ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ—ತಯಾರಿಸುವ ಮೂಲಕ
1 ಶುಶ್ರೂಷೆಗಾಗಿ ಒಳ್ಳೇ ರೀತಿಯಲ್ಲಿ ತಯಾರಿಮಾಡುವುದು ಇತರರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುವಂತೆ ನಮಗೆ ಸಹಾಯಮಾಡುತ್ತದೆ. ಅದು ಹೇಗೆ? ನಾವು ಒಳ್ಳೇ ರೀತಿಯಲ್ಲಿ ತಯಾರಿಮಾಡಿರುವುದಾದರೆ, ನಮ್ಮ ಮನಸ್ಸು ನಿರೂಪಣೆಯ ಮೇಲೆಯೇ ಪೂರ್ತಿಯಾಗಿ ಕೇಂದ್ರೀಕೃತವಾಗಿರುವುದಿಲ್ಲ ಮತ್ತು ಇದರಿಂದಾಗಿ ಮನೆಯವರಿಗೆ ಹೆಚ್ಚು ಗಮನಕೊಡಲು ಸಾಧ್ಯವಾಗುತ್ತದೆ. ಅಷ್ಟುಮಾತ್ರವಲ್ಲ, ಇದು ಹೆದರಿಕೆಯನ್ನು ಹೊಡೆದೋಡಿಸಲು ನಮಗೆ ಸಹಾಯಮಾಡುತ್ತದೆ ಮತ್ತು ಹೃದಯದಿಂದ ಮಾತಾಡಲು ಅವಕಾಶವನ್ನು ಕೊಡುತ್ತದೆ. ಆದರೆ, ಒಂದು ಪರಿಣಾಮಕಾರಿಯಾದ ನಿರೂಪಣೆಯನ್ನು ನಾವು ಹೇಗೆ ತಯಾರಿಸಸಾಧ್ಯವಿದೆ?
2 ಸೂಕ್ತವಾದ ನಿರೂಪಣೆಯನ್ನು ಉಪಯೋಗಿಸಿರಿ: 2006ರ ಜನವರಿ ತಿಂಗಳಿನ ನಮ್ಮ ರಾಜ್ಯದ ಸೇವೆಯಲ್ಲಿರುವ ಸೂಚಿತ ನಿರೂಪಣೆಗಳಿಂದ ನಿಮ್ಮ ಕ್ಷೇತ್ರಕ್ಕೆ ಸೂಕ್ತವಾಗಿರುವ ಒಂದು ನಿರೂಪಣೆಯನ್ನು ಆಯ್ಕೆಮಾಡಿ, ಅದನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಹೇಗೆ ತಿಳಿಸಬಹುದು ಎಂಬುದನ್ನು ಪರಿಗಣಿಸಿರಿ. ಅದನ್ನು ನಿಮ್ಮ ಟೆರಿಟೊರಿಗೆ ಹೊಂದಿಸಿಕೊಳ್ಳಿರಿ. ಉದಾಹರಣೆಗೆ, ನೀವು ಅನೇಕವೇಳೆ ಒಂದು ನಿರ್ದಿಷ್ಟ ಧರ್ಮ ಅಥವಾ ಕುಲದ ಜನರನ್ನು ಭೇಟಿಯಾಗುವುದಾದರೆ ಅವರಿಗೆ ಯಾವ ವಿಷಯವು ಆಸಕ್ತಿಕರವಾಗಿರುವುದು ಎಂಬುದರ ಬಗ್ಗೆ ಆಲೋಚಿಸಿರಿ. ನೀವು ಯಾರೊಂದಿಗೆ ಮಾತಾಡುತ್ತೀರೊ ಆ ವ್ಯಕ್ತಿಗೆ ತಕ್ಕಂತೆ ನಿಮ್ಮ ನಿರೂಪಣೆಯನ್ನು ಹೊಂದಿಸಿಕೊಳ್ಳುವುದು ಅವರಲ್ಲಿ ನಿಮಗೆ ಯಥಾರ್ಥವಾದ ಆಸಕ್ತಿಯಿದೆ ಎಂಬುದನ್ನು ತೋರಿಸುತ್ತದೆ.—1 ಕೊರಿಂ. 9:22.
3 ನೀವು ತಯಾರಿಸಿದ ನಿರೂಪಣೆಯನ್ನು ಉಪಯೋಗಿಸಲು ಪ್ರಾರಂಭಿಸಿದ ಬಳಿಕ ಅದನ್ನು ಉತ್ತಮಗೊಳಿಸುತ್ತಾ ಇರಿ. ಆರಂಭದ ಮಾತುಗಳು ವಿಶೇಷವಾಗಿ ಪ್ರಾಮುಖ್ಯವಾಗಿರುವುದರಿಂದ ಜನರು ನಿಮ್ಮ ಪೀಠಿಕೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಗಮನಿಸಿರಿ. ತಿಳಿಸಲ್ಪಡುತ್ತಿರುವಂಥ ವಿಚಾರವು ಅವರಿಗೆ ಆಸಕ್ತಿಕರವಾಗಿದೆಯೊ? ನೀವು ಕೇಳುವ ಪ್ರಶ್ನೆಗಳು ಪ್ರತಿಕ್ರಿಯೆಯನ್ನು ಬರಮಾಡುತ್ತವೊ? ಇಲ್ಲದಿದ್ದಲ್ಲಿ, ನಿರೂಪಣೆಯು ಪರಿಣಾಮಕಾರಿಯಾಗಿದೆ ಎಂದು ನೀವು ಕಂಡುಕೊಳ್ಳುವ ವರೆಗೂ ಅದನ್ನು ಸರಿಪಡಿಸುತ್ತಾ ಇರಿ.
