ನಿಮ್ಮ ಪ್ರಯಾಸದ ಒಳ್ಳೇ ಫಲವನ್ನು ನೋಡಿ
1. ಸಾರುವ ಕೆಲಸದಲ್ಲಿ ನಮಗಿರುವ ಹುರುಪಿಗೆ ಯಾವುದು ತಣ್ಣೀರೆರಚಬಹುದು?
1 ಮನುಷ್ಯ ತನ್ನ ಪ್ರಯಾಸದಿಂದ ಸುಖ ಅಥವಾ ಒಳ್ಳೇ ಫಲಿತಾಂಶ ಪಡೆದು ಆನಂದಿಸುವಂತೆ ದೇವರು ಅವನನ್ನು ಸೃಷ್ಟಿಸಿದ್ದಾನೆ. (ಪ್ರಸಂ. 2:24) ಆದರೆ ಸುವಾರ್ತೆ ಸಾರುವಾಗ ನಮಗರಿವಿಲ್ಲದೇ ನಾವು ಸಾಧಿಸುತ್ತಿರುವ ವಿಷಯವನ್ನು ಮನಗಾಣದಿರುವಲ್ಲಿ ನಿರುತ್ಸಾಹಗೊಳ್ಳುತ್ತೇವೆ. ಈ ನಿರುತ್ಸಾಹ ನಮ್ಮ ಆನಂದವನ್ನು ಕಸಿದುಕೊಳ್ಳುತ್ತೆ; ಹುರುಪಿಗೆ ತಣ್ಣೀರೆರಚುತ್ತೆ. ಹಾಗಾಗದೆ ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಲು ನಾವೇನು ಮಾಡಬಹುದು?
2. ಜನರ ಪ್ರತಿಕ್ರಿಯೆಯ ಬಗ್ಗೆ ನಮಗೆ ನೈಜ ನಿರೀಕ್ಷೆಗಳಿರಬೇಕು ಏಕೆ?
2 ನೈಜ ನಿರೀಕ್ಷೆಗಳನ್ನಿಡಿ: ಯೇಸುವಿಗೆ ಒಳ್ಳೇ ಪ್ರತಿಕ್ರಿಯೆ ತೋರಿಸಿದ ಜನರ ಸಂಖ್ಯೆ ಕಡಿಮೆಯಿದ್ದರೂ ಆತನು ಯಶಸ್ಸು ಕಂಡನೆಂದು ಹೇಳಬಹುದು. (ಯೋಹಾ. 17:4) ನಾವು ಸಾರುವ ರಾಜ್ಯ ಸಂದೇಶವನ್ನು ಅಧಿಕಾಂಶ ಜನರು ಕೇಳಿದರೂ ಸ್ವೀಕರಿಸುವುದಿಲ್ಲ ಎಂದು ಬಿತ್ತುವವನ ಕುರಿತ ದೃಷ್ಟಾಂತ ಕಥೆಯಲ್ಲಿ ಯೇಸು ತಿಳಿಸಿದ್ದನು. (ಮತ್ತಾ. 13:3-8, 18-22) ಆದರೂ ಶ್ರದ್ಧೆಯಿಂದ ನಾವು ಮಾಡುವ ಪ್ರಯತ್ನಕ್ಕೆ ಫಲ ಸಿಗುತ್ತದೆ.
3. ಸುವಾರ್ತೆಗೆ ಜನರು ಒಳ್ಳೇ ರೀತಿಯಲ್ಲಿ ಪ್ರತಿಕ್ರಿಯಿಸದಿದ್ದರೂ ನಾವು ಹೇಗೆ ‘ಫಲ ಕೊಡಬಲ್ಲೆವು?’
