ಬೈಬಲನ್ನು ಪರಿಣಾಮಕಾರಿಯಾಗಿ ಉಪಯೋಗಿಸಿರಿ
1. ಕ್ಷೇತ್ರ ಸೇವೆಗೆ ತಯಾರಿಸುತ್ತಿರುವಾಗ ನೀವೇನು ಮಾಡಬಹುದು?
1 ಶುಶ್ರೂಷೆಯಲ್ಲಿ ನಾವು ಯಾವುದೇ ಸಾಹಿತ್ಯವನ್ನು ನೀಡಲು ಯೋಜಿಸುವುದಾದರೂ, ನಮಗೆ ಯಾರು ಕಿವಿಗೊಡುತ್ತಾರೋ ಅವರೊಂದಿಗೆ ಹಂಚಿಕೊಳ್ಳಲಿಕ್ಕಾಗಿ ಆಲೋಚನಾಪ್ರೇರಕ ಶಾಸ್ತ್ರವಚನವೊಂದನ್ನು ಆಯ್ಕೆಮಾಡುವುದು ಪ್ರಯೋಜನದಾಯಕವಾಗಿದೆ. (ಇಬ್ರಿ. 4:12) ನೀವು ನೀಡುತ್ತಿರುವ ಪ್ರಕಾಶನದಲ್ಲೇ ಉಪಯೋಗಿಸಲ್ಪಟ್ಟಿರುವ ಒಂದು ಶಾಸ್ತ್ರವಚನವನ್ನು ಆರಿಸಿಕೊಳ್ಳುವುದು, ಪರಿಣಾಮಕಾರಿಯಾದ ರೀತಿಯಲ್ಲಿ ಪ್ರಕಾಶನಕ್ಕೆ ಮುನ್ನಡಿಸಲು ಸಹಾಯವನ್ನೀಯುವುದು. ಹೀಗೆ ಒಂದು ಶಾಸ್ತ್ರವಚನವನ್ನು ಉಪಯೋಗಿಸುವ ಮೂಲಕ, ದೇವರ ವಾಕ್ಯವು ಕಿವಿಗೊಡುವವರ ಹೃದಯವನ್ನು ಪ್ರಭಾವಿಸುವಂತೆ ನಾವು ಅನುಮತಿಸುತ್ತೇವೆ. ಸಾಮಾನ್ಯವಾಗಿ, ಕ್ರೈಸ್ತೇತರ ಧರ್ಮಗಳಲ್ಲಿರುವ ಜನರು, ಮತ್ತು ಕ್ರೈಸ್ತರನ್ನು ಇಷ್ಟಪಡದಿರುವಂಥ ಜನರಲ್ಲಿ ಕೆಲವರು ಸಹ ಬೈಬಲನ್ನು ಗೌರವಭಾವದಿಂದ ಕಾಣುತ್ತಾರೆ.
2. (ಎ) ನಾವು ಒಂದು ಶಾಸ್ತ್ರವಚನದೊಂದಿಗೆ ನಮ್ಮ ನಿರೂಪಣೆಯನ್ನು ಹೇಗೆ ಆರಂಭಿಸಸಾಧ್ಯವಿದೆ? (ಬಿ) ಟೆರಿಟೊರಿಯಲ್ಲಿ ಯಾವ ಶಾಸ್ತ್ರೀಯ ವಿಷಯವಸ್ತುಗಳು ಜನರಿಗೆ ಆಸಕ್ತಿದಾಯಕವಾಗಿವೆ?
2 ಒಂದು ಶಾಸ್ತ್ರವಚನದೊಂದಿಗೆ ಆರಂಭಿಸಿರಿ: ಕೆಲವು ಪ್ರಚಾರಕರು, ಮನೆಯವರಿಗೆ ಒಂದು ಬೈಬಲ್ ವಚನದ ಕುರಿತು ಸರಳವಾದ ದೃಷ್ಟಿಕೋನ ಪ್ರಶ್ನೆಯೊಂದನ್ನು ಕೇಳುವ ಮೂಲಕ ತಮ್ಮ ನಿರೂಪಣೆಯನ್ನು ಆರಂಭಿಸುತ್ತಾರೆ, ತದನಂತರ ಅದನ್ನು ಓದುತ್ತಾರೆ. ಇದು ಆ ಕೂಡಲೆ ಜನರ ಗಮನವನ್ನು ದೇವರ ವಾಕ್ಯದ ಕಡೆಗೆ ನಿರ್ದೇಶಿಸುತ್ತದೆ. ಈ ಪೀಠಿಕೆಗಳಲ್ಲಿ ಕೆಲವು ನಿಮ್ಮ ಟೆರಿಟೊರಿಯಲ್ಲಿ ಪರಿಣಾಮಕಾರಿಯಾಗಿ ಕಂಡುಬರಬಲ್ಲವೋ?
