ಪೂರ್ಣ ಸಮಯದ ಸೇವೆಯಿಂದ ಸಿಗುವ ಆನಂದಗಳು
1 ಒಬ್ಬ ಯುವ ವ್ಯಕ್ತಿಯೋಪಾದಿ ನೀವು ನಿಮ್ಮ ಭವಿಷ್ಯತ್ತಿನ ಕುರಿತು ಆಲೋಚಿಸಿದ್ದೀರಿ ಎಂಬುದರಲ್ಲಿ ಸಂಶಯವೇ ಇಲ್ಲ. ಜ್ಞಾನೋಕ್ತಿ 21:5 (NW) ನಮಗೆ ಹೀಗನ್ನುತ್ತದೆ: “ಶ್ರಮಶೀಲರ ಯೋಜನೆಗಳು ಖಂಡಿತವಾಗಿಯೂ ಪ್ರಯೋಜನದಾಯಕವಾಗಿವೆ.” ಜೀವಿತದಲ್ಲಿನ ನಿಮ್ಮ ಗುರಿಗಳ ಕುರಿತು ಗಂಭೀರವಾಗಿ ಆಲೋಚಿಸುವುದು ನಿಮ್ಮ ಪ್ರಯೋಜನಕ್ಕಾಗಿರುವುದು. ಭವಿಷ್ಯತ್ತಿಗಾಗಿ ನೀವು ಯೋಜನೆಗಳನ್ನು ಮಾಡುವಾಗ, ಪೂರ್ಣ ಸಮಯದ ಸೇವೆಯನ್ನು ಆರಂಭಿಸುವುದರ ಕುರಿತು ಆಲೋಚಿಸಿರಿ. ಏಕೆ?
2 ತಮ್ಮ ಯುವ ಪ್ರಾಯಗಳಲ್ಲಿ ಪಯನೀಯರ್ ಸೇವೆಯನ್ನು ಮಾಡಿದಂಥ ಕೆಲವು ವಯಸ್ಕರನ್ನು, ನಿಮ್ಮ ಅಭಿಪ್ರಾಯಗಳೇನು ಎಂದು ಕೇಳಿರಿ. ಅವರೆಲ್ಲರೂ ಅಚಲವಾಗಿ ಒಂದೇ ವಿಷಯವನ್ನು ಹೇಳುವರು: “ಅವು ನನ್ನ ಜೀವಿತದ ಅತ್ಯುತ್ತಮ ವರ್ಷಗಳಾಗಿದ್ದವು!” ತನ್ನ ಯೌವನಾವಸ್ಥೆಯಿಂದ ಪೂರ್ಣ ಸಮಯದ ಸೇವೆಯಲ್ಲಿ ಆನಂದವನ್ನು ಅನುಭವಿಸಿರುವ ಒಬ್ಬ ಸಹೋದರನು, ತನ್ನ ಮುದಿ ಪ್ರಾಯದಲ್ಲಿ ಹೇಳಿದ್ದು: “ಯೌವನದ ಕಾಲಾವಧಿಯ ಕಡೆಗೆ ಹಿನ್ನೋಟ ಬೀರುವುದು ಮತ್ತು ‘ಯೌವನದಲ್ಲಿಯೇ ನಿನ್ನ ಸೃಷ್ಟಿಕರ್ತನನ್ನು ಸ್ಮರಿಸು’ ಎಂಬ ವಿವೇಕಯುತ ಸಲಹೆಗೆ ಒಬ್ಬನು ಕಿವಿಗೊಟ್ಟಿದ್ದಾನೆ ಎಂದು ಹೇಳಲು ಶಕ್ತರಾಗಿರುವುದು ಆಳವಾದ ಸಂತೃಪ್ತಿಯ ಒಂದು ಮೂಲವಾಗಿದೆ.” (ಪ್ರಸಂ. 12:1) ನಿಮ್ಮ ಯೌವನಾವಸ್ಥೆಯಲ್ಲಿ ಈ ರೀತಿಯ ಆನಂದವನ್ನು ಅನುಭವಿಸಲಿಕ್ಕಾಗಿರುವ ಮಾರ್ಗವನ್ನು ಕಂಡುಕೊಳ್ಳಲಿಕ್ಕಾಗಿ, ನಿಮ್ಮಿಂದ ಹಾಗೂ ನಿಮ್ಮ ಹೆತ್ತವರಿಂದ ಇದು ಒಳ್ಳೆಯ ಯೋಜನೆಯನ್ನು ಅಗತ್ಯಪಡಿಸುತ್ತದೆ.