3 ಹೆಚ್ಚು ಫಲ ಕೊಡಬಲ್ಲೆವು ಹೇಗೆ? ಯೇಸುವಿನ ದೃಷ್ಟಾಂತ ಕಥೆಯ ಪ್ರಕಾರ ರಾಜ್ಯ ಸಂದೇಶವನ್ನು ಸ್ವೀಕರಿಸುವವರು ‘ಫಲಕೊಡುತ್ತಾರೆ.’ (ಮತ್ತಾ. 13:23) ಒಂದು ಗೋಧಿ ಬೀಜ ಮೊಳಕೆಯೊಡೆದು ಗಿಡವಾದಾಗ ಅದು ಉತ್ಪಾದಿಸುವುದು ಚಿಕ್ಕ ಚಿಕ್ಕ ಗೋಧಿ ಗಿಡಗಳನ್ನಲ್ಲ, ಹೊಸ ಬೀಜವನ್ನು. ಹಾಗೇ ಹೊಸ ಶಿಷ್ಯರನ್ನು ಮಾಡಿದರೆ ಮಾತ್ರ ಕ್ರೈಸ್ತನೊಬ್ಬ ಫಲಕೊಟ್ಟನು ಎಂದರ್ಥವಲ್ಲ. ದೇವರ ರಾಜ್ಯದ ಬೀಜಗಳನ್ನು ಬಿತ್ತುತ್ತಾ ಇರುವುದು ಅಂದರೆ ದೇವರ ರಾಜ್ಯದ ಬಗ್ಗೆ ಸಾರುತ್ತಾ ಇರುವುದೇ ಆತ ಕೊಡುವ ಫಲ. ಈ ರೀತಿ ಫಲ ಕೊಡುವಾಗ, ಜನರು ಒಳ್ಳೇ ರೀತಿಯಲ್ಲಿ ಪ್ರತಿಕ್ರಿಯಿಸದಿದ್ದರೂ ನಮಗೆ ತೃಪ್ತಿ ಇರುತ್ತದೆ. ಏಕೆಂದರೆ ಯೆಹೋವನ ನಾಮದ ಪವಿತ್ರೀಕರಣಕ್ಕೆ ಕೈಜೋಡಿಸುತ್ತೇವೆ. (ಯೆಶಾ. 43:10-12; ಮತ್ತಾ. 6:9) ದೇವರ ಜೊತೆ ಕೆಲಸಗಾರರಾಗಿ ಕೆಲಸಮಾಡುವ ಸುಯೋಗ ನಮಗಿರುವುದರಿಂದ ಸಂತೋಷ ಪಡುತ್ತೇವೆ. (1 ಕೊರಿಂ. 3:9) ಅಲ್ಲದೆ ನಮ್ಮ “ತುಟಿಗಳ ಫಲ” ಯೆಹೋವನಿಗೂ ಸಂತೋಷ ತರುತ್ತದೆ.—ಇಬ್ರಿ. 13:15, 16.
4. ನಮಗೇ ಗೊತ್ತಿಲ್ಲದೆ ನಮ್ಮ ಸಾರುವ ಕೆಲಸದಿಂದ ಯಾವ ಫಲಿತಾಂಶ ಸಿಗಬಲ್ಲದು?
4 ಇನ್ನೊಂದು ವಿಷಯವೇನೆಂದರೆ, ನಮಗೆ ಕಾಣಿಸದ ರೀತಿಯಲ್ಲಿ ನಮ್ಮ ಶ್ರಮಕ್ಕೆ ಪ್ರತಿಫಲ ಸಿಗುತ್ತಿರಬಹುದು. ಯೇಸುವಿನಿಂದ ಸುವಾರ್ತೆ ಕೇಳಿದ ಕೆಲವರು ಯೇಸು ಮರಣಪಟ್ಟ ಮೇಲೆ ಶಿಷ್ಯರಾಗಿರಬಹುದು. ಹಾಗೆಯೇ ನಾವು ಒಬ್ಬ ವ್ಯಕ್ತಿಯ ಹೃದಯದಲ್ಲಿ ಬಿತ್ತಿದ ರಾಜ್ಯದ ಬೀಜ ತಕ್ಷಣವೇ ಮೊಳಕೆಯೊಡೆದು ಬೆಳೆಯದಿರಬಹುದು. ಮುಂದೆ ಬೇರೆಲ್ಲಾದರೂ ಆತ ಸತ್ಯ ಕಲೀಬಹುದು. ಹಾಗಾಗಿ “ಬಹಳ ಫಲವನ್ನು ಕೊಡುತ್ತಾ” ಇರೋಣ. ನಾವು ಯೇಸುವಿನ ಶಿಷ್ಯರು ಎಂದು ತೋರಿಸಿ ಕೊಡೋಣ.—ಯೋಹಾ. 15:8.