◼ “ಈ ಬದಲಾವಣೆಗಳನ್ನು ಮಾಡುವ ಅಧಿಕಾರ ನಿಮಗಿರುತ್ತಿದ್ದಲ್ಲಿ, ನೀವು ಹೀಗೆ ಮಾಡುತ್ತಿದ್ದಿರೋ?” ಪ್ರಕಟನೆ 21:4ನ್ನು ಓದಿರಿ.
◼ “ನಾವು ಇಂಥ ಕಠಿನ ಕಾಲಗಳಲ್ಲಿ ಏಕೆ ಜೀವಿಸುತ್ತಿದ್ದೇವೆ ಎಂದು ನೀವೆಂದಾದರೂ ನೆನಸಿದ್ದಿರೋ?” 2 ತಿಮೊಥೆಯ 3:1-5ನ್ನು ಓದಿರಿ.
◼ “ಪ್ರತಿಯೊಬ್ಬರೂ ಈ ಸಲಹೆಯನ್ನು ಅನುಸರಿಸುತ್ತಿದ್ದಲ್ಲಿ ನಮ್ಮ ಸಮುದಾಯವು ಹೆಚ್ಚು ಉತ್ತಮವಾದ ಸ್ಥಳವಾಗಿರುತ್ತಿತ್ತು ಎಂದು ನಿಮಗನಿಸುತ್ತದೋ?” ಮತ್ತಾಯ 7:12ನ್ನು ಓದಿರಿ.
◼ “ಸದ್ಯದ ತೊಂದರೆಭರಿತ ಪರಿಸ್ಥಿತಿಗಳನ್ನು ಪರಿಗಣಿಸುವಾಗ, ನಿಮ್ಮ ಮಕ್ಕಳು ಇಲ್ಲಿ ವರ್ಣಿಸಲ್ಪಟ್ಟಿರುವ ಪರಿಸ್ಥಿತಿಗಳನ್ನು ಅನುಭವಿಸುವರು ಎಂದು ನಿಮಗನಿಸುತ್ತದೋ?” ಕೀರ್ತನೆ 37:10, 11ನ್ನು ಓದಿರಿ.
◼ “ಈ ಲೋಕದಲ್ಲಿ ರೋಗ ಮತ್ತು ಅಸ್ವಸ್ಥತೆಯು ದಿನೇ ದಿನೇ ಹೆಚ್ಚುತ್ತಿರುವಾಗ, ಈ ಮಾತುಗಳು ಎಂದಾದರೂ ನಿಜವಾಗುತ್ತವೆ ಎಂದು ನೀವು ನೆನಸುತ್ತೀರೋ?” ಯೆಶಾಯ 33:24ನ್ನು ಓದಿರಿ.
◼ “ಇಲ್ಲಿ ತಿಳಿಸಲ್ಪಟ್ಟಿರುವ ಸರಕಾರದ ಬದಲಾವಣೆಯ ಕುರಿತು ನೀವು ಎಂದಾದರೂ ಕೇಳಿಸಿಕೊಂಡಿದ್ದೀರೋ?” ದಾನಿಯೇಲ 2:44ನ್ನು ಓದಿರಿ.
◼ “ನೀವು ಎಂದಾದರೂ ದೇವರಿಗೆ ಈ ಪ್ರಶ್ನೆಯನ್ನು ಕೇಳಲು ಇಷ್ಟಪಟ್ಟಿದ್ದೀರೋ?” ಯೋಬ 21:7ನ್ನು ಓದಿರಿ.
◼ “ನಮ್ಮ ಪ್ರಿಯ ಮೃತ ಜನರನ್ನು ಪುನಃ ನೋಡಸಾಧ್ಯವಿದೆಯೋ?” ಯೋಹಾನ 5:28, 29ನ್ನು ಓದಿರಿ.
◼ “ಜೀವಂತವಾಗಿರುವವರು ಏನು ಮಾಡುತ್ತಿದ್ದಾರೆಂದು ಮೃತರಿಗೆ ತಿಳಿದಿದೆಯೊ?” ಪ್ರಸಂಗಿ 9:5ನ್ನು ಓದಿರಿ.