3 ಹೆತ್ತವರೇ, ಪೂರ್ಣ ಸಮಯದ ಸೇವೆಯನ್ನು ಉತ್ತೇಜಿಸಿರಿ: ಪರಾಮರಿಸುವಂಥ ಒಬ್ಬ ತಂದೆಯೋಪಾದಿ, ಯೆಹೋವನು ನೀವು ಯಾವ ಮಾರ್ಗದಲ್ಲಿ ಮುಂದುವರಿಯಬೇಕೆಂಬುದನ್ನು ನಿರ್ದಿಷ್ಟವಾಗಿ ತೋರಿಸುತ್ತಾನೆ. (ಯೆಶಾ. 30:21) ಅಂತಹ ಪ್ರೀತಿಯ ಮಾರ್ಗದರ್ಶನವನ್ನು ಒದಗಿಸುವುದರಲ್ಲಿ, ಕ್ರೈಸ್ತ ಹೆತ್ತವರಾದ ನಿಮಗೆ ಆತನು ಒಂದು ಅತ್ಯುತ್ತಮ ಮಾದರಿಯನ್ನು ಇಡುತ್ತಾನೆ. ತಮಗೆ ಯಾವುದು ಅತ್ಯುತ್ತಮ ಮಾರ್ಗವಾಗಿದೆ ಎಂಬುದನ್ನು ನಿಮ್ಮ ಮಕ್ಕಳೇ ತಮಗಾಗಿ ಆಯ್ಕೆಮಾಡಿಕೊಳ್ಳುವಂತೆ ಬಿಡುವ ಬದಲಿಗೆ, ಅವರು ಯೆಹೋವನ ಆಶೀರ್ವಾದವನ್ನು ಪಡೆದುಕೊಳ್ಳಸಾಧ್ಯವಾಗುವಂತೆ ಅವರು ಯಾವ ಮಾರ್ಗದಲ್ಲಿ ಹೋಗಬೇಕಾಗಿದೆಯೋ ಆ ಮಾರ್ಗದಲ್ಲಿ ಅವರಿಗೆ ವಿವೇಕಯುತವಾದ ತರಬೇತಿಯನ್ನು ನೀಡಿರಿ. ತದನಂತರ, ಅವರು ದೊಡ್ಡವರಾಗುತ್ತಾ ಹೋದಂತೆ, ನಿಮ್ಮ ತರಬೇತಿಯು ಅವರಿಗೆ “ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು” ತಿಳಿದುಕೊಳ್ಳಲು ಸಹಾಯಮಾಡುವುದು. (ಇಬ್ರಿ. 5:14) ತಮ್ಮ ಸ್ವಂತ ವಿವೇಚನಾಶಕ್ತಿಯ ಮೇಲೆ ತಾವು ಭರವಸೆಯಿಡಸಾಧ್ಯವಿಲ್ಲ ಎಂಬುದು ವಯಸ್ಕರಿಗೆ ಅನುಭವದಿಂದ ತಿಳಿದಿದೆ; ತಮ್ಮ ಮಾರ್ಗಗಳನ್ನು ಸರಾಗಮಾಡಲಿಕ್ಕಾಗಿ ಅವರು ಯೆಹೋವನ ಮೇಲೆ ಆತುಕೊಳ್ಳಬೇಕು. (ಜ್ಞಾನೋ. 3:5, 6) ಜೀವನದಲ್ಲಿ ಕಡಿಮೆ ಅನುಭವಸ್ಥರಾಗಿರುವ ಯುವ ಜನರು ಇದನ್ನು ಮಾಡುವುದು ಇನ್ನೂ ಅತ್ಯಾವಶ್ಯಕ.
