“ದೇವರೊಂದಿಗೆ ನಡೆಯಿರಿ” 2004ನೇ ಇಸವಿಯ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನ
1 ನಮ್ಮ ವಾರ್ಷಿಕ ಜಿಲ್ಲಾ ಅಧಿವೇಶನಗಳನ್ನು ನಿಮಗೆ ವಿಶೇಷವಾದದ್ದಾಗಿ ಮಾಡುವಂಥದ್ದು ಯಾವುದು? ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿ’ನಿಂದ ನಮಗೋಸ್ಕರ ತಯಾರಿಸಲ್ಪಟ್ಟ ಆತ್ಮೋನ್ನತಿ ಮಾಡುವ ಭಾಷಣಗಳು ಮತ್ತು ಡ್ರಾಮವೋ? (ಮತ್ತಾ. 24:45-47) ಸಮಯೋಚಿತ ಆಧ್ಯಾತ್ಮಿಕ ಪೋಷಣೆಯನ್ನು ಹೊಂದಿರುವ ಹೊಸ ಪ್ರಕಾಶನಗಳೋ? ಬೈಬಲು ತಮ್ಮ ಜೀವನಗಳನ್ನು ಹೇಗೆ ಉತ್ತಮಗೊಳಿಸಿದೆ ಎಂದು ಹೇಳುವ ಸಹೋದರ ಸಹೋದರಿಯರ ಅನುಭವಗಳೋ? ಬೇರೆ ದೇಶಗಳಲ್ಲಿ ರಾಜ್ಯ ಸಾರುವ ಕೆಲಸವು ಹೇಗೆ ಪ್ರಗತಿಹೊಂದುತ್ತಿದೆ ಎಂಬುದರ ಕುರಿತಾದ ವರದಿಗಳೋ? ಎಲ್ಲಾ ವಯಸ್ಸಿನ ಜೊತೆ ವಿಶ್ವಾಸಿಗಳೊಂದಿಗಿನ ಸಾಹಚರ್ಯವೋ? ಹೌದು, ಈ ಎಲ್ಲಾ ಕಾರಣಗಳಿಗಾಗಿ ಮತ್ತು ಇನ್ನು ಅನೇಕ ಕಾರಣಗಳಿಗಾಗಿ ನಾವು ತುಂಬ ಕಾತರದಿಂದ ನಮ್ಮ ಅಧಿವೇಶನಗಳಿಗಾಗಿ ಮುನ್ನೋಡುತ್ತೇವೆ!
2 ಮೂರೂ ದಿನಗಳಿಗೆ ಹಾಜರಾಗಿರಿ: ಮೋಶೆಯ ಮೂಲಕವಾಗಿ ಯೆಹೋವನು ಆಜ್ಞಾಪಿಸಿದ್ದು: ‘ಜನರೆಲ್ಲರೂ ಕೇಳಿ ತಿಳಿದುಕೊಳ್ಳುವಂತೆ ಅವರನ್ನು ಕೂಡಿಸು.’ (ಧರ್ಮೋ. 31:12) ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ವರ್ಗದ ಮೂಲಕ, ಯೆಹೋವನು ಅಧಿವೇಶನದ ಪ್ರತಿಯೊಂದು ದಿನವೂ ಶಿಕ್ಷಣದ ವಿಶೇಷ ಕಾರ್ಯಕ್ರಮವನ್ನು ನಮಗೋಸ್ಕರ ತಯಾರಿಸಿದ್ದಾನೆ. ಆತನು ‘ನಮಗೆ ಪ್ರಯೋಜನಕರವಾದ’ ವಿಷಯಗಳನ್ನು ಬೋಧಿಸುತ್ತಿರುವುದರಿಂದ, ನಾವು ಆತನ ಎಲ್ಲಾ ಉಪದೇಶವನ್ನು ಪಡೆದುಕೊಳ್ಳಲು ಉಪಸ್ಥಿತರಿರುವೆವು. (ಯೆಶಾ. 48:17, ಪರಿಶುದ್ಧ ಬೈಬಲ್) ಆದರೆ, ಕಳೆದ ವರ್ಷದ “ದೇವರನ್ನು ಘನಪಡಿಸಿರಿ” ಜಿಲ್ಲಾ ಅಧಿವೇಶನಗಳಲ್ಲಿ, ಶನಿವಾರ ಮತ್ತು ಭಾನುವಾರದ ಒಟ್ಟು ಹಾಜರಿಗೆ ಹೋಲಿಸುವಾಗ ಶುಕ್ರವಾರದ ಹಾಜರಿಯು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಇದರರ್ಥ, ಪ್ರಾಮುಖ್ಯವಾದ ಮಾಹಿತಿಯನ್ನು ಪ್ರಸ್ತುತಪಡಿಸಿದ ಅಧಿವೇಶನ ಭಾಗಗಳನ್ನು ನಮ್ಮ ಸಹೋದರರಲ್ಲಿ ಹೆಚ್ಚಿನವರು ಕಳೆದುಕೊಂಡರು; ಜೊತೆ ವಿಶ್ವಾಸಿಗಳೊಂದಿಗಿನ ಆಹ್ಲಾದಕರ ಸಹವಾಸವನ್ನು ಅವರು ಕಳೆದುಕೊಂಡರು.