3. ನಾವು ಓದುವಂಥ ಬೈಬಲ್ ವಚನಗಳನ್ನು ಜನರು ಅರ್ಥಮಾಡಿಕೊಳ್ಳುವಂತೆ ನಾವು ಅವರಿಗೆ ಹೇಗೆ ಸಹಾಯಮಾಡಸಾಧ್ಯವಿದೆ?
3 ವಿವರಿಸಿರಿ, ದೃಷ್ಟಾಂತಿಸಿರಿ, ಅನ್ವಯಿಸಿರಿ: ಒಬ್ಬ ವ್ಯಕ್ತಿಯು ಸಂಭಾಷಿಸಲು ಸಿದ್ಧನಿರುವಾಗ, ಆತುರಾತುರವಾಗಿ ಚರ್ಚೆಯನ್ನು ಮುಗಿಸಿಬಿಡಬೇಡಿ. ಆ ವ್ಯಕ್ತಿಯು ನೀವು ಓದಿದಂಥ ಶಾಸ್ತ್ರವಚನವನ್ನು ಅರ್ಥಮಾಡಿಕೊಳ್ಳುವಂತೆ, ಅದನ್ನು ವಿವರಿಸಲು, ದೃಷ್ಟಾಂತಿಸಲು, ಮತ್ತು ಅನ್ವಯಿಸಲು ಸಮಯವನ್ನು ತೆಗೆದುಕೊಳ್ಳಿರಿ. (ನೆಹೆ. 8:8) ಜನರು ದೇವರ ವಾಕ್ಯವು ಕಲಿಸುವ ವಿಷಯಗಳನ್ನು ಅರ್ಥಮಾಡಿಕೊಂಡು, ಅವುಗಳನ್ನು ಅಂಗೀಕರಿಸುವಾಗ, ಇದು ಅವರ ಜೀವನದಲ್ಲಿ ಅದ್ಭುತಕರವಾದ ಬದಲಾವಣೆಗಳನ್ನು ತರಬಲ್ಲದು.—1 ಥೆಸ. 2:13.
4. ನಮ್ಮ ಪುನರ್ಭೇಟಿಗಳಲ್ಲಿ ನಾವು ಬೈಬಲನ್ನು ಹೇಗೆ ಪರಿಣಾಮಕಾರಿಯಾಗಿ ಉಪಯೋಗಿಸಬಲ್ಲೆವು?
4 ಆಸಕ್ತಿಯನ್ನು ಬೆಳೆಸುತ್ತಿರುವಾಗ ಬೈಬಲನ್ನು ಪರಿಣಾಮಕಾರಿಯಾಗಿ ಉಪಯೋಗಿಸುತ್ತಾ ಮುಂದುವರಿಯಿರಿ. ಪುನರ್ಭೇಟಿಗಳನ್ನು ಮಾಡುವಾಗಲೂ ಇದೇ ವಿಧಾನವನ್ನು ನೀವು ಉಪಯೋಗಿಸಸಾಧ್ಯವಿದೆ: (1) ಸೂಕ್ತವಾದ ಒಂದು ಶಾಸ್ತ್ರವಚನವನ್ನು ಆಯ್ಕೆಮಾಡಿ. (2) ಶಾಸ್ತ್ರವಚನದ ಕುರಿತು ಸರಳವಾದ ದೃಷ್ಟಿಕೋನ ಪ್ರಶ್ನೆಯೊಂದನ್ನು ಕೇಳಿರಿ. ತದನಂತರ ವಚನವನ್ನು ಓದಿರಿ. (3) ಅದನ್ನು ವಿವರಿಸಿರಿ, ದೃಷ್ಟಾಂತಿಸಿರಿ, ಮತ್ತು ಅನ್ವಯಿಸಿರಿ. ಪ್ರತಿಬಾರಿ ನೀವು ಭೇಟಿ ನೀಡಿದಾಗಲೂ ದೇವರ ವಾಕ್ಯದ ಕುರಿತಾದ ಆ ವ್ಯಕ್ತಿಯ ಜ್ಞಾನವನ್ನು ಹೆಚ್ಚಿಸಲು ಪ್ರಯತ್ನಿಸಿರಿ. ಬಲು ಬೇಗನೆ ನೀವು ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಬಹುದು!