ಸಾರುವ ಮುನ್ನ ನೀವು ಹುಡುಕಬೇಕಾಗಬಹುದು
1. ಬಹುಭಾಷೀಯ ಪ್ರದೇಶಗಳಲ್ಲಿ ಸಭೆಗಳಿಗೆ ಸೇವಾಕ್ಷೇತ್ರಗಳನ್ನು ಭಾಷಾನುಸಾರ ಏಕೆ ನೇಮಿಸಲಾಗುತ್ತದೆ?
1 ಸಾ.ಶ.33ರ ಪಂಚಾಶತ್ತಮದಂದು, ಯೇಸುವಿನ ಶಿಷ್ಯರು ಪವಿತ್ರಾತ್ಮ ಪಡೆದ ನಂತರ ದೂರ ದೂರದ ದೇಶಗಳಿಂದ ನೆರೆದು ಬಂದಿದ್ದವರ ಮುಂದೆ “ಬೇರೆ ಬೇರೆ ಭಾಷೆಗಳಲ್ಲಿ ಮಾತಾಡಲಾರಂಭಿಸಿದರು.” (ಅ. ಕಾ. 2:4) ಫಲಿತಾಂಶ, ಸುಮಾರು 3,000 ಜನರು ದೀಕ್ಷಾಸ್ನಾನ ಪಡೆದರು. ಗಮನಾರ್ಹ ವಿಷಯವೇನೆಂದರೆ, ನೆರೆದು ಬಂದವರಲ್ಲಿ ಹೆಚ್ಚಿನವರಿಗೆ ಹೀಬ್ರು ಇಲ್ಲವೆ ಗ್ರೀಕ್ ಭಾಷೆ ಬರುತ್ತಿತ್ತು. ಆದರೂ ಯೆಹೋವನು ಅವರವರ ಸ್ವಂತ ಭಾಷೆಯಲ್ಲೇ ರಾಜ್ಯದ ಸುವಾರ್ತೆಯನ್ನು ಕೇಳಿಸಿಕೊಳ್ಳುವಂತೆ ಮಾಡಿದನು. ಏಕೆ? ಒಂದು ಕಾರಣ, ಹೆಚ್ಚಿನ ಜನರು ತಮ್ಮ ಸ್ವಂತ ಭಾಷೆಯಲ್ಲಿ ಸುವಾರ್ತೆಯನ್ನು ಕೇಳುವಾಗ ಕೂಡಲೆ ಸ್ಪಂದಿಸುತ್ತಾರೆ. ಹಾಗಾಗಿ ಇಂದು ಬಹುಭಾಷೀಯ ಪ್ರದೇಶಗಳಲ್ಲಿ ಸಭೆಗಳಿಗೆ ಸೇವಾಕ್ಷೇತ್ರಗಳನ್ನು ಭಾಷಾನುಸಾರ ನೇಮಿಸಲಾಗುತ್ತದೆ. (ಸಂಘಟಿತರು, ಪು. 107, ಪ್ಯಾರ 2-3) ಭಾಷಾ ಗುಂಪುಗಳಿಗೆ ಒಂದು ನಿರ್ದಿಷ್ಟ ಸೇವಾಕ್ಷೇತ್ರ ನೇಮಿಸಲಾಗುವುದಿಲ್ಲ. ಬದಲಿಗೆ, ಅವು ತಮ್ಮ ಸಭೆಯ ಮತ್ತು ನೆರೆಹೊರೆಯ ಸಭೆಗಳ ಸೇವಾಕ್ಷೇತ್ರದಲ್ಲಿ ನಿರ್ದಿಷ್ಟ ಭಾಷೆಯನ್ನು ಮಾತಾಡುವವರಿಗೆ ಮಾತ್ರ ಸುವಾರ್ತೆ ಸಾರುತ್ತವೆ.
2. (ಎ) ಹುಡುಕುವ ಕೆಲಸ ಎಂದರೇನು? ಎಲ್ಲಿ ಅಗತ್ಯ? (ಬಿ) ಬಹುಭಾಷೀಯ ಸೇವಾಕ್ಷೇತ್ರಗಳಿರುವ ಸಭೆಗಳು ಹೇಗೆ ಒಂದಕ್ಕೊಂದು ನೆರವಾಗಬಹುದು? (ಸಿ) ಬೇರೆ ಭಾಷೆಯನ್ನಾಡುವ ಆಸಕ್ತ ಜನರು ಸಿಗುವಲ್ಲಿ ನಾವೇನು ಮಾಡಬೇಕು?
