ಸೇವಾ ಕೂಟದ ಭಾಗಗಳನ್ನು ನಡೆಸುವವರಿಗೆ ಸೂಚನೆಗಳು
ನಮ್ಮ ರಾಜ್ಯ ಸೇವೆಯ ಈ ಸಂಚಿಕೆಯಿಂದ ಆರಂಭಿಸಿ ಸೇವಾ ಕೂಟದ ಶೆಡ್ಯೂಲಿನ ಪದಪ್ರಯೋಗವನ್ನು ಸರಳೀಕರಿಸಲಾಗಿದೆ. ಮೇ 2009ರ ನಮ್ಮ ರಾಜ್ಯ ಸೇವೆಯಲ್ಲಿ “ಸೇವಾ ಕೂಟಕ್ಕೆ ತಯಾರಿಸುವ ವಿಧ” ಎಂಬ ಲೇಖನದಲ್ಲಿದ್ದ ವಿಷಯವನ್ನು ಈ ಕೆಳಕಂಡ ಸೂಚನೆಗಳೂ ಮರುಜ್ಞಾಪನಗಳೂ ಸದ್ಯೋಚಿತಗೊಳಿಸುತ್ತವೆ ಮತ್ತು ಸ್ಪಷ್ಟೀಕರಿಸುತ್ತವೆ.
◼ ಭಾಷಣ: ಇದಕ್ಕಾಗಿ ವಿಷಯಭಾಗವನ್ನು ನೇಮಿಸಲಾಗುತ್ತದೆ ಮತ್ತು ಇದರಲ್ಲಿ ಸಭಿಕರ ಭಾಗವಹಿಸುವಿಕೆ ಇರುವುದಿಲ್ಲ. ವಿಷಯಭಾಗದಲ್ಲಿ ಸಭೆಗೆ ಅತ್ಯಂತ ಉಪಯುಕ್ತವಾದ ಅಂಶಗಳನ್ನು ಮಾತ್ರ ಭಾಷಣಕಾರನು ಎತ್ತಿಹೇಳಬೇಕು.
◼ ಪ್ರಶ್ನೋತ್ತರ: ಕಾವಲಿನಬುರುಜು ಅಧ್ಯಯನದಂತೆ ಈ ಭಾಗಕ್ಕೆ ತೀರ ಚುಟುಕಾದ ಪೀಠಿಕೆ ಹಾಗೂ ಸಮಾಪ್ತಿ ಇರಬೇಕು. ಎಲ್ಲ ಪ್ಯಾರಗಳ ಪ್ರಶ್ನೆಗಳನ್ನು ಕೇಳತಕ್ಕದ್ದು. ಭಾಗ ನಡೆಸುವ ಸಹೋದರನು ಹೆಚ್ಚು ಮಾತಾಡಬಾರದು. ಸಮಯವಿದ್ದರೆ ಮುಖ್ಯ ವಚನಗಳನ್ನು ಓದಿಸಬಹುದು. ಪ್ಯಾರಗಳನ್ನು ಓದಬೇಕೆಂಬ ಸೂಚನೆ ಕೊಡಲ್ಪಡದಿದ್ದಲ್ಲಿ ಅವುಗಳನ್ನು ಓದಬಾರದು.
◼ ಚರ್ಚೆ: ಇದೊಂದು ಭಾಷಣವಾದರೂ ಇದರಲ್ಲಿ ಸ್ವಲ್ಪಮಟ್ಟಿಗೆ ಸಭಿಕರು ಭಾಗವಹಿಸುತ್ತಾರೆ. ಇದು ಬರೀ ಭಾಷಣವೂ ಅಲ್ಲ, ಬರೀ ಪ್ರಶ್ನೋತ್ತರವೂ ಅಲ್ಲ.
