“ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ” ಏಪ್ರಿಲ್ 2ರಂದು ಯೇಸುವಿನ ಮರಣದ ಜ್ಞಾಪಕಾಚರಣೆ ನಡೆಸಲ್ಪಡಲಿದೆ
1 ಲೋಕದಾದ್ಯಂತ ಇರುವ ಲಕ್ಷಾಂತರ ಜನರು 2007, ಏಪ್ರಿಲ್ 2ರಂದು ಯೇಸುವಿನ ಯಜ್ಞಾರ್ಪಿತ ಮರಣದ ಜ್ಞಾಪಕಾಚರಣೆಗಾಗಿ ಕೂಡಿಬರಲಿದ್ದಾರೆ. ಯೇಸು ತನ್ನ ಸ್ವರ್ಗೀಯ ತಂದೆಯ ಪರಮಾಧಿಕಾರದ ಸಮರ್ಥಕನಾಗಿ ಸಾವನ್ನಪ್ಪಿದನು. ಹೀಗೆ ಮಾನವರು ದೇವರನ್ನು ಸ್ವಾರ್ಥಪರ ಉದ್ದೇಶದಿಂದಲೇ ಸೇವಿಸುತ್ತಾರೆ ಎಂಬ ಸೈತಾನನ ಆರೋಪವನ್ನು ಸುಳ್ಳೆಂದು ರುಜುಪಡಿಸಿದನು. (ಯೋಬ 2:1-5) ತನ್ನ ಪಾಪರಹಿತವಾದ ಪರಿಪೂರ್ಣ ಮಾನವ ಜೀವವನ್ನು ಯಜ್ಞವಾಗಿ ಅರ್ಪಿಸಿದ ಮೂಲಕ ಯೇಸು ‘ಅನೇಕರನ್ನು ಬಿಡಿಸಿಕೊಳ್ಳುವುದಕ್ಕಾಗಿ ತನ್ನ ಪ್ರಾಣವನ್ನು [ವಿಮೋಚನಾ ಮೌಲ್ಯವಾಗಿ]’ ಕೊಟ್ಟದ್ದನ್ನೂ ಕರ್ತನ ಸಂಧ್ಯಾ ಭೋಜನವು ನಮಗೆ ನೆನಪಿಸುತ್ತದೆ. (ಮತ್ತಾ. 20:28) ಆದುದರಿಂದ ಯೇಸು ತನ್ನ ಶಿಷ್ಯರಿಗೆ ಆಜ್ಞಾಪಿಸಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.” (ಲೂಕ 22:19) ದೇವರ ಈ ಅಮೂಲ್ಯ ಕೊಡುಗೆಗಾಗಿರುವ ಗಣ್ಯತೆಯು ಈ ಉತ್ಕೃಷ್ಟ ಪ್ರೀತಿಯ ಕ್ರಿಯೆಯನ್ನು ಜ್ಞಾಪಿಸಿಕೊಳ್ಳಲಿಕ್ಕಾಗಿ ಸಿದ್ಧತೆಯನ್ನು ಮಾಡುವಂತೆ ನಿಮ್ಮನ್ನು ಪ್ರೇರೇಪಿಸುತ್ತದೋ?—ಯೋಹಾ. 3:16.