4 ಹೆತ್ತವರೇ, ನಿಮ್ಮ ಮಕ್ಕಳು ಹದಿಪ್ರಾಯವನ್ನು ಸಮೀಪಿಸುವಾಗ ಅಥವಾ ಅದಕ್ಕೂ ಮುಂಚೆ, ಅವರ ಜೀವನದ ಗುರಿಗಳ ಕುರಿತು ವಾಸ್ತವಿಕವಾದ ರೀತಿಯಲ್ಲಿ ಅವರೊಂದಿಗೆ ಮಾತಾಡಿರಿ. ಶಾಲಾ ಸಲಹೆಗಾರರು, ಶಿಕ್ಷಕರು ಮತ್ತು ಸಹಪಾಠಿಗಳು, ಲೌಕಿಕವಾದ ಪ್ರಾಪಂಚಿಕ ಬೆನ್ನಟ್ಟುವಿಕೆಗಳನ್ನು ಆಯ್ಕೆಮಾಡುವಂತೆ ಅವರನ್ನು ಪ್ರಭಾವಿಸಲು ಪ್ರಯತ್ನಿಸುವರು. ಪ್ರಾಯೋಗಿಕ ತರಬೇತಿಯನ್ನು ಒದಗಿಸುವ ಮತ್ತು ರಾಜ್ಯಾಭಿರುಚಿಗಳನ್ನು ತ್ಯಾಗಮಾಡದೆ ತಮ್ಮ ಭೌತಿಕ ಆವಶ್ಯಕತೆಗಳನ್ನು ಪೂರೈಸಲು ಅವರನ್ನು ಸಿದ್ಧಪಡಿಸುವ ಶಾಲಾ ಕೋರ್ಸುಗಳನ್ನು ಆಯ್ಕೆಮಾಡುವಂತೆ ನಿಮ್ಮ ಮಕ್ಕಳಿಗೆ ಸಹಾಯಮಾಡಿರಿ. (1 ತಿಮೊ. 6:6-11) ಅನೇಕ ವಿದ್ಯಮಾನಗಳಲ್ಲಿ, ಒಬ್ಬನು ರೆಗ್ಯುಲರ್ ಪಯನೀಯರ್ ಸೇವೆಯನ್ನು ಆರಂಭಿಸುವಾಗ ತನ್ನ ಆವಶ್ಯಕತೆಗಳನ್ನು ಸಾಕಷ್ಟು ಮಟ್ಟಿಗೆ ಪೂರೈಸಿಕೊಳ್ಳಲು, ಪ್ರೌಢ ಶಾಲಾ ಶಿಕ್ಷಣದೊಂದಿಗೆ ಪ್ರಾಯೋಗಿಕ ತರಬೇತಿಯನ್ನು ಪಡೆದುಕೊಳ್ಳುವುದು ಅಥವಾ ಒಂದು ಕಸಬನ್ನು ಕಲಿಯುವುದಷ್ಟೇ ಬೇಕಾಗಬಹುದು.
