ರಾಜ್ಯ ಸಾರುವಿಕೆ—ಒಂದು ಅಮೂಲ್ಯ ನೇಮಕ
1 ಪ್ರತಿದಿನ, ಕೋಟ್ಯಂತರ ಜನರು ಜೀವಪೋಷಣೆಗಾಗಿ ಯೆಹೋವನು ಮಾಡಿರುವ ಉದಾರ ಒದಗಿಸುವಿಕೆಗಳಿಂದ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. (ಮತ್ತಾ. 5:45) ಹಾಗಿದ್ದರೂ, ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಮೂಲಕ ತಮ್ಮ ಸೃಷ್ಟಿಕರ್ತನಿಗೆ ಗಣ್ಯತೆಯನ್ನು ತೋರಿಸುವ ಅದ್ವಿತೀಯ ಸದವಕಾಶದಲ್ಲಿ ಕೇವಲ ಕೊಂಚವೇ ಮಂದಿ ಆನಂದಿಸುತ್ತಿದ್ದಾರೆ. (ಮತ್ತಾ. 24:14) ಈ ಅಮೂಲ್ಯವಾದ ನೇಮಕವನ್ನು ನೀವೆಷ್ಟು ಗಣ್ಯಮಾಡುತ್ತೀರಿ?
2 ರಾಜ್ಯ ಸಾರುವಿಕೆಯು ದೇವರಿಗೆ ಗೌರವವನ್ನು ತರುತ್ತದೆ ಮತ್ತು ಇಂದಿನ ಗೊಂದಲಮಯ ಸಮಯಗಳಿಂದ ದುಃಖಿತರಾಗಿರುವ ಜನರಿಗೆ ನಿರೀಕ್ಷೆ ಹಾಗೂ ಶಾಂತಿಯನ್ನು ಒದಗಿಸುತ್ತದೆ. (ಇಬ್ರಿ. 13:15) ಯಾರು ಈ ಸಂದೇಶಕ್ಕೆ ಪ್ರತಿಕ್ರಿಯಿಸುತ್ತಾರೊ ಅವರಿಗೆ ಇದು ನಿತ್ಯಜೀವದ ನಿರೀಕ್ಷೆಯನ್ನು ನೀಡುತ್ತದೆ. (ಯೋಹಾ. 17:3) ಯಾವ ಐಹಿಕ ವೃತ್ತಿ ಅಥವಾ ಉದ್ಯೋಗವು ಇಂಥ ಪ್ರತಿಫಲಗಳನ್ನು ನೀಡಶಕ್ತವಾಗಿದೆ? ಅಪೊಸ್ತಲ ಪೌಲನು ಶುಶ್ರೂಷೆಯನ್ನು ಪೂರೈಸಿದ ವಿಧದಲ್ಲಿ ಅದಕ್ಕಾಗಿನ ತನ್ನ ಗಣ್ಯತೆಯನ್ನು ಪ್ರದರ್ಶಿಸಿದನು. ಅವನು ಅದನ್ನು ಒಂದು ನಿಕ್ಷೇಪದಂತೆ ವೀಕ್ಷಿಸಿದನು.—ಅ. ಕೃ. 20:20, 21, 24; 2 ಕೊರಿಂ. 4:1, 7.
3 ನಮ್ಮ ಅಮೂಲ್ಯ ನೇಮಕಕ್ಕೆ ಕೃತಜ್ಞತೆಯನ್ನು ತೋರಿಸುವುದು: ಸಾರುವ ನಮ್ಮ ನೇಮಕಕ್ಕೆ ನಾವು ಕೃತಜ್ಞತೆಯನ್ನು ತೋರಿಸುವ ಒಂದು ವಿಧವು, ನಮ್ಮ ಸೇವೆಯ ಗುಣಮಟ್ಟಕ್ಕೆ ಗಮನವನ್ನು ನೀಡುವ ಮೂಲಕವೇ ಆಗಿದೆ. ನಮ್ಮ ಕೇಳುಗರ ಹೃದಯವನ್ನು ಸ್ಪರ್ಶಿಸುವಂಥ ಒಂದು ನಿರೂಪಣೆಯನ್ನು ತಯಾರಿಸಲು ನಾವು ಸಮಯವನ್ನು ವಿನಿಯೋಗಿಸುತ್ತೇವೊ? ಶಾಸ್ತ್ರವಚನಗಳನ್ನು ಉಪಯೋಗಿಸುವುದರಲ್ಲಿ ಮತ್ತು ಜನರೊಂದಿಗೆ ತರ್ಕಬದ್ಧವಾಗಿ ಮಾತಾಡುವುದರಲ್ಲಿ ನಮ್ಮ ಸಾಮರ್ಥ್ಯವನ್ನು ನಾವು ಉತ್ತಮಗೊಳಿಸಬಲ್ಲೆವೊ? ನಮ್ಮ ನೇಮಿತ ಕ್ಷೇತ್ರವನ್ನು ನಾವು ಸಂಪೂರ್ಣವಾಗಿ ಆವರಿಸುತ್ತೇವೊ? ನಾವು ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಿ, ಮುಂದುವರಿಸಬಲ್ಲೆವೊ? ಹಿಂದಿನ ಮತ್ತು ಈಗಿರುವ ನಂಬಿಗಸ್ತ ಕ್ರೈಸ್ತರಂತೆ ನಾವು ಈ ಚಟುವಟಿಕೆಯ ಕಡೆಗೆ ಸರಿಯಾದ ದೃಷ್ಟಿಕೋನದಿಂದ ಪ್ರಚೋದಿತರಾಗಿದ್ದೇವೆ ಮತ್ತು ನಮ್ಮ ನೇಮಕವನ್ನು ಅಮೂಲ್ಯವೆಂದೆಣಿಸುತ್ತೇವೆ.—ಮತ್ತಾ. 25:14-23.