3 ಇತರ ಚಿಂತೆಗಳು ಮಧ್ಯಬರದಂತೆ ನೋಡಿಕೊಳ್ಳಿ: ಎಲ್ಲಿ ತಮ್ಮ ಉದ್ಯೋಗವನ್ನು ಕಳಕೊಳ್ಳುವೆವೋ ಎಂಬ ಚಿಂತೆಯು ಕೆಲವರು ಶುಕ್ರವಾರದಂದು ಅಧಿವೇಶನಕ್ಕೆ ಹಾಜರಾಗದಿದ್ದುದಕ್ಕೆ ಕಾರಣವಾಗಿರಬಹುದು. ಇತರರು, ತಮ್ಮ ರಜೆ ಅಥವಾ ಹಣವನ್ನು ಬೇರಾವುದೋ ಉದ್ದೇಶಕ್ಕಾಗಿ ಉಪಯೋಗಿಸಲು ಬಯಸಿದ್ದಿರಬಹುದು. ನಿಮ್ಮ ಮಾಲೀಕನು ರಜೆ ಕೊಡಲಿಕ್ಕಿಲ್ಲವೆಂದು ನೀವೇ ಭಾವಿಸಿಕೊಳ್ಳಬೇಡಿ, ಇಲ್ಲವೆ ಅಧಿವೇಶನದ ಒಂದು ಅಥವಾ ಎರಡು ದಿನಗಳಿಗೆ ಹಾಜರಾಗದಿರುವುದು ಅಷ್ಟೇನು ದೊಡ್ಡ ವಿಷಯವಲ್ಲ ಎಂದು ನೆನಸಬೇಡಿ. ನಿಮ್ಮ ಮಾಲೀಕನಿಂದ ನೀವು ರಜೆಯನ್ನು ಕೇಳಬೇಕಾಗಿರುವಲ್ಲಿ, ನೆಹೆಮೀಯನ ದಿಟ್ಟ ಮಾದರಿಯನ್ನು ಅನುಸರಿಸುತ್ತಾ, ಯೆಹೋವನಿಗೆ ಈ ಬಗ್ಗೆ ಪ್ರಾರ್ಥಿಸಿರಿ ಮತ್ತು ಮಾಲೀಕನ ಮುಂದೆ ನಿಮ್ಮ ವಿನಂತಿಯನ್ನು ಮಾಡಿರಿ. (ನೆಹೆ. 1:11; 2:4) ಮತ್ತು ನೀವು ನಿಮ್ಮ ಜೀವನದಲ್ಲಿ ಆಧ್ಯಾತ್ಮಿಕ ಅಗತ್ಯಗಳನ್ನು ಪ್ರಪ್ರಧಾನವಾಗಿ ಇಡುವುದಾದರೆ ನಿಮಗೆ ಅಗತ್ಯವಿರುವ ಭೌತಿಕ ವಿಷಯಗಳು ಒದಗಿಸಲ್ಪಡುವವು ಎಂಬುದನ್ನು ಗ್ರಹಿಸಿಕೊಂಡವರಾಗಿ, ಯೆಹೋವನ ವಾಗ್ದಾನಗಳಲ್ಲಿ ಪೂರ್ಣ ಭರವಸೆಯನ್ನು ಇಡಿರಿ. (ಮತ್ತಾ. 6:33; ಇಬ್ರಿ. 13:5, 6) ಮಾತ್ರವಲ್ಲದೆ, ಅಧಿವೇಶನ ಏರ್ಪಾಡುಗಳ ಕುರಿತು ನಿಮ್ಮ ಕುಟುಂಬದ ಅವಿಶ್ವಾಸಿ ಸದಸ್ಯರಿಗೆ ಸಾಧ್ಯವಾದಷ್ಟು ಮುಂಚೆಯೇ ತಿಳಿಸುವುದು ಪ್ರೀತಿಪೂರ್ವಕವಾಗಿರುವುದು.
