“ಇದನ್ನು ಮಾಡುತ್ತಾ ಇರಿ”
ಕ್ರಿಸ್ತನ ಮರಣದ ಸ್ಮರಣೆ—ಏಪ್ರಿಲ್ 5
1. ಕ್ರಿಸ್ತನ ಮರಣದ ಸ್ಮರಣೆ ಮಾಡುವುದು ಏಕೆ ಪ್ರಾಮುಖ್ಯ?
1 “ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ.” (ಲೂಕ 22:19) ಹೀಗನ್ನುತ್ತಾ ಯೇಸು ತನ್ನ ಹಿಂಬಾಲಕರಿಗೆ ತನ್ನ ಯಜ್ಞಾರ್ಪಿತ ಮರಣವನ್ನು ಸ್ಮರಿಸುವಂತೆ ಆಜ್ಞಾಪಿಸಿದನು. ಯೇಸುವಿನ ಮರಣದಿಂದ ನಮಗೆ ಸಿಗುವ ಪ್ರಯೋಜನಗಳು ಒಂದಲ್ಲ, ಎರಡಲ್ಲ. ಆದ್ದರಿಂದ ಕ್ರೈಸ್ತರಿಗೆ ಕ್ರಿಸ್ತನ ಮರಣದ ವಾರ್ಷಿಕ ಸ್ಮರಣೆಯ ದಿನ ಎಲ್ಲಕ್ಕಿಂತ ಮುಖ್ಯವಾದ ದಿನ. ಏಪ್ರಿಲ್ 5 ಇನ್ನೇನು ಹತ್ತಿರತ್ತಿರ ಬರುತ್ತಿದೆ. ನಾವು ಯೆಹೋವನಿಗೆ ಹೇಗೆ ಕೃತಜ್ಞತೆ ತೋರಿಸಬಹುದು?—ಕೊಲೊ. 3:15.
2. ಕ್ರಿಸ್ತನ ಮರಣದ ಸ್ಮರಣೆಯನ್ನು ನಾವು ಮಾನ್ಯಮಾಡುತ್ತೇವೆಂದು ಅಧ್ಯಯನ ಮತ್ತು ಧ್ಯಾನದ ಮೂಲಕ ಹೇಗೆ ತೋರಿಸಬಲ್ಲೆವು?
2 ಸಿದ್ಧತೆ: ನಮಗೆ ಮುಖ್ಯವೆಂದೆಣಿಸುವ ವಿಷಯಗಳಿಗಾಗಿ ಸಿದ್ಧತೆ ಮಾಡುವುದು ವಾಡಿಕೆ. ಕ್ರಿಸ್ತನ ಮರಣದ ಸ್ಮರಣೆಗಾಗಿ ನಮ್ಮ ಹೃದಯವನ್ನು ಹೇಗೆ ಸಿದ್ಧಮಾಡಬಹುದು? ಯೇಸು ಭೂಮಿಯ ಮೇಲಿದ್ದ ಕೊನೆಯ ದಿನಗಳಂದು ನಡೆದ ಘಟನಾವಳಿಯನ್ನು ಕುಟುಂಬವಾಗಿ ಅಧ್ಯಯನ ಮಾಡಿ ಧ್ಯಾನಿಸುವ ಮೂಲಕ. ಈ ಘಟನಾವಳಿಗಳಿರುವ ಕೆಲವು ವಚನಗಳನ್ನು ನಮ್ಮ ಕ್ಯಾಲೆಂಡರ್ ಮತ್ತು ಪ್ರತಿದಿನ ಬೈಬಲ್ ವಚನಗಳನ್ನು ಪರಿಗಣಿಸಿ ಕಿರುಪುಸ್ತಿಕೆಯಲ್ಲಿ (ಬುಕ್‌ಲೆಟ್) ಕೊಡಲಾಗಿದೆ. ಇನ್ನೂ ಹೆಚ್ಚಿನ ವಚನಗಳನ್ನು ಮತ್ತು ಅತ್ಯಂತ ಮಹಾನ್ ಪುರುಷ ಪುಸ್ತಕದಿಂದ ಸಂಬಂಧಪಟ್ಟ ಅಧ್ಯಾಯಗಳನ್ನು ಜನವರಿ-ಮಾರ್ಚ್ 2012ರ ಕಾವಲಿನಬುರುಜುವಿನ ಪುಟ 21-22ರಲ್ಲಿ ಕೊಡಲಾಗಿದೆ.
