ಅವಕಾಶವನ್ನು ಉಪಯೋಗಿಸುವಿರೇ?
ಕ್ರಿಸ್ತನ ಮರಣದ ಸ್ಮರಣೆಯು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಸಂದರ್ಭವನ್ನು ಒದಗಿಸುತ್ತದೆ
1. ಕ್ರಿಸ್ತನ ಮರಣದ ಸ್ಮರಣೆಯು ಯಾವ ವಿಶೇಷ ಅವಕಾಶವನ್ನು ಒದಗಿಸುತ್ತದೆ?
1 ಏಪ್ರಿಲ್ 14ರಂದು ಆಚರಿಸಲಿರುವ ಕ್ರಿಸ್ತನ ಮರಣದ ಸ್ಮರಣೆಯು ಯೆಹೋವನ ಒಳ್ಳೇತನಕ್ಕಾಗಿ ಕೃತಜ್ಞತಾಭಾವ ಬೆಳೆಸಿಕೊಳ್ಳಲು ಮತ್ತು ಅದನ್ನು ತೋರಿಸಲು ನಮಗೊಂದು ವಿಶೇಷ ಅವಕಾಶವನ್ನು ಒದಗಿಸುತ್ತದೆ. ಲೂಕ 17:11-18ರಲ್ಲಿರುವ ವೃತ್ತಾಂತವು ಯೆಹೋವ ಮತ್ತು ಯೇಸು ಕೃತಜ್ಞತಾಭಾವವನ್ನು ಹೇಗೆ ವೀಕ್ಷಿಸುತ್ತಾರೆಂದು ತೋರಿಸುತ್ತದೆ. ದುಃಖಕರವಾಗಿ, ಆ ವೃತ್ತಾಂತದಲ್ಲಿ ಹತ್ತು ಮಂದಿ ಕುಷ್ಠರೋಗಿಗಳಲ್ಲಿ ಒಬ್ಬ ಮಾತ್ರ ಕೃತಜ್ಞತೆ ವ್ಯಕ್ತಪಡಿಸುವ ಅವಕಾಶವನ್ನು ಸದುಪಯೋಗಿಸಿಕೊಂಡನು. ವಿಮೋಚನಾ ಮೌಲ್ಯದ ಉಡುಗೊರೆಯು ಭವಿಷ್ಯತ್ತಿನಲ್ಲಿ ಎಲ್ಲ ರೀತಿಯ ಕಾಯಿಲೆಗಳನ್ನು ಸಂಪೂರ್ಣವಾಗಿ ಗುಣಪಡಿಸಿ, ಅನಂತ ಜೀವನವನ್ನು ಸಾಧ್ಯಗೊಳಿಸುತ್ತದೆ. ಖಂಡಿತವಾಗಿಯೂ, ಆಗ ನಾವು ಅಂಥ ಹೇರಳ ಆಶೀರ್ವಾದಗಳಿಗಾಗಿ ಯೆಹೋವನಿಗೆ ಪ್ರತಿದಿನ ಕೃತಜ್ಞತೆ ಹೇಳುವೆವು. ಆದರೆ, ಮುಂಬರುವ ವಾರಗಳಲ್ಲಿ ನಮ್ಮ ಕೃತಜ್ಞತೆಯನ್ನು ಹೇಗೆ ವ್ಯಕ್ತಪಡಿಸಬಹುದು?
2. ವಿಮೋಚನಾ ಮೌಲ್ಯಕ್ಕಾಗಿ ನಮ್ಮ ಕೃತಜ್ಞತಾಭಾವವನ್ನು ಹೇಗೆ ಬೆಳೆಸಿಕೊಳ್ಳಬಹುದು?
2 ಕೃತಜ್ಞತಾಭಾವ ಬೆಳೆಸಿಕೊಳ್ಳಿ: ಒಂದು ವಿಷಯದ ಬಗ್ಗೆ ಕೃತಜ್ಞತಾಭಾವ ಬೆಳೆಸಿಕೊಳ್ಳಬೇಕೆಂದರೆ ಅದರ ಕುರಿತು ಆಲೋಚಿಸುತ್ತಾ ಇರಬೇಕು. ಕ್ರಿಸ್ತನ ಮರಣದ ಸ್ಮರಣೆಯ ವಿಶೇಷ ಬೈಬಲ್ ವಾಚನಕ್ಕಾಗಿರುವ ಶೆಡ್ಯೂಲ್, ವಿಮೋಚನಾ ಮೌಲ್ಯದ ಬಗ್ಗೆ ನಮ್ಮ ಗಣ್ಯತಾಭಾವವನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ. ಆ ಶೆಡ್ಯೂಲ್ ಪ್ರತಿದಿನ ಬೈಬಲ್ ವಚನಗಳನ್ನು ಪರಿಗಣಿಸಿ, 2014-ಯೆಹೋವನ ಸಾಕ್ಷಿಗಳ ಕ್ಯಾಲೆಂಡರ್ ನಲ್ಲಿ ಲಭ್ಯವಿರುತ್ತದೆ. ಈ ಮಾಹಿತಿಯನ್ನು ಕುಟುಂಬವಾಗಿ ಯಾಕೆ ಪರಿಗಣಿಸಬಾರದು? ಹಾಗೆ ಪರಿಗಣಿಸುವುದಾದರೆ ವಿಮೋಚನಾ ಮೌಲ್ಯಕ್ಕಾಗಿರುವ ನಮ್ಮ ಗಣ್ಯತೆಯು ಮತ್ತಷ್ಟು ಹೆಚ್ಚಾಗುತ್ತದೆ. ಫಲಿತಾಂಶವಾಗಿ, ಅದು ನಮ್ಮ ಕ್ರಿಯೆಗಳ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ.—2 ಕೊರಿಂ. 5:14, 15; 1 ಯೋಹಾ. 4:11.