4 ಪ್ರಾಮುಖ್ಯ ಅಂಶವೇನೆಂದರೆ, ‘ಉತ್ತಮ ಕಾರ್ಯಗಳಿಗಾಗಿ’ ಗಣ್ಯತೆಯನ್ನು ತೋರಿಸುವುದೇ ಆಗಿದೆ. (ಫಿಲಿ. 1:10, 11; ಕೀರ್ತ. 27:4) ಯೆಹೋವನ ಈ ಪ್ರಮುಖವಾದ ಒದಗಿಸುವಿಕೆಯಿಂದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಲು ಯೋಜನೆಗಳನ್ನು ಮಾಡುವಂತೆ ಇದು ನಮ್ಮನ್ನು ಪ್ರೇರಿಸುವುದು. ನಿಮ್ಮ ನಿಶ್ಚಿತ ಏರ್ಪಾಡುಗಳನ್ನು ಈಗಲೇ ಮಾಡಲು ಆರಂಭಿಸಿರಿ, ಮತ್ತು ಮೂರು ದಿನಗಳೂ ನೀವು ಹಾಜರಾಗಿರುವಿರಿ ಎಂಬ ವಿಷಯದಲ್ಲಿ ದೃಢನಿಶ್ಚಯದಿಂದಿರಿ!
5 ವಸತಿಸೌಕರ್ಯ: ಕಳೆದ ವರ್ಷ ಮಾಡಲ್ಪಟ್ಟಂತೆಯೇ, ಸರಳೀಕೃತ ವಸತಿಸೌಕರ್ಯ ಏರ್ಪಾಡನ್ನು ಮಾಡಲಾಗುವುದು. ಹೋಟೆಲ್ ವಸತಿಸೌಕರ್ಯಕ್ಕಾಗಿ ರೂಮಿಂಗ್ ಇಲಾಖೆ ಯಾವುದೇ ಮುಂಗಡ ಬುಕಿಂಗ್ ಅನ್ನು ಮಾಡದು. ಬದಲಿಗೆ ಅದು, ಶಿಫಾರಸುಮಾಡಲ್ಪಟ್ಟ ಹೋಟೆಲುಗಳ ಮತ್ತು ಅವುಗಳ ದರಪಟ್ಟಿಯನ್ನು ಸಭೆಗಳಿಗೆ ಕಳುಹಿಸುವುದು. ಇದರಿಂದಾಗಿ ಹೋಟೆಲ್ನ ವಸತಿಸೌಕರ್ಯವನ್ನು ಬಯಸುವವರು ನೇರವಾಗಿ ಹೋಟೆಲುಗಳನ್ನು ಸಂಪರ್ಕಿಸಲು ಮತ್ತು ಅಗತ್ಯವಿರುವಷ್ಟು ರೂಮ್ಗಳನ್ನು ಕಾಯ್ದಿರಿಸಲು ಸಾಧ್ಯವಾಗುವುದು. ಡಾರ್ಮಿಟರಿ ತರದ ವಸತಿಸೌಕರ್ಯವನ್ನು ಮಾತ್ರ ಅಧಿವೇಶನ ವ್ಯವಸ್ಥೆಯು ಏರ್ಪಾಡು ಮಾಡುವುದು. ಸಭೆಗಳು ಈ ವಿಷಯದ ಕುರಿತು ಅಧಿವೇಶನ ರೂಮಿಂಗ್ ಇಲಾಖೆಯಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವವು. ನಿಮ್ಮ ಡಾರ್ಮಿಟರಿ ಸೌಕರ್ಯಕ್ಕಾಗಿರುವ ವಿನಂತಿಯನ್ನು ಸಾಕಷ್ಟು ಮುಂಚಿತವಾಗಿ ಕಳುಹಿಸಿರಿ. ದಯವಿಟ್ಟು, 4ನೇ ಪುಟದಲ್ಲಿ “ರೂಮಿಂಗ್ ಏರ್ಪಾಡುಗಳಿಗೆ ನೀವು ಸಹಕಾರ ನೀಡುವ ವಿಧ” ಎಂಬ ಚೌಕದಲ್ಲಿರುವ ಅಂಶಗಳನ್ನು ಪರಿಶೀಲಿಸಿರಿ.
