ಯಗಳನ್ನು ಶೀಘ್ರವಾಗಿ ಪುನರ್ವಿಮರ್ಶಿಸಬಹುದು. ಏನೇ ಆಗಲಿ, ಕೇವಲ ಪುಸ್ತಕವನ್ನು ಬೇಗನೆ ಮುಗಿಸಲಿಕ್ಕೋಸ್ಕರ, ವಿದ್ಯಾರ್ಥಿಯು ನಿಷ್ಕೃಷ್ಟ ಜ್ಞಾನದಿಂದ ವಂಚಿತನಾಗುವಂತಹ ರೀತಿಯಲ್ಲಿ ನಾವು ಅಭ್ಯಾಸಿಸಲು ಬಯಸುವುದಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗೆ, ದೇವರ ವಾಕ್ಯದಲ್ಲಿನ ಅವನ ಹೊಸ ನಂಬಿಕೆಗೆ ಒಂದು ದೃಢವಾದ ಆಧಾರದ ಅಗತ್ಯವಿದೆ.
12 ಕಾಲಪ್ರವಾಹದಲ್ಲಿ ನಾವು ಎಲ್ಲಿದ್ದೇವೆಂಬುದನ್ನು ತಿಳಿದವರಾಗಿ, ಸತ್ಯವನ್ನು ಕಲಿಯುವಂತೆ ಇತರರಿಗೆ ಸಹಾಯಮಾಡುವುದು ಹಿಂದೆಂದಿಗಿಂತಲೂ ಹೆಚ್ಚು ತುರ್ತಿನದ್ದಾಗಿದೆ. ಹೊಸ ಬೈಬಲ್ ಅಭ್ಯಾಸಗಳನ್ನು ಆರಂಭಿಸಲು ಸತತವಾಗಿ ಪ್ರಾರ್ಥನೆ ಮಾಡುವುದಲ್ಲದೆ, ನಮ್ಮೊಂದಿಗೆ ಈಗಾಗಲೇ ಅಭ್ಯಾಸಮಾಡುತ್ತಿರುವವರಿಗಾಗಿ ನಾವು ಪ್ರಾರ್ಥಿಸೋಣ. ಆಗ “ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ,” ಹೆಚ್ಚೆಚ್ಚು ಶಿಷ್ಯರಿಗೆ ದೀಕ್ಷಾಸ್ನಾನಮಾಡಿಸುತ್ತಾ ಇರುವ ಆನಂದವು ನಮ್ಮದಾಗಿರುವುದು.—ಮತ್ತಾ. 28:20.