2 ಎಲ್ಲರೂ ಒಂದೇ ಭಾಷೆ ಮಾತಾಡುವಂಥ ಸ್ಥಳದಲ್ಲಿ, ಒಂದು ಮನೆಯಿಂದ ಇನ್ನೊಂದು ಮನೆಗೆ ಸಾರುತ್ತಾ ಹೋದರಾಯಿತು. ಆದರೆ, ಬಹುಭಾಷೀಯ ಮಹಾನಗರದಲ್ಲಿ ಪರಿಸ್ಥಿತಿ ಭಿನ್ನ. ಅಲ್ಲಿ ಬೇರೆ ಬೇರೆ ಭಾಷೆಯ ಸಭೆಗಳು ಒಂದೇ ಸೇವಾಕ್ಷೇತ್ರದಲ್ಲಿ ಸಾರುತ್ತಿರುತ್ತವೆ. ಸೇವಾಕ್ಷೇತ್ರದಲ್ಲಿ ಬೇರೆ ಬೇರೆ ಭಾಷೆಯನ್ನಾಡುವವರ ಸಂಖ್ಯೆ ಹೆಚ್ಚಿದ್ದರೆ, ಒಂದರ ನಂತರ ಇನ್ನೊಂದು ಭಾಷಾ ಸಭೆ ಆ ಸೇವಾಕ್ಷೇತ್ರದಲ್ಲಿ ಕೆಲಸಮಾಡುವಂತೆ ಆಯಾ ಸಭೆಯ ಸೇವಾ ಮೇಲ್ವಿಚಾರಕರು ಏರ್ಪಾಡು ಮಾಡುತ್ತಾರೆ. ಆದರೆ, ಯಾವುದಾದರೂ ಭಾಷೆಯನ್ನಾಡುವವರ ಸಂಖ್ಯೆ ಕಡಿಮೆಯಿದ್ದಾಗ ಮಾತ್ರ, ಆ ಭಾಷೆಯ ಗುಂಪು ಅಥವಾ ಸಭೆಯು ಅಂಥ ಜನರನ್ನು ಹುಡುಕಲು ಹೆಜ್ಜೆಗಳನ್ನು ತೆಗೆದುಕೊಳ್ಳಬೇಕಾದೀತು. ಒಂದುವೇಳೆ ನಿಮ್ಮ ಸಭೆಯ ಭಾಷೆಯ ಜನರನ್ನು ಬೇರೆ ಸಭೆಯವರು ಭೇಟಿಯಾದರೆ ಅದನ್ನು ನಿಮ್ಮ ಸಭೆಗೆ ತಿಳಿಸುತ್ತಾರೆ. ಹಾಗಿದ್ದರೂ ನಿಮ್ಮ ಸಭೆಯ ಭಾಷೆಯ ಜನರನ್ನು ಹುಡುಕಿ ಸಾರುವ ಜವಾಬ್ದಾರಿ ನಿಮ್ಮ ಸಭೆ ಅಥವಾ ಗುಂಪಿನದ್ದೇ. (“ಒಬ್ಬರಿಗೊಬ್ಬರು ನೆರವಾಗಿ” ಚೌಕ ನೋಡಿ.) ಹುಡುಕುವ ಕೆಲಸ ಅಂದರೆ ನಿರ್ದಿಷ್ಟ ಭಾಷೆಯನ್ನಾಡುವ ಜನರು ಎಲ್ಲೆಲ್ಲಿದ್ದಾರೆ ಎಂದು ವಿಚಾರಿಸಿ ತಿಳಿದುಕೊಳ್ಳುವುದು. ಇದನ್ನು ಮಾಡುವುದು ಹೇಗೆ?
3. ಸಭೆ ಅಥವಾ ಗುಂಪು ಎಲ್ಲಿ ಹುಡುಕಬೇಕು ಮತ್ತು ಈ ಕೆಲಸಕ್ಕೆ ಎಷ್ಟು ಸಮಯ ವ್ಯಯಿಸಬೇಕೆಂಬುದು ಯಾವುದರ ಮೇಲೆ ಹೊಂದಿಕೊಂಡಿರುತ್ತದೆ?