6 ವಿಶೇಷ ಅಗತ್ಯಗಳು: ಅಪೊಸ್ತಲ ಪೌಲನು ಗಲಾತ್ಯದಲ್ಲಿರುವ ಸಭೆಗಳಿಗೆ, ‘ಎಲ್ಲರಿಗೆ ಒಳ್ಳೇದನ್ನು ಮಾಡಿರಿ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡಿರಿ’ ಎಂದು ಮರುಜ್ಞಾಪಿಸಿದನು. (ಗಲಾ. 6:10) ವೃದ್ಧ ಸಹೋದರ ಸಹೋದರಿಯರು, ಅಸ್ವಸ್ಥರು, ಒಂಟಿ ಹೆತ್ತವರು, ಅಥವಾ ಪೂರ್ಣ ಸಮಯದ ಸೇವೆಯಲ್ಲಿರುವವರು ನಿಮ್ಮ ಸಹಾಯವನ್ನು ಕೇಳದೆ ಇರಬಹುದು, ಆದರೆ ಅಧಿವೇಶನಕ್ಕೆ ಹಾಜರಾಗುವುದಕ್ಕಾಗಿ ಅವರಿಗೆ ಕೆಲವು ಪಂಥಾಹ್ವಾನಗಳನ್ನು ಜಯಿಸಬೇಕಾಗಿರಬಹುದು. ಅವರಿಗೆ ‘ಒಳ್ಳೇದನ್ನು ಮಾಡಲು’ ನಿಮಗೆ ಸಾಧ್ಯವಿದೆಯೋ ಮತ್ತು ಅವರಿಗೆ ಸ್ವಲ್ಪ ನೆರವನ್ನು ನೀಡಬಲ್ಲಿರೋ? ಇಂಥವರ ಪರಿಸ್ಥಿತಿಗಳ ವಿಷಯದಲ್ಲಿ ವಿಶೇಷವಾಗಿ ಕ್ರೈಸ್ತ ಸಂಬಂಧಿಕರು ಮತ್ತು ಹಿರಿಯರು ಪ್ರಜ್ಞೆಯುಳ್ಳವರಾಗಿರಬೇಕು.
7 ಒಬ್ಬ ಪ್ರಚಾರಕನಿಂದ ‘ವಿಶೇಷ ಅಗತ್ಯಗಳ ರೂಮ್ ವಿನಂತಿ’ ಫಾರ್ಮ್ ಸಲ್ಲಿಸಲ್ಪಡುವುದಾದರೆ, ಫಾರ್ಮ್ನಲ್ಲಿ ಕೊಡಲ್ಪಟ್ಟಿರುವ ಸೂಚನೆಗಳನ್ನು ಉಪಯೋಗಿಸುತ್ತಾ ಸಭೆಯ ಸೇವಾ ಸಮಿತಿಯು ಅದನ್ನು ಮರುಪರಿಶೀಲಿಸುವುದು. ಈ ಅಗತ್ಯವನ್ನು ಸ್ಥಳಿಕವಾಗಿ ಪೂರೈಸಸಾಧ್ಯವಿದೆಯೋ ಎಂದು ಅವರು ಪರಿಗಣಿಸುವರು. ಈ ಒದಗಿಸುವಿಕೆಯು ಒಳ್ಳೆಯ ನಿಲುವಿನಲ್ಲಿರುವ ಮತ್ತು ಸಭ್ಯತೆಯುಳ್ಳ ಮಕ್ಕಳನ್ನು ಹೊಂದಿರುವ ಪ್ರಚಾರಕರಿಗಾಗಿ ಮಾತ್ರ. ರೂಮಿಂಗ್ ಇಲಾಖೆಗೆ ಒಂದು ವಿಶೇಷ ಅಗತ್ಯಗಳ ವಿನಂತಿಯ ಕುರಿತು ಯಾವುದೇ ಪ್ರಶ್ನೆಗಳಿರುವುದಾದರೆ, ಅವರು ಸಭೆಯ ಸೆಕ್ರಿಟರಿಯನ್ನು ಸಂಪರ್ಕಿಸುವರು.
8 ಮತ್ತೊಂದು ಅಧಿವೇಶನಕ್ಕೆ ಹಾಜರಾಗುವುದು: ನಿಮ್ಮ ಪರಿಸ್ಥಿತಿಗಳ ಕಾರಣದಿಂದಾಗಿ ನಿಮಗೆ ನಿಮ್ಮ ಸಭೆಯು ನೇಮಿಸಲ್ಪಟ್ಟಿರುವ ಅಧಿವೇಶನಕ್ಕೆ ಬದಲಾಗಿ ಬೇರೊಂದು ಅಧಿವೇಶನಕ್ಕೆ ಹಾಜರಾಗಬೇಕಾಗಬಹುದು. ನಿಮಗೆ ಮತ್ತೊಂದು ಅಧಿವೇಶನದ ಕುರಿತು ಮಾಹಿತಿಯು ಬೇಕಾಗಿರುವಲ್ಲಿ, ದಯವಿಟ್ಟು ನಿಮ್ಮ ಸಭೆಯ ಸೆಕ್ರಿಟರಿಯನ್ನು ಸಂಪರ್ಕಿಸಿರಿ. ಈ ವರ್ಷ ಭಾರತದಲ್ಲಿ ನಡೆಸಲ್ಪಡಲಿರುವ ಅಧಿವೇಶನಗಳನ್ನು ದಿನಾಂಕಕ್ಕನುಸಾರವಾಗಿ ಮತ್ತು ಅವುಗಳ ಮುಖ್ಯ ಕಾರ್ಯಾಲಯದ ವಿಳಾಸಗಳೊಂದಿಗೆ ಮುಂದೆ ನಮ್ಮ ರಾಜ್ಯದ ಸೇವೆಯ ಒಂದು ಸಂಚಿಕೆಯಲ್ಲಿ ಪ್ರಕಾಶಿಸಲಾಗುವುದು. ನಿಮ್ಮ ವಿನಂತಿಯನ್ನು, ಸ್ವ-ವಿಳಾಸವಿರುವ, ಮತ್ತು ಅಂಚೆಚೀಟಿ ಅಂಟಿಸಲ್ಪಟ್ಟಿರುವ ಲಕೋಟೆಯೊಂದಿಗೆ ಸೂಕ್ತವಾದ ವಿಳಾಸಕ್ಕೆ ಕಳುಹಿಸಿರಿ. ಎರಡು ಅಥವಾ ಹೆಚ್ಚು ಅಧಿವೇಶನಗಳು ಒಂದೇ ನಗರದಲ್ಲಿ ನಡೆಸಲ್ಪಡಲಿರುವುದಾದರೆ, ನಿಮ್ಮ ವಿನಂತಿಯಲ್ಲಿ ನೀವು ಹಾಜರಾಗಲು ಬಯಸುವ ಅಧಿವೇಶನ ತಾರೀಖು ಗುರುತಿಸಲ್ಪಟ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆ ಅಧಿವೇಶನದ ರೂಮಿಂಗ್ ಇಲಾಖೆಯು ಶಿಫಾರಸುಮಾಡಲ್ಪಟ್ಟ ಹೋಟೆಲುಗಳ ಮತ್ತು ಅವುಗಳ ದರದ ಇತ್ತೀಚಿನ ಪಟ್ಟಿಯನ್ನು ನಿಮಗೆ ಕಳುಹಿಸಿಕೊಡುವುದು.
