ಕೂಟಗಳಿಂದ ನೀವು ಹೆಚ್ಚು ಆನಂದವನ್ನು ಪಡೆದುಕೊಳ್ಳುವ ವಿಧ
1 ಕೂಟಗಳು ನಮ್ಮ ಆತ್ಮಿಕ ಕ್ಷೇಮಾಭಿವೃದ್ಧಿಗೆ ಬಹಳ ಅಗತ್ಯವಾಗಿರುತ್ತವೆ. ಅವುಗಳಿಂದ ನಾವು ಪಡೆದುಕೊಳ್ಳುವ ಆನಂದವು, ಕೂಟಗಳ ಮುಂಚೆ, ಕೂಟಗಳು ನಡೆಯುತ್ತಿರುವಾಗ ಮತ್ತು ಕೂಟಗಳ ನಂತರ ನಾವೇನನ್ನು ಮಾಡುತ್ತೇವೋ ಅದರೊಂದಿಗೆ ನೇರವಾಗಿ ಸಂಬಂಧಿಸಿದೆ. ಕೂಟಗಳಿಗೆ ಹಾಜರಾಗುವುದರಿಂದ ಸಿಗುವ ಆನಂದವನ್ನು ನಾವು ಹೇಗೆ ಉನ್ನತ ಮಟ್ಟದಲ್ಲಿಡಬಹುದು ಮತ್ತು ಅದನ್ನು ಮಾಡುವಂತೆ ಇತರರಿಗೂ ಹೇಗೆ ಸಹಾಯವನ್ನು ಮಾಡಬಹುದು?
2 ಕೂಟಗಳ ಮುಂಚೆ: ನಮಗೆ ಕೂಟಗಳಿಂದ ಸಿಗುವ ಆನಂದದ ಮೇಲೆ ನಾವು ಮಾಡುವ ತಯಾರಿಯು ನೇರವಾದ ಪ್ರಭಾವವನ್ನು ಬೀರುತ್ತದೆ. ನಾವು ಚೆನ್ನಾಗಿ ತಯಾರಿಸಿರುವಾಗ ಗಮನ ಕೊಡಲು ಮತ್ತು ಭಾಗವಹಿಸಲು ಹೆಚ್ಚಿನ ಒಲವನ್ನು ತೋರಿಸುತ್ತೇವೆ. ಇನ್ನೂ ಹೆಚ್ಚಾಗಿ, ನಾವು ಯಾವುದೇ ಕೂಟದ ನೇಮಕವನ್ನು ಪಡೆದುಕೊಳ್ಳುವಾಗ, ಕೊಡಲ್ಪಟ್ಟಿರುವ ಸೂಚನೆಗಳ ಮೇರೆಗೆ ವಿಷಯವನ್ನು ನಿಷ್ಕೃಷ್ಟವಾಗಿ ಸಾದರಪಡಿಸುವ ಮತ್ತು ಸಭಿಕರ ಗಮನವನ್ನು ಸೆರೆಹಿಡಿಯುವ ಗುರಿಯೊಂದಿಗೆ ಅದನ್ನು ನಾವು ಚೆನ್ನಾಗಿ ತಯಾರಿಸಬೇಕು. ಅಷ್ಟೇ ಅಲ್ಲ, ನಾವು ಚೆನ್ನಾಗಿ ಪೂರ್ವಾಭಿನಯಿಸಬೇಕು. ಎಲ್ಲರಿಗೂ ಪ್ರಯೋಜನವನ್ನು ತರುವಂತಹ, ಸಜೀವವುಳ್ಳದ್ದು ಮತ್ತು ಭಕ್ತಿವೃದ್ಧಿಯನ್ನು ಉಂಟುಮಾಡುವಂತಹದ್ದು ಆಗಿರುವ ಕೂಟಗಳಿಗೆ ನಾವು ನೆರವನ್ನು ನೀಡುವಾಗ, ನಮ್ಮ ವೈಯಕ್ತಿಕ ಪ್ರಗತಿಯು ವ್ಯಕ್ತವಾಗುತ್ತದೆ ಮತ್ತು ನಮಗೆ ಹೆಚ್ಚಿನ ಆನಂದವಿರುತ್ತದೆ.—1 ತಿಮೊ. 4:15, 16.