3. ಕ್ರಿಸ್ತನ ಮರಣದ ಸ್ಮರಣೆಯನ್ನು ನಾವು ಮಾನ್ಯಮಾಡುತ್ತೇವೆಂದು ಸೇವೆಯಲ್ಲಿ ನಮ್ಮ ಪಾಲನ್ನು ಹೆಚ್ಚಿಸುವ ಮೂಲಕ ಹೇಗೆ ತೋರಿಸಬಲ್ಲೆವು?
3 ಸಾರುವಿಕೆ: ಸೇವೆಯಲ್ಲಿ ಪೂರ್ಣವಾಗಿ ಪಾಲ್ಗೊಳ್ಳುವ ಮೂಲಕವೂ ನಮ್ಮ ಕೃತಜ್ಞತೆ ತೋರಿಸಬಲ್ಲೆವು. (ಲೂಕ 6:45) ಜನರನ್ನು ಸ್ಮರಣೆಗೆ ಆಮಂತ್ರಿಸುವ ಭೂವ್ಯಾಪಕ ಅಭಿಯಾನ ಮಾರ್ಚ್ 17ರ ಶನಿವಾರದಿಂದ ಆರಂಭವಾಗಲಿದೆ. ಹಾಗಾಗಿ ಸೇವೆಯಲ್ಲಿ ಹೆಚ್ಚು ಸಮಯವನ್ನು ಕಳೆಯುವಂತಾಗಲು ನಿಮ್ಮ ಕೆಲಸಕಾರ್ಯಗಳನ್ನು ಹೊಂದಿಸಿಕೊಳ್ಳಬಲ್ಲಿರಾ? ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಬಲ್ಲಿರಾ? ಮುಂದಿನ ಕುಟುಂಬ ಆರಾಧನಾ ಸಂಜೆಯಲ್ಲಿ ಇದರ ಬಗ್ಗೆ ಕುಟುಂಬವಾಗಿ ಮಾತಾಡಬಹುದಲ್ಲವೆ?
4. ಸ್ಮರಣೆಗೆ ಹಾಜರಾಗುವುದರಿಂದ ಯಾವ ಪ್ರಯೋಜನಗಳಿವೆ?
4 ಪ್ರತಿ ವರ್ಷ ಸ್ಮರಣೆಗೆ ಹಾಜರಾಗುವುದರಿಂದ ನಮಗೆ ತುಂಬ ಪ್ರಯೋಜನಗಳಿವೆ. ತನ್ನ ಏಕೈಕಜಾತ ಪುತ್ರನನ್ನು ವಿಮೋಚನಾ ಮೌಲ್ಯವಾಗಿ ಕೊಟ್ಟು ಯೆಹೋವನು ತೋರಿಸಿರುವ ಉದಾರತೆಯ ಬಗ್ಗೆ ಮೆಲುಕುಹಾಕುವಾಗ ನಮ್ಮ ಸಂತೋಷವೂ ಹೆಚ್ಚಾಗುತ್ತೆ, ದೇವರ ಮೇಲೆ ಪ್ರೀತಿಯೂ ಹೆಚ್ಚಾಗುತ್ತೆ. (ಯೋಹಾ. 3:16; 1 ಯೋಹಾ. 4:9, 10) ಇನ್ನು ಮುಂದೆ ನಮಗಾಗಿ ಜೀವಿಸದಿರಲು ಪ್ರೇರಣೆ ನೀಡುತ್ತೆ. (2 ಕೊರಿಂ. 5:14, 15) ಯೆಹೋವನ ಬಗ್ಗೆ ಎಲ್ಲರಿಗೆ ತಿಳಿಸುವಂತೆಯೂ ಪ್ರಚೋದಿಸುತ್ತೆ. (ಕೀರ್ತ. 102:19-21) ಯೆಹೋವನಿಗೆ ಆಭಾರಿಗಳಾಗಿರುವ ನಾವು ಏಪ್ರಿಲ್ 5ರಂದು ಕ್ರಿಸ್ತನ ಸ್ಮರಣೆಯ ಮೂಲಕ ‘ಕರ್ತನ ಮರಣವನ್ನು ಪ್ರಕಟಪಡಿಸುವ’ ಅದ್ಭುತ ಅವಕಾಶಕ್ಕಾಗಿ ಕಾತರದಿಂದ ಕಾಯುತ್ತಿದ್ದೇವೆ!—1 ಕೊರಿಂ. 11:26.