9 ಸುಮಾರು 2,500 ವರ್ಷಗಳಿಗೆ ಹಿಂದೆ ನಡೆಸಲ್ಪಟ್ಟ ಯೆಹೋವನ ಜನರ ಒಂದು ಅಧಿವೇಶನದಲ್ಲಿ, ಎಜ್ರ ಮತ್ತು ಅವನ ಜೊತೆ ಲೇವಿಯರು ದೇವರ ವಾಕ್ಯವನ್ನು ಓದಿ, ಕೂಡಿಬಂದಿದ್ದ ಸಭೆಗೆ ಅದನ್ನು ವಿವರಿಸಿದರು. ಇದರ ಪರಿಣಾಮ? ‘ತಮಗೆ ಉಪದೇಶಿಸಲ್ಪಟ್ಟ ವಿಷಯಗಳನ್ನು ಅವರು ಅರ್ಥಮಾಡಿಕೊಂಡದ್ದರಿಂದ ಅವರೆಲ್ಲರು ಸಂತೋಷಪಟ್ಟರು,’ ಎಂದು ನೆಹೆಮೀಯ 8:12 (ಪರಿಶುದ್ಧ ಬೈಬಲ್) ಹೇಳುತ್ತದೆ. ಅಭಿಷಿಕ್ತ ಆಳು ವರ್ಗವು, ಎಜ್ರ ಮತ್ತು ಲೇವಿಯರಂತೆ, ದೇವರ ವಾಕ್ಯವನ್ನು ಉಪಯೋಗಿಸಿ, ಅದನ್ನು ವಿವರಿಸಿ, ಅದನ್ನು ನಮ್ಮ ಜೀವನಗಳಲ್ಲಿ ಹೇಗೆ ಅನ್ವಯಿಸಿಕೊಳ್ಳಬಹುದು ಎಂಬುದನ್ನು ತೋರಿಸುತ್ತಿರುವುದಕ್ಕಾಗಿ ನಾವು ಕೃತಜ್ಞರಾಗಿರುವುದಿಲ್ಲವೋ? ಹೀಗೆ ಮಾಡುವ ಮೂಲಕ, ಆ ಆಳು ಜನರ ಕಡೆಗೆ ಯೆಹೋವನಿಗಿರುವ ಪ್ರಾಮಾಣಿಕ ಪ್ರೀತಿ ಮತ್ತು ಕಾಳಜಿಯನ್ನು ಪ್ರತಿಬಿಂಬಿಸುತ್ತದೆ. ಹೀಗಿರಲಾಗಿ, “ದೇವರೊಂದಿಗೆ ನಡೆಯಿರಿ” ಜಿಲ್ಲಾ ಅಧಿವೇಶನದ ಒಂದು ದಿನವನ್ನಾದರೂ ತಪ್ಪಿಸಿಕೊಳ್ಳುವುದಿಲ್ಲ ಎಂಬ ದೃಢಸಂಕಲ್ಪವನ್ನು ಮಾಡಿರಿ!