3 ಹುಡುಕುವ ಕೆಲಸವನ್ನು ಸಂಘಟಿಸಿ: ಬಹುಭಾಷೀಯ ಪ್ರದೇಶಗಳಲ್ಲಿ ಹುಡುಕುವ ಕೆಲಸಕ್ಕೆ ಎಷ್ಟು ಸಮಯ ವ್ಯಯಿಸಬೇಕು ಎನ್ನುವುದು ಸ್ಥಳಿಕ ಸನ್ನಿವೇಶದ ಮೇಲೆ ಹೊಂದಿಕೊಂಡಿದೆ. ಉದಾಹರಣೆಗೆ, ನೀವು ಹುಡುಕಲಿರುವ ಭಾಷೆಯ ಜನರು ಆ ಸೇವಾಕ್ಷೇತ್ರದಲ್ಲಿ ಎಷ್ಟಿದ್ದಾರೆ? ಸಭೆಯಲ್ಲಿ ಪ್ರಚಾರಕರು ಎಷ್ಟಿದ್ದಾರೆ? ಈಗಾಗಲೇ ಎಷ್ಟು ಜನರ ವಿಳಾಸಗಳು ನಿಮ್ಮ ಸಭೆ ಅಥವಾ ಗುಂಪಿನ ಬಳಿ ಇವೆ? ಸಭೆಯು ಸೇವಾಕ್ಷೇತ್ರದ ಎಲ್ಲಾ ಕಡೆ ಒಂದೇ ತೆರನಾಗಿ ಹುಡುಕಬೇಕೆಂದಿಲ್ಲ. ಜನನಿಬಿಡ ಮತ್ತು ತಲುಪಲಿಕ್ಕಾಗುವಷ್ಟು ದೂರದ ಪ್ರದೇಶಗಳಿಗೆ ಹೆಚ್ಚು ಗಮನ ಕೊಟ್ಟರೆ ಒಳ್ಳೇದು. ಏನೇ ಆಗಿರಲಿ, ಹುಡುಕುವುದಕ್ಕಾಗಿ ಸುಸಂಘಟಿತ ಏರ್ಪಾಡು ತುಂಬಾ ಪ್ರಾಮುಖ್ಯ. ಆಗ ಸಾಧ್ಯವಾದಷ್ಟು ಜನರಿಗೆ ಯೆಹೋವನ ನಾಮದಲ್ಲಿ ಕೋರುವ ಅವಕಾಶ ಸಿಗುವುದು.—ರೋಮ. 10:13, 14.
4. (ಎ) ಹುಡುಕುವ ಕೆಲಸವನ್ನು ಹೇಗೆ ಸಂಘಟಿಸಬೇಕು? (ಬಿ) ನಿಮ್ಮ ಭಾಷೆಯ ಜನರನ್ನು ಹುಡುಕುವ ಕೆಲವು ವಿಧಗಳಾವುವು?
4 ಹಿರಿಯರ ಮಂಡಲಿ, ಮುಖ್ಯವಾಗಿ ಸೇವಾ ಮೇಲ್ವಿಚಾರಕ ಹುಡುಕುವ ಕೆಲಸವನ್ನು ಸಂಘಟಿಸಿ ಅದರ ಉಸ್ತುವಾರಿ ಮಾಡಬೇಕು. ಹೀಗೆ ಮಾಡುವುದರಿಂದ, ಬೇರೆ ಬೇರೆಯವರು ಒಂದೇ ಕಡೆಯಲ್ಲಿ ಹುಡುಕಲು ಹೋಗಿ ಸಮಯ ಹಾಳಾಗುವುದನ್ನು ತಪ್ಪಿಸಬಹುದು. (1 ಕೊರಿಂ. 9:26) ಹುಡುಕುವ ಕೆಲಸವನ್ನು ಒಂದು ಭಾಷಾ ಗುಂಪು ಮಾಡುವಾಗ, ಆ ಗುಂಪು ಯಾವ ಸಭೆಗೆ ಸೇರಿದೆಯೊ ಆ ಸಭೆಯ ಹಿರಿಯರ ಮಂಡಲಿ ಒಬ್ಬ ಅರ್ಹ ಸಹೋದರನನ್ನು (ಹಿರಿಯ ಅಥವಾ ಶುಶ್ರೂಷಾ ಸೇವಕನಾಗಿದ್ದರೆ ಉತ್ತಮ) ಉಸ್ತುವಾರಿ ಮಾಡುವಂತೆ ನೇಮಿಸಬೇಕು. ಅನೇಕ ಸಭೆಗಳು ಮತ್ತು ಗುಂಪುಗಳು ಕ್ರಮಬದ್ಧ ರೀತಿಯಲ್ಲಿ ಹುಡುಕುವ ಕೆಲಸಕ್ಕೆ ಪೂರ್ವಸಿದ್ಧತೆಯಾಗಿ ಟೆಲಿಫೋನ್ ಡೈರೆಕ್ಟರಿ ಇಲ್ಲವೆ ಇಂಟರ್ನೆಟ್ನಲ್ಲಿ ತಮಗೆ ಬೇಕಾದ ಭಾಷೆಯನ್ನಾಡುವವರ ಹೆಸರುಗಳನ್ನು ಸಂಗ್ರಹಿಸುತ್ತವೆ. ಆಮೇಲೆ ಹುಡುಕುವ ಕೆಲಸದಲ್ಲಿ ತೊಡಗುತ್ತಾ ಅವರಿಗೆ ಫೋನ್ ಮಾಡುತ್ತಾರೆ ಇಲ್ಲವೆ ಭೇಟಿಮಾಡುತ್ತಾರೆ. ನಂತರ ಈ ವಿಳಾಸಗಳನ್ನು ತಮ್ಮ ಸೇವಾಕ್ಷೇತ್ರ ಪಟ್ಟಿಯಲ್ಲಿ ಸೇರಿಸುತ್ತಾರೆ. ಪ್ರಾಯೋಗಿಕವಾಗಿರುವಲ್ಲಿ, ಭಾಷಾ ಗುಂಪು ಯಾವ ಸಭೆಗೆ ಸೇರಿದೆಯೊ ಆ ಸಭೆಯವರೆಲ್ಲರು ಕೆಲವೊಮ್ಮೆ ಈ ಹುಡುಕುವ ಕೆಲಸದಲ್ಲಿ ಭಾಗವಹಿಸುವಂತೆ ಹಿರಿಯರ ಮಂಡಲಿ ಏರ್ಪಡಿಸಬಹುದು.—“ನಿಮ್ಮ ಭಾಷೆಯ ಜನರನ್ನು ಹುಡುಕುವ ವಿಧ” ಎಂಬ ಚೌಕ ನೋಡಿ.
5. (ಎ) ಹುಡುಕುವ ಕೆಲಸ ಮಾಡುತ್ತಿರುವ ಪ್ರಚಾರಕರಿಗಾಗಿ ಕೆಲವು ಸಲಹೆಗಳಾವುವು? (ಬಿ) ಹುಡುಕುವ ಕೆಲಸದಲ್ಲಿ ತೊಡಗಿರುವಾಗ ನಾವು ಹೇಗೆ ಮಾತಾಡಬಹುದು?
5 ಪ್ರತಿಬಾರಿ ಹುಡುಕುವ ಕೆಲಸದಲ್ಲಿ ಭಾಗವಹಿಸುವಾಗ ನಮಗೊಂದು ಸ್ಪಷ್ಟ ಉದ್ದೇಶವಿರಬೇಕು. ಈ ಕೆಲಸವೂ ಸೇವೆಯ ಭಾಗವಾಗಿರುವುದರಿಂದ ಯೋಗ್ಯವಾದ ಉಡುಪನ್ನು ಧರಿಸಬೇಕು. ಅನೇಕರು ತಾವು ಹುಡುಕುತ್ತಿರುವವರ ಭಾಷೆಯಲ್ಲೇ ನಿರೂಪಣೆಗಳನ್ನು ಅಭ್ಯಾಸಮಾಡಿ, ನಂತರ ಅದೇ ಭಾಷೆಯಲ್ಲಿ ಮಾತಾಡುತ್ತಾರೆ. ಹೀಗೆ ಮಾಡುವಾಗ ಉತ್ಸಾಹವನ್ನು ಕಾಪಾಡಿಕೊಳ್ಳಲು ಮತ್ತು ಭಾಷಾ ಕೌಶಲವನ್ನು ಹೆಚ್ಚಿಸಲು ನೆರವಾಗುತ್ತದೆಂದು ಅವರು ಕಂಡುಕೊಂಡಿದ್ದಾರೆ. ಹುಡುಕುವ ಕೆಲಸದಲ್ಲಿ ವ್ಯಯಿಸಿದ ಸಮಯವನ್ನು ನಾವು ವರದಿಸಬಹುದು. ಆದರೆ ಕ್ಷೇತ್ರಸೇವಾ ನಕ್ಷೆಗಳನ್ನು, ಪಟ್ಟಿಗಳನ್ನು ಸಿದ್ಧಪಡಿಸಲು ವ್ಯಯಿಸುವ ಸಮಯವನ್ನು ವರದಿಸುವಂತಿಲ್ಲ. ನೀವು ಹುಡುಕುತ್ತಿರುವ ಭಾಷೆಯ ವ್ಯಕ್ತಿಯನ್ನು ಭೇಟಿಯಾದಾಗ ಸುವಾರ್ತೆ ತಿಳಿಸಲು ಪ್ರಯತ್ನಿಸಿ. ಆಸಕ್ತಿ ತೋರಿಸಲಿ ತೋರಿಸದಿರಲಿ ಅವನ ವಿಳಾಸವನ್ನು ತಪ್ಪದೆ ಸೇವಾ ಮೇಲ್ವಿಚಾರಕನಿಗೆ ಅಥವಾ ನೇಮಿತ ಸಹೋದರನಿಗೆ ನೀಡಿ. ಆಗ ಅವರು ಅದನ್ನು ಸೇವಾಕ್ಷೇತ್ರದ ಪಟ್ಟಿಗೆ ಸೇರಿಸಲು ಸಾಧ್ಯವಾಗುತ್ತದೆ. ಹುಡುಕುವ ಕೆಲಸ ಪ್ರಾಮುಖ್ಯವಾದರೂ ಸಮತೋಲನವಿರಲಿ. ಸೇವೆಯ ಇತರ ವೈಶಿಷ್ಟ್ಯಗಳಲ್ಲೂ ನಾವು ಭಾಗವಹಿಸಬೇಕು.—“ಹುಡುಕುವ ಕೆಲಸದಲ್ಲಿ ಮಾತಾಡುವ ವಿಧ” ಚೌಕ ನೋಡಿ.