4 ಜ್ಞಾಪಿಸಿಕೊಳ್ಳಲು ಸಹಾಯಕಗಳು: ಅನೇಕರಿಗೆ ಮನೆಯವರ ಬಾಗಿಲ ಬಳಿ ನಿಂತಿರುವಾಗ ನಿರೂಪಣೆಯನ್ನು ಜ್ಞಾಪಿಸಿಕೊಳ್ಳುವುದು ಕಷ್ಟಕರವಾಗುತ್ತದೆ. ಒಂದುವೇಳೆ ನಿಮಗೆ ಹಾಗಾಗುವುದಾದರೆ, ನಿರೂಪಣೆಯನ್ನು ಇನ್ನೊಬ್ಬ ವ್ಯಕ್ತಿಗೆ ಗಟ್ಟಿಯಾಗಿ ಹೇಳಿ ಪ್ರ್ಯಾಕ್ಟಿಸ್ ಮಾಡುವುದನ್ನು ನೀವು ಪ್ರಯತ್ನಿಸಿದ್ದೀರೊ? ಇದು ವಿಷಯಗಳನ್ನು ಮನಸ್ಸಿನಲ್ಲಿ ಸ್ಪಷ್ಟವಾಗಿಟ್ಟುಕೊಳ್ಳಲು ಮತ್ತು ಅವನ್ನು ಸರಳವಾದ, ತರ್ಕಬದ್ಧವಾದ ರೀತಿಯಲ್ಲಿ ಪ್ರಸ್ತುತಪಡಿಸಲು ನಿಮಗೆ ಸಹಾಯ ನೀಡಸಾಧ್ಯವಿದೆ. ಇದು, ಮನೆಯವರು ತೋರಿಸಬಹುದಾದ ಬೇರೆ ಬೇರೆ ಪ್ರತಿಕ್ರಿಯೆಗಳನ್ನು ನಿರ್ವಹಿಸಲು ಸಹ ನಿಮ್ಮನ್ನು ಸಿದ್ಧಗೊಳಿಸಸಾಧ್ಯವಿದೆ.
5 ನಿರೂಪಣೆಯ ಸಂಕ್ಷಿಪ್ತ ಟಿಪ್ಪಣಿಯನ್ನು ಒಂದು ಚಿಕ್ಕ ಕಾರ್ಡ್ನಲ್ಲಿ ಬರೆದುಕೊಳ್ಳುವುದು ಜ್ಞಾಪಿಸಿಕೊಳ್ಳಲಿಕ್ಕಾಗಿರುವ ಇನ್ನೊಂದು ಸಹಾಯಕವಾಗಿದೆ. ಮನೆಯವರ ಬಾಗಿಲ ಬಳಿ ಹೋಗುವುದಕ್ಕೆ ಸ್ವಲ್ಪ ಮುಂಚೆ ಅದರ ಮೇಲೊಮ್ಮೆ ಕಣ್ಣಾಡಿಸಿರಿ. ಹೀಗೆ ಮರುಜ್ಞಾಪಿಸಿಕೊಳ್ಳಲು ಒಂದು ಚಿಕ್ಕ ಕಾರ್ಡನ್ನು ಇಟ್ಟುಕೊಳ್ಳುವುದು ನಿಶ್ಚಿಂತರಾಗಿರಲು ಸಹಾಯಮಾಡುತ್ತದೆ ಮತ್ತು ಜನರೊಂದಿಗೆ ಹೆಚ್ಚು ಉತ್ತಮವಾಗಿ ಸಂಭಾಷಿಸಲು ಶಕ್ತಗೊಳಿಸುತ್ತದೆ ಎಂದು ಕೆಲವರು ಕಂಡುಕೊಂಡಿದ್ದಾರೆ. ಈ ರೀತಿಗಳಲ್ಲಿ, ಒಳ್ಳೇ ತಯಾರಿಯು ಇತರರಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸುವಂತೆ ನಮಗೆ ನೆರವು ನೀಡಸಾಧ್ಯವಿದೆ ಮತ್ತು ಹೀಗೆ ಸುವಾರ್ತೆಯ ನಮ್ಮ ನಿರೂಪಣೆಯನ್ನು ಉತ್ತಮಗೊಳಿಸಸಾಧ್ಯವಿದೆ.