ಮನೆಯವನು ಯೋಚಿಸಿ ತೀರ್ಮಾನಕ್ಕೆ ಬರುವಂತೆ ನೆರವಾಗಿ
1. ಶುಶ್ರೂಷೆಯಲ್ಲಿ ಯಾವ ವಿಧಾನ ಅತ್ಯುತ್ತಮ?
1 ಶುಶ್ರೂಷೆಯಲ್ಲಿ ಯಾವ ವಿಧಾನ ಹೆಚ್ಚು ಪರಿಣಾಮಕಾರಿ? ನೀವು ಹೇಳಿದ್ದೇ ಸರಿಯೆಂದು ವಾದಿಸುವ ವಿಧದಲ್ಲಿ ಮಾತಾಡುವುದೊ, ಮನೆಯವನು ಯೋಚಿಸಿ ಸರಿಯಾದ ತೀರ್ಮಾನಕ್ಕೆ ಬರುವಂತೆ ನೆರವಾಗುವುದೊ? ಈ ಎರಡನೇ ವಿಧದಲ್ಲಿ ಅಪೊಸ್ತಲ ಪೌಲನು ಥೆಸಲೊನೀಕದ ಯೆಹೂದ್ಯರೊಂದಿಗೆ ಮಾತಾಡಿದನು. “ಇದರ ಪರಿಣಾಮವಾಗಿ ಅವರಲ್ಲಿ ಕೆಲವರು ವಿಶ್ವಾಸಿಗಳಾದರು.” (ಅ.ಕಾ. 17:2-4) ಇತರರು ಯೋಚಿಸಿ ತೀರ್ಮಾನಕ್ಕೆ ಬರಲು ನೆರವಾಗುವುದರಲ್ಲಿ ಏನೆಲ್ಲ ಸೇರಿದೆ?
2. ಸುವಾರ್ತೆ ಸಾರುವಾಗ ಪೌಲನ ಮಾದರಿಯನ್ನು ಹೇಗೆ ಅನುಕರಿಸಬಲ್ಲೆವು?
2 ಅನಿಸಿಕೆ, ಹಿನ್ನೆಲೆಗಳಿಗೆ ಗಮನಕೊಡಿ: ನಿಮ್ಮ ಟೆರಿಟೊರಿಯಲ್ಲಿರುವ ಜನರು ಯೋಚಿಸಿ ತೀರ್ಮಾನಕ್ಕೆ ಬರುವಂತೆ ನೆರವಾಗಬೇಕಾದರೆ ಅವರ ಅನಿಸಿಕೆಗಳನ್ನು ಮನಸ್ಸಿನಲ್ಲಿಡಬೇಕು. ಪೌಲನು ಆರಿಯೋಪಾಗದಲ್ಲಿ ಅವಿಶ್ವಾಸಿ ಗ್ರೀಕ್ ಜನರನ್ನು ಉದ್ದೇಶಿಸಿ ಮಾತಾಡಿದಾಗ, ಅವರಿಗೆ ತಿಳಿದಿದ್ದ ಹಾಗೂ ಅವರು ಅಂಗೀಕರಿಸಿದ್ದ ವಿಷಯಗಳನ್ನು ಆರಂಭದಲ್ಲಿ ತಿಳಿಸಿದನು. (ಅ.ಕಾ. 17:22-31) ಹಾಗೆಯೇ ನಿಮ್ಮ ಟೆರಿಟೊರಿಯ ಜನರ ಸಾಮಾನ್ಯ ನಂಬಿಕೆಗಳು, ಪೂರ್ವಕಲ್ಪಿತ ಅಭಿಪ್ರಾಯಗಳನ್ನು ಮನಸ್ಸಿನಲ್ಲಿಟ್ಟು ನಿಮ್ಮ ನಿರೂಪಣೆಯನ್ನು ತಯಾರಿಸಿ. (1 ಕೊರಿಂ. 9:19-22) ಮನೆಯವನು ಏನಾದರೂ ಆಕ್ಷೇಪವೆತ್ತಿದರೆ, ನೀವಿಬ್ಬರೂ ಒಪ್ಪಿಕೊಳ್ಳುವ ಒಂದು ಸಾಮಾನ್ಯ ಅಂಶವನ್ನು ಅದರಿಂದ ಆರಿಸಿ ಆ ಆಧಾರದಲ್ಲೇ ನಿಮ್ಮ ಸಂಭಾಷಣೆಯನ್ನು ಮುಂದುವರಿಸಿ.
3. ಪ್ರಶ್ನೆಗಳನ್ನು ಕೌಶಲದಿಂದ ಬಳಸುವುದರ ಮೂಲಕ ಇತರರು ಯೋಚಿಸುವಂತೆ ಮಾಡುವುದರಲ್ಲಿ ಹೇಗೆ ಹೆಚ್ಚು ಪರಿಣಾಮಕಾರಿ ಆಗಬಲ್ಲೆವು?
