“ಬಿಡುಗಡೆಯು ಸಮೀಪವಿದೆ!” ಜಿಲ್ಲಾ ಅಧಿವೇಶನದ ಕುರಿತು ಪ್ರಕಟಪಡಿಸಲು ಒಂದು ಲೋಕವ್ಯಾಪಕ ಕಾರ್ಯಾಚರಣೆ
ಪ್ರತಿ ಸಭೆಯಲ್ಲಿರುವ ಪ್ರಚಾರಕರು ವಿಶೇಷ ಕರಪತ್ರವನ್ನು ವಿತರಿಸುವರು
1 ಉತ್ತರಾರ್ಧಗೋಳದಲ್ಲಿ 2006ರ ವಸಂತಕಾಲದಿಂದ ಆರಂಭಿಸಿ, ಲೋಕದಾದ್ಯಂತ ಸುಮಾರು 155 ದೇಶಗಳಲ್ಲಿ ಸರಣಿಯಾಗಿ ಜಿಲ್ಲಾ ಅಧಿವೇಶನಗಳು ನಡೆಯಲಿವೆ. ಒಂದು ವಿಶೇಷ ಕರಪತ್ರವನ್ನು ಉಪಯೋಗಿಸಿ ಈ ಅಧಿವೇಶನಗಳ ಕುರಿತು ಪ್ರಕಟಪಡಿಸಲು ಭೂವ್ಯಾಪಕ ಕಾರ್ಯಾಚರಣೆಯೊಂದನ್ನು ಕೈಗೊಳ್ಳಲಾಗುವುದು. ಈ ಕಾರ್ಯಾಚರಣೆಯಲ್ಲಿ, 2006ರ ಜುಲೈ ತಿಂಗಳಿನಲ್ಲಿ ಮತ್ತು ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಜರ್ಮನಿ, ಚೆಕ್ ರಿಪಬ್ಲಿಕ್ ಮತ್ತು ಪೋಲೆಂಡ್ನಲ್ಲಿ ನಡೆಸಲು ಯೋಜಿಸಲಾಗಿರುವ ವಿಶೇಷ ಅಧಿವೇಶನಗಳು ಒಳಗೂಡಿರುವವು.
2 ನಾವು ಕಡೇ ದಿವಸಗಳ ಅಂತಿಮ ಭಾಗದಲ್ಲಿ ಜೀವಿಸುತ್ತಿದ್ದೇವೆ; ಆದುದರಿಂದ, ಈ ದುಷ್ಟ ವ್ಯವಸ್ಥೆಯಿಂದ ಬಿಡಗಡೆಯನ್ನುಂಟುವ ದೇವರ ವಾಗ್ದಾನವನ್ನು ಎತ್ತಿತೋರಿಸುವಂಥ ಈ ಅಧಿವೇಶನಗಳು ಯೋಗ್ಯ ಪ್ರವೃತ್ತಿಯಿರುವ ಜನರಿಗೆ ಹೆಚ್ಚು ಆಕರ್ಷಕವಾಗಿ ಕಂಡುಬರುವವು. ಆ ಸಂದೇಶವು ಭವಿಷ್ಯತ್ತಿನಲ್ಲಿ ಏನು ಕಾದಿದೆ ಎಂಬುದನ್ನು ಪರಿಗಣಿಸಲು ಅವರನ್ನು ಪ್ರೇರೇಪಿಸುವುದು. ಲಕ್ಷಾಂತರ ಜನರಿಗೆ ಸಾಂತ್ವನ ಮತ್ತು ನಿರೀಕ್ಷೆಯ ಸಂದೇಶವನ್ನು ಕೇಳಿಸಿಕೊಳ್ಳುವ ಅವಕಾಶದ ಕುರಿತು ಪ್ರಕಟಪಡಿಸುವ ಕಾರ್ಯದಲ್ಲಿ ಉತ್ಸಾಹಪೂರ್ವಕವಾಗಿ ಭಾಗವಹಿಸುವಂತೆ ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ 98,000ಕ್ಕಿಂತಲೂ ಅಧಿಕ ಸಭೆಗಳನ್ನು ಪ್ರೋತ್ಸಾಹಿಸಲಾಗಿದೆ. ಈ ಸಭೆಗಳವರು ತಮ್ಮ ಸಭೆಯು ಆಮಂತ್ರಿಸಲ್ಪಟ್ಟಿರುವ ಅಧಿವೇಶನಗಳ ಬಗ್ಗೆ ಪ್ರಕಟಪಡಿಸುವರು.