2 ನಿಮ್ಮ ಹೃದಯವನ್ನು ಸಿದ್ಧಗೊಳಿಸಿರಿ: ಯೇಸುವಿನ ಮಾನವ ಜೀವಿತದ ಕೊನೆಯ ದಿನಗಳಲ್ಲಿ ಸಂಭವಿಸಿದ ವಿಷಯವನ್ನು ಪರಿಗಣಿಸುವ ಮೂಲಕ ಈ ಜ್ಞಾಪಕಾಚರಣೆಗಾಗಿ ನಮ್ಮ ಹೃದಯವನ್ನು ನಾವು ಯೋಗ್ಯವಾಗಿ ಸಿದ್ಧಗೊಳಿಸಬಲ್ಲೆವು. ಇದಕ್ಕಾಗಿ ಸಹಾಯಮಾಡಲು, ಶಾಸ್ತ್ರಗಳನ್ನು ಪರೀಕ್ಷಿಸುವುದು—2007 ಮತ್ತು 2007ರ ಕ್ಯಾಲೆಂಡರ್ನಲ್ಲಿ ಬೈಬಲ್ ವಾಚನದ ಒಂದು ವಿಶೇಷ ಶೆಡ್ಯೂಲನ್ನು ಕೊಡಲಾಗಿದೆ. ಶೆಡ್ಯೂಲ್ ಮಾಡಲ್ಪಟ್ಟ ಈ ವಾಚನವು, ನಾವಿಂದು ಉಪಯೋಗಿಸುವ ಕ್ಯಾಲೆಂಡರಿಗೆ ಅನುಸಾರವಾಗಿ ಯೇಸುವಿನ ಮರಣಕ್ಕೆ ಸಂಬಂಧಿಸಿದ ಘಟನೆಗಳು ನಡೆದ ದಿನಗಳಿಗೆ ಒತ್ತಾಗಿ ಸರಿಹೋಲುತ್ತದೆ. ಆ ಬೈಬಲ್ ವೃತ್ತಾಂತದಲ್ಲಿ ಸೂಚಿಸಲಾದ ದಿನಗಳು ಮತ್ತು ತಾರೀಖುಗಳು ಯೆಹೂದಿ ಕ್ಯಾಲೆಂಡರಿನ ಮೇಲೆ ಆಧಾರಿಸಲ್ಪಟ್ಟಿವೆ. ಅದು ಸಮಯವನ್ನು ಸೂರ್ಯಾಸ್ತಮಾನದಿಂದ ಸೂರ್ಯಾಸ್ತಮಾನದ ತನಕ ಒಂದು ದಿನವಾಗಿ ಲೆಕ್ಕಿಸುತ್ತದೆ. ದಿನವನ್ನು ಲೆಕ್ಕಿಸುವ ಆ ವಿಧಾನವನ್ನು ಪರಿಗಣಿಸಿ ಅದಕ್ಕನುಸಾರ ಜ್ಞಾಪಕಾಚರಣೆಯ ಬೈಬಲ್ ವಾಚನದ ಶೆಡ್ಯೂಲನ್ನು ರಚಿಸಲಾಗಿದೆ. ಆ ಮಾಹಿತಿಯನ್ನು ಪರಿಶೀಲಿಸಿ ದೇವರ ಪ್ರೀತಿಯ ಆಳವನ್ನು ಪ್ರಾರ್ಥನಾಪೂರ್ವಕವಾಗಿ ಮನನ ಮಾಡುವ ಮೂಲಕ ಜ್ಞಾಪಕಾಚರಣೆಯಿಂದ ನಾವು ಪೂರ್ಣ ಪ್ರಯೋಜನ ಪಡೆಯಬಲ್ಲೆವು.
3 ಇತರರನ್ನು ಆಮಂತ್ರಿಸಿರಿ: ಈ ಮಹತ್ವದ ಸಮಾರಂಭಕ್ಕೆ ಇತರರನ್ನು ಆಮಂತ್ರಿಸುವ ಒಂದು ವಿಶೇಷ ಕಾರ್ಯಾಚರಣೆಯನ್ನು ಫೆಬ್ರವರಿ ತಿಂಗಳ ನಮ್ಮ ರಾಜ್ಯದ ಸೇವೆ ಪುರವಣಿಯು ಪ್ರಕಟಿಸಿತ್ತು. ನೀವು ಈ ಕಾರ್ಯಾಚರಣೆಯಲ್ಲಿ ಪೂರ್ಣವಾಗಿ ಭಾಗವಹಿಸಲು ಏರ್ಪಾಡುಗಳನ್ನು ಮಾಡಿದ್ದೀರೋ? ನಿಮ್ಮ ಪರಿಚಿತರನ್ನು ಆಮಂತ್ರಿಸಲಿಕ್ಕಾಗಿ ಪಟ್ಟಿಯನ್ನು ಮಾಡಿ ಅವರನ್ನು ಸಂಪರ್ಕಿಸಲು ತೊಡಗಿದ್ದೀರೋ? ನೀವು ಆಮಂತ್ರಿಸಿದವರನ್ನು ಹಾಗೂ ಇತರ ಆಸಕ್ತ ಜನರನ್ನು ಸ್ವಾಗತಿಸಲು ಜ್ಞಾಪಕದಿನದ ಸಂಜೆ ಸಾಕಷ್ಟು ಮುಂಚಿತವಾಗಿಯೇ ಹಾಜರಾಗಲು ಯೋಜನೆಮಾಡಿರಿ. ಅವರಲ್ಲಿ ಬೈಬಲ್ ಮತ್ತು ಗೀತೆಪುಸ್ತಕ ಇವೆಯೋ ಎಂದು ಖಚಿತಮಾಡಿಕೊಂಡು, ಅವರೊಂದಿಗೆ ಕುಳಿತುಕೊಳ್ಳಲು ನೀವು ಬಯಸಬಹುದು. ಸಭೆಯಲ್ಲಿರುವ ಇತರರಿಗೆ ಅವರ ಪರಿಚಯವನ್ನು ಮಾಡಿಕೊಡಿರಿ. ಕಾರ್ಯಕ್ರಮದ ಅನಂತರ ಅವರಿಗಿರಬಹುದಾದ ಪ್ರಶ್ನೆಗಳನ್ನು ಉತ್ತರಿಸಲು ಸಮಯ ತೆಗೆದುಕೊಳ್ಳಿರಿ. ಏಪ್ರಿಲ್ 15ರಂದು ಕೊಡಲ್ಪಡುವ ವಿಶೇಷ ಭಾಷಣಕ್ಕೆ ಅವರನ್ನು ಆಮಂತ್ರಿಸಿರಿ. ಸಭೆಯೊಂದಿಗೆ ಮುಂಚೆ ಸಹವಾಸ ಮಾಡುತ್ತಿದ್ದು ಈಗ ನಿಷ್ಕ್ರಿಯರಾಗಿ ಪರಿಣಮಿಸಿರುವವರಿಗೆ ಜ್ಞಾಪಕಾಚರಣೆಯ ಮತ್ತು ವಿಶೇಷ ಭಾಷಣದ ಆಮಂತ್ರಣವು ಸಿಗುವಂತೆ ವಿಶೇಷವಾಗಿ ಹಿರಿಯರು ಖಚಿತಪಡಿಸಿಕೊಳ್ಳಬೇಕು.
4 ಹೊಸ ಆಸಕ್ತರು ಮತ್ತು ನಿಷ್ಕ್ರಿಯರು ಪ್ರಗತಿಮಾಡುವಂತೆ ಸಹಾಯಮಾಡಿರಿ: ಜ್ಞಾಪಕ ಭಾಷಣವನ್ನು ಕೊಡುವವನು ನಮ್ಮ ಬೈಬಲಧ್ಯಯನದ ಏರ್ಪಾಡನ್ನು ಸಂಕ್ಷೇಪವಾಗಿ ವಿವರಿಸುವನು ಮತ್ತು ಯೆಹೋವನ ಕುರಿತು ಕಲಿಯುವುದನ್ನು ಮುಂದುವರಿಸುವಂತೆ ಹೊಸ ಆಸಕ್ತರನ್ನು ಉತ್ತೇಜಿಸುವನು. ಅವನ ಹೇಳಿಕೆಗಳನ್ನು ಆಧಾರವಾಗಿಟ್ಟು ನೀವು ಆಮಂತ್ರಿಸಿದ ಜನರಿಗೂ ಅಧಿಕ ಆಧ್ಯಾತ್ಮಿಕ ಸಹಾಯವನ್ನು ಕೊಡಸಾಧ್ಯವಿದೆ. ಅವರು ಬೈಬಲಧ್ಯಯನ ಮಾಡುತ್ತಿರದಿದ್ದಲ್ಲಿ ಜ್ಞಾಪಕದ ಅನಂತರ ಅವರನ್ನು ತಪ್ಪದೆ ಆದಷ್ಟು ಬೇಗ ಭೇಟಿಯಾಗಿ ಉಚಿತ ಬೈಬಲಧ್ಯಯನದ ಏರ್ಪಾಡನ್ನು ತೋರಿಸಿಕೊಡಿರಿ. ಅವರು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಬೇಕಾದರೆ ಸಭಾ ಕೂಟಗಳಿಗೆ ಸಹ ಹಾಜರಾಗುವುದು ಅಗತ್ಯ. (ಇಬ್ರಿ. 10:24, 25) ಇದನ್ನು ಮನಸ್ಸಿನಲ್ಲಿಟ್ಟು ಕೂಟಗಳಿಗೆ ಕ್ರಮವಾಗಿ ಹಾಜರಾಗಲು ತೊಡಗುವಂತೆ ಅವರನ್ನು ಪ್ರೋತ್ಸಾಹಿಸಿರಿ. ಹಿರಿಯರು ಜ್ಞಾಪಕಕ್ಕೆ ಹಾಜರಾದ ನಿಷ್ಕ್ರಿಯ ಕ್ರೈಸ್ತರನ್ನು ಭೇಟಿಯಾಗಲು ಏರ್ಪಾಡನ್ನು ಮಾಡಬೇಕು ಮತ್ತು ಭಾಷಣದಲ್ಲಿ ನೀಡಲಾದ ವಿಷಯಗಳ ಆಧಾರದಲ್ಲಿ ಅವರಿಗೆ ಅಧಿಕ ಸಹಾಯವನ್ನು ಕೊಡಬೇಕು. ಸಭೆಯಲ್ಲಿ ತಮ್ಮ ಚಟುವಟಿಕೆಯನ್ನು ಪುನಃ ಆರಂಭಿಸುವಂತೆ ಇದು ನಿಷ್ಕ್ರಿಯರಿಗೆ ಪ್ರೋತ್ಸಾಹವನ್ನು ನೀಡಬಲ್ಲದು.