◼ ಪ್ರತ್ಯಕ್ಷಾಭಿನಯಗಳು ಮತ್ತು ಇಂಟರ್ವ್ಯೂಗಳು: ಪ್ರತ್ಯಕ್ಷಾಭಿನಯಿಸಿ ಎಂಬ ಸೂಚನೆಯ ಅರ್ಥ, ಆ ಭಾಗಕ್ಕೆ ನೇಮಿತನಾದ ಸಹೋದರನು ಪ್ರತ್ಯಕ್ಷಾಭಿನಯವನ್ನು ಏರ್ಪಡಿಸುವನು. ಅವನು ಸ್ವತಃ ಆ ಪ್ರತ್ಯಕ್ಷಾಭಿನಯ ಮಾಡಬೇಕಾಗಿಲ್ಲ. ಪ್ರತ್ಯಕ್ಷಾಭಿನಯಕ್ಕಾಗಿ ಸಮರ್ಥರೂ ಆದರ್ಶಪ್ರಾಯರೂ ಆದ ಪ್ರಚಾರಕರನ್ನು ಆರಿಸಬೇಕು. ಇದಕ್ಕಾಗಿ ಅವನು ಸಾಧ್ಯವಿರುವಲ್ಲಿ ಬಹಳ ಸಮಯ ಮುಂಚೆಯೇ ಅವರೊಂದಿಗೆ ಏರ್ಪಾಡು ಮಾಡಬೇಕು. ಹೊಸ, ಅನನುಭವಿ ಪ್ರಚಾರಕರಿಗೆ ವೇದಿಕೆ ಮೇಲೆ ಹೋಗಲು ಅವಕಾಶ ಕೊಡುವ ಉದ್ದೇಶದಿಂದ ಅವರಿಂದ ಪ್ರತ್ಯಕ್ಷಾಭಿನಯ ಮಾಡಿಸದೇ ಇರುವುದು ಉತ್ತಮ. ಆದರೆ ಕೆಲವರನ್ನು ಮನೆಯವರಾಗಿ ಬಳಸಬಹುದು. ಪ್ರತ್ಯಕ್ಷಾಭಿನಯ ಮಾಡುತ್ತಿರುವ ಪ್ರಚಾರಕರ ಮುಖ ಸಭಿಕರಿಗೆ ಕಾಣತಕ್ಕದ್ದು. ಇಂಟರ್ವ್ಯೂ ಕೊಡುವವರು ತಮ್ಮ ಆಸನದಿಂದಲ್ಲ ಬದಲಾಗಿ ವೇದಿಕೆಯಿಂದ ಹೇಳಿಕೆಗಳನ್ನು ಕೊಡಬೇಕು. ಪ್ರತ್ಯಕ್ಷಾಭಿನಯಗಳನ್ನೂ ಇಂಟರ್ವ್ಯೂಗಳನ್ನೂ ರಿಹರ್ಸ್ಮಾಡತಕ್ಕದ್ದು. ಕೂಟದ ಸಮಯ ಮೀರುತ್ತಿರುವಲ್ಲಿ ಸಹೋದರನು ತನ್ನ ಭಾಗವನ್ನು ಮೊಟಕುಗೊಳಿಸಬೇಕಾದೀತು. ಆದರೆ ಪ್ರತ್ಯಕ್ಷಾಭಿನಯಗಳನ್ನು ಇಲ್ಲವೆ ಇಂಟರ್ವ್ಯೂಗಳನ್ನು ರದ್ದುಗೊಳಿಸಬಾರದು. ಶುಶ್ರೂಷಾ ಸೇವಕರು ಪ್ರತ್ಯಕ್ಷಾಭಿನಯ ಇಲ್ಲವೇ ಇಂಟರ್ವ್ಯೂಗಳಿಗಾಗಿ ಯಾರನ್ನೇ ಆರಿಸುವ ಮುಂಚೆ ಹಿರಿಯರ ಮಂಡಲಿಯ ಸಂಯೋಜಕನನ್ನೊ ಇನ್ನೊಬ್ಬ ಹಿರಿಯನನ್ನೊ ಮೊದಲು ಕೇಳಿನೋಡಬೇಕು.
ಯಾವುದಾದರೊಂದು ಭಾಗವು ಭಿನ್ನವಾಗಿದ್ದು, ಅದಕ್ಕೆ ವಿಶೇಷ ಸೂಚನೆಗಳನ್ನು ಕೊಡಲಾಗಿರುವಲ್ಲಿ ಅವುಗಳನ್ನು ಚಾಚೂತಪ್ಪದೇ ಪಾಲಿಸತಕ್ಕದ್ದು. ಈ ಎಲ್ಲ ಸೂಚನೆಗಳಿಗನುಸಾರ ಸೇವಾ ಕೂಟದ ಭಾಗಗಳನ್ನು ನಿರ್ವಹಿಸುವ ಮೂಲಕ ಕೂಟಗಳು “ಸಭ್ಯವಾಗಿಯೂ ಕ್ರಮವಾಗಿಯೂ ನಡೆ”ಯುವಂತೆ ಸಹೋದರರು ನೆರವಾಗುವರು.—1 ಕೊರಿಂ. 14:40.