3. ಸ್ಮರಣೆಯ ಸಮಯಾವಧಿಯಲ್ಲಿ ನಮ್ಮ ಕೃತಜ್ಞತಾಭಾವವನ್ನು ಯಾವ ವಿಧಗಳಲ್ಲಿ ತೋರಿಸಬಹುದು?
3 ಕೃತಜ್ಞತಾಭಾವ ತೋರಿಸಿ: ಕೃತಜ್ಞತಾಭಾವವು ಕ್ರಿಯೆಗಳಿಂದ ತೋರಿಬರುತ್ತದೆ. (ಕೊಲೊ. 3:15) ಕೃತಜ್ಞನಾಗಿದ್ದ ಕುಷ್ಠರೋಗಿಯು ಯೇಸುವನ್ನು ಹುಡುಕಿ ಧನ್ಯವಾದ ತಿಳಿಸಲು ವಿಶೇಷ ಪ್ರಯತ್ನ ಹಾಕಿದನು. ತನಗಾದ ಅದ್ಭುತಕರ ವಾಸಿಮಾಡುವಿಕೆಯ ಕುರಿತು ಆತನು ಇತರರೊಂದಿಗೆ ಉತ್ಸಾಹದಿಂದ ಮಾತಾಡಿದನು ಎನ್ನುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ. ವಿಮೋಚನಾ ಮೌಲ್ಯಕ್ಕಾಗಿರುವ ಕೃತಜ್ಞತಾಭಾವವು, ಅಭಿಯಾನದಲ್ಲಿ ಹುರಪಿನಿಂದ ಭಾಗವಹಿಸಿ ಸ್ಮರಣೆಯ ಬಗ್ಗೆ ತಿಳಿಸುವಂತೆ ನಮ್ಮನ್ನು ಪ್ರಚೋದಿಸುತ್ತದಾ? ಸ್ಮರಣೆಯ ಸಮಯಾವಧಿಯಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವುದು ಅಥವಾ ಸೇವೆಯಲ್ಲಿ ಹೆಚ್ಚು ಭಾಗವಹಿಸುವುದು ಕೃತಜ್ಞತೆ ತೋರಿಸಲು ಇರುವ ಇನ್ನೊಂದು ಉತ್ತಮ ವಿಧ. ಸ್ಮರಣೆಯ ಸಾಯಂಕಾಲದಂದು ಹಾಜರಾಗುವ ಹೊಸಬರನ್ನು ಹಾರ್ದಿಕವಾಗಿ ಸ್ವಾಗತಿಸುವಂತೆ ಮತ್ತು ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವಂತೆ ಗಣ್ಯತಾಭಾವದ ಹೃದಯವು ನಮ್ಮನ್ನು ಉತ್ತೇಜಿಸುತ್ತದೆ.
4. ಈ ಸ್ಮರಣೆಯ ನಂತರ ಪರಿತಪಿಸದಿರಲು ಏನು ಮಾಡಬೇಕು?
4 ಇದೇ ಕೊನೆಯ ಸ್ಮರಣೆಯಾಗಿರಬಹುದಾ? (1 ಕೊರಿಂ. 11:26) ನಮಗೆ ಗೊತ್ತಿಲ್ಲ. ಒಂದು ವೇಳೆ ಇದೇ ಕೊನೆಯ ಸ್ಮರಣೆಯಾಗಿದ್ದರೆ, ಕೃತಜ್ಞತೆಯನ್ನು ವ್ಯಕ್ತಪಡಿಸುವ ಈ ವಿಶೇಷ ಅವಕಾಶ ಮತ್ತೆಂದಿಗೂ ಸಿಗುವುದಿಲ್ಲ. ಹಾಗಾಗಿ ನಮಗೆ ಸಿಗುವ ಅವಕಾಶವನ್ನು ಸದುಪಯೋಗಿಸಿಕೊಳ್ಳೋಣ. ನಮ್ಮ ಮೆಚ್ಚುಗೆಯ ಮಾತುಗಳು ಮತ್ತು ಹೃದಯದ ಧ್ಯಾನವು ವಿಮೋಚನಾ ಮೌಲ್ಯದ ಉದಾರ ದಾನಿಯಾಗಿರುವ ಯೆಹೋವನಿಗೆ ಸಂತೋಷವನ್ನು ತರುವಂತಾಗಲಿ.—ಕೀರ್ತ. 19:14.