3 ಕೂಟಗಳು ನಡೆಯುತ್ತಿರುವಾಗ: ಕೂಟಗಳಲ್ಲಿ ಉತ್ತರನೀಡುವುದು, ನಾವು ಅವುಗಳಲ್ಲಿ ಹೆಚ್ಚು ಆನಂದಿಸುವಂತೆ ಸಹಾಯಮಾಡಸಾಧ್ಯವಿದೆ. ಸಭೆಯಲ್ಲಿರುವ ಪ್ರತಿಯೊಬ್ಬರು ಸಭಿಕರ ಭಾಗವಹಿಸುವಿಕೆಯನ್ನು ಕೇಳಿಕೊಳ್ಳುವಂತಹ ಭಾಗಗಳನ್ನು ವೈಯಕ್ತಿಕ ನೇಮಕಗಳಾಗಿ ವೀಕ್ಷಿಸಬೇಕು. ಚುಟುಕಾದ ಮತ್ತು ನೇರವಾದ ಉತ್ತರಗಳು ಸಾಮಾನ್ಯವಾಗಿ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಭಕ್ತಿವೃದ್ಧಿಯನ್ನು ಉಂಟುಮಾಡುವ ಅನುಭವಗಳನ್ನು ಸಂಕ್ಷಿಪ್ತವಾಗಿ ತಿಳಿಸುವುದು ಬಹಳ ಉತ್ತೇಜನದಾಯಕವೂ ಚೈತನ್ಯದಾಯಕವೂ ಆಗಿರುತ್ತದೆ ಮತ್ತು ಕಾರ್ಯಕ್ರಮದಲ್ಲಿ ಸೂಕ್ತವಾಗಿರುವಾಗಲೆಲ್ಲ ಅವುಗಳನ್ನು ಮಧ್ಯೆ ಸೇರಿಸಲು ನಾವು ಜಾಗೃತರಾಗಿರಬೇಕು. (ಜ್ಞಾನೋ. 15:23; ಅ.ಕೃ. 15:3) ನಾವು ಕೂಟದಲ್ಲಿ ಒಂದು ಭಾಗವನ್ನು ಸಾದರಪಡಿಸುತ್ತಿರುವಾಗ, ಉತ್ಸುಕತೆಯಿಂದ ಮತ್ತು ನಿಶ್ಚಿತಾಭಿಪ್ರಾಯದಿಂದ ಮಾತಾಡುತ್ತಾ ಅದನ್ನು ಆಸಕ್ತಿಕರವೂ, ವಾಸ್ತವಿಕವೂ, ಮತ್ತು ಪ್ರಾಯೋಗಿಕವೂ ಆಗಿರುವಂತೆ ಮಾಡಬೇಕು.
4 ಕೂಟಗಳ ನಂತರ: ಇತರರೊಂದಿಗೆ ಒಂದು ದಯಾಪರ ಮಾತನ್ನಾಡುವುದು, ಸ್ನೇಹಪೂರ್ವಕವಾಗಿ ಅಭಿವಂದಿಸುವುದು ಮತ್ತು ಕೂಟಗಳಲ್ಲಿ ಪರಿಗಣಿಸಲಾದ ಕೆಲವು ಮುಖ್ಯ ವಿಷಯಗಳನ್ನು ಹಂಚಿಕೊಳ್ಳುವುದು ನಮಗೆಲ್ಲರಿಗೂ ಪ್ರಯೋಜನದಾಯಕವಾಗಿರುತ್ತದೆ. ಎಳೆಯರು, ವಯಸ್ಸಾದವರು ಮತ್ತು ಹೊಸಬರು ಭಾಗವಹಿಸುವುದನ್ನು ನೋಡಿ ನಮ್ಮ ಆನಂದವನ್ನು ವ್ಯಕ್ತಪಡಿಸುವುದು, ಸಹೋದರತ್ವದ ಪ್ರೀತಿಯನ್ನು ಗಾಢಗೊಳಿಸುತ್ತದೆ. ಕೂಟಗಳನ್ನು ತಪ್ಪಿಸಿಕೊಳ್ಳಬಹುದಾದ ಕೆಲವರ ಕುರಿತು ನಕಾರಾತ್ಮಕವಾಗಿ ಮಾತಾಡುವ ಬದಲು, ಹಾಜರಾಗುವುದರಿಂದ ನಮಗೆ ಸಿಗುವ ಆನಂದವನ್ನು ನಾವು ಅವರೊಂದಿಗೆ ಹಂಚಿಕೊಳ್ಳಬೇಕು ಮತ್ತು ಹೀಗೆ ಮಾಡುವ ಮೂಲಕ ಅವರನ್ನು ಹಾಜರಾಗಲು ಉತ್ತೇಜಿಸಬೇಕು.—ಇಬ್ರಿ. 10:24, 25.
5 ಪರಸ್ಪರ ಉತ್ತೇಜನವನ್ನು ವಿನಿಮಯಮಾಡಿಕೊಳ್ಳುವುದಕ್ಕೆ ಮಾಡಲ್ಪಟ್ಟಿರುವ ಈ ಅತ್ಯಾವಶ್ಯಕ ಏರ್ಪಾಡಿನಿಂದ ನಮ್ಮನ್ನೇ ವಂಚಿಸಿಕೊಳ್ಳದಿರೋಣ. (ರೋಮಾ. 1:11, 12) ಶುದ್ಧಾಂತಃಕರಣದಿಂದ ಹುರುಪಿನ ಪ್ರಯತ್ನವನ್ನು ಮಾಡುವ ಮೂಲಕ, ಕ್ರೈಸ್ತ ಕೂಟಗಳಿಗೆ ಹಾಜರಾಗುವುದರಿಂದ ಸಿಗುವ ಆನಂದವನ್ನು ನಾವೆಲ್ಲರೂ ಕಾಪಾಡಿಕೊಳ್ಳಬಹುದು.