3 ಪ್ರಶ್ನೆಗಳನ್ನು ಕೌಶಲದಿಂದ ಬಳಸಿ: ಪ್ರಯಾಣಿಕನೊಬ್ಬನು ತನ್ನ ಗಮ್ಯಸ್ಥಾನ ತಲಪುವುದು ಹೇಗೆಂದು ನಮ್ಮನ್ನು ಕೇಳಿದರೆ, ಅವನು ಸದ್ಯ ಎಲ್ಲಿದ್ದಾನೆಂದು ತಿಳಿದುಕೊಂಡ ಬಳಿಕವೇ ನಿರ್ದೇಶನ ಕೊಡಬಲ್ಲೆವು. ಹಾಗೆಯೇ, ಮನೆಯವರ ಸದ್ಯದ ಅಭಿಪ್ರಾಯವೇನೆಂದು ತಿಳಿದುಕೊಂಡರೆ ಮಾತ್ರ ನಾವು ಅವರಿಗೆ ಸರಿಯಾದ ತೀರ್ಮಾನಕ್ಕೆ ಬರುವಂತೆ ನೆರವಾಗಬಲ್ಲೆವು. ಯೇಸು ತನಗೆ ಕಿವಿಗೊಡುತ್ತಿರುವ ವ್ಯಕ್ತಿಯೊಂದಿಗೆ ತರ್ಕಬದ್ಧವಾಗಿ ಮಾತಾಡುವ ಮೊದಲು, ಆ ವ್ಯಕ್ತಿಯ ಯೋಚನಾಧಾಟಿಯನ್ನು ತಿಳಿಯಲು ಅನೇಕವೇಳೆ ಪ್ರಶ್ನೆಗಳನ್ನು ಬಳಸಿದನು. ಉದಾಹರಣೆಗೆ, “ಏನು ಮಾಡುವುದಾದರೆ ನಾನು ನಿತ್ಯಜೀವಕ್ಕೆ ಬಾಧ್ಯನಾಗುತ್ತೇನೆ?” ಎಂದು ಒಬ್ಬನು ಕೇಳಿದಾಗ ಯೇಸು ಉತ್ತರ ಕೊಡುವ ಮುಂಚೆ ಅವನ ದೃಷ್ಟಿಕೋನವನ್ನು ಕೇಳಿ ತಿಳಿದುಕೊಂಡನು. (ಲೂಕ 10:25-28) ಇನ್ನೊಂದು ಸಂದರ್ಭದಲ್ಲಿ ಪೇತ್ರನು ತಪ್ಪು ಉತ್ತರ ಕೊಟ್ಟಾಗ, ಅವನ ಯೋಚನಾಧಾಟಿಯನ್ನು ತಿದ್ದಲು ಯೇಸು ಪ್ರಶ್ನೆಗಳನ್ನು ಕೌಶಲದಿಂದ ಬಳಸಿದನು. (ಮತ್ತಾ. 17:24-26) ಆದ್ದರಿಂದ, ಮನೆಯವನು ಒಂದು ಪ್ರಶ್ನೆ ಕೇಳಿದರೆ ಇಲ್ಲವೆ ತಪ್ಪು ಉತ್ತರ ಕೊಟ್ಟರೆ, ಅವನು ಯೋಚಿಸಿ ಸರಿಯಾದ ತೀರ್ಮಾನಕ್ಕೆ ಬರುವಂತೆ ನೆರವಾಗಲು ನಾವು ಪ್ರಶ್ನೆಗಳನ್ನು ಬಳಸಬಹುದು.
4. ಮನೆಯವನು ಯೋಚಿಸಿ ತೀರ್ಮಾನಕ್ಕೆ ಬರುವಂತೆ ಏಕೆ ಸಹಾಯ ಮಾಡಬೇಕು?
4 ಮನೆಯವನು ಯೋಚಿಸಿ ತೀರ್ಮಾನಕ್ಕೆ ಬರುವಂತೆ ಮಾಡಲು ನೆರವಾಗುವ ಮೂಲಕ ನಾವು ಮಹಾ ಬೋಧಕನಾದ ಯೇಸುವನ್ನೂ, ಪ್ರಥಮ ಶತಮಾನದ ಇತರ ಕುಶಲ ಸೌವಾರ್ತಿಕರನ್ನೂ ಅನುಕರಿಸುವೆವು. ಹೀಗೆ ಮನೆಯವನಿಗೆ ಮಾನಮರ್ಯಾದೆಯನ್ನೂ ತೋರಿಸುತ್ತೇವೆ. (1 ಪೇತ್ರ 3:15) ಇದರಿಂದಾಗಿ, ಅವನು ಪುನರ್ಭೇಟಿಗೆ ಒಪ್ಪಲೂಬಹುದು.