5 ಯುವ ಜನರು ಅವಿವಾಹಿತ ಸ್ಥಿತಿಯ ವರದಾನವನ್ನು ಬೆನ್ನಟ್ಟುವಂತೆ ಉತ್ತೇಜಿಸಿರಿ. ಸಮಯಾನಂತರ ಅವರು ವಿವಾಹವಾಗುವ ನಿರ್ಧಾರವನ್ನು ಮಾಡುವಲ್ಲಿ, ಆಗ ಅವರು ವಿವಾಹದಿಂದ ಬರುವ ಹೆಚ್ಚಿನ ಜವಾಬ್ದಾರಿಗಳನ್ನು ನಿರ್ವಹಿಸಲು ಹೆಚ್ಚು ಉತ್ತಮ ಸ್ಥಿತಿಯಲ್ಲಿರುವರು. ಪಯನೀಯರ್ ಸೇವೆ, ಎಲ್ಲಿ ಹೆಚ್ಚಿನ ಆವಶ್ಯಕತೆಯಿದೆಯೋ ಅಲ್ಲಿ ಸೇವೆಸಲ್ಲಿಸುವುದು ಮತ್ತು ಬೆತೆಲ್ ಸೇವೆಯ ಕುರಿತು ಸಕಾರಾತ್ಮಕವಾಗಿ ಮಾತಾಡುವ ಮೂಲಕ, ಯೆಹೋವನ ಮನಸ್ಸಿಗೆ ಆನಂದ ನೀಡುವ, ಇತರರಿಗೆ ಪ್ರಯೋಜನದಾಯಕವಾಗಿರುವ ಹಾಗೂ ಸ್ವತಃ ತಮಗೆ ಆನಂದವನ್ನು ತರುವಂಥ ರೀತಿಯಲ್ಲಿ ತಮ್ಮ ಜೀವನಗಳನ್ನು ಉಪಯೋಗಿಸುವ ಬಯಕೆಯನ್ನು ಚಿಕ್ಕ ಪ್ರಾಯದಲ್ಲೇ ಎಳೆಯರ ಮನಸ್ಸಿನಲ್ಲಿ ತುಂಬಿಸಿರಿ.
6 ಯುವ ಜನರೇ, ಪೂರ್ಣ ಸಮಯದ ಸೇವೆಗೆ ಪ್ರಥಮ ಸ್ಥಾನ ನೀಡಿರಿ: ಯುವ ಜನರೇ, ಪಯನೀಯರ್ ಸೇವೆಯು ಹೇಗಿರಬಹುದೊ ಏನೋ ಎಂದು ನೀವು ಸೋಜಿಗಪಡುವ ಅಗತ್ಯವಿಲ್ಲ. ಶಾಲಾ ವರ್ಷದಾದ್ಯಂತ ಮತ್ತು ರಜೆಯ ಸಮಯಾವಧಿಗಳಲ್ಲಿ ಸಾಧ್ಯವಿರುವಾಗೆಲ್ಲಾ ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡುವ ಮೂಲಕ ಆಂಶಕಾಲಿಕವಾಗಿ ಇದನ್ನು ಮಾಡಲು ನೀವು ಪ್ರಯತ್ನಿಸಬಹುದು. ಆಗ, ಪಯನೀಯರ್ ಸೇವೆಯು ನಿಜವಾಗಿಯೂ ಎಷ್ಟು ಸಂತೃಪ್ತಿದಾಯಕವಾಗಿದೆ ಎಂಬುದು ನಿಮಗೇ ಮನವರಿಕೆಯಾಗುವುದು! ಈಗ ಮತ್ತು ಶಾಲಾ ರಜೆಯು ಕೊನೆಗೊಳ್ಳುವುದಕ್ಕೆ ಮುಂಚೆ ಇರುವ ಕಾಲಾವಧಿಯಲ್ಲಿ ನೀವು ಆಕ್ಸಿಲಿಯರಿ ಪಯನೀಯರ್ ಸೇವೆಯನ್ನು ಮಾಡಲು ಮುಂದಾಗಿಯೇ ಯೋಜಿಸಬಲ್ಲಿರೋ?