3 ಪ್ರತಿಯೊಬ್ಬ ಪ್ರಚಾರಕರಿಗೆ ಅವರು ನೇಮಿಸಲ್ಪಟ್ಟಿರುವ ಅಧಿವೇಶನದ ಭಾಷೆಯಲ್ಲಿ ಗರಿಷ್ಠ 15 ಕರಪತ್ರಗಳು ದೊರೆಯುವಂತೆ ಮಾಡಲಿಕ್ಕಾಗಿ ಸಭೆಗಳಿಗೆ ಸಾಕಷ್ಟು ಕರಪತ್ರಗಳನ್ನು ಕಳುಹಿಸಲಾಗುವುದು. ಅಧಿವೇಶನದ ನಗರದಲ್ಲಿರುವ ಪ್ರತಿಯೊಬ್ಬ ಪ್ರಚಾರಕನು 30 ಕರಪತ್ರಗಳನ್ನು ಪಡೆದುಕೊಳ್ಳುವನು. ಹೆಚ್ಚಿನ ಸರಬರಾಯಿ ಇದ್ದಲ್ಲಿ ಸಭೆಯಲ್ಲಿರುವ ಪಯನೀಯರರು ಅದನ್ನು ಉಪಯೋಗಿಸಬಹುದು. ಪ್ರತಿಯೊಂದು ಸಭೆಯಲ್ಲಿ, ಆ ಸಭೆಯು ನೇಮಿಸಲ್ಪಟ್ಟಿರುವ ಅಧಿವೇಶನವು ಪ್ರಾರಂಭವಾಗುವ ತಾರೀಖಿಗಿಂತ ಸರಿಯಾಗಿ ಮೂರು ವಾರಗಳಿಗೆ ಮುಂಚೆ ಈ ಕಾರ್ಯಾಚರಣೆಯನ್ನು ಆರಂಭಿಸಲಾಗುವುದು. ಎಲ್ಲ ಕಡೆಗಳಲ್ಲಿ ಸಾಧ್ಯವಾಗದಿದ್ದರೂ, ಸಭೆಯ ಹೆಚ್ಚಿನಾಂಶ ಟೆರಿಟೊರಿಯನ್ನು ಆವರಿಸಲು ಈ ಸಮಯವು ಸಾಕಾಗುವುದು.
4 ಪ್ರಚಾರಕರು ಅಧಿವೇಶನ ನಡೆಯಲಿರುವ ಸ್ಥಳ ಮತ್ತು ತಾರೀಖುಗಳನ್ನು ಬರೆಯಲು ಕರಪತ್ರದ ಹಿಂಬದಿಯಲ್ಲಿ ಸ್ಥಳಾವಕಾಶವಿರುವುದು. ಎಲ್ಲೆಲ್ಲಿ ಸಾಧ್ಯವೊ ಅಲ್ಲೆಲ್ಲಾ ಈ ಕರಪತ್ರವನ್ನು ಮನೆಯವರಿಗೆ ವೈಯಕ್ತಿಕವಾಗಿ ನೀಡುವಂತೆ ಶಿಫಾರಸುಮಾಡಲಾಗಿದೆ. ಆದರೂ ಮನೆಯಲ್ಲಿ ಯಾರೂ ಇರದ ಪಕ್ಷದಲ್ಲಿ ಮನೆಯವರ ಗಮನಕ್ಕೆಬರುವಂಥ ಸ್ಥಳದಲ್ಲಿ ಮಾತ್ರ ಕರಪತ್ರವನ್ನು ಬಿಟ್ಟುಬರಬಹುದು. ಅಧಿವೇಶನ ನಡೆಯಲಿಕ್ಕಿರುವ ನಗರದಲ್ಲಿ ವಾಸಿಸದ ಪ್ರಚಾರಕರು, ತಾವು ಯಾರನ್ನು ಪುನರ್ಭೇಟಿ ಮಾಡುತ್ತಾರೋ ಮತ್ತು ಯಾರೊಂದಿಗೆ ಬೈಬಲ್ ಅಧ್ಯಯನಗಳನ್ನು ನಡೆಸುತ್ತಾರೋ ಅವರನ್ನು ಆಮಂತ್ರಿಸಲು ಈ ಕರಪತ್ರವನ್ನು ಉಪಯೋಗಿಸಬಹುದು. ಮಾತ್ರವಲ್ಲದೆ, ಅಧಿವೇಶನಕ್ಕೆ ಪ್ರಯಾಣಿಸುವಾಗ ಕೂಡ ಈ ಕರಪತ್ರಗಳನ್ನು ಉಪಯೋಗಿಸಸಾಧ್ಯವಿದೆ. ಈ ಮೂರು ವಾರಗಳ ಸಮಯದಲ್ಲಿ ಎಲ್ಲ ಕರಪತ್ರಗಳನ್ನು ವಿತರಿಸಲು ಶ್ರದ್ಧಾಪೂರ್ವಕ ಪ್ರಯತ್ನವನ್ನು ಮಾಡಬೇಕು.
5 ಈ ಲೇಖನದಲ್ಲಿ ವಿವರಿಸಲ್ಪಟ್ಟಿರುವಂತೆ, “ಬಿಡುಗಡೆಯು ಸಮೀಪವಿದೆ!” ಜಿಲ್ಲಾ ಅಧಿವೇಶನದ ಬಗ್ಗೆ ಲೋಕವ್ಯಾಪಕವಾಗಿ ಪ್ರಕಟಪಡಿಸಲು ಮಾಡಲಾಗುವ ಈ ತೀವ್ರ ಪ್ರಯತ್ನದಿಂದ ಮಹತ್ತರವಾದ ಸಾಕ್ಷಿಯು ನೀಡಲ್ಪಡುವುದೆಂಬ ಖಾತ್ರಿ ನಮಗಿದೆ. ಈ ಲೋಕವ್ಯಾಪಕ ಪ್ರಕಟಪಡಿಸುವ ಕಾರ್ಯದಲ್ಲಿ ಭಾಗವಹಿಸುವಾಗ ನಿಮ್ಮ ವೈಯಕ್ತಿಕ ಪ್ರಯತ್ನಗಳ ಮೇಲೆ ಯೆಹೋವನ ಸಮೃದ್ಧ ಆಶೀರ್ವಾದಗಳಿರಲಿ ಎಂದು ನಾವು ಪ್ರಾರ್ಥಿಸುತ್ತೇವೆ.