ಯೆಹೋವನ ಪ್ರೀತಿಗೆ ಕೃತಜ್ಞತೆಯನ್ನು ತೋರಿಸುವುದರಿಂದ ಬರುವ ಆಶೀರ್ವಾದಗಳು—ಭಾಗ 1
1 “[ಯೆಹೋವನು] ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಪ್ರೀತಿಸುತ್ತೇವೆ,” ಎಂದು ಅಪೊಸ್ತಲನಾದ ಯೋಹಾನನು ಬರೆದನು. (1 ಯೋಹಾ. 4:19) ಯೆಹೋವನು ನಮಗಾಗಿ ಮಾಡಿರುವ ಎಲ್ಲ ಒದಗಿಸುವಿಕೆಗಳ ಕುರಿತು ನಾವು ಯೋಚಿಸುವಾಗ, ಅದಕ್ಕೆ ಬದಲಿಯಾಗಿ ನಮ್ಮ ಹೃತ್ಪೂರ್ವಕವಾದ ಕೃತಜ್ಞತೆಯನ್ನು ತೋರಿಸುವಂತೆ ನಾವು ಪ್ರೇರಿಸಲ್ಪಡುತ್ತೇವೆ. ಇದನ್ನು ಮಾಡುವುದರಲ್ಲಿ ಯೇಸು ಮಾದರಿಯನ್ನು ಇಟ್ಟನು, ಹೇಗಂದರೆ ದೇವರ ನಾಮ ಮತ್ತು ರಾಜ್ಯದ ಕುರಿತು ವಿಧೇಯತೆಯಿಂದ ಸಾಕ್ಷಿಕೊಟ್ಟನು. (ಯೋಹಾ. 14:31) ಯೆಹೋವನ ಪ್ರೀತಿ ಮತ್ತು ಅದರಿಂದುಂಟಾಗುವ ಆಶೀರ್ವಾದಗಳಿಗೆ ನಾವು ಕೃತಜ್ಞತೆಯನ್ನು ತೋರಿಸಬಹುದಾದ ಕೆಲವು ವಿಧಗಳನ್ನು ಪರಿಗಣಿಸುವುದು ಒಳ್ಳೇದಾಗಿರುವುದು.
2 ಮನೆಯಿಂದ ಮನೆಗೆ ಹೋಗುವುದು: ರಾಜ್ಯ ಸಾರುವಿಕೆಯ ಕೆಲಸವನ್ನು ಹೇಗೆ ನಡಿಸುವುದು ಎಂಬುದನ್ನು ಯೇಸು ತನ್ನ ಶಿಷ್ಯರಿಗೆ ಕಲಿಸಿಕೊಟ್ಟನು. ಅವನ ಮಾರ್ಗದರ್ಶನೆಗಳು, ಅವರು ಸುವಾರ್ತೆಯನ್ನು ಹಬ್ಬಿಸುತ್ತಾ ಮನೆಯಿಂದ ಮನೆಗೆ ಹೋದರು ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ. (ಲೂಕ 9:1-6; 10:1-7) ನಾವು ನಿರಾಸಕ್ತಿ ಹಾಗೂ ವಿರೋಧವನ್ನು ಎದುರಿಸುವಾಗ, ದೇವರ ಮತ್ತು ನೆರೆಯವನ ಮೇಲಣ ಪ್ರೀತಿಯು ನಾವು ಮನೆಯಿಂದ ಮನೆಗೆ ಹೋಗುತ್ತಾ ಇರುವಂತೆ ನಮ್ಮನ್ನು ಉತ್ತೇಜಿಸುತ್ತದೆ. ಆದರೂ, ಹೀಗೆ ಮಾಡುವಾಗ ನಾವು ವೈಯಕ್ತಿಕವಾಗಿ ಪ್ರಯೋಜನವನ್ನು ಪಡೆಯುತ್ತೇವೆ, ಏಕೆಂದರೆ ನಮ್ಮ ನಂಬಿಕೆಯು ದೃಢಪಡಿಸಲ್ಪಡುತ್ತದೆ, ದೃಢಸಂಕಲ್ಪವು ಬಲಪಡಿಸಲ್ಪಡುತ್ತದೆ, ಮತ್ತು ನಮ್ಮ ನಿರೀಕ್ಷೆಯು ಉಜ್ವಲವಾಗುತ್ತದೆ.