7 ದೇವರ ಸಂಸ್ಥೆಯಲ್ಲಿ ನೀವೊಬ್ಬ ಯುವ ಸಹೋದರರಾಗಿರುವಲ್ಲಿ, ಒಬ್ಬ ಶುಶ್ರೂಷಾ ಸೇವಕರಾಗಿ ಅರ್ಹರಾಗಲು ಎಟುಕಿಸಿಕೊಳ್ಳುವುದರ ಕುರಿತು ಗಂಭೀರವಾಗಿ ಆಲೋಚಿಸಿರಿ. (1 ತಿಮೊ. 3:8-10, 12) ಇದಲ್ಲದೆ, ಸೇವಾ ಸುಯೋಗಕ್ಕೆ ಅರ್ಹರಾಗುವಂಥ ಪ್ರಾಯವನ್ನು ನೀವು ತಲಪಿದ ಬಳಿಕ, ನೀವು ಬೆತೆಲ್ ಸೇವೆಗೆ ಅರ್ಜಿಯನ್ನು ಹಾಕಲು ಬಯಸುವಿರೋ ಅಥವಾ ಶುಶ್ರೂಷಾ ತರಬೇತಿ ಶಾಲೆಗೆ ಹಾಜರಾಗಲು ಬಯಸುವಿರೋ ಎಂಬುದನ್ನು ನಿರ್ಧರಿಸಿರಿ. ಪಯನೀಯರ್ ಶುಶ್ರೂಷೆಯಲ್ಲಿ ನಿಮಗಿರುವ ಅನುಭವವು, ಒಂದು ಕಾರ್ಯತಖ್ತೆಗನುಸಾರ ಹೇಗೆ ಜೀವಿಸುವುದು, ನಿಮ್ಮ ವೈಯಕ್ತಿಕ ಸಂಘಟನೆಯನ್ನು ಹೇಗೆ ಉತ್ತಮಗೊಳಿಸಿಕೊಳ್ಳುವುದು, ಇತರರೊಂದಿಗೆ ಹೇಗೆ ಹೊಂದಿಕೊಂಡು ಹೋಗುವುದು, ಮತ್ತು ಜವಾಬ್ದಾರಿಯ ಪ್ರಜ್ಞೆಯನ್ನು ಹೇಗೆ ಬೆಳೆಸಿಕೊಳ್ಳುವುದು ಎಂಬಂಥ ಅಮೂಲ್ಯ ಪಾಠಗಳನ್ನು ನಿಮಗೆ ಕಲಿಸುವುದು. ಇದೆಲ್ಲವೂ ಸಮಯಾನಂತರ ಹೆಚ್ಚಿನ ಸೇವಾ ಸುಯೋಗಗಳಿಗಾಗಿ ನಿಮ್ಮನ್ನು ಸಿದ್ಧಪಡಿಸುವುದು.
8 ಪೂರ್ಣ ಸಮಯದ ಸೇವೆಯಲ್ಲಿ ಏಳಿಗೆಹೊಂದುವುದರಲ್ಲಿ ಒಂದು ಪ್ರಮುಖ ಅಂಶವು, ದೇವರ ಸೇವೆಗೆ ಸಂಬಂಧಿಸಿದ ವಿಷಯಗಳಲ್ಲಿ ಉದ್ಯೋಗಶೀಲ ಮನೋಭಾವವನ್ನು ತೋರಿಸುವುದೇ ಆಗಿದೆ. ಅಪೊಸ್ತಲ ಪೌಲನು ಸಹ ಅಂತಹ ಮನೋಭಾವವನ್ನು ಉತ್ತೇಜಿಸಿದನು. ಮತ್ತು ಇದರಿಂದ ಫಲಿಸುವ ಆಶೀರ್ವಾದಗಳ ಕುರಿತು ಸಹ ಅವನು ತಿಳಿಸಿದನು: “ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು . . . ಕರ್ತನಿಗೋಸ್ಕರವೇ [“ಯೆಹೋವನಿಗೋಸ್ಕರವೇ,” NW] ಎಂದು ಮನಃಪೂರ್ವಕವಾಗಿ ಮಾಡಿರಿ; ಕರ್ತನಿಂದ [“ಯೆಹೋವನಿಂದ,” NW] ಪರಲೋಕ ಬಾಧ್ಯತೆಯೆಂಬ ಪ್ರತಿಫಲವನ್ನು ಹೊಂದುವೆವೆಂದು ತಿಳಿದಿದ್ದೀರಲ್ಲಾ.” (ಕೊಲೊ. 3:23, 24) ಪೂರ್ಣ ಸಮಯದ ಸೇವೆಯಲ್ಲಿ ಯೆಹೋವನು ನಿಮ್ಮನ್ನು ಅನೇಕ ಆನಂದಗಳಿಂದ ಆಶೀರ್ವದಿಸಲಿ!