4 ನಾವು ವೃದ್ಧಾಪ್ಯ, ಅನಾರೋಗ್ಯ ಇಲ್ಲವೆ ಇತರ ಕಷ್ಟಕರ ಸನ್ನಿವೇಶಗಳ ಪರಿಣಾಮಗಳನ್ನು ಎದುರಿಸುತ್ತಿರುವಾಗ, ಶುಶ್ರೂಷೆಯಲ್ಲಿ ಭಾಗವಹಿಸಲು ನಾವು ಮಾಡುವ ಹುರುಪಿನ ಪ್ರಯತ್ನಗಳು ಖಂಡಿತವಾಗಿಯೂ ಬಹಳವಾಗಿ ಗಣ್ಯಮಾಡಲ್ಪಡುತ್ತವೆ ಎಂಬುದನ್ನು ತಿಳಿಯುವುದು ಸಾಂತ್ವನದಾಯಕವಾಗಿದೆ. ಯೆಹೋವನನ್ನು ಸೇವಿಸಲಿಕ್ಕಾಗಿ ಮಾಡಲಾಗುವ ಅಂಥ ಪ್ರಯತ್ನಗಳು ಇತರರ ದೃಷ್ಟಿಯಲ್ಲಿ ಮನತಟ್ಟುವಂಥವುಗಳಾಗಿ ಕಂಡುಬರದಿದ್ದರೂ, ಯೆಹೋವನಾದರೊ ಅವುಗಳನ್ನು ಗಣ್ಯಮಾಡುತ್ತಾನೆ ಎಂಬುದಾಗಿ ದೇವರ ವಾಕ್ಯವು ನಮಗೆ ಆಶ್ವಾಸನೆ ನೀಡುತ್ತದೆ.—ಲೂಕ 21:1-4.
5 ರಾಜ್ಯ ಸಾರುವಿಕೆಯು ಮಹಾ ಸಂತೃಪ್ತಿಯ ಒಂದು ಮೂಲವಾಗಿದೆ. 92 ವರುಷದ ಒಬ್ಬ ಸಹೋದರಿಯು ತಿಳಿಸುವುದು: “ನಾನು ಸುಮಾರು 80ಕ್ಕಿಂತಲೂ ಹೆಚ್ಚು ವರುಷಗಳ ವರೆಗೆ ಯಾವುದೇ ವಿಷಾದವಿಲ್ಲದೆ ದೇವರಿಗೆ ಮಾಡಿರುವ ಸಮರ್ಪಿತ ಸೇವೆಯನ್ನು ನೋಡುವಾಗ, ಅದೆಂಥ ಮಹಾ ಸುಯೋಗವಾಗಿದೆ! ಒಂದುವೇಳೆ ನನಗೆ ನನ್ನ ಜೀವನವನ್ನು ಪುನಃ ಒಮ್ಮೆ ಆರಂಭಿಸಲು ಸಾಧ್ಯವಾದರೆ, ನಾನು ಅದೇ ರೀತಿಯಲ್ಲಿ ಜೀವಿಸಲು ಬಯಸುವೆ, ಯಾಕೆಂದರೆ ‘ದೇವರ ಪ್ರೀತಿಪೂರ್ವಕದಯೆಯು ಜೀವಕ್ಕಿಂತಲೂ ಶ್ರೇಷ್ಠ.’” (ಕೀರ್ತ. 63:3, NW) ದೇವರಿಂದ ದೊರೆತಿರುವ ಈ ರಾಜ್ಯ ಸಾರುವಿಕೆಯ ಅಮೂಲ್ಯ ನೇಮಕಕ್ಕೆ ನಾವು ಸಹ ಕೃತಜ್ಞತೆಯನ್ನು ತೋರಿಸೋಣ.