3 ದೇವದೂತರ ನಿರ್ದೇಶನದ ಕೆಳಗೆ ಕೆಲಸ ಮಾಡುವವರಾಗಿ, ಸತ್ಯಕ್ಕಾಗಿ ಹಸಿದಿರುವ ಮತ್ತು ಬಾಯಾರಿರುವ ಅನೇಕರನ್ನು ನಾವು ಕಂಡುಕೊಂಡಿದ್ದೇವೆ. (ಪ್ರಕ. 14:6) ಸಾಕ್ಷಿಯು ತಮ್ಮ ಮನೆಯ ಬಾಗಿಲ ಹತ್ತಿರ ಬಂದಾಗ, ತಾವು ಸಹಾಯಕ್ಕಾಗಿ ಪ್ರಾರ್ಥಿಸುತ್ತಾ ಇದ್ದೆವೆಂದು ಮನೆಯವರು ಹೇಳಿದ್ದುಂಟು. ಒಂದು ಕ್ಯಾರಿಬಿಯನ್ ದ್ವೀಪದಲ್ಲಿ ಇಬ್ಬರು ಸಾಕ್ಷಿ ಸ್ತ್ರೀಯರು ಒಂದು ಮಗುವಿನೊಂದಿಗೆ ಮನೆಯಿಂದ ಮನೆಗೆ ಹೋಗುತ್ತಿದ್ದರು. ಆ ದಿನದ ಕ್ಷೇತ್ರಸೇವೆಯನ್ನು ಅಷ್ಟಕ್ಕೇ ನಿಲ್ಲಿಸುವ ಎಂದು ಅವರು ತೀರ್ಮಾನಿಸಿದಾಗ, ಆ ಮಗುವು ತಾನಾಗಿಯೇ ಮುಂದಿನ ಮನೆಗೆ ಹೋಗಿ ಬಾಗಿಲನ್ನು ತಟ್ಟಿತು. ಒಬ್ಬ ಯುವ ಸ್ತ್ರೀಯು ಬಾಗಿಲನ್ನು ತೆರೆದಳು. ವಯಸ್ಕರು ಅದನ್ನು ನೋಡಿದಾಗ, ಮುಂದೆ ಹೋಗಿ ಅವಳೊಂದಿಗೆ ಮಾತಾಡಿದರು. ಅವಳು ಅವರನ್ನು ಒಳಬರುವಂತೆ ಆಮಂತ್ರಿಸಿದಳು ಮತ್ತು ಸಾಕ್ಷಿಗಳು ಬಂದು ತನಗೆ ಬೈಬಲಿನ ಕುರಿತು ಕಲಿಸಿಕೊಡಬೇಕೆಂದು ಆಗತಾನೇ ತಾನು ಪ್ರಾರ್ಥಿಸುತ್ತಿದ್ದೆ ಎಂದು ಅವಳು ಹೇಳಿದಳು!
4 ಬೀದಿಗಳಲ್ಲಿ ಸಾಕ್ಷಿಕೊಡುವುದು: ಕೆಲವೊಂದು ಕ್ಷೇತ್ರಗಳಲ್ಲಿ ಜನರನ್ನು ಮನೆಗಳಲ್ಲಿ ಕಂಡುಕೊಳ್ಳುವುದು ತುಂಬ ಕಷ್ಟಕರವಾಗಿರುವುದರಿಂದ, ಬೀದಿ ಸಾಕ್ಷಿಕಾರ್ಯವು ಜನರಿಗೆ ಸಾಕ್ಷಿಯನ್ನು ಕೊಡಲು ಒಂದು ಪರಿಣಾಮಕಾರಿಯಾದ ವಿಧಾನವಾಗಿದೆ. ಅಷ್ಟುಮಾತ್ರವಲ್ಲದೆ, ಅನೇಕರು ಸುಭದ್ರ ಸಮುದಾಯಗಳಲ್ಲಿ ಅಥವಾ ಹೆಚ್ಚು ಭದ್ರತೆಯಿರುವ ಕಟ್ಟಡಗಳಲ್ಲಿ ಜೀವಿಸುವುದರಿಂದ, ನಾವು ಮನೆಯಿಂದ ಮನೆಗೆ ಹೋಗಲು ಸಾಧ್ಯವಾಗುವುದಿಲ್ಲ. ಆದರೂ, ಯೆಹೋವನ ಪ್ರೀತಿಗಾಗಿರುವ ನಮ್ಮ ಗಣ್ಯತೆಯು, ಜನರನ್ನು ರಾಜ್ಯದ ಸಂದೇಶದೊಂದಿಗೆ ಸಂಪರ್ಕಿಸುವುದರಲ್ಲಿ ಸಾಧ್ಯವಿರುವ ಎಲ್ಲ ಮಾಧ್ಯಮಗಳ ಸದುಪಯೋಗಮಾಡುವಂತೆ ಪ್ರೇರಿಸುತ್ತದೆ; ಇದರಲ್ಲಿ ಬೀದಿ ಸಾಕ್ಷಿಕಾರ್ಯವೂ ಒಳಗೂಡಿದೆ.—ಜ್ಞಾನೋ. 1:20, 21.
5 ಪುನರ್ಭೇಟಿಗಳನ್ನು ಮಾಡುವುದು: “ಆತ್ಮಿಕ ಅಗತ್ಯದ ಪ್ರಜ್ಞೆ”ಯುಳ್ಳವರನ್ನು ನಾವು ಹುಡುಕುತ್ತಿರುವ ಕಾರಣ, ಆ ಅಗತ್ಯವನ್ನು ತೃಪ್ತಿಪಡಿಸಲಿಕ್ಕಾಗಿ ನಮ್ಮಿಂದ ಸಾಧ್ಯವಿರುವುದೆಲ್ಲವನ್ನು ಮಾಡಲು ನಾವು ಬಯಸುತ್ತೇವೆ. (ಮತ್ತಾ. 5:3, NW) ಇದು, ನಾವು ಬಿತ್ತಿರುವ ಬೀಜಗಳಿಗೆ ನೀರು ಹಾಕಲು ಹಿಂದಿರುಗುವುದನ್ನು ಅವಶ್ಯಪಡಿಸುತ್ತದೆ. (1 ಕೊರಿಂ. 3:6-8) ಆಸ್ಟ್ರೇಲಿಯದಲ್ಲಿ ಒಬ್ಬ ಸಹೋದರಿಯು ಸ್ತ್ರೀಯೊಬ್ಬಳಿಗೆ ಒಂದು ಟ್ರ್ಯಾಕ್ಟನ್ನು ನೀಡಿದಳು ಮತ್ತು ಆ ಸ್ತ್ರೀಯು ಅಷ್ಟೇನೂ ಆಸಕ್ತಿಯನ್ನು ತೋರಿಸಲಿಲ್ಲ. ಆದರೂ, ಅವಳನ್ನು ಪುನಃ ಮನೆಯಲ್ಲಿ ಭೇಟಿಯಾಗಲು ಪ್ರಯತ್ನಿಸುವುದರಲ್ಲಿ ನಮ್ಮ ಸಹೋದರಿಯು ಪಟ್ಟುಹಿಡಿದಳು. ಕೊನೆಗೂ ಅವಳನ್ನು ಸಂಪರ್ಕಿಸಲು ಸಾಧ್ಯವಾದಾಗ, ಪ್ರಥಮ ಭೇಟಿಯ ನಂತರ ಆ ಸ್ತ್ರೀಯು ದುಬಾರಿಯಾದ ಒಂದು ಬೈಬಲನ್ನು ಖರೀದಿಸಿರುವುದನ್ನು ಸಹೋದರಿಯು ಕಂಡುಕೊಂಡಳು. ಸಹೋದರಿಯು ಅವಳೊಂದಿಗೆ ಒಂದು ಅಧ್ಯಯನವನ್ನು ಆರಂಭಿಸಿದಳು!
6 ಬೈಬಲ್ ಅಧ್ಯಯನಗಳನ್ನು ನಡೆಸುವುದು: ನಮ್ಮ ಶುಶ್ರೂಷೆಯ ಅತಿ ಆನಂದಕರ ಮತ್ತು ಫಲಭರಿತವಾದ ವೈಶಿಷ್ಟ್ಯವು ಇದೇ ಆಗಿದೆ. ಜನರು ಯೆಹೋವನ ಕುರಿತು ಕಲಿತುಕೊಳ್ಳುವಂತೆ ಅವರಿಗೆ ಸಹಾಯಮಾಡುವುದು, ಆತನನ್ನು ಪ್ರಸನ್ನಗೊಳಿಸಲಿಕ್ಕಾಗಿ ತಮ್ಮ ಜೀವಿತಗಳಲ್ಲಿ ಅವರು ಬದಲಾವಣೆಗಳನ್ನು ಮಾಡುವುದನ್ನು ನೋಡುವುದು, ನಂತರ ದೇವರಿಗೆ ಅವರು ಮಾಡಿಕೊಂಡ ಸಮರ್ಪಣೆಯ ಸಂಕೇತವಾಗಿ ಕ್ರಿಸ್ತೀಯ ದೀಕ್ಷಾಸ್ನಾನವನ್ನು ಪಡೆದುಕೊಳ್ಳುವುದನ್ನು ನೋಡುವುದು ಎಂತಹ ಆಶೀರ್ವಾದವಾಗಿದೆ!—1 ಥೆಸ. 2:20; 3 ಯೋಹಾ. 4.
7 ನಮ್ಮ ಮುಂದಿನ ಸಂಚಿಕೆಯಲ್ಲಿ, ದೇವರ ಪ್ರೀತಿಗೆ ನಾವು ತೋರಿಸುವ ಕೃತಜ್ಞತೆಯಿಂದಾಗಿ ನಾವು ಆಶೀರ್ವದಿಸಲ್ಪಟ್ಟಿರುವ ಇನ್ನೂ ಹೆಚ್ಚಿನ ವಿಧಗಳನ್ನು ನಾವು ಪರಿಗಣಿಸುವೆವು.