6. ಶ್ರವಣ ದೋಷವುಳ್ಳವರನ್ನು ಹುಡುಕುವುದು ಒಂದು ಸವಾಲಾಗಿದೆ ಏಕೆ?
6 ಶ್ರವಣ ದೋಷವುಳ್ಳವರನ್ನು ಹುಡುಕಿ: ಶ್ರವಣ ದೋಷವುಳ್ಳವರನ್ನು ಹುಡುಕುವುದು ಒಂದು ಸವಾಲು. ಅದಕ್ಕೆ ವಿಶೇಷ ಪ್ರಯತ್ನ, ಪಟ್ಟುಹಿಡಿಯುವಿಕೆ ಅಗತ್ಯ. ಅಂಥವರನ್ನು ಅವರ ಹೆಸರು, ಬಟ್ಟೆ ಇಲ್ಲವೆ ದೈಹಿಕ ತೋರಿಕೆಯಿಂದ ಗುರುತಿಸಸಾಧ್ಯವಿಲ್ಲ. ಅಲ್ಲದೆ ಅವರ ಬಗ್ಗೆ ಇರುವ ಕಾಳಜಿಯಿಂದಾಗಿ ಕುಟುಂಬದವರು/ಗೆಳೆಯರು ನಮಗೆ ಅವರ ಮಾಹಿತಿ ನೀಡಲು ಹಿಂಜರಿಯಬಹುದು. ಈ ಕೆಳಗಿನ ಸಲಹೆಗಳು ಕೇವಲ ಶ್ರವಣ ದೋಷವುಳ್ಳವರನ್ನು ಹುಡುಕಲು ಮಾತ್ರವಲ್ಲದೆ, ಬೇರೆ ಭಾಷೆಗಳನ್ನಾಡುವ ಜನರನ್ನು ಹುಡುಕಲು ಸಹ ಉಪಯುಕ್ತ.
7. (ಎ) ಮನೆಗಳಿರುವ ಸ್ಥಳಗಳಲ್ಲಿ ಶ್ರವಣ ದೋಷವುಳ್ಳವರನ್ನು ಹುಡುಕುವುದು ಹೇಗೆ? (ಬಿ) ಮನೆಯವನ ಸಂಶಯವನ್ನು ಹೇಗೆ ದೂರಮಾಡಬಲ್ಲೆವು?