5 ಯೆಹೋವನೂ ಯೇಸು ಕ್ರಿಸ್ತನೂ ನಮ್ಮ ಪರವಾಗಿ ಮಾಡಿರುವ ವಿಷಯಗಳನ್ನು ಗಂಭೀರವಾಗಿ ಮನನ ಮಾಡಲು ಈ ಜ್ಞಾಪಕಾಚರಣೆಯು ನಮಗೆ ಸುಸಂದರ್ಭವನ್ನು ಒದಗಿಸುತ್ತದೆ. ಅಂಥ ಮನನವು ಅವರಿಗಾಗಿ ನಮ್ಮ ಪ್ರೀತಿಯನ್ನು ಆಳಗೊಳಿಸುತ್ತದೆ ಮತ್ತು ನಮ್ಮ ನಡವಳಿಕೆಯನ್ನೂ ಪ್ರಭಾವಿಸುತ್ತದೆ. (2 ಕೊರಿಂ. 5:14, 15; 1 ಯೋಹಾ. 4:11) ಆದುದರಿಂದ ‘ಕರ್ತನ ಮರಣವನ್ನು ಪ್ರಸಿದ್ಧಪಡಿಸುವ’ ಈ ಮಹತ್ವದ ಸಂದರ್ಭಕ್ಕಾಗಿ ನಮ್ಮನ್ನೂ ಹೊಸ ಆಸಕ್ತರನ್ನೂ ಸಿದ್ಧಪಡಿಸಲು ಆರಂಭಿಸುವ ಸಮಯವು ಈಗಲೇ ಆಗಿದೆ.—1 ಕೊರಿಂ. 11:26
ಅಧ್ಯಯನ ಪ್ರಶ್ನೆಗಳು]
1. ಏಪ್ರಿಲ್ 2, 2007 ಒಂದು ಮಹತ್ವದ ತಾರೀಖಾಗಿದೆ ಏಕೆ?
2. ಜ್ಞಾಪಕಾಚರಣೆಗಾಗಿ ನಾವು ನಮ್ಮ ಹೃದಯವನ್ನು ಹೇಗೆ ಯೋಗ್ಯವಾಗಿ ಸಿದ್ಧಗೊಳಿಸಬಲ್ಲೆವು?
3. ಆಸಕ್ತ ಜನರು ಮತ್ತು ನಿಷ್ಕ್ರಿಯರು ಜ್ಞಾಪಕಾಚರಣೆಯಿಂದ ಪ್ರಯೋಜನ ಪಡೆಯುವಂತೆ ನಾವು ಹೇಗೆ ಸಹಾಯ ಮಾಡಬಲ್ಲೆವು?
4. ಜ್ಞಾಪಕಾಚರಣೆಯ ಅನಂತರ ಆಧ್ಯಾತ್ಮಿಕ ಪ್ರಗತಿಯನ್ನು ಮಾಡುತ್ತಾ ಮುಂದರಿಯುವಂತೆ ನಾವು ಜನರಿಗೆ ಹೇಗೆ ಸಹಾಯ ನೀಡಬಲ್ಲೆವು?
5. ಜ್ಞಾಪಕಾಚರಣೆಯು ನಮ್ಮ ಮೇಲೆ ಯಾವ ಪ್ರಭಾವವನ್ನು ಬೀರಬಹುದು?