ಕಾರ್ಯಕ್ರಮದ ಸಮಯಗಳು
[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]
ಶುಕ್ರವಾರ ಮತ್ತು ಶನಿವಾರ
ಬೆಳಿಗ್ಗೆ 9:30 - ಮಧ್ಯಾಹ್ನ ಸುಮಾರು 5:10
ಭಾನುವಾರ
ಬೆಳಿಗ್ಗೆ 9:30 - ಮಧ್ಯಾಹ್ನ ಸುಮಾರು 4:05
[ಪುಟ 4ರಲ್ಲಿರುವ ಸಂಕ್ಷಿಪ್ತ ವಿವರಣೆ]
ರೂಮಿಂಗ್ ಏರ್ಪಾಡುಗಳಿಗೆ ನೀವು ಸಹಕಾರ ನೀಡುವ ವಿಧ
◼ ಶಿಫಾರಸುಮಾಡಲ್ಪಟ್ಟ ಹೋಟೆಲುಗಳ ಪಟ್ಟಿಯಲ್ಲಿರುವ ಎಲ್ಲಾ ಹೋಟೆಲುಗಳನ್ನು ಸಂಪರ್ಕಿಸಿಯೂ ಯಾವುದೇ ರೂಮ್ಗಳು ಲಭ್ಯವಿಲ್ಲದಿರುವುದಾದರೆ, ಅಥವಾ ಯಾವುದೇ ನಿರ್ದಿಷ್ಟ ಹೋಟೆಲು ಪ್ರಸ್ತಾಪಿಸಲ್ಪಟ್ಟಿರುವ ದರಕ್ಕಿಂತ ಹೆಚ್ಚಿನ ದರವನ್ನು ಕೇಳುವುದಾದರೆ, ನಿಮ್ಮ ಸಭೆಯ ಸೆಕ್ರಿಟರಿಗೆ ಇದರ ಕುರಿತು ತಿಳಿಸಿರಿ. ಅವರು ನಿಮ್ಮ ಅಧಿವೇಶನದ ರೂಮಿಂಗ್ ಇಲಾಖೆಯನ್ನು ಸಂಪರ್ಕಿಸುವರು.
◼ ನೀವು ಖಂಡಿತವಾಗಿಯೂ ಉಪಯೋಗಿಸಲಿಕ್ಕಿರುವ ರೂಮ್ಗಳನ್ನು ಮಾತ್ರ ರಿಸರ್ವ್ ಮಾಡಿರಿ.
◼ ನೀವು ಮೊದಲು ಮಾಡಿರುವ ರಿಸರ್ವೇಶನನ್ನೇ ಉಪಯೋಗಿಸಿರಿ.
◼ ರೂಮಿಂಗ್ ಇಲಾಖೆಯಿಂದ ಕೇವಲ ಡಾರ್ಮಿಟರಿ ವಸತಿಸೌಕರ್ಯವನ್ನು ಮಾತ್ರ ಮಾಡಲಾಗುವುದು. ಆದುದರಿಂದ, ದಯವಿಟ್ಟು ಹೋಟೆಲ್ ರೂಮ್ಗಳನ್ನು ಬುಕಿಂಗ್ ಮಾಡಲಿಕ್ಕಾಗಿ ರೂಮಿಂಗ್ ಇಲಾಖೆಗೆ ಹಣವನ್ನು ಕಳುಹಿಸಬೇಡಿ.
◼ ನಿಮ್ಮ ವಿನಂತಿಯ ಮೇರೆಗೆ ಡಾರ್ಮಿಟರಿಗಳನ್ನು ಬುಕ್ ಮಾಡಲಾಗುವುದು. ಆದುದರಿಂದ, ನಿಮಗೆ ನೇಮಿಸಲ್ಪಟ್ಟ ಡಾರ್ಮಿಟರಿಯಲ್ಲೇ ಉಳಿಯಿರಿ. ನಿಮ್ಮ ವಿನಂತಿಯಲ್ಲಿ ನೀವು ಮುಂಚಿತವಾಗಿ ಸೂಚಿಸಿರುವ ವ್ಯಕ್ತಿಗಳಿಗಿಂತ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳನ್ನು ಡಾರ್ಮಿಟರಿಯಲ್ಲಿ ಉಳಿಯುವಂತೆ ಮಾಡಬೇಕೆಂದು ಅಪೇಕ್ಷಿಸಬೇಡಿ.
◼ ಅಧಿವೇಶನವನ್ನು ಬಿಟ್ಟು ಹೊರಡುವ ಮುನ್ನ, ನಿಮ್ಮ ಡಾರ್ಮಿಟರಿ ವಸತಿಸೌಕರ್ಯಕ್ಕಾಗಿನ ಪೂರ್ತಿ ಹಣವನ್ನು ನೀವು ರೂಮಿಂಗ್ ಇಲಾಖೆಗೆ ಪಾವತಿ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.