7 ಸನ್ನೆ ಭಾಷೆಯ ಸಭೆಗಳು/ಗುಂಪುಗಳು ಮನೆಗಳಿರುವ ಸ್ಥಳಗಳಲ್ಲಿ (ರೆಸಿಡೆನ್ಷಿಯಲ್ ಏರಿಯ) ಶ್ರವಣ ದೋಷವುಳ್ಳವರಿಗಾಗಿ ವಿಚಾರಿಸುವುದರಿಂದ ಯಶಸ್ಸು ಕಂಡಿವೆ. ಮನೆಯವನು ತನ್ನ ನೆರೆಹೊರೆ, ಸಹೋದ್ಯೋಗಿ ಇಲ್ಲವೆ ಶಾಲಾ ವಿದ್ಯಾರ್ಥಿಗಳಲ್ಲಿ ಯಾರಾದರೂ ಸನ್ನೆ ಭಾಷೆಯಲ್ಲಿ ಮಾತಾಡುವುದನ್ನು ಗಮನಿಸಿರಬಹುದು. ಇಲ್ಲವೆ ಅವನ ಸಂಬಂಧಿಕರಲ್ಲೇ ಅಂಥವರೊಬ್ಬರು ಇರಬಹುದು. ಆದರೆ ನೆನಪಿಡಿ, ಕೆಲವರು ನಿಮ್ಮ ಭೇಟಿಯನ್ನು ಸಂಶಯದಿಂದ ಸಹ ನೋಡಬಹುದು. ಹಾಗಾಗಿ ಸಂಶಯ ದೂರಮಾಡಲು ಮುಚ್ಚುಮರೆಯಿಲ್ಲದೆ ಸ್ನೇಹಭಾವ ಮತ್ತು ಗೌರವದಿಂದ ಚುಟುಕಾದ ವಿವರಣೆ ನೀಡುವುದು ಉತ್ತಮ. ಶ್ರವಣ ದೋಷವುಳ್ಳವರಿಗಾಗಿ ವಿಚಾರಿಸುವಾಗ ಕೆಲವು ಪ್ರಚಾರಕರು ಮೊದಲು ಮನೆಯವರಿಗೆ ಸನ್ನೆ ಭಾಷೆಯ ಬೈಬಲ್ ಡಿವಿಡಿ ಇಲ್ಲವೆ ಇತರ ಡಿವಿಡಿಗಳನ್ನು ತೋರಿಸುತ್ತಾರೆ. ಇದರಲ್ಲಿರುವ ಬೈಬಲ್ ನಿರೀಕ್ಷೆಯನ್ನೇ ಶ್ರವಣ ದೋಷವುಳ್ಳವರಿಗೆ ತಿಳಿಸಲು ಬಯಸುತ್ತೇವೆ ಎಂದು ಹೇಳುತ್ತಾರೆ. ಹೀಗೆ ಮಾಡಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಅಂತಹ ಸಂಬಂಧಿ/ಸ್ನೇಹಿತನ ಬಗ್ಗೆ ಮಾಹಿತಿ ನೀಡಲು ಮನೆಯವನು ಹಿಂಜರಿಯುವಲ್ಲಿ, ನಿಮ್ಮ ವಿಳಾಸ ಇಲ್ಲವೆ ಸಭಾ ಕೂಟದ ಆಮಂತ್ರಣ ಪತ್ರ ಅವನಿಗೆ ಕೊಡಿ. ಅವನದನ್ನು ಆ ಸಂಬಂಧಿ/ಸ್ನೇಹಿತನಿಗೆ ಕೊಡಲು ಸಿದ್ಧನಿರಬಹುದು.
8. ಸನ್ನೆ ಭಾಷೆಯ ಸಭೆಗೆ ಹತ್ತಿರದ ಸಭೆ ಹೇಗೆ ನೆರವಾಗಬಹುದು?
8 ವರ್ಷದಲ್ಲಿ ಒಂದೆರಡು ದಿನ ಸನ್ನೆ ಭಾಷೆಯ ಸಭೆ, ತಮ್ಮ ದೊಡ್ಡ ಸೇವಾಕ್ಷೇತ್ರದ ವ್ಯಾಪ್ತಿಯಲ್ಲಿರುವ ಮಹಾನಗರ ಪ್ರದೇಶಗಳಲ್ಲಿ ಹುಡುಕುವ ಕೆಲಸಕ್ಕಾಗಿ ಹತ್ತಿರದ ಬೇರೆ ಭಾಷೆಯನ್ನಾಡುವ ಸಭೆಯ ನೆರವು ಕೇಳಬಹುದು. ಸನ್ನೆ ಭಾಷೆಯ ಸಭೆ ನಡೆಸುವಂಥ ಕ್ಷೇತ್ರಸೇವಾ ಕೂಟದಲ್ಲಿ ಈ ಚಟುವಟಿಕೆಗಾಗಿ ಅಗತ್ಯವಿರುವ ನಿರ್ದೇಶನಗಳನ್ನು ಕೊಟ್ಟು, ಒಂದು ಪ್ರಾತ್ಯಕ್ಷಿಕೆಯನ್ನು ತೋರಿಸಬಹುದು. ನಂತರ ಗುಂಪು ಗುಂಪುಗಳಾಗಿ ಸೇವೆಗೆ ಹೋಗುವಾಗ, ಪ್ರತಿಯೊಂದು ಗುಂಪಿನಲ್ಲೂ ಕಡಿಮೆಪಕ್ಷ ಒಬ್ಬ ಸನ್ನೆ ಭಾಷಾ ಪ್ರಚಾರಕನನ್ನು ನೇಮಿಸಬೇಕು ಮತ್ತು ಯಾವ ಸ್ಥಳದಲ್ಲಿ ಹುಡುಕಬೇಕೆಂದು ತೋರಿಸುವ ಒಂದು ನಕ್ಷೆಯನ್ನು ಕೊಡಬೇಕು.
9. ಸಹವಾಸಕ್ಕಾಗಿ, ಮನರಂಜನೆಗಾಗಿ ಇಲ್ಲವೆ ಸೇವಾ ಸವಲತ್ತುಗಳನ್ನು ಪಡೆಯಲಿಕ್ಕಾಗಿ ಶ್ರವಣ ದೋಷವುಳ್ಳವರು ಸೇರುವಂಥ ಸ್ಥಳದಲ್ಲಿ ಹುಡುಕುವ ಕೆಲಸವನ್ನು ಹೇಗೆ ಮಾಡಬಹುದು?
9 ಸಹವಾಸಕ್ಕಾಗಿ, ಮನರಂಜನೆಗಾಗಿ ಇಲ್ಲವೆ ಸಮಾಜದಿಂದ ಸಿಗುವ ಸೇವಾ ಸವಲತ್ತುಗಳನ್ನು ಪಡೆಯಲಿಕ್ಕಾಗಿ ಶ್ರವಣ ದೋಷವುಳ್ಳವರು ಒಟ್ಟು ಸೇರುವಂಥ ಸ್ಥಳಗಳಿಗೂ ಭೇಟಿನೀಡಬಹುದು. ಹೀಗೆ ಭೇಟಿ ಮಾಡುವಾಗ ಪ್ರಚಾರಕರು ಆ ಸ್ಥಳಕ್ಕೆ ಸೂಕ್ತವಾದ ಉಡುಪು ಧರಿಸಬೇಕು. ಅಲ್ಲಿರುವ ಎಲ್ಲರನ್ನು ಒಟ್ಟುಗೂಡಿಸಿ ಸಂಭಾಷಿಸುವ ಬದಲು ಒಬ್ಬಿಬ್ಬರ ಬಳಿ ಮಾತಾಡುವುದು ಜಾಣತನ. ಯಾರ ಹತ್ತಿರ ಮಾತಾಡುತ್ತೇವೋ ಆ ವ್ಯಕ್ತಿ ಆಸಕ್ತಿ ತೋರಿಸಿದರೆ ಮುಂದಿನ ಭೇಟಿಗೆ ಏರ್ಪಾಡು ಮಾಡಬಹುದು.
10. ಸೇವಾಕ್ಷೇತ್ರದಲ್ಲಿರುವ ವ್ಯಾಪಾರೋದ್ಯಮಗಳಲ್ಲಿ ಪ್ರಚಾರಕರು ಹುಡುಕುವ ಕೆಲಸವನ್ನು ಹೇಗೆ ಮಾಡಬಹುದು?
10 ಇನ್ನೊಂದು ವಿಧ, ನಮ್ಮ ಸೇವಾಕ್ಷೇತ್ರದಲ್ಲಿರುವ ಪೆಟ್ರೋಲ್ ಬಂಕ್, ಡ್ರೈ ಕ್ಲೀನರ್, ರೆಸ್ಟೋರೆಂಟ್, ಲಾಡ್ಜ್ ಇತ್ಯಾದಿಗಳನ್ನು ತೋರಿಸುವಂಥ ನಕ್ಷೆಗಳನ್ನು ಸಿದ್ಧಪಡಿಸಿ ಅವಕ್ಕೆ ಸೂಕ್ತ ಸಮಯದಲ್ಲಿ ಭೇಟಿನೀಡುವುದೇ ಆಗಿದೆ. ಒಂದು ನಕ್ಷೆಯಲ್ಲಿ ಒಂದೇ ರೀತಿಯ ವ್ಯಾಪಾರದ ಹೆಸರಿರಲಿ. (ಉದಾ: ಒಂದು ನಕ್ಷೆಯಲ್ಲಿ ಬರೀ ಪೆಟ್ರೋಲ್ ಬಂಕ್, ಇನ್ನೊಂದರಲ್ಲಿ ಬರೀ ಡ್ರೈ ಕ್ಲೀನರ್.) ಇದರಿಂದ ಪ್ರಯೋಜನ? ಪ್ರಚಾರಕನು ಒಂದೇ ರೀತಿಯ ವ್ಯಾಪಾರೋದ್ಯಮಕ್ಕೆ ಭೇಟಿನೀಡುವಾಗ ಒಂದು ಸ್ಥಳದಲ್ಲಿ ಮಾತಾಡಿದ್ದನ್ನೇ ಇನ್ನೊಂದು ಸ್ಥಳದಲ್ಲಿಯೂ ಮಾತಾಡಬಹುದು. ಹೀಗೆ ಅವನದರಲ್ಲಿ ಅನುಭವ, ನೈಪುಣ್ಯತೆ ಪಡೆಯುತ್ತಾನೆ. ಉದಾಹರಣೆಗೆ, ಕೆಲವು ವ್ಯಾಪಾರ ಸ್ಥಳಗಳಲ್ಲಿ ಯಾರಾದರು ಶ್ರವಣ ದೋಷವುಳ್ಳ ಕೆಲಸಗಾರರಿದ್ದಾರಾ ಇಲ್ಲವೆ ಆಗ್ಗಾಗೆ ಬರುವ ಅಂಥ ಗಿರಾಕಿಗಳಿದ್ದಾರಾ ಎಂದು ಕೇಳಿ ತಿಳಿದುಕೊಳ್ಳಬಹುದು. ಸೇವಾಕ್ಷೇತ್ರದಲ್ಲಿ ಕಿವುಡರಿಗಾಗಿ ಶಾಲೆ ಇರುವಲ್ಲಿ ಅಲ್ಲಿನ ಲೈಬ್ರರಿಗಾಗಿ ಸನ್ನೆ ಭಾಷೆಯ ನಮ್ಮ ಕೆಲವು ಡಿವಿಡಿಗಳನ್ನು ನೀಡಬಹುದು.
11. ಹುಡುಕುವ ಕೆಲಸ ಕ್ರೈಸ್ತ ಸೇವೆಯ ಮುಖ್ಯ ಭಾಗವಾಗಿದೆ ಏಕೆ?
11 ಪ್ರಾಮುಖ್ಯ ಕೆಲಸ: ನಮ್ಮ ಭಾಷೆಯನ್ನಾಡುವ ಜನರನ್ನು ಕಂಡುಹಿಡಿಯುವುದು ಶ್ರಮದ ಕೆಲಸ. ಅಲ್ಲದೆ ಕೆಲವೊಂದು ಕ್ಷೇತ್ರಗಳಲ್ಲಿ ಜನರು ಇದ್ದಲ್ಲೇ ಇರುವುದಿಲ್ಲ, ಆಗಿಂದಾಗ್ಗೆ ಮನೆ ಬದಲಾಯಿಸುತ್ತಾ ಇರುತ್ತಾರೆ. ಹಾಗಾಗಿ, ಅದಕ್ಕೆ ತಕ್ಕಂತೆ ಕ್ಷೇತ್ರಸೇವಾ ದಾಖಲೆಗಳನ್ನು ಬದಲಾಯಿಸುತ್ತಾ ಇರುವುದು ಸಹ ಸವಾಲಾಗಿದೆ. ಅದೇನೇ ಇದ್ದರೂ, ಈ ಹುಡುಕುವ ಕೆಲಸ ಕ್ರೈಸ್ತ ಸೇವೆಯ ಒಂದು ಮುಖ್ಯ ಕಾರ್ಯವಾಗಿ ಹೆಚ್ಚೆಚ್ಚು ಪ್ರದೇಶಗಳಲ್ಲಿ ನಡೆಯುತ್ತಿದೆ. ಸಾರುವ ಕೆಲಸವನ್ನು ನಮಗೆ ಕೊಟ್ಟಿರುವ ಯೆಹೋವನು ಪಕ್ಷಪಾತಿಯಲ್ಲ. (ಅ. ಕಾ. 10:34) “ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು ಎಂಬುದು ಆತನ ಚಿತ್ತವಾಗಿದೆ.” (1 ತಿಮೊ. 2:3, 4) ಹಾಗಾಗಿ ಪ್ರತಿಯೊಂದು ಭಾಷೆಯ ಜನರಲ್ಲಿ “ಉತ್ತಮವಾದ ಒಳ್ಳೆಯ ಹೃದಯ” ಇರುವವರನ್ನು ಹುಡುಕುವ ಕೆಲಸದಲ್ಲಿ ನಾವು ಯೆಹೋವನೊಂದಿಗೆ ಮತ್ತು ಇತರರೊಂದಿಗೆ ಸಹಕರಿಸೋಣ.—ಲೂಕ 8:15.